ದ್ವಿತೀಯ ಪ್ರಕರಣಂ

ಸೂತ್ರಂ ೪೪

ಮಿಗೆ ಹಾಸಮೆ ಹಾಸ್ಯರಸಂ
ನೆಗೞ್ಗುಂ ಪರಿಹಾಸಕಾದಿಯಾಲಂಬನಮು
ರ್ವೊಗೆದವರ ವಿಕೃತ ವೇಷಾ
ದಿಗಳುದ್ದೀಪನವಿಭಾವಮಪ್ಪುದೆನಿಪ್ಪರ್

ಸೂತ್ರಂ ೪೫

ಅನುಭಾವಂ ತಿಳಿವೊಡದ
ರ್ಕನುಭಾವಕರಕ್ಷಿ ವಿಕಸನಾದಿ ವಿವರ್ಣ
ಸ್ವನಾದಿ ಸಾತ್ವಿಕಭಾವಂ
ಘನಮತಿ ಹರ್ಷಾದಿ ನೆಗೞ್ದ ಸಂಚಾರಿ ವಲಂ

ವೃತ್ತಿ : ಪರಿಹಾಸಕ ದೇಶ ಕಾಲ ವಯೋ ವರ್ಣ ವಿಪರೀತಾದಿಯಾಲಂಬನ ವಿಭಾವಂ, ಪರಿಹಾಸಕಾದಿಗಳ ಕೇಶಬಂಧನಮಸದ್ಭೂಷಣ ಪ್ರಲಾಪ ನರ್ತನ ಮಾನ್ಯ ಗತ್ಯಾದ್ಯನು ಕರಮಿಮಾದಿಯಾಗಿ ಯುದ್ದೀಪನವಿಭಾವಂ ನಾಸೌಷ್ಠ ಕಪೋಲಸ್ಪಂದನ ದೃಷ್ಟಿ ವ್ಯಾಕೋಚ ನಾಕುಂಚನಮುಖರಾಗಪಾರ್ಶ್ವಗ್ರಹಣಾದಿಯನುಭಾವಂ ಸ್ವೇದಾಶ್ರು ವಿವರ್ಣಸ್ವರಭೇದಾದಿ ಸಾತ್ವಿಕಭಾವಂ ನಿದ್ರಾವಹಿತ್ಥತಂದ್ರೀತ್ರಪಾಲಾಸ್ಯದಿ ವ್ಯಭಿಚಾರಿ ಭಾವಂ. ಇವಱಿಂ ಹಾಸ್ಯ ಸ್ಥಾಯಿ ಸ್ವಾದ್ಯಮಾನಮಾಗೆ ಹಾಸ್ಯರಸಂ.

ಸೂತ್ರಂ ೪೬

ಕ್ರಮದಿಂದನುಭಾವಮದು
ತ್ತಮ ಮಧ್ಯಮಯುತ ಜಘನ್ಯದಿಂ ಮೂದೆಱನು
ತ್ತಮಮಿರ್ತೆಱಂ ಸ್ಮಿತಂ ಹಸಿ
ತಮೆಂದು ಚತುರಾದ ಹಾಸ್ಯರಸಕಱಿವವರಿಂ

ಸೂತ್ರ ೪೭

ಕೃತಗಂಡವಿಕಾಸಂ ತಾಂ
ಸ್ಮಿತ ಮುಗುಳ್ನಗೆಯನುಳ್ಳದದು ಹಸಿತಂ ರಾ
ಜಿತ ವಿಹಸಿತಮುಪಹಸಿತ
ದ್ವಿತಯಂ ಮಧ್ಯಮಮೆನಿಪ್ಪ ಪೆಸರನುಭಾವಂ

ಸೂತ್ರ ೪೮

ಮೃದುರವಮೆ ವಿಹಸಿತಂ ಕೊರ
ಲದಿರ್ವುದೆಯುಪಹಸಿತಮುರುಶಿರಃಕಂಪಾಶ್ರು
ಪ್ರದಮಪಹಸಿತಂ ತನುಚಲಿ
ಪುದುಮತಿಹಸಿತಂ ಜಘನ್ಯವೀ ಪೇೞ್ದೆರಡುಂ

ಲಕ್ಷ್ಯಂ

ಶ್ರೀ ತನ್ನಂದದ ರೂಪು ಕೌಸ್ತುಭದೊಳಚ್ಚೊತ್ತಿರ್ದವೋಲ್ ತೋಱೆ ಕಂ
ಡೇತರ್ಕೀಕೆ ಮದೀಯವಾಸದೆಡೆಗೈತಂದಿರ್ಪಳೆಂದೀರ್ಷೆಯಿಂ
ದಾ ತಾಮ್ರಾಕ್ಷಿ ನಿರೀಕ್ಷಿಸುತ್ತುಮಿರೆ ತನ್ಮುಗ್ಧತ್ವಮಂ ಕಂಡು ಸಂ
ಜಾತಾಂ ತಸ್ಸ್ಮಿತನಾದ ಕೃಷ್ಣನೆಮಗೀಗಾನಂದಸಂದೋಹಮಂ      ೯೩ (ಇದು ಸ್ಮಿತಂ)

ಚದುರನ ಜಾಣ್ಣುಡಿಗಿನಿಯೊಳ್
ಮುದಮಂ ತಲೆದಿಂಪನೀವ ನಸುನಗೆಗುಡೆ ಪೋ
ಲ್ತುದು ಚೆಲ್ವಿಂ ಬಾಯ್ದಾಳಿಂ
ಬದ ಪಣ್ಣರೆಬಿರಿದು ಬಿತ್ತು ತೋಱುವ ತೆಱದಿಂ ೯೪ (ಇದು ಹಸಿತಂ)

ಗಾವಿಲನುಱೆ ಬಿಣ್ಪೊಱೆವೊ
ತ್ತಾ ವಧುವಂ ನೋಡುತಲ್ಲಿ ಬೆಳ್ಳಾಗಿರೆ ಕಂ
ಡಾ ವಧು ನಗೆ ನಗುವಂತಾ
ಯ್ತಾ ವೀಣಾಮಧುರನಾದಮಂ ಮೃದುನಾದಂ ೯೫ (ಇದು ವಿಹಸಿತಂ)

ಬಿಂಗಿಯ ಕುಣಿತಮನೀಕ್ಷಿಸಿ
ಯಂಗನೆ ನಗೆಯುಗುಳ್ವ ತಚ್ಛಿರಃಕಂಪದೆ ಕಂ
ಪಿಂಗೆಳಸಿ ಮುಡಿಗೆ ಮುಸುಱಿದ
ಭೃಂಗಂಗಳ್ ನೆಗೆದ ಪೀಲಿಗೊಡೆಯನೆ ತೋರ್ಕುಂ           ೯೬ (ಇದು ಉಪಹಸಿತಂ)

ಕಿವಿಯಂ ಮಂಟಸಿ ಮಂಟವಲ್ಗಿಱಿದು ಕಣ್ಣಂ ಬಿಟ್ಟು ವಕ್ರಾಂಗಿ ರಾ
ಜವಿನೋದಂ ಬಿಱುನಕ್ಕು ನಕ್ಕು ಕುಕಿಲುತ್ತುಂ ಜರ್ಗನಾಡುತ್ತೆ ತೋ
ರ್ಪ ವಿಕಾರಂ ಸಭೆಗಾಗಳೇಂ ಪಡೆದುದೋ ವಕ್ತ್ರಪ್ರಕಾಶೋದಿತಾ
ರವಮಂ ಕಂಠದೆ ಕಂಪನಾಶ್ರುಜಲಮಂ ವಿದ್ವಜ್ಜ ನಾಧಾರನಾ        ೯೭ (ಇದು ಅಪಹಸಿತಂ)

ಕುಳ್ಳಿದ್ದು ಮಿಳಿರ್ವ ಮೆಳೆಯೊಳ್
ಪಳ್ಳದ ಕೇದಗೆಗೆ ಪಾಯ್ದು ಪತ್ತಿದ ಕೆಯ್ಯಂ
ಮುಳ್ಳುರ್ಚೆ ತೆಱೆದು ಪಲ್ಲಂ
ಘೊಳ್ಳೆನೆ ನಗಿಸಿದುದು ಕಟಕಮಂ ಮರ್ಕಟಕಂ    ೯೮ (ಇದು ಅತಿಹಸಿತಂ)

ಸೂತ್ರಂ ೪೯

ಇಂತಾದನುಭಾವಂ ದ್ವಿವಿ
ಧಂ ತನ್ನಿರವಿಂಗೆ ತಾನೆ ನಗೆ ಪೆಱೆರಂ ಕಂ
ಡಂತು ನಗೆಮಾರ್ಗದಿಂ ಪೆಸ
ರಂತಾತ್ಮಸ್ಥಂ ಪರಸ್ಥಮೆಂದಿರ್ತೆಱದಿಂ

ಲಕ್ಷ್ಯಂ

ತೊಟ್ಟಹಿಯನಿಟ್ಟು ಬೂದಿಯ
ನುಟ್ಟ ಜಿನವನೀಶನೆಯ್ದೆತನ್ನಿರವಂ ತಾಂ
ದಿಟ್ಟಿಸಿ ಮನದೊಳೆ ನಕ್ಕಂ
ಬೆಟ್ಟದ ಮಗಳಕ್ಷಿಗಿನಿದನೀಗುಮೆನುತ್ತುಂ         ೯೯

ವ : ಇದು ಆತ್ಮಸ್ಥಂ, ಪಿಂತೆ ಪೇೞ್ದುವು ಪರಸ್ಥಂ, ಇಂತು ಹಾಸ್ಯರಸಂ ಪನ್ನೆರೞ್ತೆಱಂ

ಸೂತ್ರಂ ೫೦

ಕರುಣಂ ಶೋಕದಿನಕ್ಕುಂ
ಮರಣಂ ಗತನಾದ ಬಂಧುವಾಲಂಬನಮಿ
ನ್ನುರುಬಂಧ್ವಾಕ್ರಂದನಮುಖ
ಭರದುದ್ದೀಪನ ವಿಭಾವಮಾ ರಸಕಕ್ಕುಂ

ಸೂತ್ರಂ ೫೧

ರುದಿತ ವಿಲಾಪ ಕ್ಲೇಶಾ
ದಿ ದಲನುಭಾವಂ ವಿವರ್ಣವಶ್ರುಸ್ತಂಭಾ
ದಿ ದಲಾ ಸಾತ್ವಿಕಮಾಲ
ಸ್ಯದೀನತೋನ್ಮಾದಮಾದಿ ಸಂಚರಿಯೆ ತಾಂ

ವೃತ್ತಿ : ಇಷ್ಟವಿಯೋಗಾನಿಷ್ಟಸಂಯೋಗಾದ್ಯಾಲಂಬನವಿಭಾವಂ, ಬಂಧುಗಳೞ್ಕೆ ಮೊದಲಾದು ವುದ್ದೀಪನವಿಭಾವಂ ದೈವೋಪಾಲಂಭ ನಿಶ್ವಾಸತನುತ್ವ ಮುಖಶೋಷಣ ಭೂಲುಠನ ಮೂರ್ಛಾದಿಯನುಭಾವಂ ಸ್ವರ ಭೇದಾಶ್ರು ಸ್ತಂಭವಿವರ್ಣ ಕಂಪ ಪ್ರಳಯಾದಿ ಸಾತ್ವಿಕಭಾವಂ ದುಃಖಾಮಯ ನಿರ್ವೇದ ಗ್ಲಾನಿ ಶಂಕೌತ್ಸುಕ್ಯ ಮೋಹ ಶ್ರಮ ತ್ರಾಸ ವಿಷಾದ ದೈನ್ಯಾಮಯ ಜಡತೋನ್ಮಾದಾಪಸ್ಮಾರಾಲಸ್ಯ ಮರಣ ಪ್ರಭೃತಿ ವ್ಯಭಿಚಾರಿ ಭಾವಂ ಇವಱಿಂ ಶೋಕಸ್ಥಾಯಿ ಚರ್ವ್ಯಮಾಣಮಾಗೆ ಕರುಣರಸಂ

ಲಕ್ಷ್ಯಂ

ದೆಸೆಗಳ್ ಮಾರ್ದನಿವೋಗೆ ಕೇಳ್ದರೆರ್ದೆ ಬಾಳಂ ಬೀಸಿದಂತಾಗೆ ತೆ
ಳ್ವಸಿಱಂ ತೊಪ್ಪನೆ ಮೋದಿ ಬಾಯೞಿದು ಹಾ ಎಂದೞ್ತು ಬಾಷ್ಪಾಂಬು ಪೂ
ರಿಸೆ ಪುಯ್ಯಲ್ಚುವ ಸೀತೆಯಂ ಹಹಹ ನಿಸ್ತ್ರಿಂಶಂ ದಶಾಸ್ಯ ವಿಗು
ರ್ವಿಸಿ ನೋಡುತ್ತುಮದೆಂತು ನಿಷ್ಕರುಣದಿಂದುಯ್ಯಲ್ ಮನಂದಂದನೋ     ೧೦೦

ಬಳಯಿಸೆ ಬಾಸುಱಂ ಬಸಿಱೊಳೆಯ್ದೆ ಕರಾಂಗುಲಿಗಳ್ ಕಪೋಲದೊಳ್
ಬಳಯಿಸೆ ಬಾನಲಂ ಸುರಿವ ಬಾಷ್ಪಜಲಂ ಕರುಣೋತ್ಥಹಾರವಂ
ಬಳಯಿಸೆ ಬಾಯಬತ್ತುಗೆಯನಿಂತೆರ್ದೆಗೆಟ್ಟೞುತುಂ ಮೃಣಾಳ ಕೋ
ಮಳತನುಬಿೞ್ದಳಂದು ಜಿತಸೇನೆ ನೃಪಾಲ ಪದಾಬ್ಜಮೂಲದೊಳ್ ೧೦೧

ಊಡಿದೆನೋದಲಿತ್ತೆನೊಡಕಲ್ವುದು ಮಣ್ಣನ ಕೂಸುದಂದೆನಾಂ
ಬೇಡೆನೆ ಮೀಱಿ ಕಳ್ಳರೊಡನಾಡಿಯೆ ಪೆತ್ತ ಬಸಿರ್ಗೆ ಸಂತಸಂ
ಮಾಡಿದೆಯೆಂದಿದೇಂ ಮಗನೆ ನುಣ್ಣನೆ ನುಣ್ಮೊಗದಲ್ಲಿ ಮೀಸೆಗಳ್
ಮೂಡದ ಮುನ್ನ ನಿನ್ನ ಪೆಗಲೊಳ್ ಪೊಸಶೂಲಮಿದೇಕೆ ಮೂಡಿತೋ        ೧೦೨ (ಇವು ಮೂಱುಂ ಕರುಣರಸಂ)

ಸೂತ್ರಂ ೫೨

ಪ್ರಭವಿಪುದುತ್ಸಾಹ ಸ್ಥಾ
ಯಿಭಾವದಿಂ ವೀರರಸಮೆ ಮೂದೆಱನಕ್ಕುಂ
ಅಭಿಗತ ದಾನಾದಿ ಜಯ
ಪ್ರಭಾವದಿಂ ಸುಕವಿನಿಕರಮಾರ್ಗಕ್ರಮದೊಳ್

ಸೂತ್ರಂ ೫೩

ನುತುಪಾತ್ರ ಶತ್ರುದೀನರ್
ವಿತತಾಲಂಬನ ವಿಭಾವಮುಕ್ಕುಂ ದಾನ
ಸ್ತುತಿ ರಣಭೇರಿಧ್ವನಿ ದೀ
ನತೋಕ್ತಿಯುದ್ದೀಪನಂ ವಿಭಾವಮದಕ್ಕುಂ

ಸೂತ್ರಂ ೫೪

ವಸುಶಸ್ತ್ರಸಂಗ್ರಹತ್ವಂ
ಪ್ರಸಾದಮನುಭಾವಮೆಸೆವ ಪುಳಕಾದಿಯೆ ಭಾ
ವಿಸೆ ಸಾತ್ವಿಕಭಾವಂ ಹ
ರ್ಷಸೋಗ್ರಧೃತ್ಯಾದಿ ನೆಗೞ್ದ ಸಂಚಾರಿ ವಲಂ

ವೃತ್ತಿ : ಪಾತ್ರಪ್ರತಿನಾಯಕದೀನಾದಿಯಾಲಂಬನವಿಭಾವಂ ದಾನಸ್ತೋತ್ರ ಫಲ ವ್ಯಾವರ್ಣನ ತತ್ಪಾತ್ರವ್ರತಶೀಲಾದಿ ಗುಣಾದಿಯುಂ ರಣಭೇರೀಧ್ವನಿತದ್ರಿಪು ನಯನವಿವೇಕ ಬಲಶಕ್ತಿ ಪ್ರಧಾನಪ್ರಭಾವಪ್ರತಾಪ ವಿಕ್ರಮಾಧಿಕ್ಷೇಪಾದಿಯುಂ ದೀನತೋಕ್ತ್ಯಾದಿಯುಮುದ್ದೀ ಪನವಿಭಾವಂ ಕ್ರಮದಿಂ ವಿತ್ತಸಂಗ್ರಹತ್ವ ತ್ರಿಕರಣ ಶುದ್ಧತ್ವ ವಿವೇಕತ್ಯಾಗಾದಿಯುಂ ಶಸ್ತ್ರಸಾಮಗ್ರೀ ವೀರಾಲಂಕಾರ ಸ್ಥೈರ್ಯ ಧೈರ್ಯ ಗಾಂಭೀರ್ಯ ವಿಶಾರದತ್ವಾದಿಯುಂ ಕೃಪಾಭಯವಚನಪ್ರಸಾದಾದಿಯುಮನುಭಾವಂ ಅಶ್ರುಪುಲಕಾದಿಯೆ ಸಾತ್ವಿಕಭಾವಂ ಹರ್ಷಮತಿಶ್ರುತಿಗರ್ವಾಮರ್ಷೋಗ್ರಧೃತ್ಯಾದಿಗಳ್ ವ್ಯಭಿಚಾರಿಭಾವಂ ಇವಱಿನುತ್ಸಾಹ ಸ್ಥಾಯಿ ಭಾವಂ ಚರ್ವ್ಯಮಾಣಮಾಗೆ ವೀರರಸಂ

ಲಕ್ಷ್ಯಂ

ಉದಯಾಸ್ತೋನ್ನತಶೈಲಸೇತುಹಿಮವತ್ಕುತ್ಕೀಲಪರ್ಯಂತ ಸಂ
ಪದೆಯಂ ವಾರ್ಧಿತರತ್ತರಂಗನಿನದತ್ಕಾಂಚೀಕಲಾಪಾಂಚಿತಾ
ಸ್ಪದೆಯಂ ಸಾಧಿಸಿ ಕಬ್ಬಿಗಂಗೆ ನೆಲನಂ ನಿರ್ವ್ಯಾಜದಿಂದಂ ನಿಮಿ
ರ್ಚಿದ ಗೆಲ್ಲಂ ಭುವನೈಕರಾಮ ಮಹಿಪಂಗಕ್ಕುಂ ಪೆಱರ್ಗಕ್ಕುಮೆ (ಇದು ದಾನವೀರಂ)  ೧೦೩

ಘನದೋರ್ದರ್ಪನಜೇಯನುಗ್ರತರ ನಾನಾ ಸೈನ್ಯಸಂಸೇವ್ಯನೆ
ತ್ತಿ ನರೇಶಂ ತವೆ ಮುತ್ತೆ ಶತ್ರುಪುರಮಂ ತತ್ಕಾಂತೆಯರ್ ಘೊಳ್ಳೆನು
ತ್ತೆನಸುಂ ಬಂದೆರಡೋಲೆಯೆಮ್ಮ ಕಿವಿಯೊಳ್ ತೞ್ತಿರ್ಪುದಂ ಮಾೞ್ಪುದೆಂ
ದೆನೆ ಕಾರುಣ್ಯದೆ ಕಾಯ್ದನಂತನಿಬರಂ ತದ್ದೇಶಮಂ ಕೋಶಮಂ     ೧೦೪ (ಇದು ದಯಾವೀರಂ)

ಕ್ಷಿತಿಯೊಳರಾತಿಭೂಪತಿಗಳಂ ತವೆಕೊಂದು ಸಮಂತು ವಿಪ್ರಸಂ
ತತಿಗಖಿಳಾವ ನೀತಳಮನಿತ್ತು ನೆಗೞ್ಚಿದನಲ್ತೆ ವಿಕ್ರಮೋ
ನ್ನತಿಯನದೊಂದು ದಾನಗುಣದುನ್ನತಿಯಂ ಭುವನಕ್ಕೆ ಭಸ್ಮಸಾ
ತ್ಕೃತರಿಪುಪಾತ್ರಸಾತ್ಕೃತಜಗದ್ವಳಯಂ ಜಮದಗ್ನಿ ನಂದನಂ        ೧೦೫ (ಇದು ಉಭಯವೀರಂ)

ಸೂತ್ರಂ ೫೫

ಪೊರೆಗುಂ ಕ್ರೋಧವೆ ರೌದ್ರಂ
ಸ್ಫುರದಾಲಂಬನಮೆ ಮತ್ಸರ ದ್ವೇಷಂ ನಿ
ಷ್ಠುರವಚನ ಚೇಷ್ಟೆಗಳ್ ತಾ
ಮಿರದುದ್ದೀಪನವಿಭಾವಮಾರಸಕಕ್ಕುಂ

ಸೂತ್ರಂ ೫೬

ಭ್ರುಕುಟಿನಯನಾರುಣಾದಿ
ಪ್ರಕಟನಮನುಭಾವಮಾವಿವರ್ಣ ಸ್ವೇದಾ
ದಿಕಮಕ್ಕುಂ ಸಾತ್ವಿಕಮೀ
ರ್ಷ್ಯೆ ಕೋಪಮುಗ್ರಾದಿ ನೆಗೞ್ದ ಸಂಚಾರಿ ವಲಂ

ವೃತ್ತಿ: ಆಲಂಬನವಿಭಾವಂ ಮಾತ್ಸರ್ಯ ದ್ವೇಷಮೆಂದಿರ್ತ್ತೆಱಂ ದಾರಾಪ ಹಾರದೇಶ ಚೌರ್ಯಾಭಿಜನಕರ್ಮನಿಂದೆ ಅಸತ್ಯವಚನ ಸತ್ಯಾಧಿಕ್ಷೇಪೋಪಹಾಸ ಸತ್ಪಾರ್ಷ್ವದ್ರೋಹಂಗ ಳುದ್ದೀಪನವಿಭಾವಂಗಳ್ ಭ್ರುಕುಟಿನಯನರಾಗದಂತೌಷ್ಠಪೀಡನ ಗಂಡಸ್ಫುರಣ ಹಸ್ತಾಗ್ರ ನಿಷ್ಪೇಷಣ ತಾಡನ ಪಾತನ ಪೀಡನಪ್ರಹರಣಾಪಹರಣ ಶಸ್ತ್ರಸಂಪಾತರುದಿತಾ ಕರ್ಷಣಚ್ಛೇದನಾದಿಯನುಭಾವಂ ಉಗ್ರಾವೇಗೋನ್ಮಾದ ವಿಭೋಧಾಮರ್ಷ ಚಾಪ ಲ್ಯಾದಿ ವ್ಯಭಿಚಾರಿಭಾವಂ ಇವಱಿಂ ಕ್ರೋಧಂ ಚರ್ವ್ಯಮಾಣ ಮಾಗೆ ರೌದ್ರರಸಂ

ಲಕ್ಷ್ಯಂ

ಕುಡಿವೆಂ ದುಶ್ಯಾಸನೋರಸ್ಸ್ಥಲಮನಗಲೆ ಪೋೞ್ದೂರ್ದು ಕೆನ್ನೆತ್ತರಂ ಪೋ
ಗುಡಿವೆಂ ಪಿಂಗಾಕ್ಷನೂರುದ್ವಯಮನುರು ಗದಾಘಾತದಿಂ ನುಚ್ಚುನೂಱಾ
ಗೊಡೆವೆಂ ತದ್ರತ್ನರಶ್ಮಿಪ್ರಕಟಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವ ನಿತುಮಂ ನಂಬುಪಂಕೇಜವಕ್ತ್ರೇ          ೧೦೬ (ಇದು ಮಾತ್ಸರ್ಯ ರೌದ್ರಂ)

ಸ್ಫುಟಕೋಪಾಟೋಪನೇತ್ರಸ್ಫುರದರುಣತರತ್ತಾರ ವಿಸ್ತಾರ ನಾಸಾ
ಪುಟನಾದಷ್ಟೌಷ್ಠನುದ್ಯದ್ ಭ್ರುಕುಟಿಕುಟಿಲಭಾಳಸ್ಥಳಂ ಸ್ವೇದ ಬಿಂದೂ
ತ್ಕಟಗಂಡಸ್ಥಾನನುಜ್ಝೃಂಭಿತಭುಜಶಿಖರಂ ಗದ್ಗದೀಭೂತನಾದೋ
ತ್ಕಟಕಂಠಂ ಭೈರವಾಡೇಂಬರಮನಿ ೞಿಪಿದಂ ಯುದ್ಧದೊಳ್ ಸಾರ್ವಭೌಮಂ            ೧೦೭

ತಳಮಂ ಮಾಱುದ್ದಿ ಧಾತ್ರೀತಳದೊಳರಿಮಹೀನಾಥ ವಿಖ್ಯಾತ ಚಾತು
ರ್ಬಳಮಂ ಬಂದೈಸುವಂ ಕಂಗಳೊಳೆ ಕಲುಷದಿಂ ಪೀರ್ವವೋಲ್ ನೋಡಿ ಬಾಹಾ
ಬಳದಿಂ ಕಾಲಾಳನಾಳಿಂ ಸದೆದು ತುರುಗಮಂ ತತ್ತುರಂಗೌಘದಿಂ ಪೊ
ಯ್ದಳವಿಂದಾ ದಂತಿಯಂ ದಂತಿಯೊಳೆ ಬಡಿದು ಪೇಸೇೞೆ
ಕೊಂದಂ ಮುಕುಂದಂ         ೧೦೮

ಮದಗಜವೆರಡಱ ಬಾಲದ
ಮೊದಲಂ ಪಿಡಿದೆತ್ತಿ ಪೊಯ್ದು ನುರ್ಗೊತ್ತಿದೊಡಾ
ಸ್ಯದಿನುಗುವ ರಕ್ತಮುರಿಯೆನೆ
ತಿದಿಯೊತ್ತುವ ಕಮ್ಮಱಂಬೊಲಿರ್ದಂ ಭೀಮಂ (ಇದು ರೌದ್ರಂ)       ೧೦೯

ಸೂತ್ರಂ ೫೭

ಕೃತವಿಸ್ಮಯಜಾತಮದ
ದ್ಭುತಮಾಲಂಬನವಿಭಾವಮತಿಚಿತ್ರ ಚಮ
ತ್ಕೃತಿ ತದ್ವದಭಿನಯಸ್ತೋ
ತ್ರತೆಯುದ್ದೀಪನವಿಭಾವಮಾರಸಕಕ್ಕುಂ

ಸೂತ್ರಂ ೫೮

ಅಕ್ಷಿಮುಖವಿಕಸನಾದಿಯೆ
ಲಕ್ಷಿಪೊಡನುಭಾವಮೆಯ್ದೆ ಪುಳಕಾದಿಯೆ ತಾ
ನೀಕ್ಷಿಸಿ ಸಾತ್ವಿಕಮುರುಹ
ರ್ಷಾಕ್ಷಮಸಂವೇಗಮಾದಿಸಂಚಾರಿ ವಲಂ

ವೃತ್ತಿ : ಅತಿಚಿತ್ರಾದಿ ದಿವ್ಯದರ್ಶನೇಪ್ಸಿತಮನೋರಥಾವಾಪ್ತಿ ದೇವ ಕುಲಾದಿ ಗಮನ ಮುಪವನ ಸಭಾಮಾಯಾ ವಿಮಾನೇಂದ್ರ ಜಾಲಾತಿಶಯ ಚಿತ್ರ ಕರ್ಮಾದಿ ಯಾಲಂಬನ ವಿಭಾವಂ ತದ್ವದಭಿನಯಸ್ತೋತ್ರವ್ಯಾವರ್ಣನ ಚಿಂತಾದಿ ಯುದ್ದೀಪನ ವಿಭಾವಂ ನಯನವಿಸ್ತಾರಾ ನಿಮಿಷಪ್ರೇಕ್ಷಣ ಸಾಧುವಾದ ದೇಹಾಂಗುಲಿಭ್ರಮಣಾದಿ ಯನುಭಾವಂ. ರೋಮಾಂಚಾಶ್ರುಸ್ವೇದಾದಿ ಸಾತ್ವಿಕಭಾವಂ ಹರ್ಷಾವೇಗಜಡತಾದಿ ವ್ಯಭಿಚಾರಿ ಭಾವಮಿವಱಿಂ ವಿಸ್ಮಯಸ್ಥಾಯಿಯನುಭೂಯ ಮಾನಮೊದೊಡದ್ಭುತರಸಂ.

ಲಕ್ಷ್ಯಂ

ಮನಮುಂ ದಿಟ್ಟಿಯುಮೆಯ್ದದಂಬುನಿಧಿಯಂ ಮುಂ ದಾಂಟಿದಂ ದಾಂಟಿ ತ
ದ್ವನಪಾಲರ್ಕಳನಿಕ್ಕಿ ಕೂಡೆ ಬನಮಂ ಕಿೞ್ತೆತ್ತಿದಂ ಕಿೞ್ತುಮೊ
ರ್ವನೆ ಪಾೞೇೞ್ವಿನಮೊಂದೆ ಕೊಳ್ಳಿಯೊಳೆ ಸುಟ್ಟಂ ಲಂಕೆಯಂ ಚೋದ್ಯಮೆಂ
ದೆನಸುಂ ವಿಸ್ಮಯಮುತ್ತು ಮಾರುತಿಯನಾ ಲಂಕೇಶ್ವರಂ ಮೆಚ್ಚಿದಂ          ೧೧೦

ಅತಿಸೂಕ್ಷ್ಮೇಕ್ಷಣನೆಂತುಮಂಧನಸತೀಸೌಂದರ್ಯದೊಳ್ ವಿಕ್ರಮಾ
ನ್ವಿತನೆಂತುಂ ಪೆೞವಂ ಮಹಾಜಿಮುಖದೊಲ್ ನಿರ್ಣೀತಸಮ್ಯಗ್‌ಬಹು
ಶ್ರುತನೆಂದುಂ ಬಧಿರಂ ಕರಂ ಪರಪರಿವಾರಂಗಳೊಳ್ ನೋೞ್ಪೊಡ
ದ್ಭುತಮಾಶ್ಚರ್ಯಮಭೂತಪೂರ್ವಮೆಸಕಂ ಶ್ರೀಗಂಡಮಾರ್ತಂಡನಾ          ೧೧೧

ವ : ಮತ್ತಂ

ಬೇ ಱೊಂದದ್ಭುತರಸಮಂ
ಬೀಱುತ್ತು ಮನೇಕವಿಧದ ಫಲಪರಿಣತಿಯಿಂ
ದಾಱುಂ ಋತಗಳುಮೊಡನೆಯೆ
ತೋಱಿದುವು ತಪಃಪ್ರಭಾವದಿಂದ ತನ್ಮುನಿಯಾ            ೧೧೨ (ಇವದ್ಭುತರಸಂ)

ಸೂತ್ರಂ ೫೯

ಭಯದೆ ಭಯಾನಕರಸಮಾ
ರಯೆ ರಿಪು ಸರ್ಪಾದಿ ಪೆಂಪಿನಾಲಂಬನಮಾ
ಭಯಹೇತು ಗರ್ಜಿತಾದಿಯೆ
ನಯದುದ್ದೀಪನವಿಭಾವಮಾ ರಸಕಕ್ಕುಂ

ಸೂತ್ರಂ ೬೦

ಕಂಪಸ್ವೇದಾದಿಯದ
ಕ್ಕಾಂಪನುಭಾವಂ ಕರಂ ವಿವರ್ಣಾದಿಯೆ ಮ
ತ್ತಂ ಪುದಿದ ಸಾತ್ವಿಕಂ ತ್ರಾ
ಸಂ ಪರಿ ದೈನ್ಯಭ್ರಮಾದಿ ಸಂಚಾರಿಯೆ ತಾಂ

ವೃತ್ತಿ : ರಿಪು ಸರ್ಪಪಿಶಾಚಭೂತಾದಿಶೂನ್ಯಗೃಹಾರಣ್ಯ ಗಮನಾದಿ ವ್ಯಾಲ ಮೃಗಾದಿಯಾ ಲಂಬನವಿಭಾವಂ. ತದ್ವಿಕೃತಸ್ವರಶ್ರವಣ ತದಾಲೋಚನ ಸ್ವಜನವಧಬಂ ಧಾದಿದರ್ಶನ ಶ್ರವಣಮುದ್ದೀಪನವಿಭಾವಂ, ಕರಕಂಪಚಲದೃಷ್ಟಿ ನಿರೀಕ್ಷಣ ಹೃದಯ ಪಾದಸ್ಪಂದಶು ಷ್ಕೌಷ್ಟಕಂಠತ್ವಮನುಭಾವಂ, ಮುಖ ವೈವರ್ಣ ಸ್ವರ ಭೇದಾದಿ ಸಾತ್ವಿಕಭಾವಂ, ಶಂಕಾಪ ಸ್ಮಾರ ಮರಣ ತ್ರಾಸ ಚಾಪಲ್ಯಾವೇಗ ದೈನ್ಯ ಮೋಹಾದಿ ವ್ಯಭಿಚಾರಿಭಾವಮನಱಿಂ ಸ್ವಾದ್ಯಮಾನಮಾದ ಭಯಸ್ಥಾಯಿಯೆ ಭಯಾನಕರಸಂ.

ವಿಚಾರಂ : ಸ್ತ್ರೀಯರ್ಗಂ ನೀಚಪ್ರಕೃತಿಯನುಳ್ಳರ್ಗಂ ಭಯಂ ಸ್ವಭಾವಂ ಧೀರೋದಾತ್ತಾದ್ಯುತ್ತ ಮರ್ಗೆ ಭಯಂಕೃತಕಮೆನಿಪ್ಪುದವರ್ಗುರುಮುನೀಶ್ವರಾದಿಗಳಲ್ಲಿ ಕರಕಂಪನಗದ್ಗದ ಸ್ವರಾದಿಗಳಿಂ ಮಾೞ್ಪ ಭಯಂ ಕೃತಕಂ, ಅಂತಾದೊಡವರ್ಗಮೆಲ್ಲಾ ರಸಂಗಳುಮಿಂತು ಕೃತಕಂಗಳಕ್ಕೆ ಬೆಲೆವೆಣ್ಣ ರತಿಯೆಂತೆಂದೊಡಂತಾಗದು ನೃಪನ ಮೃದುಚೇಷ್ಟೆಗಳಿಂ ವಿನೀತಪ್ರಕೃತಿಯೆಂದು ಗುರು ತಿಳಿದನದು ಸಫಳಮಾದುದು, ಅವಳ್ ತೋರ್ಪ ರತಿದನನಿಮಿತ್ತಮಲ್ಲದೆ ಸಾಜಮಲ್ಲೆಂದು ಚದುರ ಕಾದಲನದಂ ತಿಳಿವನದಾ ತೆಱಂ. ಪ್ರಜಾಪಲನಾರ್ಥದಿನರಸುಗಳ್ ಕ್ರೋಧ ವಿಸ್ಮಯಂಗಳಂ ತೋರ್ಪರವುಂ ವ್ಯಭಿಚಾರಿ ಯಲ್ಲದೆ ಸ್ಥಾಯಿಯಲ್ತು.

ಲಕ್ಷ್ಯಂ

ಮಕರಂ ಬಾಯ್ದೆಱೆದಂದದಿಂ ತೆಱೆದಬಾಯ್ ಕೊಂಕಿರ್ದಕೂರ್ದಾಡೆನೆ
ಕ್ಕ ಕದಂಪೆತ್ತಿದ ಪುರ್ವು ಪತ್ತಿದ ಬಸಿಱ್ ಪೋತಂದ ಕಣ್ಣುದ್ಘಮೆ
ಘಕಠೋರಧ್ವನಿಗೇಳ್ದ ಕೇಸುರಿವೊಲಿರ್ದಾಭೀಳ ಕೇಶಾಳಿ ಸ
ರ್ಪಕನದ್ಭೂಷಣ ಭೀಷಣಂ ಭಯದಮಾಯ್ತಾ ರಾಕ್ಷಸೀರೂಪಕಂ   ೧೧೩

ಬೆರಲಂ ಕರ್ಚುವ ಪುತ್ತಂ
ಪರಿದೇಱುವ ಕಯ್ದುವಿಕ್ಕಿ ಪೊಡಮಡುವ ಭಯ
ಜ್ವರದಿಂ ನಡುಗುವ ಭೀರುಗ
ಳರೆಬರ್ ಕನ್ನಡಿಸಿದರ್ ಭಯಾನಕರಸಮಂ       ೧೧೪ (ಇದು ಭಯಾನಕಂ)

ಸುತ್ರಂ ೬೧

ಒದವಿರ್ದೊಂದು ಜುಗುಪ್ಸೆಯಿಂದೆ ಸಲೆ ಭೀಭತ್ಸಂ ಪೊದೞ್ಗುಂ ಬೞಿ
ಕ್ಕದು ತಾನೆಯ್ದೆ ಜುಗುಪ್ಸಿತೇಕ್ಷಣ ವಿರಕ್ತಿದ್ವಂದ್ವದಿಂ ದ್ವಂದಮಾ
ಯ್ತುದಿತಾಲಂಬನಮಾ ಜುಗುಪ್ಸಿತೆಗೆ ದುರ್ಗಂಧಾದಿಯುದ್ದೀಪನಂ
ಪುದಿಗುಂ ತದ್ರಸದೇೞ್ಗೆಯೆಂಬುದು ರಸಜ್ಞರ್ಪೇೞ್ದ ಮಾರ್ಗಕ್ರಮಂ

ಸೂತ್ರಂ ೬೨

ಮೂಗಂ ಮುಚ್ಚುವುದದು ಮೊದ
ಲಾಗೊರೆಯಲ್ ತದ್ರಸಾನುಭಾವಮದಂಗಂ
ತೂಗುವುದಾದಿಯೆ ಸಾತ್ವಿಕ
ಮೇಗಂ ನಿರ್ವೇಗಮಾದಿ ಸಂಚಾರಿವಲಂ

ವೃತ್ತಿ : ಹೃದ್ಯಮಲ್ಲದ ಛರ್ದಿ ವ್ರಣ ಕುಷ್ಠಾದಿ ಜುಗುಪ್ಸಿತ ಶರೀರ ದರ್ಶನ ಶ್ರವಣಾದಿಯಾಲಂಬನ ವಿಭಾವಂ, ಪೂತಿಗಂಧೆಕ್ರಿಮಿಕೀಟಾದಿಯುದ್ದೀಪನವಿಭಾವಂ, ಶರೀರಸಂಕೋಚನಂನಾ ಸಾಮುಖಾದಿ ವಿಕೂಣನಾಚ್ಛಾದನಂ ನಿಷ್ಠೀವಮೊಗಡಿಕೆ ಇವು ಮೊದಲಾದುವನುಭಾವಂ, ಕಂಪವೈವರ್ಣ್ಯಸ್ವರಭೇದಾದಿ ಸಾತ್ವಿಕಭಾವಂ, ಮೋಹಾಪಸ್ಮಾ ರೋಗ್ರಗದಾದಿ ವ್ಯಭಿಚಾರಿ ಭಾವಂ, ವಿರಕ್ತಿ ನಿರ್ವೇದಮತಿ ಧೃತ್ಯಾದಿ ವ್ಯಭಿಚಾರಿಭಾವಂ ; ಇವಱಿಂ ಚರ್ವ್ಯಮಾಣ ಮಾದ ಜುಗುಪ್ಸೆಯೆ ಭೀಭತ್ಸರಸಂ

ಲಕ್ಷ್ಯಂ

ಮಱೆದಾಗುಳಿಸಲ್ ಬಾಯಂ
ತೆಱೆದೊಡೆ ದುರುದುರುಸುತಿರ್ಪ ಮದ್ಯದ ಕುೞಿಯಂ
ಮಱೆಯಿ ಸುಗುಮವನಬಾಯೆಂ
ತೆಱಗುವೆನೆಮ್ಮಜ್ಜಿ ಪೋಗೆ ನೂಂಕುವಳೆನ್ನಂ    ೧೧೫ (ಇದು ಜುಗುಪ್ಸಿತಭೀಭತ್ಸಂ)

ವ : ಮತ್ತಂ

ಪರಿವರುಣಜಲದಿನುಣ್ಮುವ
ಕರುಳಿಂ ಚಿಮಿಚಿಮಿಸುತಿರ್ಪ ಕೋೞ್ಮಿದುಳಿಂ ಸಂ
ಗರರಂಗಮಾವಗಂ ಕೊ
ಕ್ಕರತೆಯನೊಡರಿಸದದಾರ ಕಣ್ಗಂ ಮನಕಂ      ೧೧೬ (ಇದು ಜುಗುಪ್ಸಿತೇ‌ಕ್ಷಣ ಬೀಭತ್ಸಂ)

ಅಡಗಿನ ತೋಲ ನೆತ್ತರ ಮಿದುಳ್ಗಳ ಶಲ್ಯದ ಪುಂಜಮೊತ್ತಿ ಬಂ
ದಡಸುವ ವಾತಪಿತ್ತಕಫದೋಷಸಮೂಹದ ಪತ್ತಿ ನಿಲ್ವುದೆಂ
ದೊಡೆ ಪೆಱತೇಂ ಕ್ರಿಮಿವ್ರಜದ ಮೂತ್ರಪುರೀಷದ ಕೊಂಡಮೆಂದುಮೀ
ಯೊಡಲಿದಱಂದಮಂ ಬಗೆದು ಭಾವಿಸಿ ಪೇಸದುದೇಕೆ ಜೀವನೇ       ೧೧೭

ವ : ಮತ್ತಂ

ನರಕದ ನೆರೆಮನೆಯೊಡಲೆಂ
ಬರ ಮಾತಂತಿರ್ಕೆ ನರಕಮೇೞುಮನೊಂದಾ
ಗಿರಿಪ ಬಗೆಯಿಂ ವಿಧಾತ್ರಂ
ವಿರಚಿಸಿದಂ ಸಪ್ತಧಾತುಮಯಮೆನಿಪೊಡಲಂ    ೧೧೮

ವ: ಮತ್ತಂ

ನಿಧಿದುಸ್ತರ ಜನ್ಮಾಂಭೋ
ನಿಧಿ ಕರ್ಮಕ್ಷಯವಿರೋಧಮವರೋಧಂ ಶ್ರೀ
ವಧುಕುಲಟಾವಧುವೆಂಬೊಂ
ದಧಮತೆ ತಳ್ತತ್ತು ಚಕ್ರವರ್ತಿಯ ಮನದೊಳ್   ೧೧೯ (ಇವು ಮೂಱುಂ ವಿರಕ್ತಿಭೀಭತ್ಸಂ)

ಸೂತ್ರಂ ೬೩

ಶಮಭಾವಪ್ರಭವಂ ಶಾಂ
ತಮಕ್ಕುಮಂತಾ ಶಮತ್ವಮುಂ ವರ್ತಿಸುಗುಂ
ಸಮನಿಸಿ ಸಮ್ಯಗ್ಞಾನಂ
ತಮಮಂ ರಾಗಮುಮನಲೆದು ತೊಲಗಿಸೆ ಮನದೊಳ್

ಸೂತ್ರಂ ೬೪

ಶಿವಪದಮೆ ಮತ್ತದರ್ಕೊ
ಪ್ಪುವುದಾಲಂಬನವಿಭಾವಮಾ ಮೋಕ್ಷಾರ್ಥಿ
ಪ್ರವಚನಸಾರಮೆ ಮಿಗೆ ಕೇ
ಳ್ವವರ್ಗುದ್ದೀಪನವಿಭಾವಮಾರ್ಯರ ಮತದಿಂ

ಸೂತ್ರಂ ೬೫

ಪಗೆಕೆಳೆಯಂ ಸರಿಗಾಮ್ಬುದೆ
ನೆಗೞ್ದನುಭಾವಂ ಪೊದೞ್ದ ಪುಳಕಸ್ತಂಭಾ
ದಿಗಳವು ಸಾತ್ವಿಕಭಾವಂ
ಸೊಗಯಿಪಮತ್ಯಾದಿ ಸಂದ ಸಂಚಾರಿವಲಂ

ವೃತ್ತಿ : ಮೋಕ್ಷಪದಮೆ ಆಲಂಬನವಿಭಾವಂ, ಸದ್ಗುರು ನಿರೂಪಶ್ರವಣ ವೈರಾಗ್ಯ ಸಂಸಾರ ಭೀರುತ್ವ ತತ್ವಜ್ಞಾನ ವೀತರಾಗ ಪರಿಶೀಲನ ಪರಮೇಶ್ವರಾನುಗ್ರಹಾದಿ ಯುದ್ದೀಪನ ವಿಭಾವಂ, ಸಮರಸೀಭಾವ ಯಮ ನಿಯಮಾಧ್ಯಾತ್ಮಶಾಸ್ತ್ರಚಿಂತನಾದಿ ಅನುಭಾವಂ, ಸ್ತಂಭನಾನಂದಾಶ್ರ ಪುಳಕಾದಿ ಸಾತ್ವಿಕಭಾವಂ, ಧೃತಿ ಸ್ಮೃತಿ ಮತಿ ನಿರ್ವೇದಾದಿ ವ್ಯಭಿಚಾರಿಭಾವಂ ; ಇವಱಿಂ ಸ್ವಾದ್ಯಮಾನಮಾದ ಶಮಸ್ಥಾಯಿಯೆ ಶಾಂತರಸಂ.

ಲಕ್ಷ್ಯಂ

ಮನಮಂ ಮುಟ್ಟೈಸಿ ಮಧ್ಯಂದಿನದ ಬಿಸಿಲೆ ಬೆಳ್ದಿಂಗಳಂತಾಗೆ ತನ್ನಿಂ
ತನುವಂ ಬೇರ್ಕೆಯ್ದು ಬಾಹ್ಯೇಂದ್ರಿಯಮನುೞಿದ ಕಯ್ಯಿಕ್ಕಿ ನಿರ್ವಾ
ಣ ನಿವಾಸಕ್ಕೊರ್ವನಂತರ್ಮುಖನಭಿಮುಖಾನಾದಿತ್ಯಬಿಂಬಕ್ಕೆ ಯೋಗೀಂ
ದ್ರನ ತಂದ್ರಂ ನಿರ್ನಿಮೇಷಂ ನಗನಿಕಟಹಟದ್ರತ್ನಕೂಟಂಬೊಲಿರ್ದಂ  ೧೨೦

ವ : ಮತ್ತಂ

ಗಿಡಿಗಿಡಿ ಜಂತ್ರಮಾಯ್ತೊಡಲೊಡಲ್ವಿಡಿದಿರ್ದಖಿಳೇಂದ್ರಿಯಂಗಳುಂ
ಮಿಡುಕದೆ ಪೋದುವಂತವಱ ಪೋಗಿನೊಳಾಯ್ತು ಮನಕ್ಕೆ ಸೌಖ್ಯಮಾ
ಗಡಣಿಪ ಸೌಖ್ಯದಿಂ ನೆಲಸಿದತ್ತು ಶುಭಾನ್ವಿತಮಪ್ಪ ಜಾನಮಂ
ತೊಡರಿಪ ಜಾನದೊಂದೆಸಕದಿಂ ಪಱಿ ಪಟ್ಟುವು ಪಾಪಪಾಂಸುಗಳ್            ೧೨೧

ವ : ಮತ್ತಂ

ಒಱಲೆ ತಗುೞ್ದು ಪುತ್ತಿಡುವುದೆಯ್ದೆ ಮೃಗಾವಳಿ ಕೋಡ ತೀಂಟೆಗೀ
ಡಿಱಿವುವು ಪಕ್ಕಿಗೂಡಿಡುವುದಾವರಿಸಿರ್ದ ಲತೋತ್ಕರಂ ಪಗಂ
ಡಿಱಿವುವು ನಿಂದ ಪಾವನ ತಪೋವನದೊಳ್ ಪ್ರತಿಮಾ ನಿಯೋಗದೊಳ್
ನೆಱೆದಮಳಾಂತರಂಗನೆನಿಸಿರ್ದ ಮುನೀಂದ್ರನ ನಿಶ್ಚಲಾಂಗದೊಳ್   ೧೨೨

ವ : ಮತ್ತಂ

ಧಾರಾಭಿಷೇಕಮದುವೆ ತ
ಪೋರಾಜ್ಯಕ್ಕೆನಿಸೆ ಸುರಿವ ಮೞೆ ಘನರುತಿ ತೂ
ರ್ಯಾರವಮಾಗೆ ಮುನೀಶಂ
ಬೇರೂಱಿದ ಬಿೞಲ ತೆಱದೆ ಮರಮೊದಲಿರ್ದಂ  ೧೨೩ (ಇದು ಶಾಂತರಸಂ)

ಶಾಂತರಸ ವಿಚಾರಂ

ವ : ಶಾಂತರಸಂ ವಿಷಯ ಜುಗುಪ್ಸಾರೂಪತ್ವಮಾಗಿಯುಂ ಭೀಭತ್ಸದೊಳಂ ತರ್ಭಾವಮಲ್ತು. ಜುಗುಪ್ಸೆಯಿದರ್ಕೆ ವ್ಯಭಿಚಾರಿಯಪ್ಪುದಱಿಂದದುತಾಂ ಸ್ಥಾಯಿತ್ವ ಮನೆಯ್ದದು. ತಾನೆಂತೆಂದೊಡೆ ಶಾಂತರಸ ಪರಿಪೂರ್ಣತೆಯೊಳದು ನಿರ್ಮೂಲ ಮಪ್ಪುದಱಿಂ ವೀರದೊಳಂತರ್ಭಾವಮೆಂದೊಡದುವುಮಲ್ತು ; ವೀರರಸಮಭಿಮಾನ ರೂಪತ್ವಂ, ಶಾಂತರಸಮಹಂಕಾರೋಪಶಮೈಕ ರೂಪತ್ವಮದಱಿಂ ವೀರ ಶಾಂತಕ್ಕೇ ಕತ್ವಪರಿಕಲ್ಪನ ಮಾಗದು, ಅಂತಾದೊಡೆ ವೀರರೌದ್ರಕ್ಕಮೇಕತ್ವಮದಱಿಂ ಧರ್ಮ ವೀರಾದಿಗಳ ಚಿತ್ತವೃತ್ತಿವಿಶೇಷಂಗಳವು ಸರ್ವಾಹಂಕಾರಂಗಳ್ ಅಹಂಕಾರರಹಿತಂ ಶಾಂತರಸಂ. ಈ ಪಾಂಗಿಂ ಸ್ಥಾಪಿಸಿದೊಡೇನುಂ ವಿರೋಧಮಾಗದು. ಇಂತೊಂಬತ್ತು ರಸಂಗಳ್ ಬೇರ್ಪಡಿಸಲ್ಪಟ್ಟುವು ರಸಕಾರಣಂ.

ಸೂತ್ರಂ ೬೬

ಶೃಂಗಾರದಿಂದೆ ಹಾಸ್ಯಂ
ಸಂಗಳಿಸಿದ ರೌದ್ರದಿಂದೆ ಕರುಣಂ ಸ್ಫುಟವೀ
ರಾಂಗದಿನದ್ಭುತಮಕ್ಕುಂ
ಪಿಂಗದೆ ಭೀಭತ್ಸುವಿಂ ಭಯಾನಕಮಕ್ಕುಂ

ಲಕ್ಷ್ಯಂ

ಮಿದುಳಿಂದಣ್ಪಿಕ್ಕಿ ಬಂಬಲ್ಗರುಳ ಪಿಣಿಲ ಪೂಮಾಲೆಯಂ ಸೂಡಿ ನೆತ್ತ
ರ್ಪುದಿದೆತ್ತಂ ತೋರ್ಪ ಪಂದೋವಲ ನಿಱಿವಿಡಿದುಟ್ಟೞ್ತಿಯಿಂ ಶುಕ್ತಿಯೊಳ್ ತೀ
ವಿದ ಕೀಲಾಲಾಂಬುವಂ ಕಣ್ತುಮು ೞೆ ಪದೆಪಿನಿದೀಂಟಿ ಪಾಱೈಸಿ ಕೈಗ
ಣ್ಮಿದ ರಾಗೋದ್ರೇಕದಿಂದಾಡುವ ದನುಜೆ ಭಯಾಭ್ರಾಂತಿಯಂ ಮಾಡಲಾರ್ತಳ್         ೧೨೪

ವ : (ಇಲ್ಲಿ ಭೀಭತ್ಸದಿಂ ಪುಟ್ಟಿದುದು, ಇಂತುೞಿದುವನಱಿವುದು)

ಇನ್ನು ರಸಸಂಕರಂ

ಸೂತ್ರಂ ೬೭

ಮುಸುಕಿನ ಭಂಗಿಯುಂ ನಡೆವ ಗಾಡಿಯುಮೊಪ್ಪಿರೆ ನೀನೆಗೆತ್ತು ಸಂ
ಕಿಸಿದಿರುಳೊರ್ವನಂ ಪಿಡಿದೊಡಾತನಿದೇನೆನೆ ನೋಡಿ ಬಿಟ್ಟು ಲ
ಜ್ಜಿಸಿ ಬರೆ ಕಂಡು ಮೇಳದೊಡನಾಡಿಗಳೆನ್ನ ಮರುಳ್ತನಕ್ಕೆ ಱೋ
ಡಿಸಿ ನಗುವಂತಟಾದುದು ಮನಃಪ್ರಿಯ ನೀಂ ಮುನಿದಿರ್ದ ದೂಸಱಿಂ (ಇಲ್ಲಿ ಶೃಗಾರಹಾಸರಸಂಗಳ ಸಂಕರಂ)

ಇನ್ನು ವಿರುದ್ಧರಸಂಗಳ್

ಸೂತ್ರಂ ೬೮

ಕರುಣಾರಸಕ್ಕೆ ವೀರಂ
ದೊರೆಕೊಳೆ ಶೃಂಗಾರರಸಕೆ ಬೀಭತ್ಸಂ ರೌ
ದ್ರರಸಕ್ಕಮದ್ಭುತಂ ವೀ
ರರಸಕ್ಕೆ ಭಯಾನಕಂ ವಿರೋಧಿಗಳಕ್ಕುಂ

ವ : ಇದು ನಾಗವರ್ಮನ ಮತಂ. ಮತ್ತಂ

ಸೂತ್ರಂ ೬೯

ಬೆರಸದವೊಲಿರ್ಕೆ ಶೃಂಗಾ
ರರಸಂ ಬೀಭತ್ಸದೊಳ್ ಭಯಂ ರೌದ್ರದೊಳಂ
ಕರುಣಾರಸದೊಳ್ ವೀರಂ
ಪರಿಹಾಸದೊಳದ್ಭುತಂ ವಿರೋಧಿಗಳಕ್ಕುಂ

ವ : ಇದು ಉದಯಾದಿತ್ಯನ ಮತಂ. ಮತ್ತಂ

ಗಣೇಶ್ವರಾಗ್ನಿಕೃತ ಸಾಹಿತ್ಯಸಂಜೀವನದಲ್ಲಿ ಶೃಂಗಾರರಸಕ್ಕೆ ವೀರರೌದ್ರ ಭೀಭತ್ಸ ಕರುಣಾ ಶಾಂತಂಗಳರಿಗಳ್, ಹಾಸ್ಯಕ್ಕೆ ಕುರುಣಾಭಯಾನಕಂ ರಿಪು, ಕರುಣಕ್ಕೆ ಹಾಸ್ಯಶೃಂಗ ಅರರೌದ್ರಶಾಂತಾದಿ ವಿರೋಧಂ, ಭಯಾನಕಕ್ಕೆ ವೀರವಮಿತ್ರಂ, ರೌದ್ರಕ್ಕೆ ಹಾಸ್ಯಾದ್ಭುತಂ ಶಾಂತಂ ಶೃಂಗಾರಂ ಶತ್ರು, ವೀರಕ್ಕ ಭಯಾನಕಂ ಪಗೆ, ಬೀಭತ್ಸುಗೆ ಶೃಂಗಾರಮರಿ, ಅದ್ಭುತಕ್ಕೆ ರೌದ್ರಂ ಭಯಾನಕಂ ಸಪತ್ನಂ, ಶಾಂತಕ್ಕೆ ಶೃಂಗಾರಂ ಮೆಚ್ಚದದಿಂತಱಿವುದು. (ಸಾಹಿತ್ಯಸಂಜೀವನ ಸಮ್ಮತಿಪದ್ಯಂಗಳ್)

ಗಣೇಶ್ವರಾಗ್ನಿ ಕೃತ ಸಾಹಿತ್ಯ ಸಂಜೀವನದಲ್ಲಿ ಶೃಂಗಾರ ರಸಕ್ಕೆ ವೀರರೌದ್ರ ಬೀಭತ್ಸ ಕರುಣ ಶಾಂತಂಗಳ ರಿಗಳ್, ಹಾಸ್ಯಕ್ಕೆ ಕರುಣಭಯಾನಕಂ ರಿಪು, ಕರುಣಕ್ಕೆ ಹಾಸ್ಯ ಶೃಂಗಾರ ರೌದ್ರ ಶಾಂತಾದಿ ವಿರೋಧಂ, ಭಯಾನಕಕ್ಕೆ ವೀರ ವಾ ಮಿತ್ರ, ರೌದ್ರಕ್ಕೆ ಹಾಸ್ಯಾದ್ಭುತಂ ಶಾಂತಂ ಶೃಂಗಾರಂ ಶತ್ರು, ವೀರಕ್ಕೆ ಭಯಾನಕಂ ಪಗೆ, ಬೀಭತ್ಸಕ್ಕೆ ಶೃಂಗಾರಂ ಅರಿ, ಅದ್ಭುತಕ್ಕೆ ರೌದ್ರಂ ಭಯಾನಕಂ ಸತತ್ನಂ, ಶಾಂತಕ್ಕೆ ಶೃಂಗಾರ ಮೆಚ್ಚದದು ಇಂತರಿವುದು. (ಸಾಹಿತ್ಯ ಸಂಜೀವನ ಸಮ್ಮತಿ ಪದ್ಯಂಗಳ್)

ಸೂತ್ರಂ ೭೦

ವೀರಂ ಬೀಭತ್ಸ ರೌದ್ರಂ ನಿಜದೆ ಕರುಣ ಶಾಂತಂಗಳಿಂತೆಯ್ದೆ ತಾಂ ಶೃಂ
ಗಾರಕ್ಕಂ ವೈರಮಕ್ಕುಂ ಕರುಮ ಭಯಮಿವುಂ ಹಾಸ್ಯಕಂ ವೈರಮಾ ಶೃಂ
ಗಾರಂ ಹಾಸ್ಯಂ ಬೞಿಕ್ಕಂ ಪರಿಕಿಸೆ ಸಲೆ ರೌದ್ರಂ ವಲಂ ಶಾಂತಮಿಂತುಂ
ಕಾರುಣ್ಯಕ್ಕಂ ಹಿತಂ ತಾನೆನಿಸದು ಭಯಕಂ ವೈರವಾ ವೀರವೆಂದುಂ

ಸೂತ್ರಂ ೭೧

ಶಾಂತಂ ಹಾಸ್ಯಾದ್ಭುತಂ ರೌದ್ರಕೆ ಪಗೆ ಭಯಮುಂ ಮತ್ತೆ ಶೃಂಗಾರಮುಂದಲ್
ಶಾಂತಂ ವೀರಕ್ಕಮಿತ್ರಂ ಭಯಮುಱೆ ವಿಲಸದ್ರೌದ್ರವಂತದ್ಭುತಕ್ಕಂ
ಎಂತುಂ ವೈರಂ ಸಬೀಭತ್ಸುಗೆಯರಿಯೆನಿಕುಂ ನಾಡೆ ಶೃಂಗಾರಮೇಗಂ
ಶಾಂತಕ್ಕಂ ಮೆಚ್ಚಿದೆಲ್ಲರ್ ಬೆಸಸುವರುಱೆ ಶೃಂಗಾರಮಂ ಬುದ್ಧಿವಂತರ್ (ಇದು ಸಾಹಿತ್ಯ ಸಂಜೀವನ ಮತಂ)

ಲಕ್ಷ್ಯಂ

ಕರಜಕ್ಷತಗಳಿತಸ್ತ್ಯಾ
ನರಕ್ತ ಕರ್ದಮಿತ ವಿಗ್ರಹಂ ಸವ್ರಣಿತಾ
ಧರಜಾತ ಪೂತಿಗಂಧಂ
ತರುಣೀಮುಖಮೆನಗೆ ಪಡೆದುದೊದವಿದಲಂಪಂ           ೧೨೫ (ಇದು ದೋಷಂ)

ಸೂತ್ರಂ ೭೨

ಎರಡುಂ ವಿರುದ್ಧ ರಸಮೊಡ
ವೆರಸಿರೆ ತದನಂತರಸ್ಥಮೊಂದನ್ಯರಸಂ
ಪರಿಪುಷ್ಪಮಾಗೆಯುಂ ವ್ಯಧಿ
ಕರಣಂ ಮೇಣ್ ಸಮಮುಗಾಗಯುಂ ನಿರ್ದೋಷಂ

ಲಕ್ಷ್ಯಂ

ಅರುಣಜಲಾವಲಿಪ್ತಿ ಪೊಸಕಂಕುಮದಂತಿರೆ ಕರ್ಣಲಗ್ನ ತೋ
ಮರಮವತಂಸದಂತಿರೆ ನಖವ್ರಣರಾಜಿಯೆ ಭೂಷಣಾಳಿಯಂ
ತಿರೆ ಮಿದುಳುಣ್ಮಿ ಪುಷ್ಪ ಕೃತ ಶೇಖರದಂತಿರೆ ಕೊಂಡು ಪೋದರ
ಚ್ಚರಸಿಯರಣ್ಮಿ ಬಿೞ್ದ ಭಟರಂ ಕೊನೆಮೀಸೆಯ ಚೆನ್ನ ಪೊಂಗರಂ   ೧೨೬

ವ : ಇಲ್ಲಿ ವಿರುದ್ಧಂಗಳಾದ ಶೃಂಗಾರಭೀಭತ್ಸರಸಂಗಳ ನಡುವೆವೀರರಸಂ ಪೊಕ್ಕು ಪುಷ್ಟಿಯಾದುದು

ಭಯದಿಂ ಕರ್ಚಿದುದೊಂದು ಪುಲ್ಮುಗಿದ ಕಯ್ಬಿಟ್ಟಿರ್ದ ಕೇಶಂಗಳುಂ
ನಯನಾಂಭಃಪ್ಲವಮೋಡುವಲ್ಲಿ ಪಿರಿದುಂ ಕಾರುಣ್ಯಮಂ ಮಾಡೆ ವೈ
ರಿಯನಾಗಳ್ ನಗುವಂತುಟಿರ್ದುದು ಕನತ್ಖಡ್ಗಂ ವಿನಿರ್ಭಿನ್ನ ಕುಂ
ಭಯುಗದ್ವಿಣ್ನೃಪ ಕುಂಭಿಕುಂಭಯುಗಳಂ ಶ್ರೀವಿಕ್ರಮಾರ್ತಾಂಡನಾ            ೧೨೭

ವ : ಇಲ್ಲಿ ವ್ಯಧಿಕರಣಮಾದುದಱಿಂ ನಿರ್ದೇಷಂ

ಸ್ಥಾಯಿ ವ್ಯಭಿಚಾರಿ ವಿಚಾರಂ

ವ : ನಾಟಕಾದ್ಯಭಿನಯವ್ಯಾಪಾರದೊಳಾವಿಷ್ಕೃತಮಾಗಿ ತೋರ್ಪರಸಂಗಳಾತ್ಮಂಗ ಳೆನಿಸುವಾ ಚಿತ್ತವೃತ್ತಿಗಳ್ ಸಾಮಾಜಿಕರ ಚಿತ್ತಮಂ ಭಾವಿಪುದಱಿಂ ಭಾವಂಗಳೆನಿಕುಂ, ಮನೋವೃತ್ತಿಗಳಾದುದಱಿಂ ಸ್ಥಾಯಿಗಳುಂ ವ್ಯಭಿಚಾರಿಗಳುಂ ಭಾವಂಗಳೆನಿಪುವಲ್ಲಿ ಸ್ಥಾಯಿಗಳೊಂಭತ್ತು, ಅವುಂ ಮುಂದೆ ಪೇೞೆ ಪಟ್ಟುವು. ಸಂಚಾರಿಗಳ್ ಮೂವತ್ತು ಮೂಱವುಂ ಕಡೆಯ ಪ್ರಕರಣದೊಳ್ ಪೇೞೆಪಡುವುವು.

ಪುಟ್ಟಿದ ಜೀವಂ ಶಕ್ತಿರೂಪದಿಂ ಪೇೞ್ದೀ ಜ್ಞಾನಗೃಹೀತನಾಗಿರ್ಪನವಾವು ವೆಂದೊಡೆ -ದುಃಖದ್ವೇಷಿ ಸುಖಾಸ್ವಾದನಲಂಪಟನಾಗಿರ್ಪುದು ರತಿ, ಆಂ ಭೋಗಿ ತಾಂ ದುಃಖಿಯೆಂದು ನಗುವಂದಮಂ ಮಾೞ್ಪುದು ಹಾಸಂ ತನ್ನ ಸುಖೋತ್ಕರ್ಷೆಗೆ ವಿಪತ್ತು ಬರ್ಪುದೆಂದು ಶೋಕಿಪುದೆ ಶೋಕಂ, ಅಪಾಯಮಂ ಕುೞಿತು ಕೋಪಿಪುದೆ ಕ್ರೋಧಂ, ಅಪಾಯಹೇತುವಂ ಪರಿಪರಿಪೆಡೆಯೊಳುತ್ಸಾಹಂ ಮಾೞ್ಪುದುತ್ಸಾಹಂ, ಅಪಾಯದತ್ತಣಿಂ ಬೆದಱುವುದು ಭಯಂ, ತಾಂ ಗೆಯ್ವ ಕಜ್ಜಮೊಳ್ಳಿತಲ್ತೆಂದು ಪೇಸುವುದು ಜುಗುಪ್ಸೆ, ತನ್ನಿಂ ಪೆಱರಿಂದಾದ ಕಾರ್ಯ ವೈಚಿತ್ಯ್ರಾದಿ ದರ್ಶನಾದಿಯಿಂ ವಿಸ್ಮಯಿಪುದು ವಿಸ್ಮಯಂ, ತಾಂ ಬಿಡುವುದಱೊಳ್ ವೈರಾಗ್ಯಪರನಾಗಿ ಶಾಂತತ್ವಮಂ ಭಜಿಪುದು ಶಮಂ. ಈ ಪೇೞ್ದ ಚಿತ್ತವೃತ್ತಿಗಳಿಂ ಶೂನ್ಯಮಾದ ಜೀವನಿಲ್ಲ. ಮತ್ತಲ್ಲಿ ಕೆಲಂಬರ ಚಿತ್ತವೃತ್ತಿಗಳ್ ಗಳ್ ವಿಷಯದಲ್ಲಿ ನಿಯೋಜಿಸಲ್ಪಟ್ಟುವಾಗಿರ್ಪುವು, ಕೆಲವು ಪುರುಷಾರ್ಥದೊಳು ಪಯ್ತುಕಂಗಳಾಗಿರ್ಪುವು, ಮತ್ತೆ ಕೆಲವು ಮತ್ತೊಂದು ಪ್ರಕಾರಮಾಗಿರ್ಪುವಿಂತೆಂಬ ಚಿತ್ತವೃತ್ತಿ ವಿಭಾಗದಿಂದುತ್ತಮಮಧ್ಯಮಾಧಮಪ್ರಕೃತಿಗಳೆಂಬೀ ವ್ಯವಹಾರಂಗಳಾದು ವಿನ್ನಾಮತ್ಯಾದಿ ವ್ಯಭಿಚಾರಿಗಳುಂ ಚಿತ್ತವೃತ್ತಿ ವಿಶೇಷಂಗಳುಚಿತವಿಭಾವದಿಂದೆ ಭಾವಂಗಳಾಗಿ ಜನ್ಮಮಧ್ಯ ದೊಳಿರ್ಪುದಱಿಂ ವ್ಯಭಿಚಾರಿಗಳಾದುವೆಂತೆಂದೊಡೆ ರಸಾಯನಂಗುಡಿ ದವಂಗಾಲಸ್ಯ ಗ್ಲಾನಿ ಶ್ರಮಾದಿಗಳಾಗವು, ಎತ್ತಾನುಂ ಮೇಣ್ ವಿಭಾವಬಲದಿಂ ದೊರೆಕೊಂಡುದಾದೊಡೆ ವಿಭಾವಂಗಳ್ ಕೆಟ್ಟೊಡೆ ತಾವುಂ ಕಿಡುವುವು. ಅವೇ ಸಂಸ್ಕಾರವಿಶೇಷದಿಂ ರತ್ಯಾದಿಗಳ್ ಪತ್ತಿರ್ಪಂತೆ ತಾವಿರಲರಿಯವು. ರತ್ಯಾದಿಗಳ್ ಸಂಪಾದಿತ ಸ್ವಕರ್ತವ್ಯಂಗಳಾಗಿ ವಿಭಾವಂಗಳ್ ಕೆಟ್ಟೊಡಂ ತಾವುಂ ಕೆಟ್ಟುದಱಂತಿರ್ದುಂ, ಸಂಸ್ಕಾರವಿಶೇಷದಿಂದೆ ಪ್ರಾಣಭೂಮಿಯಪತ್ತುಗೆಗುಂದವು. ಅವಸ್ಥಾಂತರ ವಿಷಯ ರತ್ಯಾದ್ಯಖಂಡಮಾದುದಱಿಂ ಸ್ಥಾಯಿಯಾದುದದೆಂತೆನೆ ಕಾಬಲದೇವಾರ್ಧ ಚಕ್ರಿಸಕಲ ಚಕ್ರವರ್ತಿಗಳೆಂದುಂ ಪದಿನಾಱು ತೊಂಬತ್ತಾಱುಸಾಸಿರ್ವರ್ ಪೆಂಡವಾಸದೊಳ್ ಮಾೞ್ಪರತಿಯ ವಿಚ್ಛಿನ್ನಮದಱಿಂ ಸ್ಥಿರಮಾದು ದಱಿಂ ಸ್ಥಾಯಿಗಳೆನಿಪ್ಪುವು. ಮತ್ತಮಾ ಸ್ಥಾಯಿರೂಪ ಚಿತ್ತವೃತ್ತಿಗಳೆಂಬ ಸೂತ್ರಂಗಳೊಳ್ ಪೋಣಿಸಿದಂತೆ ಮತ್ತುದಯಾಸ್ತಮಯ ವೈಚಿತ್ಯ್ರಶತಸಹಸ್ರಧರ್ಮಂಗಳಂ ಪಡೆಯಲ್ಪಟ್ಟು ವಾಗಿ ಸ್ಥಾಯಿಗಳಂ ನಾನಾ ಪ್ರಕಾರವಾಗಿ ರಂಜಿಸುತ್ತೆ ಸಂಚಾರಿಪುದಱಿಂ ಸಂಚಾರಿಗಳೆಂದು ಪೇೞಲ್ಪಟ್ಟುವು.

ಮತ್ತಮೀತಂ ಗ್ಲಾನನಾದನೆಂದೊಡೇ ತಱಿಂದೆಂದದರ್ಕೆ ಹೇತುಪ್ರಶ್ನೆಯಂ ಮಾೞ್ಪರದು ಮುನ್ನಿಲ್ಲದೆಡೆಯೊಳ್ ಬಂದುದಱಿಂ ರಾಮಚಂದ್ರನುತ್ಸಾಹಶಕ್ತಿಯುಳ್ಳವ ನಾಗಿರ್ದನೆಂ ದೊಡಾರುಂ ಹೇತುಪ್ರಶ್ನೆಯಂ ಮಾಡರಾತಂಗದು ಸ್ಥಾಯಿಯಾಗಿರ್ದುದಱಿಂ ಇವಾ ವ್ಯಭಿಚಾರಿಗಳ್ಗಂ ಸ್ಥಾಯಿಗಳ್ಗಂ ದೃಷ್ಟಾಂತಂಗಳ್. ಅದು ಕಾರಣದಿಂ ರತ್ಯಾದಿಕಂಗಳ್ ವಿಭಾವಾದಿಯಿಂದುದ್ಬೋಧಂಕಂಗಳಾಗಿ ತಮ್ಮ ಸ್ವರೂಪೋಪರಂಜಕತ್ವದಿಂದುಚಿತಾನು ಚಿತತ್ವಮಂ ತಳೆವುವು, ವಿಭಾವಾಭಾವದಿಂ ಕೆಟ್ಟೊಡಂ ಸರ್ವಜೀವಂಗಳೊಳ್ ವಾಸನಾ ರೂಪದಿಂದಿವಿರ್ಪುದಱಿಂ ಸ್ಥಾಯಿಗಳಾ ಮಾೞ್ಕೆಯಿಂ ವಿಭಾವಾಭಾವದಿಂ ವ್ಯಭಿಚಾರಿಗಳ್ ನಾಮಮಾತ್ರಮಿಲ್ಲದೆ ಪೋಪುವಪ್ಪುದಱಿಂ ವ್ಯಭಿಚಾರಿಗಳಾದುವು, ಸ್ಥಾಯಿಗಳು ಮೊರ್ಮೊರ್ಮೆ ವ್ಯಭಿಚಾರಿಗಳಪ್ಪುವದೆಂತೆಂದೊಡೆ ರಾವಣಾದಿಗಳೊಳನ್ಯೋ ನ್ಯಾನು ರಾಗಭಾವದಿಂದಾದ ರತಿ ವ್ಯಭಿಚಾರಿಯಪ್ಪುದು. ಗುರುಪ್ರಿಯತಮ ಪರಿಜನಂಗಳಲ್ಲಿ ಯಥಾಕ್ರಮದಿಂ ನೆಗೞ್ದ ವೀರ ಶೃಂಗಾರ ರೋಷಂಗಳ್ ವ್ಯಭಿಚಾರಿಗಳಪ್ಪುವು. ಈ ಪ್ರಕಾರದಿಂ ಭಾವಾಂತರಂಗಳುಮಂ ಯೋಚಿಸಿಕೊಳ್ವುದು. ಅಲ್ಲಿ ಶಮಕ್ಕೊಂದೆಡೆ ಯೊಳಮ ಪ್ರಾಧಾನ್ಯಮಿಲ್ಲ. ವ್ಯಭಿಚಾರಿಯಿಲ್ಲಪ್ಪುದಱಿಂ ರತ್ಯದಿಗಳಲ್ಲಿ ಪಿರಿದುಂ ಸ್ಥಾಯಿತ್ವ ಮಾದುದಱಿಂ ಸ್ಥಾಯಿಯಪ್ಪುದು.

ಇದು ಶತೇಂದ್ರ ಮುನೀಂದ್ರವಂದಿತಾರ್ಹತ್ಪರಮೇಶ್ವರ ಪಾದಾರವಿಂದ
ಮಂದಮಕರಂದಾನಂದಿತ ಭೃಂಗಾಯಮಾನ ಕವಿಸಾಳ್ವ ವಿರಚಿತಮಪ್ಪ
ರಸರತ್ನಾಕರದೊಳ್ ನವರಸಪ್ರಪಂಚವಿವರಣಂ

ದ್ವಿತೀಯ ಪ್ರಕರಣಂ