ಸಂಧಿ ೫೪

ಚಂಡ ಭಾರತ ಮಲ್ಲನಾ ಮಾ | ರ್ತಾಂಡ ತನುಜನು ಮೂರು ಲೋಕದ |
ಗಂಡನರ್ಜುನನೈದಿಕಾದಿದನಾಜಿ ರಂಗದಲಿ || ಪಲ್ಲ ||

ಕೇಳಲೇ ಶ್ರೇಣಿಕ ಧರಿತ್ರೀ | ಪಾಲ ನಿಜನಂದನನ ಪಾರ್ಥನ |
ಕಾಳಗವನೇಂ ನೋಡ ಬಂದನೊಯೆನಲುದಯ ಗಿರಿಯ ||
ಚೂಳಿಕೆಯನಿನನೇರಿ ನಿದ್ರೆಯು | ಜಾಳಿಸಿತು ತಮದೊಡನೆ ಮಜ್ಜನ |
ವಾಳಿದರು ಕರ್ಣಾರ್ಜುನರು ತಂತಮ್ಮ ಬೀಡಿನೊಳು || ೧ ||

ಪರಮ ಜಿನಮಂದಿರವ ಪೊಕ್ಕರು | ಪರಮನಡಿಗಳನರ್ಚಿಸಿದರಾ |
ಪರಮಗುರು ಗಂಧಾಂಬು ಗಂಧಾಕ್ಷತೆಯನರನುಗಳ ||
ಧರಿಸಿ ವಂದಿಸಿ ಬಂದು ತಂತ | ಮ್ಮರಮನೆಯನೈತಂದು ಮಣಿವಿ |
ಷ್ಟರದೊಳೋಲಗದೊಳಿರ್ದರಾ ಸಂಗ್ರಾಮಲಂಪಟರು || ೨ ||

ಸಕಲ ಶೃಂಗಾರಾಂಗರಾದರು | ಸಕಲ ಭಟರನು ಮುನ್ನಿಸಿದರಾ |
ಸಕಲ ಸಾಧನಗಳನು ನೆರಪಿದರಾಗಳರ್ಜುನನು ||
ಪ್ರಕಟದೂತರನಟ್ಟಲವರತಿ | ಚಕ ಚಕಿಪ ರವಿತನುಜನಾಸ್ಥಾ |
ಯಿಕೆಗೆ ಬಹುಸಮಯದಲಿ ಕಂಡರದೊಂದು ಸಂದಣಿಯ || ೩ ||

ಇನತನೂಭವನಿಂದ ಯಾಚಕ | ಜನವು ಚಾಗವ ಪಡೆದ ಪೆಂಪಿನ |
ಧನದ ರಾಶಿಯ ಹೇರಿದಾನೆಯ ಘಟೆಗಳೋರಣವ ||
ಕನಕವಕ್ಕರೆಯಿಟ್ಟ ಹಯಗಳ | ನನುಪಮಾಂಬರದುಂಬಿಯಾ ಕಾಂ |
ಚನದ ಬಂಡಿಯ ಸಾಲುಗಳ ಕಂಡಾಂತರಚ್ಚರಿಯ || ೪ ||

ತೆರಪನರಿದೆತ್ತಾನುಮೊಳ ಪೊ | ಕ್ಕುರುವ ಕೈವಾರಿಗಳ ಕಳಕಳ |
ದುರುಬೆಯನು ಪೆರಗಿಕ್ಕಿ ಕೈಮುಗಿದರಸ ಬಿನ್ನಹವು ||
ಕರೆ ಮರೆಯು ಹೊಗದುರ್ಕಿನಲಿ ಮಿರಿ | ಮಿರಿಪನಿಳೆಯದ ರುದ್ರನಿರಿವವ |
ರೆರೆಯ ಪರಕರಿಪಂಚ ತುಂಡನು ಪಾರ್ಥನಟ್ಟಿದನು || ೫ ||

ಇಂದಿನಾಹವದೊಳಗೆ ಹಲಬರ | ದಂಡುಗದ ಕಾಳಗವು ಸಲ್ಲದು |
ಬಂದುನೋಡುವ ಗರುಡಗಂಧರ್ವಾಮರರಕಣ್ಗೆ ||
ಸಂದ ಹಬ್ಬವು ನಮ್ಮರಸನೊಳು | ನಿಂದು ನೀ ಕಾದಿದೊಡೆಡೆಯಿದ ಪೇ |
ಳೆಂದು ಕಳುಹಿದರೆಂದಲಾ ಕಲಿಕರ್ಣಗವರಾರ್ದು || ೬ ||

ಅರಸ ಕೇಳಿನ್ನೊಂದನಾಡುವೆ | ಪರರೆ ಸಂಗ್ರಾಮದಲಿ ನೆರೆ ಜಯ |
ಸಿರಿಗೆ ಗುಂಡನು ವೀರಪಾರ್ಥನು ಬೇರೆಪೆರರುಂಟೆ ||
ನರನಿರಲು ನೀಂ ವೀರಪಟ್ಟವ | ಧರಿಸಬಹುದೇ ಹೇಳೆನಲು ದೂ |
ತರಿಗೆ ನಸುನಗುತೆಂದನಾ ಕಲಿಕರ್ಣ ಭೂವರನು || ೭ ||

ಕರೆಯಿರೈ ಪಾರ್ಥನನು ಇಂದಿನ | ಧುರದೊಳಗೆ ತನ್ನೆನ್ನ ಬಲುಹನು |
ಒರೆದು ನೀವೇ ನೋಡಬಹುದೆಂದವರಿಗುಡುಗೊರೆಯ ||
ತರಿಸಿ ಕೊಟ್ಟವರನುಕಳುಹಲ | ತ್ತೆರಡು ಬಲನೆರಡೊಡ್ಡಿದುದು ಭೀ |
ಕರ ರಣಾನಕ ಘೋಷ ಬದಿರಿತವಾಯ್ತು ದಿಗು ಚಕ್ರ || ೮ ||

ಕಲಿ ಜಯದ್ರಥನೆಂಬ ಬಂಟಿನ | ಚಲದ ಮಾಸಾಮಂತನನು ದೋ |
ರ್ವಲ ಜರಾಸಂಧನು ಬಹಳಬಲವೆರಸಿ ಮೊನೆಮಾಡಿ ||
ನಳಿನನಾಭನು ಪದ್ಮನೆಂಬ | ಗ್ಗಳಿದ ಮಾಸಾವಂತನನು ಪೇ |
ಳಲು ನೆರೆದ ಪಡೆವೆರಸಿ ಕಾದುತ್ತಿರ್ದರಿರಲಿತ್ತ || ೯ ||

ವೀರ ಪಟ್ಟವು ತೊಳಲುತಿರೆ ಕಡು | ವೀರ ಪಸದನವಾಂತನಾಗಳು |
ಕಾರಮಿಂಚಿನ ಬಳ್ಳಿಬಳಸಿದ ಹೊನ್ನಬೆಟ್ಟವೆನೆ ||
ಹೀರಮಯ ಕವಚವು ವಿರಾಜಿಸೆ | ಚಾರುಮಣಿಮಯ ಮಕುಟರುಚಿ ಸಂ |
ಧ್ಯಾರುಣತೆಯನು ಬೀರಲೇನೊಪ್ಪಿದನೊ ಕಲಿಕರ್ಣ || ೧೦ ||

ಬಿರುದನೋದುವ ಪಾಠಕರ ಕಲ | ವಿರುತಿಯನು ಪೆರಗೊತ್ತಿದುದು ನೇ |
ವುರದನುಣ್ಚರ ಕಾಂಚಿಯಿಂಚರ ವಾರನಾರಿಯರ ||
ಪರಕೆಯಲಿ ಪಿಕನಿನದವನು ಧಿ | ಕ್ಕರಿಸಿದುದು ಕಂಕಣ ಝಣತ್ಕೃತ |
ವೆರಸಿ ಬಹ ಶೇಷಾಕ್ಷತೆಗಳಾಡಿದವು ಮಕುಟದಲಿ || ೧೧ ||

ನೆರೆದ ಮಂಗಲ ಪಾಠಕರ ಬಲು | ಸರದ ಪೆಚ್ಚಿಗೆ ಮಂಗಳವನಿಂ |
ಚರದೆ ಪಾಡುವ ಗಾಯಕರ ಮೆಲುಸರಗಳೊಡನೊಡನೆ ||
ಬಿರುದ ಪಾಠಕ ಬಿರುದ ಗಾನರ | ವಿರುತಿಯಿತ್ತರದೊಳಗೆ ವಿಭುದರ |
ಹರಕೆ ಮಂಗಳ ತೂರ್ಯರವವೆತ್ತಲು ವಿರಾಜಿಸಿತು || ೧೨ ||

ಸೇನರಾತ್ಮಜನುಭಯ ಚಾಮರ | ಬೀಸುತಿರೆ ರಾಜಾಂಗಣಕೆ ಸುವಿ |
ಳಾಸಿನೀಜನವೋಲಗಿಸಿ ಬರೆ ಮೈಯ ಪರಿಮಳಕೆ ||
ಬೇಸರದೆ ಪರಮೆಗಳು ಪರಿತರೆ | ವಾಸಿಭಾಸೆಯ ಕಾಸೆಮೀಸೆಯ |
ಸಾಸಿ ಬಂದನು ವಾಮಚರಣದ ತೊಡರ ಝಣರವದಿ || ೧೩ ||

ಅಸಿತ ಹಯಗಳ ಹೂಡಿ ಮಣಿವಾ | ಯಸದ ಪಳಯಿಗೆ ನೆಗೆದು ಮೇಲಾ |
ಗಸವ ಚುಂಬಿಸೆ ನಿಖಿಳ ಶಸ್ತ್ರಾಸ್ತ್ರಗಳ ಸಂದಣಿಯ ||
ಮಿಸುಪ ವಜ್ರಾಪಾಯ ರಥವನು | ವಿಸಮ ವಿಕ್ರಮ ಶಲ್ಯ ಜೋಡಿಸೆ |
ಅಸಮ ಸಾಹಸಿಯೇರಿದನು ನಲವೇರಿ ಕಲಿಕರ್ಣ || ೧೪ ||

ಕುರುಬಲವ ಪೆರಗಿಕ್ಕಿ ನಿಜಬಲ | ವೆರಸಿ ರಥನಿಲಲೊಡ್ಡಿನಿಂದನು |
ಪರಬಲವು ತಳ್ಳಳಿಸುತಿರೆ ಕಹಳೆಗಳು ಚೀರುತಿರೆ ||
ನರನ ಬರವನು ಪಾಡುತೆಡಗೈ | ಯುರುಧನವನಣವೂರಿ ಬಲಗೈ |
ವೆರಳ ಕೊನೆಯಲಿ ಸರಳ ತಿರುಹುತ ನಿಂದನಾ ಕರ್ಣ || ೧೫ ||

ವೀರ ಪಾರ್ಥನದತ್ತಲಾಂತನು | ವೀರ ಶೃಂಗಾರವ ಜಯಾಂಗನೆ |
ಕೂರಿಸುವ ಚದುರಿನಲಿ ಅಭಿವಂದಿಸಿದನಗ್ರಜರ ||
ಭೂರಿ ಹರಕೆಯನಾಂತು ವಿಬುಧೋ | ದಾರದಾಶೀರ್ವಚನವನು ಮನ |
ವಾರೆ ಕೇಳಲು ಮೊಳಗಿದವು ಬಹು ಮಂಗಳಾನಕವು || ೧೬ ||

ಮಿಸುಪ ಜಂಗಮವಲ್ಲಿಗಳೆ ಕೆಂ | ಪೆಸೆವ ಪೂಗಳನೊಗುವವೊಲು ಶೋ |
ಭಿಸುವಬಲೆಯರು ತಳಿದರಾಗಳು ಹರಸಿಸೇನೆಯನು ||
ವಿಷಮ ವೀರನ ಬೆನ್ನೊಳಗೆ ಶೋ | ಭಿಸದುದಕ್ಷಯ ಶರಶರಧಿ ಅ |
ರ್ವಿಸುವ ಗಾಂಡೀವಪಿಡಿದು ಬಂದನು ನಿಜಗೃಹಾಂಗಣಕೆ || ೧೭ ||

ಸಿತಹಯಂಗಳ ಹೂಡಿ ಸೊಗಯಿತು | ರತುನಮಯ ವಾನರ ಪತಾಕೆಯ |
ನತಿಬಲಿದ ಕಾಂಚನದ ಕಂಭಕೆ ವಜ್ರಮಯರಥವ ||
ಚತುರ ಕೃಷ್ಣನ ಜೋಡಿಸಲು ಭೂ | ನುತ ಪರಾಕ್ರಮ ರುದ್ರನೇರಿದ |
ನತುಳ ಭುಜಪೀಠವನು ಜಯರಮೆಯೇರಲೊಲವಿನಲಿ || ೧೮ ||

ಪೊಡೆವ ನಿಸ್ಸಾಳಗಳ ದನಿದೆಸೆ | ಯಡರೆ ರಥಬಹ ಭರಕೆ ಭೂತಳ |
ನಡುಗೆ ಭೋರನೆ ಬಂದು ಪಾಂಡವ ಬಲವಪೆರಗಿಕ್ಕಿ ||
ಕಡೆಯ ರುದ್ರನೆ ಮುನಿದು ಬಂದನೊ | ಪೊಡವಿಗೆನೆ ಭೀಷ್ಮ ಸುತ ಕರ್ಣಗೆ |
ಪಡಿಮುಖದೊಲಾರ್ದೊಡ್ಡಿ ನಿಂದನು ವೀರಫಲುಗುಣನು || ೧೯ ||

ಕುರುನೃಪನು ಮಾಗಧನುಮೀರ್ವರು | ತರಣಿ ತನುಜರ ದೋರ್ವಳದ ಸಂ |
ಗರವನೋಡಲು ಸಾರೆ ಹಲನಗಧರರು ಪಾಂಡವರು ||
ನರನಯುದ್ಧವ ನೋಡಲಿಕೆ ಪೊ | ರ್ದಿರಲು ಬಾನೊಳು ಕಿಂಪುರುಷ ಕಿ |
ನ್ನರ ಗರುಡ ಗಂಧರ್ವ ದೈತ್ಯಾಮರರು ಕೀಲಿಸತು || ೨೦ ||

ಕುರುಪತಿಯ ಬಲವೆಂಬ ಪೆರ್ಚಿದ | ಶರಧಿಯನು ಕಡೆಯಲಿಕೆ ಕಾಂಚನ |
ಗಿರಿಯನೇಳ್ಗೆಯ ಕಲಹವೆಂಬಾ ಹರಿಯೆ ತಂದಲ್ಲಿ |
ಇರಿಸಿದನೊಯೆನೆ ಸಮರಧರೆಯೊಳಗೆ | ಪರ ಬಲಾಂತಕ ಪಾರ್ಥನತಿ ಭೀ |
ಕರ ಶರಾಸನವಿಡಿದುನಿಲೆ ಬೆದರಿದುದು ಕುರುಸೈನ || ೨೧ ||

ಪುದಿದ ಬಿರುದರ ವೀರಡವುಡೆಯ | ಹದಿರ ಹರೆಗಳ ಬೊಂಬುಳಿಯ ಹೇ |
ಳಿದವೊಳೊದರುವ ಸೂಳೆಗಾಳೆಯ ಯಕ್ಕ ಮದ್ದಳೆಯ ||
ಸದೆಯಲುಬ್ಬುವ ಬಲಕೆ ಕೈವೀ | ಸಿದರು ಕಲ್ಪಾಂತಾನಳೆಗೆ ಬೀ |
ಸಿದ ವಿಷಾನಳನಂತೆ ಸೂರ್ಯ ಸುರೇಂದ್ರ ನಂದನರು || ೨೨ ||

ಜಲಧಿ ಬೇಳೆಯೊಳಾಗಸವು ಭೂ | ತಳದೊಳಾಂತವೊಲಚ್ಚಡಿಸಿದವು |
ಬಲವೆರಡು ಬರಸಿಡಿಲ ಬಳಗದ ತೆರದಿ ರಣಭೇರಿ ||
ಮೊಳಗುತಿರಲದನುಂಗಿದವು ಸಂ | ಗಳಿಸಿ ಬಿಲುಗಳ ಠಂಕೃತವು ದಿಗು |
ವಳೆಯವನು ಮುಸುಕಿದವು ಕೆಂಗರಿ ಮೊರಹಿನಂಬುಗಳು || ೨೩ ||

ಸರವೆ ಮುಗಿಲಾ ಮೊರಹೆ ಮೊಳಗಾ | ಗರಿಯ ಗಾಳಿಯೆ ಗಾಳಿ ಬಿಲ್ಲುಲಿ |
ಬರಸಿಡಿಲು ಹೊಸಮಸೆಯಬಾಯ್ದಾರೆಗಳೆ ಕುಡಿಮಿಂಚು ||
ಸುರಿವ ನೆತ್ತರ ಮಳೆಯದೇ ಪೊಳೆ | ವರಿಯೆ ಕುರುಭೂಮಿಯಲಿ ವೀರಾಂ |
ಕುರ ಕೊನರ್ತುದು ಕೊಯ್ದ ಬೆಳೆತುಂಬಿದುದು ಯಮಪುರವ || ೨೪ ||

ಬಳಿಕಲಾ ಕಲ್ಪಾಂತ ಮೇಘದ | ಹೊಳೆವ ಮಿಂಚುಗಳಂತೆ ಮಿಂಚುವ |
ಹಲವು ಕೈದುಗಳಾಡಿದವು ನೋಡುವರ ಕಣ್ಬೆದರೆ ||
ಮುಳುಗಿದವು ನೆತ್ತರಕಡಲ ಬಲು | ಸುಳಿಯೊಳಗೆ ಗಜಹಯ ಭಟರ ಪೆಣ |
ಗಳು ಸಿಡಿಲ್ದವು ಬೊಬ್ಬಿಡುತ ತಲೆಗಳು ನಭೋಂಗಣಕೆ || ೨೫ ||

ಮಡಿದುದಿಂತಿರಿದಾಡಿ ಪೆರ್ಚಿದ | ಪಡೆಯೆ ಬಿಲುಗಳವೊಯ್ದು ತನ್ನಯ |
ಪಡೆವೆರಸಿಯೆಡೆವೊಕ್ಕಾನಾಗಳು ಶಕುನಿ ಬರಲೊಡನೆ ||
ದಡಿಗ ರುಧಿರೋದ್ಗಾರಿ ಗದೆಯಲಿ | ಬಡಿದು ಕೆಲಬರ ತಿವಿದು ಕೆಲಬರ |
ಹೊಡೆದು ಕೆಲಬರನಟ್ಟಿದರು ಯಮಪುರಿಗೆ ಕಲಿಭೀಮ || ೨೬ ||

ಎಡೆವಿಡದೆ ಬಂದೆರಗಿದುದೊ ಬರ | ಸಿಡಿಲು ಮೇಣ್ ಪಾಷಾಣವೃಷ್ಟಿಯ |
ಗಡಣವೋಯೆನೆ ಕರಿನರಾಶ್ವರಥಂಗಳನು ಬಡಿದು ||
ಒಡೆವೆರಸಿ ಗಜಹಯದ ಬಾಲವ | ಪಿಡಿದು ಪವನಜ ಬೀಸಿಡಲು ಬಾಂ |
ಗಡಲಲಾಡುವ ಕರಿಮಕರ ಹಯ ಮತ್ಸ್ಯವೆನಿಸಿದವೂ || ೨೭ ||

ಇಡಲು ಗಗನಕೆ ಹೋಗಿ ತಾವಿಳಿ | ವೆಡೆಯೊಳಾನೆಯ ಮೇಲೆ ರಥವಾ |
ನಿಡುರಥವ ಮೇಲಶ್ವವಶ್ವದ ಮೇಲೆ ಪೇರಾಳು ||
ಅಡಸಿಬರುತದೆ ಸಂಗರದೊಳಿರಿ | ವೊಡೆ ವಿಕುರ್ಣವ ವಾಹನಂಗಳ |
ಪಡೆದು ಬಹ ಬಾಂಬಟ್ಟೆಗರೊಯೆನೆ ತೋರಿದರು ಕೆಲವರು || ೨೮ ||

ಕರಿಗಳನು ಹಿಡಿದೆತ್ತಿ ಮಾರುತಿ | ಭರದಲಪ್ಪಳಿಸಿದೊಡೆ ಕಾರಿದ |
ವುರಿಯ ಮಾಲೆಯ ತೆರದಿನೆತ್ತರನಾಗಳೀಕ್ಷಿಸಲು ||
ಇರುಳುಗಳು ದೀಪನಿಸಿ ಕೊಳ್ಳಲೆ | ನರಿಯದಾ ಕಿಸುಸಂಜೆಗಳ ತರ |
ತರದಿ ಕಾರಿದವೆನಿಸಿ ತೋರಿದವಾಜಿರಂಗದಲಿ || ೨೯ ||

ಹಿಡಿದು ತಿನಬಹ ಜವನ ಬಾಯೊಳ | ಗಡಗ ಹಾಹವನಂತೆ ತಿವಿಪೊಡೆ |
ಯೊಡಲನೊಡೆ ಕೊರೆ ಸೀಳೆನುತ ಬರೆ ಭೀಮ ಬದಿಯಿಂದ ||
ಪೊಡೆದೊಡಾಗಳು ಶಕುನಿಸಿಡಿಲುರೆ | ಪೊಡೆದ ಪಂಜರ ಶಕುನಿಯಂದದಿ |
ಕೆಡೆದು ನೆತ್ತರ ಕಾರಿ ಮಡಿದನು ಸಮರಧರೆಯೊಳಗೆ || ೩೦ ||

ಸೇನೆಮಣ್ಮಳಿಯಾಗೆವಿಳೆಯ ಕೃ | ಶಾನು ಮಸಗಿದ ತೆರದಿನತ್ತಲು |
ಭಾನುಸುತನಿತ್ತಲು ಯುಗಾಂತ ಕೃತಾಂತನೆನೆ ಪಾರ್ಥ ||
ಆ ನೆಲನರಥನೇಮಿಯದಿರಿಸಿ | ಬಾನೊಳಾರಲ ತೂರೆಪಳಯಿಗೆ |
ಸಾನುಮಾನಗಳಿದಿರೆ ಬಹವೊಲುನೂಕಿದರು ರಥವ || ೩೧ ||

ಆವ ರೌದ್ರಾಕಾರವನು ಕಂ | ಡೇವೆ ಮಡಿದನಿಮಿಷರು ದಿಗುಪತಿ |
ನೀವಹದೆ ನಡುಗಿದುದು ಮಾಗಧನಾ ಸುಯೋಧನನು ||
ಪವನಹತ ತರುವಾದರಾ ಪಾಂ | ಡವರ ಬಲನಾರಾಯಣರ ಬಗೆ |
ಬವಣೆಯಾಯ್ತೆನೆ ಮಿಕ್ಕ ಸುಭಟರ ಬಲುಹು ನಾನರಿಯೆ || ೩೨ ||

ಸರಳ ಭೂಮಾನದಲಿ ರಥನಿಲೆ | ತಿರುವ ಜೇವಡೆಗೈಯೆ ಮಣಿವಿ |
ಷ್ಟರದಿ ಕೆಳಗುರುಳಿದರು ದಿಗುಪಾಲಕರು ಸುರನದಿಯ ||
ಶರನಿಧಿಯು ಮೌಕ್ತಿಕವು ತಾರೆಯು | ಬೆರಸಿದವು ಮಿಕ್ಕವರ ಪಾಡೇಂ |
ಹರನಗಿರಿಜೆಯ ತೆಕ್ಕೆ ಸಡಲಿತು ಭೀಳ ಠಂಕೃತದಿಂ || ೩೩ ||

ತಿರುವಿಗಂಬನು ಹೂಡಿ ಕರ್ಣಕೆ | ಬರೆತೆಗೆದು ಬಿಡಲೀರ್ವರುಂ ಕಡು |
ಭರದಿ ಪರಿದವದತ್ತಲಿತ್ತಲು ಗರಿಯಮೊರಹಿನಲಿ ||
ಸರಳ ಕೇರಾಯ್ತೆಂಟು ದೆಸೆಯಾ | ಸರಳ ಚಪ್ಪರವಾಯ್ತಾ ನಭವಾ |
ಸರಳ ಗರುಡಿಯದೆನಿಸಿದುದು ರಣ ಭೂಮಿ ನಿಮಿಷದಲಿ || ೩೪ ||

ತರಣಿ ಯಮನೊಡಹಾಯ್ದು ಹೋದವು | ಸುರಪುರಿಗೆ ದಿಗು ಪಾಲಕರ ನೀ |
ಡೊರಸಿದವು ನೆಲನುರ್ಚಿ ಫಣಿಲೋಕದಲಿ ಹೊಳಕಿದವು ||
ತರಣಿಸುತ ಕೌಂತೇಯರೆಚ್ಚಾ | ಸರಳು ಪೂರಿಸಲಾದುದಂದಿಂ |
ಶರದಿ ಶರನಿಧಿ ಸರಿಸರಳ ತರುವಂಬುನಿಧಿಯೆಂದು || ೩೫ ||

ಮರೆತು ಕಾಳಗವೇಕೆ ಬಾನೊಳು | ತುರುಗಿ ನಿಂದವರೀಕ್ಷಿಸಲು ಮಿಗೆ |
ತರಪುಗೊಡುವಂತೋರ್ವರೋರ್ವರು ಪೆಣೆದಕಣೆಗಳನು ||
ತರಿದರಾ ಪರಿಕರದರುರೆ ಕೈ | ಮೆರೆದ ರೊಡನೆಡೆಗಡಿದ ಕಣೆಗಳು |
ನೆರೆದು ಕುರುಗಿರಿಯೆನಿಸಿದುದು ಸಂಗ್ರಾಮರಂಗದಲಿ || ೩೬ ||

ಸರಳು ಸರಳುಗಳುಡಿದು ಕೆಂಡವು | ಸುರಿದು ಕಣೆವೆಟ್ಟವನು ಸುಡ ಲೆಂ |
ದುರಿದ ತ್ರಿಪುರದ ತೆರದಲರಿದುದುನಭದಲೆಡೆಗಿಡದೆ ||
ಸುರರು ಜಾರಿದರತ್ತ ತೆಗೆದ | ಚ್ಚರಿಯ ಹೊಗೆಹಿಡಿದಂದನಿಂದಂ |
ಬರತಳವು ಕಡುಕಂದಿದುದು ಕಜ್ಜಳದ ಪಣತೆಯೊಳು || ೩೭ ||

ನರನ ನಾಡಾಡಿಯ ಶರದಿಗೆಲ | ಲರಿದೆನುತ ಮಂತ್ರಿಸಿ ಮಹಾ ಭೀ |
ಕರ ತಮೋಬಾಣವನಿನಾತ್ಮ ಜನೆಚ್ಚದೇನೆಂಬೆ ||
ತರಣಿ ಕಿರಣವನುಂಗಿ ಸೂಜಿಯ | ಲಿರಿದಡದು ನಾಟದವೊಲೆಣ್ದೆಸೆ |
ಧರೆ ನಭೋಂಗಣವೆಲ್ಲವನು ತೀವಿದುದು ಕತ್ತಲೆಯು || ೩೮ ||

ಅರರೆ ಸರ್ವಂ ಕೃಷ್ಣಮಯ ವೆಂ | ಬರನುಡಿಗೆ ತೆರಪಾಯ್ತು ಕಾಣರು |
ಹರಿಯನದರೊಳು ತಮ್ಮ ತನುವನು ತಡಹಿ ನೋಡುವರು ||
ಅರಿಗಳೆಂದೊಳಗೊಳಗೆ ಪಾಂಡವ | ಪಿರಿಯ ಬಲಿವಿರಿದಾಡಿದುದು ಪರಿ |
ಹರಿಸಿದನು ನರನೊಂದು ತೇಜೋಬಾಣರವಿಯಿಂದ || ೩೯ ||

ತಳುವದೊಡನೊಂದಗ್ನಿ ಬಾಣವ | ಸೆಲೆದು ನರನೆಸಲದರ ಮುಂದಾ |
ವಿಳೆಯ ರುದ್ರನ ನೊಸಲ ಕಣ್ಣುರಿ ತಣ್ಣನಾದುದಲೆ ||
ಪ್ರಳಯವಹ್ನಿಯ ನಿಲಿಸಿ ದೆಸೆಗಳ | ಬಳಸಿ ಭುಗಿ ಭುಗಿಲೆನುತ ಬರೆ ಕುರು |
ಬಲವು ಹುರಿಮಳಲಾಯ್ತು ಕುಸಿದವು ಮೈಯರೋಮಗಳು || ೪೦ ||

ಓಡಿದುದು ಸುರಸಮಿತಿ ಉಷ್ಣಕೆ | ಸೂಡಿದನು ಬಾಂದೊರೆಯನೀಶನು |
ಬಾಡುವನು ತಾನಾಳಿಯುರಿಸುಡುತದೆ ಕಡಲನಿನ್ನು ||
ಆಡಲೇನಾ ಬಾಣವನು ತಡ | ಮಾಡದಾ ಜಲಬಾಣದೆನ್ನೀ |
ರೊಡಲನೆಚ್ಚದ ನಂದಿಸಿದನಾಕ್ಷಣದಿ ಕಲಿಕರ್ಣ || ೪೧ ||

ಪೂತು ಮಝ ಬಿಲ್ಲಾಳಹುದು ನನ | ಗೀ ತೆರದ ಬಿಲುಜಾಣಿಕೆಯನಾ |
ಸೂತ ಕಲಿಸಿದನೋ ಅರಿಯದಂಬಿಗರು ಮೇಣ್ ನೀನು ||
ಖ್ಯಾತ ಬಾಹುಜವಂಶದೊಳು ಸಂ | ಭೂತನಲ್ಲ ದೊಡೇನು ಕುರುಪತಿ |
ಯೋತು ಸಲಹಿದ ಕೈಯ ತೋರಿದೆಯೆಂದನಾ ಪಾರ್ಥ || ೪೨ ||

ಧುರದೊಳಿರಿಯದೆ ಪಳಿವರೆ ಹುಲು | ನರನ ನಿಮ್ಮಣ್ಣಂದಿರಿಗೆ ನಾ |
ಲ್ವೆರಳಧಿಕವೈ ಕುಲದೊಳಾಂ ನಿನಗೇಕಹಂಕಾರ ||
ಅರಸನಾಜ್ಞೆಗೆ ಬೆದರಿ ದೇಶಾಂ | ತರವ ಹೋಹಂದಿಲ್ಲವೇ ನೀ
ಕುರುಪತಿಯ ಬ[ಡಿ] ಹೋರಿನುಡಿಯದಿರೆಂದನಾ ಕರ್ಣ || ೪೩ ||

ಲೇಸನಾಡಿದೆ ಕರ್ಣ ನಿಮ್ಮವ | ಗೋಸರಿಸಿ ನಾವತ್ತಲಾ ವನ |
ವಾಸದೊಳಗಿಹ ಕಾಲದಲಿ ಕಡುವೈಭವದಿ ಬಂದು ||
ಆ ಸುಯೋಧನ ವೀರರನು ಕ | ಟ್ಟಾಸುರದ ಗಂಧರ್ವ ಕೊಂಡೊ |
ಯ್ವಾ ಸಮಯದೊಳಗಿಲ್ಲವಲೆ ನೀವೆಂದನಾಪಾರ್ಥ || ೪೪ ||

ಬಲ್ಲಿದನು ನೀನಹುದು ಕಂಡೆನು | ಬಿಲ್ಲ ಹಬ್ಬದಲೊರ್ಮೆ ನಿಮ್ಮವ |
ರೆಲ್ಲರುಂ ಬಳಿಕಿರಿಯ ಬಂದೆದೆಗೆಟ್ಟು ಹಾಯಾಗ ||
ಬಿಲ್ಲನೀ ಹಿಡಿದಿದ್ದೆಯೋ ಮೇ | ಣಿಲ್ಲವೋ ಹೇಳೆನಲು ರಿಪುಗಜ |
ಮಲ್ಲನಾಗಳು ಕಾಯ್ದು ಸುರಪನ ಸೂನುಗಿಂತೆಂದ || ೪೫ ||

ಸೂಜಿಕಲು ಸೂಜಿಯೆನೆ ಹಿಡಿವುದು | ಸಾಜವದರಿಂದೇನು ಮತ್ತಾ |
ಸೂಜಿಕಲು ಮೇಣ್ ಪರುವಹುದೇ ಸೂಜಿಹೊನ್ನಹುದೆ ||
ಸೂಜಿಹೊನ್ನವದಾದಡೇನಧಿ | ರಾಜಲಕ್ಷ್ಮಿಯ ಬೆಲೆಯೆ ಹಳಿವಿ |
ಲ್ಲಾಜಿಯೆಕೆ ನೀನಾದದಧಟನೆಯೆಂದನಾ ಕರ್ಣ || ೪೬ ||

ಕಳಿಲೆವಿಲ್ಲಾ ದೇಶದಲಿ ನಿನ | ಗೆಳಸಿ ಕೈಸಾರಿದಡೆವೋರ್ವಳು
ಕೊಳಕಿ ಮಾಲೆಯ ಸೂಡಿದಡೆ ನಿನಗಾಯ್ತೆ ಗಂಡಗುಣ ||
ಮುಳಿದು ನಮ್ಮವರಿರಿದರಾದೊಡೆ | ಉಳಿಯ ಬಲ್ಲುದೆ ನಿಮ್ಮ ತಲೆ ಮದ |
ವಳಿಗನೆಂದುಳುಹಿದರೆ ನೀವೀ ಜೀವಿಸುವೆಯೆಂದ || ೪೭ ||

ಬರಿಯ ಜರುಜಾಟದಲಿ ಫಲವೇ | ನರಿಯ ಬಹುದೀಕ್ಷಣವೆ ನಿನ್ನದೆ |
ಮುರಿಯ ಹೂಳುವೆನೊಡ್ಡೆನುತ ಗಿರಿಶರವ ತೊಟ್ಟೆಸಲು ||
ಬರಸಿಡಿಯ ಬಲ್ಲುಲಿಯೊ ನಭಭೊ | ಬ್ಬಿರಿದುದೋಯೆನೆ ಧ್ವನಿಸಿ ಪಕ್ಕರೊ |
ಹರಿದು ಬಿದ್ದವೊ ಪರ್ವತಗಳೆನೆ ಕೆಡೆಯವೆಡೆಬಿಡದೆ || ೪೮ ||

ಪ್ರಳಯದುರು ಮುಗಿಲಾಲಿ ಕಲುಗಳ | ಪಳಪಳನೆ ಕರೆದಂತೆ ಕರೆದಡೆ |
ಇಳೆನಡುಗಿ ಫಣಿಲೋಕ ಬೆದರಿತು ಪಾಂಡವರು ಕಂಡು ||
ತಳಮಳಲುಗೊಳೆ ಕೌರವಗೆ ಹೆ | ಕ್ಕಳವು ಮೇಳಿಸೆ ಹೂಳಿದವು ಗಜ |
ಕುಲರಥಾಶ್ವ ಸಪದಾತಿಯನು ನಗಮಯವದಾಯ್ತವನಿ || ೪೯ ||

ಅರರೆ ಪಾರ್ಥನದೇಂ ಪ್ರಚಂಡನೊ | ಭರದಿ ವಜ್ರಾಸ್ತ್ರವನೆಸಲು ಭೀ
ಕರದ ಬಡಿಯಿಂದಪ್ಪಳಿಸೆ ಘಟಕೋಟಿಯೊಡೆದಂತೆ ||
ಸಿರಿಗಳವು ಧೂಳಾದವಾ ನಿ | ಷ್ಠುರ ಶರಕ್ಕಗಿದಬುಧಿಯೊಳು ಕುಲ |
ಗಿರಿಗಳಂದಿಂದಡಗಿ ಬದುಕಿದವಿಂದು ಪರಿಯಂತ || ೫೦ ||

ಗಿರಿಶರವು ಕೌರವನ ಗರ್ವದ | ಗಿರಿಯೊಡನೆ ಚೂರ್ಣಿಸಲು ತೊಟ್ಟನು |
ತರಣಿಸುತನಭಿಮಂತ್ರಿಸಿಯೆ ಪೇರುರಗಬಾಣವನು ||
ಕರಿಮುಗಿಲ ಪಟಲಗಳವೊಲು ಭೀ | ಕರದ ಪೆಡೆಕೋಟಿಯ ತಳೆದು ಪೂ |
ತ್ಕರಿಸೆವುರ್ವಿತು ವಿಷದ ಕರ್ಬೊಗೆ ನಿಖಿಳದೆಸೆಗಳನು || ೫೧ ||

ಎಚ್ಚನಾಗಳದೇನೆ ಹೇಳುವೆ | ಕೆಚ್ಚನುಗುಳುತ ಪ್ರಳಯದುಳುಕೆನೆ |
ಚಚ್ಚರದಿ ಭುಗ್ಗೆನುತ ಬಂದವು ರಸನೆಗಳ ಕುಣಿಸಿ ||
ಪೆಚ್ಚಿದರಿ ಕಟಕವನು ಮುಸುಕಿತು | ಮೂರ್ಛಿಸಿದರರೆಬರು ಸುರರು ಕಡು |
ಬೆಚ್ಚಿದರು ತಲ್ಲಣಿಸಿದರು ಕಕುಭಾದಿ ನಾಯಕರು || ೫೨ ||

ಗರುಡಪಂಚಾಕ್ಷರಿಯ ಜಪಿಸಿದ | ರರೆಬರಾಗಳು ಘೋರಪಂಚಾ |
ಕ್ಷರಿಯನೆದೆಯೊಳು ತಳೆದರೀ ಪಾಂಡವರು ಫಣಿಶಯನ ||
ಉರಗಶಯ್ಯೆಯ ನೂರು ಮಡಿ ಭೀ | ಕರವಿದೆಂದಳವಳಿಯೆ ಕೊಂದುದು |
ನರನನೆಂದಹಿಕೇತನನು ನಿಜಭುಜವನೊದರಿಸಿದ || ೫೩ ||

ಅದರ ವೈಕುರ್ವಣವನೀಕ್ಷಿಸಿ | ಕದನ ಚಾಪಟಮಲ್ಲಮರೆ ಹೂ |
ಡಿದನು ಗರುಡಾಸ್ತ್ರವನಮಮ ತುಂಡವನು ನೆರೆತೆರೆದು ||
ಕೆದರಿ ಜೋಡಿಸಿ ಪಕ್ಕವನು ಕಿಡಿ | ಯುದುರುತಿರೆ ಕಿಸುಗಂಗಳಲಿ ನೋ |
ಡಿದುದು ಖಗಪತಿಯುಡುಗಿದುದು ಪಡೆಗಳನು || ೫೪ ||

ಎಚ್ಚೊಡಾ ಕಾಂತೆಯನದು ಮೈ | ವೆರ್ಚಿ ಪರಿದಡೆಗಟ್ಟಿದುದು ಬಗೆ |
ಬೆರ್ಚಿಯೋಡುವ ಸರ್ಪಬಾಣದ ಕೋಟಿ ಹೆಡೆಗಳನು ||
ಕಚ್ಚಿದುದು ಕೊಚ್ಚಿದುದು ನಖದಲಿ | ಚುಚ್ಚಿದುದಮರ್ಚಿದುದು ಸತ್ತ್ವವ |
ನುಚ್ಚಿದುದು ನಿಮಿಷದಲಿ ತಿಂದುದು ಗರುಡ ಸಾಯಕವು || ೫೫ ||

ಅಳಿದುದಾ ಕಾಂತೇಯರೆದೆ ಉ | ಮ್ಮಳವು ಕೌರವನಾಂತ ಬಲು ಹೆ |
ಕ್ಕಳದೊಡನೆ ಬಾಯ್ಗಡಸಿದೆರೆದಪ್ಪಿನ ಫಣಿಯ ತೆರದಿ ||
ಅಳಲಿ ವಜ್ರಾಸ್ತ್ರವನೊಡನೆ ಸಂ | ಗಳಿಸಿ ಫಡಫಡ ಪಾರ್ಥ ನಿನ್ನನು |
ಉಳಿಯಲರಿಯದು ಕಾದುಕೊಳ್ಳೆಂದೆಚ್ಚನಾ ಕರ್ಣ || ೫೬ ||

ಭಾಳಲೋಚನನಿಷ್ಟು ಭೀಕರ | ಶೂಲವೋ ಕಲ್ಪಾಂತ ವಹ್ನಿ |
ಜ್ವಾಲೆಯೋ ಮೇಣರ್ಕನುಕ್ಕಿಂದಿಳಿವನೋಯೆನಲು ||
ಭೀಳ ಬಾಣವು ಬರಲು ಗೋಳಾ | ಗೂಳ ಕೇತನನೆಚ್ಚ ವಜ್ರ ವಿ |
ಶಾಲ ಬಾಣವು ಕಿಡಿಮಸಗೆ ಹಳಚಿದುದು ಮಧ್ಯದಲಿ || ೫೭ ||

ಉಳುಕುಗಳು ಹರಿತಂದು ತಮ್ಮೊಳು | ಹಳಚಿ ಕೆಡೆದಂದದಲಿ ಮಿರುಗುವ |
ಕುಲಿಶಶರಗಳು ತೊಡದು ಕೆಡೆದವು ನೋಟಕರು ಬೆದರೆ ||
ಅಳವು ಕೌಂತೇಯರಿಗೆ ಭುಜಬಲ | ದಳಿವು ಕುರುಪತಿಗಾಯ್ತು ಕಾದುವ |
ಕಲಿಗಳಿನ್ನಾರೆಂದು ಮನದಲಿ ಮರುಗಿದನು ಕರ್ಣ || ೫೮ ||

ವಿಷಮ ಭಾರತ ಮಲ್ಲನಾಗಳು | ಮಸಗಿ ದೇವತೆಯಂದುಕೊಟ್ಟ |
ರ್ವಿಸವುರಿಯ ಬಾಣವನು ಡೊಣೆಯಿಂದುಗಿದು ತೊಡಲೊಡನೆ ||
ವಿಸದಿಯನು ಕುಡಿದುದು ದಿನೇಶನ | ಹೊಸದುದಾಶಾಧಿಪರ ಹುರಿದುದು |
ವಸುಧೆಯನು ಬಿಸಿಮಾಡಿದುದು ಬೆದರಿಸಿತು ಮೂಜಗವ || ೫೯ ||

ಇದು ಜಗವು ಭುಂಬುಕವಿಮೂಘವು | ವಿದರ ಮುಂದೆತ್ತಾನು ಮಾಂತೊಡೆ |
ಮದನ ಹರನನು ಭಸ್ಮವನು ಮಾಡುವುದು ನಿಮಿಷದಲಿ ||
ಇದನು ತೊಟ್ಟೆಸೆ ನರನಳಿವ ನಾ | ಡಿದೆನು ಜನನಿಗೆ ಬೇಡಿಕೊಂಡೊಡೆ |
ಅದನೆ ಪಾಲಿಪೆನೆಂದು ಮನದಲಿ ನೆನೆದನಾಕರ್ಣ || ೬೦ ||

ತೊಟ್ಟ ಬಾಣವನಾಗ ಶರಧಿಯೊ | ಳಿಟ್ಟನಾ ಕಾನೀಯನಲ್ಲವೆ |
ಸೃಷ್ಟಿ ತಲೆಕೆಳಗಾದಡಂ ಸತ್ಪುರುಷರಾದವರು ||
ಕೊಟ್ಟ ಭಾಷೆಗೆ ತಪ್ಪುವರೆ ನೆರೆ | ತೊಟ್ಟಿಡುವ ಕಂಬನಿಗಳಿಂ ಹಾ |
ಯ್ಕೆಟ್ಟನಕಟಾರಾಯನೆಂದನು ತನ್ನ ಮನದೊಳಗೆ || ೬೧ ||

ಲೇಸಮಾಡಿದೆ ಕರ್ಣ ಕೌರವ | ನೀಸು ದಿನ ನೆರೆ ನಚ್ಚಿ ನಿನ್ನನೆ |
ಮೀಸಲಾಗಿಯೆ ಸಲಹಿದಡೆ ನೃಪನಾನೆಯೆಲ್ಲವನು ||
ಸೂಸಿದೆಯಲಾ ಪಾಂಡವರುಗಳ | ನೀ ಸಮಯದಲಿ ತಿಂದು ಬಹೆನೆಂ |
ದಾಶರವೆ ಹೇಳುವವೊಲದೆ ಕೇಳೆಂದನಾ ಶಲ್ಯ || ೬೨ ||

ತೊಡುತೊಡಿನ್ನೊಮ್ಮೀ ಮಹಾಸ್ತ್ರವ | ತೊಡುವದೀಗಳೆ ಪಾಂಡವರ ಕುಲ |
ವೊಡೆದುಗಾಗಿಸು ಹರುಬವನು ಜಯಸಿರಿಯ ಮುಂದಲೆಯ ||
ಹಿಡಿದು ತಂದೀವಿರಿವೆರಡು ಗುಣ | ಕೊಡೆಯನಾಗೈ ಕರ್ಣ ರಾಯನ |
ಕೆಡಿಸದಿರು ನೆನೆ ಜೋಳವಾಳಿಯನೆಂದನಾ ಶಲ್ಯ || ೬೩ ||

ಉಗುರಿನಲಿ ಹೋಹುದಕೆ ಕೊಡಲಿಯ | ನೆಗೆಯಬೇಕೇ ಶಲ್ಯ ಬಿಡು ಹುಲು |
ಹಗೆಯ ಗೆಲುವುದೆ ಕೆಡಿಸುವೆನೆ ಈ ದಿವ್ಯ ಸಾಯಕವ ||
ಸುಗುಡಗಡನೀ ರಥವ ಜೋಡಿಪ | ಬಗೆಯ ತೋರಿದೊಡರ್ಜುನನತಲೆ |
ಸಿಗಿಯಲೆಸುವೆನು ನಿಮಿಷದಲಿ ನೋಡೆಂದನಾಕರ್ಣ || ೬೪ ||

ಆದೊಡದೆ ನೋಡೆನುತ ರಥವನು | ಜೋಡಿಸಿದನಾ ಶಲ್ಯ ಕೃತವಿ |
ದ್ಯೋದಯದಿ ಪಾರ್ಥನನು ಬಳಸಿತು ಬೀಸುಗೊಳ್ಳಿವೊಲು ||
ಆ ದಿನೇಶಾತ್ಮಜಮಯವು ರಣ | ವಾದುದೆತ್ತಲು ಸರಳಮಳೆಯಲಿ |
ನಾದುದಂದರ್ಜುನನ ತನು ಭೂಪಾಲ ಕೇಳೆಂದ || ೬೫ ||

ಸರಳುಗಳು ಕೃಷ್ಣನ ತನುವನೊಂ | ದೆರಡು ಮಸೆದೋರಿದವು ಸಿತಮಯ |
ತುರಗಗಳನೊಂದೆರಡು ಕಣೆಗಲು ಭೇದಿಸಿದವೊಡನೆ ||
ಪಿರಿಯ ಕಪಿಯನು ಚುಂಬಿಸಿದವೊಂ | ದೆರಡು ಕೋಲ್ಗಳು ಚೋದಿಸುವಯೆಸು |
ವುರವಣಿಗೆ ಶಲ್ಯನನು ಪೊಗಳಿದರಾಗಸದಿಸುರರು || ೬೬ ||

ಎಲ್ಲಿ ಕಲಿತನು ಕರ್ಣನೀ ಕಡು | ಬಲ್ಲಿತಹ ಬಹುರೂಪಿಣಿಯನೀ |
ಬಲ್ಲಡುಸುರೆನೆ ಪಾರ್ಥತಿಳಿ ಬಹುರೂಪಿನಿಯಿದಲ್ಲ ||
ಶಲ್ಯ ಕೌಶಲ್ಯವು ಕಣಾ ಜಗ | ದಲ್ಲಣನೆ ಪೇಳುವೆನು ಭಾರತ |
ಮಲ್ಲನನು ಗೆಲುವೊಂದುಪಾಯವನೆಂದನಾ ಕೃಷ್ಣ || ೬೭ ||

ಮೊದಲು ಶಲ್ಯನನಿಕ್ಕು ಬಲ್ಲಂ | ದದಲಿ ಬಳಿಕಾ ಕರ್ಣನೊಳು ಕಾ |
ದಧಟಿನಿಂದಿನೆ ಸೂತ್ರವನು ಮಿಡಿದಂತೆ ಕಲಿಪಾರ್ಥ ||
ಹೊದೆಯಲುಗಿದೊಂದಂಬ ಕೈಚಳ | ಕದಲೆಸಲು ಶಲ್ಯನ ತಲೆಯು |
ರಿದುದು ನಿಂದುದು ಬಳಿಕ ಕಾನೀಯನ ಮಹಾರಥವು || ೬೮ ||

ಭುವನವಿಜಯನು ಪಾರ್ಥನಾ ಗಾಂ | ಡಿವವ ಹಿಡಿದಡೆ ಕಾಲನಾದಂ |
ಡವನು ತಳೆದೊಡೆ ರಥದ ಚಕ್ರಕೆ ಕೈಯನೀಡಿದಡೆ ||
ಪವನಜನು ಗದೆಗೊಂಡಡಿಂದ್ರನು | ಪವಿಯನಾಂತೊಡೆ ನಗಧರನು ಶಾಂ |
ರ್ಙ್ಗವ ತುಡುಕಿದಡೆ ನಿಲುವಸುಭಟನದಾರೊ ಧುರದೊಳಗೆ || ೬೯ ||

ನಿಂದು ಕಾಡುತ್ತೀರ್ವರಿರೆ ಬಳಿ | ಕೊಂದು ತೆರಪರಿದರ್ಜುನನು ಭೋ |
ರೆಂದೆಸಲು ಹೇಮಾದ್ರಿಯಗ್ರದ ಶೋಣಮಣಿಶಿಖರ ||
ಅಂದದೇಂ ಕೆಡದುದೊಯೆನಲು ಝ | ಲ್ಲೆಂದು ಕಿಡಿಕೆಂಡಗಳು ಚೆಲ್ಲುತ |
ಬಂದುಬಿಟ್ಟುದು ಮಣಿಮಕುಟವಂಗಾಧಿನಾಯಕರು || ೭೦ ||

ಕದನ ಚೌಪಟಮಲ್ಲನೊತ್ತಿನ | ಲೊದರಿದುದು ಜಯಶಂಕವಾತ್ಮಜ |
ಗೊದಗಿದುದು ಪರಿಭವವೆನಿಪ ಮನದಳಲಿ ನೀಂ ಕುಡಿದು ||
ಪದುಮಿನಿಯ ವಲ್ಲಭನು ನಿಸ್ತೇ | ಜದಲಿ ಮರೆಸಾರುವತೆರದಿ ಸಾ |
ರಿದನು ಪರ ಭೂಧರವನವನೀಪಾಲ ಕೇಳೆಂದಾ || ೭೧ ||

|| ಅಂತು ಸಂಧಿ ೫೪ಕ್ಕಂ ಮಂಗಲಮಹಾ ||