ಅಚ್ಯುತ ಕಲ್ಪ (೮-೫೦): ಜೈನರ ತ್ರಿಲೋಕಾಕೃತಿಯಂತೆ ಇದು ೧೬ನೆಯ ವಿಮಾನ (ಸ್ವರ್ಗ)ದ ಹೆಸರು. (ನೋಡಿ:ಕಲ್ಪ)

ಅರ್ಘ್ಯ (೩-೩೦): ಅಷ್ಟ ವಿಧಾರ್ಚನೆಯ ಒಂದು ಭಾಗ.

ಅಜ್ಜಿಕ (೩೦-೫೫): ಜೈನ ಸನ್ಯಾಸಿನಿ; ಅರ್ಯಿಕಾ, ಆರ್ಯಿಕೆ, ಅಜ್ಜಿಕೆ, ಕಂತಿ ಎಂದೂ ಹೇಳುವರು.

ಅಣುವ್ರತ (೫-೪೫): ಗೃಹಸ್ಥರಿಗೆ ಕೊಡುವ ಆಯ್ದು ಪ್ರಕಾರದ ಚಿಕ್ಕ ವ್ರತಗಳು; ಅಹಿಂಸೆ, ಸತ್ಯ, ಅಸ್ತೇಯ (ಅಚೌರ್ಯ), ಬ್ರಹಚರ್ಯ, ಅಪರಿಗ್ರಹ.

ಅಂತರಾಯ (೧-೮): ಜೈನಯತಿಗಳು ಆಹಾರ ತೆಗೆದುಕೊಳ್ಳುವಾಗ ಉಂಟಾಗುವ ಅಡ್ಡಿ, ತೊಡಕು ಎಂಬುದು ಸಾಮಾನ್ಯಾರ್ಥ. ಅಂತರಾಯವೂ ಒಂದು ಕರ್ಮ ವೆಂಬುದು ವಿಶೇಷಾರ್ಥ; ದಾನ, ಲಾಭ, ಭೋಗ, ಉಪಭೋಗ, ವೀರ್ಯಾ ಎಂಬ ಅಯ್ದ ವಿಧವಾದ ಅಂತರಾಯಗಳು, ಇವು ಮೋಕ್ಷಾಪೇಕ್ಷಿಗಳಾಗಿ ಹೊರಟ ಜೀವಗಳಿಗೆ ಎದುರಾಗುವ ವಿಘ್ನಗಳು. ಇವುಗಳು ಉಂಟಾದರೆ ಆಹಾರ ಬಿಡಬೇಕು. ಇವನ್ನು ಜಯಿಸಿದರೆ ಇಂದ್ರಪದವಿ, ಮೋಕ್ಷ ಸಾಧ್ಯ.

ಅನಂತ ಚತುಷ್ಟಯ (೬೫-೫೦ವ): ಅನಂತದರ್ಶನ, ಅನಂತ ಜ್ಞಾನ, ಅನಂತ ಸುಖ ಮತ್ತು ಅನಂತ ವೀರ್ಯ – ಈ ನಾಲ್ಕು

ಅನಂತ ವೀರ್ಯ (೬೫-೫೦ ವ): ನೋಡಿ ಅನಂತ ಚತುಷ್ಟಯ.

ಅಮರಾಧೀಶ (೧-ಪಲ್ಲವಿ): ದೇವೇಂದ್ರ : ಜೈನ ಪುರಾಣಗಳ ದೇವೆಂದ್ರನು ತೀರ್ಥಂಕರರ ತಪಸ್ಸಿಗೆ ಅಡ್ಡಿಗಳನ್ನೊಡ್ಡುವವನಲ್ಲ, ಬದಲು ಉಂಟಾಗುವ ಅಡ್ಡಿಗಳನ್ನು ನಿವಾರಿಸುತ್ತಾನೆ ಮತ್ತು ಅನುಕೂಲಗಳನ್ನು ಕಲ್ಪಿಸುತ್ತಾನೆ.

ಅನುಬದ್ಧ ಕೇವಲಿ (೧-೧೨): ಇವರು ಮೂವರು -ಗೌತಮ, ಸುಧರ್ಮಾಚಾರ್ಯ, ಜಂಬೂಸ್ವಾಮಿ.

ಅಮೃತ ಸಂಪದ (೧-೧): ಮೋಕ್ಷ ಅಥವಾ ಮುಕ್ತಿ ಅಥವಾ ಆಪ್ತವರ್ಗ.

ಅಗುರು ಲಘುತ್ವ (೬೫-೫೦ ವ): ಯಾವ ಶಕ್ತಿಯ ಕಾರಣದಿಂದ ದ್ರವ್ಯದ ದ್ರವ್ಯತೆ ಸ್ಥಿರವಾಗಿರುತ್ತದೆಯೋ, ಒಂದು ಗುಣವು ಮತ್ತೊಂದು ಗುಣವಾಗಿ ಪರಿಮಮಿಸುವುದಿಲ್ಲವೋ ಒಂದು ಪರ್ಯಾಯವು ಮತ್ತೊಂದು ಪರ್ಯಾಯವಾಗಿ ಪರಿಣಮಿಸುವುದಿಲ್ಲವೋ ಅದಕ್ಕೆ ಅಗುರು ಲಘುತ್ವಗುಣವೆನ್ನುತ್ತಾರೆ.

ಅಂತರ್ಮುಹೂರ್ತ?(೬೫-೫೦ ವ): ಒಂದು ಆವಲಿಯ ಮೇಲೆ ಒಂದು ಮುಹೂರ್ತದೊಳಗಿನ ಕಾಲ,

ಅಕೃತಿಯ ವಸದಿ (೮-೩೯): ಸ್ವರ್ಗದೊಳಗಿನ ಸಹಜ ಚೈತ್ಯಾಲಯ.

ಅಯೋಗಿ ಕೇವಲಿ (೬೫-೫೦ ವ): ಯೋಗದ ಅಭಾವವಿರುವ ‘ಅಯೋಗಿ ಕೇವಲಿ ಗುಣ ಸ್ಥಾನ’ ಎಂಬ ೧೪ನೆಯ ಗುಣಸ್ಥಾನದಲ್ಲಿ ವರ್ತಿಸುವವನು.

ಅಯ್ದು ಚಾರಿತ್ರ (೧-೩): ಸಾಮಾಯಿಕ, ಛೇದೋಪಸ್ಥಾಪನಾ, ಪರಿಹಾರ ವಿಶುದ್ಧ, ಸೂಕ್ಷ್ಮ ಸಾಂಪರಾಯ, ಯಥಾಖ್ಯಾತ.

ಅಯ್ದು ಶುದ್ಧಿ (೩-೨೫): ಭಾವಶುದ್ಧಿ, ಕಾಯಶುದ್ಧಿ, ವಿನಯಶುದ್ಧಿ, ವಾಕ್ಯಶುದ್ಧಿ ಈರ್ಯಾಪಥ ಶುದ್ಧಿ.ಸ

ಅಯ್ದು ಸತ್ವ (೧-೩): ಇದು ವೀರ್ಯಾಚಾರಕ್ಕೆ ಸಂಬಂಧಿಸಿದೆ.

ಅವಧಿ ಜ್ಞಾನ (೭-೩): ಇಂದ್ರಿಯಗಳ ಮೂಲಕ ಪಡೆಯುವ ಜ್ಞಾನ ಮತಿಜ್ಞಾನ, ಓದಿ ಕೇಳಿ ತಿಳಿದ ಜ್ಞಾನ ಶ್ರುತಜ್ಞಾನ, ಕಾಲದೇಶಗಳು ಎಷ್ಟೇ ದೂರವಾಗಿದ್ದರೂ ಅಲ್ಲಿನ ವಿಷಯಗಳನ್ನು ತಿಳಿಯವುದು ಅವಧಿಜ್ಞಾನ. ಅವಧಿಜ್ಞಾನವುಳ್ಳವನು ಅವಧಿಜ್ಞಾನಿ.

ಅರೂಪರು (೧-೨): ಅರೂಪರೆಂದರೆ ರೂಪವಿಲ್ಲದವರು, ಅಮೂರ್ತರು ಎಂದರ್ಥ. ಅಘಾತಿ ಕರ್ಮಗಳನ್ನು ನಾಶಮಾಡಿ ದೇಹವನ್ನು ಬಿಟ್ಟು ಸಿದ್ಧ ಶಿಲೆಗೆ ಹೋಗಿ ಶಾಶ್ವತ ಸುಖದಲ್ಲಿ ನೆಲಸುವ ಅಯೋಗ ಕೇವಲಿಗಳಿಗೆ ಸಿದ್ಧರು, ಅರೂಪರು, ಅಮೂರ್ತರು ಮುಂತಾಗಿ ಕರೆಯುತ್ತಾರೆ. ಇವರು ಪಂಚಪರಮೇಷ್ಠಿಗಳಲ್ಲೊಬ್ಬರು. ನೋಡಿ, ಪಂಚಪರಮೇಷ್ಠಿ.

ಅಷ್ಟ ಕರ್ಮ (೧-೨): ನಾಲ್ಕು ಘಾತಿ ಕರ್ಮಗಳು ಮತ್ತು ನಾಲ್ಕು ಅಘಾತಿ ಕರ್ಮಗಳು ಸೇರಿ ಆಗುವ ಎಂಟು ಕರ್ಮಗಳು; ಜ್ಞಾನಾವರಣೀಯ, ದರ್ಶನಾವರಣೀಯ, ಅಂತರಾಯ, ಮೋಹನೀಯ, ಆಯುಃ ಕರ್ಮ, ನಾಮಕರ್ಮ, ಗೋತ್ರಕರ್ಮ ಮತ್ತು ವೇದನೀಯ ಕರ್ಮ.

ಅಷ್ಟ ಗುಣ (೬-೨೧): ಯೋಗದಿಂದ ಸಿದ್ಧಿಸುವ (ಸಿದ್ಧಿ) ಗುಣಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ. ಆದರೆ ಸಿದ್ಧಪರ ಮೇಷ್ಠಿಗಳ ಗುಣಗಳು ಬೇರೆ. ಕ್ಷಾಯಿಕ ಸಮಕ್ತ್ವ,ಅನಂತ ಜ್ಞಾನ, ಅನಂತ ದರ್ಶನ, ಅನಂತ ವೀರ್ಯ, ಸೂಕ್ಷ್ಮತ್ವ, ಅವಗಾಹಿತ್ವ ಅಗುರು ಲಘುತ್ವ, ಅವ್ಯಾಭಾದತ್ವ.

ಅಷ್ಟಮಹಾ ಪ್ರಾತಿಹಾರ್ಯ (೬೫-೫೦ ವ): ತೀರ್ಥಂಕರರ ವೈಭವ ಸೂಚಿಸುವ ವಸ್ತುಗಳು: ಅಶೋಕ ವೃಕ್ಷ, ಸುರಪುಷ್ಪವೃಷ್ಟಿ, ದಿವ್ಯಧ್ವನಿ, ಚಾಮರ, ಸಿಂಹಾಸನ, ಭಾಮಂಡಲ, ದೇವದುಂದುಭಿ, ಮೂರು ಛತ್ರಗಳು (ಮುಕ್ಕೊಡೆ.)

ಅಷ್ಟಾಮಾವನಿ (೧-೨): ನಾವು ವಾಸಮಾಡುವ ಭೂಲೋಕದ ನಟ್ಟನಡುವೆ ಮೇರು (ಮಂದರ) ಪರ್ವತವಿದೆ. ಇದರ ಸುತ್ತ ಜಂಬೂದ್ವೀಪ ಮುಂತಾದ ಎಂಟು ದ್ವೀಪಗಳಿವೆ. ಎಂಟನೆಯದೇ ನಂದೀಶ್ವರ ದ್ವೀಪ. ಇದನ್ನೇ ಎಂಟನೆಯ ಭೂಮಿ ಎನ್ನುವರು.

ಅಷ್ಟಾಂಗ (೩-೨೦): ಎಂಟು ನೈಮಿತ್ತಿಕಾಂಗಳು; ಅಂತರಿಕ್ಷ, ಭೌಮ, ಅಂಗ, ಸ್ವರ, ವ್ಯಂಜನ, ಲಕ್ಷಣ, ಭಿನ್ನ, ಸ್ವಪ್ನ.

ಅಷ್ಟಾಹ್ನಿಕ (೩-೨೪): ಆಷಾಢ ಕಾರ್ತಿಕ ಫಾಲ್ಗುಣ ತಿಂಗಳುಗಳಲ್ಲಿ ಶುಕ್ಲಪಕ್ಷದ ಅಷ್ಟಮಿಯಿಂದ ಪೌರ್ಣಮಿಯವರೆಗೆ ಎಂಟೆಂಟು ದಿವಸ ದೇವತೆಗಳು ನಂದೀಶ್ವರ ದ್ವೀಪಕ್ಕೆ ಹೋಗಿ ಅಲ್ಲಿನ ಜಿನಬಿಂಬಗಳನ್ನು ಪೂಜಿಸುವರೆಂಬ ಭಾವನೆಯಿಂದ ಜೈನರು ಮಾಡುವ ಪೂಜೆ; ನಂದೀಶ್ವರ ಅಷ್ಟಾಹ್ನಿಕವೆಂದೂ ಹೆಸರಿದೆ.

ಅಷ್ಟೋತ್ತರ ಸಹಸ್ರನಾಮ (೬೫-೫೦ ವ): ತೀರ್ಥಂಕರರಿಗೆ ಇರುವ ಸಾವಿರದೆಂಟು ಹೆಸರುಗಳು.

ಅಷ್ಟಾದಶ ದೋಷ (೬೫-೫೦ ವ): ಹಸಿವು ನೀರಡಿಕೆ ಅಂಜಿಕೆ ವೈರ (ತಿರಸ್ಕಾರ) ಪ್ರೀತಿ ಮೋಹ ಚಿಂತೆ ಮುಪ್ಪು ಬೇನೆ ಸಾವು ಬೆವರು ದುಃಖ ಗರ್ವ ಕಾಮ ಸೇವನೆ ಆಶ್ಚರ್ಯ ಹುಟ್ಟು ನಿದ್ರೆ ಹಳಹಳಿ – ಇವು ಹದಿನೆಂಟು ದೋಷಗಳು. ಇವು ಇಲ್ಲದವನೇ ದೇವರು.

ಆಚಾರ್ಯ (೧-೩): ಪಂಚಾಚಾರ ಮೊದಲಾದವುಗಳನ್ನು ಆಚರಿಸುತ್ತ ಶಾಸ್ತ್ರವಿಶಾರದರೂ ಆತ್ಮರತರೂ ಆಗಿದ್ದು ನಿಶ್ಚಯ ಮಾರ್ಗದಲ್ಲಿ ನಡೆಯುವವರು, ಅದರ ಹಾಗೆ ವ್ಯಾವಹಾರಿಕವಾಗಿ ಶಿಷ್ಯರಿಗೆ ಧರ್ಮೋಪದೇಶ ಮಾಡುವರು, ಧರ್ಮದಲ್ಲಿ ಶಾಸನಾಧಿಕಾರ ಇದ್ದವರು.

ಆರ್ಯೆ (೧-೨೪): ಆರ್ಯಾಖಂಡ ; ಜಂಬೂ ದ್ವೀಪದ ಭರತ ಕ್ಷೇತ್ರದಲ್ಲಿನ ವಿಜಯಾರ್ಧ ಪರ್ವತ ಮತ್ತು ಗಂಗಾ ಸಿಂಧೂ ನದಿಗಳು ಭರತ ಕ್ಷೇತ್ರವನ್ನು ಉತ್ತರ -ದಕ್ಷಿಣವಾಗಿ ವಿಭಾಗಿಸಿದೆ. ದಕ್ಷಿಣ ಭಾರತದ ನಡುವಿನ ಖಂಡ ಆರ್ಯಾ ಖಂಡ, ಇಲ್ಲೇ ನಾವು ಇರುವುದು.

ಆಸನ ಕಂಪ (೪-೨೩): ಮುನಿಗಳಿಗೆ ಕೇವಲ ಜ್ಞಾನ ಉಂಟಾದಾಗಲೂ ತೀರ್ಥಂಕರರು ಹುಟ್ಟುವಾಗಲೂ ಇಂಥ ಇತರ ಸಂದರ್ಭಗಳಲ್ಲೂ ಆಯಾ ಸೂಚನೆಗಾಗಿ ಇಂದ್ರನ ಪೀಠ ಅಲಗುತ್ತದೆ. (ಆಗ ಅವನು ಅವಧಿಜ್ಞಾನದಿಂದ ಆಯಾ ವಿಷಯವನ್ನು ತಿಳಿದು ತದನುಗುಣವಾಗಿ ನಡೆಯುತ್ತಾನೆ) ಇದೇ ಆಸನ ಕಂಪ.

ಈರೈದು ಪೂರ್ವರು (೧-೧೨): ದಶ ಪೂರ್ವಿಗಳು ಅಥವಾ ದಶಪೂರ್ವಧರರು; ವಿಶಾಕ ಪ್ರೋಷ್ಠಿಲ ಕ್ಷತ್ರಿಯ ಜಯಸೇನ ನಾಗಸೇನ ಸಿದ್ಧಾರ್ಥ ಧೃತಿಸೇನ ವಿಜಯ ಸೇನ ಬುದ್ಧಿಲಿಂಗ (ಬುದ್ಧಿಲ\ಬಹುಧೂಲಿ), (ಗಂಗ) ದೇವ (ಸುಧರ್ಮ). ಹದಿನಾಲ್ಕು ‘ಪೂರ್ವ’ ಜ್ಞಾನಗಳಲ್ಲಿ ಹತ್ತನ್ನು ಹೊಂದಿದವರು.

ಈಷತ್ ಪ್ರಾಗ್ಭಾರ (೬೫-೫೦ ವ): ದೇವತೆಗಳ ನಿವಾಸವಾದ ಊರ್ಧ್ವಲೋಕದಲ್ಲಿ ಕಲ್ಪ, ಗ್ರೈವೇಯಕ, ಅನುದಿಶ, ಅನುತ್ತರ, ಈಷತ್ ಪ್ರಾಗ್ಭಾರ ಎಂಬ ವಿಭಾಗಗಳು ಆರೋಹಣ ಕ್ರಮದಲ್ಲಿದೆ. ಈಷತ್ ಪ್ರಾಗ್ಭಾರವೆಂಬುದು ಸಿದ್ಧಕ್ಷೇತ್ರ, ಇಲ್ಲಿ ಸಿದ್ಧಶಿಲೆಯಿದೆ, ಇದರ ನೆತ್ತಿಯಲ್ಲಿ ಸಿದ್ಧರು ನೆಲಸುತ್ತಾರೆ.

ಉಭಯ ಪರಿಗ್ರಹ (೧-೪): ಬಾಹ್ಯ – ಅಭ್ಯಂತರ ಎಂಬ ಎರಡು ಪರಿಗ್ರಹಗಳು.

ಉಪಸರ್ಗ (೧೮-೨೦): ಮುನಿಗಳ ತಪಸ್ಸಿಗೆ ಉಂಟಾಗುವ ತೊಂದರೆಗಳು, ಇವು ನಾಲ್ಕು ವಿಧ; ದೇವಮ ಅಚೇತನ, ತಿರ್ಯಕ್ ಮತ್ತು ಮಾನುಷ. ಇವುಗಳಿಗೆ ಕ್ರಮವಾಗಿ ದೇವೋಪ ಸರ್ಗ, ಅಚೇತನೋಪಸರ್ಗ, ತಿರ್ಯಕೋಪಸರ್ಗ ಮತ್ತು ಮಾನುಷೋಪಸರ್ಗವೆಂದು ಹೆಸರು.

ಋದ್ಧಿ (೬೫-೫೦ ವ): ತಪಸ್ಸಿದ್ಧಿ ಪಡೆದವರಿಗೆ ಉಂಟಾಗುವ ಮಹಿಮೆ. ಋದ್ಧಿಗಳು ಏಳು; ಬುದ್ಧಿಋದ್ಧಿ, ತಪರ್ಧಿ, ಔಷಧರ್ಧಿ, ರಸರ್ಧಿ, ಬಲರ್ಧಿ ಜ್ಞಾನರ್ಧಿ ಮತ್ತು ಚಾರಣರ್ಧಿ.

ಋಷಿ ನಿವೇದಕ (೭-೨): ಜೈನ ಪುರಾಣಗಳಲ್ಲಿ ಬರುವ ಸುದ್ಧಿವಾಹಕ. ಈತ ನಗರದ ಹೊರವಲಯದಲ್ಲಿದ್ದು ಅಲ್ಲಿಗೆ ಆಗಮಿಸುವ ಮುನಿಗಳ ವಿಚಾರವನ್ನು ಕೂಡಲೆ ದೊರೆಗೆ ಅರಿಕೆ ಮಾಡಿಕೊಳ್ಳುತ್ತಾನೆ.

ಎಂಟು ಅವಬೋಧ (೧-೩): ಅವಬೋಧ ಎಂದರೆ ಜ್ಞಾನ. ಇದರಲ್ಲಿ ಎಂಟು ವಿಧ: ಕುಮತಿ, ಕುಶ್ರುತ, ವಿಭಂಗ, ಮತಿ, ಶ್ರುತ, ಅವಧಿ, ಮನಃ ಪರ್ಯಯ ಮತ್ತು ಕೇವಲಜ್ಞಾನ ಎಂಬ ಎಂಟು ಬಗೆಯ ಜ್ಞಾನ. ಆಚಾರಕ್ಕೆ ಸಂಬಂಧಿಸಿದಂತೆ ಇನ್ನು ಎಂಟು ವಿಧ ಹೀಗಿದೆ : ೧. ಅರ್ಥಜ್ಞಾನಾಚಾರ, ೨. ವಚನ ಜ್ಞಾನಾಚಾರ, ೩. ಅರ್ಥವ್ಯಂಜನಪೂರ್ಣ, ೪. ಕಾಲಜ್ಞಾನಚಾರ, ೫. ಉಪದಾ, ೬. ಪ್ರಶ್ರಮ, ೭. ಸ್ವಾಚರ್ಯಾದ್ಯನಪಹ್ನವ ಮತ್ತು ೮. ಬಹುಮತಿ ಜ್ಞಾನಾಚಾರ.

ಎಂಟು ಸುದರ್ಶನ (೧-೩): ಇದು ದರ್ಶನಾಚಾರಕ್ಕೆ ಸಂಬಂಧಿಸಿದೆ.

ಔದಾರಿಕ ಕಾಯ (೬೫-೫೦ ವ): ಮನುಷ್ಯ ತಿರ್ಯಂಚರ ಶರೀರ ಔದಾರಿಕ ಕಾಯ.

ಕಲ್ಯಾಣ ಪಂಚಕ (೧-೧): ತೀರ್ಥಂಕರರಿಗೆ ದೇವೇಂದ್ರಾದಿ ದೇವತೆಗಳು ಭಕ್ತಿ ಭಾವದಿಂದ ನೆರವೇರಿಸುವ ಆಯ್ದ ಕಲ್ಯಾಣಗಳು: ಗರ್ಭಾವತರಣ, ಜನ್ಮಾಭಿಷೇಕ, ಪರಿನಿಷ್ಕ್ರಮಣ, ಕೇವಲ ಜ್ಞಾನ, ನಿರ್ವಾಣ (ಪರಿನಿರ್ವಾಣ). ಈ ಶಬ್ದಗಳಿಗೆ ಕಲ್ಯಾಣ ಅಥವಾ ಉತ್ಸವ ವೆಂಬ ಶಬ್ದವನ್ನು ಸೇರಿಸಿ ಜನ್ಮಾಭಿಷೇಕೋತ್ಸವ ಅಥವಾ ಜನ್ಮಾಭಿಷೇಕ ಕಲ್ಯಾಣ ಎಂಬಂತೆ ಹೇಳುವುದೂ ಉಂಟು.

ಕಲ್ಪ (೮-೫೦): ಸೌಧರ್ಮ, ಈಶಾನ, ಸನತ್ಕುಮಾರ, ಮಾಹೇಂದ್ರ, ಬ್ರಹ್ಮ, ಬ್ರಹ್ಮೋತ್ತರ, ಲಾಂತವ, ಕಾಪಿಷ್ಠ, ಶುಕ್ರ, ಮಹಾಶುಕ್ರ, ಶತಾರ, ಸಹಸ್ರಾರ ಅನತ, ಪ್ರಾಮತ, ಆರಣ, ಅಚ್ಯುತ ಎಂಬ ೧೬ ಕಲ್ಪಗಳು. ಈ ಸ್ವರ್ಗಗಳಲ್ಲಿ ಹುಟ್ಟಿದ ದೇವತೆ ಕಲ್ಪಜ.

ಕೇವಲಿ (೧-೧೨): ಜ್ಞಾನಾವರಣಾದಿ ಘಾತಿಕರ್ಮಗಳ ನಾಶದಿಂದ ಲೋಕ-ಅಲೋಕಗಳನ್ನು ಅರಿಯುವ ಜ್ಞಾನವಂತನಾದ ಮಹಾತ್ಮ : ಪರಿಶುದ್ಧವೂ ಪರಿಪೂರ್ಣವೂ ಸರ್ವವ್ಯಾಪ್ತಿಯೂ ಆದ ಅನಂತಜ್ಞಾನವೇ ಕೇವಲಜ್ಞಾನ. ಕರ್ಮ ಬಂಧವನ್ನು ಕಳಚಿ ಬಿಸುಟ ಮುಕ್ತ ಜೀವಕ್ಕೆ ಇದು ಸಹಜ ಪ್ರಾಪ್ತ.

ಕೃಷ್ಣ ಲೇಶ್ಯಾ (೬೫-೫೦ ವ): ಆತ್ಮವು ಯಾವುದರ ಮೂಲಕ ಪುಣ್ಯಪಾಪಗಳಿಗೆ ಒಳಗಾಗುವುದೋ ಅದು ಲೇಶ್ಯ. ಕಷಾಯಗಳಲ್ಲಿ ಅನುರಕ್ತವಾದ ಆತ್ಮಯೋಗದಲ್ಲಿ ಪ್ರವೃತ್ತಿಸುವುದು. ಆತ್ಮನಲ್ಲ ಕ್ರೋಧ ಕಷಾಯ ಹುಟ್ಟಿದರೆ ಕ್ರೋಧವಶನಾದವನು ಬೇಕಾದುದನ್ನು ಮಾಡುವನು ಮತ್ತು ಅದರಿಂದ ಇತರ ಕರ್ಮಗಳ ಯೋಗ ಉಂಟಾಗುತ್ತದೆ. ಲೇಶ್ಯೆಯಲ್ಲಿ ಕೃಷ್ಣ, ನೀಲ, ಕಾಪೋತ, ಪೀತ, ಪದ್ಮ ಮತ್ತು ಶುಕ್ಲಗಳೆಂದು ಆರು ಪ್ರಕಾರಗಳಿವೆ.

ಕೂಷ್ಮಾಂಡಿಯಕ್ಷಿ (೧-೮): ೨೨ನೆಯ ತೀರ್ಥಂಕರನಾದ ನೇಮಿನಾಥಸ್ವಾಮಿಯ ಯಕ್ಷಿಯ ಹೆಸರು. ಪ್ರತಿಯೊಬ್ಬ ತೀರ್ಥಂಕರಿಗೂ ಒಬ್ಬೊಬ್ಬ ಯಕ್ಷ-ಯಕ್ಷಿಯರು ಇರುತ್ತಾರೆ.

ಕ್ಷಾಯಿಕ ಸಮ್ಯಕ್ತ್ವ (೬೫-೫೦ ವ): ಅನಂತಾನುಬಂಧಿ ಕ್ರೋಧ ಮಾನ ಮಾಯ ಮತ್ತು ಲೋಭ ಮಿಥ್ಯಾತ್ವ ಸಮ್ಯಕ್‌ಮ್ಮಿಥ್ಯಾತ್ವ ಮತ್ತು ಸಮ್ಯಕ್ ಪ್ರಕೃತಿ ಇವೇಳು ಪ್ರಕೃತಿಗಳನ್ನು ಕೇವಲಿ ಭಗವಂತನ ಅಥವಾ ಶ್ರುತ ಕೇವಲಿ ಮುನೀಂದ್ರರ ಪಾದ ಮೂಲದಲ್ಲಿಕ್ಷಯ ಮಾಡುವುದರಿಂದಗುವ ಜೀವಾದಿ ತತ್ತ್ವಾರ್ಥ ಶ್ರದ್ಧಾನರೂಪ ಪರಿಣಾಮವೇ ಕ್ಷಾಯಿಕ ಸಮ್ಯಕ್ತ್ವವು.

ಗಂಧಕುಟಿ (೪-೪೨): ಸಮವ ಸರಣದ ಮೂರನೆಯದಾದ ರತ್ನ ಪೀಠದ ಮೇಲೆ ಒಂದೊಂದು ರಮಣೀಯ ಸುಗಂಧಮಯ ಕಾಂತಿಯುಕ್ತ ಗಂಧಕುಟಿ ಇರುತ್ತದೆ. ಇದರ ನಡುವೆ ಸ್ಫಟಿಕಮಣಿ ನಿರ್ಮಿತ ರಮಣೀಯ ಸಿಂಹಾಸನಗಳಿರುತ್ತವೆ. ಈ ಸಿಂಹಾಸನದ ಮೇಲೆ ನಾಲ್ಕು ಬೆರಳಿನ ಅಂತರಾಳದಲ್ಲಿ ಅರಹಂತರು ಇರುತ್ತಾರೆ.

ಗಂಧೋದಕ (೩-೪೦): ಶ್ರೀಗಂಧ ಮತ್ತು ನೀರು ಸೇರಿಸಿದ್ದು; ತೀರ್ಥಂಕರ ಮೂರ್ತಿಗಳಿಗೆ ಗಂಧವನ್ನು ಬಳಿದು ನೀರಿನಿಂದ ಅಭಿಷೇಕಿಸಿದಾಗ ಬಂದ ಮಿಶ್ರ ಜಲ. ಇದನ್ನು ತೀರ್ಥವೆಂದು ಶ್ರಾವಕರು ತಲೆಯ ಮೇಲೆ ಸಿಂಪಡಿಸಿಕೊಳ್ಳುತ್ತಾರೆ.

ಗಣಧರ (೧-೬): ಯತಿ ಮುಂತಾದ ಹನ್ನೆರಡು ಗುಣಗಳನ್ನು ಮಿಥ್ಯಾತ್ವಾದಿಗಳಿಂದ ಬಿಡಿಸಿ ರತ್ನತ್ರಯಗಳಲ್ಲಿ ಸ್ಥಾಪನ ಮಾಡುವ ಧರ್ಮಾಚಾರ್ಯರಿವರು. ಇವರು ಸಪ್ತಧಿಯುಕ್ತರು, ತೀರ್ಥಂಕರರ ಮುಖ್ಯ ಶಿಷ್ಯರು.

ಗುರು ಪಂಚಕ (೩-೩೨): ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು ಮತ್ತು ಸರ್ವಸಾಧುಗಳು.

ಗುಣಾಷ್ಟಕ (೧-೨): ಕ್ಲಾಯಿಕ ಸಮ್ಯಕ್ತ್ವ, ಅನಂತಜ್ಞಾನ, ಅನಂತದರ್ಶನ, ಅನಂತವೀರ್ಯ, ಸೂಕ್ಷ್ಮತ್ವ, ಅವಗಾಹಿತ್ವ, ಅಗುರುಲಘುತ್ವ ಮತ್ತು ಅವ್ಯಾಭಾಧತ್ವ.

ಗೌತಮಗಣಧರ (೧-೪೯): ವರ್ತಮಾನಕಾಲದ ಅಂತಿಮ ತೀರ್ಥಂಕರರಾದ ವರ್ಧಮಾನ ಮಹಾವೀರರ ಗಣಧರರು. ಶ್ರೇಣಿಕನ ಪ್ರಶ್ನೆಗಳಿಗೆ ಉತ್ತರಿಸಿದವರು.

ಚಂದ್ರಗತಿ (೩-೪): ಜೈನ ಮುನಿಗಳು ಆಹಾರಕ್ಕೆ ಹೋಗುವಕಾಲದ ಹಿತವಾದ ನಡಿಗೆ.

ಚಂದ್ರಪ್ರಭಜಿನ (೩-೧): ಜೈನರ ಎಂಟನೆಯ ತೀರ್ಥಂಕರರು.

ಚರ್ಯಾಕಾಲ (೩-೨): ಜೈನಯತಿಗಳು ಆಹಾರಕ್ಕಾಗಿ ಹೊರಡುವ ಸಮಯ.

ಚರಿಗೆ (೩-೧೮): ಜೈನಮುನಿಗಳು ತೆಗೆದುಕೊಳ್ಳುವ ಭಿಕ್ಷೆ, ಆಹಾರ.

ಚರು (೩-೨೮): ಎಂಟು ಪೂಜಾದ್ರವ್ಯಗಳಲ್ಲೊಂದು: ಜಲ ಗಂಧ ಅಕ್ಷತೆ ಪುಷ್ಪ ಚರು ದೀಪ ಧೂಪ ಫಲ ಮತ್ತು ಅರ್ಘ್ಯ.

ಚರಮತನು (೧-೬): ಚರಮದೇಹಧಾರಿ, ಚರಮಾಂಗ : ಕೊನೆಯ ದೇಹ ಧರಿಸಿದವನು. ಆ ದೇಹ ಬಿದ್ದ ಮೇಲೆ ತಿರುಗಿ ಹುಟ್ಟದೆ ಮುಕ್ತನಾಗುವವನು.

ಚೈತ್ಯಾಲಯ (೪-೨೮): ಜಿನಮಂದಿರ, ಬಸದಿ; ಜೈನದೇವಾಲಯ.

ಚಾರಣಯುಗ (೪-ಪಲ್ಲವಿ): ಆಕಾಶದಲ್ಲಿ ನಡೆಯುವ ಜೈನ ಮುನಿಗಳಜೋಡಿ, ಚಾರಣರು ಗಚ್ಛಪರಿಗ್ರಹವಿಲ್ಲದವರು, ಸದಾಸಂಚಾರಿಗಳು, ಇವರಿಗೆ ಶಿಷ್ಯರಿಲ್ಲ, ಇವರು ದೀಕ್ಷೆ ಕೊಡುವುದಿಲ್ಲ.

ಚತುರ್ವಿಧದಾನ (೧೧-೧೧): ಆಹಾರ (ಅನ್ನ), ಅಭಯ, ಭೈಷಜ್ಯ (ಔಷಧ) ಮತ್ತು ಶಾಸ್ತ್ರದಾನ,.

ಚಕ್ರರತ್ನ (೧೧-೩೪): ಚಕ್ರವರ್ತಿಯಾಗುವ ಪುಣ್ಯವಂತನಾದ ರಾಜನ ಆಯುಧಾಗಾರದಲ್ಲಿ ಚಕ್ರರತ್ನ ಹುಟ್ಟುತ್ತದೆ. ಅದರ ಜತೆಯಲ್ಲೇ ಖಡ್ಗ, ರತ್ನ, ದಂಡರತ್ನ, ಛತ್ರ, ರತ್ನ, ಮಣಿರತ್ನ, ಚರ್ಮರತ್ನ, ಕಾಕಿಣೀರತ್ನ, ಗೃಹಪತಿ ರತ್ನ, ಸೇನಾಪತಿರತ್ನ, ಸ್ಥಪತಿರತ್ನ, ಪುರೋಹಿತರತ್ನ, ಸ್ತ್ರೀರತ್ನ, ಗಜರತ್ನ, ಅಶ್ವರತ್ನ-ಒಟ್ಟು ೧೪ ರತ್ನಗಳೂ ನವನಿಧಿಗಳೂ (ಕಾಲ, ಮಹಾಕಾಲ, ನೈಸರ್ಪ, ಪಾಂಡುಕ, ಪದ್ಮ, ಪಿಂಗಳಮಾಣವಕ, ಶಂಖ, ಸರ್ವರತ್ನ) ಚಕ್ರವರ್ತಿಗೆ ಕೈ ಸೇರುತ್ತವೆ.

ಛಾಯಾಪ್ರತುಮೆ (೧-೨): ಸಿದ್ಧ ಪರಮೇಷ್ಠಿಗಳು, ಇವರಿಗೆ ಆಕಾರವಿಲ್ಲ. ಪುನರ್ಜನ್ಮವಿಲ್ಲ ಇವರ ವರ್ಣ ಸ್ಫಟಿಕದಂತೆ ಬಿಳಿಪು.

ಜಂಬೂದ್ವೀಪ (೮-೩೨): ಭೂಲೋಕದ ಮಧ್ಯೆ ಮಂದರ ಪರ್ವತವಿದ್ದು ಅದರ ಸುತ್ತಲೂ ಜಂಬೂ, ಧಾತಕೀ, ಪುಷ್ಕರವನ, ವಾರಣೀವರ, ಕ್ಷೀರವರ, ಘೃತವರ, ನಂದೀಶ್ವರ ದ್ವೀಪಗಳಿವೆ.

ಜನ್ಮಾಭಿಷೇಕ (೪-೩೭): ತೀರ್ಥಂಕರನ ಪಂಚ ಕಲ್ಯಾಣಗಳಲ್ಲಿ ಎರಡನೆಯದು.

ಜಪ (೩-೩೧): ಧ್ಯಾನ, ಆತ್ಮವನ್ನು ಕುರಿತ ಚಿಂತನೆ; ೧೨ ವಿಧವಾದ ತಪಗಳಲ್ಲಿ ಇದು ಸೇರಿದೆ.

ಜಾತರೂಪ (೮-೪೧): ಜನನ ಕಾಲದಲ್ಲಿದ್ದ ರೂಪ, ದಿಗಂಬರತ್ವ.

ಜಿನಭವನ (೧-೫೩): ಚೈತ್ಯಾಲಯ, ಬಸದಿ.

ಜಿನಪತಿ (೩-೩೧): ಅರಿ (ರ) ಹಂತರು : ನಾಲ್ಕು ಘಾತಿ ಕರ್ಮಗಳನ್ನು ಗೆದ್ದವರು ಸಮವಸರಣದಲ್ಲಿ ದಿವ್ಯಧ್ವನಿಯ ಮೂಲಕ ಉಪದೇಶಿಸುವರು. ಇವರ ಬಣ್ಣ ಚಿಗುರು ಬಾಳೆ ಎಲೆಯ (ಎಳೆ ಹಸಿರು) ಬಣ್ಣ, ಇವರು ೪೫ ಗುಣಗಳಿಂದ ಕೂಡಿರುತ್ತಾರೆ, ೧೮ ದೋಷಗಳಿಂದ ಮುಕ್ತರಾಗಿರುತ್ತಾರೆ.

ತತ್ವಾರ್ಥ ಸೂತ್ರ (೧-೧೫): ಇದು ಉಮಾಸ್ವಾತಿಗಳ ಕೃತಿ.

ತನುವಾತ (೧-೨): ಕೊನೆಯಿಲ್ಲದೆ ಹಬ್ಬಿರುವ ಆಕಾಶದ ಮಧ್ಯದಲ್ಲಿರುವ ಘನೋವಧಿ, ಘನವಾತ, ತನುವಾತಗಳೆಂಬ ಮೂರು ಗಾಳಿಗಳಿರುತ್ತವೆ. ಈ ಗಾಳಿಗಳ ಮಧ್ಯದಲ್ಲಿ ಷಡ್ ದ್ರವ್ಯಗಳಿರುತ್ತವೆ, ಷಡ್ ದ್ರವ್ಯಗಳಿರುವ ಭಾಗವೇ ಲೋಕ,ಲ ಉಳಿದದ್ದು ಅಲೋಕ.

ತೀರ್ಥಕರ (೩-೩೦): ಯಾವುದು ಭವ್ಯರನ್ನು ಸಂಸಾರದಿಂದ ಪಾರು ಮಾಡುತ್ತದೆಯೋ ಅದು ತೀರ್ಥ (ಧರ್ಮ), ಆ ಧರ್ಮ ತೀರ್ಥವನ್ನು ಜಗತ್ತಿನಲ್ಲಿ ಮಾಡುವವರು, ಪ್ರವರ್ತಿಸುವವರು ತೀರ್ಥಂಕರರು. ತೀರ್ಥಂ ಕರೋಹಿತಿ ತೀರ್ಥಂಕರ, ಇವರಿಗೆ ಪಂಚ ಕಲ್ಯಾಣಗಳುಂಟು. ಭೂತ, ವರ್ತಮಾನ ಮತ್ತು ಭವಿಷ್ಯತ್ – ಹೀಗೇ ಮೂರೂ ಕಾಲಗಳಲ್ಲಿ ೨೪ ಜನ ತೀರ್ಥಂಕರರಿರುತ್ತಾರೆ.

ತ್ರಿಗುಪ್ತಿ (೧೦-೩೯): ಕರ್ಮವನ್ನು ತಡೆಯುವುದಕ್ಕೆ ಅಗತ್ಯವಾದ ಆಚರಣೆ ಅಥವಾ ಮನ ವಚನ ಕಾಯಗಳ ವ್ಯಾಪಾರವನ್ನು ಬಾಹ್ಯ ಪ್ರವರ್ತನಕ್ಕೆ ಬಿಡದೆ ತಡೆಯುವುದನ್ನು ಗುಪ್ತಿ ಎನ್ನುವರು. ಇವರಲ್ಲಿ ಮೂರು (ತ್ರಿ)ವಿಧ: ೧. ಮನೋಗುಪ್ತಿ, ೨. ವಚನಗುಪ್ತಿ, ೩. ಕಾಯಗುಪ್ತಿ

ನಂದೀಶ್ವರ (೯-೨೫): ಮಧ್ಯಲೋಕದ ನಡುವೆ ಇರುವ ಮೇರು ಪರ್ವತದ ಸುತ್ತ ಇರುವ ಎಂಟು ದ್ವೀಪಗಳಲ್ಲಿ ಎಂಟನೆಯದು ನಂದೀಶ್ವರ. ಆಷಾಡ ಕಾರ್ತಿಕ ಫಾಲ್ಗುಣಗಳಲ್ಲಿ ಎಂಟು ದಿನ ದೇವತೆಗಳು ಇಲ್ಲಿಗೆ ಬಂದು ಜಿನಬಿಂಬಗಳನ್ನು ಪೂಜಿಸುವ ಕಾಲ ನಂದೀಶ್ವರ.

ನಮೋಸ್ತು (೧-೨೨): ಜೈನ ಯತಿಗಳು ; ನಮೋಸ್ತುಗಳೆಂದು ಸವಣರ್ಗೆ ಪೆಸರ್ ; ನಮಸ್ಕರಿಸುವುದು.

ನಾಗಪತಿ (೧-೧): ಸರ್ಪಗಳೊಡೆಯ, ಧರಣೇಂದ್ರ ಯಕ್ಷ.

ನಿದ್ರಪ್ರಬೋಧಿನಿ (೧೬-೩೯): ಆತ್ಮನ ದರ್ಶನ ಶಕ್ತಿಯನ್ನು ಮುಚ್ಚುವ ಕರ್ಮವು ದರ್ಶನಾವರಣೀಐ ಕರ್ಮ. ಇದು ಚಕ್ಷು-ಅಚಕ್ಷು, ಅವಧಿ, ಕೇವಲ, ನಿದ್ರಾ, ನಿದ್ರಾನಿದ್ರಾ, ಪ್ರಚಲಾ, ಪ್ರಚಲಾಪ್ರಚಲಾ. ಸ್ತ್ಯಾನವೃದ್ಧಿ ಎಂದು ಒಂಭತ್ತು ವಿಧ.

ನೈಗಮಾಮರ (೨೦-೯೧): ಜೈನ ಪುರಾಣಗಳಲ್ಲಿ ಬರುವ ದೇವತೆಗಳಲ್ಲಿ ಒಬ್ಬ.

ನಿರ್ವಾಣ (೧-೪೮): ಮೋಕ್ಷ ಗಮನ.

ಪಂಚಾಗ್ನಿ (೨೯-೯೪): ವಡವಾಗ್ನಿ ಮಂದಾಗ್ನಿ ಜಠರಾಗ್ನಿ, ಶೋಕಾಗ್ನಿ, ಕಾಮಾಗ್ನಿ,

ಪಂಚಚಾರ (೧-೩): ದರ್ಶನಾಚಾರ, ಜ್ಞಾನಾಚಾರ, ಚಾರಿತ್ರಾಚಾರ, ತಪಾಚಾರ ಮತ್ತು ವೀರ್ಯಾಚಾರ.

ಪಂಚಮಹಾಕಲ್ಯಾಣ (೬೫-೫೦ ವ): ನೋಡಿ: ಕಲ್ಯಾಣ ಪಂಚಕ.

ಪದಿಮೂರು ಚಾರಿತ್ರ(೧-೩): ಇದು ಚಾರಿತ್ರಾಚಾರಕ್ಕೆ ಸಂಬಂಧಿಸಿದೆ.

ಪನ್ನೆರಡು ತಪ (೧-೩): ಅನಶನ, ಅವಮೋದರ್ಯ, ವೃತ್ತಿ ಪರಿಸಂಖ್ಯಾನ, ರಸಪರಿತ್ಯಾಗ, ವಿವಕ್ತ ಶಯ್ಯಾಸನ, ಕಾಯಕ್ಲೇಶ (ಇವು ಆರು ಬಾಹ್ಯತಪಗಳು); ಪ್ರಾಯಶ್ಚಿತ್ತ, ವಿನಯ, ವೈಯಾವೃತ್ಯ, ಸ್ವಾಧ್ಯಾಯ, ವ್ಯುತ್ಸರ್ಗ, ಧ್ಯಾನ (ಇವು ಆರು ಆಭ್ಯಂತರ ತಪಗಳು). ಈ ಎರಡು ರೀತಿಯ ತಪದಲ್ಲಿ ಪ್ರವೃತ್ತನಾಗುವುದೇ ತಪಾಚಾರ.

ಪನ್ನೊಂದಂಗ (೧-೨): ಆಚಾರಾಂಗ, ಸೂತ್ರ ಕೃತಾಂಗ ಸ್ಥಾನಾಂಗ, ಸವವಾಯಾಂಗ ವ್ಯಾಖ್ಯಾಪ್ರಜ್ಞಪ್ತಿ, ಜ್ಞಾತೃ ಧರ್ಮಕಥಾಂಗ, ಉಪಾಸಕಾಧ್ಯಯನಾಂಗ, ಅಂತಕೃದ್ದಶಾಂಗ, ಅನುತ್ತರೋಪಪಾದಿಕದಶಾಂಗ, ಪ್ರಶ್ನ ವ್ಯಾಕರಣಾಂಗ, ವಿಪಾಕ ಸೂತ್ರಾಂಗ.

ಪ್ರಥಮಾಂಗ (೧-೧೨): ಆಚಾರಾಂಗ.

ಪರಮೌದಾರಿಕ (೬೫-೫೦ ವ): ಘಾತಿಕರ್ಮ ನಾಶಮಾಗಿ, ಅರ್ಹವವಸ್ಥೆಯಲ್ಲಿರುವ ದಿವ್ಯ ಶರೀರ.

ಪಲ್ಯಂಕಾಸನ (೬೫-೫೦ ವ): ನಿಂತಿರುವುದು ಕಾಯೋತ್ಸರ್ಗವಾದರೆ ಸುಖಾಸನದಲ್ಲಿ ಕುಳಿತಿರುವುದು ಪಲ್ಯಂಕಾಸನ (ಪರ್ಯಂಕಾಸನ)

ಪುದ್ಗಲ (೬೫-೫೦ ವ): ರೂಪ ರಸ ಗಂಧ ಸ್ಪರ್ಶವುಳ್ಳ ಮೂರ್ತವೂ ಅಚೇತನವೂ ಆದ ಮೂರ್ತ ದ್ರವ್ಯಕ್ಕೆ ಪುದ್ಗಲವೆಂದು ಹೆಸರು.

ಪಲ್ಯೋಪಮಾರ್ಥ (೧೨-೯): ಆಯುಷ್ಯ ಪ್ರಮಾಣ.

ಪರ್ಣಲಘುವಿದ್ಯೆ (೧೬-೩೮): ತಪಸ್ಸಿನಿಂದ ಸಾಧಿಸುವ ಋದ್ಧಿ, ಇದರಿಂದ ಗಾಳಿಯಲ್ಲಿ ಎಲೆ ಹಾರುವಂತೆ ಹಾರಿಹೋಗಿ ಬೇಕಾದಲ್ಲಿ ಇಳಿಯಬಹುದು.

ಪರಿಗ್ರಹ (-೧೪): ಸ್ವೀಕರಿ (ಸಂಗ್ರಹಿ) ಸುವುದು ಇದರಲ್ಲಿ ಎರಡು ವಿಧ : ೧) ಬಾಹ್ಯ ಪರಿಗ್ರಹ- ಧನಧಾನ್ಯಾದಿಗಳು ೨) ಅಭ್ಯಂತರ ಪರಿಗ್ರಹ – ಕ್ರೋಧಾದಿಗಳು.

ಪರೀಷಹ (೭-೧೦): ಮೋಕ್ಷಗಾಮೀ ಜೀವಕ್ಕೊದಗುವ ತೊಂದರೆ. ಇವು ೨೨ ಇವೆ. ನೆಲೆ, ನಿಲ್ಲಲು ಮನೆಯಿಲ್ಲದ, ಮೈಮೇಲೆ ಬಟ್ಟೆಯಿಲ್ಲದ, ನೆರಳಿನಲ್ಲದ, ಸಂಗ್ರಹವಾಗಿ ಹೇಳುವುದಾದರೆ ಸಂಸಾರಿಗಿರುವ ಅನುಕೂಲಗಳಿಲ್ಲದವನಿಗೆ ಈ ೨೨ ಪರೀಷಹಗಳು ಅನಿವಾರ್ಯ. ಪರೀಷಹಗಳು-ಹಸಿವು, ಬಾಯಾರಿಕೆ, ಚಳಿ, ಬಿಸಿ, ಕ್ರಿಮಿಗಳ ಕಡಿತ, ಬೆತ್ತಲೆ ತೊಂದರೆ, ಅರತಿ ಬಾಧೆ, ಸ್ತ್ರೀಬಾಧೆ, ಓಡಾಟ ಬಾಧೆ, ಮಲಗುವಾಗಿನ ಬಾಧೆ,ದ ಬೈಗುಳು, ಕುಳಿತಾಗಿನ ತೊಂದರೆ, ಹೊಡೆತ ಭಿಕ್ಷಾ ಕಾಲದ ಬಾಧೆ, ಭಿಕ್ಷೆ ಸಿಗದಿರುವಾಗಿನ ಬಾಧೆ, ತಪೋಮಹಿಮೆ ಕಾಣದಿರುವುದು, ರೋಗ, ಮುಳ್ಳು ಕಲ್ಲುಗಳ ಬಾಧೆ, ತನ್ನ ಪ್ರಜ್ಞೆಗೆ ಅಹಂಕಾರ, ಅಜ್ಞಾನಕ್ಕಾಗಿ ಕೊರಗುವಿಕೆ, ಜ್ಞಾನಬಾಧೆ, ಪುರಸ್ಕಾರ ಸಿಗದಾಗಿನ ಬಾಧೆ.

ಪಾಂಡುಕ ಶಿಲೆ (೮-೧೭): ಮೇರು ಪರ್ವತದ ಮೇಲಿರುವ ಅರ್ಧ ಚಂದ್ರಾಕೃತಿಯ ಶಿಲೆ. ಇಲ್ಲಿ ತೀರ್ಥಂಕರರ ಜನ್ಮಾಭಿಷೇಕ ನಡೆಯುವುದು.

ಪಾರಣೆ (೧೯-೩೯): ವ್ರತೋಪವಾಸ ಮಾಡಿದ ಮರುದಿನ ಆಹಾರ ಸ್ವೀಕಾರ.

ಪ್ರಾತಿಹಾರ್ಯಾಷ್ಟಕ (೪-೪೩)ನೋಡಿ: ಅಷ್ಟಮಹಾಪ್ರಾತಿಹಾರ್ಯ.

ಪೀಠತ್ರಯ (೪-೩೦): ಸಮವಸರಣ ಮಂಟಪದ ಮಧ್ಯದಲ್ಲಿ ಒಂದರ ಮೇಲೆ ಒಂದರಂತೆ ಬರುವ ವೈಢೂರ್ಯ ಪೀಠ, ಕಾಂಚನ ಪೀಠಂ ಮತ್ತು ರತ್ನ ಪೀಠ ಎಂಬ ಮೂರು ಪೀಠಗಳು.

ಪೂರ್ವವಿದೇಹ (೬-೧): ಜಂಬೂ ದ್ವೀಪದ ಮೇರು ಪರ್ವತಕ್ಕೆ ಪೂರ್ವ ದಿಕ್ಕಿಗೆ ಇರುವ ವಿದೇಹ ಕ್ಷೇತ್ರ.

ಬಸದಿ (೨-೨೫): ಜೈನದೇವಾಲಯ, ಚೈತ್ಯಾಲಯ. ಸಂ. ವಸತಿ (ತ್ಭ) ಬಸದಿ.

ಭವ್ಯ (೧-೩): ಚೈತನ್ಯ ಜೀವವು ಸಮ್ಯಗ್ ದರ್ಶನಾದಿ ಭಾವರೂಪದಲ್ಲಿ ಪರಿಣತಿ ಹೊಂದಿ ಮೋಕ್ಷಗಾಮಿಯಾಗಲು ಅರ್ಹತೆ ಸಂಪಾದಿಸಿರುವ ಜೀವ. ಸಮ್ಯಕ್ತ್ವ ದೊರೆಯುವ ಸಂಭವ ಬೇಗ ಬರುವುದಾದರೆ ಆಸನ್ನಭವ್ಯ, ನಿಧಾನವಾಗಿ ಬರುವುದಾದರೆ ದೂರಭವ್ಯ.

ಮಹತ್ತರ ದೇವಿ (೭-೧೮): ಜೈನ ತೀರ್ಥಂಕರ ಪುರಾಣಗಳಲ್ಲಿ ಬರುವ ದೇವಿಯರು, ೧೬ ಕಲ್ಪಗಳಲ್ಲಿರುವ ಈ ದೇವಿಯರು ಆಯಾ ವಿಮಾನದಲ್ಲಿ ಹುಟ್ಟುವ ಭವ್ಯಜೀವಗಳಿಗೆ ತಿಳಿವಳಿಕೆ ಕೊಡುವರು.

ಮಹಾವ್ರತಿ (೫-೪೫):ಮುನಿ, ಜೈನ ಸನ್ಯಾಸಿ, ಗ್ರಹಸ್ಥರು ಅಣುವ್ರತಗಳನ್ನು ಸ್ವೀಕರಿಸಿದರೆ ಯತಿಗಳು ಮಹಾವ್ರತಗಳನ್ನು ಪಾಲಿಸಿ ಮಹಾವ್ರತಿಗಳಾಗುತ್ತಾರೆ. ಸಾಧುಗಳಿಗಿರುವ ೨೮ ಮೂಲ ಗುಣಗಳಲ್ಲಿ ಇವೂ ಇವೆ.

ಮಾನಸ್ತಂಭ (೨-೨೫): ಜೈನ ದೇವಾಲಯಗಳ ಮುಂದೆ ಪ್ರವೇಶದ್ವಾರದ ಹೊರಗೇ ಇರುವ ಸ್ತಂಭಕ್ಕೆ ಮಾನಸ್ತಂಭವೆಂದು ಹೆಸರು. ಸಮವಸರಣದ ನಾಲ್ಕೂ ದ್ವಾರಗಳಲ್ಲಿ ನಾಲ್ಕು ಮಾನಸ್ತಂಭಗಳಿರುತ್ತವೆ.

ಮನಃಪರ್ಯಯಜ್ಞಾನ (೬೫-೫೦ ವ): ಕರ್ಮಕ್ಷಯ ಮಾಡಿಕೊಂಡ ಜೀವಕ್ಕೆ ಪ್ರಾಪ್ತವಾಗಿರುವ ಜ್ಞಾನಗಳಲ್ಲೊಂದು. ಇತರರ ಮನಸ್ಸಿನಲ್ಲಿರುವುದನ್ನು ಇದರಿಂದ ತಿಳಿದುಕೊಳ್ಳಬಹುದು.

ಮುಕ್ಕೊಡೆ (೩-೩೦): ತೀರ್ಥಂಕರರಿಗೆ ಪ್ರಾಪ್ತವಾಗಿರುವ ಅಷ್ಟಮಹಾಪ್ರಾತಿಹಾರ್ಯಗಳಲ್ಲೊಂದು ಈ ಮುಕ್ಕೊಡೆ (ಛತ್ರತ್ರಯ).

ಮುಕ್ತಿ (೪-ಪಲ್ಲವಿ): ಘಾತಿ ಅಘಾತಿ ಕರ್ಮಗಳನ್ನು ಪೂರ್ತಿ ಕಳೆದುಕೊಂಡ ಜೀವ ಕರ್ಮ ಬಂಧನದಿಂದ ಬಿಡುಗಡೆ ಪಡೆಯುವುದೇ ಮುಕ್ತಿ, ಮೋಕ್ಷ. ಕರ್ಮಬಂಧ ಕಳಚಿದ ಮೇಲೆ ಜೀವ ಅಜೀವದಿಂದ ಪ್ರತ್ಯೇಕಗೊಂಡು ಸಹಜ ಸ್ಥಿತಿ ಪಡೆದು ಅನಂತ ಚತುಷ್ಟಯದಿಂದ ಬೆಳಗುತ್ತಾ ಸಿದ್ಧ ಶಿಲೆಯಲ್ಲಿ ನೆಲಸುತ್ತದೆ. ಈ ಮುಕ್ತಜೀವಕ್ಕೆ ಮತ್ತೆ ಸಂಸಾರದ ಬಂಧನವಿಲ್ಲ.

ಯಕ್ಷಿ (೧-೮): ಜೈನ ಪುರಾಣಗಳಲ್ಲಿ ಬರುವ ಯಕ್ಷರಿಗೂ ಜೈನೇತರ ಯಕ್ಷರಿಗೂ ವ್ಯತ್ಯಾಸಗಳಿವೆ. ಇಲ್ಲಿನ ಪ್ರತಿ ತೀರ್ಥಂಕರರಿಗೂ ಒಬ್ಬ ಯಕ್ಷ. ಒಬ್ಬ ಯಕ್ಷಿ ಇರುತ್ತಾರೆ. ೨೨ನೆಯ ತೀರ್ಥಂಕರನಾದ ನೇಮಿನಾಥನ ಯಕ್ಷ ಸರ್ವಾಹ್ಣ, ಯಕ್ಷಿ ಕೂಷ್ಮಾಂಡಿನೀದೇವಿ.

ರತ್ನತ್ರಯ (೧-೪): ಸಮ್ಯಕ್‌ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ಯ್ರ – ಇವು ಮೂರು ರತ್ನಗಳು. ಇವು ಮೋಕ್ಷದ ಮಾರ್ಗಗಳಾಗಿವೆ.

ರಜ್ಜು (೧-೧೫): ಒಂದು ಸಮಯಕ್ಕೆ ಅಸಂಖ್ಯಾತ ಯೋಜನ ದೂರದವರೆಗೆ ಹೋಗುವ ದೇವ ವಿಮಾನವು ಹಗಲಿರುಳು ಅಸಂಖ್ಯಾತಾಬ್ಜದವರೆಗೆ ಎಷ್ಟು ದೂರ ಹೋಗುತ್ತದೆಯೋ ಅಷ್ಟು ದೂರಕ್ಕೆ ಒಂದು ರಜ್ಜು ಎನ್ನುವರು.

ಲೇಶ್ಯೆ: ಇದು ಆತ್ಮನ ಮೇಲೆ ರಾಗ-ದ್ವೇಷಗಳಿಂದ ಆಗುವ ಪರಿಣಾಮ ವಿಶೇಷವನ್ನು ಬಣ್ಣಗಳ ಮೂಲಕ ತಿಳಿಸುವುದು. ಇದು ಆರು ಪ್ರಕಾರವಾಗಿದೆ: ೧. ಕೃಷ್ಣ, ೨.ನೀಲ, ೩.ಕಪೋತ, ೪. ಪೀತ, ೫. ಪದ್ಮ, ೬. ಶುಕ್ಲ, ಮೊದಲ ಮೂರು ಅಶುಭ, ಕೊನೆಯ ಮೂರು ಶುಭ.

ವಿದೇಹ (೧-೧೫): ಜಂಬೂದ್ವೀಪದ ನೀಲಪರ್ವತದ ಕ್ಷೇತ್ರ. ಮಂದರ ಪರ್ವತವಿರುವುದು ಈ ವಿದೇಹ ಕ್ಷೇತ್ರದ ನಡುವೆ.

ವಿಮಾನ (೭-೧೫): ಆಕಾಶದಲ್ಲಿ ಸಂಚರಿಸುವ ದೇವತೆಗಳ ವಾಹನ ; ದೇವತೆಗಳ ವಾಸಸ್ಥಾನ, ಸ್ವರ್ಗ.

ವಿಪುಳಗಿರಿ (೧-೪೯): ಮಗಧ ದೇಶದ ರಾಜಧಾನಿಯಾದ ರಾಜಗೃಹದ ಬಳಿಯ ಪರ್ವತ. ಮಹಾವೀರರು ಶ್ರೇಣಿಕಾದಿಗಳಿಗೆ ಉಪದೇಶಿಸಿದ್ದು ಇಲ್ಲಿಯೇ.

ವೈಕುರ್ವಣ (೧೮-೨೮): ದೇಹದ ರೂಪವನ್ನು ತನಗೆ ಬೇಕಾದ ಹಾಗೆ ಬದಲಾಯಿಸಿ ಕೊಳ್ಳುವ ಶಕ್ತಿ; ಇದು ದೇವ ನಾರಕರಿಗೆ ಮಾತ್ರ ಸಾಧ್ಯ.

ಷಡ್ದ್ರವ್ಯ (೧-೫೧): ಜೀವ, ಪುದ್ಗಲ, ಅಧರ್ಮ, ಆಕಾಶ, ಕಾಲ.

ಷೋಡಶ ಕಲೆ (೧-೪೮): ಚಂದ್ರನಿಗೆ ಸಂಬಂಧಿಸಿದಂತೆ ಹದಿನಾರು ಭಾಗಗಳ ಕಾಂತಿ.

ಶಾಂತಿಧಾರೆ (೩-೩೧): ಪೂಜಾಕಾಲದಲ್ಲಿ ಜಲ ಗಂಧ ಅಕ್ಷತೆ ಪುಷ್ಪ ಚರು ದೀಪ ಧೂಪ ಫಲ ಅರ್ಘ್ಯಗಳನ್ನು ಅರ್ಪಿಸಿದ ಮೇಲೆ ‘ಸರ್ವಲೋಕ ಶಾಂತ್ಯರ್ಥಂ ದಿವ್ಯ ಶಾಂತಿಧಾರಂ ನಿರ್ವಪಾಮಿಸ್ವಾಹಾ’ ಎಂದು ಬಿಡುವ ಉದಕಧಾರೆ.

ಶ್ರಾವಕ (೪-೧೫): ಜೈನ ಗ್ರಹಸ್ಥ

ಶ್ರಾವಿಕೆ (೬೫-೫೦): ಜೈನ ಗ್ರಹಸ್ಥೆ

ಶಿಕ್ಷಾವ್ರತ (೭-೧೦): ಶ್ರಾವಕರು ಮುನಿಜೀವನದ ಶಿಕ್ಷಣವನ್ನು ಪಡೆಯುವುದು. ಇದರಲ್ಲಿ ದೇಶಾವಕಾಶಿಕ, ಸಾಮಾಯಿಕ, ಪ್ರೋಷಧೋಪವಾಸ, ವೈಯಾವೃತ್ಯಗಳೆಂದು ನಾಲ್ಕು ವರ್ಗಗಳು.

ಶುಕ್ಲಧ್ಯಾನ (೧೦-೫೦): ಶುಚಿತ್ವ ಸಮೇತವಾದ ಅತ್ಯಂತ ನಿರ್ಮಲವಾದ ಧ್ಯಾನ. ಇದು ಸಾಕ್ಷಾತ್ತಾಗಿ ಮುಕ್ತಿಗೆ ಸಾಧನ ; ಮುಕ್ತಿ ಹೊಂದುವುದೊಂದನ್ನೇ ಚಿಂತಿಸುವುದು.

ಶುಕ್ಲ ಲೇಶ್ಯೆ (೧೦-೪೯): ಶುಕ್ಲಲೇಶ್ಯೆ ಶಂಖದಂತೆ ಶುಭ್ರವಾಗಿರುತ್ತದೆ. ನೋಡಿ : ಲೇಶ್ಯೆ.

ಶ್ರುತ ಪಂಚಮಿ (೧-೧೩): ಅರ್ಹದ್ಬಲಿ ಮುನಿಗಳಾದ ಮೇಲೆ ಮಾಘನಂದಿ ಆಚಾರ್ಯರು ಅಂಗಪೂರ್ವ ದೇಶದ ಪ್ರಕಾಶಕರಾಗಿದ್ದರು. ಆಮೇಲೆ ಬಂದವರು ಗುಜರಾತಿನ ಗಿರಿನಾರ್ ಬಳಿಯ ಚಂದ್ರಗುಹೆಯಲ್ಲಿ ನಿವಾಸ ಮಾಡಿದ ಧರಸೇನರು. ಆಚಾರ್ಯ ಧರಸೇನರು ಅಷ್ಟಾಂಗ ಮಹಾನಿಮಿತ್ತದ ಪಾರಗಾಮಿಗಳು. ಅಗ್ರಾಯಣೀ ಪೂರ್ವದ ಅಂತರ್ಗತ ಪಂಚಮ ವಸ್ತುವಿನ ಚತುರ್ಥ ಮಹಾ ಕರ್ಮ ಪ್ರಾಭೃತವನ್ನು ಧರಸೇನರು ಅರಿತಿದ್ದರು. ಮಾನವನ ಧಾರಣಾಶಕ್ತಿ ಕುಗ್ಗುತ್ತಾ ನಡೆಯುವುದರಿಂದ ಶ್ರುತಜ್ಞಾನ ಸಂರಕ್ಷಣೆಗೆ ತೊಡಗಿದರು. ವೇಣಾತಟಾಕಪುರದಲ್ಲಿದ್ದ ಮಹಿಮಾ ಶಾಲಿ ಸಾಧು ಸಂಘದಿಂದ ತೀಕ್ಷ್ಣ ಬುದ್ಧಿಶಾಲಿಗಳಾದ ಪುಷ್ಪದಂತ ಭೂತಬಲಿ ಎಂಬ ಇಬ್ಬರು ಸಾಧುಗಳನ್ನು ಕರಸಿಕೊಂಡರು. ಗುರುವಿನಯ ಜ್ಞಾನ ವಿನಯದಿಂದ ಅವರು ಸಮರ್ಥರಾಗಿರುವುದನ್ನು ಧರಸೇನರು ಅರಿತರು. ದೀರ್ಘಕಾಲದ ಅಧ್ಯಯನಾನಂತರ ಆಷಾಢ ಬಹುಳ ಏಕಾದಶಿಗೆ ಗ್ರಂಥ ವ್ಯಾಖ್ಯಾನ ಮುಗಿಯಿತು. ಧರಸೇನರ ಅಪ್ಪಣೆ ಪಡೆದು ಭೂತಬಲಿ ಪುಷ್ಪದಂತರು ದಕ್ಷಿಣದ ಕರಹಾಟಕ್ಕೆ ಬಂದರು. ಆಚಾರ್ಯ ಪುಷ್ಪದಂತರಿಗೆ ಜಿನಪಾಲಿತರು ಶಿಷ್ಯರಾದರು. ಪುಷ್ಪದಂತರು ಜೀವಸ್ಥಾನಧಿಕಾರ ರಚಿಸತೊಡಗಿ ಅದರಲ್ಲಿ ಗುಣಸ್ಥಾನ – ಜೀವ ಸಮಾಸ ಮೊದಲಾದ ೨೦ ಪ್ರರೂಪಣೆ ವರ್ಣಿಸಿ ಜಿನಪಾಲಿತರಿಂದ ಭೂತಬಲಿಗೆ ಕಳುಹಿಸಿದರು. ಭೂತಬಲಿಗಳು ಆರು ಸಾವಿರ ಶ್ಲೋಕಗಳಲ್ಲಿ ದ್ರವ್ಯರೂಪಣಾಧಿಕಾರ ರಚಿಸಿ, ಮುವ್ವತ್ತು ಸಾವಿರ ಶ್ಲೋಕಗಳಲ್ಲಿ ಮಹಾಬಂಧವೆಂಬ ಆರನೆಯ ಖಂಡ ಮುಗಿಸಿದರು. ಅದು ಲಿಪಿಬದ್ಧವಾದದ್ದು ಜ್ಯೇಷ್ಠ ಶುದ್ಧ ಪಂಚಮಿಯಂದು. ಅದುವರೆಗೆ ಕಂಠಸ್ಥರೂಪದಲ್ಲಿದ್ದ ಶ್ರುತಜ್ಞಾನ ಅಂದು ಲಿಪಿಬದ್ಧವಾದ್ದರಿಂದ ಅದನ್ನು ಭಕ್ತಿ ಶ್ರದ್ಧೆಗಳಿಂದ ಬಟ್ಟೆಯಲ್ಲಿ ಕಟ್ಟಿ ಪೂಜಿಸಿದರು. ಆ ಶುಭಮಂಗಳ ದಿನವಾದ ಜ್ಯೇಷ್ಠ ಶುಕ್ಲ ಪಂಚಮಿಯ ದಿನವನ್ನು ಶ್ರುತಪಂಚಮಿ ಎಂಬ ಹೆಸರಿನಿಂದ ಗೌರವಿಸತೊಡಗಿದರು.

ಸಂಸೃತಿ(೪-೧೪): ಸಂಸಾರ

ಸಗ್ಗ (೪-೧೭): ಸ್ವರ್ಗ, ಜೈನ ಸ್ವರ್ಗ ಜೈನೇತರ ಸ್ವರ್ಗದ ಕಲ್ಪನೆಗಿಂತ ಬೇರೆ, ಇಲ್ಲಿ ಸ್ವರ್ಗವೆಂದರೆ ಮೋಕ್ಷವಲ್ಲ.

ಸಪ್ತಭಂಗಿ (೧-೬): ವಸ್ತುನಿರೂಪಣೆಯ ಏಳು ಪ್ರಕಾರಗಳು. ಇದೇ ಸ್ಯಾದ್ವಾದ : ಸ್ಯಾದಪ್ತಿ, ಸ್ಯಾನ್ನಾಸ್ತಿ, ಸ್ಯಾದಸ್ತಿನಾಸ್ತಿ, ಸ್ಯಾದವಕ್ತವ್ಯಂ, ಸ್ಯಾದಸ್ತ್ಯವಕ್ತವ್ಯಂ, ಸ್ಯಾನ್ನಾಸ್ತ ವಕ್ತವ್ಯಂ, ಸ್ಯಾದಸ್ತಿನಾಸ್ತವಕ್ತವ್ಯಂ.

ಸಪ್ತರ್ಧಿ (೬೦-೫೦ ವ): ಏಳು ಋದ್ಧಿಗಳು;ನೋಡಿ, ಋದ್ಧಿ.

ಸಮಶ್ರುತಿ (೧-೧): ಸಮವಸರಣಕ್ಕೆ ಇರುವ ಇನ್ನೊಂದು ಹೆಸರು ; ನೋಡಿ ಸಮವಸರಣ.

A)   ಸಮವಸರಣ (೪-೧೩): ತೀರ್ಥಂಕರರಿಗೆ, ಅವರಿಗೆ ಕೇವಲ ಜ್ಞಾನ ಪ್ರಾಪ್ತಿಯಾದ ಮೇಲೆ ದೇವೇಂದ್ರನ ಅಪ್ಪಣೆಯಂತೆ ಕುಬೇರನು ರಚಿಸುವ ಸಭೆಯೇ ಸಮವಸರಣ. ಇದು ನೆಲದಿಂದ ಅಯ್ದ ಸಾವಿರ ಧನುಸ್ಸು ಎತ್ತರದಲ್ಲಿ ಹನ್ನೆರಡು ಯೋಜನ ವಿಸ್ತಾರದ ಒಂದೇ ಇಂದ್ರನೀಲ ಮಣಿಯ ಮಹಾಶಿಲೆಯಿಂದ ನಿರ್ಮಿತ. ಇದರಲ್ಲಿ ಹನ್ನೊಂದು ಭೂಮಿಗಳಿರುತ್ತವೆ. ಇದರ ನಾಲ್ಕೂ ಕಡೆ ನಾಲ್ಕು ರತ್ನಮಯ ಮಾನಸ್ತಂಭಗಳಿರುತ್ತವೆ.
ಸವಣ (೨೦-೧೮): ಜೈನ ಸನ್ಯಾಸಿ, ಶ್ರಮಣ – ಶ್ರವಣ – ಸಮಣ/ಸವಣ

ಸರ್ವಾರ್ಥಸಿದ್ಧಿ (೧೦-೪೭): ಅನುತ್ತರ ವಿಮಾನಗಳಲ್ಲ ಎಲ್ಲಕ್ಕೂ ಮೇಲಿರುವುದು ಮತ್ತು ಅತ್ಯುತ್ತಮವಾದದ್ದು.

ಸರ್ವಾಹ್ಣ ಯಕ್ಷ (೧-೯): ೨೨ನೇ ತೀರ್ಥಂಕರನಾದ ನೇಮಿನಾಥ ಯಕ್ಷ.

ಸರ್ವಸಾಧುಗಳು (೧-೫): ಪಂಚಪರಮೇಷ್ಠಿಗಳಲ್ಲಿ ಕಡೆಯವರು ; ಮುನಿದೀಕ್ಷೆಯನ್ನು ಹೊಂದಿ ರಾಗದ್ವೇಷಾದಿಗಳನ್ನು ತೊರೆದು ಜ್ಞಾನ ಧ್ಯಾನಗಳಲ್ಲಿ ಆಸಕ್ತರಾಗಿ ಸಿದ್ಧಿಯ ಸಾಧನೆಯಲ್ಲಿರುವ ಜೈನ ಮುನಿಗಳು. ಸರ್ವಸಾಧುಗಳ ಗುಣಗಳು ೨೮; ೫ ಮಹಾವ್ರತಗಳು + ೫ ಸಮಿತಿಗಳು + ಇಂದ್ರಿಯ ನಿರೋಧ + ೬ ಆವಶ್ಯಕಗಳು + ಲೋಚು, ಅಸ್ನಾನ, ಕ್ಷಿತಿಶಯನ, ಅದಂತಧಾವನ, ಸ್ಥಿತಿಭೋಜನ, ಏಕಭುಕ್ತಿ, ನಗ್ನತ್ವ.

ಸಮ್ಯಕ್ತ್ವ (೧.೧೯): ಸಮ್ಯಕ್ ದರ್ಶನ. ಸಂಸಾರದೊಳಗಿನ ದುಃಖಗಳನ್ನು ನಾಶಮಾಡಿ ಆತ್ಮಕಲ್ಯಾಣದ ಪರಮೋಚ್ಚ ಸ್ಥಿತಿಗೆ ಮುಟ್ಟಿಸುವಂಥ ಶಕ್ತಿ; ಜೈನ ತತ್ವಗಳಲ್ಲಿ ನಂಬಿಕೆಯಿಡುವುದು, ಇದರಲ್ಲಿ ಉಪಶಮ – ವೇದಕ-ಕ್ಷಾಯಿಕ ಸಮ್ಯಕ್ತ್ವಗಳೆಂದು ಮೂರು ಪ್ರಕಾರ.

ಸಮ್ಯಗ್‌ದೃಷ್ಟಿ (೧-೩೯): ಜೀವಾದಿ ಸಪ್ತ ತತ್ವಗಳಲ್ಲಿ ನಿರ್ದಿಷ್ಟ ರೀತಿಯಿಂದ ನಂಬಿಕೆ ಇಡುವುದು. ಇದನ್ನೇ ಸಮ್ಯಗ್ದರ್ಶನ, ಸಮ್ಯಕ್ತ್ವ ಎನ್ನುವರು. ರತ್ನತ್ರಯದಲ್ಲಿ ಮೊದಲನೆಯದು.

ಸಿದ್ಧರು (೧-೨): ಅಷ್ಟಕರ್ಮದಿಂದ ಮುಕ್ತರಾಗಿ, ಅಷ್ಟ ಗುಣಗಳನ್ನು ಹೊಂದಿ ಸಿದ್ಧಶಿಲೆಯಲ್ಲಿ ವಿರಾಜಮಾನರಾದ ಪರಮ ಆತ್ಮರಿವರು. ಮುಕ್ತಾತ್ಮರು.

ಸಿದ್ಧಶಿಲೆ (೬೫-೫೦ ವ): ಮನುಷ್ಯಲೋಕದ ಪ್ರಮಾಣದಷ್ಟೇ ಪ್ರಾಗ್‌ಭಾರಾ ಎಂಬ ಎಂಟನೆಯ ಭೂಮಿಯು ಈ ಲೋಕದ ತುದಿಯಲ್ಲಿದೆ. ಸರ್ವಕರ್ಮಕ್ಷಯವಾದ ಮುಕ್ತ ಸಿದ್ಧಾತ್ಮರು ಇರುವುದು ಇಲ್ಲಿಯೇ. ಇದೇ ಸಿದ್ಧಶಿಲೆ. ಇದರ ಆಕಾರ ಅರ್ಧಚಂದ್ರನಂತೆ. ಅಂದರೆ ಛತ್ರಾಕಾರ; ಬಣ್ಣ ಬಿಳಿ, ಅಗಲ ಒಂದು ರಜ್ಜು.

ಸೌಧರ್ಮ ಕಲ್ಪ (೭-೧೧): ಕಲ್ಪಗಳಲ್ಲಿನ ದೇವತೆಗಳ ವಿಮಾನದ ಹೆಸರು.

ಸ್ವಯಂಭೂರಮಣ (೧-೫೨): ಜಂಬೂದ್ವೀಪಾದಿ ಎಂಟು ದ್ವೀಪಗಳ ಸುತ್ತ ಎಂಟು ಸಮುದ್ರಗಳಿವೆ. ಇವುಗಳಲ್ಲಿ ಕಟ್ಟ ಕಡೆಯದು ಸ್ವಯಂಭೂರಮಣ ಸಮುದ್ರ.

ಹನ್ನೊಂದಂಗ (೧೦-೪೬): ನೋಡಿ : ಪನ್ನೊಂದಂಗ.

ಹದಿನಾರು ಭಾವನೆ (೧೦-೪೬): ಷೋಡಶ ಭಾವನೆ; ದರ್ಶನ ವಿಶುದ್ಧಿ, ವಿನಯ ಸಂಪನ್ನತೆ, ಶೀಲವ್ರತೇಷ್ವನತಿಚಾರ, ಅಭೀಕ್ಷ್ಣ, ಜ್ಞಾನೋಪಯೋಗ, ಸಂವೇಗ, ಶಕ್ತಿತಸ್ತ್ಯಾಗ, ಶಕ್ತಿತಸ್ತಪ, ಸಾಧು ಸಮಾಧಿ, ವೈಯಾವೃತ್ಯಕರಣ, ಅರ್ಹದ್ಭಕ್ತಿ, ಆಚಾರ್ಯ ಭಕ್ತಿ, ಬಹುಶ್ರುತ ಭಕ್ತಿ, ಪ್ರವಚನ ಭಕ್ತಿ, ಆವಶ್ಯಕಾಪಹಾರಿಣಿ, ಮಾರ್ಗಪ್ರಭಾವನೆ, ಪ್ರವಚನೆ ವತ್ಸಲತ್ವ.