ಸಂಧಿ ೫೧

ಸುರನದಿಯ ನಂದನನು ಹೃದಯದ | ಲಿರಿಸಿ ಕೊಂಡುಪಶಮವ ರಣದೊಳು |
ಸರಳ ಮಂಚದೊಳೊರಗಿದನು ಭೂಪಾಲ ಕೇಳೆಂದ || ಪಲ್ಲ ||

ಕೇಳು ಮಗಧಾಧೀಶ ಪಾಂಡುನೃ | ಪಾಲನಂದನನಂದು ತಾನಿರು |
ಳೋಲಗದಲರ್ಜುನನ ಸಾರಥಿ ಕೃಷ್ಣನನು ಕರೆದು ||
ಹೇಳಿದನು ಶಾಂತಜನ ಬಲುಹನು | ನಾಳೆಯಿವರನು ಗೆಲುವುಪಾಯವ |
ಹೇಳೆನಲು ತನ್ನೊಳಗೆ ತಿಳಿದಿಂತೆಂದನಾ ಕೃಷ್ಣ || ೧ ||

ದೇವರರಿಯದ ರಾಜತಂತ್ರವ | ನಾವನರಿವನು ನಾಳೆ ಗಾಂಗೇ |
ಯಾವನಿಪನಿಂದಿನ ತೆರದಿನಾಹವವ ಮಾಡಿದೊಡೆ ||
ಕಾವಡಂಬುಜ ಸಂಭವಂಗರಿ | ದೀವಿಧಿಯನೊಡರಿಸುವವೆಂದು ವ |
ಚೋವಿದಗ್ಧನು ಕೃಷ್ಣನುಡಿದನು ಧರ್ಮನಂದನಗೆ || ೨ ||

ಆದೊಡಲ್ಲಿಗೆ ನಾನೆ ಹೋಹೆನು | ಕಾದದಂದದಿ ಗೈವೆನೆನೆ ನೃಪ |
ನಾದರದಿ ಕಳುಹಿಸಲು ವೈತಾಳಿಕರ ಕರಕೊಂಡು ||
ಹೋದನಲ್ಲಿಗೆ ಕೃಷ್ಣ ಭೀಷ್ಮರ | ಪಾದವನು ಕಂಡೆರಗಿ ಕುಳ್ಳಿ |
ರ್ದೋದಿದನು ಕಾದಿದ ಪೊಡರ್ಪನು ಮೆಚ್ಚುವಂದದಲಿ || ೩ ||

ನೊಸಲ ಕಣ್ಣೀಶ್ವರನನಿರದಂ | ಜಿಸಿದ ಮನಸಿಜ ವೀರನನು ಗೆಲಿ |
ದಸಮ ವಿಕ್ರಮ ನಿಮ್ಮಡಿಗಳಿದಿರಾಂಪರವರಾರೊ ||
ಎಸೆವ ಕುರುಕುಲತಿಲಕ ನಿಮಗಾ | ನುಸುರುವೆನು ಸೂರ್ಯಂಗೆ ಸೊಡರ |
ರ್ಚಿಸುವವೊಲು ಬಲ್ಲಂದದಲಿ ನಾನೊಂದು ಬಿನ್ನಹವ || ೪ ||

ಕುರುಪತಿಯು ಧರ್ಮಜನು ನಿಮ್ಮಡಿ | ಗೆರಡು ಕಂಗಳು ನೀವು ಮಧ್ಯ |
ಸ್ಥರು ವಿಚಾರಿಸೆ ಜೋಳವಾಳಿಯ ಬಂಟರಲ್ಲವಲ ||
ಧರೆಯ ಲೋಭವ ಶಾಂತ ಭೂಮೀ | ಶ್ವರ ಸಮಕ್ಷದಿ ಪರಿಹರಿಸಿ ಜಿನ |
ಶರಣೆನುತ್ತಿಹ ನಿಮಗೆ ರಾಗದ್ವೇಷವೇಕೆಂದ || ೫ ||

ಬಳಿಕ ಕೃಷ್ಣನ ಕಣ್ಣರಿದು ಬೆಂ | ಬಳಿಯ ವೈತಾಳಿಕರು ದಂಡಿಗೆ |
ಯುಲಿಯೊಡನೆ ಸರವೆತ್ತಿ ಕಿವಿಯೊಳಗಂಚೆದುಪ್ಪಳನು ||
ಸುಳಿಯಿಸಿದ ತೆರನಾಗೆ ಮೃದುಪದ | ದೊಳು ಸಮರ್ಥದ ಮೈಯೊಳಾಧ್ವನಿ |
ತೊಳಗುರೆರಲೋದಿದರು ಮೆರೆವವಿರಕ್ತಿ ಶತಕವನು || ೬ ||

ಶುದ್ಧ ಬುದ್ಧೈಕ ಸ್ವಭಾವದಿ | ಸಿದ್ಧ ಸದೃಶವುಶಕ್ತಿ ರೂಪದಿ |
ಬದ್ಧ ಜೀವಪದಾರ್ಥವಿದರೊಳಗಾರನಾಂ ಕೊಲುವೆ ||
ಉದ್ಧತಾಹಿತವೆಂಬವನೆ ಕುಲ | ವೃದ್ಧನಾಗಿಹನೊರ್ಮೆ ಮಗನುಪಿ |
ನದ್ಧರಿಪುವಾಗಿಹನದೊರ್ಮೆ ಸುಡಾಜವಂಜವ || ೭ ||

ಜಡರು ನೀರಸ ವಿಷಯಸುಖವನೆ | ಹಿಡಿದು ನಿರ್ವೃತಿ ಸುಖತರುವ ಬೇ |
ರ್ಗಡಿದು ಒಡಲಿದುನಿಟ್ಟೆಯೆಂದೇ ವಿಮೋಹಪಾಶದಲಿ ||
ತೊಡರ್ದು ವರಪೀಡೆಯನೆಸಗಿ ಬೆ | ಳ್ಪಡೆದು ಪಳಿಗಂ ಪಾತಕಕ್ಕೆದೆ |
ಗಿಡದೆ ನೊಂದರು ಜಿನಜಿನಾ ಸಂಸಾರ ದುಃಖದಲಿ || ೮ ||

ಎಂದು ಪಾಡೆ ವಿರಕ್ತಿ ಶತಕವ | ನಂದು ಶಾಂತರಸ ಪ್ರವಾಹವು |
ಸಿಂಧು ಸುತನಾ ಶ್ರವಣಪುಟದಿಂತುಂಬಿದೊಡೆ ಮತ್ತೆ ||
ಅಂದದೇನಲ್ಲಾಡಿ ತುಂಬುವ | ಚಂದವೆನೆ ತಲೆಯೊಲೆದು ಜಿನಜಿನ |
ಯೆಂದು ಶಾಂತಸ್ವಾಂತನಾದನು ಶಾಂತನಂದನನು || ೯ ||

ತಿಳಿದು ವೈತಾಳಿಕರಿಗುಡುಗೊರೆ | ಗಳನು ಕೊಟ್ಟಾ ಕೃಷ್ಣನನು ಬೆಂ |
ಬಳಿಯಲಿತ್ತಲು ಕಳುಹಿ ಭೀಷ್ಮರ ಮನವು ತಿಳಿದಂತೆ ||
ತೊಲಗಿದದು ಕತ್ತಲೆ ದಿವಾಕರ | ನೊಲಿದು ಮೂಡಣಗಿರಿಯ ಮಸ್ತಕ |
ದಲಿನೆಲಸಲೀರ್ವಲವು ಬಂದೊಡ್ಡಿತು ಯಥಾಕ್ರಮದಿ || ೧೦ ||

ಚಕ್ರಪಾಣಿಯ ಶಾಂರ್ಙ ಪಾಣಿಯ | ವಿಕ್ರಮದ ನಾಯಕರು ಚಂಡಪ |
ರಾಕ್ರಮದಿ ಮಿಗಿ ಕಾದುತಿರ್ದರದೊಂದು ಮೊನೆಯಲಿ ||
ಅಕ್ರಮದಿ ಕೌರವನ ನಾಯಕ | ರಾಕ್ರಮಿಸಿ ಪಾಂಡವರ ಸೇನಾ |
ಚಕ್ರದೊಳು ತತ್ತೊಂದು ಮೊನೆಯಲಿ ಕಾದುತಿರಲೊಡನೆ || ೧೧ ||

ಸುರನದಿಯ ಸುಕುಮಾರನಿತ್ತಲು | ಪರಮಗುರು ಪಂಚಕನೊಲವಿಂ |
ಸುರಚಿರಾಷ್ಟ್ರವಿಧಾರ್ಚನೆಗಳಿಂ ಪೂಜೆಯಂ ಮಾಡಿ ||
ಪರಿದು ಭಕ್ತಿಯಲೆರಗಿ ಆಯುವಿ | ನಿರವ ಕಾಲಜ್ಞಾನದಿಂದರಿ |
ದರುಹನನು ವಿಮಲಾಂತರಂಗಲಿರಿಸಿದನು ದೃಢದಿ || ೧೨ ||

ಮಕುಟಕುಂಡಲ ಬಾಹುಪೂರಾ | ದಿಕದಿ ಶೃಂಗಾರವನು ಬಾಣ |
ಪ್ರಕರವಿಹ ಬತ್ತಳಿಕೆ ಜೋಡನು ತೊಟ್ಟು ಬಿಲುವಿಡಿದು ||
ಪ್ರಕಟವೀರವನತ್ತಲಾ ಬಾ | ಹ್ಯಕೆ ಬೆಳಸಿಗುಣವಳಗಿರಲು ಕೇ |
ತಕಿಯ ಪೂವೆನೆ ಜ್ಯೋತಿಯಹಘುಟವೆನೆ ವಿರಾಜಿಸಿದ || ೧೩ ||

ಕುಳಿಸಮಯ ರಥವೇರಿದನು ನಿಜ | ಬಲವು ಬೆನ್ನಲಿ ಬರಲು ದೆಸೆಗಳು |
ತಳಮಳಲುಗೊಳೆ ಭೇರಿ ನಿಸ್ಸಾಳಗಳು ಮೊಳಗಿದವು ||
ಬಲವೆರಡು ಕಾದುತಿರೆ ನಿಜಕುರು | ಬಲವ ಪೊರಗಿಕ್ಕಿದರು ತನ್ನ |
ಗ್ಗಳದ ರಥವನು ಮುಂದೆ ನೂಂಕಿದನಾಜಿರಂಗದಲಿ || ೧೪ ||

ತಿರುವಿಗಂಬನು ಹೂಡಿ ಕರ್ಣಂ | ಬರೆಗ ತೆಗೆದಾ ರಥದ ಪುತ್ಥಳಿ |
ಯಿರವೆನಿಸಿ ಬಾಹ್ಯದಲಿ ಭೈರವನಾಗಿ ತೋರಿದನು ||
ಗುರುಗಳೈವರ ಪದವನೆದೆಯಲಿ | ಧರಿಸಿ ನಿಲೆ ಪಾಂಡವ ಪತಾಕಿನಿ |
ವರನ ಮೊನೆಯೊಳಗೊಂದಿ ಸುರಿದುದು ಸರಳ ಸೈವಳೆಯ || ೧೫ ||

ಅನಿತು ಸರಳುಗಳೊಂದು ಪುಸಿಯೆದೆ | ತನುವಿನಲಿ ಪುಳಕಗಳು ಮಿಗೆ ಝೊ |
ಮ್ಮೆನೆ ನೆಗೆದವೊಲು ನೆಳ್ಕುನಳ್ಕೆನೆ ಗರಿವರನ್ನೊಡಲು ||
ದ್ಯುನದಿ ನಂದನನಂಬುಗೂಡಾ | ದನು ಬಳಿಕ್ಕಾ ಸರಳ ಮಂಚದ |
ಲನುವಿನಿಂದೊರಗಿದನು ಪಾಂಡವ ಬಲವು ಬೊಬ್ಬಿರಿಯೆ || ೧೬ ||

ಮೊಳಗಿದುದು ಜಯಪಟಹ ಪಾಂಡವ | ಬಲದೊಳಗೆ ಕುರುರಾಯನಾಗಳು |
ಕುಲಗಿರಿಯೆ ಮೇಲ್ಗಡೆದವೊಲು ಕಳವಳಿಸಿದನು ಕೂಡೆ ||
ನಳಿನಮಿತ್ರನನೊಂದು ತಾಂ ನೀ | ರಿಳಿದನೋಯೆನೆ ಪಡುವ ಕಡಲೊಳು |
ಮುಳುಗಿದನು ಅಪಹಾರ ತೂರ್ಯಾರವವು ಬಳಸಿದನು || ೧೭ ||

ಎರಡು ಪಡೆಯತಿ ಭಕ್ತಿಯಲಿ ಭೀ | ಷ್ಮರನು ಬಲಗೊಂಡೆರಗಿ ಬೀಡಿಗೆ |
ಮರಳಿದರು ಪರಮಾತ್ಮ ಭಾವನೆಯಿಂದ ಬಿಸುಟೊಡಲ ||
ಸುರ ನಿವಾಸವನೈದಿದನು ತಾಂ | ಸುರನದಿಯ ಸುತನೆಂದು ಜಿನವರ |
ಚರಣ ಪರಿಣತ ಹೃದಯರಿಗೆ ಪರಲೋಕಸುಖಮಲ್ತೆ || ೧೮ ||

ಎರಡು ಪಾಳೆಯವೊಸೆದು ಗಂಗೆಯ | ವರಸುತನ ವೀರವನೆ ನಾನಾ |
ಪರಿವಿಡಿಯಗೈವುತ್ತಲಿರ್ದುದು ರಾಯನೋಲಗದ ||
ಇರುಳ ಕತ್ತಲೆಯಂಧನೃಪಸುತ | ವರನ ಕುರುಕುಲ ದೀಪಕನ ಸೌಂ |
ದರದ ಮೊಗದಲಿ ನಿಂದುದನು ಕಲಿಕರ್ಣನೀಕ್ಷಿಸಿದ || ೧೯ ||

ನೆರೆದ ಸಾಮಂತರ ಧರಾದೀ | ಶ್ವರನ ಸಭೆಯಲ್ಲೆಸೆವ ಮಿಸುನಿಯ |
ಗಿರಿಯೊಯೆನೆ ನಿಡಿವಾಳ ಝಳಪಿಸುತಿದಿರೆ ನಡೆತಂದು ||
ಅರಸ ಬಿನ್ನಹ ನಾಳಿನಾ ಸಂ | ಗರವು ನನ್ನದು ಚಿಂತೆ ನಿಮ್ಮಯ |
ಸಿರಿಮೊಗದೊಳಿರಲೇಕೆ ಜಯವನು ತಹೆನು ನಿಮಗೆಂದ || ೨೦ ||

ಆರನೆಚ್ಚರು ಭೀಷ್ಮರಾ ಪರಿ | ವಾರದಲಿ ಕೆಲಬರನು ಕೊಂದರು |
ವೀರರೆಂದಾ ಪಾಂಡವರುಗಳ ಹೊಗಳಿದಣಿಯರಲೆ ||
ಈರಣದೊಳೇನವರೊಳಾಂತರೆ | ತೂರುಗೋಲಂದೆಚ್ಚರೇ ಮೈ |
ಯಾರೆ ಪರಬಲದಿರಿತ ಕೊಡಲೊಪ್ಪಿಸಿದರವರೆಂದ || ೨೧ ||

ನಾಳೆ ಸಂಗ್ರಾಮದಲಿ ಪಾಂಡವ | ರಾಳುದೋರಿದರಾದೊಡೆನ್ನಯ |
ತೋಳ ಬಲುಹನು ತೋರುವೆನು ತೋರುವೆನು ಪರಬಲವ ||
ಕೀಳುವೆನು ಭೀಮಾರ್ಜುನರ ನಿಡು | ದೋಳನಮರರೆ ಬಾಳುಬಾಳೆನೆ |
ಜೋಳವಾಳಿಯ ಸಲುಸುವೆನು ಭೂಪಾಲ ಕೇಳೆಂದ || ೨೨ ||

ಎಂದ ಕಾನೀನನ ನುಡಿಗೆ ಮೊಗ | ದೊಂದು ಕಂದೋಸರಿಸಿದುದು ತರಿ |
ಸಂದನೀತನು ಭೀಮಪಾರ್ಥರಿಗಳಿವ ತಂದನಲೆ ||
ಎಂದು ಬಗೆದಾ ಪಿಂಗಲೋಚನ | ನಂದು ಕರ್ಪುರದಂಬುಲವನೊಲ |
ವಿಂದೆ ಕೊಡೆ ಪಡೆದಿರುಳ ಕಳೆದನು ರಾಧೆಯಾತ್ಮಜನು || ೨೩ ||

|| ಅಂತು ಒಟ್ಟು ಸಂಧಿ ೫೧ಕ್ಕಂ ಮಂಗಲಮಹಾ ||