ತೃತೀಯ ಪ್ರಕರಣಂ

ಸೂತ್ರಂ ೭೩

ಇಂಬಾಗಿ ನವರಸಕ್ಕಾ
ಲಂಬನಮಕ್ಕುಂ ಪೊದೞ್ದ ನಾಯಕರುಂ ನು
ಣ್ಪಿಂಬಿಡಿದ ನಾಯಿಕಾ ನಿಕು
ರುಂಬಮುಮಂತವರ ತೆಱನನುಱೆ ಬಿಚ್ಚಳಿಪೆಂ

ವ : ನಾಯಕಸಾಧಾರಣ ಲಕ್ಷಣಂ

ಸೂತ್ರಂ ೭೪

ಕ್ಷಿತಿವಿನುತಕುಲೀನತೆ ಶೌ
ಚತೆ ಮಾನತೆ ಯೌವನತೆ ದೃಢತ್ವಂ ಮಾಧು
ರ್ಯತೆ ಧೀರತೆ ಜನದನುರಾ
ಗತೆ ಉತ್ಸಾಹತೆಯೆ ಸಾಜಮಾದ ಸಮತ್ವಂ

ಸೂತ್ರಂ ೭೫

ಪ್ರಕಟಪ್ರತಾಪಿ ಶಾಸ್ತ್ರಾ
ರ್ಥಕಾರಿ ಕಡುಚಾಗಿ ವಿನಯ ಧರ್ಮಂ ಸದ್ಬು
ದ್ಧಿಕಲಾವೇತ್ತೃ ಪ್ರಾಜ್ಞಂ
ಸುಕರಂ ಪ್ರಿಯವಾದಿ ವಾಗ್ಮಿ ನಾಯಕನಕ್ಕುಂ

ವ : ಮತ್ತಮಲ್ಲಿ

ಸೂತ್ರಂ ೭೬

ಧೀರೋದಾತ್ತ ಲಲಿತರೀ
ಧಾರಿಣಿಯೊಳ್ ನೆಗೞ್ದ ಧೀರ ಶಾಂತೋದ್ಧತರೆಂ
ದಾರಯೆ ಪೇೞ್ದೀ ಗುಣಯುತ
ರೋರಂತಿರೆ ನಾಲ್ವರಾದರೆಂತೆನೆ ಪೇೞ್ವೆಂ

ಸೂತ್ರಂ ೭೭

ಕ್ಷಮೆಯುಳ್ಳಂ ಗಂಭೀರನ
ಸಮಸತ್ವಂ ಸತ್ಕೃಪಾಬ್ಧಿಯ ವಿಕತ್ಥನನ
ಚ್ಛಮನಂ ನಿರಹಂಕೃತನು
ತ್ತಮ ಧೀರೋದಾತ್ತನಾಯಕಾಖ್ಯಮನಾೞ್ಗುಂ

ಲಕ್ಷ್ಯಂ

ಪ್ರಾಕೃತನಲ್ಲನೀ ದಶರಥಾಗ್ರತನೂಭವನೇಕವಾಕ್ಯನಾ
ಶಾಕರಿಕರ್ಣಚಾಮರಯಶಂ ಚರಮಾಂಗನನಂತವೀರ್ಯನಿ
ಕ್ಷ್ವಾಕು ಕುಲಾಮೃತಾರ್ಣವಸುಧಾಕಿರಣಂ ರಣಮೇರುಲೋಕಲುಂ
ಟಾಕನಿಧಾಘತಾಪಶರವರ್ಷಣ ಮೇಘನುದಾತ್ತ ರಾಘವಂ            ೧೨೮

ವ : ಮತ್ತಂ

ಗಗನಚರ ಪ್ರಚಂಡಬಲವೆತ್ತಿ ಬರುತ್ತಿರೆ ಕಾಳೆಗಕ್ಕಿದಂ
ಬಗೆದನೆ ಜಾನಕೀಮುಖಸರೋರುಹದೊಳ್ ನೆಲಸಿರ್ದ ದೃಷ್ಟಿಯಂ
ತೆಗೆದನೆ ಕಾಲದಂಡಮುಮನೇೞಿಪ ತನ್ನ ಶರಾಸನಕ್ಕೆ ಮೆ
ಲ್ಲಗೆ ಕರಶಾಖೆಯಂ ರಘುತನೂಭವನೊಯ್ದ ನದೇನುದಾತ್ತನೋ ೧೨೯ (ಇವಂ ಧೀರೋದಾತ್ತನಾಯಕಂ)

ಸೂತ್ರಂ ೭೮

ವಸುಮತಿಯೊಳ್ ಸಚಿವಾಯ
ತ್ತ ಸಿದ್ಧಿ ನಿಶ್ಚಿಂತನೆಯ್ದೆ ಸುಖಿ ಮೃದು ಭೋಗ
ಪ್ರಸರಂ ಕಲಾಪ್ರಿಯಂ ಪೆಂ
ಪೆಸೆದಿರ್ಪಾ ಧೀರಲಲಿತನಾಯಕನಕ್ಕುಂ

ಲಕ್ಷ್ಯಂ

ಕ್ಷಿತಿತಲಮಂ ಪ್ರಧಾನಮುಖದಿಂ ಪ್ರತಿಪಾಲಿಸುತಿರ್ದು ಭಸ್ಮಸಾ
ತ್ಮೃತರಿಪುವರ್ಗನಾಗಿ ಮೃದು ಸತ್ಸುಖಿ ಚಿಂತೆಯನೆಯ್ದೆ ನೀಗಿ ವಿ
ಶ್ರುತ ಬಹುನೃತ್ಯಗೀತನುತವಾದ್ಯಕಲಾಪ್ರಿಯನೆಲ್ಲ ಭೋಗದಿಂ
ಪ್ರತಿದಿವಸಂ ಪ್ರಮೋದನೆಸೆದಂ ಧೃತನಿರ್ಮಳಧರ್ಮನಾ ನೃಪಂ      ೧೩೦ (ಇವಂ ಧೀರಲಲಿತ ನಾಯಕರಂ)

ಸೂತ್ರಂ ೭೯

ರಸಿಕಂ ಮೃದು ಶುಚಿ ಸುಖಿ ಸು
ಪ್ರಸನ್ನ ನುರುಬಂಧುರಂ ದ್ವಿಜಂ ಮೇಣ್ ವಣಿಜಂ
ಎಸೆವ ವಿಲಾಸ ವಿವೇಕ ವಿ
ಲಸಿತಂ ನುತಧೀರಶಾಂತನಾಯಕನಕ್ಕುಂ

ಲಕ್ಷ್ಯಂ

ಧರೆಯೊಳ್ ಸಂದಧಿರಾಜವೈಭವದೆ ಬರ್ಪಂ ಸುಪ್ರಸನ್ನಂ ಸುಖೋ
ತ್ಕರನಾದಂ ಶುಚಿ ವಿಪ್ರವಂಶಮಣಿ ಸಾಕ್ಷಾತ್ಕಾಮನೆಂದಾತನಂ
ಪುರಮಾರ್ಗಾಗತನಂ ಪ್ರಗಲ್ಭೆಯರಲಂಪಿಂ ತೋಱೆ ಕಣ್ಣಾರ್ವಿನಂ
ನರನಾಥಾತ್ಮಚೆ ನೋಡಿ ಪುತ್ಥಳಿವೆಡಂಗಂ ಪೆತ್ತಳಾ ತಾಣದೊಳ್    ೧೩೧ (ಇವಂ ಧೀರಲಲಿತ ನಾಯಕಂ)

ಸೂತ್ರಂ ೮೦

ಧೀರೋದ್ಧತ ನೇತೃವಹಂ
ಕಾರಿ ವಿಕತ್ಥನನೆ ವಂಚಕಂ ಚಂಡಂ ಮಾ
ಯಾರತನುದ್ವೃತಂ ವ್ಯಭಿ
ಚಾರಿಮನಂ ನೆಗೞ್ದ ಮತ್ಸರಗ್ರಸ್ತನವಂ

ಲಕ್ಷ್ಯಂ

ಎನಗೆಂ ಬಲ್ಲಾಳ್ಗಡಂ ಮಾನವನಭಿಭವಮಂ ಕೇಳಲಾದತ್ತವಂಗಾ
ಳ್ತನಮಂ ಪೂಣ್ದೆನ್ನೊಳಂ ದಾಯಿಗತನಮುನಿವಂ ತೋರ್ಕೆ ದೋರ್ದಂಡಕಂಡೂ
ಯನಮಂ ಚಂಡಾಸಿಸಂಘಟ್ಟದಿನೊಗೆವುರಿಯಿಂ ಮೞ್ಗಿಪೆಂಮೂಱುಕಣ್ಣಾ
ತನುವೆನ್ನೊಳ್ ಮೀಱಿ ಮಾಱೀಂತೊಡೆ ಪಡೆಯದೆ ಸಂತ್ರಾಸಮಂ ಚಂದ್ರಹಾಸಂ ೧೩೨ (ಇವಂ ಧೀರೋದ್ಧತನಾಯಕಂ)

ಸೂತ್ರಂ ೮೧

ನಾಯಕರೆಲ್ಲಾ ರಸಕಂ
ನಾಯಕರಕ್ಕುಂ ಸ್ವರೂಪಭೇದದಿನಂತಾ
ನಾಯಕರೆ ಸಿಂಗರದೊಳಿರೆ
ವಾಯಮೆ ನಾಲ್ದೆಱನನೊರ್ವರೊರ್ವರ್ ತಳೆವರ್

ವ : ಅಲ್ಲಿ

ಸೂತ್ರಂ ೮೨

ಅನತಿಶಯನಾಯಕಾಖ್ಯರೊ
ಳನುಕೂಲಂ ದಕ್ಷಿಣಾತ್ಮಕಂ ಕುಟಿಲಂ ಧೃ
ಷ್ಟನೆನಿಪ್ಪ ನಾಲ್ಕುಭೇದಂ
ಜನಿಯಿಸುಗುಮವಂ ಕ್ರಮೋಕ್ತಿಯಿಂದಂ ಪೇೞ್ವೆಂ

ಸೂತ್ರಂ ೮೩

ನುತಶೀಲನೇಕಪತ್ನೀ
ವ್ರತನಮಳಂ ನಿಯಮಿತಾತ್ಮನನುಕೂಲಂ ಹೃ
ತ್ಸ್ಥಿತಿದೋಱದೆ ಚದುರಿಂ ಸಮ
ರತಿಯಂ ಪಲಸತಿಯರ್ಗೆಸಗೆ ದಕ್ಷಿಣನೆನಿಕುಂ

ಲಕ್ಷ್ಯಂ

ಕೆಳದೀ ಮಜ್ಜೀವಿತಾಧೀಶ್ವರನ ಗುಣಮನೇನೆಂದದಂ ಪೇೞ್ವೆನೊಂದಂ
ತಿಳಿ ಮದ್ವೈವಾಹಸಂಬಂಧದ ಸಮಯದೊಳಂದೇಕಪತ್ನೀವ್ರತಂ ನಿ
ಶ್ಚಳಿತಂ ನೋಡಂದುತೊಟ್ಟಿಂದುವರಮದನೆ ದಲ್ ಭಾವಿಸುತಿರ್ಪೆನವ್ಯಾ
ಕುಳಚಿತ್ತಂ ಜನ್ಮಜನ್ಮಾಂತರದೊಳಮೆನಗಂತಾತನಕ್ಕೆಂದಳೊರ್ವಳ್ ೧೩೩ (ಇವನನುಕೂಲ ನಾಯಕಂ)

ನೋಟದಿನೊರ್ವಳಂ ನಗೆಯಿನೊರ್ವಳನೊಳ್ನುಡಿಯಿಂದಮೊರ್ವಳಂ
ಬೇಟದಿನೊರ್ವಳಂ ಪಿಡಿಯುತೊರ್ವಳನೋಕುಳಿವೊಯ್ವು ತೊರ್ವಳಂ
ಆಟದೊಳೊರ್ವಳಂ ಜಳಕೆ ಮೆಯ್ಗೊಡುತೊರ್ವಳನೊಂದೆ ಮಾೞ್ಕೆಯಿಂ
ದಾಟದೊಳೆಯ್ದೆ ತೃಪ್ತಿವಡಿಸಿರ್ದನವಂ ಗುಣರತ್ನಭೂಷಣಂ        ೧೩೪ (ಇವಂ ದಕ್ಷಿಣನಾಯಕಂ)

ಸೂತ್ರಂ ೮೪

ಪುಸಿಗಂ ಧೂರ್ತಂ ಮಿಗೆ ವಿಗ
ಡ ಸಿಂಗರಂ ನೆಗೞ್ದ ಕುಟಿಲನಕ್ಕುಂ ಧೃಷ್ಟಂ
ಎಸೆಗುಮಪರಾಧಿ ನಾಣಿಲಿ
ಪಸರಿಪ ಬೋಸರಿಗನಂತವಂ ಗತಮಾನಂ

ಲಕ್ಷ್ಯಂ

ಎನಗೀ ನಿನ್ನ ವಿಕಾರಮಂ ನವನಖವ್ಯಾಪಾರಮಂ ವಂಚಿಸ
ಲ್ಕಿನಿಸಂ ನೀಂ ಪುಸಿವೆೞ್ದು ಮುಚ್ಚಿದೆಯದರ್ಕಾಂ ಬಲ್ಲೆನೇ ನಿನ್ನ ನಾ
ಯ್ತನಮಂ ನಂಬದಿರೆಂದು ದೂಱುವವೊಲಿರ್ಪನ್ಯಾಂಗನಾಸಂಗ ಸಂ
ಜನಿತಾಮೋದಮನೆಂತು ನೀಂ ಪುಸಿವೆ ಮೇಣೆಂತೆಂತದಂ ಮುಚ್ಚುವೈ           ೧೩೫ (ಇವಂ ಕುಟಿಲನಾಯಕಂ)

ದೊರೆಗಿಡೆ ಬಾಯ್ಗೆ ಬಂದುದನೆ ಬಯ್ವೆನದಂ ಬಗೆಗೊಳ್ಳದೀ ಮುಖಾಂ
ಬುರುಹಮನೊಲ್ದು ಚುಂಬಿಸುವನೋವದೆ ಬೆಟ್ಟಿತುವೊಯ್ವೆ ನೊತ್ತುವಂ
ಕರಮನಡರ್ತು ಕಾಯ್ದೊದೆವೆನಾಗಳೆ ಕಾಲ್ವಿಡಿದಿರ್ಪನಿಂತು ನಿ
ಷ್ಕರುಣದಿನಾನವಂಗೆ ಮೊಗದೊಳ್ ಮುನಿಸಂ ತಳೆವೆಂ ತಳೋದರೀ ೧೩೬ (ಇವಂ ಧೃಷ್ಟನಾಯಕಂ)

ವ : ಇವರ್ ನಾಲ್ವರುಂ ಶೃಂಗಾರನಾಯಕರ್

ಸೂತ್ರಂ ೮೫

ಇಂತೀರೆಣ್ಬರವರ್ಗುಣ
ವಾಂತುತ್ತಮ ಮಧ್ಯಮಂ ಜಘನ್ಯಾಹ್ವಯದಿಂ
ಸಂತರ್ ತ್ರಿವಿಧಂ ಬರ್ಕಿ
ನ್ನಂತಾ ನಾಯಕರೆ ಗಣಿಸೆ ನಾಲ್ವತ್ತೆಣ್ಬರ್

ಸೂತ್ರಂ ೮೬

ಕಮನೀಯವಾಣಿ ಗೂಢೋ
ಕ್ತಮಂತ್ರನತಿಚತುರನಖಿಳಕರ್ಮವಿಭೇದಂ
ಪ್ರಮದಾಕೋಪೋಪಾತ್ತ
ಕ್ರಮಪರನೆನಿಸುವನೆ ನರ್ಮಸಖನೆನಿಸಿರ್ಕುಂ

ಸೂತ್ರಂ ೮೭

ವಿವಿಧ ವಿನೋದಾಶ್ರಯನೆನಿ
ಪವಂಗೆ ನಾಲ್ವರ್ ಸಹಾಯರಾಗಲೆವೇೞ್ಕುಂ
ಭವನವಿನೂತ್ನರೆನಾಗರಿ
ಕವಿಟವಿದೂಷಕ ಸುಪೀಠಮರ್ದಕರೆನಿಕುಂ

ಸೂತ್ರಂ ೮೮

ಸರಸೋಪವಚನದೊಳ್ ನಾ
ಗರಿಕಂ ಚತುರೋಕ್ತಿಯೊಳ್ ವಿಟ್ಟಂ ಹಾಸ್ಯೋಕ್ತ್ಯಂ
ತರದೊಳ್ ವಿದೂಷಕಂ ಗ್ರಾ
ಮ್ಯರೀತಿಯೊಳ್ ನುಡಿಯೆ ಪೀಠಮರ್ದಕನೆನಿಕುಂ

ವ : ಮತಾಂತರದಿಂ ವಿಟ ಚೇಟ ವಿದೂಷಕ ಪೀಠಮರ್ದಕರೆಂದುಮವರಂ ಪೇೞ್ದರರೆಬರ್ ಪೀಠಮರ್ದಕ ವಿಟ ಚೇಟ ವಿದೂಷಕರೆಂದು ಮುಂಪೇೞ್ದವರಲ್ಲಿ ರಾಜನಿಂದಣಮೆ ಕಿಱಿದಾದ ಗುಣವಂತಂ ತನ್ನೃಪನ ಪೀಠಮನಣೆವುತ್ತೊತ್ತಿಕುಳ್ಳಿ ರ್ಪುದಱಿಂ ಪೀಠ ಮರ್ದಕಂ, ಕಾಮವಿದ್ಯೆವೊಂದಱೊಳ್ ನಿಪುಣಂ ವಿಟಂ, ನಾಯಕ ನಾಯಿಕಾಸಂಧಾನ ಕುಶಲ ಪ್ರೌಢಂ ಚೇಟಂ, ಅವರಂ ಹರ್ಷದೆ ನಗಿಸುವಂ ವಿದೂಷಕಂ. ಈ ನಾಲ್ವರುಂ ನರ್ಮಸಖರೆನಿಕ್ಕು. ನರ್ಮಸಖನೆಂದು ಶೃಂಗಾರಕೇಳಿ ಮಿತ್ರಂ, ಇದರ್ಕೆ ಸಮ್ಮತಿ ಶ್ಲೋಕಂ.

ಸಂಸ್ಕೃತಂ

ಕಿಂಚಿದೂನಃ ಪೀಠಮರ್ದ ಏಕವಿದ್ಯೋ ವಿಟಸ್ಸ್ಮೃತಃ
ಸಂಧಾನಕುಶಲಶ್ಚೇಟೋ ಹಾಸ್ಯಪ್ರಾಯೋ ವಿದೂಷಕಃ

ವ : ಇಂತೆಂಬರಾ ಸಖರ ವಾಗಾದಿಪ್ರೌಢಿಯಖಿಳವಿಭೇದಂ ಕನ್ನಡದೊಳ್ ನಾಗರಿಕಾದಿ ಚತುಷ್ಟಯಮಂ ಪೇೞ್ವರದನಱಿಗೆ ನಗರವಾರ್ತಾವಿಶೇಷಮನಱಿದರಸಂಗೆ ಚತುರ ವಚನದಿಂ ಸೂಚಿಪನದಱಿಂ ನಾಗರಿಕನೆನಿಪಂ

ಲಕ್ಷ್ಯಂ

ನಸುದೊಡೆದೋರ್ಪ ಪಟ್ಟಣಿಗೆಯೊಳ್ ನಿಱಿ ಕತ್ತುರಿ ಬೊಟ್ಟು ಕಟ್ಟಿ ಬಿ
ಟ್ಟೆಸೆವ ಕುರುಳ್ ಮೊಗಕ್ಕೆ ಪಿರಿದೊಪ್ಪುವ ಬಿಂಕದ ಸಂಕದೋಲೆ ಕು
ಪ್ಪಸದಳಮಾದ ಸಣ್ಣಬಳೆ ಕೆನ್ನೆಯ ಪೀಲಿಯನಾಂತ ಚೊಲ್ಲೆಯಂ
ಮಿಸುಗುವದೋರೆವಲ್ ಕರಮೆಮಾಸರಮಾದುದು ದೇಸೆಗಾರ್ತಿಯಾ           ೧೩೭ (ಇದು ನಾಗರಿಕವಚನಂ)

ವ : ಇಂತು ೞಿದುವನಱಿದುಕೊಳ್ವುದು. ಇನ್ನು ನಾಯಕ ವಿಕಲ್ಪಮಂ ಪೇೞ್ವೆಂ

ಸೂತ್ರಂ ೮೯

ಪ್ರಕಟತರ ನಾಯಿಕೆಯರಾ
ಸ್ವಕೀಯೆ ಪರಿಕೀಯೆ ಪಣ್ಯೆಯೆನೆ ಮೂಱುತೆಱಂ
ಸ್ವಕೀಯೆ ಪರಿಭಾವಿಸೆ ಮು
ಗ್ಧ ಕವಿಗಳಿಂ ಮಧ್ಯೆ ತತ್ಪ್ರಗಲ್ಭೆಯುಮೆನಿಕುಂ

ಸೂತ್ರಂ ೯೦

ಕ್ರಮದಿಂ ದ್ವಾದಶವರ್ಷ
ಪ್ರಮಾಣದೊಳ್ ಮುಗ್ಧೆ ಮಧ್ಯೆ ತದ್ದ್ವಿಗುಣದೊಳಾ
ಸಮಕಟ್ಟಿಂ ತದ್ದ್ವಿಗುಣ
ಪ್ರಮಿತಾಬ್ದದೊಳಾ ಪ್ರಗಲ್ಭೆಯೆನೆ ಪೆಸರ್ವಡೆಗುಂ

ವ : ಮತ್ತಂ

ಸೂತ್ರಂ ೯೧

ನವವಯಮೆಯ್ದೆ ಲಜ್ಜೆ ನವಕಾಮಮಿವುಂ ಸುಸಿಲಲ್ಲಿ ವಕ್ತ್ರಮಂ
ಸವನಿಸದಾಕೆಮುಗ್ಧೆ ನಡುಜವ್ವನಮೊಪ್ಪುವ ಕಾಮಮೋಹಮುಂ
ತವೆ ಸುಸಿಲಿಂ ಪೊದೞ್ದವಳೆ ಮಧ್ಯೆ ವಯೋಧಿಕೆ ತೀವ್ರಕಾಮದಿಂ
ಬವರಿಪಳಾ ಪ್ರಗಲ್ಭೆ ವರಮೂರ್ಛಿತೆ ತತ್ಕಲೆವಲ್ಲಳಲ್ಲವೇ

ಲಕ್ಷ್ಯಂ

ಪದಯಿಸೆ ಸೋಂಕಿ ಶಂಕೆಗಿಡೆ ಮೇಳಿಸಿ ಮೆಯ್ವಿಡೆ ತಳ್ತು ತೋಳ ತ
ೞ್ಪಿದರ್ಗೊಳೆ ಮೆಲ್ಲನಪ್ಪಿ ಮೊಗಮಿತ್ತೊಡೆ ಚುಂಬಿಸಿ ಸೋಲ್ತು ನಾಣನೊ
ಕ್ಕುದನಱಿದಿಚ್ಚೆಗಾರ್ತನದನಲ್ಮೆಗಳಿಂ ನುಡಿದಿಂತಲಂಪಿನು
ಬ್ಬದಿಗಮನಾ ಲತಾಂಗಿಗೆ ನೃಪಂ ಪಡೆದಂ ನವಸಂಪ್ರಯೋಗದೊಳ್            ೧೩೮

ವ : ಮತ್ತಂ

ಇನಿಯನಗಲ್ದೊಡಂ ಸುರತದೊಳ್ನೆರೆವುಜ್ಜುಗದಿಂದಮಿರ್ಪುದಾ
ತನೊಳೊಡನಿರ್ದೊಡಂದೆನಗೆ ಪೋಪುದು ಲಜ್ಜೆಯೊಳಿರ್ದು ಪೊೞ್ತು ನ
ಲ್ಲನೊಳಿರಲೀಯದೆಂತುಮೆನಗೆನ್ನ ಮನಂ ಬಸಮಲ್ಲದೆಂದು ಕಾ
ಮಿನಿ ಕುದಿವಳ್ ವಿಯೋಗದೊಳಮಾತನ ಯೋಗದೊಳಂ ನಿರಂತರಂ            ೧೩೯ (ಇವಳ್ ಮುಗ್ಧೆ)

ಬಗೆಯೊಳ್ ಪೊಣ್ಮಿದಲಂಪು ಕಾತರತೆಯಂ ತಂದೀಯೆ ಮೆಯ್ಮೆಯ್ಗೆ ಸಂ
ದುಗಳೇನಪ್ಪೊಡಮಿಲ್ಲದಂತಮರ್ವಿನಂ ತೞ್ತಪ್ಪಿ ಬಾಯ್ಗೂ ಟದೊಳ್
ಮಿಗೆ ಪೀರ್ವಂತೆ ಮನೋನುರಾಗರಸಮಂ ಮೆಯ್ವೆರ್ಚಿ ಕಾದಲ್ಮೆಕ
ಯ್ಮಿಗುವನ್ನಂ ನೆರೆದರ್ ಮನಃಪ್ರಿಯತಮರ್ ನಾನಾರತಕ್ರೀಡೆಯಿಂ ೧೪೦

ವ : ಮತ್ತಂ

ಇನಿಸಂ ತನ್ನನಗಲ್ದೊಡಂದೆ ಮರಣಾವಸ್ಥಾಂತರಂ ಪುಟ್ಟಿ ತೊ
ಟ್ಟನೆ ಕಂಡಂದು ಭಯಾಕುಳಂ ಪದೆಪಿನಿಂ ಮಾತಾಡೆಯುಂ ನಾಡೆ ಕೆ
ಮ್ಮನೆ ಬರ್ಕುಂ ಕಲಹಂ ಮನಕ್ಕೆ ತಣಿವಿಲ್ಲೆಂದುಂ ಸುಸಿಲ್ಗೆಂದೊಡಾಂ
ತನಗೇನೆಂದಪೆನಕ್ಕೆ ಕೂರ್ಪವರೊಳಿನ್ನೆಲ್ಲಿತ್ತೊ ಸೌಖ್ಯಾವಹಂ       ೧೪೧ (ಇವಳ್ ಮಧ್ಯೆ)

ಕುಟಿಲಾ ನೀಳಾಲಕಂಗಳ್ ನಿಮಿರ್ದಿರೆ ಬೆಳರ್ವಾಯ್ ನಾಡೆಯುಂ ಬೀಗೆರಾಗೋ
ತ್ಕಟದೇಹಂ ರಾಗಮುಂ ಪಿಳ್ಳನೆ ಪಿೞಿದವೊಲಿಂಬಾಗೆ ನೀಳ್ದೋಳಲಂಪಿಂ
ವಿಟವೃತ್ತಂ ಮೆಯ್ಯೊಳೆತ್ತಂ ಪಸರಿಸಿರೆ ವಿಟಂ ಬೀಸೆ ನಿಂದಿರ್ದಳೊರ್ವಳ್
ಸ್ಫುಟತೋರೋಮಧ್ಯೆ ಭಿನ್ನಾಳಕೆಯ ವಟುತಟಗ್ರಂಥಿನಿರ್ಗಂಥಿಯಿಂದಂ      ೧೪೨

ವ : ಮತ್ತಂ

ಅಳಕಂ ತುಂಬಿವೊಲಾಡೆ ತುಂಬಿದ ಕುಚಂ ಚಕ್ರಾಂಕದಂತಾಡೆ ಕ
ಣ್ಣೆಳಮೀನಾಟಮನಾಡೆ ಮುದ್ದುಮೊಗಮಂಭೋಜಾತದಂತಾಡೆ ನೀರ್
ತಿಳಿನೀರಂತೊಲೆದಾಡೆ ನೂವುರಮರಾಳೋನ್ಮಾದವಾದ್ಯಕ್ಕೆ ಪೂ
ಗೊಳನೆರ್ದಾಡುವವೋಲದೇಂ ಮೆಱೆದಳೊ ನಾನಾ ರತ ಪ್ರೌಢಿಯಿಂ ೧೪೩ (ಇವಳ್ ಪ್ರಗಲ್ಭೆ)

ವ : ಅಲ್ಲಿ

ಸೂತ್ರಂ ೯೨

ಧೀರೆಯೆನಿಕ್ಕುಂ ಧೈರ್ಯದೆ
ಧೀರಾಧೀರೆಯೆ ಪೊದೞ್ದ ಧೈರ್ಯಾಧೈರ್ಯಾ
ಧಾರದಿನಧೈರ್ಯದಿಂದಮ
ಧೀರೆಯೆ ತನ್ಮಧ್ಯೆಯುಂ ಪ್ರಗಲ್ಭೆಯುಮಕ್ಕುಂ

ವ : ಮತ್ತಂ

ಸೂತ್ರಂ ೯೩

ನಗೆವೆರಸಿರ್ದ ತೊಂಡುನುಡಿಯಿಂ ತಗುಳ್ವಳ್ ಸಲೆ ಧೀರೆ ದೋಷಿಯಂ
ಮಿಗೆ ಖತಿಯಾಂತು ಕೊಂಕುನುಡಿಯಿಂ ಪೊದೞ್ದಶ್ರುವಿನಿಂ ಸ ದೋಷಿಯಂ
ತಗುಳ್ವಳೆ ಮಧ್ಯೆಯೆಂಬ ಪೆಸರಾಂತು ಭಯಾಖ್ಯೆ ಕೃತಾಪರಾಧಿಯಂ
ತಗುಳದೆ ಮಾಣ್ಬಳೆಯ್ದೆ ಬಿಱುಮಾತಿನ ಜಾಲದಿನಸ್ತಧೀರೆ ತಾಂ

ಲಕ್ಷ್ಯಂ

ಪೊಸಬನಿದಾವನಾದಪುದು ಕಂಡಱಿದಂತೆವೊಲೆಲ್ಲಿ ಕಂಡೆವೀ
ರಸಿಕನನೆಂದು ಕಂಡ ತೆಱನಲ್ಲಿದು ತಾಂ ಬಱಿದೇಕೆ ಬಂದನೀ
ಬಿಸಿಲೊಳದೇಕೆ ಮೆಯ್ಯರಿಸಿನಂ ಪಿರಿದಕ್ಕಟ ತೞ್ತ ಬಾಸುೞಿಂ
ಪಸಿಯವುನೊಂದನೆಂದು ನುಡಿದಳ್ ತಡೆದೊಯ್ಯನೆ ಬಂದ ನಲ್ಲನಂ            ೧೪೪ (ಇವಳ್ ಮಧ್ಯಾಖ್ಯೆ ಧೀರೆ)

ಮುಳಿವೆಂ ತಾನಾರ್ಗೆ ತನ್ನಂ ತಿಳಿಪುವ ಪಿರಿದುಂ ದಂದುಗಂ ಬೇಡವಿನ್ನಾಂ
ಮುಳಿಯೆಂ ನಿನ್ನಾಣೆ ನಿನ್ನೀ ನವ ನಖಹತಿಯಂ ಕುಂಕುಮಾರ್ದಾಂಕಿತೋರ
ಸ್ಥಳಮಂ ಬೆಳ್ಪೇಱಿ ಸೊಪ್ಪಾದಧರಮನಿನಿತುಂ ಕಂಡು ಕಂಡಿನ್ನು ನಿನ್ನೊಳ್
ಮುಳಿಸಿನ್ನೇಂ ಲಲ್ಲೆಯಿನ್ನೇಂ ಪುರುಡುಗಳೆನುತುಂ ತೀವಿದಳ್ ಕಣ್ಣ ನೀರಂ  ೧೪೫ (ಇವಳ್ ಮಧ್ಯಾಖ್ಯೆ ಧೀರಾಧೀರೆ)

ಎಲೆ ಮೃಗನೇತ್ರೆ ಬೇಡ ಮುಳಿಸೆಂಬೆಯಿದೇಂ ಸಖಿಯಿತ್ತಲಾರೊ ಯೆಂ
ಜಲಿಸಿದ ಬಾಯ ತೀವ್ರ ನಖಪಾತದ ಬಾಸುೞ ಮೆಯ್ಯ ದುಷ್ಟನಂ
ಖಲನನಿದೆಂತು ನೋೞ್ಪೆನಿವನಂ ತಡೆವಂದಮಿದೇಕೆ ಪೋಕೆ ತ
ನನ್ನೊಲವನವಳ್ಗೆ ತೋರ್ಕೆ ಬಿಡುಗೆಂದುೞಿದಳ್ ದಯೆಗೆಟ್ಟು ನಲ್ಲನಂ (ಇವಳ್ ಮಧ್ಯಾಖ್ಯಾಧೀರೆ)      ೧೪೬

ಸೂತ್ರಂ ೯೪

ಮುಳಿದುಱೆ ಚಿಂತಿಸುತ್ತೆ ಕೃತದೋಷಿಯನೊಂದದಳುಂ ಬೞಿಕ್ಕವಂ
ತಿಳಿಪುತೆ ಬಂದೊಡಂ ಮನಮನೀಯದಳುಂ ಸಲೆ ಧೀರೆ ಹಾಸ್ಯಮ
ಗ್ಗಳಿಸಿದ ಕೊಂಕುವಾತಿನುಭಯಾಖ್ಯೆಯೆ ತೋಱುವಳಾ ಸದೋಷಿಯೊಳ್
ತಿಳಿಪುವನಂ ಪ್ರಗಲ್ಭೆವೆಸರೊಪ್ಪಿದ ಧೀರೆಯೆ ಜರ್ವಿ ಪೊಯ್ವಳೆ

ಲಕ್ಷ್ಯಂ

ಬೆರಲಂ ಮೂಗಿನ ಮೇಲಿ
ಟ್ಟುರುಕೋಪದೆ ಸಾಪರಾಧಿಯಂ ವಲ್ಲಭನಂ
ತರುಣಿಯಣಂ ಪೊರ್ದದೆ ನಿಂ
ದಿರವೇಂ ಕನ್ನಡಿಸಿದತ್ತೊ ಧೈರ್ಯದ ಪೆಂಪಂ    ೧೪೭

ವ : ಮತ್ತಂ

ವಿನಯೋಪಚಾರವಚನಮು
ಮನುಕೂಲಾಚರಣಮುಂ ವಿಭಿನ್ನಾಸನಮುಂ
ಇನಿಯಂಗಱಿಪದೆ ಸುರತ
ಕ್ಕಿನಿತೊದವುವಳಲ್ತು ಮುಳಿದಳೆಂಬೊಂದಿರವಂ ೧೪೮ (ಇವಳ್ ಪ್ರಗಲ್ಭೆವೆಸರ ಧೀರೆ)

ಎಱಗಿದೊಡಾರ್ಗೆ ತಾನಸಮಸೌಖ್ಯಮನೀಗುಮೆ ಅಂತೆ ನೀನದ
ಕ್ಕೆಱಗುವೆ ಕೆಮ್ಮನೆಮ್ಮಡಿಗೆ ಬಲ್ಲೆನಿದೆಲ್ಲವನೆೞ್ದು ಪೋಗು ನಿ
ನ್ನೆಱಕಮದೆತ್ತಲಿರ್ದುದಿರದತ್ತಱಗೆನ್ನಮನಕ್ಕೆ ಕೋಪಮಂ
ನೆಱೆಯಿಸಬೇಡ ಪೋಗೆನುತವಳ್ ನಗೆಯಿಂದ ಕೊಱಚಾಡಿ ಕಾಡಿದಳ್ (ಇವಳ್ ಪ್ರಗಲ್ಭೆವೆಸರ ಧೀರಾಧೀರೆ)            ೧೪೯

ಪುರ್ವಿಂದಪರಾಧಿಯನುಱೆ
ಜರ್ವುತೆ ಕಳಕಾಂಚಿಯಿಂದೆ ಬಂಧಿಸಿ ಕಾಯ್ಪಿಂ
ದುರ್ವಿಂ ಬಯ್ದೊದೆದು ಸದೆವಳ್
ಸರ್ವರ್ ಕೆಳದಿಯರೆ ಪಾಱಿವೇೞ್ಪಿನಮಿನಿಯಳ್            ೧೫೦

ವ : ಮತ್ತಂ

ಸ್ಮರನಲರಂಬಿನೇಱುಗಳ ಬಾದಣದಿಂ ಪೊಱಮಟ್ಟು ಪೋದುದೋ
ಸುರಿ ಸುರಿಬಾಷ್ಪದಿಂತೊಳೆದು ಪೋದುದೊ ಸುಯ್ಯೆಲರಿಂದೆ ಪಾಱಿತೋ
ವಿರಹ ಕೃಶಾನುವಿಂದಮುಱೆ ಬೆಂದುದೊ ಧೈರ್ಯಮೊಡರ್ಚಿ ಚಿತ್ತದೊಳ್
ವೆರಸಿ ಮದೀಯಕಾಂತನೆಡೆಗೈದಿತೊ ಕೇಳ್ ಸಖಿ ಕಾಣೆನೆನ್ನೊಳೇಂ (ಇವಳ್ ಪ್ರಗಲ್ಭಾಧೀರೆ)       ೧೫೧

ಸೂತ್ರಂ ೯೫

ಪ್ರಿಯನಿಷ್ಪದೆ ಜ್ಯೇಷ್ಠೆಯುಮ
ಪ್ರಿಯದಿಂದೆ ಕನಿಷ್ಠೆಯಕ್ಕುಮೀಯಱುವರುಮಾ
ರಯೆ ತಾಂ ಪ್ರತ್ಯೇಕಂ ಮು
ಗ್ಧೆಯನೊರ್ವಳನಿಲ್ಲಿ ಕೂಡೆ ಪದಿಮೂಱು ತೆಱಂ

ವ : ಜ್ಯೇಷ್ಠೆ ಕನಿಷ್ಠೆಗೆ

ಲಕ್ಷ್ಯಂ

ಪಿಂತನೆ ಬಂದಿರ್ವರ್ ನಿಜ
ಕಾಂತೆಯರುಂ ಲೀಲೆಯಿಂದಮಿರೆ ಕಾಂತಂ ತಾ
ನಂತೊರ್ವಳ ಕಣ್ಮುಚ್ಚಿಯೆ
ಸಂತಸದಿಂದೊರ್ವಳಧರಪಾನಂಗೆಯ್ದಂ           ೧೫೨

ಎಲೆ ಮೃಗನೇತ್ರೆ ನೋಡು ನವಿಲಾಟಮನಾ ಸಹಕಾರಗುಚ್ಛಕೋ
ಮಳಿಕೆಯನುದ್ಭ್ರಮದ್ಭ್ರಮರಲೀಲೆಯನೆಂದು ವನಾಂತರಾಳದೊಳ್
ಚಳಮತಿ ಮಾಡಿ ವಲ್ಲಭೆಯನನ್ಯವಿಟೀಮುಖ ಚುಂಬನೇಪ್ಸಿತಾ
ಕುಳನಭಿವಾಂಛೆಯುಂ ನೆಱೆಯೆ ತೀರ್ಚಿದನೇನುಚಿತಪ್ರವೀಣನೋ   ೧೫೩

ವ : ಇಲ್ಲಿಯಧರಪಾನಕ್ಕೆ ಬಂದವಳ್ ಜ್ಯೇಷ್ಠೆ, ಚುಂಬನಕ್ಕೆ ಬಂದವಂ ಕುಟಿಲ ನಾಯಕಂ

ಸೂತ್ರಂ ೯೬

ಇನ್ನಾ ಪರಕೀಯೆಯೆ ತಾಂ
ಕನ್ನಿಕೆ ಮೆಱೆವೂಢೆಯೆಂದುಮಿರ್ತೆಱನಕ್ಕುಂ
ಕನ್ನಿಕೆ ವಿವಾಹವಾಗದ
ಳುನ್ನತದೆ ವಿವಾಹವಾದಳೂಢೆಯೆನಿಕ್ಕುಂ

ಲಕ್ಷ್ಯಂ

ಸುರಭಿಸ್ವೀಕೃತಿ ಗೀತರಕ್ತಿ ಮಣಿಭೂಷಾಪೇಕ್ಷೆ ತಾಂಬೂಲ ರಾ
ಗರಸಾಪೇಕ್ಷೆ ಕಟಾಕ್ಷವೀಕ್ಷಣೆ ರತಿವ್ಯಾಪಾರಮೆಂಬೀ ಮಹೋ
ದ್ಧುರ ಪಂಚೇಂದ್ರಿಯದರ್ಪಮೊತ್ತರಿಸೆ ಕಯ್ಯಿಕ್ಕಿರ್ಪೊಡಿಂತೀ ತನೂ
ದರಿ ಸಾಲ್ವಳ್ ತಳೆಯಲ್ ಸ್ವಯಂವರ ವರಪ್ರಸ್ಥಾನಮಾಂಗಲ್ಯಮಂ          ೧೫೪ (ಇವಳ್ ಕನ್ನಿಕೆ)

ತಿಳಕಮನೋಸರಿಸುವ ಕ
ಜ್ಜಳಜಳಮಂ ತೊಡೆವ ಕುರುಳನೊತ್ತುವ ನೆವದಿಂ
ದೆಳಸಿ ಕಿಱಿಕಿಱಿದು ಪೊಸ ಮದ
ವಳಿಗೆಯ ಸಾಧ್ವಸಮನರಸನೊಯ್ಯನೆ ಕಳೆದಂ   ೧೫೫ (ಇವಳ್ ಊಢಾನಾಯಿಕೆ)

ಸೂತ್ರಂ ೯೭

ನೆಱೆಯೆ ಪರಕೀಯೆ ತಾನಿ
ರ್ತ್ತೆಱನೆಂಬುದನಱಿಯೆ ಪೇೞ್ದೆ ನಿನ್ನಱಿಗೆ ಬುಧರ್
ಕುಱಿಪಂ ಪಣ್ಯೆಗೆ ಗುಣಗಣ
ದೆಱಕಂ ಸಾಮಾನ್ಯಮಪ್ಪುದಱಿನೊಂದೆ ತೆಱಂ

ಲಕ್ಷ್ಯಂ

ಮುಳಿವ ಕನಲ್ವ ಕಂಟಿಸುವ ಕಾಡುವ ಬೇಡುವ ಮೇಕುದೋರ್ಪ ಸಾ
ರ್ದೆಳಸುವೞಲ್ವಗೆಲ್ವ ಬಗೆದೋರ್ಪ ಮನಂಗುಡದಿರ್ಪ ಕೈತವಂ
ಗಳೊಳಿವಳಾಗವಂ ಹರೆಯಮಿಲ್ಲದೆ ಮೋಹಿಸುತಿರ್ಪವಳಿನ್ನಿವಳ್
ಮೊಳೆಯೊಳೆ ಕೊಂದು ಕೂಗಿದಪಳೇೞೆಲೆವೋದೊಡೆ ಬಾೞಲೀವಳೇ            ೧೫೬ (ಇವಳ್ ಪಣ್ಯೆ)

ಸೂತ್ರಂ ೯೮

ಇಂತಱಿಯೆ ಪೇೞ್ದ ಪದಿನಾ
ಱುಂ ತೆಱದಾ ವಧುಗಳೊಳಗೆಯೋರೋರ್ವರವ
ಸ್ಥಾಂತರಮದೆಂಟು ಭೇದಮ
ದೆಂತೆನೆ ತಱಿಸಂದು ಪೇೞ್ವೆನೆನ್ನಱಿವನಿತಂ

ಸೂತ್ರಂ ೯೯

ಸುಕವಿಗಳಿಂ ಸ್ವಾಧೀನಪ
ತಿಕೆ ಗತಭರ್ತಾರಿಕೆಯಭಿಸಂಧಿತೆಯಭಿಸಾ
ರಿಕೆ ವಿರಹೋತ್ಕಂಠಿತೆ ವಾ
ಸಕಸಜ್ಜಿಕೆ ವಿಪ್ರಲಬ್ಧೆ ಖಂಡಿತೆಯೆನಿಕುಂ

ಸೂತ್ರಂ ೧೦೦

ಸತತಂ ಸ್ವಾಧೀನಪತಿಕೆ
ಪತಿಯಂ ಸ್ವಾಧೀನಮಾಗಿ ತಡೆದಂಗನೆ ತಾಂ
ಗತಭರ್ತಾರಿಕೆಯೆನಿಕುಂ
ಪತಿ ಪರದೇಶಸ್ಥನಾಗೆ ಮಱುಗುವ ನಲ್ಲಳ್

ಲಕ್ಷ್ಯಂ

ಪೊಲ್ಲಮೆಗಂಡವರ್ ಮುಳಿದು ತಮ್ಮಯ ತೊೞ್ತಿರನೆಂತುಮಾೞ್ಪೊಡಂ
ಸಲ್ಲದೆ ಲೋಗರಂ ಬೆಸಸು ನಿನ್ನಯೆ ವಾಮಪದಪ್ರಘಾತಮಂ
ನಲ್ಲಳೆ ಕೋಪದಿಂದೆನಗೆ ನೀಂ ದಯೆಗೆಯ್ದೊಡೆ ನೋಗುಮೆಂದೆ ನೀ
ಮೆಲ್ಲಡಿಯೆನ್ನ ಮೆಯ್ಯ ಪುಳಕಂಗಳಿನೆನ್ನ ಕುರುಳ್ಗಳೊತ್ತಿನಿಂ        ೧೫೭ (ಇವಳ್ ಸ್ವಾಧೀನಪತಿಕೆ)

ಘನಸಮಯಕ್ಕೆ ಬರ್ಪನೆನೆ ತಾಂ ಬರವಾಱುತುಮಿರ್ಪುದೆಂದು ಮೆ
ಲ್ಲನೆ ಪಲವಂದದಿಂ ನಿಲಿಸಿ ಮತ್ಪತಿ ಪೋಗೆ ಬೞಿಕ್ಕಮೇನೊ ತೊ
ಟ್ಟನೆ ನಭದೊಳ್ ಕಱಂಗಿ ಮುಗಿಲುಂ ನೆಗೆದಿರ್ದುವು ನಲ್ಲನೇಕೆ ಬಾ
ರನೊ ಮಿಗೆ ತೞ್ತುಕೇಗಿದಪುದೆನ್ನೆರ್ದೆ ಪವ್ವನೆ ಪಾಱೆಕೇಕಿಗಳ್       ೧೫೮ (ಇವಳ್ ಗತಭರ್ತಾರಿಕೆ)

ಸೂತ್ರಂ ೧೦೧

ಅಡಿಗೆಱಗಿದಿನಿಯನಂ ಕಿಡೆ
ನುಡಿದಟ್ಟಿ ಬೞಿಕ್ಕೆ ನೋವಳಭಿಸಂಧಿತೆ ಪೇ
ರಡವಿಯಿರುಳ್ ಪಗಲೆನ್ನದೆ
ಬಿಡದೆಯ್ದುಗುಮೋಪನಲ್ಲಿಗಭಿಸಾರಿಕೆ ತಾಂ

ಲಕ್ಷ್ಯಂ

ವಿನಮಿತನಾದ ನಲ್ಲನುಮನೊಲ್ಲದೆ ಚೇಟಿಯರಾಗಳಕ್ಕ ನೀಂ
ಮುನಿಸನೆ ಮಾಣ್ಪುದೆಂದೊಡದುವಂ ಬಗೆಗೊಳ್ಳದೆ ಮಾಣ್ದು ಮತ್ತೆ ತಾಂ
ಮುನಿಸನೆ ತಾಳ್ದಿದೆಂ ಮುನಿಸೆ ತಾಪನಿಬಂಧನಮಾದುದಲ್ಲದಿಂ
ದೆನಗೆ ಲತಾಂತಮೀ ಮಲಯಜಂ ಸಸಿ ತುಂಬಿಗಳುಂತು ಕಾಯ್ಗುಮೇ (ಇವಳ್ ಅಭಿಸಂಧಿತೆ)       ೧೫೯

ಬಱಸಿಡಿಲೇೞ್ಗೆ ಸುತ್ತಿಱಿವ ಕೞ್ತಲೆ ಕಾರ್ಮುಗಿಲೊಡ್ಡು ಬಂದು ಬಂ
ದೆಱಗುವ ಬಲ್ಲಿತಪ್ಪ ಸರಿ ಕಣ್ಗಳೊಳುಳ್ಕುವ ಮಿಂಚು ಮಾಣದ
ೞ್ಕುಱೆ ಗಜಱುತ್ತುಮಿರ್ಪ ಘನಘರ್ಜನೆಯೆಂಬಿವು ಕಾತರತ್ವಮಂ
ಮಱೆಯಿಸಲೆಂದುಮಾಱವು ನಿಜೇಶ್ವರನಲ್ಲಿಗೆ ಪೋಪ ನಲ್ಲಳಾ   ೧೬೦ (ಇವಳ್ ಅಭಿಸಾರಿಕೆ)

ಸೂತ್ರಂ ೧೦೨

ವಿರಹೋತ್ಕಂಠಿತೆ ಪತಿ ತಡೆ
ದಿರವಿಂಗತಿದುಃಖಿಯಾದವಳ್ ತನ್ನಂ ಮಂ
ದಿರಮಂ ವಾಸಕಸಜ್ಜಿಕೆ
ಪುರುಷನ ಬರವಱಿದು ಸಿಂಗರಂಗೆಯಲಕ್ಕುಂ

ಲಕ್ಷ್ಯಂ

ಇನಿಯಂ ಬಾರದೆ ನಿಂದನೇಕೆ ಗಡ ಪೊೞ್ತುಂ ಪೋದುದಿಂತೆಂದು ಕಾ
ಮಿನಿ ತನ್ನಾಸೆ ನಿರಾಸೆಯಾಗೆ ಬಿಸುಸುಯ್ದೆೞ್ಚರ್ತು ಬೇಸತ್ತು ಕ
ಣ್ಬನಿಯಂ ಸೂಸಿ ಕನಲ್ದು ತೊಟ್ಟ ತೊಡವಂ ಬೀಸಾಡಿ ಪೂಮಾಲೆಯಂ
ಮುನಿಸಿಂದಂ ಪಱಿದಿಟ್ಟುಕಾಂತೆಸೊಡರಂ ನಿರ್ವೇದದಿಂ ಬೀಸಿದಳ್ (ಇವಳ್ ವಿರಹೋತ್ಕಂಠಿತೆ)  ೧೬೧

ಮನೆಯುಮನೆಯ್ದೆ ತನ್ನುಮನಲಂಕರಿಸಿರ್ದು ನಿಜ ಪ್ರಿಯೋಪಗೂ
ಹನ ದೃಢಗಾಢಕರ್ದಮವಿಲೇಪನಮೆಂದು ವಧೂಟಿಗಂಧಪಾ
ವನಮೃಗನಾಭಿಚರ್ಚನಮನೊಲ್ಲದೆ ಮಾಣ್ದಳದಂತೆ ಕಾಂತೆ ಕಾಂ
ತನೊಳೊಡಗೂಡದಿರ್ಪಳವಲೇಪನೆನಿಪ್ಪುದು ತಕ್ಕುದೆನ್ನಿರೇ          ೧೬೨ (ಇವಳ್ ವಾಸಕಸಜ್ಜಿಕೆ)

ಸೂತ್ರಂ ೧೦೩

ಬೆಸಸಿದೆಡೆಗೆಯ್ದಿ ಪಡೆಯದೆ
ರಸಿಕನನತಿ ದುಃಖೆ ವಿಪ್ರಲಬ್ಧೆಯೆ ನಲ್ಲಂ
ಸುಸಿಲಂಕಮನನ್ಯೆಯಿನಾಂ
ತೆಸೆದಿರೆ ಕಂಡೀರ್ಷ್ಯೆಗೆಯ್ವ ಪೆಣ್ ಖಂಡಿತೆ ತಾಂ

ಲಕ್ಷ್ಯಂ

ನೂತವಿಹಂಗ ಸಂಕುಳ ಸಮುನ್ನತನಾದಮನೆಯ್ದೆ ಕೇಳ್ದು ಕಾ
ಮಾತುರೆ ನಲ್ಲನಾಯೆಡೆಯೊಳಿರ್ದನೆಗೊತ್ತಿರದೆಯ್ದೆ ಬಂದು ಸಂ
ಕೇತನ ಮಾಧವೀಸದನದೊಳ್ ನಿಜಕಾಂತನ ರೂಹುಗಾಣದು
ತ್ಪಾತವಿಷಾದೆ ಬೆಚ್ಚನುಸಿರ್ದೊತ್ತಿದಳೊಯ್ಯನೆ ಕಣ್ಣ ನೀರ್ಗಳಂ    ೧೬೩ (ಇವಳ್ ವಿಪ್ರಲಬ್ಧೆ)

ಇನಿತಂ ನಂಬೆಲೆ ಮನ್ಮನೋರಮಣಿ ನಿನ್ನೆನ್ನಂದಮಂ ನೋೞ್ಪೊಡೀ
ತನು ಬೇಱಲ್ಲದೆ ಜೀವಮೊಂದೆ ತಮಗೆಂಬೀ ಮಾತೆ ಕೇಳೀಗಳೋ
ಪನೆ ಪೋ ನಿಶ್ಚಯಮಾದುದಲ್ಲದೊಡೆ ನಿನ್ನೀ ಮೆಯ್ಯೊಳೊಂದಿರ್ದ ನೂ
ತನರಕ್ತಾರ್ದ್ರನಖಕ್ಷತವ್ಯಥೆಗೆ ಪೇೞೆನ್ನೀ ಮನಂ ನೋಗುಮೇ        ೧೬೪ (ಇವಳ್ ಖಂಡಿತೆ)

ವ : ಮತ್ತಮಿಂತು ನೂಱಿಪ್ಪತ್ತೆಂಟು ತೆಱದ ಭೇದದ ನಾಯಿಕೆಯರಲ್ಲಿ ಪ್ರತ್ಯೇಕಮಾಗಿ ಮೂದೆಱನಕ್ಕುಮದೆಂತೆಂದೊಡೆ

ಸೂತ್ರಂ ೧೦೪

ಕ್ರಮದಿಂದೆ ವಚನಕೋಪ
ಪ್ರಮೋದದಿಂ ಪ್ರಕೃತಿಗುಣವಿಭೇದಿನಱಿಗು
ತ್ತಮ ನಾಯಿಕೆಯಂ ನೆಱೆ ಮ
ಧ್ಯಮ ನಾಯಿಕೆಯುಂ ಜಘನ್ಯತರ ನಾಯಿಕೆಯುಂ

ಸೂತ್ರಂ ೧೦೫

ಮೃದುವಾಕ್ಕೋಪಪ್ರಸಾದಂ ಸಹಜಮೆನಿಸಿದಾ ಕಾಂತೆ ತಾನುತ್ತಮಾಖ್ಯಾ
ಸ್ಪದೆ ರಕ್ತಾರಕ್ತಮಾಗಲ್ಮುಳಿಸು ವಿಷಮಸಂಧಾನಮಿನ್ನುಳ್ಳವಳ್ ಮಾ
ರ್ಗದೊಳಕ್ಕುಂ ಮಧ್ಯಮಾಖ್ಯೋನ್ನತೆಮುಳಿಸದೆ ಕಾಯ್ವಂದು ಕೂರ್ಪೊಂ
ದಿದಿರ್ಗೊಂಡಾತ್ಮೇಶನಂ ಮೇಳಿಸುವ ಚಪಳೆಕೇಸ್ ತಾಂ ಜಘನ್ಯಾಖ್ಯೆಯಲ್ತೇ ೧೬೫

ಲಕ್ಷ್ಯಂ

ಮನ್ಮನದಾಣ್ಮನೆ ನಿನ್ನಯ
ಸನ್ಮಾನಂ ಜಾಣ್ಮೆ ಜವ್ವನಂ ಸಿರಿ ವಿಭವಂ
ಮನ್ಮಥರೂಪತೆ ಸೊಬಗುಂ
ಸನ್ಮಾಧುರ್ಯತೆಯನೆನಗೆ ಪುಟ್ಟಿಪುವನಿಶಂ       ೧೬೫
(ಇದುತ್ತಮ ನಾಯಿಕಾ ವಚನಂ)

ಬಿನದಮದೆಂದನಂದಮೆರ್ದೆಗೊಳ್ವಪಚಾರಮದೆಂದಿನಂದಮಿಂ
ಪಿನ ನುಡಿಯೆಂದಿನಂದವೞಿಪೋಡದ ನೋಟಮದೆಂದಿನಂದಮೆಂ
ಬಿನಮಿರದಾಗಳುಂ ಬಿಡದ ಸುಯ್ಯೆಲರ್ಗೊಯ್ಯನೆ ಬಂದು ಮೆ
ಲ್ಲನೆ ಪೆಱಪಿಂಗುವಾಱಡಿಯೆ ದೂ ಱಿದುದೋಪನೊಳಾದ ಕೋಪಮಂ       ೧೬೬
(ಇದುತ್ತಮ ನಾಯಿಕಾ ಕೋಪಂ)

ಮುಳಿಸೇಂ ಕಾರಣಮೆನ್ನೊಳಿಲ್ಲ ಮತಿವಾಕ್ಕಾರುಣ್ಯದಿಂದೋಪ ನ
ಲ್ಲಳೆ ನೀಂ ನಿನ್ನಯೆ ತೊೞ್ತನಿಂತು ಬೆಸಸಲ್ ಪೋತಕ್ಕುದೇ ಮಾಣ್ಪುದೀ
ಕಳುಷಾಲಾಪಮನೆಂದು ಕಾಲ್ವಿಡಿದನಂ ಕೂರ್ತೆತ್ತಿ ಬಾಷ್ಪಾಂಬುಕ
ಜ್ಜಳಪಂಕಾಂಕಿತಸಾರ್ದ್ರವೃತ್ತಕುಚದೊಳ್ ತಳ್ತಪ್ಪಿದಳ್ ಕಾಂತನಂ  ೧೬೭
(ಇದುತ್ತಮ ನಾಯಿಕಾ ಪ್ರಸಾದಂ)

ಮನದೊಳ್ ಕಪಟಮನಱಿಯದೆ
ನಿನಗೊಲ್ದಳನೆನ್ನನಿಂತು ತೊೞ್ತೆಂಬವೊಲೊ
ಯ್ಕನೆ ನೆಗೞ್ದಪೆ ನಿನ್ನೀ ಬಾ
ಯ್ತನಮಂ ಮಾಣ್‌ಮಾಣದಂದು ಪೊಸಪರಿ ಮಾೞ್ಪೆಂ   ೧೬೮
(ಇದು ಮಧ್ಯಮ ನಾಯಿಕಾ ವಚನಂ)

ಅರುಣಿಮನೇತ್ರಮದ್ಭೃ ಕುಟಿಭಂಗಮತಿಸ್ಫುರಿತಾಧರಂ ನಿರಂ
ತರಮತಿಕಂಪಿತ ಸ್ತನತನೂದರಮುದ್ಗತ ಘರ್ಮಬಿಂದು ನಿ
ರ್ಭರ ಸರಸೋಕ್ತಿಯಾಕುಳತೆಯೊಳ್ ರಮಣಂಗೆ ಪೊದೞ್ದು ಚೆಲ್ವನಾ
ಳ್ದಿರೆ ಮುನಿದಳ್ ಮನಂಬುಗೆ ವಿನೂತನ ಸದ್ರಸಭಂಗಭೀತಿಯಿಂ     ೧೬೯
(ಇದು ಮಧ್ಯಮ ನಾಯಿಕಾ ಕೋಪಂ)

ನಡುಗೆ ಪಯೋಧರಂ ಪೊಡರೆ ಬಾಯ್ದೆಱೆ ಮಿಳ್ಳಿಸೆ ಪುರ್ವು ಕೆಂಪನಾ
ೞ್ದೊಡರಿಸೆ ಕಣ್ಗಳುಣ್ಮೆ ಬೆಮರಾದಮೆ ಕಂಡು ಭಯಾರ್ತಮೂರ್ತಿ ಕಾ
ಲ್ವಿಡಿಯೆ ಕೃತಾಪರಾಧಿ ನಿಜನೂಪುರದೊಳ್ ತೊಡರ್ದೊಳ್ಗುರುಳ್ಗಳಂ
ಬಿಡಿಸುವ ಕೈತದಿಂ ಮೆಱೆದಳಾ ವಿಭುಗಂ ವಧು ತನ್ನ ನಲ್ಮೆಯಂ    ೧೭೦
(ಇದು ಮಧ್ಯಮ ನಾಯಿಕಾ ಪ್ರಸಾದಂ)

ಸುಡು ಸುಡು ಪೋಗೆನೆಂಬೆನಿರಬಾರದು ಪೋದೊಡೆ ನೋಡೆನೆಂಬೆನೆಂ
ದೊಡೆ ನಯನಂಗಳಂತಿರವು ನೋಡಿದೊಡಂ ನಗದಿರ್ಪೆನೆಂಬೆನೆಂ
ದೊಡೆ ನಗೆ ನಿಲ್ಲದಾ ನಗೆಯೊಳಾನವನೊಳ್ ಪುದುವಾೞೆನೆಂಬೆನೆಂ
ದೊಡೆ ಬಗೆ ಮೇಲೆವಾಯ್ದೆಳಸಿ ತಾನೆ ಕಡಂಗುವುದೇವೆನಾಂ ಸಖೀ   ೧೭೧
(ಇದು ಜಘನ್ಯ ನಾಯಿಕಾ ವಚನಂ)

ನುಡಿದೊಡೆ ಚುನ್ನಮಂ ನುಡಿದಳೆಂದಪೆ ನಾಣಿಲಿ ಮಾಣಲಾಗದೇ
ತುಡುಗುಣಿಗೆಯ್ತಮಂ ನಿನಗೆ ಮಾಣ್ದೊಡೆ ಸತ್ತಪೆ ನಿನ್ನನೆಂತು ಸೈ
ತಿಡುವೆನೊ ಸಂದ ಱೋಡಗನೆ ಎಂದು ಕರಂ ಮುಳಿಸಿಂ ಕನಲ್ತು ಕ
ಣ್ಕಿಡೆ ಕಡುಕೆಯ್ದು ಸೊಪ್ಪುಸೊವಡಪ್ಪಿನೆಗಂ ಬಡಿದಳ್ ನಿಜೇಶನಂ ೧೭೨
(ಇದು ಜಘನ್ಯ ನಾಯಿಕಾ ಕೋಪಂ)

ಮುಳಿದಿರೆ ನಲ್ಲನೋಪಳ ಪದಾಂಬುರುಹಕ್ಕೆ ವಿನಮ್ರನಾಗೆ ಚಾ
ಪಳ ಮೊಱೆಯಲ್ತು ನೀನೆನಗೆ ಮುಟ್ಟದೆ ಪೋಗೆನೆ ಪೋಗೆ ಕಂಡು ಸಂ
ಚಳಮತಿ ನಿಂದು ಸೈರಿಸದೆ ಬೆಂಬೞಿಯಿಂ ಪರಿದೆಯ್ದೆ ಮೇಲುದಂ
ಸೆಳೆದೊಡೆ ನಲ್ಲನೊಲ್ಲದಿರೆ ಕಾಲ್ವಿಡಿದೊಯ್ದಳತಿಪ್ರಮೋದದಿಂ  ೧೭೩
(ಇದು ಜಘನ್ಯ ನಾಯಿಕಾ ಪ್ರಸಾದಂ)

ಸೂತ್ರಂ ೧೦೬

ನೀನಱಿದೆಣಿಸುವೊಡಾದುದು
ಮೂನೂಱೆಂಬತ್ತುನಾಲ್ಕು ಭೇದಂ ಪೆಸರ್ವೆ
ತ್ತಾ ನಾಯಿಕಾವಿಕಲ್ಪಂ
ಭೂನುತ ಕವಿ ನಿಕರ ರಚಿತ ಕಾವ್ಯಾದಿಗಳೊಳ್

ವ : ಮತ್ತಮಿದೊಂದು ಮತದಿನಿಂತಾದುದವಱ ಗುಣಗಣಮನೋವೃತ್ತಿ ಚೇಷ್ಟಾದಿಗಳಿಂ ನಾಯಿಕಾಭೇದಮಗಣಿತಮವರ್ಗೆ

ಸೂತ್ರಂ ೧೦೭

ನುತಸಖಿ ಲಿಂಗಿನಿ ಧಾತ್ರಿಕೆ
ಪ್ರತಿವೇಶಿನಿ ದಾಸಿ ಚಾರು ಶಿಲ್ಪಿನಿ ಕಾಂ
ತೆ ತರದೆ ದೂತಿಯರಕ್ಕುಂ
ಸತತಂ ಸ್ವಾಧೀನೆಯಾದಿಗಿವರೆ ಸಹಾಯರ್

ವ : ಇದಕ್ಕೆ ಸಮ್ಮತಿವಚನಂ

ಶ್ಲೋಕ :ದೂತೀ ದಾಸೀ ಸಖೀ ಚೈವ ಧಾತ್ರೇಯೀ ಪ್ರಾತಿವೇಶಿನೀ
ಯೋಗಿನೀ ಶಿಲ್ಪಿನೀ ಸಾ ಚ ಸಹಾಯಾಷ್ಟಪ್ರಕೀರ್ತಿತಾಃ

ಸೂತ್ರಂ ೧೦೮

ಇವರಂ ಪ್ರಿಯನಿರ್ದೆಡೆಗಾ
ಯುವತಿಯರಟ್ಟುವರೊಱಲ್ದು ಕಾರ್ಯನಿಮಿತ್ತಂ
ಇವರಂ ಕಳುಪದೆ ಸಲೆ ತಾ
ನೆ ವಲ್ಲಭನ ಬೞಿಗೆ ಪೋಪಳಭಿಸಾರಿಕೆ ದಲ್

ವ : ಇಂತಪ್ಪ ನಾಯಿಕೆಯರ್ಗೆ ಸಖಿಯರೇೞು ಮಂದಿಯವರವರ ಗುಣಬುದ್ಧಿ ಸಂಧಾನ ಕೌಶಲ್ಯ ನುಡಿಗಳನಂತಮದಱಿಂ ಸಖ ಸಖೀ ವಚನಂಗಳಖಿಳ ಕಾರ್ಯದೊಳ್ ಸುಲಭಂ

ಲಕ್ಷ್ಯಂ

ಎನಗೇಕಾದುದೊ ಬೆಂದರೂಪೆಸೆವ ರೂಪಿಂಗೇಕೆ ಪಾೞೂದ ಜ
ವ್ವನಮೀ ಜವ್ವನದಲ್ಲಿ ಕೂರದನ ಬೇಟಂ ಬೇಟದೊಳ್ ಕಾಯ್ವ ಚಂ
ದ್ರನ ಕಾಟಂ ಕೞಿವಂದಮಾವುದೆನಗಿನ್ನೇನೆಂದೊಡಾನೆಂದೆನಂ
ಗನೆ ನೀಂ ಗರ್ವಿಸಿದಪ್ಪೆಯೆಂದು ಬಗೆದೋಱಂ ನಲ್ಲನೇನೊಲ್ಲನೇ  ೧೭೪

ವ : ಇಂತಱಿವುದು

ಇದು ಶತೇಂದ್ರ ಮುನೀಂದ್ರವಂದಿತಾರ್ಹತ್ಪರಮೇಶ್ವರ ಪಾದಾರವಿಂದ ಮಂದ
ಮಕರಂದಾನಂದಿತ ಭೃಂಗಾಯಮಾನ ಕವಿಸಾಳ್ವ ವಿರಚಿತಮಪ್ಪ
ರಸರತ್ನಾಕರದೊಳ್ ನಾಯಕ ನಾಯಿಕಾ ವಿವರಣಂ

ತೃತೀಯ ಪ್ರಕರಣಂ