ಸಂಧಿ ೫೭

ಶ್ರೀವರನು ನಿಜಪುರವನೈದಿ ಮ | ಹಾವಿಭವದಲಿ ತ್ರಿಖಂಡ ಧ |
ರಾವಳಯವನು ದಂಡಯಾತ್ರೆಯಲೈದಿಸಾಧಿಸಿದ || ಪದ ||

ಕೇಳು ಶ್ರೇಣಿಕ ಮಂಡಲೇಶ್ವರ | ಹೇಳುವೆನು ಭೂದೇವಿಯಿಂ ಕಡು |
ಢಾಳೆಯರು ಘಾತಾಳೆಯರು ಸೂಳೆಯರು ಬೇರಾರೊ ||
ಏಳಿಸದೆ ಫಲದಿವಸವಾಳ್ವರ | ತೋಳು ಸಡಿಲಿದ ಮುನ್ನಿವರೊಳತಿ |
ಮೇಳಗೊಂಡಪಳೆನಲು ನಚ್ಚುವ ನರನು ಹುಚ್ಚನಲೆ || ೧ ||

ಹರುಷದಿಂದಾ ಚಕ್ರಧರನ | ಲ್ಲಿರೆ ಮೊದಲು ವಿಜಯಾರ್ಧಗಿರಿಗ |
ಟ್ಟಿರೆ ಜರಾಸಂಧನ ಹಿತವರಹ ಖಚರ ಸಂಕುಳವು ||
ಬರದೊಡದೆ ವಸುದೇವ ಭೂವರ | ನುರು ಮನೋಹರ ಶಂಭುಕುವರನು |
ತರುಬಿದನು ಕಲಿಕಾಳ ಶಂಭರ ಮುಖ್ಯರೆಂದಾಗಿ || ೨ ||

ಅವರನಧಟಿಂ ಗೆಲಿದು ಮೂವರು | ಹಲವಣಿಸಿದ ವಿಕ್ರಮ ಸಗರ್ವದಿ |
ದಿವಿಜರಂತೆ ವಿಮಾನದಲಿ ಬಂದಿಳಿದು ಮಾಧವನ ||
ತವಕ ಮಿಗೆ ನೆರೆನೋಡಿ ಆ ಚ | ಕ್ರವ ನಿರೀಕ್ಷಿಸಿ ತಕ್ಕ ವಿನಯದ |
ಲವರು ಕಾರ್ಯಾಂತರವನೊರೆದರಿದೆಯಿದೆ ಸುಖಿಸಿದರು || ೩ ||

ಅಂದು ನೃಪ ಗಾಂಧಾರಿ ವಿದುರರ | ಮಂದಿರಕೆ ಮರುದಿವಸ ಪಾಂಡವ |
ನಂದನರು ನಡೆತಂದೆರಗಿ ನಿಜಪುತ್ರರಳಿದದರಿಂ |
ಬಂದನೋವಾರುವ ತೆರದಿ ಪಲ | ವಂದದಿಂದವರನು ತಿಳುಹಿ ಮಿಗೆ |
ವಂದಿಸಿದ ಜನವೆಲ್ಲವನು ಸಂತಯಿಸಿದರು ಮುದದಿ || ೪ ||

ಅವಧರಿಸು ಬಿನ್ನಹವ ನಿಜರಾ | ಜ್ಯವನು ಪಾಲಿಸುವಡೆ ಬಿಜಯಮಾ |
ಡುವುದೆನುತ ಮಂತ್ರಿ ಪ್ರಧಾನರು ಬಿನ್ನವಿಸೆ ಕೇಳಿ ||
ಅವರವರ ಮನ್ನಿಸಿ ವಿದುರ ಭೂ | ಧವರನೊಡಗೊಂಡಿತ್ತಲಾ ಪಾಂ |
ಡವರು ಬರೆದುಃಖವನು ತಳೆದಾ ಕೊಂತಿಯಿರೆ ಕಂಡು || ೫ ||

ಇದರ ತೆರನೇನೆಂಬ ಸಮಯದ | ಲದನರಿತು ಮಧುಮಥನ ಬಂದಿರೆ |
ಸುದತಿ ಕರ್ಣನು ತನ್ನ ಮಗನೆಂದೆಲ್ಲ ವಿವರವನು ||
ವಿದಿತವಹವೊಲು ನುಡಿದು ತಪದಿಂ | ಪುದಿದು ಸಂದದರಿಂದ ನೋವಾ |
ದುದನರಿಪೆ ಹಿತವಚನದಲಿ ತಿಳುಹಿದನು ಕೊಂತಿಯನು || ೬ ||

ವಾರಿಜಾಕ್ಷನು ಬಳಿಕಪಯಣದ | ಭೇರಿಯನು ಪೊಡಯಿಸಿ ಸಕಳ ಪರಿ |
ವಾರ ನಾನಾ ಭೂಮಿಪಾಲರು ಧರೆಯ ತೀವಿರಲು ||
ವಾರಿದಾಧ್ವವಕೇತುತತಿ ಪರಿ | ಪೂರಿಸಲು ದೆಸೆಕಿವುಡುಗೊಳೆ ತೂ |
ರ್ಯಾರವದಿ ಪಯಣಕ್ರಮದಿ ದ್ವಾರಾವತಿಯ ಪೊಕ್ಕು || ೭ ||

ರತುನಮಯ ಸೌಧಗಳ ದ್ವಾರಾ | ವತಿಯನೊಪ್ಪುವ ಚಕ್ರರತ್ನದ |
ವಿತತಕಾಂತಿಯೆ ಮುಸುಕಿನಾ ವೈಭವದಿ ಬಂದು ||
ಕ್ಷಿತಿವಿನುತ ಸಾಮುದ್ರ ವಿಜಯೋ | ನ್ನತಗೆ ಬಲನಾರಾಯಣರು ವಿನ |
ಮಿತರು ತಾವಾದರು ಜಯದ ಕಾರ್ಯಗಳನುಸುರಿದರು || ೮ ||

ಬಳಿಕ ನೇಮೀಶ್ವರರು ದಿವಿಜಾ | ವಳಿಗಳೊಡ್ಡೋಲಗವಿರಲು ದೋ |
ರ್ವಲರು ಬಲನಾರಾಯಣರು ಪಾಂಡವರು ವಾಹನವ ||
ಇಳಿದು ಬಂದವರಡಿಗೆಲದಲ | ಗ್ಗಳದ ಭಕ್ತಿಯ ಭರದಿ ತನುವನು |
ಇಳೆಯೊಳಗೆ ಹರಡಿದರುಯೆದ್ದರು ಮುಗಿದು ಕೈವೆರಸಿ || ೯ ||

ಪರಮ ಪಾವನ ಮೂರ್ತಿ ನಿಮ್ಮಯ | ಚರಣ ಕಮಲಕ್ಕೆರಗಿ ಪೋದಡೆ |
ದೊರಕಿತೆವಗೀ ಚಕ್ರವರ್ತಿತ್ವವು ಜಗದ್ಗುರುವೆ ||
ಧುರದೊಳಾಗಿಸಿ ತಂದ ದುರತೋ | ತ್ಕರವದೀಗಳು ನಿಮ್ಮಡಿಯ ಸಂ |
ದರುಶನದಿ ಪೋಯ್ತೆಂದು ಸಂತಸವಾಂತನಾ ಚಕ್ರಿ || ೧೦ ||

ಜಿನರ ಕಾರುಣ್ಯಾವಲೋಕನ | ವೆನಿಪ ಗಂಗೆಯ ಮಿಂದು ಬಗೆ ತ |
ಣ್ಣನೆ ತಣಿದು ಬೀಳ್ಕೊಂಡು ನಿಜಮಂದಿರವನೈತಂದು ||
ಅನಿಮಿಷೇಂದ್ರ ವಿಭೂತಿಯಲಿ ನಿಜ | ಜನನಿ ಜನಕರ ತನುಜರನುಜರ |
ವನಿತೆಯರ ಸಮ್ಮೇಳನದಲಿ ಸುಖವಿರ್ದನಾ ಚಕ್ರಿ || ೧೧ ||

ಅತಿಶಯದ ಮೋಹದಲಿ ಪಾಂಡು | ಕ್ಷಿತಿಪರನು ಪಲದಿವಸ ದ್ವಾರಾ |
ವತಿಯೊಳಗೆ ಹರಿಯಿರಿಸಿಕೊಂಡಿರ್ದುಡುಗೊರೆಯನಿತ್ತು ||
ವಿತತ ವೈಭವದಿಂದ ಕಳುಹಲು | ಕತಿಪಯಾಧ್ವ ಕ್ರಮದಿನಮರಾ |
ವತಿ ಸದೃಶ ಗಜಪುರವ ಹೊಕ್ಕರು ಪಾಂಡುನಂದನರು || ೧೨ ||

ಬಳಿಕಲಾ ಕೌರವ್ಯಕಾಲಾ | ನಳನೆನಿಪ ಭೀಮಾದಿಗಳ ನಿಲೆ |
ಕಳುಹಿದನು ತಮ್ಮಿಷ್ಟವಹ ನಿಜ ಜನಪದಂಗಳಿಗೆ ||
ಕಲಿವಿದುರ ಧೃತರಾಷ್ಟ್ರರಿಗೆ ಬೇ | ರಿಳೆಯ ಹಿಂಗಿಸಿ ಕೊಟ್ಟ ಗಜಪುರ |
ದೊಳಗವರನಿರವೇಳ್ದು ಹರುಷದಿ ಧರ್ಮನಂದನನು || ೧೩ ||

ವಿದಿತ ದಕ್ಷಿಣ ಮಧುರೆಯೊಳು ತಾಂ | ಮುದದಲಿರುತ ಸಮಸ್ತ ಸಂಜನ |
ಹೃದಯ ಸಂತೋಷವನು ವಿಮಲಚರಿತ್ರದಿಂದೆನಿಸಿ ||
ಅದರ ವಿಮಳಿನ ಪಂಚರತ್ನದಿ | ಸದಮಲ ಶ್ರೀ ಜಿನಭವನಗಳ |
ನುದಿತ ಮನದುತ್ಸಾಹದಿಂ ಧರ್ಮಜನು ನಿರ್ಮಿಸಿದ || ೧೪ ||

ಖುಲ್ಲರಿಲ್ಲ ಕುಮಾರ್ಗವರ್ತಿಗ | ಳಿಲ್ಲ ದುಃಖಿಗಳಿಲ್ಲ ನಿರ್ಧನ |
ರಿಲ್ಲ ನಿರ್ದಯರಿಲ್ಲ [ದುರ್ಜನರಿಲ್ಲ] ಖಳರಿಲ್ಲ ||
ಕಲ್ಲೆದೆಯರಿಲ್ಲನೃತರಿಲ್ಲರಿ | ವಿಲ್ಲದವರಿಲ್ಲಾ ಯುಧಿಷ್ಠಿರ |
ವಲ್ಲಭನ ರಾಜ್ಯದಲಿ ಧರಣೀಪಾಲ ಕೇಳೆಂದ || ೧೫ ||

ಪದುಮನಾಭನು ಮಾರ್ಗಶಿರ ಶು | ದ್ಧ ದಶಮಿಯಲೀ ದಿಗ್ವಿಜಯವನು |
ಕದನ ಕರ್ಕಶ ಪೊರಮಡಲೆ ಬಗೆದರುಹ ಪೂಜೆಯನು ||
ಸುದರುಶನವೆಸರಮಲ ಚಕ್ರವ | ನುದಿತ ಮುದದಲಿ ಪೂಜಸಿಯೆ ಹೊ |
ಯ್ಸಿದನು ಭೇರಿಯನಾ ಧ್ವನಿಯು ಪೂರಿಸಿತು ತ್ರಿಜಗವನು || ೧೬ ||

ವಾರಿಜಾಕ್ಷನ ಪುಣ್ಯಪಾರಾ | ವಾರಭವ ಶಂಖಂಗಳೊಡನೀ |
ರಾರೊದರಲಾ ದಿವ್ಯಭೇರಿಗಳಾರು ಸೂಳೈಸೆ ||
ಮೂರು ಲೋಕವು ತಲ್ಲಣಿಸೆ ಪದಿ | ನಾರು ಚಾಮರವಾಡೆ ಬಹುಪರಿ |
ವಾರ ಪರಿವೃತ ಮುಕುಟಬದ್ಧದ ತಿಂಥಿಣಿಯೊಳೆಸೆದ || ೧೭ ||

ಬಿತ್ತರದ ಮೌಹೂರ್ತಿಕರು ಸುಮು | ಹೂರ್ತವತ್ಯಾಸನ್ನವೆಂದ ಮು |
ಹೂರ್ತದಲಿ ನುತಗರುಡವಾಹಿನಿ ಸಿಂಹವಾಹಿನಿಯ ||
ಪರಿಪರಿಯ ಪಳಯಿಗೆ ಮನವು ಖೇ | ಚರ ಬಲದ ಮಯವಾಗಸವು ಬಿ |
ತ್ತರಿಪೊಡದು ಪುನರುಕ್ತವಾ ಚಕ್ರೇಶ್ವರನ ದಾಟಿ || ೧೮ ||

ಪಲವು ಪಯಣದಿ ತಾರಶೈಲ | ಸ್ಥಲವನೈತರಲತಿ ಬೆದರಿ ಬೆಂ |
ಬಳಿಯಲಾರ್ಯಾಖಂಡದವರೊಲಿದೀಯೆ ಕಪ್ಪವನು ||
ತಳುವದಲ್ಲಿಂ ನಡೆವುತಿರೆ ಕಳ | ವಳಿಸಿಯರ್ಜುನಗಿರಿಯ ದಕ್ಷಿಣ |
ವಳಯದಾ ಶ್ರೇಣಿಯ ಖಚರಸಂದೋಹವೈತಂದು || ೧೯ ||

ಕರಿ ತುರಗ ಕನ್ಯಾ ಸುರತ್ನವ | ಹರಿಗೆ ಕಪ್ಪವ ಕೊಟ್ಟು ಕೈಮುಗಿ |
ದಿರಲು ಮತ್ತಿರದೇಳ್ದು ಗಂಗಾನದಿಯ ಪೂರ್ವದಲಿ ||
ದೊರೆವಡೆದ ಬಲು ಮ್ಲೇಂಛಖಂಡವ | ಕರಗತವ ಮಾಡಿದನು ಲಾಂಗುಲ |
ಧರನು ಶಾರ್ಙಿಯು ಸಾರ್ದರಾ ಕೈಲಾಸ ಪರ್ವತವ || ೨೦ ||

ತೊಳಪ ಲೇಖಾನದಿಯ ಪೆರ್ಚಿದ | ಬಳಸಿನಿಂ ಕಲಧೌತಮಯ ಗಿರಿ |
ತೊಳರೊಳಪ ಪರಿವೇಷವಡೆದಾ ಪೂರ್ಣಚಂದ್ರನೆನೆ ||
ಚೆಲುವನಾಂತಿರಲಲ್ಲಿರಿಸಿ ನಿಜ | ಬಲವನಾ ಸಂಕರುಷಣನುಮಾ |
ನಳಿನನಾಭನುಮೀರ್ವರೂ ಸಮಭಕುತಿಯನು ತಳೆದು || ೨೧ ||

ಭರತಕೃತ ಮಣಿಮಯ ರಚಿತ ಬಂ | ಧುರ ಜಿನಾಲಯಗಳನು ವಂದಿಸಿ |
ಪಿರಿದು ಭಕ್ತಿಯಲೆರಗಿ ಪೂಜಿಸಿ ಜಿನಪತಿಯ ನುತಿಸಿ ||
ಪರಮಹರುಷವನಾಂತು ಬಂದಾ | ಪಿರಿಯ ಕಟಕವ ಪೊಕ್ಕು ಮರುದಿನ |
ಸುರನದಿಯ ಪಿಡಿದೈದಿದರು ಮೂಡಣ ಸಮುದ್ರವನು || ೨೨ ||

ಸುರನದಿಯ ದ್ವಾರದಲಿ ಮಾಗಧ | ಸುರನನುದ್ಧತ ವೈಜಯಂತಿಯ |
ಪಿರಿಯ ಬಾಗಿಲಿನಿನ್ನೆವರತನುವೆಂಬ ದೇವನನು ||
ತರದಿ ಸಿಂಹದ್ವಾರದಿಂ ಭೀ | ಕರ ಪ್ರಭಾಸಾಮರನ ಸಾಧಿಸಿ |
ವರ ರತುನ ಭೂಷಣ ನಿಕರವನು ಪಡೆದರವನಿಂದ || ೨೩ ||

ಅವರದನು ಪೊರಮಟ್ಟು ಸಿಂಧು | ಪ್ರವರನದಿಪಿಡಿದೈದಿ ಪಡುವಣ |
ತವದ ಮೆಚ್ಚರನೆಯ್ದೆ ತಮಗೇರಿಸಿ ತ್ರಿಖಂಡವನು ||
ಸುವಿದಿತರು ವರುಷಾಷ್ಟಕವು ತವ | ಗವಧಿಯಂನೆಗಮಾಗೆ ಸಾಧಿಸಿ |
ಭುವನ ವಿಜಯಮನಾಂತರಾ ದೋರ್ವಲಪರಾಕ್ರಮರು || ೨೪ ||

ಬಂದನಾ ದ್ವಾರಾವತಿಗೆ ದೇ | ವೇಂದ್ರರೆಣ್ಬರ ವೈಭವದಲಿಯು |
ಪೇಂದ್ರನರ್ಕಸಹಸ್ರಕಿರಣದ ಚಕ್ರರತ್ನವನು ||
ಮುಂದೆ ಬರುತಿರೆ ಗಗನದಲಿ ಖಗ | ವೃಂದ ಬರೆ ಮದಗಜ ಮಹಾಹಯ |
ಸಂದಣಿಯಲಿಳೆ ತೀವಿ ಬರೆ ಭಾಗ್ಯವನದೇನೆಂಬೆ || ೨೫ ||

ಅಷ್ಟಶೋಭೆಗಳಿಂದ ದ್ವಾರಕಿ | ಪಟ್ಟಣವು ಶೃಂಗಾರವಾದುದು |
ಮುಟ್ಟಿದವು ಗುಡಿತೋರಣಂಗಳು ಮುಗಿಲನೆಡೆವಿಡದೆ ||
ಪಟ್ಟಮಾರ್ಗದೊಳಾರತಿಗಳಿರ | ದಿಟ್ಟಿಸಿದಿದವು ನೃತ್ಯಗಳನಾ |
ಹೆಟ್ಟುಗೆಯರಾಡಿದರಿವರು ಪೋತಂದರರಮನೆಯ || ೨೬ ||

ನೆರೆದ ಸುರನರಖಚರರಖಿಳೋ | ರ್ವರೆಯೆರೆಯರೊಡವೆರಸಿ ಪಾಂಡವ |
ರುರು ಸಮುದ್ರವಿಜಯ ಮಹಾರಾಯನು ಮಹೋತ್ಸವದಿ ||
ಹರಿಗೆ ಬಲಭದ್ರಂಗೆ ಶೋಭಾ | ಕರದಿ ಮಂಗಳಮಜ್ಜನವ ಬಿ |
ತ್ತರಿಸಿ ದಿವ್ಯಾಂಬರ ಸುರತ್ನಾಭರಣಗಳ ತರಿಸಿ || ೨೭ ||

ಚಂದದಿಂದಮಲಂಕರಿಸಿ ನಲ | ವಿಂದ ಮುತ್ತಿನ ಸೇಸೆಯನು ತರ |
ದಿಂದ ಪರಸಿಟ್ಟರು ಮೊಳಗುತಿರೆ ಪಂಚವಾದ್ಯಗಳು ||
ಅಂದೊಲಿದು ಪದಿನಾರು ಸಾಸಿರ | ಸೌಂದರಿಯರಾರತಿಯನೆತ್ತಿ ಮು |
ಕುಂದನಾತನು ತಾಂ ತ್ರಿಖಂಡಾಧೀಶ ಪದವಿಯನು || ೨೮ ||

ಮಿಗೆ ಸುದರುಶನಚಕ್ರ ಶಕ್ತಿ | ಪ್ರಗದೆ ನಂದಕ ಶಾರ್ಙ ಶಂಖ |
ಪ್ರಗತ ಕೌಸ್ತುಭರತ್ನಯೆಂಬೀ ಏಳು ರತ್ನವನು ||
ತೆಗೆದಿಹವು ಪ್ರತ್ಯೇಕವಾಗಿಯೆ | ನೆಗಳ್ದ ಸಾಸಿರಯಕ್ಷಿಗಳು ವೊ |
ಲಗಿಪವೆಯ್ದೆ ಚತುರ್ಭುಜನನವನೀಶ ಕೇಳೆಂದ || ೨೯ ||

ಎಸೆವ ಹರಿನೀಲಚ್ಛವಿಯ ತನು | ದಶ ಧನುತ್ಸೇಧವದು ಪರಮಾ |
ಯುಷವು ಸಾಸಿರವರುಷದೊಪ್ಪುವ ತನ್ನವೀರ್ಯನಲೆ ||
ಕುಸುಮಶರಪಿತನರ್ಧ ಚಕ್ರಿಯು | ವಸುಧೆಯೊಳು ಪುರುಷೋತ್ತಮನು ರಾ |
ಜಿಸಿದನಾ ಯದುಕುಲತಿಲಕನವನೀಶ ಕೇಳೆಂದ || ೩೦ ||

ವರ ಮುಸಲ ಹಲ ಗದೆ ಪರಿಘ ಬಂ | ಧುರದ ರತ್ನವು ನಾಲ್ಕು ನಾಲ್ಕನು |
ಬೆರಸಿಹವು ಮಿಗೆ ನಾಲ್ಕು ಸಾಸಿರಯಕ್ಷಿಗಳು ಹರಿಯ ||
ಸರಿಯೆ ದೇಹೋಚ್ಛೇದನಾಯಿಸ | ದಿರವದಿನ್ನೂರಧಿಕವಾ ಹಿಮ |
ಕರರುಚಿರತನುಕಾಂತಿ ಬಲಭದ್ರಂಗೆ ಸೊಗಯಿಪುದು || ೩೧ ||

ಬಲಯುತ ಶ್ರೀಕಾಂತನಾಜ್ಞೆಯು | ನಿಲೆ ನಿಖಿಲಭೂಪರ ಮುಕುಟದಲಿ |
ನಿಲೆ ದಿಶಾಧೀಶರ ಕಿರೀಟದೊಳಮರತ ರಜಸವು ||
ನಿಲೆ ಮಹಾಲಕ್ಷ್ಮಿಯು ಸುವಕ್ಷ | ಸ್ಥಳದೊಳಗೆ ತನ್ನೊಂದು ಚೆಲುವಿಕೆ |
ನಿಲೆ ವಧೂಹೃದಯದೊಳು ನಿಂದನು ಚಕ್ರಿರಾಜ್ಯದಲಿ || ೩೨ ||

|| ಅಂತು ಒಟ್ಟು ಸಂಧಿ ೫೭ಕ್ಕಂ ಮಂಗಲಮಹಾ ||