ಸಂಧಿ ೪೫

ಚಕ್ರಪಾಣೀಯು ಶಾರ್ಙ್ಗಪಾಣಿಯು | ವಿಕ್ರಮದ ಪಡೆವೆರಸಿ ಸಂಗರ |
ಚಕ್ರದೊಳು ಬಂದೊಡ್ಡಿನಿಂದರವ್ಯೂಹರಚನೆಯಲಿ || ಪದ ||

ಕೇಳೆಲೇ ಶ್ರೇಣೀಕಧರಿತ್ರೀ | ಪಾಲಕನೆ ಮೈವೆಚ್ಚಿಕುರುಭೂ |
ಪಾಲನಾ ಮಗಧಾವನಿಪನೆನೆ ವೋಲಗಕೆ ಪೋಗಿ ||
ನಾಳೆ ಸಂಗ್ರಾಮದಿಲಿರಿವ ಕೂ | ರಾಳೆನಿಪ ದೊರೆಗಳಿಗ ಕರ್ಪೂರ |
ವೀಳೆಯವನೆರೆಕೊಡಿಸಿ ನಿಜಸಿಬಿರದೊಳಗಿರಲೊಡನ || ೧ ||

ಇನನ ಬರವಿಂಗಾದ ಸಂಧ್ಯಾಂ | ಗನೆಯ ಮೊಗರಾಗದೆ ಹಸರಿಸಿತೊ |
ಯೆನಿಸುದದು ಪಡುಗೆಂಪು ಪುಷ್ಪಿತ ಪದ್ಮಿನಿಯೊಳೊಲಿದ ||
ಅನುನಯದಿ ವಾರುಣಿಯ ಸೋಂಕಿದ | ಮನದ ಕೊಕ್ಕರಿಕೆಯಲಿ ಅಂಬರ |
ವನು ತೊರೆದು ಮೀವಂತೆ ರವಿ ಮುಳುಗಿದನು ಕಡಲೊಳಗೆ || ೨ ||

ಎರಡು ಬಲದೊಳಗಖಿಲಭೂಮೀ | ಶ್ವರರ ಬೀಡೊಳಗಾರತಿಗಳವ |
ಸರದೊಳುಲಿದರು ಪೊಡೆವ ಘಟಿಕಾಭೇರಿಗಳ ಕೂಡೆ ||
ಇರೆ ಮೊಳಗಿದವು ಪಂಚವಾದ್ಯಗ | ಳರದ ಕರಿಹಯವಾಯುಧಂಗಳ |
ನುರು ಭಕುತಿಯಲಿ ಪೂಜಿಸಿದರಾ ವೀರಭಟರಂದು || ೩ ||

ಅರುಣಜಲಧಾರೆಯಲಿ ಕುಂಕುಮ | ವರೆದ ಗಂಧದಿ ಕೆಂಪಿನಕ್ಷತೆ |
ಯುರುತರದ ಪುಂಜದಲಿ ಕೆಚ್ಚನೆಯರಲರಚನೆಯಲಿ ||
ಪರಿಮಲಿಪ ಧೂಪದಲಿ ದೀಪದಿ | ಸುರಿದ ಕೆಂಗೊಳೇಳ್ಗೆಯಿಂ ಕ |
ಪ್ಪುರದ ವೀಳೆಯ ಪರಿಮಲದಿ ಭಟರರ್ಚಿಸಿದರಂದು || ೪ ||

ಅಂತೆಸೆಯೆ ಸಾವಂತ ಮಾ ಸಾ | ವಂತ ಮಂಡಳಿಕರ ಮಕುಟಗಳ |
ನಾಂತವರ ವರದಂಡನಾಥರುನೋಲಗಿಸುತೆಸೆವ ||
ಅಂತಕೋಪಮ ವೀರಭಟರು | ರ್ಕಾಂತು ತಂತಮ್ಮಾಳ್ವಸುಧಾ |
ಕಾಂತರಿಗೆ ತಂತಮ್ಮ ಪೂಣ್ಕೆಯನೊರೆದರುಕ್ಕಿನಲಿ || ೫ ||

ಕೂರಿಸಿದ ಹಿಡಿಯಂಬು ಬೆನ್ನಲಿ | ಪೂರಿಸಿದ ಬತ್ತಳಿಕೆ ಹೊದೆಗಳು |
ಸಾರೆಯಿರಿಸಿದ ಸರಳ ಹೊದೆಗಳು ತೀರುವಿನಮೆಸುವೆ ||
ನಾರಿಹರಿದೊಡೆ ಸುರರಿಗಿತ್ತು | ರ್ಭಾರದಲಿ ಹೊಕ್ಕಿರಿ……..ರಿ |
ವಾರವಾಯೆನೆ ಕಾದುವೆನು ಕೇಳೆಂದನವನೋರ್ವ || ೬ ||

ದೇವ ಬಿನ್ನಪ ನಾಳೆ ಸಮರದೊ | ಳಾವರಿಸಿದೊಡೆ ನೊಸಲ ಕಂಗಳ
ದೇವನಾಂತೊಡಮಿಕ್ಕಡಿಗೆ ಕಡಿದೊಕ್ಕಲಿಕ್ಕುವೆನು |
ಆವನಾಂಪನು ತನ್ನ ಹರಿಗೆಯ | ಡಾವರದ ಸಿಡಿಲಂತೆ ಹಳಚುವೆ |
ನೀವೆ ಭಲ ಯೆನೆ ಫೌಜುಗಲಕುವೆ ನೆಂದನವನೋರ್ವ || ೭ ||

ಆಳು ನನಗೊಡ್ಡಲ್ಲ ಹರಿಗೆಯ | ಗಾಳಿಯಲಿ ತೂರುವೆನು ರಿಪುಶುಂ |
ಡಾಳಗಳ ಭರಿಕಯಗಳನು ಹರಿಗಡಿವೆ ಬಾಳಿನಲಿ ||
ನಾಳೆ ನಿಮ್ಮಡಿ ನೋಡು ನನ್ನಯ | ಕಾಳೆಗವ ನೀನಿತ್ತ ಜೋಳದ |
ಪಾಳಿಯೀತಗೆ ಸಲುವುದೆನಿಸುವೆನೆಂದನವನೋರ್ವ || ೮ ||

ಹೊಡೆದೊಡಹಿತನ ಬಾಳಿನಿಂ ತಲೆ | ಸಿಡಿದು ಮೇಗಡೆ ಪಾರಿ ನಾಕೆಂ |
ಟಡಿಯನಾ ಮುಂಡದಲಿ ನಡೆದಾಂತರಿಯ ಮುಂದಲೆಯ ||
ಹಿಡಿದು ಕೊರಳನು ಕೊಯ್ದು ವೈರಿಯ | ಪಡೆಯೊಳೇಳೆಂಟಾಳು ಪಡಲಿಡ |
ಅಡುವೆನೆನ್ನಯ ಭಾಷೆಯಿದು ಚಿತ್ತೈಸಿ ಕೇಳೆಂದ || ೯ ||

ಬೆಳೆದ ಬಾಳೆಯ ತೋಟದೊಳು ಕರಿ | ಕಲಭ ಹೊಕ್ಕಂತಾಂತರಾತಿಯ |
ದಳದೊಳಗೆ ಬಾಳ್ಗೊಂಡು ಕಡಿವೆನು ಭಟಸಹಸ್ರವನು ||
ತಿಳಿರಕುತ ದೊರೆಯೊಳಗೆ ಭೂತಂ | ಗಲನು ಮಿಸಿಸದೊಡಸಿಯ ಹೊತ್ತೆನೆ |
ತುಳಿವೆ ನಾಳೆಯೆ ಕಾಣ್ಬದೆಂದು ಸಹಸ್ರಭಟ ನುಡಿದ || ೧೦ ||

ಆಳಪವು ಜನ ಬಳಸಿ ಹಿಡಿವೆನು | ಕೂಳಿಯೊಳಗಣ ಮೀನವೊಲು ಖುರ |
ಧೂಳಿಯಲಿ ರಿಪುವಕ್ತ್ರನಾಸಿಕೆ ಕರ್ಣ ಕುಹರಗಳ ||
ಹೂಳುವೆನು ಕಡುಗುದುರೆಗಳವನು | ತೂಳುವೆನು ತೇರಣವೆ ತಾಂ ರಣ |
ಗೂಳಿಯೆಂದಾ ಘಳಿನನಾಡಿದನಂದು ಭಾಷೆಗಳ || ೧೧ ||

ದ್ವಿಪ ಘಟಾಪೇಟಕಗಳವು ತಾಂ | ವಿಪುಳ ಘಟಗಳು ನೋಡೆ ತನ್ನಾ |
ದ್ವಿಪದ ಭರಿಕೈಲವುಡಿಗೈರಾವತವು ತಾಗಿದೊಡೆ ||
ನೃಪತಿ ಪೆಡಮೆಟ್ಟದೆ ಸೆಣಸಲಾ | ತ್ತಪುದು ಮಿಕ್ಕಾನೆಗಳು ಮೊಗವಿ |
ತ್ತಪವೆ ಊರಾನೆಗಳವೊಲು ಪೆಂಕುಳಿಗೊಳಿಪೆನೆಂದ || ೧೨ ||

ಆದರಿಸದಾನೆಚ್ಚು ಸೆಣಸುವ | ಜೋದರುನ್ನತ ಸಿರಿಗಳನು ಬಿ |
ಜ್ಜಾಧರರವೊಲು ನಭದಲಾಡಿಸುವೆನು ಲವುಡಿಯಿಂದ ||
ಮೋದುವೆನು ಸಿಡಿಲೆರಗಿದಂತೆ ದಿ | ಶಾಧಿಪರ ಕರಿ ಭೇದವೋಡೆ ನಿ |
ಷಾದಿಗಳ ಗಜದೆಲುವ ಚೂರ್ಣಿಪೆನೆಂದನವನೋರ್ವ || ೧೩ ||

ಕಂಗಳವು ಶೂಕರಗಳೆನಗಾ | ಕಂಗಳಿಗೆ ನನ್ನಾನೆಯಾ ಕೇ |
ಸರಿ ನಿಷಾದಿಗಳಕ್ಕೆ ತಾನೇ ನಿಶಾಚರಾಧಿಪನು ||
ಕರುಣಗೆಟ್ಟೆನ್ನಾನೆಗೊಲೆಯನು | ಧುರದೊಳೀಕ್ಷಿಸು ನಿಚ್ಚನೀಂ ಸಾ |
ಸಿರವ ಕೊಡುವುದನೆರೆಯದೆನಿಸುವೆನೆಂದನವನೋರ್ವ || ೧೪ ||

ಉಭಯ ಬಲದೊಳಗಿಂತು ಭೂಪರ | ಸಭೆಗಳಲಿ ಪಂಥಗಳನಾಡುವ |
ಸುಭಟ ಕೋಟಿಗಳಾಳರಿಂ ಕರ್ಪೂರ ವೀಳೆಯವ ||
ಪ್ರಭೆಯೆಸೆವ ಮಣಿದೊಡಿಗೆ ವಸ್ತ್ರ | ಪ್ರಭೃತಿಯನು ತಳೆದಾರ್ವ ವೀರರ |
ರಭಸ ವೋಲಗ ಪರೆದು ತಂತಮ್ಮಿಕ್ಕೆದಾಣದಲಿ || ೧೫ ||

ಬಿರುದಗಳ ಹೊಗಳಿಸುವ ಹಳೆವೀ | ರರ ಚರಿತೆಗಳ ಕೇಳ್ವ ಪದಗಾ |
ಣರನು ಹಾಡಿಸುವಾದಿಸುವ ಪೆಕ್ಕೆಣವ ಪೇರಣವ ||
ಅರಸುಗಳಿಗರಿದೆನಿಸಿ ಚಾಗವ | ಕರಕರದು ಯಾಚಕರಿಗೀವಾ |
ದರಿಸುವುತ್ಸಾಹದಲಿರುಳ ಕಲೆದರು ಮಹಾಭಟರು || ೧೬ ||

ಇಂದು ನೋಡುವೆ ತನ್ನವಂಶದ | ಲೊಂದಿರಸಗಳು ಅರ್ಕನೆಂದರ |
ವಿಂದ ಬಾಂಧವನೆಯಿದೆರಾಗಿಸಿ ಮೂಡವೆಟ್ಟೆಂಬ ||
ಸಂದ ಪೀಠವನೇರಿದನು ತಾ | ನೆಂದೆನಿಸಿ ರವಿಮೂಡಮೂಡಲ |
ದೊಂದೆ ನಿಮಿಷಕೆ ವೀರ ಪಸದನವಾಂತುದುಭಯ ಬಲ || ೧೭ ||

ವರ ಜರಾಸಂಧಾದಿರಾಜರು | ಭರದಿ ಮಂಗಳಮಜ್ಜನಂಗೈ |
ದರುಹನಡಿಗಳಿಗಷ್ಟವಿಧ ಪೂಜೆಯನೆಸಗಿ ಯೆರಗಿ ||
ಸ್ಫುರಿತ ಚಕ್ರವು ಮುಖ್ಯರತ್ನೋ | ತ್ಕರವ ನರ್ಚಿಸಿ ವಸ್ತ್ರ ದಿವ್ಯಾ |
ಭರಣ ಭೂಷಿತನಾಗಿ ಸಿಂಹಾಸನದಲೊಪ್ಪಿದನು || ೧೮ ||

ವ್ರತ ನೃಪಾಲಕ ಮಕುಟಬದ್ಧ | ಪ್ರತತಿ ಸುಭಟವ್ರಾತ ವೋಲಗಿ |
ಪತುಳಸಭೆಯಲಿ ಕೌರವನ ಸಾರಿರ್ದ ಕರ್ಣನನು ||
ಚತುರ ಚಕ್ರಿಯು ನೋಡಿ ಸೇನಾ | ಪತಿಯನಾವನ ಮಾಳ್ಪವೆಲೆ ಕುರು |
ಪತಿಯೆ ಯೆನೆ ಕೈಮುಗಿದು ಮತ್ತಿಂತೆಂದನಾ ಭೂಪ || ೧೯ ||

ವೀರದಲಿ ಹಾರದಲಿ ರಿಪು ಸಂ | ಹಾರ ಚಾಪಕಲಾಪ ಸೂರ್ಯಕು |
ಮಾರನೋರ್ವನೆ ಅಧಿಕನಾತಂಗೆಲೆ ನರಾಧಿಪನೆ ||
ಸೇರುವುದನೇ ಮೆಚ್ಚಿಯಾತಗೆ | ಚಾರು ಮಜ್ಜನಗೊಳಿಸಿ ನವ ರ |
ತ್ನೋರು ಭೂಷಣನಾಗೆ ಸೇನಾಪಟ್ಟಗಟ್ಟಿದನು || ೨೦ ||

ದಿವಸದಾಯಕೆ ಎಂದಿನಂದದಿ | ರವಿಸುತಗೆ ಪದಿನೆಂಟು ಕೋಟಿ ವ |
ಸ್ತುವನ ಕುರುಪತಿಮುಂದೆ ಸುರಿಯಿಸಲಿರುಳು ಕೊಟ್ಟಂತೆ ||
ಕವಿಗಮಕಿ ಮೊದಲಾದ ಯಾಚಕ | ನಿವಹಕಾಗಳೆ ಕೊಟ್ಟು ಬರುಕೈ |
ದವನಿಪತಿಗಳ ನಾಚಿಸಿದನಂಗಾಧಿ ನಾಯಕನು || ೨೧ ||

ಬಳಿಕ ಬಂದವರ ಖಳನೃಪ ಸಂ | ಕುಲವೆರಸಿ ಪಂತಿಯಲಿ ಭೋಜನ |
ದಳೆದು ಕೈದೊಳೆದಮೃತ ತಾಂಬೂಲವನು ಸಲೆಸವಿದು ||
ತಳುವದತಿಯುತ್ಸವದಿ ದೆಸೆಗಳ | ನಳರಿಸುವ ನಿಸ್ಸಾಳಗಳ ದನಿ |
ಬಳೆಯೆ ಪೊರವಟ್ಟನು ಜರಾಸಂಧನು ರಣಾವನಿಗೆ || ೨೨ ||

ಕರಿಪತಿ ಸ್ಕಂಧಾವಲಂಬನ | ನರಪತಿಯು ನಡೆಗೊಳಲು ತೀಡಿದು |
ದಿರದೆ ಪ್ರತಿಕೂಲಾನಿಲನು ಸಂಗರವ ಜಯಿಸುವುದು ||
ಅರಿದು ಹಿಂದಕೆ ತಿರುಗೆನಿಪವೊಲು | ಮುರಿದು ಕೇತು ಪಟಂಗಳಾಡಿದ |
ವುರುವಿಭವದಲಿ ಸಕಲಸೈನಿಕವೆರಸಿ ನಡೆಗೊಂಡ || ೨೩ ||

ಚರಣ ಘಾತೋದ್ದೂತರಜವಂ | ಬರಕೆ ನೆಲನೇರಿದುದೆನಿಸಿ ಭೂ |
ತರುಣಿ ಧೂಳಿರೂಪದಲಿ ವಾದ್ಯಧ್ವನಿಗಳಿಂದ ||
ಧುರವನುಳಿನೀಂ ನಿನ್ನ ಸೇನೆಯ | ಹರಿಯ ದೆಸೆಯಿಂ ಹುಡಿಯೊಳೀಪರಿ |
ಹೊರಳ ಬೇಡೆಂದಪ್ಪಿದಂತಪ್ಪಿದುದು ಮಾಗಧನ || ೨೪ ||

ಹಯದ ಲಾಳಾ ಜಲವು ಗಜಸಂ | ಚಯದ ಮದ ಧಾರಾಜಲವು ಧೂ |
ಳಿಯನಡಂಗಿಸೆ ಭೂಮಿ ತೆರಪಿಲ್ಲೆನಿಪ ಸೈನಿಕದ ||
ಭಯ ರಹಿತನಾ ಚಕ್ರಿ ರಣ ಭೂ | ಮಿಯಲಿ ನಿಲಿಸಿ ಸುವರ್ಣತನು ಕಾಂ |
ತಿಯಲಿ ಹೊಂದೇರಿನಲಿ ಬಹುಕಲಿಕರ್ಣನನು ಕರೆದ || ೨೫ ||

ಕರೆಯೆ ಕರಕಮಲವನು ಮುಗಿದೆ | ನ್ನಿರವಿಸೆಲೆ ಪತಿ ಬೆಸನನೆಂದಾ |
ತರಣಿಸುತ ಬಿನ್ನೈಸೆ ಕಮಲವ್ಯೂಹ ರಚನೆಯಲಿ ||
ವಿರಚಿಸೈ ಚತುರಂಗವನು ಬಿ | ತ್ತರದಲೆನಲು ಹಸಾದವೆಂದಾ |
ದರದಿ ಮೌಹೂರ್ತಿಕರು ಪೇಳ್ದ ಮುಹೂರ್ತ ಸಮಯದಲಿ || ೨೬ ||

ಬರಿಸಿ ನಾಯಕನಿಕರಮಂಡಳಿ | ಕರನು ಮಾಸಾವಂತರನು ತರ |
ತರದಲಿಂತಿರಿಯೆಂದು ನೇಮಿಸಿ ರಿಪುಭಯಂಕರವು ||
ನೆರೆದ ಪದ್ಮವ್ಯೂಹವನು ಬಿ | ತ್ತರಿಸಲೊಡರಿಸಿ ಮಧ್ಯ ಕರ್ಣಿಕೆ |
ಯರು ಧರೆಯೊಳಾ ಚಕ್ರವರ್ತಿಯ ನಿಲಿಸಿದನು ಕರ್ಣ || ೨೭ ||

ಹರನ ಸಂಬಂಧಿಗಳೆನಿಪ ಸಿಂ | ಹರಥ ಸಿಂಹಧ್ವಜವು ಜಯಧ್ವಜ |
ವರನುವಜಿತಂಜಯನುಮಪರಾಜಿತನು ಕಾಲವಯ ||
ತರಣಿಮಿತ್ರನು ಸಿಂಹಕೇತುವು | ಕುರುಪತಿಯು ಮೊದಲಾದವರನಿಂ |
ತಿರಿಸಿದನು ಕೇಸರವೆನಲು ತಂತಮ್ಮ ಬಲವೆರಸಿ || ೨೮ ||

ಅವರ ಪೊರೆಗಾ ಭೀಷ್ಮಕಲಶೋ | ದ್ಭವ ಕೃಪಾಶ್ವತ್ಥಾಮ ಭೂರಿ |
ಶ್ರವ ಶಕುನಿ ಕೃತವರ್ಮಶಲ್ಯ ಸುಶರ್ಮಾಭಗದತ್ತ ||
ರವರನಾಂತಕ ಕನಕ ಸೈಂಧವ | …………….ರಸೇನ ಬಾಹ್ಲಿಕ |
ಧವಳ ಬಾಣಾಸುರ ಜಯಂತಾದಿಗಳ ಬಲವೆರಸಿ || ೨೯ ||

ತೊಳಪ ಮೂವತ್ತೀರ್ವರನು ಮಂ | ಡಲಪತಿಗಳನು ಚೆಲುವನಾಂತಾ |
ನಳಿನದೆಸಳಾಗಿರಿಸಿ ತತ್ಸೇನಾಧಿನಾಥರನು ||
ಪೊಳೆವೆಸಳ ಮೊನೆಯಾಗಿರಿಸೆ ಕಂ | ಗೊಳುತ ಗಜಕಂದರದೊಳತಿ ಪ |
ಜ್ಜಳಿಪ ಬೆಳುಗೊಡೆ ನೆಳಲಲಿಹ ಚಕ್ರೇಶ ಮೆಚ್ಚಿದನು || ೩೦ ||

ನರಪತಿಯ ಮೇಲಾಗಸದಲಾ | ತರಣಿ ಮಂಡಲದಂತೆ ಚಕ್ರ |
ಸ್ಫುರಿತ ರತ್ನವುನಿಲವನು ಬಳಸಿದಕಿರಣ ಸಾಸಿರದ ||
ಪರಿಯಲಾ ವಿದ್ಯತ್ಪ್ರಭನು ಕೇ | ಸರಿ ಸುವಿದ್ಯುದ್ಗತಿಯಶನಿವೇ |
ಗರು ವಿಮುಖ್ಯಾಂಬರಚರರ ಚೆಲುವಾಗಿ ನಿಲಿಸಿದನು || ೩೧ ||

ಇರಿಸಿ ತಂತಮ್ಮಖಿಳ ಸಾಧನ | ವೆರಸಿ ಸಂಗರ ಸರಸಿಯಲಿ ನೇ |
ಸರಕುಮಾರಕ ನೋಡಿಮೆರೆವಾ ವ್ಯೂಹಕಮಲದಲಿ ||
ನರಪತಿಯ ಭೂಷಣದ ರುಚಿಬಂ | ಧುರಪರಾಗಮದಾಗೆ ಭೂಮೀ |
ಶ್ವರರ ತನುಪರಿಮಲವೆ ಪರಿಮಲವಾಗಿ ಸೊಬಗಾಯ್ತು || ೩೨ ||

ವಿತತ ಹಯ ಹೇಸಿತವು ಗಜಬೃಂ | ಹಿತವು ವೀರಭಟಪ್ರಬಲ ಹೂಂ |
ಕೃತವು ಬಹುವಿಧವಾದ್ಯ ಘೋಷವು ಶಂಖ ಭೂಂಕೃತವು |
ಚತುರ ಕಹಳಾ ಚೀತ್ಕೃತವು ಪೆಣೆ | ದತುಳಲಯ ಸಮಯದ ಸಿಡಿಲ ಸಂ |
ತತಿಯ ತಾಯ್ಮನೆಯೆನಿಸಿತಾ ವ್ಯೂಹೋದರಾವನಿಯ || ೩೩ ||

ಮತ್ತಮಾರಿಪುಗಳ ಬರವ ಪಾ | ರುತ್ತ ಮಿತ್ರಕಮಾರನೊಳು ನುಡಿ |
ಯುತ್ತ ವೀರಾಳಾಪಗಳನಾ ಚಕ್ರಾಧರನಿರಲು ||
ಅತ್ತಲಾ ಗೋವರ್ಧನಾದ್ರಿಯ | ನೆತ್ತಿದಾತನು ನಿತ್ಯಕರ್ಮವ |
ನುತ್ತರಿಸಿ ಸರ್ವಾವಸರ ಮಂಡಪದೊಲೊಪ್ಪಿದನು || ೩೪ ||

ಎಸೆವ ಮಧ್ಯಮ ಪಾಂಡವನೆ ರಾ | ಜಿಸುವ ಮಂಗಳ ಮಜ್ಜನವನಾ |
ಗಿಸಿ ಸುರತ್ನಾಭರಣದಿಂ ಕೈಗೆಯಿಸಿಯುತ್ಸವದಿ ||
ಮಿಸುನಿವಣೆಯೊಳಗಿರಿಸಿವಾದ್ಯ | ಪ್ರಸರವುಲಿಯಲು ವೀರಪಟ್ಟವ |
ನೊಸೆದು ಕಟ್ಟಿದನಚ್ಯುತನು ಸೇನಾಧಪತ್ಯವನು || ೩೫ ||

ಧನದರಾಶಿಯ ಸುರಿದು ಯಾಚಕ | ಜನಕೆ ಆಶ್ರಿತ ಜನಕೆ ಸಾಕೆಂ |
ದೆನಿಸಿ ಮಿಗೆಮೊಗೆದಿತ್ತದೆಂದುಂಕೆಡೆದ ಜಸವೆಂಬ ||
ಧನವ ಗಳಿಸಿದನಾಗಳಖಿಳಾ | ವನಿಪರುರ್ಕುವ ವೀರಪಸದನ |
ವನುತಳೆದು ನಿಜ ಚಾತುರಂಗ ಸಮೇತರೊಪ್ಪಿದರು || ೩೬ ||

ಬಂದನಾ ಸಮಯದಲಿ ಗಲಗಲ | ನೆಂದುಲಿವ ಕಿರುಗೆಜ್ಜೆಯುಡೆದೊವ |
ಲೊಂದು ನೆನಪಿದ ಕುಂಚ ಪಚ್ಚೆಯಬೆಮರುಗುಪ್ಪಸವು ||
ಸಂದ ಟೊಪ್ಪಿಗೆ ಗಾಳಿಗೆಂಗರಿ | ಬಂದುದೋಯೆನೆ ವಹಿಲದಲಿ ಗೋ |
ಮಿಂದ ಬಿನ್ನಪ ಚಕ್ರಿ ಬಂದೊಡ್ಡಿದನು ಧುರಕೆಂದ || ೩೭ ||

ಚರರ ನುಡಿಯನು ಕೇಳಿ ನಗಧರ | ಧುರಗಮನ ಭೇರಿಯನು ಪೊಡಯಿಸೆ |
ಉರಗಪತಿ ಹೆಡೆಯುಡುಗಿ ಬಿಸಲತೆಯಂತೆ ಕುಪ್ಪಳಿಸೆ ||
ಸುರಪನನು ಮರೆವೊಕ್ಕರಾ ದಿವಿ | ಜರು ದಿಗೀಶರು ಪೀಠದಿಂ ಕೆಲ |
ಕುರುಳಿದರು ಭೀಕರ ರವಾತ್ಮಕವಾಯಿತಾ ಲೋಕ || ೩೮ ||

ವನಜನಾಭಯ ಬಳಿಕ ಮನದಂ | ದನುಮೆನಿಸಿದತಿರಥನೆನಿಪ ಕೃ |
ಷ್ಣನನು ಕಪಿಕೇತನನ ರಥವನು ಜೋಡಿಸೆನೆ ಕೃಷ್ಣ ||
ಮನೆದೆಗೊಂಡಾ ಸಿತಹಯನರಥ | ವನು ನಿವೇಷ್ಟಿಸಲದನರಿಯದ |
ರ್ಜುನನ ಬಂಡಿಯ ಬೋವನಚ್ಚುತನೆಂಬುದೀ ಲೋಕ || ೩೯ ||

ಬಳಿಕ ಮಂಗಳ ಪಸದನಂಗಳ | ತಳೆದು ಬಲನಾರಾಯಣರು ನೀ |
ರ್ಮಲವಿಬೋಧಜ್ಯೋತಿನೇಮಿಸ್ವಾಮಿಯನುಮನದ ||
ಒಳಗಿರಿಸಿ ಮುದದೆರಗಿ ವಿಭುದಾ | ವಳಿಯ ಪರಕೆಯನಾಂತು ರಾಜಾಂ |
ಗಳಕೆ ಬಂದನು ಕೃಷ್ಣರಾಯನು ಭೂಪ ಕೇಳೆಂದ || ೪೦ ||

ಮುಂದೆ ನಿಂದುದು ಮುಗಿಲು ಕಾಲ್ಗಳ | ನಂದು ಪಡೆದೆವೊ ಮೇಣ್ವಿಧಾತನ |
ದೊಂದು ನೀಲಾದ್ರಿಯ ವಿಭಾಕೃತಿಗೈದುಚೇತನವ ||
ವಂದಿಸಿದನೋ ಯೆನಿಸಿ ಬರಿಕೈ | ಯೊಂದಿ ಬಲಗೋಡೊಳು ವಿರಾಜಿಪ |
ಸಿಂಧುರ ಸ್ಕಂದಾವಲಂಬನನಾದನಾ ಕೃಷ್ಣ || ೪೧ ||

ಬಲದಲಾನೆಯ ಮೇಲೆಬಲನೆಡ | ದಲಿ ಗಜೇಂದ್ರನ ಮೇಲೆ ಧರ್ಮಜ |
ನೊಲಿದು ಬರೆಸಾಲೊಂದು ನಡೆದವು ಪಾಳಿಕೇತನವು ||
ಬೆಳುಗೊಡೆಗಳೆತ್ತಿದವು ಚಾಮರ | ತೊಲಗಿದವು ನೊಂದಕವನಾ ಹರಿ |
ಝಳಪಿಸುತಲದ ಕೈಗೆ ವಜ್ರಾಂಕುಶವೆನಿಸಿ ನಡೆಯೆ || ೪೨ ||

ಬೀಸಿದುದು ಮಿಗೆ ತಣ್ಣ ತಣ್ಣನೆ | ವಾಸಿಸುವೊಡದು ಕಮ್ಮಕಮ್ಮನೆ |
ಕೇಶವಂಗನುಕೂಲವಾಯು ಸಮಸ್ತರಾಯೆನಲು ||
ಲೇಸು ಶಕುನಗಳು ಪಡೆದುರಣ | ಸಾಸಿಗನು ಸುಮುಹೂರ್ತದಲಿ ಸೇ |
ನಾಸಮೇತನು ಬೀಡು ಪೊರವಟ್ಟನು ಮಹೋತ್ಸವದಿ || ೪೩ ||

ನಡೆದವೋರಂದದಲಿ ವೊಜ್ಜರ | ವೆಡೆಗುಡದೆ ಸಾಲ್ಗೊಂಡವಾಚೆಂ |
ಗೊಡೆಗಳೋರಣವಾಗಿ ಸಿಂಧುಗಳುಪ್ಪರಿಸಿ ಪರಿಯೆ ||
ಪೊಡೆವ ತಮ್ಮಟ ವೀರಮದ್ದಳೆ | ಗಿಡಿಬಿಡಿಗಳೊದರುವ ಕಹಳೆಗಳು |
ಬಡಿವ ನಿಸ್ಸಾಳಗಳು ಬೊಬ್ಬಿಡೆ ನಡೆದುದಾ ಸೈನ್ಯ || ೪೪ ||

ಪಡಿಯರರು ಹರಿಹರಿದು ಪಕ್ಕದ | ಪಡೆವಳರ ಗಜಕುಲದ ಸಾಲ್ಗೊಳೆ |
ನಡಸುವೊಕ್ಕೊರಳೊಳೆನೆಕೀಬರು ನೆಲನನುಗ್ಘಡಿಪ ||
ದಡವಿಡಿದು ಕಟ್ಟಿಗೆಯವರು ಮುಂ | ಗುಡಿಯ ಫೌಜನು ಹೊಯ್ತೆಗೆದು ಇ |
ಕ್ಕಡಿಗೆ ಸೂತ್ರಿಸಿದಂತೆ ನಡೆಸುವ ಜಾಣ್ಮೆ ಪಸರಿಸಿತು || ೪೫ ||

ಸಂದಣಿಯ ಪಾಠಕರ ಭಟ್ಟರ | ವಂದಿಗಳ ಕಳಕಳದಿ ಭೂಪರ |
ಗೊಂದಳವು ಬರೆಮಿಸುನಿದೇರೊಳು ನಕುಳಸಹದೇವ ||
ಒಂದಿ ಬರೆ ಗಜಕಂಧರದಲೊಳ | ವಿಂದರುದಿರೋದ್ಗಾರಿ ಗದೆಯನ |
ದೊಂದು ಪರಿಘವನಾಂತು ಬಂದ ಹಿಡಿಂಬಕಾಂತಕನು || ೪೬ ||

ನಡೆವುತಿಹ ಚತುರಂಗ ಸೇನೆಯ | ನಡುವೆ ಮಣಿರಥವೇರಿ ಮಿಸುನಿಯ |
ಗಿಡಿಯ ದಂಡಾಗ್ರದಲಿ ವಾನರ ಲಾಂಛನವು ಮಿಳಿರೆ ||
ಕಡುಮೆರೆವ ನಿಜವೀರ ಪಸದನ | ವಿಡಿದ ಮಣಿರುಚಿರಿಪು ಸಮುದ್ರವ |
ಕುಡಿವ ವಡಬನ ನಾಲಗೆಗಳೆನೆ ಬಂದನಾ ಪಾರ್ಥ || ೪೭ ||

ನೆಲನನಾ ಚತುರಂಗ ಬಲವ | ಗ್ಗಳಿಸಿದುದು ತದ್ರಜಸಮಾಜವು |
ಜಲನಿಧಿಯನಾರಿಸಿತು ಪಳಯಿಗೆ ನಭವ ತೀವಿದುದು ||
ಉಲಿವ ವಾದ್ಯಧ್ವನಿ ದಿಗಂತವ | ನಲೆದುದಾ ಸಿತಹಯನ ಸೂತ್ರದ |
ಹಲವು ಬೊಂಬೆಗಳೆನಿಸಿ ನಡೆದುದು ಯುದ್ಧ ಭೂತಳಕೆ || ೪೮ ||

ಮುರಮಥನನರ್ಜುನನನಾಗಳು | ಬರಿಸ ವಜ್ರದ ಕವಚ ಘರ್ಮದ |
ತರಣಿರುಚಿಯನು ಬೀರೆ ಕಪಿಕೇತನವು ತೊಲತೊಲಗೆ ||
ಕರದೊಳಾ ಗಾಂಡಿವ ಶರಾಸನ | ವರಿಭಯಂಕರಮಾಗೆ ಸಿತಹಯ |
ಧುರ ರಥವನಾ ಕೃಷ್ಣಾ ಜೋಡಿಸೆ ಬಂದನೊಲವಿಂದ || ೪೯ ||

ಬಂದೆರಗಿ ಯೆಲೆ ದೇವ ಬೆಸನೇ | ನೆಂದು ಬಿನ್ನೈಸುವುದು ನೋಡಿಮು |
ಕುಂದನೆಂದನು ಪಡೆಯನೊಡ್ಡೈ ವ್ಯೂಹರಚನೆಯಲಿ ||
ಎಂದೊಡದನೆ ಹಸಾದ ರಚಿಸುವೆ | ನೆಂದು ಗರುಡ ಧ್ವಜಗೆ ಸಾರ್ಥಕ |
ವೆಂದು ಗರುಡವ್ಯೂಹವನು ರಚಿಸುವೊಡೆ ಬಗೆದಂದ || ೫೦ ||

ದೃಢರಥ ಜರಾವಿಷ್ಣು ಪೌಷ್ಟ್ರನ | ಪೊಡವಿಪತಿ ರಥನೇಮಿ ಭೂವರ |
ನೊಡನೆ ನೀಲಕುಮಾರನೊಪ್ಪುವ ಚಿತ್ತ ಭಾನುನೃಪ ||
ಪೊಡರ್ವಸೌರನು ಚಂದ್ರಮುಖ್ಯರ | ಪಡೆವೆರಸಿ ತಂಡಾಕೃತಿಯನಾ |
ಗೊಡರಿಸಿದನಾ ರಿಪು ಭಯಂಕರವಾಗಿ ಕಲಿ ಪಾರ್ಥ || ೫೧ ||

ದೊರೆವಡೆದ ಮಣಿಪುತ್ರ ಹಂಸೋ | ದ್ಧುರಮವುಲಿ ನೃಪ ಸೋಮದೇವೋ |
ವರೆಯರಸನಾ ಭದ್ರಸೇನ …………… ||
ಧರಣಿಪತಿಗಳನವರ ಸೇನಾ | ಪರಿಕರಣ ಸಹ ಕೊರಳ ಭಾವದ |
ಲಿರಿಸಿದನು ಪರನಯನ ಭೀಕರವಾಗೆ ಕಲಿಪಾರ್ಥ || ೫೨ ||

ತರತರದಿನಕ್ಷೋಭಾಸ್ತಿಮತ ಸಾ | ಗರವಿಜಯ ಹಿಮವಾಂತ ಸತ್ಯಕ |
ಸುರಸಧಾರಣ ಪೂರಣಾಚಲಜಯನು ಸತ್ಯಧರ ||
ಸ್ಫುರಸು ………….. | ……………. ಪಕ್ಷವಾಗಿಯೆ |
ವಿರಚಿಸಿದನವರವರ ಸೈನ್ಯ ಸಮೇತನರ್ಜುನನು || ೫೩ ||

ವರಯುಧಿಷ್ಠಿರ ಭೀಮ ಮದ್ರಿಜ | ರುರು ಘಟೋದ್ಗಜ ರಾಷ್ಟ್ರವರ್ಧನ |
ವರ ಮುಖದೃಷ್ಟಾರ್ಜುನನುಮಭೀಮನ್ಯು ಸುಕುಮಾರ ||
ದೊರೆಯಮಲಯಧ್ವಜ ವಿರಾಟಾ | ದ್ಯರನು ತಂತ್ಮಮಖಿಲ ಬಲಸಹ |
ವಿರಿಸಿದನು ತದ್ವಾಮಪಕ್ಷದವೀ ರಚನೆಯೊಳಾಗ || ೫೪ ||

ವಿನುತ ಕೀರ್ತಿಧ್ವಜ ಮಹಾಸೇ | ನನನು ಪೊಡರ್ಪಿಸೆ ಉಗ್ರಸೇನಾ |
ವನಿಪನಕ್ರೂರನು ಪೊದಳ್ದಾ ಸಿಂಹಕೇತುನೃಪ ||
ಜನವಿದಿತ ದೀಪಾಯನಾದ್ಯರ | ಘನ ಚತುರ್ವಲವೆರಸಿಯಿರಿಸಿದ |
ನನುವಡೆದ ಪುಚ್ಛಾಕೃತಿಯನರ್ಜುನನೃಪಾಲಕನು || ೫೫ ||

ಗಿರಿಧರನ ಹಲಧರನನಾ ಭೀ | ಕರ ಖಗೇಂದ್ರನ ಪಕ್ಷ ಮೂಲದ |
ಲುರು ಗಜಾರೂಢರನಿರಿಸಿನ್ನೇತ್ರಯುಗವಾಗಿ ||
ನರನು ತಾನುಮನಾಧೃತನುಮಿರೆ | ಹರಿಯ ಮೇಗಡೆ ಛತ್ರ ಬಹುಚಾ |
ಮರ ಬಿರುದ ಠಕೆಯ ಮೌಕೆಗಳಿತ್ತ ವದ್ಭುತವ || ೫೬ ||

ಅರಿಮಥನ ರಣ ಚಂದ್ರ ದಧಿಮುಖ | ಅರುಣ ಚಂದ್ರಮನಶನಿವೇಗನು |
ತರಣಿ ಮುಖನಾ ಸಿಂಹದಾದಮನೋಗಲೆಗಳಿಂತು ||
ನೆರೆದ ವಿದ್ಯಾಧರರ ಬಲತ | ಮ್ಮುರು ಪತಾಕಿನಿವೆರಸು ನಭದಲಿ ||
ನರನಿರಿಸಿ ಮಂಡಳಿಸಿ ನಿಂದುದದೊಂದು ಲೀಲೆಯಲಿ || ೫೭ ||

ಗರುಡರಾ ಗಾಂಧರ್ವರಾ ಕಿಂ | ಪುರುಷರಾ ಯಕ್ಷರ್ಸಮಸ್ತಾ |
ಸುರರೆನಿಪ ದೇವೌಘ ಮೇಘಾಕಾಶ ನೆರೆಯದೆನೆ ||
ಧುರವನೋಡುತ ಲೀಲೆಯಿಂ ಮಿಗೆ | ನೆರೆದು ನಿಂದುದು ಯಿಂತತುಳ ಬಲ |
ವೆರಡು ಸಂಗರಕೊಡ್ಡಿ ನಿಲಲವನೀಶ ಕೇಳೆಂದ || ೫೮ ||

|| ಅಂತು ಸಂಧಿ ೪೫ಕ್ಕಂ ಮಂಗಳ ಮಹಾ ||