ಸಾಳುವ ವಂಶಜರು ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ವಿಶೇಷಾಗಿ ಜೈನ ಧರ್ಮಕ್ಕೆ ಮಹತ್ತರ ಸೇವೆಯನ್ನು ಸಲ್ಲಿಸಿದ್ದಾರೆ. ಇಂಥ ಸಾಳುವ ವಂಶ ಗಗನಾಂಗಣದಲ್ಲಿ ಮೂಡಿಬಂದ ತೇಜಸ್ವಿ ದಿನಕರ, ಸಾಳ್ವಕವಿ. ಈ ಸಾಳ್ವಮಲ್ಲ ಮತ್ತು ಸಾಳ್ವದೇವ ಎಂಬ ಇಬ್ಬರು ಪ್ರಭಾವಶಾಲಿ ರಾಜರ ಕಾಳದಲ್ಲಿದ್ದು, ಅವರಿಂದ ರಾಜಮನ್ನಣೆ ಪಡೆದವನು. ಈ ಕವಿಗೆ ಆಶ್ರಯನೀಡಿದ ಅರಸರ ಬಗ್ಗೆ ವಿಪುಲ ಮಾಹಿತಿಗಳು ಶಾಸನಗಳು ಹಾಗೂ ಸಾಹಿತ್ಯಕೃತಿಗಳಿಂದ ದೊರೆಯುತ್ತವೆ. ಅವುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಅವಲೋಕಿಸಬಹುದಾಗಿದೆ.

ತೌಳವ-ಹೈವ-ಕೊಂಕಣ ಪ್ರದೇಶದ ರಾಜಧಾನಿ ನಗಿರೆ ನಗರ. ಈ ನಗರಕ್ಕೆ ಗೇರುಸೊಪ್ಪೆ, ಕ್ಷೇಮಪುರ, ಭಲ್ಲಾತಕೀಪುರ ಎಂಬ ಹೆಸರುಗಳಿದ್ದವು. ಇದು ‘ವಸುಧೆ ಕೀರ್ತಿಪ’ ನಗರವಾಗಿತ್ತು. ಇಲ್ಲಿ ಎಪ್ಪತ್ತೆರಡು ಜಿನಬಸದಿಗಳಿದ್ದವು. ಅಲ್ಲದೆ ಸಮಂತಭದ್ರ ಪೀಠವೊಂದಿತ್ತು. ಆ ನಗರವನ್ನು ಸಾಳ್ವಕವಿ ಹೀಗೆ ಬಣ್ಣಿಸಿದ್ದಾನೆ –

ಜಿನಸಮಯ ವಾರಾಶಿಚಂದ್ರರು | ಜಿನರ ಪೂಜೆಗೆ ಶಕ್ರರೆಲ್ಲರು |
ವಿನುತ ದಾನಕ್ಕೆಲ್ಲರು ಶ್ರೇಯಾಂಸರೆನಿಸುವರು ||
ಅನಘವೃತ್ತರು ಸಾಳ್ವರಾಜೇಂ | ದ್ರನ ನಗಿರ ನಗರದೊಳಗಾ ಧನ
ದನನಿಳಿಪ ಧನಪಾಲರಗಣಿತ ಭವ್ಯರೊಪ್ಪಿದರು || (೧-೩೨ ||

ಆ ಸಾಳ್ವರಾಜೇಂದ್ರನನ್ನು ಸಾಳ್ವಮಲ್ಲ, ಸಾಳ್ವಮಲ್ಲರಾಯ, ಮಲ್ಲಿರಾಯ, ಸಾಳ್ವಮಲ್ಲೇಶ, ಮಲ್ಲಿಭೂಪಾಲ – ಎಂದು ಮೊದಲಾದ ಹೆಸರುಗಳಿಂದ ಗುರುತಿಸಲಾಗಿದೆ. ಈತನನ್ನು ನಾನಾ ಬಗೆಯಲ್ಲಿ ಶಿಲಾಶಾಸನಗಳು ಹಾಗೂ ಸಾಹಿತ್ಯ ಕೃತಿಗಳು ಪ್ರಶಂಸಿವೆ. ಈತನಿಗೆ ಕಠಾರಿ ತ್ರಿನೇತ್ರ, ತ್ರಿಣಯನಪಟಭಲ್ಲ, ಭಾವಜ್ಞ ಚಕ್ರೇಶ್ವರ, ರತ್ನತ್ರಯಾರಾಧಕ, ಜಿನಧರ್ಮಧ್ವಜ ಸ್ಥಾಪನಾಚಾರ್ಯ, ಜಿನರಥಯಾತ್ರಾ ಪ್ರವರ್ತಕ ಮೊದಲಾದ ಬಿರುದುಗಳಿದ್ದುವೆಂದು ತಿಳಿದು ಬರುತ್ತದೆ. ಶಾಸನವೊಂದರಲ್ಲಿ ಈತನನ್ನು ಚಾಗದಲ್ಲಿ ಬಲಿ, ಕರ್ಣ, ಭೋಜರಾಜ, ಮಾಂಧಾಂತರಿಗಿಂತ ದೊಡ್ಡವನೆಂದು ಬಣ್ಣಿಸಲಾಗಿದೆ. ಈತನ ‘ಕೀರ್ತಿ ಡಿಂಡಿಮ’ ವನ್ನು ಸಾರುವ ಮತ್ತೊಂದು ಶಾಸನಪದ್ಯ ಹೀಗಿದೆ-

ಪರಮಜಿನೇಂದ್ರಭಕ್ತಿಗೆ ಸದುಕ್ತಿಗೆ ಚಾಗಕೆ ಭೋಗಕಾತನೊಳ್
ಸಿರಿಗೆ ಪರಾಕ್ರಮಕ್ಕೆ ಕಡು ನನ್ನಿಗೆ ಸತ್ಕಳೆಗಂ ತ್ರಿಲೋಕದೊಳ್
ಸರಿದೊರೆ ಪಾಡುತೋಡು ಪಡಿಪಾಸಟಿ ಈಡೆಣೆ ಇಲ್ಲೆನುತ್ತಹಂ
ಕರಿಸಿ ಪೊಗಳ್ದು ಬಾಜಿಸಿತು ಸಾಳುವ ಕೀರ್ತಿ ಡಿಂಡಿಮಂ ||

ಈತನನ್ನು ‘ಕಾಳಗದಲ್ಲಿ ಶಕ್ರಸುತನ್, ಈವೆಡೆಯಲ್ಲಿ ಇನಸೂನು, ಮೇದಿನೀ ಪಾಳನದಲ್ಲಿ ರಾಮನು’ ಎಂದು ಹೊಗಳುತಿದ್ದರು. ಇವನನ್ನು ಸಾಳ್ವಕವಿಯು, ತನ್ನ ನೇಮಿನಾಥ ಚರಿತೆಯಲ್ಲಿ ಹೀಗೆ ಸ್ಮರಿಸಿದ್ದಾನೆ –

ಪ್ರಣುತನಾ ತ್ರಿಭುವನ ಕಠಾರಿ | ತ್ತ್ರಿಣಯನಂ ಸಮ್ಯಕ್ತ್ವ ಚೂಡಾ |
ಮಣಿ ವಿಮಲ ಜಿನದೇವರಥಯಾತ್ರಾ ಪ್ರಭಾವಕನು |
ಗುಣವಿಧಾನಂ ತ್ಯಾಗವಿದ್ಯೆಯೊ | ಳೆಣೆಯದಾರೈ ಜಗದ ಗುರುವೆನೆ |
ಫಣಿಪಭೋಗದ ಸಾಳ್ವಮಲ್ಲ ನರೇಂದ್ರನದನಾಳ್ವ || (೧-೨೯)

ಅಲ್ಲದೆ ಕವಿಯು ತನ್ನ ‘ಶಾರದಾವಿಲಾಸ’ ಎಂಬ ಅಲಂಕಾರ ಗ್ರಂಥದ ಸೂತ್ರಗಳಿಗೆ ನೀಡಿರುವ ೩-೪ ಲಕ್ಷ್ಯ ಪದ್ಯಗಳಲ್ಲಿ ಸಾಳ್ವಮಲ್ಲ ನರೇಂದ್ರನನ್ನು ಸ್ಮರಿಸಿ, ಅವನ ಗುಣಗಾನ ಮಾಡಿದ್ದಾನೆ. ಅಲ್ಲಿಯ ಒಂದೆರಡು ಪದ್ಯಗಳು ಹೀಗಿವೆ –

ನಿರುಪಮ ಸಾಳುವಮಲ್ಲನ
ವರಗುಣಮಂ ಪೊಗಳ್ವೆನೆಂಬನಾವಂ? ರತ್ನಾ _
ಕರಜಲಮಂ ಕರತಳದಿಂ
ಭರದಿಂದಂ ತೀವಿ ತೀರ್ಚಲಾಪನ್ನನವಂ || (ಪದ್ಯ ೫೧)

ವರಸಾಳ್ವಮಲ್ಲನಿಂ ಸಂ
ಗರದೊಳ್ ಜಯಲಕ್ಷ್ಮಿ ಚಾರುತರವಚದಿಂ ಸ್ವೀ ||
ಕರಿಸಲ್ಪಟ್ಟಳದೇಂ ತ
ತ್ಕರಿಕಂಧರವದ್ರಿಕುಹರದಿಂ ಸ್ವೀಕರಿಕುಂ || (ಪದ್ಯ ೫೫)

ಇಂಥ ಸಾಳ್ವಮಲ್ಲನು, “ಶ್ರೀ ಪಂಡಿತಾಚಾರ್ಯ ಪದಾಬ್ಜ” ಭ್ರಮರನೂ ಸಾಹಸಿಯೂ, ಮಹತ್ವಾಕಾಂಕ್ಷಿಯೂ ಆಗಿದ್ದನು. ಇವನು ಹೊನ್ನಾವರದಿಂದ ರಾಜ್ಯವಾಳುತ್ತಿದ್ದನು. ಈತನ ಪಟ್ಟದ ಕವಿಯಾಗಿದ್ದವನು ಸಾಳ್ವಕವಿ.

ಸಾಳ್ವ ರಾಜೇಂದ್ರನ ಸೋದರಳಿಯನೇ ಸಾಳ್ವದೇವ. ಈತನಿಗೆ ಸಾಳ್ವದೇವರಸ, ಸಾಳುವ ದೇವರಾಯ, ದೇವರಸ, ದೇವರಸ ಒಡೆಯ ಮೊದಲಾದ ಹೆಸರುಗಳಿದ್ದುವು. ಈ ‘ಅಳಿಯ’ನನ್ನು ಕವಿ ತನ್ನ ನೇಮಿನಾಥ ಚರಿತೆಯಲ್ಲಿ ಹೀಗೆ ಚಿತ್ರಿಸಿದ್ದಾನೆ –

ಅಳಿಯನೊಂದೊಡೆ ಅಳಿಯನೇ ಚಲ | ವಳಿಯ ಚಾಗವನಳಿಯ ಪಾಳಯ |
ನಳಿಯ ಪಂಥವನಳಿಯ ಪೆರ್ಮೆಯನಳಿಯ ಧರ್ಮವನು ||
ಅಳಿಯ ಮಾನ್ಯರನಳಿಯ ನೆನೆಸುವ | ಸುಲಭ ಸಾಳುವಮಲ್ಲ ಭುವರ |
ನಳಿಯ ದೇವೇಂದ್ರನೆ ಸುರಾಜ್ಯವನಾಳ್ವ ಕಾಲದಲಿ || (೧-೩೧)

ಸಾಳ್ವಕವಿಯ ಕಾಲ

ಉಬಲಬ್ಧಸಾಳ್ವಕವಿಯ ಗ್ರಂಥಗಳಲ್ಲಿ ಕೃತಿ ರಚನೆಯ ಕಾಲದಲ್ಲಿ ಸೂಚಿಸುವ ಪದ್ಯಗಳಿಲ್ಲ. ಕವಿಚರಿತೆಯಕಾರರು ಸಾಳ್ವನ ಕಾಲವನ್ನು ಸುಮಾರು ೧೫೫೦ ಎಂದು ತಿಳಿಸಿದ್ದಾರೆ. ಆದರೆ ಡಾ. ಹಂಪ ನಾಗರಾಜಯ್ಯ ಅವರು ತಮ್ಮ ಇತ್ತೀಚಿನ ಶೋಧನೆಯಿಂದ ಸಾಳ್ವಕವಿಯ ಕಾಲವನ್ನು ಕ್ರಿ.ಶ. ೧೪೮೫ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧವಾಗಿ ಅವರ ವಿವರವಾದ ಅಭಿಪ್ರಾಯ ಹೀಗಿದೆ –

“ಸಾಳ್ವಕವಿಗೆ ಆಶ್ರಯಕೊಟ್ಟವರು ನಗಿರೆಯ ದೊರೆಗಳಾದ ಸಾಳ್ವಮಲ್ಲ ಮತ್ತು ಸಾಳ್ವದೇವರು. ಸಾಳ್ವದೇವರಸರ ರಾಜ್ಯಾಡಳಿತ ೧೪೯೯ಕ್ಕೆ ಮುಗಿಯಿತೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ ಕವಿಯ ಕಾಲದ ಪರಮಾವಧಿ ಗಡುವು ಈ ೧೪೯೯ನೆಯ ಇಸವಿಯನ್ನು ದಾಟುವಂತಿಲ್ಲ. ಸಾಳ್ವಕವಿಯ ಕಾವ್ಯದಲ್ಲಿ ಸಾಳ್ವಮಲ್ಲ ಹಾಗೂ ಸಾಳ್ವದೇವ – ಈ ಇಬ್ಬರ ಬಗೆಗೂ ಪ್ರಶಂಸಾತ್ಮಕ ಪದ್ಯಗಳಿವೆ. ಸಾಳ್ವಮಲ್ಲನು ದೊರೆಯಾಗಿ ಸಿಂಹಾಸನಸ್ಥಿತನಾಗಿರುವಾಗ ಮತ್ತು ಸಾಳ್ವದೇವನು ಯುವರಾಜನಾಗಿ ವಿಜೃಂಭಿಸುತ್ತಿದ್ದಾಗ ಸಾಳ್ವಭಾರತ ರಚನೆಯಾದಂತೆ ಸಬಲ ಆಧಾರಗಳಿಂದ ತಿಳಿದು ಬರುತ್ತದೆ. ಮುಖ್ಯವಾಗಿ ಸಾಳ್ವಮಲ್ಲನ ಸೋದರಳಿಯನಾದ ಸಾಳ್ವದೇವನನ್ನು ಸಾಳ್ವಕವಿ ‘ಅಳಿಯ ಶ್ರೇಷ್ಠ’ನೆಂದು ವಿಶ್ಲೇಷಿಸಿ ಬರೆದಿರುವ ೧-೩೧ನೆಯ ಪದ್ಯವನ್ನು ಗಮನಿಸಬೇಕು; ಇದು ಸಾಳ್ವ ಕವಿಯ ಕಾಲ ನಿರ್ಧಾರದಲ್ಲಿ ಅತ್ಯಂತ ಪ್ರಮುಖವಾದ ಪದ್ಯ.

“ಸಾಳ್ವಮಲ್ಲನು ದೊರೆಯಾಗಿದ್ದ ಕಾಲದಲ್ಲಿ ಕೃತಿ ರಚನೆಯಾಗಿದ್ದರೆ ಸಾಳ್ವದೇವನನ್ನು ‘ಇನ್ನು ದೊರೆಯಾಗಿರುವನೆಂಬ’ ವರ್ತಮಾನಾರ್ಥದ ಪದ್ಯಗಳನ್ನು ಮತ್ತು ಸಾಳ್ವದೇವನು ಅಳಿಯ ಹಾಗೂ ಯುವರಾಜ ಸ್ಥಾನದಲ್ಲಿರುವ ವಿವರಣೆಯ ಪದ್ಯಗಳನ್ನು ಮಾತ್ರ ಕವಿ ಬರೆಯುತ್ತಿದ್ದ(ನೆ?). ಕೇವಲ ಸಾಳ್ವದೇವನ ಪ್ರಭುತ್ವದ ಉದ್ಘೋಷವಿರುತ್ತಿತ್ತು. ಇನ್ನು ೧-೩೧ನೆಯ ಪದ್ಯಕ್ಕೆ ಮಹತ್ವವಿರುವುದಕ್ಕೆ ಕಾರಣ ೧೮೪೧ರ ಮತ್ತು ೧೪೮೪ರ ಕೆಲವು ಶಾಸನಗಳಲ್ಲಿ ಸಾಳ್ವದೇವನಿಗೆ ಇದೇ ವಿಶೇಷಗಳಿವೆ. ಆತ ಗೋವೆಯ ಸೇನಾಪತಿಯನ್ನು ಸೋಲಿಸಿದ್ದು ಈ ತೇದಿಯಲ್ಲೇ. ಹೀಗಾಗಿ ಈ ಇಸವಿ ಆತನ ಜೀವಿತದ ಉಚ್ಛ್ರಾಯದ ಅವಧಿ. ‘ಸಾಳುವ ಮಲ್ಲ ಭುವರನಳಿಯ ದೇವೇಂದ್ರನೆ ಸುರಾಜ್ಯವನಾಳ್ವ ಕಾಲದಲಿ’ (೧-೩೧) ಎಂದೂ, ‘ಸೂರಸ ಸಾಳುವದೇವ ಭೂಪತಿ | ನಿರವಿಸಿದನೇಕೆನಲು ಮುನ್ನವೆ | ವಿರಚಿಸಲು ಬೆಸಸಿದನು ಸಾಳುವಮಲ್ಲನದರಿಂದ’ (೧-೩೫) ಎಂದೂ ಸಾಳ್ವಕವಿ ಸ್ಪಷ್ಟವಾಗಿ ಸಾರಿದ್ದಾನೆ.

“ಅಂದರೆ ಈ ಕಾವ್ಯ ಆಗಷ್ಟೇ ದೊರೆಯಾದ ಹೊಸತರಲ್ಲಿ ಮುಗಿದಿದೆ. ಈ ಅಂತರ ಬಾಹ್ಯ ಪ್ರಮಾಣಗಳ ಆಧಾರದಿಂದ ಸಾಳ್ವಕವಯ ಕಾವ್ಯ ರಚನೆಯಾದದ್ದು ಈ ೧೪೮೫ರಲ್ಲೇ ಎಂದು ನಿರ್ಧರಿಸಬಹುದು. ಹೀಗೆ ಸಾಳ್ವಕವಿಯ ಕಾಲವನ್ನು ೧೪೮೫ ಎಂದು ತೀರ್ಮಾನಿಸುವುದಕ್ಕೆ ಮತ್ತಾವ ಅಡ್ಡಿ ಆತಂಕಗಳು ಕಂಡು ಬರುವುದಿಲ್ಲ.”

ಇದೇ ಸಂದರ್ಭದಲ್ಲಿ ಕವಿಯ ಮತ್ತೊಂದು ಕೃತಿಯಾದ ‘ಶಾರದಾವಿಲಾಸಂ’ ಎಂಬ ಅಲಂಕಾರ ಗ್ರಂಥದ ೩-೪ ಲಕ್ಷ್ಯ ಪದಗಳಲ್ಲಿ ಕೇವಲ ಸಾಳ್ವಮಲ್ಲನ ಪ್ರಶಂಸಾ ಪದ್ಯಗಳಿರುವುದನ್ನು ಗಮನಿಸಬಹುದಾಗಿದೆ. ಇವು ಸಹ ಡಾ || ಹಂಪನಾ ಅವರು ಮಾಡಿರುವ ಕವಿಯ ಕಾಲ ನಿರ್ಣಯವನ್ನು ಪುಷ್ಟಿಕರಿಸುತ್ತವೆ.

ಸಾಳ್ವಕವಿ ಸ್ಮರಿಸಿರುವ ಆಚಾರ್ಯರು

ಕನ್ನಡ ಜೈನ ಕವಿಗಳಲ್ಲಿ ಬಹುಶಃ ಸಾಳ್ವಕವಿಯೇ ಹೆಚ್ಚು ಜನ ಪ್ರಾಚೀನ ಹಾಗೂ ನೂತನ ಆಚಾರ್ಯರನ್ನು – ಹನ್ನೊಂದು ಪದ್ಯಗಳಲ್ಲಿ (೧-೧೩ ರಿಂದ ೨೩) – ಸ್ಮರಿಸಿದ್ದಾನೆ. ಅನೇಕ ನೂತನರನ್ನು ಆತನ ಸಮಕಾಲೀನ ಕವಿಗಳೂ ನೆನೆದಿರುವುದನ್ನು ಗಮನಿಸಬಹುದಾಗಿದೆ. ಸಾಳ್ವಕವಿ ಸ್ತುತಿಸಿರುವ ಆಚಾರ್ಯರ್ ಪಟ್ಟಿ ಹೀಗಿದೆ –

“ಗೃದ್ಧಪಿಂಚ್ಛಾಚಾರ್ಯ, ಮಯೂರ ಪಿಂಚ್ಛಾಚಾರ್ಯ, ‘ಶ್ರುತ ಪಂಚಮಿಯೊಳಾಶ್ಚರ್ಯ ಪುಸ್ತಕಗೈದರುಹದ್ಬಲಿ’, ಶ್ರೀ ಪುಷ್ಪದಂತ, ಭೂತಬಲಿ, ಕುಂಡಕುಂದಾಚಾರ್ಯ, ಉಮಾಸ್ವಾತಿ, ಸಮಂತಭದ್ರ ಸ್ವಾಮಿ, ಕವಿ ಪರಮೇಷ್ಠಿ, ವಿದ್ಯಾಸ್ವಾಮಿ, ಪೂಜ್ಯಪಾದಸ್ವಾಮಿ, ವೀರಸೇನಾ ಚಾರ್ಯ, ಜಿನಸೇನ, ನೇಮಿಚಂದ್ರ, ರಾಮಸೇನ, ಅಕಳಂಕದೇವರು, ಅನಂತವೀರ್ಯ, ವಿದ್ಯಾನಂದ, ಮಾಣಿಕನಂದಿ ಭಟ್ಟಾರಕ, ಪ್ರಭೇಂದು (ಪ್ರಭಾಚಂದ್ರ), ರಾಮಚಂದ್ರ, ವಾಸವೇಂದು (ದೇವಚಂದ್ರ), ಗುಣಭದ್ರದೇವರು, ಮಾಘನಂದಿ, ‘ಮಂಡಲದ ವರ-ರಾಜಗುರು-ಗುಣ ಸೌಂದರೆನಿಸುವ ಚಾರುಕೀಪತಿ ಪಂಡಿತಾಚಾರ್ಯ’, ‘ಮಂಡಲೇಶ್ವರ ನಂದಿತ ವಿಶಾಲಕೀರ್ತಿ’, ‘ದೇಶಿಗಣ ವಿಜಯಕೀರ್ತಿಗಳ ಶಿಷ್ಯರಾದ, ಜಾತರೂಪರಾದ, ಕಲಿಕಾಲ ಜಿನರೆನೆ ಸೊಗಯಿಪ ಎನ್ನಯ ಗುರು…… ಶ್ರುತುಕೀರ್ತಿ ದೇವರು’, ಮಹೀಭೂಷಣ ಮುನಿ, ಪಾಲಾದಿ ದೇವರು, ಮೇರುನಂದಿ, ಅಣುವ್ರತರಾದ ಸಮಂತಭದ್ರ, ಪಾಲಕೀರ್ತಿ, ‘ಮದ್ಗುರು’ ಧರ್ಮಚಂದ್ರ”. ಇವರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅನುಬಂಧದಲ್ಲಿನ ‘ಜೈನಾಚಾರ್ಯರು’ ಎಂಬುದರಲ್ಲಿ ನೀಡಲಾಗಿದೆ.

ಮೇಲಿನ ಪಟ್ಟಿಯನ್ನು ಗಮನಿಸಿದಾಗ, ಶ್ರುತುಕೀರ್ತಿ ಮತ್ತು ಧರ್ಮಚಂದ್ರರು, ಸಾಳ್ವಕವಿಯ ಗುರುವಾಗಿದ್ದರೆಂದು ಅರಿಯಬಹುದಾಗಿದೆ. ಸಾಳ್ವಕವಿಯು ಸಾಳ್ವಮಲ್ಲನ ಆಸ್ಥಾನದಲ್ಲಿ ‘ಪಟ್ಟದ ಕವಿ’ ಯಾಗಿದ್ದನು. ರಾಜ್ಯಸಭೆಯಲ್ಲಿ ಮಾನ್ಯನಾಗಿದ್ದನು. ಸತ್ಕವಿಗಳ ಸಮೂಹದಲ್ಲಿ ಪೂಜ್ಯನಾಗಿದ್ದನು. ವಿನೇಯನೂ ವಾತ್ಸಲ್ಯಮಯಿಯೂ, ಜಿನಭಕ್ತನೂ ಆಗಿದ್ದನು.

ಸಾಳ್ವಕವಿಯ ಕೃತಿಗಳು :

ನೇಮಿನಾಥ ಚರಿತೆ (ಸಾಳ್ವಭಾರತ), ರಸರತ್ನಾಕರಂ, ಶಾರದಾವಿಲಾಸಂ ಮತ್ತು ವೈದ್ಯಸಾಂಗತ್ಯ – ಇವು ನಾಲ್ಕು ಸಾಳ್ವಕವಿಯ ರಚನೆಗಳು. ನೇಮಿನಾಥ ಚರಿತೆ ಷಟ್ಪದಿ ಛಂದಸ್ಸಿನಲ್ಲಿರುವ ದೊಡ್ಡ ಕಾವ್ಯ ಗ್ರಂಥ. ರಸರತ್ನಾಕರ ಮತ್ತು ಶಾರದಾವಿಲಾಸ ಇವೆರಡು ಚಂಪೂ ಶೈಲಿಯಲ್ಲಿರುವ ಅಲಂಕಾರ ಗ್ರಂಥಗಳು. ವೈದ್ಯ ಸಾಂಗತ್ಯವು ಹೆಸರೇ ಸೂಚಿಸುವಂತೆ ಸಾಂಗತ್ಯ ಛಂದಸ್ಸಿನಲ್ಲಿರುವ ವೈದ್ಯ ವಿಷಯದ ಗ್ರಂಥ. ಸಾಳ್ವನ ಕೃತಿಗಳಲ್ಲಿ ಛಂದಸ್ಸಿನ ವೈವಿಧ್ಯವನ್ನೂ ವಸ್ತು ವೈವಿಧ್ಯವನ್ನು ಗುರುತಿಸಬಹುದಾಗಿದೆ.

ನೇಮಿನಾಥ ಚರಿತೆ (ಸಾಳ್ವಭಾರತ):

ಈ ಕಾವ್ಯದ ಕಥಾನಾಯಕ ನೇಮಿನಾಥ. ಈತ ೨೪ ಜನ ತೀರ್ಥಂಕರರಲ್ಲಿ ೨೨ನೆಯವನು. ಈ ತೀರ್ಥಂಕರನ ಬಗ್ಗೆ ಕನ್ನಡದಲ್ಲಿ ಹೆಚ್ಚಾಗಿ ಕಾವ್ಯಗಳು ರಚನೆಗೊಂಡಿರುವುದೊಂದು ವಿಶೇಷ. ಅಲ್ಲದೆ ಜಾನಪದ ಬಿಡಿ ಬಿಡಿ ಗೀತೆಗಳಲ್ಲಿ ಹಾಗೂ ಕಥನಗೀತೆಗಳಲ್ಲಿ ಈ ದೇವನ ಪ್ರಸ್ತಾಪ ಕಂಡುಬರುತ್ತದೆ.

ತಿಲೋಯಪಣ್ಣತ್ತಿ, ನಾಯಾಧಮ್ಮ ಕಹಾಮೋ, ವಜ್ಜೀಸಣಾಕಲ್ಪ ಮೊದಲಾದ ಪ್ರಾಚೀನ ಪಾಕೃತಿ ಗ್ರಂಥಗಳಲ್ಲಿ ಪ್ರಾಸಂಗಿಕವಾಗಿ ಕೇವಲ ನೇಮಿತೀರ್ಥಂಕರನ ಕಥೆ ಬರುವುದು. ಈ ಮೂಲಕಥೆಗೆ ಆ ತೀರ್ಥಂಕರನ ಕಾಲದ ನಾರಾಯಣ (ಕೃಷ್ಣ) ಪ್ರತಿನಾರಾಯಣ (ಜರಾಸಂಧ) ಮೊದಲಾದವರ ಕಥೆಯೂ ಸೇರಿಕೊಂಡು ದೊಡ್ಡ ಪುರಾಣ ಕಾವ್ಯವಾಗಿ ಬೆಳೆದುಬಂದಿದೆ.

ಕ್ರಿ.ಶ. ೭೮೪ ರಲ್ಲಿದ್ದ ಪುನ್ನಾಟ ಸಂಘದ ಜಿನಸೇನಾಚಾರ್ಯನ ‘ಹರಿವಂಶ’ವು ಸಂಸ್ಕೃತದಲ್ಲಿ ಬಂದ ನೇಮಿತೀರ್ಥಂಕರನನ್ನು ಕುರಿತ ಸ್ವತಂತ್ರ ರೂಪದ ಕಾವ್ಯ. ಈ ‘ಹರಿವಂಶ’ ಕಾವ್ಯ ಮತ್ತು ಗುಣಭದ್ರಾಚಾರ್ಯನ (ಕ್ರಿ.ಶ. ೮೯೯) ಉತ್ತರ ಪುರಾಣದಲ್ಲಿ ಅಂತರ್ಗತವಾಗಿರುವ ನೇಮಿನಾಥ ಪುರಾಣ – ಇವೆರಡು ಮುಂದೆ ಕನ್ನಡದಲ್ಲಿ ರಚನೆಗೊಂಡ ನೇಮಿನಾಥ ಪುರಾಣಗಳಿಗೆ ಮೂಲ ಆಕರ ಗ್ರಂಥಗಳಾಗಿವೆ.

ಕ್ರಿ.ಶ.ಸು. ೯೭೩ ರಲ್ಲಿದ್ದ ಚಾವುಂಡರಾಯನು ತನ್ನ ಚಾವುಂಡರಾಯ ಪುರಾಣ (ತ್ರಿಷಷ್ಟಿ ಶಲಾಕಾ ಪುರುಷ ಚರಿತೆ)ಯಲ್ಲಿ ನೇಮಿ ತೀರ್ಥಂಕರನ ಕಥೆಯನ್ನು ಕೇವಲ ಒಂಬತ್ತು ಪುಟಗಳಲ್ಲಿ ‘ಶುದ್ಧ ಗದ್ಯ’ದಲ್ಲಿ ಹೇಳಿದ್ದಾನೆ.

ಕ್ರಿ.ಶ. ೧೧೫೦ ರಲ್ಲಿ ಕರ್ಣಪಾರ್ಯನು ‘ನೇಮಿನಾಥ ಪುರಾಣ’ವನ್ನು ರಚಿಸಿದ್ದಾನೆ. ಇದರಲ್ಲಿ – ಕೇವಲ ಶ್ವೇತಾಂಬರ ಕಥಾ ಪರಂಪರೆಯ ನೇಮಿನಾಥ ಪೂರ್ವ ಭವಾವಳಿಯಲ್ಲಿ ಮಾತ್ರ ಕಂಡುಬರುತ್ತಿದ್ದ ವಿಂಧ್ಯಕ – ವಾಗುರೆಯ ಕಥೆಯು – ಈ ಕೃತಿಯಲ್ಲಿ ಕಂಡು ಬರುತ್ತದೆ. ಇದೊಂದು ಗಮನಾರ್ಹ ಅಂಶವಾಗಿದೆ.

ಅನಂತರ ಕ್ರಿ.ಶ. ೧೧೮೦ ರಲ್ಲಿ ಕವಿ ನೇಮಿಚಂದ್ರನು ನೇಮಿಚಂದ್ರನು ಕಾವ್ಯಲೇಪನದಿಂದ ಕೂಡಿರುವ ಅರ್ಧನೇಮಿನಾಥ ಪುರಾಣವನ್ನು; ಕ್ರಿ.ಶ. ೧೨೦೦ರಲ್ಲಿದ್ದ ಬಂಧುವರ್ಮನು ಹರಿವಂಶಾಭ್ಯುದಯವನ್ನು; ಕ್ರಿ.ಶ. ೧೨೫೪ರಲ್ಲಿದ್ದ ಮಹಾಬಲಿಯು ನೇಮಿನಾಥ ಪುರಾಣವನ್ನು ಚಂಪೂ ಶೈಲಿಯಲ್ಲಿ ವಸ್ತುಕವಾಗಿ ಬರೆದಿದ್ದಾರೆ.

ನೇಮಿನಾಥನನ್ನು ಕುರಿತ ವರ್ಣಕ ಕಾವ್ಯಗಳಲ್ಲಿ ಸಾಳ್ವಕವಿಯ (೧೪೮೫) ನೇಮಿನಾಥ ಚರಿತೆಯೇ (ಸಾಳ್ವ ಭಾರತವೆ) ಮೊದಲನೆಯದು. ಅನಂತರ ೩ನೇ ಮಂಗರಸನು ( ) ಸಾಂಗತ್ಯದಲ್ಲಿ ನೇಮಿಜಿನೇಶ ಸಂಗತಿಯನ್ನು ರಚಿಸಿದರೆ, ಭಾಮಿನೀ ಷಟ್ಟದಿಯಲ್ಲಿ ಬ್ರಹ್ಮಣಾಂಕನು (ಚಂದ್ರಸಾಗರ ವರ್ಣಿಯು) ಸುಮಾರು ಕ್ರಿ.ಶ. ೧೮೦೦ ರಲ್ಲಿ ‘ಜಿನಭಾರತ’ವನ್ನು ಬರೆದಿದ್ದಾನೆ.

ಸಾಳ್ವಕವಿ ತನಗಿಂತ ಮೊದಲಿದ್ದ ಕವಿಪುಂಗವರಿಂದ ಪ್ರಭಾವಿತನಾಗಿದ್ದಾನೆ, ಹಾಗೆಯೇ ತನ್ನ ನಂತರದ ಕವಿಗಳ ಮೇಲೂ ಪ್ರಭಾವ ಬೀರಿದ್ದಾನೆ.

ಸಾಳ್ವನ ‘ನೇಮಿನಾಥ ಚರಿತೆ’ಯು ‘ಸಾಳ್ವಭಾರತ’ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಇದು ಚಂದ್ರನ ಷೋಡಶ ಕಲೆಯಂತೆ ಷೋಡಪ ಪರ್ವಗಳಿಂದ ಕೂಡಿದ ಷಟ್ಪದಿ ಪ್ರಕಾರದ ದೊಡ್ದ ಕಾವ್ಯ. ೧೬ ಪರ್ವಗಳಲ್ಲಿ ೬೪ ಸಂಧಿಗಳು ಸೇರಿಕೊಂಡಿವೆ. ೨೪, ೨೫, ೨೬ ಮತ್ತು ೬೨ ನೇ ಸಂಧಿಯಲ್ಲಿ ವಾರ್ಧಕ ಷಟ್ಪದಿಯೂ; ೬೩ನೇ ಸಂಧಿಯಲ್ಲಿ ಪರಿವರ್ಧಿನಿ ಷಟ್ಪದಿಯೂ ; ೬೦ನೇ ಸಂಧಿಯಲ್ಲಿ ಬರುವ ಜಿನಾಷ್ಟಕವು ಕಂದ ಪದ್ಯದಲ್ಲೂ, ೬೪ನೇ ಸಂಧಿಯ ಅಂತ್ಯದಲ್ಲಿ ಬರುವ ಧ್ಯಾನ ಪ್ರಕ್ರಿಯೆಯನ್ನು ವಿವರಿಸುವ ಭಾಗ ಗದ್ಯದಲ್ಲೂ ಮತ್ತು ಉಳಿದೆಲ್ಲ ೫೯ ಸಂಧಿಗಳು ಭಾಮಿನಿ ಷಟ್ಪದಿಯಲ್ಲಿವೆ. ಕವಿ ವಿಸ್ತಾರ ಪ್ರಿಯನು, ಆತನಲ್ಲಿ ಕಥೆಗಿಂತ ವರ್ಣನೆ ಮುಂದು. ಆತನ ಈ ವರ್ಣಕ ಕಬ್ಬವನ್ನು ವರ ಗುಮ್ಮಟಾರ್ಯರು ಉದಾರದಿಂದ ಅವಧಾರಿಸಿದರಂತೆ!

ಧಾರುಣೀಸುತರಭಯಸೂರಿ ಕು | ಮಾರರುತ್ತಮರಾಗಮ ತ್ರಯ |
ಸಾರ ಸರ್ವಜ್ಞರು ವಿನೇಯ ನೃಪಾಲವಂದಿತರು ||
ಆರಯಲ್ ಪ್ರತಿವಾದಿಗಜ ಕಂ | ಠೀರವರು ವರ ಗುಮ್ಮಟಾರ್ಯರು |
ದಾರರವಧಾರಿಸಿದರೆನಲೀ ಕೃತಿಯೆ ಸುಕೃತಿಯಲೆ || (೧-೪೩)

ಸಾಳ್ವನ ಶಬ್ದ ಭಂಡಾರ ಸಮೃದ್ಧವಾದುದು. ಅದರಲ್ಲಿ ಅನೇಕ ಅಪರೂಪದ ಶಬ್ಧಗಳ ಸಂಗ್ರಹವಿದೆ. ಇವುಗಳ ಕಡೆ ಡಾ || ಹಂಪ. ನಾಗರಾಜಯ್ಯ ಅವರು ವಿದ್ವಾಂಸರ ಗಮನವನ್ನು ಮೊಟ್ಟಮೊದಲಿಗೆ ಸೆಳೆದಿದ್ದಾರೆ. ಅಂಥ ಕೆಲವು ಶಬ್ದರತ್ನಗಳು ಹೀಗಿವೆ –

ಪ್ರಾಕೃತದ ‘ವಡಪ್ಪಂ’ನಿಂದ ಬಂದಿರುವ ಬಡಹ (=ನಿರಂತರ ಮಳೆ, ೨೧-೬), ಕಿಱುಳೆ (=ಹಸುಳೆ, ೨೧-೪೨, ೪೩, ೫೨), ಬೆಱಟಿ (=ಬೆರಣಿ, ೩೧-೬೭), ಹೀರ (=ಹೀರಕ, ವಜ್ರ ೨೧-೬೮), ಪಟೀರ (=ಶ್ರೀಗಂಧ, ಮನ್ಮಥ, ೨೧-೬೮), ಪೊರೆಜೆ (=ಹೊರಜೆ, ಹಗ್ಗ ೨೬-೨೧), ಮಾಸರಿಕೆ (=ಮಾಧುರ್ಯ, ೨೯-೩೧),ಮೂಕಿ (೩೫-೬೦), ಉಂತೆ (ಅವ್ಯಯ) (=ಸುಮ್ಮನೆ, ನಿಷ್ಕಾರಣವಾಗಿ, ೨೬-೨೭), ಕೆವುಡು (=ಕಿವುಡು, ೩-೨೬), ಪಲ್ಲಮರಿ (=ಆನಮರಿ, ೨೪-೮೧), ಅರದ (=ರಥ, ೨೫-೭), ಪತ್ತಿ (=೧ ರಥ, ೧ ಆನೆ, ೩ ಕುದುರೆ, ೫ ಕಾಲಾಳುಗಳ ಮೊತ್ತ, ೨೪-೩೦), ರೊಕ್ಕ (=ದುಡ್ಡು, ೧೭-೫೯), ರುಚಕ(=ಸುಂದರ), ಹಗ್ಗಿ (=ಅಗ್ನಿ, ೬೨-೧೦) ಇತ್ಯಾದಿ.

ಸಾಳ್ವಕವಿ ತನ್ನ ಕಾವ್ಯದ ಒಂದು ಕಡೆ ಪ್ರಾಸಂಗಿಕವಾಗಿ, “ಚಿತ್ತವ ಜಕ್ಕುಲಿಸದ ಕವಿತ್ವ…. ಒಪ್ಪದು” (೩-೧೧) – ಕವಿತ್ವ ಒಪ್ಪಿಗೆಯಾಗಬೇಕಾದರೆ ಅದು ಮನಸ್ಸನ್ನು ಆಕರ್ಷಿಸಬೇಕು, ಉಲ್ಲಾಸಗೊಳಿಸಬೇಕು – ಎಂದಿದ್ದಾನೆ. ಬಗೆಯನ್ನು ಜಕ್ಕುಲಿಸುವ ಅಂಥ ಅನೇಕ ಚಿತ್ರಗಳು ಕಾವ್ಯದ ಉದ್ದಕ್ಕೂ ದೊರೆಯುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ-

ಬಾಲಕೃಷ್ಣನ ಲೀಲೆಯನ್ನು ಮುಗಿಸಿಬಿಡುತ್ತೇನೆಂದು ಚಾಣೂರನು ತನ್ನೊಡಯನಿಗೆ ಭರವಸೆ ನೀಡುವ ಚಿತ್ರಣ ಇಂತಿದೆ –

ಒಡೆಯ ಚಿತ್ತೈಸೊಂದೆ ಪೆಟ್ಟಿಗೆ
ಕುಡಿದ ಬಜೆಯನು ಕಾರಿಸುವೆ ನೀ
ನಡೆಯೆನಲು ಚಾಣೂರನದು ಲೇಸೆನುತ ಹರಿಸೇರೆ          ||

ಇಲ್ಲಿ ‘ಕುಡಿದ ಬಜೆಯನು ಕಾರಿಸುವೆ’ ಎಂಬ ಮಾತು ಅರ್ಥಪೂರ್ಣವಾಗಿ, ಧ್ವನಿರಮ್ಯವಾಗಿ, ಜಾನಪದ ಸೊಗಡಿನೊಂದಿಗೆ ಮೂಡಿಬಂದಿದೆ.

ದ್ರುಪದ ದ್ರೋಣರ ಯುದ್ಧದಲ್ಲಿ ದ್ರುಪದನು ದ್ರೋಣರನ್ನು ಮೂದಲಿಸುವ ರೀತಿ, ಮಾತಿನ ಮೊನಚಿನಿಂದ ಎಷ್ಟು ಮೋಹಕವಾಗಿದೆ ನೋಡಿ –

ಮರುಳ ಹಾರುವ ನಿನಗಕಟ ಸಂ | ಗರದ ಗಸಣಿಯಿದೇಕೆ, ಗಲ್ಲವ |
ಮುರಿದು ಮಕ್ಕಳನೋದಿಸುವ ಮಠವೋ ಕ್ಷುದಾರ್ಥದಲಿ ||
ತಿರಿದು ಭಿಕ್ಷೆಯ ಪದೆವೊಡಿದು ಭೂ | ಸುರರ ಕೇರಿಯೊ, ಯಜ್ಞಶಾಲೆಯೊ |
ಕರೆದು ದಾನಂಗೊಡುವೆಡೆಯೊ ಮಗುಳೆಂದನಾ ದ್ರುಪದ   || (೫೩-೮)

ಸಾಳ್ವನ ಚಿತ್ರಕ ಶಕ್ತಿಗೆ ಸೂರ್ಯೋದಯದ ಈ ಪ್ರಕೃತಿ ಚಿತ್ರಣವೂ ಒಂದು ಉತ್ತಮ ಉದಾಹರಣೆಯಾಗಿದೆ –

ಮೂಡವೆಣ್ಣೊಲಿದಿಟ್ಟ ಚೆಲುವಿಗೆ | ರೂಢಿಸಿದ ಕುಂಕುಮದ ಬೊಟ್ಟೋ |
ಮೂಡಣಾನೆಯ ಫಣೆಯ ಸಿಂಧೂರದ ಸರಿಘಾಟಿಕೆಯೊ ||
ಮೂಡವೆಟ್ಟದ ತುದಿಯ ರನ್ನದ | ಕೋಡುಗಲ್ಲೋ ಯೆನಿಸಿ ನೇಸರು |
ಮೂಡಲೀರ್ವರವೊಡ್ಡು ನಿಂದುದು ಮುನ್ನಿನಂದದಲಿ || (೫೩-೨)

ದ್ರೌಪದಿಯ ಆಗಮನದಲ್ಲಿ ವೇತ್ರಧಾರಿಗಳು ಉಗ್ಘಡಿಸಿದ ರೀತಿ ಹೀಗಿದೆ –

ತೊಲಗೆಲವೊ ಹೂಗೋಲ ರಾಯನೆ | ಚೆಲುವಿಕೆಯ ಭಂಡಾರ ಬರುತದೆ |
ತೊಲಗೆಲವೊ ನೀರೆಯರ ಸೃಷ್ಟಿಗೆ ಕಳಸ ಬರುತಲಿದೆ ||
ತೊಲತೊಲಗೊ ಪಾಂಚಾಲ ರಾಯನ | ಕುಲತಿಲಕ ಬರುತ್ತದೆಯೆನುತ ಮಿಗೆ |
ನೆಲನನುಗ್ಘಡಿಸುತ್ತ ನಡೆದರು ವೇತ್ರಧಾರಿಗಳು ||| (೩೬-೪೧)

ಸರೋವರವನ್ನು ಪ್ರವೇಶಿಸಿದ ಕೌರವನನ್ನು ಹೊರಕ್ಕೆಬ್ಬಿಸಲು ಭೀಮನು ಅಬ್ಬರಿಸುವ ಮಾತುಗಳು ಕಾವ್ಯದಲ್ಲಿ ಸೊಗಸಾಗಿ ಬಂದಿವೆ. ಅಂಥವುಗಳಲ್ಲಿ ಒಂದು ವಿಶೇಷಪದ್ಯ ಹೀಗಿದೆ –

ಮುಳಿದು ಬಂದೊಡೆ ಕೊಲುವೆ, ಕೈದುವ | ನಿಳುಹಿ ಬಂದೊಡೆ ಕಾವೆನಗ್ರಜ |
ನಿಳೆಯ ನಿತ್ತಪೆನೆಂದೊಡಗ್ರಜನೆಂದು ವಂದಿಸುವೆ ||
ತಖೆದವೈ ಜಿನದೀಕ್ಷೆಯುಮನೆನ | ಲೊಲಿದು ಬಂದು ನಮೋಸ್ತು ಮಾಡುವೆ |
ನುಳಿದ ಕಾರ್ಯವನರಿಯೆನಿವರೊಳಗೊಂದ ಹಿಡಿಯೆಂದ || (೫೮-೧೦)

ಇಲ್ಲಿ ಭೀಮನ ಬಹುಮುಖದ ಪರಿಚಯವಾಗುತ್ತದೆ. ಅವನ ಶೌರ್ಯ, ಅವನ ಕ್ಷಾತ್ರಧರ್ಮ, ಸನ್ನಡತೆಯ ಹಿರಿಯರಲ್ಲಿ ಅವನಿಗಿರುವ ಗೌರವ ಮತ್ತು ಜಿನಮುನಿಗಳಲ್ಲಿ ಅವನಿಗಿರುವ ಭಕ್ತಿ – ಇವೆಲ್ಲವು ಒಂದೇ ಪದ್ಯದಲ್ಲಿ ಚಿತ್ತಾಕರ್ಷಕವಾಗಿ ಅಭಿವ್ಯಕ್ತಗೊಂಡಿದೆ. ದೀಕ್ಷಿತನಾದರೆ ನಮೋಸ್ತು ಮಾಡುವೆ ಎಂಬ ಭಾವ, ಜೈನ ಮಹಾಭಾರತದ ಭೀಮನಿಗೆ ಮಾತ್ರ ಸಾಧ್ಯವಾಗುವಂಥದು.

ನೇಮಿನಾಥನ ಬದುಕಿನಲ್ಲಿ ಆತನ ವೈರಾಗ್ಯೋದಯದ ಸಂದರ್ಭ ಬಹು ಮಹತ್ವವಾದುದು. ಅದು ಶ್ರೀಕೃಷ್ಣನಿಗೆ ರಾಜಕೀಯ ತಂತ್ರವಾದರೆ, ಶ್ರೀನೇಮಿಜಿನನಿಗೆ ಅಹಿಂಸಾ ತತ್ತ್ವವನ್ನು ಪ್ರತಿಪಾದಿಸುವ ಪ್ರಸಂಗವಾಗಿದೆ. ಅದನ್ನು ಸಾಳ್ವಕವಿ ಹೀಗೆ ಚಿತ್ರಿಸಿದ್ದಾನೆ.-

ಕೃಷ್ಣ, ಬಲರಾಮ, ನೇಮಿ ಮೊದಲಾದವರೆಲ್ಲ ವನವಿಹಾರಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಬಿನದದೋಕುಳಿ ಆಡುತ್ತಾರೆ. ಅಲ್ಲಿ ನೇಮಿಕುಮಾರನನ್ನು ಸಾವಿರ ಎಸಳಿನ ತಾವರೆಯ ನಡುವೆ ಇರಿಸಿ, ಅವನ ಮೇಲೆ ಚಂದನರಸವನ್ನು ಸುರಿಸಿ, ‘ಚಂದ್ರಜಿನೇಶ’ನ ಹಾಗೆ ಕಾಣುವ ಆತನನ್ನು ಒಲವಿನಿಂದ ವಂದಿಸುತ್ತಾರೆ. ಓಕುಳಿಯನಂತರ ತಾನುಟ್ಟುದನ್ನು, ಕೃಷ್ಣನ ಸಂಕೇತದಂತೆ, ಸತ್ಯಭಾಮೆಯ ಕೈಗೆ ನೀಡುವಾಗ, ಆಕೆ ಕೈಯನ್ನು ಹಿಂತೆಗೆದುಕೊಂಡು, “ನಾನು ಕೃಷ್ಣನ ರೂಢಿಸಿದ ಹಿರಿಯರಸಿಯಲ್ಲೆನೆ, ನಿನ್ನ ಮೈಲಿಗೆಯ ಪಾಡಳಿದು ಪಿಡಿವೆನೆ?” ಎಂದು ಚುಚ್ಚು ನುಡಿಯುತ್ತಾಳೆ. ಆಗ ಅಲ್ಲೆಯಿದ್ದ ಪ್ರೌಢೆ ರುಕ್ಮಿಣಿಯು, ಆ ಬಟ್ಟೆಯನ್ನು ತಾನು ತೆಗೆದುಕೊಂಡು, “ಕೆಟ್ಟಾಡಬಹುದೇ ಅಕ್ಕ…” ಜಿನನ ಜನ್ಮಸ್ನಾನ ಪರಿಪಾವನ ಜಲವನು ಇಂದ್ರಾದ್ಯರಾಂಪರು ಮನಮೊಸೆದು ಮಸ್ತಕದೊಳು…. ಅಮರರು ಜಿನಗೆ ಬೆಸಕೆಯಿವರು” – ಎನ್ನುತ್ತಾಳೆ. ಆಗ –

ರುಗುಮಿಣಿಯ ನುಡಿಗೇಳಿ ಮನದೊಳು ಚಿಗುರೆ ಮುನಿಸೆಲೆ ಭೀಷ್ಮಜೆಯೆ
ಕೇಳು ಗಡ ಪೂತಿನಿ ಮುಖ್ಯರನು ಬಾಲ್ಯದಲಿ ಬಡಿದಂತೆ |
ನಗವನೆತ್ತಿದವೊಲು, ಹರಿಯು ಪನ್ನಗನ ಪಕ್ಕೆಯನೇರಿ ಶಾರ್ಙ್ಗವ
ಬಿಗಿದು ಶಂಖವನೂದಿದವೊಲತಿ ಬಲರು ಅದಾರು ಎನಲು || ೫೮-೬೦)

ಅರೆ ಮರುಳಲಾ ಅಕ್ಕ ಕೇಳೀ ನರರ ಸತ್ವವಿದೇನು, ಈ ಭೂ
ಧರನು ಗರ್ಭಕ್ಕೊಗೆಯದತ್ತರುದಿಂಗಳೆಂಬುದು |
ಸುರಪತಿಯ ಸಿಂಹಾಸನವ ತಾವರೆಯೆಲೆಯ ನೀರಂತೆ ನಡುಗಿಸಿ
ದುರು ಮಹಿಮನಲ್ಲವೆ ವಿಚಾರಿಸಿ ಕೇಳು ಹೇಳುವೆನು      || ೫೮-೬೧)

– ಹೀಗೆ ವಾಗ್ವಾದದನಂತರ ಎಲ್ಲರು ನಗರಕ್ಕೆ ಹಿಂದಿರುಗುತ್ತಾರೆ. ಆದರೆ ಸತ್ಯಭಾಮೆಯ ಗರ್ವವಚನದಿಂದ ನೇಮೀಶನಿಗೆ ಇನಿಸು ಮುನಿಸಲಾಯಿತು. ಅವನು ನೇರವಾಗಿ ಆಯುಧಾಗಾರಕ್ಕೆ ಆಗಮಿಸಿ, ಅಹಿಶಯ್ಯೆಯನ್ನು ಏರಿ, ಎಡಗೈಯಿಂದ ಶಾರ್ಙ್ಗವನ್ನೇರಿಸಿ, ‘ಆಗಳೆ ಚೀರಿಸಿದನಾ ಪಾಂಚಜನ್ಯದ ಮೂಗಿನಲಿ’. ಆ ಧ್ವನಿಗೆ ‘ದಿಗಿಭವು ಹಾರಿಬಿದ್ದವು, ನಡುಗುತಿರ್ದುದು ಮೂರು ಲೋಕವು’. ಆಗ ‘ಬಲನು ದುರ್ಬಲನಾಗಿ ಮಿಗೆ ನೇಗಿಲನು ಹಿಡಿದನು’. ಕಂಸಾರಿ ಚಿಂತೆಯಲಿ ಮುಳುಗಿದನು. ಕಾವಲುಗಾರರು ನಡೆದ ಘಟನೆಯನ್ನು ಬಿನ್ನಹ ಮಾಡಿದರು. ಆಗ ಕೃಷ್ಣ ಏಕಾಂತದಲ್ಲಿ ಬಲರಾಮನೊಂದಿಗೆ, “ಕೇಳಗ್ರಜನೆ, ನಮ್ಮನುಜ ಇಂದ್ರವಂದ್ಯನು ಅನಂತ ವೀರ್ಯ, ವಸುಂಧರೆಗೆ ಕ್ರಮದಿಂದರಸು ಬೇಕೆಂದು ಮದ್ರಾಜ್ಯವನು ಸೆಳೆದಡೆ ಕಾವನಾರು?” – ಎಂದು ಪ್ರಶ್ನಿಸುತ್ತಾನೆ.

“ಎಲೆ ಮುರಾಂತಕ, ಅರಿಯದವರಂತೊಳರಲೇತಕೆ?
ಕಲ್ಪತರುವಿರೆ, ಕೊಳೆತ ಕಡ್ಡಿಗೆ ಬಯಸುವರೆ?
ವರಮುಕ್ತಿ ಸಾಮ್ರಾಜ್ಯ ಲಲನೆಯೊಕ್ಕತನುವುಳಿದು
ನಮ್ಮಿಳೆಗೆ – ಜಾರೆಗೆ – ಮೋಹಿಸುವ
ಕಟ್ಟಳಿಮನವು ತೀರ್ಥಂಕರರಿಗಿರಿದು “

– ಎಂದು ಬಲರಾಮ ಸಮಾಧಾನ ಮಾಡುತ್ತಾನೆ. ಆದರೆ ಕೃಷ್ಣ ಹಿಂದಿನ ಅನೇಕ ತೀರ್ಥಂಕರರು ಚಕ್ರವರ್ತಿಗಳಾಗಿರುವುದನ್ನು ನೆನಪಿಸುತ್ತಾನೆ. ಆಗ ಬಲರಾಮನು –

ಅವರಿಗಾ ಲಕ್ಷ್ಮಿಗಳು ಪುಣ್ಯದ ತವಕದಿಂದ ಒಲಿತಂದವಲ್ಲದೆ
ಅವರು ತಜ್ಜನ್ಮದಲಿ ಕಾಮಿಸಿ ಪಡೆದುದಿಲ್ಲ.

– ಎಂದು ನಿಜಸ್ಥಿತಿಯನ್ನು ತಿಳಿಸುತ್ತಾನೆ. ಆದರೂ ಬಲನುಕ್ತಿಗೆ ಜನಾರ್ಧನನು ಸಮಾಧಾನಗೊಳ್ಳದೆ “ಕುವರಗತಿ ವೈರಾಗ್ಯವನು” ಉಂಟು ಮಾಡಬೇಕೆಂದು ನಿರ್ಧರಿಸುತ್ತಾನೆ. ತನ್ನೀ ಯೋಜನೆಯ ಅಂಗನಾಗಿ ಮಹಾರಾಜ ಸಮುದ್ರವಿಜಯನಾದಿಯಾಗಿ ಎಲ್ಲರನ್ನು ನೇಮಿಕುಮಾರನ ವಿವಾಹಕ್ಕೆ ಒಪ್ಪಿಸುತ್ತಾನೆ. ಉಗ್ರಸೇನನ ಪುತ್ರಿ ರಾಜೀಮತಿಯನ್ನು ಗೊತ್ತು ಮಾಡುತ್ತಾನೆ. ವಿವಾಹ ಮಂಟಪ ಸಿದ್ಧಗೊಂಡಿತು. ಅಂದದ ಅಲಂಕರಾವಾಯಿತು. ಸಂಭ್ರಮದಿಂದ ದಿಬ್ಬಣ ಹೊರಟಿತು. ಉದ್ವಾಹಗೇಹದ ಸನಿಹದಲ್ಲೆ –

ಅಂತಕನ ಬಾಯಂತೆ ಕಂಟಕವಾದ ಗೇರೆಯದೊಳಗೆ ಮೃಗಗಳ |
ಸಂತತಿಯು ಕಡು ಹಸಿದು ಗೋಳಿಡುತಿರ್ದುದು ಎಡೆಬಿಡದೆ ||

ದಯಾಪರನಾದ ನೇಮಿಕುಮಾರನು ಆನೆಯನ್ನು ನಿಲ್ಲಿಸಿ, “ಅಗಣಿತ ಮೃಗಗಣದ ವನದಿ ಸದೆದು ತಂದವರಾರು? ಘೊಳಿಟ್ಟೊದರುತವೆ, ಕಡು ಹಸಿದುದೇಕೆ?”- ಎಂದು ಶಬರರನ್ನು ವಿಚಾರಿಸುತ್ತಾನೆ. ಅವರು ಹರಿಯು ಮುಂಕಲಿಸಿದಂದಿ ಹೇಳುತ್ತಾರೆ –

ದೇವ ನಿಮ್ಮಯ ಮದುವೆಗೆಂದಖಿಳಾವನೀಜನ ಬಂದುದದರಿಂ |
ದೇವರರ್ತಿಯನೀಕ್ಷಿಸುತ್ತಿರೆ, ಮೃಗಗಳನು ಕಡಿದು ||
ತೀವಿ ನೆತ್ತರ ಪೊಳೆಯ ನೆರೆ ಮಾಂಸಾವಳಿಯನರಿದಟ್ಟು ಕೆಲಬರಿ
ಗೀ ವಿಧದ ಭೋಜನಕೆ ತರಿಸಿದನೆಂದನಾ ವ್ಯಾಧ || (೫೯-೧೭ ||

ಕೊಂದುಮಾಡುವ ಧರ್ಮದಂತೆಮಗಿಂದು ಬಂದುದು ಮದುವೆ, ನೊಳವನು
ತಿಂದು ತಪಗೆಟ್ಟಂತೆ, ಈ ಜೀವಂಗಳನು ಕೊಲಿಸಿ ||
ಬೆಂದ ಮದುವೆಯ ಲೇನು ಫಲವಾ ಸೌಂದರ್ಯರೇಂ ಸುಖವೆನಿತ್ತಪ
ಳೆಂದು ಪೇಸಿದನು ಅರಿದನು ಅವಧಿಯಿನ್ ಅಗಳದರ ಇರಿವ || (೫೯-೧೮)

ಪಲಬರುಂಡು ಬಿಸುಟ್ಟು ಪುಲ್ಲಿಗೆನಿಳೆಗೆಳಸಿದಪೆ ನಾನೆನುತ ಹರಿ
ಯಳಿಮನದ ಶಂಕೆಯನು ತಳೆದೀ ಕೃತಕವೊಡ್ಡಿದನೆ?
ಇಳೆಯ ಲೋಭವದೇನ ಮಾಡದು ? ಹುಳು ನೆಯಿದ ಬಲೆಯೊಳಗೆ ಸಿಲುಕುಗು
ನೊಳವನಲ್ಲದೆ, ಭದ್ರಗಜ ಸಿಲುಕುವುದೆ ಹೇಳೆಂದ || (೫೯-೧೯)

ಮನದಲ್ಲಿ ಧರೆ ನನ್ನದೆಂದು ಭಾವಿಸುವ ತಿರುಕನಿಗೂ ದುರ್ಗತಿ ಸಂಭವಿಸುವುದು. ಅಂಥದರಲ್ಲಿ ಇಳೆ ತನ್ನದೆಂದು ಮನಃಪೂರ್ವಕವಾಗಿ ಭಾವಿಸುವವನು ಮೇಲೇಳಬಲ್ಲನೆ ? ಕುಸಿದು ಕೆಳಗೆ ಬೀಳನೆ? ಎಂದು, ‘ರಾಜ್ಯ ವಿರಕ್ತಿಯನ್ನು ಮನದೊಳಗೆ ಭಾವಿಸಿದ.’

“ಮೃಗತತಿಯನು ಅಡವಿಗೆ ಬಿಡಿಸಿ, ವಿವಾಹ ಕಾರ್ಯವನ್ನು ನೆರವೇರಿಸುವ” – ಎಂದ ತಂದೆಗೆ, “ದುರ್ಗತಿಗೆ ಕಾರಣವಾದ ಮದುವೆಯಲೇನು ಫಲ?… ತಳೆವೆನುತ್ತಮ ಮೋಕ್ಷ ಲಕ್ಷ್ಮೀ ಲಲನೆಯೊಳು ಪರಿಣಯವನು” ಎಂದು ತಿಳಿಸಿದೊಡನೆಯೆ, ‘ಪುರಜನದ ಪರಿಜನದ ಚಿತ್ತದ ಸರಸ ವಿರಸವಾದುದು’.

ತಂದೆ-ತಾಯಿ, ಬಂಧು-ಬಳಗ ಎಲ್ಲವನ್ನು ಕರೆಯಿಸಿ, “ಇನಿತು ನೋಯಲದೇಕೆ? ಮೋಕ್ಷಾಂಗನೆಗೆ ಮೆಚ್ಚಿದ ಮನವು, ಮಿಕ್ಕ ವನಿತೆಯರಿಗೆ ಎಳಸುವುದೆ?” ಎಂದು ಕೇಳಿದುದಲ್ಲದೆ, ಚತುರ್ಗತಿಯಲ್ಲಿರುವ ದುಃಖವನ್ನು ಅವರಿಗೆ ಮನವರಿಕೆ ಮಾಡಿಸಿ, ಅವರೆಲ್ಲರ ಅನುಮತಿ ಪಡೆದು, ಎಲ್ಲವನ್ನು ತೊರೆದು, ಸ್ವಯಂ ದೀಕ್ಷಿತನಾದನು.

‘ನೇಮಿನಾಥ ಚರಿತೆ’ಯಲ್ಲಿ ವಿಂಧ್ಯಕ-ವಾಗುರೆಯ, ನಂದಿಯ, ಸೂರದತ್ತ-ಸುದತ್ತ ವರ್ತಕರ, ಚಾರುದತ್ತನ, ಕಾಮನ ಹಾಗೂ ಕೌರವ ಪಾಂಡವರ ಕಥೆಗಳು ಬರುತ್ತವೆ. ಇಲ್ಲಿ ಬರುವ ಕೃಷ್ಣ – ಜರಾಸಂಧನ (ನಾರಾಯಣ – ಪ್ರತಿನಾರಾಯಣರ) ಮಹಾಯುದ್ಧದಲ್ಲಿ ಕೌರವ ಪಾಂಡವರ ಯುದ್ಧವೂ ಸೇರಿ ಹೋಗಿದೆ. ಇದೊಂದು ಮಧ್ಯಮ ವರ್ಗದ ಕಾವ್ಯ. ಈ ಕಾವ್ಯದ ಉದ್ದಕ್ಕೂ ಗಾದೆ ಮಾತುಗಳು, ಜಾಣ್ಣುಡಿಗಳು, ಜೀವನ ಮೌಲ್ಯವನ್ನು ಪ್ರತಿಪಾದಿಸುವ ಸೂಕ್ತಿಗಳು ಹೇಳರವಾಗಿ ಲಭಿಸುತ್ತವೆ. ಅಂಥ ಕೆಲವು ಸೂಕ್ತಿಗಳು ಹೀಗಿವೆ –

ಕಾಲ ಲಬ್ಧಿಯ ಮಹಿಮೆ ಕಡು ಬಡವೆ? (೨೦-೭೭), ಕೋಪದಿ ಕೆಡದವರಾರ್? (೬೪-೬), ಧರ್ಮವನು ನಂಬಿದವಗೆ ಕೇಡುಂಟೆ (೭-೮), ಪವಿತ್ರ ದಾನದಿನೇನು ಸಮನಿಸದೋ ? (೬೦-೧೦), ಭೂಪರ ಮಾತು ಸಕ್ಕರೆ ಮನವು ಕತ್ತರಿ (೧೫-೬), ಮುನಿಸು ಮುನಿಗಪಮಾನ (೩೮-೩೬), ಯಾರು ಮಾರಾಧಿಸದೆ ಸೌಖ್ಯವು ಬಯಸಿದಡೆ ಬಹುದೆ? (೩-೩೨), ವಿಷವಮೃತವಾಗದೆ ಶುಭೋದಯದಿ ?! (೨೮-೧೨), ಧರೆಯೊಳಾರ್ ಒಳಕೊಂಬರೈ ದುರ್ನಯ ವಿದಗ್ಧರನು (೫೫-೫), ಮುಂಗೈಯ ಕಂಕಣಕೇಕೆ ಕನ್ನಡಿ ? (೫೬-೫೬).

ರಸರತ್ನಾಕರಂ :

ಇದೊಂದು ಅಲಂಕಾರ ಗ್ರಂಥ. ಇದರ‍ಲ್ಲಿ ನಾಲ್ಕು ಪ್ರಕರಣಗಳಿವೆ. ಸೂತ್ರ ಮತ್ತ ವೃತ್ತಿಯ ರೂಪದಲ್ಲಿದೆ. ಅಲ್ಲಲ್ಲಿ ವಚನಗಳಿವೆ. ಪ್ರಾಚೀನ ಕನ್ನಡ ಗ್ರಂಥಗಳಿಂದ ಉದಾಹರಣೆಗಳನ್ನು ಕೊಟ್ಟಿದ್ದಾನೆ. “ರಸಮಿಲ್ಲದ ಕಾವ್ಯಂ ನೀರಸಮ್, ಅದಱಿಂ ಕೃತಿಗೆ ರಸಮೆ ಸಾರಂ” ಎಂದಿದ್ದಾನೆ. ಶೃಂಗಾರ ಪ್ರಪಂಚ ವಿವರಣಂ, ನವರಸ ಪ್ರಪಂಚಂ, ನಾಯಕ ನಾಯಿಕಾ ವಿವರಣಂ, ವ್ಯಭಿಚಾರ ಭಾವ ವಿವರಣಂ – ಎಂಬ ನಾಲ್ಕು ಪ್ರಕರಣಗಳಲ್ಲಿರುವ ಮುಖ್ಯಾಂಶಗಳನ್ನು ಶ್ರೀ ಎಚ್.ಕೆ. ನರಸಿಂಹೇಗೌಡರು ಹೀಗೆ ಸಂಗ್ರಹಿಸಿದ್ದಾರೆ. –

“ಭಾವ, ವಿಭಾವ, ಅನುಭಾವ, ಸಂಚಾರಿಭಾವ ಇವುಗಳಿಂದ ರಸೋತ್ಪತ್ತಿಯಾಗುತ್ತ ದೆಂದು ಹೇಳಿ ಗ್ರಂಥವನ್ನು ಆರಂಭಿಸಿದ್ದಾನೆ. ಅನಂತರ ವಿಭಾವಾದಿಗಳ ವಿವರಣೆಯನ್ನು ಕೊಡುತ್ತಾನೆ. ರಾಗ ಅಭಿನಯವನ್ನೊಳಗೊಂಡ ಸ್ಥಾಯಿ ವ್ಯಭಿಚಾರಿ ಲಕ್ಷಣವುಳ್ಳ ಚಿತ್ತವೃತ್ತಿ ಭಾವವೆನಿಸುತ್ತದೆ. ಈ ಚಿತ್ತವೃತ್ತಿಗಳು ಸ್ಥಾಯೀಭಾವಗಳನ್ನು ಉದ್ಬೋಧಗೊಳಿಸುವುದರಿಂದ ಸಾಮಾಜಿಕನು ಅನುಭವಿಸುವುದರಿಂದ ಅನುಭಾವವೆನಿಸುತ್ತದೆ. ಸ್ಥಾಯಿ, ವ್ಯಭಿಚಾರಿಭಾವಗಳಿಗೆ ವಿವರಣೆ ಕೊಟ್ಟು, ರಸ ವಿಭಾವಾದಿಗಳಿಂದ ಅಭಿವ್ಯಕ್ತವಾಗುತ್ತದೆಯೇ ಹೊರತು ಅವುಗಳ ಕಾರ್ಯವಲ್ಲವೆಂದೂ, ವಿಭಾವಾದಿ ವ್ಯಭಿಚಾರಿಭಾವಗಳಿಂದ ರಸ ಅಭಿವ್ಯಕ್ತವಾಗಬೇಕೇ ಹೊರತು “ಒಂದೊಂದಱಿಂದಾದೊಡದುಂ ವ್ಯಭಿಚಾರಮಪ್ಪುದು” ಎಂದು ಹೇಳುತ್ತಾನೆ. ಸೂತ್ರ ೩, ೪, ೫, ೬ರಲ್ಲಿ ರಸಹುಟ್ಟುವ ಬಗೆ, ರಸಜ್ಞಾನದ ಪ್ರಕಾರ, ಭಾವ ವಿಭಾವಾನುಭಾವಗಳ ಸ್ವರೂಪ ವಿವರಣೆ, ಸ್ಥಾಯಿ, ಸಾತ್ವಿಕ, ವ್ಯಭಿಚಾರಿಗಳ ಸ್ವರೂಪ ವಿವರಣೆ, ಸಭಾಸದರಲ್ಲಿ ರಸೋತ್ಪತ್ತಿಯಾಗುವ ಬಗೆಯನ್ನು ಕುರಿತು ಹೇಳಿದ್ದಾನೆ. ರತಿ, ಪರಿಹಾಸ, ಶೋಕ, ಉತ್ಸಾಹ, ಪ್ರಕೋಪ, ವಿಸ್ಮಯ, ಭಯ, ಜುಗುಪ್ಸೆ, ಶ್ರಮವೆಂದು ಒಂಬತ್ತು ಸ್ಥಾಯಿ ಭಾವಗಳು. ಪುಲಕಾಶ್ರು ಸ್ವೇದ ಸ್ಥಂಭ ಲಯ ಸ್ವರ ಭೇದ ಕಂಪ ವೈವರ್ಣ್ಯಂಗಳ್ ಎಂಬುದಾಗಿ ಎಂಟು ಸಾತ್ವಿಕಭಾವಗಳು. ‘ಭ್ರುಕುಟಿ ಮುಖರಾಗ ಲೋಚನ’, ‘ವಿಕೃತ್ಯಧರ ಕಂಪನಾತ್ತಕರ ಚರಣನ್ಯಾಸಕ ವಾಗಾದ್ಯಂಗ ಕ್ರಿಯೆ’, ಸುಕವಿಗಳಿಂದ ಅನುಭಾವವೆಂದು ಹೇಳಲ್ಪಡುತ್ತದೆ, ಮತ್ತು ಮತಿ, ಲಜ್ಜೆ, ವೇಗ, ಶಂಕೆ ಮೊದಲಾದ ಮೂವತ್ತುಮೂರು ವ್ಯಭಿಚಾರಿಭಾವಗಳಿವೆ. ಶೃಂಗಾರ, ಹಾಸ್ಯ, ಕರುಣ, ವೀರ, ರೌದ್ರ, ಅದ್ಭುತ, ಭಯಾನಕ, ಬೀಭತ್ಸ ಮತ್ತು ಶಾಂತರಸವೆಂದು ನವರಸಗಳಿವೆ. ಈ ನವರಸಗಳೆಲ್ಲವನ್ನು ವರ್ಣಿಸಿ ಅವುಗಳಿಗೆ ಅಧಿದೇವತೆಗಳಾವುವು ಎಂಬುದನ್ನು ಪ್ರಸ್ತಾಪಿಸಿದ್ದಾನೆ.

ಶೃಂಗಾರ ರಸದಲ್ಲಿ ಎರಡು ಬಗೆ ೧. ಸಂಭೋಗ ಶೃಂಗಾರ ೨. ವಿಪ್ರಲಂಬ ಶೃಂಗಾರ. ಶೃಂಗಾರ ರಸದ ಆಲಂಬನ ಉದ್ದೀಪನ ವಿಭಾವಗಳು. ಶೃಂಗಾರ ರಸದ ಅನುಭಾವ, ಸಾತ್ವಿಕ ಭಾವ, ವ್ಯಭಿಚಾರಿ ಭಾವಗಳು, ಅಲ್ಲದೆ, ಶೃಂಗಾರ ರಸದ ಅವಸ್ಥೆಗಳನ್ನು ಹೇಳಿ ಲಕ್ಷ್ಯಪದಗಳೊಡನೆ ಉದಾಹರಿಸಿ

ಪರಿಣಾಮವನಂತಂ ವ್ಯವ
ಹರಿಸುವುದವಱವಸ್ಥೆ ನೆಗೞ್ದುವನಂತಂ
ಪರಿಭಾವಿಸುವೊಡೆ ರಸವಿ
ಸ್ತರಮಂ ವಿವರಿಸುವೆನೆಂಬನಾವನುಮೊಳನೇ

ಎಂದು ಹೇಳಿದ್ದಾನೆ. ಅಂತಿಮವಾಗಿ ಈ ಎಲ್ಲಾ ಅವಸ್ಥೆಗಳು ಕೇವಲ ಸ್ತ್ರೀಯರಲ್ಲಿ ಮಾತ್ರ ಉಂಟಾಗುತ್ತವೆ ಎನ್ನುವುದು ಸರಿಯಲ್ಲ. ಉಚಿತ ವಿಧಿಯಿಂದ ಪುರುಷರಲ್ಲಿಯೂ ಉಂಟಾಗುತ್ತವೆ ಎಂದು ಹೇಳಿದ್ದಾನೆ.

ಶೃಂಗಾರ ರಸವನ್ನು ಒಂದು ಅಧ್ಯಾಯದಲ್ಲಿ ಪೂರ್ತಿಯಾಗಿ ವಿವರಿಸಿದ ನಂತರ, ಎರಡನೆಯ ಅಧ್ಯಾಯದಲ್ಲಿ ಹಾಸ್ಯರಸ, ಕರುಣರಸ, ವೀರರಸ, ರೌದ್ರರಸ, ಅದ್ಭುತರಸ, ಭಯಾನಕರಸ, ಬೀಭತ್ಸರಸ, ಶಾಂತರಸ ಇವುಗಳ ಲಕ್ಷಣ, ಇವುಗಳ ಭಾವಕಥನ, ತದನುಭಾವ ಸಾತ್ವಿಕಭಾವಕಥನ ಮತ್ತು ಈ ರಸಗಳ ವಿವರಣೆ ಮತ್ತು ವಿಭೇದಗಳನ್ನು ಲಕ್ಷ್ಯಪದ್ಯಗಳೊಂದಿಗೆ ಉದಾಹರಿಸುತ್ತಾನೆ. “ಶಾಂತರಸಂ ವಿಷಯ ಜಗುಪ್ಸಾರೂಪತ್ವಮಾಗಿಯುಂ ಬೀಭತ್ಸ ದೊಳಂತರ್ಭಾವಮಲ್ತು, ಜುಗುಪ್ಸೆ ಇದರ್ಕೆ ವ್ಯಭಿಚಾರಿಯಪ್ಪುದೆಱಿಂದದು ತಾಂ ಸ್ಥಾಯಿತ್ವ ಮನೆಯ್ದದು. ತಾನೆಂತೆಂದೊಡೆ; ಶಾಂತರಸ ಪರಿಪೂರ್ಣತೆಯೊಳದು ನಿಮೂರ್ಲಮಪ್ಪುದಱಿಂ; (ಧರ್ಮ) ವೀರದೊಳಂತರ್ಭಾವ ಮೆಂದೊಡದುವುಮಲ್ತು. ವೀರರಸಮಭಿಮಾನ ರೂಪತ್ವಂ, ಶಾಂತರಸಮಹಂಕಾರೋಪಶಮೈಕ ರೂಪತ್ವಂ. ಅದಱಿಂ ವೀರಶಾಂತಕ್ಕೇಕತ್ವಪರಿಕಲ್ಪನಮಾಗದು. ಅಂತಾದೊಡೆ ವೀರ ರೌದ್ರಕ್ಕಮೇಕತ್ವಮಪ್ಪುದಱಿಂ ಧರ್ಮವೀರಾದಿಗಳ ಚಿತ್ತವೃತ್ತಿ ವಿಶೇಷಂಗಳವು ಸರ್ವಾಹಂಕಾರಂಗಳ್, ಅಹಂಕಾರ ರಹಿತಂ ಶಾಂತರಸಂ, ಈ ಪಾಂಗಿಂ ಸ್ಥಾಪಿಸಿದೊಡೇನುಂ ವಿರೋಧಮಾಗದು.” ಹೀಗೆ ಒಂಭತ್ತು ರಸಗಳು ಬೇರ್ಪಡಿಸಲ್ಪಟ್ಟಿವೆ. ಶೃಂಗಾರದಿಂದ ಹಾಸ್ಯ, ರೌದ್ರದಿಂದ ಕರುಣ, ವೀರದಿಂದ ಅದ್ಭುತ ಮತ್ತು ಬೀಭತ್ಸದಿಂದ ಭಯಾನಕ ರಸಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೆ,

ಕರುಣರಸಕ್ಕೆ ವೀರಂ
ದೊರೆಕೊಳೆ ಶೃಂಗಾರರಸಕ್ಕೆ ಬೀಭತ್ಸಂ ರೌ
ದ್ರರಸಕ್ಕಮದ್ಭುತಂ ವೀ
ರ ರಸಕ್ಕೆ ಭಯಾನಕಂ ವಿರೋಧಿಗಳಕ್ಕುಂ

ಎಂದು, ರಸಸಂಕರ ಮತ್ತು ವಿರುದ್ಧರಸಗಳನ್ನು ಕುರಿತು ಪ್ರಸ್ತಾಪಿಸಿದ್ದಾನೆ. ನಾಗವರ್ಮನು ಕಾವ್ಯಾವಲೋಕನದಲ್ಲಿ ಕರುಣರಸಕ್ಕೆ ಮಿಗೆ ಹಾಸ್ಯರಸಂ….. ನಿರೋಧಮಕ್ಕುಂ ಎಂದಿರುವುದರಿಂದ ಇಲ್ಲಿ ನಾಗವರ್ಮನ ಮತವನ್ನು ಅನುಸರಿಸಿದ್ದಾನೆ.

ಬೆರೆಸದವೊಲಿರ್ಕೆ ಶೃಂಗಾ
ರರಸಂ ಬೀಭತ್ಸದೊಳ್ ಭಯಂ ರೌದ್ರದೊಳಂ
ಕರುಣಂ ರಸದೊಳ್ ವೀರಂ
ಪರಿಹಾಸದೊಳದ್ಭುತಂ ವಿರೋಧವಿದೆಂದುಂ

ಇದು ಕವಿಕಾಮನ ಶೃಂಗಾರರತ್ನಾಕರದಲ್ಲಿರುವುದರಿಂದ ಕವಿಕಾಮನ ಮತವಾಗಿರುತ್ತದೆ.

ಮತ್ತು ಗಣೇಶ್ವರಾಜ್ಞಿಕೃತ ಸಾಹಿತ್ಯ ಸಂಜೀವನದಲ್ಲಿ. “ಶೃಂಗಾರಕ್ಕೆ ವೀರ ರೌದ್ರ ಬೀಭತ್ಸ ಕರುಣಾಶಾಂತಗಳರಿಗಳ್, ಹಾಸ್ಯಕ್ಕೆ ಕರುಣ ಭಯನಾಕಂ ರಿಪು; ಕರುಣಕ್ಕೆ ಹಾಸ್ಯ, ಶೃಂಗಾರ ರೌದ್ರ ಶಾಂತಂ(ಗಳ್) ವಿರೋಧಿ; ಭಯಾನಕಕ್ಕೆ ವೀರವಮಿತ್ರಂ ರೌದ್ರಕ್ಕೆ ಹಾಸ್ಯಾದ್ಭುತಂ ಶಾಂತಂ (ಶೃಂಗಾರಂ) ಶತ್ರು; ವೀರಕ್ಕೆ ಭಯಾನಕಂ ಪಗೆ; ಅದ್ಭುತಕ್ಕೆ ರೌದ್ರಂ ಸಪತ್ನಂ; ಬೀಭುತ್ಸಗೆ ಶೃಂಗಾರಮರಿ; ಶಾಂತಕ್ಕೆ ಶೃಂಗಾರ ಮೆಚ್ಚದದಿಂತಱಿವುದು” ಎಂದು ಹೇಳಿ ಸಾಹಿತ್ಯ ಸಂಜೀವನದ ಸಮ್ಮತಿ ಪದ್ಯಗಳನ್ನು ಉದಾಹರಿಸಿ ವಿರುದ್ಧ ರಸಗಳ ಮತಾಂತರವನ್ನು ಪ್ರಸ್ತಾಪಿಸುತ್ತಾನೆ. ಕೊನೆಯದಾಗಿ ‘ನವರಸ ಪ್ರಪಂಚಂ’ ಎಂಬ ಈ ಪ್ರಕರಣದಲ್ಲಿ, ವಿರುದ್ಧರಸ ಸಮಾವೇಶ ದೋಷ ಲಕ್ಷ್ಯ, ವಿರುದ್ಧರಸ ಸಮಾವೇಶ ದೋಷಾಭಾವಲಕ್ಷಣಂ ಮತ್ತು ಸ್ಥಾಯಿ ವ್ಯಭಿಚಾರಿ ಭಾವವಿಚಾರಗಳನ್ನು ಕುರಿತು ವಿವರಿಸುತ್ತಾನೆ.

‘ನಾಯಕ ನಾಯಿಕಾ ವಿವರಣಂ’ ಎಂಬ ಮೂರನೆಯ ಪ್ರಕರಣದಲ್ಲಿ “ಇಂಬಾಗಿ ನವರಸಕ್ಕಾಲಂಬನಮಕ್ಕುಂ ಪೊದಳ್ದ ನಾಯಕರುಂ ನುಣ್ಪಿಂಬಿಡಿದ ನಾಯಿಕಾ ನಿಕುರುಂಬ ಮುಮಂತವರ ತೆಱನನು ಱೆ ಬಿಚ್ಚಳಿಪೆಂ” ಎಂದು ಹೇಳಿ ನಾಯಕ ನಾಯಿಕೆಯರ ಸಾಧಾರಣ ಲಕ್ಷಣ ಹಾಗೂ ನಾಯಕ ನಾಯಿಕೆಯರ ಎಲ್ಲಾ ಭೇದಗಳನ್ನು ಪ್ರಸ್ತಾಪಿಸಿ, ಪ್ರತಿಯೊಂದು ಭೇದವನ್ನೂ ಲಕ್ಷ್ಯಪದ್ಯಗಳೊಡನೆ ಉದಾಹರಿಸಿದ್ದಾನೆ.

‘ವ್ಯಭಿಚಾರಿಭಾವ ವಿವರಣಂ’ ಎಂಬ ನಾಲ್ಕನೆಯ ಪ್ರಕರಣದಲ್ಲಿ ಭಾವೋದಯ, ಭಾವಶಾಂತಿ, ಭಾವಸಂಧಿ ಮತ್ತು ಭಾವಶಬಲತ್ವ ಸ್ಥಿತಿಗಳಿಗೆ ವಿದ್ಯಾನಾಥನ ಮಾರ್ಗವನ್ನು ಅನುಸರಿಸಿದ್ದಾನೆ. ಮತ್ತು “ಸಮನಿಸಿ ಗಣಿಸಿದ ಮೂವತ್ತು ಮೂಱು ಸಂಚಾರಿ ಭಾವತತಿಗಾಂ ಪೇೞ್ವೆಂ ಕ್ರಮದೆ ವಿಭಾವಮನನುಭಾವಮನೊಪ್ಪುವ ಹೇಮಚಂದ್ರ ಸೂರಿಯ ಮತದಿಂ” ಎಂದು ಹೇಳಿ ವಿಭಾವಾದಿಗಳ ವಿವರಣೆಯನ್ನು ಕೊಟ್ಟು ವ್ಯಭಿಚಾರಿ ಭಾವಗಳ ನ್ಯೂನಾತಿರೇಕ ವಿಚಾರವನ್ನು ಲಕ್ಷ್ಯಪದ್ಯಗಳೊಡನೆ ವಿವರಿಸಿದ್ದಾನೆ.”

ಶಾರದಾವಿಲಾಸಂ :

ಇದು ಸಾಳ್ವಕವಿಯ ಮತ್ತೊಂದು ಅಲಂಕಾರ ಗ್ರಂಥ. ಪೂರ್ಣವಾಗಿ ದೊರಕಿಲ್ಲ. ಕೇವಲ ಧ್ವನಿ ಪ್ರಕರಣದ ದ್ವಿತೀಯ ಪರಿಚ್ಛೇದ ಮಾತ್ರ ಲಭ್ಯವಾಗಿದೆ. ಇದರ ಆರಂಭದಲ್ಲೇ ಕಾವ್ಯ, ಧ್ವನಿ, ವಾಚಕಂ, ಲಕ್ಷಣಂ ಹಾಗೂ ಶಬ್ದ ಮತ್ತು ಅರ್ಥಮೂಲದ ವ್ಯಂಜಕಂ – ಇವುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಅವುಗಳ ನಾನಾ ಪ್ರಭೇದಗಳನ್ನು ತಿಳಿಸಿ, ಅವುಗಳಿಗೆ ಪ್ರಾಚೀನ ಕಾವ್ಯಗಳ ಉದಾಹರಣೆಗಳನ್ನು ೬೧ ಪದ್ಯಗಳಲ್ಲಿ ನೀಡಲಾಗಿದೆ.

ವೈದ್ಯ ಸಾಂಗತ್ಯ :

ಇದು ಸಾಳ್ವಕವಿಯ ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ. ಸಾಂಗತ್ಯ ಛಂದಸ್ಸಿನಲ್ಲಿದೆ. ಪ್ರಾಚೀನ ಕಾಲದಿಂದಲೂ ಜೈನರಿಗೂ ವೈದ್ಯಶಾಸ್ತ್ರಕ್ಕೂ ನಿಕಟವಾದ ಸಂಬಂಧವಿದೆ. ಆ ಪರಂಪರೆಯಲ್ಲಿ ಬಂದ ಗ್ರಂಥ – ಸಾಳ್ವನ ವೈದ್ಯ ಸಾಂಗತ್ಯ.

ಕಾವ್ಯ, ಅಲಂಕಾರ ಮತ್ತು ವೈದ್ಯ ವಿಷಯಗಳಲ್ಲಿ ಕೃತಿ ರಚನೆಮಾಡಿರುವ ಸಾಳ್ವಕವಿಯ ಆಚಾರ್ಯ ಕೃತಿ – ಸಾಳ್ವಭಾರತ ಎಂಬ ಪ್ರಸಿದ್ಧಿ ಹೊಂದಿರುವ ‘ನೇಮಿನಾಥ ಚರಿತೆ’ಯೇ ಆಗಿದೆ. ಇದು ಮಧ್ಯಮ ವರ್ಗದ ಕಾವ್ಯ. ಆದರೂ ಕನ್ನಡದ ಇತರ ನೇಮಿನಾಥ ಕಥಾ ಕಾವ್ಯಗಳೊಂದಿಗೆ ತೌಲನಿಕ ಅಧ್ಯಯನ ನಡೆಸಬಹುದಾಗಿದೆ. ವಸ್ತುಕವಾಗಿದ್ದ ನೇಮಿ ತೀರ್ಥಂಕರನ ಕಥೆಯನ್ನು ವರ್ಣಕಕ್ಕೆ ತಿರುಗಿಸಿದ ಪ್ರಥಮ ಕೀರ್ತಿ ಸಾಳ್ವಕವಿಗೆ ಸಲ್ಲುತ್ತದೆ.