ಅಮೃತನಂದಿ (೧-೮): ಈತನನ್ನು ಸಾಳ್ವನು ಉಲ್ಲೇಖಿಸಿ ಈತನ ಮಾರ್ಗದಲ್ಲಿ ಕೃತಿಯನ್ನು ರಚಿಸಿದ್ದೇನೆ ಎಂದಿದ್ದಾನೆ. ಮದ್ರಾಸು ಪ್ರಾಚ್ಯಕೋಶಾಲಯದಲ್ಲಿ ‘ಅಮೃತನಂದಿಯ ಅಲಂಕಾರ ಸಂಗ್ರಹ’ ಎಂಬ ಸಂಸ್ಕೃತ ಹಸ್ತಪ್ರತಿಯೊಂದಿದೆ. ಬಹುಶಃ ಇದು ಈತನದೇ ಇರಬೇಕು.

ಆಲಂಕಾರಿಕರು (ಸಂಸ್ಕೃತ)

೧. ಪ್ರಾಚೀನ ಆಲಂಕಾರಿಕರು: ಭರತ-ನಾಟ್ಯಶಾಸ್ತ್ರ (೧ನೇ ಶತ); ಭಾಮಹ – ಕಾವ್ಯಾಲಂಕಾರ (೭ನೇ ಶತ); ದಂಡಿ – ಕಾವ್ಯಾದರ್ಶ (ಸು. ೭ನೇ ಶತ); ವಾಮನ – ಕಾವ್ಯಾಲಂಕಾರ (೮ನೇ ಶತ); ರುದ್ರಟ – ಕಾವ್ಯಾಲಂಕಾರ (೯ನೇ ಶತ)

೨. ನವೀನ ಆಲಂಕಾರಿಕರು: ಆನಂದವರ್ಧನ-ಧ್ವನ್ಯಾಲೋಕ (೯ನೇ ಶತ); ಧನಂಜಯ – ದಶರೂಪಕ (ಸು. ೧೦ನೇ ಶತ); ಮಮ್ಮಟ-ಕಾವ್ಯಪ್ರಕಾಶ (೧೧ನೇ ಶತ); ಹೇಮಚಂದ್ರ-ಕಾವ್ಯಾನುಶಾಸನ (೧೦೮೮-೧೧೭೩); ವಿದ್ಯನಾಥ-ಪ್ರತಾಪ ರುದ್ರ ಯಶೋಭೂಷಣ (೧೩ನೇ ಶತ); ವಿಶ್ವನಾಥ-ಸಾಹಿತ್ಯದರ್ಪಣ (೧೪ನೇ ಶತ); ಅಪ್ಪಯ್ಯ ದೀಕ್ಷಿತ-ಕುವಲಯಾನಂದ (೧೬ನೇ ಶತ); ಜಗನ್ನಾಥ-ರಸಗಂಗಾಧರ (೧೭ನೇ ಶತ).

ಆಲಂಕಾರಿಕರು (ಕನ್ನಡ): ಶ್ರೀ ವಿಜಯ-ಕವಿರಾಜಮಾರ್ಗ (೯ನೇ ಶತ); ೨ನೇ ನಾಗವರ್ಮ – ಕಾವ್ಯಾವಲೋಕನ (ಸು. ೧೧೪೫); ಉದಯಾದಿತ್ಯ-ಉದಯಾದಿತ್ಯಾಲಂಕಾರ (ಸು.೧೧೫೦) ಕವಿಕಾಮ-ಶೃಂಗಾರ ರತ್ನಾಕರ (ಸು.೧೨೦೦); ಮಾಧವ- ಮಾಧವಾಲಂಕಾರ (ಸು.೧೫೦೦); ಸಾಳ್ವಕವಿ-ರಸರತ್ನಾಕರ, ಶಾರದಾವಿಲಾಸ (೧೪೮೫); ತಿರುಮಲಾರ್ಯ-ಅಪ್ರತಿಮವೀರ ಚರಿತೆ (೧೭ನೇ ಶತ); ಲಿಂಗರಾಜ -ನರಪತಿ ವಿಜಯ (೧೯ನೇ ಶತ)

ನಾಗವರ್ಮ (೧-೮ವ): ಕಾವ್ಯಾಲೋಕನವೆಂಬುದು ಈತನ ಅಲಂಕಾರ ಗ್ರಂಥ. ಒಂದು ಪ್ರಕರಣದಲ್ಲಿ ಅತಿ ಸಂಗ್ರಹವಾಗಿ ರಸವಿಷಯದ ಬಗ್ಗೆ ಬರೆದಿದ್ದಾನೆ.

ಉದಯಾದಿತ್ಯ : ಈತನ ಕೃತಿ ಉದಯಾದಿತ್ಯಲಂಕಾರ. ಇದರಲ್ಲಿ ರಸವಿಷಯವೇ ಉಕ್ತವಾಗಿಲ್ಲ.

ಕವಿಕಾಮ (೧-೮ವ): ಈತನ ಕೃತಿ-ಶೃಂಗಾರ ರಸರತ್ನಾಕರ. ಇದರಲ್ಲಿ ಶೃಂಗಾರರಸವು ವಿಸ್ತಾರವಾಗಿಯೂ ಉಳಿದ ರಸಗಳು ಅತಿ ಸಂಕ್ಷಿಪ್ತವಾಗಿ ನಿರೂಪಿತವಾಗಿದೆ.

ಕಾವ್ಯ ಪ್ರಕಾಶಿಕೆ (ಶಾರದವಿ-೬ವ): ಪ್ರಸಿದ್ಧವಾದ ಸಂಸ್ಕೃತ ಭಾಷೆಯ ಅಲಂಕಾರ ಗ್ರಂಥ. ‘ವಾಚಕ’ದ ಅರ್ಥವಿಸ್ತಾರಕ್ಕೆ ಈ ಗ್ರಂಥವನ್ನು ಅವಲೋಕಿಸಲು ಸಾಳ್ವಕವಿ ತಿಳಿಸುತ್ತಾನೆ.

ಗಣೇಶ್ವರಾಜ್ಞಿ (ಗ್ನಿ): ‘ಸಾಹಿತ್ಯ ಸಂಜೀವನ’ ಎಂಬ ಗ್ರಂಥ ಬರೆದಂತೆ ತಿಳಿದು ಬರುವುದು.

ರುದ್ರಭಟ್ಟ (೧-೮): ಸಾಳ್ವನು ಒಂದೆಡೆಯಲ್ಲಿ ‘ರುದ್ರಭಟ್ಟನ ರಸಕಳಿಕೆಯೊಳ್’ ಎಂದಿದ್ದಾನೆ. ಆದ್ದರಿಂದ ಈ ರುದ್ರಭಟ್ಟನನ್ನು ಕಾವ್ಯದಾರಂಭದಲ್ಲಿ ಸ್ಮರಿಸಿದ್ದಾನೆ ಹಾಗೂ ಆತನ ಮಾರ್ಗದಲ್ಲಿ ತನ್ನ ಕೃತಿಯನ್ನು ರಚಿಸಿದ್ದೇನೆ ಎಂದಿದ್ದಾನೆ.

ವಿದ್ಯಾನಾಥ (೧-೮): ಈತನು ಓರಂಗಲ್ಲಿನ ಕಾಕತೀಯ ವಂಶದ ಪ್ರತಾಪರುದ್ರನ ಆಶ್ರಿತನೆಂದು ತಿಳಿದುಬರುತ್ತದೆ. ಈ ಆಲಂಕಾರಿಕನ ಕೃತಿಯಾವುದೆಂದು ತಿಳಿಯದು. ಈತನ ಕಾಲ ಕ್ರಿ.ಶ.೧೩ನೇ ಶತಮಾನ. ಈತನ ಮಾರ್ಗದಲ್ಲಿ ಕೃತಿರಚಿಸಿದ್ದಾನೆ ಸಾಳ್ವಕವಿ.

ಸಾಹಿತ್ಯ ಸುಧಾರ್ಣವಂ (ಶಾರದವಿ-೬ವ): ಅಲಂಕಾರ ಗ್ರಂಥ. ಇದರ ಬಗ್ಗೆ ಹೆಚ್ಚಿನ ಸಂಗತಿ ತಿಳಿಯದು. ಇದರಲ್ಲಿ ‘ವಾಚಕ’ದ ಅರ್ಥವಿಸ್ತಾರವನ್ನು ಗಮನಿಸಬಹುದು.

ಹೇಮಚಂದ್ರ (೧-೮): ಈತನು ರಾಜಮಾನ್ಯನಾದ, ಕಲಿಕಾಲ ಸರ್ವಜ್ಞ ಎಂದು ಖ್ಯಾತನಾಗಿದ್ದ ಶ್ವೇತಾಂಬರ ಜೈನಾಚಾರ್ಯ. ಈತನು ವ್ಯಾಕರಣ, ಛಂದಸ್ಸು, ಅಲಂಕಾರ, ನಿಘಂಟು ಮೊದಲಾದ ಶಾಸ್ತ್ರಗಳಲ್ಲಿಯೂ ಜೈನ ದರ್ಶನದಲ್ಲಿಯೂ ಪಾರಂಗತನಾದವನು. ೬೦ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ರಚಿಸಿರುವನು. ಈತನ ಕಾಲ ಕ್ರಿಶ. ೧೦೮೯ ರಿಂದ ೧೧೭೩. ಈತನ ಮಾರ್ಗವನ್ನು ಸಾಳ್ವಕವಿ ಅನುಸರಿಸಿದ್ದಾನೆ.