ಚತುರ್ಥ ಪ್ರಕರಣಂ

ಶ್ರಿಯಂ ರಸವತ್ಕವಿತಾ
ಶ್ರೀಯಂ ತಳೆದಿಂದುಕುಂದಕರ್ಪೂರಯಶ
ಶ್ರೀಯಂ ಪೆತ್ತಂ ಭವ್ಯ
ಪ್ರಾಯಂ ಪರಹಿತದೆ ಬಾೞ್ವನೀ ಕವಿಸಾಳ್ವಂ

ವ : ವಿದ್ಯಾನಾಥನ ಭಾವೋದಯ ಭಾವಶಾಂತಿ ಭಾವಸಂಧಿ ಭಾವಶಬಲತ್ವ ಭಾವಸ್ಥಿತಿಗಳ್ಗೆ

ಸೂತ್ರಂ ೧೦೯

ಪಸರಿಪ ಭಾವದುದಯ ಶಾಂ
ತಿ ಸಂಧಿ ಶಬಲತೆಗಳೆಂದು ಪರಿವರ್ತಿಸುಗುಂ
ಪೆಸರದಱುದಯದೆ ಶಾಂತಿಯಿ
ನೆಸೆವೆರಡಱ ಸಂಧಿಯಿಂ ಬಹುತ್ವದೆ ಸಿದ್ಧಂ

ಲಕ್ಷ್ಯಂ

ಪರಿವಿಡಿಗೆಯ್ಯೆ ತೊಂಡುಗಿಳಿ ತಂದೆಯ ತಾಯ ಸಮೀಪದೊಳ್ ತನೂ
ದರಿಯ ರತೋಪಯುಕ್ತ ರುತಮಂ ವಿನತಾನನೆ ನಾಣ್ಚಿ ತಾಳತ
ತ್ಪರಶಿಶು ನರ್ತನಪ್ರಹತಕಂಕಣಝಂಕೃತಹಸ್ತತೂರ್ಯ ನಿ
ರ್ಭರ ರವದಿಂದದಂ ಮಱೆಸಿದಳ್ ಗಡ ಮುಗ್ಧೆಯದೇಂ ವಿದಗ್ಧೆಯೋ         ೧೭೫
(ಇಲ್ಲಿ ಲಜ್ಜಾಭಾವೋದಯಂ)

ಸತಿ ಕೇಳ್ ನೀಂ ರತಿ ನಲ್ಲನೊಪ್ಪುವಲರ್ವಿಲ್ಲಂ ಪ್ರೇಮದಿಂ ಶರ್ಕರಾ
ಮೃತದೊಳ್ಗೂಟದವೋಲ್ ನಿಮತ್ತು ಸವಿಗೂಟಂ ಪಿಂಗೆ ಕಾಮಾಗ್ನಿಗಾ
ಹುತಿಯಪ್ಪಂದಮದಲ್ತೆ ಗಾವಿಲರ ಕೃತ್ಯಂ ಕಾಲ್ಗೆ ಬಿೞ್ದಿರ್ದ ಭೂ
ಪತಿಯಂ ಮೇಳಿಸು ಬೇಡ ಕೋಪಮೆನೆ ಕೇಳ್ದೊಲ್ಲಪ್ಪಿದಳ್ ಕಾಂತನಂ         ೧೭೬
(ಇಲ್ಲಿ ಭಾವಶಾಂತಿ)

ಇದಿರೊಳ್ ಪುಲಿ ಗರ್ಜಿಸಿ ನಿಲೆ
ಬೆದಱಿ ಕರಂ ಶಬರಿ ಬರಿಯನಪ್ಪಲೊಡಂ ಕೋ
ಪದಿನಲರ್ದುದೊಂದು ಕಣ್ ರಾ
ಗದಿನಲರ್ದುದದೊಂದು ಕಣ್ ವನೇಚರಪತಿಯಾ           ೧೭೭
(ಇಲ್ಲಿ ರೋಷಹರ್ಷದ ಸಂಧಿ)

ವ : ಮತ್ತಂ

ನಂದನನೊಸಗೆಯುಮಾ ಮಕ
ರಂದಕನೆಳಸಿರದೆ ಬಿಟ್ಟು ಪೋದೊಂದೞಲುಂ
ಕುಂದದೊಡವೆರಸೆ ಸತಿ ಕಾ
ಳಿಂದಿಯ ಸುರಿನದಿಯ ಕೂಡಲಂ ಪೋಲ್ತಿರ್ದಳ್೧೭೮
(ಇಲ್ಲಿ ಹರ್ಷವಿಷಾದ ಸಂಧಿ)
(ಇವು ಭಾವಸಂಧಿಗಳ್)

ಎಲರಿಂದೆೞ್ಚತ್ತು ಲೀಲಾವತಿ ನಿಜಪತಿಯಂ ಮಂಚದೊಳ್ ಕಾಣದಾಗಳ್
ಚಲೆಯಾದಳ್ ಮೂರ್ಛೆವೋದಳ್ ಮಱೆದಳೊಱಗಿದಳ್ ಕಂದಿದಳ್
ಕುಂದಿದಳ್ ಕೋ
ಟಲೆಗೊಂಡಳ್ ಸಾವುಗಂಡಳ್ ಕಳವಳಿಸಿದಳಾಸತ್ತಳೞ್ತಳ್ ಬೆಮರ್ತಳ್
ನೆಲೆಯಿಂದಂ ಬಿೞ್ದಳೆೞ್ದಳ್ ವಿರಹದುರಿಯ ಸಂತಾಪವಿಭ್ರಾಂತಿಯಿಂದಂ       ೧೭೯

(ಇಲ್ಲಿ ಬೋಧೆ ಮತಿ ಚಪಲತೆ ಮೋಹಂ ಜಡತೆ ನಿದ್ರೆ ಗ್ಲಾನಿ ಮೊದಲಾದ ಸಂಚಾರಿ ಗಳಪ್ಪುದಱಿಂ ಭಾವಶಬಲತ್ವಂ)

ವ : ಭಾವದ ನಿಲವೇ ಭಾವಸ್ಥಿತಿ

ಲಕ್ಷ್ಯಂ

ತಣಿವುಂಟೇ ಪೆಱದೊಂದಪೂರ್ವರಸಮಂ ಕೆಯ್ಗೊೞ್ಗುಮೇ ಮತ್ತಮಾ
ವುಣಿಸಾ ತಂಬುಲಮಾ ವಿದಗ್ಧಗಣಿಕಾಸಂಭೋಗಮಾ ವಸ್ತ್ರ ಭೂ
ಷಣ ಮಾಲ್ಯಾದಿಗಳೆಂದೆ ಪಂಬಲಿಪೆ ನಿಚ್ಚಮೀ ಪಿಷ್ಟ ಪೇ
ಷಣಮೀ ಚರ್ವಿತ ಚರ್ವಣಂ ಸುಖಮದೇಂ ನಿನ್ನಂ ಮರುಳ್ಮಾಡಿತೋ           ೧೮೦
(ವಿತರ್ಕದ ಸ್ಥಿತಿ)

ವ : ಇಂತೈದುವಿಧಂ ವ್ಯಭಿಚಾರಿಗಳ್ ಪ್ರತ್ಯೇಕಮೆಂದಱಿವುದು. ಇನ್ನಾ ವ್ಯಭಿಚಾರಿಗಳಂ ಪೇೞ್ವೆಂ

ಸೂತ್ರಂ ೧೧೦

ಮತಿ ಲಜ್ಜಾವೇಗ ಶಂಕಾ ಮರಣ ಚಪಲತಾ ಹರ್ಷ ನಿರ್ವೇದ ದೈನ್ಯ
ಸ್ಮೃತಿ ಮೋಹಾಲಸ್ಯಗರ್ವ ಶ್ರಮ ಮದ ಜಡತಾ ಗ್ಲಾನಿ ಸಂಸುಪ್ತಿ ನಿದ್ರಾ
ಧೃತಿ ತರ್ಕೋನ್ಮಾದ ಬೋಧಾಮಯ ಭಯ ಸವಿಷಾದೋತ್ಸುಕಾಮರ್ಷ ಚಿಂತಾ
ಸತತಾಸೂಯಾವಹಿತ್ಥೋಗ್ರ ಕವಿಲಸದಪಸ್ಮಾರಕಾಖ್ಯಾನದಿಂದಂ

ಸೂತ್ರಂ ೧೧೧

ಸಮನಿಸಿ ಗಣಿಸಿದ ಮೂವ
ತ್ತುಮೂಱು ಸಂಚಾರಿಭಾವತತಿಗಾಂ ಪೇೞ್ವೆಂ
ಕ್ರಮದೆ ವಿಭಾವಮನನುಭಾ
ವಮನೊಪ್ಪುವ ಹೇಮಚಂದ್ರಸೂರಿಯ ಮತದಿಂ

ಸೂತ್ರಂ ೧೧೨

ನೆಗೞ್ದ ವಿಭಾವಂ ವ್ಯಭಿಚಾ
ರಿಗೆ ಕಾರಣಮಾಯ್ತು ಕಾರ್ಯಮನುಭಾವಂ ಸೈ
ತೊಗೆದನುಭಾವದೆ ಸಂಚಾ
ರಿಗಳಂ ವರ್ಣಿಸಿದರಾದ್ಯರೆಂತೆನೆ ಪೇೞ್ವೆಂ

ವ : ಅಲ್ಲಿಯಾದಿಮಾರ್ಗದಿಂ ವ್ಯಭಿಚಾರಿ ಮೂವತ್ತುಮೂಱುಂ ಸಂದುದು ಬೇಱಿಲ್ಲಂ. ದಂಭಂ ಗರ್ವದೊಳವಹಿತ್ಥದೊಳುದ್ವೇಗಂ ನಿರ್ವೇದದಲ್ಲಿ ಕ್ಷುತ್ತೃಷ್ಣಾದಿ ಗ್ಲಾನಿಯೊಳಂತ ರ್ಭಾವಮಂತೆ ಪೆಱತೊಳವೆಂದೊಡಮೀ ಮೂವತ್ತುಮೂಱ ಱೊಳವರ್ಪುವು. ಅಲ್ಲಿ ಲಕ್ಷಣಮಂ ವಾಕ್ಯಮಾಗೆ ವಿಭಾವಾನುಭಾವಂಗಳಂ ಪೇೞ್ದುದನಱಿಗೆ

ಕ್ರಮಲಕ್ಷಣಂ

ವ : ಅರ್ಥನಿಶ್ಚಯಮೇ ಮತಿ

ಸೂತ್ರಂ ೧೧೩

ಶ್ರುತಚಿಂತನಾನಯಾದ್ಯು
ನ್ನತಬುದ್ಧಿಪದಾರ್ಥಬೋಧೆಯೆ ವಿಭಾವಂ ತ
ನ್ಮತಿಗೆ ಸಲೆ ಸಂದೆಗಮನ
ಟ್ಟೆ ತತ್ವಮಂ ತಿಳಿದ ನಿಲವೆ ಸಂದನುಭಾವಂ

ಲಕ್ಷ್ಯಂ

ಕಿಡಲೆಂದಿರ್ಪುದು ದೇಹಮೆಲ್ಲ ತೆಱದಿಂ ಕೇಡಿಲ್ಲ ಜೀವಕ್ಕೆ ಮ
ತ್ತೊಡಲಜ್ಞಾನಿ ಸುಬೋಧದೃಗ್ಬಳಮೆ ಮೆಯ್ ಜೀವಕ್ಕೆ ದೋಷಂಗಳಿ
ರ್ಪೆಡೆ ದೇಹಂ ಗುಣರತ್ನಮಿರ್ಪ ನಿಳಯಂ ಜೀವಂ ದಲೆಂದಿಂತು ನೋ
ೞ್ಪೊಡಮನ್ಯೋನ್ಯವಿರುದ್ಧಮೆಂತು ತನುವಂ ನೀಂನಚ್ಚಿದೈ ಜೀವನೇ       ೧೮೧

ವ : ಮತ್ತಂ

ಅಮರೇಂದ್ರೋನ್ನತಿ ಖೇಚರೇಂದ್ರವಿಭವಂ ಭೋಗೀಂದ್ರಭೋಗಂ ಮಹೇಂ
ದ್ರಮಹೈಶ್ವರ್ಯಮಿವೆಲ್ಲಮಧ್ರುವಮಿವಂ ಬೇೞ್ಪಂತು ಬೇಡೊಲ್ಲೆನು
ತ್ತಮದೀಕ್ಷಾವಿಧಿಯಂ ಸಮಾಧಿಮರಣಂ ಕರ್ಮಕ್ಷಯಂ ಬೋಧಿಲಾ
ಭಮಮೋಘಂ ದೊರೆಕೊಳ್ವುದಕ್ಕೆಮಗೆ ಮುಕ್ತಿಶ್ರೀವಧೂವಲ್ಲಭಾ            ೧೮೨
(ಇದು ಮತಿ)

ವ : ಮತ್ತೀ ಚಿತ್ತಸಂಕೋಚಮೆ ಲಜ್ಜೆ

ಸೂತ್ರಂ ೧೧೪

ಛಲ ಭಂಗಮಕಾರ್ಯಕರಣ
ಮಲಂಘ್ಯರಂ ಮಿಗುವುದಾದಿಯೆ ವಿಭಾವಂ ತಾಂ
ಸಲೆ ಲಜ್ಜೆಗೆ ವೈವರ್ಣ್ಯಂ
ತಲೆಗುತ್ತಿಳೆವರೆವುದಾದಿ ನೆಗೞ್ದನುಭಾವಂ

ಲಕ್ಷ್ಯಂ

ನವವಧು ನಲ್ಲನಿತ್ತಧರನೀಲತೆಯಂ ಮುಕುರಾಂಗದಲ್ಲಿ ನೋ
ಡುವ ಪದದಲ್ಲಿ ನೋಡುತದನಾತನೆ ನಿಂದಿರೆ ಪಿಂತೆ ಬಂದು ಕಂ
ಡವನತಕಂಠಿ ಕಯ್ನಿಡಿಯನೊಳ್ಳುಗುರಿಂ ಬೆರಟುತ್ತೆ ಬೆಳ್ಮೊಗಂ
ಸವನಿಸೆ ಕಾಲ್ವೆರಲ್ ಬರೆಯೆ ಭೂಮಿಯನಿರ್ದಳದೊಂದು ಚೆಲ್ವಿನಿಂ೧೮೩
(ಇದು ಲಜ್ಜೆ)

ವ : ಸಂಭ್ರಮಮೆ ಆವೇಗಂ

ಸೂತ್ರಂ ೧೧೫

ವಾತಾಗ್ನಿ ವರ್ಷಗಜಮು
ತ್ಪಾತಂ ಪ್ರಿಯವಿಪ್ರಿಯ ಶ್ರವಣತಾವ್ಯಸನಂ
ಈ ತೆಱದೆ ವಿಭಾವಂ ವಿ
ಖ್ಯಾತಾವೇಗಕ್ಕೆ ಪೇೞ್ವೆನನುಭಾವಮುಮಂ

ಸೂತ್ರಂ ೧೧೬

ಮುಸುಕು ಪೊಗೆ ಸುತ್ತು ಪೊದಕೆಗ
ಳಸದೃಶದೊಲವಿಕೆ ವಿಚಿತ್ರಪುಳಕವಿಲಾಸ
ಪ್ರಸರಂ ಸನ್ನಾಹಮುಮಿಂ
ತೆಸೆವಾವೇಗಕ್ಕೆ ತರದೆಯನುಭಾವಂಗಳ್

ಲಕ್ಷ್ಯಂ

ಕಾೞ್ಕಿಚ್ಚು ತಗುೞೆ ತನ್ನೊಳ್
ಕೋೞ್ಕುಟ್ಟಿ ವನದ್ವಿಪೇಂದ್ರಚಯವತಿಭಯದಿಂ
ನೀೞ್ಕರಿಸಿ ನಿಲ್ಲದಲ್ಲಿಯೆ
ನಾೞ್ಕಡೆ ಪೋಪಂತುಪೋದು ದಾನಗತಟದೊಳ್           ೧೮೪
(ಇದಗ್ನಿಯಿಂದಾದಾವೇಗಂ)

ಗುಡಿಗಟ್ಟುವ ಕಡೆಯಿಕ್ಕುವ
ಸೊಡರ್ವೆಳಗುವ ತೋರಣಂದಗುಳ್ಚುವ ಚಳೆಯಂ
ಗುಡುವ ಸಿರಿಗಂಪುವಡೆವಲ
ರ್ದೊಡರ್ಚುವಮರಿಯರ ಕೆಯ್ತಮಚ್ಚರಿದಱೊಳ್        ೧೮೫
(ಇದು ಸ್ವಾಮ್ಯಾವೇಗಂ)

ಏಳಿದಗೆಯ್ಯಲಿನೆಮ್ಮೊ
ಳ್ಳಾಳನುಮೊಳ್ಗುದುರೆಯಂ ರಥಮುಮಂ ರಿಪುಹೃ
ದ್ವ್ಯಾಳಮುಮಂ ಸಮಕಟ್ಟೆಂ
ಕಾಳೆಗಕಂ ಪೋಗಿ ತಡೆದುಮಿರ್ಪೊಡಯುಕ್ತಂ     ೧೮೬
(ಇದು ವ್ಯಸನಾವೇಗಂ)

ವ : ಇನ್ನುೞಿದುವನಿಂತಱಿವುದು. ಶಂಕಿಪುದೆ ಶಂಕೆ

ಸೂತ್ರಂ ೧೧೭

ಪರದಾರಾದಿವಿರುದ್ಧಾ
ಚರಣಂ ಶಂಕೆಗೆ ವಿಭಾವಮೆಡಬಲನೋಟಂ
ಸ್ವರಮುಖವರ್ಣವಿಭೇದಂ
ವರಮುಖಕಂಠೌಷ್ಠಶೋಷಮಿವನುಭಾವಂ

ಲಕ್ಷ್ಯಂ

ಮೊಲೆವಿಣ್ಬಿಂ ಬಳ್ಕುತುಂ ಮೆಲ್ಲನೆ ಪದವಿಡುತುಮ ನೀೞ್ದಪಾಂಗಂಗಳಿಂದಿ
ರ್ಕೆಲನಂ ನೋಡುತ್ತುಮೆತ್ತಂ ಸುೞಿವ ನೆೞಲನಾರಯ್ವುತುಂ ದೂರದಿಂ ಕೇ
ಳ್ದುಲಿಪಂ ಕರ್ಣಾವತಂಸಕ್ಕೆಳಸುವಳಿಗಳಂ ಸೋವಿ ನಿಂದಾಲಿಸುತ್ತುಂ
ಚಲವೇಣೀಭಾರದಿಂದೋಸರಿಸುವ ಮುಸುಕಂ ಸಾರ್ಚುತುಂ ಪಾಣ್ಬೆ ಪೋದಳ್
(ಇದು ಶಂಕೆ)        ೧೮೬

ವ : ಮ್ರಿಯಮಾಣತ್ವಮೆ ಮೃತಿ

ವಿಚಾರಂ : ಮರಣದ ಪೂರ್ವಾವಸ್ಥೆಯೇ ಮರಣಂ, ಮೇಲೆ ಅನುಭಾವಮಿಲ್ಲ.

ಸೂತ್ರಂ ೧೧೮

ಉರಗಾದ್ಯಭಿಘಾತಂ ಮೇಣ್
ಜ್ವರಾದಿರೋಗಂ ಮೃತಿಗೆ ವಿಭಾವಂ ಪೂರ್ವ
ಕ್ಕುರುಹಿಕ್ಕಾ ಫೇನಂಗಳ್
ಶರೀರಕಂಪಂ ಕೃಶತ್ವವಿಂತನುಭಾವಂ

ವ : ಮತ್ತಂ ದಾಹಾಂಗಭಂಗಜಡತಾದಿಯುಮಕ್ಕುಂ ಇನ್ನಾ ವ್ಯಾಧಿಗೆ ಶ್ವಾಸಾಂಗಭಂಗಾಕ್ಷಿ ಮೀಳನಹಿಕ್ಕದಿಯನುಭಾವಂ

ಲಕ್ಷ್ಯಂ

ನೊರೆ ಬಾಯಿಂ ಪೊಱಸೂಸೆಕುಂಬಱನ ಚಕ್ರಂಬೋಲ್ ಭರಂಗೆಯ್ದು ಕಣ್
ತಿರುಗುತ್ತೊಂದಿರೆ ಪೆತ್ತ ಜೀಕೋಳವಿವೋಲ್ ಮೂಗೊತ್ತೆ ರಕ್ತಾಂಬುವಂ
ಬರಿವೊಯ್ಲುರ್ವೆ ನಿಮಿರ್ಚೆ ಬಿಕ್ಕುಳಿಕೆ ಮೆಯ್ ಮುಯ್ವಾಗೆ ಕಂಪಕ್ಕೆ ದಲ್
ಕುರುರಾಯಂ ಗದೆವೊಯ್ಲನಿಂದಿಳೆಗೆ ಬಿೞ್ದಂ ಬೆಟ್ಟು ಬಿೞ್ದಂದದಿಂ            ೧೮೭
(ಇದು ಮರಣಂ)

ವ : ಸಾಕ್ಷಾನ್ಮೃತಿಗೆ

ಅರೆ ಮುಗಿದಿರ್ದ ಕಣ್ಮಲರ್ಗಳುಂ ನಿಮಿರ್ದೆತ್ತಿದ ಕೂನುಗಯ್ಯುಮಾ
ಸುರದರೆಗರ್ಚಿದೌಂಡುವೆರಸನ್ಯಭಟಾಳಿಶರಪ್ರಹಾರ ಜ
ರ್ಝರಿತ ಶರೀರನಾಗಿ ನವಲೋಹಿತವಾರ್ಧಿಯೊಳೞ್ದಿ ಬಿೞ್ದನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿರಂಗದೊಳ್     ೧೮೮
(ಇಲ್ಲಿ ನಿರ್ವಿಕಾರಮನುಭಾವಶೂನ್ಯಂ)

ವ : ಚಿತ್ತಂ ಚಲಿಪುದೆ ಚಾಪಲ್ಯಂ

ಸೂತ್ರಂ ೧೧೯

ರಾಗ ದ್ವೇಷೇರ್ಷ್ಯಾದಿ ವಿ
ಭಾಗಂ ಚಪಲತೆಗೆ ನೆಱೆ ವಿಭಾವಂ ಬಿಱುವಾ
ತಾಗಳ್ ಬಯ್ವುದು ಝಂಪೋ
ದ್ಯೋಗಂ ಕಟ್ಟುವುದು ಮೊದಲಿವನುಭಾವಂಗಳ್

ಲಕ್ಷ್ಯಂ

ಮನದನ್ನಂ ಮುನಿಸಂ ಕಳಲ್ಚೆ ಬರುತಿರ್ಪೊಂದಂದಮಂ ಕಂಡು ಕಾ
ಮಿನಿ ಪೊನ್ನುಯ್ಯಲನಾಡುತುಂ ಕೆಳದಿಯಂ ನುಣ್ಪಿಂದೆ ಬಯ್ವುತ್ತೆ ಕೆ
ಮ್ಮನೆ ಸುಯ್ಗೆಯ್ದುವ ಭೃಂಗಮಂ ಪಿಡಿದ ಲೀಲಾಪದ್ಮದಿಂ ಪೊಯ್ವುತೋ
ಪನನೇಂ ನೋಡದವೋಲಿರುತ್ತೆ ಚಪಳತ್ವಸ್ವಾಂತಮಂ ತಾಳ್ದಿದಳ್            ೧೮೯

ವ : ಮತ್ತಂ

ಅವತಂಸೋತ್ಪಲತಾಡನಂ ಕನಕಕಾಂಚೀಬಂಧನಂ ನೂಪುರಾ
ರವ ಝಂಕಾರಿತ ಚಾರು ವಾಮಚರಣಾಘಾತಂ ಚಲದ್ಭ್ರೂಲತಾ
ಗ್ರವಿಭಾಗೋತ್ಕಟತರ್ಜನಂ ತರಳತಾತಾಮ್ರಧಾರಂ ಚಕ್ರಿಗಿ
ತ್ತುವಲಂಪಂ ಪ್ರಣಯಪ್ರಕೋಪಸುರತಪ್ರಾರಂಭದೊಳ್ ಕಾಂತೆಯಾ
(ಇದು ಚಪಲತೆ)   ೧೯೦

ವ : ಚೇತಃಪ್ರಸಾದಂ ಹರ್ಷಂ

ಸೂತ್ರಂ ೧೨೦

ಭೋಗಾದಿ ಲಾಭ ಪತಿ ಬಂ
ಧ್ವಾಗಮಭರ್ತೃಪ್ರಸಾದಮಾದಿ ವಿಭಾವಂ
ಆಗಳ್ ಮುಖಪ್ರಸಾದಸು
ಯೋಗಂ ಪುಳಕಾದಿ ಹರ್ಷಕಾದನುಭಾವಂ

ಲಕ್ಷ್ಯಂ

ಕಡವಲರ್ದಂತ ಕಂಟಕಿತಮಾಗಿರೆ ಮೆಯ್ ಸರುಜಂ ರಸಾಯನಂ
ಬಡೆದವೊಲಾಗೆ ತಾಂ ಪೊದೆದ ಮೇಲುದಱಿಂ ಗುಡಿಯಂ ತೊಡರ್ಚಿದಾಂ
ಗುಡಿವಿಡೆ ಹರ್ಷಮೊಂದು ಪೊಱೆಯೇಱಿದನಿತ್ತ ಜಿತಂಜಯಂ ಮನ
ಕ್ಕೊಡರಿಸದಾರ್ಗೆ ರಾಗದೊದವಂ ಪಿರಿದುಮ ಪ್ರಿಯಬಂಧುಸಂಗಮಂ
(ಇದು ಹರ್ಷಂ)     ೧೯೧

ವ : ಸ್ವಾವಮಾನರೂಪಂ ನಿರ್ವೇದಂ

ಸೂತ್ರಂ ೧೨೧

ರೋಗಂ ದರಿದ್ರ ಮಿತ್ರ ವಿ
ಯೋಗಂ ನಾನಾವಮಾನನಾದಿ ವಿಭಾವಂ
ಮೇಗಂ ನಿರ್ವೇದಂ ಕೇ
ಡಾಗಳ್ ಸುಯ್ ಘೋಷಮಿತಿವನುಭಾವಂಗಳ್

ಲಕ್ಷ್ಯಂ

ಜರೆ ಬಂದೊಟ್ಟೈಸೆ ಮಾಣ್ದಿರ್ದಳಿಪೆನಗಿದೆ ಮುಂ ಸಾಲದೇ ಕಾಲರಾಜಂ
ಬರೆಯುಂ ಮಾಣ್ದಿರ್ಪೆನೇ ನಿಶ್ಚೈಸಿ ತನುವ ನೀನೊಪ್ಪುಕೊಳ್ ಮುನ್ನಮಿನ್ನುಂ
ಕರಣೀಯಂ ನಿನ್ನ ವಾಕ್ಯಂ ನಿಜಮತಮೆ ಮತಂ ಮೆಚ್ಚಿದಂತೆನ್ನ ನೀಂ ಸಂ
ಸರಣಾಂಭೋರಾಶಿಯಿಂದಂ ಪೊಱಮಡಿಸೆನಗಂ ನೀನೆ ಹಸ್ತಾವಲಂಬಂ          ೧೯೨

ವ : ಮತ್ತಂ

ಕಷ್ಟಂ ದುಃಖಾನಲ ಸಂ
ಪ್ಲುಷ್ಟಂ ಚಿಃ ಗತಿಚತುಷ್ಟಯಂ ಪ್ರಾಣಿಗೆ ಸಂ
ತುಷ್ಟತೆಯನೆಯ್ದೆ ಪಡೆಗುಮ
ಭೀಷ್ಟಪ್ರದಮೊಂದೆ ನೋಡೆ ಮುಕ್ತಿಸ್ಥಾನಂ      ೧೯೩

ವ : ಮತ್ತಂ

ಪರಿಜನಪಳವತ್ಕ್ಷೇತ್ರೋ
ತ್ಕರಬಂಧುಜನಾಳಿ ಭವನಮಹಿಳಾವಳಿಯೆಂ
ಬುರುತರಪವರ್ಗಚಿಂತಾ
ಪರಿಣತನಪವರ್ಗಚಿಂತೆಯಂ ಮಾಡುಗುಮೇ     ೧೯೪
(ಇದು ನಿರ್ವೇದಂ)

ವ : ಅನೌಜಸ್ಯಮೇ ದೈನ್ಯಂ

ಸೂತ್ರಂ ೧೨೨

ಆದಂ ಹೃತ್ತಪದೌರ್ಗ
ತ್ಯಾದಿಯೆ ದೈನ್ಯಕ್ಕೆ ವಿಭಾವಮಂತಾಮುಸುಕಿಂ
ಬಾದಮೃಜಾತ್ಯಾಗಂ ಮೆ
ಯ್ಗಾದುನ್ನತಭಾರದೈನ್ಯವಾಗನುಭಾವಂ

ವ : ಇಲ್ಲಿ ಆದಿಶಬ್ದಮಿಲ್ಲೆಂದೆನಬೇಡ

ಲಕ್ಷ್ಯಂ

ನಿನ್ನಯ ಕೂಟಮಂ ಬಯಸೆ ಪೆತ್ತವಳೆಂತುಮೊಡಂಬಡಳ್ ದಿಟಂ
ನಿನ್ನ ಮನಕ್ಕೆ ಮಾದುದದು ದೈವಕೃತಂ ದೊರೆಕೊಂಡುದಾದೊಡಂ
ಮನ್ನಿಪುದೆನ್ನ ಕಾರಣದಿನಿತ್ತಣ ಪಂಬಲನೀಕೆ ಮಾಡದಂ
ತಿನ್ನಡೆಯಿಪ್ಪುದೊಂದೆ ತೆಱನಪ್ಪುದಿದಂ ಸೆಱಗೊಡ್ಡಿ ಬೇಡಿದೆಂ      ೧೯೫
(ಇದು ದೈನ್ಯಂ)

ವ : ಸ್ಮರಣಮೆ ಸ್ಮೃತಿ

ಸೂತ್ರಂ ೧೨೩

ವಿತತ ಸುಖ ದುಃಖ ಹೇತು
ಸ್ಮೃತಿ ಸದೃಶಾರ್ಥೇಕ್ಷಣಾದಿಯೆ ವಿಭಾವಂ ತಾಂ
ಸ್ಮೃತಿಗೆಸೆಗುಂ ತಲೆನಡುಕಂ
ಗತಿಶೂನ್ಯಾಲೋಕನಾದಿ ಮೆಱೆವನುಭಾವಂ

ಲಕ್ಷ್ಯಂ

ಮನಕಂ ಪಕ್ಕಲ್ಲದ ನೆಲೆ
ಗಿನಿಸಾನುಂ ಮೆಚ್ಚಿ ಕರ್ಣನಂ ನೋಡಿ ನರಂ
ನೆನೆದಂ ತನ್ನೊಳ್‌ತಾಗಿದ್ದ
ಪಿನಾಕಪಾಣಿಯ ಕಿರಾತತನು ಸೌಷ್ಠವಮಂ       ೧೯೬
(ಇದು ಸ್ಮೃತಿ)

ವ : ಚಿತ್ತಮೂಢತ್ವಂ ಮೋಹಂ

ಸೂತ್ರಂ ೧೨೪

ಭಯ ಮತ್ಸರ ವೈರ ಪಿಶಾ
ಚಯೋಗಮುಖ್ಯಂ ವಿಭಾವಮಾ ಮೋಹಕ್ಕಾ
ರಯೆ ತನುಘೂರ್ಣನ ಸರ್ವೇಂ
ದ್ರಿಯಮೋಹಂ ಭ್ರಮಣಮಾದಿ ನೆಗೞ್ದನುಭಾವಂ

ಲಕ್ಷ್ಯಂ

ಉಸಿರೆಲರೊಯ್ಯನೊಯ್ಯನೊಳಸಾರ್ದಡಗುತ್ತಿರೆ ಲೋಚನದ್ವಯಂ
ನಸು ಮುಗುಳ್ದಶ್ರು ಪೊಣ್ಮದಿರೆ ಹಸ್ತಪದಂಗಳುಮಿರ್ದುವಿರ್ದವೋಲ್

ಮಿಸುಕದೆ ಪೋಗುಗೆಟ್ಟಿರೆ ತದಂತರದೊಳ್ ಬಿಡದಾ ಮನಂ ವಿಡಂ
ಬಿಸಿದುದು ಮರ್ಛೆಯಾರುಮನದಿರ್ಪುದು ಪುತ್ರವಿಯೋಗವಿಕ್ಲಬಂ  ೧೯೭

ವ : ಮತ್ತಂ

ಉರಿಗಣ್ಣಿಂ ನನೆವಿಲ್ಲನಂ ತಿಸುಳಿ ಸುಟ್ಟಂದಾಗಳೆಯ್ತಂದು ತತ್
ಸ್ಮರದೇಹಾಕೃತಿಯಿಂದೆ ಭಸ್ಮಮಿರೆ ಕಂಡಾಲಿಂಗಿಸಲ್ ಬೀೞೆ ಶೋ
ಕ ರಸಾವೇಶದೆ ಮೂರ್ಛೆವೆತ್ತು ರತಿ ತಾಂ ಪಂಚೇಂದ್ರಿಯೋನ್ಮೋಹದಿಂ
ದಿರೆ ಲೇಸಾದುದಿದೀಕೆೞ್ಚಱು ವಿಷಂ ತಾವೆಂದರಾ ಪ್ರೇಕ್ಷಕರ್          ೧೯೮
(ಇದು ಮೋಹಂ)

ವ : ಸುಖಜನ್ಮದಿಂ ಮೋಹಮುಂಟು

ನಲ್ಲರ ಕೂಟದೊಂದುಪರಿಯಂ ಪರಿಭಾವಿಸುತಿರ್ಪ ಕಾಂತೆಯರ್
ಬಲ್ಲಿದರಕ್ಕ ಬಂದು ಪತಿ ಸೋಂಕೆ ಮನಂ ಮರುಳಾಗಿ ಲೀಲೆಯಿಂ
ದೆಲ್ಲಿಗೆ ಪೋದೆನೇನನೊಸೆದಾಡಿದೆನೇನೆನುತಿರ್ದೆನೆಂಬುದಂ
ಬಲ್ಲೊಡೆ ಕಾಮನಾಣೆ ರತಿಯಾಣೆ ವಸಂತಕನಾಣೆ ಕೇಳ್ ಸಖೀ      ೧೯೯

ವ : ಮತ್ತಂ

ತೆಱೆಪರಿದೋಪನಪ್ಪಿದೊಡೆ ಮೆಯ್ಮಱೆವಪ್ಪು ಸಡಿಲ್ದುದರ್ಕೆ ಮೆ
ಯ್ಯಱಿವಪೊದೞ್ದ ಬಾಯುರಿಗೆ ಮೆಯ್ಮಱೆವಂತದು ಮೆಲ್ಲಿತಾಗೆ ಮೆ
ಯ್ಮಱಿವ ಜವಂಗೆಡಿಸಿ ಮೆಯ್ಮಱೆವಾಸನಪಲ್ಲಟಕ್ಕೆ ಮೆ
ಯ್ಯಱಿವೆಡೆ ಸಾವ ಪುಟ್ಟುವೆಡೆಯಾದುದವಳ್ಗೆ ರತಾತಿರೇಕದೊಳ್
(ಇದು ಮೋಹಂ)  ೨೦೦

ವ : ಪುರುಷಾರ್ಥದಲ್ಲಿಯನಾದರಮೆ ಆಲಸ್ಯಂ

ಸೂತ್ರಂ ೧೨೫

ಶ್ರಮ ರೋಗ ಗರ್ವ ವಹನಾ
ದ್ಯುಮದಲ್ತೆ ವಿಭಾವಮಕ್ಕುಂ ಆಲಸ್ಯಕೆ ತಂ
ದ್ರಮಖಿಳಕರ್ಮದ್ವೇಷಾ
ಕ್ರಮನಿದ್ರಾಶಯನಮಿಂತಿವನುಭಾವಂಗಳ್

ಲಕ್ಷ್ಯಂ

ಮೊಲೆಗೆ ವಿಚಿತ್ರಪತ್ರಲತೆ ದುರ್ವಹಮೆಂಬ ವಿಲೋಚನಕ್ಕೆ ಕ
ಜ್ಜಲರುಚಿ ಭಾರಮೆಂಬ ತನುಲೇಖೆಗೆ ಚಂದನದಣ್ಪು ಬಿಣ್ಣಿತೆಂ
ಬಲಸಪದಕ್ಕಲಕ್ತಕರಸಂ ಪೊಱೆಯೆಂಬಿನಿತೊಂದು ಚಿತ್ತಮಂ
ಲಲಿತೆಗೆ ದೇವಕೀವನಿತೆಗಾದುದು ಕೃಷ್ಣನ ಗರ್ಭದೇೞ್ಗೆಯೊಳ್      ೨೦೧

ವ : ಮತ್ತಂ

ಅಸಿತಪಯೋಧರಾನನಮುಪಾತ್ತ ವಿಜೃಂಭಣಮುನ್ಮುಖಂ ಸಮು
ಲ್ಲಸಿತ ಜಡತ್ವಮುಚ್ಛ್ವಸಿತ ಬಂಧುರಗಂಧಸಮೀರಣಂ ಮನ
ಕ್ಕೆಸೆದುದು ಕಾರುಮಂ ಪೊಸಬಸಂತಮುಮಂ ನೆಱೆ ಪೋಲ್ತುದೊಲ್ದು ಭಾ
ವಿಸೆ ಮದವನ್ಮರಾಳಮೃದುಯಾನೆಯ ನಿರ್ಭರಗರ್ಭವಿಭ್ರಮಂ       ೨೦೨
(ಇಂತಾಲಸ್ಯಂ)

ವ : ಪರರನವಜ್ಞೆ ಗೆಯ್ವುದೇ ಗರ್ವಂ

ಸೂತ್ರಂ ೧೨೬

ಕುಲ ವಿಭವ ರೂಪ ಯವ್ವನ
ಬಲ ವಿದ್ಯಾಪ್ರಭೃತಿಗರ್ವಕೆ ವಿಭಾವಂ ಕಾ
ಯ್ದುಲಿಪು ಪರಿಹಾಸ ರೋಷಂ
ಸಲೆ ಲೋಚನಗಾತ್ರವಿಕೃತಿಯಿಂತನುಭಾವಂ

ಲಕ್ಷ್ಯಂ

ಇರದೆಂಟುಂ ದಿಗ್ಗಜಂಗಳ್ ನೆರೆದಿರದಿದಿರೊಳ್ ತಾಂಗೆಯುಂ ಮಂದರಕ್ಷ್ಮಾ
ಥರದೊಳ್ ಕಯ್ಗೂಡಿ ಬಂದದ್ರಿಗಳೆ ಗಜಘಟಾರೂಪದಿಂ ತಾಂಗೆಯುಂ ಮ
ತ್ಕರಿ ತಾಂಗಲ್ ತಾಂಗಿ ಸೋಲ್ಗುಂ ಪೆಱಪೆಱವು ಘಟಾಬಂಧ ಮೇ ಭಂಡಮೆಂಬೊಂ
ದು ರಣೋತ್ಸಾಹಂ ಮನಕ್ಕುಬ್ಬರಿಸಿರೆ ಸಮರಾಟೋಪಮಂ ತಾಳ್ದಿ ನಿಂದಂ  ೨೦೩
(ಇದು ಗರ್ವಂ)

ವ : ಮತ್ತಂ

ಅವನೇ ನಾನುಂ ಸ್ಮರಂ ನೀಂ ಮುಳಿದನಿತುವರಂ ಬೇೞ್ಪುದೇ ದರ್ಪಕಂ ನ
ಚ್ಚುವ ಪುಷ್ಟಾಸ್ತ್ರಂಗಳಂ ಕಾಮನೆ ಪೊರೆದ ಪಿಕಾನೀಕಮಂ ಕಂತು ಕೊಂಡಾ
ಡುವ ಚಂಚಚ್ಚಂದ್ರನಂ ಮಾರ್ಮಲೆದು ಗೆಲಲಿವೇ ಸಾಲವೇ ದೇವಿ ಯೆನ್ನೀ
ಧವಳಾಪಾಂಗಂಗಳೆನ್ನೀ ಮೃದುಕಳರವಮೆನ್ನೀ ಲಸದ್‌ವಕ್ತ್ರಚಂದ್ರಂ           ೨೦೪
(ಗರ್ವಂ)

ವ : ಮನಶ್ಶರೀರಖೇದಂ ಶ್ರಮಂ

ಸೂತ್ರಂ ೧೨೭

ಸುರತಾದಿ ವ್ಯಾಪಾರಂ
ಪೊರೆದ ವಿಭಾವಂ ವಿಕೂಣಿತಾಸ್ಯಂ ಮೆಯ್ಯಮ
ಕರದಿಂದೊತ್ತುವುದುಂ ಮೇಣ್
ದೊರೆಕೊಳ್ಗುಂ ತಚ್ಛ್ರಮಕ್ಕೆ ನೆಗೞ್ದನುಭಾವಂ

ಲಕ್ಷ್ಯಂ

ತಳೆದ ರತಶ್ರಮಂಗಳೆಯಲಿಂಗದಿರ್ದೊಂಗಲಮರ್ಚಿ ನಿಂದುತ
ಣ್ಗೊಳಗೆಲದೊಳ್ ಮಡಲ್ತತಳಿರುಯ್ಯಲನೊಯ್ಯನೆ ಬಂದು ಪತ್ತಿಕೋ
ಮಳತನುವಿತ್ತು ನುಣ್ದೊಡೆಗಳಂ ಬಗೆಯೊಳ್ ಪೊಸವೇಟದೞ್ತಿಯಂ
ಬಳಯಿಸುತೆನ್ನ ಕೈಯೊಳಿರದೊತ್ತಿಸಿಕೊಂಬಳನೆಂದು ಕಾಣ್ಬೆನೋ   ೨೦೫

ವ : ಮತ್ತಂ

ಪೊಡರ್ವುತ್ತುಂಗಸ್ತನಂ ಕೊಂಕೞಿದು ನಿಮಿರ್ದ ನೀಳಾಳಕಂ ಜೋಲ್ವಬಂಬ
ಲ್ಮುಡಿ ಸೊಪ್ಪಾಗಿರ್ದ ಬಿಂಬಾಧರಮಣಿ ನಸುಗಂದಿರ್ದ ಕರ್ಣೋತ್ಪಳಂ ಕೆಂ
ಪಡರ್ದಾಲೋಲೇಕ್ಷಣಂ ಕಂಪಿಸುವ ತನು ರತಶ್ರಾಂತಿಯಿಂದಂ ಬೆಡಂಗಂ
ಕುಡೆ ನೆಮ್ಮಿರ್ದೋಪನಂ ಮೆಯ್ವೆಮರನೆಲರೊಳೊಲ್ದಾರಿಸುತ್ತಿರ್ದಳೊರ್ವಳ್           ೨೦೬
(ಇವು ಶ್ರಮಂ)

ವ : ಆನಂದ ಸಮ್ಮೋಹ ಯೋಗಂ ಮದಂ

ಸೂತ್ರಂ ೧೨೮

ಮದಿರೋಪಯೋಗದಿಂ ಪೆಂ
ಪೊದವಿದ ಪಲವಂದಮದೆ ವಿಭಾವಂ ಮದಕು
ಣ್ಮಿದ ನಗೆ ಪಾಡು ತೊದಳ್ನುಡಿ
ಪದುಳಿಸಿ ನಡೆಯದುದು ಮೊದಲವನುಭಾವಂಗಳ್

ವ : ಮತ್ತಮಲ್ಲಿ ಸ್ವಾಪಕಿಂಚಿದಾಕುಲಬಾಷ್ಪರೋಮೋದ್ಗಮಾದಿಯುತ್ತ ಮರ್ಗಕ್ಕುಂ, ಹಾಸ್ಯಗೀತ ಸ್ರಸ್ತಾಕುಲಭುಜಕ್ಷೇಪ ಕುಟಿಲಗತಿ ಬಂಧಾದಿ ಮಧ್ಯಮರ್ಗಕ್ಕುಂ, ಅಸ್ಮರಣ ಘೂರ್ಣನ ಸ್ಖಲದ್ಗತಿರುದಿತ ಛರ್ದಿತ ಹೀನಸ್ವರಾದಿಯ ಧಮರ್ಗನುಭಾವ ಮುತ್ತಮನ ಮದಂ ಮಧ್ಯಮಂಗಕ್ಕುಂ, ಮಧ್ಯಮನ ಮದಮಧಮಂಗಕ್ಕುಂ, ಅಧಮನ ಮದಂ ತನ್ನಲ್ಲಿಯೇ

ಲಕ್ಷ್ಯಂ

ಮದದಿಂದುಣ್ಮಿದ ಪಾಟಳನಿಚ್ಛವಿಯ ವಕ್ತ್ರಂ ಘೂರ್ಣಿತಾಕ್ಷಿದ್ವಯಂ
ಪದೆಪಂ ಬೀಱೆ ಲತಾಂಗಿ ತನ್ನೊಳೆ ತೊದಳ್ಮಾತಾಡುತುಂ ಪಾಡುತೊಂ
ದಿದತನ್ನೊಂದೆ ನೆೞಲ್ಗೆ ಬೆರ್ಚಿತೊಲಗೊತ್ತುಂ ಮುಗ್ಗುತುಂ ಬಯ್ದು ನೂಂ
ಕದಿರೆಂದಿಂಗದಿರ್ಗಂಡು ನಕ್ಕು ನಲಿದಳ್ ಕಾದಂಬರೀಗೋಷ್ಠಿಯೊಳ್            ೨೦೭

ವ : ಮತ್ತಂ

ಮದಿರಾಪಾನವಿಕಾರದೊ
ಳೊದವಿರೆ ಮೂಗ್ಧೋಕ್ತಿ ಕಣ್ಗೆ ಬರೆ ಗಾಡಿ ಕದ
ಕ್ಕದಿಸೆ ಮೊಲೆ ನಡುಗೆ ನಡು ಮಿಳಿ
ರ್ದದಿರೆ ಕುರುಳ್ ಸುದತಿ ಜತಿಗೆ ಮೆಟ್ಟಿದಳೊರ್ವಳ್        ೨೦೮
(ಇವು ಮದಂ)

ವ : ಅರ್ಥಾಪ್ರತಿಪತ್ತಿಯೇ ಜಾಡ್ಯಂ

ಸೂತ್ರಂ ೧೨೯

ರೋಗಾದಿ ಹಿತಾಹಿತ ಸಂ
ಯೋಗಂ ಪ್ರೇಕ್ಷಾದಿ ಜಡತೆಗೆ ವಿಭಾವಂ ಚೆ
ಲ್ವಾಗೆವೆಯಿಕ್ಕದೆ ನೋಡುವು
ದೇಗಂ ನುಡಿಯಿಲ್ಲದಿರ್ಪುದಿಂತನುಭಾವಂ

ಲಕ್ಷ್ಯಂ

ಇನಿಯನ ಪೞ್ಕೆ ಸಾರ್ದಬಳೆ ಬೆರ್ಚದೆ ಮೆಲ್ಲುಲಿಯಾಲಿಸಾಲಿಸಾ
ತನುಮನಲಂಪಿನಿಂದೆಳಸಿ ನೋಡುವಳಿಚ್ಚೆಗೆ ಮೆಯ್ಯನೀವುದೆಂ
ದೆನೆಯೆನೆ ಕೇಳ್ದು ಕೇಳ್ದವನನೀಕ್ಷಿಸುತುಂ ಮಱೆದೆಲ್ಲವಂ ಬೞಿ
ಕ್ಕನಿಮಿಷದೃಷ್ಟಿವೆತ್ತಳಿರದೀ ತೆಱದೋದಿಪೆವೀಕುಮಾರಿಯಂ        ೨೦೯
(ಇದು ಜಡತೆ)

ವ : ಬಲಾಪಚಯಂ ಗ್ಲಾನಿ

ಸೂತ್ರಂ ೧೩೦

ಗ್ಲಾನಿಗುದಧ್ವಲಂಘನಮನಃಪರಿತಾಪಜರೋಪವಾಸಮು
ತ್ಪಾನವಿನಿದ್ರೆ ರೋಗ ಸುರತಂ ಕ್ಷುಧೆ ಪೆತ್ತ ತಪಂ ತೃಷಾದಿ ಮಾ
ತೇನೊ ವಿಭಾವಮಂಗಶಿಥಿಲಂ ಕುೞಿಕಣ್ ನಡುಕಂ ಕಪೋಲವಾ
ಗ್ದೀನಗತಿಸ್ವಭಾವಮನುಭಾವಮಿವಲ್ತೆ ವಿವರ್ಣಕಾದಿಗಳ್

ವ : ಅಲ್ಲಿ ತಪದಿನಾದ ಬಲಾಪಚಯಕ್ಕೆ

ಬರಿಯೊಳ್ ಪತ್ತಿರ್ದ ಕಂಕಾಳಿಕೆ ಪೆಡತಲೆಯೊಳ್ ಪೊಕ್ಕ ಕಣ್ತೋರ್ಪಕೆಯ್‌ಕಾ
ಲ್ಸೆರೆ ಪಾತಾಳಕ್ಕೆ ಪೋತಂದೊಣವಸಿರುಡುಗಿರ್ದೊಂದುರಂ ಪೂಣ್ದ ಬಾಯ್ ಬೆ
ಕ್ಕರಿವೋಗಿರ್ದೊಂದು ಬಾನಂಗುಳಿ ಗಿಡಿಗಿಡಿಜಂತ್ರಬೊಲಾಗಿರ್ದ ಮೆಯ್ ನ
ಲ್ಸಿರಿ ಚಿದ್ರೂಪಕ್ಕೆ ಪಕ್ಕಾಗಿರೆ ಚರಿಗೆಗುಡಲ್ ಬಂದನೊರ್ವಂ ಮುನೀಂದ್ರಂ    ೨೧೦
(ಇದು ಗ್ಲಾನಿ)

ವ : ನಿದ್ರಾಗಾಢಾವಸ್ಥೆಯೆ ಸುಪ್ತಿ

ಸೂತ್ರಂ ೧೩೧

ಮಿಗೆ ತೀವ್ರದ ನಿದ್ರೆಯೆ ಸು
ಪ್ತಿಗೆ ನೆಗೞ್ದ ವಿಭಾವಮಕ್ಕುಮಖಿಳಸ್ವಪ್ನಂ
ನೆಗೞ್ದಂಗವಿಕಾರಂ ಕ
ಯ್ಮಿಗೆ ಕನವರಿಸುವುದು ಮೊದಲಿವನುಭಾವಂಗಳ್

ಲಕ್ಷ್ಯಂ

ಸುದತಿ ರತಾಂತಸೌಖ್ಯಮನಧೀಶನ ದೇಹದೊಳೊಂದಿಪೋಗಲೀ
ಯದೆ ಪಿಡಿದಂದದಿಂ ತೊಡೆಯ ತೋಳ ತೊಡರ್ಪುಗಳೊಪ್ಪೆ ನಾಡೆಯುಂ
ಪದೆದಮರ್ದಪ್ಪಿದಂತರಮದೊಪ್ಪಿರೆ ಬಂದು ಸುಷುಪ್ತಿಚಿತ್ತಮಂ
ಪುದಿಯೆ ಮಹೀಷನಿರ್ದನಿನಿಸಂ ನಿಜಯೋಗದೆ ಯೋಗಿಯಿರ್ಪವೋಲ್          ೨೧೧

ವ : ಮತ್ತಂ

ಇನಿಯನಗಲ್ದು ಬೇರ್ನೆಲೆಗೆ ಪೋದೊಡೆ ಪಂಬಲನಾಂತು ಚಿತ್ತದೊಳ್
ಕನಕಲತಾಂಗಿ ತನ್ನ ಶಯನಸ್ಥಳದೊಳ್ ಮುಸುಕಿಟ್ಟು ನಲ್ಲನಂ
ಕನಸಿನೊಳಪ್ಪಿಕೊಂಡಧರಸೇವನೆಗೊಪ್ಪಿಸಿ ಮುಂದುಗಾಣದಾ
ಮನೆಯೊಳಗಿರ್ಪನೆಂದು ಸೊಡರ್ವತ್ತಿಸಿ ನೋಡಿದಳೊಂದು ಜಾವಮಂ          ೨೧೨
(ಇವು ಸುಪ್ತಿ)

ವ : ಮನಃಸಮ್ಮೀಳನಂ ನಿದ್ರೆ

ಸೂತ್ರಂ ೧೩೨

ಕ್ಲಮಚಿಂತಾಲಸ್ಯಮದ
ಶ್ರಮಸ್ವಭಾವಾದಿನಿದ್ರೆಗೆ ವಿಭಾವಂ ಜೃಂ
ಭಮತಿಜಡಶ್ವಾಸಂ ದೃ
ಙ್ನ ಮೀಳನಂ ತೂಂಕಡಿಕೆಯಿವನುಭಾವಂಗಳ್

ಲಕ್ಷ್ಯಂ

ಬಳೆದನುರಾಗದೆನ್ನ ಮನಮೆತ್ತೆಳದತ್ತಿರದಿತ್ತು ಪುಷ್ಪಕೋ
ಮಳತನುವುಮ ಪೊದೞ್ದ ಮನಮುಂ ಸುರತಾಬ್ಧಿಯನೀಸಿ ಪತ್ತೆ ಸಾ
ರ್ದೆಳಸಿರದೊಯ್ಯನೊಯ್ಯ ನರೆಮುಚ್ಚುವ ದೃಷ್ಟಿ ವಿಜೃಂಭಮೊಪ್ಪಿ ಕ
ಣ್ಗೊಳಿಸಿರೆ ತೋಳತೞ್ಪದೊಳೆ ತಳ್ತೊರಗಿರ್ದಳನೆಂದು ಕಾಣ್ಬೆನೋ೨೧೩
(ಇದು ನಿದ್ರೆ)

ವ : ಸಂತೋಷಮೇ ಧೃತಿ

ಸೂತ್ರಂ ೧೩೩

ನುತಬೋಧೆ ಬಹುಶ್ರುತವಾ
ಸುತಪಸ್ಸೇವಾಪ್ತಭಕ್ತಿ ಲಾಭಾದಿಗಳುಂ
ಧೃತಿಗೆ ವಿಭಾವಂ ಸುಖಮೊದ
ವೆ ತಳೆವುದೞಿವೋದನೆನೆಯದಿರವನುಭಾವಂ

ಲಕ್ಷ್ಯಂ

ಸಿರಿವೆಣ್ಣಂ ದೂವದೊೞ್ತಿಂಗೆಣೆಯೆನೆ ಬಗೆದಂ ಮತ್ತಮೀವಿಶ್ವವಿಶ್ವಂ
ಭರೆಯಂ ಮೃತ್ಪಿಂಡಮಾತ್ರಾಂತರಮೆನೆ ಬಗೆದಂ ಜೈನದೀಕ್ಷಾವ್ಯಪೇಕ್ಷಾ
ತುರನಾತ್ಮೀಯಾಂಗಮಂ ಕಲ್ಮರನೆನೆ ಬಗೆದಂ ಲಬ್ಧಲಬ್ಧಿಪ್ರವೇಶಂ
ಧರಣೀಶಂ ವರ್ಜಿತಾಶಂ ಪರಮಸುಖವಶಂ ಕಾವ್ಯಕರ್ಣಾವತಂಸಂ   ೨೧೪

ವ : ಮತ್ತಂ

ತಡೆಯದೆ ನಿನಗಪ್ಪುದನೀ
ಗಡೆ ಬಗೆ ಮೆಳ್ಪಡದಿರೆಂಬುದನಿಮಿತ್ತಂ ತಾಂ
ನುಡಿದಿರ್ ಮೂದಲಿಸಿದಿರಿಂ
ತಡೆವೆನೆ ಕಟ್ಟಿದುದೆ ಸುರಗಿ ಮೆಟ್ಟಿದುದೆ ಕಳಂ   ೨೧೫

ಪಱಿದಾತ್ಮಪ್ರಿಯದಾರದಾರಕ ಸುಹೃತ್ ಸಂಬಂಧಬಂಧಂಗಳಂ
ಮುಱಿದುರ್ವೀವಲಯಾಧಿರಾಜ ಸುಖಸೇವಾರಂಭಣಸ್ತಂಭಮಂ
ಮೆಱೆದುದ್ಭೂತವಿರಕ್ತವೃತ್ತಿಮದಲೀಲಾವೇಗ ಸಂಯೋಗಮಂ
ಪೊಱಮಟ್ಟತ್ತು ತಪೋವನಕ್ಕೆ ತದಿಳಾಪಾಳೋದ್ಧುರಂ ಸಿಂಧುರಂ೨೧೬
(ಇವು ಧೃತಿ)

ವ : ಈ ವಸ್ತುವೀ ತೆಱನೆಂದು ವಿಚಾರಿಪುದು ವಿತರ್ಕಂ
ಸೂತ್ರಂ ೧೩೪

ಸಂದೇಹ ವಿಮರ್ಶ ಜ್ಞಾ
ನಂ ದಲ್ ಮುಖ್ಯಂ ವಿತರ್ಕಕಾದ ವಿಭಾವಂ
ಸಂದ ಶಿರಃಕಂಪಂ ತಱಿ
ಸಂದುಱೆ ಕುಡುವುರ್ವು ಜರ್ವಿವನುಭಾವಂಗಳ್

ವ : ಮತ್ತಂ ಕಾರ್ಯಸಾಧನ ಸಮೂಹಮಂ ಮರಳಿ ಮರಳಿ ಗ್ರಹಿಸುವುದುಂ ಬಿಡುವುದುಂ ಅನುಭಾವಂ

ಲಕ್ಷ್ಯಂ

ಧನುವುಂ ಕರ್ವಿನ ಬಿಲ್ ಗಡಂ ಗೊಲೆಯುಮುಂ ನೀರೇಜಸೂತ್ರಂ ಗಡಂ
ನನೆಗಳ್ ಬಾಣಚಯಂ ಗಡಂ ತಾಂ ಮತ್ತಂ ಮನಂಗೊಂಡು ಕಾ
ಯ್ದನುವಿಂದಾರ್ದಿಸುತಿರ್ಪ ನುರ್ಚಿದೆಡೆಯೊಳ್ ಪುಣ್ಣೆತ್ತರಿಂ ತೀವಿತಿ
ಲ್ಲೆನಸುಂ ಮನ್ಮಥಶಸ್ತ್ರವಿದ್ಯೆಯಿದು ದಲ್ ಬೇಱೊಂದು ಶಿಕ್ಷಾಕ್ರಮಂ         ೨೧೭

ವ : ಮತ್ತಂ

ಅವತಂಸಂ ಮೋಕ್ಷಲಕ್ಷ್ಮೀಯುವತಿಯನೊಲಿಸಲ್ ಸಾಲ್ವುದೇ ದಿವ್ಯಭಾಷಾ
ರ್ಣವಗರ್ಭಾವಾಸದೊಳ್ ಪುಟ್ಟಿದುವೆ ಭವವಿಷಾವೇಶವಿಧ್ವಂಸನಂಗೆ
ಯ್ದುವಿಮೋಹಧ್ವಾಂತಮಂ ತೂಳ್ದಿದುವೆ ಬಗೆವೊಡೆಂ ಬಾೞ್ತೆ ಪಾಷಾಣರೂಪಂ
ನವರತ್ನಂ ಮನ್ಮನೋಮುದ್ರಿಕೆಯೊಳವಿಚಲಂ ನಿಲ್ಕೆ ರತ್ನತ್ರಯಂಗಳ್         ೨೧೮

ವ : ಅಂತುಮಲ್ಲದೆಯುಂ

ಭೋಗಿಪೆನೆನ್ನ ಜವ್ವನಮನೀ ಧನಮಂ ತವೆ ನನ್ನಿಯಿಂ ಕುಚಾ
ಭೋಗಭರಾನತಾಂಗಿಯರೊಳನ್ನೆಗಮತ್ತಱನಂ ತಗುಳ್ವೆನೆಂ
ದಾಗಿಯುಮೆಂತು ನಿನ್ನ ಮೊಲಗೞ್ತಲೆಗಾಂ ಬೆಱಗಾದೆನೆಂದು ಪೇ
ೞೀಗಳೊ ಬೈಗೆಯೋ ಪೊಗಸೊ ನಾಳೆಯೊ ನಾಡಿದೊ ನಿನ್ನ ಜೀವಿತಂ          ೨೧೯
(ಇವು ವಿತರ್ಕಂ)

ವ : ಚಿತ್ತವಿಪ್ಲವಮೆ ಉನ್ಮಾದಂ

ಸೂತ್ರಂ ೧೩೫

ಧನ ರಮಣ ವಿಯೋಗ ಗ್ರಹ
ಘನರುತಿಮುಖ್ಯಂ ವಿಭಾವಮುನ್ಮಾದಕ್ಕಿ
ನ್ನನಿಮಿತ್ತಸ್ಮಿತರುದಿತಾ
ತ್ತನೃತ್ಯಗೀತೋತ್ಕಟಾದಿ ನೆಗೞ್ದನುಭಾವಂ

ವ : ಮತ್ತಂ ಬೀೞ್ವುದೇೞ್ವುದು ಕುಳ್ಳಿರ್ಪುದು ಬಾಯ್ಗೆ ಬಂದುದನೆಂಬುದು ಪಾಯ್ವುದುಘೇ ಯೆಂಬುದು ಬೂದಿಯಿಂದೊಕ್ಕಮಾಲೆಯಿಂ ಬೀದಿಗಪ್ಪಡದಿಂ ಘಟಕಂಠದಿಂ ಸಿಂಗರಿಸಿ ಕೊಂಬುದುಮಕ್ಕುಂ. ಈ ಪೇೞ್ದನುಭಾವವಿಭಾವಂಗ ಳೊಂದೆರಡೊಡಂಬಡುವಂತೆ ವರ್ಣಿಪುದಲ್ಲದೆಲ್ಲಮಿರವೇೞ್ಕುಮೆಂಬುದಿಲ್ಲಂ

ಲಕ್ಷ್ಯಂ

ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯನಿಶ್ವಾಸೆಯಂ
ತಳಿರೇ ತಾವರೆಯೇ ಮದಾಳಿಕುಳಮೇ ಕನ್ನೈದಿಲೇ ಮತ್ತಕೋ
ಕಿಳಮೇ ಕಂಡಿರೆ ಪಲ್ಲವಾಧರೆಯನಂಭೋಜಾಸ್ಯೆಯಂ ಭೃಂಗಕುಂ
ತಳೆಯಂ ಕೈರವನೇತ್ರೆಯಂ ಪಿಕ ರವ ಪ್ರಖ್ಯಾತೆಯಂ ಸೀತೆಯಂ       ೨೨೦
(ಇದು ಉನ್ಮಾದಂ)

ವ : ವಿನಿದ್ರೆಯೇ ಬೋಧೆ

ಸೂತ್ರಂ ೧೩೬

ಕನಸು ಕನವರಿಕೆ ಪಸಿವುರೆ
ದನಿ ಸೋಂಕುಗಳಾದಿಬೋಧೆಗೆ ವಿಭಾವಂ ದಲ್
ತನುಕಂಠವಲನ ದೃಙ್ಮ
ರ್ದನ ಜೃಂಭಣಮುಕ್ತ ಶಯನಮಿಂತನುಭಾವಂ

ಲಕ್ಷ್ಯಂ

ತೆರೆವೊಯ್ಲಿಂದಾದ ತುಂತುರ್ವನಿ ನಿಜತನುವಂ ತೀವೆ ನಿದ್ರಾಂಗನಾನಿ
ರ್ಭರಸಂಭೋಗಾಂತ್ಯದೊಳ್ ಪೊಣ್ಮಿದೆ ಬೆಮರ್ವನಿಯಂ ಪೋಲೆ ವಾರಾಶಿಧೀರ
ಸ್ವರಮಂ ತಳ್ಪೊಯ್ವಜೇಂದ್ರಾದ್ಯಮರಜಯಜಯಧ್ವಾನ ದಿಂದಾಗಳೆೞ್ದೂ
ದರದಿಂ ಕುಳ್ಳಿರ್ದನಾಲೋಕನಕೃತವಿಬುಧಾನಂದಕಂದಂ ಮುಕುಂದಂ           ೨೨೧

ವ : ಮತ್ತಂ

ಗೃಹದೀರ್ಘಿಕೆಯಿಂದೆೞ್ಚ
ತ್ತು ಹಂಸರುತಿ ಮಧುರ ಮಧುಕರೀ ಝಂಕಾರಂ
ಬಹು ವಿಧ ಗೀತ ರಸಾಮೃತ
ಲಹರಿಗಳಿತ್ತುವು ಸುಖಪ್ರಬೋಧಮನಾಗಳ್     ೨೨೨
(ಇವು ಬೋಧೆ)

ವ : ಮನಸ್ತಾಪಮೇ ಆಮಯಂ

ಸೂತ್ರಂ ೧೩೭

ವಿರಹಾಭಿಲಾಷೆ ದೋಷಾ
ತಿರೇಕಮುಖ್ಯಂ ವಿಭಾವಮಾಮಯಕಕ್ಕುಂ
ಉರಿವ ತನು ವದನ ಶೋಷಣ
ಶರೀರ ವೀಕ್ಷೇಪಕಾದಿ ನೆಗೞ್ದನುಭಾವಂ

ಲಕ್ಷ್ಯಂ

ಆಳುರ್ದಲರಂಬುಗಿಚ್ಚು ನಿಜಕೋಮಳದೇಹಮನೆಯ್ದೆ ಪರ್ವೆ ತ
ಣ್ಗೊಳದ ಮೃಣಾಳಮಂ ತೆಗೆದು ಬೆಂಗದಿರ್ಗಿತ್ತವೊಲಾಗೆ ನೊಂದು ಬೆಂ
ದಳದಳಿಪಾಲಿ ನೀರ್ಕುದಿಯೆ ಚಂದನದಣ್ಕೆಯೆ ಬೆಂಕೆಯಾಗೆ ತಾಂ
ತಳಿರಲರ್ವಾಸಿನೊಳ್ ಪೊರಳುತಿರ್ದಳದೊರ್ವನ ಬೇಟದೇೞ್ಗೆಯಿಂ೨೨೩
(ಇದಾಮಯಂ)

ವ : ಚಿತ್ತಚಮತ್ಕಾರಮೆ ಭಯಂ. ಅದು ತ್ರಾಸ ಭೇದಂ

ಸೂತ್ರಂ ೧೩೮

ವ್ಯಾಳ ಮೃಗ ರಾಕ್ಷಸಾಶನಿ
ಶೈಳಾವನಿಕಂಪಮಾದಿಯೆ ಭಯಕ್ಕೆ ವಿಭಾ
ವಾಳಿಯೆ ಪುಳಕೋತ್ಕಂಪ ವಿ
ಶಾಳಸ್ತಂಭಪ್ರಮೂರ್ಛೆಯಿಂತನುಭಾವಂ

ಲಕ್ಷ್ಯಂ

ಕಿಡಿಯಂ ಕಣ್ಸಲೆ ಸೂಸೆ ದಾಡೆ ಕುಡಿಮಿಂಚಂ ಬೀಱೆ ಧೀರಸ್ವರಂ
ಸಿಡಿಲಂ ಮೇಳಿಸೆ ಬಂದು ಸಿಂಗಮಿಭಕುಂಭಂಬೊಯ್ದುದಂ ಕಾಣುತುಂ
ನಡುಕಂ ಕಯ್ಮಿಗೆ ಬೀಯದಂ ಭರದೆ ನೋಡುತ್ತೊಂದು ಪಾೞ್ಬೂವಿಯೊಳ್
ಕೆಡೆದಾಗಳ್ ಮರವಟ್ಟು ಮೂರ್ಛೆವಡೆದಿರ್ದಂ ಭೀತಿಯೇಗೆಯ್ಯದೋ          ೨೨೪
(ಇದು ಭಯಂ)

ವ : ಮನಃಪೀಡೆಯೇ ವಿಷಾದಂ

ಸೂತ್ರಂ ೧೩೯

ತನ್ನೆಸೆವ ಕಾರ್ಯಭಂಗಂ
ತನ್ನಾಶಂ ತಾಂ ವಿಷಾದಕೆ ವಿಭಾವಂ ಸಂ
ಪನ್ನ ಸಹಾಯಾನ್ವೇಷಣ
ವಿನ್ನೊಪ್ಪುವುಪಾಯಚಿಂತೆಯಿಂತನುಭಾವಂ

ವ : ಮತ್ತಂ ವಿಘೂರ್ಣನಸಂಭ್ರಮಾದಿಯುಮಕ್ಕುಂ. ಉತ್ತಮ ಮಧ್ಯ ಮರ್ಗಿದಂ ಪೇೞ್ವುದು. ಮುಖಜಿಹ್ವಾಶೋಷಣಾಶ್ರು ವಿಕೃತ ಸ್ವನ ನಿದ್ರಾನಾಶಶ್ವಸಿತ ಧ್ಯಾನಾದ್ಯನುಭಾವದಿಂದ ಮಧಮರ್ಗೆ ವರ್ಣಿಪುದು

ಲಕ್ಷ್ಯಂ

ಇಂಬಱಿದೆನ್ನನೊಯ್ದು ನೆರಪಲ್ ಸಖಿಯಿಲ್ಲಭಿಮಾನಮೆಂಬ ರೋ
ಗಂ ಬಲವಂತಮಾದಪುದು ನಲ್ಲನೆ ಕಟ್ಟಭಿಮಾನಿ ನಾಣ ಕಾ
ಪುಂ ಬಿಡದೀಗಳೀಗಳಿನ ಜವ್ವನಮುಂ ಬೞಿಕಿಲ್ಲ ಕಾಲನಂ
ನಂಬಲೆಬಾರದೆಂದಬಲೆ ಚಿಂತಿಸಿ ದೂಱಿಸಿ ತಾಂ ಪಲುಂಬಿದಳ್       ೨೨೫
(ಇದು ವಿಷಾದಂ)

ವ : ಕಾಲಾಕ್ಷಮತ್ವಮೆ ಔತ್ಸುಕ್ಯಂ

ಸೂತ್ರಂ ೧೪೦

ಕನದಿಷ್ಟಸ್ಮರಣವಿಲೋ
ಕನಾದಿಯೆ ವಿಭಾವಮುತ್ಸುಕಕೆ ರಣರಣಕಂ
ಜನಿತಶ್ವಸಿತೋಚ್ಛ್ವಸಿತಂ
ಮನದ ಬಯಲ್ದೆಸೆಯ ನೋಟಮಿಂತನುಭಾವಂ

ಲಕ್ಷ್ಯಂ

ಇವಳವಲೋಕನಾಕುಳಿತೆ ಮೆಯ್ಯಱಿಯಳ್ ಪರಿವಾಗಳಿಂತೆ ಬ
ಳ್ಕುವ ನಡು ಮದ್ಭರಕ್ಕುಡಿಗುಮೆಂದು ಘನಸ್ತನಯುಗ್ಮಮಂಜಿದಂ
ತೆವೊಲೆನಸುಂ ಕದಕ್ಕದಿಸೆ ಸೋರ್ಮುಡಿಯುಂ ಭರಭೀತಿಯಿಂದೆ ಸೂ
ಸುವ ತೆಱದಿಂದೆ ಮಾಲೆಯನುಗುೞ್ತರೆ ಬಂದಳದೊಂದು ಲೀಲೆಯಿಂ೨೨೬

ವ : ಮತ್ತಂ

ನೋಡುವಲಂಪಿನಿಂ ನೆಱೆಯೆ ಕಯ್ಗೆಯಲುಂ ಮಱೆದೊಂದೆ ಕಣ್ಣನು
ಣ್ಗಾಡಿಗೆಯೊಂದೆ ಕರ್ಣದ ಕನನ್ಮಣಿಕುಂಡಲಮೊಂದೆ ಕೆಯ್ಯ ಪೊಂ
ಜೂಡಗಮೊಂದೆ ಕಾಲ ಮಿಸುಪಂದುಗೆಯೊಪ್ಪಿರೆ ಬಂದೊಡಂದು ಱೋ
ಡಾಡಿದುದರ್ಧನಾರಿಯಿವಳೆಂದು ಸಖೀಜನಮೆಯ್ದೆ ನಾರಿಯಂ       ೨೨೭
(ಇವು ಔತ್ಸುಕ್ಯಂ)

ವ : ಪ್ರತಿಚಿಕೀರ್ಷೆಯೇ ಅಮರ್ಷಂ

ಸೂತ್ರಂ ೧೪೧

ಕುಲವಿದ್ಯೈಶ್ಚರ್ಯಾದಿಯಿ
ನೊಲಿದಾಕ್ಷೇಪಾದಿಯಾಯಮರ್ಷ ವಿಭಾವಂ

ವಿಲಸದುಪಾಯಾನ್ವೇಷಣ
ಮೊಲೆವ ಶಿರಂ ಧ್ಯಾನಗರ್ವಮಿಂತನುಭಾವಂ

ಲಕ್ಷ್ಯಂ

ಉಱದೆನ್ನಂ ಮಾಯೆಯಿಂ ಬಂಚಿಸಿ ಮಹಿಜೆಯನೆಂತೊಯ್ದನೊಯ್ದಂದದಿಂ ಪೊ
ಚ್ಚಱದಿನ್ನುಂ ತೋರ್ಕೆಸಂಗ್ರಾಮದೊಳೆಡೆಗಾಡಿದಾ ತೋಳ್ಗಳಿರ್ಪತ್ತುಮಂ ಕಣ್
ಪೊಱಪಾಯ್ತರ್ಪನ್ನೆಗಂ ಪಂದಲೆಗಳನೆರ್ದೆಯಂ ಮೆಟ್ಟಿ ಜೀರೇೞ್ವಿನಂ ಬೇ
ರ್ಪಱಿವನ್ನಂ ಕಿೞ್ತುಕಿೞ್ತಪ್ಪಳಿಸಿ ನೆಲದೊಳೋರೊರ್ಮೆ ಮಾಱುದ್ದಿ ತೋರ್ಪೆಂ          ೨೨೮

ಏನೇನೊ ಮದನುಜರುಮೆನ
ಗಾನತರುಣಮಾಗದಿರ್ದರುನ್ಮದಮವರ್ಗಂ
ತೇನೇತಱೊಳಾಯ್ತದನಿನಿ
ಸಾನುಂ ಬೇಗದೊಳೆ ಕಳೆದು ತೋಱೆನೆ ರಣದೊಳ್         ೨೨೯
(ಇವಾಮರ್ಷಂ)

ವ : ಧ್ಯಾನಮೆ ಚಿಂತೆ

ವಿಚಾರಂ : ಇದು ಸ್ಮೃತಿಯಿಂ ವ್ಯತಿರಿಕ್ತಮನುಭೂತವಸ್ತುಸ್ಮರಣಮೇ ಸ್ಮೃತಿಯದಂ ಬಿಡದೆ ಧ್ಯಾನಿಪುದು ಚಿಂತೆ. ಮತ್ತಂ ವಿತರ್ಕದಿಂದ ಚಿಂತೆ ಬೇಱೆ. ಚಿಂತೆಯಿಂ ಬೞಿಕಾದೊಡ ಮೊರ್ಮೆ ವಿತರ್ಕಮಪ್ಪುದು. ವಿತರ್ಕದಿಂ ಬೞಿಕ್ಕಾದೊಡಮೊರ್ಮೆ ಚಿಂತೆಯಪ್ಪುದು.

ಸೂತ್ರಂ ೧೪೨

ದಾರಿದ್ಯ್ರಮಿಷ್ಟವಸ್ತ್ವಜ
ಹಾರಾದಿ ವಿಭಾವಮಲ್ತೆ ತಾಪಂ ಕಾರ್ಶ್ಯಂ
ಭೂರಿಕರಶೋಷಮುಖಶೂ
ನ್ಯೋರು ಮನಃಪ್ರಭೃತಿ ಚಿಂತೆಗಾದನುಭಾವಂ

ಲಕ್ಷ್ಯಂ

ದೂರಿಸಿ ಸುಯ್ದು ಹಸ್ತತಳಮಂ ಕದಪಿಂಗಿರದೊಯ್ದು ಧಾತ್ರನಂ
ಬೇರದೆ ಬಯ್ದು ಕಣ್ಬನಿಯಿನಂಶುಕಮಂ ನೆರೆ ತೊಯ್ದು ತೊಯ್ದದಂ
ಸೈರಿಸಳೆಂದು ಕಾಯ್ದು ನೆಱಗೊಂಡಿರೆ ಪೂಗಣೆಯಯ್ದುಮೊರ್ವನಿ
ನ್ನಾರಿದನಿಂಬುಕೆಯ್ದು ಕುಡುವನ್ನರೆನುತ್ತೆನಸುಂ ಪಲುಂಬಿದಳ್    ೨೩೦

ವ : ಮತ್ತಂ

ಎರೆವ ಮರಲ್ವ ಲಲ್ಲಯಿಪ ಕಾಲ್ವಿಡಿಯೆಂಬುದನಿಂಬುಕೆಯ್ವಲಂ
ಕರಣವಿಳಾಸಮಂ ಮೆಱೆವ ಮೇಳಿಸುವಂದಿನ ರೂಪು ಶಾಸನಂ
ಬರೆದುದು ಬರ್ಚಿಸಿತ್ತಮರ್ದುದುೞ್ದು ದಳುಂಕಿದುದುರ್ಚಿ ಸೊಂಕು ಬೇ
ರ್ವರಿದುದು ಬೆಚ್ಚುದಚ್ಚಿಱಿದುದೆನ್ನೆರ್ದೆಯೊಳ್ ಲಲಿತಾಂಗದೇವನಾ         ೩೨೧
(ಇವು ಚಿಂತೆ)

ವ : ಅಕ್ಷಮೆಯೇ ಅಸೂಯೆ

ಸೂತ್ರಂ ೧೪೩

ಪರ ಸಕಲೈಶ್ಚರ್ಯ ಸ್ತೋ
ತ್ರ ರವಮಸೂಯೆಗೆ ವಿಭಾವಮನುಭಾವಂ ತ
ತ್ಪರನಿಂದಾ ಭೃಕುಟಿಮುಖಂ
ಪಿರಿದೀರ್ಷ್ಯಾಳೋಕನೋಕ್ತಿ ದೋಷಾದಿ ವಲಂ

ಲಕ್ಷ್ಯಂ

ನಡೆದುದಿಳೇಶನೊಳ್ ತೊಡಱದನ್ನೆಗಮಾತನ ಗಂಡಗರ್ವಮಿ
ನ್ನಡೆಗುಮೆ ರಾಮನಂಬು ಪೆಱನಂ ನಡೆ ಕಾಲ್ನಡೆಗೆಟ್ಟು ನಿಲ್ಕುಮೀ
ನುಡಿ ತಡಮಲ್ತು ನಾಳೆಯೆ ರಣಾಂಗಣದೊಳ್ ನಡೆ ನೋಡು ನೀಂ ಮರು
ಳ್ವಡೆಯೊಡಗೂಡಿ ತಾಂಡವಮನಾಡುವ ರಾವಣನಟ್ಟೆಯಾಟಮಂ೨೩೨

ವ : ಮತ್ತಂ

ದನುಜರನಾ ಮುರಾರಿ ಗೆಲೆ ಕಾದುವ ಕಾಲದೊಳಾನದೇಕೆ ಪು
ಟ್ಟೆನೊ ಗಡಮಂದು ಪುಟ್ಟಿದೊಡೆ ದೈತ್ಯಕುಲಕ್ಕೆ ಕಳಂಕಮಾಗಲೀ
ವೆನೆ ದನುಜಾರಿಯೆಂಬ ಪೆಸರಂ ಸಲಲೀವೆನೆ ಕಾದಿ ಪೋಗಲೀ
ವೆನೆ ತೆಲದೋಱಲೀವೆನೆ ಮುಕುಂದನನೆಂದುರಿದಂ ಪರಾಂತಕಂ       ೨೩೩

ವ : ಮತ್ತಂ

ಕಾೞ್ಪುರಮಾಗೆ ಕಾವ್ಯರಸಮರ್ಥಮುಮಕ್ಕರಮುಂ ಪ್ರತೀತಿಯಂ
ಮಾೞ್ಪಿನೆಗಂ ಜಲಕ್ಕನಿರೆ ಪೇೞದೆ ಕೆಮ್ಮನೊಱಂಟುವೇೞ್ದು ಚಿಃ
ನೋೞ್ಪುದೆ ಮುಯ್ವನಾಕೃತಿಗೆ ಪಂಚಿಕೆವೇೞ್ಪುದದರ್ಕೆ ಟಿಪ್ಪಣಂ
ಬೇೞ್ಪುದು ಟೀಕೆವೇೞ್ಪುದೆನೆ ಪೇೞ್ವವನುಂ ಕವಿಯೆಂಬ ಲೆಕ್ಕಮೇ  ೨೩೪
(ಇವು ಅಸೂಯೆ)

ವ : ಆಕಾರಗುಪ್ತಿಯೇ ಅವಹಿತ್ಥಂ

ಸೂತ್ರಂ ೧೪೪

ಅವಹಿತ್ಥಂ ಭಯರಾಗಾ
ದಿ ವಿಭಾವದೆ ಮಱೆಸುವುದೆ ವಲಂ ಮತ್ತಿನ ಮಾ
ತು ವಿಳೋಕನಮಿಲ್ಲದ ಧೈ
ರ್ಯವೆಯುಱೆಯನುಭಾವಮಿಂತಿದರ್ಕನುಮತದಿಂ

ಲಕ್ಷ್ಯಂ

ಮಸೆದೞಿಪಿಂ ಪ್ರಿಯಾನನಮನೀಕ್ಷಿಸಲುದ್ಯತೆಯಾಗಿ ತಾನೆ ಲ
ಜ್ಜಿಸಿ ತಲೆವಾಗಿ ಕಂಡುದ ಮಣಿಕುಟ್ಟಿಮದೊಳ್ ನೆಱೆನೋಡಿದ ಮತ್ತೆ ಮಾ
ನಸದೊಳಗಿಟ್ಟೊಡಂ ನವಸುಖಾನುಭವಕ್ಕರೆಮುಚ್ಚಿ ಕಣ್ಗಳಂ
ಪಸರಿಪ ಹೋಮಧೂಮಲತೆಗಂದು ಶಶಿಪ್ರಭೆ ದೂಱನೇಱಿಪಳ್    ೨೩೫
(ಇದು ಅವಹಿತ್ಥಂ)

ವ : ಚಂಡತ್ವಮೆ ಉಗ್ರಂ

ಸೂತ್ರಂ ೧೪೫

ಖಲಚೌರ್ಯದ್ರೋಹಾಸ
ತ್ಪ್ರಲಾಪಮುಖ್ಯಂ ವಿಭಾವಮುಗ್ರಕ್ಕೆ ವಲಂ
ಕೊಲೆ ಬಂಧನ ತಾಡನಮಿವು
ಸಲೆ ನಿರ್ಭರ್ತ್ಸನಮಿವಾದಿ ತೞ್ತನುಭಾವಂ

ಲಕ್ಷ್ಯಂ

ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ
ಗಿದು ಪಾಂಚಾಳೀಪ್ರಪಂಚಕ್ಕಿದು ಕುಹಕಸಭಾಳೋಕನಭ್ರಾಂತಿಗೆಂದೋ
ವದೆ ಪೊಯ್ದಂ ಕಾಲ್ಗಳಂ ತೋಳ್ಗಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಮಾ
ಣದಿವೈದುಂ ದುರ್ನಯಕ್ಕೆಯ್ದೆಡೆಯನುರು ಗದಾ ದಂಡದಿಂ ಭೀಮಸೇನಂ    ೨೩೬

ವ : ಮತ್ತಂ

ಸಂದುಗ್ರಾಹಿತರಕ್ತದಿಂದೆ ಕೆಸರಾದತ್ತೀ ಧರಾಚಕ್ರವಿ
ನ್ನೆಂದಿಂಗಾಱುವುದೊಟ್ಟಿದಟ್ಟೆಗಳ ಪೆರ್ಬೆಟ್ಟಂಗಳಿಂಬಟ್ಟೆಯಿ
ನ್ನೆಂದಿಂಗಪ್ಪುದೊ ಮಾರಿಗಂ ಪಸಿವದಿನ್ನೆಂದಪ್ಪುದೆಂಬಂದದಿಂ
ಕೊಂದಂ ಸೇವಣಸೈನ್ಯಮಂ ಸಮರದೊಳ್ ಬಲ್ಲಾಳಭೂಪಾಲಕಂ  ೨೩೭
(ಇವು ಉಗ್ರಂ)

ವ : ಆವೇಶರೂಪಮಪಸ್ಮಾರಂ

ಸೂತ್ರಂ ೧೪೬

ವಸಣಂ ಶೂನ್ಯಗೃಹಂ ವನಂ ನೆಗೞ್ದ ಯಕ್ಷಂ ದೇವನುಂ ಬ್ರಹ್ಮರಾ
ಕ್ಷಸನಾ ಧಾತುವಿಷಮ್ಯತಾಶುಚಿತೆಗಳ್ ಭೂತಂ ಪಿಶಾಚಾದಿ ಭಾ
ವಿಸೆ ಪೆಂಪಿಂದೆ ವಿಭಾವಮಕ್ಕುಮನುಭಾವಂ ತಾನಪಸ್ಮಾರಕ
ಕ್ಕೆಸೆಗುಂ ಬಾಯ್ನೊರೆ ಕಂಪಿತಂ ರುದಿತಮೋಟಂ ಸ್ವೇದಮಿಂತಾದುವುಂ

ಲಕ್ಷ್ಯಂ

ಎಲೆ ಎಲೆ ಮಂತ್ರವಾದಿಗಳಿರಾ ಪರದೇಸಿಯ ಕಂದನೀತನೀ
ಮಲಯಪಥ ಪ್ರದೇಶದೊಳೆ ಪೆತ್ತೆನಿದಂ ತಲೆಗಾವುದೀತನಂ
ಬಲೆಯುತೞುತ್ತೆ ಬೊಬ್ಬಿಡುತೆ ಬಾಯ್ನೊರೆ ಸೂಸುತೆ ಬೀೞುತೋಡುತುಂ
ಪಲವು ವಿಕಾರಮಂ ತಳೆದಳೇವೆನೆನುತ್ತಱೆ ಬಿೞ್ದಳುರ್ವಿಯೊಳ್      ೨೩೮
(ಇದು ಅಪಸ್ಮಾರಂ)

ವ್ಯಭಿ(ಸಂ)ಚಾರಿಭಾವಂ ಸಮಾಪ್ತಂ

ವ : ಇಂ ರಸಾಭಾಸಭಾವಾಭಾಸಂಗಳಂ ಪೇೞ್ವೆಂ

ಸೂತ್ರಂ ೧೪೭

ನೆಗೞ್ದ ನಿರಿಂದ್ರಿಯದೊಳ್ ತಿ
ರ್ಯಗಾದಿಯೊಳ್ ಪುದಿದ ವಿವಿಧರಸಭಾವಂಗಳ್
ಬಗೆವೊಡವಾಭಾಸಂಗಳ್ ಪೆಂ
ಪೊಗೆದ ವಿಭಾವಾನುಭಾವದಾರೋಪಿತದಿಂ

ವ : ಅಲ್ಲಿ ನಿರಿಂದ್ರಿಯಕ್ಕೆ

ಲಕ್ಷ್ಯಂ

ಕಳಸಂ ಪದ್ಮಾಕರಂ ಕನ್ನಡಿ ಹಿಮರುಚಿ ಕಾಮಾಗ್ನಿ ಹೋಮಾಗ್ನಿ ಪುಂಸ್ಕೋ
ಕಿಳನಾದಂ ವೇದನಾದಂ ಕುಡಿ ಗುಡಿ ಮಧು ಮೌಹೂರ್ತಿಕಂ ಪೂತವಲ್ಲೀ
ಕುಳವೆಲ್ಲಂ ನಿಬ್ಬಣಂ ಬಂದಬಲೆಯರೆನೆ ಚೂತಂಗಮೀ ಮಲ್ಲಿಕಾಕೋ
ಮಳೆಗಂ ಕೊಂಡಾಡಿ ಕೆಯ್ನೀರೆ ಱೆದನತನು ಲಾವಣ್ಯಪುಣ್ಯಾಂಬುವಿಂದಂ     ೨೩೯

ವ : ಮತ್ತಂ

ಪಗಲೆಂದುಂ ತಲೆದೋಱಲಣ್ಮಳಿನಿಸುಂಚಂದ್ರಂಗೆ ಕೂರ್ತಂತೆ ಪ
ತ್ತುಗೆಗುಂದಳ್ ನಿಶೆಯಪ್ಪುದುಂ ಪರಿದು ದುಗ್ಧಾಂಬೋಧಿಯೊಳ್ ಕೂಡುವಳ್
ನಗುವಳ್ ನೆಯ್ದಿಲೊಳೆಯ್ದೆ ಚುಂಬಿಪ ಚಕೋರಂಗಳ್ಗಳಲ್ವಾಸೆಯಿಂ
ಪುಗುವಳ್ ಕೌಮುದಿಯೆಂಬ ಪೊಚ್ಚಪೊಸವೆಣ್ಣೇನೆಂಬ ನಾೞ್ಚೋಡೆಯೋ  ೨೪೦
(ಇವು ನಿರಿಂದ್ರಿಯ ಸಂಭೋಗಂ)

ಇನನಂ ಕಾಣದೆ ಸಂಚಲ
ತನುವಪರಾಶಾಪ್ರಪಂಚವಿರಹಿತೆ ಸಂಧ್ಯಾಂ
ಗನೆ ನೋಡೆ ನೋಡೆ ಕರಗಿದ
ಳನುರಕ್ತೆ ವಿಯೋಗವೇಗಮಂ ಸೈರಿಪಳೇ          ೨೪೧
(ಇದು ನಿರಿಂದ್ರಿಯ ವಿಪ್ರಲಂಭಂ)

ವ : ಇವು ರಸಾಭಾಸಂಗಳ್, ದೋಷಮಲ್ತು

ಘನಮಾಲೆ ಸಮುದ್ರನ ಸಿರಿ
ಯಿನಾದ ಗರ್ಭದೆ ಜಡಪ್ರಕೃತಿವೆತ್ತಪಳೆಂ
ತೆನೆ ತನುಮಧ್ಯೆಯರೇಂ ಗ
ರ್ಭನಿರ್ಭರಾವಸ್ಥೆಯಿಂ ಪಟುತೆವಡೆದಪರೇ       ೨೪೨
(ಇದು ಆಲಸ್ಯಭಾವಾಭಾಸಂ)

ಆನಿರ್ದ ಬನದೊಳುೞಿದುವ
ನೇನಂ ನೃಪ ನೋೞ್ಪೆ ಬರ್ಪುದೆಂಬಂದದಿನಂ
ದೇನುಲಿದುದೊ ಪಿಕಮಧುರ
ಧ್ವಾನದಿನಾರಕ್ತಕೋರಕಂ ಸಹಕಾರಂ  ೨೪೩
(ಇದು ಗರ್ವಭಾವಾಭಾಸಂ)

ಅಂಬುಜನಾಳಮೆಂಬ ಪೆಣೆದಾವಣಿಯಂ ಪಱಿದಾವಲೆಂಬ ಭಾ
ಳ್ಗಂಬಮನೊತ್ತಿಕಿೞ್ತು ಲತೆಯೆಂಬ ತುರಂಗಮುಮಂ ಪೊರಳ್ಚಿ ಧೌ
ತಾಂಬುತರಂಗಮೆಂಬ ಪರಿಕಾರನನಟ್ಟಿ ಮದಾಳಿಯೆಂಬ ಗುಂ
ಡಂ ಬಳಿದಿಟ್ಟು ಪಾಯ್ದುದು ಸಮೀರಣವಾರಣವಾ ಪ್ರದೇಶದೊಳ್           ೨೪೪
(ಇದು ಉಗ್ರಭಾವಾಭಾಸಂ)

ವ : ಇವು ನಿರಿಂದ್ರಿಯ ಭಾವಾಭಾಸಂಗಳ್

ಉಗುೞುತ್ತುಂ ಸಿಡಿಲೆಂಬ ತೋರಗಿಡಿಯಂ ಕಾಲೂರಿ ಭೂಭಾಗದೊಳ್
ಗಗನಾಭೋಗಮನೆಯ್ದಿ ನೀಳ್ದು ಘನ ವೇಣೀಬಂಧಮಂ ಸಾರ್ಚಿ ಮಿಂ
ಚುಗಳೆಂಬುಳ್ಕುವ ದಾಡೆಗಳ್ ಪೊಳೆಯೆ ಚಂದ್ರಾದಿತ್ಯರಂ ನುಂಗಿ ಬೇ
ಸಗೆಯಂ ಬೆರ್ಚಿಸಿ ಘರ್ಜಿಸುತ್ತುಮೊಗೆದಂ ಕಾರೆಂಬ ಕಾಳಾಸುರಂ      ೨೪೫
(ಇದು ನಿರಿಂದ್ರಿಯರೌದ್ರರಸಮೌಗ್ಯ್ರ ವ್ಯಭಿಚಾರಿ)

ಎಳವೆಱೆ ದಾಡೆ ಕೆಂದಳಿರೆ ನಾಲಗೆ ಮಾಮರದಳ್ಳೆಗೊಂಬಿನೊಳ್
ಮಿಳಿರ್ವೆಳವಳ್ಳಿ ಬಾಲಮಲರ್ದೊಂಗಲೆ ಕೇಸರಮೆಂಬಿನಂ ಮನಂ
ಗೊಳೆ ಮಧುಮಾಸಕೇಸರಿ ವಿಯೋಗಿಗಳೆಂಬ ಮೃಗಂಗಳಂ ಭಯಂ
ಗೊಳಿಸಿದುದುದ್ಘಕೀರ ಮದಕೋಕಿಳಗರ್ಜಿತತರ್ಜಿತಂಗಳಿಂ            ೨೪೬

ವ : ಇದು ನಿರಿಂದ್ರಿಯಭಯಾನಕರಸಮೌಗ್ರಾದಿ ವ್ಯಭಿಚಾರಿಯಿಂತು ನಿರಿಂದ್ರಿಯಾನ್ಯರ ಸಭಾವಂಗಳನಱಿವುದು.

ವ : ಇನ್ನು ತಿರ್ಯಗ್ಗತಕ್ಕೆ

ಪಸಿದೊಡೆ ಸಲ್ಲಕೀಕಿಸಲಯಂಗಳನೊಯ್ಯನೆ ನೀಡಿ ತೀಂಟೆ ತಾಮ
ಮಸೆಪಿರೆ ಕೋಡನಿಟ್ಟೊರಸಿ ನೀರ್ಗೆಳಸಿರ್ದೊಡೆ ತಂದು ನೀರನೂ
ಡಿಸಿ ನಸೆಯಿಚ್ಛೆಯಾದೊಡೊಡಗೂಡಿ ಬೞಲ್ದೊಡೆ ಕರ್ಣವಾತಮಂ
ಪಸರಿಸಿ ತನ್ನ ಕೆಯ್ವಿಡಿಯವೋಲ್ ಪಿಡಿಯಂ ಪಿಡಿದಿರ್ದುದೊಂದಿಭಂ          ೨೪೭

ವ : ಮತ್ತಂ

ಪರಿಪರಿತಂದು ಮೆಯ್ಗಳೆರಡಿಲ್ಲೆನೆ ಪಕ್ಕದಿನಪ್ಪಿ ಕಣ್ಗಳಿಂ
ಸುರಿಯೆ ಮುದಶ್ರುಮಂದಲೆಯತುಪ್ಪು ೞನೊಯ್ಯನೆ ಕರ್ಚಿ ಚಂಚುವಿಂ
ಸರಸಿಜಪತ್ರಕೋಟಿಯ ಕುಸುಂಕಱಿ ನತ್ತೆಳದೊಯ್ದು ಕಾಂತದೊಳ್
ನೆರೆದು ರಥಾಂಗಕಾಂತೆಯೆರ್ದೆಯಾಱಿದುದಾದಮೆ ಸುಪ್ರಭಾತದೊಳ್         ೨೪೮
(ಇದು ತಿರ್ಯಕ್ ಸಂಭೋಗ ಶೃಂಗಾರಾಭಾಸಂ)

ನಲ್ಲರಗಲ್ಕೆಯಿಲ್ಲದೆಡೆಯಸ್ತಮಯಕ್ಕೆ ದಿನಾಧಿನಾಯಕಂ
ಸಲ್ಲದ ತಾಣವಂಗಜಶರಾಶನಿ ಪೊಯ್ಯದ ದೇಶಮುಳ್ಳೊಡಂ
ತಲ್ಲಿಯೆ ಮಾೞ್ಕೆ ಮಜ್ಜನನಮಂ ಬಿದಿಯೆಂದು ರಥಾಂಗಕಾಂತೆ ಹೃ
ದ್ವಲ್ಲಭವಿಪ್ರಲಬ್ಧೆ ಬಗೆಗೆಟ್ಟು ಪೊರಳ್ದುದು ಪದ್ಮಪತ್ರದೊಳ್  ೨೪೯

ಬಿಸರುಹಸಖನಸ್ತಾದ್ರೀಂದ್ರಮಂ ಪೊರ್ದೆ ಪೋದಯ್
ಬೆಸೆದಿನಿಯನೆ ನೀನುಂ ತನ್ನಂ ಬೆಂಬೆನ್ನೊಳೆನ್ನೀ
ಯಸುವುಮಿರದೆ ಪೋಗಲ್ಕಿರ್ದುದೆಂದಿಂತೊಱಲ್ಗುಂ
ಕುಸುಮಶರಶಲಾಕಾಕೀಲಿತಾಂಗಂ ರಥಾಂಗಂ
(ಇದು ತಿರ್ಯಗ್ವಿಪ್ರಲಂಭ ಶೃಂಗಾರಾಭಾಸಂ)

ಅಱುತೆರ್ದೆಯಾಱೆ ಪೀರ್ದುಮಿನಿಯಳ್ಗಿನಿದೆಂದಿರದೀಂಟವೇೞ್ದುಮ
ೞ್ಕಱುಮಱುವಂತೆ ಮುಕ್ಕುಳಿಸಿ ತಂದೆಱೆಗುಮ ಕೆಳೆವಕ್ಕಿಯೆಲ್ಲವಂ
ನೆಱೆ ಬೞಿಯಟ್ಟಿ ನಲ್ಲುಣಿಸನೂಡಿಯುಮಾಮ್ರದ ತೋರವಣ್ಗಳಿಂ
ದಱಸಿದುದಂತುಗಾಣದೆರ್ದೆನೊಂದು ಶುಕಂ ಮಧುಸಮ್ಮದೋತ್ಸುಕಂ         ೨೫೧
(ಇದು ಔತ್ಸುಕ್ಯಂ)

ಗಿಡುಗಂ ಕೊಂದುದೊ ಬೇಡರಿಟ್ಟ ಬಲೆಯೊಳ್ ಮೇಣ್ ಬಿೞ್ದುದೋ ಪಕ್ಕಮೇ
ನುಡಿದತ್ತೋ ಪಿಡಿದನ್ಯಸಾರಿಕೆ ರತವ್ಯಾಪಾರಕೆಂದೊಯ್ದಳೋ
ತಡೆದಂ ಮತ್ಪ್ರಿಯನೆಂದು ನೊಂದು ತಳಿರ್ಗಳ್ ನಾಂಬನ್ನೆಗಂ ದುಃಖದಿಂ
ಗಡ ಕೀರಪ್ರಿಯಕಾಂತೆ ಸುಯ್ದು ಸುರಿದಳ್ ಭೋರೆಂದು ಬಾಷ್ಪಾಂಬುವಂ    ೨೫೨
(ಇದು ವಿತರ್ಕಚಿಂತಾಸಂಧಿ)

ವ : ಮತ್ತಂ

ನೆರೆವನ್ನಂ ರವಿ ನಿಲ್ಲದಸ್ತಗಿರಿಯಂ ಸಾರ್ದಂ ಪ್ರಿಯಂ ಪೋಗಲಾ
ತುರನಾಗಿರ್ದನೆನುತ್ತ ಮತ್ತಿನನನಿತ್ತಾತ್ಮೇಶನಂ ನೋಡಿ ಕೋ
ಪರಸಾವೇಶಮನೊಂದು ಶೋಕರಸಮಂ ಮತ್ತೊಂದು ಕಣ್ ಕಯ್ಕೊಳು
ತ್ತಿರೆ ಕಯ್ಕೊಂಡುದು ಚಕ್ರವಾಕವಧು ಕಣ್ಗೆತ್ತಂ ನಟೀಲೀಲೆಯಂ      ೨೫೩
(ಇದು ತಿರ್ಯಗ್ಭಾವಸಂಧಿ)

ಇಂತಿವೆಲ್ಲಂ ಭಾವಾಭಾಸಂ

ವ : ಆದಿಶಬ್ದದಿಂ ರಜನೀ ರಜನೀಪತಿಸಂಭೋಗಕ್ಕೆ

ಪರೆದಿರೆ ತಿಮಿರಕಚಂ ನೆರೆ
ದಿರೆ ಭಗಣಸ್ವೇದಜಲಕಣೌಘಂ ರಾಗಂ
ಬೊರೆದಿರೆ ಚಕೋರನಯನಂ
ಕರಮೆಸೆದಳ್ ನೆರೆದು ರಜನಿ ರಜನೀಪತಿಯೊಳ್  ೨೫೪

ವ : ಮತ್ತಂ

ಪೊಸಮಕರಂದಮೆಂಬ ಬೆಮರುಣ್ಮಿರೆ ತೆಂಬೆಲರೆಂಬ ಸುಯ್ಯೆಲರ್
ಪಸರಿಸೆ ಗುಚ್ಛಮೆಂಬ ಮೊಲೆ ಚಪ್ಪಲರ್ದೊಪ್ಪೆ ಸಿತಾಬ್ಜಮೆಂಬ ಕಣ್
ಮಿಸುಪ ಪರಾಗಮೆಂಬ ನಸುಗೆಂಪಿನೊಳೊಂದಿರೆ ನೋಡೆ ಕಣ್ಗೆಶೋ
ಭಿಸಿದಳಲಂಪಿನಿಂ ನೆರೆದು ನಂದನಲಕ್ಷ್ಮಿ ವಸಂತಕಾಂತನೊಳ್          ೨೫೫

ಇಂತಿವು ರಸಾಭಾಸಂಗಳ್

ಅಮೃತದ ಖಂಡಶರ್ಕರೆಯ ಕೂಟಮುಮೊಲ್ದಳ ಕೂಟಮುಂ ಸಮಾ
ನಮೆಯೊಲವಿಲ್ಲದಳ್ಗೆ ವಿಟನೇಟವಿಟಂ ಬರೆ ಕೂಟಮಿಂಪನೀ
ಗುಮೆ ಬೆಲೆಗೊಂಡನಾ ಬೆಲೆಗೆ ಮೆಯ್ದೆರೆಯೋಯ್ತೆ ನಗಿತ್ತೆನೆಂಬ ಕೂ
ಟಮನದನೊಂದು ಕೂಟಮೆನಲಕ್ಕುಮೆ ನಂಜಿನ ಕಾಲಕೂಟಮಂ     ೨೫೬
(ಇದುವುಮೇಕತ್ರಾನುರಾಗದಿಂ ರಸಾಭಾಸಮಪ್ಪುದು)

ವ : ಇಂತು ತುಂದಿಲ ಮೈಥುನಂ, ನೀಚ ಶಬರ ಚೇಟೀಚೇಟ ಪರಮ ದರಿದ್ರಾದಿಗಳ್ ನೆಗೞ್ದ ಕೊೞೆ ಸುಸಿಲೆಲ್ಲಂ ರಸಾಭಾಸಂಗಳೆಂದಱಿವುದು.

ಸಮಾಸೋಕ್ತಿಯರ್ಥಾಂತರನ್ಯಾಸಂ, ರೂಪಕಮುತ್ಪ್ರೇಕ್ಷಾದಿಗಳೀ ರಸಭಾವಾ ಭಾಸಕ್ಕೆ ಜೀವಿತಂ.

ಇನ್ನು ಸಾತ್ವಿಕವಿಚಾರಂ

ಲೇಸಾದ ಸತ್ವಗುಣೋತ್ಕರ್ಷಣದಿಂ ಪ್ರಾಣಸ್ವರೂಪಮಾದ ವಸ್ತುವೆ ಸತ್ವಂ, ಅಲ್ಲಿ ಪುಟ್ಟಿದುವೇ ಸಾತ್ವಿಕಂಗಳವು ಪ್ರಾಣಭೂಮಿಪ್ರಸೃತ ರತ್ಯಾದಿಗಳನಱಿಯುವ ವೃತ್ತಿಗಳನುಳ್ಳುವು. ಬಾಹ್ಯ ಜಡರೂಪಪಂಚಭೂತಾತ್ಮಕಂಗಳಾದ ಅಶ್ರು ಸ್ವೇದಾದಿಗಳೇ ಕಾರಣಂಗಳವಱಿಂ ತಾವುಂ ವಿಲಕ್ಷಣಂಗಳಪ್ಪುವು. ಅತ್ಯಂತರಸೀಭವಿಸಿದ ರತ್ಯಾದಿಗಳ ವಿಭಾವಂಗಳಿಂ ಪುಟ್ಟಿದುವನು ಭಾವಂಗಳಿಂ ಗಮ್ಯಮಾನಮಾನಂಗಳಾಗಿ ಭಾವಂಗಳೆಂದಱಿಯಿಸಿಕೊಳ್ವುವು. ಮತ್ತ ಮಾತ್ಮಸ್ಥಿತಮಾದ ಪಂಚಭೂತದೊಳ್ ಪೃಥ್ವೀಪ್ರಧಾನಮಾದ ಪ್ರಾಣದೊಳ್ ಚಿತ್ತವೃತ್ತಿಗಳ್ ಬೆರಸಲೊಡನಾತ್ಮನಚಲನಾಗಿರ್ಪನದೇ ಸ್ತಂಭ ಸಾತ್ವಿಕ ಭಾವಂ. ಜಲಪ್ರಧಾನ ಮಾದ ಪ್ರಾಣದಲ್ಲಿ ಸ್ವಾಂತಂಗಳ್ ಪ್ರವರ್ತಿಪುದು, ಅಶ್ರುಭಾವ ಮಕ್ಕು. ತೇಜಃ ಪ್ರಧಾನಮಾದ ಪ್ರಾಣದಲ್ಲಿ ಹೃದ್ವರ್ತನಮಿರೆ ವೈವರ್ಣ್ಯಮಕ್ಕುಂ. ಆಕಾಶಪ್ರಧಾನಮಾದ ಪ್ರಾಣದಲ್ಲಿ ಹೃದ್ವರ್ತನಮಿರೆ ಲಯಸಾತ್ವಿಕಮಕ್ಕುಂ. ವಾಯು ಪ್ರಧಾನಮಾದ ಪ್ರಾಣದಲ್ಲಿ ಚೇತಃಸಂಧಾನಮಾಗೆ ಮಂದ ಮಧ್ಯೋತ್ಕೃಷ್ಟವೇಗಂಗಳಿಂ ರೋಮಾಂಚ ಕಂಪ ಸ್ವರಭೇದತ್ರಿತಯಮಕ್ಕುಂ. ಈ ಬಾಹ್ಯ ಸಾತ್ವಿಕಂಗಳ್ಗಂತರಂಗದ ಸಾತ್ವಿಕಂಗಳ್ ಕಾರಣ ಮಾದುದಱಿಂದೀ ಪೆಸರ್ಗಳಂ ತಾವುಂ ತಳೆದುವು.

(ಭರತಮತಮಿದು)

ಬಾಹ್ಯಂಗಳಾದ ಅಶ್ರುಸಂಭಾದಿಗಳ್ ಶರೀರಧರ್ಮಂಗಳ್ ಅಂತರಂಗ ಸಾತ್ವಿಕಂಗಳ್ ಸಂದನುಭಾವಂಗಳದಱಿಂದಮನುಭಾವಂಗಳೊಡವೆರಸಿರ್ಪುವು. ಇವು ಹೃದ್ಗತಮಾದ ಸಾತ್ವಿಕಂಗಳುಮಂ ರತ್ಯಾದಿಸ್ಥಾಯಿಗಳುಮಂ ಮತ್ಯಾದಿ ವ್ಯಭಿಚಾರಿಗಳು ಮನಱಿಪ್ಪುವಾ ಸ್ಥಾಯಿಭಾವಮೊಂಬತ್ತು, ಸಾತ್ವಿಕಭಾವಮೆಂಟು, ಸಂಚಾರಿಭಾವಂ ಮೂವತ್ತುಮೂಱು, ಇಂತಯ್ವತ್ತು ಭಾವಂ.

ವಿಭಾವಬಲದಿಂದಾ ಮೆಯ್ನವಿರುರ್ವಿದುದೇ ಪುಳಕಂ, ಕಣ್ಬನಿ ತೋಱಿದುದೇ ಅಶ್ರು, ಬೆಮರ್ತುದೇ ಸ್ವೇದಂ, ಮಱವಟ್ಟುದೇ ಸ್ತಂಭಂ, ಮೆಯ್ಮಱೆದುದೇ ಲಯಂ, ಪಲ್ಲಟಿಸಿದುದೇ ಸ್ವರಭೇದಂ, ನಡುಗುವುದೇ ಕಂಪಂ, ಮತ್ತೊಂದು ಬಣ್ಣಮಾದುದೇ ವೈವರ್ಣ್ಯಂ

ಇಂತು ಚಿತ್ತತ್ವದಿನೆಲ್ಲಾರಸಂಗಳ್ಗಪ್ಪುವಿವಂ ವ್ಯಭಿಚಾರಿಗಳನನುಭಾವಂಗಳೊಡನೆಯೆ ಹೇಮಚಂದ್ರಾಚಾರ್ಯರ್ ಪೇೞ್ದರ್, ಅಂತೆಗೆಯ್ದೆಂ

ವ : ಮತ್ತಂ ಸಾತ್ವಿಕಭಾವಮೆಂಟು ಪ್ರಕಾರಕ್ಕಂ ಕಾವ್ಯಮಾರ್ಗದೊಳುದಾ ಹರಣ ಮುಖದೊಳ ಱಿದುಕೊಳ್ಗೆ. ಶೃಂಗಾರದೊಳಳವಟ್ಟುದನುದಾಹರಿಪೆಂ

ಸೂತ್ರಂ ೧೪೮

ಪುಲಕಾಶ್ರು ಸ್ತಂಭ ಸ್ವೇ
ದ ಲಯ ಸ್ವರಭೇದ ಕಂಪ ವೈವರ್ಣ್ಯಂಗಳ್
ಸಲೆ ಸಾತ್ವಿಭಾವಂಗಳ್
ವಿಲಸಿತ ಕವಿಮಾರ್ಗದಿಂದಮೆಂಟು ತೆಱಂಗಳ್

ಲಕ್ಷ್ಯಂ

ಇನಿಯಂ ಸೋಂಕಲೊಡಂ ಝಂ
ಮನೆ ಕಡವಲರ್ದಂತೆ ಕಾಂತೆ ತಾಳ್ದಿದ ರೋಮಾಂ
ಚನಕೆ ತನಿವೇಟವಳ್ಳಿಯ
ನನೆಗಂಗಜನೀಯನೆಂತೊ ಕಂಟಕವೆಸರಂ           ೫೭
(ಇದು ಪುಳಕಂ)

ಸುರಿದಬಲೆ ಕಣ್ಣ ನೀರ್ಗಳ
ಸರಿಯಂ ಸ್ತನಮಂಡಳಂಗಳೊಳ್ ವಿರಹಮಹಾ
ಜ್ವರಜನಿತಪುಳಕ ಸಸ್ಯಾಂ
ಕುರಂಗಳಂ ಬೆಳೆಯಿಪಳ್ ನಭೋಲಕ್ಷ್ಮಿಯವೋಲ್          ೫೮
(ಇದು ಅಶ್ರು)

ಇನಿಯನ ಕೆಂದಳಂದ ತಳಮನೊಯ್ಯನೆ ಸೋಂಕೆ ಪೊದೞ್ದ ನಾಣ ಪೆಂ
ಪಿನೊಳೆಗೆತರ್ಪ ಘರ್ಮಜಲಬಿಂದುಗಳಿಂ ನಮಿತಾನನಾಬ್ಜೆ ಬೆ
ಚ್ಚನೆ ಬಸಿಯುತ್ತುಮಿಂದು ಕರಸಂಕುಳಮೊಯ್ಯನವುಂಕಿ ಸೋಂಕೆ ಸೋಂ
ಕಿನೊಳೊಱೆವಿಂದುದ ಕಾಂತಮಣಿಪುತ್ರಿಕೆಯಂದದಿನೊಪ್ಪಿ ತೋಱಿಳ್         ೨೫೯
(ಇದು ಸ್ವೇದಂ)

ವ : ಮತ್ತಂ

ನಸುದೆಱೆದಿರ್ದ ಬಾಯ್ ನಿಮಿರ್ದ ಗೋಣೆಮೆಯಿಕ್ಕದ ದಿಟ್ಟಿ ರಯ್ಯನೊಂ
ದೆಸೆಗೊಱಗಿರ್ದ ಮೆಯ್ ಜಘನದಲ್ಲಿಯ ಕಯ್ ಮರವಟ್ಟ ಚೇಷ್ಟೆ ಕ
ಣ್ಗೆಸೆದಿರೆ ಸುಯ್ಯಪೆಂಪೞಿದು ಚಿತ್ರದ ಪೆಣ್ಣವೊಲಾಗಿ ಬಾಗಿಲೊಳ್
ಸಸಿಮುಖಿ ನಿಂದು ನೋೞ್ಪಳಿನಿಯಂ ತಡೆದೊಯ್ಯನೆ ಬರ್ಪ ಬಟ್ಟೆಯಂ        ೨೬೦
(ಇದು ಸ್ತಂಭಂ)

ಮಿಗೆ ಸುರತಾಮೃತಂಗುಡಿದು ತನ್ನೊಳೆ ತಾಂ ಲಯಮಾಯ್ತೊ ಇಂಪಿನೊ
ಳ್ಪೊಗೆದಧರಸ್ಥ ಸಾರದೊಡನೆನ್ನಯ ಹೃದ್ಗುಹೆವೊಕ್ಕಡಂಗಿತೋ
ಬಗೆವೊಡೆ ಘರ್ಮವಾರಿಯೊಡನೇಂ ಪೊಱಸಾರ್ದುದೊ ಕಾಣೆನೋಪನೊಳ್
ಬಗೆಯ ವಿಕಾರಮಂ ತನುಗೆ ಚಂದನದಣ್ಕೆವೊಲಾದಮೊಪ್ಪಿದಳ್    ೬೨೧
(ಇದು ಲಯಂ)

ಸ್ಮರನಸಿಯಳ ಬೀಣೆಯ ನುಂ
ಚರವೆನೆ ಸತಿ ಪಾಡುತಿರ್ಪುದುಂ ಮನದನ್ನಂ
ಬರೆ ಬಂದುದೆಯ್ದೆ ಕಾಮಾ
ತುರೆಗೆ ಮನಂಗೊಳ್ವ ಗದ್ಗದಸ್ವರಮಾಗಳ್     ೨೬೨
(ಇದು ಸ್ವರಭೇದಂ)

ಲಲನೆ ನಿಜೇಶ್ವರನಂ ಕಾ
ಣಲೊಡಂ ಕಟ್ಟಿದಿರೊಳೊದವೆ ಭಯಮಾದಳ್ ತೆಂ
ಬೆಲರಿಂದಲ್ಲಾಡುವ ಕೋ
ಮಲ ಲತಿಕಾಲೀಲೆಯಂ ತಳೋದರಿ ತಳೆದಳ್    ೨೬೩
(ಇದು ಕಂಪಂ)

ಇನಿಯನ ವಿಯೋಗದಿಂದಾ
ದ ನಿನ್ನ ಬಡತನಮನಱಿವುದರಿದಾಯ್ತೆನಸುಂ
ಘನತರಚಂದ್ರಕಳಾಬಿಸ
ವನದಂತಿರೆ ನಿನ್ನೊಳಾದುದೀ ವೈವರ್ಣ್ಯಂ       ೨೬೪
(ಇದು ವೈವರ್ಣ್ಯಂ)

ಇಂದುವರಮಾರುಮೀ ತೆಱ
ದಿಂದಂ ಕನ್ನಡದೊಳಾರ್ಯರಾಯೆಂಬಿನಮೊ
ಳ್ಪಿಂದೆ ವಿವರಿಸಿದುದಿಲ್ಲೆನೆ
ಚಂದದೆ ಬಿಚ್ಚಳಿಸಿ ರಚಿಸಿದಂ ಕವಿಸಾಳ್ವಂ         ೨೬೫

ಈ ಕೃತಿ ಕವಿ ಕೃತ ನುತ ಕವಿ
ತಾ ಕಾಂತೆಗೆ ತಾನೆ ನವರಸಂ ಸಲೆ ರಸರ
ತ್ನಾಕರಮಿಳೆ ಶಶಿ ರವಿ ರ
ತ್ನಾಕರಮಿರ್ಪನ್ನೆಗಂ ಜಯಿಕ್ಕುರ್ವರೆಯೊಳ್     ೨೬೬

ಇದು ಶತೇಂದ್ರ ಮುನೀಂದ್ರವಂದಿತಾರ್ಹತ್ಪರಮೇಶ್ವರ ಪಾದಾರವಿಂದ ಮಂದ
ಮಕರಂದಾನಂದಿತ ಭೃಂಗಾಯಮಾನ ಕವಿಸಾಳ್ವ ವಿರಚಿತಮಪ್ಪ
ರಸರತ್ನಾಕರದೊಳ್ ವ್ಯಭಿಚಾರಿಭಾವ ವಿವರಣಂ

ಚತುರ್ಥ ಪ್ರಕರಣಂ