ಸಂಧಿ ೫೩

ದ್ರೋಣದ್ರುಪದನು ಕೊಂದು ವಿಗತ | ಪ್ರಾಣನಾದನು ರಾಯನನುಜರ |
ನಾಣೆಯಿಟ್ಟವೊಲಟ್ಟಿದನುಯಮಪುರಕೆ ಕಲಿಭೀಮ || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಪಾಂಡವಸುತರು ಕರ್ಣನ |
ತೋಳ ಬಲುಹಿಂಗಾನಲಾಫರೆ ಘಾಸಿಯದರೆಲೆ ||
ನಾಳೆ ರವಿಸುತಗಾಂತಡಳಿವರು | ಭೂಲಲನೆ ತನಗೆಂದೆ ಕುರುಭೂ |
ಪಾಲನತಿರಾಗಿಸಿದವೊಲು ರಾಗಿಸಿತು ಪೂರ್ವಾಸೆ || ೧ ||

ಮೂಡವೆಣ್ಣೊಲಿದಿಟ್ಟ ಚೆಲುವಿಗೆ | ರೂಢಿಸಿದ ಕುಂಕುಮದ ಬೊಟ್ಟೋ |
ಮೂಡಣಾನೆಯ ಫಣೆಯ ಸಿಂಧೂರದ ಸಂಘಾಟಿಕೆಯೊ ||
ಮೂಡವೆಟ್ಟದ ತುದಿಯರನ್ನದ | ಕೋಡುಗಲ್ಲೋಯೆನಿಸಿ ನೇಸರು |
ಮೂಡಲೀರ್ವರ ವೊಡ್ಡಿ ನಿಂದುದು ಮುನ್ನಿನಂದದಲಿ || ೨ ||

ಸೌಂದರಾಂಗ ನೃಪಾಲಕನನುರು | ನಂದನ ಕ್ಷಿತಿಪಾಲಕನನೋ |
ರಂದದಲಿ ತಂತಮ್ಮ ಸಾಧನವೆರಸಿ ಮುರವೈರಿ ||
ಸಂದ ಚಕ್ರಿಯ ಮೊನೆಗೆನೂಂಕಲು | ದುಂದುಭಿಯ ಮೊಳಗಿಸುತ ವೀರದ |
ಗುಂದಲೆಯ ಭಟಕೋಟಿಸಹ ಬಂದೊಡ್ಡಿನಿಲಲೊಡನೆ || ೩ ||

ಆರು ಸಾವಿರ ಮಕುಟಬದ್ಧರು | ಏರಿದರು ರಥಗಳನು ಬಹುಪರಿ |
ವಾರ ಸಹವಾ ಚಕ್ರಿಯನುಜನು ಶಂಕುಕರ್ಣಿನೃಪ ||
ಚೀರುತಿರೆ ಕಹಳೆಗಳು ರಜವನು | ತೂರುತಿರೆ ಪದಹತಿಯಉ ಪಡಪೊರ |
ಮಾರದೊಡ್ಡಡೆನುತ್ತ ತಾಗಿದರವರನತಿ ಭರದಿ || ೪ ||

ಕೇಣವಿಲ್ಲದೆ ಕಾದುತವರಿರೆ | ಶೋಣಹಯಗಳ ರಥದಲಮರ |
ತ್ರಾಣ ಧನುವಿದ್ಯಾ ಪ್ರವೀಣನನೇಕ ವಿದ್ಯಮಯ ||
ಬಾಣತೂಣಿಯರನು ಸಹಾಯ | ಪ್ರಾಣಕುಂಭಧ್ವಜವು ಮಿಳಿರಲು |
ದ್ರೋಣ ಬಂದೊಡ್ಡಿದನು ಬಹುಪರಿವಾರ ಪರಿವೃತನು || ೫ ||

ಕೊಡನ ಮಗನಿದಿರಾಗಿ ದ್ರುಪದನು | ಪಡೆವೆರಸಿ ಪೂಣ್ಣೊಡ್ಡಿ ನಿಂದಾ |
ಪಡೆಗದೀರ್ವರುಮೊರ್ಮೆ ಕೈವೀಸಿದರದೇನೆಂಬೆ ||
ಫಡಫಡೊಡ್ಡನು ತನ್ನ ಸರಳಿನ | ಬಡಹವನು ಕರೆದರು ಮಹಾಹವ |
ಪೊಡವಿಲಿಯ ಬಿಸಿರಕುತ ಕಾಳ್ಪುರ ಹರಿದುದೆಡೆವಿಡದೆ || ೬ ||

ಎಚ್ಚರಿರಿದರು ಕುತ್ತಿದರು ನೆರೆ | ಕೊಚ್ಚಿದರು ತಲೆಪರಿದು ಕುರುಳುಗ |
ಳುಚ್ಚಿ ಮಣ್ಮಳಿಯಾದ ಬಲವನು ಕಂಡು ಕಾಯ್ಪಿನಲಿ ||
ಪೆಚ್ಚಿದತಿ ಕೋಪದಲಿ ಗಿರಿಗರಿ | ಯಚ್ಚಡಿಸಿದವೊಲೆಸಲು ಭರದಲಿ |
ದಿರ್ಚಿದವು ಕುಂಭಜನ ಪಾಂಚಾಲನ ವರೂಥಗಳು || ೭ ||

ಮರುಳ ಹಾರುವ ನಿನಗಕಟ ಸಂ | ಗರದ ಗಸಣಿಯಿದೇಕೆ ಗಲ್ಲವ |
ಮುರಿದು ಮಕ್ಕಳನೋದಿಸುವ ಮಠವೋ ಕ್ಷುದಾರ್ಥದಲಿ ||
ತಿರಿದು ಭಿಕ್ಷೆಯ ಪದೆವೊಡಿದು ಭೂ | ಸುರರ ಕೇರಿಯೊ ಯಜ್ಞಶಾಲೆಯೊ |
ಕರೆದು ದಾನಂಗೊಡುವೆಡೆಯೊ ಮಗುಳೆಂದನಾ ದ್ರುಪದ || ೮ ||

ತಿರಿದು ಜಾಣರೆ ನಾವು ಗಲ್ಲವ | ಮುರಿದು ಜಾಣರೆ ನಾವು ದಾನಕೆ |
ಕರವನೊಡ್ಡುವರಾವೆ ಕೇಳೈ ದ್ರುಪದ ಭೂವರನೆ ||
ಅರಸು ಮಕ್ಕಳು ನೀವು ಬಡ ಭೂ | ಸುರನು ನಾನದಕೇನು ನಿನ್ನಯ |
ಸರಳ ಬಲುಹನು ತೋರು ಜರೆ ಬಳಿಕೆಂದನಾ ದ್ರೋಣ || ೯ ||

ಆದೊಡದೆಯದೆ ನಿನ್ನ ತಲೆಯನು | ಕಾದುಕೊಳ್ಳೆಂದುಗ್ರ ಶರವನು |
ಸೇದಿಬಿಟ್ಟನು ಭರದಲಾ ಪಾಂಚಾಲ ಭೂಪಾಲ ||
ಆ ದಿನೇಶನ ಕಿರಣಗಲೆ ಸರ | ಳಾದವೋಯೆನೆ ಕಿಡಿಯನುಗುಳುತ |
ಹೋದವಾವರಿಸಿದವು ಬಿಲ್ಲೋಜನನು ಬಾಣಗಳು || ೧೦ ||

ದ್ರೋಣನದ ಕಂಡೆಚ್ಚ ಕಣೆಗಳ | ಕಾಣಲಾದುದು ದ್ರುಪದನೆಚ್ಚಾ |
ಬಾಣಗಳು ತಾವೆತ್ತ ಹೋದವೊ ಸಮರ ಭೂಮಿಯಲಿ ||
ಚೂಣಿಯಲಿ ಪಾಂಚಾಲ ರಾಮನ | ಹೂಣಿದವು ದಳಾತಪತ್ರದ |
ಗೋಣ ಮುರಿದವು ಕೇತುಪಟವನು ಕಡಿದವಂಬುಗಳ || ೧೧ ||

ಹಾರುವನ ಕಣೆಗಿನಿತು ಬಂದುದೆ | ಕೂರವೆಂದೊಂದಂಬ ಮಂತ್ರಿಸಿ |
ಭೋರೆನಿಸಿ ಪಾಂಚಾಲನಸ್ತ್ರವು ಗಗನ ನೆರೆಯದೆನೆ ||
ಕಾರ ಮಳೆಯಂದದಲಿ ಕಳನೊಳು | ಭೋರೆನುತ ಕರೆಯಲ್ಕೆ ರೌದ್ರಾ |
ಕಾರನಿರೆ ಮರಸುತ್ತ ನೆಚ್ಚುಳುಹಿದನಲ್ಲದವನು || ೨ ||

ಇ‌ಟ್ಟ ನೊಂದಿಟ್ಟಿಯಲಿ ದ್ರುಪದನು | ಮುಟ್ಟಿ ಬರುತಿರೆ ಕೋಲಗುರು ಕಡಿ |
ದಿಟ್ಟ ನಂಬಿಂದದನು ಪಾಂಚಾಲನು ಬಳಿಕಮುಳಿದು ||
ಇಟ್ಟನಾ ಶಕ್ತಿಯನು ತ್ರಿಪುರವ | ಸುಟ್ಟವನ ಶೂಲದ ತೆರದಿ ಕಿಡಿ |
ಗುಟ್ಟಿ ಬರುತಿರಲೆಡೆಗಡಿದನಾ ಗರುಡಿಯಾಚಾರ್ಯ || ೧೩ ||

ಕಳಸಜನು ಬಳಿಕೊಂದು ಕಣೆಯನು | ಸೆಳೆದು ಬಿಟ್ಟೊಡದೇನನೆಂಬೆನು |
ಇಳೆಗೆ ಪಾಂಚಾಲನಕ ಬಂದವು ತಲೆ ನಭೋಂಗಣಕೆ ||
ಮಲಗಿದುದು ಪಾರಿದುದು ಕೌರವ | ಬಲದೊಳಗೆ ಜಯಭೇರಿಗಳು ಮಿಗೆ |
ಮೊಳಗಿದವು ದ್ರೋಣಂಗೆ ಸಮರತ್ರಾಣನವರಾರೊ || ೧೪ ||

ತಂದೆಯಳಿವನು ಕಂಡಡೆಮ್ಮನ | ಗುಂದಿದರೆ ರೌದ್ರದಲಿ ಮಾರ್ಗಣೆ |
ಯಿಂದ ಹೂಳಿದನಾರ್ದು ದೃಷ್ಟದ್ಯುಮ್ನನಾಕ್ಷಣಕೆ ||
ಒಂದು ಕಣೆಗಳ ಕಾಣೆನನೆ ಕಣೆ | ಯಿಂದ ತರಿದನು ಬಿಲ್ಲಗುರು ಭೋ |
ರೆಂದು ಕರೆದನು ಮತ್ತೆ ಕೆಂಗರಿಗೋಲ ವೃಷ್ಟಿಯನು || ೧೫ ||

ಸಾರಥಿಯು ಮೈಮೆರೆದನಂಬಿರ | ಧಾರೆ ಸೋಂಕಲು ಸಿಂಧವುಡಿದಾ |
ಧಾರಿಣಿಗೆ ಬೀಳಲ್ಕೆ ದೃಷ್ಟದ್ಯುಮ್ನ ಕಡುಕಾಯ್ದ ||
ಕೂರವಾದೊಂದಂಬನೆಚ್ಚೊಡೆ | ಭೋರನೊರಗಿತು ಸಿಂಧವಕಟಾ |
ಹಾರುವನೊಳಮಗಾಯ್ತೆ ಹರುಬದ ಬ್ರಹ್ಮಹತಿಯೆಂದ || ೧೬ ||

ಮೂರ್ಛೆ ತಿಳಿದುದು ಸಾರಥಿಗೆ ನೃಪ | ಹುಚ್ಚು ಗೊಂಡೈ ಬ್ರಹ್ಮಕರ್ಮದ |
ಲಿಚ್ಚೆವುಳ್ಳವರಿಂತು ಪಿಡಿವರೆ ಭೀಮಛಾಪವನು ||
ನಿಚ್ಚಟದಲಾಂತವನೆ ಪಾರ್ಥಿವ | ನುಚ್ಚಿದನು ನಿಮ್ಮಯ್ಯನಸುವನು |
ಕೊಚ್ಚು ಬೇಗದಲವನ ಕಂಡವನೆಂದು ಬೊಬ್ಬಿರಿದ || ೧೭ ||

ಎನಲು ಪಾಂಚಾಲಾವನೀಶನ | ತನುಜರ್ದೆಸುವನಿತರೊಳು ನೋ |
ಳ್ಪನಿಮಿಷರ ಕಣುಗಟ್ಟಿದಂದದಲೇನ ಹೇಳುವೆನೊ ||
ಧನುವನಿಕ್ಕಡಿಗಡಿದನೊಂದಂ | ಬಿನಲಿ ಕಾರ್ಮುಕ ಭಾಳಲೋಚನ |
ಗನುವರದೊಳಿದಿರಾರೊಯೆಂದೊದರಿದರು ನೋಟಕರು || ೧೮ ||

ಇನ್ನು ಬಾಣವ ತೊಟ್ಟನಾದರೆ | ನನ್ನ ಭಾರದ್ವಾಜ ವಂಶಕೆ |
ಬನ್ನವನು ತಂದವನು ನಾನೈಸಲೆ ನಿರಾಯುಧನ ||
ನಿನ್ನನೆಸುವನೆ ಹೇಗೆ ಹಡೆವೈ | ನಿನ್ನ ತಂದೆಯ ಹರಿಬವನು ಕಡು |
ಖಿನ್ನವಾಗದೆ ಕೈದುವಿಡಿಯೊಂದಾರ್ದನಾ ದ್ರೋಣ || ೧೯ ||

ಕಡು ಮುಳಿದು ಕಳಸಜನ ಮಾತಿಗೆ | ಕಿಡಿ ಮಸಗಿ ಮುದುಹಾರುವನು ಹೇ |
ರೋಡುನೊಡೆದೊಗುವರುಣ ಜಲದರವಟ್ಟಿಗೆಯ ಮರುಳ ||
ಪಡೆಗೆ ಮಾಡುವೆನೆಂದು ವಿಳೆಯದ | ಸಿಡಿಲೆನಲು ಘರ್ಜಿಸುತ ಕೊಂತವ |
ಹಿಡಿದು ಭರದಿಂದಿಟ್ಟು ದೃಷ್ಟದ್ಯುಮ್ನ ಕೂಕಿರಿದು || ೨೦ || ಸ

ಇಳೆಯ ಸರ್ಪನ ತೆರದಿ ಸುರ್ರೆ‍ಂ | ದುಳುಕುಬಹವೊಲು ಪರಿಉದ ಬರಲಾಆ |
ಗಳೆಕಡಿದು ಮತ್ತೊಂದು ಕಣೆಯನು ಕುಂಭಸಂಭವನು ||
ಸೆಳೆದು ಬಿಟ್ಟಡೆ ನಿಂದು ಪಾರುಂ | ಬಳೆಯ ತಿರುಹುತಲಿರ್ದವನ ಜಳ |
ಜಳಿಪ ಮಕುಟವಕಾಣೆ ಕೆಂಡವ ಕೆದರಿದಂತಾಯ್ತು || ೨೧ ||

ಪರಿದುದೀತನ ತಲೆಯು ನೆತ್ತರು | ಮರುಗುತದೆಯೆಂದೀಕ್ಷಿಪರ ಕ |
ಣ್ದೆರವಿಯಲಿ ಮನದೊಳಗೆ ಪುಟ್ಟಿದು ಶಂಕೆ ಚಕ್ರವನು ||
ಕರಿಮನದ ಕಲಿಯಿಟ್ಟನೊಂದೊಂ | ದರಬಳಿಯಲೊಂದೊಂದು ಪರಿದವು |
ಪರೆಗಡಿದನಾ ಛತ್ರ ಚಾಮರ ಕೇತುಪಟಗಳನು || ೨೨ ||

ಅರರೆ ದೃಷ್ಟದ್ಯುಮ್ನನಲ್ಲದೆ | ಧುರದೊಳಗೆ ಕಲಿಯಾರೊ ಮುರಿದುದು |
ಕರದ ಬಿಲ್ಲೆದೆಗೆಟ್ಟನೇ ಸಾಮಾನ್ಯನ ಹಗೆಯು ||
ಗುರುಮುಳಿದು ದಿವ್ಯಾಸ್ತ್ರದೊಟ್ಟೊಡೆ | ವುರಿಯದೇ ತ್ರಿಪುರದ ತೆರದಿ ತ |
ತ್ತರಿ ಕಟಕವೆಂದುಭಯ ದಳದೊಳಗೆಂದರಲ್ಲಲ್ಲಿ || ೨೩ ||

ಏನನೆಂಬೆನು ಕೌರವೇಂದ್ರನ | ಹಾನಿಯನು ಕುಂಭಜನು ಮನದಲಿ |
ಮಾನವಿಲ್ಲದೆ ದಿವ್ಯಬಾಣವ ತೊಡುವ ಸಮಯದಲಿ ||
ತಾನೊದಗಿತೀ ದ್ರುಪದ ತನುಜನ | ಭಾನು ತೇಜದ ಶಕ್ತಿಯದು ಜೀ |
ವಾನಿಲನೀಂಟಿದುದು ವಿಧಿಯನದಾರೊ ಮೀರುವರು || ೨೪ ||

ಒರಗಿದುದು ಕುಂಭಜನ ತನು ಬೊ | ಬ್ಬಿರಿದನಾ ಹಗೆಕೆಡೆಯೆನುತ ಕೈ |
ಮರೆದನಕಟಾ ಕುಂಭಜನು ದಿ‌ವ್ಯಾಸ್ತ್ರಗಳನೆಸಲು ||
ನೆರೆಗಲಿಯು ನರನೋರ್ವನಲ್ಲದೆ | ತರಿಯ ಬಲ್ಲವರುಂಟೆ ಅದನೀ |
ಎರಡು ಬಲದೊಳಗೆಂಬ ಗಜಬಜವಾದುದಲ್ಲಲ್ಲಿ || ೨೫ ||

ಗುರುಗಳಿದನೆಂದೆರಡು ಬಲದೊಳ | ಗರಸು ಮಕ್ಕಳಿಗಾಯ್ತು ದುಃಖವು |
ನರನು ಬಿಸುಟನು ಬಿಲ್ಲನಶ್ರುಜಲಂಗಳನು ಕರೆದು ||
ಗುರು ವಿಯೋಗವದೇನ ಮಾಡದೊ | ಕುರುಪತಿಯು ಕೊರಗಿದನು ತನ್ನೆದೆ |
ಜರಿದು ದೃಷ್ಟದ್ಯುಮ್ನ ಖಡುಗವ ತೂಗುತಿರಲೊಡನೆ || ೨೬ ||

ಮುನಿದು ದುಸ್ಯಾಸನನು ಮೊದಲಾ | ದನಿಬರರ್ವತ್ತೇಳ್ವರೊರ್ಮೆಯೆ |
ಘನನಿನದವೆನೆ ಗಜರಿ ದೃಷ್ಟದ್ಯುಮ್ನನೊಡಲೊಡದು ||
ತನಿರಕುತವನು ಚೆಲ್ಲಿ ದ್ರೌಪದಿ | ಗನಿತು ಕಂಬನಿಗರಯಿಸುವವೆಂ |
ದನುವರದಲಾರ್ದಳವಿಗೊಟ್ಟರು ಬಹಳ ಬೊಬ್ಬೆಯಲಿ || ೨೭ ||

ಅಳವಿಗೊಡೆ ಕೌರವ್ಯ ಕಾಲಾ | ನಳನಿವಳ ಪೆರಗಿಕ್ಕಿ ಪಿಡಿದ |
ಪ್ಪಳಿಸಿ ಕೆಲಬರನಿಟ್ಟು ಕೆಲಬರನೊರಸಿ ಕೆಲಕೆಲರಂ ||
ತುಳಿದು ಕೆಲಬರ ಬಡಿದು ಕೆಲಬರ | ಹಿಳಿದು ಕೆಲಬರ ಮುರಿದು ಗಂಟಲ |
ಬಳೆಯ ಕೆಲಬರನಿಂತು ಕೊಂದನು ಮುಳಿದು ಕಲಿಭೀಮ || ೨೮ ||

ಮೊಳಗಿದುದು ಜಯಭೇರಿ ಪಾಂಡವ | ಬಲದೊಳಗೆ ಮತ್ತತ್ತಳಾಗಳು |
ನಳಿನನಾಭನ ಮೊನೆಯ ನಾಯಕರಗ್ಗಳದಿ ಕಾದಿ ||
ಬಲಯುತನು ಕಲಿಸೌಂದರಾಂಗನು | ಬಳಸಿದಧಟಿನ ನಂದನನು ಸಂ |
ಗಳಿಸಿ ಕಾದಿದರೀಕ್ಷಿಪಮರರ ಕಣೆಯಹಬ್ಬವೆನೆ || ೨೯ ||

ವರ ಜರಾಸಂಧಾನುಜನ ದು | ರ್ಧುರ ಪರಾಕ್ರಮಿ ಶಂಕು ಕರ್ಣಿಯ |
ಪಿರಿಯ ಬಲವನು ನುಗ್ಗುಗಟ್ಟಿದರಾ ಸಮಯದೊಳಗೆ ||
ಗುರುಗಳನು ಬಂಧುಗಳನಕಟಾ | ಧರೆಯಲೋಭದಿ ಕೊಂದರಿನ್ನೀ |
ಧುರವನೀಕ್ಷಿಸೆನೆಂಬವೊಲು ಮರೆಯಾದನಾದಿತ್ಯ || ೩೦ ||

ಅನಿತರೊಳೆಗಪಹಾರ ತೂರ್ಯ | ಸ್ವನವ ಕೇಳ್ದು ರಥಾಂಗಪಾಣಿಯು |
ವನಜನಾಭನು ತೆಗೆದು ತಂತಮ್ಮರಮನೆಗೆ ಪೊಗಲು ||
ಜನಿತ ಖೇದದಿ ಕುರುಪತಿಯು ಖಿ | ನ್ನನೆ ಮುಸುಡ ದುಗುಡದಲಿ ಕುಳ್ಳಿ |
ರ್ದನು ಧರಾಧಿಪರೊಪ್ಪುತಿರ್ದಿರುಳೋಲಗದಲಂದು || ೩೧ ||

ಏಣನಧಟಿಂ ಕಾದಿ ಸಿಂಗದ | ಪ್ರಾಣವನು ಕೊಂಡಂದದಲಿ ಕಲಿ |
ದ್ರೋಣನಸುವನು ಕೊಂಡನಲೆ ಪಾಂಚಾಲನಂದನನು ||
ಕಾಣೆನೆನ್ನೊತ್ತಿನೊಳದಾವಗ | ಮಾಣಹತ ತಮ್ಮಂದಿರೆಲ್ಲರ |
ಬಾಣಸಿಗನುರೆ ಕೊಂದನೆಂದೆದೆಗರಗಿದನು ಬಳಿಕ || ೩೨ ||

ಅಂಗದೇಶಾಧೀಶನಾ ನೃಪ | ಪುಂಗವನ ಮನವರಿದು ನಾಳಿನ |
ಸಂಗರದೊಳೆಲೆ ರಾಯ ನಿನ್ನೀ ಚಿತ್ತದುಮ್ಮಳವ ||
ಹಿಂಗಿಸುವೆ ತೋರುವೆನು ನನ್ನೀ | ತುಂಗ ಭುಜಸಾಹಸವನಹಿತನ |
ಭಂಗಿಸದೊಡಿದು ಮೀಸೆಯಲ್ಲುಳಿ ನೋವ ನೀನೆಂದ || ೩೩ ||

ಎನಲು ಪೋದುದು ಕೌರವೇಂದ್ರನ | ಮನದಳಲು ಸೇನಾಧಿಪತ್ಯವ |
ನಿನಸುತಗೆ ಕಟ್ಟಿದನದತ್ತಲು ಕೃಷ್ಣನದನರಿದು ||
ಮನವೊಲಿದು ಧರ್ಮಜಗೆ ಪೇಳ್ದ | ರ್ಜುನಗೆ ಸೇನಾ ಪಟ್ಟಗಟ್ಟಿದ |
ರನುಪಮೋತ್ಸವವಾದುದಂದಿರುಳೆರಡು ಬೀಡಿನಲಿ || ೩೪ ||

ಮುರರಿಪುವು ತನ್ನಣ್ಣನೆನಿಸುವ | ಧುರವಿಜಯನಹ ಕೃಷ್ಮನನು ತಾಂ |
ನರಗೆ ಸಾರಥಿಗೈದ ಕರ್ಣಗೆ ನಾಳೆ ಪಾರ್ಥನೊಳು ||
ಭರದ ಕಾಳಗ ನೀವು ನನ್ನಯ | ಹರಣವೆನಿಸುವಿರೆಂದು ಶಲ್ಯನ |
ಯೆರಡು ಸಾರಥಿಮಾಡಿದನು ಕರ್ಣಂಗೆ ಕುರುರಾಯ || ೩೫ ||

ಪೊರೆದನತಿ ಮೋಹದಲಿ ತಮ್ಮಂ | ದಿರನು ನಂಬದ ಖಡ್ಗ ತನ್ನಯ |
ಹರಣವೆಂದೇ ನಚ್ಚಿನಂಬಿದನೆನ್ನನವನೀಶ ||
ಧುರದೊಳಾನೆಂತರಿತು ತಮ್ಮ | ದಿರನು ಕೊಲುವೆನು ಪಾತಕಕೆ ಹೇ |
ವರಿಸುತಿದೆ ಮನವೆಂದು ಮನದಲಿ ನೆನೆದನಾ ಕರ್ಣ || ೩೬ ||

ತೋರುವೆನು ತೋಳ್ವಲುಮೆಯನು ಪೊರ | ಮಾರದಿರಿವೆನು ಸಲುವುದೋಲೆಯ |
ಕಾರತನ ಮಝಪೂತುರೆನಿಸುವೆನುಭಯ ಬಲದೊಳಗೆ ||
ಮೀರೆ ಜನನಿಯ ನುಡಿಯ ಚೆಲುವನು | ಕಾರೆ ಜೋಳದ ಪಾಳಿಗಸುವನು |
ಮಾರುವೆನು ದಿಟವೆಂದು ಬಲಿದನು ಮನವನಾ ಕರ್ಣ || ೩೭ ||

|| ಅಂತು ಒಟ್ಟು ಸಂಧಿ ೫೩ ಕ್ಕಂ ಮಂಗಲ ಮಹಾ ||