ಸಂಧಿ ೪೮

ಆಹವ ತ್ರಿಪುರಾರಿ ಚಕ್ರ | ವ್ಯೂಹವನು ಹೊಕ್ಕಿರಿದು ವಿಕ್ರಮ |
ಸಾಹಸಿಗನಭೀಮನ್ಯುವಮರಿಯರುರಲೊರಗಿದನು || ಪದ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ಸಂಗರ ವಿಜಯದೋರ್ವಳ |
ಸಾಲಿಗಳು ಪಾಂಡವರು ಯಾದವರೊಗ್ಗಿ ನಿಲಲೊಡನೆ ||
ಸ್ಥೂಲ ಭುಜದ ವಿಶಾಲವಕ್ಷದ | ಕಾಲ ತೊಡರಿನ ಚಲುವಿಕಯ ಕ |
ಟ್ಟಾಳು ಸಮರ ಕುತೂಹಲನು ನಡೆತಂದನನಭಿಮನ್ಯು || ೧ ||

ನಗೆಮೊಗದ ಕೊನೆಮೀಸೆ ಮೈಯೊಳು | ತಿಗುರುಗುಂಕುಮ ಹೊನ್ನ ಬಣ್ಣವ |
ಮಿಗುವ ತನುರುಚಿ ತೊಟ್ಟ ರನ್ನದ ಜೋಡು ಬತ್ತಳಿಕೆ ||
ಬಿಗಿದ ತೊಂಗಲು ಕಾಸೆಯೆಡಗೈ | ಸೊಗಸುವಿಲ್ಲಿವು ವೀರರಸವನು |
ಮೊಗೆದು ತುಳಕಲು ಮಣಿರಥದಲಭಿಮನ್ಯುವೈತಂದ || ೨ ||

ಬಂದು ಕಮಲಾಕ್ಷಂಗೆರಗಿ ಜೀ | ಯೊಂದು ಬಿನ್ನಹವೆನಗೆ ಕರುಣದ |
ಲಿಂದು ಸೇನಾ ಪಟ್ಟವನು ಪಾಲಿಸುವುದೆಂದೊರೆಯೆ ||
ಒಂದಿನಿತು ತಾನಾತನಾನನ | ಚಂದಿರವನೀಕ್ಷಿಸಿ ಬಳಿಕಯಮ |
ನಂದನನೊಳಿಂತೆಂದನತಿದಯೆಯಿಂದ ಕಂಸಾರಿ || ೩ ||

ಹಸುಳೆಯೀಯಭೀಮನ್ಯು ಬಿಸಸನ | ಬೆಸನ ಬೇಡಿದೊಂಡಿಂತು ಕೊಡಬಹು |
ದುಸುರಿಮೆನೆ ಧರ್ಮಜನು ನಸುನಗುತೀ ಕುಮಾರಕನು ||
ಹಸುಳೆಯೆಂದೆನ ಬಹುದೆ ಪರಿಭಾ | ವಿಸಲು ನಿಮ್ಮಳಿಯನು ಧನಂಜಯ |
ನೆಸೆವ ಮಗನೆನೆ ಸಿಂಗವರಿನಿದಿರಹವೆ ಗಜವೆಂದ || ೪ ||

ಹರಿಕುಲಾಂಬರ ಸೂರ್ಯ ಬಿನ್ನಪ | ಕುರುಕುಲವು ತಾ ವೀರವಂಶವು |
ಪಿರಿಯನೆಂದೇಂ ಕಿರಿಯನೆಂದೇಂ ತತ್ಕುಲೊದ್ಭವರು ||
ಧುರದೊಳೆಲ್ಲರು ವಿಜಯಿಗಳು ಬಿ | ತ್ತರದಡವಿಯನದೊಂದೆ ಕಿಡಿ ಸು |
ಟ್ಟುರುಪದೇ ತೋಳ್ವಲವನೆನ್ನನು ಬಿಟ್ಟುನೋಡೆಂದ || ೫ ||

ಎನೆ ಮನದೆಗೊಂಡಳಿಯಗಾಗಳೆ | ಪನಜನಾಭನು ವೀರಪಟ್ಟವ |
ನನುನಯದಿ ಕಟ್ಟಿದೊಡೆ ಮಾವಗೆ ತಂದೆಗಳಿಗೆರಗಿ ||
ತನುಜನಮ್ಮನ್ವಯದ ವರ ಕೂ | ರ್ಪನು ಶಿಶುತ್ವದಿ ಗಳಿಸಿದೀ ಮಾ |
ವನ ಪರಾಕ್ರಮವನು ಮೆರೆದು ಗೆಲ್ಲೆಂದು ತಂದೆಗಳು || ೬ ||

ಹರಸೆ ಮಂಗಳ ತೂರ್ಯ ರವವಾ | ವರಿಸೆ ದೆಸೆಯನು ತೊಟ್ಟ ಕವಚವು |
ಬಿರಿಯೆ ವೀರವೇಷದಿಂದಭಿಮನ್ಯು ಸುಕುಮಾರ ||
ಧುರಧರೆಯೊಳಾರ್ದೊಡೆ ಮಣಿಪ್ರಭೆ | ಸುರರಥದೊಳಿರೆ ಕಂಡು ಮಾಗಧ |
ನರ ತನೂಭವನೆಂದರಿದು ಧೃತರಾಷ್ಟ್ರ ತನುಜಂಗೆ || ೭ ||

ಕಟ್ಟಿದನು ನೊಸಲಿನಲಿ ಸೇನಾ | ಪಟ್ಟವನು ಬಳಿಕಾ ಸುಯೋಧನ |
ನಿಟ್ಟಿಸಿದನಾ ಕಾಲರುದ್ರನ ಕಾಯ್ಪನೊಳಕೊಂಡ ||
ದಿಟ್ಟನಭಿಮನ್ಯುವನು ಮುಳಿದೊಡೆ | ಸಿಟ್ಟೆಯೊಳಗಿವಗಾಂಪನೆಂಬಾ |
ಜೆಟ್ಟಿಗನದಾರೆಂದು ಬಗೆದನದೊಂದುಪಾಯವನು || ೮ ||

ನರನುನೀತನು ಕೂಡಿದೊಡೆ ಪುರ | ಹರಗೆ ಗೆಲಲರಿದರ್ಜುನನ ನಿ |
ತ್ತರಿಸದಂತಗಲಿಸಲೆ ಬೇಕೆಂದಾತ್ಮ ಮಿತ್ರರಹ ||
ಸ್ಫುರಿತರಾಕ್ಷಸ ವಿದ್ಯೆಯಲಿ ನಿಪು | ಣರನು ಸಮಸಪ್ತಕರನಾಗಳೆ |
ಕರೆದು ನೀವಾ ಮೊನೆಯಲಿಕ್ಕುವುದರ್ಜುನನನೆಂದ || ೯ ||

ಬೆಸಸಲವರತ್ತೊಂದು ಮೊನೆಯೊಳು | ಮಸಗಿವಿದ್ಯಾ ಬಲವ ಪಡೆದ |
ರ್ವಿಸಿ ನಿಲಲು ತದ್ಬಹವಕೋಳಾಹಳವನಾನಿಸುತ ||
ಪೆಸರುಗೊಂಡರ್ಜುನನ ಕರೆಯಲು | ಹಸಿದ ಜವನೆನೆ ಕೆರಳಿ ದೆಸೆ ಕಂ |
ಪಿಸುತಿರಲು ಗಾಂಡಿವವನೊದರಸಿ ನಿಂದನಾ ಪಾರ್ಥ || ೧೦ ||

ನಿಲಲೊಡನೆ ಕಡುಮಸಗಿ ವಿದ್ಯಾ | ಬಲವು ನಾನಾ ಕೈದುಗಳ ಕೈ |
ಚೆಳಕದಲಿ ಕೂಕಿರಿದು ತಿರುವಿನೆ ಹಿಳುಕ ಸಂಧಿಸುತ ||
ಸೆಳದೆಸಲು ಕಲಿಪಾರ್ಥನಾ ಬಿಲು | ಬಲುಮೆ ಬಡವೇ ಗಗನದೊಳು ಪಂ |
ದಲೆಗಳೊರ್ಮೋದಲಾಡುತಿರ್ದವು ಕೋಟಿ ಸಂಖ್ಯೆಯಲಿ || ೧೧ ||

ಪರಿದ ತಲೆಗಳುಮನಿತೆ ಮುಂಡದ | ತುರುಗಲುಗಳನಿತನಿತೆ ಮುನ್ನಿನ |
ತೆರೆದಲರ್ವಿಸೆ ಕವಿವ ಸೈನಿಕಮನಿತೆಯಿರುತಿರಲು ||
ನೆರೆಗಲಿಯು ನೆಳಲೊಳಗೆ ಹಾರುತ | ತೆರದಿ ಪ್ರತಿವಿದ್ಕಾಪ್ರಭಾವದಿ |
ತರುಬಿ ಕಾದುತ್ತಿರ್ದನಿತ್ತಲು ಭೂಪ ಕೇಳೆಂದ || ೧೨ ||

ಅರಿದು ಪೊಗವೊಡದರಿಗಂ ಕಣು | ದೆರೆದು ನೋಳ್ಪಡೆ ಬ್ರಹ್ಮಗಂಭೀ |
ಕರವು ಪೊಕ್ಕಡೆ ಮರಳುವುದು ತ್ರಿಪುರಾರಿಗಸದಳವು ||
ತರುಬಿ ಕಾದುವೆನೆಂದಡಸುರಾ | ಮರಗಿಗದು ಮೊಗ್ಗಲ್ಲೆನಿಸುವ |
ಚ್ಚರಿಯ ಚಕ್ರವ್ಯೂಹವನು ಕುರುರಾಯ ನೋಡಿದನು || ೧೩ ||

ಅದರ ಗುರುವನು ಕಂಡು ಪಾಂಡವ | ರಿದರೊಳೆಲೆ ಅಭಿಮನ್ಯು ಪೊಕ್ಕಿರಿ |
ದಿದನು ಜಯಿಸುವುದರಿದೆನಲು ಕಾಲಾಂತಕನು ಪೆರರ ||
ಉದಯದೊಳು ಪೊಕ್ಕಿಸುವ ನೆಲವಂ | ದದಲಿ ಪೊಕ್ಕ ಹಿತರನು ತಲೆಕೊ |
ಲ್ಲದೊಡೆ ಕಲಿಪಾರ್ಥನ ಕುಮಾರೆನೆಯೆಂದು ಘರ್ಜಿಸಿದ || ೧೪ ||

ತಡೆಯದಾ ಸಾರಥಿಗೆ ಬೆಸಸಲು | ಕಡುಜವದಿವರರಥವು ಹರಿದವು |
ಪಡೆವರಸಿಯಾ ತ್ರಿಪುರದಹನಕ್ರಿಯೆಗೆ ಕಡುಮುಳಿದು ||
ಮೃಡನೊದನೊದಗುವಂತೊದಗಿ ತಾ ಸಂ | ಗಡದಿ ನಿಶಿಶಾಸ್ತ್ರಗಳ ಹೇರಿದ |
ಪಡಿರತಂಗಳುವೆರಸಿ ಬರೆ ಬರೆ ಬಂದನಭಿಮನ್ಯು || ೧೫ ||

ಬರೆಗುಹೆಯ ಗಾಲಿಲಲಿ ಪರ ಭೀ | ಕರ ಜರತ್ಕೇಸರಿಯಗುರ್ವಿಸು |
ವಿರವಿನಿಂದ ವ್ಯೂಹದಾ ಬಾಗಿಲಲಿ ಬಿಲುಗೊಂಡು ||
ನೆರೆದ ನಾಯಕನಿಕರದೊಡನಿಹ | ಗರುಡಿಯಾಚಾರ್ಯನು ನಿರೀಕ್ಷಿಸಿ |
ಕಿರಿದು ದೂರಕೆ ಪೋದನಿಂದಿರಾಗೊಂದೆ ತೇರಿನಲಿ || ೧೬ ||

ಖತಹಯನ ಸುಕುಮಾರನನು ನೋ | ಡುತಲಿದೇನೈ ಮಗನೆ ಅಕಟಾ |
ಮತಿಯನೊಕ್ಕನೆ ನಿಮ್ಮವರು ಈ ವಿಷಮ ಸಂಗರಕೆ ||
ಅತಿಬಲರು ತಾವತ್ತಲುಳಿದೆಂ | ಧೃತಿಯನಾಂತರೊ ಬಾಲಕನನೀ |
ಕ್ಷಿತಿಗೆ ಕಳುಹಿಸಿ ಬೀಜಭೋಜಿಗಳಾದರೇಯೆಂದ || ೧೭ ||

ಪೊಗುವುದರಿದಿದನೆತ್ತಲಾನುಂ | ಪೊಗಲು ಪೊರವಡುವೊಡೆ ಮಹಾರು |
ದ್ರಗೆ ಅಶಕ್ಯವೆನಿಪ್ಪ ವೀರರ ನೆರವಿಯಿದೆಯೆಂದು ||
ಮಗನೆ ನೀ ಜಯಸಿದೊಡೆಯಿಂದ್ರನ | ಮಗನ ಪುಣ್ಯವಿದೆಂದ ದ್ರೋಣನ |
ಮೊಗವ ನೋಡುತ್ತಕ್ಷಮತೆಯಿಂ ನುಡಿದನಭಿಮನ್ಯು || ೧೮ ||

ಗುರುವೆ ನೀನೀಗುಭಯ ಸೈನ್ಯಕೆ | ಗುರುವೆ ದಿಟ ನೀವೆಂದ ನುಡಿಗು |
ತ್ತರವನಾಂ ಕೊಡಬಾರದಾದೊಡೆಮೊಂದನಾಡುವೆನು ||
ನೆರೆದ ವೀರರು ಬಹಳವಿಧ ಹೊಗ | ಲರಿದು ನಿನಗೆಂಬೀ ನುಡಿಯನಾ |
ದರಿಸಲರಿಯೆನು ನೀನೆ ಮೆಚ್ಚಲು ತರಿವೆ ತಾನೆಂದ || ೧೯ ||

ಬೆಳೆದ ಕದಳಿಯ ಬನವನಾ ಕರಿ | ಕಲಭ ಹೊಕ್ಕಂದದಲಿ ಹೊಕ್ಕ |
ಗ್ಗಳದ ವ್ಯೂಹದ ವೀರರನು ಸವರುವೆನೆನುತ ಕೂಡೆ ||
ಘಳಿಲನೊಳಪೊಕ್ಕನು ಸರಳ ಪೆ | ರ್ಮಳೆಯ ಸುರಿದಾಮೊನೆಯನಾಯಕ |
ಕುಲವ ತರಿದನದೇಂ ಪ್ರತಾಪಿಯೊ ಪಾರ್ಥನಂದನನು || ೨೦ ||

ಬಲುವಲದ ಕಲಿತನದ ತಕ್ಕಿನ | ಚಲದ ಪೂಣೆಯ ನಾಯಕರ ನಾ |
ವುಲಿದ ಚಕ್ರವ್ಯೂಹದಾ ಬಾಗಿಲಲಿ ನಿಮಿಷದಲಿ ||
ಬಿಳಿಯ ಕಬ್ಬಿನವನವನಾ ಕರಿ | ಮುಳಿದು ಹೊಕ್ಕಂದದಲಿ ಪಡಲಿ |
ಟ್ಟಳವಿನಿಂದೊಡ ಹಾಯ್ಸಿ ನೂಂಕಿದನಾರ್ದು ನಿಜರಥವ || ೨೧ ||

ಪರಿದು ಘಿರ್ರ‍ನೆ ಮುರಿವ ಬೀದಿಯ | ಲೆರಡು ಕಡೆಗಳೊಳಖಿಳ ಸೇನಾ |
ಪರಿವೃತರು ಕೃತವರ್ಮಕೃಪನೆಂಬುಗ್ರ ನಾಯಕರು ||
ಭರದಿನನಿಬರುಮೊರ್ಮೊದಲೆ ನಿ | ಷ್ಠುರದಲೊದರುವಲಗ್ಗೆ ವರೆಯ |
ಬ್ಬರವಿಗುರ್ವಿಸೆ ಕರೆದರಾಗಳು ಕಣೆಯ ಬಿರುಮಳೆಯ || ೨೨ ||

ಅರರೆ ಸಂಗರ ವೀರಭದ್ರನು | ತಿರುವ ಜೇವಡೆಗೈಯ ಬೀರದ |
ಬಿರಿದುಗಳ ಪಾರ್ಥರ ಕೈಕಾಣಿಕೈದುಗಳ ||
ಮೊರೆದೆರೆದ ಬಿಂಬುಗಳ ಗಾಳಿಯ | ಗರಿಗಳೆನೆ ಪಾರಿದವು ತಾ ಕ |
ಣ್ಗರಿಯೆನಿಸಿ ಸವ್ಯಾಪಸವ್ಯದಿದೆಚ್ಚನಭಿಮನ್ಯು || ೨೩ ||

ವರಶರಾಸನವಂದು ನೋಡುವ | ಡೆರಡು ಬಿಲ್ಲಾಗಿರ್ದುದಾಗಳು |
ಬರೆತೆಗೆವ ಕೈಯೆರಡು ಹಿಳುಕನು ಬಿಡುವ ಕೈಯೆರಡು ||
ಸರಳ ಮೂಡಿಗೆಯಿಂದುಗಿದ ಕೈ | ಯೆರಡು ಬಿಲ್ಲನು ಬಲ್ವಿಡಿದ ಕೈ |
ಯೆರಡೆನಿಸಿ ತೋರಿದವು ಸುರರಕ್ಷಿಗೆ ಕುಮಾರಕನ || ೨೪ ||

ಪರಿದುದಾ ಸಮಯದಲಿ ಬಿಸು ನೆ | ತ್ತರತೊರೆಯು ಕಳನೊಳಗೆ ನಭದಲಿ
ಪರಕಲಿಸಿದುವು ಹಸಿಯತಲೆಗಳು ಕರಿಗಳುರುಳಿದವು ||
ಎರಡು ಭಿತ್ತಿಯ ಚಾತುರಂಗವು | ಕುರಿದರಿಗಳಾದವು ಬಳಿಕಮುಖ |
ದಿರುಹಿದರು ಕೃತವರ್ಮಕೃಪನಾ ರಥವ ಧುಮ್ಮಿಕಿ || ೨೫ ||

ಅವರ ಗಮನದ ಭರಕೆ ತದ್ವ್ಯೂ | ಹವು ನೆರೆಯದೆನಲೊಡೊ ಬೆನ್ನಲಿ |
ತವಕಿದರು ತೋರಿದರು ಕಾಲಸಘಾಟಿಕೆಯನಾಗ ||
ದಿವಿಜರಾಗಸದಲ್ಲಿ ಘೊಳ್ಳೆಂ | ದವರವರ ಮೊಗನೋಡಿ ನಗುತಿರೆ |
ಕುವರನಾರ್ದೊಳಪೊಕ್ಕನವರಾ ಭಿತ್ತಿಗಳ ಹೊಗಲು || ೨೬ ||

ಮುಂದೆ ಬರೆಬರೆ ವೈರಿಭೂಪ | ಸ್ಯಂದನವ ಬಳಸಿರ್ದ ನೃಪರಥ |
ವೃಂದದೊಡ್ಡಣದಿದಿರೆ ನಿಜರಥವನು ನಿಲಿಸೆಜವನ ||
ಮಂದಿರಕೆ ರಿಪು ನೃಪರಜೀವದ | ಸಂದಣಿಯ ದಾಟಿಸುತ ವೀರಾ |
ನಂದನಿರೆ ಮತ್ತತ್ತಲಾ ವ್ಯೂಹದ ಪೆರಗೆ ಮಸಗಿ || ೨೭ ||

ಪವನಜನುಮಾದ್ರಿಜರು ದ್ರುಪದ | ಪ್ರವರ ಧೃಷ್ಟದ್ಯುಮ್ನಯುತ ಪಾಂ |
ಡವ ಪತಾಕಿನಿ ತಾಗೆ ಕರ್ಣದ್ರೋಣ ಮದ್ರಿನೃಪ ||
ಇವರು ಬಿ‌ಲ್ಲೊಯ್ದಂತು ಬಲು ಯು | ದ್ಧವನು ಮಾಡುತ್ತಿರ್ದರತ್ತಲು |
ಸವರಿಹೊಕ್ಕನು ವ್ಯೂಹವನು ಭೂಪಾಲ ಕೇಳೆಂದ || ೨೮ ||

ಮುಳಿದು ಮೃತ್ಯುವೆ ಪೊಕ್ಕು ತೊತ್ತಳ | ದುಳಿದವೊಲು ಕಾಳ್ಗಿಚ್ಚು ಕಾನನ |
ದೊಳಗೆ ಪೊಕ್ಕವೊಲೈದೆ ಚಕ್ರವ್ಯೂಹದೊಳಪೊಕ್ಕು ||
ಕೊಲುತಿರಲು ಅಭಿಮನ್ಯುವೆಂಬುದ | ತಿಳಿದು ಸುರಸಿಂಧುಜನು ಕುವರನು |
ಬಳಿಗೆ ಬಂದೆನ್ನಾಣೆ ನೀಂ ಬರಬಹುದೆ ಹೇಳೆಂದ || ೨೯ ||

ಅಕಟಕಟ ಪಾಂಡವರ ಸಂತಾ | ನಕೆ ಸಲಗನಿನ್ನಾವನೋ ಬಾ |
ಲಕನ ನಿನ್ನನು ಕಳುಹಬಹುದೇ ಪಾಂಡುನಂದನರು ||
ಪ್ರಕಟ ವೀರರ ಸವರಿ ಈ ವ್ಯೂ | ಹಕೆ ಬಲುಮೆಯಿಂ ಬಂದೆಯಿನ್ನಿರು |
ಸುಖದಿ ನನ್ನೊತ್ತಿನಲಿ ಕಾಳಗೆದೆಗೆಯೆ ಪೋಗೆಂದ || ೩೦ ||

ನುಡಿಯ ಬಹುದೇಯಜ್ಞ ಲಜ್ಜೆಯ | ನುಡಿಯ ನಿಮ್ಮಯ ಮೊಮ್ಮ ಮೊಮ್ಮನು |
ಪೊಡೆಯಲರನಳಿಯನು ತ್ರಿಲೋಕದ ಗಂಡನರ್ಜುನನು ||
ಮಡದಿಮಾಣಿಕವಹ ಸುಭದ್ರೆಯ | ವಡೆದ ಸಂತಾನ ರಣದೊಳಗೆ ಬಿಲು |
ವಿಡಿದು ಮರೆವೊಗಲಾಪೆನೆ ಚಿತ್ತೈಸು ಬಿನ್ನಪವ || ೩೧ ||

ಕೊಳನೊಳಿಹ ನಳಿನೀವನವ ಕರಿ | ಕಳಭ ಕೀಳ್ವಂದದಲಿ ವ್ಯೂಹದ |
ಬಲಯುತರ ಮಿಕ್ಕೊಕ್ಕಲಿಕ್ಕು ವೆನೆನುತಲಲ್ಲಿರದೆ ||
ಘಳಿಲನೊಳಪೊಕ್ಕೆಡಬಲದ ದೋ | ರ್ವಲರನಿಕ್ಕುತ ಬಹ ಕುಮಾರನ |
ನಳವು ಮಿಗೆ ಕುರುಪತಿಯ ಸುತ ಲಕ್ಕಣನು ತಾಗಿದನು || ೩೨ ||

ಲಕ್ಕಣನ ಕೂರ್ಗಣೆಗಳನು ತಾಂ | ಲೆಕ್ಕಿಸಿದನೇಯೆರಡು ಭುಜವೆಂ |
ಬುಕ್ಕಿನಾ ಕೋವಿಗಳ ಮುಖದಿಂ ಬುಗಿಲು ಬುಗಿಲೆನುತ ||
ಉಕ್ಕುವುರಿಮಾಲೆಗಳೊಯೆನೆ ನೆಗೆ | ದುರ್ಕಿನಂಬುಗಳಿಕ್ಕಡೆಯ ಭಟ |
ರುಕ್ಕು ಮುರಿದಿಕ್ಕಿದರು ಲಕ್ಕಣನುಗ್ರ ಸೈನಿಕದ || ೩೩ ||

ಉರಿಯ ನಾಲಗೆ ಸೋಂಕಿದರಗಿನ | ಪರಿಯಲಿತ್ತಲು ತನ್ನ ಸೈನಿಕ |
ಕೊರಗೆ ಕಡು ಕಾಯ್ದಿಟ್ಟಲಕ್ಕಣ ತಾನು ತೋಮರದಿ ||
ಹಣರ ಕೈಯ ತ್ರಿಶೂಲವೇ ಭೋ | ರ್ಗರೆದು ಬಂದುದೊಯೆನಿಸಿ ಬರಲದ |
ನರಿದನಾತನ ಶಿರವ ಪರಿಯೆಚ್ಚಾರ್ದನಭಿಮನ್ಯು || ೩೪ ||

ಮಸಗಿ ಬಂದವನನುಜರೊರ್ಮೆಯೆ | ಮುಸುಕಿದರು ನೂರ್ವರು ಸಿಡಿಲ್ಗಳ |
ಮಸಕದಲಿ ಘರ್ಜಿಸುತ ತಲೆವಿಲುಗೊಂಡು ಪೊಕ್ಕೆಸಲು ||
ಹೊಸಮಸೆಯ ಕೂರಂಬುಗಳು ಪಸ | ರಿಸಿಮುಸುಕಿ ಬರೆ ಪಾರ್ಥಸುತ ಖಂ |
ಡಿಸಿದನೊಂದಂಬಿಂದದೇಂ ಕಾರ್ಮುಕ ಕಲಾವಿದನೊ || ೩೫ ||

ತಿರುವಿಗಂಬನು ಹೂಡಿ ವಹಿಲದಿ | ಬರೆ ತೆಗೆದುಮರಸುತ್ತೆಸಳು ಸುಳಿ |
ವರಿವ ಬಾಣದಿ ಕುರುಪತಿಯನೂರ್ವರು ಕುಮಾರಕರ ||
ಕೊರಳುಗಲು ಕತ್ತರಿಸಿ ಸಮರೋ | ರ್ವರೆಗೆ ಬೀಳ್ದಿರೆ ರತ್ನ ಮಕುಟ |
ಸ್ಫುರಿತ ಕಾಂತಸಹಸ್ರ ಸುರಧನುಗಳನು ಪಸರಿಸಿತು || ೩೬ ||

ವರ ಧನಂಜಯಸೂನು ಬೆರಳಲಿ | ಸರಳ ತಿರುಹುತ ತನ್ನಸರಿ ವೀ |
ರರ ಬರವ ಪಾರುತ್ತನಿಂದಿರೆ ನಭದಿಲೀಕ್ಷಿಸುವ ||
ಸುರರು ಮಝ ಬಿಲ್ಲಾಳೆವೊರ್ವನೆ | ಅರೆದ ನೊಂದಕ್ಷೋಹಿಣಿಯ ನೀ |
ಧುರದೊಳೆಂದಭಿಮನ್ಯುವನು ಕೈವಾರಿಸಿದರಂದು || ೩೭ ||

ಅಳಿದರಾ ನೂರ್ವರು ಕುಮಾರಕ | ರಳವಿ ಗೊಟ್ಟಿಂದಹಿ ಪತಾಕನು |
ತಿಳಿದು ಮುಳಿದೇಳ್ವವಸರದೊಳಾ ಸೈಂಧವನು ಬಂದು ||
ಇಳೆಯೆರೆಯ ನಿನಗೊದವಿದೀಮನ | ದಳಲನಾರಿಪೆನೆಂದು ಬೆಸವಡೆ |
ದಲಘು ಭುಜ ಬಲನಾಂತವರ್ಜುನನಾತ್ಮಜನ ಕೂಡೆ || ೩೮ ||

ಕರದಿ ಬಿಲುವಿಡಿದೂರಿ ಎಡಗಾ | ಲ್ವೆರಳಲೊತ್ತಿ ಜಾಲತೆಯ ನೀ |
ಬೆರಳಿನಿಂಕೊಪ್ಪಿಗೆ ತೊಡಿಸಿ ನೆರೆನೀವಿ ಜೇವಡೆದು ||
ಸರಲುನುಗಿದಾ ಬತ್ತಳಿಕೆಯಿಂ | ತಿರುವಿಗೊಂದಿಸಿಹಿಳುಕ ಪೊರಮೈ |
ವರಮೆಳೆಹ ಪೊಕ್ಕೆಚ್ಚನಾರ್ದೆಡೆವಿಡದೆ ಸೈಂಧವನು || ೩೯ ||

ಸರಳ ಸರಳಿಂ ಕಡಿದು ನರಳಿನ | ಸರಿಯ ಸುರಿದನು ಪಾರ್ಥಸುತನಾ |
ಸರಳ ಸಿರಿಯನು ಸರಳಿನಿಂ ಕಡಿದೊಟ್ಟೆ ಸೈಂಧವನು ||
ಸರಳ ತೊಡುವನಿತರೊಳೆ ಮಿಗೆ ಕ | ತ್ತರಿಸಿದನು ಬೆಳುಗೊಡೆಯೆ ಸಾರಥಿ |
ಯುರವನೆಚ್ಚನು ಕೊಚ್ಚಿದನು ಸಿಂಧುಗಳನಭಿಮನ್ಯು || ೪೦ ||

ಸಲುವುದೈ ಮಝ ಪೂತು ಪಾರ್ಥನ | ಕುಲತಿಲಕ ನೀನಹುದೆನುತ ಕಡು |
ಗಲಿ ಜಯದ್ರಥನೆಚ್ಚನೆಚ್ಚೊಡೆ ಕೊಚ್ಚಿದನು ಕಣೆಯ ||
ಪಲವು ಸೂಳೆಚ್ಚಾಡಿಕಳನೊಳು | ಬೆಳೆದವುಡಿದಂಬಿನ ಗಿರಿಗಳಿ |
ಕ್ಕಡೆಯ ಶತಬಂಡಿಗಳ ಕಣೆ ಬರಿದಾಯ್ತು ನರಸುತನ || ೪೧ ||

ಅಂಬುಗಳು ಸೌಭದ್ರಿಯಾಯು | ಷ್ಯಾಂಬುಗಳು ಸಂಗಡದಿ ತೀರ್ದವು |
ಬೆಂಬಳಿಯಲಾ ಸಿಂಧು ಭೂವರನೊಡಲುಗೊಳನೊಳಗೆ ||
ತುಂಬಿದಾರ್ಯುಜಲವು ನಾವೆರ | ಳೆಂಬನಿತೆ ಮಿಗಿನುಳಿದುದಕಟೇ |
ನೆಂಬೆನಾಹವ ಕಾಲರುದ್ರನು ಕಾದುತಿರಲೊಡನೆ || ೪೨ ||

ಸರಳು ತವುಕರೆ ತಡೆತಡೆದು ಭೋ | ರ್ಗರೆದೆಸಲು ಸರಲರತುವೆಂಬುದ |
ನರಿದು ತೆರಪನು ಕಂಡು ಸೈಂಧವನೆಚ್ಚಡೇನೆಂಬೆ ||
ಕೊರಳು ಪರಿದಭಿಮನ್ಯುವಿನ ತಲೆ | ಧುರ ಧರೆಗೆ ಬಿದ್ದುದು ಪ್ರತಾಪ |
ಸ್ಫುರಿತ ಪುಂಜದ ತೆರದಲಿರ್ದುದು ಮಣಿಮಕುಟವೆರಸಿ || ೪೩ ||

ಮದಗಜದ ಕೋಡೇರಿ ನೀಂ ಸಿಂ | ಹದ ಕುಮಾರನೆ ಮರಣವಾದಂ |
ತೊದಗಿದುದುಮೃತಿ ಪಾರ್ಥಸೂನುಲಿಗವನ ಕಣ್ಣೆಂದ ||
ಬಿದಿಯನಾವನೊ ಮೀರಬಲ್ಲನು | ಒದರಿದುದು ಜಯಪಟಹ ಮೈವೆ |
ಚ್ಚಿದನು ಸೈಂದವನೆತ್ತಿಸಿದ ವಿಜಯ ಧ್ವಜವನಾಗ || ೪೪ ||

ಅಳಿದನಾ ಅಭಿಮನ್ಯುವೆನೆ ಕೇ | ಳ್ದುಳಿದನಾತ್ಮಜರಳಿದ ನೋವನು |
ಬಳಿಕಲಾ ಕುರುರಾಯನಾ ವ್ಯೂಹೋದರದೊಳಿದ್ದ ||
ಮುಳಿವವರು ಮೊದಲಾಗಿ ಗೋಳಿ | ಟ್ಟಲುತಲಿದ್ದರು ಭೀಷ್ಮ ರಥದೊಳ |
ಗಿಳುಹಿಧನುವನು ಗಳಗಳನೆ ಕಣುನೀರುಮಳೆಗರೆದ || ೪೫ ||

ಮೊಳೆವ ಮೀಸೆಯ ನಗೆಮೊಗದಕ | ಟ್ಟಿಳೆಮಗನ ತಾಂವಿರುತಯುದ್ಧಕೆ |
ಕಳುಹಿಕೊಂದರೆ ಅಕ್ಕಟಾ ಸುಡು ರಾಜ್ಯಸಂಪದವ ||
ಅಳಿದುದೇ ಪಾಂಡವರ ಸಂತತಿ | ಇಳೆಯು ತವಗೇಕಿನ್ನು ತಾವಿ |
ನ್ನುಳಿದು [ಸುಖವಿಲ್ಲೆನುತ] ಕಂಬನಿಗರೆದನಾ ಭೀಷ್ಮ || ೪೬ ||

ಕೇಳಿ ಧನ್ಯರ ಬಸಿರೊಳಗೆ ಕೂ | ರ್ವಾಳ ಸೆಳೆದಂತಾದುದೆನೆ ತಾಂ |
ಕೇಳಿದಾಕ್ಷಣ ಹಡೆದ ತಾಯಿನ್ನೆಂತು ಸೈರಿಪಳೊ ||
ಬಾಲಕನು ಕ್ಷತ್ರಿಯರ ಸುತರಿಗೆ | ಕಾಳೆಗದಳಿರಿದೊಂದು ವೀರಕೆ |
ಮೇಲು ಪಂತಿಯನಿಟ್ಟನೆಂದನು ಬಳಿಕ ಗಾಂಗೇಯ || ೪೭ ||

ಬಾಲಕನೊ ಮಝ ಪೂತುಮಸಗಿದ | ಕಾಲರುದ್ರನೊಯೆನಿಸಿ ಕಾದಿದ |
ಕಾಳಗಕೆ ನಳಿವುಳಿವು ದೈವಾಧೀನವದಕೇನು ||
ಕಾಳಗಕೆ ಹೋಗದವರೆಲ್ಲರು | ಬಾಳುವರೆ ಮನೆಗಳಲಿ ಕ್ಷತ್ರಿಯ |
ಬಾಲಕರಿಗಿದು ಧರ್ಮವೆಂದುದು ನೆರೆದ ಸುರಸಭೆಯು || ೪೮ ||

ಅತ್ತಲಾ ವಸುಪಾಲಕನು ಪುರು | ಷೋತ್ತಮನ ಚೂಣಿಯಲಿ ಮಾಗಧ |
ನೊತ್ತರಿಸಿದಾ ಪಡೆಯಿರಿದು ಬಲವಜ್ರಖಾಂಡವನು ||
ತುತ್ತುಗೊಟ್ಟನು ಯಮಮುಖಕೆ ಮ | ತ್ತತ್ತಲಾ ಸಮಸಪ್ತಕರ ಮಿಗೆ |
ಬಿತ್ತರದ ವಿದ್ಯಾವಲವ ಪ್ರತಿವಿದ್ಯೆಯಿಂ ಗೆಲಿದ || ೪೯ ||

ಧುರದೊಳಾ ಸಮಸಪ್ತಕರ ತಲೆ | ಯರಿದನರ್ಜುನದೇವನ್ನೆಗ |
ತರಣಿಯಪರಾದ್ರಿಯನು ಸಾರಿದ ತೆಗೆದುದಿರ್ವಲವು ||
ತಿರುಗಿ ಬಪ್ಪನಿತರೊಳು ಕೃಷ್ಣಾ | ದ್ಯರು ನರಾತ್ಮಜನಳಿದ ಖೇದವ |
ಧರಿಸಿ ಯಮನಂದನನ ಬೀಡಿಗೆ ಬಂದು ಸಂದಣಿಸಿ || ೫೦ ||

ಹರುಷ ವೆನಗೇಕಿಲ್ಲವೀಡಿನೊ | ಳುರುತರದ ಹಾಹಾರುತವಿದೇ |
ತರಣಿಯುದಯಿಸಿದಂತೆ ನನ್ನಾನನ ಸರೋಜವನು ||
ಅರಳಿಸುವ ಬಿಗಿಯಪ್ಪಿ ಬಾಯ್ಬೂ | ಯ್ವೆರಸಿ ರಸದುಂಬುಲವ ಕೊಂಬಾ |
ತರುಣನೆಲ್ಲಿದನೆಂದು ಮನಗುಂದಿದನು ಕಲಿಪಾರ್ಥ || ೫೧ ||

ಬಂದುರಥದಿಂದಿಳಿದು ತನ್ನೃಪ | ಮಂದಿರವನೈತಂದು ಮಹಾ |
ಕ್ರಂದ ನಂನೈವರನು ತಲೆಗುತ್ತಿರ್ದ ವೀರರನು ||
ಇಂದ್ರನಂದನ ಕಂಡಿದೇನೆ | ನೆಂದು ಬೆಸಗೊಳೆಮಮೆಲ್ಲನಾ ಯಮ |
ನಂದನನು ಮುನ್ನೊರೆದನುಭಿನ್ಯುವಿನ ವೀರವನು || ೫೨ ||

ಬಳಿಕಲಾ ಕುರುಪತಿಯ ನಂದನ | ರಳಿವನೊರೆದನು ಮತ್ತೆ ಸೈಂಧವ |
ನಳಿಸರಲ ದೆಸೆಯಿಂದ ವಿಧಿಕೊಂದುದು ಮಗನನೆನಲು ||
ಗಳಗಳನೆ ಕಣುನೀರು ಪರಿದವು | ಬಳೆದಳಿಟ್ಟುಸುರದೆ ಹರಣವನು |
ಘಳಿಲನೊಯಿದು ಮಹಾಮಗನೆಯೆಂದೊರಗಿದನು ಪಾರ್ಥ || ೫೩ ||

ಅಳಿದನಾ ಮಗನಲ್ಲಿ ತಮ್ಮನು | ಕಳಿದನಿಲ್ಲಿಯೆನುತ್ತ ಧರ್ಮಜ |
ನುಳಿದನೊಡಲೆಚ್ಚರಿಕೆಯನುಮೆತ್ತಾನುಮದು ತೊಲಗೆ ||
ಬೆಳೆದ ಶೋಕಾಗ್ನಿಯೆದೆ ಫಲುಗುಣ | ನೊಳುನಿಲಿಸಿದುದು ರೌದ್ರವಹ್ನಿಯ |
ಪ್ರಳಯ ರುದ್ರನತೆರದಿ ಕಿಡಿಕಿಡಿಯೋಗಿ ಘರ್ಜಿಸಿದ || ೫೪ ||

ಕಳದೊಳೆನ್ನಾತ್ಮಜನ ಕೊಂದನ | ಕುಲದ ಬೇರನು ಕೀಳುವೆನುಮೇಣ್ |
ಹೊಳಕದಡಗುವನೆಂಬೆನಾ ತಾನಡಗಿ ಬಾಳುವುದೆ ||
ಇಳೆಯದೊಂದಾಕಾಶವಂಧಾ | ಜಲಧಿ ನಾಲ್ಕೀರೈದು ದೆಸೆಗಳು |
ಕುಲಗಿರಿಗಳೇಳೆತ್ತಲಡಗುವನೆಂದನಾ ಪಾರ್ಥ || ೫೫ ||

ನಾಳೆ ಸೂರ್ಯಾಸ್ತಮಯದೊಳಗಾ | ಶೂಲಿಯಿಡ್ಡೈಸಿದೊಡೆಮೆನ್ನ ವಿ |
ಶಾಲ ಕೋಪಾನಳನೊಳಗೆ ಸೈಂಧವನ ತಲಿಗೊಯಿದು ||
ಬೇಳುವೆನು ಕೊಲಲಾರದಂದಾಂ | ಬೀಳುವೆನು ಕುಂಡದಮಹಾಗ್ನಿಯ |
ಜ್ವಾಲೆಯೊಳಗಿದು ಪೂಣ್ಕೆ ಹತಿ ಕೇಳೆಂದನಾ ಪಾರ್ಥ || ೫೬ ||

ಎಂದು ನನ್ನಿಯ ಪೂಣ್ಕೆಗೈಯೆ ಮು | ಕುಂದ ಮೊದಲಾಗಿರ್ದ ಬಂಧುಗ |
ಳಂದು ಬೆಕ್ಕಸಬಟ್ಟು ತಂತಮ್ಮಾಲಯಕೆ ಸರಿಯೆ ||
ಅಂದಿನಿರುಳಭಿಮನ್ಯು ಪೊಕ್ಕಿರಿ | ದೊಂದು ವೀರಾಳಾಪದಲೆ ತಾ |
ನೊಂದು ಘಳಿಗೆಯದಿನಿಸಿತುಭಯ ಮಹಾಕಟಕದೊಳಗೆ || ೫೭ ||

|| ಅಂತು ಸಂಧಿ ೪೮ ಕ್ಕಂ ಮಂಗಲಮಹಾ ||