ಸಂಧಿ ೪

ಸಿಸುತನಮನುತ್ತರಿಸಿ ಮುಕ್ತಿಗೆ | ನೆಸೆಯೆ ಪಿತೃಹರಿನೋವನಾರಿಸ |
ನೊಸೆದು ಚಾರಣಯುಗವನಪರಾಜಿತ ನೃಪತಿ ಕಂಡಾ || ಪಲ್ಲ ||

ಮೇಲೆನಿಪ ಹರುಷಾಂಬುಧಿಯ ಕೆನೆ | ವಾಲ ತಾಯ್ತಂದೆಗಳಿಗೂಡಿಸಿ |
ಲೀಲೆಯಿಂ ತಾ ತಾಯ ಮೊಲೆವಾಲುಂಬನೊಲವಿಂದ ||
ಭೂಲಲನೆಯನು ಸುಖದಿಂದ ತನ್ನಯ | ತೋಳಲೊಱಗಿಸಿ ತೊಟ್ಟಿಲೊಳಗಾ |
ಬಾಲನೊಱಗುವನಳ್ತಿಯಿಂ ಜೋಗುಳೆಯನಾಲಿಸುತ || ೧ ||

ಸುರಪತಿಯ ನಂದನದೊಳಗೆ ಸುರ | ತರುವಿನೆಳಸಸಿ ನೂತ ರತ್ನಾ |
ಕರವು ಇಂಗಡಲೊಳಗೆ ಸಿಂಗದ ಸಿಸು ಕುಲಾದ್ರಿಯೊಳು ||
ತರದಿ ಬೆಳೆವಂದದಲಿ ತನ್ನೊಡ | ನಿರೆಬೆಳೆಯೆ ವಿತರಣ ಸುತೇಜ |
ಸ್ಫುರಣೆ ವಿಕ್ರಾಂತವು ಬೆಳೆವನಾ ಕೃಪಾ ಸದನದೊಳು || ೨ ||

ಆ ಕುಮಾರಕನೊಯ್ಯನೊಯ್ಯನೆ | ಲೋಕದೊಳು ವರ್ತಿಸುವ ಸಿಸುಗಳ |
ನೇಕಲೀಲಾನುತ ವಿನೋದವನೊಂದು ನುರಾಗಿ ||
ಆಕೆಯಳ್ತಿಯ ಸಲಿಸಿ ಶಿಶುತೆಯ | ನೂಕಿ ಸಿತಪಕ್ಷದೊಳು ಬೆಳೆವ ಸು |
ಧಾಕರನವೊಲು ಕಳೆಗಳೊಡವೆಳೆಯಲು ಬೆಳೆವನಾತ || ೩ ||

ತರ್ಕದೊಳು ಭಾಳಾಕ್ಷ ಶಾಬ್ದಿಕ | ಚಕ್ರವರ್ತಿ ಸದಾಗಮದ ಶಾ |
ಸ್ತ್ರಕ್ಕೆ ತಾಂ ಸರ್ವಜ್ಞ ಸದಲಂಕಾರ ಮಾರ್ತಂಡ ||
ಲೆಕ್ಕಗಣಿತಾಚಾರ್ಯನುತ ಚಂ | ದಕ್ಕೆ ಜನ್ಮಕ್ಷೇತ್ರ ಸುಕವಿ |
ತ್ವಕ್ಕೆ ಚತುರಾನನನೆನಿಪ್ಪ ಪೊಗಳ್ತೆಗಿಂಬಾದ || ೪ ||

ಭರತಲಕ್ಷಣಲಕ್ಷ್ಯ ಶಿಕ್ಷಾ | ಗುರುಪುರಾಣ ಚರಿತ್ರ ಸೀಮಾ |
ಪುರುಷನಾಟಕ ಸಾರ್ವಭೌಮ ಸಮಸ್ತ ಕಲೆಗಳಿಗೆ ||
ಪರಮ ಪಂಡಿತನಸ್ತ್ರ ಶಸ್ತ್ರದ | ಪುರುಡಿಗರ ಸುಗಜಾಶ್ವರೋಹಣ |
ಭರವಿರಚಿಯೆನಿಪ್ಪ ಬಿಜ್ಜೆಯ ಕಲಿತನಾ ಕುವರ || ೫ ||

ಹೊನ್ನ ಬಣ್ಣದ ಮೈವೆಳಗು ಸಸಿ | ಯೆನ್ನ ಮೊಗದೊಳು ಮೊಳೆವ ಮೀಸೆಯ |
ಚೆನ್ನ ಮಾಣಿಕದುಟಿ ಬಗಸೆಗ[ಣ್] ತಿಂಗಳರೆನೊಸಲು ||
ಉನ್ನತದ ಭುಜಯುಗಲ ಪೇರೆದೆ | ಹೊನ್ನ ಸೆಳೆನಡು ಬಾಳೆದೊಡೆ ಮೆರೆ |
ದೆನ್ನರಂ ಸೋಲಿಸುವ ಜವ್ವನವಾಂತನಾಕುವರ || ೬ ||

ಅರಸನಪರಾಜಿತ ಕುಮಾರನ | ಕರ ವಿಮಲ ಪಲ್ಲವವ ಕನ್ಯಾ |
ಕರಲಸಿತ ಕಿಸಲಯದೊಳೊಂದಿಸು ಒಂದು ಬಗೆದಂದು ||
ಅರಿಮಥನಸುತೆ ಪ್ರೀತಿಮತಿ ಸೌಂ | ದರಿವೆರಸು ಬಲಬರುತ ನೃಪಾತ್ಮಜೆ |
ಯರನು ಸುಮುಹೂರ್ತದೊಳು ಕುವರಗೆ ಮದುವೆ ನಿಲಿಸಿದನು || ೭ ||

ನಿಲೆದಿಗಂತದೊಳಾನಕ ಸ್ವನ | ನಿಲೆಮಹೋತ್ಸವಪುರದೊಳೆಲ್ಲಿಯು |
ನಿಲೆ ನಿಮಿರ್ದ ಗುಡಿ ತೋರಣಧ್ವಜ ಕೇರಿಕೇರಿಯೊಳು ||
ಪಲವು ಮಂಗಳದೋದು ಗಾಯಕ | ರುಲಿವೆರಸು ಗಣಿಕಾಳಿ ನರ್ತನ |
ನಿಲೆನೃಪಾಂಗಣದೊಳು ಮದುವೆನಿಂದನು ಕುಮಾರಕನು || ೮ ||

ಕುರುಳ ಬೆಳಗಿಂ ನೇವರಿಪ ಕ | ತ್ತುರಿಯ ತಿಲಕವ ತಿದ್ದುವಾಕೆಯ |
ಕೊರಳಹಾರವ ಸೈತು ಮಾಡುವ ಕಾಂಚಿಯನು ಬಲಿವ ||
ಕರದ ಕಂಕಣಗೀಲನೊತ್ತುವ | ಭರದ ನೆವದಿಂ ಪ್ರೀತಿಮತಿ ಸೌಂ |
ದರಿಯ ಸಾದ್ವಸದೊಡನೆ ಲಜ್ಜೆಯನೋಡಿಸಿದ ಕುವರ || ೯ ||

ಯುವತಿಯನು ನೋಡಿಸಲು ನೋಳ್ಪನು | ತವಕದನುವರಿದಪ್ಪಿ ಮೊಗಗೊಡೆ |
ಪವಣಱಿದು ಚುಂಬಿಸುತೆಯಿಂದುಟಿ ಸುಧೆಯನೊಸೆದೀಂಟಿ ||
ಜವದ ಜಾಣುಮೆಯ ಱಿದು ಸೂಳ್ಗಳು | ಸವಿಯ ಮುಂದಿಡೆ ಮೆಱೆಪ ಮೈಗುಡೆ |
ಸವಿಸುಸಿಲ ಸುಖರಸದೊಳೋಲಾಡಿಸಿದನಾ ಕುವರ || ೧೦ ||

ಅರಮನೆಯೊಳಾ ಕುವರನೋಲಗ | ದರಸಿಯರ ಮುಡಿಯಿಂ ಕೆಡೆದ ಕಂ |
ಮಲರ ಮಾಲೆಗೆ ಕತ್ತುರಿಯ ಪುಡಿಗುದುರುಗುಪ್ಪರಕೆ ||
ಸುರಿವ ಕುಂಕುಮರಜಕೆ ತುಂಬಿಗ | ಳಿರೆ ತಿರುಗುತಿರೆ ಕಾವ ತಿಱನೆ |
ತಿರುಗುವುರುಚಕ್ರದವೊಲಿಪ್ಪುದದೊಂದು ಸೊಬಗಿನಲಿ || ೧೧ ||

ಒಂದು ದಿನವಾ ಕ್ಷತ್ರಿಯೊತ್ತಮ | ನಂದು ದುಂದುಭಿ ಮೊಳಗೆ ಸಬ್ಬರ |
ಸಂದಣಿಯೊಳಪರಾಜಿತಕುಮಾರಂಗೆ ಭುಜಬಲಗೆ ||
ಸಂದಯುವರಾಜತೆಯ ಕೊಟ್ಟೊಲ | ವಿಂದ ಮದನಗೆ ಪಟ್ಟಗಟ್ಟುವ |
ಚಂದದಿಂ ಕಟ್ಟಿದನು ಕೊರಲಲಿ ಕಂಠಮಾಲೆಯನು || ೧೨ ||

ಧರೆಯಭಾರವನಾ ಕುಮಾರನೊ | ಳಿರಿಸಿಯರುಹದ್ದಾಸ ವಿಭುಪಂ |
ಜರದೊಳಿರದರೆ ನುಸುಳುವರಗಿಳಿಯೊಂದು ಹರುಷದಲಿ ||
ಇರುತಮಿರಲರನೆಂಬ ಸುಧೆವಳ | ಸುರಿವ ಪಾವನ ಮೇಘುವೆನೆ ಚೆ |
ಚ್ಚರಮೆ ಬಂದುದು ವಿಮಲವಾಹನಜಿನ ಸಮವಸರಣ || ೧೩ ||

ವಂದನಂ ಭಕ್ತಿಯೊಳಿರೆಯಶೋ | ನಂದದರುಹದ್ದಾಸ ಭೂಪನ |
ನಂದು ಕರಕೊಂಡೈದೆಲೈದಿತು ಪುತ್ರ ಮಿತ್ರಾದಿ ||
ಸಂದಣಿಸಿ ತಜ್ಜಿನರನರ್ಚಿಸಿ | ಚಂದದಿಂ ಕೀರ್ತಿಸಿಯೆರಗಿ ಮುದ |
ದಿಂದ ಧರ್ಮದ ಕೇಳ್ದು ಸಂಸೃತಿಗರಸ ಪೇಸಿದನು || ೧೪ ||

ಧರೆಯನಾತ್ಮಜಗಿತ್ತನೈನೂ | ರ್ವರು ನೃಪಾಲರುವೆರಸಿ ಸುತಪ |
ಸ್ಸಿರಿಯೊಳೊಂದಿದನರಸನಾ ಜಿನದತ್ತೆ ಪುರುಡಿಸಿದ ||
ಪರಿಯೊಳತಿ ಸಂಯಮದೊಳೊಂದಿದ | ಳರಮಗನು ಸುಶ್ರಾವಕವ್ರತ |
ನಿರುತನಾಗಿರುತಿರ್ದನಾ ನಿಜ ರಾಜ್ಯ ಚಕ್ರದೊಳು || ೧೫ ||

ಹರಿಮಹಾವವನಾಣೆಯೆಂದೊಡೆ | ಹರಿಯಲಮ್ಮದು ಉರಿವ ಕಿಚ್ಚದು |
ಉರಿಯಲಮ್ಮದು ಗಾಳಿಮೇಲುದ ಸೆಳೆಯಲಮ್ಮದದು ||
ತರುಣಿಯರು ನವರತ್ನ ಭೂಷಣ | ಭರದಿ ಬೆಟ್ಟೆಯ ಪೋಪರೆನಲು |
ಚ್ಚರಿಯೆನಿಸಿತಪರಾಜಿತ ಮಹಾರಾಯನರಸುತನ || ೧೬ ||

ಅಂತವರಿಗಾ ಸಗ್ಗವನು ಕಯ | ಯಾಂತವರಿಗಿಷ್ಟಾರ್ಥವನು ನಿಜ |
ಕಾಂತೆಯರಿಗಾ ಕಾಮಸಾಮ್ರಾಜ್ಯವನು ಪಾಲಿಸುತ ||
ಸ್ವಾಂತದೊಳು ವರಪಂಚಗುರುಪದ | ಮಂ ತಳೆದು ಮಿಗೆರಾಜ್ಯಲಕ್ಷ್ಮೀ |
ಕಾಂತನಾಗಿರುತ್ತಿರ್ದನನ್ನೆಗಮಿತ್ತ ಕೇಳೆಂದ || ೧೭ ||

ವಿಮಲವಾಹನ ಜಿನನುಮೊಡವಿ | ರ್ದಮಳನರುಹದ್ದಾಸಮುನಿಯಂ |
ಭ್ರಮರನೆರದೊಂದಾಗಿ ತುಂಬಿಯ ಹೂವನೆರೆಬಿಟ್ಟು ||
ನಿಮಿರ್ದ ಪಾದರಿವೂಗೆರಗಿದಂ | ತಮಳರೀರ್ವರು ಮುಂದೆ ಸಮಯದೊ |
ಳಮರ್ದರಮೃದ ಶ್ರೀಯನೆಲೆ ಧರಣೀಶ ಕೇಳೆಂದ || ೧೮ ||

ಸುರಪನಾ ನಿರ್ವಾಣಪೂಜೆಗೆ | ಭರದಿ ವೋಪಾನಕನಿನಾದಮ |
ನರಸ ಕೇಳಿದುದೇನೆನಲು ದೇವರ ಪಿತೃವೂ ಜಿನರು ||
ಇರದೆ ಮುಕ್ತಿಗೆ ವೋಗೆ ಪೂಜಿಸ | ಪರಿವಮರವಱಿಯೆನಲು ಮೂರ್ಛೆಗೆ |
ಸರಿದನಾ ವಿಭು ಗುರುವಿಯೋಗವದಾರ ನೋಯಿಸದೊ || ೧೯ ||

ಅವನಿಪತಿಕಿಱಿದಾನು ವೊತ್ತಿನೊ | ಳೆವೆದೆಱೆದು ಬಿಸುಸುಯ್ದ ಮದ್ಗುರು |
ಕವಡಿಕೆಯ ಮಣಿಯೆಂದೆ ಕೊಟ್ಟುರು ಶಿರೋಮಣಿಯ ||
ಅವಧರಿಸಿದನು ತಾನೆನಿಪ್ಪವೊ | ಳವನಿ ಭರದೊಳಗೆನ್ನ ನೊಂದಿಸಿ |
ಶಿವಸಿರಿಯನಪ್ಪುವುದು ತಮಗದು ಗುಣವೆ ಹೇಳೆಂದ || ೨೦ ||

ಆವಜನ್ಮದೊಳಾವ ದೇಶದೊ | ಳಾವಕಾಲದೊಳಾಗಿಸಿದನಾ |
ನಾವ ತಪಸಿನ ಫಲದೆ ಪಡೆದೆನೊ ನನ್ನ ತಂದೆಯನು ||
ದೇವನನು ಇನ್ನಕ್ಕಟಾ ನಾ | ನಾವಜನ್ಮಕೆ ಕಾಣ್ಬೆನೆನಲು ನ |
ಭೋವಚನಮಿನ್ನೈದು ಜನ್ಮಕೆ ಕಾಣ್ಬೆ ನೀನೆನಲು || ೨೧ ||

ಏನ ಹೇಳುವೆನರಸ ಭೂವರ | ನಾನುಡಿಯ ಕಿವಿಯಾರೆ ಕೇಳಿಯು |
ಮಾನಿತರು ಮಂತ್ರಿಗಳು ಬೋಧಿಸಿಯುಂ ಕಿವಿಯ ಕೊಡದೆ ||
ನಾನವರನಿನ್ನೊರ್ಮೆ ಕಂಡತಿ | ಸಾನುರಾಗದೊಳೆಱಗಿದಲ್ಲದೆ |
ಯೇನುವಾಹಾರವನು ಕೊಳೆನೆನುತ್ತ ತರಿಸಂದ || ೨೨ ||

ಸುರಪನಾಸನ ಕಂಪದಿಂದಱಿ | ದರಸನಿರವಿಗೆ ನಸುನಗುತ ತಾಂ |
ನಿರವಿಸಲು ಸುಗ್ಗಿಯರಿಪಱಮೆಯ ಮಱಿಗೆ ಕೆಂಜಾಜಿ ||
ಅರಳುದೋರಿದ ತೆರ [ದಿ ಭೂಪ] ನ | ವರರನಾಪರಿ ಸಮವಸರಣದೊ |
ಳಿರಿಸಿತೋ ಱಿದನಾ ಧನದನೇನಿಂದ್ರಜಾಲಿಗನೊ || ೨೩ ||

ಪುಣ್ಯವುಳ್ಳವನಾವಕಾರ್ಯವ | ನೆಣ್ಣಿದೊಡೆ ಕೈ ಸಾರಿಬಪ್ಪುದು |
ತಿಣ್ಣವೇ ಕೃತಪುಣ್ಯನಾವೆಂದರಸನಂದವರ ||
ಕಣ್ಣ ದಣಿವಿನ ನೋಡಿ ಭಕ್ತಿಯ | ತಿಣ್ಣದಿಂ ತಲೆವಾಗಿ ಪರಕೆಯ |
ತಣ್ಣನಾಂತು ಮಗುಳ್ದು ಪುರದೊಳು ಸುಖದೊಳಿರುತಿರ್ದ || ೨೪ ||

ನನೆಯನಳಿಕುಲಧೂಪಧೂಮವ | ನೆನಸು ಸಂಪಗೆಯಲರದೀಪವ |
ವಿನುತ ಚೂತಫಲಾವಳಿಗಳನು ಅಸುಕೆದಳಿರಲರ ||
ಪನಿವೆರಸು ತಂಗಾಳಿಕೊಡೆ ಚಂ | ದನ ಸುಗಂಧವ ತಂದುದಾ ಪಾ |
ಲ್ಗುನದ ನಂದೀಶ್ವರವು ಜಿನಪೂಜಕನ ಲೀಲೆಯಲಿ || ೨೫ ||

ಓಡಿದುದು ತನಿಮಾಗಿ ಹಂಸೆಗ | ಳಾಡಿದುವು ನೀರ್ದಾಣದೊಳು ಅಳಿ |
ಪಾಡಿದವು ತಾವರೆಗಳೊಳು ವನಕರಿಮೃಣಾಲವನು ||
ನೀಡಿದುದು ಪಿಡಿಗಂದು ಮರಿಗಿಳಿ | ಯೂಡಿದವು ಮಿಗೆ ನೀರಭೋಗಿಗ |
ಳಾಡಿದರು ನಂದನದೊಳಗೆ ತಳಿರಲರ ಪಸೆಗಳೊಳು || ೨೬ ||

ಅಂತುಬಂದಾಪರ್ವದೊಳು ಭೂ | ಕಾಂತನೊಲವಿಂ ಪ್ರೀತಿಮತಿ ನಿಜ |
ಕಾಂತೆವೆರಸಿದ ಪೆಂಡವಾಸದ ತಂಡಸಹವಾಗಿ ||
ಕಾಂತನಂದನದೊಳಗೆ ನಿಜ ಪಿತೃ | ಮಂತಗುಳ್ಚಿದ ಪೊಂಬೆಸದ ಚೆಲು |
ವಾಂತ ತ್ರಿಭುವನ ತಿಲಕವೆಂಬಾ ಬಸದಿಗೇಳ್ತಂದ || ೨೭ ||

ಮೆಱೆವ ವಿಭವ ಸಮೇತವಾ ನಾ | ಡೆಱಿಯ ಚೈತ್ಯಾಲಯಮನೆಯಿದುತ |
ಕಿಱಿದು ದೂರದಿ ವಾಹನವನಿಳಿದಡಿಗಳಂ ತೊಳೆದು ||
ಮಿಱುಪ ರನ್ನದ ತೋರಣಂಗಳ | ನಱಿದು ನೋಡುತೆನುಸುಳಿಫಲನೆಲೆ |
ನೆಱಿವ ಬೆಳ್ಳಿಯ ಗೋಪುರ ದ್ವಾರದೊಳರಸನಂದು || ೨೮ ||

ಜಿನರ್ಗೆವಂದಿಸಿ ಪೋಪಬರ್ಪಾ | ವಿನುತಭವ್ಯರ ಸಂದಣಿಯ ನಂ |
ದೆನಸು ಮೆಚ್ಚುತೆ ಮುಂದೆ ನಡೆದಾ ಮೂಱುಕೋಟೆಗಳಿಂ ||
ಘನತರದ ಹನ್ನೆರಡು ಗೋಪುರ | ದನುವಿನಿಂ ನೀರ್ವೂವಿಡುದು ರೈ |
ಯೆನೆ ಮೆಱೆವ ನಾಲ್ದೆಸೆಯೊಳಿರ್ದರಗೆಱಿಯ ಸೊಬಗಿಂದ || ೨೯ ||

ಮಿಸುಪ ಪೀಠತ್ರಯದ ಮೇಗಡೆ | ಯೆಸೆವನಾಲ್ದೆಸೆಯಲ್ಲಿ ಮಿಗೆ ರಾ |
ಜಿಸುವ ತುದಿ ಮೊದಲಲ್ಲಿ ಜಿನಬಿಂಬಂಗಳಿಂ ಮೆಱೆವ ||
ಪೊಸತೆನಿಪ ವೈಢೂರ್ಯದಾ ನಿ | ಟ್ಟಿಸುವ ವರದುರ್ಮಾನವಂ ಸ್ತಂ |
ಭಿಸುವ ಮಾನಸ್ತಂಭವನು ನೃಪಹಂಸನೆರ್ದೆಗೊಂಡ || ೩೦ ||

ಮುಂದೆ ಪೋಗುತ ಅರಸನತ್ಯಾ | ನಂದದಿಂ ಪಲರನ್ನ ದೊಪ್ಪುವ |
ಸಂದ ಜಿನವರಸಿದ್ಧಬಿಂಬಸ್ತೂಪೆಯನು ನೋಡಿ ||
ಅಂದುನಮಿಸುತ್ತೊಳಗೆ ಪೋಗುತ | ಸೌಂದರದ ಹರಿನೀಳ ನರ್ತನ |
ಮಂದಿರದೊಳಾ ಮೋಹವೀರನ ವಿಜಯವಭಿನಯಿಪ || ೩೧ ||

ನಚ್ಚಣಿಯರನು ನೋಡುತಯತದ | ಬಿಚ್ಚಳಿಪ ಚೆಂಬನ್ನ ಸೊಬಗಿನ |
ಚೊಚ್ಚವಾದಾ ಸಿದ್ಧಮಂಡಪವೆಯಿದಿಯಾಗಮದಿ ||
ಬೆಚ್ಚುಭಯ ಸಂಗವನುಳಿದು ನೆಱಿ | ನಿಚ್ಚಿತದಿ ರುದ್ದಿಗಳನಾಂತರ |
ನಿಚ್ಚಿಸುವ ಜಿನಮುನಿಗಳನು ಮೆಚ್ಚಿದನರಸನ || ೩೨ ||

ತಕ್ಕೆಡೆಗಳೊಳಗಿರ್ದು ಪ್ರಾಕೃತ | ಸಕ್ಕದದರ ಸಲೆಶಾಸ್ತ್ರಮಂ ಕಡು |
ಚೊಕ್ಕಳಿಕೆಯಂ ಕೇಳ್ದ ಪೇಳ್ವ ವಿನೇಯತತಿಗೊಲಿದು ||
ಮೊಕ್ಕಳಮೆ ತಿಳಿಯಿಸುವ ತತ್ಪದ | ನಿಕ್ಕುವಮನಾ ಮುನಿಪರೆಂಬರ |
ವಕ್ಕೆ ಕಿವಿಗೊಡುತೆಯಿದೆ ಮೆಚ್ಚುತಲೈದಿದನು ಭೂಪ || ೩೩ ||

ಪಳುಕಿನೆಸೆವಾ ಕಳಸಮಂಡಪ | ದೊಳಗೆ ಚೆಂದಳಿರಿಂದ ಕರಮಂ |
ಗಳವೆಯಕ್ಷತೆಯಿಂದ ಮಾದಲವಣ್ಗಳಿಂ ದಧಿಯಂ ||
ಬೆಳೆದದೂರ್ವೇನಮಲ ಸೂತ್ರಂ | ಗಳಿನ ನವರತ್ನ ಕಾಂಚನವೋ |
ವಿಲಸಿತದ ಮಾಲೆಗಳಿನೆಸೆವುದನೀಕ್ಷಿಸಿದನರಸ || ೩೪ ||

ಸಂದತೀರ್ಥೋದಕದಿ ನೆಱೆತ | ಳ್ತೊಂದಿದೆಲ್ಲಾ ಗಂಧದಿಂಮೆ ಱಿ |
ವಂದದೊಪ್ಪುವ ಪಲವು ಕಳಸದ ರಚನೆಯನು ಕಂಡು ||
ಕುಂದದಾನಂದವನು ತಳೆವುತೆ | ಮುಂದೆ ಗೋಮೇಧಿಕದಿ ಸವೆದು ಱಿ |
ಚಂದವಾದಾಸ್ನಪನ ಮಂಡಪವೈದಿದನು ಭೂಪ || ೩೫ ||

ಪಲವು ತೆರನಭಿಷೇಕಪೂಜಾ | ಮಲತರದ್ರವ್ಯಂಗಳೀದು |
ಜ್ಜಳಿಪರತ್ನಸ್ನಪನ ಪೀಠದೊಳಿರಿಸಿ ಜಿನವರರ ||
ವಿಲಸಿತದ ಬಿಂಬಂಗಳಿಂಗ | ಗ್ಗಳದೆ ಮಾಳ್ಪಭಿಷೇಕಪೂಜೆಯ |
ನೊಲೆಯದೀಕ್ಷಿಸಿ ವಂದಿಸಿದನಪರಾಜಿತಾಧೀಶ || ೩೬ ||

ಮೊಳಗುವೆಲ್ಲಾ ವಾದ್ಯರವದೊಳು | ಬಳೆದ ಭವ್ಯರ ಜಯ ಜಯ ಧ್ವನಿ |
ಗಳನು ಲಾಲಿಸಿ ತಾನೆ ಜಿನಜನ್ಮಾಭಿಷೇಕವಿದು ||
ಇಳೆಯೆಱೆಯನಂತೆಂದು ಬಗೆವುತ | ತೊಳಗಿ ಬೆಳಗುವ ವಿಮಳ ವಸತಿಯ |
ಬಳಿಗೆ ಭಕ್ತಿಯ ರಸಮೆ ಪೊಂಪುಳಿವಡೆಯೆ ನಡೆತಂದ || ೩೭ ||

ಅರಗೆಱಿಯೊಳೀಸಾಡುತಿರ್ದ | ಚ್ಚರಸಿಯರೊಯೆನೆ ನೀಳರತ್ನ |
ಸ್ಫುರಿತಮಣಿಕುಟ್ಟಿಮದಿ ಬಿಂಬಿಪ ಸಾಲಭಂಜಿಕೆಯ ||
ನೆರವಿ ಮೆರೆದಿರೆ ಶೇಷನೆಂ ಪಲ | ಶರೀರದಿಂ ಪಲವೆಡೆಯೊಳಿರ್ದನೊ |
ಪಿರಿದು ಕಾಂತಿಯೊಯೆನೆ ತೊಳಗಿದವು ಕುಳಿಸಗಂಬಗಳು || ೩೮ ||

ಕುಳಿರ್ಗದಿರುಗಳ ಪಳಿಪಳುಕಿನ | ತಳತಳಿಪ ಭಿತ್ತಿಗಳೊಳೆಡೆಗೆಡೆ |
ಗಿಳಿದು ಪರ್ಬುವ ನಳನಳಿಪ ಲತೆಯೆನಿಪಸುರುಗಲ್ಲ ||
ಬೆಳೆದ ರುಚಿವೀಱುವಗವಾಕ್ಷದಿ | ತೊಳಪ ಬಹುರತ್ನಂಗಳಿಂದು |
ಜ್ಜಳಿಸಿ ಮೆಱಿದಾ ಶಿಖರಬದ್ಧದಿನೆಸೆದುದಾ ಬಸದಿ || ೩೯ ||

ಹೊನ್ನರನ್ನದ ಚುಂಚುಲೋವೆಗ | ಳಿಂನೆ ಱೆದ ಕೆಂಬೆಳಗನಿಂ ಬಿಡು |
ವುನ್ನತದ ಮಾಣಿಕದ ಕಳಸಾಳಿವಳಿಗಳಿಂ ಸಿಮಿರ್ದ |
ಚೆನ್ನ ಪಲವುಂ ಧ್ವಜಪತಾಕೆಯಿ | ನೆನ್ನರುಂ ಕೊಂಡಾಡುವಳ್ಪನು |
ಮುನ್ನಮಾಂತೆಸೆವದಱ ಮುಖಮಂಡಪಕೆ ನಡೆತಂದ || ೪೦ ||

ರಂಗವಲ್ಲಿಯಿಂದೈದು ರನ್ನದ | ರಂಗಿಸಿದ ಪುಡಿಗಳ ಚದುರಿನಿಂ |
ಪಿಂಗದಾನಱುವೂವಲಿಗಳಿಂ ಚಿನ್ನಬೆಳ್ಳಿಗಳ ||
ತುಂಗಘಟದೊಳ್ವಹಿಪ ಸಿಲ್ವದ | ಶಾಂಗಮುಖ್ಯದ ನಱುವೊಗೆಗಳಿಂ |
ತೊಂಗಲಿಪ ಸರಘಂಟೆಯಿಂ ಮೆಱೆವುದನರಸ ಕಂಡ || ೪೧ ||

ಕಳಸ ಕನ್ನಡಿಗಿಂಡಿ ವಿಜ್ಜನ | ಪೊಳೆವ ಸತ್ತಿಗೆ ಚವಲವಿನ ಱೊಳು |
ಬೆಳೆದ ರನ್ನದ ಸುಪ್ರತಿಷ್ಠಧ್ವಜಗಳೊಡವೆರಸಿ ||
ತೊಳಗುವೆಂಟುಂ ಮಂಗಳವನೆರ್ದೆ | ಗೊಳುತ ಪಳುಕಿನ ಗಂಧಕುಟಿಯೊಳು |
ಜ್ವಲಿಪ ಪೀಠತ್ರಯದೊಳೆಸೆವಾ ಜಿನರನೀಕ್ಷಿದ || ೪೨ ||

ಎನಸುವೀಕ್ಷಿಸುವರ್ಗೆ ಪುಣ್ಯದ | ಪೊನಲನೆಯಿದಿ ತುಳುಂಕುವಾಂತಾ |
ತನಿವೆಳಗಿನಿಂ ತೊಳತೊಳಪ ಶಶಿಕಾಂತ ಮಯವಾದ ||
ವಿನುತ ಚಂದ್ರಪ್ರಭಜಿನೇಂದ್ರರ | ನನುಪಮಿತ ಸಲ್ಲಕ್ಷಣಾಂಗರ |
ನನಘರಂ ತತ್ಪ್ರಾತಿಹಾರ್ಯಾಷ್ಟಕದಿ ರಂಜಿಪರ || ೪೩ ||

ಪರಮಹರುಷದಿ ಕಂಡು ಸಾಕ್ಷಾ | ದ್ವರ ಜಿನೇಶ್ವರರೆಂದು ವಸತಿಯ |
ನುರು ಸಮವಶ್ರುತಿಯೆಂದು ಗಣಧರರೆಂದು ಮುನಿವರರ ||
ಮೆರೆದ ಭವ್ಯಾವಳಿಗಳನು ಬಿ | ತ್ತರದ ತ್ರಿಜಗದ ಸಭೆಗೆ… |
…………………… || ೪೪ ||

ಬಳಿಕ ಸಾಷ್ಟಾಂಗಪ್ರಣಾಮದಿ | ಪುಳಕಿತಾಂಗನು ನೆಗಳ್ದ ಮನದ |
ಗ್ಗಳದಿ ಪೂಜಿಸಿಯಭವನಡಿದಾವರೆಗಳನು ನಲಿದು ||
ಚಳಿಸದೀಕ್ಷಿಸುತಿದಿರಿನೊಳು ಕೈ | ಗಳನು ಮುಗಿದಾ ನೊಸಲಿನೊಳು ಸಂ |
ಗೊಲಿಸಿ ಜಯ ಜಯದೇವದೇವೋತ್ತಮನೆಯೆನುತಿರ್ದ || ೪೫ ||

ಜಯ ಮನೋಜಮದೇಭಸಿಂಹನೆ | ಜಯ ದುರಿತ ಕಾಂತಾರದಾವನೆ |
ಜಯ ದಯಾರಸ ಸಿಂಧು ಜಯ ಜಯ ಭವ್ಯ ಜನಬಂಧು ||
ಜಯ ಜಯ ತ್ರಿಭುವನ ಲಲಾಮನೆ | ಜಯ ಜಯ ಶ್ರೀ ಮುಕ್ತಿ ಕಾಂತನೆ |
ಜಯ ಜಯ ಶ್ರೀ ಚಂದ್ರ ಜಿನಯೆಂದೆರಗಿದಾ ಬಳಿಯ || ೪೬ ||

ಇಂದ್ರನಮರಾದ್ರಿಯನು ಬಲಗೊಂ | ಬಂದದಿಂ ಬಲಗೊಂಡುನಿಲೆ ಮುಗಿ |
ಲಿಂದಿಳಿವತಾರೆಗಳೆರಡೊ ತಳ್ತಮಳಮಿಂಚುಗಳೊ ||
ಚಂದ್ರ ಸೂರ್ಯರೋ ಜವಳಿ ಖಚರರೊ | ಎಂದರಸನೀಕ್ಷಿಸುತಿರಲು ಭೋ |
ರೆಂದು ಚಾರಣ ಮುನಿಗಳೀರ್ವರು ಬಂದರೊಲವಿಂದೆ || ೪೭ ||

ಯತಿಪತಿಗಳಂಘ್ರಿಗಳನಪರಾ | ಜಿತನೃಪತಿ ನಿಜಮಕುಟಮಣಿದೀ |
ಧಿತಿಗಳಿಂದರ್ಚಿಸಿಯುಚಿತ ಪೀಠದೊಳು ಕುಳ್ಳಿರಿಸಿ ||
ಅತಿಶಯದಿ ಪರಿಮಳಿಸುವಾಚ್ಛಾ | ದಿತಕುಸುಮವನು ಕಣ್ಣರಿಯದೊಡೆ |
ಚತುರತುಂಬಿಯ ಮೂಗರಿದ ತೆಱನಾದುದರಸಂಗೆ || ೪೮ ||

ಮೋಹವಶದಿಂ ಕಂಗಳ ಱಿಯದೊ | ಡಾ ಹೃದಯವರಿದುದು ಮುನೀಶ್ವರ |
ನೂಹಿಸುವನೊಳಗೊಳಗೆ ಬರುನೋಟವನೆ ಪಸರಿಸುವ ||
ಮೋಹವಿಂತೇಕಿವರೊಳೆನಗೆಂ | ಬಾ ಹದನನ ಱಿವಡೆ ಬಗೆದು ಜಿತ |
ಮೋಹಿಗಳನಾ ಚತುರನೆಳೆನಗೆ ತೊಳಗಲಿಂತೆಂದ || ೫೦ ||

ಫುಲ್ಲಶರವಿಜಯಿಗಳ ನಿಮ್ಮನ | ದೆಲ್ಲಿ ಕಂಡೆನೊ ಕಂಡಱಿದ ಪರಿ |
ಯಲ್ಲಿ ಬಗೆಗಾದಪುದು ಬೆಸಸುವುದೀ ಹದನನೆನಲು ||
ಅಲ್ಲಿಯವರೊಳು ಮುಖ್ಯ ಮುನಿಗಳು | ಪಲ್ಲಕಾಂತಿ ಸುಧಾಕಿರಣವನು |
ಚೆಲ್ಲುತಿರಲಿಂತೆಂದರೆಲೆ ಭೂಪಾಲ ಕೇಳೆಂದ || ೫೧ ||

|| ಅಂತು ಸಂಧಿ ೪ಕ್ಕಂ ಮಂಗಲಮಹಾ ||