ಸಂಧಿ ೬೧

ನೇಮಿ ಜಿನಪನ ಸಮವಸರಣ ಮ | ಹಾಮಹಿಮೆಯನು ನೋಡಿ ನೆರೆ ಸು |
ತ್ರಾಮನೆಮ್ಮನು ಮೆಚ್ಚಿದಣಿದನೊ ಸುಗುಣಿ ಜಿನಭಕ್ತ || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಪೌಲೂಮೀಶನುತ್ತಮ |
ಶೀಲನಭವನ ಪೂಜೆಗಾತುರನದನೆಸಗಿ ಬಳಿಕ ||
ಪೇಳಲಭಿವರ್ಣಿಪೊಡಶಕ್ಯ ವಿ | ಶಾಲ ವಿಭವದ ಸಮವಸರಣದ |
ಮೇಳಿ……………….ಗಳ ನೀಕ್ಷಿಸುತಿರ್ದನೆಂತೆನಲು || ೧ ||

ಅದುವೆ ಪರಮಾರ್ಹಂತ್ಯಲಕ್ಷ್ಮೀ | ಸುದತಿ ಯುದ್ವಾಹದ ಸದನ ಮ |
ತ್ತದುವಮೃತ ಪುರಿಗಭವನೈದಲು ಬಿಟ್ಟಪೊರಬೀಡು ||
ಅದು ಗಗನ ಲಕ್ಷ್ಮೀಸು ಮಂಡನ | ವದರಗಲ ಹನ್ನೆರಡು ಗಾವುದ |
ವದರೊಳಭವನು ಮೆರೆದು ನಾಯಕ ರತುನವೆನೆ ಎಸೆದ || ೨ ||

ಧರೆಯ ನಾಕಾಶಕ್ಕೆ ಐಸಾ | ಸಿರದನುತ್ಸೇಧದಲಿ ನೀಲ |
ಸ್ಫುರಿತ ರನ್ನದಲೊಂದೆ ಶಿಲೆಯೊಳು ಮುಕುರಭಾಸಿಯೊಳು ||
ಮಿರುಪ ಧೂಳೀಸಾಲೆ ಸುರಧನು | ತಿರವಡೆದುದೆನು ಸಮವಸೃತಿಸೌಂ |
ದರಿ ತಳೆದ ಬಹುರತ್ನ ಕಾಂಚೀಧಾಮವೆನಿಸಿದುದು || ೩ ||

ಹರಿಗೆಗಳ ಮುಗಿಲಟ್ಟಳೆಯ ಬಿ | ತ್ತರದ ಪಳಯಿಗೆಗಳ ತೆನೆಗಳು |
ಬ್ಬರದ ಧೂಳೀಶಾಲೆಯೊಪ್ಪಿಹುದದರ ನಾಲ್ದೆಸೆಗೆ ||
ಸುರನದಿಯ ತೆರೆಯಿಳಿದವೋತರ | ತರದಿ ನೆನಲೆಂಬತ್ತು ಸಾಸಿರ |
ಸುರ ಚೆಲುವಿರುವ ಪಳುಕಿನಾ ಸೋಪಾನವೊಪ್ಪಿದವು || ೪ ||

ಸುರಖಚರ ಭೂಚರಫಣೀಯಂ | ತರ ನಿಚಯ ತಿರ್ಯಂಚ ಭವ್ಯರು |
ಭರವಸದಿ ಪರಿದೇರಿವಿಳಿವಯನಕ್ಕೆ ಸವೆದಿಟ್ಟ ||
ಚರಣ ಲೇಪೌಷಧಿ ವಿಲೇಪಿತ | ಭರದ ಮೊದಲಿನ ಕಡೆಯ ಶೋಭಾ |
ಕರದ ಸೋಪಾನಂಗಳೆಸೆದವು ನಾಲ್ಕುವೀಧಿಯಲಿ || ೫ ||

ರತುನಮಯದೋರಣದ ತೋರಣ | ಸತತದಿಂ ಕೆಂಬಿಸಿಲನಿಂಬಿಡು |
ವತಿ ಮೆರೆವ ಚೆಂಬೊನ್ನ ನೆಲಮಾಡಗಳ ಗೋಪುರದ ||
ಪಥದ ಬಾಗಿಲ ಕಾಪಿನವರು | ನ್ನತಿಯ ಜ್ಯೋತಿಷ್ಕಾಮರರು ರಾ |
ಜಿತತನುದ್ಯುತಿ ಪರ್ವೆದದಿವಿಡಿದಿಹರು ಕೇಳೆಂದ || ೬ ||

ಕಲಶ ಭೃಂಗಾರ ವ್ಯಜನ ನಿ | ರ್ಮಲ ಮುಕುರ ಚಾಮರ ಪತಾಕಾ |
ವಳಿಯ ಭಾಸುರ ಸುಪ್ರತಿಷ್ಠ ಚ್ಛತ್ರವೆಂದೆಂಬ ||
ತೊಳಗಿ ಬೆಳಗುವವಷ್ಟ ಮಂಗಳ | ವಿಳಸಿತದಿ ಚೆಲುವಾಯ್ತು ಗೋಪುರ |
ದೊಳ ಪೊರಗೆ ಮೆರೆವುಭಯವೇದಿಕೆ ಮತ್ತಮೆಂತೆನಲು || ೭ ||

ಪಲವು ಸೌಧದಿ ಪಲವು ಧಾನ್ಯದಿ | ಪಲವು ವಸನದಿ ಪಲವು ತೊಡವಿಂ |
ಪಲವು ಋತುಗಳ ಕುಸುಮ ಫಲದಿಂ ಪಲವು ಕೈದುಗಳಿಂ ||
ಪಲವು ಮಣಿಭಾಜನ ನಿಚಯದಿಂ | ಪಲವು ವಾದ್ಯದಿ ಪಲವು ರತ್ನದಿ |
ಪಲವು ಶೋಭೆಯಿನೆಸೆದುವಾ ಗೋಪುರದ ಜಗಲಿಗಳು || ೮ ||

ಅದರೊಳಗೆ ನೈಸರ್ಪ ಪಾಂಡುಕ | ಪದುಮ ಪಿಂಗಳ ಕಾಳನೆಸೆವ |
ಗ್ಗದ ಮಹಾಕಾಳಪ್ರವರ ಮಾಣವಕ ಶಂಖಾಖ್ಯ ||
ವಿದಿತ ಕಾಮದ ಸರ್ವ ರತ್ನವು | ಪದುಳದಿವು ಪ್ರತ್ಯೇಕ ನೂರೆಂ |
ಟೊದವಿಹವು ನವನಿಧಿಗಳೆಲೆ ಭೂಪಾಲ ಕೇಳೆಂದ || ೯ ||

ವರ ಚತುರ್ಮುಖ ಸಮವಶೃತಿ ಸೌಂ | ದರಿಯ ನಾಲುಕು ಬೈತಲೆಯ ವೊಲು |
ಮೆರೆದವಾ ಬೀದಿಗಳು ಮೊದಲಿನ ಪೀಠಪರಿಯಂತ ||
ಪಿರಿಯ ಗೋಪುರದಿಂದ ಪಳುಕಿನ | ಲೆರಡು ನಿಡು ಭಿತ್ತಿಗಳವರೊಳಿ |
ತ್ತರದ ಕಿರುವಾಗಿಲುಗಳೆಸೆದವು ಭೂಮಿಭೂಮಿಯಲಿ || ೧೦ ||

ಸಂದ ಗೋಪುರದಿಂದ ಮ | ತ್ತೊಂದು ದಿನವ್ಯೂತಿ ಪ್ರಮಿತದೊಳು |
ನಿಂದ ತೋರಣಶತಕದಿಂ ಗೋಪುರ ಚತುಷ್ಕಗಳಿಂ ||
ಸೌಂದರದ ಪೊಂಗೋಟೆ ಮೂರರಿ | ನೊಂದಿ ಬೀದಿಯ ನಡುವೆ ನಾಲ್ದೆಸೆ |
ಗೊಂದೆ ಮಾಳ್ಕೆಯಲೆಸೆವ ಮಾನಸ್ತಂಭವೊಪ್ಪಿದವು || ೧೧ ||

ಸುರಪ ಕತೃಪರಿ ವರುಣ ಧನದರು | ಹರುಷದಿಂದನವರತ ಕ್ರೀಡಿಪ |
ವರರತುನ ಹರ್ಮ್ಯಗಳು ಪ್ರಥಮದ ಕೋಟೆಯಿಂದೊಳಗೆ ||
ಕರವೆಸೆದನಾ ನಾಲ್ದೆಸೆಗೆ ಮ | ತ್ತೆರಡನೆಯ ಪೊಂಗೋಂಟೆಯೊಳಗುರೆ |
ಮೆರೆವ ಕೋಣ ಚತುಷ್ಕದೊಳು ಕಂಗಳಿಗೆ ಚೆಲುವಾದ || ೧೨ ||

ತರದಿ ಪಾವಕ ಪುಣ್ಯ ಜನ ಬಂ | ಧುರ ಪವನ ಪಸುತಿಗಳೆಸೆವುವು |
ಪ್ಪರಿಗೆಗಳು ಕಾಂಚನದಿನೆಸೆದವು ಬೇರೆಬೇರವನು ||
ನೆರೆ ಬರಸಿದವು ನಂದನಂಗಳು | ದೊರೆವಡೆದ ಮೂರನೆಯ ಕೋಟೆಯ |
ಪರಿವಿನೊಳಗೊಪ್ಪಿರ್ದ ಪೀಠತ್ರಯದ ಮೇಲೆಸೆವ || ೧೩ ||

ತೊಳಪ ಮಾಣಿಕ ಜಿನಪ್ರತುಮೆ ಕಂ | ಗೊಳಿಸಿದವು ನಾಲ್ಕಲ್ಲಿ ಕಂಬವ |
ಕುಲಿಷ ಧಾರೆಗಳೆರಡು ಸಾವಿರವದರ ಜಂಘೆಯಿದು ||
ಪಳುಕಿನಾ ಸಮವೃತ್ತ ಮೇಲ | ಗ್ಗಳಿಪ ರನ್ನದ ಗಡಗೆನೆಯಿದಲು |
ಪೊಳೆವ ಗಡಗೆಮರಲ್ದ ತಾವರೆ ಹಲಗೆಯಗ್ರದಲಿ || ೧೪ ||

ಕನದರುಣ ಮಣಿಜಿನಪ್ರತುಮೆನಾ | ಲ್ಕನುವಡೆದುದಾ ದೇವಕೂಟದೊ |
ಳಿನ ಸಹಸ್ರ ಸುಕಾಂತಿ ರತ್ನದ ಕಲಶ ರಂಜಿಸಿತು ||
ಘನತರದ ಮೌಕ್ತಿಕದ ಲಂಬಣ | ವಿನುತ ಕೋಣ ಚತುಷ್ಪತಾಕೆಯು |
ದನಿಯ ತೋರುವು ರತುನ ಘಂಟೆಗಳದರೊಳೊಪ್ಪಿದವು || ೧೫ ||

ಪರಮನಮಲಾಂಗಕೆ ತಾಂ ಪ | ನ್ನೆರಡು ಮಡಿಯುಚ್ಚವನೆ ಮಾಡದೆ |
ದುರಭಿಮಾನಸ್ತಂಭವನು ತಾನಿನ್ನದರ ಮೊದಲ ||
ನೆರೆದ ಕೋಟೆಯ ಪೊರಗಣಾ ಗೋ | ಪುರ ಚತುಷ್ಕರ ಬಾಗಿಲೆಡೆಗಳೊ |
ಳುರೆ ಸಮವಶೃತಿ ಗೈದುವರು ಕಾಲ್ದೊಳೆಯಲುನುವಾದ || ೧೬ ||

ಕನಕ ಕುಂಡದ್ವಿತಯ ಮಧ್ಯದ | ವಿನುತ ಸಮ ಚತುರಸ್ರ ಸರಸಿಗ |
ಳನು ನಯದಿ ತಾಂ ನಾಲ್ಕು ನಾಲ್ಕಾ ನಾಲ್ಕು ಬೀದಯೊಳು ||
ಅನಿಮಿಷ ಸ್ತ್ರೀ ಸಂಕುಳದ ಮ | ಜ್ಜನಕೆ ಯೋಗ್ಯತೆಯಾದ ಕೆರೆಗಳ |
ನನಿಮಿಷೇಂದ್ರನು ನಂದೆ ಮೊದಲಾದವನು ನೋಡಿದನು || ೧೭ ||

ಸಂದ ಮಾನಸ್ತಂಭ ವೀಥಿಯ | ದೊಂದು ಯೋಜನದಗಲವದರೊಳು |
ನಿಂದವಾ ಮಧ್ಯದಲಿ ಮಾನಸ್ತಂಭವದರೆಡೆಯ ||
ಸಂಧಿಸಿರ್ದರೆ ಗಾವುದಂಗಳ | ಸೌಂದರವ ತೆರಪಿನೊಳು ನಾನಾ |
ಚಂದದುಪ್ಪರಿಗೆಗಳು ಮೆರೆದವು ಭೂಪ ಕೇಳೆಂದ || ೧೮ ||

ರತ್ನ ವೈದೈದಮಲ ಚಿಂತಾ | ರತ್ನವೊಂದೊಂದಡಸಿ ತೋರುವ |
ರತ್ನ ಕಂಠಿಕೆ ಸಮವಶೃತಿಲಕ್ಷ್ಮಯಿ ಸೊಬಗಿಗೆನಿಸಿ ||
ರತ್ನ ಸೌಧಗಳೈದೈದುದೆನುತ | ರತ್ನ ವಸತಿಲದೊಂದು ಧನದನ |
ಯತ್ನದಿಂ ಪ್ರಸಾದ ಚೈತ್ಯಾವನಿ ವಿರಾಜಿಸಿತು || ೧೯ ||

ತದುಪವನದೊಳು ಪದಹತಿಯ ಬಯ | ಸದೆಯಶೋಕೆ ಸರಾಗಿಸಿಹವಾ |
ಸುದತಿಯರ ಮೊಲೆ ಸೋಂಕು ಬಯಸದೆ ಕುರವಕಗಳಲರ್ದು ||
ವದನ ಮಧುವನು ಪಾರದಾ ನೋ | ಟದ ಸಘಾಟಿಕೆಗೆಳಸದೇಂ ಪೂ |
ತುದೊ ವಕುಲ ತಿಲಕದ್ವಯವು ಫಲತರುಗಳಿಂಬಿನಲಿ || ೨೦ ||

ಸರಸಿರುಹಕಲು ಹಾರ ನೈದಿಲು | ಪರಮಳಿಸುವಮಳಾಂಬು ಪೂರಿತ |
ಸರಸಿಗಳು ವೃತ್ತತ್ರಿಕೋಣದಿನದರೊಳೊಪ್ಪುವವು ||
ಸುರರು ಜೋತಿಷ್ಕರು ಖಚರವೆಂ | ತರ ಫಣಾಧರ ದಿವ್ಯಭವ್ಯರು |
ಹರುಷದಿಂದಾ ಪರಿಮಲೋದಕ ಬನಕುಸುಮದಿಂದ || ೨೧ ||

ಅರುಹನನು ಪೂಜಿಸುವ ರಾಗವ | ಮಿರದೆ ಮಂಗಲ ತೂರ್ಯವುಲಿಯಲು |
ತರತರದ ಮಣಿಮಯದ ನೆಲೆಯುಪ್ಪರಿಗೆಗಳನಡರ್ದು ||
ಪರಮಾನ ರೂಪಸ್ಥವಾದಿಯ | ನುರುಮುದದಿ ಪಾಡುವ ಪೊಗಳುವ |
ಚ್ಚರಿಯೆ ತತ್ಪ್ರಾಸಾದ ಚೈತ್ಯಾವನಿಯಲೊಪ್ಪಿದುದು || ೨೨ ||

ಅನುಪಮಿತ ಪ್ರಾಸಾದ ಚೈತ್ಯಾ | ವನಿಯೊಳಗೆ ಕಾಂಚನದ ವೇದಿಕೆ |
ಯನು ಪಡೆದುವಾ ನಾಲ್ದೆಸೆಯಲಿಹ ರೂಪ್ಯಗೋಪುರದ ||
ಘನದೊಳಗೆ ಮುಂಪೇಳಿದಂದದಿ | ವಿನುತ ನಿಧಿರಕ್ಷಕರು ಮಂಗಳ |
ವೆನಿತು ಚೆಲುವಾಗಿಹುದನೀಕ್ಷಿಸಿ ಶಕ್ರ ಮೆಚ್ಚಿದನು || ೨೩ ||

ಸೊಗಯಿಪದರಿಂದತ್ತ ಗಾವುದ | ದಗಲತನಗೆನೆ ನಿರ್ಮಲಾಂಬು |
ಪ್ರಗತ ಜಲ ಖಾತಿಕೆಯು ಮೆರೆದುದು ಮತ್ತಮದರೊಳಗೆ ||
ಪಗಲುವಿರುಳುಂ ಕಮಲ ಕುಮುದವು | ನಗೆಯ ಕುಂದವು ಜಲ ಚರಂಗಳು |
ಹಗೆಯ ನರಿಯದೆ ಸಂಚಲಿಸುತಿಹವತಿ ಮನೋಹರದಿ || ೨೪ ||

ನೆರೆಯದಗಲದೆ ಸಂತಸದೆ ಪಗ | ಲಿರುಳು ನಲಿವವು ಜಕ್ಕವಕ್ಕಿಗ |
ಳರಲ ಬೆಂಡನು ಪೀರಿದಳಿಗಳು ಕುಸುಮದೊಳಗಿಹವು ||
ತರತರದರಸಂಚೆಗಳು ಬಿ | ತ್ತರದ ಬಿಸುಕಾಂಡವನು ಸವಿಯದೆ |
ಹರುಷದಿಂ ನಲಿದಾಡುತಿವೆ ಯೆಂದೀಕ್ಷಿಸಿದನಿಂದ್ರ || ೨೫ ||

ಮುಳುಗಿ ಯೇಳುವ ಸುರತರುಣಿಯರ | ತಳತಳಿಪ ನನೆಮೊಗವ ನೀಕ್ಷಿಸಿ |
ಕೆಲಬರಮರಿಯರಬುಜವೆಂದಳಿಯೆಂದು ಕುಂತಳದ ||
ಹೊಳೆವ ಕಂಗಳ ನೆಯಿದಿಲೆಂದ | ವ್ವಳಿಸಿ ಕೊಯ್ಯಲು ಕೈಯ ನೀಡಿ ವಿ |
ಚಲನಯನೆಯರ ನಗಿಸುವದನಮರೇಂದ್ರನೀಕ್ಷಿಸಿದ || ೨೬ ||

ಅದರಿನಾಚೆಯ ತಡಿಯವೇದಿಯ | ಪುದಿದ ಬಾಗಿಲುವಾಡದಲಿ ನಿಂ |
ದುದು ನಿಧಿಯು ರಕ್ಷಕರು ಮಂಗಳವವರೊಳಿರ್ದಂತೆ ||
ಅದರಿನತ್ತಲು ಕ್ರೋಶ ನಾಲುಕು | ಪದಪು ರೈಯ್ಯ ನಾ ಮೋ |
ದದ ತವರ್ಮನೆಯೆನಿಸಿ ವಲ್ಲೀವನವು ಶೋಭಿಪುದು || ೨೭ ||

ಹಲವು ಋತುವೊಂದಾದುವೆನೆ ತಳಿ | ರಲರು ಮಿಡಿ ಕಾಯ್ವಣ್ಣುಗಳ ಸಂ |
ಕುಳದಿ ಕಂಗೊಳಿಸುವವು ಫಲವುಂತೇಗಳೋರಂತೆ ||
ಅಲೆವ ಬಂಡುಣಿವಿಂಡುಗಳ ತುರು | ಗಲಲಿ ಮಲ್ಲಿಗೆ ಜಾಜಿ ತನಿ ಪ |
ಡ್ಡಳಿಗಳಿದಿರ್ಮುತ್ತೆಗಳು ಮೊದಲಾಗೆಸೆವುದೆಡೆಬಿಡದೆ || ೨೮ ||

ಜಿನನನರ್ಚಿಪ ಭವಸೆಯಿಂ ಸುರ | ವನಿತೆಯರು ಗಿಡಲತೆಯೊಳೆಲ್ಲಿಯು |
ತನಿತ ಪೂಗಳನಾಯ್ವರೆಳೆನಗೆಯಿಂದ ಮಲ್ಲಿಗೆಯ ||
ನನೆಯನಧರದ ಕೆಂಪಿನಿಂ ಚೆಲು | ವೆನಿಪ ಬಂದುಗೆಯರನಿರಿಗುರು |
ಳಿನ ರುಚಿಯಿನೆಳೆದುಂಬಿಗಳ ಪುಟ್ಟಿಸುವ ವಿಭ್ರಮದಿ || ೨೯ ||

ಪ್ರಕಟತನ ನಿಧಿ ಯಕ್ಷ ದವ್ವಾ | ರಿಕ ಸುಮಂಗಲವುಳ್ಳ ಬೆಳ್ಳಿಯ |
ಸುಕರ ಗೋಪುರ ನಾಲ್ಕರಿಂ ಬಹುಸಾರಪ್ರಾಕಾರ ||
ವಿಕಚವಲ್ಲೀವನದಿನೊಳಗದು | ಚಕಚಕಿಪುದದರಿಂದೊಳಗೆ ನಾ |
ಲುಕು ಮಹಾವೀಥಿಗಳೆಡೆಯೊಳುದ್ಯಾನಮಹಿಯಿಹುದು || ೩೦ ||

ತಳಿರ ತೊಂಗಲನಲರಗೊಂಚಲ | ತಳೆದಶೋಕೆಯ ಬನವು ಪಣ್ಗಳ |
ತಳೆದು ಬಾಗಿದ ಚೆಲುವಿನೇಳೆಲೆವಾಳೆಗಳ ಬನವು |
ಅಲರ ಪೇರಿದ ಸಂಪಗೆಯ ಬನ | ತಳಿರಲರ್ ಕಾಯ್ವಣ್ಗಳನು ಮಿಗೆ |
ತಳೆದು ತೂಗುವ ಬಾಳ ಚೂತವನವು ವಿರಾಜಿಪುದು || ೩೧ ||

ಗಿಳಿಗಳಾ ಸ್ಯಾದ್ವಾದ ಶಾಸ್ತ್ರಂ | ಗಳನುಪನ್ಯಾಸಿಸುವವಾ ಕೋ |
ಕಿಳಗಳಾ ಚಿತ್ತಾರಿಮಂಗಳವನೆ ನುಡಿಯುತಿಹವು ||
ಅಳಿಗಳರುಸ್ತೋತ್ರಗಳ ಪ | ಜ್ಜಳಿಪ ಪಾಡುವವೊಲಿದು ಸಗ್ಗಿಗ |
ಳೆಳಸಿ ಬಳಸಿದರೀಯನಾಂತ ಧ್ಯಾನ ನಾಲ್ಕರೊಳು || ೩೨ ||

ರತುನಮಯ ಶಿಖರಗಳ ಮಣಿಮಯ | ಕೃತಕ ಪರ್ವತಗಳಲಿ ಸುರದಂ |
ಪತಿಗಳಾಡುವರಳ್ತಿಯಿಂ ಮತ್ತಾ ಬನಂಗಳಲಿ ||
ವಿತತ ಮಧ್ಯಸ್ಥಲದಲೊಂದೊಂ | ದತಿಶಯದ ನೆರೆ ಚೈತ್ಯ ವೃಕ್ಷವು |
ನುತಿಯಿಪೊಡೆ ಚೆಲುವಾಯ್ತು ಹೊಂಗೋಂಟೆಗಳ ಮೂವಳಸಿಂ || ೩೩ ||

ಮೆರೆವ ಮಣಿಮಯ ಧಾತ್ರಿಪೀಠದೊ | ಳುರುವವೆಂಟುಂ ಪ್ರಾತಿಹಾರ್ಯದಿ |
ನರುಹ ನಭಿಮುಖವಾಗಿ ಪರ್ಯಂಕಾಸನವನಾಂತು ||
ಸುರುಚಿರಾರ್ಹದ್ಬಿಂಬವಿಭವವ | ನುರುವ ಸವನೋತ್ಸವದಿ ಭವನಾ |
ಮರರು ವೈಮಾನಿಕರು ವ್ಯಂತರ ದೇವರೊಪ್ಪಿಹರು || ೩೪ ||

ಸಂದ ಪಾವನ ಚೈತ್ಯ ವೃಕ್ಷಮ | ನೊಂದನೊಂದನೆ ಮಧ್ಯದೊಳು ತಳೆ |
ದಂದವಾದಾ ವನಚತುಷ್ಕದ ನಾಲ್ಕು ಬೀದಿಗಳು ||
ಚಂದದೆರಡುಂ ಕಣೆಗಳೊಳು ಚೆಲು | ವಿಂದೆಸೆವ ಕಿರುವಾಗಿಲೆಂಟರ |
ಸೌಂದರತೆಯಿರ್ದೆಸೆಗದೆರಡೆರಡಾಗಿ ಮಣಿಮಯದ || ೩೫ ||

ಮೂರು ನೆಲೆಗಳಲೆಸೆವವಾ ಹದಿ | ನಾರು ನಾಟಕಶಾಲೆ ಕಂಸನು |
ಬೀರುತಿಹನಾ ಧೂಪಘಟಹರಿನಾರವರ ಮುಂದೆ ||
ತೋರುತಿಹವೊಂದೊಂದು ನೆಲೆಯೊಳು | ನೀರೆಯರು ಸುರನಚ್ಚಣಿಯರಿಂ |
ಪೇರೆ ಮೂವತ್ತೀರ್ವರಾಡುವರಭವ ನಾಟಕವ || ೩೬ ||

ಬಂದು ಕಂಡಾ ನಿಖಿಳ ಭವ್ಯರ | ಸಂದಣಿಗೆ ತರದಿಂದ ಹಿಂದಣ |
ಮುಂದಣೇಳುಂ ಭವವನರುಹುವ ತಿಳಿದುಕೊಂಡರ್ಗೆ ||
ಒಂದು ಭವವನು ತಿಳುಹಿಸುವ ಫಲ | ವಂದ ವಾಪೀಜಲದಿ ನಾನಾ |
ನಂದನೋರ್ವರಯೆಸೆವುದನು ಶತಮನ್ಯು ವೀಕ್ಷಿಸಿದ || ೩೭ ||

ನಳನಳಿಸುವ ಉಪವನದಿನೊಳಗು | ಜ್ಜುಳಿಪ ಮಿಸುನಿಯ ವೇದಿ ನಾಲ್ದೆಸೆ |
ಗಳೊಳು ಬೆಳ್ಳಿಯ ಚೆನ್ನ ಬಾಗಿಲುವಾಡಗಳೊಳೆಯಿದಿ ||
ತಳೆದ ಮಂಗಲಯಕ್ಷ ರಕ್ಷಕ | ರೊಳವೆನಿಪ ನಿಧಿ ಸಮಿತಿಯಿಹುದಾ |
ಬಳಸಿನೊಳಗಿಹುದಾ ಧ್ವಜೋರ್ವರೆಯದರ ಸಿರಿಪಿರಿದು || ೩೮ ||

ಒಂದು ಗಾವುದದಗಲದಲಿ ತಾ | ನೊಂದಿಹುದು ಧ್ವಜಭೂಮಿ ಮೆರೆವರ |
ವಿಂದ ಚಕ್ರಮರಾಳಗರುಡ ಮಯೂರ ಗಜಸಿಂಹ ||
ಚಂದ್ರ ಮಾಲ್ಯಾಂಬರಸುಲಾಂಛನ | ದಿಂದ ದಶವಿಧದಾ ಧ್ವಜಂಗಳು |
ಸೌಂದರದ ಪೊಂಗಂಬಗಳ ಮೇಲಿಹುದು ಚೆಲುವಾಗಿ || ೩೯ ||

ತರದಿ ನೂರೊಂದೊಂದು ದೆಸೆಗ | ಚ್ಚರಿಯ ಧ್ವಜನೂರೆಂಟು ನಾಲ್ಸಾ |
ಸಿರದ ಮೂನೂರಿಪ್ಪತಾದುದು ನಾಲ್ದೆಸೆಗೆ ಗಣಿಸೆ ||
ಅರಿವುದೊಂದೊಂದಕ್ಕುಪ ಧ್ವಜ | ವಿರುತಿಹವು ನೂರೆಂಟವಂ ಬಿ |
ತ್ತರಿಸಿ ಋತು ನಭ ಬಾಣ ಋತು ಋತು ವೇದ ಸಂಖ್ಯೆಗಳು || ೪೦ ||

ಬಗೆವೊಡೆಂಬತ್ತೆಂಟುವೆರಳೊಂ | ದಗಲ ಸಾಸಿರದೆಂಟುನೂರೊ |
ಳ್ಪೊಗೆದ ಚಾಪೋತ್ಸೇಧವಿಪತ್ತೈದು ಬಿಲ್ಲನಿತು ||
ಸೊಗಯಿಪೆಡದೆರ ಪೊಪ್ಪಿತಾರೆಯ | ನೆಗೆದು ತೂಂತುವ ತೆರದಿಗಗನಕೆ |
ನೆಗೆದು ಪುಣ್ಯದ ಫಲದ ಬೆಳಗೈಯೆನಿಸಿತಿಂದರನ || ೪೧ ||

ಮಿರುಗುವಾ ಧ್ವಜಭೂಮಿಯಿಂದೊಳ | ಗುರುವ ಮೌಕ್ತಿಕ ಕರ್ಣಕೋಟೆಯ |
ಮೆರೆವ ಬೆಳ್ಳಿಯ ಗೋಪುರಂಗಳು ಮಂಗಳದಿ ನಿಧಿಯಿಂ ||
ನೆರೆ ಬಲಜ ಪಾಲಕರನಾ ಕುವ | ರರ ನಿಕರದಿಂದೊಪ್ಪುವತಿ ಬಂ |
ಧುರದ ಶಾಲದಿನೊಳಗೆ ಸುರತರು ವನವಿರಾಜಿಪುದು || ೪೨ ||

ತೀವಿ ಜೋತಿಯನೀವ ಮಂದಿರ | ವೀರ ಭೋಜನವೀವವಸ್ತ್ರ ಮ |
ನೀವ ವಾದ್ಯಮನೀವ ಮಾಲೆಯನೀವ ಘಟವೀವ ||
ಶ್ರೀ ವಿಭೂಷಣವೀವ ದೀಪವ | ನೀವ ಪಾನವನೀವ ಸೈಪಿನ |
ಭೂ ವಿನೂತನ ದಶಾಂಗ ಕಲ್ಪವನಿಜವನವಿಹುದು || ೪೩ ||

ಕೃತಕ ನಗ ನದಿ ಸರಸಿಯೊಳು ವಿ | ಶ್ರುತ ಕನಕದುಯ್ಯಲೊಳು ಕುಸುಮ |
ಪ್ರತತಿಕಲ್ಪದೊಳುಲ್ಲಸಿತ ಲತೆವನೆಗಳೊಳು ಮೆರೆವ ||
ವಿತತ ಸುರದಂಪತಿಗಳಾಡುವ | ರತುನ ವಿಜಯನ ಪಾಡುವರು ಸಂ |
ತತಮೆನಲು ಸುರತರವನಸ್ಥಿರೆಯೆಂಬುದುಂಟಾಯ್ತು || ೪೪ ||

ಮತ್ತಮಾ ನಾಲ್ಕುಂ ಬನದನಡು | ವೊತ್ತರಿಸಿ ಮುಂಪೇಳ್ದವೊಲ ಶಾ |
ಲತ್ರಯವು ಬಳಸಿದಸುಪೀಡತ್ರಯದೊಳಗೆ ನಿಂದ ||
ಬಿತ್ತರದ ಪಳುಕಿನ ವಿಮಲಸಿ | ದ್ಧೋತ್ತಮ ಪ್ರತುಮೆಗಳನಾಂತ ಗು |
ಣಾತ್ತ ಸಿದ್ಧಾರ್ಥಕ ಮಹೀಜವು ನಾಲ್ಕವರೊಳಿಹುದು || ೪೫ ||

ಕೊಂಬು ಕೊಂಬುಗಳಲ್ಲಿ ಮೌಕ್ತಿಕ | ಲಂಬಣವು ಚವಲಗಳು ಮಾಲೆಗ |
ಳಿಂಬುವಡೆದಾ ರತ್ನಘಂಟಾಜಾಲಗಳು ಚೆಲುವಿಂ ||
ತುಂಬಿಯೆಸೆವ ನಮೇರು ಮಂದಾ | ರಂ ಬಲಿಕಲಾ ಪಾರಿಜಾತ ಗು |
ಣಂಬಡೆದ ಹರಿ ಚಂದನಾಖ್ಯೆಯನಾಂತು ಸೊಗಯಿಪವು || ೪೬ ||

ಕಿರಿಯ ಬಾಗಿಲ ನಾಟ್ಯ ಶಾಲೆಯ | ನರುವೊಗೆಯ ಗುಂಡಿಗೆಯುನಚ್ಚಣಿ |
ಯರು ಮೊದಲೆ ಪೇಳ್ದನಿತೆ ಶೋಭಿಪ ಕಲ್ಪ ತರುವನದ ||
ತುರುಗಲಿಂದೊಳಗಿಹುದು ನಿಧಿ ಪರಿ | ಕರ ಸುಮಂಗಳ ದ್ವಾರಪಾಲಕ |
ರುರಗರೊಪ್ಪಿದ ಗೋಪುರೋಧ್ಘ ಸುವರ್ಣವೇದಿಕೆಯು || ೪೭ ||

ಅದರಿನೊಳಗರೆ ಯೋಜನವಿಶಾ | ಲದಲಿಹುದು ನಯನಾಮೃತವು ಕ |
ರ್ಣದ ರಸಾಯನವೆನಿಸಿ ಸುರನರ ಜನದ ಸುಖಭೂಮಿ ||
ವಿದಿತ ಮಣಿಮಯ ಚಿತ್ರಕೂಟಾ | ಸ್ಪದವಖಿಲ ರಚನಾತಿಶಯ ರುದು |
ಸದನವೆನೆ ಸಂಗೀತ ಹರ್ಮ್ಯಾವನಿಬೆಡಂಗಾಯ್ತು || ೪೮ ||

ದೇವ ಗಾಯಕಿಯರು ಸುತಿಸ್ವರ | ವೋವಿದಂಡಿಗೆವಿಡಿದು ಝೊಮ್ಮನೆ |
ತೀವಿ ಜೇಂಗೊಡನುರ್ಕಿದುದೊ ಸುರಿದುದೊ ಸೊದೆಯ ಸೋನೆ ||
ಕಾವ ದೇವನುವೂವು ವಿಲ್ಲನು | ಜೇವೊಡೆಯೆ ರಸವೊಸರಿದುದೊಯೆನೆ |
ಭಾವಕರ ಬಗೆ ನೀಂಪನೀಂತುದು ಪಾಡವಂಚರರು || ೪೯ ||

ಶ್ರುತಿಯೊಳೊಗ್ಗಿದ ಗೀತಗೀತ | ಪ್ರತತಿ ತಾಳನಿಬದ್ಧ ತಾಳದ |
ಜತಿಗೆ ಸೊಗಯಿಪ ಮದ್ದಲೆಯ ಪಲವಾವುಜದ ನಾದ ||
ತತವಿತತ ಘನಸುಸಿರವಾದ್ಯದ | ಚತುರಿಕೆಗೆ ಗೀತದ ಸುತಾನಕೆ |
ಸುತಿಪನಚ್ಚಣಿಯರೆ ಹರಣವೆನೆ ನಲಿದು ನರ್ತಿಪುದು || ೫೦ ||

ರಸಮೆ ಕಾಳ್ಪುರಮಾಗೆ ಭಾವ | ಪ್ರಸರಮುಂಬರಿವಾಡೆ ವೃತ್ತಿಗ |
ಳೆಸಕ ಭಾವಕ ರಕ್ಷಗಭಿಮುಖವಾಗೆ ಮೂಜಗದ ||
ಮಿಸುಪ ಸಭೆ ಸೈವೆರಗುಗೊಳೆ ಚೆಲು | ವೆಸೆವ ಮೋಹನವುಬ್ಬರಿಸೆ ನ |
ರ್ತಿಸುವನಚ್ಚಣಿಯರನು ಸುರಪತಿ ನೋಡಿಮೆಚ್ಚಿದನು || ೫೧ ||

ವಿನುತತರ ಸಂಗೀತ ಹರ್ಮ್ಯಾ | ವನಿ ಸುಚಕ್ರದ ಮಧ್ಯಮಧ್ಯದ |
ಘನತರದ ಚವ್ವೀದಿಗಳ ಮಧ್ಯದಲಿ ಮಣಿಮಯದ ||
ಜನಿತ ಶತತೋರಣದೊಳಗೆ ಲೇ | ಸೆನಿಪ ಮುಕ್ಕೊಡೆ ಚವಲಮಾಲೆಯ |
ಕನಕ ಕಿಂಕಿಣಿ ಘಂಟೆಗಳ ಮಾಳಾ ವಿಳಾಸದಲಿ || ೫೨ ||

ಪ್ರವರಚಿನ ಸಿದ್ಧಪ್ರತಮೆಗಳ | ನವಗಹಿಸಿ ಮಾಣಿಕ್ಯಮಯವಹ |
ನವನವಸ್ತೂಪೆಗಳು ಭವ್ಯರ ಪುಣ್ಯ ಪುಂಜವೆನೆ ||
ವಿವಿಧ ರಚನೆಯಿನಿಹುದು ಮತ್ತೊ | ಪ್ಪುವ ಸುಸಂಗೀತ ಕ್ಷಿತಿಯನೊಳ |
ಗವಿಚಲಿತ ಕಾಂತಿಯಲಿ ಪಳುಕಿನ ಕೋಟೆ ಬಳಸಿದುದು || ೫೩ ||

ಮಂಗಳವನಾ ನಿಧಿಗಳನು ತಳೆ | ದಂಘಯಿಪ ಕಲ್ಪಜರ ಕಾಪಿನ |
ತುಂಗತರದ ಹರಿಣ್ಮಣಿಯ ಗೋಪುರಚತುಷ್ಕಗಳ ||
ಸಿಂಗರದ ಕೋಟೆಯಮೊದಲಿನಿಂ | ತಾಂಗಿ ಗಾವುದದಗಲದಲ್ಲಿ ಬೆ |
ಡಂಗುವಡೆದುದು ಕಂಗೊಳಿಸೆಲಕ್ಷ್ಮೀ ಸುಮಂಟಪವು || ೫೪ ||

ಗಗನವಳುಕಿನ ಮಂಟಪವು ತಾ | ಮುಗಿಲನಿರಿವುದು ಮತ್ತಮದರೊಳು |
ಸೊಗಯಿಸುವ ಹದಿನಾರು ಬಿತ್ತಿಗಳಿಂದ ಹನ್ನೆರಡು ||
ನೆಗೆದ ಕೋಷ್ಠಗಳಿಹವು ನಾಲ್ದೆಸೆ | ಗೊಗೆದ ವೀಥಿ ಚತುಷ್ಕದೆಡೆಯಲಿ |
ಮಿಗೆ ಜಯತ್ರಯ ಗರ್ಭವದು ಗಣಭೂಮಿಯಿಂತೆನಲು || ೫೫ ||

ಮುನಿಪರಮರಿಯರಜ್ಜಿಕೆಯರೊ | ಳ್ಪೆನಿಪ ಜೋತಿಷ್ಕಾಂಗನೆಯರಾ |
ವನಜ ವಧುಗಳ ಭವನವಾಸಿಯರೆಸೆವ ಭವನಜರು ||
ವನಜರಾ ಜೋತಿಷ್ಕರಮರರು | ಮನುಜರಾ ತಿರ್ಯನ್ನಿವಹವಿಹ |
ಘನತೆಯಿಂದೀರಾರು ಗಣಕೋಷ್ಠವು ತರದಿನಿಹುದು || ೫೬ ||

ಬಳಸಿದಾ ಗಣ ಭೂಮಿವಳಯದಿ | ನೊಳಗೆ ಪಚ್ಚೆಯ ಗೋಪುರಂಗಳು |
ಬಗೆದ ನಿಧಿಮಂಗಲದಿ ಕಲ್ಪಜರುಗಳ ಕಾಪಿಂದ ||
ತೊಳಗುತಿರೆ ಚೆಲುವಾದುದಾ ನಿ | ರ್ಮಲನ ಗಗನಸ್ಫಟಿಕ ವೇದಿಕೆ |
ಯೊಳಗೆ ಪೀಠತ್ರಯವು ಸೊಗಯಿಸುತಿರ್ದುದೆಂತೆನಲು || ೫೭ ||

ಸವೆದ ವೈಡೂರ್ಯದಿ ಸುವರ್ಣದಿ | ನವರತುನ ಮಯದಿಂ ತರದಿನೊ |
ಪ್ಪುವ ಸುಪೀಠಗಳೇಳು ನೂರೈವತ್ತು ಬಿಲ್ಲುಗಳು ||
ಅವರ ನೆಗಹೆಂಟೆಂಟರರ್ಧವು | ವಿವರಿಪೊಡೆ ಮೂರನೆಯ ದೈನೂ |
ರವಗಹಿಕೆಯಷ್ಟಾರ್ಧ ಚಾಪೋತ್ಸೇಧವೆಣಿಸುವೊಡೆ || ೫೮ ||

ಒಂದು ಚಾಪಪ್ರಮಿತವನು ಬೆಳ | ಗಿಂದೆಸೆವ ವರ ಧರ್ಮಚಕ್ರವ |
ನಂದವಹ ಮಕುಟದಲಿ ಪೊತ್ತಾ ಯಕ್ಷರಕ್ಷಿಪೊಡೆ ||
ಸಂದ ನಾಲ್ದೆಸೆಗಿಹರು ನಾಲ್ವರು | ನಿಂದು ಮೊದಲಿನ ಪೀಠದೊಳು ದೇ |
ವೇಂದ್ರ ಮನುಜೇಂದ್ರಾರ್ಚಿತದೊಳದನಿಂದ್ರನೀಕ್ಷಿಸಿದ || ೫೯ ||

ಎರಡನೆಯ ಪೀಠದಲಿ ಶಿಖಿಯಾ | ಪರಿಯ ಹಂಸೆಯವುಳಿಯಲೆಂಟುಂ |
ತೆರೆದ ಕೇತನವಿಹವು ಕೇತನ ಭೂಮಿವೊಲು ಮುಂದೆ ||
ಮೆರೆಗು ಮಗ್ರದ ಪೀಠದಲಿ ಕೆಲ | ಕುರುವ ಮಂಗಲ ನಿಧಿ ನಿಕರವಿಹು |
ದುರುತರ ಶ್ರೀಗಂಧಕುಟಿ ನಡುವೆಸೆದುದೆಂತೆನಲು || ೬೦ ||

ಅಗಲವದಕರು ನೂರು ಬಿಲ್ಲನಿ | ತೊಗೆದ ನವಶತ ಚಾಪದುದ್ದವು |
ಸೊಗಯಿಪುದು ಮಣಿಗಣನಿಬದ್ಧ ಸುಚಿತ್ರ ಪತ್ರದಲಿ ||
ಜಗದೆರೆಯನಾ ದಿವ್ಯ ದೇಹದಿ | ನೊಗುವ ಲೋಕದ ಪರಿಮಳಂಗಳ |
ನಗುವ ಗಂಧವನಾಂತು ಸಾರ್ಥಕವಾಯ್ತು ಗಂಧಕುಟಿ || ೬೧ ||

ದರ ಮಧ್ಯದೊಳಮಲ ಬಹುರ | ತ್ನದಿನಿಹುದು ಸಿಂಹಾಸನವು ಮ |
ತ್ತದರ ಮೇಲೆ ಸಹಸ್ರದಳ ಕನಕಾಬ್ಜಕರ್ಣಿಕೆಯು ||
ಸದಯನದನಾಲ್ವೆರನಿತ ನಗೆ | ದುದಯಿಸಿಹನಾ ಕೋಟಿರವಿಶಶಿ |
ವಿದಿತ ಕಾಂತಿಯ ದಿವ್ಯ ಪರಮೌದಾರಿಕಾಂಗದಲಿ || ೬೨ ||

ಸಲೆ ಮೆರೆವ ಸಿಂಗವಣೆ ಮುಕ್ಕೊಡೆ | ಯಲರಮಳೆ ಪೂತಸುಕೆ ನುತ ಭಾ |
ವಲಯ ಸುರದುಂದುಭಿ ಚವಲವರುವತ್ತು ನಾಲ್ಕೆಸೆಯೆ ||
ಮಲರಹಿತ ನಿಖಿಲಾರ್ಥಭರಿತೋ | ಜ್ವಲಿತ ದಿವ್ಯಧ್ವನಿ ಜಗವ ಬಗೆ |
ಗೊಳಿಸುತಿರ್ದವು ಪ್ರಾತಿಹಾರ್ಯಾಷ್ಟಕವು ಜಿನವರನ || ೬೩ ||

ಚತುರ ಚತುರಾಸ್ಯತೆ ನಭೋಯಾ | ನತೆ ಅಪಹಾರೋಪಸರ್ಗತೆ |
ಸತತಮನಿ ಮೇಷತೆ ಸಮಸ್ತಾಗಮ ವಿದಗ್ಧತೆಯ ||
ನುತಮಹಿಂಸತೆ ನೂರುಗಾವುದ | ಮಿತ ಸುಭಿಕ್ಷತೆ ಸಮ ನಖಸುಕೇ |
ಶತೆ ಗತಚ್ಛಾಯತೆಯಿವೀರೈದತಿ ಶಯವು ಜಿನನ || ೬೪ ||

ಘಾತಿಗಳು ಕಿಡಲಾದ ವಿವು ಗ | ವ್ಯೂತಿನಾಲ್ವತ್ತೆಂಟು ಪರಿಮಿತ |
ಧಾತ್ರಿ ಲೋಕೇಶನ ಸಭೆಯನುರೆ ಪುಗಲು ಪೊರಮಡಲು ||
ಮಾತದೇನಂತರ್ಮುಹೂರ್ತಕೆ | ಧಾತುಗಿಡಧಾತಪ್ಪ ವನಿತೆಯ |
ರಾ ತೆರದಿ ಬಾಲಕರು ವೃದ್ಧರು ಜಿನಪನತಿಶಯದಿ || ೬೫ ||

ನೋಡುವರು ಕಂಗುರುಡರೊಲಿದೆಡೆ | ಯಾಡುವರು ಪಂಗುರುಳ ಸವಿ ನುಡಿ |
ಯಾಡುವರು ಮೂಕರು ಕಿವುಡರೆಲ್ಲವನು ಕೇಳುವರು ||
ಆಡಲೇಂ ಮೃತಿಜನನ ರತ ತನು | ಪೀಡೆ ಪಸಿತೃಷೆ ದೇಹಿಗಳಿಗಿರ |
ದೋಡುವುದು ತಾನಲ್ಲಿ ಜಿನಸಾಮರ್ಥ್ಯವೇಂ ಬಡವೆ || ೬೬ ||

ಬಗೆವೊಡಜ್ಞಾನತ್ರಿಶಯ ಜೀ | ವಗಳು ಮಿಥ್ಯಾದೃಷ್ಟಿಗಳಭ |
ವ್ಯರ್ಗ[ಳೊರ್ವರುಮಾ] ಸಮವಸರಣದೊಳಿಲ್ಲ ಮತ್ತಲ್ಲಿ ||
ನೆಗೆದ ವೇದಿಕೆ ಕೋಟೆಗಳು ಮೂ | ಜಗದೆರೆಯನಾ ದೇಹದಿಂ ಬೆಸೆ |
ಚ್ಚುಗೆಯು ನಾಲ್ವಡಿ ತೋರಣಗಳವರಿಂದನಿತ್ತಧಿಕ || ೬೭ ||

ತರದಿ ಮಂಡಪ ಸದಿತಿ ಬಹು ಗೋ | ಪುರ ಸುಹರ್ಮ್ಯಸ್ತೂಪಗಳು ಸೌಂ |
ದರದ ಕೇಳೀ ಶೈಲಸಿದ್ಧರ ಚೈತ್ಯ ಭೂರುಹವು ||
ಸ್ಫುರದಶೋಕ ಮಹೀರುಹವು ತ | ತ್ಪರಮ ಪುರುಷನ ತನುವಿನಿಂ ಹ |
ನ್ನೆರಡು ಮಡಿಯತ್ಸೇಧವಿದು ಸರ್ವಜ್ಞನಾಗಮದಿ || ೬೮ ||

ಸುರಪನಾ ತೀರ್ಥೇಶ್ವರನ ಸೌಂ | ದರತೆಯನು ನೆರೆ ನೋಡುವಡೆ ಸಾ |
ಸಿರನಯನವನು ತಳೆದು ದಣಿಯಂಗಡ ಫಣೀಶ್ವರನು ||
ಪಿರಿದು ಸಾಸಿರ ರಸನೆಗಳನಾಂ | ತುರುಮುದದಿ ಕೀರ್ತಿಸಿ ದಣಿಯನೆನೆ |
ನರಹುಳುವು ನಾಮ ಪೊಗಳ ಬಲ್ಲೆನೆ ಜಿರನರಾ ಸಭೆಯ || ೬೯ ||

ಇಂತು ಮೆರೆವಾ ನೇಮಿನಾಥನ | ನಂತವೀರ್ಯನ ಸಮವಸರಣವ |
ನಾಂತ ನಿರ್ಭರ ಭಕ್ತಿಭಾವದಿ ನೋಡಿ ಸುತ್ರಾಮ ||
ಸಂತಸದಿ ಸದ್ದ್ರವ್ಯನಿಚಯದಿ | ನಂತಶಾಂತಕನಡಿಯ ಪೂಜಿಸಿ |
ಕಂತುವಿಜಯನ ನುತಿಸಿ ನಿಜಕೋಷ್ಠದೊಳಗಿರಲೊಡನೆ || ೭೦ ||

ಹರಿಯು ಬಲನು ಸಮುದ್ರ ವಿಜಯಾ | ದ್ಯರು ವಿದಿತಯದು ವಂಶಜರು ಗತ |
ದುರಿತನಾ ಕಲ್ಯಾಣವರಿದಾನಂದ ಭೇರಿಯನು ||
ತಿರುವಿಗೈಯಿಸಿ ಸಕಲಭವ್ಯರ | ನೆರವಿಯಿಂದೈತಂದು ದೂರಾಂ |
ತರದಿ ವಾಹನ ರಾಜ ಚಿಹ್ನವನುಳಿದು ಭಕುತಿಯಲಿ || ೭೧ ||

ಸಮವಸರಣವನೇರಿ ವೀತ | ಶ್ರಮದಿನತ್ಯಾಶ್ಚರ್ಯಮುಮನನು |
ಪಮವ ಮುಹುರೀಕ್ಷಣ ಕುತೂಹಲ ಚಿತ್ತರಳ್ತಿಯಲಿ ||
ಕ್ರಮದಿನೀಕ್ಷಿಸುತೈದೆ ಬಲವಂ | ದಮಲ ಗಂಧಕುಟಿಯನು ಸಕಲಾ |
ಗಮವನರ್ಚಿಸಿ ನುತಿಸಿ ನಿಜಕೋಷ್ಠದೊಳು ಕುಳ್ಳಿರ್ದ || ೭೨ ||

ಕಿರಿದು ಪೊತ್ತಿರ್ದೆದ್ದು ಮೂಜಗ | ದೆರೆಯ ನೇಮಿಸ್ವಾಮಿಯಡಿಗಳಿ |
ಗೆರಗಿಯಾನಂದಾ[ಂಬು] ಕಾಳ್ಪುರವಾಗೆ ಯಾದವರು ||
ನೆರೆದು ತತ್ಸಭೆಯೀಕ್ಷಿಸುತ ಸೈ | ವೆರಗುಗೊಳತಿಪ್ಪತ್ತು ಸಾಸಿರ |
ಮಿರುಪ ಸೋಪಾನವನಿಳಿದು ಪೊಕ್ಕರು ನಿಜಾಲಯವ || ೭೩ ||

ಇತ್ತಲಾ ಶತಮನ್ಯು ಕೈಮುಗಿ | ದೆತ್ತಿ ನಿಟಿಲದೊಳಿರಿಸಿ ಯೆಲೆದೇ |
ವೋತ್ತಮನೆ ಭರತಕ್ಷಿತಿಯ ನುತ ಭವ್ಯಸಂತತಿಗೆ ||
ಉತ್ತಮದ ಧರ್ಮಾಮೃತವಕರೆ | ದೊತ್ತರಿಪ ದುರಿತಾಗ್ನಿಗೆಡಿಪೊಡು |
ದಾತ್ತ ಸಮಯವಿದಹುದೆನುತ ಸಲೆ ಬಿನ್ನಯಿಸಲೊಡನೆ || ೭೪ ||

ತ್ರಿದಶಜ್ಯೋತಿಷ್ಕಾಮರರುವೊ | ರ್ಮೊದಲೆ ತದ್ಭೇರಿಗಳ ಸದೆಯಲು |
ವೊದರುವವೊ ದಶದೆಸೆಗಳೆನೆ ಪರ್ವಿದುದು ತದ್‌ಧ್ವನಿಯು ||
ಪುದಿದ ಲೋಕದ ಭವ್ಯಜನದ | ಗ್ಗದ ಸುಪುಣ್ಯವೆನಡಸಿದುದೊಯೆನೆ |
ತ್ರಿದಶಪತಿ ಜಿನಸಮವರಸರಣಮನೆಯ್ದೆ ನಡೆಸಿದನು || ೭೫ ||

ಜಿನನ ಚರಣನ್ಯಾಸಮೇದುರ | ಕನಕ ಕಮಲಗಳೇಳು ಮಿಗೆ ಪೆಂ |
ಪೆನಿಪ ಸಿಂಹಾಸನದ ಪರಭಾಗದಲಿ ಶೋಭಿಪವು ||
ಅನುಪಮಿತ ಸೌಹಾರ್ದ ಮಾಗಧ | ಜನಿತ ಭಾಷೆ ಜನಾನುರಾಗತೆ |
ಜಿನನಯಾತ್ರೆಯೊಳಲೆದು ದೆಸೆಗನುಕೂಲಗಂಧವಹ || ೭೬ ||

ಧರೆಯೊಳಗೆ ತೃಣಕಂಟಕವು ಕಲು | ಪರಳು ಕೀಟಕ ಧೂಳಿಯಿಲ್ಲದ |
ತೆರದಿ ಯೋಜನಪರಿಮಿತವನಾ ವಾಯುನಂದನರು ||
ನೆರೆದು ಸಮ್ಮಾರ್ಜಿಸುವರೊಡನೆಯೆ | ಸುರಪತಿಯ ಬೆಸನಿಂದೆ ಮೇಘ ಕು |
ವರರು ಬಹುಪರಿಜಲಾಸಾರದಲಿ ಸಿಂಪಿಪರು || ೭೭ ||

ನೆಲೆಸಿದಾ ಸಕಲರ್ತು ಸೂಚಕ | ಫಲಕುಸುಮ ಕಿಸಲಯ ಭರಿತನವು |
ಗಳು ಮುಕುರ ಸಮರತ್ನಮಯ ಭೂವಳಯ ಸಲ್ಯಾದಿ ||
ಫಲಭರಿತವಹ ಸರ್ವಸಸ್ಯಾ | ವಳಿ ಪರಸ್ಪರ ವೈರಮಂ ಬಿ |
ಟ್ಟೆಳಸಿಹವು ತಿರ್ಯಂಚ ಮನುಜಾವಳಿಗಳವನಿಯಲಿ || ೭೮ ||

ಮುಗಿಲು ಮೂಡದು ಪಕ್ಕಿ ಹಾರವು | ಗಗನದಲಿ ಬಿಳಿದಾಯ್ತು ತೆರೆಮೊರ |
ಹುಗಳು ಕಡಲೊಳಗಿಲ್ಲ ರಜದಿಂ ತಮದಿ ದೆಸೆಯೆಂಟು ||
ಹೊಗೆಯಲಮ್ಮವು ನಾಲ್ದೆರದದೇ | ವಗಣ ಸುರಪತಿಯಾಜ್ಞೆಯಿಂ ಹರಿ |
ದಗಲ ಕಿತ್ತಿತ್ತವರ ಕರೆವುದು ಜಿನವಿಹಾರಕ್ಕೆ || ೭೯ ||

ಜಿನ ಸಭಾಮಂಡಲದ ಮುಂದೊಂ | ದಿನ ಸುಮಂಡಲವಿರ್ದವೊಲು ಪೆಂ |
ಪೆನಿಸಿದರ ಸಾಸಿರ ಕಿರಣಯುತ ಧರ್ಮಚಕ್ರವದು ||
ಅನುವಡೆದು ದೆಸೆವಷ್ಟಮಂಗಳ | ವನು ತಳೆದು ಮುಂದೆಬರೆ ದಿವಿಜಾಂ |
ಗನೆಯರಂಬರದೊಳು ಜಿನೇಂದ್ರ ವಿಹಾರವೊಪ್ಪಿದುದು || ೮೦ ||

ಗತದುರಿತಗೀಪರಿಯ ಪದಿನಾ | ಲ್ಕತಿಶಯವು ದೇವೇಂದ್ರ ಕೃತಮ |
ಪ್ರತಿಮ ಸಹಜಾತಿಶಯಮನು ಮುಂಪೇಳ್ದುದೀರೈದು ||
ವಿತತ ಘಾತಿಗಳಳಿಯಲೀರೈ | ದತಿಶಯಂಗಳಿವೀಕ್ಷಿಸಲು ಜಿನ |
ಪತಿಗಳಲ್ಲದೆ ಪೆರರೊಳುಂಟೆ ಭೂಪ ಕೇಳೆಂದ || ೮೧ ||

ಧರೆಯೊಳಗೆ ಧರ್ಮಾಮೃತವ ಮಳೆ | ಗರೆವಪೂರ್ವದ ಮೇಘಮಂದಳ |
ದಿರವೊ ಮೇಣ್ ಮಿಥ್ಯಾತ್ವ ಮಾರ್ಗತಮಂಗಳನು ಕೆಡಿಪ ||
ತರಣಿ ಮಂಡಲವೊಯೆನಿಸಿ ಭ | ವ್ಯರ ಸುಕೃತ ಮಂಡಲವು ನಿಖಿಳೋ |
ರ್ವರೆಯೊಳು ವಿಹಾರಿಸಿತು ಜಿನನಾಸ್ಥಾನ ಮಂಡಪವು || ೮೨ ||

ದೇವಪತಿನತ ನೇಮಿಜಿನನ ಮ | ಹಾ ವಿಭೂತಿಯ ಸಮವಶ್ರುತಿಯನು |
ದೇವಪತಿನಡಯಿಸುವನೆನೆ ಲೋಕತ್ರಯವು ನೆರೆದು ||
ಶ್ರೀ ವಿಹಾರವ ಬಣ್ಣೆಸುವೊಡವ | ನಾವ ಕವಿಬಲ್ಲನೊ ನಿಖಿಳ ದೇ |
ಶಾವಳಿಯು ಧರ್ಮಾಮೃತಾಸಾರದಲಿ ಮುಳುಗಿದುದು || ೮೩ ||

|| ಅಂತು ಒಟ್ಟು ಸಂಧಿ ೬೧ಕ್ಕಂ ಮಂಗಲ ಮಹಾ ||