ಸಂಧಿ ೪೨

ಕ್ಷಿತಿವಿದಿತ ಪಾಂಡುಜರು ದ್ವಾರಾ | ವತಿಯ ಪೊಕ್ಕಿರೆ ಕೃಷ್ಣನಾ ಕುರು |
ಪತಿಗೆ ಸಂಧಾನ ಸ್ಥಿತಿಯನಾಡಿಸಿದನೊಲವಿನಲಿ || ಪದ ||

ಕೇಳು ಮಗಧಾಧೀಶ ಧಾನ್ಯನೃ | ಪಾಲವಿಂದಕ ಚಂಡವಾಹನ |
ನಾಲಲಿತಗುಣ ಸಿಂಹ ಘೋಷಾದಿಗಳು ತಂತಮ್ಮ ||
ಶೀಲವತಿ ಕುವರಿಯರ ಕರತಂ | ದಾಳಿಸಿದರಂತಕಸುತಗೆ ಸಂ |
ಮೇಳಗೊಂಡರು ದ್ರುಪದ ತನುಜೆ ಸುಭದ್ರೆಪಾರ್ಥನೊಳು || ೧ ||

ಸಿಂಗವಾಹನ ಖಚರನಾ ಲಲಿ | ತಾಂಗಿಯಗ ತನ್ನನುಜೆಯನು ಭೀ |
ಮಂಗೆ ಸೇರಿಸೆ ನಕುಲಸಹದೇವರಿಗೆ ಸೇರಿದುದು ||
ಸಿಂಗರವ ತಮ್ಮರಸಿಯರು ಸುಖ | ದಿಂಗಡಲೊಳೋಲಾಡುತಿರ್ದರ |
ಭಂಗರೆಂಬುದು ವಿಧಿತಮಾದುದು ಸಕಲಮಹಿಯೊಳಗೆ || ೨ ||

ಸುತ್ತಣಖಿಲ ಧರಿತ್ರಿಯಾಣ್ಮರು | ಮತ್ತಗಜ ಹಯ ರಥಪದಾತಿಯ |
ಮೊತ್ತದಲಿ ಬಂದೋಳಗಿಸುತಿರ್ದರು ವಿರಾಟನೃಪ ||
ಉತ್ತರನು ಮಿಗೆ ಸೇವೆಯನು ಮಾ | ಡುತ್ತಲಿರೆ ಜಿನಪಾದ ಪಂಕಜ |
ಮತ್ತು ಭೃಂಗರು ಪಾಂಡವರು ತತ್ಪುರದೊಳೊಪ್ಪಿದರು || ೩ ||

ಇರಲೊಡನೆ ನಾನಾ ವಿಧದ ಭೀ | ಕರ ಮಹಾ ವಿದ್ಯಾ ಪ್ರಭಾವನು |
ಸುರಪ ವೈಭವನಿಂದ್ರರಥನೆಂಬಾ ವಿಯಚ್ಚರನು ||
ನೆರೆದ ಬಹುಪರಿವಾರ ಸಹವಂ | ಬರದಿನಿಳಿತಂದತಿ ವಿನಯದಿಂ |
ದೆರಗಿ ಪಾಂಡುಜರೊತ್ತಿನಲಿ ಸೇವೆಯನು ಮಾಡುತಿರೆ || ೪ ||

ಬಳಿಕಲಾ ಮತ್ಸ್ಯಾವನೀಶನ | ಕೆಳಯನೊಪ್ಪುವ ಶೂರಪಾಂಡ್ಯನು |
ಲಲನೆಯರ ಸೀಮಂತ ಮಣಿಯಹ ಚಿತ್ರಲೇಖೆಯನು ||
ತಳುಪದರ್ಜುನನೊಳು ವಿವಾಹವ | ಬಲಿದು ತಲೆತೆಲ್ಲಟಿಯೆನುತ ತಾಂ |
ತೊಲಗದಾ ಪಾಂಡವರನೊಲವಿಂ ಸೇವೆಮಾಡುತಿರೆ || ೫ ||

ಚರರಿನರಿದು ಮುರಾಂತಕನು ಹಲ | ಧರನು ಸತ್ಯಕನೆಂಬುವನನುಡು |
ಗೊರೆವೆರಸಿ ಕಳುಹಲು ವಿರಾಟಪುರಕ್ಕೆ ನಡೆತಂದು ||
ವರ ಯುಧಿಷ್ಠಿರಗೆರಗಿ ಯತ್ಯಾ | ದರದೊಳುಡುಗೊರೆಗೊಟ್ಟು ನಿಮ್ಮನು |
ಕರೆದು ತರವೇಳ್ದೆನ್ನನಟ್ಟಿದರೆಮ್ಮೊಡೆಯರೆಂದ || ೬ ||

ಎನಲು ಕೇಳ್ದತಿ ಹರಷದಲಿ ತಾಂ | ಮನೆನೆನೆಯೆ ಪುಳಕಗಳು ತನ್ನಯ |
ತನುವಿನಲಿ ದರಹಸಿತ ಕಾಂತಿಯು ಸಭೆಯ ಪಸರಿಸಲು ||
ನನಗಿದೇನುಪಚಾರವೇ ಎಂ | ದನಬರೆಲ್ಲರ ಕುಶಲವಾರ್ತೆಯ |
ನನು ನಯದಿ ಬೆಸಗೊಂಡನಾ ಪಾಂಡವಕುಮಾರನು || ೧೭ ||

ಬಂದ ಮಳೆಗಾಲವನು ಕಲಿದಾಂ | ಬಂದಪೆವು ನಾವೆಂತು ನೇಮಿ ಜಿ |
ನೇಂದುವಂಘ್ರಿಸರೋಜಯುಗವನು ಭಕ್ತಿಭಾವದಲಿ ||
ವಂದಿಸಲೆ ಬೇಹುದುಯೆನುತ ಸಾ | ನಂದದಿಂದುಡುಗೊರೆಯನಿತ್ತಾ |
ಬಂದ ಸತ್ಯಕನನು ಕಳುಹೆ ದ್ವಾರಾವತಿಗೆ ಪೋದ || ೮ ||

ಹರಿಹರಿಗದೆಲ್ಲವನು ವಿಸ್ತರ | ಮರುಪೆ ಕೇಳ್ದರುನಲವಿನಲಿ ತಾ |
ವಿರಲು ಕೊಂತಿಯು ಹಸ್ತಿನಾಪುರದತ್ತ ನಡೆತಂದು ||
ಹರುಷದಲಿ ವಿದುರನನು ಕೂಡ | ಲ್ಲಿರುತಮಿರ್ದತ್ತೊಂದು ದಿನದಲಿ |
ತರಣಿ ತನಯನ ಮನೆಗೆ ಬರೆ ಕಂಡೆರಗಿದನು ಕರ್ಣ || ೯ ||

ಕರವನೊಯ್ಯನೆ ಕೊಟ್ಟು ಅತ್ಯಾ | ದರದೊಳೊಡಗೊಂಡೊಳಗೆ ಪೀಠದೊ |
ಳಿರಿಸಿ ಕೇಳಲೆ ತಾಯೆ ಬಿಜಯಂಗೈದಿರಾಂ ಧನ್ಯ ||
ಪಿರಿದು ಸಂತಸವಾದುದೆನೆ ವಿ | ಸ್ತರದಲೇಕಾಂತದಲರುಪಿದಳು |
ಪಿರಿಯ ಮಗ ನೀನಾಗಬೇಕೆಂದದರ ವಿವರಣೆಯ || ೧೦ ||

ಎನಲು ಕೇಳ್ದಾ ಕರ್ಣನೆರಡೆಂ | ದನು ಜನನಿಜನಕರ ಪರೀಕ್ಷಿಸ |
ಲನುಗೈದು ಭಜನೆಯಲಿ ನಾನಿರುತಿರಲು ತದ್ದೇವಿ ||
ನನಗೆ ಕೊಟ್ಟಳದಂ ಪೊದೆದವಳೆ | ಜನನಿಯೆಂದರಿಯೆಂದೆನಲು ಪೊದ |
ಸೆನಲು ಪೊದಸಿಯದನುರಿವ ಪೀತಾಂಬರವನಾ ಕರ್ಣ || ೧೧ ||

ಚೆಂದಳಿರ ಹೊದರಿನಲಿ ಸುರವಧು | ವೊಂದು ಲೀಲೆಯಲಿರ್ದವೊಲು ತ |
ಣ್ಪೊಂದಿರಲು ತಾಯೆಂದರಿದು ಬಂದೆರಗೆ ಮತ್ತಾಕೆ ||
ಕಂದನನು ಬಿಗಿದಪ್ಪೆ ಕಣುನೀ | ರಿಂದ ಮೊಲೆವಾಲ್ಮುನ್ನೆ ತೊರೆದೊಗೆ |
ಅಂದವನು ಕಂಟಕಿತಮಾದುದು ತಾಯಿ ಮಕ್ಕಳಿಗೆ || ೧೨ ||

ಎಲೆ ಮಗನೆ ನಿನ್ನನುಜರೊಳು ನೀ | ನೊಲಿದು ನಡೆ ಬೆಸಕಯ್ಸಿ ಕೊಳ್ಳೆನೆ |
ತಲೆಯೊಲಹಿನಲಿ ನಿಮ್ಮಡಿಗಲಾ ಮಾತನಾಡಿದಿರಿ ||
ಒಲುಮೆ ನನಗೆಂತಹುದು ನೀವಿದ | ತಿಳಿವುದಾ ಗಾಂಧಾರಿಯಾತ್ಮಜ |
ರೊಲುಮೆ ನಿಮ್ಮಾತ್ಮಜರೊಳುಂಟೇ ತಾಯೆ ಕೇಳೆಂದ || ೧೩ ||

ಮೀರಬಾರದು ತಾಯ ಮಾತನು | ಮಾರುಗೊಂಡನು ನನ್ನ ಕುರುಪತಿ |
ಬೇರೆ ಮತ್ತೊಂದೆಣೆಸೆನಗೆ ನಾ ಗೆಡಗೆ ನಾನಹೆನು ||
ಆರೆನನಿತಕೆ ನಿಮ್ಮಡಿಗಳಿಂ | ನೂರಿ ನುಡಿದುದ ಕೊಂಬೆನೆನೆ ಕಡು |
ನೀರಮಗನನು ನೋಡಿ ನಸುನಗುತೆಂದಳಾ ಕೊಂತಿ || ೧೪ ||

ಆದೊಡೆತ್ತಾನುಂ ಕಲಹ ನಿಮ | ಗಾದೊಡಾತ್ಮಜನಿನ್ನನುಜರೊಡ |
ಕಾದಿರಿಸು ದಿವ್ಯಾಸ್ತ್ರವನು ತೊಡಬೇಡೆನಲು ತಾಯ ||
ಪಾದಪದ್ಮಕ್ಕೆರಗಿ ಜೀಯ ಹ | ಸಾದಯೆಂದೆನೆ ತಾಯಿ ನಾನೆಂ |
ದೋದದಿರು ಮತ್ತಾರ ಕೂಡೆಂದಾಣೆ ಮಾಡಿದಳು || ೧೫ ||

ವಿತತ ರತ್ನಾಭರಣಗಳ ನಿ | ತ್ತತುಳೆ ಕಳುಹಿಸಿಕೊಂಡು ದ್ವಾರಾ |
ವತಿಗೆ ಪೋದಳತ್ತಲಿತ್ತಲು ತೀರೆ ಮಳೆಗಾಲ ||
ಸುತರು ಪಾಂಡವರಲ್ಲಿರದೆ ಕ್ರಮ | ಗತಿಯಲೈದಿದರೊಲ್ದು ದ್ವಾರಾ |
ವತಿಯ ಪೊಗುತರೆ ಹರಿಹರಿಗಳಿದಿರ್ಗೊಂಡರುತ್ಸವದಿ || ೧೬ ||

ಧರೆಗಿದಚ್ಚರಿಯೆನಿಪ ಪುರಸಿಂ | ಗರಿಸಿದುದು ಮುನ್ನವೆ ಗಜಾರೂ |
ಢರು ಬಹಳ ಪರಿವಾರ ಭೂಪಾಲಕ ನಿಕರವೆರಸಿ ||
ಪುರವನೆಯ್ದಿದರೊಲ್ದು ನೇಮೀ | ಶ್ವರ ಪದಾಂಬುಜದಲ್ಲಿ ನೊಸಲನು |
ಪರಿಪಕರಿಸಿ ತತ್ಸಭೆಯೊಳಗೆ ನಲವಿಂದವೆಯ್ದಿದರು || ೧೭ ||

ವರಸಮುದ್ರ ವಿಜಯನೃಪಗೆ ಮ | ತ್ತಿರದೆ ಆಕ್ಷೋಭಸ್ತಿಮಿತ ಸಾ |
ಗರರಿಗಾ ಹಿಮವಂತ ವಿಜಯಾಚಲಗೆ ಧಾರಣೆಗೆ ||
ತರದಿ ಪೂರಣಗಾಭಿನಂದನ | ಗೆರಗಿ ವಸುದೇವಂಗೆ ಅಳಿಯಂ |
ದಿರು ಬಳಿಕ ತಮಗೆರಗಿದ ಪ್ರದ್ಯುಮ್ನಮುಖ್ಯರನು || ೧೮ ||

ಹರುಷದಿಂದನಿಬರನುಮೊಲವಿಂ | ಪರಸಿದರು ಬಿಳ್ಕೊಂಡರಾ ಜಿನ |
ವರರನಬುಜಾಕ್ಷನ ಸದನದಲಿ ಮಜ್ಜನಂಗೈದು ||
ಸುರಸ ಭೋಜನವಾಂತು ಹರ್ಷೋ | ತ್ಕರುಷದಲಿ ಸಂತುಷ್ಟ ಚಿತ್ತರು |
ಮರುದಿವಸವಚ್ಚುತಗೆ ಪಾಂಡು ತಾನೂಜರಿಂತೆಂದು || ೧೯ ||

ಧರೆಯ ಸೋತುದಮೀರಧಿಕ ದಶ | ವರುಷಕವನಿಯನಿಳಿವೆನೆಂದಾ |
ಕುರುಪತಿಯ ನುಡಿಯನು ಬನಂಪೊಕ್ಕಿರ್ದರವ ಬಳಿಕ ||
ವರುಷಮೈಗರೆದಾ ವಿರಾಟನ | ಪುರದೊಳಿರ್ದುದ ಗೋಗ್ರಹಣ ವಿ |
ಸ್ತರವನೆಲ್ಲವ ಧರ್ಮಜನು ಬಿಚ್ಚಲಿಸೆ ಹರಿ ಕೇಳ್ದ || ೨೦ ||

ಸೋದರದೊಳಾದರವು ಮತ್ತಮ | ನಾದರವು ಬರೆ ಪೂರ್ವಕೃತ ಕ |
ರ್ಮೋದಯವು ತಪ್ಪೇನೆನುತಲತಿ ಚತುರಭಾಷಣನು ||
ಆದ ಕೃಷ್ಣನೆನಿಪ್ಪ ವನಕರೆ | ದೋದಿಸಿದನೆಲ್ಲವನು ಬಳಿಕಾ |
ಮಾಧವನು ಕಳುಹಿಸಲು ಪಲ್ಲಕ್ಕಿಯಲು ಗಮಿಯಿಸಿದ || ೨೧ ||

ಚರಿಸಿ ಹಸ್ತಿನಪುರವ ಪೊಕ್ಕಾ | ಗರಮನೆಯನೈತಂದು ಮೆರೆವವ |
ಸರದವರ ಪಕ್ಕದಲಿ ನಡೆದಾ ಕೌರವನ ಕಂಡು ||
ಕರವ ಮುಗಿದುಚಿತಾಸನದೊಳಿರೆ | ಹರಿಕುಲದ ನೃಪರೊಂದು ಕ್ಷೇಮವ |
ನರಸ ಬೆಸಗೊಂಡೇನು ಬಂದೀ ಹದನ ಹೇಳೆಂದ || ೨೨ ||

ಎಂದೊಡೆಲೆ ಕುರುವಂಶ ವಾರಿಧಿ | ಚಂದ್ರ ಕೇಳೈ ಪಾಂಡವರುಗಳೊ |
ಳಂದು ಜೂಜಿನದೆಸೆಯಿನವನಿಯನೆಳೆದುಕೊಂಡದನು ||
ಇಂದು ಬಿಡು ಪದಿಮೂರು ವರುಷವು | ಸಂದು ಒಡವುಟ್ಟಿದರೊಳೇತಕೆ |
ಕಂದು ನಿಮಗೇಕೆಂದರಿಪಲಟ್ಟಿದನೆಮ್ಮರಸನೆಂದ || ೨೩ ||

ಮರುಳು ನೀನೆಲೆ ಕೃಷ್ಣ ಕೌಂತೇ | ಯರೊಳು ಮಧುಸೂದನಗೆ ಮೋಹವು |
ಉರಿದು ತಾನದರಿಂದ ಕಳುಹಲು ಬಂದು ನೀನೆಂದೈ ||
ಕುರುಪತಿಯ ಕೈವೊಕ್ಕ ಭೂಮಿಯು | ಕರಿಪತಿಯ ಕೈವೊಕ್ಕ ಕಬ್ಬದು |
ಮರಳಬಹುದೇ ನರರಿಗೆಂದನು ಹೊಗೆಮೊಗದ ಭೂಪ || ೨೪ ||

ಸಸಿನ ಕೇಳೈ ವೀರಭೋಜ್ಯಾ | ವಸುಧೆಯೆಂಬುದನರಿಯೆ ಗಡನೆಲ |
ಬಿಸುಡಲಡವಿಯ ಹೋಗದಿರಿಗಿನ್ನರಸುತನವುಂಟೆ ||
ಒಸೆದು ಕೊಡುವವನಲ್ಲ ನನ್ನನು | ಗಸಣಿಗೊಳಿಸಲು ಚಾತುರಂಗ |
ಪ್ರಸರ ತಮ್ಮಗಿಲ್ಲೇನನಾಡುವೆ ಕೃಷ್ಣ ಕೇಳೆಂದ || ೨೫ ||

ವೀರಭೋಜ್ಯಾ ವಸುಧೆಯೆಂಬುದಿ | ದಾರ ಕುರಿತದನೆನಗೆ ಹೇಳೆಲೆ |
ಕೌರವೇಶ್ವರ ಬಂಧುಗಳೊಳೀ ವಾಕ್ಯ ಓದುತಿದೆ ||
ಮಾರ ಸಿದ್ಧಾಂತಗಳು ಸವಣರ | ಸೇರುವೆಯೆ ಅಸ್ಥಿರವೆನಿಪ ಸಂ |
ಸಾರದಲಿ ಪಳಿಗಂಜ ಬೇಹುದು ಭೂಪ ಕೇಳೆಂದ || ೨೬ ||

ಆಡಿದರು ಜೂಜನು ಛಲದಿ ಹೋ | ಗಾಡಿದರು ರಾಜ್ಯವನು ಕಾಡನು |
ಕೂಡಿದರು ತಾವೆಂಬ ಪಳಿಯದು ತವಗೊ ಮೇಣೆವಗೊ ||
ಪ್ರೌಢನೀನುಗಡಿತ್ತ ಹೊದ್ದಿಸ | ಬೇಡ ಬಯಲಿಗೆ ಮಿಕ್ಕನುಡಿಗಳ |
ನಾಡಿ ಕೆಡಿಸಲದೇಕೆ ಭೂಮಿಯನೀವೆನಲ್ಲೆಂದ || ೨೭ ||

ಕೇಳೆಲೆ ಕೌರವ ಧರಿತ್ರೀ | ಪಾಲಕನಧಟಕಾರ ಮಾತ್ರ ವಿ |
ಶಾಲರಾಜ್ಯವಿದೇತರದು ಷಟ್ಖಂಡ ಮಹಿಲಲನೆ ||
ಸೂಳೆಯಂದದಿ ಸೊಗಸನೂಡಿಸ | ಮೇಳದಿರುತಿಹಳತ್ತ ಪಲಬರ |
ತೋಳಲೊರಗುವಳ ಸತಿವೊಲವಲೆಂದನಾ ಕೃಷ್ಣ || ೨೮ ||

ಒಲಿದವೋಲಿರುತಿಹಳು ಕಡೆಗಂ | ಣಲಿ ಕರೆವಳತ್ತನ್ಯನನು ತಾಂ |
ಕಲವವಿಕ್ಕುವಳವರ್ಗೆ ಗೆಲಿದವಗೊರ್ಮೆ ಮೋಹಿಪಳು ||
ಪಳಿಗೆ ಪೇಸಳು ಕೂರ್ತ ಕಾಂತನೆ | ಕಲಿದೊಡಾರೊಡವೋದಳಿರದಾ |
ಗಳೆ ಪೆರನನಪ್ಪುವಳಿಳಾವಧುವರಸ ಕೇಳೆಂದ || ೨೯ ||

ಭೂತಳಶ್ರೀ ನಿಟ್ಟೆಯಾದೊಡೆ | ಖ್ಯಾತ ಭರತಾದಿಗಳು ತೊರೆವರೆ |
ನೀತಿವಿದರಿಗಿದೇನುಗಹನವು ದೊರಕಿದದರೊಳಗೆ ||
ಓತು ವರ್ಗತ್ರಯವನೆರಪಿ ವಿ | ನೂತಕೀರ್ತಿಯಗಳಿಸಿ ಬಂದು |
ಪ್ರೀತಿಪರನಹನವನೆ ಜಾಣನು ಭೂಪ ಕೇಳೆಂದ || ೩೦ ||

ಅಹುದು ಕೃಷ್ಣನ ಮಾತು ನಮಗೀ | ಮಹಿಯಿದೇತಕೆ ದೀಕ್ಷೆಯನುಕೊಳ |
ಬಹುದು ತಪ್ಪೇನಾದೊಡೆಂದು ವಿರಕ್ತಿ ಕಾರಣವು ||
ವಹಿಸಿತಲ್ಲವಗಿಂದು ಸುಡಲೀ | ಮಹಿಯ ಬೇಡಲದೇಕೆ ದೀಕ್ಷಾ |
ರುಹರೆನಿಸಿಯೆಂದವರ ಬೋಧಿಸದಾದೆಯೇಕೆಂದ || ೩೧ ||

ಕೊಳಚೆ ನೀರಲಿ ಮುಳುಗಿದವನಾ | ಜಲಧಿಯೀಸಲು ಬಲ್ಲನೇ ಅವ |
ರಿಳೆಯ ಮೇಗಣ ಲೋಭವಿರುತಿರೆ ದೀಕ್ಷೆ ನಿಮಗೇಕೆ ||
ನಳಿನನಾಭನ ಮೈದುನರು ತ | ಮ್ಮಿಳೆಯ ತಾಂ ಪಡೆಯದೊಡೆ ದೀಕ್ಷೆಯ |
ತಳೆಯದೇವರು ನಾನು ಬೋಧಿಸಲೇಕೆ ಹೇಳೆಂದ || ೩೨ ||

ಪಡೆವುದೆಂತೈ ರಾಜ್ಯವನು ಕೇ | ಳ್ಬಡವ ಕಂಡನಿಧಾನವೇ ಅದು |
ಪೆಡೆಯ ಮಣಿ ಅಂತಕನ ಕೊಂತವು ಭೈರವನದಾಡೆ ||
ಮದನ ಕೈಯ ತ್ರಿಶೂಲ ವಿವುಕೋ | ಕೊಳದೆಯ ಬಲ್ಲವೆ ಕೆಲಬರಿಂ ಬಲು |
ನುಡಿಗಳೆಮ್ಮೊಳಿವೇಕೆನುತ ಗರ್ಜಿಸಿದನಾ ಭೂಪ || ೩೩ ||

ಆದೊಡಾ ನೀನೊಂದನಾಡುವೆ | ಮೇದಿನೀಶ್ವರ ಕೇಳು ಬಲುಮೆಯ |
ನೋಡೆ ನಿನ್ನನುಜರಿಗೆ ನಿನ್ನಿಳೆಯರ್ಧವನು ಕೊಟ್ಟು ||
ಆದರಿಸಿದೊಡೆ ಕುಂದೆ ಅವಧಿಯು | ಪೋದುದವರಿಳೆಯವರಿಗಿತ್ತು ಸ |
ಹೋದರರ ತಲೆರನ್ನವೆನಿಸಿದು ರಾಜಗುಣವೆಂದ || ೩೪ ||

ಒಂದು ನಯದಿಂ ಬಂಧು ಜನದೊಳು | ಕಂದು ಬಾರದೆ ಬಿಡದು ಬಂದೊಡೆ |
ಬೆಂದರಜ್ಜುವೊಲಿರಿಸಿ ಕೊಂಬುದದುತ್ತಮರಗುಣವು ||
ಇಂದು ಸಂಧಾನಕ್ಕೆ ಬಲಗೋ | ವಿಂದರಾಡಿಸಿದಲ್ಲಿ ಕೇಳ್ದಡೆ |
ಕಂದದಿಹುದೈ ನಿನ್ನ ಕೀರ್ತಿಯ ಮುದ್ದು ಮೊಗವೆಂದನ || ೩೫ ||

ಸಾಕು ನಿಲ್ಲೈ ಕಿವಿಗೆಡಿಸದಿರ | ದೇಕೆ ಕೀರ್ತಿಯ ಮುಸುಡು ಕಂದುವು |
ದಾಕೆವಾಳರು ನೀವು ತಾವೆಂದಂತೆ ಕೇಳದೊಡೆ ||
ಜೋಕೆಗೆಡುವುದೆ ತನ್ನ ಸೇನಾ | ನೀಕ ಬಡವೇ ಕಾಡಹೊಕ್ಕ ವಿ |
ವೇಕಿಗಳಿಗಾರಿಳೆಯ ನೀವರು ಹುಚ್ಚು ಹೋಗೆಂದ || ೩೬ ||

ಮಗನೆ ಕೃಷ್ಣನಮಾತು ಸಜ್ಜನ | ರುಗಳ ಕರ್ಣರಸಾಯನವು ತಾ |
ನೊಗಡಿಕೆಯಲಾ ದುರ್ವಿವೇಕ ಮಹಾಜ್ವರಿತತತಿಗೆ ||
ಖಗಪತಿಧ್ವಜನುಕ್ತಿಯಿದು ಪ – | ನ್ನಗಪತಾಕನೆ ಮೀರದಿರು ಬಂ – |
ಧುಗಳೊಳೇಕತಿಮಥನವೆಂದನು ಜಡಿದು ಧೃತರಾಷ್ಟ್ರ || ೩೭ ||

ತಂದೆ ಯುಕ್ತಿಯ ಮೀರಸಲ್ಲದು | ಕಂದ ವಿದುರದ್ರೋಣರೊಡನೇ |
ಬಂದ ಕೃಷ್ಣನಕೂಡೆ ಪೋಗಿ ಬಲಾಚ್ಚುತರು ನಾನು ||
ತಂದು ಕೊಡವೆನು ಪಾಂಡವರನವ | ರೆಂದವೋಲಾದರಿಸಿ ಕುರುಕುಲ – |
ಚಂದ್ರ ನಿನಗಿನ್ನಹಿತರಿಲ್ಲೆನಿಸೆಂದನಾ ಭೀಷ್ಮ || ೩೮ ||

ಸುರನುಡಿಯ ಸುತನಾಡಿದುಕ್ತಿಗೆ | ಸರಿಯ ಕಾಣೆನು ಕೌರವೇಶ್ವರ |
ಮುರಿದು ಮನಸಿನ ಚಿಹ್ನಕಾಯ್ದದೆ ಮುಳಿನುಗಿಚ್ಚಿನಲಿ ||
ವರಬಲಾಚ್ಚುತರುತ್ತುಗೈರಿಸೆ | ಇರಿಸೆ ಬಂಧು ಪ್ರಣಯವೆಂಬಾ |
ಭರಣವತಿ ಮೆರೆವುದು ಧರಿತ್ರಿಯೊಳೆಂದನಾ ವಿದುರ || ೩೯ ||

ಮರುಳು ಮಾತುಗಳೇಕೆ ಹರಿಯನು | ಕರೆಸಿ ಬಲನನು ಬರೆಸಿ ಮಿಗೆಕರ |
ಕರಿಸಿ ಬಿಡಿಸುವವಿಳೆಯನೀತಗೆ ಬಾಧೆ ಬೇಡೆಂದು ||
ಹಿರಿಯರೆನಗಿದ ಚಿಂತಿಸುವ ಪರಿ | ಸರದಿಗಾಸರು ಗಿರಿಗೆ ಚಳಿಯಂ |
ಬರ ನಿರಂಬರವೆಂಬವೋಲಾಯ್ತೆಂದನವನೀಶ || ೪೦ ||

ಕುರುಪತಿಯ ಮನದದ್ಧತಿಕೆಯನು | ಧರೆಯ ಮೇಗಣ ಲೋಭವನು ಬಿ |
ತ್ತರದ ತನ್ನತಿರಥಮಹಾರಥ ಸೈನ್ಯಗರ್ವವನು ||
ಪರಮ ಭಾಗ್ಯರ ಪಾಂಡವರ ಹುಲು | ನರರ ಕಂಡವೊಲಿಳಿಸಿಯಾಡುವ |
ಪರಿಯನೆಲ್ಲವನರಿದು ಸೈರಿಸದೆಂದನಾ ಕೃಷ್ಣ || ೪೧ ||

ಕೇಳು ದೃತರಾಷ್ಟ್ರನ ಕುಮಾರಕ | ಹೇಳುವೆನು ಜೂಜಿನ ಬೆಸನದಲಿ |
ಸೂಳೆಗೈತದಲುಳ್ಳದೆಲ್ಲಿಯು ಕಪಟವದುವೊಳಗೆ ||
ಮೇಳಿಸಿದ ಸತ್ಯವನೆ ಪಿಡಿದು | ಕ್ಕಾಳುಗಳು ವಿಪಿನವನು ಹೊಕ್ಕೊಡೆ |
ಜಾಳುಗಳು ನಿಮಗೆಂದು ಬಗೆಯದಿರೆಂದನಾ ಕೃಷ್ಣ || ೪೨ ||

ಬೆರೆಯದಿರು ನಿನಗೀಸು ಸೇನಾ | ಶರಧಿಯುಂಟೆಂದರಸ ಸಬ್ಬರು |
ತುರುವ ಹಿಡಿಯಲು ಹೋಗಿಸಿಂಗವಕಂಡ ಸುಲಭಗಳ ||
ತೆರದಿ ಭೀಮಾರ್ಜುನರ ಕಾಣುತ | ಮುರಿದು ಬಾರದೆ ನಿನ್ನವರು ಕೇಳ್ |
ದರಿಯ ದ್ರುಪದ ಕುಮಾರಿಯನು ಕದ್ದೊಯ್ದ ಖೇಚರನ || ೪೩ ||

ಪುರಮಹೇಂದ್ರಕೆನಾಲ್ವರೇ ಕಡು | ಭರದಿ ನಡೆದವರೊಳಗದೋರ್ವನೆ |
ಮರುತಸುತಗದೆಯಿಂದೆ ವಿದ್ಯಾಪರಿಧಿಯನು ಜರಿದು ||
ಧುರಕಿದಿರ್ಚಿದ ಭಟರನರೆದಾ | ತರುಣಿಯನು ಕರೆತಂದರೆಂದೊಡೆ |
ಧರೆಯರಸುಗಳ ಕೊಳೆತ ಖಡ್ಡಿಗೆ ಬಗೆಯರವರೆಂದ || ೪೪ ||

ಅರಸ ಕೇಳೀ ಕೊಡನಮಗನೀ | ತರಣಿ ಸುತನೀ ಸೈಂಭವನುಮೀ |
ಗುರುಜನೀ ಶಲ್ಯನು ನಿಜಾನುಜರಖಿಳಪರಿವಾರ ||
ಇರಲು ನಿನ್ನನು ಕೊಂಡು ಗಗನಕೆ | ಚರನು ಪೋಪಂದೇನ ಮಾಡಿದ |
ರಿರದೆ ಮರಳಿಸಿದಾತನಾರರಿಯೆಂದನಾ ಕೃಷ್ಣ || ೪೫ ||

ಭೀಮಪಾರ್ಥರಿಗಣ್ಣನಾಜ್ಞೆಯ | ಸೀಮೆಯೊಂದೆ ಅಲಂಘನೀಯವು |
ತಾವದರ ದೆಸೆಯಿಂದ ನಿಮಗಳುಕಿದವರಾದರಲೆ ||
ಈ ಮರುಳುತನ ಬೇಡರಸ ಗುಣ | ಧಾಮರವನಯನವರಿಗೊಪ್ಪಿಸು |
ಪ್ರೇಮದಿಂದಾ ಬಂಧುಗಳೊಳಿಹುದೆಂದನಾ ಕೃಷ್ಣ || ೪೬ ||

ಉರಿವ ಕಿಚ್ಚಿನ ಮೇಲೆ ತುಪ್ಪವ | ಸುರಿದವೊಲು ಕೃಷ್ಣನ ನುಡಿಗೆ ಮೈ |
ಮುರಿದು ನೆಲೆದುದು ರೋಷ ಶಿಖಿಖಡುಗವನು ಝಳಪಿಸುತ ||
ಧುರದೊಳವರೇ ಗಂಡರೆಂದೆಮ | ಗೊರೆದೆಯಲಾ ನೀನೆಂದವೊಲು ಸಂ |
ಗರವೆ ಮಾಡದೆ ಹರಣವಿರ್ದಾಧರೆಯ ಕೊಡೆನೆಂದ || ೪೭ ||

ವಸುಮತೀಶ್ವರ ಮುಳಿಸ ಮನದಲಿ | ಬೆಸದಿರೈ ಮೊಗದೀಕ್ಷೆಯನು ನಾ |
ನುಸುರ್ವವಲ್ಲೆನ್ನ ನುಡಿ ಮದ್ದಿನ ಕಹಿಯತೆರದಿ ||
ಅಸುವಿಗದು ಕಡೆಯಲಿ ಹಿತವು ದು | ರ್ವ್ಯಸನಿಗಳ ಖುಲ್ಲಕದ ನುಡಿಗಳು |
ವಿಷದ ಲಡ್ಡುಗೆಯಂತೆ ಸವಿಯಹುದೆಂದನಾ ಕೃಷ್ಣ || ೪೮ ||

ಮುಳಿಸು ನಿಮ್ಮೊಳು ನಮಗದೇತಕೆ | ಬಳಲಿದೆಯಲಾ ಪೋಗು ನಿನ್ನಯ |
ಪೊಳಲಿಗೆನೆ ಖಡ್ಡಿಯಹಿಡಿದು ಸಾರಿದೆನು ಬೇಡಗಡ ||
ಘಳಿಲನೀಯವರಿಳೆಯನವರಿಗೆ | ಉಳುಹಿಕೊಳು ಕೀರ್ತಿಯನದಲ್ಲದೊ |
ಡುಳಿಯಲೀವುದೆ ಭೀಮಸೇನನ ಭೀಮ ಗದೆಯೆಂದ || ೪೯ ||

ಮಗುಳಿ ಕಳೆನೀನಾಡಿನುಡಿನಗ | ಧರಗೆ ಮಾನ್ಯವು ಪೆರನನಾಲಗೆ |
ಯರಿಯದಿನ್ನೆಗವುಳಿವುದೇಯೆನೆ ಕೃಷ್ಣ ಬೀಳ್ಕೊಂಡು ||
ಸುಗುಣಿ ಕತಿಪಯ ಪಯಣದಲಿ ಪೆಂ | ಪೊಗೆದ ನಿಜಪುರವೈದಿ ಪಾಂಡವ |
ರುಗಳೊಡನೆ ಸುಖವಿರ್ದ ಬಲನಾರಾಯಣರ ಕಂಡ || ೫೦ ||

ತಿಳಿಯ ಬಿನ್ನೈಸಿದನು ಕಾರ್ಯದ | ನೆಲೆಯ ಹದನವನವನು ಕೇಳ್ದಾ |
ಯೆಲರ ಮಗನಣ್ಣನ ಮನವನರಿದೊಂದು ಬವಸೆಯಲಿ ||
ಕಲುಮನದ ಕೌರವನು ಕಾದಿದ | ಬಲಿಯಲಲ್ಲದೆ ಯಮಸುತಗೆ ತಾ |
ನಿಳೆಯ ನೀವವನಲ್ಲ ಸರಸಿಜನೇತ್ರ ಕೇಳೆಂದ || ೫೧ ||

ಎಂದು ಭೀಮನ ನುಡಿಯಲಾಯಮ | ನಂದನನು ಕೇಳಲೆ ವನಜ ಲೋ |
ಚನ ಕುರುಪನರಸಿನ ಮನೆಯಲೆಮ್ಮೆಲ್ಲರನು ಕೊಂದು ||
… … … … … … | … … … … … … |
… … … … … … || ೫೨ ||

ಅಹುದು ಭೀಮಾರ್ಜುನರ ನುಡಿ ನೀ | ನಹಿತನನು ಬರಿಯಣ್ಣನೆಂದೀ |
ಮಹಿಯ ನೀಗಲು ಬೇಡ ಭೀಮನ ಗದೆ ನರನ ಬಿಲ್ಲು ||
ಮಹಿಯನಾತಂಗಿರಿಸವಾತನ | ಮಹಿಳೆಯ ಕಣ್ಣು ನೀರ ಹೊನಲಲಿ |
ದಹಿಪ ತೋಳ್ಗಿಚ್ಚನು ನದಿಪುದೆಂದನು ಮುರಾಂತಕನು || ೫೩ ||

ಅರಸುಗಳ ಛಲವಾವುದೈ ಪಳಿ | ದರಸನನಾಗದೆ ದೇಹವಿರ್ದೀ |
ಧರೆಯನಹಿತಗೆ ಸೂಜಿಯಗ್ರದ ಮಣ್ಣನಿತ ಕೊಡುವೆ ||
ಹರಣ ಸಂಬಂಧಿಗಳ ಭೂಮಿಗೆ | ಶಿರವನಾಂಪುದು ಛಲವೆಯೆಂದಗ |
ಧರ ನಿರೂಪಿಸೆ ಸಮರ ಸಂವರಣೆಯನು ಮಾಡುತಿರೆ || ೫೪ ||

ಆ ಸಮಯದಲಿ ಧನದನೆನೆ ಧನ | ರಾಶಿ ರತ್ನದ ಪುಂಜ ವಸ್ತುವಿ |
ಳಾಸಗಳ ಕೊಂಡತಿ ಭರದಲುನ್ನತ ಬಹಿತ್ರದಲಿ ||
ಓಸರಿಸದೋರ್ವನು ವಣಿಗ್ವರ | ನಾ ಸಮುದ್ರದೊಳೊದಗಿ ಬಂದಾ |
ವಾಸುದೇವನು ಮೆರೆವ ದ್ವಾರಾವತಿಯ ಕರೆಗಿಳಿದ || ೫೫ ||

ಇದು ವಿಚಾರಿಸೆ ವರುಣಪುರವೋ | ಇದು ಸುರಾಧಿಪನ ಸುರಭಯದಿಂ |
ದುದಧಿಯಲಿ ತಂದಿಟ್ಟ ನಾಕವೊ ಕಣ್ಗೆ ಹೊಸದೆಂದು ||
ವಿದಿತ ನಾನೂರ್ವರು ಸಖರು ಸಹ | ಮುದದಿ ದ್ವಾರಾವತಿಯ ರನ್ನದ |
ಪುದಿದ ಮಾಡಗಳಿಂದ ಶೋಭಿಪ ಕೇರಿಗಳ ಕಂಡ || ೫೬ ||

ಪಲವು ರನ್ನದ ಪಾಸರೆಯ ಬಲು | ನೆಲನು ಪುರವೀದಿಗಳೊಳೆನಲಾ |
ಸುಲಭತೆಯನತಿ ಚೆಲುವಿಕೆಯನೇನೆಂಬೆ ಮನೆಮನೆಯ ||
ನೆಲೆನೆಲೆಯ ಪೊಂಬೆಸದ ಗೋಪುರ | ಗಳೆ ಸಿರಿಯನೀಕ್ಷಿಸುತ ರಾಜಾಂ |
ಗಳದಲಿಹ ಹಸ್ತ್ಯಶ್ವ ಕೋಟಿಯ ಸಂದಣಿಯ ಕಂಡ || ೫೭ ||

ಮಿಸುಪ ನವರತ್ನಮಯ ಸರ್ವಾ | ವಸರ ಮಂಟಪದೊಳಗೆ ಕತ್ತುರಿ |
ಗೆಸರ ಸಾರಣೆ ಪೂವಲಿಯ ಮಣಿಲಂಬನದ ಚೆಲುವಿಂ ||
ಯೆಸೆವ ಪಾಂಡವರಂಭವ ಫಲ | ವಸುಮತೀಶ್ವರರೊಗ್ಗಿನಲಿ ರಾ |
ಜಿಸುವ ಸಿಂಹಾಸನದೊಲೊಪ್ಪಿದ ಕೃಷ್ಣನನು ಕಂಡ || ೫೮ ||

ನೆರೆದ ಭೂಪರ ಮಣಿಸುರಥಗಳು | ಸುರಧನುಗಳೆಡೆಯಾಡುತಿರೆ ಪರಿ |
ಪರಿದು ಪೊಳದಾಡುತಿರೆ ಗಣಿಕೆಯರೆಸಳುಗಣ್ವೆಳಗು ||
ಸುರ ತರಂಗಿಣಿಯೆಸೆವನಿರಿನಿರಿ | ದೆರೆಮುಸುಕುತಿಹ ನೀಲಮಣಿಗಿರಿ |
ಯಿರವೆನಲು ಚಾಮರಯುಗದ ನಡುವಿರ್ದನಬುಜಾಕ್ಷ || ೫೯ ||

ಸವಿನುಡಿಯ ಕವಿಯುಸುರ್ದರಸಗ | ಬ್ಬವನು ನುಂಚರದಿಂದ ಗಾಯಕ |
ನಿವಹ ಕಿವಿಸವಿಗೊಡತಿರಲು ಕೇಳುತ ವಣಿಗ್ವರನು ||
ವಿವಿಧವಸ್ತುಗಳನು ಪೊರಿಸಿ ಕೊಂ | ಡೆವೆಯಿಡದೆ ನೋಡುತ ಸ್ವಯಂಪ್ರಭ |
ನವನತೋತ್ತಮ ಮಸ್ತಕನು ಕೃಷ್ಣನ ಪೊರೆಗೆ ಬಂದ || ೬೦ ||

ಬಂದ ಕೌಸ್ತುಭರತ್ನನಿದಿರಲಿ | ತಂದು ರತ್ನವ ಸುರಿದು ಬಳಿಕೊಲ |
ವಿಂದೆ ಪೀತಾಂಬರೆಗೆ ದಿವ್ಯಾಂಬರದ ಕಾಣಿಕೆಯು ||
ಎಂದು ಕೊಟ್ಟಡಿಗೆರಗಿ ಮಿಗೆ ನಲ | ವಿಂದಮುಚಿತಾಸನದೊಳಿರ್ದು ಮು |
ಕುಂದನೊಡ್ಡೋಲಗವ ನೋಡಿದನಾ ಸ್ವಯಂಪ್ರಭನು || ೬೧ ||

ಮನದೊಳನುರಾಗಿಸುತ್ತಿರಲಾ | ವನಜನಾಭನು ಪೊನ್ನ ಬಟ್ಟಲ |
ಲನುನಯದಿ ತಾಂಬೂಲವಿತ್ತೆಲ್ಲಿಂದ ಬಂದಿರೆನೆ ||
ಇನಿತು ಕೃಪೆ ನಿಮ್ಮಡಿಗಳತ್ತಣಿ | ನೆನಗೆ ಬಹುದೆಸೆಯತ್ತಣಿಂ ಬಂ |
ದೆನು ನರೇಶ್ವರ ಎಂದು ಬಿನ್ನೈಸಿದನು ವರವಣಿಜ || ೬೨ ||

ನಿನ್ನ ಸೌಭಾಗ್ಯವನು ದೇವರು | ನಿನ್ನ ಚೆಲುವೋಲಗದ ಸೊಬಗನು |
ನಿನ್ನ ಸೌಂದರ್ಯವನು ಈ ದೊರೆಗಳ ಸಮಗ್ರವನು ||
ನಿನ್ನ ಸುತನೀ ಕಾಮದೇವನ | ಚೆನ್ನರೂಪ ವಿಮೋಹನವ ಕಂ |
ಡೆನ್ನ ಜನ್ಮಕೃತಾರ್ಥವಾದುದು ರಾಯ ಕೇಳೆಂದ || ೬೩ ||

ಮೆಚ್ಚೆ ಮನದಲಿ ವೈಶ್ಯಪುತ್ರಂ | ಗಚ್ಚುತನು ನೆಲೆಯಿಲ್ಲೆನಿಪ ಗುಣ |
ಪೆಚ್ಚೆದಾ ರತ್ನವಪಸಾಯವನೀಯೆ ತೇಕೊಂಡು ||
ಅಚ್ಚರಿಯದೆಂದಲ್ಲಿ ಬೀಳ್ಕೊಂ | ಡಿಚ್ಛೆಯಿಂ ಪಲದಿನವದಲ್ಲಿಯೆ |
ತೀರ್ಚೆಮಗುಳಿದನತ್ತ ಮಗಧ ಧರಿತ್ರಿಗಾ ವಣಿಜ || ೬೪ ||

ಮಿಸುನಿಗೊಂಡೆಯ ರನ್ನದೆನೆಗಳ | ಪೊಸತೆನಿಪ ಹುಲಿಮುಖದ ಗೋಪುರ |
ವಿಸರಗಳ ಮಣಿದೋರಣದ ಶಶಿಸೂರ್ಯವೀಥಿಗಳ ||
ಪಸರಗಳ ಸಾರಂಗಡಿಯ ಚೆಲು | ವೆಸೆವ ಸಿರಿಯರಮನೆಯನೀಕ್ಷಿಸು |
ತಸಮವಿಭವದೆ ರಾಜಗೃಹ ಪಟ್ಟಣವನೊಳಪೊಕ್ಕ || ೬೫ ||

|| ಅಂತು ಸಂಧಿ ೪೨ಕ್ಕಂ ಮಂಗಳ ಮಹಾ ||