ಧ್ವನಿವ್ಯಂಗ್ಯಪ್ರಕರಣಂ

ವ. ಕಾವ್ಯವಿಶೇಷಭೇದಂಗಳಂ ಪೇೞ್ವೆನದೆಂತೆಂದೊಡೆ –

ಸೂ. ಆವೆಡೆಯೊಳಂ ವಾಚ್ಯದತ್ತಣಿಂದಧಿಕಮಪ್ಪ ವ್ಯಙ್ಗ್ಯಮನುಳ್ಳು ದುತ್ತಮಕಾವ್ಯಂ. ಆ ಕಾವ್ಯಮುಂ “ಧ್ವನಿ” ಯೆಂಬ ಪೂರ್ವಾಚಾರ್ಯರಿಂ ಪೇೞಲ್ಪಟ್ಟಿತು.

ಧ್ವನಿಗುದಾಹರಣೆ

ಎಲೆ ಗಡ ಪಾಂಥ ಕೆಯ್ಗಮರ್ದ ಪುಸ್ತಕವೇನಿದು ಪ್ರಶ್ನೆವೇಱ್ವೆಯೋ
ವಿಲಸಿತವೈದ್ಯಕೋವಿದನೊ ನಿಲ್ ನುಡಿ ವೈದ್ಯನೆಯಾದೊಡತ್ತೆಯರ್
ಸಲೆ ನಿಶೆಯಲ್ಲಿ ಕಾಣಳಿನಿತೌಷಧಿವೇೞ್ ಪತಿಯೂರ್ಗೆ ಪೋಗಿ ತಾಂ
ನೆಲಸಿದನಲ್ಲಿ ಬರ್ಪ ದಿನವಾವುದು ಪ್ರಾಶ್ನಿಕನಾದೊಡಿಂತೆ ಪೇೞ್  ೧

ಸೂ. ಆವುದಾನೊಂದೆಡೆಯೊಳ್ ವಾಚ್ಯಾರ್ಥದತ್ತಣಿಂದನತಿಶಯಮಾಗಿ ತೋಱುತಿರ್ಪ ವ್ಯಙ್ಗ್ಯಮನುಳ್ಳುದು ಮಧ್ಯಮಕಾವ್ಯಂ.

ಇದರ್ಕುದಾಹರಣೆ

ನಡೆವ ಸುವರ್ಣಪುತ್ರಿಕೆಯಿದೆಂದೆನೆ ನೀರ್ವೊೞೆಗೊರ್ವಳೞ್ತಿಯಿಂ
ದಡಿಯಿಡುವನ್ನೆಗಂ ಪದದಿನೊಯ್ಯನೆ ಹಬ್ಬೆ ಯದೊಂದು ದಂಡಮಂ
ಪಿಡಿದಿದಿರ್ವರ್ಪನಂ ಪದೆದು ನಿಟ್ಟಿಸಿ ಮೆಯ್ಮಱವಟ್ಟಳ್ ಕರಂ
ತಡಬಡಿಸುತ್ತೆ ನಿಂದು ಪೞೆಗಾಜಿನ ಪುತ್ತಳಿಯಂತಿರೊಪ್ಪಿದಳ್      ೨

ವ. ಇಲ್ಲಿ ಹಬ್ಬೆಯಂ ಕೊಂಡಿದಿರ್ವರ್ಪಿನಂ ಕಂಡು ಕಾಂತೆ ಕಂದಿದಳೆಂಬ ವಾಚ್ಯಾರ್ಥದತ್ತಣಿಂ ಸಂಕೇತಗೃಹದಿಂ ಮರಳಿದನೆಂಬ ವ್ಯಙ್ಗ್ಯರ್ಥಂ (ವಾಚ್ಯಾರ್ಥಮಂ) ಮೀಱದು; ಮತ್ತಮದರ್ಕೆ.

ವಿಮಳತೆವೆತ್ತ ನೀರ್ವೊೞೆಯ ತೀರದೆ ಚಾರುನಿಕುಂಜಪಙ್ತಿಯೊಳ್
ಸಮನಿಸೆ ಬೇಗೆಗಿಚ್ಚಳುರ್ವ ಕೇಸುರಿಯಾಸುರಮಾಗೆ ಕಂಡು ವಿ
ಭ್ರಮಮೞಿದಿರ್ಪುಗುಂದಿ ಬಸಿಱಂ ಪೊಸೆದೊತ್ತಿನೊಳೊಂದಿ ನಿಂದರಂ
ತೆಮರಿ ತೆರಳ್ವ ಕಾರ್ಯಮಣಮಿಲ್ಲದೆ ಬಿಣ್ಪೞಿದೊರ್ವಳೊಪ್ಪಿದಳ್          ೩

ವ. ಇಲ್ಲಿ ತನ್ನ ಸಂಕೇತಸ್ಥಾನಮೞಿದುದೆಂಬ ವ್ಯಙ್ಗ್ಯವಾಚ್ಯಮಂ ಮೀಱಲಾಱದು.

ಸೂ. ಶಬ್ದಾರ್ಥೋಭಯಚಿತ್ರಮಾಗಿ ವ್ಯಙ್ಗ್ಯರಹಿತಮಪ್ಪುದಧಮಕಾವ್ಯಂ.

ಇದರ್ಕುದಾಹರಣೆ

ಅತುಳೋತ್ತಾಳತಿಮಿಂಗಿಳಪ್ರಬಳಪಕ್ಷೋದ್ಧೂತವಾತಪ್ರಕಂ
ಪಿತಕುತ್ಕೀಲಸಮಗ್ರವಿಗ್ರಹಘನಗ್ರಾಹಗ್ರಹವ್ಯಗ್ರವಿ
ಗ್ರತವಕ್ರೋದರಭಾಗಭೂರಿಕಮಠಪ್ರಕ್ಷಿಪ್ತಕಲ್ಲೋಲಕ
ಲ್ಪಿತಕೋಳಾಹಳಕಲ್ಪಕಾಲರಭಸಪ್ರಸ್ಪರ್ಧಿಯಂ ವಾರ್ಧಿಯಂ       ೪

ತಿಳಿನೀರಂ ತೆಂಗು ರಂಭಾಪ್ರತತಿಗೆಱೆಯೆ ರಂಭಾಳಿಗಳ್ ತಮ್ಮ ಸಾರಾ
ವಳಿಯಂ ಪುಂಡ್ರೇಕ್ಷುವಾಟಾವಳಿಗೆ ಸುರಿಯೆ ಪುಂಡ್ರೇಕ್ಷುಗಳ್ ತಮ್ಮ ಸಾರಂ
ಕಳಮಕ್ಷೇತ್ರಕ್ಕೆ ಪೂರಂಬರಿಯಿಸೆ ಕಳಮಶ್ರೇಣಿಗಳ್ ತಮ್ಮ ಪಾಲಂ
ಗಿಳಿವಿಂಡಿಂಗೀಯೆ ಚೆಲ್ವಾದುದು ಪುರಬಹಿರುದ್ಯಾನಕೇದಾರಜಾಳಂ ೫

ಕೊಂಕಣಚಕ್ರವರ್ತಿ ಜಯಕೇಶಿನೃಪಾಲನೊಳಾಂತ ಭೂಭುಜರ್
ಕಂಕಣಚಿತ್ರಪತ್ರಘನಮಾರ್ಗಣಸಂಯುತರಾದರಾನತರ್
ಕಂಕಣಚಿತ್ರಪತ್ರಘನಮಾರ್ಗಸಂಯುತರಾದರೋಡಿದರ್
ಕಂಕಣಚಿತ್ರಪತ್ರಘನಮಾರ್ಗಣಸಂಯುತರಾದರದ್ಭುತಂ   ೬

ಶಬ್ದಾರ್ಥಸ್ವರೂಪನಿರೂಪಣಂ (ಶಬ್ದವೃತ್ತಿ ವಿವರಣಂ)

ವ. ವಾಚಕ, ಲಕ್ಷಣ, ವ್ಯಂಜಕಮೆಂದು ಶಬ್ದಂ ಮೂದೆಱಂ. ಅವರ್ಕೆ ವಿಷಯಮಾದರ್ಥಂ ವಾಚ್ಯ, ಲಕ್ಷ್ಯ, ವ್ಯಙ್ಗ್ಯಮೆಂದು ತ್ರಿವಿಧಂ. ಮಱೆಯಿಲ್ಲದೆ ಸಂಕೇತದಿಂದರ್ಥಮನಱಿಪುವುದು ವಾಚಕಂ; ಅದು ಜಾತಿ, ಗುಣ, ಕ್ರಿಯಾ, ದ್ರವ್ಯ, ಯದೃಚ್ಛಾ ಶಬ್ದಮೆಂದಯ್ದು ತೆಱಂ. ಅದರ್ಕುದಾಹರಣೆ – ಪಾರ್ವಂ, ಕೆಂಚಂ, ದೇವಾಲಯಕೆ ಪೋಗುತುಂ, ದಂಡಿ, ವಿಷ್ಣುಶರ್ಮಂ. ಶಬ್ದಕರೆಬರ್ ಸಾಮಾನ್ಯದಲ್ಲಿ ಸಂಕೇತಮಂ ಪೇೞ್ವರ್ [ಅರೆಬರ್ ವಿಶೇಷದೊಳ್ ಪೇೞ್ವರ್] ಅರೆಬರುಭಯದಲ್ಲಿ ಸಂಕೇತಮಂ ಪೇೞ್ವರ್, ಅದಱೊಳ್ ಕಥಂಚಿತ್ಸಾಮಾನ್ಯಂ, ಕಥಂಚಿದ್ವಿಶೇಷಂ, ಕಥಂಚಿದುಭಯಮೆಂಬುದೆಮಗಂಗೀಕಾರ್ಯಂ, ತದ್ವಿಸ್ತರಮಂ ಗ್ರಂಥವಿಸ್ತರ ಭಯದಿಂ ಪೇೞ್ದುದಿಲ್ಲ, ಬೇಕಾದವರ್ “ಕಾವ್ಯಪ್ರಕಾಶಿಕೆ” “ಸಾಹಿತ್ಯ ಸುಧಾರ್ಣವಂ” ಮುಂತಾದುವ ಱೊಳ್ ನೋಡಿಕೊಂಬುದು.

ಸೂ. ಮುಖ್ಯಾರ್ಥಬಾಧೆಯಾಗೆ, ತದ್ಯೋಗಮುಂಟಾಗೆ, ರೂಢಿಪ್ರಯೋಜನ ದತ್ತಣಿಂದರ್ಥಾಂ ತರಮಂ ತೋರ್ಪುದು ಲಕ್ಷಕಮೆನಿಕ್ಕುಂ. [ವ್ಯಙ್ಗ್ಯಮಿಲ್ಲದುದು ರೂಢಿಯೆನಿಕ್ಕುಂ] ವ್ಯಙ್ಗ್ಯಸಹಿತಮಾದುದು ಪ್ರಯೋಜನಮೆನಿಕ್ಕುಂ –

ರೂಢಿಗುದಾಹರಣೆ – ಕುಶಲಪ್ರವೀಣಾದಿಕಂಗಳ್, ಕುಶಲನೆಂದು ಪುಲ್ಗೊಯ್ವನ ಪೆಸರ್, ಅದಂ ಬಾಧಿಸಿ ಚದುರಂಗೆ ನಾಮಮಾದುದು ಪ್ರವೀಣನೆಂದು ಒಳ್ಳೆಯ ವೀಣೆಯುಳ್ಳವನ ಪೆಸರ್, ಅದಂ ಬಾಧಿಸಿ ಒಳ್ಳೆಯ ಪ್ರೌಢಂಗೆ ನಾಮಮಾದುದು.

ಪ್ರಯೋಜನ ಲಕ್ಷಣೆಯ ವಿವರಣಮಂ ಪೇೞ್ವೆನದೆಂತೆಂದೊಡೆ (೧) ಉಪಾದಾನ ಲಕ್ಷಣೆಯೆಂದುಂ, (೨) ಲಕ್ಷಣಲಕ್ಷಣೆಯೆಂದುಂ, (೩) ಗೌಣ ಸಾರೋಪಲಕ್ಷಣೆ ಯೆಂದುಂ, (೪) ಗೌಣಸಾಧ್ಯವಸಾನಲಕ್ಷಣೆಯೆಂದುಂ (೫) ಶುದ್ಧಸಾರೋಪಲಕ್ಷಣೆಯೆಂದುಂ (೬) ಶುದ್ಧಸಾಧ್ಯವಸಾನಲಕ್ಷಣೆಯೆಂದುಂ ಪ್ರಯೋಜನಲಕ್ಷಣೆಗಳಾಱು ತೆಱಂ ಅವು ಗೂಢಾಗೂಢ ಭೇದದಿಂ ಪನ್ನೆರೞ್ತೆಱಂ.

(೧) ಅಲ್ಲಿಯುಪಾದನಲಕ್ಷಣೆಯೆಂತೆಂದೊಡೆ – ತನ್ನ ಪ್ರಸಿದ್ಧ ನಿಮಿತ್ತಂ ತನ್ನು ಪಾದಾನ ದತ್ತಣಿಂ ಪರಾಕ್ಷೇಪಮಂ ಮಾೞ್ಪುದು ಉಪಾದಾನಲಕ್ಷಣೆಯೆನಿಕುಂ. ಅದೆಂತೆಂದೊಡೆ – “ಲಕ್ಷಸಬಳಂ ಬಂದುದು” ಎಂಬಲ್ಲಿ ಅಚೇತನಮಪ್ಪ ಸಬಳಂಗಳ್ಗೆ ಗಮನಮಿಲ್ಲಾದು ದಱಿಂ ಮುಖ್ಯಾರ್ಥಬಾಧೆಯಾಗೆ ಸಬಳಮಂ ಪಿಡಿದ ವೀರಭಟರ್ ಬಂದರೆಂಬು ದರ್ಥಂ – ಸಬಳಿಗನಾಧಾರಂ, ಸಬಳಮಾಧೇಯಂ, ಅದಱಿಂದಾಧಾರಾ ಧೇಯ ಭಾವಸಂಬಂಧಮೆನಿಕ್ಕುಂ. ಶಸ್ತ್ರಬಾಹುಳ್ಯರೌದ್ರಾದಿಕಂಗಳ್ ಪ್ರಯೋಜನಂ. ಇದರ್ಕು ಪಾದಾನಲಕ್ಷಣೆಯೆಂದಜಹಲ್ಲಕ್ಷಣೆಯೆಂದು ನಾಮಾಂತರಂ.

(೨) ಇನ್ನು ಲಕ್ಷಣಲಕ್ಷಣೆಯೆಂತೆಂದೊಡೆ – ತನ್ನ ಸಂಬಂಧಿಯಾದರ್ಥಂ ನಿಮಿತ್ತಮಾಗೆ ತನ್ನರ್ಥಮಂ ಬಿಡಲ್ಪಟ್ಟುದಾವುದಾನೊಂದುಂಟು ಅದು ಜಹಲ್ಲಕ್ಷಣೆ ಯೆನಿಕುಂ, ಲಕ್ಷಣಮೆಂದು ತನ್ನರ್ಥಮಂ ಪರಾರ್ಥದೊಳಾರೋಪಣಂ ಮಾೞ್ಪುದಱಿಂ ಕಾಣಲ್ಪಟ್ಟ ಲಕ್ಷಣೆ ಲಕ್ಷಣಲಕ್ಷಣೆಯೆನಿಕ್ಕುಂ, ಇದರ್ಕೆ ಜಹಲ್ಲಕ್ಷಣೆಯೆಂದುಂ, ಸಾಂತರಾರ್ಥವಿಷಯ ಲಕ್ಷಣೆಯೆಂದುಂ ಶಾಸ್ತ್ರಾಂತರದೊಳ್ ಪರ್ಯಾಯನಾಮಂ, ಅದರ್ಕುದಾಹರಣೆ – “ಪೊೞೆಯೊಳ್ ಪೊೞಲ್” ಎಂಬಲ್ಲಿ ಜಲದೊಳ್ (ಪೊೞಲ್) ಪುರಮಸಂಭಾವ್ಯ ಮಾದುದಱಿಂ ಮುಖ್ಯಾರ್ಥಬಾಧೆ, ತತ್ಸಂಬದ್ಧಮಪ್ಪ ತಡಿಯೊಳ್ ಪೊೞಲ್ ಎಂಬುದರ್ಥಂ, ಶೈತ್ಯಪಾವನಾದಿಕಂಗಳ್ ಪ್ರಯೋಜನಂ-

(೩) ಗೌಣಸಾರೋಪಲಕ್ಷಣೆಯೆಂದೊಡೆ – ಆರೋಪ್ಯಾರೋಪಕಂಗಳ್ ಆವುದಾನೊಂದೆಡೆಯೊಳ್ ಭಿನ್ನಮಾಗಿ ಪೇೞಲ್ಪಟ್ಟುವು ಸ್ವಭಾವದಿಂದಾಲಕ್ಷಣೆ ಗೌಣ ಸಾರೋಪಲಕ್ಷಣೆ ಯೆನಿಕುಂ – ಅದರ್ಕುದಾಹರಣೆ – “ಪಾರ್ವನೆೞ್ತೆಂ” ಬಲ್ಲಿ ಪಾರ್ವಂಗೆ ಪಾದ ಚತುಷ್ಟಯಂ ಶೃಂಗದ್ವಯಾದಿಗಳಸಂಗತಮಾದುದಱಿಂ ಮುಖ್ಯಾರ್ಥ ಬಾಧೆ, ಸ್ಥೂಲ ಸತ್ವಾದಿಕಂಗಳ್ ಲಕ್ಷ್ಯಂ, ಜಾಡ್ಯಮಾಂದ್ಯಾದಿಕಂಗಳ್ ಪ್ರಯೋಜನಂ.

(೪) ಗೌಣಸಾಧ್ಯವಸಾನಕ್ಕೆ ಉಪಮೇಯಂ ಪೋಗೆ ಉಪಮಾನಂ ಉೞಿದೊಡೆ ಗೌಣ ಸಾಧ್ಯವಸಾನಮೆನಿಕ್ಕುಂ. “ಅವಳ್ ತಾವರೆಗೊಳದೊಳಡಂಗಿದೊಳಡರಸಿದೆಂ” ಎಂಬಲ್ಲಿ ಮುಖ್ಯಾರ್ಥಬಾಧೆ, ತಾವರೆಯಂತಪ್ಪ ಮುಖಮನುಳ್ಳವಳೆಂಬುದು ಸಾದೃಶ್ಯಂ. ಪದ್ಮಿನಿಜಾತಿಸ್ತ್ರೀಯೆಂಬುದು ವ್ಯಙ್ಗ್ಯಂ.

(೫) ಶುದ್ಧಸಾರೋಪಲಕ್ಷಣೆಯಂತೆಂದೊಡೆ – ಸಾದೃಶ್ಯ ಸಂಬಂಧಮಿಲ್ಲದೆ ಸಂಬಂಧಾ ರೋಪದಿಂ ತಾದಾತ್ಮ್ಯಮಾಗಱಿವುದು ಶುದ್ಧಸಾರೋಪಲಕ್ಷಣೆಯೆನಿಕ್ಕುಂ. “ಆವ ನೊರ್ವನ ಖಡ್ಗಂ ದೇವಸ್ತ್ರೀಯರ್ಕಳ ಮದುವೆಯಲ್ಲಿ ಕೆಯ್ಗೂಡುವುದವಂ” ಪ್ರಯೋಜ್ಯ ಪ್ರಯೋಜಕಭಾವಮೆಂಬುದು ಸಂಬಂಧಂ. ಧರ್ಮವಿಜಯಮೆ ವ್ಯಙ್ಗ್ಯಂ.

(೬) ಶುದ್ಧಸಾಧ್ಯವಸಾನಮೆಂತೆಂದೊಡೆ – ಇದು ಕೆಯ್ಗೂಡದು ಎಂಬಲ್ಲಿ ಎಲ್ಲಂ ಪೂರ್ವ ದಂತೆ ಭೇದಂ – ವಿಶೇಷಂ ಗೂಢವ್ಯಙ್ಗ್ಯಗಳಾಱವರನೀ ತೆಱದಿನೂಹಿಸಿ ಕೊಳ್ವುದು –

ಅರೆಬರ್ ಜಹದಜಹಲ್ಲಕ್ಷಣೆಯಂ ಪೇೞ್ವರದೆಂತೆಂದೊಡೆ – “ಗ್ರಾಮಂ ಬಂದುದು, ವನಂ ಪೂತುದು, ನಗರಂ ಬೆಂದುದು, ಇವು ಮುಂತಾದುವಱೊಳ್ ಗ್ರಾಮ ವನ ನಗರಂಗಳ್ ಏಕದೇಶದಿಂ ಬಂದುದು ಪೂತುದು ಬೆಂದುದು. ಎಂಬಲ್ಲಿಯೆಲ್ಲಂ ಬಂದುದು, ಪೂತುದು, ಬೆಂದುದು, ಎಂಬರ್ಥಮಿಲ್ಲಾದುದಱಿಂ ಜಹದಜಹಲ್ಲಕ್ಷಣೆ ಯೆನಿಕುಂ.

ಇವು ಮೊದಲಾದ ಲಕ್ಷಣೆಗಳೊಳ್ ಅವಿನಾಭಾವಸಂಬಂಧಂ ಪೊಱಗಾಗಿ ಉೞಿದ ಸಂಬಂಧಂಗಳಿವಱೊಳೊಳವು – ಅನಿನಾಭಾವಸಂಬಂಧಮೆಂದೊಡೆ “ದೊಡ್ಡವನಪ್ಪ ದೇವದತ್ತಂ ಪಗಲಿನಲ್ಲಿ (ದಿವದಲ್ಲಿ) ಯೆಂದುಂ ಉಣ್ಣ” ನೆಂಬುದಱಿಂ “ರಾತ್ರಿಭೋಜನ ಮುಂಟೆಂ” ಬುದಱಿಯೆ ಬರುತ್ತಿರ್ದತ್ತದುಕಾರಣಂ ಇವು ಮುಂತಾದುವು ಲಕ್ಷಣೆಯಾಗುಗೆ ಎಂದೊಡೆ ಅವಿನಾಭಾವಮುಂಟಪ್ಪುದಱಿಂ ಲಕ್ಷಣೆಯಲ್ತು.

ತಾದಾತ್ಮ್ಯದೊಳ್ ಇಂದ್ರನಿಮಿತ್ತಮಾದಮರರ್ಗಿಂದ್ರನೆಂಬುದು. ಸ್ವಸ್ವಾಮಿ ಸಂಬಂಧ ದೊಳ್ ಅರಸಾಳನರಸೆಂಬುದು. ಅವಯವಾವಯವಿಸಂಬಂಧದೊಳ್ ತುದಿವೆರಲಂ ಪಿಡಿದು ಕೆಯ್ಯಂ ಪಿಡಿದನೆಂಬುದು. ತತ್ಕರ್ತೃ ಸಂಬಂಧದೊಳ್ ಚಿತ್ರಿಗನಲ್ಲದನಂ ಚಿತ್ರಮಂ ಬರೆವುದಱಿಂ ಚಿತ್ತರಿಗನೆಂಬುದು. ಇವು ಮೊದಲಾದುವಂ ನೋಡಿಕೊಂಬುದು.

ಅವಿನಾಭಾವಸಂಬಂಧಮಂ ಪರಿಹರಿಸಿದ ಕಥನಮೆಂತೆಂದೊಡೆ – “ಗೌರನು ಬಂಧ್ಯಃ” (ಪಶುವು ಕೊಲ್ಲಲ್ಪಡತಕ್ಕುದು) ಎಂಬ ಈ ಶ್ರುತಿವಾಕ್ಯದಿಂ ಗೋಜಾತಿಯೊಳ್ ವಧಬಂಧಾದಿ ಕಂಗಳ್ ಅಶಕ್ಯಮಾದುದಱಿಂ ಜಾತಿಯೊಡನವಿನಾಭಾವಮಾದ ವ್ಯಕ್ತಿಗಾಕ್ಷೇಪಂ. ಅದಱಿಂ ವ್ಯಙ್ಗ್ಯಮಿಲ್ಲಾಗಿ ಲಕ್ಷಣೆಯಲ್ತು –

ಶಬ್ದಮೂಲವ್ಯಂಜಕಮೆಂತೆಂದೊಡೆ

ಅನೇಕಾರ್ಥಮನುಳ್ಳ ಶಬ್ದಕ್ಕೆ ಸಂಯೋಗಾದಿಕಂಗಳಿಂದೇಕಾರ್ಥದೊಳ್ ನಿಯಮ ಮುಂಟಾಗರ್ಥಾಂತರಮಂ ತೋರ್ಪುದು ಶಬ್ದಮೂಲವ್ಯಂಜಕಮೆನಿಕುಂ-

ಸಂಯೋಗಾದಿಕಂಗಳೆಂತೆಂದೊಡೆ

ಸಂಯೋಗಮೆಂದುಂ, ವಿಪ್ರಯೋಗಮೆಂದುಂ, ಸಾಹಚರ್ಯಮೆಂದುಂ, ವಿರೋಧಮೆಂದುಂ, ಅರ್ಥಮೆಂದುಂ, ಪ್ರಕರಣಮೆಂದುಂ, ಲಿಂಗಮೆಂದುಂ, ಅನ್ಯಶಬ್ದ ಸನ್ನಿಧಿಯೆಂದುಂ, ಸಾಮರ್ಥ್ಯಮೆಂದುಂ, ಔಚಿತ್ಯಮೆಂದುಂ, ದೇಶಮೆಂದುಂ, ಕಾಲಮೆಂದುಂ, ವ್ಯಕ್ತಿಯೆಂದುಂ, ಸ್ವರಮೆಂದುಂ, ಇವು ಮೊದಲಾದುವು ಶಬ್ಧಾರ್ಥಂಗಳ್ಗೆ ಸಂದೇಹಮಾದೊಡೆ ನಿಶ್ಚಯಮಂ ಮಾೞ್ಪುವು. ಅವರ್ಕೆ ಕ್ರಮದಿಂದುವಾ ಹರಣೆಗಳೆಂತೆಂದೊಡೆ. “ಶಂಖ ಚಕ್ರಾಂಕಿತ ಹರಿ ಬಂದ” ನೆಂಬಲ್ಲಿ ಹರಿಶಬ್ದಕ್ಕೆ ಸಿಂಹಾದ್ಯ ನೇಕಾರ್ಥಂಗಳುಂಟಾದೊಡಂ ಶಂಖಚಕ್ರಶಬ್ದ ಸಂಯೋಗದಿಂ ಕೃಷ್ಣನೆಂಬರ್ಥಮಾದುದು – “ಸೀತೆಯಿಂದಗಲ್ದ ರಾಮ” ನೆಂಬಲ್ಲಿ ರಾಮಶಬ್ದಕ್ಕೆ ಅನೇಕಾರ್ಥ ಮುಂಟಾದೊಡಂ ಸೀತಾವಿಯೋಗದಿಂದೆ ದಶರಥರಾಮನೆಂಬುದರ್ಥಂ – “ರಾಮ ಲಕ್ಷ್ಮಣರ್ ಸಂಗ್ರಾಮದೊಳ್ ಕೋದಂಡಮಂ ಪಿಡಿದ” ರೆಂಬಲ್ಲಿ ರಾಮಶಬ್ದಕ್ಕ ನೇಕಾರ್ಥ ಮುಂಟಾದೊಡಂ ಲಕ್ಷ್ಮಣಸಾಹಚರ್ಯದಿಂ ರಾಘವನೆಂಬುದರ್ಥಂ, – “ಕರ್ಣಾರ್ಜು ನರ್ ಕಾದಿದ” ರೆಂಬಲ್ಲಿ ಅರ್ಜುನ ಶಬ್ದಕ್ಕೆ ನಾನಾರ್ಥಮುಳ್ಳೊಡಂ ವಿರೋಧದಿಂ ಪಾರ್ಥನೆಂಬುದರ್ಥಂ – “ಮಕರಧ್ವಜದೇವಂ” ಎಂಬಲ್ಲಿ ದೇವಶಬ್ದಕ್ಕೀಶ್ವರವಿರೋಧ ವಾಚಕತ್ವಮುಳ್ಳೊಡಂ ಅರ್ಥದಿಂ ಕಾಮನೆಂಬುದು. “ದೇವರಱಿಯದವಿಷಯಮಿಲ್ಲ” ಎಂಬಲ್ಲಿ ಪ್ರಕರಣದಿಂ ದೇವ ಶಬ್ದಕ್ಕೆ ನೀನೆಂಬುದರ್ಥಂ, “ಮಕರಧ್ವಜಂ” ಕೋಪಿಸಿದ ನೆಂಬಲ್ಲಿ ಮಕರಧ್ವಜಶಬ್ದಕ್ಕೆ ಸಮುದ್ರಾರ್ಥಮುಳ್ಳೊಡಂ ಕೋಪಚಿಹ್ನದಿಂ ಮದನನೆಂಬು ದರ್ಥಂ. “ತ್ರಿಪುರಾರಿದೇವ”ನೆಂಬಲ್ಲಿ ದೇವಶಬ್ದಕ್ಕೆ ಪಲವರ್ಥಮುಳ್ಳೊಡಂ ತ್ರಿಪುರಶಬ್ದ ಸಾನ್ನಿಧ್ಯದಿಂ ಭವಾನೀಪತಿಯೆಂಬುದರ್ಥಂ – “ಮಧುವಿಂ ಸೊರ್ಕಿತು ಕೋಕಿಳ” ಮೆಂಬಲ್ಲಿ ಮಧುಶಬ್ದಕ್ಕೆ ಪುಷ್ಪರಸಂ ಮೊದಲಾದ ನಾನಾರ್ಥಮುಳ್ಳೊಡಂ ಸಾಮರ್ಥ್ಯದಿಂ ವಸಂತಕಾಲಮೆಂಬುದರ್ಥಂ. ಭೋಜನದೊಳ್ “ಸೈಂಧವಮಂಕೊಂಡು ಬಾ” ರೆಂಬಲ್ಲಿ ಸೈಂಧವಶಬ್ದಕ್ಕನೇಕಾರ್ಥಮುಳ್ಳೊಡಮೌಚಿತ್ಯದಿಂ ಲವಣಮೆಂದಱಿದುಕೊಳ್ವುದು, – “ಪಟ್ಟಣಮಂ ಪರಮೇಶ್ವರಂ ಪಾಲಿಸಿದ” ನೆಂಬಲ್ಲಿ ದೇಶದಿಂ ಪರಮೇಶ್ವರಶಬ್ದಕ್ಕೆ ರಾಜನೆಂಬುದರ್ಥಂ, – “ಚಿತ್ರಭಾನು ಶೋಭಿತ” ಮೆಂಬಲ್ಲಿ ದಿವಮಾದೊಡೆ ಸೂರ್ಯನೆಂದಱಿವುದು, ಇರುಳಾದೊಡೆ ಬೆಂಕಿಯೆಂದಱಿವುದು. “ನಾರಿಗಳಂ ಕಡಿದ”ನೆಂಬಲ್ಲಿ ನಪುಂಸಕವ್ಯಕ್ತಿಯಿಂ ಬಿಲ್ಲ ಹೆದೆಗಳಂ ಕಡಿದನೆಂಬುದರ್ಥಂ. “ನಾರಿಯರಂ ಕಡಿದನೆಂಬಲ್ಲಿ ಸ್ತ್ರೀಲಿಂಗವ್ಯಕ್ತಿಯಿಂ ಸ್ತ್ರೀಯರಂ ಕಡಿದನೆಂಬುದರ್ಥಂ, ಸ್ವರಗಳ್ ವೇದದಲ್ಲಿ ಪ್ರಸಿದ್ಧಂಗಳ್, ಕಾವ್ಯಮಾರ್ಗದೊಳ್ ಅಪ್ರಸಿದ್ಧಂ. ಆದಿ ಶಬ್ದದಿಂದಭಿನಯಾದಿ ಕಂಗಳ್.

ಅಭಿನಯಕ್ಕುದಾಹರಣೆ –

ಇಂತಪ್ಪ ಕಣ್ಗಳಾಕೆಯ
ನಿಂತಪ್ಪಾ ಕುಚಯುಗಂಗಳಾ ಬಾಲಿಕೆಯಂ
ಇಂತಪ್ಪ ನಡುವಿನಾಕೆಯ
ನಂತಿರ್ದಂತಗಲೆ ಹಂಪನಂತಿಂತಾದಂ   ೭

ವ . ಈ ರೀತಿಯಿಂದನೇಕಾರ್ಥಮುಳ್ಳ ಶಬ್ದಕ್ಕೆ (ಅರ್ಥ) ನಿಯಂತ್ರಣಮಾಗೆ ಅರ್ಥಾಂತರ ಪ್ರತೀತಿಗೆ ಕಾರಣಮಪ್ಪುದು ಶಬ್ದಮೂಲವ್ಯಂಜನೆಯೆನಿಕುಂ.

ಅದರ್ಕುದಾಹರಣೆ

ಶಬ್ದಮೂಲವ್ಯಙ್ಗ್ಯಂ :-

ವಿದಳಿತಮಾದ ಕಂಟಕ ಕದಂಬದಿನುರ್ವಿದ ವಾಹಿನೀಸಮೂ
ಹದಿನುರೆ ವೃದ್ಧಿವೆತ್ತು ಭುವನಾಶ್ರಯದಿಂ ಬಗೆಗೊಳ್ವ ಕುಂದದ
ಭ್ಯುದಯದ ಲೀಲೆವೆತ್ತೞಱಿ ಪೋದ ಮದೋದ್ಧತರಾಜಹಂಸ ತೇ
ಜದಿನೆಸೆದತ್ತು ರಾಜ್ಯವಿಭವಂ ಜಲದಾಗಮಚಕ್ರವರ್ತಿಯಾ            ೮

ಅರ್ಥವಿವರಣಂ – ಕೆಡವಲ್ಪಟ್ಟ ಕಂಟಕತರುಗಳ ಸಮೂಹದಿಂ, ಉಬ್ಬಿದಂಥ ಸೇನಾ ಸಮೂಹದಿಂ, ಪೆರ್ಚುಗೆವಡೆದು, ಲೋಕಕಾಶ್ರಯವಾಗಿ, ಬಗೆಗೊಳ್ವ, ಕುಂದ ದೈಶ್ವರ್ಯದ ಲೀಲೆವೆತ್ತು, ಮಸುಳಿಹೋದಂಥ ರಾಜಶ್ರೇಷ್ಠರುಗಳ ತೇಜದಿಂ ಜಲದಾಗಮಚಕ್ರವರ್ತಿಯೆಂಬ ಪೆಸರುಳ್ಳಾತನ ರಾಜ್ಯವಿಭವಮೊಪ್ಪಿತು – ಎಂಬುದು ವಾಚ್ಯಾರ್ಥಂ. –

ಇಲ್ಲಿ ಪ್ರಕರಣಾದಿಬಲದಿಂ ಶಬ್ದಂಗಳ್ಗೀಯರ್ಥದಲ್ಲಿ ನಿಯಂತ್ರಣಮಾಗೆ ಆವುದಾ ನೊಂದಱಿಂ, ವಿದಳಿತಮಾದ ಕಂಟಕದಿಂ – ಕೆಡವಲ್ಪಟ್ಟ ಮುಳ್ಳನುಳ್ಳಕಡವದ ಮರದಿಂ, ಉಬ್ಬಿದ ನದಿಗಳ ಸಮೂಹದಿಂ, ಪೆರ್ಚುಗೆವಡೆದು ಕೆಡಿಸಲ್ಪಟ್ಟ ಚಂದ್ರ ಸೂರ್ಯರ ತೇಜಮನುಳ್ಳ ಮೞೆಗಾಲಮೆಂಬ ಚಕ್ರವರ್ತಿಯ ರಾಜ್ಯವಿಭವಮೊಪ್ಪಿತ್ತು ಎಂಬರ್ಥ (ಎರಡರ್ಥ) ಮಂ ಕೊಂಡುಬರ್ಪುದು ಶಬ್ದಮೂಲವ್ಯಙ್ಗ್ಯಮೆಂದಱಿವುದುದ.

II ಅರ್ಥಶಕ್ತಿಮೂಲವ್ಯಂಜನೆಯಂ ಪೇೞ್ವೆನಂದೆಂತೆಂದೊಡೆ

ಶಬ್ದಮಂ ಸಹಕಾರಿಯಂ ಮಾಡಿಕೊಂಡು ಅರ್ಥದಿಂದೆ ಅರ್ಥಾತರಂ ಪುಟ್ಟುವುದು ಅರ್ಥಮೂಲವ್ಯಂಜನೆಯೆನಿಕ್ಕುಂ, ಆಯರ್ಥಂ ವಾಚ್ಯಮೂಲಂ, ಲಕ್ಷ್ಯಮೂಲಂ, ವ್ಯಙ್ಗ್ಯಮೂಲಮೆಂದು ಮೂದೆಱಂ. (೧) ವಾಚ್ಯದತ್ತಣಿಂದರ್ಥಾಂತರಂ ಪುಟ್ಟುವುದು ವಾಚ್ಯಮೂಲ ಮೆನಿಕ್ಕುಂ.

ಅದರ್ಕುದಾಹರಣೆ

ಇಂದೆ ವಲಂ ಗೃಹೋಪಕರಣಂ ಮನೆಗಿಲ್ಲೆನುತೆಯ್ದೆ ಮತ್ತೆ ನೀ
ನೊಂದಿದ ಚಿತ್ತವಿಹ್ವಳತೆಯಿಂದಿರೆ ಕಾರಣಮೇವುದಬ್ಬೆ ನಾಂ
ತಂದಪೆನಿಂತು ಕಾಲವಿರದೇವೆಸನೇವುದು ಕಜ್ಜಮೆಂದ ಮಾ
ತಂ ದಯೆಯಿಂ ನಿರೂಪಿಪುದು ಪೋಪೆನೆ ಕಾಡದೆ ಪೇೞ್ ನಿರಾಕುಳಂ            ೯

ವಿವರಣಂ – ಇಲ್ಲಿ ಸರಸನಪ್ಪ ವಿಟವಿಶೇಷನಂ ಬಯಸಿ ಪೋಪುದರ್ಕೆತಾಯೊಡ ನಾಡುವ ಗಣಿಕೆಯ ಮಾತು. ಇಂತು ಕಾಲವಿರಬಾರದೆಂಬುದಱಿಂ ಸ್ವೇಚ್ಛಾವಿಹಾರಿಣಿ ಯೆಂಬರ್ಥಂ ವ್ಯಙ್ಗ್ಯಂ.-

(೨)ಲಕ್ಷಣಮೂಲಗೂಢವ್ಯಙ್ಗ್ಯಂ ಪ್ರಾಧನ್ಯಮಗೆ ವಾಚ್ಯಾರ್ಥಾವಿವಕ್ಷಿತ ಮಾಗಿಯೆಲ್ಲಿ ತೋರ್ಕುಮದು ಲಕ್ಷಣಮೂಲಧ್ವನಿಯೆನಿಕ್ಕುಂ, ಅದು (a) ಅರ್ಥಾಂತರ ಸಂಕ್ರಮಿತ ವಾಚ್ಯ (b) ಮತ್ಯಂತತಿರಸ್ಕೃತ ವಾಚ್ಯಮೆಂದಿರ್ತೆಱಂ.

ವಾಚ್ಯಾರ್ಥಂ ಪ್ರಯೋಜನಮಿಲ್ಲದುದ ಱಿಂದರ್ಥಾಂತರಪರಿಣಮಿತಂ (a) ಅರ್ಥಾಂತರ ಸಂಕ್ರಮಿತವಾಚ್ಯಮಪ್ಪುದು ಎಂತೆಂದೊಡೆ –

ಲಕ್ಷ್ಯಂ

ಆನಾಗಿರ್ದಪೆನೊಲವಿಂ
ನೀನಱಿಯಲ್ ಪೇೞ್ದೆನೀ ಬುಧರ್ಕಳ ನಡುವಿ
ರ್ದೀ ನಿನ್ನ ಬುದ್ಧಿಲಾಸಮ
ದೇನಿಲ್ಲದೆ ನಿಲ್ವುದಿಲ್ಲ ನೆಲೆಗೊಂಡನಿಶಂ       ೧೦

ವಿ. ಇಲ್ಲಿ ಪ್ದೇನೆಂಬುದು ಮಂತ್ರಾದ್ಯುಪದೇಶಮಾಗಿ ಪರಿಣತಮಾದುದು ಮದಱಿಂ ನಿಷ್ಪ್ರಯಾಸದಿಂ ಶಿಕ್ಷಿಪೆನೆಂಬುದು ವ್ಯಙ್ಗ್ಯಂ –

ವ . ಒಂದಾನೊಂದು ಠಾವಿನಲ್ಲಿ ವಾಚ್ಯಾರ್ಥಂ ಯುಕ್ತುಶೂನ್ಯಮಾದುದಱಿಂ

(b) ದತ್ಯಂತತಿರಸ್ಕೃತಂ, ಎಂತೆಂದೊಡೆ –

ಲಕ್ಷ್ಯಂ

ಅರಸೆಲೆ ನೀವೆ ಮಾಡಿದುಪಕಾರವನಾಡುವೊಡೆನ್ನ ಶಕ್ಯವ
ಲ್ತುರುಸುಜನತ್ವಕಿಂತೆಸೆವ ನಿಮ್ಮನೆ ಪೇೞ್ದ ಬೞಿಕ್ಕೆ ಮಿಕ್ಕರಂ
ಸ್ಮರಿಯಿಸತಕ್ಕುದಲ್ತು ಬಿಡದೀ ತೆಱದಿಂದೆ ಪೆಱರ್ಗೆ ಲೇಸನಾ
ದರದೊಳೆ ಮಾೞ್ಪ ನೀವವನಿಯೊಳ್ ಸ್ಥಿರಜೀವಿಗಳಾಗಿ ವರ್ತಿಸಿಂ   ೧೧

ವಿ. ಇಲ್ಲಿ ಉಪಕಾರಮಿಲ್ಲದವನಂ ಕೂರ್ತು ವಿಪರೀತಲಕ್ಷಣೆಯಿನೊಬ್ಬಾನೊಬ್ಬನಂ ಪೇೞು ತಿರ್ದಪನೆಂಬುದು ವ್ಯಙ್ಗ್ಯಂ.

(೩) ವ್ಯಙ್ಗ್ಯರ್ಥದತ್ತಣಿಂ ವ್ಯಙ್ಗ್ಯಂತರಂ ಪುಟ್ಟುವುದು ವ್ಯಙ್ಗ್ಯಮೂಲ ವ್ಯಂಜನೆ ಯೆನಿಕ್ಕುಂ.

ಅದರ್ಕುದಾಹರಣೆ

ಎಲೆ ಎಲೆ ನೋಡ ತಾವರೆಯ ಪತ್ರದೊಳೊಂದು ಬಳಾಕಪಕ್ಷಿ ನಿ
ಶ್ಚಲಿತಜಾಂಗನಾಗಿ ಪೊಸಪಚ್ಚೆಯ ಭಾಜನದಲ್ಲಿ ಶಂಖಮು
ಜ್ಜ್ವಲಿಸುವ ಮಾೞ್ಕೆಯಿಂ ತೊಳಗುವಂದಮಿದಾದಮನೋಜ್ಞಮಾಯ್ತು ನಿ
ರ್ಮಲತರಶೈತ್ಯಸಾರಜಲಪೂರಿತಮಪ್ಪ ಸರೋಜಷಂಡದೊಳ್     ೧೨

ವಿವರಣಂ: ಇಲ್ಲಿ ನಿಶ್ಚಲಿತನಿಜಾಂಗನೆಂಬುದಱಿಂ ನಿಶ್ಚಲಿತಾತ್ಮಮೆ ಮುಖ್ಯಾರ್ಥ ಮಾಗಿ ತೋಱೆಯದಱಿಂ ಜನವಿರಹಿತಮೆಂಬುದು ವ್ಯಙ್ಗ್ಯಂ. ಅದಱತ್ತಣಿಂದೀ ಪ್ರದೇಶಮೆ ಸಂಕೇತಕ್ಕೆ ಯೋಗ್ಯಮೆಂಬುದು ವ್ಯಙ್ಗ್ಯಂ, ಅದಱಿಂ ಗಾಢಸಂಭೋಗಮಪ್ಪುದೆಂಬುದು ವ್ಯಙ್ಗ್ಯಂ, ಅದಱಿಂ ನಾಯಕನುಷ್ಣಶರೀರಿಯೆಂಬುದು ವ್ಯಙ್ಗ್ಯಂ.

ಇವಂ ಸಾಮಾನ್ಯದಿಂ ಪೇೞ್ದೆಂ, ಇನ್ನಿತ್ತಲ್ ವಿಶೇಷಮಂ ಪೇೞ್ವೆನದೆಂತೆಂದೊಡೆ- ಮುಖ್ಯಲಕ್ಷ್ಯಾರ್ಥದತ್ತಣಿಂದೆ ಭಿನ್ನಮಾಗಿ ಪ್ರತೀತಿವಿಷಯಮಾದ ವ್ಯಙ್ಗ್ಯಮಪ್ಪರ್ಥಮೆ ಧ್ವನಿಯೆಂದು ಪೇೞೆಪಟ್ಟುದು. ಅದು ವಸ್ತ್ವಲಂಕಾರರಸಾದಿಭೇದದಿಂ ಮೂದೆಱಂ – ಮುಖ್ಯಲಕ್ಷ್ಯಂಗಳತ್ತಣಿಂದತ್ಯಂತ ಭಿನ್ನಮಾದ ಧ್ವನಿ, ವಾಚ್ಯಂ, ವಿಧಿರೂಪಮಾಗೆ ಪ್ರತಿಷೇಧ ರೂಪಂ – ಅದೆಂತೆಂದೊಡೆ –

ಲಕ್ಷ್ಯಂ

ಬೆಂಗಡಿಸುತಿರ್ದುದಿನ್ನೆವರಮೀತಟಿನೀ ನಿಕಟಪ್ರದೇಶದೊಳ್
ಸೊಗಯಿಸುತಿರ್ಪ ಸಾಲ್ಪೊದಱ ತಣ್ಣೆೞಲೊಳ್ ನೆಲಸಿರ್ದ ನಾಯದಂ
ದುಗಿಬಗಿಯಾದುದಿಂದು ನಖರಾಯಧಭೀಕರಸಿಂಹದಿಂದೆ ನೀಂ
ವಿಗತವಿಶಂಕೆಯಿಂ ಸುೞಿಯಲಾದುದು ತತ್ಪಥದೊಳ್ ಸುಮಪ್ರಿಯಾ          ೧೩

ವಿ. ಇಲ್ಲಿ ಸಿಂಗದಿಂ ನಾಯ್ ಕೊಲಲ್ಪಟ್ಟಿತು [ನೀಂ] ನಿಶ್ಶಂಕೆಯಿಂದೆಡೆಯಾಡೆಂಬ ವಿಧಿರೂಪ ವಾಚ್ಯದಿಂ ಸಂಕೇತಸ್ಥಾನಮಪ್ಪ ನದೀತಟನಿಕುಂಜದೊಳ್ ಸಿಂಹಮಿರ್ದುದು ಅಲ್ಲಿ ನೀನೆಡೆಯಾಡಲಾಗದೆಂಬೀ ನಿಷೇಧರೂಪಮಪ್ಪ ವ್ಯಜ್ಗ್ಯಾರ್ಥಂ ಪ್ರಾಧಾನ್ಯದ್ಯೋತಕ ಮಪ್ಪುದು –

ನಿಷೇಧದೊಳ್ ವಿಧಿಯೆಂತೆಂದೊಡೆ

ಒಱಗುವಳತ್ತೆ ಮೆಲ್ಲರಳೆವಾಸಿನೊಳೀಯೆಡೆಯಲ್ಲಿ ಸೋಂಕದಂ
ತೊಱಗುವೆನೊತ್ತಿನೊಳ್ ಪಱಿದ ಪಾಸಿನೊಳಾನಿರುಳಂಧನಪ್ಪ ನೀಂ
ಮಱೆಯದೆ ಕಾಣಿವಂ ಮಸು[ಕು]ಗೞ್ತಲೆ ಬೀೞದ ಮುನ್ನ ತಳ್ಕೆಗೊಂ
ಡೆಱಗದಿರೊಂದಿದೆಮ್ಮೆರಡು ಪೞ್ಕೆಗಳಿರ್ಪೆಡೆಯೊಳ್ ಪ್ರವಾಸಿಗಾ    ೧೪

ವಿ. ಇಲ್ಲಿ ತನ್ನ ಪಾಸುಗೆಯಲ್ಲಿ ಮಲಗದಿರೆಂಬ ನಿಷೇಧರೂಪದಿಂದಿಲ್ಲಿಗೆ ಬಾರೆಂಬ ವಿಧಿ ಧ್ವನಿಸಲ್ಪಟ್ಟಿತು –

ವಿಧಿಯೊಳ್ ವಿಧಿಯೆಂತೆಂದೊಡೆ

ಎಲೆ ನೆರೆಯಾತನೆಯೀಗಳ್
ನಲವಿಂ ಪತಿ ಪೋದನೂರ್ಗೆ ಮತ್ತೊರ್ವನುಮಿ
ಲ್ಲಲಘುತರಮಾಯ್ತು ಕಡುಗ
ೞ್ತಲೆ ನೀಂ ಪರಿಹರಿಪುದೆನಗೆ ಚೋರರ ಭಯಮಂ           ೧೫

ವಿ. ಇಲ್ಲಿಯೆನಗೆ ಚೋರರ ಭಯಮಂ ಪರಿಹರಿಪುದೆಂಬೀ ವಿಧಿಯಿಂದೆ, ಗಾಢಾಂಧಕಾರ ಮಪ್ಪ ರಾತ್ರಿಯಂ, ಪತಿ ದೇಶಾಂತರಕ್ಕೆ ಪೋದುದಂ, ಗೃಹದೊಳಾರು ಮಿಲ್ಲದುದಂ ಅಱಿಪಿ ನೀಂ ನಿರ್ಭೀತನಾಗಿ ತನ್ನ ಸಮೀಪಕ್ಕೆ ಬಾರೆಂಬ ವಿಧ್ಯಂತರಂ ತೋಱಿ ಸಲ್ಪಟ್ಟಿತು –

ನಿಷೇಧದೊಳ್ ನಿಷೇಧಮೆಂತೆಂದೊಡೆ

ಎಲೆ ವೃಷಭ ಗೇಹಪತಿ ಮನ
ವಲಸದೆ ಬೞಿಗಂತು ಗಟ್ಟಿಯಾತ್ಮಕ್ಷೇತ್ರ
ಸ್ಥಲಮಂ ರಕ್ಷಿಸುತಿರ್ದಪ
ನುಲುಪಿಲ್ಲದೆ ತೊಲಗು ಪೋಗು ಕಾಣದ ಮುನ್ನಂ        ೧೬

ವಿ. ಇಲ್ಲಿ ಗೃಹಪತಿ ಕ್ಷೇತ್ರದೊಳ್ ದುಷ್ಟವೃಷಭನಿವಾರಣತತ್ಪರನಾಗಿರ್ದಪನೆಂಬ ನಿಷೇಧವಾಕ್ಯ ದೊಳ್ ಉಪಪತಿನಿವಾರಣಂ ನಿಷೇಧಾಂತರಂ ತೋಱಿಸಲ್ಪಟ್ಟಿತು.

ವಿಧಿನಿಷೇಧಮಿಲ್ಲದಲ್ಲಿ ವಿಧಿಯೆಂತೆಂದೊಡೆ

ಎಲೆ ಗಡ ಪಾಂಥ ನಿರ್ಭರದಿನೆಯ್ತರುತಿರ್ದಪೆಯುಟ್ಟ ಸೀರೆಯಂ
ಸುಲಿವೊಡೆ ಬರ್ಪೆಯಕ್ಕುಮಿದನಾರ್ಗುಸಿರ್ವೆಂ ನೆಱೆದಾರುಮಿಲ್ಲ ಕ
ೞ್ತಲೆ ತಲೆದೋಱುತಿರ್ದಪುದು ಭಾವಿಸೆ ಬಾಲಿಕೆಯೊರ್ವಳಾನೆ ನೀಂ
ಬಲಯುತನೆಂತು ಗೆಯ್ದಪೆಯೊ ದೂರಮದಿಲ್ಲಿಗೆ ಮನ್ನಿಜಾಲಯಂ           ೧೭

ವಿ. ಇಲ್ಲಿ ವಿಧಿನಿಷೇಧಂಗಳಂ ಪೇೞದಿರ್ದೊಡಂ ಆನೊರ್ವಳ್, ಗ್ರಾಮಂ ದೂರಮೆಂಬಿವು ಮೊದಲಾದೇಕಾಂತೋಪದೇಶದಿಂ ತನ್ನ ನಿತಂಬದ ವಸ್ತ್ರಮಂ ತೆಗೆಯೆಂಬ ವಿಧಿ ಧ್ವನಿಸಲ್ಪಟ್ಟಿತು-

ವಿಧಿನಿಷೇಧಂಗಳಲ್ಲದವಱೊಳ್ ನಿಷೇಧಮೆಂತೆಂದೊಡೆ

ಎನಗಿನಿಯನೆ ಬಾೞ್ವಾಸೆಯೆ
ಘನವರ್ಥದ ಮೇಲಣಾಸೆಯಿಲ್ಲಿರ್ಪೊಡೆ ನೀಂ
ಮನವತ್ತಿರು ಪೋಪೊಡೆ ಪೋ
ಗಿನಿತು ೞಿಯದೆಯೆನ್ನವಸ್ಥೆಯಂ ನಿನಗುಸಿರ್ದೆಂ            ೧೮

ವಿ. ಇಲ್ಲಿ ಪೋದರೆ ಪೋಗು, ಇರ್ದರೆ ಇರು ಎಂಬ ವಿಧಿನಿಷೇಧಂಗಳಿಲ್ಲದಲ್ಲಿ, ನನಗೆ ಬರ್ದುಂಕುವಾಸೆ ಬಹುಳಂ, ಧನದಾಸೆಯಿಲ್ಲಮೆಂಬ ವಚನದಿಂ ನೀ ನಿಲ್ಲದೊಡಾಂ ಬರ್ದುಕುವುದರ್ಕೆ ಸಮರ್ಥೆಯಲ್ಲೆಂಬಾಕ್ಷೇಪದಿಂ ಗಮನನಿಷೇಧಂ ತೋಱಿಸಲ್ಪಟ್ಟಿತು –

ವಿಧಿನಿಷೇಧಂಗಳಲ್ಲಿ ವಿಧ್ಯಂತರಮೆಂತೆಂದೊಡೆ

ಎಲೆ ಎಲೆ ಪಾಂಥ ಪೋದಪೆಯದೆಲ್ಲಿಗೆ ಮದ್ವಧುವಿರ್ಪ ತಾಣಕೀ
ಪೊಲದೊಳೆ ಪೋಗದನ್ಯ ಪಥದೊಳ್ ಗಮಿಸಿಲ್ಲಿಯೆ ಪೋಪೆಯಪ್ಪೊಡೀ
ನೆಲೆಯ ತಳಾಱನಾತ್ಮಭವೆ ಪೂರ್ಣಸುಧಾಕರಬಿಂಬವಕ್ತ್ರೆ ನಿ
ರ್ಮಲತರಗಾತ್ರೆ ಚಾರುಸರಸೀಜದಳಾಯತನೇತ್ರೆಯಿರ್ದಪಳ್        ೧೯

ವಿ. ಇಲ್ಲಿ ಈ ಮಾರ್ಗದಲ್ಲಿ ಪೋಗಬೇಡ ಮತ್ತೊಂದು ಮಾರ್ಗದಲ್ಲಿ ಪೋಗು ಎಂದು ವಿಧಿನಿಷೇಧಂಗಳಂ ಪೇೞ್ವುದಱಿಂ ಎಲೆ ಸೊಬಗನಪ್ಪಾತನೆ ನಿನ್ನ ಸ್ತ್ರೀಯ ರೂಪಂ ನೆನೆದು ಕಾಣ್ಬಲ್ಲಿ ತತ್ಪರನಾದಾತನೆ ಈ ಗ್ರಾಮದ ತಳಾಱನ ಮಗಳಂ ನೀನವಶ್ಯಂ ಕಾಣ್ಬುದರ್ಕೆ ಯೋಗ್ಯಳೆಂಬ ವಿಧ್ಯಂತರಂ ತೋಱಿಸಲ್ಪಟ್ಟಿತು –

ವಿಧಿನಿಷೇಧಂಗಳಲ್ಲ ನಿಷೇಧಮೆಂತೆಂದೊಡೆ

ಎಲೆ ವೊಕ್ಕಲಿಗನ ಸೊಸೆ ಕೇಳ್
ನಲವಿಂ ಬಿೞ್ದಲರನಾಯ್ದುಕೊಳ್ ಗಿಡುವಂ ಸ
ಯ್ತಲುಗದೆ ಕರವಲಯದ ಬ
ಲ್ಲುಲಿಪಿಂದವಸಾನವಿರಸಮಕ್ಕುಮಮೋಘಂ   ೨೦

ವಿ. ಇಲ್ಲಿ ಬಿದ್ದಲರನಾಯ್ದುಕೊಳ್ ಗಿಡುವನಲುಗವೇಡಾ, ಎಂದು ವಿಧಿ ನಿಷೇಧಂಗಳಂ ಪೇೞ್ವುದಱಿಂ ಎಲೆಸಖಿ ಚೌರ್ಯರತದೊಳ್ ವಲಯಶಬ್ದಂ ಮಾಡಲ್ ಯೋಗ್ಯ ಮಲ್ತೆಂಬ ನಿಷೇಧಾಂತರಂ ತೋಱಿಸಲ್ಪಟ್ಟಿತು –

ವಿಧಿಯಲ್ಲಿ ಅನುಭಯಮೆಂತೆಂದೊಡೆ

ಕಡು ಬಡನಡುವಿನ ಪೊಸಪೊಂ
ಗೊಡಮೊಲೆಗಳನಾಂತ ನೀರೆ ಮೆಲ್ಲನೆ ನೀಂ ಮೆ
ಲ್ಲಡಿಯಿಡು ಬಹುಪ್ರಯಾಸದೆ
ಪಡೆದಂ ಕರಕುಶಲನಪ್ಪ ಧಾತ್ರಂ ನಿನ್ನಂ           ೨೧

ವಿ. ಇಲ್ಲಿ ಮೆಲ್ಲಡಿಯಿಡುಯೆಂದು ವಿಧಿಯಂ ಪೇೞ್ವುದಱಿಂ ಧ್ವನಿರೂಪಮಪ್ಪ ವಿಧಿ ನಿಷೇಧಂಗಳಿಲ್ಲಂ. ಮತ್ತೆ ವರ್ಣನಾಮಾತ್ರಂ (ಪ್ರತೀಯತೇ) ತೋರ್ಪುದು.

ನಿಷೇಧದಲ್ಲನುಭಯಮೆಂತೆಂದೊಡೆ

ವದನದ ಕಾಂತಿಯಿಂದೆ ಶಶಿಕಾಂತಿಯನೋವದೆ ಗೆಲ್ದ ನೀ ಱೆ ಪೋ
ಗದೆ ತಿರುಗಜ್ಞ ಬುದ್ಧಿಗೆಡೆಯಾದಳೆ ನೀನಭಿಸಾರಿಕಾಜನ
ಕ್ಕೊದವಿದ ವಿಘ್ನಮಂ ನೆಱೆಯೆ ಮಾಡುತುಮಿರ್ದಪೆ ಅಕ್ಕಟಕ್ಕಟಾ
ಸುದತಿಯ ರೂಪೆಯಾಗಿ ಕುಲಕಂಟಕಿಯಪ್ಪುದು ಪೆಣ್ಗೆ ನೀತಿಯೇ   ೨೨

ವಿ. ಇಲ್ಲಿ ನೀಂ ತಿರುಗೆಂಬ ನಿಷೇಧವಾಕ್ಯದಿಂ ವ್ಯಙ್ಗ್ಯಂ ವಿಧಿನಿಷೇಧಮಲ್ತು, ಮತ್ತೆ ಮುಖ ಚಂದ್ರಕಾಂತಿ ವರ್ಣನಾಮಾತ್ರಂ (ಪ್ರತೀಯತೇ) ತೋರ್ಪುದು.

ವಿಧಿನಿಷೇಧದೊಳನುಭಯಮೆಂತೆಂದೊಡೆ

ಎಲೆ ದಕ್ಷಿಣ ನಿಡುಸುಯ್ಯುಂ
ಸಲೆ ರೋದನಮುಂ ಸಮಂತುವೊರ್ವಳೆ ಬರ್ಪಾ
ಲಲನೆಯೆನಗಕ್ಕೆ ನಿನಗಾ
ಗಲೆ ಬೇಡವಳಿಂದೆ ಬೞಿಕೆ ನಿನಗಕ್ಕೆ ವಲಂ         ೨೩

ವಿ. ಇಲ್ಲಿ ಯೆನಗೆ ಶ್ವಾಸರೋದನಂಗಳಾಗಲಿ, ನಿನಗೆ ಬೇಡ, ಆಕೆಯಿಲ್ಲದಿರೆ ನಿನಗಾಗಲಿ ಎಂದು ವಿಧಿನಿಷೇಧಂಗಳಂ ಪೇೞ್ವುದಱಿಂ ವ್ಯಙ್ಗ್ಯಂ ವಿಧಿಯುಮಲ್ತು ನಿಷೇಧಮು ಮಲ್ತು, ಮತ್ತೆ ಕಪಟವಲ್ಲಭನ ನಿಂದಾರೂಪಂ ತೋಱಲ್ಪಟ್ಟಿತು.

ವಿಧಿ ನಿಷೇಧಮಲ್ಲದವಱೊಳ್ ಅನುಭಯಮೆಂತೆಂದೊಡೆ

ನವನಖ ರೇಖಾಂಕಿತ ತನು
ವವನಿದ್ರಾಲಸ ವಿಲೋಚನಂ ನಲ್ಲನೆ……..
………………………..
………………………..       ೨೪

…………………………..
…………………………..
…………………………..
…..ನ್ನೆ ನೀರ್ವೊೞೆಯ ವಾರಿಯನೀಗಳೆ ತೀವಿ ತಂದಪೆಂ   ೨೫

ವಿ. ಇಲ್ಲಿ ಚೌರ್ಯರತಗೋಪನವಱಿಯಬರುತಿರ್ದಪುದು.

ಪ್ರತಿಪಾದ್ಯವಿಶೇಷದೊಳೆಂತೆಂದೊಡೆ
ಲಕ್ಷ್ಯಂ

ಉರದೆ ವಿಲಿಪ್ತಚಂದನದ ನಾಮಮೆ ಪೋಯ್ತಧರಂ ಬೆಳರ್ತುದೋ
ಸರಿಸಿದುದಂಜನಂ ನಯನದಿಂ ಪುಳಕೋಜ್ಜ್ವಳಮಾಯ್ತು ಮೆಯ್ಯಿದೇ
[ನರಿಯದೆ ದೂತಿ ಬಂಧುಜನಪೀಡೆಯ] ವಾಪಿಗೆ ಮೀಯೆ ಪೋದೆ ನೀಂ
ಕರೆವೊಡೆ ಪೋದುದಿಲ್ಲಧಮನಲ್ಲಿಗೆ ಪೇೞ್ [ಪುಸಿದಿಂತು] ಬರ್ಪರೇ          ೨೬

ವಿ. ಇಲ್ಲಿ ದೂತಿಯಿಂದೆ ನಾಯಕನ ಸಂಭೋಗಂ ಪೇಱೆಪಟ್ಟುದು.

ಕಾಕುವಿನಿಂದೆಂತೆಂದೊಡೆ

ಲಕ್ಷ್ಯಂ

ದ್ರುಪದನರೇಂದ್ರಜಾತೆವೆರಸುಗ್ರತರಾಟವಿಯೊಳ್ ತೊೞಲ್ದಳ
ಲ್ದುಪಚಿತವಲ್ಕಲಂದಳೆದು ಪೇಸದೆ ಮತ್ಸ್ಯನೃಪಾಲಸೇವೆಯೊಳ್
ಕೃಪಣತೆವೆತ್ತ ನಮ್ಮೊಡನೆ ಧರ್ಮಸುತಂ ಮಿಗೆ ಖಾತಿಗೆಯ್ಯುತಿ
ರ್ದಪನುಱದಿನ್ನೆಗಂ ಕುರುಧರಾಧಿಪನೊಳ್ ಖತಿಗೆಯ್ಯನೊರ್ಮೆಯುಂ          ೨೭

ವಿ. ವ್ಯಾಕುಲಮೆನ್ನಲ್ಲಿ ಯೋಗ್ಯಮಲ್ತು, ಕುರುಕುಲನಲ್ಲಿ ಯೋಗ್ಯಮೆಂದು ಕಾಕುವಿನಿಂ ಪ್ರಕಾಶಿಸಲ್ಪಟ್ಟುದು.

ವಾಕ್ಯವಿಶೇಷದೊಳೆಂತೆಂದೊಡೆ

ನಲವಿಂ ಮಗಳಂ ಕೊಟ್ಟೆಂ
ಸಲೆ ಪೆೞ್ಕೆಗೆ ಪಾವನಿತ್ತೆನಾಂ ಸೇತುವನಿಂ
ತಲಸದೆ ಕಟ್ಟಿದಪನೆನುತೆ
ಜಲನಿಧಿ ಕಂಪಿಸುವ ತೆಱದೆ ಕಂಪಿಸುತಿರ್ಕುಂ       ೨೮

ವಿ. ಇಲ್ಲಿ ನಾರಾಯಣನೆಂಬುದು ಅಱಿಯಲ್ಪಟ್ಟುದು.

ವಾಚ್ಯವಿಶೇಷದೊಳೆಂತೆಂದೊಡೆ

ಲಕ್ಷ್ಯಂ

ಸುರುಚಿರ ನರ್ಮದಾತಟದೊಳೊಪ್ಪುವ ಬಾೞೆವನಂಗಳೊಳ್
ಸ್ಫುರಿತ [ಲತಾನಿಕುಂಜ] ತತಿ ರಾಜಿಸುವೀಯೆಡೆಯೊಳ್ ಸಮಂತು ನಿ
ರ್ಭರರತಮಿತ್ರವಾಯು ಸುೞಿಗೊಂಡಪುದಿಂತಿವಱಗ್ರದಲ್ಲಿ ನಿ
ಷ್ಠುರನೆನಿಸಿರ್ಪ ಕಾಲಕುಪಿತಂ ಮದನಂ [ಚಲದಿಂ] ತೊಳಲ್ದಪಂ     ೨೯

ವಿ. ಇಲ್ಲಿ ಸುರತನಿಮಿತ್ತಮಾಗಿ ಕುಪಿತನೆಂಬುದು ವ್ಯಙ್ಗ್ಯಂ.

ಅನ್ಯಾಸತ್ತಿಯೊಳೆಂತೆಂದೊಡೆ
…………………………………
…………………………………
………………………………….        ೩೦

……………………………………
……………………………………..
……………………………………….
……………………………………….  ೩೧

ದೇಶವಿಶೇಷದೊಳೆಂತೆಂದೊಡೆ

ಎಲೆ ಕೆಳದಿಯರಿರ ನಾನೀ
ನೆಲದಿಂದಂ ಪಜ್ಜೆಯಿಕ್ಕಲಾಱೆಂ ಪೂವಂ
ನಲವಿಂ ಕುಯ್ದಪೆನಿಲ್ಲಿಯೆ
ವಿಲಸದ್ವಾಟೆಯೊಳೆ ಚಲಿಸಿ ನೀಂ ಪೂಗೊಯ್ಯಿಂ ೩೨

ವಿ. ಇಲ್ಲಿ ಆರುಮಿಲ್ಲದಿರ್ಪೀ ಪ್ರದೇಶಕ್ಕೆ ಗುಪ್ತವಿಟನಂ ನೀಂ ಬೇಗಂ ಕಳಿಪೆಂಬುದು ತೋಱಲ್ಪಡುಗುಂ.

ಕಾಲವಿಶೇಷದೊಳೆಂತೆಂದೊಡೆ

ಲಕ್ಷ್ಯಂ

ಮಾತಾಪಿತೃಗಳಧೀನದಿ
ನೋತಿರ್ಪಿನಿಯನೆ ಪರೋರ್ವಿಗೆಯ್ದುವಯ್‌ಪೋ ಪೋ
ಗೇತದ್ದಿನದೊಳಭಾಗ್ಯೆಯ
ಮಾತಂ ವಾರ್ತೆಯೊಳೆ ಕೇಳ್ದಪಯ್ ಬೞಿಕೆನ್ನಂ ೩೩

ವಿ. ಇಲ್ಲಿ ವಸಂತಕಾಲದಲ್ಲಿ ನೀಂ ಪೋದೆಯಾದೊಡೆ ನಾನುೞಿವುದಿಲ್ಲಂ ನೀನುೞಿವೆಯೊ ಉೞಿಯೆಯೋ ಎಂಬುದಿಂತು ವ್ಯಙ್ಗ್ಯಂ.

ಚೇಷ್ಟಾವಿಶೇಷದೊಳೆಂತೆಂದೊಡೆ

ದ್ವಾರದುಪಾಂತದೊಳ್ ಪದೆದು ನಿಂದನನೆನ್ನನಭೀಕ್ಷಿಸುತ್ತೆ ವಿ
ಸ್ತಾರಿತಜಾನುಯುಗ್ಮೆ ತೊಡೆಯಂ ಮಗುೞ್ದೊಂದಿಸಿ ಚಂಚಲತ್ವಮಂ
ಬಾರಿಸಿ ನೇತ್ರದೊಳ್ ನುಡಿವುದಂದ ಮಿಗೆ ಮಾಣ್ದು ಕುಚಾಗ್ರದಲ್ಲಿ ಸ
ಯ್ತೋರೆ ಮುಸುಂಕನಿಟ್ಟಗಲಿಸಿರ್ದ ಭುಜಂಗಳನೊಂದುಗೂಡಿದಳ್  ೩೪

ವಿ. ಇಲ್ಲಿ ಚೇಷ್ಟೆಯಿಂ ಗುಪ್ತಕಾಮುಕನ ವಿಷಯಮಾಗುಳ್ಳ ಅಭಿಪ್ರಾಯ ವಿಶೇಷಂ ವ್ಯಙ್ಗ್ಯಂ.

ಲಕ್ಷ್ಯಾರ್ಥದೊಳೆಂತೆಂದೊಡೆ

ಕೆಳದಿ ಮನೋಜ್ಞ ನಂ ಪಡೆದು ಸಾಧಿಪೆ ನೀನೆನಗಾಗಿ ನೀಂ ಕರಂ
ಬಳಲುತುಮಿರ್ಪೆ ಕಾರ್ಯಮದು ನಿನ್ನಯ ಭಾರಕೆ ಸಾಟಿಯಾಗಿ ಕ
ಣ್ಗೊಳಿಪವೊಲೆನ್ನ ನೇಹಕೆಣೆಯಾಗಿ ನೆಗೞ್ತೆಯ ನೆಮ್ಮುವಂತೆವೋಲ್
ವಿಳಸಿತಕಾರ್ಯಮಂ ನಲವಿನಿಂ ರಚಿಸಿರ್ಪವೊಲಾದುದೞ್ತಿಯಿಂ       ೩೫

ವಿ. ಎಂಬಲ್ಲಿ ಮುನಿದಿನಿಯನಂ ತಿಳಿಪಲ್ ಪೋಗಿ ತಿರುಗಿ ಬಂದ ಸಖಿಯ ಸಂಭೋಗ ಚಿಹ್ನಮಂ ಕಂಡು ನಲ್ಲದೊಳ್ ನೆರೆದಳೆಂದು ಅಱಿದು ನಾಯಿಕೆ ನುಡಿದ ತಿರಸ್ಕಾರ ವಚನಂ, ಅದಱಿಂದಪಕಾರಮಂ ಮಾಡಿದ ಸಖಿಯೊಳುಪಕಾರಪರಂಗಳಪ್ಪ ವಚನಂಗಳ ನುಚಿತಮಾಗಿ ಮುಖ್ಯಾರ್ಥಬಾಧೆಯಾಗಿ (ವ್ಯಾಘಾತಸಬಂಧದವೊಲ್) ವೈರ ಸಂಬಂಧದಿಂ ಸವತಿಯೆಂಬುದು ಲಕ್ಷ್ಯಂ. ಈ ಲಕ್ಷ್ಯಾರ್ಥದಿಂ ನಿನ್ನಿಂದೆ ಪಗೆತನ ಮಾಚರಿಸಲ್ಪಟ್ಟುದು, ಅದನಾಶ್ರಯಿಸಿದ ವ್ಯಂಜನೆಯಿಂದಿನಿಯನಪರಾಧಂ
[ತೋಱಲ್ಪಟ್ಟುದು.] ಇದು ಲಕ್ಷ್ಯಮೂಲವ್ಯಙ್ಗ್ಯಂ.

ವ್ಯಙ್ಗ್ಯಾರ್ಥದೊಳೆಂತೆಂದೊಡೆ

ಮದಗಜಮೌಕ್ತಿಕಂ ಕುಡುವುದಿರ್ದಪುವೇ ಎನೆ ಸೆಟ್ಟಿಗುಲ್ಲಸ
ದ್ರದನವಿಹೀನವಕ್ತ್ರೆ ಮುದುವೇಡಿತಿಯುತ್ತರವಿತ್ತಳಣ್ಣ ಕೇಳ್
ಸದಮಳಕೋಮಳಾಂಗಿ ಸೊಸೆ ಮದ್ಯಮದಾಲಸೆ ಬಿಟ್ಟಮಂಡೆಯಂ
ಪದುಳಿಸಿ ಕಟ್ಟಿದಂದಿನ ದಿನಂ ದೊರೆಕೊಳ್ವುದು ಮೌಕ್ತಿಕವ್ರಜಂ     ೩೬

ವಿ. ಇಲ್ಲಿ ಬಿಟ್ಟಮಂಡೆಯಂ ಕಟ್ಟಳೆಂಬುದಱಿನನವರತಕ್ರೀಡಾಸಕ್ತಿ ವ್ಯಙ್ಗ್ಯಂ ಅದಱಿಂ ಸತತಸಂಭೋಗದಿಂದಾಕ್ರೋಶತ್ವಂ ಧ್ವನಿಸಲ್ಪಟ್ಟಿತು –

ಶಬ್ದ ಶಕ್ತಿ ಮೂಲವ್ಯಙ್ಗ್ಯಂ ಪದದೊಳ್, ವಾಕ್ಯದೊಳ್ ಪ್ರತ್ಯೇಕಮಾಗಿರ್ತೇಱಂ, ಮುಖ್ಯ ಶಬ್ದಶಕ್ತಿವ್ಯಙ್ಗ್ಯಂ ಪದಂಗಳೊಳೆಂತೆಂದೊಡೆ –

ಅಸಮತರಭುಕ್ತಿಮುಕ್ತಿ
ಪ್ರಸರಮನುರೆ ಮಾಡಲೆಸಗುವೇಕಾಂತಮನೊ
ಲ್ದುಸಿರ್ವೆಡೆಯೊಳ್ ತತ್ಪರಮಾ
ದ ಸದಾಗಮಮಾರ್ಗೆ ಪುಟ್ಟಿಸದು ಮುದದೊದವಂ        ೩೭

ವಿ. ಇಲ್ಲಿ ಆವಳೋ ಒರ್ವಳ್ ಸಂಕೇತಮಂ ಮಾಡಿದಾತನಂ ಮುಖ್ಯವೃತ್ತಿಯಿಂ ಕೂಡಾಡು ತಿರ್ಪಳ್. [ಎಂಬುದು ಸದಾಗಮಪದದಿಂದ ಪ್ರಕಾಶಿಸಲ್ಪಡುವುದು ವೈಸಾದೃಶ್ಯಮಿರ್ಪುದ ಱಿಂದುಪಮಾಲಂಕಾರ ವ್ಯಙ್ಗ್ಯಮಿಲ್ಲಂ.]

ವಾಕ್ಯದೊಳೆಂತೆಂದೊಡೆ

ಇದು ಪಡೆದೆಮ್ಮ ಪೂರ್ವ [ಭವದಾಗ್ರಹದಿಂ] ಗೊಣೆಗಲ್ಲ ಮೇಲೆ ಕ
ಟ್ಟಿದ ಮನೆ ಪೞ್ಕೆಗೆಟ್ಟು ನೆರೆ ಪಾಸರೆಯಲ್ಲಿರುಳಾಯ್ತು ಭೀತಿಯೊ
ಡ್ಡೊದವಿದುದೀ ಪಯೋಧರದ ಪೆರ್ಚುಗೆಯಂ ಸಲೆ ನಿಟ್ಟಿಸನ್ಯದಾ
ಸ್ಪದವತಿದೂರಮಿರ್ಪೊಡಿತು ಪೋಪೊಡೆ ಪೋಗೆಲೆ ಪಾಂಥ ಕೇಳಿದಂ           ೩೮

ನಾಲ್ಕು ಜಾವಮುಂ ಸಂಭೋಗಮಂ ಮಾೞ್ಪುದಱಿಂ ನಿದ್ರೆಯಂ ಮಾೞ್ಪುದರ್ಕೆ ಶಕ್ಯಮಲ್ತು. ಇಲ್ಲಿರ್ದವರೆಲ್ಲರುಮೆಗ್ಗರದು ಕಾರಣದಿಂ ಉನ್ನತಪಯೋಧರೆಯಾದೆನ್ನ ಸಂಭೋಗಮಂ ಮಾೞ್ಪುದರ್ಕೆ ತಾನುಮ ಸಮರ್ಥನಾದೊಡಿರು ಎಂಬುದು ವ್ಯಙ್ಗ್ಯಮಾದುದು [ವಾಚ್ಯಬಾಧೆಯಿಂದೆ ವ್ಯಙ್ಗ್ಯಮಿರ್ಪುದಱಿಂದವರ್ಕೆ ಉಪಮಾನೋಪಮೇ ಯಭಾವಮಿಲ್ಲಾದು ದಱಿಂದಲಂಕಾರ ವ್ಯಙ್ಗ್ಯಮಲ್ತು]

ಮುಖ್ಯಶಬ್ದಶಕ್ತಿವೃಙ್ಗ್ಯಮಪ್ಪಲಂಕಾರಂ ಪದದೊಳೆಂತೆಂದೊಡೆ

ಬಲವದರಿರುಧಿರಲೇಪೋ
ಜ್ಜ್ವಲತರ ಕರವಾಳ ರುಚಿರ ಭುಜನೊಪ್ಪಿದನ
ಸ್ಖಲಿತ ಭ್ರುಕುಟಿ ವಿಟಂಕಿತ
ಲಲಾಟಪಟ್ಟಂ ಪ್ರತಾಪನಿಧಿ ನೃಪ ಭೀಮಂ      ೩೯

ವಿ. ಇಲ್ಲಿ ಭಯಂಕರ ಮೂರ್ತಿ (ನೃಪಂ)ಗೆ ಭೀಮಸೇನನುಪಮಾನಂ.

ಮುಖ್ಯಶಬ್ದಶಕ್ತಿ ವ್ಯಙ್ಗ್ಯಮಪ್ಪಲಂಕಾರಂ ವಾಕ್ಯದೊಳೆಂತೆಂದೊಡೆ

ಪರಿಕಿಪೊಡತ್ತಲ್ ಚಂದ್ರಾ
ಭರಣೆ ಲಸಚ್ಛ್ಯಾಮೆ ತಾರಕಾತರಳೆ ಕರಂ
ಸ್ಫುರದುದ್ದೀಪಿತ ಮನ್ಮಥೆ
ಪಿರಿದೊಲವನದಾರ್ಗೆ ಮಾಡದಿರ್ಪಳ್ ಜಗದೊಳ್          ೪೦

ವಿ. ಇಲ್ಲಿ ವಾಕ್ಯಮಸಂಬದ್ಧಾರ್ಥವಾಗಬಾರದೆಂದು ಪ್ರಸ್ತುತಾಪ್ರಸ್ತುತಂಗಳ್ಗೆ ಉಪಮಾನೋಪ ಮೇಯಭಾವಮಂ ಕಲ್ಪಿಪುದಱಿಂದುಪಮಾಲಂಕಾರಂ ವ್ಯಙ್ಗ್ಯಂ.

ಲಕ್ಷ್ಯಕ್ಕೆ ಶಬ್ದಶಕ್ತಿಯಿಂದೆ ಪುಟ್ಟಿದ ವ್ಯಙ್ಗ್ಯಮಪ್ಪ ವಸ್ತು (೧) ಪದದೊಳೆಂತೆಂದೊಡೆ

ಘನಮಾಲಾಡಂಬರಂ ಕೇಕಿಗಳ ನಿನದಮೋರಂತೆ ಬಿೞ್ತರ್ಪ ತಂದ
ಲ್ವನಿ ತಾಮಾದಂ (ಸಮಂತೊಪ್ಪೆ) ಕಠಿನಮನನುದ್ಯೋಗನಾಗಿರ್ಪ ರಾಮಂ
ಗೆನಗೀಗಳ್ ಬಾಧಕಂಗೆಯ್ದೊಡಮಿವನುಱೆ ಸೈರಿಪ್ಪೆನೆಂತಾದೊಡಂ ತ
ಜ್ಜನಕಾತ್ಮೋದ್ಭೂತೆ ಸೀತಾವನಿತೆ (ಹರಯದಲ್ಲೆಂತು) ಸೈರಿಪ್ಪೊಡಾರ್ಪಳ್          ೪೧

ವಿ. ಪ್ರಸ್ತುತಮಾದುತ್ತಮಪುರುಷದಿಂ ರಾಮನೆಂಬುದಱಿಯಬರ್ಪುದಱಿಂ ರಾಮಪದಂ ವ್ಯರ್ಥಂ, ಕಠಿನಮನನೆಂಬುದಱಿಂದೆ ರಾಮಪದಂ ಬೇಕಾದುದು. ಇಲ್ಲಿ ಪಿತೃಮರಣ ಸೀತಾವಿಯೋಗಂ ಮೊದಲಾದ ದುಃಖಾಸ್ಪದನೆಂಬುದಂ ಲಕ್ಷಿಸುತ್ತ ಸಾಧಾರಣಂಗಳಪ್ಪ ನಿರ್ವೇದ ಗ್ಲಾನಿ ಮೋಹಾದಿಕಂಗಳುಂ ಧ್ವನಿಸಲ್ಪಟ್ಟಿತು.

ವಾಕ್ಯದೊಳೆಂತೆಂದೊಡೆ

ಕೃತ ವಿದ್ಯ ಶೂರ ಸೇವಾ
ಚತುರರ್ ತಾವೆನಿಪ ಮೂವರುಂ ಸ್ವರ್ಣಸುಪು
ಷ್ಪಿತಮಾದಿಳೆಯಂ ನೆರಪುವ
ರತಿಶಯಮಂ ಪಡೆವರೆಂಬುದೇನಚ್ಚರಿಯೇ      ೪೨

ಇಲ್ಲಿ ಸುವರ್ಣದಿಂ ಪುಷ್ಟಿತವಾದ ಇಳೆಯಂ ನೆರಪುವರೆಂಬೀ ವಾಕ್ಯಮಸಂಭವ ಮಾದರ್ಥಮನುಳ್ಳುದು. ಸಾದೃಶ್ಯಸಂಬಂಧದಿಂ ಸುಲಭಸಮೃದ್ಧ್ಯತಿಶಯಭಾಜನತ್ವಮಂ ಲಕ್ಷಿಸುತೆ ಶೂರಕೃತವಿದ್ಯಸೇವಕರ್ಗಳ್ಗೆ ಪ್ರಾಶಸ್ತ್ಯಮಂ ದ್ಯೋತಿಸುತ್ತಿರ್ದತ್ತು.

ಅರ್ಥಶಕ್ತಿಮೂಲವ್ಯಙ್ಗ್ಯಮೆಂತೆಂದೊಡೆ

ವಿ. ವಸ್ತ್ವಲಂಕಾರಂಗಳ್ಗೆ ಪ್ರತ್ಯೇಕಮಾಗಿ ವಸ್ತ್ವಲಂಕಾರ ವ್ಯಂಜಕತ್ವಮುಂಟಾಗೆ ಅರ್ಥಶಕ್ತಿ ಮೂಲವ್ಯಙ್ಗ್ಯಮೆನಿಪ್ಪುದು – ಅದು ಪದ ವಾಕ್ಯ ಪ್ರಬಂಧಗಳೊಳ್ ತೋರ್ಪುದು. ಅಲ್ಲಿಯೆ ಅರ್ಥಮೆನಿತುಪ್ರಕಾರಮೆಂತೆಂದೊಡೆ. ಸ್ವತಃಸಂಭವಿ, ಕವಿಪ್ರೌಢೋಕ್ತಿಮಾತ್ರ ನಿಷ್ಪನ್ನಶರೀರಂ, ಕವಿನಿಬದ್ಧವಕ್ತೃಪ್ರೌಢೋಕ್ತಿ ಮಾತ್ರ ನಿಷ್ಪನ್ನ ಶರೀರಮೆಂದು ಮೂದೆಱಂ – ಉಂಟಾದ ವಸ್ತುವಂ ಉಂಟಾಗಿ ವರ್ಣನೆಯಂ ಮಾಡಿ ದೊಡೆ ಸ್ವತಸ್ಸಂಭವಿಯೆನಿಕುಂ, ಕವಿಯ ಜ್ಞಾನಬಲ್ಮೆಯಿಂ ಬಾಹ್ಯದೊಳಿಲ್ಲದಿರ್ಪುದು ನಿರ್ಮಿತ (ಕಲ್ಪಿತ) ಮಾದೊಡೆ ಕವಿಪ್ರೌಢೋಕ್ತಿ ಮಾತ್ರನಿಷ್ಪನ್ನ ಶರೀರಮೆನಿಕ್ಕುಂ. ಕವಿ ಪ್ರೌಢೋಕ್ತಿಯಿಂ ಪೇೞ್ದರ್ಥಂ ವಕ್ತೃವಿನಿಂ ವಿಶೇಷಿಸಲ್ಪಟ್ಟೊಡೆ ಕವಿನಿಬದ್ಧವಕ್ತೃ ಪ್ರೌಢೋಕ್ತಿ ಮಾತ್ರ ನಿಷ್ಪನ್ನ ಶರೀರಮೆನಿಕ್ಕುಂ.

ಸ್ವತಃಸಂಭವಿಯಲ್ಲಿ ವಸ್ತುವ್ಯಂಜಕತ್ವಂ (೧) ಪದದೊಳೆಂತೆಂದೊಡೆ –

ಸಿರಿಗೆ ಸುರದ್ರುಮಕ್ಕೆ ಸಹಜಾತನೆನಲ್ ಪೆಸರ್ವೆತ್ತ ರತ್ನಮುಂ
ತ್ವರಿತದೊಳೀ ೞ್ವೆವೆಂಬ ಮತಿಯಲ್ಲಿ ಸಮಸ್ತರ ಮಾನಸಂಗಳೇ
ಕರಸತೆವೆತ್ತ ಕಾರಣಮುದಗ್ರನಿತಂಬಿನಿಯೋಷ್ಠ ಪಲ್ಲವಾಂ
ತರದೊಳೆ ಜಾಣ್ಮೆಯಿಂದಿರಿಸಿಲಾಯ್ತು ನೆಗೞ್ತೆಯ ಪುಷ್ಪಸಾಯಕಂ ೪೩

ವಿ. ಎಂಬಲ್ಲಿ ಪುಷ್ಪಸಾಯಕನೆಂಬ ಪದದಿಂ ಕಾಮದೇವಂಗೆ ಮೃದೂಪಾಯ ಸೌಕರ್ಯಮುಂ ಪ್ರಕಾಶಿಸಲ್ಪಟ್ಟಿತು.

(೨) ವಾಕ್ಯದೊಳೆಂತೆಂದೊಡೆ

ಇದುವೆ ದಿಟಕ್ಕೆ ನಾಂ ಮೊದಲೆ ಪೋಗುತೆ ನೋಡಿದ ಭಾವಿಯಲ್ತು ಮೇ
ಣುದಿತತರಂಗಮಾಲೆಗಳಿನೊಪ್ಪುವ ತೀರವಿದಲ್ತು ಮತ್ತಿದಂ
ಮುದದೊಳೆ ಕಂಡ ನಾಂ ಪೆಱನೆಯೋ ಚಲಿತೋದ್ಘಬಲಾಕಸಂಘಮು
ಳ್ಳುದಕವಿದಲ್ತು ಗೌಡನ ಮಗಳ್ ಬರೆ ಮೀಹಕೆ ಹರ್ಷದೇೞ್ಗೆಯಿಂ ೪೪

ವಿ. ಎಂಬಲ್ಲಿ ವಾಕ್ಯಾರ್ಥಂ ವಸ್ತುಮಾತ್ರರೂಪದಿಂದಮೆ ಪದಾರ್ಥಂಗಳಂ ವಾಂಛಿಸಲ್ ಯೋಗ್ಯಮಪ್ಪ ಚೆಲ್ವಿಕೆಯುಂ ಜನಕೃತಮೆ ಪರಮಾರ್ಥಮಪ್ಪುದಲ್ತು ಎಂಬ ವಸ್ತು ವ್ಯಙ್ಗ್ಯಂ-

ವಸ್ತುವಿನಿಂದಲಂಕಾರವ್ಯಂಜಕತ್ವಂ (೧) ಪದದೊಳೆಂತೆಂದೊಡೆ

ಅರಿಗಜಕುಂಭದೊಳೋರಂ
ತಿರೆ ಧೀರರ ದೃಷಿಯೆಂತು ಕ್ರೀಡಿಪುದಂತು
ದ್ಧುರ ಕುಂಕುಮಾಂಕಿತ ಸ್ತನ
ಭರದೊಳ್ ಕ್ರೀಡಿಸುವುದಿಲ್ಲ ಚಿತ್ರಂ ಪ್ರಿಯೆಯಾ            ೪೫

ವಿ. ಇಲ್ಲಿ ಧೀರರ್ಕಳೆಂಬ ಪದಾರ್ಥಂ ವಸ್ತುರೂಪಂ. ಕುಚಂಗಳ್ಗಂ ಕುಂಭ ಸ್ಥಳಂಗಳ್ಗಂ ಉಪಮಾಲಂಕಾರಮಂ ಧ್ವನಿಯಿಸಿತು.

(೨) ವಾಕ್ಯದೊಳೆಂತೆಂದೊಡೆ

ಸುತ ಶೋಕ ವಹ್ನಿ ದಗ್ಧೋ
ನ್ನತಕಾಯಂ ಬಾಹ್ಯಕುಂಡಸಂಸ್ಥಿತಶಿಖಿ ತಾ
ನತಿಶೀತಮೆಂದು ನಿಲ್ಲದೆ
ದ್ರುತಗತಿಯಿನಗಾಧಮಪ್ಪ ಮಡುವೊಳ್ ಬಿೞ್ದಂ          ೪೬

ಇಲ್ಲಿ ವಸಿಷ್ಠಂ ಪುತ್ರಶೋಕದಿಂ ಬೆಂದು ಅಗ್ನಿಯಂ ಪೊಕ್ಕೊಡೆ ಬೇಯನೆಂಬ ವಾಕ್ಯಾರ್ಥ ರೂಪಮಪ್ಪ ವಸ್ತುಸ್ವಭಾವಂ, ಶೋಕಂ ಬಾಹ್ಯಾಗ್ನಿಯಿಂದಧಿಕಮೆಂಬ ವ್ಯತಿರೇಕಾಲಂಕಾರಮಂ ಧ್ವನಿಯಿಸಿತು.

ಅಲಂಕಾರಕ್ಕೆ ವಸ್ತುವ್ಯಂಜಕತ್ವಂ (೧) ಪದದೊಳೆಂತೆಂದೊಡೆ

ಚೂತಂ ತಳಿರ್ತು ಕುಸುಮ
ವ್ರಾತಮನುಱೆ ತಳೆಯೆ ಮಿತ್ರಮಧುವಾಸಶ್ರೀ
ಯೋತುಮೊಡಗೂಡದಿರ್ದೊಡೆ
ಚೂತಂ ಚುಂಬಿಸಲೆ ಸಂದನುದ್ಗ ಮಚಾಪಂ      ೪೭

ವಿ. ಇಲ್ಲಿ ಕೂಡದಿರ್ದೊಡಮೆಂಬುದಱಿಂ ವಿರೋಧಾಲಂಕಾರಂ ವಾಚ್ಯ ಮಾಯ್ತದಱಿಂ ಮಧುಮಾಸಂ ಪ್ರೌಢಮಪ್ಪುದಾಗೆಯೆಂತಪ್ಪುದೋ ! ಎಂಬ ವಸ್ತು ಧ್ವನಿಸಲ್ಪಟ್ಟುದು.

ಅಲಂಕಾರಕ್ಕೆ [ವಸ್ತು] ವ್ಯಂಜಕತ್ವಂ (೨) ವಾಕ್ಯದೊಳೆಂತೆಂದೊಡೆ

(ತರಾವೋದ್ಧತದುಹೃನ್ಮ)? ಮದವಾರಣಕುಂಭಶೋಣಿತೋ
ಲ್ಲಸಿತಮುದಗ್ರಬಾಹು ಕವಿಸಾಳುವಮಲ್ಲಕರಸ್ಥಿತಂ ಕರಂ
ನಿಶಿತಕರಾಳಖಡ್ಗವೆಸೆದತ್ತರಿವೀರರ ಕಣ್ಗೆ ಯುದ್ಧದೊಳ್
ಮಸಕದ ಮುಪ್ಪೊೞಲ್ಗೆ ಮುಳಿದೀಶ್ವರಕೇಕರಕಾಂತಿ ನೀೞ್ದವೋಲ್           ೪೯

ವಿ. ಇಲ್ಲಿ ಸ್ವತಸ್ಸಂಭವಿಯಪ್ಪುತ್ಪ್ರೇಕ್ಷಾಲಂಕಾರದಿಂ ಸಕಳರಿಪುಬಲಕ್ಷಯಂ ಕ್ಷಣಾರ್ಧದೊಳ್ ಮಾಡಲ್ಪಟ್ಟುದೆಂಬ ವಸ್ತುವ್ಯಙ್ಗ್ಯಂ –

ಅಲಂಕಾರದಿನಲಂಕಾರವ್ಯಙ್ಗ್ಯಂ (೧) ಪದದೊಳೆಂತೆಂದೊಡೆ

ಮದವಳಿಗೆ ನಿನ್ನಕಾಂತನ
ಸದಮಳರಾಗೋಷ್ಠವಿಂದಿನುದಯದೊಳುಱೆ ಬಾ
ಡಿದ ಸರಸಿಜದೆಸಳಾಯ್ತೆಂ
ಬುದುಗೇಳುತ್ತಿರದೆ ಬರೆದಳೊರ್ವಳ್ ನೆಲನಂ    ೫೦

ವಿ. ಇಲ್ಲಿ ಬಾಡಿದ ಸರಸಿಜದೆಸಳಾಯ್ತೆಂಬ ಪದದಿಂ ವಾಚ್ಯಮಾದ ರೂಪಕದಿಂ ಬಾಡಿದು ದರ್ಕೆ ಮತ್ತೊಂದುಕಾರಣಮಿಲ್ಲದುದಱಿಂ ನಿನ್ನಿಂದೀತನಧರಂ ಮರಲ್ದು ಮರಲ್ದು ಚುಂಬಿಸಲ್ಪಟ್ಟಿತೆಂದನುಮಾನಾಲಂಕಾರಂ ವ್ಯಂಜಿಸಲ್ಪಟ್ಟಿತು.

ಅಲಂಕಾರದಿನಲಂಕಾರವ್ಯಙ್ಗ್ಯಂ (೨) ವಾಕ್ಯದೊಳೆಂತೆಂದೊಡೆ

ನಿರುಪಮಸಾಳುವಮಲ್ಲ
ವರಗುಣಮಂ ಪೊಗೞ್ವೆನೆಂಬನಾವಂ ರತ್ನಾ
ಕರಜಲಮಂ ಕರತಳದಿಂ
ಭರದಿಂದಂ ತೀವಿ ತೀರ್ಚಲಾಪನ್ನನವಂ           ೫೧

ವಿ. ಇಲ್ಲಿ ನಿದರ್ಶನಾಲಂಕಾರದಿಂ ಸಾಳುವಮಲ್ಲನ ಗುಣಂಗಳ್ ವರ್ಣಿಪೊಡ ಶಕ್ಯಮೆಂದು ಪೇೞ್ವ ಅಸಾಧಾರಣ ತದ್ವಿಶೇಷಂಗಳಂ ಪ್ರಕಾಶಿಸುವಲ್ಲಿ ತತ್ಪರಮಾದಾಕ್ಷೇ ಪಾಲಂಕಾರಂ ಧ್ವನಿಸಲ್ಪಟ್ಟಿತು-

(೩) ಅರ್ಥಶಕ್ತಿ ಮೂಲವ್ಯಙ್ಗ್ಯಂ ಪ್ರಬಂಧದೊಳೆಂತೆಂದೊಡೆ

ಎಲೆ ಮಾನವರಿರ ಪೊೞ್ತಿದೆ
ಸಲೆ ಕನಕಪ್ರತಿಮೆಯಂತೆ ತೋರ್ಪೀ ಸಿಸುವಂ
ನೆಲದೊಳ್ ನಿಕ್ಷೇಪಿಸ ಬೇ
ಡೊಲೆದಿರ್ದಸು ಮಗೞ್ದು ಬರ್ಕುವದು ಬಿದಿವಶದಿಂ        ೫೨

ವಿ. ಇದು ರಾತ್ರಿಯಲ್ಲಿ ಸಮರ್ಥನಪ್ಪ ನರಿಯ ಮಾತು

ಅತಿಭಯಮಂ ಪುಟ್ಟಿಸುವೀ
ಪಿತೃವನಮಂ ಪೊಕ್ಕು ಮಗುೞ್ದ ಶವ (ಮೊಂದಿ) ಲ್ಲೀ
ಕ್ಷಿತಿಯೊಳೆ ಮರ್ವೊದವದ ಮು
ನ್ನೆ ತೊಲಗಿ ಸುಕ್ಷೇಮವೃತ್ತಿಯಿಂ ಮನೆಗೆಯ್ದಿಂ ೫೩

ವಿ. ಇದು ದಿನದಲ್ಲ ಸಮರ್ಥ[ನಪ್ಪ] ಪರ್ದಿನ ಮಾತು.

ಇಂತೆಂದು ಪ್ರಬಂಧದಿಂ ಪೇೞಲ್ಪಟ್ಟರ್ಥದಿಂ ನರಿಪರ್ದುಗಳ ತಂತಮ್ಮ ವೇಳೆ ಯಲ್ಲಿಯಾ ಶವಭಕ್ಷಣಾಭಿಪ್ರಾಯಂ ಪ್ರಕಾಶಿಸಲ್ಪಟ್ಟಿತ್ತು. ಈ ರೀತಿಯಲ್ಲಿ ವಸ್ತುವಿನಿಂದ ಲಂಕಾರ ವ್ಯಂಜಕತ್ವಮಂ, ಅಲಂಕಾರದಿಂ ವಸ್ತುವ್ಯಂಜಕತ್ವಮಂ, ಅಲಂಕಾರದಿಂದಲಂ ಕಾರವ್ಯಂಜಕತ್ವಮಂ ಪ್ರಬಂಧದೊಳ್ ಮೇಣ್ ಯೋಜಿಸಿಕೊಳ್ವುದು.

ಕವಿಪ್ರೌಢೋಕ್ತಿಯುಳ್ಳ ವಸ್ತುವಿನಿಂ ವಸ್ತುವ್ಯರ್ಙ್ಗ್ಯಮೆಂತೆಂದೊಡೆ

ಸುರಗಿರಿಕೂಟದೊಳ್ ನೆಗೞ್ದ ಕಿನ್ನರಿಯರ್ಕಳೆ ಸಾಳ್ವಮಲ್ಲಭೂ
ವರ
ವರಕೀರ್ತಿಯಂ ಪದೆದು ಪಾಡುವಿನಂ ದಿಗಿಭಾಳಿ ಕೇಳ್ದು ಕೇ
ಕರದೊಳೆ ಕರ್ಣಮೂಲಮನಭೀಕ್ಷಿಸಿ ಸತ್ಪುಲಿನಸ್ಥಳಾಗ್ರಸಂ
ಸ್ಫುರಿತ ಮೃಣಾಳಮೆಂದು ಸೆಳೆವುಜ್ಜುಗದಿಂ ಕರಮಂ ನಿಮಿರ್ಚುಗುಂ           ೫೪

ವಿ. ಇಲ್ಲಿ [ಸಾಳ್ವ ಮಲ್ಲಭೂಪನ] ಕೀರ್ತಿಯಂ ಕೇಳ್ದು ದಿಗಿಭಾಳಿ ಕರ್ಣ ಮೂಲಮನೀಕ್ಷಿಸಿ (ಯಲ್ಲಿ ತೋರ್ಪ ಜಸಮಂ) ಮೃಣಾಳಮೆಂದು ಸೆಳೆವುಜ್ಜುಗದಿಂ ಕರಮಂ ನಿಮಿರ್ಚುಗುಮೆಂಬ ವಾಚ್ಯಾರ್ಥಮಪ್ಪ ಕವಿನಿಬದ್ಧಪ್ರೌಢೋಕ್ತಿಯಿಂ (ಯಶಮಂ ಬಿಳಿದೆಂದು ಬಣ್ಣಿಪುದು ಕವಿಸಮಯ ಸಿದ್ಧಮಾದುದಱಿಂ) ದಾತನಕೀರ್ತಿ ದಿಗಂತ ಪ್ರಸಾರಿತಮಾಯ್ತೆಂಬ ವಸ್ತು ವ್ಯಂಜಿತವಾದುದು.

ಕವಿಪ್ರೌಢೋಕ್ತಿಯೊಳ್ ವಸ್ತುವಿನಿಂದಲಂಕಾರಮೆಂತೆಂದೊಡೆ

ವರಸಾಳ್ವಮಲ್ಲನಿಂ ಸಂ
ಗರದೊಳ್ ಜಯಲಕ್ಷ್ಮಿ ಚಾರುತರವಚದಿಂ ಸ್ವೀ
ಕರಿಸಲ್ಪಟ್ಟಳದೇಂ ತ
ತ್ಕರಿಕಂಧರವದ್ರಿಕುಹರದಿಂ ಸ್ವೀಕರಿಕುಂ           ೫೫

ವಿ. ಇಲ್ಲಿ ವಿಜಯಲಕ್ಷ್ಮಿಯ ಮುಂದಲೆವಿಡಿದುದಂ ನೋೞ್ಪುದಱಿಂ ಮದನೋ ದ್ರೇಕಂಗಳಾದುವೆಂಬಂತೆ ಗಿರಿಕಂದರಂಗಳ್ ನಿನ್ನ ಶತ್ರುಗಳೋಡಿ ಗುಹೆಯೊಳಿರ್ದಪ ರೆಂಬುದಲ್ತು. ಮತ್ತಂ ನಿನ್ನತ್ತಣಿಂದಪ್ಪ ಪರಾಭವಮಂ ಶಂಕಿಸಿ ಗುಹೆಗಳವರ ಕೊರಲು ವೀಯವೆಂದು ಪಿಡಿದುವೆಂಬುದಪಹ್ನುತ್ಯಲಂಕಾರಂ ವ್ಯಙ್ಗ್ಯಂ.

ಕವಿಪ್ರೌಢೋಕ್ತಿಯೊಳಲಂಕಾರದಿಂ ವಸ್ತುವ್ಯಙ್ಗ್ಯವೆಂತೆಂದೊಡೆ

ಭರದೇಕಾಂತನಿವಾಸದೊಳ್ ಪದೆದು ಗಾಢಾಲಿಂಗನೋದ್ಯುಕ್ತನಾ
ಗಿರೆ ಕಾಂತಂ ಘನಮಾನಗರ್ವಿತೆಯರಪ್ಪಾನೀರೆವೆಂಡಿರ್ಗಳು
ದ್ಧುರಮಾನಂ ದೃಢಪೀಡನೋದ್ಘಭಯದಿಂ ಬಿಟ್ಟು ಪೋಯ್ತೆಂಬಿನಂ
ಪಿರಿದಾವೇಗದೆ ಪಿಂಗಿದತ್ತು ಹೃದಯಾಂಭೋಜಾತಪೀಠಸ್ಥಿತಂ     ೫೬

ವಿ. ಇಲ್ಲಿ ಕವಿಪ್ರೌಢೋಕ್ತಿಯಿಂದ ಪುಟ್ಟಿದುತ್ಪ್ರೇಕ್ಷಾಲಂಕಾರದಿಂ ಮನದ ತೊಲಗಿಕೆಯಿಂ ಸೂಚಿಸಲ್ಪಟ್ಟ ಪ್ರತ್ಯಾಲಿಂಗನಂ ಮೊದಲಾದುವಱ ಪೆರ್ಚುಗೆಯೆಂಬ ವಸ್ತು ಧ್ವನಿಸಲ್ಪಟ್ಟಿತು.

ಕವಿಪ್ರೌಢೋಕ್ತಿಯೊಳಲಂಕಾರದಿನಲಂಕಾರವ್ಯಙ್ಗ್ಯವೆಂತೆಂದೊಡೆ

ವರಕವಿವಕ್ತ್ರ ಪಂಕರುಹದೊಳ್ ನೆಲೆಗೊಂಡು ಸಮಸ್ತವಿಷ್ಠಪೋ
ತ್ಕರಮನೊರಲ್ದಲಂಪಿನೊಳೆ ನೂತನಮಾಗಿ (ಯೊಸರ್ವ) ಸೃಷ್ಟಿಯು
ದ್ಧುರತರಲೀಲೆಯಿಂ ಕಮಲವಿಷ್ಟರನಂ ನಗುತಿರ್ಪಳಾವಳಾ
ಸರಸತಿ ಕೂರ್ತು ಬೇೞ್ವ ವರಮಂ ಭಜಕಾವಳಿಗೀಗೆ ಸಂತತಂ          ೫೭

ವಿ. ಇಲ್ಲಿ ನಗುತಿರ್ಪಳೆಂಬಂತೆಯೆಂಬುತ್ಪ್ರೇಕ್ಷಾಲಂಕಾರದಿಂ ಚಮತ್ಕಾರಕ್ಕೆ ಮುಖ್ಯ ಕಾರಣ ಮಾದ ಜಗತ್ತಿನ ಜಡಜಾಸನಸ್ಥೆಯಾಗಿ ನಿರ್ಮಿಸಲ್ಪಟ್ಟಳೆಂಬ ವ್ಯತಿರೇಕಾಲಂಕಾರಂ ವ್ಯಙ್ಗ್ಯಂ-

ಕವಿನಿಬದ್ಧ ವಕ್ತ್ರಪ್ರೌಢೋಕ್ತಿಯೊಳ್ ವಸ್ತುವಿನಿಂ ವಸ್ತುವ್ಯಙ್ಗ್ಯವೆಂತೆಂದೊಡೆ

ವಿಳಸಲ್ಲಂಕಾಚಲೋಪಾಂತದೊಳೆ ಸುೞಿದ ಸಂಭೋಗಕಾಂತೋರಗೀಸಂ
ಕುಳಮಾದಂ ಪೀರ್ದು ಮೆಯ್‌ಸಣ್ಣಿಸಿದ ಲಲಿತವಾಯಪ್ರತಾನಂಗಳೀಗಳ್
ಮುಳಿಸಿಂ ಕಾಂತರ್ಕಳೊಳ್ ಪಿಂಗಿದ ವಿರಹದ ಪೆಂಡಿರ್ಗಳಾಸುಯ್ಲ ಮೇಳಂ
ದಳೆದುರ್ವಿಂ ಬೀಸುಗುಂ ಬಾಲತೆಯೊಳೆ ಹರೆಯಂ ಪೂರ್ತಿವೆತ್ತಂತುವೆತ್ತಂ      ೫೮

ವಿ. ಇಲ್ಲಿ ನಿಟ್ಟುಸಿರನುಳ್ಳ ಪ್ರಾಪ್ತಮಾದೈಶ್ವರ್ಯಮನುಳ್ಳ ವಾಯುಗಳ ಘಟಿತಮಾದ ಕಾರ್ಯಮಂ ಸಂಘಟಿಸುತ್ತುಮಿರ್ದುಪುವೆಂಬಿವು ಮೊದಲಾದುವು ವ್ಯಙ್ಗ್ಯಂ.

ವಸ್ತವಿನಿಂದಲಂಕಾರ ವ್ಯಙ್ಗ್ಯವೆಂತೆಂದೊಡೆ

ಏನೆಂಬೆಂ ಕೆಳದಿಯೆ ಮ
ನ್ಮಾನವನೀ ಹೃದಯದಲ್ಲಿ ಸೆಱೆಗೆಯ್ದುದಱಿಂ
ದಾನಿರೆ ಪತಿವೀಕ್ಷಣ ಸಂ
ಧಾನಸಹಾಯದೆ ಕೞಲ್ದು ಪೋಯ್ತತಿವೇಗಂ    ೫೯

ವಿ. ಇಲ್ಲಿ ಮಾನಪಲಾಯನರೂಪಮಾದ ವಸ್ತುವಿನಿಂ ನಾಯಕಂ ಪ್ರಾರ್ಥನೆ ಮಾಡದಿ ರ್ದೊಡಂ ನಾಯಿಕೆ ಪ್ರಸನ್ನಳಾದಳೆಂಬ ವಿಭಾವನಾಲಂಕಾರಂ ವ್ಯಙ್ಗ್ಯಂ. ಮೇಣ್ ಪ್ರಿಯದರ್ಶನಸೌಭಾಗ್ಯದ ಬಲಂ ಧೈರ್ಯದಿಂ ತಾಳ್ವೆನೆಂದೊಡೆ ಶಕ್ಯಮಲ್ತುಯೆಂಬುತ್ಪ್ರೇಕ್ಷಾಲಂಕಾರಂ ವ್ಯಙ್ಗ್ಯಂ. ಮೇಣ್ ಪ್ರಿಯದರ್ಶನಕ್ಕೆ ನಾಯಕತ್ವಂ, ಮಾನಕ್ಕೆ ಪ್ರಿಯದರ್ಶನತ್ವಂ ಧೈರ್ಯಕ್ಕೆ ತತ್ಸಾಮಂತತ್ವಮೆಂಬೀ ವ್ಯವಸ್ಥೆಗಳ್. ಉತ್ಪ್ರೇಕ್ಷಾಲಂಕಾರಂ ವ್ಯಙ್ಗ್ಯಂ.

ಅಲಂಕಾರದಿಂ ವಸ್ತುವ್ಯಙ್ಗ್ಯವೆಂತೆಂದೊಡೆ

ಸರಸಿಜನೇತ್ರೆ ಕಾಯ್ಪು ಮನಕಾದುದೆ ಪೆೞ್ ನಯನಂಗಳಲ್ಲಿ ಕೆಂ
ಪುರುತರಮಾಯ್ತು ಕೇಳ್ ಪ್ರಿಯನೆ ನಿನ್ನಯ ಮೆಯ್ಯೊಳೆ ತಳ್ತು ಸಾರ್ದ ದು
ರ್ಧರನಖಘಾತಿ ರಕ್ತವಸನೋಜ್ಜ್ವಳಶೋಭೆಯೆಯೆನ್ನ ದೃಷ್ಟಿಗಾ
ಧರಣಿಯೊಳೀಯಲಾದುದುರುಕೋಪದ ಕೆಂಕಮಿದಲ್ತು ನಿಶ್ಚಯಂ  ೬೦

ಇಲ್ಲಿ ಕುಪಿತಮಾದ ಲೋಚನಂಗಳನೇಕಾರಣಂ ಧರಿಯಿಸುತಿರ್ದೆಯೆಂಬ ಪ್ರಶ್ನೋತ್ತರಾಲಂಕಾರದಿಂ ಬಱಿಯಾರ್ದ್ರನಖಕ್ಷತಾದಿಗಳನೆ ಮಱೆಸುತಿರ್ದಪುದೆಂಬುದಲ್ತು ಅದರ್ಕೆ ಸಂದುಂ ಪ್ರಸಾದ ಪಾತ್ರವಾದುದಿಲ್ಲಮೆಂಬ ವಸ್ತು ವ್ಯಙ್ಗ್ಯಂ.

ಅಲಂಕಾರದಿನಲಂಕಾರವ್ಯಙ್ಗ್ಯವೆಂತೆಂದೊಡೆ

ಭಾವಕ ಕೇಳ್ ಭವದ್ಧೃದಯಮೊಪ್ಪುವ ಸಾಯಿರವೆಂಡಿರಿಂದೆ ಪೂ
ರ್ಣಾವಹಮಿಂತಿದಿನ್ನಿದಱೊಳಾಂ ಪುಗಲಿಂಬಿನಿತಿಲ್ಲೆನುತ್ತೆ ನಾ
ನಾವಿಧದುಜ್ಜುಗಂಗಳಿನಿತಿಲ್ಲದೆ ತನ್ವಿಯೆನಾದೊಡಂ ಕರಂ
ಭಾವಿಸಿ ನಲ್ಮೆಯಿಂದತಿತನುತ್ವಮನೆನ್ನ ಶರೀರಕಿತ್ತಪೆಂ    ೬೧

ವಿ. ಇಲ್ಲಿ ಹೇತ್ವಲಂಕಾರದಿಂ ಸಣ್ಣಮಾದ ಶರೀರಮತಿಸಣ್ಣಮಂ ಮಾಡಿದೊಡಂ ನಿನ್ನ ಚಿತ್ತದೊಳಾಂ ವರ್ತಿಸೆನೆಂಬ ವಿಶೇಷೋಕ್ತ್ಯಲಂಕಾರಂ ವ್ಯಙ್ಗ್ಯಂ. ಗ್ರಂಥ ವಿಸ್ತರ ಭಯದಿ ನತಿವಿಸ್ತರಮಂ ಮಾಡಿದುದಿಲ್ಲಂ.

ಶಾ ರ ದಾ ವಿ ಲಾ ಸ ದೊ ಳ್

ಧ್ವನಿಙ್ಗ್ಯವಿವರಣಂ
ದ್ವಿತೀಯ ಪರಿಚ್ಛೇದಂ
ಸಮಾಪ್ತಂ