ಸಂಧಿ ೪೭

ಎರಡು ಬಲದೊಳು ನೆರೆದ ರಣರಸಿ | ಕರುಮೊನೆಯ ನಾಯಕರು ಮಿಗೆ ಸಂ |
ಗರವ ಮಾಡಿದರಧಟು ಮಿಗೆ ಸನ್ನಾಹ ಭೂಮಿಯಲಿ || ಪದ ||

ಕೇಳೆಲೇ ಮಾಗದ ಧರಿತ್ರೀ | ಪಾಲ ತಂತಮ್ಮೊಳ್ದರೆಸೆವಿರು |
ಳೋಲಗದೊಳಖಿಳಾವನಿಪ ಸಾವಂತ ನಾಯಕರು ||
ಆಳುತನವನು ತುಮುಳ ಯುದ್ಧದ | ಮೇಲೆ ಕಾಣಲು ಬಾರದದರಿಂ |
ನಾಳೆ ಮಾಳ್ಪುದುವೆಂದರವರಾ ದ್ವಂದ್ವ ಯುದ್ಧವನು || ೧ ||

ಎಂದು ಮತ್ತಾ ದ್ವಂದ್ವಯುದ್ಧಕೆ | ತಂದು ಮನವನು ಹೊನ್ನ ಬಟ್ಟಲ |
ಲೊಂದಿದಾ ಕರ್ಪೂರ ವೀಳೆಯವೀಸಿ ಕೊಂಡಿರದೆ ||
ಬಂದು ತಂತಮ್ಮ ಶಿಬಿರ ಕೈ | ತಂದು ತಮ್ಮ ಚತುವರ್ಣಂಗಳ |
ನಂದು ದಯೆಯಿಂ ನೋಡಿಯಾರೈದರು ವಿವೇಕಿಗಳು || ೨ ||

ಅಳಿದವರ ಪೈಕಕ್ಕೆ ಗಾಯದ | ಲುಳಿದರಿಗೆ ತುರಗಗಳು ಕೈಗಳಿ |
ದವರಿಗಾಯುಧಗಳುಡಿದವರಿಗೆ ವರೂಥಗಳು ||
ಕಳನೊಳಗೆ ಮುರಿದವರಿಗಪ್ಪುದ | ನಳವಿಗಳಿದೀ ವೀಸಿಕೊಂಬ |
ಗ್ಗಳದ ದಂದುಗಲಿಂದಲಾಯ್ತು ರಣಾರ್ಥಿ ಜಾಗರವು || ೩ ||

ಬಿದಿಯೆನಿಪ ಕಮ್ಮರನು ಪೆಚ್ಚಿದ | ಮೊದಲ ಸಂಜಯ ಕೇಸುರಿಯೋಳಾ |
ತುದಿಯಿರುಳ ಮಸಿಬೇಯೆ ಕಾಸಿದ ಲೋಹಪಿಂಡವನು ||
ಚದುರಿನುಪರಿಮ ಕಿರಣದಿಕ್ಕುಳು | ನುದಯಗಿರಿಯೆಡೆಗಲ್ಲ ಮೇಗಿರಿ |
ಸಿದನೊಯೆಂದೆನೆ ತೋರಿದುದು ಮಾರ್ತಂಡ ಮಂಡಲವು || ೪ ||

ಉದಯಿಸಿದ ರವಿಯೊಡನೆ ವಿಕ್ರಮ | ಉದಯಿಸಿತು ಪಟುಭಟರಿಗಾಗಲು |
ಪದುಮನಾಭನುಮಾತ್ರಿಖಂಡಾಧೀಶ್ವರನುಮಿರದೆ ||
ಮೊದಲವೊಲು ಸಮಕಟ್ಟೆ ಸಂಗ್ರಾ | ಮದ ಧರಿತ್ರಿ ಯಲೊಡ್ಡಿ ನಿಂದರು |
ಸದೆವ ನಿಸ್ಸಾಳಗಳ ರವವಾರಿಸೆ ದಸದಿಸೆಯ || ೫ ||

ಮುರಮಥನನಾ ವುಗ್ರಸೇನನ | ಬರಿಸೆ ಸೇನಾ ಪಟ್ಟವಿದು ನಿನ |
ಗಿರಲಿಯಿಂದಿನ ದಿನದಲೆಂದು ನಿಯೋಗಿಸಲಮೊಡನೆ ||
ವರಯುಧಿಷ್ಟಿರರಾಯ ರಿಪು ಭೀ | ಕರವಿರಾಟ ಕುಮಾರ ಶ್ವೇತನ |
ಕರೆದು ಕಳುಹಿಸಲೀರ್ವರುಂ ತಮ್ಮಖಿಲ ಜನಸಹಿತ || ೬ ||

ಧರಧರೆಗೆ ನಡೆದೊಡ್ಡಿ ನಿಲಲವ | ರುರು ಜರಾಸಂಧನು ತನಗೆ ಸರಿ |
ದೊರೆಯೆನಿಪ ಶತ್ರುಕ್ಷಯಂಗಾ ಸೈನ್ಯ ನೇತೃತೆಯ ||
ದೊರೆಕೊಳಿಸೆ ಕೌರವನುಮೊಡನಾ | ಸುರನದಿಯ ನಂದನಗೆ ಪೇಳಲು |
ನೆರೆದ ಪಡೆಸಹಿತೊಡ್ಡಿ ಕೈವೀಸಿದರು ನಿಜಬಲಕೆ || ೭ ||

ಜಲಧಿ ಮೇಲೆಗಳೆರಡು ಎಡವಿಡ | ದುಲಿದು ತಮ್ಮೊಳು ತಾಗಿದಂದದಿ |
ಹಳಚಿದುಭಯ ದಳಂಗಳಾಗಲು ತುಮುಳಯುದ್ಧದಲಿ ||
ಇಲೆ ನಡುಗೆ ವಾರಾಸಿಗಳ ತಾ | ಯ್ಮಳಲು ತೂರಲು ಪಸರಿಸಿತು ದಿಗು |
ವಳಯವನು ನಿಸ್ಸಾಳಕೋಟಿಯ ಭೂರಿಭೀಳರವ || ೮ ||

ಏನನೆಂಬನು ಬಿಲ್ಲವರ ಬಲ | ಮಾನವನು ಪೂಣ್ದೆಸೆವ ವಿಲಯಕೃ |
ಶಾನುವಿನ ಕಬ್ಬೊಗೆ ಕವಿದ ತೆರನಾಗಿಯೆಡೆ ಗುಡದೆ ||
ಸೇನೆಯೆರಡನು ಕವಿದೆಸೆಯೆತ್ತಿ ನೆ | ಲನನು ತಾನೆತ್ತದನು ಮೇಗಣ |
ಬಾನದೇತೆಂದರಿಯಲರಿದಾಯ್ತು ಭಯಬಲದೊಳಗೆ || ೯ ||

ಒಂದು ಬಾಣವು ಹಸಿಯದಾಗಳೆ | ತಿಂದು ತೇಗಿದವಹಿತ ವೀರರ |
ವೃಂದವನು ಬಳಿಕೇನನೆಂಬೆನು ರಕುತ ಗಡಲೊಳಗೆ ||
ಸಂದಬಿಲುವೊಡೆಯೊಡಲ ತೆಪ್ಪದ | ಸಂದಣಿಗಳವು ತೇಲುತಿರ್ದವ |
ದೊಂದುಲವುಕುಳವಾಯ್ತು ನಿಮಿಷದಲಾ ಮಹಾರಣವು || ೧೦ ||

ಫಡಪಡಿರಿ ತರಿ ಕುತ್ತು ಕಡಿಪೊಡೆ | ಕಡೆಯೆನುತ ಬೊಬ್ಬಿರಿದು ಪರಿಗೆಯ |
ನೆಡದ ಮೈಯಲಿ ಧಪ್ಪಳಿಸಿ ಬಲಗೈಯ ಕಡಿತಲೆಯ ||
ಝಡಿದು ಝಳಪಿಸಿ ಹರಿಗೆಹರಿಗೆಯೊ | ಳಡಸಿ ಹೊಡದಾಡಿದರು ಪ್ರಳಯದ |
ಸಿಡಿಲುಗಳು ಕೋಲಾಹಳವೊಯೆನೆ ಮಸಗಿತಾ ರಣವು || ೧೧ ||

ತುಂಡು ತುಂಡಾದವು ತೊಡೆಗಳೆದೆ | ಗುಂಡಿಗೆಯ ಬಿಚ್ಚಿದುದು ಮೇಲಕೆ |
ಮಂಡೆಗಳು ಪಾರಿದವು ಭೂತಗಣಂಗಳೊಡನೊಡನೆ ||
ಮುಂಡಗಳು ಕುಣಿದಾಡಿದವು ಮಡು | ಗೊಂಡನೆತ್ತರ ಕಡಲೊಳಗೆ ಪೆಣ |
ತಂಡತಂಡದಿ ಮುಳುಗುತೇಲುತಲಿರ್ದವಡಿಗಡಿಗೆ || ೧೨ ||

ಕುದುರೆಗಳು ಮೊಗಮಾಡಿ ಭರದೇ | ರಿದವು ಕೆಂಧೂಳಿಗಳೆ ಭೂತಳ |
ವದಿರೆ ಖುರ ಘಟ್ಟಣೆಗೆ ರಾಹುತರೆತ್ತಿ ಖಂಡೆಯದಿ ||
ಸದೆಯ ಕಂಗಲು ಹರಿದು ಮೈಹ | ಚ್ಚಿದ ತೆರದಿ ತುಂಡಾಗೆ ಬಳಿಕ |
ಶ್ವದ ಕೊರಲು ಕತ್ತರಿಸಿಬಿದ್ದವು ಸಂಗರೋರ್ವಿಯಲಿ || ೧೩ ||

ಗಿರಿಗಳವು ಹುಡಿಯಾಗೆ ನೇಮಿಯ | ಹರಿವ ಭರಕೆ ಯುಗಾಂತ ಶರಧಿಯ |
ಪಿರಿಯ ಸುಳಿಗಳ ತೆರದಿ ತಿರ್ರ‍ನೆತಿರುಗುತಾರ್ಭಡಿಸಿ ||
ಅರವರಿಸದಿದಿರಾದವಾ ರಥಿ | ಕರು ಮಸಗಿಯಂಬಂಬನುಗುಳುವ |
ಪರಿಯಲೆಚ್ಚರು ಕೊಚ್ಚಿದರು ಸಿಂಧುಗಳ ಸತ್ತಿಗೆಯ || ೧೪ ||

ತುರಗಗಳು ಪಡಲಿಟ್ಟವರೆ ಬರ | ಶರಧಿ ಶರಕಾರ್ಮುಗಿಲಕೌಡಿದ |
ವರೆ ಬರರಥಂಗಲು ಮುಗಿದವು ಸಾರಥಿಗಳೊರಗಿದರು ||
ಅರೆಬರೊಡಲಲಿ ನತ್ತರೊರತೆಯು | ಪರಿದುರರೆಬರ ಪಂದಲೆಗಳಂ |
ಬರದೊಳಾಡಿದವಮದು ರಥಿಕರ ಕೋಲಖುರಪುಟದಿ || ೧೫ ||

ಬಿಸಿ ರಕುತದವಲಿಪ್ತ ಕುಂಕುವ | ರಸವ ಲೇಪವೇರ ಪುಣಗಳು |
ಮಿಸುವ ರನ್ನದ ತೊಡಿಗೆ ಕಿವಿಯೊಳುನಟ್ಟ ಕೆಂಗರಿಯೆ ||
ಎಸೆವ ಕರ್ಣಾಭರಣ ಮಿದುಳ | ರ್ವಿಸಿಯೆಸೆವ ಬಾಸಿಗವೆನಿಸೆ ಅನಿ |
ಮಿಷವನಿತೆಯರು ಕೊಂಡು ಪೋದರು ಚೆನ್ನಗಂಡರನು || ೧೬ ||

ಸಂದ ಚೋದರು ಪದಿರೆ ಭೈ ಭೈ | ಯೆಂದು ಪದಿನಾಲ್ಕುಂತೆರದಿ ಕರ |
ದೊಂದು ಕೊಲೆಯಿಂ ಮೆಚ್ಚಿ ಮೆಚ್ಚಿಂತೆಂದು ಪದಿನಾರು ||
ಚಂದ ನಾನಾ ಕೋಡುಗಳ ಕೊಲೆ | ಯಿಂದೆ ದಳಿದಳಿಯೆಂದು ಹದಿನಾ |
ಲ್ಕಂದವಹ ಕಾಲೊಲೆಯಿನಾನೆಗಳೈದೆ ಹೋರಿದವು || ೧೭ ||

ಮತ್ತಮಾಗಳು ಭದ್ರಗಜವೊಂ | ದೆತ್ತಿ ಹಾಯ್ದೊಡೆ ಕೋಡರದನಿಯ |
ನೆತ್ತಿಯೆಲುವಿನೊಳೊಡೆದು ನಡೆ ಘೀಳಿಡುತಲದು ಮುರಿಯೆ ||
ಕುತ್ತಿದಾ ಕೋಡುಗಳು ಭೇರಿಂ | ಕಿತ್ತು ಕುಂಭದಿ ಸಿಲುಕಲೆರಡುಂ |
ನೆತ್ತರನೆ ಕಾರುತ್ತ ಕೆಡೆದುವು ಸಮರ ಭೂಮಿಯಲಿ || ೧೮ ||

ಹೊಸಮಸೆಯ ಹೊಗರಂಬುಗಳ ನಾ | ರ್ದೆಸುವ ಚೋದರು ಕೋಲುಗೊಂಡ |
ರ್ವಿಸುತ ಬಿಸುಟಂಬರಿದು ಕವಳಂಗೊಂಡವರಿಭಟರ ||
ಕಿಸುವೆಳಗ ಕಣ್ಣುಗುಳುತಿರೆ ಹಯ | ದಸುವಳೆದು ಕುಸುಗೆಡಹಿ ಚೋದರ |
ದೆಸೆಯಿಭಕೆ ಬಲಿಗೊಟ್ಟವೊಲು ಸೀಳಿಟ್ಟ ವಾನೆಗಳು || ೧೯ ||

ಕಡುವನದ ಕಲಿಗಳು ಮಸೆದ ಬಾ | ಲ್ವಿಡಿದು ಗಜವಜವೆಂಬ ವೊಲುವೇ |
ಮಿಡುಕದಡ್ಡಣವಿಕ್ಕೆ ಬೊಬ್ಬಿರಿದಾರ್ದು ಬಿರುವೊಯ್ಯೆ ||
ನಿಡಿಯ ಬರಿಕೈ ಪರಿಯೆ ಮುಂಗಾ | ಳುಡಿಯೆ ಪಕ್ಷವ ವಜ್ರಿವಜ್ರದಿ |
[ಕಡಿದ ಪರ್ವತ ನಿ] ಗಳವೊಲು ಪಡಲಿಟ್ಟವಾನೆಗಳು || ೨೦ ||

ಕಂಡು ನಿಜಬಲದಳಿವನಾ ದೋ | ರ್ದಂಡ ವಿಕ್ರಮಿ ಶ್ವೇತ ಭೂವರ |
ಚಂಡಭೀಷ್ಮರ ಸಮ್ಮುಖಕೆ ನೂಂಕಿದನು ನಿಜರಥವ ||
ಕಾಂಡತತಿಯನು ಕಾಂಡತತಿಬೆಂ | ಗೊಂಡು ಬೆನ್ನಟ್ಟುವ ತೆರದಿ ಕೋ |
ದಂಡವಿದ್ಯಾ ಚತುರನೆಡೆವಿಡದೆಚ್ಚು ಕೈಮೆರೆದ || ೨೧ ||

ಸುರನದಿಯ ಸುತನಾರ್ದೆಸಲು ಭೀ | ಕರಶರಂಗಳು ಕೊಚ್ಚಿದವು ಬಹ |
ಶರಗಳನು ಮುಂದಣೆದು ನೂಂಕೆವಿರಾಟಸುತಸವರಿ ||
ಸರಳ ಸಾರದ ಕಟ್ಟಿ ಮತ್ತೀ | ಸರಳುಗಳ ಹರಿಗಡಿದನಿಂತಿ |
ಪರಿಯಲಾ ಗಾಂಗೇಯಭೂವರ ಹೊತ್ತುಗಳೆಯುತಿರೆ || ೨೨ ||

ಮಸಗಿ ಮತ್ತಾಶ್ವೇತನಾರ್ದೆಸೆ | ಲಿಸುವ ಸರವಾಗಸದ ರೈತರೆ |
ಹೊಸಮಸೆಯ ಕವಲಂಬಿನಿಂದದ ಸವರಿ ಗಾಂಗೇಯ ||
ಅಸಮ ವಿಕ್ರಮನಹುದು ನೀನೇಂ | ದೆಸಲು ಶ್ವೇತನಮಕುಟ ಸಹ ಚೆಲು |
ವೆಸೆವ ತಲೆಹಾರಿದುದು ಗಗನಕೆ ನಿಮಿಷ ಮಾತ್ರದಲಿ || ೨೩ |

ಕುರು ಬಲದೊಳಾ ಜಯಪಟಹಗಳ | ವಿರುತಿ ನೆಗೆದುದು ಉಗ್ರಸೇನನೊ |
ಳರವರಿಸಲೆಚ್ಚಾಡಿ ಶತ್ರುಕ್ಷಯನೃಪತಿಮಡಿಯೆ ||
ನೆರೆದು ದಿತ್ತಲು ಜಯ ಪಟಹದ | ಬ್ಬರವು ಕೊಲೆಯನು ಕಂಡು ಮನಕೊ |
ಕ್ಕರಿಸಿದಂತಪರಾದ್ರಿಯನು ಮರೆಗೊಂಡನಾ ಸೂರ್ಯ || ೨೪ ||

ಹರಿಜರಾಸಂಧರ ಕಟಕಳು | ಮರಳಿ ಹೊಕ್ಕವು ತಮ್ಮ ಬೀಡನು |
ನೆರೆದ ನಾಯಕನಿಕರ ತಂತಮ್ಮಾಳ್ದರವಸರದ ||
ಇರುಳಿನೋಲಗವನು ನೆಡಪಿತ | ಮ್ಮುರು ನೆಲೆಯೊಳಿನಿತೊರಗಲಾದುದು |
ಹರೆಯ ಹೊಚ್ಚರುನಿದ್ರೆಯನು ಭೇರಿಧ್ವನಿಯು ಕಳೆಯೆ || ೨೫ ||

ಸರಸಿಜಂಗಳು ವೀರ ಲೋಚನ | ಸರಸಿಜಂಗಳು ವೊಡನರಲ್ದವು |
ತರಣಿಮೂಡಣ ಗಿರಿಯನಾರೋಹಿಸಲು ಜಗಗಳನು ||
ದೊರೆಗಳಾರೋಹಿಸಿದರಾಗಲೆ | ವರಜರಾಸಂಧನು ಮುರಾರಿಯು |
ದುರಧರೆಗೆ ಬಂದೊಡ್ಡಿ ನಿಂದರು ನಿಜಬಲಾವೃತರು || ೨೬ ||

ಕಲಿ ಜರಾಸಂಧನು ಕರೆದು ದೋ | ರ್ವಲನು ನಿಜಸುತ ಕಾಮದಂತಂ |
ಗೊಲಿದು ಸೇನಾಪಟ್ಟವನು ಕಟ್ಟಿದೋಡೆ ಕಾಮದನು ||
ಪ್ರಳಯ ಭೈರವನೆನೆ ಮಸಗಿ ಆ | ಗಳೆ ಮಹಾರಥವೇರಿ ತನ್ನ |
ಗ್ಗಳದ ಚಾತುರ್ದಂತ ಬಲಸಹವೊಡ್ಡಿ ನಿಲಲೊಡನೆ || ೨೭ ||

ಇತ್ತಲಾಗಳೆ ಶತ್ರು ಭೂವರ | ಮತ್ತಜಗ ಪಂಚಾಸ್ಯ ಬಲ ಭೂ |
ಪೋತ್ತಮನು ಸೀರಾಯುಧವನಾಂತಖಿಲ ಬಸವೆರಸಿ ||
ಒತ್ತಿ ಬರೆ ಮಾಗಧ ಸುತನ ಬಲ | ವಿತ್ತರದಿ ನುಗ್ಗಾಗುತಿದ್ದುದ |
ದತ್ತ ಗಾಂಗೇಯನ ಮನೆಗೆ ಪಾಂಚಾಲನಿಧಿರಾದ || ೨೮ ||

ಸರಿಸನೇ ಕೇಳಜ್ಜ ದ್ರಪದನು | ಧುರದೊಳಗೆ ನಿಮಗೆಂದು ಶಲ್ಯನು |
ಸುರನದಿಯ ಸೂನುವನು ಪೆರಗಿಕ್ಕಿದರೆ ಬಿಲುವೊಯ್ದು ||
ಸರಳಸರಿಯನು ಸುರಿಯೆ ಮುಸುಕುವ | ಭರಕೆ ಪಾಂಚಾಳನ ಪಡೆಯ ಪೆರ |
ಸರಿವ ಪದದೊಳು ಮಾವನನು ಪಿಂತಿಕ್ಕಿ ಕಲಿಪಾರ್ಥ || ೨೯ ||

ಗಂಡುಗಲಿ ಕೋದಂಡ ವಿದ್ಯಾ | ಚಂಡ ದೂರ್ಝಟಿ ವೀರಪಾರ್ಥನು |
ಗಾಂಡಿವವ ಪಿಡಿದಾತ್ಮಬಲ ಸಹವೊಡ್ಡಿ ನಿಲೆ ಶಲ್ಯ ||
ಮಂಡಲದೊಳೆನ ಗಾಂಪೆನೆಂಬ ಪ್ರ | ಚಂಡನಾವನೊ ಯೆಂದೊದರಿ ಮುಂ |
ಕೊಂಡು ಬರೆಸೆಳೆದೆಚ್ಚು ಹೂಳಿದನಹಿತ ಸೈನಿಕವ || ೩೦ ||

ಉರುಳಿದರು ಪಟುಭಟರು ಪಾರ್ಥನು | ತುರಗದಳವೇನಾಯ್ದೊ ಗಜಘಟೆ |
ಯಿರದೆ ಪೆಡೆಮೆಟ್ಟಿದವು ಕಾಣುತ ಕಲಿಧನಂಜಯನು ||
ತಿರುವ ಜೇವಡೆಯಲು ಮಹಾ ಭೀ | ಕರ ರವಕೆ ಗಿರಿನಡುಗಿದುವು ಪೂ |
ಣರಿಭಟರ ಹೃದಯಗಳು ಭಿಕ್ಕನೆ ಬಿರಿವುದೇನರಿದೆ || ೩೧ ||

ತಿರುವಿಗಂಬನು ಹೂಡಿ ಗಾಂಡಿವಿ | ಬರೆ ತೆಗೆದು ಹಿಳುಕನು ಬಿಡಲು ಭೋ |
ರ್ಗರೆದು ಏರಿದವು ಹೊಸಮಸೆಯ ಹೊಗರುಗಳನಿಂಬಿಡುತ ||
ಭರದಿ ಶಲ್ಯನ ಸೈನ್ಯವನು ಸಂ | ಹರಿಸಿದವು ಗಜಗಳನು ಕಬಳಿಸಿ |
ತುರಗಳ ನುಣ್ಣನೆ ನೊಣೆದವೇನೆಂಬೆನದುಭುತದ || ೩೨ ||

ಶೂರ ಶಲ್ಯನು ವೀರಪಾರ್ಥನು | ಭೂರಿ ಭುಜಬಲನುಗ್ರರವ ಪರಿ |
ವಾರ ಪರಿವೃತರಾರ್ದು ಕಾದುತ್ತಿರ್ದರಿರಲಿತ್ತ ||
ಸೀರವಾಣಿಯ ಸೈನ್ಯದುಬ್ಬೆಗ | ತೀರಯಿಸುತಿರೆ ಕಾಮದಂತನ |
ಘೋರ ಬಲವದನೀಕ್ಷಿಸುತಲಾತನನು ಪೆರಗಿಕ್ಕಿ || ೩೩ ||

ಅಸನಿವೇಗನೆನಿಪ್ಪ ಭೂವರ | ನಸನಿ ಮಸಗದಿ ತೆರದಿ ಮಿಗೆ ಕೋ |
ಪಿಸಿ ಭಟನೊಳಿದಿರಾಂತು ಕೂರ್ಗಣೆವರುಷವನು ಕರೆಯೆ ||
ಬಸಿವ ರಕುತದ ಸಿಡಿದಲೆಯ ಕಂ | ಪಿಸುವ ತನುಗಳ ಸುರಿವಕರುಳಿನ |
ಬಸವಳಿವ ವೀರರನು ಕಾಣುತ ಬಲನು ಪೆರಗಿಕ್ಕಿ || ೩೪ ||

ಚಾರಣಾವನಿಪಾಲನಾಗಳು | ಭೋರೆನಿಸುವಳೆಗರೆಯೆರಿಪುಪರಿ |
ವಾರದನಿತರ ಮೈಗಳಲಿ ಮಸೆಗಾಣಿಸಿದವಿರದೆ ||
ವಾರಣಗಳಶ್ವಗಳು ಭಟರ್ಗಗಳು | ಮಾರಿಗೌತಳವಾದರಾಗಳು |
ವೀರಕೆರಳಿರ್ದಸನಿವೇಗನು ಕಂಡು ಖಾತಿಯಲಿ || ೩೫ ||

ತಿರುವಿಗಂಬನು ಹೂಡಿ ಹೂಣಿಸಿ | ಬರತೆಗೆದು ಹೊಕ್ಕೆಸಲು ಕವಿವ |
ಚ್ಚರಿಯಕಣೆಯನು ಕೊಚ್ಚಿದನುಕವಲಂಬಿನಿಂಮತ್ತೆ ||
ಧುರವಿಜಯ ಚಾರಣನೃಪಾಲಕ | ನಿರದಸನಿವೇಗನ ಶಿರಸ್ಸನು |
ಪರಿಸ ಬೋಳೆಯ ಕೋಲಿನಿಂದಿಳುಹಿದನು ನಿಮಿಷದಲಿ || ೩೬ ||

ಪೋದುದಂದಿನ ದಿವಸ ಮರುದಿನ | ವಾದೊಡಂದಿನ ತೆರದಿನಾ ಮಧು |
ಸೂದನನು ಮಾಗಧನು ನಿಜಬಲವೆರಸಿ ಸಂಗ್ರಾಮ ||
ಮೇದಿನಿಯೊಳೊಡ್ಡಿರಲು ದೋರ್ವಲ | ನಾದಮಾನಾವಂತನುದ್ಧತ |
ನಾದ ಮಗಧೇಶನ ಬಲದೊಳಿಹ ವಜ್ರಬಾಹುವೊಳು || ೩೭ ||

ಸತ್ಯಕನು ಸೆಣಸಿದ ಜಯದ್ರಥ | ಗುತ್ತರನು ತೊಡದಿರನು ಕೃಪನೊಳು |
ತತ್ತ ದೃಷ್ಟದ್ಯುಮ್ನ ದುಂದುಭಿಯೊಳು ಮಹಾಸೇನ |
ಕಿತ್ತನಲಗನು ವಜ್ರಮುಷ್ಠಿಯೊ | ಳೊತ್ತಿದನು ವಸುಪಾಲ ಭೂವರ |
ನೊತ್ತರಿಸಿ ಭೂರಿಶ್ರನೊಳಿದಿರಾದನಾ ನಕುಲ || ೩೮ ||

ಅವರವರು ಸಾರಥಿ ತುರಂಗಮ | ವಿವಿಧ ಧನು ಮಾರ್ಗಣನಿಶಿತ ಖ |
ಡ್ಗವು ಸಹಿತ ತಂತಮ್ಮ ತುರಗ ರಥಂಗಳನು ಪತ್ತಿ ||
ಅವಗಡಿಸುತಾ ದ್ವಂದ್ವಯುದ್ಧದಿ | ನವನಿಪತಿಗಳು ಮೂರು ಜಾವವು |
ತವುತಹನ್ನೆಗೆ ಕಾದಿದರು ಸಂಗ್ರಾಮಲಂಪಟರು || ೩೯ ||

ಇಸುವರುಷವನು ವಜ್ರಬಾಹುವು | ಪಸರಿಸಲು ಸತ್ಯಕನು ಮಾರ್ಕೊಂ |
ಡೆಸಲು ಮಧ್ಯದೊಳಾಯ್ತು ಸರಸರಗಳಿಗೆ ಬಲುಜಗಳ ||
ಕುಸುರಿದರಿದಾ ಕಣೆಗಳನು ಮ | ತ್ತೆಸಲು ಮಣಿಮಕುಟವು ಕೆಡುದುದಾ |
ಗಸಕೆ ಪಾರಿತು ವಜ್ರಬಾಹುವನಿರವು ನಿಮಿಷದಲಿ || ೪೦ ||

ವರ ಜಯದ್ರಥನೆಚ್ಚಡಿರದು | ತ್ತರನೊಡನೆ ಕೂರಂಬನೆಚ್ಚಡೆಯೋ |
ಉರುಳಿದವು ತೇರುಗಳು ಮುರಿದುದು ಧ್ವಜದ ನಿಡುಗಂಬ ||
ಉರಿಯನುಗುಳುತಲಾ ಜಯದ್ರಥ | ಭರದಿನೆಚ್ಚಾ ಸರಳಪಥವೆನ |
ಲಿರದೆ ಪೋದನು ಜವನಪುರಕುತ್ತರ ಕುಮಾರಕನು || ೪೧ ||

ಕೃಪನು ಧೃಷ್ಟದ್ಯುಮ್ನನುಂ ನಿ | ಷ್ಕೃಪೆಯನಾಂತು ಸಮಾನಸತ್ವಾ |
ಧಿಪರೆನಿಪಲಾದುಂದುಭಿಯೊಳಾಂತಾ ಮಹಾಸೇನ ||
ಕುಪಿತ ಮನನುರದೆಚ್ಚಿರಿಂ ಹೇ | ರಿಪುದು ತನಗರಿದಾಗೆ ತನ್ನಯ |
… …. ಪಿದಿದುದುಂದುಭಿ ರಥವ ಮಗುಳಿಸಿದ || ೪೨ ||

ಅತ್ತಲಾ ಭೂರಿಶ್ರವನು ಕಾ | ದುತ್ತ ಫಲವುಂ ಸೂಳನೋದುತ |
ಮತ್ತಕರಿಹರಿ ನಕುಲನೊಡನೆಚ್ಚಾಡುತಿರೆ ಬಳಿಕ ||
ಮತ್ತೆ ನಕುಲನು ಮಿಕ್ಕೆಸಲು ಧನು | ವೆತ್ತ ಹೋದುದೋ ಕಾಣೆಕೈಯಿಲಿ |
ಕುತ್ತುದಲೆಯಲಿ ವಿರುದನಾಗಿಯೆ ಮಗುಳಿದನು ಮನೆಗೆ || ೪೩ ||

ಕಾಲರುದ್ರನ ಕಾಪಿನಂ ಶರ | ಜಾಲದಿಂದಾ ವಜ್ರಮುಷ್ಠಿಯ |
ಮೇಲು ಠಕ್ಕೆಯ ಚಿಂಗೊಡಗಳನು ಕತ್ತರಿಸಿಕೆಡಹಿ ||
ವ್ಯಾಲಹಯ ಸಾರಥಿಯ ಥಟ್ಟನು | ಸೀಳಿ ಪೇರ್ಗೋರಳನು ತೊರೆಯೆ ತಲೆ |
ಮೇಲುದಲೆಯೆನೆ ಪಾರಿ ಕಲಿ ವಸುಪಾಲ ಬೊಬ್ಬಿರಿದ || ೪೪ ||

ಅರ್ಕನಪರಾದ್ರಿಯನು ಸಾರಲು | ಪೊಕ್ಕರವರೀರ್ವರು ಕಟಕಗಳ |
ನಿಕ್ಕಿದರು ನಿದ್ರಾಂಗನೆಗೆ ಹುಬ್ಬನು ಕಡೆಯೊಳಾನ ||
ತೆಕ್ಕೆದೊಲಗಿದರಾಗ ಮೂಡಣ | ದಿಕ್ಕಿನಲಿ ಮೊಗದೋರೆ ನೇಸರು |
ಚಕ್ರಿ ಶಾರ್ಙ್ಗಗಳೆಂದಿನಂದದಿ ಧುರದೊಳೊಡ್ಡಿದರು || ೪೫ ||

|| ಅಂತು ಸಂಧಿ ೪೭ಕ್ಕಂ ಮಂಗಲಮಹಾ ||