ಸಂಧಿ ೪೯

ಮೂರು ಲೋಕದ ಗಂಡ ಗೆಲಗೈ | ಕಾರನಾ ವ್ಯೂಹವನಿರಿದು ನೆರೆ |
ಸಾರಿಕೊಂದನು ಸೈಂಧವನನಮರೇಂದ್ರನಂದನನು || ಪದ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ಸೂರ್ಯೋದಯದಲಿರ್ವಲ |
ಕಾಳಗಕೆ ಬಂದೊಡ್ಡಿನಿಲೆ ಮಾಗಧ ಸುಯೋಧನರು ||
ಕೇಳಿದರು ಸಿತಹಯನ ಪೂಣ್ಕೆಯ | ನಾಳವರಿದಾ ಕುರುನೃಪಾಲಕ |
ನಾಳನೋಡಿದ ಮತ್ತೆ ಚಕ್ರವ್ಯೂಹ ರಚನೆಯಲಿ || ೧ ||

ನರನ ಪೂಣ್ಕೆಯನಾ ಜಯದ್ರಥ | ಗೊರೆದು ನೀವೀ ಪಡೆಯಬೆಂಗಡೆ |
ಯಿರಿ ದಿನಾಧಿಪನಸ್ತಮಯಮಪ್ಪನ್ನವೆಂದಿರಿಸಿ ||
ವರ ಮಹಾರಥರಪ್ಪ ಗಾಂಗೇ | ಯರನು ಗುರುದುಶ್ಯಾಸನಾದ್ಯರ |
ನಿರಿಸಿದನು ತಾವಾಗಿ ಶಲ್ಯ ಸಮೇತವನಿಬರನು || ೨ ||

ದುಂದುಭಿಯು ಬಾಹ್ಲಿಕ ಬೃಹದ್ಬಲ | ಸಂದಜಯವಿಂದಾನು ವಿಂದುವೊ |
ಳೊಂದಿಸವುಬಲ ಸೋಮದತ್ತನೃಪಾಲ ಜಯದತ್ತ ||
ಎಂದೆನಿಪ ಭೂಮೀಶ್ವರರ ನೆರೆ | ಸಂದಣಿಯ ಚತುರಂಗ ಸಹವಾ |
ಮುಂದೆ ಬಾಗಿಲೊಳಿರಿಸಿ ತಾಂನಡುವಿರ್ದನಿರಲಿತ್ತ || ೩ ||

ಭುವನವಿಜಯನೆನಿಪ್ಪ ಜಯನನು | ಪವನಸುತಯಮಳರನು ಸತ್ಯಕ |
ಜನನ ಧೃಷ್ಟದ್ಯುಮ್ನ ಭೀಮಾತಜನನಿಂತಿರವಾರ ||
ಜವರಸುತನೊಡಗೂಡಿ ಧ್ರುಪದ | ಪ್ರವರ ಮತ್ಸ್ಯಾಶೋಕ ಕೈಕೆಯ |
ನವನಿಪಾಲಾದಿಗಳ ತಾನೊಡಗೊಂಡು ಕಲಿ ಪಾರ್ಥ || ೪ ||

ಎರಗಿ ಯಮನಂದನಗೆ ವಜ್ರದ | ನೆರೆದ ರಥವೇರಿದನು ಸುತ್ತಲು |
ತುರುಗಿ ಬರೆ ಚತುರಂಗ ಬಲವೇನುಗ್ರ ಕೇಸರಿಯೊ ||
ಕರೆಗೊರಲನೋ ಕಾಲಮೃತ್ಯುವೊ | ಬರಸಿಡಿಲೊ ಕೀನಾಶನೋ ಕಡೆ |
ಯುರಿಯೊ ಪಾರ್ಥನೊ ಕವಿದು ಬಹುದೇನೆಂದುದರಿಬಲವು || ೫ ||

ಬರುತ ಬರುತಾ ಪಾರ್ಥನಾಗಳು | ತಿರುಳ ಜೇವೊಡೆಗೈಯೆ ಕಲಕಿತು |
ಶರಧಿಯಮರರ ನೆರಚಿ ಚಲ್ಲನೆ ಚೆಲ್ಲಿದುದು ಬೆದರಿ ||
ಸರಲನೆತ್ತಲು ಪರಿಪೆ ಕರಿಘಟೆ | ತುರಗದಳ ರಥ ಪೇಟಕ ರಥೋ |
ತ್ಕರವು ಜೀರಗೆ ದೊಕ್ಕದಂದದಿ ತಗ್ಗಿ ತಾಕ್ಷಣವು || ೬ ||

ಸವ್ಯದೆಸುಗೆಯಿದೀಕ್ಷಿಸುವೊಡಪ | ಸವ್ಯದೆಸುಗೆ ಯಿದೆಂಬ ಕಲ್ಪನೆ |
ಗವ್ಯವಸ್ಥಿತಿಯಾದುದಾ ಕರ್ಣಾಂತ ಪೂರಿಸಿದ ||
ದಿವ್ಯ ಚೌಪದ ಮಿಡುಕನರಿವೊಡೆ | ದಿವ್ಯರಿಗೆ ಕಾಣಿಸದು ಕೊಂದವು |
ಸವ್ಯಸಾಚಿಯ ಬಾಣಗಳು ವ್ಯೂಹೋದರಸ್ಥರನು || ೭ ||

ಪೆಣಗಳನು ಬೀಳುವ ಭರಕೆ ಪೆಡೆ | ಮಣಿದುದಾ ಫಣಿಪತಿಗೆ ಪೆಣಗಲ |
ಬಣಬೆನೆತ್ತರ ತೊರೆಯೊಳಗೆ ತೆಪ್ಪಗಳವೊಲು ತಳರೆ ||
ಕುಣಿವ ಮುಂಡಗಳೊಂದೆಸೆಗೆ ಮೇ | ಗಣೆವ ಪಂದಲೆಯಾಗಸಕೆ ಸಂ |
ದಣಿಸಿ ಕೊಂದನು ಪಾರ್ಥಗಿದಿರಹರಾರು ತ್ರಿಜಗದಲಿ || ೮ ||

ಒಡೆಯೆ ಚಕ್ರವ್ಯೂಹದಲಿ ರಥ | ನಡೆವ ಪಥದಲಿ ಶಲ್ಯ ಬೆದರದೆ |
ಫಡಪಡಿದಿರಾಗೆನುತ ಕೆಂಗರಿಗಣೆಗಳನು ನೂಂಕೆ ||
ಕಡಿದು ಪಾರ್ಥನ ಕೂರ್ಗಣೆಗಳೆಡೆ | ವಿಡದೆ ಮುಂಬರಿದವನ ಧನುವನು |
ಗುಡಿಯನೆತ್ತಿದ ಸತ್ತಿಗೆಯ ಕಡಿದಿಡಿಕಿದವು ಧರಗೆ || ೯ ||

ಅತ್ತಲಾರ್ದು ಜರತ್ಕುಮಾರಕ | ಮೊತ್ತಿ ಚಕ್ರಿಯ ಕಾಲವಯನೊಳು |
ಸತ್ಯಕನು ಭೂರಿಶ್ರವನೊಳಾ ವ್ಯಾಘ್ರೆಕೇತುವೊಳು ||
ಪೆತ್ತವಜ್ರ ಶಿಖೇಂದ್ರ ವೃಷ ಸೇ | ನೋತ್ತಮನೊಳುಳ್ಕ ಮುಖ ಮಿಗೆ ಕಾ |
ದುತ್ತುಮಿರ್ದರು ಸುರರ ಕಂಗಚ್ಚರಿಯ ಘಟ್ಟಿಸುತ || ೧೦ ||

ಇತ್ತಲತಿ ರೌದ್ರದಲಿ ನೆರೆ ಸಂ | ವರ್ತಸಮಯದ ಯಮನೆನಿಸಿ ಪಡೆ |
ಯೊತ್ತರಿಸಿ ಬಹ ಭೀಮಸೇನನ ಕಂಡು ಭಗದತ್ತ ||
ಮತ್ತ ಹಸ್ತಿಯ ಸುಪ್ರತೀಕದ | ಪತ್ತು ಮಡಿಯಧಟುಳ್ಳ ಗಜವನು |
ಪತ್ತಿ ನೂಂಕಿದನೇನನೆಂಬೆನು ರಣದೊಳದ್ಭುತವ || ೧೧ ||

ಸೊಕ್ಕಿದಂತಕನೊಂದು ಕೋಣನ | ಮಿಕ್ಕುದಾದಿವರಾಹ ನಿಂತಂ |
ನುರ್ಕುಮಿಕ್ಕುದು ಮಝರೆಮಿಳ್ತುವ ಗಜದರೂಪಾಯ್ತೊ ||
ರಕ್ಕಸರ ತಿಂದಾನೆ ಪೊಣ್ದಿ | ಕೆಕ್ಕೆಯಿಂ ಭೀಮನ ಪಡೆಯಪೊ |
ಕಿಕ್ಕಿಲಿಕ್ಕಿತು ಬಿಕ್ಕಿ ಬಿಸಟಂಬರಿದುದೇನೆಂಬೆ || ೧೨ ||

ಓಡಿದವು ಘಟ ಪೇಟಕಗಳ | ಲ್ಲಾಡಿದವು ರಥನಿಚಯ ತನ್ನಿ |
ರ್ಕೋಡುವಡಬ ಜ್ವಾಲೆಗಳವೊಲು ರಕ್ತಮಯವಾಗೆ ||
ಈಡಿರಿದುದಶ್ವಂಗಳನು ಬೀ | ಸಾಡಿದುದು ಭಟಕೋಟಿಯನು ನೆರೆ |
ನೋಡುವಮರರ ಮೆಚ್ಚಿಸಿತು ಭಗದತ್ತನೆದ್ದಾನೆ || ೧೩ ||

ಕೋಡಿರಿತದಲಿ ಕೆಲವು ಗಜಗಳ | ನೀಡೊರಸಿ ಕೆಡಪುತ್ತ ಜೋದರ |
ನಾಡಲೇಂ ಪಿಡಿದೊತ್ತಿ ತಿರ್ರ‍ನೆ ತಿರುಗ ಬೀಸಿಡಲು ||
ನೋಡುವಮರರು ಬಹಭರಕೆ ಕಡು | ಹೇಡಿಗಳವೊಲು ಸಿಡಿಯೆನಲಿ ನಲಿ |
ದಾಡಿದನು ನಭದೊಳಗೆ ನಾರದನಾನೆಗೊಲೆಗಂಡು || ೧೪ ||

ತುಳಿದು ಕೆಲರನು ನಖರದಿಂ ಪೊ | ಗ್ಗಳೆದು ಕೆಲಬರನೊತ್ತಿ ಹಸ್ತದಿ |
ಹಿಳಿದುಕೆಲಬರ ಕೋಡಿನಿಂ ಕೆಡೆಚುಚ್ಚಿ ಕೆಲಬರನು ||
ಕೆಲಬರನು ಪಕ್ಕದಲೊರಸಿಕೆಲ | ಕೆಲಬರನು ಕಡಿಕೊಂಬುಗೊಂಡ |
ಗ್ಗಳಿಸಿದುದು ಭಗದತ್ತನೇರಿದ ಗಂಧಸಿಂಧುರವು || ೧೫ ||

ಚರಣಹತದಿ ಪದಾತಿಯನು ನಖ | ದುರವಣಿಯಿನಶ್ವವನು ಭಾರಿಯ |
ಕರದಿ ರಥನಿಕರವನು ಕೋಡಿಂ ರದನಿ ಸಂಕುಳವ ||
ಅರೆಯುತಿರೆ ಕೋಳ್ಕುಟ್ಟಿಕೆಂಡವು | ಸುರಿಯೆ ಕೆಂಡದ ಮಳೆಗರೆವ ಭೀ |
ಕರ ಲಯಾಂಬುದವೆನಿಸಿದಾ ಕರಿ ಯುದ್ಧರಂಗದಲಿ || ೧೬ ||

ಎರಡು ನಿರ್ಜರವುಳ್ಳ ನೀಲದ | ಗಿರಿಗೆ ಕೈಕಾಲ್ಬಂದವೊಲು ಭೀ |
ಕರಮದೇಭವು ಬಹಳ ಶುಂಡಾಲವನು ಕೊಂದುಳಿದ ||
ಕರಿಘಟೆಗಳನು ಮುರಿಯಲಟ್ಟುತ | ತುರಗವನು ಪಿಡಿದಪ್ಪಳಿಸಿ ಬಹು |
ತುರಗಗಳ ನಿರದಿಟ್ಟು ಬಿಸುಟಂಬರಿದುದಾಜಿಯಲಿ || ೧೭ ||

ಕೊಂದು ಸುಭಟನನಡ್ಡಗಟ್ಟಿದ | ದೊಂದುಸಬಕೋಡಿನೊಳು ಪೋಣಿಸಿ |
ದೊಂದುಹೆಣ ನೆಗಹಿದ ಕರಾಗ್ರದಿನೆಲೆವ ಹೆಣನೊಂದು ||
ಮುಂದೆ ನೆತ್ತರು ಸೂಳೆತಿರೆ ಭೋ | ರೆಂದುದಕೆ ಪರ್ದೆರಗುತಿರೆ ತಾ |
ನೊಂದೆ ಬಂಬಲುವರಿದುದಾ ಭಗದತ್ತ ಸಿಂಧುರವು || ೧೮ ||

ನೆರೆದ ತನ್ನೆಯ ಪಡೆಯನಂತಕ | ಪುರವ ನೈದಿಸುತಿರಲು ನೆರೆ ಕಂ |
ಡುರುತರದಿ ಧುಮ್ಮಿಕ್ಕಿ ರುದಿರೋದ್ಗಾರಿ ಗದೆವಿಡಿದು ||
ಕರಿಯ ಕರಕೆಡಗೈಗೊಡುತ ಪೊ | ಕ್ಕುರು ರದನವನು ಪಿಡಿದು ಮಿಗೆ ಕುಸು |
ಕಿರಿದು ಗದೆಯಿಂದಪ್ಪಳಿಸಿದನು ಗಜವ ಕಲಿ ಭೀಮ || ೧೯ ||

ನಿಡಿಯ ನೀಲಾಚಲದ ರಂಕೆಯ | ಕಡಿಯೆ ವಜ್ರಿಯವಜ್ರದಿಂದದು |
ಕೆಡೆವವೊಲು ನೆಲನದಿರೆ ಕೆಡೆವವಸರದೊಳಗೆ ಕಾಯ್ದು ||
ಪಿರಿದ ವಜ್ರಾಂಕುಶದಿ ಕೋಪಿಸಿ | ಯಿಡಲದಂ ಗದೆಯಿಂದಣೆದು ಮಾ |
ರ್ಪೊಡೆದನಾ ಕೆಡೆಯೆಂದು ಭಗದತ್ತನನು ಕಲಿಭೀಮ || ೨೦ ||

ಪೊಡೆಯೆ ಮಕುಟವು ನುಚ್ಚುನೂರಾ | ಗೊಡೆದು ಕಿಡಿಕಿಡಿವೋಗೆ ರಕುತವು |
ಕೊಡನ ಕುಟ್ಟಿದ ತೆರದಿ ತಲೆಕಾಪಾಲನುಗ್ಗಾಯ್ತು ||
ಕಡುಹಗಲು ತಾನಾದುದನ್ನೆಗ | ವೊಡನೆ ಭೂರಿಶ್ರವನದಿತ್ತಲು |
ಕಡುಪಿನಿಂ ಸತ್ಯಕನನೊತ್ತಲು ಕಂಡನಾ ಪಾರ್ಥ || ೨೧ ||

ಎಸಲು ಭೂರಿಶ್ರವನ ತಲೆಯಾ | ಗಸಕೆ ಪಾರಿದುದಿನ್ನು ಸೈಂಧವ |
ನಸುವ ಕಾವಗ್ಗಳನದಾರೆಂದಾರ್ದನಾ ಪಾರ್ಥ ||
ವಸುಧೆ ಕಂಪಿಸೆ ಬಿಲ್ಲ ಜೇವಡೆ | ದಸಮ ವಿಕ್ರಮ ಕೋಲಗುರುವಂ |
ದಿಸುವೊಡೆಣೆಯಿಂ ತೆಗೆದು ಪಿಡಿದೀಕ್ಷಿಸಿದನರ್ಜುನನ || ೨೨ ||

ಇಂದ್ರಸುತ ನಿನ್ನಿರುಳು ನಿನ್ನಯ | ಕಂದನಳಿದಾ ಶೋಕ ಮೋಹದಿ |
ಮುಂದುವರಿದಾಡಿದವೊಲೀಗಳು ಗಂಡಗರ್ವದಲಿ ||
ಮುಂದುವರಿಯದಿರೆಮ್ಮೊಡನೆ ಭೋ | ರೆಂದುರಿದ ಕಾಳ್ಗಿಚ್ಚಿನಲಿ ಪರಿ |
ತಂದು ಘರ್ಜಿಸಿ ಬಿರ್ದುಬಾಳ್ವುದೆ ಹುಲಿಯು ಕೇಳೆಂದ || ೨೩ ||

ಹಸುಳೆಮಗನನು ಸಂಗರಕೆ ಕಳು | ಹಿಸಲದೇತಕೆ ಕಾದಿ ಕೌರವ |
ನೆಸೆವ ಮಕ್ಕಳ ಕೊಂಡುವಡಿದಡೆ ದುಃಖವೇ ನಿನಗೆ ||
ಅಸುವ ನೆಳವೆಗದರಿಯನಲ್ಲದೊ | ಡಸುವನನ್ನಿಯೊಳೀಡುವೆ ಗಡ ನೀ |
ನುಸುರಿದುದೆ ತತ್ವವೆ ಬಿಡೆಂದಾರ್ದೆಚ್ಚನಾ ದ್ರೋಣ || ೨೪ ||

ಎಚ್ಚನಮ್ಮಯ ಗುರುವೆನುತ ಮೈ | ವೆರ್ಚಿ ಕೂರ್ಗಣೆಯನು ತಿರುವಿನೊಳ |
ಮರ್ಚಿತೆಗದೆಸೆ ಪರಿದವಿದಿರೈತಪ್ಪ ವಿಶಿಖವನು ||
ಕೊಚ್ಚಿದವು ಕುಂಭಜನ ಬಲಗೊಂ | ಡೊಚ್ಚತದಲೆರಸಿದವು ದಿಟ್ಟಿ ಜಿ |
ದಚ್ಚರಿಯದೆನೆ ಬಿಲ್ಲಬಿಜ್ಜೆಯ ತೋರಿದನು ಪಾರ್ಥ || ೨೫ ||

ನೋಟಕರ ಕಣೀರ್ವರಂಬುಗ | ಳಾಟವಾಗಸದೊಳಗೆ ಮರಸು |
ತ್ತಾಟವೆನೆ ಹೊಸ ಚಿಟ್ಟು ಮುರಿಯಾಟವನೆ ಪರಿಮರಿಯ ||
ಆಟವನೇ ಪರಿದಾಡಿದವು ಬಲು | ತೋಟಿಯಲಿ ಕಿಡಿಕೆಂಡವನು ಮೊನೆ |
ನಾಚಿ ಸುರಿದವು ಫಲ್ಗುಣ ದ್ರೋಣರ ಸಮರದೊಳಗೆ || ೨೬ ||

ಮೊನೆಮೊನೆಗೆ ಕಾಳಗವು ಹಿಳುಕಿಗೆ | ಮೊನೆಗೆ ಜಗಳವು ನೂಂಕು ವಂಬಿನ |
ಮೊನೆಗೆ ಮರಳುವ ಹಿಳುಕಿಗಾಹವ ಹಿಳುಕು ಹಿಳುಕುಗಳ ||
ಮೊನೆಮೊನೆಯ ಸಮಜೋಳಿಯೇವೇ | ಳ್ವೆನು ಹಿಳುಕು ಹಿಳುಕುಗಳ ಯುದ್ಧವು |
ಘನಪಥದೊಳಾಯ್ತಂದು ಪಾರ್ಥದ್ರೋಣರೆಚ್ಚಾಡೆ || ೨೭ ||

ಗುರುವೆ ಮಝ ಭಾಪಮಮ ಕಾರ್ಮುಕ | ಪರಮ ವಿದ್ಯಾ ಭಾಳಲೋಚನ |
ಸರಳಜಾಣ್ಮೆಯ ತೋರಿದಿರೆಯೆಂದೊಡೆಯಾನರಿದೆಚ್ಚು ||
ತುರಗವಿರ್ದೆಸೆಗೋಡೆ ಮೊಗನುಡಿ | ದುರುರಥವ ಹೋಳಾಗೆ ನೆಲಕವ |
ತರಿಸಿ ದ್ರೋಣಾಚಾರ್ಯನಿಂದನು ಬರಿಯ ಬಿಲುವಿಡಿದು || ೨೮ ||

ಅರಿಪಿದಾ ವಿದ್ಯೆಯನು ಶಿಷ್ಯನು | ಮರೆದನೋಯೆನೆಂದು ಪರಿಕಿಪ |
ತೆರದಿ ಕಣೆವಿನ್ನಣವ ತೋರ್ದಿರಿಕಲಿಸಿದಂದದಲಿ ||
ತರಿದೆನಲ್ಲದೆ ನಿಮ್ಮ ಬಾಣಕೆ | ಮರುಸರಳ ತೊಡಬಲ್ಲ ಬಲು ಬಿ |
ಲ್ಲೆರೆಯನವನಾರೀ ತ್ರಿಕೋಕದೊಳೆಂದನಾ ಪಾರ್ಥ || ೨೯ ||

ಎಂದು ದ್ರೋಣಾಚಾರ್ಯನು ಬಲ | ವಂದುದಾ ರಥ ಕೃಷ್ಣಬೋಧಿಸೆ |
ಮುಂದೆ ಭರದಲಿ ಪೋಗುತಿರೆ ಗಾಂಗೇಯರಿದಿರಾಗೆ ||
ತಂದೆಗಳು ಗುರುಗಳು ವಿಚಾರಿಪ | ದೊಂದೆ ಸರಿಯೆಂಬಂತೆ ಕುಂಭಜ |
ನಂದವನೆ ಸಿಂಧುಜಗೆ ಮಾಡಿದನಿಂದ್ರನಂದನನು || ೩೦ ||

ಬಳಿಕವರನಭಿವಂದಿಸುತ ಮುಂ | ದಳವಿಗಳಿದೊಳ ಪೊಗಲು ಕೇಸರಿ |
ಕೆಳರ್ದವೊಲು ದುಶ್ಯಾಸನನು ತಾಗಿದೊಡೆದೇನೆಂಬೆ ||
ಕೊಲೆಗೆ ಪೇಸದೆ ಕೊಂದನಾತನ | ಬಲ ಚತುಷ್ಕವನೆಚ್ಚು ಮತ್ತರೆ |
ಫಳಿಗೆಯಲಿ ದುಶ್ಯಾಸನಗೆ ವಿರತತೆಯನಾಗಿಸಿದ || ೩೧ ||

ಸಂದುದಾಗಳು ಮೂರು ಜಾವವು | ಒಂದು ಪಡೆಯಲಿ ಬೇಗದಲಿ ಪರಿ |
ತಂದು ರವಿಯಸ್ತಮಿಸನೇಕೆಯೊಯೆಂದು ಚಿಂತಿಪುದು ||
ಒಂದು ಪಡೆ ಬಯಸುವುದು ಭಾನುವ | ಮಂದ ಗಮನವನಿನ್ನು ಜಾವಕೆ |
ಬೆಂದು ಹೋಗದೆ ಮಾಣನರ್ಜುನನೆಂದನಾ ನೃಪತಿ || ೩೨ ||

ತ್ರಿಪುರದಹನಕೆ ರೌದ್ರದಿಂ ಬಹ | ತ್ರಿಪುರವೈರಿಯೊಲಾರ್ದು ಪಾರ್ಥನು |
ಕುಪಿತಮನನೊಡ್ಡಣೆದುನೆರೆನಿಲೆ ಕಂಡು ಸೈಂಧವನು ||
ನೃಪತಿ ಪೇಳ್ದಂತಿರಲು ಪಾರ್ಥನ | ವಪುವಳಿವುದೆಂದಾನದಾಂ ನಿಂ |
ದಪೆನೆ ತನ್ನಾಳ್ತನಕೆ ಹಾನಿಯದೆಂದು ಬಗೆದಂದ || ೩೩ ||

ಎಲವೊ ಸೈಂಧವ ನನ್ನ ಮಗನನು | ಕೊಲುವ ವೀರನೆ ನೀನೆ ಭಟರೂಡ |
ಲಲಿಸುರಿದು ಕಣೆತೀರದಡೆ ಕೈಮೆರೆದೆವೆಲೆ ನಿನ್ನ ||
ತಲೆಗೆ ಖೇಚರ ಪದವಿ ಘಟಿಸುವ | ಘಳಿಗೆ ಬಂದಿದೆ ಅಡಗದಿರು ನಿ |
ನ್ನಳಿಬಲದ ಹೊದರಿನೊಳಗೆಂದು ಕಿರೀಟಿ ಘರ್ಜಿಸಿದ || ೩೪ ||

ಕುಲಗಿರಿಯ ಮಲೆ ಸಾರಿದೊಡೆ ಭೂ | ತಲದೊಡಲನುರೆ ಬಗಿದು ಪೊಕ್ಕೊಡೆ |
ಜಲಧಿಯುದರದಲಡಗಿದರೆ ದಿಕ್ಪಾಲಕರ ಬೆನ್ನ ||
ನೆಳಲಲಿದ್ದಡೆ ಅರಸಿ ತಂದೀ | ಘಳಿಗೆಯಲಿ ನಿನ್ನಸುವನೊಡಲಿಂ |
ದೆಳೆಯದಿರೆ ಮೈಗರೆಯದಿದರಾಗೆಂದನಾ ಪಾರ್ಥ || ೩೫ ||

ಮರೆದು ಮಲಗಿದ ಕೇಸರಿಯ ನೆ | ಚ್ಚರಿಸುವುದು ಗಡ ವನಕರಿಯು ಕಣು |
ದೆರಯಿಪನು ಗಡ ಹಸಿದ ಮಾರಿಯ ಮುಂದೆ ನಿಂದೋರ್ವ ||
ನೆರೆದ ಸರ್ಪನು ಗರುಡ ಪಕ್ಷದ | ಗರಿಯ ಕಿಳ್ತಿಡುವುದು ಗಡೆನ್ನನು |
ಜರೆದು ಕರೆವುದು ಲೇಸುಮಗನನು ಕಾಣ್ಬೆ ನೀನೆಂದ || ೩೬ ||

ಕಡು ಮಸಗಿ ಸೈಂಧವನು ತನ್ನಯ | ಪಡೆಯ ನೂಂಕಲು ಬೆಟ್ಟ ಬೇಸಗೆ |
ನಡುಹಗಲ ರವಿಯಂತೆ ಕಿಡಿಯೋಗುತರ್ಜನನು ||
ತೊಡಚಿದನು ತಿರುವಾಯ್ಗೆ ಹಿಳುಕನು | ಕಡಿವಹಿಲದಲಿ ತೆಗೆದು ತನ್ನಯ |
ಮುಡುಹಿ ನಡೆಯಲಿ ಹಿಳುಕನೊಡೆದನದೇನ ಹೇಳುವೆನು || ೩೭ ||

ಶರಧಿಯಿಂ ತೆಗೆವಾಗಲೊಂದದು | ತಿರುವಿಗಿಡಲೀರೈದು ಬಿಡೆನೂ |
ರಿರದೆ ಪರಿವೆಡೆಯಲ್ಲಿ ಸಾಸಿರವರಿ ಶರಂಗಳನು ||
ಅರಿವೆಡಗೆ ಲಕ್ಷವದು ರಿಪು ಸಂ | ಹರಣದಲಿ ಕೋಟಿಯು ಬಳಿಕ ಸಂ |
ಗರನಭೋಂಗಣವೆಲ್ಲ ವಿಸುಮಯವಾದವರ್ಜುನನ || ೩೮ ||

ಹಸಿದ ಜವನಾರೋಗಿಸಿದ ಪೆಂ | ಪೆಸೆವ ಪರಿಯಣದಂತೆ ಕಣನಿರೆ |
ವಸಗಿ ನಿಜವಾಹಿನಿಯ ಮಣ್ಮಳಿಯಾದುದನು ನೋಡಿ ||
ನೊಸಲ ಕಣ್ಣಿಂದೀಶ್ವರನೊಯೆನಲ | ರ್ಪಿಸಿ ಜಯಧ್ರಥನಾ ವರೂಥವ |
ನಸಮ ಭುಜಬಲನಿದಿರು ನೂಂಕಿದನತಿ ವಹಿಲದಿಂದ || ೩೯ ||

ಲೇಸುಮಝ ತುಳಿಲಾಗೆ ನಿನಗಿಂ | ತೀಸು ವಿಕ್ರಮವಿಲ್ಲದೊಡೆ ತ |
ನ್ನ ಸುತನ ಕೊಲಲಾಪೆಯಾ ಕೈಮಾಡು ಮಾಡೆನಲು ||
ಆಸಿಸುವ ಕೊಂದೊಂದು ಬಲುಕಡು | ಸಾಸಿಯಹ ನಿನ್ನೊಡಲ ರಕುತವ |
ಸೂಸಿ ಹರಣವನೆಳೆವೆನೆಂದಚ್ಚನು ಜಯಧ್ರಥನು || ೪೦ ||

ಸರಳುಗಳು ಹಿಂದಿಕ್ಕಿ ಹಿಂದಣ | ಸರಳುಗಳು ಹರಿದವು ಕಿರೀಟಿಯ |
ಹೊರೆಗೆ ಮಝ ಬಿಲ್ಲಾಳ ಲೇಸೆಂದಾ ಕಪಿಧ್ವಜನು ||
ಕರಳ ಸರಳಿಂ ಕಡಿದು ಹಸ್ತದ | ಸರಿಯೆನಲು ನಿಜಹಸ್ತದಿಂ ಬಲು |
ಸರಳಮಳೆಯನು ಕರೆದನದುಭುತವಾಗೆ ಸಂಗರವು || ೪೧ ||

ಅರರೆ ಸೈಂಧವನೇಂ ಪ್ರತಾಪಿಯೊ | ಸುರಪ ಸುತನೆಚ್ಚಂಬ ನಡೆಗಡಿ |
ವರಿಸು ಭಟನಾವನೊ ಸವರಿದನು ಸರಳಸರಿವಳೆಯ ||
ಕೆರಳಿ ಮಧ್ಯಮ ಪಾಂಡವನು ಮುಳಿ | ದಿರದಿವನು ತೋರವನು ಮಾಡುವ |
ಪರಿದಿದೇಕೆಂದೊಂದು ಬಾಣವ ತಿರುವಿಗೊಂದಿಸಿದ || ೪೨ ||

ದೇವ ದಾನವ ಮತ್ಸ್ಯರೊಳಗಿ | ನ್ನಾವನಾಗಲಿ ಸೈಂಧವನ ತಲೆ |
ಗಾವುದೆಡೆಯಲಿ ವೀರವುಳ್ಳಡೆ ನಾಂ ಪ್ರತಿಜ್ಞೆಯನು ||
ಕಾವೆನಲ್ಲದೆ ಇವನ ತಲೆಯನು | ಕಾವವನ ಲೆಂದೊದರಿ ಫಲುಗುಣ |
ತೀವಿ ತೆಗೆದೆನೆ ಹಾರಿ ಕೆಡೆದುದು ತಲೆ ಜಯದ್ರಥನ || ೪೩ ||

ಮೊಳಗಿದುದು ಜಯಪಟಹ ಪಾಂಡವ | ಬಲದೊಳಗೆ ಚತುರಾಸ್ಯ ಪುತ್ರನು |
ನಲಿದನಾಗಸದೊಳಗೆ ಮಝರೇತಾಂ ಪ್ರತಿಜ್ಞೆಯನು ||
ಉಳುಹಿಕೊಂಡನು ಪಾರ್ಥನೆಂದೀ | ರ್ವಲದೊಳಗೆ ಕಳಕಳವು ಪೆರ್ಚಿತು |
ಕಳಿದ ತಾವರೆಯಾಯ್ತು ಫಣಿಕೇತನನ ಸಿರಿಮೊಗವು || ೪೪ ||

ಸಿಡಿದ ಸೈಂಧವ ಶಿರದ ರಕುತವು | ಮಿಡಿದು ತಾಗಿತೊಯೆಂದು ಶಂಕಿಸಿ |
ಪಡುಗಡಲ ಮುಳುಗಿದ ತೆರದಿಯಪರಾಬ್ಧಿಗಿನನಿಳೆಯೆ ||
ಪಡೆಯೆರಡು ತೆಗೆದವು ಹರಿಯ ಪೆ | ರ್ವಡೆಯೆ ನೈದಿದನರ್ಜುನನನುಜ |
ನುಡಿದುದಾ ಪಾರ್ಥಾಭಿಮನ್ಯುವ ವೀರದೆಸಕವನು || ೪೫ ||

|| ಅಂತು ಸಂಧಿ ೪೯ಕ್ಕಂ ಮಂಗಲ ಮಹಾ ||