ಸಂಧಿ ೫೯
ನೇಮಿ ಲೋಕಸ್ವಾಮಿ ಮದುವೆಗೆ | ಆ ಮಹೋತ್ಸವದಿಂ ಬರುತನಿ |
ಸ್ಸೀಮ ದೀಕ್ಷಾಲಕ್ಷ್ಮಯೊಳು ಮದವಳಿಗ ತಾನಾದ || ಪದ ||
ಕೇಳು ಮಗಧಾಧೀಶ ನುತವನ | ಮಾಲಿಯಿರುತಿರುತೊಂದು ದಿನದಲಿ |
ತಾಳಲಾಂಛನ ಸಹ ಸಮುದ್ರ ವಿಜಯನೃಪಾಲಕನ ||
ಆಲಯಕೆ ನಡೆತಂದೆರಗಿ ಭೂ | ಪಾಲ ಚೂಡಾಮಣಿಯೆ ನೇಮಿಗೆ |
ಮೇಳಿಸಿತು ಯೌವನವು ಮದುವೆಯ ಮಾಡಬೇಕೆಂದ || ೧ ||
ಎಂದವರನಹುದೆನಿಸಿಯೆಲ್ಲರು | ಬಂದುಯದುಕುಲ ಮೌಳಿನೇಮಿಜಿ |
ನೇಂದುವನೊಡಂಬಡಿಸಿ ಮಂಗಲಕಾರ್ಯವನು ತಿಳುಹಿ ||
ಬಂದು ಬಳಿಕಾ ಉಗ್ರಸೇನನ | ಚಂದದಾತ್ಮಜೆಯನು ವಿಮಳಪೂ |
ರ್ಣೇಂದು ಮುಖಿಯನು ತರಿಸಿದನು ಭೂಪಾಲಕೇಳೆಂದ || ೨ ||
ಅತಿಚತುರ ವಿದ್ಯಾವಿಜಿತ ಭಾ | ರತಿಯ ನುಡಿತ ಪ್ರೇಮರಸ ಪಾ |
ರ್ವತಿಯ ನೂತನರತಿಯನಾ ರಾಜೀಮತಿಯ ಸತಿಯ ||
ಕ್ಷಿತಿವಿನುತರೈನೂರ್ವರವನೀ | ಪತಿಸುತೆಯನರೊಡವೆರಸಿ ಮೆರೆವ |
ಚ್ಚುತನು ತರಿಸಿದ ತನ್ನ ಮನೆಗವನೀಶ ಕೇಳೆಂದ || ೩ ||
ಬರೆ ಮುಹೂರ್ತಾಸನ್ನವಾಗಿರೆ | ಕರಮೆಸೆವ ನೀಲದನೆಲನು ಬಿ |
ತ್ತರದ ಪಳುಕಿನ ಕೇರುಪವಳದ ಕಂಬಹುಲಿಸಗಳ ||
ಪಿರಿಯವಾತಾಯನವು ಪಚ್ಚೆಯ | ಹರಿಜಗಲಿ ಗೋಮೇಧಿಕದ ಮೇ |
ಹುರವು ಮಾಣಿಕ ಗಳಸವೆಸೆವುದ್ವಾಹ ಗೇಹವನು || ೪ ||
ಸವೆದುದಾ ಮಧ್ಯದಲಿ ವೇದಿಕೆ | ಅವನಿಗದು ಹೊಸತೆನಿಸೆ ಕಟ್ಟಿದ |
ಚವಲನಗಳ ಮೌಕ್ತಿಕದ ವಂದನಮಾಲೆಗಳ ಚೆಲುವಿಂ ||
ನವ ರತುನಮಯ ಮಕರ ತೋರಣ | ವಿವಿಧ ಮಂಗಲ ಕೋಣಕಳಸ |
ಪ್ರವರ ಮಣಿ ಭೃಂಗಾರವೆಸೆದುದು ಧಾರೆಮಂಟಪವು || ೫ ||
ಅರುಣಮಣಿ ಪಾತ್ರೆಯೊಳು ಘಸೃಣವ | ಮರಕತದ ಬಟ್ಟಲೊಳು ಕರುಕೆಯ |
ನುರುವನೀಲದ ಚಸಕದೊಳು ಕತ್ತುರಿಯ ತೀವಿರೆಯು ||
ಬರಿಯವೆನೆ ಕಾಮಿಸಿದವತಿ ಬಂ | ಧುರದ ವರಮುತ್ತಿನ ಪದಾವಳಿ |
ಯೆರಳು ದಧಿ ಕನ್ನಡಿ ಕಳಸವಿಂಬಾದುದದರೊಳಗೆ || ೬ ||
ಅದು ವಿವಾಹಾಲಯವೆನಿಸಿ ಮ | ತ್ತದು ಮನೋಜನ ವಿಜಯಲಕ್ಷ್ಮಿಯ |
ಸದನವದು ಪೊಸಸುಗ್ಗಿಯರಮನೆಸುರಧನುವಿನಿಕ್ಕೆ ||
ಅದು ಗಜಾಶ್ವನರಾವಳೀ ಪ | ತ್ರದ ವಿಚಿತ್ರಿತ ಚಿತ್ರಮಂಟಪ |
ಮದುವೆ ಮದುವೆಗೆ ಪುದುವೆನಿಸಿ ನೋಟಕರನೊಲಿಸಿದುದು || ೭ ||
ಅರಸಿಯಾ ಶಿವದೇವಿಯಂತಃ | ಪುರದ ಸೇವಕ ಮುಖ್ಯರೆಲ್ಲರ |
ತರುಣಿಯರಿಗಾಭರಣವಸ್ತ್ರ ಸುಗಂಧಕುಸುಮಗಳ ||
ಪರಿಪರಿಯ ಬಾಯಿನವನಿತ್ತಳು | ವರ ಸಮುದ್ರ ವಿಜಯ ನೃಪಾಲಕ |
ಪುರ ಜನಕೆ ನೃಪತತಿಗೆ ವಿಬುಧರಿಗಿತ್ತನಾ ತೆರದಿ || ೮ ||
ಪಲವು ಗಂಧೌಷದಿ ವಡೆದ ನಿ | ರ್ಮಲಿನ ತೀರ್ಥೋದಕದಿ ಮಿಗೆ ಮಂ |
ಗಳವರೆಗಳುಲಿವುತಿರೆ ಮಂಗಲ ಮಜ್ಜನಂಗೊಳಿಸಿ ||
ಚೆಲುವ ನೇಮಿಕುಮಾರನನು ತೊಳ | ತೊಳಪ ಸಿಂಗರ ಮಂಟಪದಲ |
ಗ್ಗಳಿಸಿ ಪಸದನಗೊಳಿಸಿದರು ಭೂಪಾಲ ಕೇಳೆಂದ || ೯ ||
ಸುರಪನಟ್ಟಿದ ದಿವ್ಯ ರತ್ನಾ | ಭರಣ ಸುರಕುಜಜಾತ ದಿವ್ಯಾಂ |
ಬರ ಕುಸುಮ ದಿವ್ಯಾನುಲೇಪನದಿಂದನಿಜಾನಕ |
ಹರಿಬಲಾದ್ಯರು ಮೂರು ಲೋಕದ | ಸಿರಿಯ ಸೊಬಗಿನ ಚೆಲುವಿಕೆಯನಿರೆ |
ವರಿಸಿದನುಪಮ ಮೂರ್ತಿಯನು ಕೈಗೈಸಿದರು ನಲಿದು || ೧೦ ||
ವರ ಜಗತ್ತ್ರಯ ಶೇಖರನೆ ಶೇ | ಖರವು ನೀಲಾಚಂಡ ಚೂಳವು |
ಸುರಧನುವನಿಂಬಿಡುವ ರತ್ನದ ಶಿಖರವೆನೆ ಮೆರೆಯೆ ||
ಪರಮಲಕ್ಷ್ಮಿಯ ಧವಲ ಲೋಚನ | ಕಿರಣ ಪಸರಿಸಿದಂತೆ ಪೆಂಪಾ |
ದುರದೊಳೊಪ್ಪಿತು ತೋರ ಮುತ್ತಿನ ಹಾರ ಚೆಲುವಾಗಿ || ೧೧ ||
ತೊಳತೊಳಪ ತಿಳಿಜೊನ್ನನೀಲಾ | ಚಳವ ಬಳಸಿದ ತೆರದಿ ಸೊಗಯಿಸಿ |
ಬಳಸಿ ಮಿಗೆ ಚೆಲುವಾಯ್ತು ಕರೆವೆರಸಿದುದು ಕೂಲವನು ||
ತಳೆದ ನೇಮಿಕುಮಾರಕನ ಮಂ | ಗಳದ ಸದನದ ಚೆಲುವ ಶೇಷಂ |
ಗಳವೆ ಪೊಗಳುವೊಡೆನಲು ಬಣ್ಣಿಸಬಲ್ಲ ಕವಿಯಾರೊ || ೧೨ ||
ಯದು ನೃಪಾಲಕರೆಲ್ಲರಾಗಳು | ಮುದದಿ ಮಂಗಲವಾದ್ಯವುಲಿಯಲು |
ಮದವಣಿಗನನು ತಂದು ಕರಿಪತಿ ಕಂಧರದೊಳಿರಿಸಿ ||
ತ್ರಿದಶರಿಕ್ಕುವ ದಿವ್ಯ ಚಾಮರ | ವದುವೆ ಘನಮುಕ್ತಾತಪತ್ರವು |
ಪುದಿದೆಸೆಯೆ ಪೊರಮಟ್ಟುವಾ ದಿಬ್ಬಣವು ಸಬ್ಬವದಿ || ೧೩ ||
ಕೂಡೆ ಬಂದುದು ದೆಸೆಗೆ ತೀವಿದ | ನಾಡೆರೆಯರುರುವಾಹನದೊಳಾ |
ಗಾಡಿಕಾತಿಯರಲ್ಲಿ ಕನ್ನಡಿಕಲಶಗಳ ಪಿಡಿದು ||
ಪಾಡಿದರು ಶೋಭನಗಳನು ನಲಿ | ದಾಡಿದರು ನರ್ತಕಿಯರುರೆ ಕೊಂ |
ಡಾಡಿದರು ತರತರದಿ ಮಂಗಲಪಾಠಕರು ಜಿನನ || ೧೪ ||
ಇಂತು ನಿಬ್ಬಣ ಪೋಗುತಿರೆ ಕಂ | ಸಾಂತಕನ ರಾಜಾಲಯದ ಶಶಿ |
ಕಾಂತಮಯದುದ್ವಾಹಗೇಹದ ಸಾರೆ ಬರಬರಲು ||
ಅಂತಕನ ಬಾಯಂತೆ ಕಂಟಕ | ವಾಂತ ಗೇರೆಯದೊಳಗೆ ಮೃಗಗಳ |
ಸಂತತಿಯು ಕಡು ಹಸಿದು ಗೋಳಿಡುತಿರ್ದುವೆಡೆಬಿಡದೆ || ೧೫ ||
ಸದಯನಾಗಳು ಕಂಡು ತನ್ನಯ | ರದನಿಯನು ಕೂರಂಕುಶದಿ ಸೆಳೆ |
ದದಿರದಂದಲಿ ನಿಲಿಸಿ ಅಗಣಿತ ಮೃಗಗಣವ ವನದಿ ||
ಸದೆದು ತಂದವರಾರು ಘೋಳಿ | ಟ್ಟೊದರುತವೆ ಕಡುಹಸಿದುದೇಕೆನೆ |
ಲದನು ಹರಿ ಮುಂಕಲಿಸಿದಂದದಿ ಪೇಳ್ದನಾ ಶಬರ || ೧೬ ||
ದೇವ ನಿಮ್ಮಯ ಮದುವೆಗೆಂದಖಿ | ಳಾವನೀ ಜನ ಬಂದುದದರಿಂ |
ದೇವರರ್ತಿಯನೀಕ್ಷಿಸುತ್ತಿರೆ ಮೃಗಗಳನು ಕಡಿದು ||
ತೀವಿ ನೆತ್ತರ ಪೊಳೆಯು ನೆರೆ ಮಾಂ | ಸಾವಳಿಯನರಿದಟ್ಟು ಕೆಲಬರಿ |
ಗೀ ವಿಧದ ಭೋಜನಕೆ ತರಿಸಿದನೆಂದನಾ ವ್ಯಾಧ || ೧೭ ||
ಕೊಂದು ಮಾಡುವ ಧರ್ಮದಂತೆದು | ಗಿಂದು ಬಂದುದು ಮದುವೆನೊಳವನು |
ತಿಂದು ತಪಗೆಟ್ಟಂತೆ ಈ ಜೀವಂಗಳನು ಕೊಲಿಸಿ ||
ಬೆಂದ ಮದುವೆಯಲೇನು ಫಲವಾ | ಸೌಂದರ್ಯರೇಂ ಸುಖವನಿತ್ತಪ |
ಳೆಂದು ಪೇಸಿದನರಿದನವಧಿಯಿನಾಗಳದರಿರವ || ೧೮ ||
ಪಲಬರುಂಡು ಬಿಸುಟ್ಟ ಪುಲ್ಲಿಗೆ | ನಿಳೆಗೆಳಸಿದಪೆ ನಾನೆನುತ ಹರಿ |
ಯಳಿಮನದ ಶಂಖೆಯನು ತಳೆದೀ ಕೃತಕವೊಡ್ಡಿದನೆ ||
ಇಳೆಯ ಲೋಭವದೇನ ಮಾಡದು | ಹುಳುನೆಯಿದ ಬಲೆಯೊಳಗೆ ಸಿಲುಕುಗು |
ನೊಳವನಲ್ಲದೆ ಭದ್ರಗಜಸಿಲುಕುವುದೆ ಹೇಳೆಂದ || ೧೯ ||
ಮನದೊಳೀ ಧರೆ ತನ್ನದೆಂದೆಂ | ನೆನೆದ ತಿರುಕಂಗಾದೆಡೆಯು ಸಂ |
ಜನಿಸುವುದು ದುರ್ಗತಿಯುದಿಂ ತನ್ನದಿಳೆಯೆಂದು ||
ಮನವೊಸೆದು ಪೊತ್ತವನೂ ಮೇಲೇ | ಳ್ಕನೆ ಕುಸಿದು ಕೆಳ ಬೀಳ್ದನಲ್ಲದೆ |
ಎನುತ ರಾಜ್ಯವಿರುಕ್ತಿಯನು ಮನದೊಳಗೆ ಭಾವಿಸಿದ || ೨೦ ||
ಚತುರನರಿತು ಸಮುದ್ರ ವಿಜಯ | ಕ್ಷಿತಿಪನೆಂದನು ನಂದನನೆ ಮೃಗ |
ತತಿಯ ನಡವಿಗೆ ಬಿಡಿಸಿ ಕಳೆವ ವಿವಾಹವನು ತಳಯೈ ||
ಅತಿಸಮೀಪ ಮುಹೂರ್ತವಿಂದ್ರಾ | ರ್ಚಿತಪದನೆ ನೂಂಕೀ ಭವ ನೆನೆ ದು |
ರ್ಗತಿಗೆ ಕಾರಣವಾದ ಮದುವೆಯಲೇನು ಫಲವೆಂದ || ೨೧ ||
ತಳೆವೆನುತ್ತಮ ಮೋಕ್ಷ ಲಕ್ಷ್ಮೀ | ಲಲನೆಯೊಳು ಪರಿಣಯನವನುಯೆನು |
ತಿಳಿದನಭವನು ಅಭವನೀರಿಳಿದಂತೆ ಸಂಸೃತಿಗೆ ||
ಲಲನೆಯೂ ಪರಿಣಯನ ಗೇಹಕೆ | ತಳೆದು ಬಂದಾ ಕೃಷ್ಣ ಮುಖ್ಯರ |
ತಿಳುಹಲುಸುರಿದನಂದು ಸಂಸಾರ ಸ್ವರೂಪವನು || ೨೨ ||
ಹರಿ ಬಲಾದ್ಯರು ಬೆಕ್ಕಸಂಬ | ಟ್ಟರು ಸಮುದ್ರ ವಿಜಯ ನೃಪಾಲನ |
ಹರುಷರಸವಾರಾಸಿ ಹುಡುಹುಡಿಯಾಯ್ತು ಶಿವದೇವಿ ||
ಮರೆದಳೊಡಲೊಡತನವನಿರದಾ | ಪುರಜನದ ಪರಿಜನದ ಚಿತ್ತದ |
ಸರಸವಿರಸವದಾದುದೆಲೆ ಭೂಪಾಲ ಕೇಳೆಂದ || ೨೩ ||
ಜನನಿಗೆಚ್ಚರನೊರೆದು ಮತ್ತಾ | ಜನಕ ಬಲ ನಾರಾಯಣಾದ್ಯರ |
ನನುನಯದಿ ಪಾಂಡವರನೆಲ್ಲರನಭಿಮುಖಕೆ ತರಿಸಿ ||
ಇನಿತು ನೋಯಲದೇಕೆ ಮೋಕ್ಷಾಂ | ಗನೆಗೆ ಮೆಚ್ಚಿದ ಮನವು ಮಿಕ್ಕಿನ |
ವನಿತೆಯರಿಗೆಳಸುವುದೆ ಹೇಳೆಂದನು ಮನೋಜಾರಿ || ೨೪ ||
ಆವಸುಖವೀ ಮನುಜತೆಯೊಳಾ | ಸಾವಿನಂದದೆ ಜನನ ಕಾಲದ |
ನೋವು ಗರ್ಭದಲುಂಡ ದುಃಖದ ಹವಣದಂತಿರಲಿ ||
ಜೀವಿಸುವುದಜ್ಞಾನದೊಳಗಾ | ಜೀವಿತವು ಜಲಬುದ್ಬುದಸ್ಥಿತಿ |
ಕಾಮ ಮೋಹ ದ್ವೇಷವಹ್ನಿಯೊಳುರಿಯುತಿಹರೆಂದ || ೨೫ ||
ಇನಿತು ಘನವಾದಡೆಯು ತನಗಪ | ಗನವೆಸರನಿಟ್ಟಜನೆ ಸುಜನನು |
ಜನಿತ ದೋಷದ ಗುತ್ತು ಕುತ್ತದ ಬಿತ್ತು ಭಯದೊತ್ತು ||
ನೆನೆಯ ಬಾರದ ಹೇಸಿಗೆಗೆ ತಾ | ಯ್ವನೆ ವಿಚಾರಿಸೆ ಜೀವಗದೆ ಸೆರೆ |
ವನೆ ಯದನೆ ಬಿಟ್ಟವನೆ ಸುಖಿ ನಿಜಜನಕ ಕೇಳೆಂದ || ೨೬ ||
ಭೋಗವೆಂಬುದ ನೋಡ ವಿಷಯದ | ರೋಗಕಿಕ್ಕುದ ಮದ್ದು ಗೊತ್ತಾ |
ಭೋಗಮನ್ಯದ್ರವ್ಯ ಸಂಗಮದಿಂ ಪ್ರಯಾಸತೆಯಿಂ ||
ಸಾಗಿಸುವುದದು ಸವಿವಸಮಯದ | ಮೇಗ ಮೇಗ ತಿವಿರಸವದರಿಂ |
ಭೋಗಲಂಟಪನಾತ್ಮ ಘಾತಕನರಸ ಕೇಳೆಂದ || ೨೭ ||
ಹಡಿಕೆ ನಾರುವ ಹೇಸಿಕೆಯ ಕೊಳೆ | ವಿಡಿದು ಬೀಭತ್ಸಾಕೃತಿಯ ಹಾ |
ಳೆಡೆಯೊಳೊದಪಿದ ಜೇನಹುಟ್ಟೆಯೊಳಿರ್ದ ಹುಳಿಗಳಲಿ ||
ಕಡುವಿಕೃತಿಯನು ಪೇಸುಪತವಾ | ದೊಡಲ ನಾಗಳೆ ತಳೆದುದಿಮ್ಮನೆ |
ಕೆಡೆವ ನಾನಿರೆಯೋರ್ವರೆಗೆ ಪಾಪಾಚರಣಪರನು || ೨೮ ||
ಕಿಚ್ಚುರಿಯ ಮಸದೇಸಿಯಪಸರ | ಬೆಚ್ಚ ನೆಲದೊಳುಬಿರ್ದು ಬೆಂಡನೊ |
ಡರ್ಚ್ಚಿ ಮಿಗೆ ಪೊಡದಂತೆಯೇಳುತ ಬೀಳುತಡಿಗಡಿಗೆ ||
ಕಿಚ್ಚಿನಿಂ ನೆರೆಬೆಂದು ಕೈದುಗ | ಳುಚ್ಚಳಿಸಲೇರಾಮತು ತನುವಿನ |
ಪುಚ್ಚಳಿಯ ತಳೆದೈದೆ ಮೊರೆಯಿಡುತಿಹರು ನಾರಕರು || ೨೯ ||
ಮೇರುವನು ಕಿತ್ತಿರಿಸಿದಡೆ ಬಿಸಿ | ನೀರವೊಲು ಕರಗಿಪುದು ಕೆಲವೆಡೆ |
ಮೇರುವನೆ ಕಡಗಾಸಿರಿಸೆ ನಿಮಿಷದಲಿ ತಣಿಯಿಪುದು ||
ಮೇರುಸಮ ಹೆಣಬಣಬೆ ಕೊರಗಿದ | ಭೂರಿದುರ್ವಾಸನೆಯ ಮಯವೆನೆ |
ನಾರಕರ ದುಃಖವನದೇನೆನಬಹುದು ಹೇಳೆಂದ || ೩೦ ||
ಸಿಡಲ ಕಡುಪೆನೆ ಘುಡುಘುಡಿಸುತಿರಿ | ಕಡಿ ಕೆಡಹು ಕುತ್ತೆನುತ ಮಚ್ಚಿಂ |
ಕಡಿಕಡಿದು ಪಳೆನಾರಕರು ಚಿನಿಖಂಡಮಾಗಿಸಲು ||
ಮಡುವಿನೊಳು ಗುಂದಿಕ್ಕೆ ನೀರ್ವನಿ | ಸಿಡಿದು ಕೂಡುವ ತೆರದೊಳವರೊಡ |
ಲೊಡನೆ ಮತ್ತೊಂದಾಗುತಿಹುದವನೀಶ ಕೇಳೆಂದ || ೩೧ ||
ಅಸುರ ಕುವರರು ನರೆದು ನೆರೆ ಘ | ರ್ಜಿಸುತ ಪೂರ್ವದ ವೈರವನು ನೆನೆ |
ಯಿಸಿ ಕೊಡುತ ಹೊಸ ಹೊಸಕಲೆಗಳನು ಕೊಲುವುದೆಂದವರ್ಗೆ ||
ಬೆಸಸುತರ್ಥಿಯ ನೀಕ್ಷಿಸುತ ಘೂ | ರ್ಣಿಸೆ ಪಳೆಯ ನಾರಕರವನ ಹೂ |
ಣಿಸಿ ಪಚಾರಿಸಿ ಕೊಲುವ ಕೊಲೆಯನದೇನ ಹೇಳುವೆನು || ೩೨ ||
ಹುಸಿದೆಯೆಂದರಿದಿಡುವರಾತನ | ರಸನೆಯನು ಪರವಧುವಿಗೆಂದಾ |
ಟಿಸಿದೆಯೆಂದಾ ಲೋಹಪುತ್ಥಳಿಗಾಸಿಯಪ್ಪಿಪರು ||
ಬಿಸಿಯ ಲೋಹದ ರಸವ ಮದಿರಾ | ರಸದ ಲಂಪಟನೆಂದು ಬಾಯ್ದೆರ |
ಯಿಸಿ ಕುಡಿಸುವರು ಕರಗಿತನುರಸದಂತೆ ಕೂಡುವುದು || ೩೩ ||
ಅಡಗುದಿಂಬಾ ಜಾಣನೆಂದವ | ನೊಡಲಖಂಡವ ಕಡಿಕಡಿದು ಬಾ |
ಯಡಸಿ ತಿನಿಸುವರದುಸವಿಯೊ ಮೇಣಿದುಸವಿಯೊಯೆಂದ ||
ಕೆಡಹಿಯೆದೆಯನು ಮೆಟ್ಟಿಬಾಯನು | ಬಿಡಿಸಿ ಕಾಸಿದ ಲೋಹಪಿಂಡವ |
ನೊಡನೆ ಗಂಟಲು ಗಡಿಯತೂಂತುವರರಸ ಕೇಳೆಂದ || ೩೪ ||
ಜೂದಿನರ್ಥಿಗನೆಂದು ಗದೆಯಿಂ | ಮೋದಿ ನೆತ್ತಿಯನೊಡೆದು ಮತ್ತಾ |
ಬಾದಣದಿ ಮಿದುಳೊಕ್ಕುದಿಲ್ಲಾಂ ಸೋತೆವೆನುತವರು ||
ಕೈದುವಿಡಿದ ಕಬ್ಬುಗಡಿವವೊ | ಲಾದರಿಸದುರೆ ಕಡಿದುಕಡುಬಿಸಿ |
ಯಾದ ಗಾಮದೊಳಾಲೆಯಾಡುವರರಸ ಕೇಳೆಂದ || ೩೫ ||
ಮರಳಿ ಮೈವೆತ್ತವನೆಂದು | ಬ್ಬರದ ಬೇಟೆಯ ಬೀರನೆಂದ |
ಬ್ಬರಿಸಿ ಪೆರ್ಬುಲಿಯಾಗಿ ಪೊಯ್ದುಗಿ ಬಗಿದು ಮುರಿತಂದು ||
ಸರಬವಾಗದ್ದೆಂಟು ಚರಣದಿ | ಭರದೊಡೆದು ಪಲಪಕ್ಕಿಮಿಗದೊಂ |
ದಿರವಿನಾ ವೈಕುರ್ವಣದಿನರ್ವಿಸಿ ಕೊಲುವರೆಂದ || ೩೬ ||
ಮಲಗಿಸಿದರಾ ವಿಸ್ಫುಲಿಂಗದ | ಸುಲಭತೆಯ ಹಾಸಿನೊಳುಗಣಿಕಾ |
ಲಲನೆಯನು ಬಿಗಿದಪ್ಪೆನುತ ಕರ್ವುನದುರಿಯ ಹೆಣ್ಣ ||
ಮಲಗಿಸುವರವನೊಡನೆ ಬಿಸುಗಾ | ವಲಿಯಲಿಕ್ಕಿದ ತಿಲದವೊಲುಸಂ |
ಚಲಿಸುತಿಹ ಚೆರ ದುಃಖಿಗಳು ಭೂಪಾಲ ಕೇಳೆಂದ || ೩೭ ||
ಬಳಲಿ ಕೊರಗಿರಲಳುರೆ ನೆರೆ ಬೇ | ಳ್ಪಳಸಿ ಅಸಿಪತ್ರದ ಬನದನಡು |
ನೆಳಲೊಳಗೆ ವಿಶ್ರಮಿಪೆನೆಂದವನಲ್ಲಿ ಪುಗಲೊಡನೆ ||
ಬಳಿಕ ನಂಜಿನ ಗಾಳಿಗೆಲೆಗಳು | ಕಳಲಿ ಸಾಸಿರ ಕೈದುವಾಗಿಯೆ |
ಘಳಿಲವಡಗನು ಕಡಿದು ಬೀರುವನೆಂದನಾ ಜಿನಪ || ೩೮ ||
ಜಿತಮತವ ಪೊಗದಾಡೆನಾ ಜಿನ | ಮುನಿಗಳನು ನಿಂದಿಸಿದೆ ಕಲಿಮತವ |
ಮಳವೆಳಸಿ ಕೈಕೊಂಡೆ ಕೊಲೆಹುಸಿ ಕಳವು ಹಾದರವ ||
ಬಿನದದಲಿ ಮಾಡಿದೆನು ಧರ್ಮದ | ಧನವನುಂಡೆನುತ್ತ ಮಾಡಿದು |
ದನುಭವ ಪ್ರತ್ಯಯದಿ ನೆನವನು ಭೂಪ ಕೇಳೆಂದ || ೩೯ ||
ಪಿರಿದು ಕೊಲೆ ಹುಸಿ ಕಳವು ಪರವೆಂ | ಡಿರಿಗೆಳಸಿದವ ಮದ್ಯ ಮಾಂಸಾ |
ಚರಣ ಧರ್ಮದ್ರವ್ಯ ಭಕ್ಷಕ ಸೂಳೆಗೈವವನು ||
ತರದಿ ಮಿಥ್ಯಾದೃಷ್ಟಿ ರೌದ್ರೋ | ತ್ಕರನಮಲ ಮುನಿದೂಷಕನು ಚ |
ಚ್ಚರದಿ ಬೀಳ್ವರು ನರಕ ಭೂಮಿಗೆ ಸಾಕದಂತಿರಲಿ || ೪೦ ||
ಅಡವಿಯೊಳು ಪುಳು ನೊಳಕಡಿಯೆ ಕಡು | ಮಿಡುಕಿ ಬೀಯದಿರೆಚ್ಚಡಿರಿದಡೆ |
ಕಡಿದೊಡೆದೆಯೊಳು ನಡುಗಿ ಕೆಲದೀ ಕಟ್ಟಿಗೊಳಗಾಗಿ ||
ಪೊಡೆಯೆ ಬಡಿಯಲು ಬೆದರಿಪಸುತೃಷೆ | ಯಡಿಸಿದುದು ಹೊರೆ ಭಾರವೆಂಬುದ |
ನುಡಿಯದೇ ಮರುಗುವವು ತಿರ್ಯಂಚಗಳ ಜಾತಿಗಳು || ೪೧ ||
ಮರಣವರುದಿಂಗಳಿಗೆ ತಮಗಹ | ತೆರನನಾಭರಣಾದಿ ಮಸುಳಿಪ |
ಲರಿದು ಹಾನಂದನವೆ ಕೊಳನೇ ಸುರತ ಮಂದಿರುವೆ ||
ಬರುತಹನೆ ಯಮನಿನಿಯರನು ಬಿಡ | ಲರಿಯೆ ತಲೆಗಾಯೆಂದು ಮರುಗುವ |
ಸುರರ ದುಃಖವೆ ನರಕ ದುಃಖದ ಮೂರುಮಡಿಯೆಂದ || ೪೨ ||
ಈ ಚತುರ್ಗತಿ ವಿಷಯ ವಿಷಧಿಯ | ವೀಚಿ ಪರಿವೃತವಿದರೊಳಗೆ ಪಲ |
ವಾಚರಣೆಯೀರೊಟ್ಟಣದವೊಲು ತೊಳಲಿ ಬಳಿಲಿದೆನು ||
ಆ ಚದುರೆ ಮೋಕ್ಷಾಂಗನೆಯ ಕುಚ | ಚೂಚಕದ ಸೋಂಕಿದಲಲ್ಲದೆ |
ವಾಚಿಪೊಡೆ ಸುಖಮಿಲ್ಲವೆಂದನು ನೇಮಿಭೂವರನು || ೪೩ ||
ಎಂದು ಜನನೀ ಜನಕ ಬಾಂಧವ | ವೃಂದವನು ನಿಬ್ಬಣಿಗರನು ಚದು |
ರಿಂದೊಡಂಬಡಿಸಿಯೆ ಪೊಳಲ ಪೊರಮಡುವಸಮಯದಲಿ ||
ಬಂದರಾಗಳೆ ಬ್ರಹ್ಮಕಲ್ಪದೊ | ಳೊಂದಿದಾಲೌಕಾಂತಿಕರು ಭೋ |
ರೆಂದು ಸುರತರು ಕುಸುಮವನು ಸುರಿದೆರಗಿದರು ಜಿನಗೆ || ೪೪ ||
ತರದಿ ಸಾರಸ್ವತನುರವಿ ಶಿಖಿ | ಯರುಣನೊಪ್ಪುವಗರ್ದತೋಯನು |
ಪಿರಿದು ತುಷಿತನು ಪೆಂಪಿನವ್ಯಾಬಾಧನಮರಿಷ್ಟ ||
ಸುರರಿವರು ತಾವೆಣ್ಬರಾಗಳು | ಪರಮ ಲಕ್ಷ್ಮೀಕಾಂತ ಮೋಹಾ |
ಸುರಮಥನ ಜಿತಮದನ ಬಿನ್ನಹವಂದರವರಂದು || ೪೫ ||
ಅಂಬುಧಿಯ ಜಲದಿಂದ ಅರ್ಘ್ಯವ | ನಂಬುಧಿಗೆ ಕೊಡುವಂತೆ ನಿಜ ಬೋ |
ಧಾಂಬುನಿಧಿ ನಿಮ್ಮಡಿಗಳಿಗೆ ಜಡಮತಿಗಳುಸುರುವೆವು ||
ನಿಂಬೆಗಳು ಮೂಜಗದೊಳರನನ | ಳುಂಬುವೆನೆ ಸಂಸಾರ ಭೋಗವಿ |
ಡಂಬನವು ನಿನಗಾವುದೆಂದರು ಭೂಪ ಕೇಳೆಂದ || ೪೬ ||
ದೇವರುದಯಿಸೆ ಯದುಕುಲವೊಲು | ಸಾವನೀಯವು ಮೂರುಲೋಕವು |
ಈ ವಿರಕ್ತಿ ಮಹಾ ತಪಶ್ರೀರತಿ ಸುಮತಿ ನಿಮಗೆ ||
ತೀವಿದುದು ತಾಂ ಸಮವಶೃತಿ ಸಿರಿ | ದೇವಿ ಮಾಡಿದ ಪುಣ್ಯವದರಿಂ |
ನಾವು ಧನ್ಯರು ನಾಳೆ ಮೊಕ್ಷಾಂಗನೆ ಕೃತಾರ್ಥೆಯಲ || ೪೭ ||
ಎಂದು ಲೋಕಾಂತಿಕ ಸುರರು ಪಲ | ವಂದದಿಂ ಬೋಧಿಸಿ ಜಿನನನಭಿ |
ವಂದಿಸಿಯೆ ಮಗುಳುವುದುಮವಧಿಯಿನರಿದು ದೇವೇಂದ್ರ ||
ದುಂದುಭಿಯ ಮೊಳಗಿಸುತ ದಿವಿಜರ | ವೃಂದ ಸಹವಾ ದ್ವಾರಕೆಗೆ ನೆರೆ |
ಬಂದನಾ ಸುರತರು ಕುಸುಮ ಫಲವಾಂತು ಪರಿಕರನು || ೪೮ ||
ಇರದನೇಕ ಸುತೀರ್ಥ ಜಲದಿಂ | ದರುಹನಭಿಷೇಕವನು ಗೈದಾ |
ಸುರಪತಿಗೆ ದಿವ್ಯಾಭರಣವಸ್ತ್ರಾನು ಲೇಪನದಿ ||
ಪರಮನನು ಸಿಂಗರಿಸಿ ಶಿಬಿಕೆಯ | ತರಿಸಿ ಕೈಗೊಟ್ಟಮೃತ ಸೌಧಾಂ |
ತರದ ಮೆಟ್ಟೇರಿಪವೊಲೇರಿಸಿದನು ಮಹೋತ್ಸವದಿ || ೪೯ ||
ಏಳಡಿಯನಾ ಭೂಚರೇಶ್ವರ | ರೇಳಡಿಯನಾ ಖೇಚರೇಶ್ವರ |
ರೇಳಡಿಯನಾಕಾಶದೊಳು ದೇವಾಸುರರು ನೆರೆದು ||
ಕಾಲವೈರಿಯು ಶಿಬಿಕೆಯನು ಸ | ಮ್ಮೇಳದಿಂ ಪೊತ್ತೊಯ್ದರತ್ತಮ |
ರಾಳ ಪತಿಗಳು ಹೆಗಲ ಕೊಟ್ಟರು ಭೂಪ ಕೇಳೆಂದ || ೫೦ ||
ಅನುಪಮ ದ್ವಾರಾವತಿಯ ನಂ | ದನದೊಳೇಳೆವಾಲೆಗಳ ಚಂ |
ದನದಶೋಕೆಯ ಮಾಧವಿಯ ಮಲ್ಲಿಗೆಯ ಮಾಮರದ ||
ತನಿನೆಳಳೊಳಾ ದಿವಿಜ ಕೃತಪಾ | ವನ ತಪೋಮಂಟಪ ದುಕೂಲದಿ |
ನನಿಮಿಷರ ಕಣ್ಗೆಡ್ಡ ಮಾದುದು ಭೂಪ ಕೇಳೆಂದ || ೫೧ ||
ಕರಕುಶಲದಲಿ ಶಚಿಯೆ ನರೆ ಬಿ | ತ್ತರಿಸೆ ರತ್ನದ ವರ್ಣಪೂರದ |
ಸುರ ಕುಜದ ಪೂವಲಿಯ ಮುತ್ತಿನ ಖಡೆಯನರುವೊಗೆಯ ||
ಪರಿ ಪರಿಯ ಮಂಗಳದ ಪವಿಗಳ | ವಿರಚನೆಯ ಮಂಟಪವು ಸೊಗಯಿಸೆ |
ಪರಮನಿಳೆವತರಿಸಿದನು ಭೂಪಾಲ ಕೇಳೆಂದ || ೫೨ ||
ಸುರಪದತ್ತ ಕರಾವಲಂಬನ | ನಿರದೆ ನೇಮಿಸ್ವಾಮಿಯೊಳ ಪೊಗು |
ತುರು ಮಕುಟನಿಖಿಳಾಭರಣ ವಸ್ತ್ರಾದಿಯನು ಕಳೆದು ||
ಎರಡು ತೆರದ ಪರಿಗ್ರಹವನೋ | ಸರಿಸೆ ಕರ್ಮಾರಿಯನು ಸಂಹರಿ |
ಪೊರೆಯುಗಿದ ಕೂರಸಿಯೊಲಿರ್ದುದು ಜಿನನ ದಿವ್ಯಾಂಗ || ೫೩ ||
ಸುರರ ಕಳಕಳವನು ನಿಲಿಸಿ ಪಡಿ | ಯರರವೊಲು ದಿವಿಜೇಂದ್ರನೊಡವರೆ |
ಪರಮ ಪಲ್ಯಂಕಾಸನನುದಿಚಿ ದಿಶಾಮುಖನು ||
ಗುರುತನಗೆ ತಾನಾಗಿ ತ್ರಿಜಗ | ದ್ಗುರು ನಮಃಸಿದ್ಧೇಭ್ಯಯೆಂದಾ |
ದರಿಸಿದೈವಿಡಿಲೋಚದಳಿದನು ಭೂಪ ಕೇಳೆಂದ || ೫೪ ||
ಬಿತ್ತರದೆ ಪಂಚೇಂದ್ರಿಯದಬೆ | ಗಿತ್ತವೊಲು ಜಿನ ಪಂಚಮುಷ್ಟಿಯ |
ಕಿತ್ತ ನೀಳಾಳಕಮನಾಗಳೆ ರತ್ನ ಭಾಜನದಿ ||
ಪೆತ್ತು ಪೊತ್ತಾ ದಿವಿಜಪತಿಮೊಳ | ಗುತ್ತಿರಲು ಸುರಪಟಹ ನಿರ್ಮಲ |
ಚಿತ್ತನಿತ್ತನು ಪಾಲ್ಗಡಲೊಳವನೀಶ ಕೇಳೆಂದ || ೫೫ |
ವಿನುತ ಶ್ರಾವಣ ಶುದ್ಧ ಚೌತಿಯ | ದಿನದೊಳಾ ನಕ್ಷತ್ರ ಚಿತ್ರೆಯೆ |
ಜನಿಸಿದಾ ಪೂರ್ವಾಹ್ನದೊಳ ದಿಕ್ಷಾಸುಕಲ್ಯಾಣ ||
ಅನುವಡೆದುದಾ ನೇಮಿ ಮುನಿಗಂ | ದಿನ ನೆಲೆಗೆ ಮೂನೂರು ವರುಷವು |
ತನಗೆ ನೋಡೆ ಕುಮಾರ ಕಾಲವು ಭೂಪ ಕೇಳೆಂದ || ೫೬ ||
ಸುರರ ಜಯಜಯರಾವವಾಗಳು | ಸುರರಮಣಿಯರ ಗಾನನಾದವು |
ಸುರರ ದುಂದುಭಿ ನಾದವಾಶಾವಧಿಯ ಪೂರೈಸೆ ||
ಸುರಪನಾಗಳೆ ಬಂದು ತ್ರಿಜಗ | ದ್ಗುರುವನರ್ಚಿಸಿ ಮೂಮೆ ಬಲಬಂ |
ದೆರಗಿ ನುತಿಯಿಸಿ ಭಕ್ತಿಯಿಂ ಬೀಳ್ಕೊಂಡ ನೊಲವಿನಲಿ || ೫೭ ||
ಬಳಿಕ ಗಗನಾಂಗಣದೊಳಗೆ ನಿಂ | ದೊಲಿದು ಭವನಾಮರರನಾಗಳು |
ಪೊಳೆವವೀ ಜ್ಯೋತಿಷ್ಕರನು ವೆಂತರಗಣಂಗಳನು ||
ಕಳುಹಿನಿಖಿಳಾಮರರು ತನ್ನನೆ | ಬಳಸಿ ಬರೆ ಸೌಧರ್ಮಪತಿ ನಿಜ |
ನಿಲಯವನು ಪೊಕ್ಕನು ವಿನಯ ಕುಲೈಕ ಮಂಡನನು || ೫೮ ||
ವರಸಮುದ್ರ ವಿಜಯನೃಪಾಲಾ | ದ್ಯರು ಬಳಿಕ ತ್ರಿಜಗದ್ಗುರುಗೆ ತರ |
ತರದಿ ಪೂಜಿಸಿ ನುತಿಸಿವಂದಿಸಿ ಹೋದರವರತ್ತ ||
ಇರದೆ ರಥನೇಮಿ ಪ್ರಮುಖ ಭೂ | ವರರು ಸಾಸಿರ್ವರು ತಪಶ್ರೀ |
ಪರಿಣಯನವನು ತಲೆದರೆಲೆ ಭೂಪಾಲ ಕೇಳೆಂದ || ೫೯ ||
ರತಿಗೆಣೆಯ ರಾಜೀಮತಿಯು ನೃಪ | ಸುತೆಯರೈನೂರ್ವರುವೆರಸಿ ಸ |
ನ್ನುತೆಯರಾ ಕೆಳದಿಯರು ಸಹಿತಾವಾರು ಸಾವಿರವು ||
ಪತಿನವಗೆ ನೇಮಿಯೆವಿಚಾರಿಸಿ | ಪತಿ ಜಗತ್ರಯಕಾದ ಕತನದಿ |
ಪತಿಯ ಕೊಂಡದು ಮಾರ್ಗವೆಂದಾಂತರು ಸುದೀಕ್ಷೆಯನು || ೬೦ ||
ಅವರ ಪಾಣಿಗ್ರಹಣ ವಿದದು | ತ್ಸವವದೆತ್ತ ಮೃಗಾಳಿಯೆತ್ತೊ |
ಪ್ಪುವ ವಿರಕ್ತಿಯದೆತ್ತ ಪಾರಿವ್ರಾಜ್ಯ ನಿಧಿಯೆತ್ತ ||
ಯವನ ವಂದ್ಯಂಗಾಕ್ಷಣವೆ ಸಂ | ಭವಿಸಿತು ಮನಃಪರ್ಯಯ ಜ್ಞಾ |
ನವುವೊಡನೆ ಸಪ್ತರ್ಧಿಯುದಯಿಸಿತರಸ ಕೇಳೆಂದ || ೬೧ ||
|| ಅಂತು ಸಂಧಿ ೫೯ಕ್ಕಂ ಮಂಗಲಮಹಾ ||
Leave A Comment