ಪ್ರಥಮ ಪ್ರಕರಣಂ

ಪರಮಾರ್ಹಂತ್ಯವಧೂಟಿಗೊಲ್ದು ತನುವಂ ಗೆಲ್ದೈದೆ ಮೂದೇವರೊಂ
ದಿರವಂ ನಕ್ಕನೃತಾದಿಗಂಜಿ ಕಡು ಶೋಕಂಗೊಟ್ಟು ಮೋಹಾಳಿಗು
ದ್ಧುರ ದೋಷಾಳಿಗೆ ಪೇಸಿ ಕಾಯ್ದು ಭವಮಂಸುಟ್ಟೇಱಿಲೋಕಾಗ್ರಮಂ
ಸ್ಥಿರನಾಗಿರ್ದ ರಸೈಕನೀಗೆ ಮುದಮಂ (ಶ್ರೀಮಜ್ಜಿನಾಧೀಶ್ವರಾ)    ೧

ಸತತಗುಣನಿಲಯೆ ಲೋಕ
ಸ್ತುತೆ ತರುಣಮೃಣಾಳವರ್ಣೆ ಸಕಲಕಲಾ ವಿ
ಶ್ರುತ ನಿರುಪಮೆ ಚಿನ್ಮಯೆ ಭಾ
ರತಿ ಯೆನಸುಂ ನೆಲಸುಗೆಮ್ಮ ಮುಖಸರಸಿಜದೊಳ್        ೨

ರಸರತ್ನಾಕರ ಮೀ ಕೃತಿ
ವೆಸರೆಂದಿಡೆ ಸುಕವಿನಿಕರ ಬುಧಸಮಿತಿಗಳೀ
ಕ್ಷಿಸಿ ಕೈಕೊಂಡೆಸೆವಿದಱೊಳ್
ರಸರತ್ನಂಗಳನೆ ಪಡೆಯದಿಕ್ಕುಮೆ ಚದುರರ್     ೩

ರಸಮಿಲ್ಲದ ಕಾವ್ಯಂ ನೀ
ರಸಮದಱಿಂ ಕೃತಿಗೆ ರಸಮೆ ಸಾರಂ ನೆಗಱ್ದೀ
ರಸಭಾವಮನಱಿದ ಕವಿಯ ಕಬ್ಬಮೆ ಸಾರಂ     ೪

ವಸುಧಾಚಕ್ರದೊಳೊಪ್ಪುತಿರ್ಪ ಜಸವಂತಂ ಶ್ರೀ ಜಿನಾಧೀಶ ಪಾ
ದಸರೋಜಾತಮದಾಳಿ ಶಬ್ದ ಸದಲಂಕಾರಾದಿ ಶಾಸ್ತ್ರಜ್ಞರೊ
ಲ್ದು ಸಭಾರಂಜನವಾಣಿ ರಾಜಬುಧಮಾನ್ಯಂ ಮಾರ್ಗಸಾರಂಗಳಿಂ
ರಸರತ್ನಾಕರಮಂ ಸಮಂತು ಕವಿ ಸಾಳ್ವಂ ಪೇಱ್ದನೊಳ್ಪೆಂಬಿನಂ     ೫

ಅವಗುಣಮಿದಱೊಗೇನಾ
ನುವುಳ್ಳೊಡಂ ನಿಮ್ಮ ಗುಣಮನು ಱೆ ಮೆಱೆಯಲ್ ತಿ
ರ್ದುವುದು ಬಹುಶ್ರುತರೆನಿಸಿದ
ಕವಿಗಳು ಬುಧರೊಲ್ದು ಗುಣಕೆ ಪುರುಡಿಪರೊಳರೇ        ೬

ಕವಿಯೆಂಬ ಪೆಸರ್ಗೆ ಮಚ್ಚರಿ
ಪವಿವೇಕಿಗಳಿರದಲೆಗಳೆಗೊಳ್ಗಬ್ಬಿಗರೀ
ವಿವಿಧ ರಸಾಮೃತಮಂ ಸಲೆ
ಸವಿದಮರ್ದುಣಿಯಂತೆ ಸುಖಿಸುತಿರ್ಕನವರತಂ  ೭

ಆನಾರ್ಯರಿಂದೆ ತಿಳಿದಮೃ
ತಾನಂದಿಯ ರುದ್ರಭಟ್ಟನಾ ತೆಱದಿಂ ವಿ
ದ್ಯಾನಾಥ ಹೇಮಚಂದ್ರರ
ಭೂನುತಮಾರ್ಗಾದಿಯಂದಮಂ ವಿರಚಿಸಿದೆಂ    ೮

ವ : ಇಂತು ನಾಗವರ್ಮ ಕವಿಕಾಮಾದಿಗಳ ಮಾರ್ಗದಿಂ ರಸ ಭಾವಾ ಭಾಸಂ ಗಳನೆಲ್ಲಾ ವಿದ್ವತ್ ಸಭೆಗಮುಭಯ ಭಾಷಗಮಿಷ್ಟಮಪ್ಪಂತು ಕನ್ನಡಿಸಿದೆನದೆಂ ತೆಂದೊಡೆ

ಮುನ್ನೊರೆದ ಕೃತಿಗಳಿರೆ ಬೞಿ
ಕಿನ್ನೇವುದೊ ಕಬ್ಬಮೆನ್ನದಿರ್ ಕನ್ನೆಗೆ ಮು
ನ್ನಂ ನಗೆಗಣ್ ನೆಗೞ್ದಿರೆ ಬೞಿ
ಯಂ ನೆಲೆಮೊಲೆ ಮೂಡಿ ಮಾಡವೇ ಮೋಹನಮಂ         ೯

ವ : ಎಂದಿರ್ಪುದಱಿಂದೆ ಚತುರರ್ಕಳ್ ಲೇಸಂ ಕೈಕೊಳ್ಗೆ ಪ್ರಯೋ ಜನಮೇ ನೆಂದೊಡೆ

ರಸಭಾವಾಲಂಕಾರ
ಪ್ರಸರಮೆ ಪರಮೇಶ್ವರನುರುಚರಿತ್ರಮದ ಱಿನೊ
ಳ್ಪೆಸೆವಾ ಸಮ್ಯಕ್ತ್ವಮದಱ
ಬಸಮಾಗದೆ ಪರಮಶಾಂತಮಮೃತಶ್ರೀಯುಂ  ೧೦

ವ್ಯರ್ಥಮಿದಲ್ಲಿದು ಜಿನನ ಪ
ದಾರ್ಥ ಮನೋಧರ್ಮ ಬೋಧ ಶಾಸ್ತ್ರಂ ಚಿದ್ವಿ
ದ್ಯಾರ್ಥಿಗೆ ಹೇಯೋಪಾದೇ
ಯಾರ್ಥಜ್ಞಾನಾರ್ಥಮಪ್ಪುದೀ ರಸಶಾಸ್ತ್ರಂ        ೧೧

ಸೂತ್ರ ೧

ಭಾವಂ ವಿಭಾವಮೆಸೆವನು
ಭಾವಂ ಸಂಚಾರಿಭಾವಮೆಂಬಿಂತಿವಱಿಂ
ದಾವಿಷ ತಮಕ್ಕುಂ ರಸ
ಮಾವುದುಮೆಂದಱಿಗೆ ಭರತಶಾಸ್ತ್ರಕ್ರಮದಿಂ

ವೃತ್ತಿ: ನಾಗವರ್ಮನಿಂತಪ್ಪುಗೆಯ್ದನದಱ ವಿವರಮೆಂತೆಂದೊಡೆ ರಾಗಾದ್ಯಭಿನಯ ದೊಡ ಗೂಡಿದ ಸ್ಥಾಯಿ ವ್ಯಭಿಚಾರಿಲಕ್ಷಣಮಪ್ಪ ಚಿತ್ತವೃತ್ತಿಯೆ ಭಾವಮೆನಿಕ್ಕುಂ. ಆ ಚಿತ್ತವೃತ್ತಿಗಳ್ ಕಾವ್ಯನಾಟ್ಯಶಾಸ್ತ್ರ ಪ್ರಸಿದ್ಧಂಗಳಪ್ಪ ಆಲಂಬನೋದ್ದೀಪನ ಸ್ವಭಾವಂಗಳಾದ ಲಲನಾದಿ ಕಂಗಳಿಂ ವಿಶಿಷ್ಟತ್ವದಿಂ ಸ್ಥಾಯಿಭಾವಂಗಳನುದ್ಬೋಧಿಪುದಱಿಂ ವಿಭಾವಮೆನಿಕ್ಕುಂ ಮತ್ತಮಾ ಸ್ಥಾಯಿ ವ್ಯಭಿಚಾರಿ ಲಕ್ಷಣ ಭೂತಚಿತ್ತವೃತ್ತಿವಿಶೇಷಂಗಳ್ ಕಟಾಕ್ಷಭೂಜ ವಿಕ್ಷೇಪಾದ್ಯನುಭವಂಗಳಿಂ ಸಾಮಾಜಿಕನನುಭವಿಸುವುದಱಿಂದನುಭಾವಂ ಗಳೆನಿಕ್ಕುಂ ಮತ್ಯಾದಿಗಳಾ ಸ್ಥಾಯಿಗಳಂ ನಾನಾ ಪ್ರಕಾರದಿಂದಭಿಮುಖವಾಗಿ ಮಾಡುತ್ತೆ ಸಂಚರಿಪುದಱಿಂ ವ್ಯಭಿಚಾರಿಗಳೆನಿಕ್ಕುಮೀ ಮೂದೆಱದ ಭಾವಂಗಳ್ ಸ್ಥಾಯಿಗಳಂ ವ್ಯಕ್ತಂ ಮಾೞ್ಪುದಂಱಿಂ ಕಾರ್ಯಕಾರಣ ಸಹಕಾರಿಗಳಕ್ಕುಮಿಂತೆಂಬ ಶಬ್ದಕ್ಕೆ ವಿಭಾವಾನುಭಾವ ವ್ಯಭಿಚಾರಿಭಾವಂಗಳೆಂಬ ವ್ಯಪದೇಶಂಗಳಾದುವಿಂತಾದ ಸ್ಥಾಯಿಭಾವಂ ಗಳಿವೆನ್ನವಿವನ್ಯನವಿವೆನ್ನ ವಲ್ತಿವನ್ಯವಲ್ತೆಂಬ ಸಂಬಂಧವಿಶೇಷ ಸ್ವೀಕಾರ ಪರಿಹಾರ ನಿಯಮದ ನವಸಾಯದಿಂ ಸಾಧಾರಣಂಗಳಾದುವು. ಸಾಧಾರಣದಿಂ ಸಾಮಾಜಿಕರ್ಗೆ ಕಾವ್ಯ ನಾಟಕಾದಿಗಳಿಂ ವ್ಯಕ್ತಮಾದುವವರ್ಗೆ ಮುನ್ನ ವಾಸನಾರೂಪದಿನಿರುತಿರ್ಪುದಱಿಂ ರತ್ಯಾದಿಗಳ್ ಸ್ಥಾಯಿಭಾವಂಗಳೆನಿಕ್ಕುಂ ನಿಯತಮಾಗಿಯನುಭವಿಪರನೆಯ್ದಿರ್ದುದ ಱಿಂ ಸಾಧಾರಣೋಪಾಯಬಲದಿಂ ಗೋಚರಿಸಿದುದಱಿಂದನುಭೂಯಾತ್ಮಕಂ ರಸಂ ತಾನಾ ದುದು ವಿಭಾವಾದಿ ಜೀವಿತಾವಧಿಯುಮಲೌಕಿಕಮುಮಕ್ಕುಂ. ಚಮತ್ಕಾರಕಾರಿ ಯಾದುದಱಿಂ ಬ್ರಹ್ಮಾಸ್ವಾದ ಸೋದರಂ ನಿಮೀಲಿತನಯನಂಗಳುಳ್ಳ ಕವಿಹೃದಯರಿಂದೆ ರಸ್ಯಮಾನಮಾದುದು, ದುಗ್ಧಾಸ್ವಾದನದಂತೆ ಸ್ವಸಂವೇದನಸಿದ್ಧಂ. ಮತ್ತಮಾ ರಸಂಗಳೀ ವಿಭಾವಾದಿಗಳಿಂದಭಿವ್ಯಕ್ತಂಗಳಲ್ಲದೆ ವಿಭಾವಾದಿಗಳ ಕಾರ್ಯಮಲ್ತದೆಂತೆನೆ ಚಕ್ರಕುಲಾ ಲಾದಿಗಳ್ ಇಲ್ಲದೊಡಂ ಘಟಮಿರ್ಪಂತೆ ವಿಭಾವಾದಿಗಳ್ ವಿನಾಶಮಾದೊಡೆ ರಸಮಿರ್ಪುದಿಲ್ಲ. ಮತ್ತಮವು ಜ್ಞಾಪಕಂಗಳಕ್ಕುಮೆಂದೊಡೆಮದಲ್ತು. ಘಟಾದಿಯಂತೆ ಸಿದ್ಧ ವಸ್ತುಗಳಿಲ್ಲದುದಱಿಂದಾದೊಡೆ ಲೋಕದೊಳ್ಕಾರಕಜ್ಞಾಪಕಂಗಳಿಂ ಬೇಱಪ್ಪ ದೊಂದುಂ ಕಾಣಲ್ಪಟ್ಟುದಿಲ್ಲ. ತಾನಲೌಕಿಕ ಸಿದ್ಧಿಯಾದುದೆಂದೊಡದು ಭೂಷಣಮಲ್ಲದೆ ದೂಷಣಮಲ್ತು. ಮತ್ತಂ ವಿಭಾನುಭಾವವ್ಯಭಿಚಾರಿಗಳಿಂ ರಸಮಭಿವ್ಯಕ್ತಮಾಗಬೇಕಲ್ಲದೊಂದಱಿದಾಗದಾದೊಡದುಂ ವ್ಯಭಿಚಾರಮಪ್ಪುದೆಂತೆಂದೊಡೆ ಸಿಂಹ ಶಾರ್ದೂಲಾದಿ ಭಯಾನಕಕ್ಕೆ ವಿಭಾವಮದಱಿಂದಮೆ ಭಯಾನಕಮಾದುದಿಲ್ಲ. ಅದುವೆ ವೀರರೌದ್ರಾದ್ಭುತಂಗಳ್ಗಮಾಗುತ್ತಿರ್ಪುದಱಿಂ ಮತ್ತಮಾ ಕರುಣಕ್ಕಶ್ರುಪಾತಾದಿಯನು ಭಾವಮಂತದೆ ಶೃಂಗಾರ ವೀರ ಭಯಾನಕಕ್ಕಮಪ್ಪುದು ಕರುಣಕ್ಕೆ ಚಿಂತಾದಿಗಳ್ ವ್ಯಭಿಚಾರಿಗಳಂತವೆ ಶೃಂಗಾರ ವೀರ ಭಯಾನಕಕ್ಕಮಪ್ಪುವೊಂದೊಂದೆಡೆಯೊಳೆ ತ್ತಾನುಮೋರೊಂಗಱ ಸ್ವೀಕಾರಮುಂಟು.

ಈಕೆಯ ಲೋಚನಂ ಕುಸುಮಸಾಯಕವೀಕೆಯ ಪುರ್ಬು ಕರ್ವುವಿ
ಲ್ಲೀಕೆಯ ಕುಂತಳಂ ಭ್ರಮರಸಂಕುಳವೀಕೆಯ ವಾಗ್ವಿಲಾಸಮೇ
ಕೋಕಿಲನಾದವೀಕೆಯ ಮೊಗಂ ಶಶಿಯೀ ಜಗಮಂ ಗೆಲಲ್ಕೆ ಸಾ
ಕೀಕೆಯ ರೂಪಮೆಂದು ಮಕರಧ್ವಜನೀಕೆಯನೆಯ್ದೆ ಪೊರ್ದುಗುಂ   ೧೨

(ಇದು ವಿಭಾವಮೆ)

ಮನಮೊಲ್ದಾತನ ಗಾಡಿಯಂ ದರವುರಂಗಂಡಾಕೆಗಳ್ ಪೂವಿನಂ
ಬಿನ ಕೋಲ್ಗಂ ತಳಿವಾಲಿನೀರ್ಗಮಲರ್ವಾಸಿಂಗಂ ಕುಳಿರ್ಕೋೞ್ವ ನಂ
ದನಕಂ ಚಂದನಕಂ ಪಸುರ್ಪೆಸೆವ ಬಾೞ್ಜೊಂಪಕ್ಕಮೊಂದೊಂದೆ ತ
ಣ್ಬನಿಯಂ ಸೂಸುತುಮಿರ್ಪ ಬಿಜ್ಜಣಿಗೆಗಂ ಪಕ್ಕಾಗದೇಂ ಪೋಪರೇ            ೧೩

(ಇವನುಭಾವಂಗಳ್)

ಹೃದಯಾಧೀಶಂ ಕುರುಳ್ಗವ್ವಳಿಸೆ ನುಡಿಯೆ ಮೇಲ್ವಾಯೆ ಲಲ್ಲೈಸೆ ಮೆಲ್ಪಿಂ
ಮೊದರೊಳ್ ಸರ್ವಾಕ್ಷಿಪಾತಂ ಬೞಿಕದು ನಯನಾರ್ಧಾವಲೋಕಂ ಬೞಿಕ್ಕೊಂ
ದುದಯಂ ನೇತ್ರತ್ರಿಭಾಗಂ ಬೞಿ ಕಿೞಿದುದಪಾಂಗೇಕ್ಷಣಂ ತಾಂ ಬೞಿಕ್ಕಾ
ವುದುಮಿಲ್ಲಾಯ್ತಗ್ಗಳಂ ಕಾಮದಿನಿನಿಯಳ ಸುಮ್ಮಾನದಿಂ ಮಾನಮಲ್ತೇ    ೧೪

ವ: ಇಲ್ಲಿ ಗರ್ವವ್ರೀಡಾ ಕೋಪ ಹರ್ಷ ಸಮ್ಮೋಹ ವ್ಯಭಿಚಾರಿ ಭಾವಂಗಳಿರ್ದುವಿಂತಾದೊಡ ಮಾಕ್ಷೇಪದಿಂ ಮತ್ತೊಂದೊಂದನೈದುತಿರ್ಪುದಱಿಂ ವ್ಯಭಿಚಾರಮಲ್ತು. ವ್ಯಭಿಚಾರಿಸಾತ್ವಿಕ ಭಾವಂಗಳ ವಿಚಾರಂ ಮುಂದೆ ಪೇೞಿರ್ದು ದಲ್ಲಿಯವಂತಿಳಿಗೆ. ಲಕ್ಷಣಗ್ರಂಥಂಗಳೆಲ್ಲಂ ಪಾಠಮಾದಲ್ಲದೆ ಸಭಾರಂಜಕನಾಗನ ದಱಿಂದಿವನೆ ಸಂಕ್ಷೇಪಿಸಿ ಸೂತ್ರಂಗಳಂ ಮಾಡಿ ಪೇೞ್ವೆಂ ಅವಂ ಮೊದಲಾದ ಸೂತ್ರೋದಾಹರಣಂಗಳಂ ಪಾಠಮಂ ಮಾಡಿಕೊಂಬು ದಾದಿ ಶಬ್ದಂಗಳ್ ಬಂದುದಱಿಂ ನವರಸಂಗಳ್ಗೆ ವೃತ್ತಿಯಂ ಬರೆದೆಂ ಆ ವೃತ್ತಿಗಳುಮಂ ವಿಚಾರಮುಮಂ ನೋಡಿ ಕೇಳಿ ತಿಳಿವುದು.

ಸೂತ್ರ ೨

ಎಸೆಗುಂ ದೇಹಿಗೆ ಮನದೊಳ್
ಬೆಸುಗೆ ಮನಕ್ಕಿಂದ್ರಿಯಂಗಳೊಂದುಗೆ ಕೂಟಂ
ಎಸೆವಿಂದ್ರಿಯಮರ್ಥದೊಳೀ
ಕ್ಷಿಸೆ ಬೞಿಯಂ ನೆಗೞ್ಗುಮರ್ಥಬೋಧೆಯೆ ತಱದಿಂ

ಸತ್ರ ೩

ಒದವಿರ್ದ ಚಿತ್ತದಿಂ ತೋ
ರ್ಪುದು ಭಾವಂ ಭಾವದಿಂದೆ ರಸಮುದಯಿಸುಗುಂ
ವದನಮದಂ ಪ್ರಕಟಿಪುದಾ
ವದನದೆ ರಸಮಿಂತಿದೆಂದು ತಿಳಿಗೆ ರಸಜ್ಞರ್

ಸೂತ್ರ ೪

ಭಾವಂ ಮನಃಪ್ರವೃತ್ತಿ ವಿ
ಭಾವಂ ರಸಪುಷ್ಟಿಯಂ ವಿಶೇಷಿಸುವುದೆ ದಲ್
ಭಾವದೆ ಪುಟ್ಟಿದರಸಮಂ
ಭಾವುಕರದ ನಱಿದು ಸವುವುದೆ ಅನುಭಾವಂ

ಸೂತ್ರ ೫

ಸ್ಥಿರತಾಗದತದಿಂ ಸ್ಥಾಯಿಯೆ
ಪರಿಚೇತೋವೃತ್ತಿ ತಾನೆ ಸತ್ವಮದಱಿನು
ಬ್ಬರಿಕುಂ ಸಾತ್ವಿಕಭಾವಂ
ಸ್ಥಿರತೆಯೊಳಿರದುದಱಿನಾಯ್ತು ಸಂಚಾರಿ ವಲಂ

ಸೂತ್ರ ೬

ಒದವಿದ ನಾಟಕದೊಳ್ ಕಾ
ವ್ಯದೊಳೀಕ್ಷಿಸೆ ಪೇೞಲಾದ ಭಾವಾದಿಯನೊ
ಳ್ಪೊದವೀಕ್ಷಿಪ ಕೇಳ್ವ ಸಭಾ
ಸದರ್ಗೆ ರಸೋತ್ಪತ್ತಿಯೆಂದು ಪೇೞ್ವಿರ್ಪಿರಿಯರ್

ವ : ಆ ರಸಂಗಳನಭಿಯಿಪನೊಳಂ ಸಭ್ಯರೊಳಂ ರಸೋತ್ಪತ್ತಿಯಕ್ಕುಂ

ಸೂತ್ರ ೭
ಸ್ಥಾಯಿಭಾವಂಗಳ್

ರತಿ ಪರಿಹಾಸಂ ಶೋಕೋ
ದ್ಗತಿಯುತ್ಸಾಹಂ ಪ್ರಕೋಪ ವಿಸ್ಮಯ ಭಯಸಂ
ತತಿ ವಿಜುಗುಪ್ಸತೆಯೆಂದು
ನ್ನತಿವಡೆಗುಂ ಸ್ಥಾಯಿಭಾವಮೊಪ್ಪುವ ಶಮಮುಂ

ಸೂತ್ರ ೮
ಸಾತ್ವಿಕಭಾವಂಗಳ್

ಪುಲಕಾಶ್ರುಸ್ವೇದಸ್ತಂ
ಭಲಯಸ್ವರ ಭೇದಕಂಪ ವೈವರ್ಣ್ಯಂಗಳ್
ಸಲೆ ಸಾತ್ವಿಕ ಭಾವಂಗಳ್
ವಿಲಸಿತಕವಿಮಾರ್ಗದಿಂದಮೆಂಟು ತೆಱಂಗಳ್

ಸೂತ್ರ ೯
ಅನುಭಾವಂಗಳ್

ಭ್ರುಕುಟಿಮುಖ ರಾಜಲೋಚನ
ವಿಕೃತ್ಯಧರಕಂಪನಾತ್ತರಚರಣನ್ಯಾ
ಸಕ ವಾಗಾದ್ಯಂಗಕ್ರಿಯೆ
ಸುಕವಿಗಳಿಂ ಪೇ ೞೆಪಟ್ಟುದಿಂತನುಭಾವಂ

ಸೂತ್ರ ೧೦
ವ್ಯಭಿಚಾರಿಭಾವಂಗಳ್

ಮತಿ ಲಜ್ಜಾ ವೇಗ ಶಂಕಾ ಮರಣ ಚಪಲತಾ ಹರ್ಷ ನಿರ್ವೇದ ದೈನ್ಯ
ಸ್ಮೃತಿ ಮೋಹಾಲಸ್ಯ ಗರ್ವ ಶ್ರಮ ಮದ ಜಡತಾ ಗ್ಲಾನಿ ಸಂಸುಪ್ತಿ ನಿದ್ರಾ
ಧೃತಿತರ್ಕೋನ್ಮಾದ ಬೋಧಾಮಯಸವಿಷಾದೋತ್ಸುಕಾವರ್ಷ ಚಿಂತಾ
ಸತತಾಸೂಯಾವಹಿತ್ಥೋಗ್ರಸುವಿಲಸದಪಸ್ಮಾರಕಾಖ್ಯಾನದಿಂದಂ

ವ : ಈ ಮೂವತ್ತುಮೂಱುಂ ವ್ಯಭಿಚಾರಿಭಾವಂಗಳಿವಂ ಮುಂದೆ ಉದಾಹರಿಪೆಂ

ಸೂತ್ರ ೧೧

ವರಶೃಂಗಾರಂ ಹಾಸ್ಯಂ
ಕರುಣಂ ವೀರಂ ಪ್ರರೌದ್ರಮದ್ಭುತಮಿರದು
ಬ್ಬರಿಪ ಭಯಾನಕ ಭೀಭ
ತ್ಸರಸಂಗಳಿವೆಂಟು ಮತ್ತೆ ನುತ ಶಾಂತರಸಂ

ಸೂತ್ರ ೧೨

ಹರಿತಂ ಶೃಂಗಾರ ವರ್ಣಂಸಿತರುಚಿ ಹಸಿತಂ ರೌದ್ರಮಾರಕ್ತಯುಕ್ತಂ
ಕರುಣಂ ಶ್ಯಾಮಪ್ರಭಾಂಗಂ ಪ್ರಚುರರುಚಿರ ಗೌರಂ ಸುವೀರಂ ಭಯಂ ಭಾ
ಸುರಧೂಮಾಕಾರಮತ್ಯದ್ಭುತಮದು ಕನಕಂ ಕೃಷ್ಣಾ ಶುಭ್ರಾನ್ವಿತಂ ವಿ
ಸ್ತರದಿಂ ಭೀಭತ್ಸುವೆಂಬೀ ಪರಿಯನಱಿಗೆ ತನ್ಮಾರ್ಗದೊಳ್ ಸತ್ಕವೀಂದ್ರರ್

ಸೂತ್ರ ೧೩

ನಿರುತಂ ಶೃಂಗಾರಸಾರಕ್ಕಧಿಪತಿ ಹರಿ ಹಾಸಕ್ಕಧೀಸಂ ಗಜಾಸ್ಯಂ
ಹರನಾಳ್ದಂ ನಾಡೆ ರೌದ್ರಕ್ಕೆಱೆಯನೆ ಕರುಣಕ್ಕಂತಕಂ ನೋಡೆವೀರ
ಕ್ಕರಸಿಂದ್ರಂಭೀತಿಗಂ ಮಿೞ್ತುವೆ ಗುರು ಬಿದಿನಾಥಂ ಪೊದೞ್ದಿದ್ಭುತಕ್ಕಂ
ತೀರದಾ ಭೀಭತ್ಸುವಿಂಗಂ ಪ್ರಭುವೆನಿಸಿ ಮಹಾಕಾಳನಾಭೀಳಶೀಲಂ

ವ : ಮತ್ತಮಲ್ಲಿ

ಸಾರಂ ಸಂಸಾರದೊಳಬ
ಲಾರತ್ನಂ ಸಾರಮಲ್ಲಿ ಯೌವನಮದಱೊಳ್
ಸಾರಂ ಮಧುರಾಕಾರಂ
ಸಾರಂಮತ್ತಂತದರ್ಕಮನುಕೂಲರಸಂ೧೫

ವೃತ್ತಿ : ಭೋಗರತ್ನಂ ಮೃಗಾಕ್ಷಿಯೆಂದಪ್ಪುದಱಿಂದೆಲ್ಲಾ ರಸದೊಳಂ ಶೃಂಗಾರರಸಮೆ ಲೋಕಕ್ಕೆ ಸೊಗಯಿಪ್ಪುದಾದ ಕಾರಣದೆ ಮೊದಲೊಳೀ ಶೃಂಗಾರರಸಂ ಪೇೞೆಪಟ್ಟುವಲ್ಲಿ ಮತ್ತೆ ಕೆಲಂಬರಾರ್ದ್ರಸ್ಥಾಯಿ ಸ್ನೇಹರಸಮೆಂಬರದುರತ್ಯಂತರ ದೊಳಂತರ್ಭಾವಂ. ಸ್ತ್ರೀ ಸ್ತ್ರೀಯರ್ಗೆ, ಪುರುಷರ್ ಪುರುಷರ್ಗೆ ಸ್ನೇಹಮಾದುದೆಂದೊಡ ದುವುಂ ರತಿಯೊಳಂತರ್ಭಾವಂ. ರಾಮಲಕ್ಷ್ಮಣರ್ ಮೊದಲಾದುವರಸ್ನೇಹಂ ಧರ್ಮವೀರದೊಳಂತರ್ಭಾವಂ. ಮಾತಾಪಿತೃಗಳೊಳ್ ಬಾಳಕಂ ಮಾೞ್ಪ ಸ್ನೇಹಂ ಭಯದೊಳಂತರ್ಭಾವಂ. ಪುತ್ರಾದಿಕಂ ಗಳಲ್ಲಿಯುಂ ವೃದ್ಧಂಗಂ ಇಂತಱಿವುದು. ಆರ್ದ್ರ ಸ್ಥಾಯಿಲೌಲ್ಯರಸಮೆಂದೊಡದುವುಂ ಹಾಸದಲ್ಲ ಮೇಣ್ ರತಿಯಲ್ಲಿ ಮೇಣನ್ಯತ್ರದಲ್ಲಿ ಅಂತರ್ಭಾವಂ. ಈ ರೀತಿಯಲ್ಲಿ ಭಕ್ತಿಮೊದಲಾದುವಂ ಯೋಜಿಸಿ ಕೊಳ್ವುದಿಂತು ರತ್ಯಾದಿಸ್ಥಾಯಿ ವೊಂಬತ್ತು. ಅಲ್ಲಿ ಶೃಂಗಾರಾದಿ ರಸವೊಂಬತ್ತವಱೊಳ್ ಸ್ಥಾಯಿಭಾವಲಕ್ಷಣಂ.

ಪರಸ್ಪರ ಚೇತೋಬಂಧಾತ್ಮಿಕಂ ರತಿ. ಚೇತೋವಿಕಾಸಂ ಹಾಸಂ. ಚಿತ್ತ ವೈಧುರ್ಯಂ ಶೋಕಂ. ಸಂರಂಭಸ್ಥಿರತ್ವಮುತ್ಸಾಹಂ. ಸ್ವಾಂತತೈಕ್ಷ್ಣ್ಯ ಪ್ರಬೋಧಂ ಕ್ರೋಧಂ. ಹೃದ್ವಿಸ್ತಾರಂ ವಿಸ್ಮಯಂ. ಆಕೂತವೈಕ್ಲಬ್ಯಂ ಭಯಂ. ಮನಸ್ಸಂಕೋಚಂ ಜುಗುಪ್ಸೆ. ತೃಷ್ಣಾಕ್ಷಯಂ ಶಮಂ ಜುಗುಪ್ಸಾಲಸ್ಯೌರ್ಗ್ಯ ಭಾವವರ್ಜ್ಯಂ ಶೃಂಗಾರಂ.

ಸೂತ್ರ ೧೪

ಆರಯೆ ರತಿಯಿಂದಂ ಶೃಂ
ಗಾರಂ ಸ್ತ್ರೀಪುಂಸಯೋಗದಿಂ ತೊಲಗಿಕೆಯಿಂ
ಸಾರಂ ಸಂಭೋಗಂ ಶೃಂ
ಗಾರಂ ಸವಿಯೆನಿಪ ವಿಪ್ರಲಂಭ ಸಮಾಖ್ಯಂ

ಸೂತ್ರ ೧೫

ಇತರೇತರ ರತಿಯುತ ದಂ
ಪತಿಗಳೆಯಾಲಂಬನಂ ವಿಭಾವಂ ಜ್ಯೋತ್ಸ್ನೋ
ನ್ನತ ಶಶಿನಂದನಗೀತಾ
ದಿ ತತೋದ್ದೀಪನ ವಿಭಾವಮುಂ ತಾನಕ್ಕುಂ

ಸೂತ್ರ ೧೬

ವಿನುತೇಕ್ಷಣಾದಿಯಾರಸ
ಕನುಭಾವಂ ನೆಗೆದ ರೋಮಹರ್ಷಾದಿಗಳಿಂ
ಪಿನ ಸಾತ್ವಿಕಂಗಳೆನಿಕುಂ
ಘನ ಧೃತಿ ನಿರ್ವೇದ ನಾದಿಸಂಚಾರಿ ವಲಂ

ವೃತ್ತಿ : ಅನ್ಯೋನ್ಯಮಾಲಂಬನ ವಿಭಾವಂ ಆಲಂಬನ ಗುಣಮಾಲಂಬನ ಚೇಷ್ಟೆಯಾಲಂಬನಾ ಲಂಕರಣಮಾಲಂಬನ ತಟಸ್ಥಮೆಂದುದ್ದೀಪನ ವಿಭಾವಮಕ್ಕುಮವಂ ಮುಂದೆ ಕಾಣ್ಬುದು. ಆದಿಶಬ್ದದಿಂ ಮೇಖಲಾಸ್ಖಲನ ಶ್ವಸಿತ ಸಾಧ್ವಸ ಕೇಶಬಂಧನ ವಸ್ತ್ರ ಸಂಯಮನಾಮ ಲೇಪನಾಭರಣ ಮಾಲ್ಯಸಮಙ್ನಿವೇಶನ ಸಮ್ಯಙ್ವಿಚಿತ್ರೇಕ್ಷಣ ಚಾಟು ಪ್ರಭೃತಿ ವಾಚಿಕ ಕಾಯಿಕವ್ಯಾಪಾರಾದಿ ಲಕ್ಷಣಮನುಭಾವಮದು ಪರಸ್ಪರಾಲಿಂಗನಾ ಲೋಕನ ಚುಂಬನಾದ್ಯನಂತಭೇದಂ. ರೋಮಾಂಚ ಸ್ವೇದ ಕಂಪಾಶ್ರು ಪ್ರಭೃತಿ ಸಾತ್ವಿಕಭಾವಂ. ಸುಖಮಯಧೃತಿ ನಿರ್ವೇದ ಹರ್ಷ ಲಜ್ಜಾ ಮದ ಗರ್ವಾದಿ ವ್ಯಭಿಚಾರಿಗಳಕ್ಕುಮಿ ವಱಿಂ ರತಿಸ್ಥಾಯಿಭಾವಂ ಚರ್ವ್ಯಮಾಣಮಾಗೆ ಶೃಂಗಾರರಸಂ

ವ : ಅಲ್ಲಿ ಸಂಭೋಗಕ್ಕೆ

ಅಲರ್ಗಣ್ಬೆಂಡೇೞೆ ರೋಮಾಂಚನದೊದವಿನಿತುಂ ಥಾರುಥಟ್ಟಾಗೆ ಬಾಯೊಳ್
ಪಲವುಂ ನುಣ್ಮಾತುಗಳ್ ಲಾವುಗೆಯ ಕೊರಳನಲ್ಲಾಡಿದಂತಾಗೆ ಝುಮ್ಮೆಂ
ದೊಲೆ ವಂಗಂ ತೂಗೆ ಸುಯ್ಯಂತೊಳಗಿಱಿಯೆ ಬೆಮರ್ ಪೊಣ್ಮೆ ನಾಣ್ಸೂಸೆ ಕಾಮೋ
ಜ್ವಲದಿಂ ಕೈಮಿಕ್ಕಮಳ್ಜಂತ್ರಮನೆ ಕೆಡಪಿದಂತಿರ್ವರುಂ ಮೂರ್ಛೆವೋದರ್   ೧೬

ಅತಿಮಗ್ನಾಪಾಂಗ ಭೃಂಗಂ ಮುಖಸರಸಿಜದೊಳ್ ತನ್ನ ಬಾಹಾಭುಜಂಗಂ
ಸುತನು ಶ್ರೀಖಂಡ ಶಾಖಾಂತರದೊಳಧರ ಸದ್ವಿದ್ರುಮಂ ದಂತಮುಕ್ತಾ
ತತಿಯೊಳ್ ಪಾಣಿಪ್ರವಾಳಂ ಕುಚಕುಲಶದೊಳಿಂಬಾಗೆ ತಳ್ತಿರ್ದನಿಂತ
ಪ್ರತಿಮಂ ಲೀಲಾವತೀದೇವಿಯ ಹೃದಯದೊಳಾ ರೂಪಕಂದರ್ಪದೇವಂ      ೧೭

ಪದೞಿಸಿದಂಗನೆೞ್ಚರದ ಕಣ್ಮಲರಾಱದ ಸೇದೆ ಮಗ್ಗುಲಿ
ಕ್ಕದ ಪುಳಕಂಗಲಿಂಗದ ಬೆಮರ್ ಮಿಡುಕೋಡದ ಪುರ್ವು ಬಾಗಿ ಬೀ
ಯದ ತುಟಿ ಕೆತ್ತುಗುಂದದ ಕುಚಂ ನಡುಕಂಗಿಡ ದೂರುಗಂದೆಯೇ
ೞದ ಕರಘಾತಮೊಪ್ಪೆ ಸುಸಿಲಂ ಸವಿದೊಯ್ಯನೆ ಜಾರೆ ಜಾರಿದಳ್    ೧೮

ವ : ಮತ್ತಂ ರುದ್ರಭಟ್ಟನರಸ ಕಳಿಕೆಯ ಪದ್ಧತಿಯಿಂ ಶೃಂಗಾರೋದ್ದೀಪನಂ ಚತುಷ್ಕಮಾದುದಲ್ಲಿ

ಸೂತ್ರ ೧೭

ಆಲಂಬನದುರುಗುಣ ಚೇ
ಷ್ಟಾಲಂಕೃತಿಯುಂ ತಟಸ್ಥಮೆನಿಪೀ ನಾಲ್ಕುಂ
ಮೇಲಾದುದ್ದೀಪನಮಿ
ನ್ನಾಲಂಬನ ಗುಣಮೆ ರೂಪಯೌವನ ಮುಖ್ಯಂ

ವ : ಆಲಂಬನ ಗುಣಕ್ಕೆ

ಕರುವಿಟ್ಟಂ ಕಾಮದೇವಂ ರತಿಯತಿಶಯದಿಂ ಬಣ್ಣವಿಟ್ಟಳ್ ಬಸಂತಂ
ಬರೆದಂ ಸರ್ವಾಂಗಮಂ ಕಣ್ದೆಱೆದನೊಸೆದು ಶೀತಾಂಸು ಚೈತ್ರಾನಿಲಂ ತೀ
ವಿರೆ ಜೀವಂಬೊಯ್ದನಂತಲ್ಲದೊಡೆ ಸೊಗಯೋಪೀ ರೂಪಮೀ ಬಣ್ಣಮೀ ಮೆ
ಯ್ಸಿರಿಯೀ ಕಣ್ಚೆಲ್ಲಮೀ ಭಾವಕಮೊಗೆಯದೆನಲ್ ಕಾಂತೆ ಕಣ್ಗೆಡ್ಡಮಾದಳ್           ೧೯

ಕಡೆದವೊಲಿರ್ಪ ಪೆರ್ಮೊಲೆ ತೊದಳ್ನುಡಿ ಮೆಲ್ನಡೆ ಚೆಲ್ವನಾಂತ ತೆ
ಳ್ನಡು ನಳಿತೋಳ್ ಪೊದೞ್ದಧರಮೊತ್ತದೆಯುಂ ನಿಱಿಗೊಂಡ ಚುಂಚು ಸೋ
ರ್ಮುಡಿ ಕಡುನುಣ್ಪುವೆತ್ತತೊಡೆ ತುಂಬಿದ ಪೀನನಿತಂಬಬಿಂಬವೊ
ರ್ಕುಡಿತೆಯೆನಿಪ್ಪ ಕಣ್ ಕರಮೆ ರಂಜಿಸೆ ಬಂದರಿಳೇಶಕಾಂತೆಯರ್

(ಇದು ರೂಪಂ)    ೨೦

ಮಗಮಗಿಸಿತ್ತು ತೋಳ ಮೊದಲಾನನಮುಳ್ಳರಲಾಯ್ತು ಕಣ್ಮಲರ್
ಮಿಗೆ ನಿಡಿದಾಯ್ತು ಮೂಡಿದುವು ಪೇರುರದೊಳ್ ಮುಕುಳಸ್ತನಂಗಳೂ
ರುಗಳೆಡೆ ನುಣ್ಪುನಾಂತುದು ಬಸಿಱ್ಬ್‌ಡವಾದುದು ಬಾಸೆ ನೀೞ್ದುದಾ
ಕೆಗೆ ಬರೆ ಜವ್ವನಂ ಬೞಿಕೆ ಕಾಮನ ಕೈಗೆ ಕಾರ್ಮುಕಂ       ೨೧

ಮನದ ವಿವೇಕಂ ಪೀನ
ಸ್ತನದೊಳ್ ನಾಲಗೆಯ ಮಾತು ಕಣ್ಣೊಳ್ ಕರಂ ತ
ರ್ಜನಮಮರೆ ನಿಮಿರ್ದ ಪುರ್ವಿನ
ಕೊನೆಯೊಳ್ ನೆಲಸಿದುದು ಯೌವನಂ ನೆಲಸಲೊಡಂ

(ಇದಾಲಂಬನಗುಣಂ ಯೌವನಂ)       ೨೨

ಸೂತ್ರ ೧೮

ತರದಾಲಂಬನ ಚೇಷ್ಟೆಯೆ
ಪರ ತದನುಭವಂಗಳೆಂದೆರ ೞ್ತೆಱನಲ್ಲಿ
ನ್ನೆರಡನೆಯದೇಕರೂಪಂ
ಪರಮೆಂಬುದು ವಿಂಶತಿಪ್ರಕಾರಮೆನಿಕ್ಕುಂ

ವ: ಅಲ್ಲಿಯಾಲಂಬನಾನುಭವಮೆ ತದನುಭವಮದಂ ಮೊದಲೆ ಪೇೞ್ವೆಂ

ಇನಿಯನನೞ್ಕಿಱಿಂ ಚದುರೆ ನೋಡುವ ನೋಡಿಪ ಲಲ್ಲೆವಾತಿನೊಂ
ದಿನಿದನೆ ಸೂಸುವಂತೆ ನೆಗೞ್ದೋದಿಪ ತಾನೊಸೆದಪ್ಪುವಪ್ಪಿ ಬಿ
ಮ್ಮನೆ ಸವಿಗೆಯ್ದು ಚುಂಬಿಸುವ ಚುಂಬನಕಾಂಪ ವಿನೋದಕೇಳಿಯೊಳ್
ಮನಸಿಜ ತಂತ್ರದೀಕ್ಷೆಯಧಿದೇವತೆಯಂತವಳಾದಮೊಪ್ಪಿದಳ್        ೨೩

(ಇದು ತದನುಭವಂ)

ವ : ಇನ್ನಾ ಪರಮೆಂಬುದಱೊಳಗೆ

ಸೂತ್ರ ೧೯

ವರ ಭಾವ ಹಾವ ಹೇಳೆಗ
ಳುರುಶೋಭಾಕಾಂತಿ ದೀಪ್ತಿಮಾಧುರ್ಯಂಗಳ್
ತರದಿಂ ಪ್ರಾಗಲ್ಭ್ಯೌದಾ
ರ್ಯರುಚಿರ ಧೈರ್ಯಂಗಳೆಂಬಿವೀರೈದುತೆಱಂ

: ಅಮೃತಾನಂದಿಯಿಂದೀ ಭಾವಾದಿತ್ರಯಂಗಳಂಗ ಸಮುದ್ಭವಂಗಳ್. ಶೋಭಾದಿಸಪ್ತಕಂ ಶೃಂಗಾರ ಭಾವಜಂಗಳ್. ಮುಂದಣ ಆಪತ್ತುಂ ಸ್ವಾಭಾವಿಕಂಗಳ್

ಸೂತ್ರ ೨೦

ವಿಲಸಿತ ಬಾವಂ ಮನದ ಮೊ
ದಲ ವಿಕ್ರಿಯೆ ಮುದಣೆಸೆವಲಂಕಾರಕ್ಕಂ
ದಲಿದುಂ ಸಿಂಗರದೊಳ್ ತಾಂ
ಸಲೆ ನೇತ್ರ ಭ್ರೂಮಿಕಾರಮಿತ್ತೊಡೆ ಹಾವಂ

ಲಕ್ಷ್ಯಂ

ವನರುಹನೇತ್ರೇಯೀ ಕುವರಿ ಲಕ್ಷ್ಯಂ ನಾಣೞಿದಪ್ಪಿದ ಕಾಮದಿಂದ ಮಾ
ವನುಮನದೆಂದಿನಂತೆ ನೆಱೆ ನೋಡದ ಸೋಂಕದಳಾದಳಾನತಾ
ನನೆ ರತವಾರ್ತೆಯಂ ಸಖಿಯರೆಂದೊಡೆ ಲಾಲಿಸಳೀಗಳೀಗಳೆಂ
ದೆನೆ ತಳೆಯಲ್ ಸ್ವಯಂವರಮನಾಱಳೆ ಮಾಡುಗೆ ಭೂಪನೋಪಳಿಂ            ೨೪

ಮೀಸಲ್ ವಾಯ್ದೆಱೆ ನಗೆ ಪೊಱ
ಸೂಸದ ಕಣ್ಬಳಸದಲಸದೊಳ್ದೊಡೆ ಲಜ್ಜಾ
ಭಾಸಮುಮೋಸರಿಸದ ಬಗೆ
ಮಾಸರವಾಯ್ತವಳೊಳೊಗೆದ ಕೊಡುಗೂಸತನಂ           ೨೫

(ಇದು ಭಾವಂ)

ಎಳೆಯಳಿರುತೆನ್ನ ಪಕ್ಕದೊ
ಳೆಳಸಿ ಮನೋಜಾತರೂಪತಾನೆನ್ನಕೆ ಕ
ಣ್ಗೊಳಿಪೆ ನೆವದಿಂದೆ ನಿನ್ನಂ
ಬಳೆದನುರಾಗದೊಳೆ ನೋಡಿದಳ್ ಕಡೆಗಣ್ಣಿಂ    ೨೬

(ಇದು ಹಾವಂ)

ಸೂತ್ರ ೨೧

ಅಂತೆಸೆವಾ ಹಾವಮದ
ತ್ಯಂತ ವ್ಯಕ್ತಿಯನೆ ತಾಳ್ದಿ ಶೃಂಗಾರಮನೊ
ಲ್ದಾಂತುದ್ದೋತಿಸಿದೊಡೆ ಸಲೆ
ಕಾಂತ ಪೆಸರಿಂದೆ ಹೇಳೆಯೆಂಬುದು ಸಲ್ಗುಂ

ನಿಮಿರ್ದುವು ಪೊಲೆದುವಳುಂಕಿದು
ವಮರ್ದುವು ಚುಂಬಿಸಿದುವಪ್ಪಿದುವು ಸಂಭ್ರಮದಿಂ
ಸಮದೃಷ್ಟಿಯಾಗಿ ಸಿಲ್ಕಿದು
ವೆಮೆಯಿಕ್ಕಲ್ಮಱೆದವಳ ಧವಳಕಟಾಕ್ಷಂ          ೨೭

ವ : ಮತ್ತಂ

ಹರಿನೀಲಚ್ಛವಿ ಪುಂಡರೀಕನಯನಂ ವಿಸ್ತೀರ್ಣ ವಕ್ಷಸ್ಥಲಂ
ಪರಿವೃತ್ತಾಯತ ಬಾಹು ಪೀವರ ನಿತಂಬಂ ಗಂಡರೊಳ್ ನೀರನೆಂ
ಬರ ಮಾತಂ ಕಿವಿಯಾಱೆ ಕೇಳ್ದು ಕಿವಿವೇಟಂಗೊಂಡು ಕಣ್ಣಾರ್ವಿನಂ
ಹರಿಯಂ ನೋಡಿದಳಾಕೆ ತನ್ನ ಕಡೆಗಣ್ಗಳ್ ಬೀಱೆ ಬೆಳ್ದಿಂಗಳಂ     ೨೮

(ಇದು ಹೇಳೆ)

ಸೂತ್ರಂ ೨೨

ರೂಪೋಪಭೋಗ ತಾರು
ಣ್ಯಾಪೂರ್ಣದಿನೊಗೆದಲಂಕೃತಿಯೆ ಶೋಭೆ ವಲಂ
ಆ ಪದೆದ ಶೋಭೆ ರಾಗ
ವ್ಯಾಪಾರದೆ ನಿಬಿಡಮಾಗೆ ಕಾಂತಿಯೆನಿಕ್ಕುಂ

ಲಕ್ಷ್ಯಂ

ನಯನಾಕರ್ಷಣ ಮಂತ್ರದೇವತೆಯ ಚೇತೋಜಾತಸಾಮ್ರಾಜ್ಯಲ
ಕ್ಷ್ಮಿಯ ಲಾವಣ್ಯರಸಾಂಬುರಾಶಿಯ ಲಸದ್ವಿದ್ಯಾಧರಾಧೀಶಪು
ತ್ರಿಯ ದಿವ್ಯಾಂಗಮನೊಲ್ದು ರನ್ನದೊಡವಿಂ ಕೈಗೆಯ್ದು ಪೆಂಪಿಂ ವಿದ
ಗ್ಧೆಯರಂದೇನೆಮೆಯಿಕ್ಕದೀಕ್ಷಿಸಿದರೋ ಕೈಗಣ್ಮಿದೊಂದೞ್ತಿಯಿಂ   ೨೯

(ಇದು ಶೋಭೆ )

ಎಳೆಮಿಂಚಿದೊಪ್ಪವಿಟ್ಟಂತಮರ್ದಿನ ಕಲೆ ರೂಪಾಂತುದೆಂಬಂತೆ ಮುತ್ತಂ
ತೊಳದಿಟ್ಟಂತಂಗಜಾತಂ ಮಸೆದು ಪಿಡಿದ ಕೂರ್ವಾಳಿದೆಂಬಂತೆ ಡಾಳಂ
ಪೊಳೆಯುತ್ತುಂ ಸುತ್ತಲುಂ ನೋೞ್ಪರ ಬಗೆಗೆ ಭಯಂ ಪುಟ್ಟಿ ತಳ್ಪೊಯ್ಯೆತತ್ಕೋ
ಮಳೆ ಚೆಲ್ಪಿಂದೊಪ್ಪಿ ಬರ್ಪಂಗಜನ ಗಜದವೊಲ್ನಾಡೆ ಕಣ್ಗೆಡ್ಡಮಾದಳ್

(ಇದು ಕಾಂತಿ)      ೩೦

ಸೂತ್ರಂ ೨೩

ಕಾಂತಿಯೆ ಬಿತ್ತರಮಾಗಲೊ
ಡಂ ತಾಂ ದೀಪ್ತಿಯೆಯೆನಿಕ್ಕುಮದ ಹೀನ ದ್ರ
ವ್ಯಾಂತರಯೋಗದೊಳಂ ಚೆ
ಲ್ವಂ ತಾಳ್ದಿದ ರಮ್ಯತಾಗುಣಂ ಮಾಧುರ್ಯಂ

ಲಕ್ಷ್ಯಂ

ತೊಳ ತೊಳಪ ಕೋಮಲಾಂಗದ
ಬೆಳಗಿಂ ಮರದೆಲೆಯ ಕೞ್ತಿಲೆಯನಟ್ಟುತೆ ಕೋ
ಮಳೆ ಕಾಮನ ದೀವಿಗೆವೋಲ್
ತಳರ್ದಳ್ ನಿಜಪತಿಯ ಕೂಡೆ ನಂದನವನದೊಳ್            ೩೧

ವ : ಮತ್ತಂ

ಬಿಸಿಲಂ ಲಾವಣ್ಯದಿಂ ನುಣ್ಪಡರೆ ಬೆಳಗುತುಂ ನೀಳ್ದಪಾಂಗಂಗಳಿಂ ನು
ಣ್ಣಿಸುತುಂ ದಿಕ್ಕಾಮಿನೀಸಂಕುಲಮನಮಲಹಾಸ ಪ್ರಭಾಪೂರದಿಂ ಪು
ಟ್ಟಿಸುತುಂ ತಳ್ತಚ್ಚವೆಳ್ದಂಗಳನಯುವ ಶೃಂಗಾರ ವಾರಾಶಿಯೊಳ್ತೇಂ
ಕಿಸುತುಂ ವಕ್ತ್ರೇಂದುವಂ ಬಂದುದು ನೆಱಿದಿದಿರಂ ವಾರನಾರೀ ನಿಕಾಯಂ

(ಇದು ದೀಪ್ತಿ)      ೩೨

ಕಱೆಯಿರೆಯುಂ ಶಶಿಕಳೆ ಸಿರಿ
ನೆಱೆದಂತಿರೆ ನಾರಸೀರೆಯುಟ್ಟೊಡಮಾ ಪೆಣ್
ನೆಱೆ ರಂಜಿಸುತಿರ್ದಳ್ ಮನ
ದೆಱೆಯನ ಸಂಗಡದೊಳೞ್ತಿಯಿಂದಾಯೆಡೆಯೊಳ್         ೩೩

(ಇದು ಮಾಧುರ್ಯಂ)

ಸೂತ್ರಂ ೨೪

ಎನಸುಂ ಲಜ್ಜೆಯಿನಾದ ಭೀತಿಯ ತವಿಲ್ ಪ್ರಾಗಲ್ಭ್ಯಮಾ ಪೆಣ್ಣ ಪೆಂ
ಪೆನಿತಾಯಾಸದೊಳಂ ಲಸದ್ವಿನಯ ಬಾಹುಳ್ಯಂ ದಲೌದಾರ್ಯಮೀ
ಘನ ಚಾಪಲ್ಯದ ಪೆರ್ಮೆಯಿಂ ಕಿಡದ ಚೇತೋವೃತ್ತಿ ತಾಂ ಧೈರ್ಯಮಿಂ
ತೆನೆ ಸಂದೊಪ್ಪಿತು ಪೆರ್ಮೆವೆತ್ತ ಸುಕವೀಂದ್ರಪ್ರೋಕ್ತಮಾರ್ಗಂಗಳಿಂ

ಲಕ್ಷ್ಯಂ

ಪೊಸಸುಸಿಲೊಳ್ ನೃಪಾತ್ಮಜೆ ವಿದಗ್ಧೆಯವೋಲ್ ಪ್ರಿಯನೊಲ್ದು ಮೇಳಿಪೊಂ
ದೆಸಕದೆ ನಾಣನೊಕ್ಕು ಗತಭೀತಿಯಿನಪ್ಪುವ ಮುದ್ದುಗೆಯ್ವ ಚುಂ
ಬಿಸುವ ಮರಲ್ವ ಮೆಯ್ಗುಡುವ ಮೆಯ್ಮಱೆವೆೞ್ಚಱುವಾಱುವಾಸೆಗೆ
ಯ್ವಸಿಯಳದೇಂ ಮನಂಬಿಡಿದಳೋ ಚದುರಿಂ ಸುದತೀ ಮನೋಜನಾ (ಇದು ಪ್ರಾಗಲ್ಭ್ಯಂ)       ೩೪

ನಡೆದೊರ್ಗಾವುದಮಂ ಪ್ರಿಯಂಬೆರಸು ಬೇರ್ನಾಡಿಂಗೆ ಪೋದಂದು ಮೆ
ಲ್ಲಡಿಗಳ್ ನೊಂದು ಸಿರೀಷ ಕೋಮಳೆಯಳುಂಬಂ ಸೇದೆವಟ್ಟಿರ್ದುಮಾ
ಗಡೆ ತನ್ನೊಂದು ಬೞಲ್ಕೆಯಂ ಮಱೆದು ಚಿತ್ತಾಧೀಶನಂಘ್ರಿದ್ವಯಂ
ಬಿಡಿದೊತ್ತುತ್ತುಪಚಾರವಾಗಲಮರ್ದೇಂ ಚಿತ್ತಕ್ಕೆ ತಣ್ಪಿತ್ತಳೋ (ಇದು ಔದಾರ್ಯಂ)  ೩೫

ಕೂರಿಸಬೇಡವಂಗೆಳಸಿ ಮುಂ ಬಸವಾದರ ಕಾಮದಾಹಮಂ
ನಾರಿ ನಿರೀಕ್ಷಿಸೆಂದ ಸಖಿವಾಕ್ಯಮನೊಲ್ಲದೆ ತಂದೆ ತಾಯ್ಗಳಂ
ದೂರಿಸಿ ತಂಗಿಯೇಂ ಸುಖಮನುಂಡಪೆಯೆಂಬೆನೆ ನಿನ್ನಮಾತು ತಾಂ
ಸೇರದು ಮಾೞಿದೆಂ ಮನಮನೆಂದಪೆ ಧೈರ್ಯಮಿದೆಂತು ಸಾರ್ದುದೋ        ೩೬

ವ : ಮತ್ತಂ

ಅನಿತಂಗೆಯ್ದುೞಿಯೆಂಬ ತಾಯ ನುಡಿಯ ಕಯ್ಕೊಂಡೆನೇ ನಂಟರೀ
ತನ ನಣ್ಪಂ ಬಿಸುಡೆಂದೊಡಾ ನುಡಿಯ ನಾನೇಗೊಂಡೆನೇ ನಾಣನೆ
ಳ್ಳನಿತಂ ಕಾದೆನೆ ಬೇಡಿದೊಂದು ಪುರುಳಂ ಮಾರ್ಕೊಂಡೆನೇ ಬೇಡ ಬೇ
ಡೆನೆ ಕಂಡಾನೆರೆದಟ್ಟಿಯುಂ ಬಗೆಯನೇಂ ಗಂಡಂ ಮನಂಗಂಡನೋ (ಇದು ಧೈರ್ಯಂ)   ೩೭

ಸೂತ್ರಂ ೨೫

ಸತಿಗಾತ್ಮ ಕೇಳಿ ಮೊಟ್ಟಾ
ಯಿತ ಬಿಬ್ಬೋಕಾಖ್ಯಲಲಿತ ಲೀಲಾಕಿಳಿಕಿಂ
ಚಿತ ವಿಚ್ಛಿತ್ತಿವಿಲಾಸವಿ
ಹೃತ ವಿಭ್ರಮಕುಟ್ಟಮಿತಮೆನಲ್ ಪತ್ತುತೆಱಂ

ವ : ಇವು ಸ್ವಾಭಾವಿಕಂಗಳೆಂದಱಿವುದು.

ವ : ಇವು ಸ್ವಾಭಾವಿಕಂಗಳೆಂದಱಿವುದು

ಸೂತ್ರಂ ೨೬

ಕೃತಚಿತ್ರೋತ್ತಮ ಬುದ್ಧಿಯಿಂ ರಮಣಿ ಕಾಂತಧ್ಯಾನದಿಂದಂಗಭಂ
ಗತೆಯಂ ಪೆತ್ತುದಱಿಂದಮಿಂತೆರಡು ಭೇದಂ ನೋಡೆ ಮೊಟ್ಟಾಯಿತಂ
ಪತಿಯೊಳ್‌ಬೆಚ್ಚೊಲವಂ ಪರರ್ಗಱಿಪದಂತಿರ್ಪಂಗನಾ ಕೃತ್ಯದಿಂ
ಧೃತಗರ್ವಾದಿಯಿನಾದನಾದರತೆಯಿಂ ಬಿಬ್ಬೋಕಮಿಂತಿರ್ತೆಱಂ

ವ : ಅಲ್ಲಿ ಪೂರ್ವಾರ್ಧಕ್ಕೆ

ಲಕ್ಷ್ಯಂ

ಇನಿಯನೆ ನೀನೆ ನೀಂ ನೆಗೆೞಿದಂದಮನೀಕ್ಷಿಸೆನುತ್ತೆ ಕೂರ್ತ ಕಾ
ಮಿನಿ ಕೃತದೋಷಿಯಾದವನೆ ಭೋಂಕೆನೆ ತನ್ನ ಪದಕ್ಕೆ ನಮ್ರನಾ
ದನುವುಮನಾಗಳೀೞ್ದೊದೆದು ತಾಂ ಮಿಗೆ ಜರ್ವುವ ರೀತಿಯಂ ಜಲ
ಕ್ಕನೆ ನಿಜಹಸ್ತದಿಂ ಬರೆದು ತೋಱಿದಳೊಪ್ಪುವ ಭಾವಚಿತ್ರದಿಂ      ೩೮

ವ : ಮತ್ತಂ

ಒಡವೋದರ್ ಬಂದರೆಂಬೀ ನುಡಿಯನೆ ಪೆಱರಿಂ ಕೇಳ್ದು ಕೇಳ್ದಂತೆ ಸಾಸಿ
ರ್ಮಡಿ ರಾಗಂ ತನ್ನೊಳಾಗಳ್ ಪುದಿದಿರೆ ನಿಜಚಿತ್ತೇಶ್ವರಂ ಬಾರನೆಂಬೀ
ಪಡಿವಾತಂ ಕೇಳ್ದು ಕೇಳ್ದಂತೆರ್ದೆ ಪಡಿದೆಱೆದಂತಾಗೆ ಬೆಂಬಿೞ್ದವಳ್ ನೂ
ರ್ಮಡಿ ಮುನ್ನಿಂ ಕುಂದಿದಳ್ ತತ್ಕ್ಷಣದೊಳೆ ಮದನಾಗ್ನಿ ಪ್ರಸಂತಾಪದಿಂದಂ            ೩೯ (ಇವೆರಡುಂ ಮೊಟ್ಟಾಯಿತಂ)

ಪರಿದೆಯ್ದಲ್ಕೆಯ್ದಿ ನೋಡಲ್ ನುಡಿಸಲೊಡರಿಸಲ್ಕಾಗಳುಂ ತೀಡುವಂತಃ
ಕರಣವ್ಯಾಪಾರಮಂಮೆಲ್ಲನೆ ಮಱೆಸಿ ತದಾಲೋಕನಾಲಾಪದಿಂದಂ
ಪರಿಹಾಸಂಗೆಯ್ದು ತನ್ನೋಪನೊಳಭೀಮತ ಸಂಸಿದ್ಧಿಯಂ ತೀರ್ಚಿಕೊಂಡೆ
ಲ್ಲರುಮಂ ದೂಱುತ್ತುಮಿರ್ಪಂಗನೆಯರ ಬಗೆಯಂ ಭಾವಿಸಲ್ ಬಲ್ಲನಾವಂ೪೦

ವ : ಮತ್ತಂ

ಅಣಿಯರಮೆನ್ನಂ ನಲ್ಲಂ
ಪ್ರಣಯದಿನೇಳಿಸುತೆ ಸೊಂಕುತಂ ಬರೆ ಸಖಿ ಕೇ
ಳಣಿಯರದಿಂದವನಂ ಕಡೆ
ಗಣಿಸಿದೆನೇಂ ತಪ್ಪುಗಂಡು ಸೈರಿಪರೊಳರೇ       ೪೧ (ಇವೆರಡುಂ ಬಿಬ್ಬೋಕಂ)

ಸೂತ್ರಂ ೨೭

ಭಾಸುರ ಸುಕುಮಾರಾಂಗ
ನ್ಯಾಸಂ ಲಲಿತಂ ಪ್ರಿಯಾಚರಣಮಂ ನಗೆಯಿಂ
ಲೇಸಾಗಭಿನಯಿಪೊಡೆ ಕೇ
ಳಾಸುದತಿಯ ನೆಗೞ್ದ ಲೀಲೆ ಲೀಲೆಯೆನಿಕ್ಕುಂ

ಲಕ್ಷ್ಯಂ

ನಗೆಗಣ್ ಸೂಸೆ ವಿಲಾಸಮಂ ನಗೆಮೊಗಂ ಲಾವಣ್ಯಮಂ ಬೀಱೆ ಸಾ
ವಗಿಸುತ್ತಂ ಕಚಬಂಧಮಂ ಶಿಥಿಲನೀವೀಬಂಧಮಂ ಕಾಂಚಿಯೊಳ್
ತೆಗೆಯುತ್ತುಂ ಸ್ಮರಮಂತ್ರದೇವತೆಯವೋಲ್ ಬಾಹಾಲತಾಂದೋಳನಂ
ಬಗೆಯಂ ಬಲ್ಸೆಱೆಗೆಯ್ಯೆ ಬಾಲೆ ಮೆಱೆದಳ್ ಲೀಲಾಪದನ್ಯಾಸಮಂ            ೪೨

ವ : ಮತ್ತಂ

ಕುಡುವುರ್ವಂ ನಸುನೀವುತಂ ತಿಳಕಮಂ ತಿರ್ದುತ್ತುಮಾಸ್ಯಾಬ್ಜಮಂ
ತೊಡೆಯುತ್ತುಂ ಕುಟಿಲಾಲಕಾವಳಿಗಳಂ ಸಯ್ತೊತ್ತಿ ಚೆಲ್ವಾಗಿ ನೇ
ರ್ಪಡಿಸುತ್ತುಂ ಮದಿರಾಲಸೇಕ್ಷಣೆ ಮದಸ್ತಂಭೇರಮಾಕಾರದಿಂ
ನಡೆ ಪಾಡುತ್ತುಮುಪಾಂಗಣ ಪ್ರಘಣದೊಳ್ ತನ್ವಂಗಿ ಕಣ್ಗೊಪ್ಪಿದಳ್ (ಇದು ಲಲಿತಂ)          ೪೩

ಪ್ರಿಯೆ ತನ್ನೋಪನ ಕೆಯ್ತಮಂ ನುಡಿವ ಚಾತುರ್ಯೋಕ್ತಿಯಂ ನೋೞ್ಪ ಭಂ
ಗಿಯನಿರ್ಪಂದವನಾಳಿಗೊಳ್ವ ತೆಱದಿಂ ತಾನೞ್ಕಱಿಂ ಚಿತ್ತದೊಳ್
ನಿಯತಂ ಭಾವಿಸಿ ತಾನೆ ಮಾಡಿಯುಮದಂ ಕೊಂಡಾಡಿಯುಂ ಕೂಡೆ ನೋ
ಡಿಯುಮಿರ್ದೊಪ್ಪಿಯುಮಿಂತದೇಂ ನಲಿದಳೋ ತತ್ಕಾಂತೆಯೇಕಾಂತದೊಳ್೪೪ (ಇದು ಲೀಲೆ)

ಸೂತ್ರಂ ೨೮

ಸಂತೋಷ ರೋಷ ಭಯ ನಯ
ಚಿಂತಾದಿಗಳಣಮೆ ನೆಱೆಯೆ ಕಿಳಿಕಿಂಚಿತಮೊ
ಳ್ಪಾಂತಲ್ಪಾಭರಣದೆ ಚೆ
ಲ್ವಂ ತಾಂ ತಲೆದವಳ ಕೇಳಿ ವಿಚ್ಛಿತ್ತಿ ವಲಂ

ಲಕ್ಷ್ಯಂ

ಆತನಿಗಾದ ಬೇಟಮಭಿಜಾತತೆಯಿಂ ನೆಗೞ್ದೊಂದು ಧೈರ್ಯಮಂ
ತಾತನಿನಾದ ಭೀತಿ ನಿಜಬಾಲ್ಯದಿನುಣ್ಮಿದ ಲಜ್ಜೆಹೃತ್‌ಸಮು
ದ್ಭೂತನಿನಾದ ಸೊರ್ಕು ಸುಚರಿತ್ರತೆಯಿಂ ಸಲೆ ಸಂದ ಸೌಷ್ಠವಂ
ಚೇತದೊಳುಣ್ಮೆ ಕನ್ನೆ ತಳೆದಳ್ ಕಿಲಕಿಂಚಿತ ಭಾವಚೇಷ್ಟೆಯಂ       ೪೫ (ಇದು ಕಿಳಿಕಿಂಚಿತಂ)

ಕಳೆ ತುಡಿಸಲ್ಕದೇಂ ತುಡುಗೆಯಂ ಸಹಜಾಂಗದ ಕಾಂತಿಯಿಂದಮ
ಗ್ಗಳಮೆ ವಿಲೇಪಂಗಳಿವು ಬೇೞ್ಕುಮೆ ಸಾಲದೆ ಸಾಜದಿಂ ಮನಂ
ಗೊಲಿಸುವ ಗಂಧಮಾಸತಿಗೆ ಮಂಗಳ ಸಾಧನಮಾದಹಾರಮುಂ
ತಿಳಕಮುಮಾರುಮಂ ಮಸುಳಿಸಲ್ ನೆಱೆಗುಂ ಮೃಗಶಾಬನೇತ್ರೆಯಾ           ೪೬ (ಇದು ವಿಚ್ಛಿತ್ತಿ)

ಸೂತ್ರಂ ೨೯

ವಾಸಾಸನಾದಿಯಂಗ
ನ್ಯಾಸಾದಿ ವಿಶೇಷಮಂದು ವಿಲಾಸಂ ನಾಣಿಂ
ಲೇಸಾಗಿ ನುಡಿಯೆ ತಕ್ಕುದ
ನಾ ಸತಿ ನುಡಿಯದ ಗಭೀರತೆಯೆ ವಿಹೃತಾಖ್ಯಂ

ಲಕ್ಷ್ಯಂ

ಕಳಕಾಂಚೀಕ್ಷುದ್ರಘಂಟಾನಿನದಮೆಸೆವಿನಂ ಬಂದು ತನ್ವಂಗಿ ಸೌಧ
ಸ್ಥಳದೊಳ್ ಕುಳ್ಳಿರ್ದ ತನ್ನೋಪನ ತೊಡೆಯನವಷ್ಟಂಭದಿಂದೇಱಿ ವೀಣಾ
ಕಳನಾದಂ ಕಂಠನಾದಕ್ಕನುಗತಮೆನೆ ತದ್ವಲ್ಲಕೀ ವಾದನ ವ್ಯಾ
ಜಳತಾಂಗನ್ಯಾಸದೊಳ್ಪಂ ತಳೆದಿರೆ ಮುದದಿಂ ಪಾಡಿದಳ್ ಕಾಂತೆಯೊರ್ವಳ್ ೪೭ (ಇದು ವಿಳಾಸಂ)

ಎನ್ನನೆ ಕೂರ್ತು ಮೆಲ್ಸರದೆ ಪಾಡುತೆ ಪಟ್ಟಿರೆ ಕೇಳುತಾಗಳಾ
ನೆನ್ನದೆ ಪಾಡು ಪಾಡೆನುತೆ ಬರ್ಪುದು ಮೆೞ್ದುನತಾನನಾಬ್ಜದಿಂ
ದೆನ್ನೊಳದೇನುಮಂ ನುಡಿಯದುಂಗುಟದಿಂ ಬರೆಯುತ್ತೆ ಭೂಮಿಯಂ
ರನ್ನದ ಕಂಕಣಂದಿರಿಪುತುಂ ನೆಱೆ ನಿಂದಳನೆಂದು ಕಾಣ್ಬೆನೋ         ೪೮ (ಇದು ವಿಹೃತಂ)

ಸೂತ್ರಂ ೩೦

ಮದರಾಗಾದಿಯಿನಾದ ವಿಭ್ರಮದ ಸತ್ವೋದ್ಯೋಗಮುಂ ಕಾಮಮೋ
ಹದೆ ತಾಂ ಪಲ್ಲಟಮಾಗಿ ಸಿಂಗರಿಸಿಕೊಳ್ವೊಂದಂದಮುಂ ವಿಭ್ರಮಂ
ವಿದಿತಂ ಕುಟ್ಟಮಿತಂ ಮನಃಪ್ರಿಯನ ಸೋಂಕಂ ಚಿತ್ರದಿಂದೊಲ್ದುಮೊ
ಲ್ಲದಳಂ ತಾಗಿಯೆ ಬಾಹ್ಯದೊಳ್ ಪ್ರಿಯೆಯೆ ಗೆಯ್ದಾ ಕೂಟಮಿಂತೊಪ್ಪುಗುಂ

ಲಕ್ಷ್ಯಂ

ಮದಿರಾಪಾನ ವಿಕಾರಮುಂ ನವವಯಸ್ಸಂಪತ್ತಿಯುಂ ಬಂದು ನೋ
ಡದವೋಲ್ ನೋಡುವ ನಲ್ಲನಿರ್ದಿರವುಮೊಂದುತ್ಸಾಹಮಂ ಮಾಡೆ ಚಿ
ತ್ತದೊಳಾಗಳ್ ತನುಮಧ್ಯೆಗೇನೆಸೆದುದೋ ನೃತ್ಯಂ ಚತುರ್ಭಂಗಿ ಭೇ
ದದ ಲೀಲಾಭಿನಯ ಪ್ರಧಾನವಿಧಿಯಿಂ ಕಾದಂಬರಿಗೋಷ್ಠಿಯೊಳ್  ೪೯

ವ : ಮತ್ತಂ

ಪದಸದನವಾಂಪ ವೇಳೆಯೊಳೆ ರಾಗದಿನಾಂ ಬರೆ ಕಾಮಮುರ್ಬಿ ತಾ
ನಸವಸದಿಂ ಕೊರಲ್ಗೆ ಕಲಕಾಂಚಿಯನೊಪ್ಪುವ ತಾರಹಾರಮಂ
ಮಿಸುಪ ನಿತಂಬಕಂದುಗೆಯನೊಳ್ ನಳಿತೋಳ್ಗಿರದಿಟ್ಟ ನಲ್ಮೆಯಿಂ
ಶಸಿಮುಖಿಯೆನ್ನನಪ್ಪಿ ಮನಮಂ ನಗಿಸಿರ್ದುದನೆಲ್ಲಿ ಕಾಣ್ಬೆನೋ   ೫೦ (ಇವೆರಡು ವಿಭ್ರಮಂ)

ಸುದತೀರತ್ನಮೆ ಕಾದಲಂ ನೆಱೆಯೊಱಲ್ದಾಲಿಂಗನಂ ಮಾಡೆ ಮು
ಟ್ಟದಿರೆನ್ನಂ ತೊಲಗೆಂದು ಮೆಯ್ದೆಗೆವಿನಂ ನಿನ್ನೊಂದುಕಾದಲ್ಮೆಯಿಂ
ಮುದಮಂ ತಾಂ ಗುಡಿಗಟ್ಟಿ ಬಿತ್ತರಿಪವೋಲ್ ರೋಮಾಂಚನಂ ಮೆಯ್ಯೊಳಿ
ಬ್ಬದಿಗಂ ಮೂಡಿರೆ ಬಲ್ಮೆಯೇಕೆ ಸುಸಿಲಂಗೆಯ್ವಂದಮೀ ಕೈತವಂ  ೫೧

ಪದೆದಮರ್ದಪ್ಪೆ ಚಪ್ಪಲರ್ದ ಪೆರ್ಮೊಲೆ ಪೀಱೆ ಪೊದೞ್ದುಪೊಂಗಿ ಬೀ
ಗಿದ ಬೆಳರ್ವಾಯ್ ತಗುಳ್ದುಗಿಯೆ ನೀಳ್ದ ನಖವ್ರಣವೀೞ್ದುಪೊಯ್ಯೆ ಪಾ
ಱಿದ ತಲೆ ತನ್ನೊಳೊಪ್ಪೆ ಸುರತಾಂತ್ಯದೊಳೆನ್ನಯ ಮುಂದೆ ನಿಂದು ಮೇ
ಲುದ ಱೊಳೆ ಬೀಸುತುಂ ಬೆವರನಾ ಱಿ ಸುವೋಪಳನೆಂದು ಕಾಣ್ಬೆನೋ       ೫೨

ವ : ಮತ್ತಮೋಷ್ಠಗ್ರಹಣಾದಿ ಸುಖಪೀಡಾವಿಭವಂ ಕುಟ್ಟಮಿತಂ

ಲಕ್ಷ್ಮಂ

ಚುಂಬಿಸೆ ಬೀಗಿ ಬೆಳ್ಪಡರ್ದ ಬಾಯ್ದೆಱೆಯಾಳಿಸಿದಪ್ಪಿನೊತ್ತಿನಿಂ
ದಂ ಬಿಡೆ ಗುಜ್ಜುಗೊಂಡ ಮೊಲೆ ಪೋರ್ಕುಳಿಯಿಂದಮೆ ಪಂತಿದಪ್ಪಿ ತಾ
ಱುಂಬು ೞಿಯಂ ತೆರಳ್ದ ಕುರುಳುಣ್ಮೆ ಬೆಮರ್ ನಸು ಬಾನಲಾದ ಬೊ
ಟ್ಟೆಂಬಿವು ಕೂಟದೊಂದು ಸವಿಯಂ ಪಿಸುಣಾಡುವುವೀ ಲತಾಂಗಿಯಾ          ೫೩ (ಇವು ಮೂಱುಂ ಕುಟ್ಟಮಿತಂ)

ವ: ಇನ್ನಾಲಂಬನಾಲಂಕಾರಕ್ಕೆ

ಸೂತ್ರಂ ೩೧

ಮೃದುವಸನ ಮಾಲ್ಯ ಭೂಷಣ
ಮದ ಚಂದನ ಪತ್ರಭಂಗ ಧೂಪಸ್ನಾನಂ
ಪದೆದಿರೆ ತಚ್ಚಿಹ್ನಾದ್ಯಂ
ಮುದದಾಲಂಬನದ ಮೆಱೆವಲಂಕಾರಂಗಳ್

ಲಕ್ಷ್ಯಂ

ಸುದತಿಯ ದಿವ್ಯಗಂಧತನು ಚಂದನಶಾಖೆಯೊಳಂಗಜಾಹಿಯಿ
ಕ್ಕಿದ ಪೆರೆಯಂತಿರುಟ್ಟ ದುಗುಲಂ ಕುಚಕೋಕಯುಗಂಗಳಡ್ಡಗ
ರ್ಚಿದ ಬಿಸದಂತೆ ಹಾರಲತೆ ಕಣ್ಗೆ ಕರಂ ಸುಲಿಪಲ್ಲಕಾಂತಿಯೊ
ಪ್ಪಿದುದು ಸುಧಾಂಶುಬಿಂಬವೆಳಮುತ್ತನೆ ಮುಕ್ಕುಳಿಸಿರ್ದುದೆಂಬಿನಂ            ೫೪

ವ : ಅಂತುಮಲ್ಲದೆಯುಂ

ಕಡೆದನೊ ಚಂದ್ರಕಾಂತಮಣಿಯಿಂ ಮದನಂ ಬಿಸಕಾಂಡಗರ್ಭದಿಂ
ಪಡೆದನೊ ಪದ್ಮಗರ್ಭನೆನೆ ಭೂಷಣವಸ್ತ್ರವಿಲೇಪನಾಂಶುಗಳ್
ಪಡೆಯೆ ವಿಲಾಸಮಂ ದಶನದೀಧಿತಿಯಿಂ ದರಹಾಸಲಕ್ಷ್ಮಿ ನೂ
ರ್ಮಡಿಸೆ ಬೆಡಂಗುವೆತ್ತುದು ನರೇಂದ್ರ ವಧೂ ಧವಳ ಪ್ರಸಾಧನಂ    ೫೫

ವ: ಇಂತಾಲಂಬನಾಂಕಾರಮಖಿಳ ಕಾವ್ಯಪ್ರಸಿದ್ಧಮಾದುದಱಿಂದಲ್ಲಿ ವಿಶೇಷಮನಱಿಗೆ –

ವ : ಇನ್ನು ತಟಸ್ಥಂ

ಸೂತ್ರಂ ೩೨

ಸಸಿಯುದಯಂ ಮುಗಿಲ್ಮೊೞಗು ನಂದನಮೊಪ್ಪುವ ಚಂದನಂ ಲಸತ್
ಕುಸುಮ ವಸಂತಮಂತೆ ಋತುಭೃಂಗ ಪಿಕಾಳರವಂ ಕೊಳಂ ಬನಂ
ಮಿಸುಗುವ ಕಪ್ಪುರಂ ಶಿಶಿರಶೀತಜಲಂ ನಱುದಂಬುಲಂ ಸುಗೀ
ತ ಸರಸ ದೂತಿವಾಕ್ಪ್ರಭೃತಿ ಮುಂಪೆಸರ್ಗೊಂಡ ತಟಸ್ಥಮಲ್ಲದೇ

ಲಕ್ಷ್ಯಂ

ಆಟಂ ಭಾಜನೆ ಗಾಡಿಯೊಳ್ವಸದನಂ ಬೆಳ್ದಿಂಗಳೊಳ್ಮಾತು ಕೊಂ
ಡಾಟಂ ಕತ್ತುರಿಕಪ್ಪುರಂ ನಗೆ ತೆಗೞ್ ಕೂಟಂ ಬಿಯಂ ಜವ್ವನಂ
ನೋಟಂ ತಂಬುಲಮಿಂಪು ಕಂಪು ವಿಭವಂ ಮೆಯ್ಮೇಳಮೆಂಬಿಂತಿವಂ
ಬೇಟಕ್ಕಾಗರಮೆಂಬೆನಣ್ಣ ಸುಸೀಲೇಂ ಪೇೞ್ ಪಾಗದೊಳ್ ತೀರ್ಗುಮೇ       ೫೬

ವ : ಮತ್ತಂ

ಕುಳಿರ್ವೆಲರುಮಾಲಿನೀರುಂ
ತಳಿರ್ವಾಸುಂ ಚಂದ್ರಕಾಂತಮುಂ ಚಂದನಮುಂ
ಕೊಳನುಂ ನಂದನವನಮುಂ
ಕಳೆಯವೆ ಬೇಸಗೆಯೊಳೊಗೆದ ಬೇಟದ ಸೂಡಂ (ಇಂತು ತಟಸ್ಥಂ)   ೫೭

ವ : ಇಂತಾಲಂಬನಗುಣ ಚೇಷ್ಟಾಲಂಕಾರ ತಟಸ್ಥಂಗಳೆಂದುದ್ವೀಪನ ವಿಭಾವಮಂ ಪೇೞ್ದೆಂ. ಇನ್ನಾ ವಿಪ್ರಲಂಭಮಂ ಪೇೞ್ದೆಂ

ಸೂತ್ರ || ವಿಯೋಗಮೆ ವಿಪ್ರಲಂಭಂ

ವೃತ್ತಿ : ಅಲ್ಲಿ ನೋಯಿಸಲ್ಪಟ್ಟ ನಲ್ಲರಾಲಂಬನ ವಿಭಾವಮಂತೆ ನಂದನಕಾಸಾರ ಚಂದ್ರಿಕಾಶೀ ತಾಂಬು ತಾಂಬೂಲ ಕುಸುಮಶಯ್ಯಾದಿಯುದ್ದೀಪನ ವಿಭಾವಂ. ಅಂತೆ ಸಂತಾಪ ಕಾರ್ಶ್ಯ ಜಾಗರಪ್ರಲಾಪ ಕ್ಷಾಮನೇತ್ರತ್ವದೀನ ಸಂಚರಣಾನುಕರಣಾನುಕರಣಾಕೃತಿ ವಿಲೇಖನ ಸಂದೇಶ ಶೀತಸೇವನಾದಿಯನುಭಾವಂ. ಅಶ್ರುವಿವರ್ಣ ಸ್ತಂಭಕಂಪಾದಿ ಸಾತ್ವಿಕಂ. ಶಂಕೌತ್ಸುಕ್ಯ ಮದಗ್ಲಾನಿನಿದ್ರಾಸುಪ್ತಿಪ್ರಭೋದ ಚಿಂತಾಸೂಯಾಶ್ರಮ ನಿರ್ವೇದ ಮರಣೋನ್ಮಾದ ಜಡತಾವ್ಯಾಧ್ಯಪಸ್ಮಾರಾದಿ ವ್ಯಭಿಚಾರಿಗಳಕ್ಕುಮದು

ಸೂತ್ರ ೩೩

ಪರಿಭಾವಿಸುವೊಡೆ ಪೂರ್ವಾ
ನುರಾಗ ಮಾನಾಖ್ಯಕಂ ಪ್ರವಾಸಾಖ್ಯಾನಂ
ಕರುಣಾತ್ಮಕಮೆಂದಿಂತವ
ಧರಿಸೆ ಚತುರ್ಭಂಗಿ ವಿಪ್ರಲಂಭದ ಭೇದಂ

ಸೂತ್ರಂ ೩೪

ನೋಡಿ ನುಡಿದೊಲ್ದು ಕೂಟಂ
ಕೂಡದ ಮನನೊಂದು ಚಲದೆ ತಿಳಿಯದ ನಲ್ಲರ್
ನಾಡತ್ತ ಪೋದೞಿದನೋ
ವಾಡಲಿದೇತಱದೆ ವಿಪ್ರಲಂಭಚತುಷ್ಕಂ

ವ : ಅಲ್ಲಿ ಪೂರ್ವಾನುರಾಗಮೆಂಬುದಭಿಲಾಷೆಯದು ದೈವಪಾರವಶ್ಯ ಮೆಂದಿರ್ತೆಱಂ

ಸೂತ್ರಂ ೩೫

ಸಮಸಂದು ನೋಡಿಯುಂ ನುಡಿ
ದು ಮನಂಗೊಳೆ ಕೊಂಡು ಕೂರ್ತು ತಮ್ಮೊಳ್
ಸಮನಿಸದೆ ಮರುಗುವಾ ಮರು
ಕಮುಮದು ಪೂರ್ವಾನುರಾಗಮೆನೆ ಪೆಸರ್ವಡೆಗುಂ

ಪೊಸಸುಸಿಲೊಳ್ ನೃಪಾತ್ಮಜೆಯೊಳಿಂತು ವರಂ ಪಡೆಯಲ್ಕೆ ಕೂರ್ತು ಪೂ
ವಸಗೆಸೆವಾಕೆಯಂ ಬರಿಪುದುಂ ನಭದಿಂದೆ ನಿಶಾಚರೇಶನೀ
ಕ್ಷಿಸಿ ಪಗೆ ಬಂದು ತನ್ನೃಪತನೂಜನನೊಯ್ದು ಬಿಸಿಟ್ಟು ಪೋಗೆ ತ
ನ್ನಸುವೆನಿಪೋಪಳಂ ನೆನೆದೞನವಂ ವನಾಂತದೊಳ್        ೫೮

ವ : ಮತ್ತಂ

ಪದೆದತ್ತಿರ್ವರ ಜೀವಮೊಂದೊಡಲೆ ಬೇಱೆಂಬಂ ತುಟಂ ಮಾಡಿದಂ
ಮದನಂಗಾವುದು ದೋಷಮುಂತೆ ನುಡಿಯಲ್ಕೇನಕ್ಕುಮೇ ಪಾಪಮಂ
ಬಿದಿಯೆಂಬಾಱಡಿಗಳ್ಳ ನಿಂದಮುೞಿವಾಯ್ತಿರ್ವರ್ಗಮಿನ್ನೊರ್ಮೆ ದೈ
ವದಿನೆತ್ತಾನುಮದಿಂದುಬಿಂಬಮುಖಿಯಂ ಕಾಣ್ಬೊಂದು ಸೈಪಕ್ಕುಮೇ (ಇದು ದೈವವಶಾಭಿಲಾಷೆ)         ೫೯

ನೃಪಸುತೆಯಂ ತಾಂ ತನ್ನಂ
ನೃಪಸುತೆ ನೆಱೆ ನೋಡಿ ನೋಡಿ ತಂತಮ್ಮೊಳ್ ಕೂ
ರ್ತು ಪಡೆಯದೆ ಸುರತಮಂ ಬಿರ
ಯಿಪರಾದರ್ ಮೋಹಿಗಳ್ ಪರಾಧೀನತೆಯಿಂ   ೬೦ (ಇದು ಪಾರವಶ್ಯಂ)

ವ : ಇನ್ನಾ ಮಾನಾಖ್ಯ ವಿಪ್ರಲಂಭಂ

ಸೂತ್ರಂ ೩೬

ಸ್ಫುರದೀರ್ಷ್ಯಾಪ್ರಣಯಮೆನು
ತ್ತೆರೞ್ತೆಱಂ ಮಾನಮಲ್ಲಿ ತತ್ಪ್ರಣಯಾಖ್ಯಂ
ಪುರುಷನೊಳು ಸ್ತ್ರೀಯೊಳಮಿ
ರ್ವರೊಳಕ್ಕುಂ ಸ್ತ್ರೀಯರಲ್ಲದಿರಲೀರ್ಷ್ಯೆ ವಲಂ

ಲಕ್ಷ್ಯಂ

ಮುಳಿಸೆಂಬುದು ನೇಹದ ಮುಂ
ಬೆಳಸು ನೃಪಾ ಪೆಣ್ಣ ಜವ್ವನಂ ಸುರಧನುವೆಂ
ಬಳ ನುಡಿಯೊಡನೈದಲರ್ಗಣೆ
ಗಳಾಗಳೇಂ ನೆಲಸಿದುದೊ ಮಹೀಶನ ಮನದೊಳ್          ೬೧ (ಇದು ಪುರುಷಪ್ರಣಯಮಾನಂ)

ಬಿಡದಿಂತೇಂ ಕಾರಣಂ ಕೆತ್ತಿದಪುವೆನಗೆ ಪೇೞಕ್ಕ ಮೆಯ್ದೋಱಲಿಂದಿ
ನ್ನೆಡಗಣ್ಣುಂ ತೋಳುಮೆನ್ನೀ ತೊಡೆಯುಮಿನಿಯನಾದೇಶಮಂ ಮಾೞ್ಪುವಿನ್ನೀ
ಗಡಮೆನ್ನೊಳ್ ಬೇಟಮಿನ್ನುಂ ಗಡ ಪರಿಪರಿದೀೞ್ದಪ್ಪಿ ಕೊಳ್ವಾಟಮಿನ್ನುಂ
ಗಡ ಕೂಟಂ ಸಾಲ್ಗುಮೆಂದುಣ್ಮಿದ ಮನದಳಲಿಂ ಕಾಂತೆ ವಿಭ್ರಾಂತೆಯಾದಳ್ ೬೨ (ಇದು ಸದತ್ರೀ ಪ್ರಣಯಮಾನಂ)

ತಿಳಿಪುವ ದೂತಿ ಗಡಿನ್ನರಿ
ದೆಳೆಯಳ್ ತಳಿರ್ವಾಸಿನೊಳ್ ಪ್ರಿಯಂ ಪೂವಸೆಯೊಳ್
ಬಲೆದ ವಿರಹಾಗ್ನಿಯಿಂದಿರೆ
ಮುಳಿದಾರ್ ಬರ್ದುಕಲ್ಕೆ ಬಲ್ಲರತನುವ ನಾಡೊಳ್       ೬೩ (ಇದು ಉಭಯಪ್ರಣಯಮಾನಂ)

ಇನ್ನೆವರಂ ಸಖೀ ರಮಣನೆನ್ನವನಾಗಿರುತಿರ್ಪನಿಂದು ತಾ
ನೆನ್ನವನೆಂಬೆ ನುಣ್ಣೊಸಲೊಳೆಂದಿದಲಕ್ತಕಲಾಂಛನಂ ರತಾಂ
ಕಂ ನಿಮಿರ್ದಂಗದೊಳ್ ಮೆಱೆಯೆ ನೋಡುತೆ ಕಾಯ್ದು ನೂಂಕಿದೆಂ
ಮನ್ನಿಸದೆನ್ನ ಜೀವಮನೆ ನೂಂಕುವವೋಲ್ ಪ್ರಿಯನಂ ಕೃತಘ್ನೆಯಾಂ        ೬೪ (ಇದು ಈರ್ಷ್ಯಾಮಾನಂ)

ವ : ಇನ್ನಾ ಪ್ರವಾಸಾಖ್ಯ ವಿಪ್ರಲಂಬಂ

ಸೂತ್ರಂ ೩೭

ಇದು ಕಾರ್ಯಶಾಪಸಂಭ್ರಮ
ದೊದವಿಂ ಪ್ರಾವಾಸಮಾಯ್ತು ಮೂದೆಱನವ ಱೊಳ್
ಮೊದಲೆರಡನ್ವರ್ಥಂಗಳ್
ಪದೆಪಿನ ಭಾವಾದಿಯಿಂದೆ ಸಂಭ್ರಮಮಕ್ಕುಂ

ವ : ಅಲ್ಲಿ ಕಾರ್ಯಕ್ಕೆ

ಇನಿಯನಗಲ್ದು ಪೋಗಿ ಪರದೇಶದೊಳಿರ್ದಪನಾನುಮಿಲ್ಲಿ ಮಾ
ವಿನ ತಳಿರ್ವಾಸಿನೊಳ್ ಪೊರಳುತಿರ್ದಪೆನಾಗಳುಮಂತೆ ನೀನುಮೆ
ನ್ನನೆ ನಡೆನೋಡುತುಂ ನಭದೊಳಿರ್ದಪೆಯಪ್ಪುದಱಿಂದೆ ನಿನ್ನ ಬಾ
ನನುವಿಪೆನೆನ್ನ ಮೆಯ್ ಬಡವೋ ನಲ್ಲನ ಮೆಯ್ ಬಡವೋ ನಿಶಾಕರಾ        ೬೫

ವ :ಮತ್ತಂ

ಎಳಮಿಂಚಿಲ್ಲಕ್ಕುಮಾಖಂಡಲ ಜನಿತ ಧನುರ್ದಮಿಲ್ಲಕ್ಕುಮಭ್ರಾ
ವಳಿಯಿಲ್ಲಕ್ಕುಂ ಕದಂಬಾನಿಲನೆಳಸುವೊಡಿಲ್ಲಕ್ಕು ಮುದ್ಯನ್ಮಯೂರೀ
ಕುಳಲೀಲಾ ತಾಂಡವಾಡಂಬರ ವಿಲಸನಮಿಲ್ಲಕ್ಕು ಮಂತಾಮಹೀ ಮಂ
ಡಳದತ್ತಲ್ ನಲ್ಲನಂತಲ್ಲದೊಡೆ ತಡೆದದೇಕಿರ್ಪನಿಂದಲ್ತೆ ಬರ್ಪಂ  ೬೬ (ಇವೆರಡುಂ ಕಾರ್ಯಪ್ರವಾಸ ವಿಪ್ರಲಂಭಂ)

ಪೞುಗಳಿದೞ್ತಿಯಿಂದೆ ಸುರತಾಮೃತಮಂ ಸವಿವುತ್ತೆ ತಳ್ತು ತ
ಣ್ಪುೞಿಲೊಳಶೋಕೆಯೊಳ್ದಳಿರ್ಗಳೊಟ್ಟಲೊಳೆನ್ನೊಡನಿರ್ದ ನಲ್ಲನಂ
ಘೞಲನೆ ಕಂಡ ಪಾಪಿ ಋಷಿಶಾಪಮೆ ತಾಂ ಪಾರದೇಶದತ್ತ ಕೊಂ
ಡೆೞೆದುದು ಕಾಣ್ಬುದಪ್ಪುವುದು ಕೂಡುವುದಿನ್ನೆನಗೆಂದು ಸಾರ್ಗುಮೋ       ೬೭ (ಇದು ಶಾಪವಿಪ್ರಲಂಭಂ)

ವ : ಮೇಘಸಂದೇಶದೊಳಿದುಂಟು

ಸೀತೆ ಮಣಿಮುದ್ರೆಯಂ ಕಂ
ಡೇತಱದಿಂದಿರ್ದಳಂತೆ ಚೂಡಾಮಣಿಯಂ
ಸೀತಾಪತಿ ಕಂಡು ಮನೋ
ಜಾತಾಗ್ನಿಯಿನೆಯ್ದೆ ಬೆಂದು ಮೞುಗುತ್ತಿರ್ದಂ  ೬೮

ಪರನೃಪನೆನ್ನ ಮಿತ್ರಪುರಮಂ ತವೆ ಮುತ್ತಿದನಂದು ಕೇಳ್ದು ಚಿ
ಚ್ಚರಮಿದೆ ಬಂದೆನಿತ್ತಲವನತ್ತ ಮದೀಯ ಪುರಪ್ರಭಾಗಮಂ
ಭರದೆ ತಱುಂಬಿದಂ ಗಡವನಂ ತಗುಳ್ದಟ್ಟುವೆನಾತ್ಮಕಾಂತೆ ಮೆ
ಯ್ಗರೆವಳೊ ಎನ್ನ ಜಾನದೊಳೆ ಸಾವಳೊ ನೋವಳೊ ಏನನೆಂಬಳೋ          ೬೯ (ಇದು ಸಂಭ್ರಮವಿಪ್ರಲಂಭಂ)

ವ : ಅಂತು ವಿಪ್ರಲಂಭಮೇೞುತೆಱಂ ಕರುಣಾತ್ಮಕ ವಿಪ್ರಲಂಭಮಂ ಕೆಲಂಬರ್ ಕಡೆಯ ವಸ್ಥೆಯೊಳೇಕರೂಪಮೆಂದೊಲ್ಲರ್ ಕೆಲರ್ ಕರುಣರಸಮೆಂದೊಲ್ಲರ್, ಕೆಲರಿಂ ತೊಲ್ವರದರ್ಕೆ

ಸೂತ್ರ ೩೮

ಪರಮಪ್ರಿಯರೆತ್ತಾನುಂ
ಪರಲೋಕಪ್ರಾಪ್ತರಾದೊಡವರ ಪರೋಕ್ಷಾಂ
ತರದೊಳ್ ಮರುಗುವ ಮರುಕಂ
ಕರುಣಾತ್ಮಕ ವಿಪ್ರಲಂಭಮೆನೆ ಪೆಸರ್ವಡೆಗುಂ

ಲಕ್ಷ್ಯಂ

ಇವನಿಂತೀಕೆಗೆ ಗಂಡನೆಂದೊಡೆನಗೀಗಳ್ ರಾಜ್ಯಮಾದಂತೆ ತೋ
ಱುವುದೆತ್ತಾನುಮಗಲ್ದು ಪೋದೊಡವನಿನ್ನುಂ ಬರ್ಕುಮಾನೊರ್ಮೆ ಕೂ
ಡುವೆನೆಂಬಾಸೆಯೊಳಂತು ಮಾಱುವೆನದಿನ್ನಾವಾಸೆಯಿಂದೀಗಳಾ
ಱುವೆನಾರಂ ಬರಪಾರ್ವೆನೆಂತು ಕೞಿವೆಂ ಪೊೞ್ತಂ ವಿಲೋಲೇಕ್ಷಣೇ  ೭೦ (ಇದು ಕರುಣವಿಪ್ರಲಂಭಂ)

ವ: ಇನ್ನವಱವಸ್ಥೆಗಳಂ ಪೇೞ್ವೆಂ

ಸೂತ್ರಂ ೩೯

ನಯನರತಿ ಚಿಂತೆ ಸಂಕ
ಲ್ಪಯುತಂ ಜಾಗರತೆ ಕಾರ್ಶ್ಯಮರತಿಯಮಾನಂ
ಪ್ರಿಯೆಯ ವಿಮೋಹಂ ಮೂರ್ಛಾ
ಶ್ರಯಂ ಮರಣಮಿಂತವಸ್ಥೆ ದಶವಿಧಮಕ್ಕುಂ

ಸೂತ್ರಂ ೪೦

ಚಕ್ಷುಪ್ರೀತಿಯದಿನಿಯನ
ನೀಕ್ಷಿಪುದುಱೆ ನೆನೆವುದದೆ ಮನಸ್ಸಂಗಂ ಲೋ
ಲಾಕ್ಷಿಮನದಲ್ಲಿ ಸಂಕ
ಲ್ಷಕ್ಷೇಪದೆ ನೆರೆವುದದುವೆ ಸಂಕಲ್ಪಾಖ್ಯಂ

ಲಕ್ಷ್ಯಂ

ಕಡೆಗಣ್ಣಿಂ ಕಡೆಗೋಡಿವೋಗೆ ಪಿರಿದುಂ ಚೆಲ್ಲಂ ಕುಚದ್ವಂದ್ವದಿ
ಟ್ಟೆಡೆಯಿಂ ಸ್ವೇದಜಲಂ ತುಳುಂಕೆ ಜಘನಾಂತರ್ದೇಶದಿಂದಾವಗಂ
ಬಿಡದುಣ್ಮುತ್ತಿರೆ ಮನ್ಮಥದ್ರವಮನಂಗಾವೇಶದಿಂ ಕಾಲ್ ತಡಂ
ಬಡೆ ಬಂದಾಟಿಸಿ ನೋಡಿದಳ್ ಪದೆಪಿನಿಂ ಶ್ರೀವಿಕ್ರಮಾರ್ತಂಡನಂ     ೭೧ (ಇದು ಚಕ್ಷುಃಪ್ರೀತಿ)

ನೆನೆವಳೆ ಬೇಱದೊಂದನೆಡೆಗೊಂಡುದು ಮುನ್ನಮೆ ನಿನ್ನ ಪಂಬಲಾ
ಮನಮನದಂತೆ ನೋಡುವಳೆ ಚಿತ್ರಿಸೆ ಬಂದುದು ನಿನ್ನರೂಪು ಕಾ
ಮಿನಿಯೆರಡಚ್ಚಿಯೊಳ್ ನೆಲನುಮಾಗಸಮುಂ ದೆಸೆಯಂ ನಿನತ್ತು ರೂ
ಪನೆ ತಲೆದೊಪ್ಪಿತೋಱುವುದು ನೀರೆಗೆ ನಿನ್ನಯ ಮಾಯೆಯೇಂ ನೃಪಾ       ೭೨ (ಇದು ಮನಸ್ಸಂಗಂ)

ಹೃದಯೊದೊಳಪ್ಪಿ ತನ್ನ ಮನದೊಳ್ ಮಧುರಾಧರ ಮೂಡಿ ಸಾರ್ದ್ರ ಚಿ
ತ್ತದೊಳೆರ್ದೆಗೊಳ್ವ ಚುಂಬನಮನಾಗಿಸಿ ಬೇಟದಳುರ್ಕೆಯಿಂದೆ ಚೇ
ತದೊಳೆ ಲತಾಂಗಿ ನಿನ್ನನೊಡಗೂಡಿ ಸುಖಾಮೃತ ವೀಂಟಿದಪ್ಪಳಂ
ತೊದವಿದಭಾವಿತಾತ್ಮೆ ನೆಱೆ ನೋವನದೆಲ್ಲಿಯುಮೇಕೆ ತಾಳ್ದಿದಳ್           ೭೩

ವ : ಮತ್ತಂ

ಮೃಗಮದಗಂಧಿ ಸೆಜ್ಜೆವನೆಯಂಚೆಯ ತುಪ್ಪುೞತಳ್ಪದೊಳ್ ಮನಂ
ಬುಗೆ ಪಟದಲ್ಲಿ ನಿನ್ನೆಸೆವ ರೂಪನೆ ಚಿತ್ರಿಸಿ ನೋಡಿನೋಡಿ ಕಯ್
ಮಿಗೆ ಕಡುವೇಟದೞ್ತಿಯಿನದಂ ಸಲೆ ಚುಂಬಿಪ ಮುದ್ದುಗೆಯ್ವ ತಾಂ
ಬಿಗಿಬಿಗಿದಪ್ಪುವೞ್ಕಱೊಳೆ ನೂಂಕಿದಳಂದಿನ ರಾತ್ರಿಯಂ ನೃಪಾ     ೭೪ (ಇದು ಸಂಕಲ್ಪಂ)

ಸೂತ್ರಂ ೪೧

ನೆನೆದೊಱಗದದುವೆ ಜಾಗರ
ವಿನಿಯನನುಱೆ ಬಯಸಿ ಬಡಬಡಾಗಿರೆ ಕಾರ್ಶ್ಯಂ
ವನಿತೆ ವಿಷಯಕ್ಕೆ ಮೆಯ್ಗೊಡ
ದನುವ ರತಿಯೆ ಲಜ್ಜೆ ವಿರಹದಳೆದುದಮಾನಂ

ಲಕ್ಷ್ಯಂ

ಕನಸಿನೊಳೆನ್ನ ವಲ್ಲಭನನಿಂದೊಡಗೂಡಿದೆನೆಂದು ಪೇೞ್ವ ಕಾ
ಮಿನಿಯರುದಾತ್ತೆಯರ್ ಕೆಲರದೇಂ ಕೃತಪುಣ್ಯೆಯರಕ್ಕ ದುಃಖಭಾ
ಜನೆಗೆನಗೆನ್ನ ವಲ್ಲಭನಗಲ್ಕೆಯೊಳಾಗದು ನಿದ್ರೆಯೆಂದೊಡಾ
ಕನಸೆನಗೆಲ್ಲಿತೆಂತೆನಗೆ ವಲ್ಲಭನೊಳ್ ನೆರೆವಾಸೆಯೆಲ್ಲಿತೋ         ೭೫

ವ : ಮತ್ತಂ

ಪತಿಚಿಂತಾವಿದ್ಧೆ ನಿದ್ರಾವಿರಹಿತೆಯಿರುಳೆಯ್ತರ್ಪುದುಂ ಸುಪ್ತಪಾರಾ
ವತಮಂ ಬಂದೆತ್ತುವಳ್ ಹಂಸೆಗಳೆರಡೆ ವೆಯೊಂದಾಗಲೀಯಳ್ ನವಿಲ್ವಾ
ಣತಿಯಂ ಕಣ್ಮುಚ್ಚಲೀಯಳ್ ಸಲಪುವ ಗಿಳಿಯಂ ತೂಂಕಡಂ ಗಾಣಲೀಯಳ್
ಕತೆಯಂ ಪೇೞೆಂದವಳ್ ಸಾರಿಕೆ ಯುಮನಿನಿಸಂಗೆಯ್ದು ಕಣ್ಮುಚ್ಚಲೀಯಳ್೭೬ (ಇವೆರಡುಂ ಜಾಗರಂ)

ಲಕ್ಷ್ಯಂ

ನಡುನಡೆಪಿತ್ತು ತನ್ನ ನೆನೆ ಮೆಯ್ ಬಡವಾದುದು ಲೋಚನಾಂಶುಗಳ್
ಬಿಡೆ ತೊಡರ್ದಂತೆ ಗಂಡಯುಗಳಂ ಬಿಳಿದಾದುವು ತೋಳ್ಗಳೊಳ್ ವರಂ
ಬಡೆದವೋಲೆಯ್ದೆ ಸುಯ್ಸರಳವಾದುದು ಭಾವರಸಪ್ರವಾಹದೊ
ಳ್ಗಡಣಿಸಿದಂತೆ ಬಾಷ್ಪಜಲಸಂತತಿ ಕಾೞ್ಪುರಮಾದುದಾಕೆಯಾ      ೭೭

ವ : ಮತ್ತಂ

ಸುದತಿ ಲತಾಂಗವೇಕೆ ಬಡವಾದುದಿದೆಂದಪೆ ಮುನ್ನಮೈಕ್ಯಭಾ
ವದೊಳಣುಭೇದಮಿಲ್ಲೆನಿಸಿ ಮತ್ಪ್ರಿಯನಿರ್ದೊಡೆ ದೊಡ್ಡಿತಾಗಿ ತೋ
ರ್ಪುದು ಮೆನಗೀಗಳರ್ಧವೊಡವೋದುದು ನಲ್ಲನೊಳಿತ್ತಲರ್ದಮಿ
ರ್ದುದು ತನುವೊಂದನರ್ಧಿಸಿದೊಡೇಂ ಬಡವಾಗದೆ ದೊಡ್ಡಿತಕ್ಕುಮೇ         ೭೮ (ಇವೆರಡುಂ ಕಾರ್ಶ್ಯಂ)

ಗಿಳಿಗಿನ್ನುಂ ಕುಟುಕಿಕ್ಕೆನೆಂಬಳೆಲೆ ನೀನಾರೋಗಿಸೆಂದಂದು ಕೋ
ಕಿಳಮಿನ್ನುಂ ತಳಿರ್ಗಚ್ಚದೆಂಬಳೆಲೆಯಂ ಮೆಲ್ಲೆಂದೊಡೇೞ್ಮಿಜ್ಜನಂ
ಗೊಳಲೆಂದಂದೆಲರಿಂದೆ ಮೆಯ್ ನಡುಗಿತೆಂಬಳ್ ಚಂದನೋದ್ವರ್ತಮೀ
ಗಳದೇಕಿಲ್ಲೆನೆ ಪಾವು ಕಾವುದೆನೆ ಕೇಳ್ದಂಜಿರ್ದೆನೆ ಂಬಳ್ ಸಖೀ      ೭೯ (ಇದು ಆರತಿ)

ನೆರವಳ್ತಂಗಿಯನಟ್ಟೆ ತಾನೆ ಬರಲೊಲ್ಲಂ ಲಜ್ಜೆಯಿಂದೋಪನಂ
ಕರೆವೆಂ ವೈಶಿಕವೆಂದಪಂ ಸಖಿ ಶರಣ್ಬೊಕ್ಕೆಂ ಗಡಾ ನಲ್ಲನಂ
ಬರಿಸೆನ್ನಲ್ಲಿಗೆ ತೋಱ ಮಲ್ಲಿಗೆ ಎಲೇ ಬೆಳ್ದಿಂಗಳೇ ನಿನ್ನನಾ
ನೆರೆವೆಂ ಕೋಗಿಲೆ ನಿನ್ನ ಕಾಲ್ವಿಡಿದಪೆಂ ತೆಂಗಾಳಿ ತೊೞ್ತೂದಪೆಂ      ೮೦ (ಇದು ಲಜ್ಜಾತ್ಯಾಗಂ)

ಸೂತ್ರಂ ೪೨

ವಿರಹೋನ್ಮಾದದದೆ ಮೋಹಂ
ಬಿರಯಿಸೆ ಮೆಯ್ಮಱೆದುದದುವೆ ಮೂರ್ಛೆಯೆನಿಕ್ಕುಂ
ಮರಣೋದ್ಯೋಗಂ ಮರಣಂ
ಬರೆ ತನಗದು ಕಡೆಯವಸ್ಥೆ ಮರಣಮೆನಿಕ್ಕುಂ

ಲಕ್ಷ್ಯಂ

ನಿಜಕೇಳೀ ಗೃಹದೊಳ್ ಬೆಡಂಗೆಸೆವ ಭಿತ್ತವ್ರಾತದೊಳ್ ಚಿತ್ರಮಂ
ಗಜಕುಂಭಸ್ತನೆ ನೀನೆಗೆತ್ತು ದಿಟದಿಂ ಮುದ್ದಾಡಿ ಮಾತಾಡಿಸ
ಕ್ಕಜವೇನಿತ್ತಪರೆಂದು ತೊಟ್ಟಿೞೆತರುತ್ತುಂ ತಾಂ ಕಾಣದಂ
ಗಜರೂಪಂ ಪೊಱವೋಗದಂತೆ ಪಡಿಯಂ ಸಾರ್ಚೆಂಬಳೇಂ ಭ್ರಾಂತೆಯೋ        ೮೧

ವ : ಮತ್ತಂ

ತಳರದೆ ತನ್ನ ಕಣ್ಣ ಮೊದಲೊಳ್ ಸುೞಿವಾಕೆಯ ರೂಹುಗಂಡದ
ರ್ಕ್ಕೆಳಸಿದೊಡಾಕೆಗೆತ್ತು ರಸಚಿತ್ರದ ಪೆಂಡಿರನಾಕೆಗೆತ್ತು ಪು
ತ್ತಳಿಗಳನಾಕೆಗೆತ್ತೆಲಗೆ ಬಾರೆನುತಂ ನಳಿತೋಳನೆತ್ತಿ ಕೋ
ಮಳ ಕರಕಂಜದಿಂದೆೞವಿ ನೋಡಿದನಾ ರತಿರಾಗದೋಹಳಂ           ೮೨ ಇವೆರಡು ಮೋಹಂ (ಮೋಹೋನ್ಮಾದಂ)

ಅಲರ್ಗಣ್ಣಿಂ ಪೂವಿನಂಬಂ ಸಮೆದನೊ ಮದನಂ ಕೊಂಡುಮೇಣ್ ಪ್ರಾಣಮಂ ಕೋ
ಗಿಲೆಯೆಲ್ಲಂ ಕೂಡಿ ಕೈಕೊಂಡುವೊ ಕಳರವಮಂ ವಕ್ತ್ರಚಂದ್ರಾಂಶುವಂ ಪೆ
ಣ್ಗೊಲೆಗೆಯ್ದುಂ ಚಂದ್ರಮಂ ಕೊಡನೊ ಖಲನುಳಿದಿಂತೇಕೆ ಪೆಣ್ ನೋಡಳೋರಂ
ತೆಲಗೇ ಮಾತಾಡಳೇಕೆಮ್ಮಯ ಸಖಿಮುಖದಿಂ ಹಾಸಮಂ ಸೂಸಳೆಮ್ಮೊಳ್    ೮೩

ವ : ಮತ್ತಂ

ನಸುಬಿಸುಪೇಱೆ ಮೆಯ್ ಮಗುೞೆ ಕೆತ್ತುವ ತಾಣಮೆ ಕೆತ್ತೆ ಮಂದಮಾ
ದುಸಿರ್ಗಳೆ ನಾಸಿಕಾಮುಕುಳದಿಂದೆನಸುಂ ಪೊಱಪೊಣ್ಮೆ ತಳ್ತು ಸಂ
ಧಿಸಿದೆವೆ ಬಿರ್ಚೆ ಕಣ್ಮಲರ್ಗಳುಳ್ಳಲರುತ್ತಿರೆ ಜಾನಕೀ ಎನು
ತ್ತುಸಿರ್ದಿನಿಸಿರ್ದನಾ ರಘುಕುಲಾಂಬರಚಂಡಮರೀಚಿ ಮೂರ್ಛೆಯೊಲ್         ೮೪ (ಇವೆರಡುಂ ಮೂರ್ಛಾವಸ್ಥೆ)

ನಾರಿಯ ಕೊರಲ್ಗೆ ನೀಂ ಮಣಿ
ಹಾರಂಬೊಲ್ ಮೆಱೆವುತಿರ್ದೆ ನೀಂ ತೊಲಗಿರೆ ತ
ನ್ನಾರಿಯ ಕೊರಲ್ಗೆ ತಾಂ ಮಣಿ
ಹಾರಂಬೋಲ್ ನಿಂದುದಾಕೆಯಸು ವಸುಧೇಶಾ೮೫ (ಇದು ಮರಣಂ)

ವ : ಇದಂ ರಣರಣಕಮೆಂಬರರೆಬರ್

ಮೊಗಮಂ ಚುಂಬಿಸಿ ಮುದ್ದು ಗೆಯ್ದು ತೊಲಗಲ್ವೇಡೆಂದು ವಸ್ತ್ರಾಂಚಲಂ
ಬಿಗಿದಳ್ ಬಾಗಿಲೊಳಡ್ಡವಿೞ್ದು ಕರುಣಂ ಬರ್ಪಂತೆ ಸಾರ್ದಪ್ಪಿದಳ್
ಮೊಗಮಂ ನೋಡದೆ ಪೋಪೆ ಪಾಪಿಯೆನುತುಂ ಕಣ್ಣೀರ್ಗಳಂ ತುಂಬಿದಳ್
ಮೃಗಶಾಬೇಕ್ಷಣೆ ಮುನ್ನೆ ಬಿಟ್ಟಳಸುವಂ ಬಿಟ್ಟಳ್ ಬೞಿಕ್ಕೋಪನಂ           ೮೬ (ಇದು ರಣರಣಕಂ)

ಸೂತ್ರಂ ೪೩

ಇಂತಿದುವೆ ವಿಪ್ರಲಂಭಮ
ನಾಂತಿನಿಯರವಸ್ಥೆಗಳ್ ಮತಾಂತರದಿಂ ಮ
ತ್ತಂತೆ ಗುಣಕೀರ್ತನಂ ಸಲೆ
ಸಂತಾಪಂ ಗಮನಮೆಂದಿವನ್ವರ್ಥಂಗಳ್

ಲಕ್ಷ್ಯಂ

ಮದನನ ಕೈದುವೆಲ್ಲಿದನನಂಗನ ಕಯ್ಪಿಡಿಯೆಲ್ಲಿದಂ ವಿಳಾ
ಸದ ಮೊದಲೆಲ್ಲಿದಂ ಸೊಬಗಿನಾಗರನೆಲ್ಲಿದನೆಲ್ಲಿದಂ ವಿನೋ
ದದ ಕಣಿಯೆಲ್ಲಿದಂ ಚದುರಗೊಟ್ಟಿಗನೆಲ್ಲಿದನಿಚ್ಚೆಯಾಣ್ಮನೆ
ಲ್ಲಿದನೆರ್ದೆಗಾಣ್ಮನೆನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ       ೮೭ (ಇದು ಗುಣಕೀರ್ತನಂ)

ಪಾಸುವ ಪಲ್ಲವಾಸ್ತುರುಣಮೊಟ್ಟುವ ಬಾಲಮೃಣಾಳಸಂಕುಲಂ
ಸೂಸುವ ಚಂದ್ರಕಾಂತಜಲಮೊತ್ತುವ ಶೀತಳಿಕಾಕದಂಬಕಂ
ಬೀಸುವ ಪುಷ್ಪವೀಜನವುದಿರ್ಚುವ ಕಪ್ಪುರವಚ್ಚವಾಗಳುಂ
ಪೂಸುವ ಚಂದನಂ ಬಿಸುಪನಾರಿಸಲಾಱವು ಸತ್ಯಭಾಮೆಯಾ          ೮೮

ವ : ಮತ್ತಂ

ಚಿತ್ತಂಬೊಕ್ಕಿರ್ದೆಯೆಂತೈ ಹರಿ ಕುಳಿರ್ವ ಕರಸ್ಪರ್ಶದಿಂದಿಂದುತಾಪಂ
ಬೆತ್ತಂ ಮೆಯ್‌ಸೋಂಕೆ ಮಂದಾನಿಲನುರಿವನದರ್ಕಾಳಿಯರ್ ದೂರದಿಂ ಸೂ
ಸುತಿರ್ಪರ್ ತೋಯಮಂ ಜೀರ್ಕೊಳವಿಯೊಲೆ ಮನೋಜಾತನಾರ್ದಾರ್ದಿಸಲ್ಕಾ
ರ್ದೆತ್ತುಂಗೋಲಿಕ್ಕುವಂ ಬಣ್ಣಿಸುವೊಡಳವೆ ಸತ್ರಾಜಿತೀದೇಹದಾಹಂ           ೮೯ (ಇವೆರಡುಂ ಸಂತಾಪಂ)

ಕಡುಗೞ್ತಲೆಯೊಳ್ ಪ್ರಿಯನಿ
ರ್ದೆಡೆಗಾಗಿಯೆ ಪೋಗಲೆಂದು ಮನೆಯಂ ಪೋಱಮ
ಟ್ಟಡಿಯಿಡಲಣ್ಮದೆ ಮಱುಗುವ
ಮಡದಿಗೆ ಬಗೆ ತೀಱೆ ಮಿಂಚು ಮಿಂಚಿದುದಾಗಳ್           ೯೦

ವ : ಮತ್ತಂ

ಕಳವಳಿಸಿದಪಳ್ ಬಾಯೞಿ
ದಳಱಿದಪಳ್ ಬೀದಿಬೀದಿಯೊಳೆ ನಿನ್ನಂ ಕೋ
ಮಳೆ ಪಿಡಿಯಲೆಂದು ಪಾರ್ದ
ವ್ವಳಿಸಿದಪಳ್ ನೀನೆಯವಳ್ಗೆ ಕರುಣಿಸಲಾಗಾ   ೯೧ (ಇವೆರಡುಂ ಗಮನಂ)

ಪರಿಣಾಮವನಂತಂ ವ್ಯವ
ಹರಿಸುವುದವಱವಱವಸ್ಥೆ ನೆಗೞ್ದುವನಂತಂ
ಪರಿಭಾವಿಸುವೊಡೆ ರಸವಿ
ಸ್ತರಮಂ ವಿವರಿಸುವೆನೆಂಬನಾವನುಮೊಳನೇ     ೯೨

ವ : ಈಯವಸ್ಥೆಗಳ್ ಸ್ತ್ರೀಯರೊಳೆ ಅಪ್ಪುವೆನವೇಡ. ಉಚಿತ ವಿಧಿಯಿಂ ಪುರುಷರೊಳ ಮಪ್ಪುವು. ವಾಗ್ವೃತ್ತಿ ಶೃಂಗಾರಮೆಂದೊಡನುಭಾವಂ ವಸ್ತ್ರಭೂಷಣ ಗಂಧಮಾಲ್ಯಾನು ಲೇಪನರೂಪನೇಪಥ್ಯ ಶೃಂಗಾರಮೆಂದೊಡುದ್ದೀಪನ ವಿಭಾವಂ ಕ್ರಿಯಾತ್ಮಕ ಶೃಂಗಾರ ಮೆಂದೊಡದುವುಮನುಭಾವಂ, ಸಂಕೀರ್ಣ ಶೃಂಗಾರಮೆಂದೊಡದು ವಿಭಾವಾನು ಭಾವಂಗಳ ನೆರವಿ, ಶೃಂಗಾರವೆಂದೊಡದು ರಸಸಂಕರಂ, ವಿಭಾವಾನುಭಾವಂಗಳನೆ ಈ ಪೆಸಱೆಂದೊಡದುವುಂ ತಾವನಂತಕಂಗಳಿನಿತಱಿಂ ನೆಱೆಯವು. ಅಲ್ಲಿ ವಿಭಾವಾದಿ ಗಳಾ ರಸಪೋಷಕಂಗಳಲ್ಲದೆ ತಾವೆ ರಸಂಗಳಲ್ತು. ಮಿಕ್ಕ ರಸಂಗಳ್ ವಾಗ್ರೂಪಕ್ರಿಯಾತ್ಮಕ ಮೆಂದು ಮೂಱುಂದೆಱನೆಂದೊಡವು ವಿಭಾವಾನು ಭಾವಂಗಳಲ್ಲದೆ ಪಿಂತೆ ಪೇೞ್ದೂ ಚಾರ್ಯರಾರುಮಿಂತೆ ನಿರೂಪಿಸಿದುದಿಲ್ಲಮದಱಿಂ ವಿದ್ವಜ್ಜನಂಗಳೀ ಮಾೞ್ಕೆಯಿಂ ಪೇೞೆಂದು ಬೆಸಸಲೊಡಮಿಂತೊಡರ್ಚಿದೆಂ

ಇದು ಶತೇಂದ್ರ ಮುನೀಂದ್ರ ವಂದಿತಾರ್ಹತ್ಪರಮೇಶ್ವರ ಪಾದಾರವಿಂದ
ಮಂದಮಕರಂದಾನಂದಿತ ಭೃಂಗಾಯಮಾನ ಕವಿಸಾಳ್ವ ವಿರಚಿತಮಪ್ಪ
ರಸರತ್ನಾಕರದೊಳ್ ಶೃಂಗಾರ ಪ್ರಪಂಚಂ

ಪ್ರಥಮ ಪ್ರಕರಣಂ