ಸಂಧಿ ೫೮

ವನಜನೇತ್ರನೊಳಾ ವಸಂತದ | ವನಜಲಕ್ರೀಡೆಯನು ಗೈದಾ |
ಜಿನನು ಮೂಜಗಬೆದರಲೂದಿನ ಪಾಂಚಜನ್ಯವನು || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ದ್ವಾರಾವತಿಯೊಳುತ್ತಮ |
ರಾಳಿ ಸಗ್ಗದ ವಸ್ತ್ರಭೂಷಣ ಮುಖ್ಯವಸ್ತುಗಳ ||
ಮೇಳದಿಂ ಸುರಪತಿಯ ಬೆಸದಿ ವಿ | ಶಾಲ ಬೋಧನರಿಷ್ಟನೇಮಿ ಕೃ |
ಪಾಲು ಪಸದನವಾಂತಿರುತಿರಲೊಂದು ದಿವಸದಲಿ || ೧ ||

ಸುರಕುಮಾರಕನಿಕರ ಕರ ಚಾ | ಮರನಿಚಯ ಶೋಭೆಯಲಿ ಹರಿವಿ |
ಷ್ಟರದಲೊಡ್ಡೋಲಗದಿ ನೇಮಿಕುಮಾರನೊಪ್ಪಿರಲು ||
ಹರಿ ಮುಸಲ ಕೌಂತೇಯರವನೀ | ಶ್ವರರು ಮೊದಲಾದವರು ಗಗನೇ |
ಚರರು ಸಹ ವರ ಜಿನಸಭೆಯಲೋಲಗಿಸುತಿರಲೊಡನೆ || ೨ ||

ಅಸಮ ಸಾಹಸಗುಣ ಕಥನದಿಂ | ವಸುಧೆಯಾಣ್ಮರು ಕೆಲವರು ಮತ್ತೀ |
ಕ್ಷಿಸಲು ಭೀಮಂಗೆಣೆಯ ಸತ್ವಾಧಿಕರುಮಿಲ್ಲೆನಲು ||
ನಸುನಗುತ ಕೆಲರಲ್ಲಿ ಬಲನತಿ | ವಿಷಮ ಬಲನೆನೆ ಕೇಳ್ದು ನೀವೇ |
ನುಸುರಿದಿರಿ ಹರಿಯಧಿಕನೆಂದರು ಕೆಲರದೆಂತೆನಲು || ೩ ||

ಶಿಶುತನದಿ ಪೂತಿನಿಯ ಮುಖ್ಯರ | ಬಸಗೆಡಿಸಿ ತಾನನಿಲಜನು ಬಲನುಂ |
ಸಸಿನಿರಿರೆ ಜನನಿರಲು ಸತ್ವದೊಳಧಿಕರಾರೆನಲು || ೪ ||

ಅವರ ನುಡಿಯನು ಕೇಳ್ದು ಸತ್ವದ | ಹವಣನರಿಯದೆ ಗರ್ವದಲಿ ಮಾ |
ಧವನು ನೇಮಿಕುಮಾರನೀವಲೆ ಸತ್ವಯುಕ್ತರಲೆ ||
ಇವರು ಕಾಣದೆ ಹೇಳುವರೆ ನೋ | ಡುವೆನು ನಿಮ್ಮಯ ಸತ್ವವನು ಮಾ |
ಡುವವದೀರ್ವರು ಮಲ್ಲಯುದ್ಧವನೆಂದು ಮುರಿದೆದ್ದ || ೫ ||

ಎನಲು ನೇಮಿಸ್ವಾಮಿ ತಾನೊ | ಯ್ಯನೆ ದರಸ್ಮಿತ ವದನನಾಗಳು |
ವನಜನೇತ್ರನೆ ಮಲ್ಲಯುದ್ಧದ ಗಸಣಿ ತಾನೇಕೆ ||
ನಿನಗಧಿಕ ಸತ್ವವು ವಿಚಾರಿಸಿ | ಜನಿಸಿದೊಡೆ ನೀನೆಮ್ಮ ಪಾದುಕ |
ವನು ನೆಗವುದೆಂದೆಡದ ಪದದುಂಗುಟದಿನೊತ್ತಿದನು || ೬ ||

ಸಿಂಗವಣೆಯಿಂದಿಳಿಯದೆಡಗಾ | ಲುಂಗುಟದಿ ಜಿನನೊತ್ತಿದೊಡೆ ಮಣಿ |
ತುಂಗ ಪಾದುಕವನು ದಿಗಿಭಕರ | ಸಮಕರಂಗಳಲಿ ||
ಅಂಗಸತ್ವದ ಭರದಿ ನೆಗಪಲು | ಪಿಂಗಲಿರಲದು ಭೂಮಿಯನು ಕಲಿ |
ಶಾಂರ್ಙ್ಗಮಂಡಿಯ ಹೂಡಿ ಝಾಡಿಸಿ ತೂಗು ಬಳಲಿದನು || ೭ ||

ಕರಿಗೆ ಹೆಬ್ಬುಲಿ ನುರರಧಟಾ | ಕರಿಸಹಸ್ರದ ಸತ್ವ ಸಿಂಗಕೆ |
ಹರಿಸಹಸ್ರದ ತ್ರಾಣವಷ್ಟಪದಕ್ಕೆ ಮತ್ತಂತೆ ||
ಶರಭ ಸಾಸಿರ ಬಲ ಬಲಂಗದ | ನೆರಡುಮಡಿ ತಾನರ್ಧಚಕ್ರಿಗೆ |
ಪರಿಕಿಪೊಡೆ ಷಟ್ಖಂಡ ಚಕ್ರಧರಂಗೆ ತದ್ವಿಗುಣ || ೮ ||

ತರದಿ ನೋಡೆ ಸಹಸ್ರ ಚಕ್ರೇ | ಶ್ವರರ ಬಲವಿಂದ್ರಂಗೆ ಮತ್ತಾ |
ಪರಿಯಲಿಂದ್ರಸಹಸ್ರಬಲವಾ ತೀರ್ಥಕರ ಶಿಶುಗೆ ||
ಅರರೆ ನೋಳ್ವರನಂತವೀರ್ಯಂ | ಗೊರೆಯದಾರೈ ಸತ್ವದಲಿ ಗಿರಿ |
ವರನ ಗರ್ವವದಿಂತುಟಾದುದು ಭೂಪ ಕೇಳೆಂದ || ೯ ||

ಬಾಗಿದನು ಮಣಿಮಕುಟವನು ಸಿ | ಗ್ಗಾಗಿ ಹರಿಯಿರೆ ನಗಧರನೆ ತಲೆ |
ವಾಗದಿರು ನಿನ್ನನುಜನಿಂತುಟನಂತ ವೀರ್ಯನೆನೆ ||
ಭೋಗಿಪತಿ ಸುರಪತಿ ನತಕ್ರಮ | ನಾಗಿ ವರ್ತಿಪ ನೇಮಿಗಗ್ರಜ |
ನಾಗಿ ಬದಕುವ ನಿನಗೆ ಸರಿಯಾರೆಂದನಾ ಬಲನು || ೧೦ ||

ಎನಲು ನೀಲಾಂಬರನ ನುಡಿಗಾ | ವವಜನಾಭನು ಮನದೊಳು ಜಳ |
ಕ್ಕನೆ ವಿಷಾದಮನುಳಿದು ಸುಖದಿಂ ರಾಜ್ಯಲಕ್ಷ್ಮಿಯನು ||
ಅನುದಿನದಿ ನೆರೆದಿರಲು ಬಂದುದು | ಜನಮನೋತ್ಸವಕಾರಿ ನೆನೆಗೋ |
ಲನ ಸಗರ್ವ ವಿಲಾಸವೆನೆ ಮಧುಮಾಸದೊಲವಿನಲಿ || ೧೧ ||

ಎಸೆವ ವಾಮನಗಜದ ತನಿವಾ | ಸಿಸುವ ಮದಗಂಧದಿ ಪೊರೆದು ಕೆಂ |
ಪೆಸೆವ ಮಲಯಾಚಳನ ಚಂದನನಂದನದೊಳಾಡಿ ||
ಹಸಿದ ಹಾವುಗಳೀಂಟೆ ತಾಂ ಕಡು | ನಸಿದು ಸುರತಾಲಯದ ಖಚರಿಯ |
ರುಸುರಿನಿಂ ಮೈವೆರ್ಚಿ ಚೈತ್ರಾನಿಳವು ಪಸರಿಸಿತು || ೧೨ ||

ಜಾತಿಯನು ಸಿರಿಬಿಟ್ಟು ನಿಲುಕಂ | ಜಾತದೊಳು ರಾಯಂಚೆಗಳು ತಡ |
ವೀತುದಿನ್ನೈತನ್ನಿರವಿತಳೆಯುತ್ತರಾಯಣವ ||
ಚೂತ ಗುಡಿಗಟ್ಟಾಡು ಕೋಗಿಲೆ | ಮಾತನೆಂದು ವಸಂತರಾಯನ |
ದೂತನೆನಲಳಿರವದಿ ಸಾರಿತು ಹರಿದು ತೆಂಗಾಳಿ || ೧೩ ||

ಏರಿದುದು ತಂಬೆಲರು ಹಿವಪೊರ | ಮಾರಿದುದು ಕಾಸಾರದೊಳು ಕಾ |
ಲೂರಿದವು ರಾಯಂಚೆ ಪದುಮಿನಿ ನಗೆಮೊಗದ ಮಧುವ ||
ತೂರಿದವು ಪರಪುಟ್ಟಗಳು ಸರ | ದೋರಿದವು ದರ್ಪಕಗೆ ದರ್ಪವು |
ಪೇರಿದುದು ಜಾರಿದುದು ಜಾತಿಯ ಪೂತ ಸೌಭಾಗ್ಯ || ೧೪ ||

ಮಿಸುಪ ನುತ ವನಮಾಳಿನಂದನ | ಕುಸುಮಶರ ಲಕ್ಷ್ಮಿಬಲೋನ್ನತಿ |
ಬಿಸಜನೇತ್ರ ವಿಭಾಸಿಯಳಿಕುಳ ನೀಲ ತನುಕಾಂತಿ ||
ಒಸೆಯದುದ್ಧತ ಜಾತಿ ಮಧುರಿಪು | ಸಸುಕ ಜನ ಸಂತೋಷ ಚಕ್ರವಿ |
ಲಸಿತವೆನೆ ಬಂದುದು ವಸಂತವು ಕೃಷ್ಣನಂದದಲಿ || ೧೫ ||

ತೀವಿ ಕನ್ನಡವಕ್ಕಿಯೋದುವ | ಗಾವರದಿ ಪರಪುಟ್ಟ ಪಾರಕ |
ರಾವದಿಂ ಮುಯ್ಯೀರಡಿಯ ಸಂಗೀತ ಬಂಧುರದಿ ||
ಆ ವಸಂತನು ತಂಬೆಲರು ನಿರೆ | ಕಾವನೊಡ್ಡೋಲಗವನಿರ್ದಾ |
ಚಾವಡಿಗಳೆನೆ ಬಂದ ಮಾಮರನಂದು ಶೋಭಿಪವು || ೧೬ ||

ಗಿಳಿಗೆ ತನಿವಣ್ಣುಗಳ ಕೋಗಿಲೆ | ಗಳಿಗೆ ಸದಿವೆಳೆದಳಿರನಳಿ ಸಂ |
ಕುಳಕ ಕಮ್ಮಲರ್ಗಳನು ಮುಗುಳಂಬಂಗೆ ನಣೆಗಣೆಯ ||
ಇಳೆಗಭೀಷ್ಟದ ರತಿಸತಿಗೆ ಚೆಂ | ದಳಿರನವಸಂತವನು ಸಲೆಕೊಡು |
ವಳವಿನಿಂ ಮಾದಾನಿಯೆನಿಸಿತು ಬಂದು ಮಾಕಂದ || ೧೭ ||

ಬಂದವಾ ಮಾಮರನೆನುತ ನಲ | ವಿಂದ ರಾಗಿಸೆ ತಸುಕೆ ಅಸುಕೆಯ |
ದೊಂದುರಾಗಕೆ ಪುಳಕವಾಂತುದು ಸುರಯಿಸುರಯಿಗಳು ||
ಇಂದು ಪುಳಕವನಾಂತವೆಂದೊಲ | ವಿಂದ ವಿಚಕಿಲವಲರ್ದವೆನಲಾ |
ನಂದ ಮಂದಿರವಾಯ್ತು ನಂದನ ಕುಸುಮ ಸಮಯದಲಿ || ೧೮ ||

ಸ್ಮರನ ತೇಜಃಪುಂಜವೆನೆ ಬಿ | ತ್ತರದ ಕಾಮಾಗ್ನಿಯನೆ ರವಿಯೆನೆ |
ವರ ರತಿಯು ಕೇಸಡಿಯ ಪೊಳಪೆನಲಸುಕೆವನದೆಸೆಯೆ ||
ಸ್ಮರ ಜಯಾಂಗನೆ ಯೆಳೆನಗೆಯವೊಲು | ಸ್ಮರನರಸಿಯಲರ್ಗಣ ರುಚಿಯೊಲು |
ಸ್ಮರೆ ಯಶೋಲತೆಯಂತೆ ಮಲ್ಲಿಗೆ ಪೂತು ಚೆಲುವಾಯ್ತು || ೧೯ ||

ಒಲಿದು ಗಾಢಾಲಿಂಗನದಿ ತನು | ಪುಳಕವಿತ್ತುದು ಚೂತರಮಣಗೆ |
ತಳೆದ ಮೈಗಂಪಿತ್ತಳಪ್ಪಿದ ಮಂದಮಾರುತಗೆ ||
ನಲಿದು ಬಂದಾಟಕ್ಕೆ ಮಧಪಂ | ಗಳು ಬರುತ ಚುಂಬಿಸಲು ಮೊಗವಿ |
ತ್ತಳು ವಿಕಚಮಲ್ಲೀವನಿತೆ ಸಲೆ ಜಾರೆಯಂದದಲಿ || ೨೦ ||

ಕೆಳೆವರನ ಸೆಳೆಗೊಂಬಿನೆಲೆವಸೆ | ಗಳಲಿ ಖಗದಂಪತಿಗಳಡಿಗಡಿ |
ಗೆಳಸಿ ಸುರತಂಗೈವ ವರಕೂಜಿತಕೆ ನಸುನಗುತ ||
ಎಳೆಯ ನಂದನ ಸಿರಿಯ ಬಾಯ್ದೆರೆ | ಎಳವನಾಂತರೆ ಬಿರಿದ ತನಿ ವ |
ಣ್ಗಳ ಭರದಿ ತೆಲೆವಾಗಿ ರಸದಾಳಿಂಬವಿಂಬಾಯ್ತು || ೨೧ ||

ಬಿರವಿಗಿನ್ನುಳಿವಿಲ್ಲ ಬಲುಮೊಲೆ | ಗಿರಿಗಳಿಡುಕುರೊಳಡಗಿ ಬದುಕಿರೊ |
ಗಿರಿಜೆಯನು ಬಿಗಿದಪ್ಪದಿರ್ದೊಡೆ ಹರನ ಹಣೆಗಣ್ಣ ||
ಉರಿಯನಾಗಳೆ ನಂದೆವೊಯ್ವನು | ನರನ ಹವಣೇನೆಂದು ಕಾವನ |
ಬಿರಿದ ಡಂಗುರ ಸಾರಿತೆನೆ ಚೀರಿದವು ಪಿಕನಿಕರ || ೨೨ ||

ಹೊಸಬಸಂತನೆ ಪಡೆವಳನು ಸಖ | ಶಶಿ ಮನೋರಥ ಬೇರೆ ಕೈ ಕೊಂ |
ಡ ಸರ್ವ ಸಾನೆಮದಿಂದೊಲೆವ ಚೂತವೆ ಜಗವ್ರಾತ ||
ಮಿಸುಪ ಶುಕಪಿಕ ಮೂಲಬಲ ಕಂ | ಪೆಸವ ಗಾಳಿಯ ತೇಜಿಯಲರ್ವುಡಿ |
ಮುಸುಕೆ ಕಾಮನಧಾಳಿ ಬಂದುದು ಬಿರಯಿಗಳ ಮೇಲೆ || ೨೩ ||

ಗಿಳಿಗೆ ಭೋಜನ ಶಾಲೆ ಕೋಗಿಲೆ | ಗಳಿಗೆ ಜೇವಣ ಶಾಲೆ ಮಧುಪಾ |
ವಳಿಗೆ ಸಮ್ಮಧುಪಾನ ಗೋಷ್ಠೀ ಶಾಲೆ ಮನಸಿಜಗೆ |
ತೊಳಗುವಾಯುಧ ಶಾಲೆ ಮಂದಾ | ನಿಳಗೆ ನಾಟಕ ಶಾಲೆಯೆನೆ ಕಂ |
ಗೊಳಿಸಿದದು ಮಧುಮಾಸದೋಲಗ ಶಾಲೆಯೆನೆ ಬನವು || ೨೪ ||

ಮಲ್ಲಿಗೆಯ ಬಲುಬಿಲ್ಲಿಗಾ ಕಂ | ಕೆಲ್ಲಿಯಲರ್ಗೊಂಡೆಯವು ತಳಿರ್ಗಳ |
ಝಲ್ಲಿ ಸೊಗಯಿಪ ತುಂಬಿದಿರು ಮಾಂದಳಿರದೊಣೆದುಂಬಿ ||
ಮಲ್ಲಿಗೆಯ ನನೆಯಂಬುಮಾವಿನ | ಬಲ್ಲರಳ ಮಂತ್ರಾಸ್ತ್ರವೆಸೆವಳ |
ರ್ವಿಲ್ಲನೆಚ್ಚು ಜಗತ್ರಯದ ಜಯವಾಂತು ಕಲಿಯಾದ || ೨೫ ||

ಇಂತು ಬಂದು ಬಸಂತದೊಳು ಚೆಲು | ವಾಂತುದಾ ನಂದನವೆನಿಪ್ಪುದ |
ಕಂತು ಪಿತ ವನಪಾಲಕನ ಬಿನ್ನಹದಿ ನೆರೆಯರಿದು ||
ಸಂತಸಂದಳೆದೈದಿ ತನ್ನಯ | ಕಾಂತೆಯರಿಗೆಲ್ಲರಿಗೆ ಪೇಳ್ದು ವ |
ಸಂತ ಕೇಳಿಗೆ ನಂದನಕ್ಕೆ ಪೊರಮಡುವ ಸಮಯದಲಿ || ೨೬ ||

ಸುರಕುಮಾರರ ಗೋಷ್ಠಿಯಲಿ ಕೇ | ಸರಿ ಸುಪೀಠದೊಳಿರ್ದ ನೇಮೀ |
ಶ್ವರನ ಸಭೆಗೈತಂದು ವಂದಿಸಿ ಎಲೆ ಜಗದ್ಗುರುವೆ ||
ಬರಲೆ ಬೇಹುದು ಬನಕೆ ಚೈತ್ರದ | ಸಿರಿಯನೀಕ್ಷಿಪೊಡೆಂದು ವಿನಯವ |
ನೊರೆದು ಕುಟಿಲವಿದೂರನನು ಕರೆಕೊಂಡನೊಲವಿಂದ || ೨೭ ||

ಬಲನು ಮೊದಲಾದವನಿಪತಿ ಸಂ | ಕುಳವು ತನ್ನಯ ಪೆಂಡವಾಸವು |
ಬಳೆದರಾಗದಿ ಭದ್ರಗಜ ಪಿಡಿಗಳಲಿ ನಡೆಗೊಳಲು ||
ನಳನಳಿಸುವಾ ಸೋಳಸಾಸಿರ | ಲಲನೆಯರ ಲಕ್ಷ್ಮೀವರನ ನಿ |
ರ್ಮಲ ಜಿನನ ಪಯಣವನು ಬಣ್ಣಿಸ ಬಲ್ಲಕವಿಯಾರೊ || ೨೮ ||

ಲಲನೆಯರ ನಸುನಗೆಯ ಸಾಲ್ದೆರೆ | ಜಲಧಿಯಿಲ್ಲದೆ ದೆಸೆಗೆ ಹರಿದವು |
ಕೊಳಗಳಿಲ್ಲದೆ ದಿಟ್ಟೆನೆಯ್ದಿಲ ಬಳಗ ಪಸರಿಸಿತು ||
ಬಲದ ಮುಗಿಲಿಲ್ಲದೆ ವಿಯನ್ಮಂ | ಡಲದೊಳಗೆ ಸುರಧನುಗಳೆತ್ತಲು |
ಬಳಸಿದವು ಬಹುರತ್ನ ರುಚಿಯಿಂದವರ ಪಯಣದಲಿ || ೨೯ ||

ಅರೆಗೆರೆಯ ಜಲಕಣವ ಚಂದನ | ತರು ಸುಗಂಧವ ಮಳಲವೊಲು ಕೆರೆ |
ಗೊರೆದ ಮುಕ್ತಾಕ್ಷತೆಯ ಕಮ್ಮಲರುಗಳ ಸಂಪಗೆಯ ||
ಬಿರಿ ಮುಗುಳ ದೀಪಗಳ ಶೋಭೆಯ | ದೊರಕಿದಂದದಿ ಕೊಂಡು ಬಂದೊಂ |
ದೆರಲು ಪೂಜಿಸುವಂತೆ ಬಂದಭವನನು ಬಳಸಿದುದು || ೩೦ ||

ಅರಸಿಯರು ಹಲಧರನು ತ್ರಿಜಗ | ದ್ಗುರುವು ಸಹ ಬಂದುದಕೆ ನನಗತಿ |
ಹರುಷವಾಯ್ತೆಂದಳಿ ರವದಿ ಕೊಂಡಾಡಿ ಪರಿಮಲದ ||
ಬರವಿನುಡುಗೊರೆಗೊಟ್ಟು ಲಕ್ಷ್ಮೀ | ವರನನಪ್ಪಿದವೊಲಲೆಯೇ ತಂ |
ಬೆರಲು ವಾಹನ ವಿಳಿದು ವಿಭುಗಳು ಪೊಕ್ಕರಾ ಬನವ || ೩೧ ||

ತನುಲತೆಯ ತೊಡೆವಾಳೆಗಳ ಮುಖ | ವನಜಗಳ ಮೆಲ್ಲಡಿದಳಿರ ಕಂ |
ಮನೆ ಸುಳಿದ ಸುಯ್ಯೆಲರ ಪೊಕ್ಕಳುಗೊಳನ ಕಟಿಪುಳಿಲ ||
ಸ್ತನ ಫಲಂಗಳ ನುಡಿಗಿಳಿಯ ಮೆಲು | ದನಿ ಪಿಕದ ಸೊಬಗಿನಲಿ ಜಂಗಮ |
ವನವೆನಲು ಪೊಕ್ಕರು ವನವನಚ್ಚುತನ ರಾಣಿಯರು || ೩೨ ||

ಸುತ್ತುಗೇದಗೆ ಬಿತ್ತಿಯೊಳು ಮಿಗೆ | ಕತ್ತಲಿಪ ಮಾಧವಿಯ ಬಳಸಿನೊ |
ಳೊತ್ತರಿಪ ಪೂಗಳನು ಹೇರಿದ ಮಾಮರನ ನೆಳಲು ||
ಒತ್ತಿನೊಳು ರಾಗಿಸಿದಶೋಕೆಯ | ಬಿತ್ತರದ ಚಾವಡಿಯೊಳಗೆ ಪುರು |
ಷೋತ್ತಮನೆ ಕೈಗೊಡಲು ನೇಮಿಕುಮಾರನೈತಂದ || ೩೩ ||

ಚಂದ್ರಕಾಂತದ ಜಗತಿಯಲಿ ತನಿ | ಚಂದನ ಪೊಸದಳಿರ ಹಸೆಯಲಿ |
ಚಂದದರಳಿನ ಗದ್ದುಗೆಯೊಳಚ್ಚುತನು ಹಲಧರನು ||
ಇಂದ್ರವಂದ್ಯನ ನಿಲಿಸಿ ತಾವೊಲ | ವಿಂದ ಜಗತಿಯ ಕೆಳಗೆ ಪಾಸಿದ |
ಚೆಂದಳಿರ ಪಸೆಯೊಳಗೆ ಕುಳ್ಳಿರ್ದರು ಮನೋತ್ಸವದಿ || ೩೪ ||

ಕೆಲರು ದ್ರಾಕ್ಷಾಮಾಡದೊಳು ಕೆಲ | ಕೆಲರು ಮಲ್ಲಿಗೆಲತೆಯ ಮನೆಯೊಳು |
ಕೆಲರು ಹಬ್ಬಿದ ಮಾಧವೀ ಮಂಟಪದೊಳಳ್ತಿಯಲಿ ||
ಕೆಲರು ಕೆಂದಳಿರ್ವಂದರೊಳು ಕೆಲ | ಕೆಲರಶೋಕೆಯ ಪಟ್ಟ ಶಾಲೆಯೊ |
ಳೊಲಿದು ವಿಶ್ರಮಿಸಿದರು ಚಂದ್ರಾನನೆಯರರ್ತಿಯಲಿ || ೩೫ ||

ವನಿತೆಯರು ಪುಷ್ಪಾಪಚಯಕಾ | ವನದೊಳಗೆ ಹಸರಿಸಿದರೊಡನಿಂ |
ದನಿಗೆ ಕೋಗಿಲನುಡಿಗೆ ಗಿಳಿಯರಸಂಚೆ ಮೆಲುನಡಿಗೆ ||
ಘನ ಕುಚೆಕ್ಕೆಣಿವಕ್ಕಿ ಕಬರಿಗೆ | ಮನವೆಳಸಿ ಶಿಖಿಜಾಳಿ ಭ್ರಮೆಯಿಂ |
ದನುನಯದಿ ಸಾರ್ತರಲು ಸಾರ್ದರು ಕುಸುಮತನುಲತೆಯ || ೩೬ ||

ಅಳಿಕುಳವು ನಿರಿಗುರುಳು ತೋಳ್ಗಳು | ಮಿಳಿರ್ವ ಸೆಳೆಗೊಂಬುಗಳು ಕೋಮಲ |
ಕಲಿಕೆಗಳು ಬೆರಳುಗಳು ಮೊಲೆಗಳು ಪೂದೊಡಂ ಬೆಡಗು ||
ತಳವು ಕೆಂದಳೆರೊಂದನೋರ್ವ | ಗ್ಗಳಿಸುತಿರೆ ಸೊಗಯಿಪಲತಾಂಗಿಯ |
ರೆಳಸಿ ಸಾರ್ದರಶೋಕಲತೆಯನು ಕೊಯ್ದರರಳುಗಳ || ೩೭ ||

ಉಂಗುಟದಿ ನೆರೆನಿಂದು ತಿವಳಿಯ | ಡಂಗೆ ನುಣ್ದೊಡೆ ಸಂಚಳಿಸೆ ಹೊಸ |
ಹೊಂಗಲಸ ಮೊಲೆ ಬಿಗಿದು ಬಿಂಕಿಸೆ ಜಡಿಯೆ ಧಮ್ಮಿಲ್ಲ ||
ಕಂಗಳೆಳೆ ಮಿಂಗಳವೊಲಡರೆ ಲ | ತಾಂಗಿ ನಳಿತೋಳೆತ್ತಿ ನವಕುಸು |
ಮಂಗಳನು ನೆರೆನಿಲುಕಿ ಕೊಯ್ದಳು ಬಳ್ಳಿಸಂಪಗೆಯ || ೩೮ ||

ಇರಬಹುದೆ ನಮ್ಮೊಡನೆಯೆಲೆ ಹಾ | ದರಿಯೆ ಸಖಿ ಹಾದಿರಿಯೆ ಕಾಮಗೆ |
ಸರಳಸರಳಹೆ ತುಂಬಿ ಘನ ಸಂಪಗೆಯೆ ಸಂಪಗೆಯೆ ||
ಸ್ಮರ ಶಶೋಕೆಯಶೋಕೆ ಮಲ್ಲಿಗೆ | ಇರಿಯ ಬಹೆ ನಮ್ಮಲ್ಲಿಗೆನುತಾ |
ಹರಿಯರಸಿಯರು ಪೂಗೊಯ್ದರಳ್ತಿಯಲಿ || ೩೯ ||

ಲಲನೆ ಮಲ್ಲಿಗೆಯೀಕ್ಷಿಸಲು ಕ | ಣ್ದೊಳೆಯೆ ನೈದಿಲದೆಂದು ಕೊಯ್ಯದೆ |
ತಳವನೆತ್ತಲಶೋಕೆಯರಳೆಂದೊಡನೆ ಕೈದುಡುಕೆ ||
ಎಲೆಮರೆಯೊಳಳಿ ಮೊರೆಯೆ ಸ್ಮರನ | ಚ್ಚಲರ್ಗಣೆಯಮೊರಹೆಂದು ಮಿಗೆ ಕು |
ಪ್ಪಳಿಸಿಯೋರ್ವಳು ಮುಗ್ಧೆ ನಗಿಸಿದಳಾ ವಿದಗ್ಧೆಯರ || ೪೦ ||

ಮತ್ತಮೋರ್ವಳು ಬಳ್ಳಿ ಮಾವಿನ | ಪೆತ್ತಲರ ಕೊಯ್ದೆದೆಯೊಳೆಲೆ ಹೊದ |
ರೊತ್ತಿನಲಿ ಗಿಳಿ ಮೂಗು ತೋರಲು ಕಳಿಕೆಗೆತ್ತಳಿಸಿ ||
ವೃತ್ತ ಕುಚೆ ಕೈನೀಡಿ ಬೆದರಿದೊ | ಡಿತ್ತ ಕೋಡಗವೇಡಿಸಲು ನಡು |
ಗುತ್ತ ಕಂಗೆಟ್ಟೋಡಿ ನಗಿಸಿದಳಾ ಮೃಗಾಕ್ಷಿಯರ || ೪೧ ||

ತುಂಬಿಗಿಲ್ಲರಳೊಂದು ತಳಿರ ತೊ | ಡಂಬೆ ಕೋಗಿಲೆಗೊಂದುವಿಲ್ಲ ಮು |
ಸುಂಬನೂರಲು ಗಿಳಿಗೆ ಕಾಯ್ಪಣ್ಣೊಂದುವಿಲ್ಲವೆನೆ ||
ಮಿಂಬೊಣರುಗಣ್ಣವಲೆಯರು ಕೊ | ಯ್ದಿಂಬರಿದು ಸವೆದವರ ಪಚ್ಚದ |
ಳುಂಬದಲಿ ಕೈಗೈದು ಬಂದರು ನಿಜಪತಿಯ ಬಳಿಗೆ || ೪೨ ||

ಆ ಸಮಯದಲಿ ಕಮ್ಮ ಕಮ್ಮನೆ | ಬೀಸುತಿರೆ ತಂಗಾಳಿ ಪನ್ನೀ |
ರ್ಸೂಸುತಿರೆ ಧಾರಾಗೃಹದಿ ಗಂಧರ್ವ ಕಿನ್ನರರ ||
ವಾಸ ವೀಣಾನಾದವನು ಕಲ | ಭಾಷಿಗಳ ಗಾನವನು ಲೇಸಿನ |
ರಾಸಿ ಬರೆ ಕಿವಿಗೊಟ್ಟು ಮನ್ನಿಸುತಿರ್ದರಾ ನೃಪರು || ೪೩ ||

ಇರಲು ತರುಣಿಯರಿತ್ತ ಕುಸುಮಾ | ಭರಣಗಳನಾ ನೇಮಿ ಭೂಮೀ |
ಶ್ವರಗೆ ಬಲನಾರಾಯಣರು ಪಸದನಗೊಳಿಸಿ ಮುದದಿ ||
ಅರಲ ಪಚ್ಚಲ ತಾವು ತಳೆದತಿ | ಹರುಷದಿಂದಲ್ಲಿರದೆ ನಡೆದರು |
ಸರಸನಿಧಿ ಸರಿದೊರೆಯೆನಿಪ ಕೇಳೀ ಸರೋವರಕೆ || ೪೪ ||

ಕಂಗಳೆಳೆ ಮಿಂಚುಗಳು ಕುರುಳ್ಗಳು | ಭೃಂಗಗಳು ತಾವರೆಗಳವರ ಮು |
ಖಂಗಳೆಳೆನಗೆ ತರತರದಿ ಬಹಕಿರುದೆರೆಯ ಬಳಗ ||
ಅಂಗರುಚಿ ಜಳ ಕಟಿಯ ಪುಳಿಲು | ತ್ತುಂಗ ಕುಚವಂಬುಜದ ಮೊಗ್ಗೆ ಬೆ |
ಡಂಗನಾಳ್ದಿರೆ ಪೊಕ್ಕುದಾ ಪೆಣ್ಗೊಳನು ಪೂಗೊಳನ || ೪೫ ||

ಸಂದ ಕುಂಕುಮದಿಂದ ಕತ್ತುರಿ | ಯಿಂದ ಚಂದನದಿಂದ ನಾನಾ |
ಚಂದವಾಗಿ ಕಟಿಪ್ರಮಾಣ ಹಿಮಾಂಬು ಪೂರಿತವ ||
ಸೌಂದರಿಯರೊಡನಂಬುಜೋದರ | ನೊಂದಿ ಪೊಗೆಕೆಳೆಯಮರರೊಡನಿಂ |
ತೊಂದು ಕಡೆಯಲಿ ನೇಮಿಪೊಕ್ಕನು ಬಲನನೊಡಗೊಂಡು || ೪೬ ||

ಅರಳುಗಣ್ಣಿಂ ನೋಡಿ ತನ್ನೊಳು | ಹರುಷದಿಂ ನೀರೇರಿ ನಾನಾ |
ಪರಿಯ ಕೊಳರ್ವಕ್ಕಿಗಳದನಿವಾದ್ಯದಲಿದಿರುಗೊಂಡ ||
ನೆರದಳಸ್ವಲ ಮಂತ್ರದಿಂ ಕ | ಮ್ಮರಳುಗಳ ತೆರೆಗೈಯ ಬಗಸೆಯ |
ಸುರಿದು ಕೆರೆ ಜಿನಗೆರಗಿತರಿವವರೆರಗರೇ ಗುಣಿಗೆ || ೪೭ ||

ಗಿಳಿಯ ಪಾರಾಪರದ ಚಕ್ರದ | ಕಳಮರಾಳದ ನವಿಲ ಮದಕೋ |
ಕಿಳದ ಕೊಂಚೆಯ ಜೊನ್ನವಕ್ಕಿಯ ಪರಿಜನೊಳಕೊಂಡ ||
ಪಲವು ರನ್ನದ ವಾರಿಯಂತ್ರಂ | ಗಳನು ಪಡಿದೋರೋರ್ವರೊಡನೋ |
ಕುಳಿಯನಾಡಿದರಾಡೆ ಬಗೆರತಿ ರಸದಲೋಕುಳಿಯ || ೪೮ ||

ಹರಿಯುರದಲಾ ಜಲಕಣಂಗಳು | ನೆರೆದು ನೆನೆಯಿಸಿ ತಾರಲಡಿದಂ |
ಬರವ ಸಿರಿಯನು ಬಳಿಕ ಚಂದನಕರ್ದಮವ ಮೊಗೆದು ||
ತರುಣಿ ರುಗುಮಿಣಿ ಚೆಲ್ಲೆ ಹರಿಹಲ | ಧರನ ವಾಲಿರೆ ಕುಂಕುಮಾಂಬುವ |
ಸುರಿಯೆ ರೋಹಣಗಿರಿಯವೊಲು ಚೆಲುವಾಗಿ ರಂಜಿಸಿದ || ೪೯ ||

ಸುರನದಿಯಲಭ್ರಮುವನಭ್ರಮು | ವರಸ ಕರಪುಷ್ಕರದಿಮಿನಿಸುವ |
ತೆರದಿ ಪರಿಮಲ ಜಲವ ಕರದಿಂ ಮೊಗೆದು ರುಗುಮಿಣಿಗೆ ||
ಸುರಿಯೆ ಪುರುಡಿಸಿ ಸತ್ಯಭಾಮೆಯು | ಹರಿದು ಬಂದಂಡೆಯ ಜಲವನು |
ಪ್ಪರಿಸಿ ಹೊಯ್ದೊಡೆ ನಸುನಗುತಸಿರಿಯರಸ ಮೈಗೊಟ್ಟ || ೫೦ ||

ತರುಣಿಯರನಂಗಜನು ಕತ್ತಲೆ | ಸರಳಿನಿಂದುರಿಬಾಣದಿಂ ಹಿಮ |
ಕರವಿಶಿಖದಿಂದೆಚ್ಚನೆನೆ ಕತ್ತುರಿಯ ಚಂದನದ ||
ಪರಿಮಳಪ ಕುಂಕುಮದ ರಸವು | ಬ್ಬರಿಸಿ ಜೀರ್ಕೊಳವೆಗಳಿನುರೆ ಭೋ |
ರ್ಗರೆದುನೆತ್ತಲು ಪೆಂಡವಾಸದ ತಂಡಗಳ ಕರದಿ || ೫೧ ||

ಕತ್ತುರಿಯ ಕುಂಕುಮದ ಚಂದನ | ದೊತ್ತರಿಪ ರಸದಿಂದ ತೊಯಿದಾ |
ವೃತ್ತಕುಚೆಯರ ನೀಲದಿಂ ಮಾಣಿಕದ ಮೌಕ್ತಿಕದಿಂ ||
ಬಿತ್ತರಿಸಿ ಸವೆದಿರಿಸಿ ದಾಮಣಿ | ಪುತ್ತಳಿಗಳೆನೆ ಕೊಳನೊಳಗೆ ತೊಳ |
ಗುತ್ತಲಿರ್ದರು ಮೂರು ಸಂಜೆಯ ಸಿರಿಗಳಂದದಲಿ || ೫೨ ||

ಸಾಸಿರಮರ ಕುಮಾರಕರು ಸುವಿ | ಳಾಸಿನಿಯರಿರವಾಂತು ನೇಮಿಜಿ |
ನೇಶನೊಡನತಿ ಬಿನದ ದೋಕುಳಿಯಾಡಿ ಕಲ್ಪಿಸಿದ ||
ಸಾಸಿರೆಸಳಬುಜದೊಳಿರಿಸೆ ಮಿಗೆ | ಸೂಸಿ ಚಂದನರಸವ ಚಂದ್ರ ಜಿ |
ನೇಶನಂತಿರೆ ಗೆಯ್ದು ಬಲನೊಲವಿಂದ ವಂದಿಸಿದ || ೫೩ ||

ಸಕಲಕಾಂತಾ ಜನದ ದೃಷ್ಟಿಯು | ಭಕುತಿಯಿಂದೆರಗಿದವು ಜಿನರೂ |
ಪಕದೊಳಂಗನೆ ಮಂಗರಾಜನ ಸಹಿತ ರೇವತಿಯು ||
ವಿಕಚ ಕುಲವಯ ನೇತ್ರೆ ಮೃಗನಾ | ಭಿಕೆಯ ರಸವನು ಪೊಯ್ಯೆ ಕಮಳಾಂ |
ಬಕನವೊಲು ಬಲಭದ್ರನುದ್ಧತ ರುದ್ರನೊಪ್ಪಿದನು || ೫೪ ||

ಬೆಳಪ ಬೆಳತಿಗೆಗಂಳವು ಬೆಳು | ವೆಳಗನಧರಕೆ ಕೊಟ್ವವರಕೆಂ |
ಬೆಳಗನಾಗಳು ಮಾರುಗೊಂಡವೊಲೆಸೆದವಬಲೆಯರ ||
ಕಳಸಿ ಕುಚ ಚೂಚುಕವು ಸುರ್ಕಿದೊ | ಡಳಿವಿ ನೀಲಮ ಕೇಶಗಳು ಸು |
ರ್ಕುಳಿದ ವೆಂದಡೆ ಪುರುಡಗರುಡಿಗಳಲ್ತೆ ವನಿತೆಯರು || ೫೫ ||

ಭೋಗಿಪತಿ ನಾಗಿಣಿಯರೊಡನಾ | ನಾಗ ಲೋಕದಿನೆದ್ದು ಬಂದವೊ |
ಲಾಗಳಾ ಕೊಳನೊಳಗೆ ಪೆಂಡಿರ ತಂಡದೊಡನೊಲಿದು ||
ಭೋಗಿ ಶಯನನು ಬಂದು ಪೆರಗಿಂ | ಬಾಗಿ ನಿಂದಾ ತೊಯಿದ ವಸನವ |
ನೀಗಿಯನಿಬರು ತಳೆದರಾ ವಸ್ತ್ರಾಭರಣ ತತಿಯ || ೫೬ ||

ವಿನುತ ನೇಮಿಕುಮಾರ ನಿರದೊ | ಯ್ಯನೆ ಕೊಳನ ಪೊರಮಟ್ಟು ಬರೆ ಕಾ |
ಮಿನಿಯರಾ ಸೋಪಾನ ರತ್ನಸ್ಥಳಿಯೊಳಡಿಯಿಡುತ ||
ಜಿನನ ಚೆಲುವನು ನೋಡುತಿರೆ ಬಂ | ದನುಪಮನು ತಾನುಟ್ಟುದನು ಕೃ |
ಷ್ಣನ ಸವುಜ್ಞೆಗೆ ಸತ್ಯಭಾಮೆಯ ಕೈಗೆ ನೀಡಿದನು || ೫೭ ||

ನೀಡಿದೊಡೆ ಕೈದೆಗೆದಿದೆನ್ನಾ | ದಾಡಿಯವಳೇ ನಾನು ಕೃಷ್ಣನ |
ರೂಢಿಸಿದ ಹಿರಿಯರಿಸಿಯಲ್ಲೆನೆ ನಿನ್ನ ಮೈಲಿಗೆಯ ||
ಪಾಡಳಿದು ಪಿಡಿವೆನೆ ಎನಲು ಕೆ | ಟ್ಟಾಡಬಹುದೇ ಅಕ್ಕ ಎಂದಾ |
ಪ್ರೌಢ ರುಗುಮಿಣಿ ಈಸಿಕೊಂಡಿಂತೆಂದಳಾ ಸತಿಗೆ || ೫೮ ||

ಜಿನನ ಜನ್ಮಸ್ನಾನ ಪರಿಪಾ | ವನ ಜಲವನಿಂದ್ರಾದ್ಯರಾಂಪರು |
ಮನವೊಸೆದು ಮಸ್ತಕದೊಳೆನೆ ಹುಲುದೊತ್ತಿರಾವೆನಲು ||
ಅನಿಮಿಷಸ್ತ್ರೀ ನಿಕರವಾತನ | ಜನನಿಗಿಕ್ಕೆಯ ತೊತ್ತಿರಾಗಲೆ |
ಜಿನಗೆ ಬೆಸಕೆಯಿವಮರರನು ನೋಡೆಂದಳಾ ಕಾಂತೆ || ೫೯ ||

ರುಗುಮಿಣಿಯ ನುಡಿಗೇಳಿ ಮನದೊಳು | ಚಿಗುರೆ ಮುನಿಸೆಲೆ ಭೀಷ್ಮಜೆಯೆ ಕೇ |
ಲು ಗಡ ಪೂತಿನಿ ಮುಖ್ಯರನು ಬಾಲ್ಯದಲಿ ಬಡಿದಂತೆ ||
ನಗವನೆತ್ತಿದವೊಲು ಹರಿಯು ಪ | ನ್ನಗನ ಪಕ್ಕೆಯನೇರಿ ಶಾರ್ಙ್ಗವ |
ಬಿಗಿದು ಶಂಖವನೂದಿದವೊಲತಿ ಬಲರದಾರೆನಲು || ೬೦ |

ಅರೆ ಮರುಳಲಾ ಅಕ್ಕ ಕೇಳೀ | ನರರ ಸತ್ವವಿದೇನು ಈ ಭೂ |
ಧರನು ಗರ್ಭಕ್ಕೊಗೆಯದತ್ತರುದಿಗಂಳೆಂಬುದು ||
ಸುರಪತಿಯ ಸಿಂಹಾಸನವ ತಾ | ವರೆಯೆಲೆಯ ನೀರಂತೆ ನಡುಗಿಸಿ |
ದುರು ಮಹಿಮನಲ್ಲವೆ ವಿಚಾರಿಸು ಕೇಳು ಹೇಳುವನು || ೬೧ ||

ಕಂಡರಿಯಿದೇ ದಿವದ ಪೆಂಡಿರು | ಗಂಡರೆಲ್ಲರು ಮಿಕ್ಕ ದೇವರ |
ತಂಡತಂಡವು ನಮ್ಮ ಕಣ್ಬೊಲನಾಗಿ ಗಗನದಲಿ ||
ಮಂಡಳಿಸಿ ಬಂದೀ ಕುಮಾರನ | ಕೊಂಡು ಶಚಿಕೊಡಲೆತ್ತಿ ಕೊಂಡಾ |
ಖಂಡಲನು ಸುರಗಜದ ಮೇಲಾ ಮೇರುಗೈದುವದ || ೬೨ ||

ಮೇರುವಿಂ ಕ್ಷೀರಾಬ್ದಿಗನಿಮಿಷ | ರೋರಣಿಸಿ ಇಕ್ಕಡೆಗೆ ಪೋಗಿ ಸು |
ಧಾರಸವ ಮೊಗೆದೆಂಟು ಯೋಜನದೊಡಲು ಯೋಜನದ ||
ಚಾರು ಮುಖವಿಸ್ತಾರವುಳ್ಳ ಘ | ಟೋರು ಮಾಲೆಯ ತರಲು ಶಕ್ರನು |
ದಾರನಾಗಳು ಕೋಟಿ ಹಸ್ತವನಾಂತು ಧರಿಸಿದನು || ೬೩ ||

ಎಡೆವಿಡದೆ ಮಜ್ಜನವ ಮಾಡಿಸೆ | ನಡುಗಿದನೆ ಶಿಶು ಸೀಂತೊಡಮರರ |
ಗಡನವೆಲರಿಂದೆಲ್ಲ ಭೂರವದಾದು ದೆಂಬುದನು ||
ನುಡಿಯರೆನಮಗಮರಿಯರೇ ಅಂ | ತೊಡೆಯನಾತನೆ ಮೂಜಗಕೆ ನಮ್ಮ |
ಗೊಡೆಯನಚ್ಚುತನಾ ಜಿನನೆ ಗುರುವೆಂದಳಾವನಿತೆ || ೬೪ ||

ಎಂದ ರುಗುಮಿಣಿಯುಕ್ತಿಗಾ ಪೂ | ರ್ಣೇಂದುಮುಖಿಯುತ್ತರವ ಕೊಡದಿರೆ |
ತಂದ ದಿವ್ಯಾಂಬರ ವಿಭೂಷಣದಿಂ ಬಲಚ್ಚುತರು ||
ಅಂದು ನೇಮಿಕುಮಾರನನು ಮಿಗೆ | ಚಂದದಲಿ ಸಿಂಗರಿಸಿ ಬನದಿಂ |
ಬಂದು ತಂತಮ್ಮಾಲಯಂಗಳ ಪೊಕ್ಕರನಿತರೊಳು || ೬೫ ||

ನಿನಗೆನಗೆ ತನಗಿನ್ನು ಹೋಹುದೆ | ಮನದ ಶಲ್ಯವು ಮರಲಿದಲ್ಲದೆ |
ಜಿನನೆ ಭಾವೆಯ ಗರ್ವವಚನದಿನಿನಿಸು ಮುನಿಸಾಂತು ||
ವನದಿ ಬರುತಚ್ಚುತನ ಕೈದುವ | ಮನೆಗೆ ಬಂದಿಭವಿಳಿದೊಳಗೆ ಪೊ |
ಕ್ಕನು ನಡುಗುತಿರಲೆಂಟು ಸಾಸಿರ ಯಕ್ಷದೇವತೆಯು || ೬೬ ||

ಏರುತಹಿಶಯ್ಯೆಯನು ಶಾರ್ಙ್ಗವ | ನೇರಿಸಿದನೆಡಗೈಯೊಳಾಗಳೆ |
ಚೀರಿಸಿದನಾ ಪಾಂಚಜನ್ಯವ ಮೂಗಿನಲಿ ನೇಮಿ ||
ತೋರಿದವು ತಾರೆಗಳು ದಿಗಿಭವು | ಹಾರಿಬಿದ್ದವು ನಡುಗುತಿರ್ದುದು |
ಮೂರು ಲೋಕವು ತದ್‌ಧ್ವನಿಗೆ ಭೂಪಾಲ ಕೇಳೆಂದ || ೬೭ ||

ಬಲನು ದುರ್ಬಲನಾಗಿ ಮಿಗೆ ನೇ | ಗಿಲನು ಹಿಡಿದು ಸತ್ಯಭಾಮೆಯು |
ಕಳವಳಿಸಿ ಬಿಗಿದಪ್ಪಿದಳಿವೇನೆಂದು ಚಿಂತೆಯಲಿ ||
ಮುಳುಗಿದನು ಕಂಸಾರಿ ಅಲ್ಲಿಂ | ತಳರ್ದು ಬಂದು ನಿಜಾಲಯದೊಳಾ |
ಗಳೆ ಜಗತ್ರಯ ಸತ್ವನಮರರೊಳಿರ್ದನೋಲಗವ || ೬೮ ||

ಹರಿದು ಬಂದಾ ಸಮಯದೊಳಗಾ | ಉರಗ ಶಯ್ಯಾದಿಗಳ ಕಾದಿಹ |
ವರ ಭಯಂಕರ ದೇವತೆಗಳೆಲೆ ದೇವಬಿನ್ನಹವು ||
ಭರದಿ ಸಾಲೆಯ ಪೊಕ್ಕು ನಮ್ಮನು | ಸರಕು ಮಾಡದೆ ಶಂಖ ಶಾರ್ಙ್ಗವ |
ನುರಗ ಶಯ್ಯೆಯನೇರಿಯೇರಿಸಿ ಪೂರಿಸಿದನರುಹ || ೬೯ ||

ಎಂದೊಡತಿ ವಿಸ್ಮಯವನಾಂತು ಮು | ಕುಂದನಾ ಬಲಭದ್ರನನು ಕರೆ |
ದೊಂದಿಯೆಲ್ಲರ ತೆಗೆದು ಕೇಳಗ್ರಜನೆ ನಮ್ಮನುಜ ||
ಇಂದ್ರವಂದ್ಯನನಂತ ವೀರ್ಯ ವ | ಸುಂಧರೆಗೆ ಕ್ರಮದಿಂದರಸು ಬೇ |
ಕೆಂದು ಮದ್ರಾಜ್ಯವನು ಸೆಲೆದಡೆ ಕಾವನಾರೆಂದ || ೭೦ ||

ಎಲೆ ಮುರಾಂತಕ ಅರಿಯದವರಂ | ತೊಳಲಲೇತಕೆ ಕಲ್ಪತರುವಿರೆ |
ಕೊಳತ ಕಡ್ಡಿಗೆ ಬಯಸುವರೆ ವರಮುಕ್ತಿ ಸಾಮ್ರಾಜ್ಯ ||
ಲಲನೆಯೊಕ್ಕತನುವುಳಿದು ನ | ಮ್ಮಿಳಿಗೆ ಜಾರೆಗೆ ಮೋಹಿಸುವ ಕೆ |
ಟ್ಟಳಿ ಮನವು ತೀರ್ಥಂಕರರಿಗಿರದೆಂದನಾ ಬಲನು || ೭೧ ||

ನೀವು ನುಡಿದುದೆ ಸತ್ಯವಾದೊಡಿ | ಳಾ ವಿನುತರು ಚಕ್ರವರ್ತಿ ಮ |
ಹಾ ವಿಭೂತಿಯನಂಗಜಾತತ್ತ್ವವನು ತೀರ್ಥಕರ ||
ಶ್ರೀವಿಶಿಷ್ಟತೆಯನು ಪುರಾತನ | ದೇವರಾಂತವರೊಳರೆನಲು ಬಲ |
ದೇವನರಿದು ಜನಾರ್ಧನಗೆ ಕೇಳದರಿರವನೆಂದ || ೭೨ ||

ಅವರಿಗಾಲಕ್ಷ್ಮಿಗಳು ಪುಣ್ಯದ | ತವಕದಿಂದೊಲಿ ತಂದವಲ್ಲದೆ |
ಅವರು ತಜ್ಜನ್ಮದಲಿ ಕಾಮಿಸಿ ಪಡೆದುದಿಲ್ಲೆನಲು ||
ಅವಧರಿಸಿ ಬಲನುಕ್ತಿಯನು ಮಾ | ಧವನು ಮತ್ತಿರದಾಗಳಾವೀ |
ಕುವರಗತಿ ವೈರಾಗ್ಯವನು ತಹವೆಂದು ಬಗೆದಂದ || ೭೩ ||

ಹೋದುದು ಮನದುಮ್ಮಳವು ಮಧು | ಸೂದನಗೆ ಮತ್ತಿತ್ತಲಾ ಪು |
ಣ್ಯೋದಯನು ಪಲದಿವಸವಮರರಕುಮಾರರೊಗ್ಗಿನಲಿ ||
ಶ್ರೀದಿವಿಜನರನಾಗ ಪತಿತಿನ | ಪಾದನಾ ನೇಮೀಶ್ವರನು ನಿ |
ರ್ವಾದ ಪಾವನಚರಿತನಿರ್ದನು ಭೂಪಕೇಳೆಂದ || ೭೪ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತಕಲ ಮಧು |
ಕರ ವಿರಾಜಿತ ಸುಕವಿ ಸಾಳ್ವ ವಿರಚಿತವೆನಿಪ್ಪ ||
ಪರಮ ನೇಮಿ ಜಿನೇಂದ್ರ ಪಾವನ | ಚರಿತೆಯೊಳು ಪದಿಮೂರನೆಯದಿದು |
ದೊರೆವಡೆದುದಾ ಚಕ್ರಪರ್ವವು ಮಿಗೆ ಜನಾರ್ದನನ || ೭೫ ||

|| ಅಂತು ಚಕ್ರ ಪರ್ವಕ್ಕಂ ಸಂಧಿ ೫೮ಕ್ಕಂ ಮಂಗಲಮಹಾ ||