ಸಂಧಿ ೫೨
ತರಣಿ ತನುಜನು ಪಾಂಡವರನಾ | ಲ್ವರನ ಗೆಲಿದನು ಅತ್ತ ಬಲಭ |
ದ್ರನು ಕೆಡಹಿದನು ನಾಲ್ಕು ಸಾವಿರ ಮಕುಟಬದ್ಧರನು || ಪದ ||
ವಸುಮತಿಯೊಳಾ ಸೂರ್ಯತನುನ | ವಿಷ ಮರಣವನು ಸೂರ್ಯನೊಲಿದೀ |
ಕ್ಷಿಸಲು ಬಂದವೊಲುದಯಗಿರಿ ಪೀಠವನಲಂಕರಿಸಿ ||
ಬೆಸಸನಕೆ ಬಂದೊಡ್ಡಿದವು ಘೂ | ರ್ಣಿಸಿತು ಭಯ ಬಲವೆಂದಿನಂದದಿ |
ನಸಮ ಭುಜಬಲ ಕರ್ಣ ತಲೆದನು ವೀರ ಪಸದನವ || ೧ ||
ಪುದಿದ ವಜ್ರದ ಕವಚ ವೊಸೆದಿ | ಕ್ಕಿದ ಸುರತ್ನದ ಮಕುಟ ಕುಂಡಲ |
ಕದಪ ಚುಂಬಿಸೆ ವೀರರಸ ಕಾಸಾರವೆನೆ ಮೊಗವು |
ಹೊದೆಗಳಡಸಿದ ಬತ್ತಳಿಕೆ ಬೆಂ | ಗೊದವೆ ಪರಭೀಕರ ಶರಾಸನ |
ವದು ವಿರಾಜಿಸೆ ವಾಮಕರದಲಿ ಬಂದನಾ ಕರ್ಣ || ೨ ||
ಮುಗಿಲುಮುಟ್ಟುವ ವಾಯಸದ ಪಳ | ಯಿಗೆ ಸುವರ್ಣದ ಕಳಸವಿಕ್ಕಿದ |
ನೆಗೆದ ಸತ್ತಿಗೆ ನೆಳಲೊಳಾ ಮಣಿರಥವನಾರ್ದೇರಿ ||
ದಿಗಿಭಗಳು ಘೀಳಿಟ್ಟುವೆನೆ ಕೈ | ಮಿಗೆ ಬಡಿವ ನಿಸ್ಸಾಳಗಳ ಬೊ |
ಬ್ಬೆಗಲು ಪಬ್ಬಲು ಬಂದನೊಂದಕ್ಷೋಹಿಣಿಯು ಸಹಿತ || ೩ ||
ಬಂದು ಪಾಂಡವ ಬಲದಿದಿರೆ ತರಿ | ಸಂದು ಹೂಣಿಸಿಯೇರಿದನು ರವಿ |
ನಂದನನು ನಿರ್ದಯಯ ನಿರ್ವಲನಡಸಿ ತಾಗಿದುದು ||
ಒಂದು ಕಡೆಯಲಿ ಸರಳ ಸರಿ ಬೇ | ರೊಂದು ಕಡೆಯಲಿ ಬಾಳದಾಳಿಗ |
ಳೊಂದು ಕಡೆಯಲಿ ಸಬಳ ಕಬಳಿತವದುದಾಹವವು || ೪ ||
ಕಾದಿ ಮಣ್ಮಳಿಯಾಗೆ ನಿಜಬಲ | ವಾ ದಿನೇಶನ ಸೂನು ಸಾರಥಿ |
ಚೋದಿಸಲು ವರರಥವನೊಳಪೊಗುವಧಟನೀಕ್ಷಿಸುತ ||
ಮೇದಿನಿಯನದಿರಿಸುತ ಗಗನವ | ಭೇದಿಸುತ ಸಿಂಹಧ್ವಜದ ಸುವೃ |
ಕೋದರನ ರಥವತಿ ಭರದಿನಿದಿರಾಯ್ತು ಕರ್ಣಂಗೆ || ೫ ||
ದುರುಳ ಸೂತನ ಮಗನೆ ನಿನಗೀ | ಹರಿದು ಬಹುದಕೆ ಯಮುನೆಯೋ ಸಂ |
ಗರಧರಾತಳವಂಬಿಗರೊ ಮೇಣ್ ನಿನ್ನ ತೆತ್ತಿಗರೊ ||
ಕುರುಪತಿಯ ದುರ್ನಯವ ರಾಜ್ಯಕೆ | ಹಿರಿಯ ನಾಯಕ ಸೇನೆ ಎಂದ |
ಬ್ಬರಿಸಿ ಕೆಂಗರಿಗೋಲ ಸುರಿದನು ಭರದಿ ಕಲಿಭೀಮ || ೬ ||
ಹರಿದು ಮುಸುರುವ ಕಣೆಗಳನು ಕ | ತ್ತರಿಸಿದನು ಕೂರಂಬಿನಿಂ ನೀಂ |
ಮರುತ ಸುತನಹುದಹುದದಲ್ಲದಡಿಂತು ತೇಲುವವೆ ||
ಹರಿದು ಬಹ ನಿನ್ನಂಬುಗಳ ನೀ | ನೊರೆದವೊಲು ಕಣನಿದಿಯಮುನೆನೀಂ |
ಪಿರಿಯ ಮೀನೆಂನಂಬುವಲೆಯಲಿ ಸಿಲುಕಿಸುವೆನೆಂದ || ೭ ||
ಎಂಬನುಡಿ ಹಿಂಚಿದುದು ರವಿಸುತ | ನಂಬು ಮುಂಚಿದುದೇನನೆಂಬೆ ಹಿ |
ಡಿಂಬಕಾರಿಯ ಸಾರಥಿಯ ಕೊರಳಂತೆ ಬಿಲ್ಲುಡಿಯೆ ||
ಮುಂಬರಿವ ಕುದುರೆಗಳು ಪಳಯಿಗೆ | ಗಂಬದಂದದಿ ಕಡೆಯೆ ನೆರೆನಿಟಿ |
ಲಾಂಬಕನವೊಲು ಮಸಗಿ ಗದೆಕೊಂಡನು ವೃಕೋದರನು || ೮ ||
ಗದೆಯ ತಿರಹುತ ರಥದಿ ದುಮ್ಮಿ | ಕ್ಕಿದಿರೆ ಪರಿತರೆ ಕರ್ಣ ಕೈಚಳ |
ಕದಲಿ ದಿವ್ಯಾಸ್ತ್ರವನು ತೊಟ್ಟೆಸಲಂಬು ಕೊಳಲೊಡನೆ ||
ಅದಿರೆ ಭೂತಳ ಕುಲಗಿರಿಯ ಕೆಡೆ | ದುದೊಯೆನಲು ಬಿರುಬಿದ್ದನಾಗಳು |
ಪುದಿದ ಮೂರ್ಛೆಯಲೆರಡನೆಯ ಪಾಂಡವನು ಧುರಧರೆಗೆ || ೯ ||
ಬೀಳೆನುತ ಬೊಬ್ಬಿರಿದ ಕರ್ಣನ | ಬಾಳೆನುತ ಕುರುಬಲವು ಹೊಗಳಿತು |
ಸೂಳಯಿಸಿದುದು ಜಯಪಟಹ ಕೌರವನ ಪಡೆಯೊಳಗೆ ||
ತೋಳು ನಾಲ್ಕಾಯ್ತಾಗ ಕುರುಭೂ | ಪಾಲಕಗೆ ಪಾಂಡವರ ಬಲದೊಳು |
ಗೋಳುಗುಟ್ಟಿದರರೆಬರೆಲೆ ಭೂಪಾಲ ಕೇಳೆಂದ || ೧೦ ||
ಜನವು ಮೂರ್ಛಿಸಿ ಬೀಳೆ ಕಾಣುತ | ತನುಜನುದ್ಘ ಘಟೋದ್ಗಜನು ಬಿ |
ದ್ದನಿಲಜನ ಪಿಂತಿಕ್ಕಿ ರುದ್ರನಕಾಯ್ಪನೊಳಕೊಂಡು ||
ಕನಕಮಣಿಯ ರಥದಲಾರ್ದಂ | ಬಿನ ಮಹಾಮಳೆಗರೆಯೆ ಹರಿದುವು |
ಮೊನೆಯ ಹೊಳಹಿನಗರಿಯ ಮೊರಹಿನ ಬಿಂಕಝಂಕೆಯಲಿ || ೧೧ ||
ಅಡಸಿ ತಾಗಿದವವುಕಿದವು ಜೋ | ದೊಡೆದವೆಡೆಯುಚ್ಚಲಿಸಿದವು ಬೆಂ |
ಗಡೆಗೆ ಮೊನಸಿದವುಚ್ಚಿ ಹಾಯ್ದವು ರಿಪುಹರಣವೆರಸಿ ||
ಪೊಡವಿ ಪತಿಯಾ ಸೇನೆಯಲಿ ಸಂ | ಗಡಿಸಿದೊಂದಕ್ಷೋಹಿಣಿಯ ಮಾ |
ರ್ಪಡೆಯನೆಲ್ಲವ ತಿಂದವಂಬುಗಳನಿಲಜಾತ್ಮಕನ || ೧೨ ||
ಅಂದು ಪಾರ್ಥನ ಸೂನುರಿಪುಗಳ | ಕೊಂದೊವೊಲು ಭೀಮಾತ್ಮಜನು ನೆರೆ |
ಕೊಂದನೊಂದಕ್ಷೋಹಿಣಿಯನೆಂದಾರ್ದು ಕಲಿಕರ್ಣ ||
ಸಂದ ಶಕ್ತಿಯನಿಡಲುಮಿಗೆ ಭೋ | ರೆಂದು ಪರಿತಹ ಭರಕೆ ಜಿನಜಿನ |
ಯೆಂದನಾ ನಾರದನು ಕಂಗೆಟ್ಟುದು ಮಹಾಕಟಕ || ೧೩ ||
ಸುರಪನಿಟ್ಟಡೆ ವಜ್ರವದು ಭೂ | ಧರವನೊಡೆದೊಳಪೊಕ್ಕವೊಲು ನಿ |
ಷ್ಠುರದ ಶಕ್ತಿಘಟೋದ್ಗಜನ ಪೇರುರವನೊಡೆದೊಳಗೆ ||
ನೆರೆ ಸಿಲುಕಿದುದು ಬಿಲ್ಲು ಬಿಸುಡದೆ | ಧುರಧರೆಗೆ ಧೊಪ್ಪನೆ ಕೆಡೆಯೆ ಬೊ |
ಬ್ಬಿರಿದುದಾ ಕುರುಬಲವು ಜಯದುಂದುಭಿಯ ದನಿಯೊಳಗೆ || ೧೪ ||
ವರಯುಧಿಷ್ಠಿರ ರಾಯನಿರದನಿ | ಬರನು ಪೆರಗಿಕ್ಕಿದಿರೆ ಮಣಿರಥ |
ಪರಿದು ಬರೆದೊಡೆಕಾಯ್ಪಿನಿಂದ ದಿವಾಕರಾತ್ಮಜನ ||
ಬೆರಳ ಕೊನೆಯಲಿ ತಿರ್ರತಿರ್ರನೆ | ತಿರುಹಿಯಿಟ್ಟನು ಕಾದುಕೊಳ್ಳೆಂ |
ದುರು ಭಯಂಕರವಾದ ಪಾರುಂಬಳೆಯನಾಜಿಯಲಿ || ೧೫ ||
ಬೋಳೆಯಂಬಿನಲೆಚ್ಚು ಚಕ್ರವ | ಹೋಳುಗಳೆದನು ಕರ್ಣನಾ ಭೂ |
ಪಾಲನಾಗಳು ಕಕ್ಕಡೆಯನನುಗೈದು ಪೂಣ್ದಿಡಲು ||
ಕೋಲಲದನುಡಿದೊತ್ತಿ ಸೂರ್ಯ ನೃ | ಪಾಲನಾತ್ಮಜ ತನ್ನೊಳಗೆ ತಾಂ |
ಪೇಳಿದನು ಕೊಲಬಾರದಹಿತನ ಕೊಲುವುದೆಂತೆಂದ || ೧೬ ||
ಅರರೆ ಮಝ ಮಾರಂಕದುರ್ಧರ | ಪುರ ಮಹೀಶ್ವರನರ್ಕಜನು ಮ |
ತ್ತರಗಳಿಗೆಯೊಳೆ ನೋಟಕರ ಕಂಗಟ್ಟಿದಂದದಲಿ |
ಶರಶರಾಸನ ಕವಚರಥಗಳ | ಹರಿಯಲೆಸೆಕಾಲನ ಕುಮಾರನು |
ಬರಿಯ ಕೈಯಲಿ ನಿಂದನಾ ಕೆಲಬಲನನೀಕ್ಷಿಸುತ || ೧೭ ||
ಧರ್ಮಶಾಸ್ತ್ರವನೋದಿ ಬದುಕಿದ | ಧರ್ಮರಾಯನು ನೀನಲೈ ಜಿನ |
ಧರ್ಮದೊದವನು ಬಲ್ಲವರಿಗೀ ಯುದ್ಧಪದ್ಧತಿಯು ||
ಧರ್ಮವೇ ಕೌಂತೇಯ ಹೋಗೈ | ಕಾರ್ಮುಕಕೆ ನೃಪಹಂಸನಿದಿರಹ |
ಪೆರ್ಮೆಯುಂಟೇ ಪಾರ್ಥನನು ಕರೆಯೆಂದನಾ ಕರ್ಣ || ೧೮ ||
ಯಮಸುತನ ಪೆರಗಿಕ್ಕಿಯೀರ್ವರು | ಯಮರೆನಲು ಮದ್ರಿಯಕುಮಾರಕ |
ರಮಮನಾರಾಚಗಳನಾರ್ದೆಡೆವಿಡದೆ ಮಿಗೆಸುರಿಯೆ ||
ಅಮರಗಿರಿಯೆನೆ ನಿಂದು ಶರವರು | ಷಮನು ಖಂಡಿಸಿ ಬಿಸುಟನರರೇ |
ದ್ಯುಮಣಿ ತನುಜನ ಸಂಗರದಳೊಡ್ಡುವ ಸುಭಟನಾರೊ || ೧೯ ||
ಕೊಂತಗಳ ಪಿಡಿದಿಟ್ಟರಹಿತ ಕೃ | ತಾಂತನೆನಿಪಂಗಾಧಿ ನಾಯಕ |
ನಂತಕನ ದಾಡೆಗಳೆರಡು ಬಹುತೆರದಿ ಬರೆಕಂಡು ||
ಕಂತು ಕೊಂತವಯೋಗಿ ಹರಿಗಡಿ | ದಂತೆ ತುಂಡಿಸಿ ಕೆಡಹಿದನು ಬಹ |
ಕೊಂತವೆರಡನು ದಿವ್ಯಬಾಣದಿ ರಾಧೆಯಾತ್ಮಜನು || ೨೦ ||
ವಿರಥರನು ಮಾಡಿದನು ಬಳಿಕೊಂ | ದರೆಘಳಿಗೆಯಲಿಯಮಳುಗಳನಾ |
ಹರನ ಹಣೆಗಣ್ಣುರಿಯ ನಂದಿಸಿದವಗೆ ಖದ್ಯೋತ ||
ಉರಿಯವೊಲು ತೋರುವುದೆ ಕೌಂತೇ | ಯರಿಗುಗಳು ನೀರೆನಲು ಬಡವೆಯ |
ತರುಣರಿಗೆ ನಿವಗೇಕೆ ಸಂಗರವೆಂದನಾ ಕರ್ಣ || ೨೧ ||
ಅತ್ತಲರ್ಜುನನಾಂತು ಚಕ್ರಿಯ | ಮತ್ತ ವಿದ್ಯಾಧರನ ವಿದ್ಯಾ |
ಯತ್ತ ಯುದ್ಧದಿ ಕಾದಿ ಮಿಗೆ ಸಂಹರಿಸುತಿರಲೊಡನೆ ||
ಇತ್ತಲಾ ನಗಧರನ ಕಟಕದ | ಲೊತ್ತಿ ಚಕ್ರಿ ತನೂಭವನು ಕಾ |
ದುತ್ತಲಿರ್ದನು ಕಾಲವಯನವನೀಶ ಕೇಳೆಂದ || ೨೨ ||
ಬಂದುದೊಂದಕ್ಷೋಹಿಣಿಯ ಬಲ | ವಂದು ಭೋರೆನೆ ಕಾಲವಯನವನೊಡ |
ವಂದರೊಪ್ಪುವ ಮಕುಟಬದ್ಧರು ನಾಲ್ಕು ಸಾಸಿರವು ||
ದುಂದುಭಿಯ ಮೊಳಗಿಸುತತಾಗಲು | ಬಂದನಾ ಬಲಭದ್ರ ಬಿಲುಗೊಂ |
ಡಂದು ತಾಳಧ್ವಜವರೂಥದಿ ತುಂಬಿತೆಗೆದೆಸುತ || ೨೩ ||
ಎನಲು ಮೂಡಿಗೆ ಯಾದವಹಿತರ | ಮಿಸುಪ ಮೈಗಳು ಬಾನೊಳಗೆ ಸಂ |
ಧಿಸಿದವಾಗಳದೊಂದು ಜ್ಯೋತಿರ್ಲೋಕವೆಂಬಂತೆ ||
ಎಸೆವ ರನ್ನದ ಮಕುಟಗಳು ಕೀ | ಲಿಸಿದ ಪಂದಲೆವಿಂಡುನೆತ್ತರ |
ರಸಧಿಯಲಿ ತೇಂಕಾಡಿದವು ಗಜಹಯ ಕದಂಬಗಳು || ೨೪ ||
ಹರಹಿಬಿದ್ದುವು ನಾಲ್ಕು ಸಾಸಿರ | ವರಮಕುಟ ಬದ್ಧರ ಶಿರಂಗಳು |
ಧುರವ ನೋಡಲು ನಿಮಿರಿದರೊ ಫಣಿಪತಿಗಳೆನೆ ತೊಲಗೆ ||
ವರ ಜರಾಸಂಧಂಗೆ ಮೊದಲಿದು | ಪರಿಭವಕ್ಕಾ ಸಮಯದಲಿ ಮೈ |
ಮುರಿದು ಭೀಮಘಟೋದ್ಗಜರು ತಾವೆದ್ದು ನಿಲಲೊಡನೆ || ೨೫ ||
ಇನತನೂಜರ ರೋಹಿಣೀ ಪು | ತ್ರನ ಮಹಾರಣವಾರ್ತೆಯನು ಸಂ |
ಜನಿತ ರಾಗದ ಪಡುವ ಮಡದಿಗೆ ಪೇಳಲಿಕೆ ಭರದಿ ||
ದಿನಕರನು ಪೋದಂತೆಯಪರಾಂ | ಗನೆಯನಪ್ಪಿದನತ್ತಲಿತ್ತಲು |
ಅನುವರವನುಳಿದೀರ್ವಲವು ಪೊಕ್ಕುದು ಶಿಬಿರಗಳ || ೨೬ ||
ಇರುಳಿನೋಲಗದೊಳಗೆ ಪಾಂಡವ | ಹಿರಿಯ ಪುತ್ರನು ಕರ್ಣನನು ಗೆಲ |
ಲರಿದು ದೋರ್ದರ್ಪದಲಿ ಪೆಚ್ಚಿದನೆಂದು ಚಿಂತೆಯಲಿ ||
ಪಿರಿದು ಪೊತ್ತನು ಕಲಿಯಲೋಲಗ | ಪರೆದು ಕಣ್ಣೈವನಿತರೊಳು ಓ |
ಸರಿಸಿತಿರುಳಿನ ಜವ್ವನವು ಭೂಪಾಲ ಕೇಳೆಂದ || ೨೭ ||
|| ಅಂತು ಒಟ್ಟು ಸಂಧಿ ೫೨ಕ್ಕಂ ಮಂಗಲಮಹಾ ||
Leave A Comment