ಸಂಧಿ ೬೩

ಪರಮೇಶಂ ನುಡಿದಾದೇಶವೆ ತಾಂ | ಉರಿದುದೊ ದ್ವಾರಿಕೆ ಅಳೆದನು ಹರಿಮಿಗೆ |
ತಿರಿದನು ಹಲಧರ………ನಯ್ಯಯ್ಯ [ಪರಮೇಶಾ] || ಪದ ||

ಕೇಳೆಲೆ ಮಗಧಾಧೀಶನೆ ಬಲಗೋ | ಪಾಲರು ಸುಖದಿಂ ರಾಜ್ಯಾಂಗನೆಯೊಳು |
ಮೇಳದಿನಿರೆಯಿರೆ ಪನ್ನೆರಡಬ್ದವು ಸಂದುದು ಸಲಲೊಡೆನೆ ||
ಆಲೋಚಿಸಿ ಆ ದೀಪಾಯನ ಮುನಿ | ಆಳೋಕಿಪೆವಿನ್ನಾ ಹಲಧರ ವನ |
ಮಾಲೆಗಲನು ತಾನಂದೆಯಿತಂದಪನಾ ದೇಶಕ್ಕಿರದೆ || ೧ ||

ಕಳಿದುದು ದಿನನುಡಿದವಧಿಯದೆಂಬುದ | ನಿಳಿದನು ಮುನಿಪತಿಯಧಿಕದಿ ಮಾಸವ |
ದುಳಿದಪುದೆಂಬಾ ಗಣನೆಯನಿನಿಸುಂ ಮನದಲಿ ಭಾವಿಸದೆ ||
ಬಳಿಕಾ ಪುರದ ಬಹಿರ್ವನದೊಳು ಸಂ | ಚಳಿಸದೆ ಸೂರ್ಯಪ್ರತಿಮಾಯೋಗವ |
ತಳೆದಿರೆ ನಿಂದನು ತಂದುದು ವಿಧಿ ಭೂಪಾಲಕೆ ಕೇಳಿದನು || ೨ ||

ಇರಲಾ ಪೊಳಲರಮಕ್ಕಳುಗಳು ವನ | ಕರಿಗಳ ಬೆಂಟೆಯನಾಡುವ ಬಂದಾ |
ಪಿರಿಯಡವಿಯಲತಿ ಬಳಲಿದ ನೀಚರು ಮುಂದಂಗೈ ತರುತ ||
ಸುರೆಯನು ಹೊಯಿಸಿಸಿದಂದಿನ ದೊಣೆಯಲಿ | ಹೊರೆಬಿಟ್ಟರೆ ಮುಚ್ಚುಳುಗಲ್ಲದನೀ |
ಚರೆತೆಗೆ ದೊಳಪೊಕ್ಕೀಕ್ಷಿಸಿ ತಿಳಿನೀರೆಂದದ ನೀಂಟಿದರು || ೩ ||

ಮಳೆ ಬಂದೊಡೆ ನೀರನುಕರೆದನು ತಾ | ನೊಳಕೊಂಬುದು ಘರ್ಮದ ಬಿಸಿಲಿಗೆ ಕಿರಿ |
ದಿಳಿವುದು ತನ್ನಂತಸ್ಸಾರವು ನೂರ್ಮಡಿಸುವುದದ ನೀಂಟಿ |
ಘಳಿಲನೆ ಸೊಕ್ಕಿದ ಪೊಲೆಯರು ತನ್ಮುನಿ | ಗಳನೀಕ್ಷಿಸಿ ಪಾಪಿಗಳಕಟಾ ಕ |
ಲ್ಗಳಿನವರನ್ನವರಂಘ್ರಿಗಳಿಂ ಮಸ್ತಕ ಪರಿಯಂತರ [ಹೂಳಿದರು] || ೪ ||

ಜಿನಜಿನ ಪಾತಕರಂಜದೆ ಮತ್ತಾ | ಮುನಿಪನ ನೆತ್ತಿಯನೊಡೆಗುಟ್ಟಿದರಾ |
ವನದಿಂದವರತ್ತಲು ಪೋದರು ಹರಿ ಬಲರರಿಯದೆಯೈತಂದು ||
ಮನಮರುಕದಿನಾ ಕಲುಗಳ ಬೆಟ್ಟವ | ನಿನಿಸಿರದೆಲ್ಲವ ತೆಗೆದೀರ್ವರೆ ತಾ |
ವನುನಯದಿಂ ಕ್ಷಮಿಯಿಸಲೇ ಯತಿಪತಿಯಂದಡಿಗೆರಗಿದರು || ೫ ||

ಎರಗಲು ಮುನಿಪತಿಯವರೀರ್ವರಕಣು | ದೆರೆದೀಕ್ಷಿಸಿದನು ಕೊರಳೆಡೆಯೊಳಗಸು |
ತುರುಗಿರೆ ಬಿಡುವೆನು ನಿಮ್ಮೀರ್ವರನೆಂದಂಗುಲಿ ಸನ್ನೆಯಲಿ ||
ಅರುಹಿದನತಿ ಕೋಪಾಟೋಪದಿ ದಯೆ | ಯರಿತಿರೆ ಹದಿನಾರನೆಯಾ ಸ್ವರ್ಗಕೆ |
ನರೆದಾಯುರ್ಬದ್ಧವೆ ಪರಿಪಟ್ಟುದು ಕೋಪದಿ ಕೆಡೆದವರಾರ್ || ೬ ||

ಯತಿಗುಪಸರ್ಗವು ಬಂದೊಡೆ ಪೂರ್ವಾ | ರ್ಜಿತವುದಯಿಸಿತಿದನನುಭವಿಸುವಮೆಮ |
ಗತಿಹಿತವಾದುದು ಕೆಡುವೊಡಲುಳಿವುದೆ ನನ್ನ ಸುಧಾತ್ಮನನು ||
ಗತಿಗೆಡಿಸುವೆನೇಯೆಂದು ಮಹಾ ಶಾಂ | ತತೆಯನು ಸದ್ಭಾವನೆಯಿಂ ತಳೆಯದೆ |
ಯತಿಕೆಟ್ಟನು ನಿಜಗೃಹವೈದಿದರಲ್ಲಿರದಾ ಭೂವರರು || ೭ ||

ಭವನಾಮರೊಳಗುಂಟಂಟಗ್ರದ | ಹವಣಿಸದಗ್ನಿ ಕುಮಾರಕನಾಗಿರ |
ದವಧಿಯಿನರಿದಾ ಹೊಲೆಯರು ತನ್ನನು ಕೊಂದರಲಾಯೆಂದು ||
ಕವಿದಾ ಹೊಲೆಗೇರಿಯದೆನಿತನಿತುಮ | ನೆವೆದೆರೆವನಿತರೊಳಗೆ ಸುಟ್ಟನು ಮಾ |
ರ್ಗವೆ ದೇವಂಗದು ಪೊಲೆ ಮುಳಿಸಿರಲಾವನಗುಣ ಕೆಡದಿಹುದೈ || ೮ ||

ಆಸಮಯದೊಳಾ ಪ್ರಳಯದ ವಾಯುವೆ | ಬೀಸಿತೊಯೆನೆ ಬಿರುಗಾಳಿಯೊದವೆ ವಾ |
ರಾಸಿ ಸಹಸ್ರವು ಘೂರ್ಣಿಸಿದುದೊಯೆನೆ ಭೋರ್ಭುಗಿಭುಗಿಲೆನುತ ||
ಕೇಸುರಿಯಾ ದ್ವಾರಾವತಿಯನು ಕ | ಟ್ಟಾಸುರದಿಂ ಪತ್ತಿದುದೂರವರಾ |
ಯಾಸವ ನಾನಿನ್ನೇನೆಂಬೆನು ಜಿನಜಿನನೆ ಮಹಾದೇವ || ೯ ||

ಅದೆಅದೆಯತ್ತಲೆ ಪೋಗದು ಮತ್ತಿ | ತ್ತೆದೆಯಿದೆ ಹೊತ್ತಿತು ಮತ್ತಿತ್ತಲು ಹೋ |
ಗದೆಯುರಿ ನೆಗೆದುದು ನೋಡಿರೆ ಸುತ್ತಲು ಹಬ್ಬಿತು ಕೊಬ್ಬಿತಲೆ ||
ಎದೆಯಿದೆ ಈ ಬಂದುದು ಕೆಟ್ಟೆವು ಕಿ | ಚ್ಚೊದವಿತು ಮಕ್ಕಳ ತೆಗೆ ತುರುಗಳ ಬಿಡು |
ಕುದುರೆಯನಾನೆಯ ಪೊರಮಡಿಸೆಂಬಬ್ಬರವಾ ನಗರದೊಳು || ೧೦ ||

ಹರಿದುಪ್ಪರಿಗೆಯನೇರೆ ನಿರೀಕ್ಷಿಸಿ | ಯಿರಲೆಡೆಗಾಣವು ನಾಲ್ದೆಸೆಯನು ಕೇ |
ಸುರಿ ಕವಿತಂದುದು ಕೆಟ್ಟವುಪೊರೆಯೋ……..ಣದ ||
ನಾರಿಯರೆಲ್ಲರು ಗೋಳಿಡುತೆದೆ ಬಡಿ | ದಾರಿಸಿ ವಸ್ತ್ರಾಭರಣಧನಂಗಳ |
ತರತರದಿಂ ಪೊತ್ತಡಕುವ ದೇವಕವೊಪ್ಪಿದುದನಿತರೊಳು || ೧೧ ||

ಇದು ತೃಣವಿದು ಕಾಷ್ಠವು ಪಾಷಾಣವಿ | ದಿದು ಲೋಹಂಗಳಿದೊಳಗಿದು ಪೊರಗೆಂ |
ಬುದನೆನರಿದುದೇ ಪ್ರಳಯಾಗ್ನಿಯನಾಲ್ವಡಿ ತೀವ್ರವನಾಂತು ||
ಅದಿದೆನ್ನದೆ ಛುಂಛುಂಚಟ ಚಟ | ದಿದಿದಿದಿ ಉಧಿಗಲ್ದಗ ಧಗಯೆಂ |
ಬುದತಿ ಭೂಷಣ ರವಮಾಶ್ಚರ್ಯಮದಾದಪುದಯ್ಯಯ್ಯ || ೧೨ ||

ಉರಿ ಪರಿದಂದಿಂತಾ ಪುರಮೆಲ್ಲವ | ನುರಿಪುವುದನು ನಗಧರನೀಕ್ಷಿಸಿಯಿದು |
ಸುರದಾನವ ವೈಕುರ್ವಣವೆಂಬುದನರಿದು ಸುಚಕ್ರವನು ||
ಸ್ಮರಿಯಿಸಲದು ತಾಂ ಮೊದಲಾಗಿಹ ಸು | ಸ್ಥಿರ ರತ್ನಂಗಳ ಕಾಣೆನು ಬೆಸಸೆಂ |
ಬುರು ದೇವತೆಗಳು ಮುನ್ನವೆ ಹೋದರು ನೆರೆಕಡಲೆನೆ || ೧೩ ||

…………..ಡಿದಗಜೇಂದ್ರದವೊಲು | ನೆರೆಗರಳವು ಸೋರ್ದಮಹಾಹಿವೊಲು ನಿ |
ಷ್ಠುರನಖದಂತಂಗಳು ಕತ್ತರಿಸಿದ ಹರಿಯಂದದ ಹರಿಯು ||
ಇರಲಾ ಬಲಭದ್ರನು ನೇಗಿಲಿನಿಂ | ಶರಧಿಯ ನೀನರು ಸೋಂಕಲು ತುಪ್ಪವ |
ನೆರೆದಂತಾಯ್ತದು ನೀರ್ಗೆಟ್ಟಬುಜಕೆ ಪಗೆಯಾದರೆ ರವಿಯು || ೧೪ ||

ಸಿರಿಧರ ತಾನದನೀಕ್ಷಿಸಿ ನೆರೆತಾಂ | ಬಾರಿಪುದರಿದೆಂದಾಪೊಳಲಿಂದಲೆ |
ವಾರಿಜಮಿತ್ರನ ಪೂರಮಡಿಸಿಯೆ ಕೊಂಡೈತರುತಿರೆ ಕವಿದು ||
ಭೋರನೆ ಸುಡುಗ್ನಿಯು ತೆರಪನು ಕುಡೆ | ವಾರಿನಿಧಿಯ ತೀರದೊಳಿರೆಮಿಂದಾ |
ದ್ವಾರಕಿ ಬೇವುದನೀಕ್ಷಿಸಿ ಭೇದವನಾಂತನು ನಗಧರನೈ || ೧೫ ||

ತರತರದಿಂ ಪೊನ್ನುಪ್ಪರಿಗೆಗಳುಂ | ಪರಸಿದ ಬೆಳ್ಳಿಯಗೋಪುರಗಳು ಭೀ |
ಕರತರ ಶಸ್ತ್ರಾಸ್ತ್ರಂಗಳ ತಿಂಥಿಣಿ ಕಡುಗಿಚ್ಚಿಂ ಕರಗಿ ||
ತೆರೆಮಸಗುತ ಭೋರ್ಗರೆಯುತದತ್ತಲು | ಪರಿದಂಬುಧಿಯನು ಕೂಡುತಿರಲಾ |
ಸರಸತಿ ಜನ್ನವಿ ಜಗುನೆಗಳವು ಪರಿವಂದದಿ ತೋರಿದವೈ || ೧೬ ||

ಇಂದ್ರನ ಬೆಸದಿಂದೈಳನೆ ಬೀಳನೆ | ಚಂದದಿ ಮಾಡಿದಮಣಿಮಯದರಮನೆ |
……………..ಯೊಳಗಿರ್ದರಸಿಯರೂ ವಧುನಿಕರ ||
ಬೆಂದುದುಗಜಹಯಗೋಮಂಡಲಿಮಿಗೆ | ಬೆಂದುದು ಧನಕನಕಾದಿಗಳಕಟಾ |
ಬೆಂದುದು ಪೊಳಲೊಳು ನರನಾರೀಜನವೆಂದೆದೆಗರಗಿದನು || ೧೭ ||

ಬಿಡು ಮಾಧವ ಖೇದವನಿರದಾಪ | ತ್ತಡಸಿದೆಡೆಗೆಧೈರ್ಯವೆ ದೇಹಿಗೆ ಸಂ |
ಗಡಿಗನು ನೀನಿದರಿಂ ಪಿರಿಧೈರ್ಯವು ಕೆಡುವುದು ಕೆಡದಿಹುದೆ ||
ಕೆಡೆದಡೆ ಮುಕ್ತಿಯದೊಂದಲ್ಲದೆ ಮಿ | ಕ್ಕೆಡೆ ಮಹದೈಶ್ವರ್ಯಂಗಳಿವೆಲ್ಲವು |
ಕೆಡುವುದೆ ದಿಟವಲ್ಲದಡಿದನೊಲ್ಲದೆ ಭರತಾದಿಗಳದು || ೧೮ ||

ದೊರೆಕೊಳೆ ಶುಭಕರ್ಮವು ನಮಗಂದಾ | ಶರಧಿಯೆ ತೆರೆಪಾದುದು ಹಣಹತ್ತದೆ |
ಸುರಪುರಿಗೆಣೆಯೂರಾದುದು ಇಂದು ಶುಭೋದಯವಾಗಲಿಕೆ ||
ಶರಧಿಯ ನೀರೆವಲಂಘೃತವಾದುದು | ಉರಿವಾ ಬೀಳಾಗ್ನಿಗೆ ಭಾವಿಸೆ ಸಂ |
ಸರಣ ವಿಚಿತ್ರವ ನೀನರಿಯದನೇಯೆಂದನು ಹಲಧರನು || ೧೯ ||

ಎಂದಾ ಚಕ್ರೇಶನನಬುಧಿಯ ತಡಿ | ಯಿಂದೊಡಗೊಂಡತ್ತೊಂದಡವಿಗೆನಡೆ |
ತಂದನು ಖಚರಸುರಾಸುರ ನೃಪಸಂಕುಲವಿರಬೆಸಕೈವ ||
ಚಂದದ ಸಿರಿಯೆರೆಯರು ಪೂರ್ವಾರ್ಜಿತ | ದಿಂದವರೀರ್ವರೆ ಕೆಟ್ಟಡವಿಯ ಸಾ |
ರ್ತಂದರೆನಲುಮಿಕ್ಕರ ಸಿರಿಯೇ ತರದವನಿಪ ಕೇಳೆಂದ || ೨೦ ||

ಬನದೊಳಗೊಂದು ಮಹೀಜದ ಮೊದಲೊಳು | ಜನಪರಿಗಳು ವಿಶ್ರಮಿಸಿದರೇವೇ |
ಳ್ವೆನೊ ಅಸುರಾರಿಯ ಧೈರ್ಯದ ಕನಕಾಚಲವಾದ್ವಾರಕೆಯ ||
ಘನತರದಿಂ ಸುಡುವುರಿಯಿಂ ಕರಗಿತೊ | ಮನದೊಳೊಗಿನಿಸಂ ಕಾಣೆನು ಹಸಿದಪೆ |
ವೆನಹುದೇ ನೋಡೊಳಗತಿಖೇದವನೆಂತುಟೊ ಸೈರಿಪರೈ || ೨೧ ||

ಎಂದಡೆ ಹಲಧರ ಧಿಗಿಲೆಂದಾಯುಧ | ನಿಂದೀವರ ಲೋಚನ ನೀವಿಲ್ಲಿರಿ |
ತಂದೆಪೆನುಣಿಸಲು ಪೊರಗೆವಿಚಾರಿಸಿಯೆಂದಂತೈದುತಿರೆ ||
ಮುಂದೊಂದೆಡೆಯೊಳು ಹಬ್ಬಿದ ಮಲೆಯೊಳ | ದೊಂದೂರಿರಲೆಡೆಯೊಳಗೋರ್ವನ ಕಂ |
ಡಂದನಿದಾವುದು ಪುರವಿದರರಸಾರೆನಲವನಿಂತೆಂದ || ೨೨ ||

ಇದುವೆ ವದನದ ಕಾಸ್ತೆಯು ಪೆಸರಿಂ | ದಿದರಧಿಪತಿ ಕುಯವರ ಭೂಪಾಲಕ |
ನೊದವಿದ ವಿಭವದ ಕೌರವರಾಯನ ಮೊಮ್ಮೊಗನವನೆನಲು ||
ಅದನೇ ಬಗೆಯದೆ ಪೋಪಾಗಳು ಬೆಂ | ದುದು ತದ್ವಾರವತಿಯೆಂದರಿದ |
ಗ್ಗದ ರಾಗೋಕ್ತಿಯಲಿಹಜನವನು ನೋಡುತ್ತಂತೈದಿದನು || ೨೩ ||

ಬಲಭದ್ರನು ಪುರದಂಗಡಿಯಲಿ ಸಂ | ಗಳಿಸಿದ ವೈಶ್ಯನ ಫಣಿದತ್ತನ ಕಂ |
ಡಲೆ ಪರದನೆ ಪಿಡಿ ಎಂದುತ್ತಮವಹ ರನ್ನದ ಕುಂಡಲವ ||
ತಳೆದಿತ್ತನು ಕೊಡು ಕಲಸಿದ ಬುತ್ತಿಯ | ತಳುವದೆ ತನಗೆನಲಾಡಿಸಿ ಕೊಳುತಂ |
ನೊಳು ತಾಂ ನಷ್ಟಾದೃಷ್ಟರು ಪೆರರಿನ್ನಾರೆಂದೈದುತಿರೆ || ೨೪ ||

ಇದುವೆ ಅನರ್ಘ್ಯದ ರತ್ನದ ಕುಂಡಲ | ವಿದು ಸಾಮಾನ್ಯನದಲ್ಲೆಂದದನಾ |
ವಿದಿತವಣಿಗ್ವರನಾ ಕುಯವರಗಿತ್ತದರಮದವನುಸುರೆ ||
ಚದುರನು ತಿಳಿದನು ಬಲಭದ್ರನೆ ತ | ಪ್ಪದು ತಾನೆಂದಾಗಳೆ ಪಡೆಸಹ ಸಂ |
ಮದದಲಿ ಬೆಂಬತ್ತಿದನಡೆಗಟ್ಟಿದ ಪಗೆ ಸಿಲುಕಿದನೆಂದು || ೨೫ ||

ಪಡೆ ಬೆಂಬತ್ತಿಬರಲು ಬಲನೀಕ್ಷಿಸಿ | ವೊಡೆಯಲರನ ಪುಣ್ಯದ ದೇವತೆಯು |
ಳ್ಳೊಡೆಪಿಡಿಯೆಂದಾಕಾಶಕೆ ಬುತ್ತಿಯ ನೀದಲದುಕೆಡೆವುತಿರೆ ||
ಪಿಡಿದೆನ್ನನು ರಕ್ಷಿಪ ದೇವನೆಯು | ಳ್ಳೊಡೆ ಪಿಡಿಯೆಂದಿಡೆ ಗಗನದಲದು ನಿಲೆ |
ಕಡೆಯೊಳು ನಟ್ಟಾನೆಯ ಕಂಭವ ಕತ್ತೆತ್ತಿದ ಹಲಧರನೈ || ೨೬ ||

ಪಿಡಿದೆಡ ಬಲದೊಳಗಡಸುವ ಪಡೆಯನು | ಪೊಡೆದೊಡೆ ಬರಸಿಡಿಲಡಸಿ ಪೊಡೆದವೊಲು |
ಪಡಲಿಟ್ಟುದು ತಲೆ ಒಡದೆಲುವುಡಿದೊಡಲಡಸಿಕರುಳು ಸುರಿದು ||
ಕಡಲುವರಿಯೆ ಬಿಸುನೆತ್ತರು ಕರಿಗಳು | ಮಡಿದವು ಕುದುರೆಗಳಳಿದವು ತೇರ್ಗಳೆ |
ಪುಡಿಯಾದುವು ಮಣ್ಮಳಿಭಟರೊಂದರೆ ಘಲಿಗೆಯೊಳಗೆ ಮಡಿಯೆ || ೨೭ ||

ಇವನಾ ಜವಗಾಂತಾರುಳಿವರು ಪೇ | ಳವನಿಯೊಳೆಂದೆರಳೆಗೆ ಗರಿ ಮೂಡಿದ |
ತವಕದಿ ಹಾಯ್ದನು ತನ್ನಯ ದುರ್ಗಕೆ ಕುಯವರ ಭೂಪಾಲ ||
ಆವನೋಡುವ ಭರವನು ನೋಡುತಲಾ | ಪ್ರವರನು ಶೀಘ್ರದಿ ಬರೆ ಬನದೊಳು ಮಾ |
ಧವನನು ದೂರಾಂತರದಲಿ ಕಾಣುತ ಮನದಲಿ ಮರುಗಿದನೈ || ೨೮ ||

ಸುರಪುರಕೆಣೆಯಹ ಪೊಳಲೊಳು ಮಣಿಮಯ | ದರಮನೆಯೊಳು ದಿವಿಜಾಂಗನೆಯರ ಧಿ |
ಕ್ಕರಿಸುವ ಚೆಲುವಿನ ಸೋಳಹ ಸಾಸಿರ ಪೆಂಡಿರ ಸಿಂಗರದ ||
ಸಿರಿಯೋಲಗದೊಳಗಾಣತಿಗಾಣಿಯ | ರುರುಗೈದಾಸ್ವಾದನದಿಹ ಚಕ್ರಿಯ |
ಪರದೇಶಿಯವೋಲೋರ್ವನೆ ವಿಪಿನದೊಳಿಹುದಾದುದಲೆಂದು || ೨೯ ||

ನಟನೆಯಲೋಲಗಿಪಾರುಸಹಸ್ರ ಮ | ಕುಟಬದ್ಧರ ನಿಖಿಳಾಪತಿ ರುತಿಗಳ |
ಕುಟಿಲಾಳಕಿಯರ ಭೂಷಣ ರುಚಿಹರಿ ನೀಲಸ್ಥಳಿಯೊಳಗೆ ||
ಸ್ಫುಟತರ ಸುರಬಾಣಾಸನ ತಲೆಯೆನೆ | ನಟಿಯಿಸೆ ಹರಿಪೀಠದೊಳಿಹ ಚಕ್ರಿಯ |
ನಟವಿಗೆ ತಂದೇಕಾಕಿಯಮಾಡಿದೆ ಗಡ ಹಾಹಾವಿಧಿಯೆ || ೩೦ ||

ಎಂದೀ ಪರಿಯಲಿ ಶೋಕಿಸುತಿರದೈ | ತಂದನು ಲಕ್ಷ್ಮೀಕಾಂತನುಮಣ್ಣನು |
ತಂದಾ ಬುತ್ತಿಯನುಂಡೊಯ್ಯನೆ ವಿಶ್ರಮಿಸಿರೆ ಬಲಭದ್ರ ||
ಬಂದಾ ಕೌರವ ನೃಪತಿಯ ಮೊಮ್ಮಗ | ನಿಂದಾದಾ ಯುದ್ಧವನರಿಪಲು ಗೋ |
ವಿಂದನು ಧೃತಿಗೆಟ್ಟನು ಪಗೆವರನಾಡೊಳಗೆಂತಿಹೆನೆಂದೈ || ೩೧ ||

ಅಲ್ಲಿರದಿರ್ದಾ ಕೌಸುಂಭಾಟವಿ | ಯಲ್ಲಿಗೆ ನಡೆತಂದಾದಾಲದ ಮೊದ |
ಲಲ್ಲಿ ಪೊದಳ್ಕೆಯ ಕಿರು ಮೆಳೆಗಳ ಹೊದರಿನ ಬಳಸಿನನಡುವೆ ||
ಫುಲ್ಲಶರನ ಜನಕನು ಬಲಭದ್ರನು | ಮೆಲ್ಲನೆ ವಿಶ್ರಮಿಸಿರೆ ರುಗುಮಿಣಿಯಾ |
ವಲ್ಲಭಗಾದುದು ನೀರಳ್ಳೆಯು ಭೂಪಾಲಕ ಕೇಳೆಂದ || ೩೨ ||

ಪುರವನುದ ಪೊರಮಡುವಾಗಳು ಚಕ್ರೇ | ಶ್ವರಗೊಂದರಗಂಬಳಿ ಕೈಗೊದವಿತು |
ಸರಿಯೊಡವಪ್ಪುದೆ ಪಲದಿನವೊಡನಿರ್ದೊಡಲದು ಬಾರದೆನೆ ||
ಪುರುಷೋತ್ತಮಗಾ ಕಂಬಳಿಯನೆ ಬಿ | ತ್ತರದಲಿ ಹಾಸಿಹೊದಸಿ ಮಲಗಿಸಿತಾಂ |
ಪರಿದೆಯಿದಿದನಾ ನಿರ್ಮಲ ಬಲಯುತ….. || ೩೩ ||

………………………….. | ಳುತ್ತ ಜರತ್ಕುವರನು ತನ್ನಂಬುಮ |
ನೊತ್ತಿ ಸೆಳೆದ ಶರನಿಧಿಯೊಳಗೆಸೆಮೀನೊಂದದನುಂಗಿರಲು ||
ಎತ್ತಾನುಂ ವಾಗುರಿಕರ ದೆಸೆಯಿಂ | ಸುತ್ತಾಮತ್ಸ್ಯೋದರದೊಳುಸರಳದು |
ಪತ್ತಿದ ಬಸೆಯಿಂ ಕರ್ಬೊನ್ನವೊಲಿರೆ ಭೂವರ ಕೇಳಿದನೈ || ೩೪ ||

ಬಿದಿರಕ್ಕಿಯ ಜೇನೈಮೀನಂಗಳ | ನೊದಿವಿಸೆ ತದ್ವಿಪಿನದಿ….ರೊಳ |
ಗದನುರೆ ಮಾರುತ ಬಂದ ಜರತ್ಕುವರಂಗಾ ಕುಪ್ಪಿಗೆಯ ||
ಪದುಳಿಸಿ ಬಲಗಾರರೆ ಕುಡೆ ಕರುಪರಿ | ಯದೆ ಪಡೆದಿರುತ ತೊಳಲ್ತರುತಾತನೆ |
ಪೊದರಿನೊಳೊಂದಂಬಿನೆಯಿದುವಸಿಮೆಯೊಳೀಕ್ಷಿಸಿದನುನಿಂದೈ || ೩೫ ||

ಹರಿಯಾರೆನ್ನದ ಕಂಬಳಿಯನು ಹೊದೆ | ದಿರೆ ಚರಣವನಾ ಚರಣದ ಮೆಲಿ |
ಟ್ತಿರಲದು ಚಿತ್ರದಮೃಗವಾ ಕಾಲ್ಗಳೆ ಮೃಗದಕಿವಿಗಳೆಂದು ||
ಭರದಿ ಜರುತ್ಕುವರನು ಬಿಲ್ಲಿಗೆತೊಡೆ | ಶರವೆಂಬುದನದು ತೆಗೆದೆಸೆ ಕೃಷ್ಣನ |
ಚರಣವನುಚ್ಚಳಿಸಿದುದಾದೇಶವನಾವನೊ ಮೀರುವನೈ || ೩೬ ||

ನಳಿನಾಕ್ಷನು ಹಾ ಬಲಭದ್ರಾಯೆಂ | ದೊಲೆದೇಳಲು ನಾರಾಯಣನೆಂಬುದ |
ತಿಳಿದು ಜರತ್ಕುವರನು ಪರಿತಂದೆದೆ ಬಾಯನು ಹೊಯಿಕೊಂಡು ||
ಖಳಪಾತಕನವಿವೇಕಿಯು ತಾನರಿ | ವಳಿದಕಟಕಟಾ ಬಂಧುವ ಕೊಂದೆನು |
ಹೊಲೆಯನು ತಾನೆಂದಚ್ಯುತನಡಿಗಳ ಕೆಲದಲಿ ಹೊರಳಿದನೈ || ೩೭ ||

ಹೊರಳುತಲಿರ್ದ ಜರತ್ಕುವರನನಾ | ಹರಿ ಕಂಡಿರಿದೇನೆನೆ ಮೃಗವೆಂದೇ |
ಮರುಳನು ತಾನರಿಯಮೆಯಿಂದೆಚ್ಚೆನು ಪಾತಕನದೆನೆನೆ ||
ಮುರರಿಪುವಾತನವದ್ಯನೆನಿಪ್ಪುವ | ನರಿದಂಜದಿರೇಳೇಳಳದಿರು ಪರಿ |
ಹರಿಪೊಡೆಶಕ್ಯವೆ ಸಿದ್ಧಾದೇಶವನೆಂದನು ಕೋಪಿಸಿದೈ || ೩೮ ||

ಬಲದೇವನು ಬಹನೀಗಳು ಕಂಡೊಡೆ | ಕೊಲುವನು ನಿನ್ನನು ತಡೆಯದೆ ಪೋಗೆನೆ |
ನಳಿನಾಕ್ಷನ ನುಡಿಗೇಳುತಲಾತನು ಪೋಗಲು ಮೊದಲಂತೆ ||
ಮಲಗಿದನಣ್ಣನು ಬಹತನಕಿವನನು | ಕಳುಹದಿರಿಸಿಕೊಂಡಿರ್ದು ವಿಚಿತ್ರದ |
ಕೊಲೆಗೊಲಿಸದೆ ಬಿಟ್ಟೆನುತಾನೆಂದನು ಮನದೊಳು ಬಳಿಕಿರದೆ || ೩೯ ||

ಎಂದಾಳೋಚಿಸುವಾ ರೌದ್ರಧ್ಯಾ | ನಂ ದೊರೆಕೊಂಡಿರೆ ಮಡಿದಿರದಾಗೋ |
ವಿಂದನು ಮೂರನೆಯಾ ನರಕದೊಳಿರೆ ಪುಟ್ಟಿದ ಬಲನಿತ್ತ ||
ಒಂದಬ್ಜಾಕರ ಕಂಡುಗೊರದುನಾ | ನಂದದಿ ತಾವರೆಯೆಲೆಯಲಿ ಪೊಟ್ಟಳ |
ವಂ ದೊರೆಕೊಳಿಸಿಯೆ ವಹಿಲದಿ ತಂದನು ವೈಕುಂಠನ ಬಳಿಗೆ || ೪೦ ||

ಹರಿ ನಿದ್ರೆಯೊಳೊರಗಿರ್ದಪನೆಂದಾ | ಕರುಣಿಯಿರಲ್ಕಾ ನೊಳಗಳು ಝೊಮ್ಮನೆ |
ಚರಣದ ಗಾಯಕ್ಕೆರಗಲು ದೇಹಳಿಲೆಂದು ನಿಜಾನುಜನ ||
ಸರಸಿರುಹಾಂಕಿತದಂಗಾಲೊಳು ಬಲು | ಸರಳಿನ ಹಜ್ಜೆಯ ನೀಕ್ಷಿಸಿ ಮುಸಕನು |
ತೆರೆದಾನನವನು ಕಂಡರಿದನು ಪಂಚತ್ವಮನಾಂತುದನೈ || ೪೧ ||

ಅರಿದನು ಘಳಿಲನೆ ಮೂರ್ಚ್ಛಿಸಿ ನೆಲದೊಳ | ಗೊರಗಿದನೆತ್ತಾನುಂ ಮೆಲ್ಲನೆ ಯೆ |
ಚ್ಚರುತೆನ್ನನುಜನಕೊಂದವನೀ ವನದೊಳಗಡಗಿಹನವನ ||
ಅರಸುವೆನೆಂದಾ ಕೌಸುಂಬಾಟವಿ | ಯುರುತರುಗಳನೆಲ್ಲವ ನಿಮಿಷಕೆ ಬುಡ |
ಹೊರಗಾಗಲು ಕಿತ್ತೀಡಾಡಿದನೇನತಿಬಲನೈ ಬಲನೈ || ೪೨ ||

ಮಸಗಿದ ಜವನಂತತಿ ಕೋಪದಿ ಘೂ | ರ್ಣಿಸುತಾ ಮುನ್ನಿನ ತಾಣಕೆ ಬಂದೀ |
ಕ್ಷಿಸಿ ಎಲೆ ತಮ್ಮನೆ ನಿನ್ನನು ಕೊಂದವನಾವೆಡೆಗೈದಿದನೈ ||
ಸಸಿನೆನಗರಿಪೀ ಕ್ಷಣದೊಳೆ ಕೊಲುವೆನು | ತಿಸುಳಿಯ ಮರೆವೊಕ್ಕಡೆ ಬಿಡೆವೆಂದರಿ |
ವಿಸಿದನು ಶೋಕಾಗ್ನಿಯ ಮಿಕ್ಕುದು ಕೋಪಾಗ್ನಿಹಲಾಯುಧನೈ || ೪೩ ||

ಬಳಿಕನುಜನ ಕೊರಲನು ತೆಕ್ಕಿಸಿಕೊಂ | ಡಳುತಳುತಕಟಾ ತಮ್ಮನ ದೇವತೆ |
ಗಳ ಬಾಲ್ಯದಿ ಬೇಡಿದಧಟೆಲ್ಲಿತೊಪರ್ವ…… ||
…ದುದೊ ಫಣಿಶಯ್ಯೆಯನಡ | ರ್ದಳವೇನಾದುದೊ ಗಜವನು ಮಲ್ಲರ |
ಕಲಿ ಕಂಸನ ಕೊಂದಧಟೇನಾದುದೊ ಹಾ ವಿಧಿಯೇ ಎಂದ || ೪೪ ||

ಕಡು ಮುಳಿಸಿಂದೆ ಜರಾಸಂಧನು ಪೂ | ಣ್ದಡೆ ನಿನ್ನಯ ವಜ್ರೋಪಮವಹ ಚೆಲು
ವೊಡಲನು ಭೇದಿಸಲರಿಯದೆ ಚಕ್ರವು ನಿನಗೊಲಿತಂದುದಲ ||
ಅಡವಿಯೊಳಗೆ ಹುಲು ಬೇಡನ ಸರಳಿಂ | ಮಡವೀ ಪ್ರಾಪ್ತಿಯು ನಿನಗಿಂದಾದುದು |
ಗಡ ಹಾಹಾ ಖಳ ಪಾಪಿ ವಿಧಾತನೆ ಕೊಂದೆ ಗಡಾ ಎಂದ || ೪೫ ||

ಬಳೆದೀ ಶೋಕದಿ ಪಳವಿಸಿ ನೆರೆಬಾ | ಯಳಿದು ಮನಂಗೆಟ್ಟರಿಮರುಳಾಗಿಯೆ |
ನೆಲನೊತ್ತುಗುಮೀ ತಮ್ಮನ ಚೆಲುವಿನ ಲಲಿತಾಂಗವನೆಂದು ||
ಬಲನಾ ಬೆಳ್ಳಿಯ ಬೆಟ್ಟವ ನೀಲಾ | ಚಲವನು ಪೊತ್ತಂತಿರೆ ಪೊತ್ತನು ಪೆಗ |
ಲೊಳು ಕೃಷ್ಣನ ಸಬವನು ಬಂಧುಗಳಳಿವಾರನು ಮರುಳಿಸದೈ || ೪೬ ||

ಎಲೆ ನಂದನವೇ ಎಲೆ ಚಂದನವೇ | ಎಲೆ ಗಿರಿಗಳಿರಾ ಎಲೆ ದರಿಗಳಿರಾ |
ಎಲೆ ಕೆರೆಗಳೆ ಕೇಳೆಲೆ ತಾರೆಗಳೇ ಹೇಳೆಲೆ ನಿರ್ಜರವೆ ||
ಚೆಲುವನು ನನ್ನನುಜನು ಯಾದವಕುಲ | ತಿಲಕವದೇಕೆಯೊನುಡಿಯನೆನುತ ಮಿಗೆ |
ಹಲುಬುತ ಹೊತ್ತರುದಿಂಗಳು ತೊಳಗಿದನನ್ನೆಗಮದನರಿದೈ || ೪೭ ||

ಬಂದನು ಸಿದ್ಧಾರ್ಥಾಮರವೆರಸೊಲ | ವಿಂದಾ ನೈಗಮದೇವನು ತಾ ನೊಡ |
ನೊಂದು ವಿಶಾಲ ಶಿಲಾತಳದೊಳು ಕಬ್ಬನು ನಟ್ಟುದಕವನು ||
ತಂದಡಕುವ ದಂದುಗವನು ಬಲನಾ | ಬಂದೀಕ್ಷಿಸಿ ಯೆಲೆ ಮರುಳರಿರಾ ನಿ |
ರ್ವಂದಮಿದೇತಕೆ ಕಲ್ಲೊಳು ಕಬ್ಬಿನ ಕೆಯಿ ಬೆಳೆವುದೆ ಎಂದ || ೪೮ ||

ಮರುಳುತನವೆ ನಮ್ಮುಜ್ಜುಗವೆಂದೆನೆ | ಮರುಳುತನವೆಯಿದು ಸಂದೆಗವಿಲ್ಲೆನೆ |
ಮರುಳುತನವು ನಮಗಂ ನಿಮಗಂ ಸರಿಯಿದು ಬೆಳೆಯದ ತೆರದಿ ||
ಹರಣವು ಬರಲರಿಯದು ಆ ಹೆಣಕೆನೆ | ಮರಳು ಮಸಗಿ ಬಂದತಿ ಕೋಪಿಸಿತಲೆ |
ಎರಡುಂಟೇ ನಿಮಗೆನ್ನನುಜನ ಹೆಣ ನೆನಬಹುದೇ ಎಂದೈ || ೪೯ ||

ಬಡಿಯ ಬರಲು ಸಿಲುಕದೆ ಮತ್ತತ್ತೊಂ – | ದೆಡೆಯಲಿ ಬಿತ್ತು ಮರವನವರೀರ್ವರು |
ಬುಡಮೇಲಾಗಿರೆ ನಟ್ಟುದಕವನಡುಕುತ್ತಿರೆ ವಿಭು ಕಂಡು ||
ಕೆಡುಗೆಲಸವಿದೇಕರೆ ಮರುಳರಿರಾ | ಬುಡಮೇಲಾದೊಣರ್ಮರ ಚಿಗುರ್ವುದೆಯೆನೆ |
ಬಿಡು ಮೋಹವನಸು ಬಹುದೇ ಶಬಕದನುಳಿನೀನೆಂದಪರೆ || ೫೦ ||

ಎನೆ ಹಲಧರ ಮುನಿದತ್ತೈದುತ್ತಿರ | ಲನಿಮಿಷರುಮಿಯನು ಕಟ್ಟುವ ಹುಡಿಮಳ |
ಲನು ಹಿಂಡುವನಿರ್ಗದೇವವಸರದಿಂ ಮುನ್ನಿನವೊಲುನುಡಿಯೆ ||
ಮನದಿಂ ಮೋಹವು ಬಲಭದ್ರಗೆ ಮೆ | ಲ್ಲನೆ ತೊಲಗಿತು ರವಿಗೊಡ್ಡಿದ ಮುಗಿಲೊ – |
ಯ್ಯನೆ ತೊಲಗವೊಲು ಬಳಿಕರಿದಿಳುಹಿದನಾ ಶವವನು ಕೆಳಗೆ || ೫೧ ||

ಬಳಿಕಾ ದಿವಿಜರದೃಶ್ಯದೆ ಪೋದರು | ಬಲನಾ ಶವವನು ನಿರ್ಮಲವಾದಾ |
ಸ್ಥಳನಲಿ ಸಂಸ್ಕರಿಸುವೆ ತಾನೆಂದಾ ತುಂಗೆಯೆನಿಪ ಗಿರಿಯ ||
ತಲೆಯಲಿ ಚಂದನದಿಂಧನವನು ಸಂ – | ಗೊಳಿಸಿ ಮುರಾರಿಯ ವಪುವನು ದಹನಂ |
ಗೊಳಿಸಿದ ಪದದೊಳಗಾಗಸ ವಚನವದಾದುದದೆಂತೆನಲು || ೫೨ ||

ಈ ತೆರದಿಲ್ಲಿಯೆ ನೀನೇ ತಂ – | ದೀತನವಪುವನು ಮುನ್ನೇ ಹಲವು ಸೂ |
ಳೋತುದಹನವನು ಮಾಡಿದಗಣನೆಗೆ ಸಲಿಗೆಯಿದೆನೆ ಕೇಳಿ ||
ವೀತವಿಪಾಧದಿನಂತ್ಯಕ್ರಿಯೆಗೈ | ದಾತನೆ ತದ್ವನದೊಳು ಚಾರಣರಿಂ – |
ಮಾತೇಂ ದೀಕ್ಷೆಯನಾಂತಾಗಿರಿಯೊಳು ತಪವಿರ್ದನು ಬಲನೈ || ೫೩ ||

(ಇಲ್ಲಿ ಪರ್ವ ಮುಕ್ತಾಯವನ್ನು ಸೂಚಿಸುವ ಪದ್ಯವಿಲ್ಲ. ಬಹುಶಃ ಕೆಲವು ಪದ್ಯಗಳು ಲುಪ್ತವಾಗಿರುವ ಸಂಭವವಿದೆ. )