ಸಂಧಿ ೫೦

ಕುರುನೃಪಾಲಕನನುಜರನು ಸಂ | ಗರದೊಳಗೆ ಕಲಿಭೀಮ ಕೊಂದನು |
ಸುರನದೀ ಸುಕುಮಾರನಿರಿದನು ಪಾಂಡವರ ಪಡೆಯ || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಮರುದಿನದೊಡ್ಡಿನಿಂದುದು |
ವ್ಯಾಲ ಚಕ್ರಾಯುಧನ ದೈತ್ಯಾರಿಯ ಮಹಾಸೇನೆ ||
ಸೂಳೈಪ ನಿಸ್ಸಾಳಗಳ ದನಿ | ಮೇಳಿಸಿತು ದಿಗುವಳಯವನು ಕ |
ಟ್ಟಾಳು ದುಶ್ಯಾಸನನು ಭೀಮಗೆ ಮಾರ್ಮಲೆದು ನಿಂದ || ೧ ||

ತೋರಿದನು ಬಿಲುವಿದ್ಯೆಯನು ನೆರೆ | ಹಾರಸತ್ವವನವನ ಕಣಿಯನು |
ತೂರಿದನು ಹೊರಗಂಬುಗಳ ಕೆಂಗರಿಯ ಗಾಳಿಯಲಿ ||
ಏರುಪೂತುದು ಮೈಯೊಳಗೆ ಬಿಲು | ಜಾರಿದುದು ಕೈಯಿಂದ ಮರಳಿದ |
ನಾರದರಥದೊಳಗೆ ಭೀಮನಕೋಲ ಖುರಪುಟಕೆ || ೨ ||

ಕನಲಿ ಯೆಡವಂಕದಲಿ ದುರ್ದರು | ಶನನು ಬಲುವಂಕದಲಿ ದುರ್ಮರು |
ಶನನು ನಿಜಚತುರಂಗಸೈನ್ಯವನೊರ್ಮೊದಲೆ ನೂಂಕೆ ||
ಅನಿಬರೆಡೆವಿಡದೆಸುವಿರಿವ ತಿವಿ | ವನುವರದಲಾ ರಥವನಿಳಿದನು |
ಮುನಿದು ಕೊಲಲಿಳದಂತ ಕನವೊಲು ಬೆರಸಿದನು ಭೀಮ || ೩ ||

ಆಳನಾಳಿಂದಿಟ್ಟು ಸುಭಟರ | ಹೊಲಿದನು ತುರಗವನು ತುರಗದಿ |
ಬೀಳಹೊಯ್ದನು ರಥಗಳನು ಪಿರಿದೆತ್ತಿ ರಥಗಳನು ||
ಸೂಳವಿಸಿದನು ಬಾಲವಿಡಿದಾ | ವ್ಯಾಲದಂತಿಯ ನೆಗಪಿ ರಿಪು ಶುಂ |
ಡಾಲಗಳನಪ್ಪಳಿಸಿ ಕೊಂದನು ಭೀಮನಾಚೆಯಲಿ || ೪ ||

ಅರರೆ ಪರಬಲ ಭೀಮ ಭೀಮನ | ಬರವನಾಂಪವರಾರೊ ಕಾಣೆನು |
ಧರಧರೆಯೊಳಳಿದವರನಲ್ಲದೆ ಉಳಿದ ಸುಭಟರನು ||
ತಿರುಗಿ ಬಂದು ಹಿಡಿಂಬ ಕಾಂತಕ | ಮುರುರಥವ ಸಾರಿರಲೊಡನೆ ಮ |
ತ್ತರಸನನುಜರು ವೀರಗಂಕಣಗಟ್ಟಿದರು ನೊರೆದು || ೫ ||

ತುರುಗಿ ತಾವೆಲ್ಲರು ಸುಯೋಧನ | ನುರುವ ತಮ್ಮಂದಿರು ಪರಾಕ್ರಮ |
ನೆರೆದು ಬಂದೊಡ್ಡಿದರು ವನಕರಿನಿಕರಸುರಕರಿಯ ||
ತರುಬಿದಂದದಿ ಭೀಮಸೇನನ | ತುರುಬಿದರು ಮೊನೆಯಂಬುಗಳ ಮಳೆ |
ಗರೆದರಾ ಚಂಬಕಕಹಳೆಯುಲಿಯೊಡನೆ ಬೊಬ್ಬಿರಿದು || ೬ ||

ದಂಡಧರನತಿ ಮುಳಿದುಕೊಂಡನೊ | ದಂಡಮುಮನೆನೆ ಭೀಮಸೇನನು |
ಚಂಡರುಧಿರೋದ್ಗಾರಿ ಗದೆಯನು ಹಸ್ತದಿಂ ತೆಗೆದು ||
ಕೊಂಡುಡವರಿಸಿದನು ಕವಿವ ಬಹು | ಕಾಂಡಗಳು ಸಿಡಿದುಡಿಯೆ ಮಿಗೆ ದೋ |
ರ್ದಂಡವಿಕ್ರಮನಡಸಿ ಹೊಕ್ಕನು ಸುರರ ಕಣ್ಣೆದರೆ || ೭ ||

ಎತ್ತಿ ಹೊಯ್ದನು ಕೆಲಬರನು ಮೊನೆ | ಯೊತ್ತಿದನು ಕೆಲಬರನುಡವರಿಸಿ |
ಕುತ್ತಿದನು ಕೆಲಬರನು ಸೆಳೆದೊತ್ತಿದನು ಹಲಬರನು ||
ಮತ್ತಗಜ ವೊಳಹೊಕ್ಕ ಕದಳಿಯ | ಮೊತ್ತವೆನೆ ವೃಕ ಜಠರನುರುಬೆಗ |
ದೆತ್ತಲುಂ ಪಡಲಿಟ್ಟರಾ ಕುರುನೃಪ ಸಹೋದರರು || ೮ ||

ಅಳಿದರಾ ಮೂವತ್ತ ಮೂವರು | ಕಲಹದಲಿ ಕುರುರಾಯನನುಜರು |
ಕಳೆದನಲೆ ನೃಪಾ ಜಠರನಾ ವಿಪವೃಕ್ಷದೆಡಬಲದ ||
ಹಲವು ಬೇರ್ಗಳನೆಂದು ಸಂತಸ | ದಲಿ ನಿರಂತರಮುಲಿಯೆ ಯಾದವ |
ಬಲವದೆತ್ತಲು ಮಾಗಧನ ಮಾಧವನ ಮೊನೆಯೊಳಗೆ || ೯ ||

ಅತಿರಥರು ಸಮರಥರು ಮೊದಲಾ | ದತುಳ ಸಾವಂತರು ಸಮರ ಸಂ |
ಗತಿಯೆನೊಡರಿಸಿ ನೆರೆದ ಸಮಗಾಳಗದಲಿರಲಿತ್ತ ||
ಗತ ವಯೋಗತಿ ದೂರತೇಜ | ಸ್ಥಿತನಪರವಾರ್ಧಿಯೊಳು ದಿನಕರ |
ಪತಿತನಾದನು ಕಳಿವವಾವನೊ ಕಾಲನುಪಟಳವ || ೧೦ ||

ಬೀಡ ಹೊಕ್ಕುದು ಪಡೆಯೆರಡು ಕಡು | ಬಾಡಿದಾನನದಲಿ ದುಗುಡವನು |
ಸೂಡಿ ಬಂದನು ಸುರನದಿಯ ಸುಕುಮಾರನರಮನೆಗೆ ||
ನಾಡೆರೆಯನೆರಗಿದನು ಸುಯಿಗಳು | ತೀಡಲುಚಿತಾಸನದೊಳಿರ್ದಿಂ |
ತಾಡಿದನು ಚಿತ್ತೈಸಿ ಕೇಳುವುದಜ್ಜ ಬಿನ್ನಹವ || ೧೧ ||

ಮೊನ್ನೆ ಸುತರಳಿದಳಲು ತಾನಭಿ | ಮನ್ಯುವಿನ ಮೃತಿಯಿಂದ ಪೋದುದು |
ನಿನ್ನೆ ನೇಮಿಸಿ ಸೈಂಧವನ ತಲೆಗೊಂಡನಾ ಪಾರ್ಥ ||
ತನ್ನಯನುಜರ ನಿಂಮ ಮಾರುತಿ | ಬನ್ನ ಬಡಿಸಿಯೆ ಕೊಂದನೆಲೆ ನಿ |
ಮ್ಮಣ್ಣದಿರುತಿರೆ ದುರ್ಜಯವೆನವರುಗಜ್ಜ ಕೇಳೆಂದ || ೧೨ ||

ಸುರನದಿಯ ಸುತನಾ ವಿಭುವನೀ | ಪರಿಯ ದೀನೋಕ್ತಿಗೆ ಹೃದಯದಲಿ |
ಕರಗಿ ಮಗನೇ ಬಂಧುವಿಗ್ರಹ ಬೇಡವನ್ನಯವ ||
ಪರಿಹರಿಪುದೆಂದೆಮ್ಮ [ಪೇಳಿದ] | [ಗು]ರುವಚನವನು ಮೀರಿ ಈ ಸಂ |
ಗರವ ಬಯಸಿದೆ ಬಯಸಿದಂತೊಲಿವಳೆ ಜಯಾಂಗನೆಯು || ೧೩ ||

ಕೇಳೆಲೇ ಕುರುರಾಯ ಸಂಧಿಗೆ | ವೇಳೆಯಿದು ನಿಮಗೀಗಳಾದಾ |
ಸೋಲವಿಲ್ಲ ಜಯಾಂಗನೆಯ ಕಣ್ಣೊಲಹ ಕಂಡೆಯಲ ||
ಮೇಳದಿಂ ಕೌಂತೇಯರಿಗೆ ಮು | ನ್ನಾಳುವಿಳೆಯನು ಕೊಡುವುದೊಳ್ಳಿತು |
ಕಾಳಗವು ಬಂಧುಗಳೊಳಿನ್ನೇಕೆಂದನಾ ಭೀಷ್ಮ || ೧೪ ||

ಅಜ್ಜ ನೀವಿದನಾಡಿ ನನ್ನನು | ಲಜ್ಜಿಸಿದಿರೇ ಕೊಂಡವಾಸಿಯ |
ಹಜ್ಜೆ ಹೊರಮೆಟ್ಟಿದುದೆ ಕ್ಷತ್ರಿಯರಿಗೆ ಮರಣವಲ್ತೆ ||
ಅರ್ಜುನನ ಭೀಮನ ಮೊನೆಗೆ ಕಡು | ಬೆಜ್ಜರದಿ ನಾ ನೆಲನನೀವುದು |
ಕಜ್ಜವೇ ಅವರೀರ್ವರಸುವನು ಸೆಳಯದಿರೆನೆಂದ || ೧೫ ||

ಎಲೆ ಸುಯೋಧನ ಇರಿಯಲಾರದೆ | ತಲೆಗೆ ಲೋಭವ ಮಾಡಿ ನಾವೀ |
ಕಲಹಕಂಜಿದೆವೆಂದು ಬಗೆಯಲೆ ಬೇಡ ಮನದಿಂದ ||
ತೊಲಗಿಸೈ ಚಿಂತೆಯನು ನಾಳಿನ | ಕೊಳುಗುಳವ ನಾನಾಂಪೆನೆಂದತಿ |
ತಿಳುಹಿ ಕಳುಹಿದನಭಯ ವಚನದಿನಂಧನೃಪಸುತನ || ೧೬ ||

ತರಣಿಯುದಯದಲೆಂದಿನಂದದ | ಲೆರಡು ಬಲವೋಡಿದುದು ಗಾಂಗೇ |
ಯರು ಮುದದಲುಪ್ಪವಡಿಸಿಯೆ ಸುಸ್ನಾನಧೋತ್ರಗಳ ||
ಧರಿಸಿಯುಷ್ಟವಿಧಾರ್ಚನೆಯನಾ | ದರದಿ ಜಿನಪತಿಗೆಸಗಿ ವಂದಿಸಿ |
ಪರಮಗಂಧೋದಕ ಪವಿತ್ರಿತ ಗಾತ್ರನೊಪ್ಪಿದನು || ೧೭ ||

ಉಟ್ಟನೊಲವಿಂ ಕಾಸೆಯನು ಮಿಗೆ | ತೊಟ್ಟನಾ ಕವಚವನು ಶರಧಿಯ |
ಕಟ್ಟಿದನು ಬೆಂಗಳವಡಿಸಿದನು ತಲೆಗೆ ಸೀಸಕವ ||
ನಟ್ಟ ಹೇಮಧ್ವಜ ಪತಾಕೆಗ | ಳಿಟ್ಟಳದ ರಥವೇರಿದನು ಶರ |
ವೊಟ್ಟಿದಾ ಶತಶಕಟಪರಿವೃತನಂದು ಕಲಿ ಭೀಷ್ಮ || ೧೮ ||

ನಡೆದನಕ್ಷೋಹಿಣಿಯ ಗಡಣೆಯ | ಪಡೆವೆರಸಿ ಪಾಂಡವಪತಾಕಿನಿ |
ಗಡಸಿದಂತಕನಂತೆ ನೋಳ್ಪರ ಕಂಗಳೆವೆಸೀಯೆ ||
ಕಡೆಯ ರುದ್ರನ ಕಣ್ಣುರಿಯೆ ತಾ | ನೊಡಲುವಿಡಿದೈತಂದುದೋ ಎನೆ |
ಕಡು ಭಯಂಕರವಾಗೆ ಶಂತಕುವಾರನೊಪ್ಪಿದನು || ೧೯ ||

ವರ ಜರಾಸಂಧನು ಕುರುಕ್ಷಿತಿ | ವರನುಮಾಳೋಚಿಸಿದನಿಂದಿನ |
ಧುರಧೊಳೀ ಗಾಂಗೇಯರುರುಬೆಯನಾಂಪನವನಾರೊ ||
ನರನನಲ್ಲಿಂದಗಲಿಸುವವೆಂ | ದೊರೆದು ನಿಜ ವಿದ್ಯಾಧರರ್ಕಳ |
ಕರೆದು ಫಲುಗುಣನನು ಮೊನೆಯೊಳಿಕ್ಕುವುದು ನೀವೆನಲು || ೨೦ ||

ವಿತತ ವಿದ್ಯುತ್ಪ್ರಭನು ವಿದ್ಯು | ದ್ಗತಿಯು ಗಿರಿನಿಭರೌದ್ರಕೇಳಿ |
ಪ್ರತಿಭಯಂಕರ ಮುಖ್ಯ ವಿದ್ಯಾಧರನಿಕರವೆಯ್ದಿ ||
ಅತಿ ಭಯಂಕರ ವಿಕೃತ ವಿದ್ಯಾ | ಚತುರರೊಪ್ಪುವ ತಮ್ಮ ಬಲಸಂ |
ತತಿವಡೆದು ಬಂದೊಡ್ಡಿ ನಿಂದರು ಪಾರ್ಥನಿದಿರಿನಲಿ || ೨೧ ||

ಹರಿಯದಂ ತಿಳಿದಶನಿವೇಗನ | ನರುಣಚಂದ್ರನ ಸಿಂಹನಾದವ |
ಕರದು ಮಾನಸವೇಗ ಮುಖ್ಯರನರ್ಜುನನ ಕೂಡೆ ||
ಇಳಿಮೆನುತ ನೇಮಿಸಲು ವಿದ್ಯಾ | ಧುರವನಚ್ಚರಿಯಾಗಿ ಮಾಡು |
ತ್ತಿರಲು ಭೀಷ್ಮರಿಗಿದಿರು ಧುರದೊಳು ಭೂಪ ಕೇಳೆಂದ || ೨೨ ||

ವರಯುಧಿಷ್ಠಿರ ಭೀಮ ಮಾದ್ರಿಜ | ರುರು ವಿರಾಟದ್ರುಪದ ಕೇಕೆಯ |
ರುರುಘಟೋದ್ಗಜ ನೃಪತಿ ದೃಷ್ಟದ್ಯುಮ್ನ ಶ್ರೀವಿಜಯ ||
ಬಿರಿದ ಸೋಮಕ ಪಂಚ ಪಾಂಡವ | ರುರುಬಲಗಳಾಂತೊಡ್ಡಿನಿಲೆ ಕಡು |
ಭರದಿ ತಾಗಿತು ಚಾತುರಂಗವು ಚಾತುರಂಗದಲಿ || ೨೩ ||

ನೆರೆದುದುಭಯ ಪತಾಕಿನಿಯು ಬಲು | ಮೊನೆಯ ಸರಳಿನ ಸಿರಿಗೆ ನಿಜವಾ |
ಹಿನಿಯು ಮಡದಿರುಗುವುದನೀಕ್ಷಿಸಿ ತೋರೆಯುವನಾಗ ||
ಮುನಿದು ತಾಳಧ್ವಜ ರಥವ ಭೋಂ | ಕೆನೆ ಧರಾತಳವದಿರೆ ನೂಂಕುತೆ |
ಧನುವ ಹಿಡಿದನು ಜವನು ದಂಡವ ಹಿಡಿದ ಮಾಳ್ಕೆಯಲಿ || ೨೪ ||

ತಿರುವ ಜೇವಡೆಗೈಯೆ ಕುಲಭೂ | ಧರಗಳದಿರಿವಾರ್ದು ದಕ್ಷಿಣ |
ಕರದಿ ಡೊಣೆಯಿಂದಂಬನುಗಿದಾಜ್ಯಾಯೆಯೊಳು ತೊಡಚಿ ||
ಬರತೆಗೆದನಾ ಕರ್ಣಪೂರಕೆ | ಭರದಿನಂಬಂಬುಗಳುವಂದದಿ |
ಸುರರು ಮಿಗೆ ಬೆರಗಾಗಲೆಚ್ಚನು ಶಾಂತನೃಪತನುಜ || ೨೫ ||

ಹೊಸಮಸೆಯ ಹೊಗರಂಬು ನೆರೆದಾ | ಗಸವೆನಿತ ಶರಧಿಯಲಿ ಮಿಗೆ ಲಂ |
ಬಿಸುವ ಮೀನುಗಳಂತೆ ಹೊಳೆದಾಡಿದವು ಗರಿಗಾಳಿ ||
ಮಿಸುಪ ದಿವಿಜವಿಮಾನಗಳ ತೇ | ಲಿಸಿತು ಪಾಂಡವವಾಹಿನಿಯ ತೇಂ |
ಕಿಸಿತ್ತು ನೆತ್ತರವಾಹಿನಿಯೊಳೇನೆಂಬೆನದ್ಭುತವ || ೨೬ ||

ಬೆಳೆದು ಸಿಡಿವೋಡಲದ ಹೊಲನೆನೆ | ಕೊಳುಗುಳದ ಬಾಂದೆರೆಗೆ ಪಂದಲೆ |
ಗಳು ಸಿಡಿದವೆಡೆಬಿಡದೆ ಆಗಸತರುವಿನಿಂ ಕಳಿದು ||
ಪಳಪಳನೆ ಅಲ್ಲೊಗುವ ಪಲಸಂ | ಕುಳವೆನಲು ಕೆಡೆಕೆಡೆದು ನೆತ್ತರ |
ಹೊಳೆಯ ಚೆಂದಾವರೆಯ ಹೊದರುಗಳಂತೆ ತೋರಿದವು || ೨೭ ||

ಏನನೆಂಬೆನು ರಕುತ ಗಡಲೊಳ | ಗಾನೆ ಮೀನುಗಳಂತೆ ಪಾಂಡವ |
ಸೇನೆಯಾನೆಗಳಾಳುತೇಳುತ ಪೋದವಸುವಳಿದು ||
ಆನೆಗೊಲೆಯಿಂತೆನಲು ಸೈನ್ಯದ | ಹಾನಿಯನದೇನೆಂಬೆ ಬೇಗೆಯ |
ಕಾನನದ ಮೃಗದಂತೆ ದೆಸೆಬಿಟ್ಟೋಡಿದುದು ಪಡೆಯ || ೨೮ ||

ತೊಲ ತೊಲಗು ಪಾಂಡವತನೂಭವ | ತೊಲಗಿಸೈ ನಿನ್ನನುಜರನು ನೀ |
ವಲಗು ಭುಜರಹುದಹುದು ಗರುಡಗ ಪಥ್ಯವೇ ವಿಷವು ||
ಕಲಹಕಿಂದಾನಂಜೆ ಶಿಶುವಧೆ | ಗಳುಕಿದೆನು ನೀನಂತೆಯಾದೊಡೆ |
ನೆಲನನಾಂಪವನಾವನೆಂದಾ ಭೀಷ್ಮ ವಿಸ್ಮಿಸಲು || ೨೯ ||

ಮುಳಿದು ಗದೆಗೊಂಡಾರ್ದು ರಥದಿಂ | ದಿಳಿಯಲನುಗೈವನಿಲ ಜನನಾ |
ಗಳುಯುಧಿಷ್ಠಿರ ರಾಯನೀಕ್ಷಿಸಿ ದಿಟ್ಟಗೊನೆಯಿಂದ ||
ನಿಲಿಸಿದಳು ಕೇಳನುಜ ಹರೆಯವು | ಕಳಿದವೆಂಬವ ಮುಪ್ಪೆ ಅಜ್ಜನು |
ಹಳೆಯನೆಂದಿಳಿ ಕೈಯದಿರು ಬಡವನೆ ನದೀಸುತನು || ೩೦ ||

ಜನನಿ ಗಂಗಾದೇವಿ ಖೇಚರಿ | ತನಗೆ ಕೊಟ್ಟಗ್ಗಳದ ವಿದ್ಯೆಗ |
ಳೆನಿತುಮೊಳವವರೊಳಗೆಯಿನಿತನು ವೆಚ್ಚಿಸಿದುದಿಲ್ಲ ||
ಇನಿತು ಬಲವನು ಕೊಂದೆ ನಿಮ್ಮೆಂ | ಮನು ತೊಲಗು ತೊಲಗೆಂದರಲ್ಲದೆ |
ಕನಲಿ ನಮ್ಮಿಂತೊಂದು ಕಣೆಯನು ನೂಂಕಿದರೆ ಯೆಂದ || ೩೧ ||

ಎಂದು ತಮ್ಮನನಂಜಿಸುವಯಮ | ನಂದನನನೀಕ್ಷಿಸುತ ಗಂಗೆಯ |
ಕಂದನಾಗಳು ತೃಣವು ತೀರಲು ಬೇಗತಣಿದಂತೆ ||
ಮುಂದುವರಿಯದೆ ರಥವ ಸುಳಿಯಿಸಿ | ನಿಂದನತ್ತಾ ಮಾಗಧನ ಗೋ |
ವಿಂದನಾಗಸ ಚರರ ವಿದ್ಯಾ ಯುದ್ಧ ರಂಗದಲಿ || ೩೨ ||

ಗಗನಕಂಬಿನ ಗವಸಣಿಗೆಯನು | ಮಿಗೆ ತೊಡಿಸಿದರು ಪಾರ್ಥನಾಗಳು |
ಮುಗಿಲವಟ್ಟೆಯ ಮುಸುಕಿದ್ತ್ರಂಗಳನು ಮುಕ್ಕಡಿಗೆ ||
ಹೊಗರೊಗುವ ಕೂರಂಬಿನಿಂ ತೆರಿ | ದಗಲ ವಿಭವತ್ಸಾಧಿಪನ ಪೆಂ |
ಪೊಗೆದ ನಿಂದ ವಿಮಾನಗಳ ಕೀಲಿಸಿದನೆಡೆವಿಡದೆ || ೩೩ ||

ಮುಳಿದು ವಿಭವತ್ಸಾಧಿಪನು ಸಂ | ಚಳಿಸದೆಚ್ಚಾ ಶಿಖಿ ವಿಶಿಖವನು |
ಜಲ ಸಿಳೀಮುಖದಿಂದ ಮಳ್ಗಿಸೆ ಸರ್ಪಬಾಣವನು ||
ತಳುವದೆಸೆ ಗರುಡಾಸ್ತ್ರದಿಂ ತರಿ | ಹೇಳಿಪಿದನು ಗಿರಿಶರವ ನೆಸೆ ತಾಂ |
ಕುಳಿಸ ಮಾರ್ಗಣದಿಂದ ಪುಡಿಗೈದಾರ್ದನಾ ಪಾರ್ಥ || ೩೪ ||

ಇಂತು ಪಲತೆರನಾದ ವಿದ್ಯಾ | ಸಂತತಿಯಲವರೈದಿ ಕಾದುತ |
ಕಂತುಪಿತ ವಿದ್ಯಾ ಬಲವು ಗೆಲಗೈಯಲಿರಲಾಗ ||
ಇಂತಡದೆನಾದೊಡೆ ನದೀಸುತ | ನಂತಕನವೊಲು ಬಹಳಸೇನೆಯ |
ನಾಂತು ಕೊಲ್ಲದೆ ಮಾಣನೆಂಬಂತಿನನು ಮರೆಯಾದ || ೩೫ ||

ಮೊಳಗಿದತ್ತಪಹಾರ ತೂರ್ಯವು | ಬಲವೆರಡು ನೆರೆವೀಡ ಹೊಕ್ಕುವು |
ಗಳಿಯಗಳನಿಳುಹಿದುದು ತಂತಿಮ್ಮಿಕ್ಕೆ ದಾಣದಲಿ ||
ಪೊಳೆಯ ಮಗನಾಂತುಭಯದಳಪತಿ | ಗಳ ಪಿತಾಮಹನಳವದೇವ |
ಗ್ಗಳವೊಯೆಂದದೆ ಹಾಡುಗುಡಾಗಿರ್ದುದುಭಯ ಬಲ || ೩೬ ||

|| ಅಂತು ಸಂಧಿ ೫೦ ಕ್ಕಂ ಮಂಗಲಮಹಾ ||