ಸಂಧಿ ೪೩

ದಂಡ ಬಂದಾ ಕುರುಧರೆಯೊಳು ತ್ರಿ | ಖಂಡ ಚಕ್ರಿಯು ಬಿಡಲು ಕೌರವ |
ಮಂಡಲೇಶ್ವರನಾ ಜರಾಸಂಧನನು ಕೂಡಿದನು || ಪದ ||

ಕೇಳು ಮಗಧಾಧೀಶ ದಿವಿಜರ | ಮೇಳದಲಿ ದಿವಜೇಂದ್ರನೆಸೆವೊ |
ಡ್ಡೋಲಗದಲಿಹ ತೆರದಿ ದೇಶಾಧೀಶರೊಗ್ಗಿನಲಿ ||
ಸ್ಥೂಲ ಸಿಂಹಾಸನದೊಲೊಪ್ಪುವ | ಬಾಲಸೂರ್ಯನ ಮಿಗುವ ತನುರಚಿ |
ಜಾಲದಿಹ ಚಕ್ರಿಯನು ಕಂಡೆರಗಿದನು ತದ್ವಣಿಜ || ೧ ||

ಸರಸಿಜಾಂಬಕನಿತ್ತ ರತ್ನವ | ನಿರದೆ ಚಿನ್ನದ ಭಾಜನದಿ ತೆಗೆ |
ದರಸನಿದಿರಲಿ ಬಾಸಣಿಸದಂಬರವನೋಸರಿಸೆ ||
ತರಣಿ ಮೂಡಿದ ತೆರದಿ ಸಭೆಯನು | ವರರತುನ ರುಚಿ ಬೆಳಗುತಿರೆ ದೇ |
ವರಿಗೆ ಕಾಣಿಕೆಯೆಂದು ಕೊಟ್ಟನು ತತ್ಸ್ವಯಂಪ್ರಭನು || ೨ ||

ಎಲೆ ವಣಿಕ್ಪತಿ ಯಾವ ದೀಪಗ | ಳೊಳಗೆ ಗಣಿಸಿದೆ ಈಯಮೂಲ್ಯಾ |
ಮಲಿನ ರತ್ನಮನೆಂದು ಮಾಗಧ ಕೇಳೆ ಪೇಳಿದನು ||
ಜಲಧಿಯಾತ್ರೆಗೆ ಪೋದನತ್ತಾ | ಜಲಧಿಯಲಿವೊಂದೈದ ಬಿಲಕೃತ |
ಪೊಳಲು ದ್ವಾರಾವತಿಯಿಹುದು ಭೂಪಾಲ ಕೇಳೆಂದ || ೩ ||

ವರಸಮುದ್ರವಿಜಯ ಮಹಾ ಭೂ | ವರ ಕುಮಾರಕ ನೇಮಿ ಜಿನಪನ |
ಚರಣಸರಸಿಜಯುಗಕೆರಗಿದೆನು ತನ್ನೃಪನ ತಮ್ಮ ||
ಸುರಸವಸುದೇವನ ಕುಮಾರಕ | ಸರಸಿಜಾಂಬಕ ಪಾಂಡವರುಗಳು |
ಬೆರಸಿ ಓಲಗದಿರಲು ಕಂಡೊಡೆ ಕೊಟ್ಟನಿವನೆಂದ || ೪ ||

ಅವರ ದ್ವಾರನ್ನಯವದಾವಧು | ನವಗೆ ಹೇಳೆನೆ ವಿಸ್ತರದಲೆ |
ಲ್ಲವನರುಪಿ ನೇಮೀಶ್ವರನ ಗರ್ಭಾವತರಣದಲಿ ||
ದಿವಿಜಪತಿ ಸುರಿದಮಲರತ್ನಗ | ಳಿವುಮೆನಲು ಕೊಂಡದಲಳಿದಯಾ |
ದವರುಳಿದು ನೀರ್ವೊಕ್ಕುವಾಳ್ದರೆ ಲೇಸು ಲೇಸೆಂದ || ೫ ||

ಘಳಿಲನಾ ದ್ವಾರಾವತಿಯ ನೀ | ರೊಳು ನೆರೆಯಿಸುವೆಯದುಕುಲದ ಬೇ |
ರ್ಗಳನೆ ಕೀಳುವೆನೆಂದು ಕಡುಕೋಪದಲಿ ಖಡುಗವನು ||
ಝಳಪಿಸಲು ಸುಗ್ರಾಮ ಬೇರಿಗ | ಲುಳಿಯಲೆಂದಾ ವೈಶ್ಯಪುತ್ರನ |
ನೊಲಿದು ಕಳುಹಿಸಿದಂಡುನಡದಪೆನೆಂಬ ವೇಳೆಯಲಿ || ೬ ||

ನೆರೆದು ಮಂತ್ರಿಗಳಂದು ಚಕ್ರೇ | ಶ್ವರ ವಿವೇಕಿ ಸುಬಿನ್ನಣವನೀ |
ಧರೆಯರಸುಗಳು ನಿನಗೆ ಮೃಗಗಳು ಮುಳಿದು ಕೇಸರಿಗೆ ||
ಸುರರು ದೇವೇಂದ್ರಂಗೆ ಮಾರ್ಮಲೆ | ದಿರಲು ಬಲ್ಲರೆ ಯಾದವರ ಬಿಡು |
ಶರನಿಧಿಯೊಳಡಗಿದವರಧಟರೆಯೆಂದರೊಲವಿಂದ || ೭ ||

ನೆರೆವ ಕರೆಕೂಟವನು ಕೂಡೆಂ | ಬರಸು ತನವೇ ನಿನಗೆ ಸೇನೆಗೆ |
ಧರಣಿ ನೆರೆಯದು ನಿನ್ನ ಚಕ್ರವೆ ಶತ್ರು ಸಂತತಿಯ ||
ಶಿರವರಿದು ತರದಿಹುದೆಯೆಂದಾ | ನರಪತಿಯ ಕೋಪವನು ತಣಿಯಿಸಿ |
ಇರದೆ ವಾಚಸ್ಪತಿಯೆನಿಪವರ ಮಂತ್ರಿಯಿಂತೆಂದ || ೮ ||

ಯದುನೃಪರು ನಮಗಳುಕಿ ಕಡಲಲಿ | ಪುದಗಿದವರಹುದಾದಡೀಗಳು |
ವಿದಿತ ಪುಣ್ಯದ ಮಹಿಮೆ ಪಿರಿದಾಯ್ತವರಿಗಿಂತೆನಲು ||
ತ್ರಿದಶಪತಿನತ ನೇಮಿಜಿನಪತಿ | ಯುದಯಸಿಹ ಶಿವದೇವಿಯರ ಸಂ |
ಗದರಿ ಅವ್ಯಾಬಾಧರವರೀ ವೇಳೆಗರಿಯೆಂದ || ೯ ||

ಪಳಧರನು ಶರಭವು ಸಹಸ್ರದ | ಬಲವನುಳ್ಳದ ದೈವಬಲವಾ |
ನಳಿನನಾಭಂಗಧಿಕವಿಂದ್ರನೆ ಪಟ್ಟೆಗಟ್ಟಿಸಿದ ||
ಅಲಘುಭುಜ ಚರಮಾಂಗನಂಗಜ | ಚೆಲುವ ಮಗನಾ ದಾನವಾರಿಗೆ |
ಇಳೆಯೆರೆಯ ಚಿತ್ತೈಸು ಕೃಷ್ಣನು ಬಾಲ ಕಾಲದಲಿ || ೧೦ ||

ಪಲವು ದೇವತೆಗಳುಮನೀಪರಿ | ಯಲಿ ಮುರಾಂತಕ ಕೊಂದನೀಪರಿ |
ಯಲಿ ಫಣಿಯ ಶಯ್ಯಾದಿಯನು ಪಡೆದದುವೆ ಮೊದಲಾದ ||
ಒಲುಮೆಗಳ ನೊರೆದದು ನಿಮಿತ್ತದಿ | ಕಲಹವನು ಕೈಗಾದು ಮಾಡುವ |
ವೆಲೆ ನರಾಧಿಪ ಬಿನ್ನಯಿಸಿದೆನಿದೆನ್ನ ಮತವೆಂದ || ೧೧ ||

ಎಂದ ನುಡಿ ಚಕ್ರಿಯ ಕಿವಿಗೆ ಪೊಗ | ದಂದವನು ಮತಿಸಾಗರನು ತಿಳಿ |
ದೆಂದನಿದು ಮಂತಣವೆಯಾನೆಯನಡುಬಡವೆನೋಡ ||
ದಂದುಗದ ಹುಲು ಹಗೆಗಳಿಗೆ ಮಿಗೆ | ತಂದಿರೇ ಒಲುಮೆಯನು ಸಿಂಗದ |
ಮುಂದೆ ಬಡನರಿಯೊಂದು ಸತ್ವವ ಪೊಗಳಿದಂತೆಂದ || ೧೨ ||

ನಡೆಯನಮ್ಮ ಷಡಂಗ ಬಲವಾ | ಕಡಲ ಹೂಳದೆ ಧೂಳಿಯಿಂದಾ |
ಪೊಡೆಯಲರನಾ ಕೊಟ್ಟೆಯೊಡಯದೆ ಭೇರಿಯುಲಿಯಿಂದ ||
ಇಡಲು ಚಕ್ರದಿ ಮಾಧವನ ತಲೆ | ಕೆಡೆಯದೇ ರಾಯನಪೊಡರ್ಪನು |
ತಡೆಯ ಬಲ್ಲರೆ ದೇವ ದಾನವರೆಂದು ಘರ್ಜಿಸಿದ || ೧೩ ||

ಹಸುಳೆ ದೇವರು ಸುತೆಗೆ ಜೀವಂ | ಜಸೆಗೆ ವೈಧವ್ಯವನೆಸಗಿದನ |
ಬಿಸುರಗುತ ಪಾನದಲಿ ರಣದೇವಿಯರನೀರಡಿಕೆ ||
ನಸಿನವೊಲು ಮಾಡದೊಡೆ ನಿನಗೀ | ವಸುಮತೀಶ್ವರರಾಣ್ಮನೆಂಬುದು |
ಪುಸಿ ಸಮರ ಸನ್ನದ್ಧವಾಗೆಂದಾರ್ಧನಾ ಮಂತ್ರಿ || ೧೪ ||

ಎನೆ ಮದೋದ್ಧತನಾ ಜರಸಂ | ಧನು ಪಿಡಿದು ಮತಿಸಾಗರನ ನುಡಿ |
ಯನು ಬಳಿಕ ಪ್ರಸ್ಥಾನ ಭೇರಿಯ ನಿರದೆ ಪೊಡಯಿಸಲು ||
ದಿನಕರನ ಹಯವೊಂದು ಜೊತ್ತಗೆ | ಯನು ಕಡಿದು ಕೊಂಡೋಡಿ ಹೋಯ್ತಂ |
ದಿನಕತದಿ ಸಪ್ತಾಶ್ವನೆನಿಸಿದನಬುಜ ಬಾಂಧವನು || ೧೫ ||

ಸಿಂಗವಣೆಯಿಂದಿದ್ದನಾ ಕೃಪ | ಪುಂಗವನು ಒಡನೇಳೆ ನೃಪನಿಕ |
ರಂಗಳಂಬರವನು ವಿಭೂಷಣ ಕಾಂತಿ ಪಸರಿಸಲು ||
ತುಂಗ ಭುಜದಲಿ ಜವನ ದಾಡೆಯ | ಭಂಗಿಸುವ ಬಾಳ್ಪೊಡೆಯೆ ಪೊರವ |
ಟ್ಟಂಗಣಿಸೆ ಪದಿನಾರು ಸಾಸಿರ ಮಕುಟಬ್ಧರಿಗೆ || ೧೬ ||

ಮುಂದೆ ನಡೆಗೊಳೆ ಭದ್ರಗಜವನು | ಮುಂದೆ ರಾಜಾಂಗಣದ ಕರಿಗಳ |
ಸಂದಣಿಯಲಿರೆ ಸಾರ್ವಭೌಮ ಕರೀಂದ್ರಕಂಧರವ ||
ಬಂದಲಂಕರಿಸಿದನು ಬೆಳು ಮುಗಿ | ಲೆಂದೆನಿಪ ಬೆಳ್ಗೊಡೆ ನೆಗೆಯೆ ಜತಿ |
ಯಿಂದೆ ಚಾಮರವಾಡೆ ರಾಜಗೃಹವನು ಪೊರವಟ್ಟ || ೧೭ ||

ನೆಲನು ಕಿರಿದೆನಿಸಿದುದು ಪೆಚ್ಚಿದ | ಬಲದ ಕಾಲಾಟಕ್ಕೆ ವಾದ್ಯದ |
ಲುಳಿಪರಿವೊಡಾ ಸುಘಟತಾನಲ್ಪವೆನಿಸಿಸುದುದು ||
ಇಳೆಯ ಪೊತ್ತಾನೆಗಳು ಮಿಗೆಕು | ಪ್ಪಳಿಸಿದವು ಭಾರಕ್ಕೆ ನೃಪಸಂ |
ಕುಲವೆರಸಿ ಹೊರಬೀಡ ಬಿಟ್ಟನು ಕಲಿಜರಾಸಂಧ || ೧೮ ||

ಬರಸಿದನು ತನ್ನಾ ತ್ರಿಖಂಡದ | ಲಿರುತಲಿಹ ಕುರುರಾಯ ಮೊದಲಾ |
ದರಸುಗಳಿಗುರೆ ರಾಯಸಂಗಳನೀಯಚರರೊದಗೆ ||
ಮರುದಿವಸವಲ್ಲಿರದೆ ಪಾಳೆಯ | ತೆರಳಿ ಪಯಣಕ್ರಮದಿ ನಡೆದುದು |
ಗಿರಿಗಳೌ ಹೆಟ್ಟಾದವಾರಿದವಬುಧಿ ಸಮನದಿಯು || ೧೯ ||

ಕಡಲನವನೀತಳವ ಮಾಡಿತು | ಕುಡಿದು ತೇಗಿತು ಕಾರದೊರೆಯ ಕೆಂ |
ಜೆಡೆ ಮೃಡಂಗಂದಿಂದಲಾದುದು ರವಿಯಗಮನಕ್ಕೆ ||
ತಡೆಯ ಕಟ್ಟಿತು ದಿಗಿಭಗಳನಾ | ಪೊಡವಿಯನು ಹೊತ್ತಾನೆ ಮಾಡಿತು |
ಪಡೆನಡೆಯಲಡಿವುಡಿ ಮಸಗಿ ಮಾಗಧ ನರೇಶ್ವರನ || ೨೦ ||

ನೆಗೆದ ಪಳಯಿಗೆವಿಂಡು ತಾಗಲು | ಮುಗಿಲೊಡೆದು ಮುತ್ತುಗಳು ಸುರಿದವು |
ಹಗಲುತಾರೆಗೆ ಜಯಸಿರಿಯಕಣ್ಬನಿಯವೊಲುತೋರೆ ||
ಹೊಗೆಯೆದಿಗುಮುಖ ಬೀಳೆ ಹಗಲುಳು | ಕುಗಳುಕಾರಳೆ ಕವಿಯೆ ಸುರಧನು |
ಒಗೆಯಲರ್ವಿಸಿ ಧೂಮಕೇತೂದಯವು ಸಮನಿಸಿತು || ೨೧ ||

ಒರೆಯನುಗಿದಾಯುಧವು ಭೂಮಿಗೆ | ಮುರಿದು ಬಿದ್ದುವು ರಕುತಧಾರೆಗ |
ಳೊರತೆ ಗಜತುರಗಗಳ ಕಂಗಳೊಳಾಯ್ತು ಭೂಕಂಪ ||
ನೆರೆದ ಕಾಳಾಯಸನು ಮುತ್ತಾ | ತೆರದು ಕಾಳಪುರುಷನು ದಿಟ್ಟಿಯ |
ತೆರವೆಯಲಿ ಸುಳಿದರು ಬಗೆಯನಾ ಸಮರ ಲಂಪಟರು || ೨೨ ||

ಅಂತಕೋಪಮ ಕೋಟಿಯಸುಭವ | ನಿಂತು ಬಗೆಯದೆ ಚಕ್ರಿರಣಮಿ |
ಚ್ಛಂತಿ ಪಾರ್ಥಿವಯೆಂಬುದನೆ ಪಿಡದೆತ್ತಿ ನಡೆಯಲಿಕೆ ||
ದಂತಿ ಕುಂಭೀರೌಘದಿಂ ಹಯ | ಸಂತತಿಯ ತೆರೆ ಮಾಲೆಯಿಂ ಬಲ |
ವಂತನಾಯಕ ಸುಭಟರತ್ನಾಕರವು ಘೂರ್ಣಿಸಿತು || ೨೩ ||

ಭರದಿ ಕುರುಜಾಂಗಳ ವಿಷಯದಲಿ | ನೆರೆದು ಬಿಟ್ಟುದು ಬೀಡುವತ್ತಲು |
ಕುರುಪತಿಯು ತನ್ನಖಿಲ ನೃಪರೊಂದಿರಲು ಚರರೈದಿ ||
ಇರದೆ ರಾಜಾದೇಶವನು ಕುಡೆ | ಶಿರದೊಳಾಂತದನೋದಿಸಿಯೇ ಕೇ |
ಳ್ದುರು ಭುಜವನೋಡಿದನು ಝಳಪಿಸಿ ತನ್ನ ಖಂಡಯವ || ೨೪ ||

ಮುಗುಳು ನಗೆಯಲಿ ಸೂರ್ಯತನುಜನ | ಮೊಗವ ನೋಡಿ ದ್ರೋಣ ತನಯಾ |
ದಿಗಳನೀಕ್ಷಿಸಿಯಿನ್ನು ನೋಡಲು ಬಹುದು ಪಾಂಡವರ ||
ನಗಧರನು ಮಮಕರಿಸಿ ಕೊಂಡೊಡೆ | ಬಗೆವೆನೇ ತನ್ನಯ ಕುಲದ ಬೆರ |
ಳುಗಳ ಕೀಳದೆ ಚಕ್ರವರ್ತಿಯು ಕಾ…………………….. || ೨೫ ||

ಎಂದ ಮಾತನು ಕೇಳಿ ಗಂಗಾ | ನಂದನನು ಕೇಳೆಲೆ ಸುಯೋಧನ |
ಚಂದವಲ್ಲಂ ನಿನ್ನ ನುಡಿ ನೆಲನಳುಪಿನಿಂದಕಟ ||
ಬಂಧು ವಧೆಗೆಳಸುವುದೆ ಕಾದುವೆ | ವೆಂದೊಡಪಜಯ ಜಯವದಾರ್ಗಹು |
ದೆಂದು ಬಲ್ಲವರಾರು ನನ್ನಯ ನುಡಿಯ ಕೇಳೆಂದ || ೨೬ ||

ವನಜನಾಭನು ಸೋದರತ್ತೆಯ | … … … … … |
… ವೇತಕೆ ನಿನಗೆ ಚಕ್ರಿಯೊಳಿಷ್ಟ ತಾನೇಕೆ |
ಜನವಿಧಿಯಿ ದೈತ್ಯಾರಿಯಿಂದಾ | ತನು ಮಡಿದನಾ ಚಕ್ರವಾ ಪೆಂ |
ಪಿನ ಸಿರಿಯ ಲಕ್ಷ್ಮೀಧರನವೋಲಾತಗಹುದರಿಯ || ೨೭ ||

ಅದು ನಿಮಿತ್ತದಿ ಪಾಂಡವರಿಗಾ | ಮೊದಲ ನೆಲನನು ಕೊಡುವುದೊಳ್ಳಿತು |
ಅಧಟರವರುಂ [ಕೊಳುವರೈ] ತಮ್ಮಿಳೆಯನಚ್ಚುತನು ||
ಕದನದೊಳು ತಾನವರ ಕಡೆ ನೀ | ನದನರಿತು ಮರುಳಾಗದಿರು ಪೆ |
ಚ್ಚಿದ ಬಲಕ್ಷಯ ಗೈವ ಸಮರೋದ್ಯೋಗವೇಕೆಂದ || ೨೮ ||

ಕೇಳಿದಿರೆ ನಿಮಜ್ಜರುಕ್ತಿಯ | ನೇಳಿದಿಕೆಯನು ನಮಗೆ ಭುಜಬಲ |
ದೇಳಿಗೆಯನಹಿತರಿಗೆ ನಮ್ಮೆಲ್ಲರಿಗಳುಕುದೋರಿ ||
ಹೇಳಬಹುದೇ ನನ್ನ ಮುಂದೆ ನೃ | ಪಾಲ ನೀನಂಜಿದೊಡಿಳಿಯೆ ಕೊ |
ಟ್ಟಾಳು ವೆಸಕೆರಗೆಂದು ಖಡುಗವ ಜಡಿದನಾ ಕರ್ಣ || ೨೯ ||

ಬಿಡುವೆ ಪ್ರಾಣವನಲ್ಲದಿಳೆಯನು | ಬಿಡುವೆನೇಯಿನ್ನೇಕೆ ನುಡಿಯನು |
ಕೆಡಿಸದಿರಿ ಮುತ್ತಯ್ಯ ನೀವೆನೆ ನಾವುಗತಯವರು ||
ಹಿಡಿಯಲಾರೆವು ಬಿಲ್ಲದಿಟ್ಟೆಗೆ | ಮಡಿದು ಬಿದ್ದೆವೆ ಹುಬ್ಬುಜಗಳದ |
ತೊಡಕು ನಿಮ್ಮದು ಗೆಲುವ ತೆರನರಿದೆಸೆಗೆ ನಿಲ್ಲೆಂದ || ೩೦ ||

ಎಂದ ಗಾಂಗೇಯರ ಚರಣಕೊಲ | ವಿಂದೆರಗಿ ಪ್ರಸ್ಥಾನ ಭೇರಿಯ |
ನಂದು ಪೊಡಯಿಸಿ ವಿವಿಧವೈಭದಿಂದ ಪೊರಮಡಲು ||
ಬಂದದಕ್ಷೋಣಿಯ ಬಲಹ | ನ್ನೊಂದು ಸುರಕರಿಸಮಗಜಂಗಳ |
ಸಂದಣಿಯ ಉಚ್ಛೈವಶ್ರವೋಪಮ ಹಯದ ತಿಂಥಿಣಿಯು || ೩೧ ||

ಅತಿರಥ ಮಹಾರಥರಖಿಳ ಭೂ | ಪತಿಗಳುನ್ನತ ರಥಗಳೊಡನಾ |
ಯತದ ಶಸ್ತ್ರಾಸ್ತ್ರಾದಿ ಸೌರಂಭಗಳ ತೇರುಗಳು ||
ವಿತತ ಧವಲಚ್ಛತ್ರ ಚಾಮರ | ತತಿ ಬಿರುದ ಠಕ್ಕೆಯವು ವಾದ್ಯವು |
ಮಿತವಿದಿಲ್ಲೆನೆ ಬರಲು ಪಯಣಂಗೈದನವನೀಶ || ೩೨ ||

ಶರಧಿಯೊಳು ಪೊಗು ತಂದುದೋ | ಮರು ಶರಧಿಯೆಂದಾ ಚಕ್ರವರ್ತಿಯೆ |
ಬೆರಗುಗೊಳೆ ನಡೆತಂದು ಪೊಕ್ಕುದು ನೆರೆದ ಕಟಕದೊಳು ||
ಕುರು ಪತಿಯ ಬಲಕಟಕವಾ ನೃಪ | ನಿರದೆ ವಿನಿಮಿತನಾಗಿ ಚಕ್ರಿಗೆ |
ಹರುಷದಿಂದುಚಿತಾಸನ ದೊಳಿರ್ದರದನಿಂತೆಂದ || ೩೩ ||

ನೀವು ಭರದಿಂದೆತ್ತಿ ಬರಲೆಂ | ದೇವದಾನವರಡಸಿ ನಿಂದರೊ |
ಗೋವಕಾವನನಟ್ಟಿ ಪಿಡಿತರವೇಳ್ದು ಕಳುಹಿದೊಡೆ ||
ನಾವು ತಂದೊಪ್ಪಿಸೆಲೆಯೆನೆ ಮಗ | ಧಾವನೀಶನು ಮೆಚ್ಚಿಯಿದು ನಿನ |
ಗೇವಿರಿದು ಯೆನುತಿತ್ತನಾ ಕರ್ಪೂರ ವೀಳೆಯವ || ೩೪ ||

ಅನಿತರೊಳಗಾ ಭೀಷ್ಮ ಹರಿವಾ | ಹನ ಜಯದ್ರರ್ಥ ಕರ್ಣ ದುಶ್ಶಾ |
ಸನ ಬೃಹದ್ರಥ ಶಲ್ಯ ಭೂರಿಶ್ರವ ಕೃಪಾಚಾರ್ಯ ||
ಕನಕವರ್ಮ ದ್ರೋಣ ಭಗದ | ತ್ತನು ಕೃಪಾಶ್ವತ್ಥಾಮ ಮೊದಲಾ |
ದನಿಬರುಂ ತಂತಮ್ಮ ಸೈನ್ಯ ಸಮೇತವೆರಗಿದರು || ೩೫ ||

ಅವರವರನೌಚಿತ್ಯ ದಾನದಿ | ನವನಿಪತಿಗಳ ದೇವಮನ್ನಿಸಿ |
ತವಕಿಸದೆ ಮರುದಿವಸದಂಡೆತ್ತಿದನು ಮದಜಲಧಿ ||
ಅವನಿಜವುಗೇಳುತಿರೆ ದೆಸೆಗಲು | ಕಿವುಡುಗೊಳುತಿರೆ ಹಯದ ಹೇಸಿತ |
ವಿವಿಧ ವಾದ್ಯದ ಬೊಬ್ಬೆಯಬ್ಬರದೊಂದು ಕೊಬ್ಬಿನಲಿ || ೩೬ ||

ಇತ್ತ ಬಾರೈ ಕುರುನೃಪತಿ ನ | ಮೊತ್ತಿಗೆಂದಾತನನು ಚಕ್ರಿಯುಲಿ |
ಹತ್ತಿರಿಕೆ ಕರಕೊಂಡು ತನ್ನಾತನ ಗಜದ್ವಯದ ||
ಸುತ್ತಲವನೀಶ್ವರನ ವಾಹನ | ವೆತ್ತಲುಂ ಪಸರಿಸಿ ಬರಲು ದಂ |
ಡೆತ್ತಿ ಬಂದಿರೆ ಬೀಡಬಿಟ್ಟನು ಕುರು ಧರಿತ್ರಿಯಲಿ || ೩೭ ||

|| ಅಂತು ಸಂಧಿ ೪೩ ಕ್ಕಂ ಮಂಗಲಮಹಾ ||