ಸಂಧಿ ೪೬

ಸಂಗರಕ್ಷೋಹಿಣಿಯುಭಯ ಚತು | ರಂಗಬಲವಧಟಿಂದ ನೋಳ್ಪರ |
ಕಂಗಳುಳುಕಲು ಕಾದಿದರು ಭೂಪಾಲ ಕೇಳೆಂದ || ಪಲ್ಲ ||

ಕೇಳೆಲೇ ಮಾಗಧ ಧರಿತ್ರೀ | ಪಾಲದಳವೆರಡರ ಭರಕೆ ಕ |
ಲ್ಲೋಲ ಮಸಗಿದ ಹಡಗೆನಿಸಿತಿಳೆ ವೀರಮದ್ದಳೆಯ ||
ಸ್ಥೂಲ ಬಿರುದಿನ ಪದಿರ ಹಳೆಗಳ | ಕಾಳೆಗಳ ಭಟರುಬ್ಬಟೆಯದನಿ |
ಕಾಳಗಕೆ ಕಡಲೆರಡು ಬಂದತಿ ಘೂರ್ಣಿಪಂತಾಯ್ತು || ೧ ||

ಆ ಸಮಯದೊಳಗಿಕ್ಕಡೆಯ ಸೇ | ನಾಸಮುದ್ರದ ನಾಯಕರು ವಿಳೆ |
ಯಾಸುರಾಗ್ನಿಜ್ವಾಲೆಗಳಿಗಿರದೊದವೆ ಬಿರುಗಾಳಿ ||
ಬೀಸಿದಂದದಿ ನಿಜಬಲಕೆ ಕೈ | ವೀಸಿದರು ಕರ್ಣಾರ್ಜುನರು ವಾ |
ರಾಸಿ ವಾರಾಸಿಯಲಿ ಹೂಣಿಸಿ ತಾಗುವಂದದಲಿ || ೨ ||

ಪೊಡೆವ ಚಂಬಕ ಗಿಡಿಬಿಡಿಗಳು | ಗ್ಗಡಿಪ ಕಹಳೆಯ ವೀರ ಬೊಬ್ಬೆಯ |
ಕಡುಹಿನಲಿ ಪಡೆಯೆರಡು ಹಳಚಿತು ಬಿಲ್ಲ ಪಡೆಬಿಲ್ಲ ||
ಪಡೆಯೊಳಡ್ಡಣ ಕಾರರಡ್ಡಣ | ವಡೆಯೊಳಾ ಕುದುರೆಗಳು ಕುದುರೆಗ |
ಳೊಡನೆ ತೇರ್ಗಳು ತೇರೊಳಾನೆಗಳಾನೆಗಳೊಳಡಸಿ || ೩ ||

ನಳಿನಡುವ ಬಿಗಿದೋರೆಗಾಸೆಯ | ಬಳಸಿದಾ ಬದ್ದುಗೆಯ ಗೊಂಡೆಯ |
ದೊಲಹುಗಳು ಪೊಂಜರಗಿಗಟ್ಟಿನ ನಿಡಿಯ ಗೊಂಡೆಯದ ||
ತಲೆಠೌಳಿ ಮೈ ಜೋಡು ಬೆನುಬ | ತ್ತಳಿಕೆಯೆಡಗೈವಿಡಿದ ಹದವಿಲು |
ಸೆಳೆದೆಸುವ ಬಲಗೈಯೆಸುವ ಕೂರಾಳ್ಗಗಳೊಪ್ಪಿದರು || ೪ ||

ಗುರಿಯ ಮೇಗಣ ದಿಟ್ಟಿದಂಡೆಯ | ಮರಿದು ನೀಡಿದ ಮುಟಿಸರವನು |
ತಿರುವಿಗೊಂದಿಸಿ ಬರೆತೆಗೆದ ಬಲಗೈ ಕಿವಿಯ ಮುಟ್ಟೆ ||
ಮೆರೆಯೆ ಬಿಲ್ಲೊಳಡಂಗಿತೆನೆ ಮುಂ | ತೊರಗಿದೊಮ್ಮೆ ವಹಿಲದಲಿ ಕೂ |
ಕಿರಿದು ತಳಸಂಚದಲಿ ಕುಣಿ ಕುಣಿದೆಚ್ಚರೆಡೆವಿಡದೆ || ೫ ||

ದೆಸೆಗೆ ತೆರೆಸುತ್ತಾಯ್ತು ಮೇಲಾ | ಗಸಕೆ ಮೇಲ್ಗಟ್ಟಾಯ್ತುದೆತ್ತಲು |
ವಿಷಮಯವು ಧರೆಯಾಯ್ತು ಭಯದಳದೆಲ್ಲ ಬಿಲ್ಲಾಳೊ ||
ಎಸಲೊಡನೆಯಿನ್ನಿವರ ಯುದ್ಧದ | ಸಸಿನೆ ನೋಡುವ ವೊಡರಿದೆನುತ ಚಿಂ |
ತಿಸಿತು ಗಗನಾಂಗಳದಲೀಕ್ಷಿಸೆ ನೆರೆದ ದೇವಸಭೆ || ೬ ||

ಮೊರೆದು ಹರಿದವು ಕೂರ್ಗಣೆಗಳು | ಬ್ಬರಿಸಿ ಬಹಕಣೆಗಡಿದು ಜೋಡನು |
ಜರಿದು ಬೆನ್ನುಚ್ಚಳಿಸಿ ನಾಲ್ಕೆಂಟಾಳೊಡಲನುಗಿದು ||
ಧರೆಯ ಗರಿವರನಟ್ಟು ವಿತ್ತ | ತ್ತುರುಳಿದವು ರಿಪುಭಟರು ತನುಗಳು |
ಹರಿದುದರುಣ ಜಲಾಂಬುನಿಧಿ ಭೋರ್ಗರೆದುನಿಮಿಷದಲಿ || ೭ ||

ಪಾರಿದವು ತಲೆ ನಭಕೆ ನೆತ್ತರ | ಕಾರಿದವು ಮುಂಡಗಳು ಮುರಿದವು |
ಹಾರುಗಳು ರಿಪುಭಟರ ಮೈಗಳ ರೋಮಕೂಪದಲಿ ||
ಊರಿದವು ರಣಭೂತಗಳು ಬಾ | ಯಾರಿಬೀತುದು ಭಟರ ಜೀವದ |
ಹೇರು ನಡೆದು ಯಮಪುರಕೆ ಸರಳುಗಳ ಪಥವಿಡಿದು || ೮ ||

ತಿರುಗಳಾ ಠಂಕೃತದ ಗರಿಗಳ | ಹರಿವರಿಯ ಝಂಕೃತದ ಮೈಗಳೊ |
ಗುರುಶರಂಗಳ ನೇಳ್ಕು ತಳ್ಕು ನಿಳುಳ ತದ ಜತಿಗೆ ||
ಗರಿಯ ಜೊಂಪವ ತೊಟ್ಟು ರಣದೇ | ವರಿಗೆ ವೀರಾವೇಷದಿಂ ಕುಣಿ |
ವಿರವೆನಲು ಕೋಲ್ಗೊಂಡು ಜಗ್ಗಾಡಿದರು ಭಟರಲ್ಲಿ || ೯ ||

ಸರವರಿಯೆ ತಿರುಪರಿಯೆ ಹದವಿಲು | ಮುರಿಯೆ ಬಿಲ್ಲಾಳೆಚ್ಚು ಕಟ್ಟಿದ |
ಸುರಗಗಳ ಕಿತ್ತಾಂಶ ಭಟರೆದೆವಟ್ಟು ತಾರಾಗೆ ||
ಬರಿಹರಿದು ಭಟರೊಡಲು ಕನ್ನವ | ಕೊರೆದವೊಲು ಮೈದೋರಿಗಳೆಯಲು |
ಸುರ ಗಿರಿಧರಂದೀಕ್ಷಿಸುವರಾಲಿಗಳು ಜುಮ್ಮಿಡಲು || ೧೦ ||

ನಡುಹಗಲು ರವಿಬಿಂಬ ಕೋಟಿಯು | ಪೊಡವಿಗಿಳಿದೊಂದೊಂದರೊಳು ಚಡು
ಫಡನೆ ತಾಗಿವೊಯೆನಿಸಿ ಕೆಂಬಿಸಿಲಂದದಿಂಬಿಡುತ ||
ಸಿಡಿದು ಸಿಡಿಲೊಳು ಹೆಣಗಿದವೊಯೆನೆ | ಘುಡು ಘುಡಿಸಿ ಹರಿಗೆಗಳು ಹಳಚಿದ |
ವೊಡೆದುದಬುಜ ಭವಾಂಡಮೆನೆ ಪೊಣ್ಮಿದುದು || ೧೧ ||

ಕರಿಯ ಸಿಂಹದ ಹುಲಿಯ ಚೋಹದ | ಗರುಡ ಹನುಮನ ಕೋಟೆ ಚವಲದ |
ತರಣಿ ಚಂದ್ರನ ಹೊನ್ನ ತಾರಕೆಗುಬ್ಬಿ ಚೆಂಡುಗಳ ||
ಸರಪಣಿಯ ಘಂಟೆಗಳ ಗೆಜ್ಜೆಯ | ಪಿರಿಯ ಝಲ್ಲಿಯ ಮೂರು ಕಂಗಳ |
ಹರಿಗೆಕಾರರು ಹಳಚಿ ಹೊಯ್ದಾಡಿದರು ಸಮರದಲಿ || ೧೨ ||

ಕಡೆಯ ಕಾಲದ ಮಿಂಚೊ ಕುಳಿಕನ | ನಿಡಿಯ ಹಲುಗಳೊ ಜವನ ದಾಡೆಯೊ |
ಕಡುಭಯಂಕರವೆನಿಪ ಹಲವಾಯುಧಗಳನು ಪಿಡಿದು ||
ಅಡಸಿ ಹೊಯ್ದಾಡಿದರು ಲೋಹದ | ಕಿಡಿಯುದುರೆ ತುಂಡಿಸೆ ಹರಿಗೆ ತೋ |
ಳುಡಿಯೆ ಸೀಸಕವೆರಸಿ ತಲೆಗಳ ಪಾರಿದವು ನಭಕೆ || ೧೩ ||

ಮೆಚ್ಚದವರಿರಿತವನು ಕೆಲಬರಿ | ದಿರ್ಚಿದಿರ್ಚೊಡ್ಡೆನುತ ಮೈಗಳ |
ವೆರ್ಚಿ ಕಡಗಕೆ ಹೊಯ್ದು ಪೋರೆಯಕೊದಗಿ ಮೊನೆದೋರಿ ||
ಕೊಚ್ಚಿದರು ಕೊಡಹಿದರು ಎಲುಗಳ | ನುರ್ಚಿದರು ಖಂಡಗಳ ಭೂತಕೆ |
ಹಚ್ಚಿದರು ಕುರಿದರಿದರದ್ಭುತವಾಗಿ ಪಟುಭಟರು || ೧೪ ||

ಪೊಡೆಯೆತಲೆ ಬೊಬ್ಬಿಡುತೆಗಗನಕೆ | ಸಿಡಿಯಲಟ್ಟೆಯು ಮುಂದೆ ಹತ್ತೆಂ |
ಟಡಿ ನಡೆದು ರಿಪುಭಟರು ನಿರಿದೊರಗಿದವು ಮುಂಡಗಳು ||
ಅಡಿಗಡಿಗೆ ಕುಣಿದಾಡಿದವು ತೊಡೆ | ನಡಿದು ಕಡಿ ಪಲ್ಲಡಿಸಿದವು ಹರಿ |
ಗಡಿದ ಕಾಲನ ಕುಮ್ಮರಿಯವೊಲು ಕೆಡೆದರಾ ಭಟರು || ೧೫ ||

ತಕ್ಕಡೆಯ ಪಟುಭಟರು ಹರಿಗೆಯ | ಸಿಕ್ಕ ಪಲ್ಲವ ಹಿಡಿದಿದಿರೆ ಹಾ |
ಯ್ದುಕ್ಕು ಕಡುಮಿಗೆ ಕೇಳುಧಾರೆಯ ಕೊಳಲು ತೊಡೆಗೊರೆದು ||
ಕುಕ್ಕರಿಸಿದರು ಭುಗಿಲೆನುತ ಕರು | ಳುಕ್ಕಿದವು ನೆತ್ತರ ಕೆರೆಗೆ ತುಂ |
ಬಿಕ್ಕಿದಂತೆದೆದೋರಿಗಳದುದದೊಂದು ನಿಮಿಷದಲಿ || ೧೬ ||

ಫಡಪಡಿದಿರಾಗೆನುತ ಕುಣಿಕುಣಿ | ವಡಿಗಳಿಂ ಸಬಳಿಗರು ಸಬಳಿಗ |
ರೊಡನೆ ಖಣಿಖಡಿಲೆನುತನೆವುತೊಳಪೊಕ್ಕು ತಿವಿದಾಡೆ ||
ಒಡೆದು ಜೋಡೆದೆಯುರ್ಚೆ ಬೆನ್ನಲಿ | ನಿಡು ಜವನ ಹಲ್ಲಂತೆ ತೋರಿದ |
ವೊಡನೆ ನೆತ್ತರ ಕಾರಿ ಕೆಡೆದರು ಸಮರ ಧರೆಯೊಳಗೆ || ೧೭ ||

ಇರದೆ ಘರ್ಜಿಸಿ ಶತಭಟರುಸಾ | ಸಿರಭಟರು ಲಕ್ಷಭಟ ಕೋಟಿಭ |
ಟರು ಕರುತ್ತಸಿ ಮುಸಲ ಕಂಪಣ ಕಣೆಯ ಪಿಂಡಿವಳ ||
ಮಸೆದು ಖಡುಗ ಮುಸುಂಬಿ ಕಕ್ಕಡೆ | ಯೆಸೆವ ಧನು ಮೊದಲಾದ ಕೈದುವಿ |
ನೆಸಕದಿಂ ಹಣೆದಾಡಿದರು ನೋಟಕರ ಕಣು ಬೆದರೆ || ೧೮ ||

ಹಸಿಯ ತಲೆಗಳು ಹಾರಿ ಇದಿರ | ರ್ವಿಸುವ ವೀರರ ಕೊರಲಕರ್ಚಿರ |
ದಸುವನುಗಿದವುಯಿರಿಯಲವುಕಿದ ತೋಳುಗಳು ಹರಿದು ||
ಅಸಿವೆರಸಿ ಹಗೆಯೊಡಲ ಬಗಿದವು | ಬಿಸಿ ರಕುತ ಗಡಲೊಳಗೆ ಕೂವುಡಿ |
ದಸಿಯ ದೋಣಿಗಳಂತೆ ಹೆಣಗಳ ಬಣಬೆ ತೇಲಿದವು || ೧೯ ||

ಇರಿವಿಡಿದ ಪೊಯ್ದೆಸುವ ಬೀಸುವ | ಕೊರೆವ ತಿವಿವಪ್ಪಳಿಸುವವುಕುವ |
ಬಿರುಬಿಗಾ ರಣದೇವಿಯರು ಚೆಂಡುಗಳಪೊಯ್ದಂತೆ ||
ನೆರೆನಿಮಿರ ಪಂದಲೆಗೆಳಾಗಸ | ದೆರವಿಯಲಿ ನೆರೆದಾಡಿದವು ಎವೆ |
ದೆರೆದವರ ಕಂಗಳಿಗೆ ಹಬ್ಬವನಿತ್ತುದಾ ರಣವು || ೨೦ ||

ಇಡುವ ಚಕ್ರವಿದೆಸುವಕಣೆಯಿದು | ಕಡಿವ ಖಂಡೆಯವಿದು ತಿವಿವ ಕ |
ಕ್ಕಡೆಯಿದಿರಿವಿಟ್ಟಿಯಿದು ಕುತ್ತುವ ನಿಡುಗಠಾರಿಯಿದು ||
ಪೊಡೆವಲವುಡಿಯಿದೆಂದು ಬಗೆಯದೆ | ಕಡುಗಲಿಗಳಚ್ಚಡಿಸಿ ಕಾದಿದ
ರಡಗಿನವಾರಿಯು ಮರುಳ ಪಡೆಗೆನಿಸಿತಾ ರಣವು || ೨೧ ||

ತಕ್ಕ ಭಟರು ಸಹಸ್ರ ಭಟರೆನೆ | ಲಕ್ಕ ಭಟರಾ ಕೋಟಿ ಭಟರೆನ |
ಲುಕ್ಕಿ ನಿಂದಿರಿದಾಡಿ ಮಡಿದವು ಕಂಡಲೋಹಗಳ ||
ಹಕ್ಕರೆಯ ಪೊಗರಂಬಗಳ ಚೆಲು | ವಿಕ್ಕಡೆಯೆ ಝಲ್ಲಿಗಳ ಸಡಕದ |
ವೊಕ್ಕುಳುರು ಗಂಟೆಗಳ ತುರಗದಳಂಗಳತಿಮಸಗಿ || ೨೨ ||

ಸಿಂಗರದ ಬಲುವಜ್ರಮಯವಹ | ಕಂಗಲಿನ ಸೀಸಕದ ರಾಫೆಯ |
ತುಂಗಕಾರಿಯ ಭಲ್ಲೆಯದ ಸೆಲ್ಲೆಯದ ಖೇಡೆಯದ ||
ಕೆಂಗರಿಯ ಬತ್ತಳಿಕೆಗಳ ಚ | ಕ್ರಂಗಳೀ ದಿಟ್ಟಿಗಳ ಬಲು ಖಡು |
ಗಂಗುಳುಬ್ಬರವಾದ ಗೋಳಾಯ್ತರು ಚಬಕುಮಾಡಿ || ೨೩ ||

ಖುರಹತಿಯ ಬಿರುದನಿಗೆ ಬೆದರಿಸಿ | ದುರಗ ಲೋಕವ ಚಿಮ್ಮುಗಲ್ಲು |
ಪ್ಪರಿಸಿತಾಗಲು ಮುರಿದು ದರುಣನ ಕಾಲು ದಿನಕರನ ||
ತುರಗವೊಂದಳಿದುದು ರಜೋ ಭೂ | ಧರವ ಪಾಯ್ದೊಡೆದವ ನರಿಯೆ ನೀ |
ನಿರುತಲದೆಯಂದಿಂದಲೊಂದೇ ಗಾಲಿರವಿರಥಕೆ || ೨೪ ||

ಪ್ರಳಯ ಕಾಲದ ತುಂಗಭಂಗಂ | ಗಳನೆರವಿಯೋವಾಹನವೊ ಮನ |
ಗಳೆಹಯಾಕೃತಿಯಾದವೋಯೆನೆ ದಿಟ್ಟಿಯುಂ ಮುಂಚೆ ||
ಅಳವಿಗೊಟ್ಟವು ಸಿಡಿಲು ಸಿಡಿಲೊಳು | ಹಳಚಿದವೊಯೆನೆ ತಾಗಿದವೊ ಕ |
ಣ್ಣುಳುಕೆ ವಿಳಯದ ಮಿಂಚುಗಳವೊಲು ಬಾಳ್ಗಳಾಡಿದವು || ೨೫ ||

ತುರಗ ದಳಗಳು ಬೆರಸಿದನಿತರೊ | ಳಿರದೆ ಗಗನವೆ ಪೂತುದೋಯೆನೆ |
ಪರಕಲಿಸಿದವು ಮೊರೆವ ಪಂದಲೆಗಳು ವಿಗುರ್ವಿಸುತ ||
ಕರವುಡಿದು ತೋಳ್ಪರಿದು ತೊಡೆಯುಡಿ | ದುರುವಡೆದು ಕತ್ತರಿಸಿ ನಡುಭೋ |
ರ್ಗರೆದುದರುಣಜಲಾಂಬುನಿಧಿ ಸಂಗ್ರಾಮ ಭೂಮಿಯಲಿ || ೨೬ ||

ಕಲ್ಲಮಳೆ ಮೇಣ್ಕರೆದುದೆನೆ ನಭ | ದಲ್ಲಿರದೆ ಪಂದಲೆಗಳಾದರೆ |
ಎಲ್ಲಿ ಬೀಳ್ದವು ತಮ್ಮ ಜನನದಲುಂಡ ಕೆಂಡಗಳ ||
ನಿಲ್ಲದೇಂ ಕಾರಿದವೊಯೆನೆ ಕಿಡಿ | ಚೆಲ್ಲಿದವು ಲೋಹಗಳೆಣೆದು ನಭ |
ದಲ್ಲಿ ಪಗಲುಳುಗಳು ನೆರೆದವೊಯೆನಿಸಿ ತೋರಿದವು || ೨೭ ||

ನೊಸಲೆದೆಯ ಬಲುಗಾಯದಿಂ ಕಿಡಿ | ಮಸಗಿದಂದದಿ ಸೂಸೆ ನೆತ್ತರು |
ನೊಸಲ ಕಂಗಳ ರುದ್ರರರೆಬರು ಬಂದರೆಂದಾರ್ದು ||
ಕುಸಿದು ಭಕ್ತಿಯಲೆರಗಿ ಭೂತ | ಪ್ರಸರ ಸೇವೆಯ ಮಾಡಿದವು ಬಿಸಿ |
ಬಿಸಿಯುನೆತ್ತರ ಕುಡಿದು ಸೊಕ್ಕಿಂದಾ ರಣೋರ್ವಿಯ || ೨೮ ||

ಇವನ ನೊಸಲೀರೊಯಿತ ಬೆಳ್ಪುದೊ | ನಿವನದಾವನು ತಕ್ಕನೆಂದಾ |
ದಿವಿಜಗಣಿಕಾಗಣಕೆ ತೋರುವ ತೆರದಿ ಕೆಲರಲ್ಲಿ ||
ತಿವಿದುದೋರ್ವಳ ಸಾಲಿಗಳ ಮ | ತ್ತವರನಾ ಭಲ್ಲೆಯದ ಮೊನೆಯಿಂ |
ದವ ನೆಗಹಿ ಪಡಿದಿರ್ದರೀಕ್ಷಿಪ ಸುರರು ಬೆರಗಾಗೆ || ೨೯ ||

ತುರಗಗಳ ತಲೆ ಸಿಡಿದು ಮೇಗಡೆ | ಇರದೆ ಬೀಳುತ ನರರ ಮುಂಡದೊ |
ಳುರು ಭಟರ ಪಂದಲೆಗಳಶ್ವಕಬಂಧದಲಿ ನೆಲಸಿ ||
ಧುರಧರೆಗೆ ಘೋಡಾಮುಖರು ಬಂ | ದರೊ ಪುರುಷಮೈಗನಿಚಯ ಸುಳಿದವೊ |
ಪರಿಕಿಸುವೊಡರಿದೆಂದುದಂದನಿಮಿಷ ಕದಂಬಕವು || ೩೦ ||

ಸಿಡಿದು ಬೀಳುವ ತಲೆ ಪಲವು ಜಡೆ | ವಡರ್ದು ಪಲವೊಂದಾಗಿ ವೀರದಿ |
ಎಡೆವಿಡದೆ ಕುಣಿದಾಡುವಟ್ಟಿಗಳಗ್ರದಲಿ ಸೇರೆ ||
ಬಿಡದೆ ನಾಲ್ಮೊಗರೈಮೊಗರು ಮಿಗೆ | ಷಡಮೊಗರು ದಸಮೊಗರು ಸಂಗರ |
ಪೊಡವಿಗವತರಿಸಿದರೊ ಎನೆ ಭಯವಿತ್ತುದಾಹವವು || ೩೧ ||

ಸರಳುಗಳ ನಡೆಗೊತ್ತಿ ತಿರ್ರ‍ನೆ | ತಿರುಗುತವೆ ಸುರ್ರೆ‍ನುತ ಹರಿದವು ||
ಪರಿಯೊ ಯೆನೆ ದೆಸೆದೆಸೆಗೆ ತಲೆಗಳ | ಪರಪಿದರು ಪಾರುಂಬಳೆಗಲ |
ಚ್ಚರಿಯ ಭಟರಿಡಲಚ್ಚರಸೆಯರೆ ಕಂಡು ಬೆರಗಾಗೆ || ೩೨ ||

ಸಿಡಿದ ತಲೆಗಳು ಗಗನದಿಂ ಬೀ | ಳ್ಪೆಡೆಯೊಳೊದಗಿದ ಚಕ್ರಚಕ್ರವ |
ನಡುವೆ ಸಿಲುಕಲು ಭರದಿ ತರತರದಿಂದ ಹೋಗುತಿರೆ ||
ಕಡುಮುದದಿ ಧುರದೇವಿ ಯೆಣ್ದೆಸೆ | ಮಡದಿಯರಿಗರುಣಾಬ್ಜ ಕೆಂಗೂ |
ಳ್ಪಡಸಿಯಟ್ಟುವ ಪರಿಯಣದ ಬಾಯಿನಗಳೆನಿಸಿದವು || ೩೩ ||

ಹೊಡೆದಡೊಂದೇ ಹೊಯ್ಲಿಗೆರಡೇ | ಕಡಿಗಳಾದವು ಕುದುರೆ ಬಾನಿಂ |
ಕೆಡೆವ ತಲೆ ಖಡುಗಾಗ್ರದಲಿ ನಿಲೆಲೋಟಕರ ಕಣ್ಣೆ ||
ಖಡುಗಲತೆ ಹೂವಾಯ್ತೊ ಬೀರದ | ಮಡದಿಯರಮನೆಗತಿಮೆರೆವ ಮುಂ |
ಗುಡಿಯ ಕೀರಿತಿಮುಖವೊಯೆನಿಸಿತದೊಂದು ರೂಪಿನಲಿ || ೩೪ ||

ತುಂಡುತುಂಡಾದಶ್ವಗಳ ಕಡಿ | ಖಂಡವಾದಾ ರಾಹುತರ ಕೊಳ |
ಗೊಂಡನೆಣಗಳ ಮುಳಿದು ಮೂಲೆಯ ಹರಿದ ಹಾರುಗಳ ||
ಬೊಂಡೆಗರುಳಿನ ಬಣಬೆಗಳಯೆಡೆ | ಗಂಡಿಕೆಗಳಿರಲುಡಿದ ಖಡುಗದ |
ಮುಂಡಗಳ ಮಂಡೆಗಳ ತಂಡಗಳಿತ್ತುದತಿ ಭಯವ || ೩೫ ||

ತುರಗದಳವಳಿವನು ನಿರೀಕ್ಷಿಸು | ತಿರದೆ ಪೆಂಪಿನ ಶೂರ ಸಾರಥಿ |
ಧರತುರಂಗಮ ಧೃತವಿತತ ಶಸ್ತ್ರಾಸ್ತ್ರ ಚಾಪಯುತ ||
ವರರತುನಮಯ ಕೃತಫಲಕ ಬಂ | ಧುರ ರಜತಸುವರ್ಣನಾಂಗ |
ಸ್ಪುರಿತ ಕಾಂಚನದಂಡ ಸಂಭೃತ ರತನಿಗಳು ಮಸಗಿ || ೩೬ ||

ಕರಿಯ ಸಿಂಹದ ಹೆಬ್ಬುಲಿಯ ಶೂ | ಕರದ ವೃಷಭನ ನವಿಲ ನಾನಾ |
ಪರಿಯ ಬಿರುದ ಧ್ವಜಪತಂಗಳು ಮಿಳಿರೆ ನೇಮಿಗಳ ||
ಭರಕೆ ಧರೆಕಂಪಿಸಲು ಚೀತ್ಕೃತಿ | ಶರಧಿಯನು ತುಳುಕಾಡೆ ಪೊರ್ದರು |
ವರ ರಥಾಥಿರಥಾರ್ಧ ರಥಮಯ ರಥಮಹಾರಥರು || ೩೭ ||

ಮುಸುಕಿದುದು ಕೆಂಧೂಳಿಧಾಳಿಯ | ಮಸಕಿನಲಿ ಹಯರಥ ಶುಕವು ಪೂ |
ಣ್ದಿಸುವ ಬಿಲುಗಳ ಠಂಕೃತವು ದಸದೆಸೆಯಿನಾವರಿಸೆ ||
ಹೊಸಮಸೆಯ ಹೊಗರಂಬುಗಳು ನಿ | ಪ್ಪಸರದಲಿ ಕೆಂಗರಿಯ ಭೀಂಕೃತ |
ಯೆಸೆಯೆ ಗಣನಾತೀತ ಮುಸುಕಿದುದು ಭಯರಥಿನಿಯಲಿ || ೩೮ ||

ಕೊಚ್ಚಿದವು ಬಹುಕಣೆಗಳನು ಮೊಗ | ವುಚ್ಚಿದವು ತೇಜಿಗಳ ಥಟ್ಟನು |
ಬಿಚ್ಚಿದವು ಸಾರಥಿಗಳೆದೆಯನು ಸಿಂಧುಗಳ ಕಡಿದು ||
ಹಚ್ಚಿದವು ಚಾಪಗಳ ತುಂಡಿಸಿ | ಚುಚ್ಚಿದವು ಕವಚವನು ರಥಿಕರ |
ಕಚ್ಚಿದವು ತಲೆಗಳನುರುಚ್ಚಿದವೆಚ್ಚ ಸರಳುಗಳು || ೩೯ ||

ಮಡಿಯೆ ಸಾರಥಿ ತಾವೆ ರಥವನು | ನಡೆಯಿಸುತ್ತೆಚ್ಚಾಡಿ ಕುದುರೆಯು |
ಪಡಲಿಡಲು ಚಾಪವ ಬಿಸುಟುರಥದಿಂದಧುಮ್ಮಿಕ್ಕಿ ||
ತೊಡರ್ದು ಖಡ್ಗಾಖಡ್ಗಿಯಲಿ ಪೂಣ್ | ದೊಡನೆ ಹಾಣಾಹಾಣಿಯಲಿ ಸಂ |
ಗಡಿಸಿ ಮುಷ್ಠಾಮುಷ್ಠಿಯುದ್ಧದಿ ಕಾದಿದರು ಭರದಿ || ೪೦ ||

ಅಂಬು ಗೂಡಾಗಿರ್ದ ರಥಕ ಕ | ದಂಬವಾರಥದೊಳೆಗೆ ಪಳಯಿಗೆ |
ದಂಬವನು ನೆಮ್ಮಿರ್ದರಾಟವು ತಿರ್ದಬೊಂಬೆಯೆನೆ ||
ಅಂಬುಕೊಳೆ ತಲೆವಾರಿ ಅಂತಕ | ಡೊಂಬನಾಡಿಪ ಹಲಗೆ ಸೂತ್ರದ |
ಬೊಂಬೆಗಳವೊಲು ಕುಣಿದು ಕೆಡೆದುವು ತೇರೊಳಟ್ಟೆಗಳು || ೪೧ ||

ಮಸೆದ ಕೊರಂಬುಗಳು ಮಿಗೆ ತುಂ | ಡಿಸಿ ನೊಗನ ಜೊತ್ತಗೆಗಡಿದು ಸಂ |
ಧಿಸಿದ ರಥಗಳ ಹಲಗೆ ಬಿಚ್ಚಿಯೆ ರುಧಿರಗಡಲೊಳಗೆ ||
ದೆಸೆದೆಸೆಗೆ ಪೆಣವೆರಸಿ ಶಾಲಿಗ | ಳಸಮದೀಯವಮ ಪುರಗತರ ದಾಂ |
ಟಿಸುವ ಪರುಗಲುಗಳ ಗಡಣವೆನಲೊದವಿ ತೇಲಿದವು || ೪೨ ||

ರಣ ಮಹಾರಾಕ್ಷಸಿ ರಥಿನಿಯನು ನೋ | ನಣೆನೆಯೆ ಕಲ್ಪಾಂತರ ಮುಗಿಲುಗಳ |
ಗಣನೆಯೆನೆ ಕಡುಗರ್ಗಿ ಬೆಳೆದಾನೆಗಳು ತರತರದಿ ||
ಪೆಣೆದು ಹೆಮ್ಮಿಳಿ ಹೊರಜೆಗಳು ಕೀ | ಲಣೆಯ ರನ್ನದ ಕಾಂತಿಗಳು ಸಂ |
ದಣಿಸಿ ಪಣ್ಣಿದ ಪಂಚರತ್ನದ ಪಕ್ಕರೆಗಳಿಂದ || ೪೩ ||

ನೆಗೆದ ಬಾರಹ ಕಿಡಿಯ ಮುಖರಂ | ಬಗಳ ಜಲ್ಲಿಯ ಸಡಕಗಳ ಘಂ |
ಟೆಗಳ ಸಿಂಧದ ಸತ್ತಿಗೆಯ ಸೊಬಗೆಸೆವ ರಂಚಿಗೆಯ ||
ಬಿಗಿದು ಜೋದರಡರ್ದು ಬಿಲುಗಳ | ಹೊಗರೊಗುವ ಸರಳುಗಳ ಬಹು ಕೈ |
ದುಗಳ ಸಮಕಟ್ಟಿಂದೆ ಪಣ್ಣಿದ ಗಜಘಟಾವಳಿಯ || ೪೪ ||

ಕರಿಮುಗಿಲ ತುರುಗಲೊಳು ಬಿಜ್ಜಾ | ಧರರು ಸೊಗಯಿಸುವಂತೆ ಕರಿಕಂ |
ಧರದೊಳಿಹ ಜೋದರು ಬಳಿಕ ಮೊಗವಡುಗುಳನು ಕಳೆಯೆ ||
ಶಿರದಲಂಕುಶ ಬಳ್ಳಿ ಮಿಂಚಿನ | ಪರಿಯೆನಿಸಿ ಪೊಳೆದಾಡೆ ಕಂಗಳ |
ಉರಿಯನುಗುಳುತ ಪರಿದವದ್ಭುತವಾಗೆ ಗಜಘಟೆಯು || ೪೫ ||

ಎರಡು ಅಂಕೆಯು ವೆರಸಿ ಕೈವೆಡೆ | ದುರುತರದ ಪರ್ವತಗಳೆನೆ ಪ |
ಕ್ಕರೆ ಕೆದರೆ ಕೈನೀಡಿ ಪರಿವವು ಕಲ್ಪಸಮಯದಲಿ ||
ಉರಿವವಹ್ನಿಯ ಕರಿಯ ಹೊಗೆತರ | ತರದಿ ಪಸರಿಸಿ ಪರಿದುವೆನೆ ಸಂ |
ಗರಧರೆಯೊಳೆಡೆವಿಡದೆ ಮುಸುಕಿದವಾನೆಗಳ ಫೌಜು || ೪೬ ||

ದಿಗ್ಗಜಂಗಳು ದಿಗ್ಗಜಂಗಳೊ | ಳಗ್ಗಳಿಸಿ ತಾಪಂತೆ ತಾಗಿದೊ |
ಡುಗ್ಗಡಿಸಿದವು ಸಿಡಿಲ ಕೋಳ್ಕುಟ್ಟಿದವು ಮೊಗವೆತ್ತಿ ||
ನಿಗ್ಗವದಿ ಪೂಣ್ದಿರಿದವೇರಿಂ | ಬೊಗ್ಗನರುಣ ಜಲ ಪ್ರವಾಹವು |
ಭೋರ್ಗರೆಯಲದ್ಭುತವನಿತ್ತುದು ಗಜದ ಕಾಳಗವು || ೪೭ ||

ಭರದಿ ನೂಂಕುವೊಡರ್ಪು ಪೊಯ್ವು | ಬ್ಬರದಧಟ ವಂಟಿಸುವ ಬಿನ್ನಣ |
ಕರವ ಕೊಡುವ ಬೆಡಂಗು ಕೊಂಕುವಳುರ್ಕೆ ಪುಗುವಾರ್ಪು ||
ತೆರಳಿ ಪುರವಣಿ ಪೊಕ್ಕು ನೀರ್ಗವ | ದಿರಿವ ತೆಗೆವಡರ್ವಣೆವ ಪೊಣರ್ವ |
ಚ್ಚರಿಯ ಸಾಧನೆಯಿಂದ ಕಾದಿದವಾನೆಗಳ ಫೌಜು || ೪೮ ||

ಸಿಡಿಲೆರಗಿದಂದದಲಿ ಲೌಡಿಯ | ಪಿಡಿದು ಕರದಿಂ ಕಂಗಳಾರ್ಪಿಂ |
ಪೊಡೆಯೆ ರಸದಾಳಿಂಬದೆಳೆ ಬಿತ್ತುಗಳ ವೊಲು ನುರಿಯೆ ||
ಒಡೆದು ಕುಂಭದ ಮುತ್ತು ನೆತ್ತರ | ಕಡಲೊಡನೆ ವಾರಿಧಿಯನೈದಿದ |
ಕಡೆಯನಬುಧಿಯೊಳಾಯ್ತು ಮೌಕ್ತಿಕವಲ್ಲದಂದುಂಟೆ || ೪೯ ||

ಪಟ್ಟೆಯದ ಕೈಯಿಂದೆ ಕರಿ ಪರಿ | ದಟ್ಟಿ ಪೊಯ್ದೊಡೆ ಕೈಪರಿದು ಕಾ |
ಲೆಟ್ಟು ಕೋಡೂರಿರ್ದವಾದಿ ವರಾಹದಂದದಲಿ ||
ಕುಟ್ಟಿದೊಡೆ ಕೋಡುಡಿದು ಕೊರಳೆಡೆ | ಬಿಟ್ಟು ಕಾಲೊಳು ಪರಿದು ಭೂಮಿಗೆ |
ಬಿಟ್ಟು ಬೀಳುವ ತೆರೆದು ಬಿದ್ದವು ಗಜಘಟಾಳಿಗಳು || ೫೦ ||

ತಿರುವ ಜೇವೊಡೆಗೈದು ಜೋದರು | ನೆರೆದು ಭೋರನೆ ಸರಳ ಮಳೆಯನು |
ಸುರಿಯೆ ಮುಸುಕಿದವಿಭಘಟಾವಳಿಯಿರದೆ ದೆಸೆದೆಸೆಗೆ ||
ಪರಿದವೇರಿದವಾಗಸವನಾ | ಸುರರ ಕಣ್ಣುಗಳುಕಲು ಕರಿಯಪ |
ಕರೆವಡೆದು ಕಟ್ಟುರ್ಚಿ ಬಿದ್ದವು ಕೂರ್ಗಣೆಗಳಿರದೆ || ೫೧ ||

ಪರಿಯೆ ಗುಳಮುಖರಂಬರಂಚಿಗೆ | ಮುರಿಯೆ ಬಲ್ಲೇರಿಂದೆ ಪಿಂತಣ |
ವರಗಿಕುಳ್ಳಿರೆದಾಡೆಗಡುಬೆನಲೊಂದು ಕೊಂಚುಡಿದು ||
ಮೆರೆಯ ಕೆಲದೊಳು ಕೆಂಪಿನರಳಿಂ | ತುರುಗಿಯರ್ಚಿಸಿದಂತೆ ಪುಣ್ಗಳು |
ನೆರೆಯೆ ಕರಿಪತಿಯಿರ್ದುದಂದು ವಿನಾಯಕನ ತೆರದಿ || ೫೨ ||

ತುರಗಿ ನಡೆಸರಳಿಬ್ಬರಿಯ ಕೆಂ | ಗರಿಗಳೊಪ್ಪು ವರಂಕೆಯಾಗಿರೆ |
ನಿರಿಮುಗಿಲ ಪೊದರಿಂದೆರಗುವಾಗರುಡುಳವೆನಿಸಿ ||
ನೆರೆದ ಕರಿಯಿಂದುರುಳಿದರು ತಲೆ | ಪರಿದು ತೊಡೆಕಡಿದೆಲು ಮುರಿದು ಕು |
ಕ್ಕರಿಸಿದರು ಕಲಕೆಲರು ಜೋದರು ಭರದಲೆಚ್ಚಾಡಿ || ೫೩ ||

ಮಸೆದ ತಲಕಣೆಗೊಂಡು ತಲೆತುಂ | ಬಿಸಿ ಕಪಾಲವು ಚೆಕ್ಕೆ ಬಡನಡು |
ಹಿಸಿಯೆ ತೊಡೆಬೇರಾಗಿ ತೋಳ್ಗಳು ತುಂಡುತುಂಡಾಗೆ ||
ಬಸುರೊಡೆಯೆ ಕರುಳುಕ್ಕೆ ಖಂಡವು | ದೆಸೆವಲಿಗಳೆನೆ ಬೀರೆ ಕೊಚ್ಚಿದ |
ರಸುವ ಬಿಡುವಾನೆಗಳು ಸಹವುರುಳಿದರು ಭೂತಳಕೆ || ೫೪ ||

ಖಂಡಗಳ ಬಲುರಾಶಿಪರ್ಚನೆ | ಮಂಡೆಗಳ ಪೇರ್ವೆಟ್ಟುಗುಡಿಸಿದ |
ಮುಂಡಗಳ ದಿಂಡುಗಳು ನೆತ್ತರ ತೊರೆನೆಣೆದ ಕೆರೆಯು ||
ತಂಡತಂಡದಿ ಮುಗಿಲೆಣವ ವೇ | ತಂಡಗಳೆ ಪೆಣನಾಗಲೀಕ್ಷಿಸೆ |
ಬಂಡಣಾಂಗಳವತಿ ಭಯಂಕರವಾಯ್ತು ಕಂಗಳಿಗೆ || ೫೫ ||

ಖಂಡಮಯ ಬಂಬಲಗರುಳಮಯ | ಮುಂಡಮಯನೆಣಮಯಮಿದುಳಮಯ |
ಜೊಂಡೆಮಯ ವಸ್ತಿಗಳ ಮಯ ಮುರಿವಡೆದ ಶಸ್ತ್ರಮಯ ||
ಮಂಡೆಗಳ ಮಯ ಪರಿವನೆತ್ತರ | ಖಂಡಮಯ ಮಿದುಳುಂಡು ತೇಗುವ |
ಚಂಡಿ ಶಾಖಿನಿ ಢಾಕಿನೀಮಯವಾಯ್ತು ರಣಭೂಮಿ || ೫೬ ||

ಉರುಳಿದಾ ಪೆಣಗಳಿಗೆ ಝಮ್ಮನೆ | ಮೊರೆದೆರಗೆನೊಳಲವಿಲಿವಿಸುತು |
ಬ್ಬರಿಸಿ ಪುಳುಗಳು ಪೊಲಸುಗಂಧಕೆ ಹದ್ದು ಬಂದೆರಗೆ ||
ನರಿಗಳಾಗವಲರಿದು ಬೇಗದಿ | ಪರಿದು ಬಂದವೊಲೆಸಲು ಕೊಳೆ ಕೊ |
ಕ್ಕರಿಕೆಯನು ತೋರಿದುದು ಸಂಗರ ರಂಗವೀಕ್ಷಿಸಲು || ೫೭ ||

ಆಗಳಾ ಭೂತಗಳು ನೆರೆದಿಂ | ಬಾಗಿ ಬಾಯ್ದೆರೆದಡಗುಗಳ ಪಸಿ |
ದೊಗಲಗಿದಗಿದೊಡಲು ಬಿರುದಿನ ತಿಂದು ರಕುತವನು ||
ರಾಗದಿಂ ತಣಿಯೀಂಟಿ ಡರ್ರ‍ನೆ | ತೇಗಿ ಕೈಪರೆಗುಟ್ಟಿ ಸೊಕ್ಕಿಂ |
ಕೂಗಿ ಜಕ್ಕಾಡಿದವು ಸಂಗರರಂಗದಲಿ ನಲಿದು || ೫೮ ||

ಮೀರಿ ಬಹಳವನುಂಡ ಜರನುರಿ | ಕಾರಿದಂದದಿ ಕೊಕ್ಕರಿಕೆಯನು |
ಬೀರಿದುದು ಚತುರಂಗ ಸೈನಿಕದೊಂದಳಿವು ನೋಡೆ ||
ಮೀರಿದೆರಡಕ್ಷೋಹಿಣಿಯ ಪರಿ | ವಾರವಳಿದುದು ಚಕ್ರಪಾಣಿಗೆ |
ವಾರಿಜಾಕ್ಷಂಗಳಿದುದೊಂದಕ್ಷೋಹಿಣಿಯ ಬಲವು || ೫೯ ||

ಆ ಸಮಯದಲಿ ದಿನಪನುಳಿದಖಿ | ಳಾಸೆಯನು ಮಧ್ಯಸ್ಥನಾಗಿರೆ |
ಲೇನು ತೇಜವನಾಂತು ರಾಜಿಪನಂತುಟಿರದಪರ ||
ಆಸೆಗೈದಪ ತೇಜನಾ ನಿವಿ | ಲಾಸವಳಿದಸ್ತಮಿಸಿದವನೆನೆ |
ಆಸೆಯೆಂಬುದು ಕಷ್ಟವೆಲೆ ಭೂಪಾಲ ಕೇಳೆಂದ || ೬೦ ||

ಪಿಂಗ ಸಂಧ್ಯಾಂಬರದಾವುದು | ಸಂಗರೋರ್ವರೆ ಯಾವುದೆಂಬ ಮ |
ನಂಗಳು ಭಯದಳಕ್ಕೆ ತೋರಲು ಬಂಡಳಂಗಳವ ||
ಹಿಂಗಿ ಮಾಗಧನತ್ತಲಿತ್ತಲು | ಶಾಂರ್ಙ್ಗ ನಿಜಸೈನಿಕವೆರಸಿ ಬೀ |
ಡಿಂಗೆ ಬಂದರಮನೆಯೊಳಿರ್ದರು ಭೂಪ ಕೇಳೆಂದ || ೬೧ ||

|| ಅಂತು ಸಂಧಿ ೪೬ ಕ್ಕ ಮಂಗಲ ಮಹಾ ||