ಸಂಧಿ ೫೬

ಶ್ರೀರಮಣನಧಟಿಂದ ಮಗಧಮ | ಹೀ ರಮಣನನು ಕೆಡಪಿ ಪಡೆದನು |
ಧಾರುಣೀಸ್ತುವಹ ಸುದರ್ಶನ ಚಕ್ರರತ್ನವನು || ಪಲ್ಲ ||

ಕೇಳು ಮಗಧಾಧೀಶ ಮಗಧನೃ | ಪಾಲನಾ ಕುರುಪತಿಯಗಲ್ಕೆಗೆ |
ತೋಳುಮುರಿಯದಂದದಲಿ ಚಿಂತಾಕ್ರಾಂತನಾಗಿರಲು ||
ಆಳುದೋರಿತು ಬಿಸಿಲುರಾತ್ರಿಯ | ಪಾಳೆಯವು ಜಾಳಿಸಿತು ಚಕ್ರಿಗೆ |
ಕಾಲಮೃತ್ಯುವೆ ಮೂಡಿದಂದದಿ ಮೂಡಿದುದು ರವಿಯು || ೧ ||

ಮೊದಲ ಸಂಜೆಯ ಶಂಖಗಳು ಸಾ | ರಿದವು ಮೆಲ್ಸರದಿಂದ ವುಪ್ಪವ |
ಡದ ಪದಂಗಳಲ ಪಾಡುವೆಳೆವೆಣ್ಣುಗಳಗೇಯವನು ||
ಎದೆಗೊಳುತ ಉಪ್ಪವಡಿಸಿ ಮನೋ | ಮುದದಿ ನಿತ್ಯಕ್ರಿಯೆಯನಾಗಿಸಿ |
ಕದನಲಂಪ ಚಕ್ರಿ ತಳೆದನು ವೀರ ಪಸದನವ || ೨ ||

ಕುದುರೆಗಳ ಹಲ್ಲಣಿಸಿದರು ಪ | ಣ್ಣಿದರು ಗಜಘಟೆಗಳನು ಮಿಗೆ ಹೂ |
ಡಿದರು ತೇಜಿಗಳನು ರಥಾಳಿಗೆ ಬೇಗ ಸಮಗಟ್ಟಿ ||
ಕದನಕರ್ಕಶ ಶುಭಟತತಿ ಹಿಡಿ | ದುದು ನಿಖಿಲಶಸ್ತ್ರಾಸ್ತ್ರಗಳ ನೇ |
ರಿದುದು ಮೇಲಾಳೊದರಿದವು ನಿಸ್ಸಾಳ ಕೋಟಿಗಳು || ೩ ||

ಮಕುಟಬದ್ಧರ ಮಂಡಳೀಕರ | ಸಕಲ ಸಾಮಂತರ ಮೊನೆಯ ನಾ |
ಯಕರ ತಿಂಥಿಣಿವೆರಸಿ ಮಗಧಾಧೀಶನುರ್ಕಿನಲಿ ||
ವಿಕಚ ಬಂದೂಕಪ್ರತಿಮ ಮಾ | ಣಿಕ ಮಯೋದ್ಘ ಕಿರೀಟಭೂಷಣ |
ನಿಕರನಾಗಳು ವಜ್ರಮಯನಿಜರಥವನೇರಿದನು || ೪ ||

ಚಂಡಕರಕಿರಣವನು ಮಸಳಿಸೆ | ಪುಂಡರೀಕವ್ರಜವು ಆಗಸ |
ಮಂಡಲವ ಕೆಂದೂಳಿಹೂಳು ಭೂಮಿ ಪದಹತಿಯಿಂ ||
ಡೆಂಡೆಣಿಸಿ ಕಡುಬೆರ್ಚಿದಿಗುವೇ | ತಂಡಗಲು ಕಹಳೆಗಳ ದನಿಗೆ ತ್ರಿ |
ಖಂಡ ಧಾತ್ರೀಶ್ವರನು ರಣಮಂಡಲಕೆ ನಡೆತಂದ || ೫ ||

ಪಿರಿದು ರಕ್ಷಕ ಯಕ್ಷ ನಿಕರದಿ | ತರಣಿಕೋಟಿ ವಿರಾಜಮಾನ |
ಸ್ಫುರಿತ ಭಾವಳೆಯದ ಸುದರ್ಶನ ಚಕ್ರ ಗಗನದಲಿ ||
ಬರಬರಲು ನೆಲಮೊಳಗೆ ವಾದ್ಯದ | ಮರುದನಿಗಳಂದುಳುಕು ಬೀಳಲು |
ಹರಿಯ ತೇಜವು ಬಿದ್ದುದೆಂದುದ್ಧತನು ನಡೆಗೊಂಡು || ೬ ||

ಕರಿತುರಗ ನೇತ್ರದಲಿ ಜಲತತಿ | ಸುರಿಯಲಾನಂದಾಶ್ರುವೆಂದಾ |
ತರತರದ ಜಯಕೇತುವೆಂದಾ ಧೂದುಕೇತುಗಳು ||
ಧುರದಲಂಪಟನ ಶುಭವನು ಧಿ | ಕ್ಕರಿಸಿ ಚಕ್ರದ ಬಲದ ಗರ್ವದ |
ಭರದಿ ಬಂದೊಡ್ಡಿದನು ತಡೆಯದೆ ಭೂಪ ಕೇಳೆಂದ || ೭ ||

ದೆಸೆ ಬೆಸೆಲೆಯಾದಂತೆ ಮೇಣಾ | ಗಸವೆ ಕರೆದಂತವನಿ ಬೆಳೆದಂ |
ತೆಸೆವ ಬಲವದೆ ಮೇಘ ಭೂಷಣ ರುಚಿಯೆ ಸುರಚಾಪ ||
ಮಿಸುಪ ಪಳಯಿಗೆ ಮಿಂಚುವಾದ್ಯವೆ | ಅಸನಿಯಾಗಿರೆ ತಾಂ ಭಯಾನಕ |
ರಸದ ಪೆರ್ವಳೆಗರೆಯುತಿರ್ದುದು ಯುದ್ಧರಂಗದಲಿ || ೮ ||

ಇತ್ತಲಾಹವಧಾತ್ರಿಯಲಿ ಪುರು | ಷೋತ್ತಮ ಸಂಕರುಷಣನು ಕಡು |
ಬಿತ್ತರದ ಸೈನಿಕವು ಪಾಂಡವ ಮಂಡಲಿಯುವೆರಸಿ ||
ಎತ್ತಲುಂ ತೆರಪಿಲ್ಲೆನಿಸಿ ನಿಂ | ದೊತ್ತಿ ಸೂಳೈಸುವ ಪಟಹರುತಿ |
ಸುತ್ತುವರಿಯಲು ಮೊದಲೆ ನೆಲೆಗೊಂಡಿರೆ ನಿರೀಕ್ಷಿಸಿದ || ೯ ||

ಕಲಿ ಜರಾಸಂಧನು ಗಜಂಗಳ | ದಳವನೊಮ್ಮೆಯೆ ನೂಂಕಿಗಿರಿಗಳ |
ಬಳಗವೆಲ್ಲವು ಕೂಟವಾಗಿಯೆ ಕೂಡಿದವೊಯೆನಲು ||
ನೆಲನೆ ತೆರಪಿಲ್ಲೆನಿಸಿ ಬರುತಿರೆ | ಜಲಜನಾಭನ ಕರಿಘಟಾವಳಿ |
ಮುಳಿದು ತಾಗಿದುದದುಭುತದ ನೆಲೆಯಾಯ್ತು ಸಂಗರವು || ೧೦ ||

ಅಡಸಿ ಕರಿಗಳು ಕೋಡುಗಟ್ಟಿದ | ಕಿಡಿಗಳಿಂದಾ ವಗ್ನಿ ಹಬ್ಬಿದ |
ನಿಡುಗಿರಿಗಳೆನಿಸಿದವು ಗಜಘಟೆ ಬೋಧರೆಚ್ಚಿರಿದು ||
ಇಡುತ ಕಡಿವುತ ಪೊಡೆವುತಿರಲವು | ಪೊಡವಿಗರುಣಾಂಬುದನು ಸೂಸುವ |
ಕಡುಗಲಿಯ ಮುಗಿಲೆನಿಸಿ ಕೆಡೆದವು ಯುದ್ಧಭೂಮಿಯಲಿ || ೧೧ ||

ಮುನಿದು ಸೇನಾನಿಯ ಜರಾಸಂ | ಧನು ಸಗರ್ವದಿ ನೂಂಕಿಯಾದವ |
ಜನಪನುಕ್ಕಾಳುಗಳಿರಿಯೆ ಬಳಿಕವರ ಜವತತ್ನ ||
ಮನೆಗೆ ಕರಕೊಂಡೊಯ್ಯೆ ಚಕ್ರೇ | ಶನು ಮಹಾ ಬಲರಾದ ಖಚರರ |
ನನುವರವ ಮಾಡೆಂದು ಬೆಸಸಿದನರಸ ಕೇಳೆಂದ || ೧೨ ||

ಅತಿಬಲಾಢ್ಯಾಂಗಾರವೇಗನು | ವಿತತ ವಿದ್ಯುತ್ಪ್ರಭನು ವಿದ್ಯು |
ದ್ರಥನು ವಿದ್ಯುದ್ವೇಗ ನಳಿನಧ್ವಜನು ನೀಳಗಳ ||
ವಿತತ ವಿದ್ಯಾಧರರುವಾಗಸ | ವತಿ ಕಿರಿಯದೆನೆ ತಮ್ಮ ಬಲಸಂ |
ತತಿವೆರಸಿ ನೆರೆದೊಡ್ಡಿ ನಿಂದರು ಮೊಳಗೆ ರಣಪಟಹ || ೧೩ ||

ಮುರಮಥನನದಕಂಡು ನಿಜ ಖೇ | ಚರರ ಬೆಸಸಿದೊಡಸನಿವೇಗನನು |
ಧುರವಿಜಯನಾ ಸಿಂಹದ್ರಾಡನು ವಜ್ರದಾಡಾಖ್ಯ ||
ಅರುಣರಣ ಚಂದ್ರಾಖ್ಯ ದಧಿಮುಖ | ನೆರೆದಕಂಪನ ಸಿಂಹಕಂಧರ |
ಪಿರಿಯನೆನಿಸುವ ಧುರಕುಮಾರಾದೀ ಪಡೆವೆರಸಿ || ೧೪ ||

ಅಟ್ಟಿರಿದು ವಿದ್ಯಾಪ್ರಭಾವದಿ | ದಿಟ್ಟರಖಿಳಾಸ್ತ್ರಾಯುಧದ ಕಡಿ |
ಪಟ್ಟು ನಿಮಿಷದಿ ರಕತಧಾರೆಯ ಮಳೆಯು ಭೋರ್ಗರೆಯೆ ||
ಇ‌ಟ್ಟ ಮಣಿಮಕುಟಗಳು ಸಹ ತಲೆ | ಯೊಟ್ಟೆಲುಡಿದವಯವಗಳಾರಣ |
ಸೃಷ್ಟಿ ಗುರುಳಿದವಾಗಸದಿ ನೋಟಕರು ನೆರೆಬೆದರೆ || ೧೫ ||

ಬಿಸಿರಕುತ ಮೇಲುಕ್ಕಿ ಚೆಲ್ಲಲು | ದೆಸೆಯಪಾಲಕರತ್ತ ಸಾರ್ದರು |
ಬಸಿವ ಕೀಲಾಲಂಬುವೃಷ್ಟಿಗೆ ಭೂತ ಜಾತಕವು ||
ಒಸೆದು ಮೊಗವೆತ್ತೀಂಟಿದವು ಒಣ | ಬಸುರಡೊಳ್ಳಿಸಿವಡೆವವೊಲು ಆ |
ರಸ ಚರರನಿಕ್ಕಿದನಾ ಧೃತಕುವರನುರ್ಕಿನಲಿ || ೧೬ ||

ಅತ್ತಲವರಿರಿದಾಡುತಿರೆ ಮ | ತ್ತಿತ್ತಲೊದಗೀ ರಥಾಂಗ ಪಾಣಿಯ |
ಬಿತ್ತರದ ವೃಷಸೇನ ಪಟ್ಟವಾಂತುಬರೆ ||
ಮತ್ತೆ ಕೇಸರವಾಹಿನೀ ರಥ | ವೆತ್ತಿದಾ ತಾಳಿಧ್ವಜದ ಪೆಂ |
ಪೊತ್ತರಿಸ ಬಲಭದ್ರನಾಂತರು ರುದ್ರರೌದ್ರದಲಿ || ೧೭ ||

ವೃಷಭಸೇನನು ಬಿಲುವಿಡಿದು ಕೂ | ರಿಸಿದ ಗುಂಬಪುಳುಂಬಗಳ ನಾ |
ರ್ದೆಸಲುಗರಿಗಳ ಮೊರಹು ಹರಿಗಳ ಬಿರುದಳಿಯಮರಸೆ ||
ದೆಸೆಗಳೆತ್ತಲು ಗಗನವೆತ್ತಲು | ವಸುಧೆಯೆತ್ತಲು ತಿಳಿಯಲರಿದೆನ |
ಲಿಸುಮಯವು ತಾನಾಗಲೀಕ್ಷಿಸಿ ರೋಹಿಣೀಸುತನು || ೧೮ ||

ಎಡೆವಿಡದೆ ಕವಿವನಿತು ಶರವನು | ಕಡಿದನೆಚ್ಚು ಶರಾಳಿನಿಂ ಮ |
ತ್ತೊಡನೆಸಲು ಶರರಾಹು ವೃಷಸೇನನ ಮುಖೇಂದುವನು ||
ಹಿಡಿದು ನುಂಗಿತು ತನ್ನೃಪಾಲನು | ಮಡಿಯೆ ಮತ್ತಿದಿರಹನೃಪಾಲನ |
ಗಡಣವನು ಪಾರುತ್ತಲಿರ್ದನು ರೇವತೀರಮಣ || ೧೯ ||

ಸಾಲುಗೊಂಡೇರಿದರು ರಥಗಳ | ಗಾಲಿ ಭೂಮಿಯನುಳಲು ಮಿಗೆ ಕೆಂ |
ದೂಳಿ ಮುಗಿಲನು ಮುಸುಕೆ ಬಂದಾ ಮಕುಟಬದ್ಧಕರು ||
ತಾಳು ತಾಳಧ್ವಜನೆ ಕೆಂಗರಿ | ಗೋಲವರ್ಷವನೆಂದು ಭರದಲಿ |
ಹಳಿದರು ಬಿಡದೆಚ್ಚು ಕಣೆಯಿಂ ಸಂಗರಾಂಗಣವ || ೨೦ ||

ತಿರುವಿಗಂಬನು ಪೂಡಿ ವಹಿಲದಿ | ಬರೆತೆಗೆದು ಪೂಣ್ದೆಚ್ಚನಾ ಹಲ |
ಧರನು ಹರಿವಂಶಜರು ಬಿಲುಬಲುಮೆಯನದೇನೆಂಬೆ ||
ಅರಿಶರಂಗಳ ಕಾಣೆನಾ ಸಂ | ಗರ ಮಹೀತಳದೊಳಗೆ ಮಕುಟದ |
ಶಿರದ ಹಸರವ ಕಾಣಲಾದುದು ಕಣ್ಗೆ ನೋಟಕರ || ೨೧ ||

ಬೇರೆಮತ್ತತ್ತೊಂದು ಮೊನೆಯಲಿ | ಏರಿದನು ವಸುಪಾಲ ಭೂವರ |
ಹಾರಲೂದಿದನಾ ಜರಾಸಂಧನ ಚತುರ್ವಲದ ||
ತಾರು ತಟ್ಟಾಗಿಯೆ ಕಡೆದು ವೊರ | ಮಾರುತಿರೆ ಚಕ್ರಿಯ ತನೂಭವ |
ಚೀರಿಸುತ ಕಹಳೆಗಳನೊದಗಿದ ಕಾಲವಯನಾಗ || ೨೨ ||

ಒಡನನುಜನಖಿಳಾವನೀಶರು | ಪಡೆವೆರಸಿ ಬಂದೊಡ್ಡಿ ನಿಲಲೀ |
ಕಡೆಯಲೊದಗಿಜರತ್ಕುಮಾರ ಜಯಂದಢನೇಮಿ ||
ಪೊಡವಿ ಪತಿಗಳು ತಮ್ಮ ಬಲಸಹ | ತೊಡಚಿ ಹಣಿದಾಡಿದರು ಘೂರ್ಣಿಸಿ |
ಕಡಲು ಕಡಲೊಳು ತಾಗಿದಂದದಿ ಬೊಬ್ಬೆಯಬ್ಬರಿಸೆ || ೨೩ ||

ವೀರರಿತ್ತಲದೊಂದು ಮೊನೆಯಲಿ | ಧಾರಣನು ಪೂರಣನು ಚಕ್ರಿಯ |
ವೀರಪಾರ್ಥಿವರೊಡನೆ ತತ್ತಿರಿದಾಡುತಿರಲಾಗ ||
ಆರು ಬಣ್ಣಿಪರಾ ಕೊಲೆಯ ಕ | ಣ್ಣಾರೆ ಕಾಂಬವರಾರುತಿರ್ದುದು |
ನಾರದನ ಬಲುಬಯಕೆ ನೆತ್ತರ ಕಡಲು ವೆರ್ಚಿದುದು || ೨೪ ||

ಧಾರಣನು ಕೃತಮಕುಟ ಬದ್ಧವಿ | ದಾರಣನು ತಾನಾದನತ್ತಲು |
ಪೂರಣನು ಮಾರಣವ ಮಾಡಿದನಹಿತ ಪಾರ್ಥಿವರ್ ||
ವೀರನೆನಿಪ ಜರತ್ಕುಮಾರನು | ಶೂರತನದಲಿ ಕಾಲವಯನ ಮ |
ಹೋರು ಬಲವನು ಸವರಿದನು ಜಯದಳವನೇನೆಂಬೆ || ೨೫ ||

ಕಲಿ ಅನಾಧೃತ ಮುಖ್ಯ ಖೇಚರ | ಬಲವು ತರಿದಂಗಾರವೇಗನ |
ಗೆಲೆ ಜರಾಸಂಧನು ಹಲವು ಮೊನೆಜರಿಯೆ ಕಡುಗಾಯ್ದು ||
ನೆಲನು ತೆರಪಿಲ್ಲೆನೆ ಮೆರೆದ ಪೇ | ರ್ವಲವ ನೂಂಕಲು ಶಾಂರ್ಙ್ಗಪಾಣಿಯ |
ಬಲವು ತಾಗಿತು ಕೊಂಬುಚೆಂಬಕದೊಂದು ಲಜ್ಜೆಯಲಿ || ೨೬ ||

ಮೇರೆದಪ್ಪಿಯೆ ತಾಗಿದವೊ ಮೇಣ್ | ಮಾರಿನಿಧಿಗಳವೆರಡು ಮೇಣ್ ಸಂ |
ಹಾರರುದ್ರನ ಮಾಟದೊಂದು ಮಹೇಂದ್ರ ಜಾಳಕವೊ ||
ವೀರರಸ ವಾರಾಸಿ ಫಲವಾ | ಕಾರಲಾಂ ತಂದೊಂದರೊಳು ಮೈ |
ಯಾರೆ ಹೋರುವತೆರನೊಯೆನೆ ಹೋರಿದವು ಪಡೆವೆರಡು || ೨೭ ||

ಸಂಗರಾಂಬುಧಿಯೊಳಗಣಾಮ | ತ್ಸ್ಯಂಗಳಂತಾಡಿದವು ಕಣೆಕಮ |
ಠಂಗಳಂತೆದ್ದವು ಹರಿಗೆಗಳು ತೆರೆಯವೊಲು ಕುದುರೆ ||
ಹೊಂಗಿದವು ಕರಿಮಕರದಂತೆಗ | ಜಂಗಳಣೆದವು ಹಡಗಿನಂತೆ ರ |
ಥಂಗಳತಿಜವದಿಂದ ಹರಿದವು ಕೇತುಪಟವೆತ್ತಿ || ೨೮ ||

ಕಡುಮಸಕದಲಿ ಕೂಕಿರಿದು ಬಿಲು | ವಡೆಗಳುಬ್ಬರವೆಸೆಯೆ ಹೆಣಗಳ |
ತಡಗ ಬಿಟ್ಟವು ಸಮರದಲಿ ಧರೆಯಲಿ ಗಗನರಂಗದಲಿ ||
ಎಡೆವಿಡದೆ ಪಡಿಗೆತ್ತವಂಬಿನ | ಗಡಣಗಳು ಬಿಸುನೆತ್ತರಿನ ಪೇ |
ರ್ಗಡಲ ತೆರೆದೆಸೆ ದೆಸೆಯ ಬಿತ್ತಿಯ ಹೊಯ್ದು ಭೋರ್ಗರೆಯೆ || ೨೯ ||

ಹರಿಗೆಕಾರರು ಹರಿಗೆಕಾರರೊ | ಳುರು ಭರದಿ ಹೊಯ್ದೂಡಿದಿರು ಕೇ |
ಸುರಿಯ ಕೆಂಡಗಳುದುರಿದವು ಖಡುಗಳ ಖಣ್ಕೃತಕೆ ||
ಶಿರದ ಮಾಲೆಯ ರುಂಡಮಾಲೆಯ | ಧರಿಸಿದಳು ಧುರಧರೆಯೆನಿಪ ಭೀ |
ಕರದ ಭೈರವಿ ಘುಳ್ಕು ಘುಳ್ಕೆನೆ ನುಂಗಿದಳು ಪಡೆಯ || ೩೦ ||

ಏರಿದವು ಕುದುರೆಗಳು ಧೂಳಿಯ | ಬೀರಿದವು ಖುರದಿಂದ ತವೆಪೊರ |
ಮಾರದೊಡಗಲಸಿದವು ರಾವುತರಸಿಯಹೊಯ್ಲಿನಲಿ ||
ತಾರುಥಟ್ಟಾ ದುಡಿದುನಡುತೊಡೆ | ಹಾರುಗಳು ತುಂಡಾಗಿ ತಲೆಗಳು |
ಹಾರಿದವು ಬೊಬ್ಬಿಡುತ ಕೆಡೆದವು ಗಗನದಿಂದಿಳೆಗೆ || ೩೧ ||

ಹಕ್ಕರಿಕೆ ಸಹವಶ್ವತತಿಗಳು | ಮುಕ್ಕುರಿಸಿದವು ಕೆಲವು ಕಂದದ |
ಹಕ್ಕರಿಸೆ ಸಹ ಹಯಶಿರಂಗಳು ಹಾರಿದವು ಧರೆಗೆ ||
ತೆಕ್ಕುವಳ್ಳೆಯ ಮಿಡುವೆದೆಯಕರು | ಳುಕ್ಕುವಡಲಿನ ಬಿಡುವ ಬಾಯ್ಗಳ |
ತಕ್ಕಳಿದ ಭಟಕೋಟಿಗಳು ಪಡಲಿಟ್ಟ ವಾಜಿಯಲಿ || ೩೨ ||

ಮುಗಿಲ ಮೊಗೆಯಲು ಕೇತುತತಿಗಾ | ಲಿಗಳು ಭೂಮಿಯನುತ್ತು ಧೂಳಿಯ |
ನೊಗಲು ಮಸಕದಲೆರಡು ಬಲದವರೂಥಚಯತಾಗೆ ||
ಗಗನಕಂಬಿನ ತಟ್ಟಿವಣೆದುದು | ವಿಗಡ ರಥಿಕರ ಬಿಲ್ಲಬಲು ಬೊ |
ಬ್ಬೆಗಳು ಹಬ್ಬಲು ಕಣ್ಣಹಬ್ಬವದೆನಿಸಿ ಕಾದಿದರು || ೩೩ ||

ಮಿಂಚುತಟ್ಟಿದ ತೆರದಿ ಬಳಿಕ ಪ | ಳಂಚಿ ಖಡ್ಗಾಖಡ್ಗಿಯಲಿ ಮೈ |
ವಂಚಿಸದೆ ಹೊಯ್ದಾಡಿದರು ನಡುಪಸಿಗೆ ಕೊಟ್ಟಂತೆ ||
ರಂಚಿ ಬಿದ್ದವು ಬೊಬ್ಬಿಡುತ ತಲೆ | ಮುಂಚಿದವು ಗಗನಕ್ಕೆ ನೆರೆಹರಿ |
ಹಂಚದಾಗಿಯೆ ಕೆಡೆದುದಾಂತ ವರೂಥಿನೀ ನಿಕರ || ೩೪ ||

ರತುನ ಕೂಟವನಾಂತ ನೀಲದ | ವಿತತಗಿರಿಗಳ ತೆರದ ಹೂಡಿದ |
ರತುನರಂಚಿಗೆಯಾನೆಗಳು ಘಂಟಾಪ್ರಣಾದದಲಿ ||
ಮತಿಗಿಡಿಸಿ ದಿಗುದಂತಿಗಳ ಮಿಗೆ | ಧೃತಿಗೆಡಿಸಿ ವಾಸುಗಿಯನುರುಪದ |
ಹತಿಯಿನದುಭುತವಾಗಿ ತಾಗಿದವೆರಡು ಕಡೆಯಿಂದ || ೩೫ ||

ಬೆಟ್ಟು ಬೆಟ್ಟವು ಪೋರ್ವವೊಲು ಕೈ | ಗೊಟ್ಟು ಸಲೆದೊಳಹೊಕ್ಕು ಮಿಗೆ ಕೋ |
ಳ್ಕುಟ್ಟಿದವು ಕನ್ನವ ಕೊರೆದವೊಲು ತೆರೆದ ಘಾಯದಲಿ ||
ಇಟ್ಟಳಿಸಿ ಬಹ ರಕುತವಬ್ಬಿಯ | ನಿಟ್ಟವೊಲು ಭೋರ್ಗಡೆಯೆ ಕೆಡೆದವು |
ತಟ್ಟು ತಾರಾಗಿಳಿಯದಿರುತಿರೆ ಆ ಸಮಯದೊಳಗೆ || ೩೬ ||

ವರ ನಿಷಾಧಿಗಳತಿ ವಹಿಲದಲಿ | ಕರ ವಿಮುಕ್ತವು ಯಂತ್ರ ಮುಕ್ತವು |
ನೆರೆದ ಮುಕ್ತಾಮುಕ್ತ ಮೊದಲಾದಖಿಳ ಕೈದುಗಳಿಂ ||
ಭರದಲಿಟ್ಟೆಚ್ಚಿರಿದ ಖಂಡವು | ಕರುಳು ಕಡಿಗಳು ಕರವು ಶಿರವುಂ |
ಕರಿಗಳುಂ ತಾವಡನೊಡನೆ ಪಡರಿಟ್ಟರಾಜಿಯಲಿ || ೩೭ ||

ಕಳಿಯೆ ತನ್ನಯ ಗಜಘಟಾವಳಿ | ಮುಳಿದು ಮಗಧಾಧೀಶ ತನ್ನ |
ಗ್ಗಳದ ತವಳರ್ಗನನು ನೂಂಕಲು ಕಲ್ಪ ಸಮಯದಲಿ ||
ಮುಳಿದು ಬಹ ಜವನಾಳ್ಗಳೆನೆ ಬಂ | ದಳವಿಗುಡೆ ಶಾಂರ್ಙ್ಗಿಯು ಬೆಸಸಲತಿ |
ಬಲರೆನಿಪ ತಳವರ್ಗಮದನಾಂತಿರಿದುದೆಡೆವಿಡದೆ || ೩೮ ||

ಜವನ ಕುಸುಮಿತ ಕೊರಕಿತಪ್ಪ | ಲ್ಲಿವಿತವಾದೊಂದಸುಕವನವೆನೆ |
ಜವನೆಕುಮ್ಮರಿಗಡಿತ ಕಾಡೊಳು ಮುತ್ತ ಹೂವಂತೆ ||
ಅವರವರ ಕಲಿತನದ ನಿಧಿಯನು | ತವಕದೆತ್ತಿದ ತಾಣವೆನೆ ಘಾ |
ಯವು ವಿಪೂಡಿಸಿತುಳಿದ ಗಜಹಯನರರ ಮೈಗಳಲಿ || ೩೯ ||

ಧುರದರಸಿಯರು ಕಾಲರಾಜನೊ | ಳರುಣಜಲಕುಂಕುಮವನಾಹವ |
ಧರೆಯೆನಿಪ ಸರಸಿಯಲಿ ಮೊಗೆದೊತ್ತುವ ಹಲವು ತೆರದ ||
ನರರ ರೂಪಿನ ಕುದುರೆವರಿಜಿನ | ಕರಿಗಳಂದದಿ ಚಿಕ್ಕೊಳವಿಗಳ |
ಪರಿಯಲಿರ್ದುದು ಘಾಯವಡೆದಾ ಕಟಕ ಕಳನೊಳಗೆ || ೪೦ ||

ನಸು ಮುಗಿದ ಕಣ್ಣಿನಿಸು ಕಟ್ಟಿದ | ರಸನೆ ಅರೆದೆರದಧರ ನೆತ್ತರ |
ಕೆಸರಲದ್ದಿದ ಕೇಶಪುಡಿಯಲೆ ಪೊರೆದ ಪೊಗೆಮೀಸೆ ||
ಉಸುರ ಮುಚ್ಚುವ ಹೊಲಸು ಝೊಮ್ಮನೆ | ಮುಸುಕುತಿಹನೊಳವಿವು ಜುಗುಪ್ಸೆಯ |
ಹಸರವೆನಿಸಿದವರಿದ ಕರೆಗಳು ಸಮರಧರೆಯೊಳಗೆ || ೪೧ ||

ನಾಳೆ ಗಳಿಸುವೊಡಿಲ್ಲವೆಂದು ತ್ರಿ | ಶೂಲಿ ಶಿರಮಾಲೆಗಳನಾಯ್ದನು |
ನಾಳೆ ಸೃಷ್ಟಿಗೆ ಬೀಜಮೊದಲಿಲ್ಲೆಂದು ಜೀವಗಳ ||
ಓಳಿಗಳನಾ ಬ್ರಹ್ಮ ಪಡೆದನು | ನಾಳೆ ಹಸಿವಹುದೆಂದು ಹೆಣಗಳ |
ತಾಳುಗೂಡಿದನಂತಕನು ಸಂಗ್ರಾಮ ರಂಗದಲಿ || ೪೨ ||

ಸಿಂಗಗಳ ಜಂಗುಳಿಯಲಾಂತ ಮ | ತಂಗವೆನೆ ಭೇರುಂಡನೊಳು ಯು |
ದ್ಧಂತೆಯಿದ ಸಂಶರಭಗಳೊಳು ಪ್ರಳಯಪ್ರಭಂಜನನ ||
ಸಂಗರದ ಮುಗಿಲಂತೆ ಹರಿಚತು | ರಂಗದಿಂತಕೆ ಮಾಗಧನ ಚತು |
ರಂಗ ಬೆಂಗೊಟ್ಟುದು ಬಳಿಕ ಭೂಪಾಲ ಕೇಳೆಂದ || ೪೩ ||

ಇಂತು ನಿಜಚತುರಂಗವಗಿಯಲು | ವಂತಕನ ಬಾಯೊಳಗಡಂಗಲು |
ವುಂತುವರಿವಗ್ನಿಗೆ ಘೃತಾಹುತಿಹಿತ್ತ ತೆರನಾಗಿ ||
ಕಂತುಪಿತನೊಡ್ಡಣಕೆ ಮಸಗಿ ಕೃ | ತಾಂತ ಕೋಪದಿ ಮಗಧ ಧಾತ್ರೀ |
ಕಾಂತ ನೂಕಿದನಾರ್ದು ತನ್ನಯ ವಜ್ರಮಯರಥವ || ೪೪ ||

ಶರಧಿ ಶಯನನದಂದು ಪಡೆದಾ | ಗರುಡವಾಹಿನಿ ವಿದ್ಯೆನು ತಾಂ |
ಸ್ಮರಿಯಿಸಲು ಶರರವಿಕಿರಣತನುರುಚಿ ಕಡಲನೀಂಟಿ ||
ಎರಡು ಪಕ್ಕವ ಕೆದರಿ ಘಾಳಿಯ | ನೊರಜೆನಿಸಿದವು ದಿಗಿಭವದು ಭೀ |
ಕರಿಸಿ ಬರಲಾ ಗರುಡವಾಹಿನಿ ರಥವನೇರಿದನು || ೪೫ ||

ವಾಸುದೇವನು ಭರದಿ ಬಹಪ್ರತಿ | ವಾಸುದೇವನ ರಥವ ಕಾಣುತ |
ವಾಸುಗಿಯಉ ಪಡೆಯುಡುಗೆ ಭೂತಳನಡುಗೆ ತಾಯ್ಮಳಲು ||
ಸೂಸೆವಾರುಧಿ ಕದಡಿ ದಿಗಿಭವ | ವಾಸಿಸುವ ಮದವೆತ್ತಿ ಕಟ್ಟೆ ಖ |
ಗೇಶ ವಾಹಿನಿ ರಥವ ನೂಂಕಿದನೊದರೆ ರಣಭೇರಿ || ೪೬ ||

ನಳಿನನಾಭನ ಕೂಡೆ ಕಾದಿದ | ಡುಳಿಯ ಬಲ್ಲೈ ನಿನ್ನ ಪಾರುಂ |
ಬಳೆಯು ನಿನಗಿನ್ನಾಗಬಲ್ಲುದೆ ಕೇಳು ಮಾಗಧನೆ ||
ತೊಲಗಿ ಹೋಗೆಂದಿದಿರೆಲರು ತಾ | ನುಲಿದು ಕೈವೀಸಿದವೊಳಾಗಳು |
ಚಲಿಸಿದವು ಕಿರುಘಂಟೆವಳಯಿಗೆ ಹರಿಯ ರಥದೊಳಗೆ || ೪೭ ||

ನಳನಳಿಪ ಖಗಪತಿಯ ಪಾರುಂ | ಬಳೆಯ ಬೆಚ್ಚನೆ ಬಿಸಿಲು ನಭದಲಿ |
ಹಳಬೆ ಹಣಿದಾಡಿದವು ಬತ್ತಿಸಿದವು ನಭೋನದಿಯ ||
ಜಳಧಿ ವೇಳಾವನವ ಹುರಿದವು | ಬಳಿಕ ರವಿ ರಥ ಕಡ್ಡ ಬಂದ |
ವ್ವಳಿಪ ರಾಹುವ ತೆರದಿ ಹರಿಯಿದಿರಾದ ಮಾಗಧಗೆ || ೪೮ ||

ಕಡಲ ಚುಲುಕದೊಳಾಂಪ ದಿಗಿಭವ | ಬಡಿವ ಕುಳಿಕನ ದಾಡೆಗೀಳುವ |
ಸಿಡಿಲು ಕಿಚ್ಚನು ಹೊಸೆವ ಮೇರುವ ಕಿತ್ತುಕೆಲಕಿಡುವ ||
ಮೃಡನ ಶೂಲವ ಸೆಳೆವ ಸೂರ್ಯನ | ಹಿಡಿವ ಕಲ್ಪಾಂತಕನ ದಂತವ |
ನುಡಿವ ರೌದ್ರನನಾಂತರಾ ಭವ ಬದ್ಧ ವೈರಿಗಳು || ೪೯ ||

ಎಲವೊ ಕೃಷ್ಣನೆ ನೀನು ಗೋವರ | ಕುಲದೊಳೊಳ್ಳಿದನಹುದು ನಿನ್ನನು |
ಕೊಲಲು ಹೇಸಿದವಂದು ಕುಲದೇವತೆಗಳಾನಿಂದು ||
ಮುಳಿದು ಕೊಲಬಂದೆನಲೆ ನಿನ್ನಯ | ತಲೆಯ ಕಾವವರುಂಟೆ ಬದುಕಿದೆ |
ಜಲಧಿಯೊಳೆ ಹೊಕ್ಕಿನ್ನವರಮೆಂದಾರ್ದನಾ ಚಕ್ರಿ || ೫೦ ||

ಎಲೆ ಜರಾಸಂಧನೆ ವಿಚಾರಿಸೆ | ಕುಲಜ ನೀನಿನಗಿದು ನುಡಿಯೆ ಭುಜ |
ಬಲವು… ರೈ ಹಾಸನೇರಿದ ಬಲಿಕಮೊರೆಯುಂಟೆ ||
ಉಲಿಯರೇಂ ಗೋಪಾಲರಲ್ಲವೆ | ನೆಲನ ಸಾರಿಪ ಪಾರ್ಥಿವದು ಕೊಳು |
ಗುಳದಲರಿಗಡ ಕುಲವನೆಂದನು ನಗುತ ನಗಧರನು || ೫೧ ||

ಒಳ್ಳೆಯೇರುವ ಬೆಸನನೇರಿಸಿ | ಗುಳ್ಳೆಯೂದಿದೊಡಂದು ಹಳ್ಳದ |
ಳೊಳ್ಳೆಗೊಂದಡೆ ಕರುವಕಾವುತ ಪೆಟ್ಟೆಯೊತ್ತಿದೊಡೆ ||
ಬೊಳ್ಳೆಗಜವನು ಬಡಿದು ಬಡಬಡ | ಮಲ್ಲವನು ಮುರಿದರನನರಿಯದೆ |
ಅಳ್ಳೆದೆಯ ಮಾವನನು ಕೊಂದಡೆ ಬಲ್ಲಿದನೆಯೆಂದ || ೫೨ ||

ಉರಗ ಶಯ್ಯೆಯದೊಳ್ಳೆಯಾದುದು | ಕರದ ಶಾರ್ಙ್ಗವು ಬೆಸೆಯದಾದುದು |
ಜರದ ವರನಾಲಗೆಗೆ ಬಿರುಸಾದಕ್ಕರವನುಂಟೆ ||
ಕರುವ ಕಾವುತ ಪೆಟ್ಟೆಯೆತ್ತಿದ | ಕರದ ಬಡನನು ನಿನ್ನ ಬಲುಗೈ |
ಯಿರವನೆಲ್ಲರದಿಟ್ಟಿದೊಲೆಯಲಿ ತೂಗಬಹುದೆಂದ || ೫೩ ||

ಕೇಳುನಂದನ ಮಗನೆ ನಿನ್ನು | ರ್ಕಾಳುತನವೀ ಚಕ್ರರತ್ನದ |
ಗಾಳಿ ಸೋಂಕಲು ನಿಲುವುದೇ ಪುಸಿಬಿಸುಡು ಬಿಂಕವನು ||
ಬಾಳಬೇಕೇ ಬಂದು ನಿನ್ನಯ | ಮೌಳಿ ಸಹವೆರಗೆನ್ನಡಿಗೆ ವನ |
ಮಾಳಿ ಕೊಲ್ಲೆನು ಸುಖದೊಳಿರು ಹೋಗೆಂದನಾ ಚಕ್ರಿ || ೫೫ ||

ಬೈಯಲರಿಯೆನು ಕೋಲಿಗೆರಗೆಂ | ದೊಯ್ಯನಾಡಲದೇಕೆ ಯುದ್ಧದ |
ಮೈಯೊಳಗೆ ಸೋತವರ ತಲೆಬಾಗದೆ ವಿಚಾರಿಸಲು ||
ಅಯ್ಯ ಭಾಪೆನೆ ನಿನ್ನ ಚಕ್ರದ | ಕೈಯ ತೋರೈಯಿಂತಡವೆ ಮುಂ |
ಗೈಯ ಕಂಕಣಕೇಕೆ ಕನ್ನಡಿಯೆಂದನಾ ಕೃಷ್ಣ || ೫೬ ||

ಎನೆ ಜರಾಸಂಧನು ಮಸಗಿ ಭೋಂ | ಕೆನೆ ಹಿಡಿದನಾ ದಿವ್ಯ ಚಾಪವ |
ಅನುವಿನಿಂ ಜ್ಯಾಲತೆಯ ಕೊಪ್ಪಿಗೆತೊಡಿಸಿ ನೆರೆನೀವಿ ||
ವನಜನಾಭನು ಶಾರ್ಙ್ಗಕಾರ್ಮುಕ | ವನು ಬಿಗಿದು ಮಿಗೆ ನೀವಲಾ ಪೊ |
ತ್ತಿನೊಳದೀರ್ವರು ಜೇವಡೆದರೇನೆಂಬೆನದುಭುತವ || ೫೭ ||

ಹರಿದಿಗಿಭವಾ ಪುಂಡರೀಕವು | ಜರಿಯೆ ಕುಮುದಾಂಜನವೆರಡು ಮೈ |
ಮರೆಯೆ ವಾಮನ ಪುಷ್ಪದಂತವು ಮದವುಡುಗಿ ಬೆದರಿ ||
ಶಿರಗಳೊಡೆದವು ಸಾರ್ವಭೌಮ | ದ್ವಿರದ ವಿಶ್ರುತ ಸುಪ್ರತೀಕಕೆ |
ಉರಗ ಪತಿಯಾ ಚಂದ್ರರೀರ್ವರು ನಾಡೆನಡುಗಿದರು || ೫೮ ||

ಎಚ್ಚರಾ ಪುಂಖಾನುಪುಂಖದಿ | ವಚ್ಚೆವೋಗದೆ ಹರಿದ ಕಣೆಗಳು |
ಬೆಚ್ಚಿಸಿದವಾಗರಿಯ ಮೊರಿಹಿನ ಝಂಕೆಯಲಿ ಜಗವ ||
ಮುಚ್ಚಿ ಮುಸುಕಿದವಂಬರವ ನೆರೆ | ವಚ್ಚರಸೆಯರು ಬೆದರಿ ದೆಸೆದೆಸೆ |
ಯುಚ್ಚಳಿಸಿ ವಿಶ್ವವನು ಮುಳುಗಿಸಿದವು ಭಯಾಬ್ಧಿಯಲಿ || ೫೯ ||

ಪರೆದುದಂಬರದಂಬಿನೋಲಗ | ನೆರೆದುದಾಗಳೆ ಕಣೆಯ ಜಾತ್ರೆಯು |
ಹರೆಗಡಿದುದಾ ಸರಳಸಂದೆಯು ಹಲವು ಸೂಳಿನಲಿ ||
ಹರಣ ಭರಣ ಪ್ರೌಢಿಯನು ಬಿ | ತ್ತರಿಸಿದರು ಮಾರ್ಗಣದಿ ಚಕ್ರಿಯು |
ಗಿರಿಧರನು ಗೆಲಲರಿಯದೋರೋರ್ವರು ಕಡಂಗಿದರು || ೬೦ ||

ದ್ರೋಣ ಭೀಷ್ಮಾರ್ಕಜಕಿರೀಟಿಯ | ಬಾಣವಿದ್ಯಾ ಪ್ರೌಢಿನಿಂ ನೆಣೆ |
ಗಾಣೆನೆಂದೀಕ್ಷಿಸುವ ಸುರನರಯಕ್ಷ ರಾಕ್ಷಸರು ||
ಕೇಣವೇನವರಿಂದಿವರು ಬಿಲು | ಜಾಣಿಕೆಗೆ ನೂರ್ಮಡಿಯಧಿಕವೆಂ |
ದಾಣೆ ಮಿಗೆ ಕೊಂಡಾಡುವಾ ಧ್ವನಿದೆಸೆಗೆ ಪಸರಿಸಿತು || ೬೧ ||

ಶರಧಿಗೆಣೆ ಸಾಗರವೆ ಗಗನಕೆ | ಸರಿನಭವೆಯೆಂತೆಂತುಟಾ ದಶ |
ಶಿರನ ರಘುಜಯಯುದ್ಧವಂತುಟಿಗೆನಬಹುದು ಕವಿಗೆ ||
ವರ ಜರಾಸಂಧನು ಮುರಾರಿಯ | ಧುರದ ಬಲುಮೆಯ ಪೂತು ಮಝ ಬಾ |
ಪುರೆಯೆನುತ ಚತುರಾಸ್ಯಪುತ್ರನು ನಭದಳೊದರಿದನು || ೬೨ ||

ಸಮಬಲರು ಸಮಕರಿಣ ಕಾಯರು | ಸಮ ಮಹಾ ವಿದ್ಯಾ ಪ್ರವೀಣರು |
ಸಮ ಪರಾಕ್ರಮ ಶಾಲಿಗಳು ಸಮಶೀಲ ಸಂಪದರು ||
ಅಮಮ ಭಾವಿಸಿ ನೋಡಿವರ ಯು | ದ್ಧಮದು ಛಾಯಾ ಯುದ್ಧದಂತೆಂ |
ದಮರರೆನೆ ಮಾಗಧನು ತೆಗೆದನು ದಿವ್ಯ ಸಾಯಕವ || ೬೩ ||

ಎಸುವೆ ಕಾಷ್ಟಾಸ್ತ್ರವನು ಹೂಳುವೆ | ವಸುಧೆಯನು ಮೇಲಗ್ನಿಯಿಂದಾ |
ಮಸಿಯ ಬಣ್ಣದ ಮೈಯವನಮಸಿಮಾಡಿದಿರೆನೆಂದು ||
ಮಸಗಿ ಕಡುಗಲಿ ಚಕ್ರಿಯಭಿ ಮಂ | ತ್ರಿಸಿಯೆಸಲು ಬಹ ಕಾಷ್ಟ ಬಾಣವ |
ನಸಮ ವಿಕ್ರಮಿ ಶಾರ್ಙ್ಗಯುರಿಗಣೆಯಿಂದ ದಹಿಸಿದನು || ೬೪ ||

ಉರಿಸರಲನಾ ಚಕ್ರಿಯಂಬುಧಿ | ಶರವ ಭೇದಿಸೆ ಅಂಬುದಾಸ್ತ್ರವ |
ಮರುದೆಸುವಿನಿಂ ಹರಿಯರಿಯೆಯೆರುಲಂಬ ಮಾಗಧನು ||
ಉರಗ ಸಾಯಕದಿಂ ಸವರಲಾ | ವುರಗ ಮಾರ್ಗಣವನು ಮುರಾಂತಕ |
ಪರಿಹರಿಸಿದನು ಗರುಡ ವಿಶಿಖದಿ ಭೂಪ ಕೇಳೆಂದ || ೬೫ ||

ಸಿಂಹಬಾಣವನೆಚ್ಚನಾ ನೃಪ | ಸಿಂಹನದು ಸಂಗ್ರಾಮ ಧರೆಯಲಿ |
ಸಿಂಹಬಹುರೂಪಿಣಿಯ ಮಸಕವೆ ಪಸವರಿಸಿದುದೆನಿಸಿ ||
ಸಿಂಹಗಳೆ ಕವಿತರುತಿರಲ್ಕದ | ಸಂಹರಿಸಿದನು ಶುಭ ಶರದಿನ |
ದೇಂಹರಿಗೆ ಗಹನವ ಮುಳಿದು ಬಳಿಕಾ ಜರಾಸಂದ || ೬೬ ||

ಇಂತಖಿಳ ವಿದ್ಯಾಸ್ತ್ರದಿಂದೆಸ | ಲಂತವೆಲ್ಲವನೊಡನೆರಿಪು ಶರ |
ಸಂತತಿಯಿನೆಚ್ಚುಗಿದನಚ್ಚುತನೆಂದು ಮಗಧೇಶ ||
ಅಂತಕನ ಮುಳಿಸನು ಹರನ ವಿ | ಕ್ರಾಂತಿಯನು ಕೈಕೊಂಡು ಹಸ್ತದ |
ಲಾಂತನರ್ಕ ಸಹಸ್ರ ತೇಜದ ಚಕ್ರರತ್ನವನು || ೬೬ ||

ಭರದಿ ಚಕ್ರವ ತಿರುಹೆ ತಿರ್ರ‍ನೆ | ತಿರುಹಿದುದು ದಿಕ್ಚಕ್ರಮಿಗೆ ಮೊಗ |
ದಿರುಹಿದುದು ಯಾದವರ ಸೇನಾಚಕ್ರವೀಕ್ಷಿಸುತ ||
ಸುರಸಮೂಹದ ದೃಷ್ಟಿ ಚಕ್ರವು | ತಿರುಹಿದುದು ತತ್ಕಿರಣ ಸಂತತಿ |
ಶರನಿಧಿಗಳನು ಕುಡಿವಡಿಯಣಮಣಲ ಸೀಮೆಯನೆ || ೬೭ ||

ಇದು ಜಗದ್ಭಂಭುಕಮಮೋಘವು | ಯಿದನು ಹರಿತಾನೆಂತು ಕಾವನೊ |
ಯಿದಕೆ ಹಗೆಯಹಕೈದುವಾವುದೊಯೆಂದು ಯಾದವರು ||
ಎದೆಗುದಿವುತಿರೆ ಕೃಷ್ಣನೇನಳು | ಕಿದನೆ ಕವಚವು ಬಿರಿಯೆ ಮೈವೆ |
ರ್ಚಿದನು ತೊಟ್ಟನದೊಂದು ದಿವ್ಯಾಸ್ತ್ರವನು ಮಿಗೆಮುಳಿದು || ೬೮ ||

ಚಕ್ರವೋ ಮೇಣ್ ವಿಳಯ ಕಾಲದ | ಚಕ್ರವೋಯೆನಿಪುದನು ಕೋವರ |
ಚಕ್ರದಂದದಿ ಬಗೆದು ಬಲಭದ್ರನು ನಿಜಾನುಜನ ||
ಆಕ್ರಮಿಸಗುಡೆನೆಡೆಗದಿವೆನೆಂ | ದಾಕ್ರಮದಿ ಶೀರಾಯುಧವನಾ |
ವಿಕ್ರಮದ ಕಣಿತಳೆದು ನಾರಾಯಣನು ಪೊರ್ದಿದನನು || ೬೯ ||

ಚಂಡಕರ ಮಂಡಲವನುರೆ ಬೆಂ | ಕೊಂಡು ರಾಹುವೆನುಂಗಿದಂದದಿ |
ಮಂಡಳಿಸಿ ಬಹುಚಕ್ರವನು ಖಂಡಿಪೆನೆಡೆಯೊಳೆನುತ ||
ಗಂಡ ಜಯಕೋದಂಡ ಮಧ್ಯಮ | ಪಾಂಡವನು ವಜ್ರಾಸ್ತ್ರವನು ನಿಜ |
ಗಾಂಡಿವಕೆ ಸಲೆ ತೊಡಚಿ ಬರೆ ತೆಗೆದಿರ್ದನೊತ್ತಿನಲಿ || ೭೦ ||

ಬಡಿದು ಕೋವರ ಚಕ್ರದಂದದಿ | ಪುಡಿಯಡರೆ ಚಕ್ರವನು ಚೂರ್ಣಿಪೆ |
ನಡೆಸಗುಡೆನಚ್ಚುತನ ದಿವ್ಯಕಳೇವರವನೆಂದು ||
ಕಡುಮುಳಿದು ಜವನಂತೆ ಕೋಪದಿ | ಕಿಡಿ ಮಸಗೆ ಕಲಿಭೀಮನಾರ್ಪಿಂ |
ಪಿಡಿದು ರುಧಿರೋದ್ಗಾರಿ ಗದೆಯನು ನಿಂದನೊತ್ತಿನಲಿ || ೭೧ ||

ನಳಿನನಾಭನ ದಿವ್ಯಮೂರ್ತಿಯ | ನಳುರಗೊಡದಾ ಚಕ್ರವನು ಪೋ |
ಳ್ಗಳವೆನೆಂದಾ ಮಿಕ್ಕಪಾಂಡವರಾಂತರಾಯುಧವ ||
ಉಳಿದ ಧಾರಣ ಪೂರಣಾದ್ಯರು | ಕಲಿಗಳಾ ಪಾಂಡವರವೊಲು ನೆರೆ |
ಗಳಿಯವನು ತುಡುಕಿದರು ಶಾರ್ಙ್ಗಯಸೊರ್ಕಿಗೊದಗಿದರು || ೭೨ ||

ಇಡಲು ಬಹ ಚಕ್ರಾಯುಧವನೆಡೆ | ಗಡಿವೆನೆಂದಿವರಿರದಲತ್ತಲು |
ಬಿಡುಬಿಡಲೆ ಗೋವಳನೆ ಗರ್ವವ ನಿನ್ನ ಬಿಲುಬಲುಮೆ ||
ನಡೆಯಲರಿಯದು ನಿನಗೆ ವ್ಯರ್ಥಕೆ | ಕೆಡೆದಿರೊಲಿದೈತಂದೆರಗು ತ |
ನ್ನಡಿಗದಲ್ಲದೊಡಾಜಿಯೊಳು ಕೈಗಾದೆನಲ್ಲೆಂದ || ೭೩ ||

ಎಲವೊ ಮಾಗಧ ನಿನ್ನ ಪಾರುಂ | ಬಳೆಯ ಬಲುಹೆನ್ನೊಡನೆ ನೆಡೆವುದೆ |
ಸಲೆ ತಿಮಿಂಗಿಲಗಿಳದೊಳುಂಟೇ ಬಕದ ಬಲುಬಿಂಕ ||
ಫಲವದೇಂ ನೀನಿಟ್ಟ ಪಾರುಂ | ಬಳೆಯ ಸಂಗಡ ಬಲವಿರೋಧಿಯ |
ಕುಲಷರುದ್ರನ ಶೂಲಬಂದೊಡಮರಿಯದಿರೆನೆಂದ || ೭೪ ||

ಇಡಲೊಡನೆ ತಚ್ಚಕ್ರತ್ನವು | ಕಡುಭರದಿ ಬರೆಕಂಡು ನಭದೊಳ |
ಗೆಡೆವಿಡದ ಸುರಸಮಿತಿಯೋಡಿತು ಬರುತ ಮಧ್ಯದಲಿ ||
ಪೊಡವಿಪರ ಕೈದುಗಳಿದಿರಬರ | ಲಿಡಿಯ ನುಂಗುತ ಬಂದು ಕೃಷ್ಣನ |
ಬಿಡದೆ ಬಲಗೊಂಡಳಸಿನಿಂದುದು ಬಲಭುಜದ ಮೇಲೆ || ೭೫ ||

ಬೆರಗುವಡೆದರುಸ ಪಾಂಡವಾದಿಗ | ಳುರು ಮುದವನಿರೆ ತಲೆದು ಧಿಕ್ಕರಿ |
ಕರೆಸದೃಶ ದಕ್ಷಿಣಭುಜವನಿರೆ ನೀಡಿ ಚಕ್ರವನು ||
ಧರಿಸಿಯಿನ್ನೆಲೆ ಮಾಗಧನೆ ನಿನ | ಗರಿದು ಸಂಗರವೆನ್ನ ಚರಣ |
ಕ್ಕಿರದೆರಗು ತಲೆಗಾವೆನೆಂದನು ಗರುಡವಾಹನನು || ೭೬ ||

ಮರುಳುಗೋವಳ ಕಿಚ್ಚು ಕೆಳಮುಖ | ದುರಿಯಬಲ್ಲುದೆ ಚಕ್ರ ಹೋದಡೆ |
ಜರಿದುದೇ ತತ್ಪೌರುಷದ ಕಣಿಗೋವಳನೆ ನೀನು ||
ಧುರದೊಳಾ ಬಾಳಾಕ್ಷನಾಂತೊಡೆ | ನಿರಿವೆನಲ್ಲದೆಯೆರಗುವೆನೆಯೆಂ |
ದುರುನಿಶಿತ ಖಡುಗವನು ಕೊಂಡನು ಮಗಧನಾಯಕನು || ೭೭ ||

ಅವನಿಗೀಗಳೆ ಬೀಳ್ವೆನೆಂಬುದ | ನವನಿಗರಿಪುವ ತೆರದಿ ರಥದಿಂ |
ದವನಿಗಿಳಿದನು ಖಡುಗವನು ಝಳಪಿಸುತ ಬರಲೊಡನೆ ||
ಅವನಿಧರಧರನಿಟ್ಟೊಡಾ ಚ | ಕ್ರವು ಜರಾಸಂಧನ ಕೊರಲ ಕೊ |
ಯ್ದವನಿಗಟ್ಟೆಯನಾಗಸಕೆ ಮಸ್ತಕವನಟ್ಟಿದುದು || ೭೮ ||

ನಾರದನು ನರ್ತಿಸಿದನಾಗಳು | ಭೋರನಾ ಸುರಸಮಿತಿಗು ಸುಮಾ |
ಸಾರಗರೆದುದು ಪಾಂಚಜನ್ಯವನೊದರಿಸಿದ ಚಕ್ರಿ ||
ಸಾರಿದುದು ಬಳಿಕಭಯ ಘೋಷಣೆ | ವಾರಿಜಾಕ್ಷನು ಪಾಂಡವರು ಪರಿ |
ವಾರ ರಾಜ್ಯಕವೆರಸಿ ನಿಜಕಟಕವೈದಿದರು || ೭೯ ||

|| ಅಂತು ಒಟ್ಟು ಸಂಧಿ ೫೬ ಕ್ಕಂ ಮಂಗಲಮಹಾ ||