ಸಂಧಿ ೬೦

ಭಾವಭವ ಭವಹರನು ಸುತಪ | ಶ್ರೀವರನು ತಾನಾಗಿ ತಳೆದನು |
ಕೇವಲ ಜ್ಞಾನಾಮಲ ಶ್ರೀಯೊಂದು ಮದುವೆಯನು || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಸೌಧರ್ಮೇಂದ್ರನಾ ದಿವಿ |
ಜಾಳಿಯೋಲಗದೋರೆ ನೇಮಿಗೆ ಮೂರು ಕಲ್ಯಾಣ ||
ಮೇಳಿಸಿತು ನಾ ಧನ್ಯನೆಂದು ವಿ | ಶಾಲ ಕೇವಲ ಯೋಧ ಮಂಗಲ |
ಕಾಳುವೆಸನನು ಪಾರುತಿರ್ದನದಿತ್ತಲಾ ಮುನಿಪ || ೧ ||

ಪರಮ ಗುರುವಾ ಪರಮ ಮುಕ್ತಿಂ | ದಿರೆಗೆ ನೆರೆ ಕೈಯಿಕ್ಕಿ ಕೈಯಿ |
ಕ್ಕಿರುತಮಷ್ಟಮದಿನದೊಳಗೆ ಕೈಯೆತ್ತಿಕೊಂಡೆದ್ದು ||
ಗಿರಿನಗರ ಪಟ್ಟಣಕೆ ದಯೆಯಿಂ | ಚರಿಗೆ ಕೊಟ್ಟನು ಭವ್ಯನಿಕರಕೆ |
ಕರೆದು ಕೊಡುವಂತನಘ ಧನವನು ಭೂಪಕೇಳೆಂದ || ೨ ||

ವರತಪೋನಿಧಿ ದಾನಸಾಧಕ | ತರ ಶರೀರ ಸ್ಥಿತಿ ನಿಮಿತ್ತವು |
ತರದಿ ನಾಲ್ವತ್ತಾರು ದೋಷ ವಿದೂರತಾ ಸ್ಥಿತಿಯು ||
ಪರಿ ವಿಮಲ ನವಕೋಟಿ ಗುಣಬಂ | ಧುರವು ದಾನಸುಮಾರ್ಗ ಪ್ರಕಟನ |
ಪರವು ಮಾಗಿರೆ ಚರಿಗೆಗೊಟ್ಟನು ನೇಮಿ ಮುನಿಹಂಸ || ೩ ||

ಪದಮ ಪಾಕೃತ ದೃತವಿಳಂಬವು | ಹೃದಯಮೈದೆ ದಯಾರಸಾರ್ಧವು |
ಪುದಿದ ತೋಳ್ಗಳ ಕಂಪನವು ನೊಗನ ಪ್ರಮಾಣವನು ||
ಚದುರಿನಿಂ ನೋಡುವ ವಿಳೋಕನ | ಮೊದವೆ ಚರಣಾಂಬುಜರಜವು ತಾ |
ನದೆ ಪವಿತ್ರತೆ ಮಾಡೆ ಭಾವರಿಗೊಟ್ಟನಾ ಮುನಿಪ || ೪ ||

ಅನತಿದೂರದಿ ಕಂಡು ಮತ್ತಾ | ಮುನಿನಿವೇದಕನರಿಪೆ ಮುನ್ನವೆ |
ಮುನಿಗಮನವನು ಪಾರುತಿಹ ವರದತ್ತ ಭೂವರನು ||
ವಿನುತ ಪಂಚದ್ರವ್ಯ ಪರಿಕರ | ವನತಿಶಯ ಭಕ್ತಿಯಲಿ ಬರೆ ಬೆ |
ನ್ನನೆ ಬರಲು ರಾಣಿಯರು ಕೆಲದಲಿ ಭವ್ಯ ಸಂಚಯವು || ೫ ||

ಬಂದುದಿದಿರಿನೊಳೆನ್ನ ಪೂರ್ವದ | ದೊಂದು ಪುಣ್ಯಾರ್ಜಿತವು ಈಯಲು |
ಬಂದುದಭಿಮತ ವಸ್ತುವನು ಪೊಸತೊಂದುಕಲ್ಪತರು ||
ಎಂದು ಭವ್ಯೋತ್ತಮನು ರಾಕಾ | ಚಂದಿರನ ಕಂಡಮೃತ ವಾರಿಧಿ |
ಯಂದದಲಿ ವರದತ್ತ ಭೂವರನಾಂತ ಸಂತಸವ || ೬ ||

ವಂದಿಸಿದನಾ ನೇಮಿನಾಥ ಮು | ನೀಂದ್ರರಡಿದಾವರೆಗಳನು ಸಲೆ |
ಸಂದ ಭಕ್ತಿಯಿಲೈದೆ ನಿಲಿಸಿ ನಿಜಾಲಯಕೆ ಬರಿಸಿ ||
ಅಂದಮಳವೇತ್ರಾಸನದೊಳೊಲ | ವಿಂದಿರಿಸಿ ಪಾವನ ಪದಂಗಳ |
ನೊಂದಿ ನಿರ್ಮಲ ಜಲದಿ ತೊಳೆದನು ಭೂಪ ಕೇಳೆಂದ || ೭ ||

ಬಳಿಕ ತೀರ್ಥೋದಕದಿ ಚಂದನ | ದೊಳುಗೆಸರಿನಿಂ ಕಳವೆಯಕ್ಷತೆ |
ಗಲಿನರಲ್ದರಳಿಂದ ಚರುವಿಂ ದೀಪಧೂಪಗಳಿಂ ||
ಫಲಕುಲದಿ ನುತುಮುಕುತಿ ಫಲದನ | ಚಲನಗಳನರ್ಚಿಸಿಯೆ ತನ್ನೊಳು |
ತಳೆದ ನವವಿಧ ಪುಣ್ಯಗುಣ ಸಪ್ತಕ ಸಮನ್ವಿತನು || ೮ ||

ವರ ಭಕುತಿಯಲಿ ಸಿದ್ಧ ಭಕ್ತ್ಯಂ | ತರದಿ ನಿರವ ಸುರದುಂದುಭಿರವವು ಸುರ |
ರೊಲಿದಹೋ ಸತ್ಪಾತ್ರಧಾತೃ ವೆನಿಪ್ಪ ಕಳಕಳಧ್ವನಿ ||
ಇಳೆಯರಿಯೆ ಪಂಚಾಶ್ಚರ್ಯವಾ | ಗಳೆ ಸಮನಿಸಿದುದಾ ನೃಪಾಂಗಣ |
ದೊಳಗೆ ಪಾತ್ರ ಪವಿತ್ರ ದಾನದಿನೇನು ಸಮನಿಸದೊ || ೧೦ ||

ತಳೆದು ಬಂದುಜ್ವಂತ ಗಿರಿಯೊಳು | ಮಲರಹಿತ ಶಶಿಕಾಂತ ಶಿಲೆಯೊಳು |
ಚಲಿಸೆವಿಲ್ಲಿಂ ನಾಲ್ಕು ತಿಂಗಳಿಗಲ್ಲದೆಂಬುದನು ||
ತಳೆದು ಸಮನಖದಿಂದವುಂಕಿದ | ಚಲನಯುಗ ಜಾನುದ್ವಯದ ಪೊರ |
ಗಳವೊಡಲು ಕರಯುಗವು ನಿಂದನು ನೇಮಿ ಮುನಿವರನು || ೧೧ ||

ಮೊಗದೊಳಿಲ್ಲ ವಿಕಾರವಾದಿ | ಷ್ಟಗಳ ಪರಿವನು ಕಾಣೆನಾ ಪು |
ರ್ಬುಗಳ ಧರನಾಸಿಕೆಗಳಾಂತವು ನಿರ್ವಿಕಾರವನು ||
ಸುಗುರುವಿರೆ ವರದತ್ತ ನೃಪಗಿರಿ | ನಗರಿ ಪಟ್ಟಣದಿಂದೆ ಬಂದಾ |
ಸುಗುಣಿ ಜಿನದೀಕ್ಷೆಯನು ತಳೆದನು ನೇಮಿಮುನಿಪನೊಳು || ೧೨ ||

ಇತ್ತೆರದ ತಪದಿಂದಲಾ ವರ | ದತ್ತಯತಿಪತಿ ವರ್ತಿಸುತ್ತಿರ |
ಲಿತ್ತಳಾ ಶ್ರೀ ನೇಮಿ ಮುನಿಪತಿಯೊಳಗೊಳಗಲೊಂದ ||
ಪೆತ್ತ ಜಪದವ್ಯಕ್ತದಕ್ಷರ | ದೊತ್ತರಿಪ ರವದಿಂದ ನಿರ್ಜರ |
ವೆತ್ತ ಗುಹೆಯೊಳಕೊಂದ ನೀಲಾಚನದವೋಲಿರ್ದ || ೧೩ ||

ಅಗಣಿತಾಮಳ ಸಿದ್ಧಪರಮೇ | ಷ್ಠಿಗಳ ಸುಗಣಾಷ್ಟಕಮನಾಗಳೆ |
ಬಗೆದು ಭಾವಿಸುತೈದೆ ಸಧ್ಯಾನೋನ್ಮುಖತೆವಡೆದು ||
ಜಗವ ತೀವಿದ ನವಪದಾರ್ಥಮ | ನೊಗದೆ ಮತಿಸಿಂಗರಿಸಿ ಕೊಂಬುದ |
ನೊಗುವುದನು ವ್ಯವಹಾರವನ ನಿಶ್ಚಯಕೆ ಬರುತಿರ್ದ || ೧೪ ||

ಬಿಸಿಲಿನಿಂ ಪಾಸರೆಯು ಬೆಚ್ಚನೆ | ಬೆಸನನಾಂತಪುದೆಂದಡಿಗೆ ಪೊಂ |
ದಿಸುವವಾ ತಣ್ಬಿಸೆವ ಕಮಲಂಗಳನು ಮಸ್ತಕಕೆ ||
ಸಸಿನೆ ಬೆಳ್ಕೊಡೆವಿಡಿವವಾ ಪೆಂ | ಪೆಸೆವ ನವ ದೇವತೆಗಳಾವವ |
ನೊಸೆಯನೈ ನಿಸ್ಸಂಗರಿಗೆ ಭೂಪಾಲ ಕೇಳೆಂದ || ೧೫ ||

ಕೊಳನ ತನ್ಬನಿಗಳನು ಲತೆಯಿಂ | ದಲರ್ದೊಗುವ ಪೂಗಳನು ಮಂದಾ |
ನಿಲನು ತಂದಭವನನು ನಿಚ್ಚಲು ಪೂಜಿಸುವನೆನಲು ||
ಮಲೆಯೊಳೊರ್ದೊಡಮವರು ಪೂಜ್ಯರು | ಮಲರಹಿತರಂದಾರು ಋತುಗಳು |
ಬಳಸಿದವುವೊರ್ಮೊದಲೆ ತಮ್ಮನಿವರ ತಪೋವನವ || ೧೬ ||

ತಳಿರ್ಗಳಲುಗದೆ ತರುಗಳೆಲೆಗಳು | ಕಳಲದೆಳೆ ಲತೆಗುಡಿಗಳಿನಿಸಂ |
ಚಲಿಸದಲರುಗಳೆಸಳು ಬಿಚ್ಚದೆ ಗಂಧವಹನಲ್ಲಿ ||
ಸುಳಿವನಾ ಬಂದಾಟವನು ಬಿ | ಟ್ಟೆಳಸದಾಸವ ಸಾರವನು ಪೂ |
ಗಳಿಸುರಿವನುಂಡಳಿ ಕುಲವು ಸುಖವಿಹವು ವನದೊಳಗೆ || ೧೭ ||

ಕರಿ ಕರಂಗಳ ನೆಮ್ಮಿ ಜರದ ಜ | ಗರವು ಬೇಡರ ಬಿಲ್ಲೊಳಗೆ ಕೋ |
ದಿರಿಸಿ ದೀವದ ಮೃಗಗಳನೆ ಮೃಗನಿಕರವರವಾವು ||
ನೆರೆದಿ ಶಿಖಿಗಳ ಸೋಗೆಗಳ ಬಗೆ | ದೊರಗುವವು ಕೇಸರಿಯ ನಿಡುಗೇ |
ಸರವ ಪಿಕ್ಕುವವಾನೆ ಮರಿಗಳು ತಮ್ಮ ಕೈಗಳಲಿ || ೧೮ ||

ಹರಿಣ ಶಿಶುಗಳು ಪೆರ್ಬುಲಿಯ ಪೆಂ | ಡಿರ ತೊರೆದ ಮೊಲೆಯುಂಬನಾ ಕೇ |
ಸರಿಣಿಗಳು ಕರಿಣಿಗಳು ಕಲಭಕೆ ಸಿಂಗವರಿಗಳಿಗೆ ||
ಬೆರಸಿ ಮೊಲೆಯೂಡುವವು ವೈರವ | ಮರೆದು ನೆರೆಸಾಳುವನರಂಕೆಯೊ |
ಳರೆಗಿಳಿಗಳಿಹವಾ ಮುನೀಂದ್ರ ತಪಪ್ರಭಾವದಲಿ || ೧೯ ||

ಯತಿಪತಿಯನಾ ವನದೊಳಿಹ ದೇ | ವತೆಗಳಾವಗ ಭಕುತಿಯಿಂ ಸಂ |
ಸ್ತುತಿಪನುತಿಯನು ಕಲಿತು ಪಕ್ಕಿಗಳೋದುತಿಹವಲ್ಲಿ ||
ಯತಿಪತಿಗೆ ಛದ್ಮಸ್ಥಕಾಲವು | ಚತುರಿನೈವತ್ತಾರು ದಿನ ಸಲ |
ಲತುಳನಾ ಗಿರಿಯಗ್ರಿಮದ ಪೆರ್ವಿದಿರ ಮೊದಲಿನಲಿ || ೨೦ ||

ವಿಮಲ ಪಾಷಾಣಸ್ಥಳಿಯಲಾ | ಸುಮುನಿಯೀರ್ಯಾ [ಪತ್ತಿಯಿಂದಾ] |
[ಕ್ರ]ಮದಚಲಯೋಗದಿನಿಲಲ್ಕೆಲೆಗಿರಿಕೆನವುಗಾಳಿ ||
ಭ್ರಮಿಸದುಲಿಯೆವು ಪಕ್ಕಿಗಳುಮಾ | ಕ್ರಮಿಸದೊಂದಡಿಯನು ಮೃಗಂಗಳು |
ಸಮನಿಸಿದ ಸನ್ಮುನಿಯ ಯೋಗವಿಘಾತ ಭೀತಿಯಲಿ || ೨೧ ||

ಯತಿಪತಿಗೆ ವ್ಯವಹಾರ ನಿಶ್ಚಯ | ಯುತ ಸುರತ್ನತ್ರಯ ತದಾತ್ಮಕ |
ಧೃತವಿ……………….ಶಿಷ್ಟತರವಾದ ||
ಪ್ರಥಮ ಶುಕ್ಲಧ್ಯಾನದಿಂ ನೆರೆ | ಹತವಡೆದುದಾ ಮೋಹನೀಯ |
ಸ್ಥಿತಿಯು ಹತ್ತನೆಯಾ ಗುಣಸ್ಥಾನಾಂತ್ಯ ಸಮಯದಲಿ || ೨೨ ||

ಅತಿಶಯದ ಶುದ್ಧೋಪಯೋಗೋ | ನ್ನತ ವಿಭೇದಾಭೇದ ರತ್ನ |
ತ್ರಿತಯ ರೂಪದ್ವಿತಯ ಶುಕ್ಲಧ್ಯಾನದಿಂದುಳಿದ ||
ಅತುಳಘಾತಿ[ಕರುಮಗ]ಳಳಿದವು | ನುತಿಪ ಕ್ಷೀಣ ಕಷಾಯನಂತ್ಯದೊ |
ಳತಿಶಯದ ನವಲಬ್ಧಿ ನಿಧಿಯಲಿ ಚಕ್ರಿಗೊದಗಿದವು || ೨೩ ||

ಮಿಕ್ಕು ಮುಸುಕಿದ ಘಾತಿತಮಮುವು | ಸಿಕ್ಕಿ ಶುಕ್ಲಧ್ಯಾನ ಕಿರಣದಿ |
ತಕ್ಕ ಭವ್ಯಾಂಬುಜವನರಳಿಸಿ ಸುರನಿಕರವೆಂಬ ||
ಚಕ್ರ ಕುತ್ಸವವಿತ್ತು ಕಣ್ಗೆಜ | ಲಕ್ಕನಾಗಿರೆ ಕೇವಲ ಜ್ಞಾ |
ನಾರ್ಕನುದಯಿಸಿದತ್ತು ನೇಮಿ ಜಿನೋದಯಾದ್ರಿಯಲಿ || ೨೪ ||

ಸುರಕುಸುಮ ವೃಷ್ಟಿಗಳುಮಾಗಳೆ | ಸುರಿಯೆ ಸುರತೂರ್ಯ ಪ್ರಣಾದವು |
ಸುರಗಣ ಸ್ತೋತ್ರಾರವಂಗಳು ಶ್ರುತಿಮಧುರವಾಗಿ ||
ಸುರಗಣಿಕೆಯರ ಗಾನದಿಂಚರ | ಸರಕೃತೋತ್ತಮ ಗಂಧವಹಮಿವು |
ಪರಕಲಿಸಿದವು ದಿಗುನಭೋಮಂಡಲವನಿಂಬಾಗಿ || ೨೫ ||

ಪಿಂಗದಾ ಕೈವಲ್ಯ ಲಕ್ಷ್ಮೀ | ಸಂಗದಿಂ ಪರಮಾತ್ಮ ನೆನಿಸಿದ |
ನಂಗವೈರಿಯ ದಿವ್ಯ ಪರಮೌದಾರಿಕ ಶರೀರ ||
ಕಂಗಲಿಗೆ ಸವಿಯಾಗಿ ಕೋಟಿ ಪ | ತಂಗ ಚಂದ್ರಜ್ಯೋತಿಮಯದಲಿ |
ಬಾಂಗೆ ಧರೆಯಿಂ ನೆಗೆದುದೈಸಾಸಿರ ಧನುಚ್ಚದಲಿ || ೨೬ ||

ಸುರಪಗಾ ಸಮಯದೊಳೆ ಹರಿವಿ | ಷ್ಟರವು ಕಂಪಿಸೆ ವನಭವನವಿ |
ಸ್ಫುರಿತ ಜ್ಯೋತಿರ್ಲೋಕ ನಾಕದೊಳಾ ಮುಹೂರ್ತದೊಳು ||
ತರದಿ ಭೇರೀ ನಾದ ಶಂಖ | ಸ್ವರಗಜಾರಿಧ್ವನಿ ಸುಘಂಟಾ |
ವಿರುತಿ ಅಕೃತಕವಾದುದೊರ್ಮೆಯೆ ಭೂಪ ಕೇಳೆಂದ || ೨೭ ||

ಅರುಹನರಿವು [ತ್ರಿಲೋಕ] ವಸ್ತುವ | ನಿರದದೊಂದೇ ಸಮಯದೊಳಗರಿ |
ವಿರವಿನಿಂದರಿದುದು ಜಗತ್ರಯವೊಂದೆ ಸಮಯದಲಿ |
ಪರಮನಾ ಕೈವಲ್ಯ ಲಕ್ಷ್ಮಿಯ | ಪರಿಣಯನವನು ತಿಳಿದು ನಭದಲಿ |
ನೆರೆದು ನಿಂದುದು ತಮ್ಮಲೋಕದೊಳೋರ್ವರಿಲ್ಲೆನಿಸಿ || ೨೮ ||

ಬಂದನಾ ಶಚಿವೆರಸು ಸೌಧ | ರ್ಮೇಂದ್ರನಾ ಸಮಯದಲಿ ನೇಮಿಜಿ |
ನೇಂದ್ರನಾ ಕಲ್ಯಾಣಪೂಜಾನಂದ ಮಂದಿರನು ||
ಸಂದ ಬಾಂದೊರೆಯೊಲೆವ ತೆಳುಧರೆ | ಯಂದದಲಿ ಸುರಕಾಂತೆಯರ ಕೈ |
ಯಿಂದ ಚವರಗಲಾಡುತಿರಲೈರಾವತದ ಮೇಲೆ || ೨೯ ||

ದೆಸೆಗಳುರುತರ ಚಾಪಮಯವಾ | ಗಸವೆ ಪೂರ್ಣ ಶಶಾಂಕಮಯವೀ |
ವಸುಧೆ ತಾರಾಮಯವೆನಿಸಿದುದು ನೋಟಕರಕಣ್ಗೆ ||
ಎಸೆವ ತೊಡವಿನ ಬೆರಕೆವೆಳಗಿನ | ಹಸರದಿಂ ಧವಲಾತಪತ್ರದ |
ಮುಸುಕಿನಿಂ ಮಂದಾರ ಕುಸುಮಾಸಾರ ಸಂತತಿಯಿಂ || ೩೦ ||

ಹೊಳೆವ ಮಿಂಚುಗಳಂತೆ ನಭದೊಳು | ತೊಳತೊಳಗಿ ಸುರನಚ್ಚಣಿಯರ |
ಗ್ಗಳಿಸಿ ಗೀತದ ತಾಳಮದ್ದಳೆಗಳ ಜತಿಯಕೂಡಿ ||
ನಲಿದು ನರ್ತಿಸಿ ಜೀವಜನುಮಂ | ಗಳ ವಿರುತಿ ತೂರ್ಯರವದೊಳೊಡ |
ವೆಳೆದುದೈದೆ ಚತುರ್ನಿಕಾಯಾಮರರ ಗಗನದಲಿ || ೩೧ ||

ವರ ಶಚೀಪತಿಯಂತು ಬಂದಾ | ದರದಿ ಮುನ್ನವೆ ತನ್ನ ಬೆಸದಿಂ |
ಪರಮ ಭಕ್ತಿಯಿನಾ ಕುಬೇರನೆ ಕೂರ್ತು ನಿರ್ಮಿಸಿದ ||
ವರ ಸಮವಸರಣವನು ಪೊಕ್ಕಾ | ನಿರುಪಮಾಸ್ಥಾಣದ ನಡುವೆ ಕೇ |
ಸರಿ ಸುಪೀಠದೊಳಿರ್ದ ಜಿನರನು ಮೂಮೆಬಲಗೊಂಡ || ೩೨ ||

ಶ್ರೀ ನೇಮಿನಾಥ ಮಹಿನುತ |
[ಗನುಪಮ]ಭವ್ಯೌಘತಾಪಮಂ ಮಳ್ಗಿಸಲಿಂ ||
ನೇನೆಸೆದುದೊ ತ್ರಿಜಗತ್ಪ್ರಭು |
ನೀನೆಂಬುದನರಿಪುವಂತೆ ಮುಕ್ಕೊಡೆ ನಭದೊಳ್ || ೧ ||

ಜಿನನಿಮ್ಮ ಮಹಿಮೆಯೆನ್ನದೊ |
ವಿನೇಯ ಜನಸ್ವಪ್ನ ಭವವ… ಶಶಾಂಕ ||
ರ್ಕನ ಕಾಯ ಕಾಂತಿಯಿಂ ಮೋ |
ಹನೀಯ ತಮಮಂ ತೆರಳ್ಚುಗುಂ ಭಾವಲಯಂ || ೨ ||

ಪರಮೇಶ್ವರ ನಿಮಗಲ್ಲದೆ |
ಪರಮಾರ್ಹಂತ್ಯಾದಿ ಲಕ್ಷ್ಮಿಪೆರರ್ಗಿಲ್ಲಿಲ್ಲೆಂ ||
ದುರು ನಿನದದಿ ಸಾರುವವೊಲ್ |
ಸುರದುಂದುಭಿ ನಿಮ್ಮ ಸಭೆಯೊಳೇಂ ಧ್ವನಿಯಿಸಿತೊ || ೩ ||

ಮುತ್ತುಗಳುಂ ನೀಲಂಗಳು |
ಮೊತ್ತರಿಸಿಯೆ ಸುರಿವುದೆನೆ ನಭೋಂಗಣದಿಂದೆ ||
[ಉ] ತ್ತಮನೆ ನಿಮಗೆ ಕರೆದವು |
ಮುಕ್ತಾಳಿ ಪ್ರಯುತ ದಿವಿಜ ಕುಸುಮಾಸಾರಂ || ೪ ||

ಕೃತಕೃತ್ಯ ನಿಮ್ಮ ಬೋಧಾ |
ಮೃತ ಶರಧಿಯ ತೆರೆಗಳೆನೆ ಚತುಷ್ಟವಿರ ||
ಜಿತ ಚಾಮರವೇನೆಸೆದುವೊ |
ಸತತಂ ಪು‌ಣ್ಯದ ಪೊನಲ್ಗಳಂ ತುಳ್ಕುವವೋಲ್ || ೫ ||

ರಾಗ ವಿದೂರನೆ ನಿಮ್ಮಂ |
ಭೋಗಿಸುವಾತುರತೆವಡೆದ ಮುಕ್ತಿವಧೂಟಿ ||
[ರಾಗ]ಮಮೇಂ ಬಿಡದೇಂ ಚೆಲ್ |
ವಾಗಿರ್ದುದೊಯೆನಿಸಿ ರಾಗಿಸಿರ್ದುದಶೋಕಂ || ೬ ||

ಭವ್ಯಾನಂದ ಕರಂ ಷ |
ಡ್ಡ್ರವ್ಯಾಭಿವ್ಯಕ್ತಮಸ್ತದೋಷಂ ತ್ರಿಜಗತ್ ||
ಸೇವ್ಯಂ ನೇಮಿ ಜಿನೇಶ್ವರ |
ದಿವ್ಯಧ್ವನಿ ನಿಮ್ಮ ಮುಖದೊಳೇನೊಪ್ಪಿದುದೊ || ೭ ||

ದುರಿತ ಕರಿಹರಿಯೆ ನಿಮಗೀ |
ಹರಿಪೀಠಂ ಸಲ್ವುದಲ್ಲದುಳಿದವರ್ಗಿದು ತಾಂ |
ದೊರಕೊಳ್ಳುವುದೆ ಸುರನರಫಣಿ |
ವರಮಕುಟಸ್ಫುರಿತಮಣಿಗಣಾಂಶುವಿಳಾಸಂ || ೮ ||

ಇಂತು ನುತಿಯಿಸಿ ನಿಖಿಲನಿಹಿತಸು | ಮುಕುಳಿತ ಕರಯುಗನು ತ |
ತ್ಕಾಂತೆ ಶುಚಿಸಚಿ ನೀಡೆ ಪೂಜಾದ್ರವ್ಯಸಂಚಯವ ||
ಅಂತಕಾಂತಕನಡಿಗಳಿಗೆ ಸು | ಸ್ವಾಂತನಷ್ಟವಿಧಾರ್ಚನೆಯ ಚೆಲು |
ವಾಂತು ರಂಜಿಸಿಗೈದು ಪಮರಾನಂದವೈದಿದನು || ೩೩ ||

ಒದವಿದಾಶ್ವೀಜದಲಿ ಪಾಡ್ಯದೊ | ಳೊದಗೆ ಚಿತ್ರಾ ವಿದಿತ ನಕ್ಷ |
ತ್ರದೊಳು ಪೂರ್ವಾಹ್ನದೊಳು ಪೂಜೆಯಮಾಡಿ ಭಕ್ತಿಯಲಿ ||
ತ್ರಿದಶ ಪತಿತಾ ನೇಮಿಜಿನವರ | ರುದಿತ ಕೇವಲಬೋಧಕಲ್ಯಾ |
ಣದ ಮಹಾಮಹಿಮೆಯನು ನೆಗಳ್ದನು ವಿಮಲಜಿನಭಕ್ತ || ೩೪ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತ ಮಯ ಮಧು |
ಕರ ವಿರಾಜಿತ ಸುಕವಿ ಸಾಳುವ ವಿರಚಿತವೆನಿಪ್ಪ |
ಪರಮ ನೇಮಿ ಜಿನೇಂದ್ರ ಪಾವನ | ಚರಿತೆಯೊಳು ಪದಿನಾಲ್ಕನೆಯದಿದು |
ದೊರೆವಡೆದುದೊಳ್ಪೆನೆ ಸುದೀಕ್ಷಾ ಪರ್ವವೇಳೆಯಲಿ || ೩೫ ||

|| ಅಂತು ಸುದೀಕ್ಷಾ ಪರ್ವಕ್ಕಂ ಸಂಧಿ ೬೦ ಕ್ಕಂ ಮಂಗಲಮಹಾ ||