ಸಂಧಿ ೫೫

ಕುರುಪತಿಯನಾ ಭೀಮಸೇನನು | ವರಗದಾಯುದ್ಧದಲಿ ಗೆಲಿದನು |
ಭರದಿ ವೈಶಂಪಾಯನಾಖ್ಯ ಸರೋವರದ ಹೊರಗೆ || ಪದ ||

ಕೇಳು ಶ್ರೇಣಿಕ ಮಂಡಲೇಶ್ವರ | ಕಾಳಗವು ತೆಗೆದವರು ತಂತ |
ಮ್ಮಾಲಯಂಗಳ ಪೊಗಲು ಕರ್ಣನ ಮನದ ತೆರಪಿನಲಿ ||
ಮೇಳಿನಿತು ವೈರಾಗ್ಯಮಕುಟವು | ಶೂಲಪಾಣಿಗೆ ಬಾಗದುದರಣ |
ಕೇಳಿಯಲಿ ಹುಡಿಯಾಗೆ ಕೆಡೆದುದು ಸುಡುಬದುಕನೆಂದ || ೧ ||

ಮಾನಭಂಗವ ತಾಳ ಬಲ್ಲನೆ | ಮಾನಿಯುಪಶಾಂತತೆಯ ತಳೆದಾ |
ಭಾನಸೂನು ಸುದರ್ಶನೋದ್ಯಾನವನು ಹೊಕ್ಕಲ್ಲಿ ||
ತಾನು ದಮವರಸಾಗ ರಾಜ್ಯಮ | ಹಾನುಭಾವರ ಕೈಯೊಳೆರೆದು ಮ |
ಹೀ ನುತಾಶಾಂಬರತೆಯನು ಕೈಕೊಂಡು ವರ್ತಿಸಿದ || ೨ ||

ನಡೆದು ಜಿನತಪದಿಂದ ಸಗ್ಗವ | ಪಡೆದನಾ ಕಲಿಕರ್ಣನದರಿಂ |
ನಡೆವುತದೆ ಜನವರಿಯೆ ಕರ್ಣಸ್ಥಳಿಯೆನಿಪ ತೀರ್ಥ ||
ಪೊಡವಿಪತಿಯಾತನ ವಿಯೋಗದಿ | ಕಡು ದುಗುಡವನೆ ತಳೆದು ತನ್ನೆದೆ |
ಯೊಡೆದೊರಗದಾ ಬೆಳಗು ಜಾವದೊಳರಸ ಕೇಳೆಂದ || ೩ ||

ವರಕೃಪಾಚಾರ್ಯರು ನಿರೂಪಿಸಿ | ದುರುತರದ ಮಂತ್ರವನು ತಳೆದೀ |
ರ್ವರುನೊಡನೆ ನಡೆತಂದು ವೈಶಂಪಾಯನನೆನಿಪ್ಪ ||
ಸರಸಿಯನು ಮತ್ತಾರುಮರಿಯದ | ತೆರದಿ ಹೊರಹಜ್ಜೆಯಲಿ ಹೊಕ್ಕನು |
ಕುರುನೃಪತಿ ಬಹುರೂಪಿಣಿಯ ಸಂಧಿಸುವ ಭರವಸದಿ || ೪ ||

ಮರುಳಲಾ ಕುರುರಾಯ ನೀನೀ | ಸರಸಿಯನು ಪೊಗಬೇಡ ಕೇಳೈ |
ಮರುತಸುತ ನೀನೆಲ್ಲಿ ಪೊಕ್ಕೊಡೆ ನಿನ್ನನುಳುಹುವನೆ ||
ತಿರುಗಿ ಹೋಗೆಂದುಲಿವವೊಲು ಮಧು | ಕರನಿಕರ ಬಳ ವಿಹಗವುಲಿದವು |
ಧರೆಯೊಳಾರೊಳಕೊಂಬರೈ ದುರ್ನಯ ವಿದಗ್ಧರನು || ೫ ||

ಕುರುನೃಪತಿ ಜಪಗೈವುತಲ್ಲಿರೆ | ತರಣಿ ಮೂಡಿದವನಿತರೊಳು ಬಂ |
ದರಸನನು ಕಾಣದೆ ಕೃಪಾಶ್ವತ್ಥಾಮ ಮೊದಲಾದ ||
ಭರದನಾಯಕರೆಂದಿನಂದದಿ | ಧುರಧರೆಗೆ ಬಂದೊಡ್ಡಿನಿಲೆ ಸಂ |
ಗರದೊಳಗೆ ಕೌರವನ ಕಾಣದೆ ಪಾಂಡುನಂದನರು || ೬ ||

ದೊರೆಗಳನು ಪರಿವಾರವನು ಬಲು | ಧುರವ ಮಾಡಲು ವೇಳ್ದರಾಗಳು |
ಮರುತಿ ಮಾಮಸಕದಲಿ ಹಗೆ ಮೇಣೆಲ್ಲಿಯಡಗಿದರೆ ||
ಅರಸಿ ತಂದುಸುಗೊಂಬೆನೆಂದ | ಬ್ಬರಿಸಿ ನೆಡೆಗೊಳೆ ಭೀಮನೊಡನೆಯೆ |
ಪರಿದರೀ ನಾಲ್ವರು ಹೊರಗೆ ಭೂಪಾಲ ಕೇಳೆಂದ || ೭ ||

ಅರಿದರೆತ್ತಾನುಂ ನೃಪಾಲನ | ತೆರನನುರು ವಾದ್ಯಗಳ ಹೊಯಿಸುತ |
ಕೆರೆಯ ಬಳಸಿದರಾನೆಯಿಟ್ಟವುಡಲದ ಮರೆಹೊಗುವ ||
ತೆರದಿನೆಮ್ಮಣ್ಣನ ಧರಿತ್ರಿಯ | ಸೆರೆವಿಡಿದು ನೀಂ ಕೆರೆಯ ಹೊಕ್ಕಡೆ |
ಮುರಿಯದಿಹೆನೇ ನಿನ್ನ ಗಂಟಲನೆಂದನಾ ಭೀಮ || ೮ ||

ಕುರು ನೃಪಾಲಕ ಬೇಗ ಪೊರಮಡು | ಭರದಿ ಭಾರಿಯ ಗದೆಯ ಹಿಡಿಹಿಡಿ |
ಧರೆ ನಗದೆ ನಿನ್ನೊಂದು ಬೀರದ ಚಲದಹಂಕೃತಿಯ ||
ಉರಿವ ಚಂಡ ಭುಜ ಪ್ರತಾಪ | ಸ್ಫುರಿತ ವಹ್ನಿಯನಿಂದು ನೀರಲಿ |
ನೆರೆಹಿದೆಯೊ ನೀರಿಳೆದೆಯೋ ಹೇಳೆಂದನಾ ಭೀಮ || ೯ ||

ಮುಳಿದು ಬಂದೊಡೆ ಕೊಲುವೆ ಕೈದುವ | ನಿಳುಹಿ ಬಂದೊಡೆ ಕಾವೆನಗ್ರಜ |
ನಿಳೆಯ ನಿತ್ತಪೆನೆಂದೊಡಗ್ರಜನೆಂದು ವಂದಿಸುವೆ ||
ತಳೆದವೈ ಜಿನದೀಕ್ಷೆಯುಮನೆನ | ಲೊಲಿದು ಬಂದು ನಮೋಸ್ತು ಮಾಡುವೆ |
ನುಳಿದ ಕಾರ್ಯವನರಿಯೆನಿವರೊಳಗೊಂದ ಹಿಡಿಯೆಂದ || ೧೦ ||

ಅಳಿದರನುಜಾತ್ಮಜರು ಸುಭಟರು | ಕಳಿದರೆಂಬೊಂದಳಲು ಮನದೊಳು |
ಮೊಳೆತ ಬಳಿಕೆದೆಗಲಿಗಳಾದವರೆಯ್ದೆ ರಣದೊಳಗೆ ||
ಅಳಿಕದಿರಿದಾಡುವುದೆ ಅರಮ | ಕ್ಕಳಿಗೆ ಧರ್ಮವಿದಲ್ಲದಕಟಾ |
ಮುಳಿದ ಚೇಟಿಯ ತೆರದಿ ಬೀಳ್ವುದೆ ನೀರ ನೀನೆಂದ || ೧೧ ||

ಲಲನೆಯರ ಮೇಳದಲಿ ಹೋಗುವುದು | ಕೊಳನನಲ್ಲವೆ ವೀರಲಕ್ಷ್ಮಿಯ |
ಮೊಲೆಯ ಬೇಗೆಯ ಬಿಡದೆ ಖಡ್ಗಾಂಗನೆಯ ಕೈವಿಡಿದು ||
ಕಳಗೊಳನ ಪೋಗುವುದು ಯಿದರಮ | ಕ್ಕಳ ವಿನೋದ ಕ್ರೀಡೆಯಲ್ಲದೆ |
ಜಲಚರದವೊಲು ನೀರೊಳೇಂ ಪೊರಮಡು ತಡೆಯದೆಂದ || ೧೨ ||

ಸಿರಿಕೆಡುವ ಕಾಲದಲಿ ಧೈರ್ಯದ | ಗಿರಿಗೆ ಪಕ್ಕವು ಬಹುದಲಾ ಕಾ |
ಪುರುಷರಿಗೆ ಚಲವಲೆದು ಜಾಣುಮೆಗೂಣೆಯವು ಬಂದು ||
ಬಿರಿದು ಬಿರಿದಳವಳಿದು ಕೀರಿತಿ | ಸಿರಿಯ ಮೈಸಿರಿ ಕಂದುವುದು ನೀ |
ಕುರುಕುಲಾಗ್ರಣಿ ನಿನಗೆ ಗುಣವಿದೆ ಎಂದನಾ ಭೀಮ || ೧೩ ||

ಮಡವಿನೊಳಗಣ ಕೃಷ್ಣ ಸರ್ಪನ | ಹಿಡಿದು ಕೃಷ್ಣನು ಕೊಂದವೊಲು ಕ |
ಮ್ಮಡುವ ಹೊಕ್ಕಹಿಕೇತನನ ಹಿಡಿತಂದು ತಡಿಯಲ್ಲಿ ||
ಬಡಿದು ಕೊಲುವೆನೆನುತ್ತ ಮಾರುತಿ | ಯಡಿಯಿಡುವ ಸಮಯದಲಿ ಪಾಂಡವ |
ರೊಡೆಯ ಕಂಡೆನ್ನಾಣೆ ನಿಲು ನೀನಿಳಿಯ ಬೇಡೆಂದ || ೧೪ ||

ಎನಲು ನಡನಡ ನಡುಗಿದನು ಭೀ | ಮನು ತಿಳಿದು ಕೇಳನುಜ ಕ್ಷತ್ರಿಯ |
ತನುಜರಿಗೆ ನೀರ್ವೊಕ್ಕ ಪುತ್ತೇರಿದ ಮರನನಡರ್ದ ||
ಅನುವರದಲೆರಗಿನ ನಿಜಾಯುಧ | ವನು ಬಿಸುಟ ಪಲುಗರ್ಚಿದೆಳೆ ಶಿಶು |
ವೆನಲು ಬೆರಳನು ಕಚ್ಚಿದನಿಬರವಧ್ಯರವರೆಂದ || ೧೫ ||

ಎನಲು ಜೀಯ ಹಸಾದ ದೇವರು | ಸುನಯವನು ಚಿತ್ತೈಸದಿರಿಯೆಂ |
ದನಿತು ಪರಿಯಲಿ ಜರೆದು ಕರೆದಡೆ ಕೊಳನ ಪೊರಮಡದೆ ||
ಜನಪನಲ್ಲಿರೆ ಸಿಂಹನಾದವ | ನನಿಲಜನು ಮಾಡಿದೊಡೆ ನೀರ್ಗಿ |
ಚ್ಚೆನಿಸಿ ನೀರೊಳಗುರಿದುದಾತನ ಕೋಪ ಶಿಖಿ ಭರದಿ || ೧೬ ||

ಮಿಗೆ ಮಸಗಿ ಫಣಿಪತಿಯೆ ರಸೆಯಿಂ | ನೆಗೆದನೋ ಎನೆ ಪೂಗೊಳದಿ ತಾಂ |
ನೆಗೆದು ಬಂದನು ಮಕುಟಮಣಿಗಣಕಿರಣ ಪೆಣೆದಣೆಯೆ ||
ಹೆಗಲ ಮೇಗಣ ಗದೆಪಿಡಿದು ತಿ | ರ್ರ‍ಗೆ ತಿರುಹುತಕ್ಷಿದ್ವಯದಿ ಕಿಡಿ |
ಯೊಗುತ ಬಂದನು ಗರ್ಜಿಸುತ ಕಲಿ ಕೌರವೇಶ್ವರನು || ೧೭ ||

ಹರೆಯ ಹೊಯ್ದಡೆ ಬಾಯ್ಗೆ ಬಂದುದ | ಜರುಚಿದಡೆ ನಾಂ ಸರಕು ಮಾಡೆನು |
ಮರುತಸುತನಾ ಸಿಂಹನಾದಕೆ ನನ್ನ ಕೋಪಾಗ್ನಿ ||
ಮರಯಿಸಿತು ಮಂತ್ರವನು ಕೇಳಿರೆ | ವರಕೃಪಾಚಾರ್ಯನೆ ಬಿಡಿಂ ನೀ |
ತೆರನನೇನೈ ಭೀಮ ನಿನಗೇಂ ಬೇಕು ಹೇಳೆಂದ || ೧೮ ||

ನೆಲನ ಮುನ್ನವೆ ಕೊಂಡು ಗದೆಪಿಡಿ | ದೊಲೆವುತಿಹ ಕಲಿಭೀಮನೆಂದನು |
ಜಲಚರಂಬೊಲು ಜಲವ ಹೊಕ್ಕೊಡೆ ಧರ್ಮನಂದನನು ||
ನೆಲನ ಬಿಡುವೆನೆ ಕೆಮ್ಮನೊಪ್ಪಿಸು | ಕಲಹಬೇಕೇ ಕಾದೆನಲು ನಿನ |
ಗಳುರಿ ನುಂಗಿದ ಚಲವನುಗುಳುವನಲ್ಲ ತಾನೆಂದ || ೧೯ ||

ಎಂದೊಡಾಗಳು ಧರ್ಮಸುತ ಪರಿ | ತಂದೆರಗಿ ಎಲೆ ಕುರುಕುಲಾರ್ಣವ |
ಚಂದ್ರ ಸುಕ್ಷಮೆಯಿಂದ ಕೇಳಿನ್ನೊಂದು ಬಿನ್ನಹವ ||
ಬೆಂದ ರಾಜ್ಯವದೇಕೆ ನಿನ್ನವ | ನೆಂದೆ ಸಲಹೆಮ್ಮುವನು ರಾಜ್ಯವ |
ನಿಂದೆ ಬಿಟ್ಟೆನು ಹುಸಿದೆನಾದಡೆ ಪಾಂಡವಾಣೆಂದ || ೨೦ ||

ಎನಲು ಗಹಗಹನೆಂದು ನಕ್ಕನು | ತನುಜರನುಜರು ಮಡಿದು ನಿಮ್ಮೊಳು |
ಮನವೊಲಿದು ನಾ ನಡೆಯಬಲ್ಲೆನೆ ಮಾಣ್ಪುದೀ ಮಾತ ||
ಅನಿಲಜನೋ ಮೇಣ್ ನೀನೊ ನರನೋ | ಮೊನೆಗೆ ಮೇಣ್ ನೀವೈವರೋ ನಿ |
ಮ್ಮನುವಿಗಿದ್ದವೊಲಾಗಿಯೆಂದನು ಮುನಿದು ಕುರುರಾಯ || ೨೧ ||

ಖಡುಗವನು ಕೊಳು ನೀನು ಗದೆಯನು | ಹಿಡಿಯಲಾತನು ಗಾಂಡಿವಕೆ ಕೈ |
ಗೊಡಲಿವನು ಕೊಂತಗಳನಾಂತವರಧಟಿನಿಂ ಬರಲಿ ||
ಹಿಡಿದುದೆನಗೀಯೊಂದೆ ಗದೆಯಲಿ | ಬಡಿದು ಕೆಡಹುದ ಪಕ್ಕಿವಿಂಡನು |
ಗಿಡುಗನೊಂದೆಂದದಲಿ ಮಾಡುವೆನೆಂದು ತರಿಸಂದ || ೨೨ ||

ಅರಸನಿಂತಾಡಲು ಕೃಪಾಚಾ | ರ್ಯರು ಯುಧಿಷ್ಠಿರರಾಯಡೊಂಬಿಯ |
ಧುರವಿದೇತಕೆ ಧರ್ಮಗಾಳೆಗಕೋರ್ವರಿದಿರಾಗಿ ||
ನೆರೆದ ನೋಟಕರಂತೆ ಮಿಕ್ಕವ | ರಿರಿಯೆನಲು ಧರ್ಮಜನೊಡಂಬಡೆ |
ಕುರುಪತಿಯು ಮಾರುತಿಯುಮಭಿಮುಖವಾದರಾಖ್ಷಣಕೆ || ೨೩ ||

ಭರದಿ ಗದೆಗಳ ತಿರುಹಿ ಚಕ್ರವ | ತಿರುಹಿದಂದದಿ ತಿರುಹಿತಖಿಳೋ |
ರ್ವರೆ ನಭೋಂಗಣದಲ್ಲಿ ನೋಡುವರಕ್ಷಿ ಭವಣಿಯಲಿ ||
ತಿರುಗಿದುದು ಓರೋರ್ವರಡಿಯಿಡೆ | ಧರೆಯ ಪೊತ್ತಹಿತಪತಿಯ ಕೊರಳಂ |
ದೆರಡುಕಡೆಗೋಲಾಡಿದುದು ಭೂಮಾನವಿಡಿದಿರಲು || ೨೪ ||

ಮುಳಿದು ಬಂದಂತಕರದೀರ್ವರು | ಕಳನ ಪೊಕ್ಕರೊ ದಂಡವಿಡಿದೆನೆ |
ಕಲಿಗಳೋರೋರ್ವರನು ಕಂಣಲಿನುಂಗುವಂದದಲಿ ||
ಅಳುರೆ ನೋಡೆಯುಧಿಷ್ಠಿರನ ಕ | ಣ್ಗಳಲಿ ಹೊಳೆಯನು ತಹೆನು ವಜ್ರದ |
ಮಳೆಯ ತಾಳುವಕೊಡೆಯದಾವುದು ಭೀಮ ಹೇಳೆಂದ || ೨೫ ||

ಅರಿಯ ಬಹುದಿಂತಡವೆ ಕುರುಕುಲ | ದೆರೆಯ ತೋರೈ ನಿನ್ನ ಒಲುಮೆಯ |
ನರಿಯದವರೇ ಕಂಡೆವಲೆ ಲಾಕ್ಷಾಗೃಹದಲೊರ್ಮೆ ||
ಮುರಿದೆ ನಮ್ಮೆಲ್ಲರನು ಶಕುನಿಯ | ಮರೆಯ ಢಾಳದಲೊರ್ಮೆ ನೀ ಕೈ |
ಮೆರೆದೆ ನಿನ್ನವೊಲಧಟರಿನ್ನಾರೆಂದನಾ ಭೀಮ || ೨೬ ||

ಕಾಲಜನ ಕಂಣೆನಿಪ ರಾಯನ | ಕೋಲು ತೆಗೆದಂ ಕವಿದು ಕೈಮಾ |
ಡಾಳುತನವನು ತೋರನಲು ಕಡುಮಸಗಿ ಬಲುಗದೆಯ |
ಚಾಳೆಯದಿ ಢಾಳಿಸುತ ಹಾವಿನ | ನಾಲಗೆಯವೊಲು ಮೊನೆಯೊಲೆದು ಮಿಗೆ |
ಮೇಲುವಾಯ್ದಪ್ಪಳಿಸಿದನು ಖಾತಿಯಲಿ ಕುರುರಾಯ || ೨೭ ||

ಹೊಯ್ಯಲಾ ಘಾಯವನು ಮಾರುತಿ | ಮೈಯ ವಂಚನೆಯಿಂದ ತೆಗೆದರೆ |
ಗೈಯ ತೋರಿದೆ ಕಾದುಕೊಳ್ಳೆಂದೆತ್ತಿ ಮಾರ್ಪೊಡೆಯೆ ||
ಒಯ್ಯನಂಗನ್ಯಾಸದಲಿ ಹೊರ | ಕೈಯ ಮಾಡಿದನರಸು ಮಝ ಭಾ |
ಪ್ಪಯ್ಯದೇಂ ಸಾಧಕರೊಯೆಂದುದು ನೋಟಕರ ನೆರವಿ || ೨೮ ||

ಮತ್ತೆ ಬಲಹಜ್ಜೆಯಲಿ ಗದೆಗಳ | ತೆತ್ತ ಕೊಟ್ಟಣೆದಣೆದು ನೋಡಿದ |
ರೊತ್ತಿ ಬಲಿಕಾ ಮೈಯೊಳಗೆಗದೆಗಳನು ನೆರೆ ನೆಗೆದು ||
ಕಿತ್ತರಾ ಹೆಜ್ಜೆಗಳ ನೀರೊಳ | ಗೊತ್ತರಿಪ ಸಾಲಗನೆನಲು ಪದ |
ವೆತ್ತುದಣಿದರು ಪೂತು ಹೊಯ್‌ಹೊಯ್ಯೆಂದಬ್ಬರಿಸಿ || ೨೯ ||

ಮತ್ತೆ ಹೊಯ್ದನು ಹೊಯ್ದಡದನಡೆ | ಗೊತ್ತಿದನು ಕುರುರಾಯ ಗದೆಯಲಿ |
ಕುತ್ತಿದನು ಚಾಳಯದಿಡವರಿಸಿ ತೆಗೆದು ಕಲಿಭೀಮ ||
ಬಿತ್ತರದಿ ಬೀಸಿದನು ಬೀಸಿಗೆ | ತೆತ್ತ ಕೊಡದೆಡಹೆಜ್ಜೆಯಲಿ ಹೊರ |
ಗೊತ್ತಿದನು ಮಸೆಗಾಣಿಸುವುದರಿದಾದುದೀರ್ವರಿಗೆ || ೩೦ ||

ಗರುಡಿಯೊಳಗಣ ಪರಡಿಗಳ ಬಿ | ತ್ತರದ ಮೇಳದ ಹಿಡಿತವೆನೆ ನೋ |
ಳ್ಪರ ಬಗೆಗೆ ತೋರಿದರು ಬಳಿಕಹಿಕೇತನನು ಪೊಡೆಯೆ ||
ಬರಸಿಡಿಲ ಬಲ್ಲುಲಿಯೊಯೆನೆ ಭೋ | ರ್ಗರೆದು ಬರೆ ಮುಗಿಲುದ್ದನೆಸೆದದ |
ನೆರಚಿದನು ಕೌರವ್ಯ ಕಾಲಾನಳನು ನಿಮಿಷದಲಿ || ೩೧ ||

ಬಂದು ಜವನೆನೆ ಯೀವ ಹೊಯ್ದಡೆ | ದಂದಶೂಕ ಪತಾಕನಿಂದಧ |
ಟಿಂದ ಚೆಕ್ಕನೆ ಸಿಂಹಲಂಘನದಿಂದಲಾ ಗೆದ್ದು ||
ಮುಂದೆ ಗಿರ್ರ‍ನೆ ಬಂದು ಪೊಯ್ದಡೆ | ಸಂದ ರುಧಿರೋದ್ಗಾರಿ ಗದೆಯಿಂ |
ನಂದಿಸಿದನದ ನಣೆದ ಕಿಡಿ ಪೂರಿಸಿತು ಗಗನವನು || ೩೨ ||

ಗಜೆಗಜೆಗಳಿಂದಣದ ದನಿಗಳು | ಗುಜರು ಮುಗಿಲಲಿ ಸಿಲುಕಿ ಈಗಳು |
ಗಜರುತಲೆಯೆನೆ ಪೊಯ್ಯೆ ತೆರಪರಿದಾ ಸುಯೋಧನನು ||
ಬಜೆಯ ಕಾರಿಪೆನಲ್ಲದೊಡೆಯಿದು | ಭುಜವೆಯೆನುತೆರಗಿದಡೆ ಧನು ಪವ |
ನಜನು ಬಾರಿಸಿ ಕಟ್ಟಿದೆಡೆ ಸೆಳೆದೀಕ್ಷಿಸಿದ ತೆರಪ || ೩೩ ||

ಇದು ಮದೀಯಾತ್ಮಜರ ಕೊಲೆಗಿದು | ಇದು ನಿಜಾನುಜರಳಿದುದಕ್ಕಿದು |
ಇದುವೆ ಬಹುರೂಪಿನಿಯ ಪಡೆವುದಕೆಡಿಸಿದುದಕೆಂದು ||
ಸದೆದನಾ ಪಿಂಗಾಕ್ಷನುರೆ ಪೆ | ಚ್ಚಿದ ತೊಡೆಗಳನು ನಡುವನುರೆ ಕೊ |
ಬ್ಬಿದ ಭುಜವನದ ಬಗೆದನೇ ಕಲಿ ಭೀಮನೆಡೆವಡೆದು || ೩೪ ||

ಇದುವೆ ಲಾಕ್ಷಾ ಗೇಹ ದಾಹ | ಕ್ಕಿದುವೆ ಕಪಟದ ಜೂದುಗೈತ |
ಕ್ಕಿದುವವಧಿಯನು ಸಲಿಸಿದೊಡಮಿಳೆಯೀಯದುದಕೆಂದು ||
ಮೊದಲು ಕುರುಪತಿ ಪೊಯ್ವವೊಲು ಸ | ಮ್ಮದದಿ ತೊಡೆನಡುತೋಳುಗಳನಿರ |
ದೊದಗಿ ವೊಯ್ದನುಮನಿಸುಮರ್ಮವ ನೆಚ್ಚರಿಸದಿಹುದೆ || ೩೫ ||

ಆಯವರಿದಾ ಮತ್ತೆ ಕೌರವ | ರಾಯನಾ ಪವನಜನ ವಜ್ರ |
ಪ್ರಾಯವಹ ಪೆರ್ದೊಡೆಯ ಹೊಡೆದೊಡೆ ಗದೆಮುರಿದು ತುಂಡು ||
ವಾಯುಪಥಕದು ಸಿಡಿಲುಮುರಿಯೆನೆ | ಪಾಯೆ ನೆರೆದೀಕ್ಷಿಸುವ ದಿವಿಜನಿ |
ಕಾಯವೋಡಿತು ವೀರಿವಿಮ್ಮಡಿಸಿದುದು ಕುರುನೃಪಗೆ || ೩೬ ||

ಫಡಫಡೆಂದಾರ್ಭಟಿಸಿ ಕೈಯಲಿ | ಹಿಡಿದ ಮುರಿಯಿಂದಿಟ್ಟು ಭಾನುವ |
ಹಿಡಿವವೊಲು ಭಾನುದ್ದನೆಸೆದೊಡೆ ಗದೆಯಾಲವಟೊಣೆದು ||
ಕಡುಜವದಿ ಸಿಲುವಾಗಳನಿಲಜ | ನಡಸಿ ಹೊಡೆದೊಡೆ ತೊಡೆಯುಡಿದುಗಿರಿ |
ಕೆಡೆದವೊಲು ನೆಲನದಿರೆ ಕೆಡೆದನು ಕುರು ನೃಪಾಲಕನು || ೩೭ ||

ಮೊಳಗಿತಾ ಸಮಯದಲಿ ಪಾಂಡವ | ರಳವಿಯಲಿ ಜಯಭೇರಿ ನಿಜಕರ |
ತಳಕೆ ಬಂದುದು ಮೂಜಗದ ಸಿರಿಯೆಂದು ಸಂತಸವ ||
ತಳೆದನಾ ಕಲಿಭೀಮ ತನ್ನಯ | ಮುಳಿಸನಾ ಕೌರವನ ಗರ್ವವು |
ಘಳಿಲನೊಡಗೊಂಡೋಡಿದಂತೆ ಕೌರವನನೀಕ್ಷಿಸಿದ || ೩೮ ||

ಅರರೆ ಕುರುಕುಲನೃಪ ಶಿರಃಶೇ | ಖರನೆ ಪಿಡಿದೊಂದುದ್ಧತಿಕೆಯನು |
ಬಿರಿದು ಬಿಂಕವ ಕೊಂಡು ಚಲವನು ಕಡೆತನಕ ಬಿಡದ ||
ಅರಸು ಮಗನವನಾವನೋ ಈ | ಧರೆಯೊಳೆಂದುರೆ ಹೊಗಳುತವೆಯಿರ |
ದೆರಗಿದನು ನಿಜಗದೆಯ ತೊನವುತ ಬಂದುಧರ್ಮಜಗೆ || ೩೯ ||

ಭೂನುತರು ನಿಃಶೇಷರಿಪು ಸಂ | ತಾನನಾಗಳು ಧರ್ಮಜನು ಪವ |
ಮಾನಸೂನುವ ಪರಸಿ ವಿಜಯಧ್ವಜವನೆತ್ತಿಸುತ ||
ಸಾನುರಾಗದಲನುಜರೊಡನಾ | ಸೇನೆಯನು ಪೊಕ್ಕಿರಲು ಮುರರಿಪು |
ತಾನಿದೆಲ್ಲವ ಕೇಳಿ ಸಂತಸದಂತವೈದಿದನು || ೪೦ ||

ಮಾರುತಿಯ ಭುಜವಿಜಯ ರುಧಿರೋ | ದ್ಗಾರಿ ಗದೆಯಿಂ ಕೌರವೇಶ್ವರ |
ನೂರುಯುಗವುಡಿದುದ ಜರಾಸಂಧನು ತಿಳಿದು ಬಳಿಕ ||
ಕೌರವನನಲ್ಲಿಗೆ ತರಿಸಿ ಕ | ಣ್ಣಾರ ಕಂಡುರೆನೊಂದು ತಕ್ಕುಪ |
ಚಾರವನು ಮಾಡಿಸಲು ಬೀಡಿಗೆ ಕಳುಹಿಸಿದನಾಗ || ೪೧ ||

ಕುರುನೃಪಾಲಕನಾ ಪ್ರತಾಪದ | ತರಣಿಯೊಡನಸ್ತಮಿಸೆ ತತ್ಕುರು |
ಬಲದ ಮುಖಕಮಲದೊಡನರವಿಂದಗಳು ಮುಗಿಯೆ ||
ವರಧರಾದೇವಿಯವೃಗಿಂದೀ | ವರವು ಪಾಂಡವ ದರ ಹಸಿತ |
…………………………………………. || ೪೨ ||

ವರಯುದಿಷ್ಠಿರರಾಯ ತಮ್ಮಂ | ದಿರುವೆರಸಿ ನಿಜಶಿಬಿರದೊಳಗಾ |
ಕುರಪತಿಯನನಿಲಜನು ಜಯಿಸಿದ ಮಾತೆಮಾತಾಗಿ ||
ಇರುತಿರಶ್ವತ್ಥಾಮನಾ ಕುರು | ವರನನೀಕ್ಷಿಸಿನೊಂದು ನಿಜಬಲ |
ವೆರಸಿನಟ್ಟಿರುಳಟ್ಟಿರಿದನಾ ಪಾಂಡುಬಲದೊಳಗೆ || ೪೩ ||

ಜವನೆನಶ್ವತ್ಥಾಮ ಹೂಣಿಸಿ | ಕವಿದಿರಿವುತಿರಲಾಗಳಾ ಪಾಂ |
ಡವ ಪತಾಕಿನಿ ಹಳೆಗಳೆಂದೊಳಗೊಳಗೆ ಕಡಿದಾಡಿ ||
ಹವಣಿಸಿದ ಭಟರಳಿದರೆತ್ತಲು | ತವತವಗೆ ಗಜತುರಗರಥಗಳ |
ನವಯವದಿ ಸರುಕಟ್ಟಿದುದು ಕಡುಗಲಭೆ ಮಸಗಿದುದು || ೪೪ ||

ಅವನಿ ಪತಿಗಳು ತವತವಗೆ ತ | ಮ್ಮವರು ಸಹ ಫೌಜಾಗಿ ನಿಲೆ ಪಾಂ |
ಡವರದೇತರ ಗಲಭೆಯೆನೆ ತಾನೋಡಿ ಬಹೆನೆಂದು ||
ಅವನೆ ಬಯಸಿದ ವಸ್ತು ಬಹುವೊಲು | ತವಕಿ ದೃಷ್ಟದ್ಯುಮ್ನ ನಾಂತನು |
ಕವಿಯ ಕಾಳಗವತಿ ಭಯಂಕರವಾಯ್ತು ನಿಮಿಷದಲಿ || ೪೫ ||

ಸುರಿಗಿರಿವ ಭಟ ನಿಕರವನು ಧಿ | ಕ್ಕರಿಸಿ ಹೆಣಗಳಮೆಟ್ಟಿ ಸಿಂಹವು |
ಕರಿಯ ಮೇಲ್ವಾಯ್ದಂತೆ ದೃಷ್ಟದ್ಯುಮ್ನ ಭೂವರನ ||
ಪಿರಿದು ಕೋಪದಲಾರ್ದುಯಿರವೆಸ | ನುರುವಗೆಯ್ದೆಂಬಂತೆ ಕೊಯ್ದನು |
ಕೊರಳನಶ್ವತ್ಥಾಮನಿರದೊಳಪೊಕ್ಕನಾ ಫೌಜ || ೪೬ ||

ದ್ರುಪದನಾತ್ಮಜ ಮಡಿದನೆಂದಾ | ದ್ರುಪದನಾ ಮೊಮ್ಮಕ್ಕಳೈವರು |
ವಿಪುಳ ಕೋಪದಿ ತಾಗೆ ಪಾಂಡವರೆಂದೆ ನೆರೆಕಾದಿ ||
ಕುಪಿತನಾ ಪಾಂಚಾಲರೈವರ | ನಪಹರಿಸಿ ತಲೆಗೊಂಡು ಮಿಗೆ ಘೂ |
ರ್ಣಿಪ ಪಡೆಯನೊಡಹೊಯಿಸಿ ಹೋದನು ತನ್ನ ಪಾಳೆಯಕೆ || ೪೭ ||

ತಲೆಗಳನು ಕುರುಭೂಪತಿಯ ಮುಂ | ದುಳುಹಿದನು ಪಾಂಡವರ್ಗಳೈವರ |
ತಲೆಗಳಿವು ನಿಮ್ಮಡಿಯವರಬವು ಬಂದಿತೇ ರಾಯ ||
ಕಲಿಯ ದೃಷ್ಟದ್ಯುಮ್ನ ಭೂಪನ | ತಲೆಯಿದೆಯಲಾ ತನ್ನ ತಂದೆಯ |
ಕೊಲೆಯ ಮರಳಿಸಿ ತಂದೆನೆಂದನು ಗುರುತನೂಭವನು || ೪೮ ||

ಎಂದೊಡೀಕ್ಷಿಸಿ ತಿಳಿದು ಪಾಂಡವ | ನಂದನರ ತಲೆಯಲ್ತು ಬರಿದೇಂ |
ಕೊಂದೆಯಲ ಪಾಂಚಾಲರನು ಶಿಶುವಧೆಯು ಬಂದಿತಲ ||
ಎಂದು ಅಶ್ವತ್ಥಾಮನೊಳು ನೃಪ | ಸಿಂಧು ನುಡಿದೆನಗೇಕೆ ಹಿಂಸಾ |
ನಂದವೆಂದುಪಶಮವನಾಂತನು ಭೂಪ ಕೇಳೆಂದ || ೪೯ ||

ಮಾಡಿದನು ಮೇಲರಿಯದಧಿಕರ | ಕೂಡೆ ಜಗಳವನವರು ಬೆದರಿಸೆ |
ಹೇಡಿಯಿಂದದಿಛಲವನುಗುಳಿದನೆಂಬುದಿಳೆಯೆಂದು ||
ಕೋಡದಿರಿದಾಡಿದೆನು ನನ್ನೊಳು | ಕೂಡಿದನ್ನಯದಿಂದ ಜಯಿಸಿರಿ |
ನೋಡಿದಳು ತಾನವರನೆಂದನು ಕೌರವರರಾಯ || ೫೦ ||

ಅಳಿದವರಿಗಾಗಿಸುವ ಶೋಕವ | ಸುಳಿದವರಿಗಾಗಿಸುವ ಮೋಹವ |
ನುಳಿದವರಿಗಾಗಿಸುವ ಕೋಪವನೊರ್ಮೊದಲೆ ತಳೆದು ||
ತಿಳಿದು ತನ್ನೊಳೆತಾನು ಶಾಂತತೆ | ದಳೆದು ವಿದುರಾಚಾರ್ಯವರ್ಯರ |
ಬಳಿಗೆ ಬಂದುನಮಸ್ಕರಿಸಿಯಿಂತೆಂದ ಕುರುರಾಯ || ೫೧ ||

ಅದಯನಾನತಿ ಪಾಪಿಯೊಡವು | ಟ್ಟಿದರ ಕೊಲೆಗೆಣಿಸಿದೆನು ಜೂಜಾ |
ಡಿದೆನು ರಾಜ್ಯವ ಸೆಳೆದೆ ಪೊರವಡಿಸಿದೆನವರನುರದೆ ||
ವಿದಿತರೊಳ್ಳಿತನಾಡಿದಡೆ ಕೇ | ಳದೆ ಸಮಸ್ತರ ಕೊಲಬಯಸಿ ಕಾ |
ದಿದೆನು ಕಂಡೆನು ಕೈಯೊಡನೆ ಆ ಫಲವನಾನೆಂದ || ೫೨ ||

ತೊರೆದೆನಿನ್ನೆಲ್ಲವನು ಚಿತ್ತದ | ಮರೆ ತೆರೆದುದಿಂತಡೆದನಾದಡೆ |
ಅರೆಮರುಳ ನಾನಹೆನೆನುತ ದಿಗುವಸನತೆಯನಾಂತು ||
ಕಿರಿದುಳಿದು ಮಕ್ಕಳುವೆರಸಿ ತಾಂ | ನೆರೆದಸುಸಮಾಧಿಯಲಿ ತನುವಿನ |
ಹೊರೆಯುಳಿದು ದಿವದರಸನಾದನು ಭೂಪ ಕೇಳೆಂದ || ೫೩ ||

ವರಶತೇಂದ್ರಾರ್ಚಿತ ಜಿನೇಶ್ವರ | ಚರಣಕಮಲಭ್ರಮರ ವಿಭ್ರಮ |
ಸುರಸಕವಿ ಸಾಳುವ ರಚಿತ ಮೃದುಲಲಿತರಸಭರಿತ ||
ಪರಮ ನೇಮಿಜಿನೇಂದ್ರ ಪಾವನ | ಚರಿತೆಯೊಳು ಪನ್ನೆರಡನೆಯದಿದು |
ದೊರೆವಡಿದುದೀ ಯುದ್ಧಪರ್ವವು ನಿಖಿಳ ಭೂಭುಜರ || ೫೪ ||

|| ಅಂತು ಯುದ್ಧ ಪರ್ವಕ್ಕಂ ಸಂಧಿ ೫೫ ಕ್ಕಂ ಮಂಗಲಮಹಾ ||