ಸಂಧಿ ೧೦

ಉಳುಕು ಬಿಳ್ದುದಕಂಡು ಸಂಸೃತಿ | ಗಳುಕಿ ವೈರಾಗ್ಯದಲಿ ಜಿನ ರೂ |
ಪಳವಡಲ್ಕಹಮಿಂದ್ರನಾದನು ಸುಪ್ರತಿಷ್ಠಯತಿ || ಪಲ್ಲ ||

ಕೇಳು ಮಾಗಧ ಮಂಡಲೇಶ್ವರ | ಹೇಳುವೆನು ವರಸುಪ್ರತಿಷ್ಠ ನೃ |
ಪಾಲ ನೀ ಪರಿಯಿರುಳ ಕಳೆವನು ನಿಚ್ಚಹರುಷದಲಿ ||
ಏಳುತರುಣೋದಯದಿ ಶುಚಿತೆಯ | ಮೇಳದಲಿ ಜಿನಪೂಜೆಗೆಯಿದು ಮ |
ಹೀಲಲನೆಯನು ಮನ್ನಿಪನು ತನ್ನರಸು ಗುಣದಿಂದ || ೧ ||

ಏಳು ನೆಲೆಗಳ ಹೊನ್ನ ಮಾಡದ | ಮೇಲುನೆಲೆಯೊಳು ತೂಗುಮಂಚದ |
ಮೇಲೆಸೆವ ರಾಯಂಚೆ ದುಪ್ಪುಳತಲ್ಪದೊಳು ನೃಪತಿ ||
ಲೀಲೆಯಿಂದೊಂದು ದಿನಮೆಱಿವಿರು | ಳೋಲಗದೊಳರ್ಧಾಸನದೊಳಾ |
ಲೋಲ ಲೋಚನೆ ಸತಿಸುನಂದಾ ದೇವಿವೆರಸಿರ್ದ || ೨ ||

ಇತ್ತರದ ಸಾಲೋಲಗದೊಳಿಹ | ವೃತ್ತ ಕುಚೆಯರ ಮುಡಿಯಿನುದುರುವ |
ಕತ್ತುರಿಯ ಪುಡಿಗಳಿಗೆ ಮೈಗಂಪಿಗೆ ನರುಸುಯಿಗೆ ||
ಮುತ್ತುವಳಿಗಳ ಗಾರವಕೆ ಬೇ | ಸತ್ತು ಲೀಲಾ ಕಮಲದಿಂ ಸೋ |
ವುತ್ತೆ [ಸುಂದರ] ಪೆಂಡವಾಸದ ತಂಡವೆಸೆದಿಹುದು || ೩ ||

ಬೆರಳು ನಾಲಗೆವೊಡೆದುದೋ ಯಿಂ | ಗೊರಲು ಬೆರಳೊಂದಾದುದೋ ಯೆನೆ |
ಸರದೊಡನೆ ಶ್ರುತಿಗೂಡಿ ಕಿವಿಗಳೊಳಂಚೆದುಪ್ಪುಳನು ||
ತಿರಿಪಿದಂತಿನಿದಾಗೆ ವೀಣೆಯ | ನರಸಿಯೋರ್ವಳು ನುಡಿಸುತಿರೆಮಿಗೆ |
ಹರುಷದಿಂದ ಸುನಂದೆಯೆಱಿಯನು ಕೇಳುತಿರಲೊಡನೆ || ೪ ||

ಬಾನಿ ನಿಪಗೊತ್ರಾದಿ ತೊಳಗುವ | ಮೀನೆನಿಪ ಮೈಗಣ್ಣ ತನುವೆಂ |
ಬಾನಿಮಿರ್ದನಿಳಾದ್ರಿಯಿಡೆ ಪರಿತಂದ ವಜ್ರವೆನೆ ||
ಮಾನಿನಿಯರೆವೆ ಮುಚ್ಚೆ ನೋಡುವ | ಮಾನವರ ಕಂಣುಳ್ಕೆ ಬಿಳ್ದುದು |
ಆ ನೃಪತಿ ಬೆಂಬೀಳೆ ನಿರ್ವೇಗದಲಿ ಪೇರುಳುಕು || ೫ ||

ಅನಿತಱೊಳಗದು ಮಾಯವಾದುದು | ಮನುಜರಾಯುಂ ಶ್ರೀಯುಮೀಪಾಂ |
ಗೆನಿಪವೋಲ್ ನೃಪರತ್ನನುಲ್ಕಾಪಾತವನು ನೋಡಿ ||
ಜನವಿದೇಕೆಯೊ ಪೊಲ್ಲದೆಂಬುದು | ಮನದ ಮೋಹಧ್ವಾಂತವನು ಬೆ |
ಳ್ಳನೆ ಬೆಳಗುವಡೆ ಜೋತಿಯಾದುದದೆಂದು ತಱಿಸಂದ || ೬ ||

ತೊಟ್ಟು ಕಳಲಿದ ಹಣ್ಣು ತಿರುವಿಂ | ಬಿಟ್ಟ ಕಣೆ ನಿಟ್ಟಾಯು ಬೂದಿಯ |
ಬೊಟ್ಟು ಸಂಜೆಯಕೆಂಪು ಸರಿಸುರಚಾಪ ಮುಗಿಲೊಡ್ಡು ||
ತೊಟ್ಟ ತನುಮಾನವನ ಜವ್ವನ | ಬೆಟ್ಟದಿಂ ಬೀಳ್ವಬ್ಬಿ ಕೌಹುರ |
ನಿಷ್ಠೆಯೆಂದಿವನಚ್ಚುವವನನು ಮೆಚ್ಚುವಳೆ ಮುಕುತಿ || ೭ ||

ಮಡದಿ ಮಕ್ಕಳ ಧನಕನಕವು | ಗ್ಗಡದ ಸಿರಿಸಂಪದವು ತನ್ನನು |
ಬಿಡದೆ ಮೋಹಿಸೆ ತನ್ನದೆಂದಿರೆ ನರ್ಚುವಗೆ ತನ್ನ ||
ಒಡಲು ತನ್ನದೆ ತನ್ನದಾದೊಡೆ | ಕಡೆಯೊಳುಳಿವುದೆ ಪೆಱರ ಹಂಚಲಿ |
ಬಿಡು ವಿಚಾರಿಸೆ ತಾನೆ ತನಗಿನ್ನನ್ಯವಿಲ್ಲೆಂದ || ೮ ||

ಪದುಳವಿಲ್ಲದನಾದಿ ಸಂಸಾ | ರದೊಳಮರ್ಚಿದ ಪಾಪವಶದ |
ಗ್ಗದ ಕುಯೋನಿಗಳೊಳು ಜನಿಸೆ ಬಳೆದಳಿದು ಕರ್ಮದಲಿ ||
ಪುದುಗಿತರದಿಂದೊಮ್ಮೆದೆರಡುಮೂ | ಱೊದವಿ ನಾಲ್ಕೈದಿಂದ್ರಿಯವನುಳಿ |
ದುದಯಿಪಂದು ಸವುಜ್ಜೆ ಪಂಚೇಂದ್ರಿಯದೊಳಾತುಮನು || ೯ ||

ಉರಗ ಖಗ ಮೊಲ ಹಂದಿ ಕುಱಿ ನಾ | ಯ್ನರಿ ಬಸವ ಪೆರ್ಗತ್ತೆ ಪುಲಿ ಬಲು |
ಗರಡಿ ಕುದುರೆಗಳಂತೆ ಕರಿಹರಿ ಶರಭ ಭೇರುಂಡ ||
ವರಮತ್ಸ್ಯಾದಿಯೊಳು………..ಬೊ | ತ್ತರದ ದುಃಖವನುಂಡು ನೆರಪಿದ |
ದುರಿತದೊದವಿಂ ನರಕಕಿಳಿದೆತ್ತಾನು ಪುಣ್ಯದಲಿ || ೧೦ ||

ತಂದೆತಾಯ್ಗಳ ಶುಕ್ಲಶ್ರೋಣಿತ | ದಿಂದೆ ಪರಿಣಮಿಸಿದ್ದು ದಶದಿನ |
ದಿಂದು ಜೀವನು ಕಲಿಲವಾದವಱೊಳಗೆ ಮುಳುಗಿರುತ ||
ಮುಂದೆ ದಶದಶ ದಿವಸಕದುತರ | ದಿಂದೆ ಮಿಲಿತದಿ ಪುಟ್ಟಿಗೊಂಡುದ |
ಱಿಂದದಲಿ ಮಿಗೆ ಸಿಲುಕಿ ಸಿಡಿಮಿಡಿಗೊಳುತಿಹುದು ಜೀವ || ೧೧ ||

ತನುಪಿಸಿರವನು ಬಣ್ಣಿಸುವುಡೆರ | ಡನೆಯ ಮಾಸಕೆ ಬೊಬ್ಬುಳುಕೆ ಮೂ |
ಱನೆಯ ಮಾಸಕೆದಟ್ಟಿತದು ನಾಲ್ಕನೆಯ ತಿಂಗಳಿಗೆ ||
ಎನಲದೆಂತನಿ ಮಾಂಸವದು ವೈ | ದನೆಯ ತಿಂಗಳಿಗೈದು ಮೊಳೆಯೇ |
ನನುವರಿಯದದರಲ್ಲಿ ಸಂಸಾರಸ್ಥನಿರುತಿರ್ದ || ೧೨ ||

ತಿಂಗಳಾರನೆಯಂದು ನಖರೋ | ಮಂಗಳನು ತೊಲವಾಂತಬೀಭ |
ತ್ಸಾಂಗದೊಳು ಸಿಡಿಮಿಡಿಗೊಳುತ್ತೇಳನೆಯ ತಿಂಗಳಿಗೆ ||
ಹಿಂಗದಾ ಹೊಕ್ಕುಳಿನ ನಾಳದಿ | ನುಂಗಿರುತೆ ತಾಯುಂಡ ಲೋಳೆಯ |
ನೆಂಗಡೇನೆಂದಱಿಯದವನೆಂದಿರ್ದನೋ ಜಿನಪ || ೧೩ ||

ಚಲಿಸುತತ್ತಿತ್ತೆಂಟನೆಯ ತಿಂ | ಗಳಲಿ ಜನನಿಯ ಜಠರದಲಿ ಪಿಡಿ |
ದೆಳೆವ ಗರ್ಭಶ್ರಾವವಿಂತೊಳವಾದ ಕಂಟಕವ ||
ಕಳಿದು [ನವಮದ] ದಶಮದಾನೆಲೆ | ದಳೆದ ಮಾಸದೊಳೈದೆ ಮುಂದಾ |
ನೊಳಱುವಾ ಬಾಧೆಗಳಿನವನೇ ತರದಿ ತೊಲಗಿದನೊ || ೧೪ ||

ಕುರುಡ ಕಿವುಡರು ಮೂಕ ಹೆಳವರು | ತರದಿ ವಾಮನ ಕುಬ್ಜರೆನೆ ವ |
ಚ್ಚರಿಯ ಹೀನಾದಿಕಟದೇಹಿಗಳುರಗನೋ ತೀ……. ||
ಹರಿಯನಿಧುಮಾಂಬುವೆಂಬೀ | ಪರಿಯನೆಯಿದದೆ ಅರಮೆ ಪುಣ್ಯದಿ |
ಬೆರಸಿ ನೀರನು ತಾನೆನಿಸಿಯೊಗೆವಂದು ಸಂಸಾರಿ || ೧೫ ||

ಜನನಿಯನು ಗೋಳಿಡಿಸಿ ಹೊಟ್ಟೆಯೊ | ಳೊನೆದು ಸಂಕಟಗೊಳುತಲದೆ ಸಾ |
ವೆನಿಸಿ ಬೆಂಬೀಳ್ದಡ್ಡ ಸಿಲುಕಿ ಬಳಿಕ ಶಸ್ತ್ರಗಳ ||
ಮೊನೆಗಳಿಂ ಕೊಱಿಯಿಸಿ ಕೊಳದೆ ಮೆ | ಲ್ಲನೆ ಚದುರೆಯಾ ಸೂಲಿಗಿತಿಯಿಂ |
ಜನಿಸಿ ಮಲತಲಿರೆ ಮಿಗೆ ನೋವನು ಆ ಜೀವ || ೧೬ ||

ಬಳಿಯನಾಮಾ ಸುಜ್ಜಿ ಬರೆ ಬಂ | ದಿಳಿದ ರಕ್ತದ ಮೂತ್ರದಾ ಹೊನ |
ಲೊಳಗೆ ತೇಂಕಾಡುತಿರಲವಳ ಹೊಕ್ಕುಳಿನ ಕುಡಿಯ ||
ಬಳಿಕರಿಯೆ ನಡನಡನೆ ನಡುಗುತ | ತಳಿಯೆ ಮತ್ತಾ ಬೆಚ್ಚುನೀರ್ಗಳ |
………………………… || ೧೭ ||

ನೆಱಿದ ಪಾಪವನಱಿಪುವಂದದಿ | ಮೊಱನೊಳೊರಕಂಬೆತ್ತು ಭಯವನು |
ಮಱಿಯ ಕನ್ನಡಿಪಂತೆ ಕತ್ತಿಯ ಕಾಪುವಡೆದೊಡನೆ ||
ನೆ ಱಿ ಬೊಗರಿ ಕೆಂಪುಗಳೆನಿಪ ಪಲ | ತೆಱದ ರೋಗಂಗಳಿದ ರಮೆವುಳಿ |
ದು ಱೆ ಹಸಿದು ಬೇಳಿಡುತ ಕೊಟ್ಟುದನುಂಡನಾ ಜೀವ || ೧೮ ||

ಸುಡುಸುಡೀ ಮನುಜತೆಯನೀಪರಿ | ಪಡೆದು ನಾಲ್ದೆಱನಾದ ದುಃಖವಿ |
ಮಡಿವಿನೆಗ ಮಿಡುಕುವನು ಮಾನುಷ್ಯವನು ಪುಣ್ಯದಲಿ ||
ಪಡೆದುದಕೆ ಜಿನದೀಕ್ಷೆಗೀ ಕೆಡು | ವೊಡಲನೊಡ್ಡಿ ನಿಜಾತ್ಮ ಗುಣದೊಳು |
ತೊಡುರ್ವುದೇ ಕರಣೀಯವೆಂದಾ ನೃಪತಿ ಭಾವಿಸಿದ || ೧೯ ||

ಎಂದು ಸರ್ವ ವಿರಕ್ತಿ ಭರದಿಂ | ದಂದಿನಿರುಳೋಲಗವ ಪರೆಯಿಸಿ |
ಮಂದರಾಚಳ ಧೈರ್ಯನೊಪ್ಪು ಸುಪ್ರತಿಷ್ಠ ನೃಪಂ ||
ಬಂದು ಹಗಲಿನೊಳಿಷ್ಟ ಮಂ [ತ] ಗ | ಳಂದೊರೆಯರಾದಖಿಳ ಪುರಜನ |
ವೃಂದವನು ಪರಿವಾರವನು ಕರೆಸಿದನು ಚಾವಡಿಗೆ || ೨೦ ||

ಕವಿಗಮಕಿಗಳ ವಾದಿವಾಗ್ಮಿಗ | ಳವನಿ ಪತಿಗಳ ರಾಜಪುತ್ರರ |
ವಿವಿಧ ವಾದಕ ಗಾಯಕರ ನಾನಾ ನಿಯೋಗಿಗಳ ||
ಹವಳದುಡಿಗಳ ಗಣಿಕೆಯರನ | ಟ್ಟುವರ ನಾಗರಿಕಾದಿಗಳ ಸ |
ಬ್ಬವದ ದೂತರ ಭಟರ ಸಿರಿಯಿಂದೆಸೆದುದಾಸ್ಥಾನ || ೨೧ ||

ಇನ್ನೆವರ ನಿಮ್ಮೆಲ್ಲರನು ನಾ | ಮನ್ನಿ [ಸಿ] ದೊಡಂ ಮನ್ನಿಸದೊಡಂ |
ನನ್ನ ಲೇಸನೆ ಕೊಂಡು ನಾನೆಂದುದು ಹಸಾದೆಂದು ||
ನನ್ನಿಯನೆ ಮೆಱೆದಿರಿ ನನಗೆ ಸಾ | ಕಿನ್ನು ರಾಜ್ಯ ಶ್ರೀಯ ಮೋಹವು |
ನನ್ನನೊಲಿಸಿ ವಿರಕ್ತಿಕಾಮಿನಿಯೊಲಿದಿರುವಳೆಂದ || ೨೨ ||

ಎನಲು ಸಭೆ ಚಿತ್ರದ ಸಭೆಯವೊಲು | ಮನದ ದುಗುಡದಲಿರ್ದು ಮತ್ತೊಂ |
ದಿನಿತು ಹೊತ್ತಿನಮೇಲೆ ಪೂರ್ವದ ಸುಕೃತ ಫಲದಿಂದ ||
ಜನಪ ನಿಮ್ಮಡಿಯೊಡೆಯನೆಮಗಹ | ತನವ ಪಡೆದೆವು ನಮ್ಮ ನೆಲೆ ತೊ |
ಟ್ಟನೆ ತೊಱಿವುದಿದು ಗುಣವೆ ಜೀಯೆಂದುದು ಸಭಾಸ್ತೋಮ || ೨೩ ||

ಮುಸುಡ ದುಗುಡವ ಬಿಸುಟು ಕಂಬನಿ | ಯೊಸರ ತಡೆದಿನ್ನೊಂದು ಮಾತನು |
ಸಸಿನೆ ಲಾಲಿಸಿ ಸರ್ವರು ಶ್ರೀ ಜಿನಪದಾಬ್ಜವನು ||
ಒಸೆದು ನಂಬಿದೊಡರಸನಹತಾ | ನೊಸೆದು ನಂ[ಬ] ದೊಡರಸನಾಳಹ |
ನುಸುರದಿರಿ ಸಂಸಾರಕಂಜಿದೆವೆಂದೆನಾ ಭೂಪ || ೨೪ ||

ಸ್ವಾಮಿಹಿತವರು ನೀವು ನಿಮ್ಮಾ | ಸ್ವಾಮಿಗಾವುದು ಹಿತವು ಅದನೇ |
ನೀವು ಸಾಧಿಸಿ ಕೊಡಲೆ ಬೇಹುದು ನಿಮ್ಮ ಧರ್ಮವಿದು ||
ಭೂಮಿಗಿನ್ನು ಷಡೇತಿ ಪೊರ್ದದ | ಸೀಮೆಯಲ್ಲಿ ಸುದೃಷ್ಟಿಯಿಂದವೆ |
ನೀವೆ ನಡೆಯಿಪುದೆಂದೊಡಂಬಡಿಸಿದನು ಸರ್ವರನು || ೨೫ ||

ಮಗನೆ ಪ್ರಜೆಗಳ ತಂದೆಯಾಗಿರು | ಪಗೆಗೆ ಜವನಾಗಿರು ಜಿನಾಗಮ |
ಗಗನಕಸ್ತಮಯೋಪವರ್ಜಿದಿನಾಧಿಪತಿಯಾಗು ||
ಮಿಗೆ ನೆರಪು ವರ್ಗತ್ರಯವನೀ | ನಗಲದಧಿರಾಜ್ಯವನು ತಳೆಯೆಂ |
ದೊಗೆದು ಪಟ್ಟವಕಟ್ಟಿದಸದೃಷ್ಟಿಗೆ ಮಹೋತ್ಸವದಿ || ೨೬ ||

ಬಂದುದಾ ಪ್ರಸ್ಥಾವದಲ್ಲಿ ಸ | ಮಂದರಸ್ಥ ಜಿನನಸಮಶ್ರುತಿ |
ಯಿಂದು ಮಂಡಲವಱನ ಬೆಳುದಿಂಗಳನು ಪಸರಿಸುತ ||
ಇಂದು ನಮ್ಮಯ ನಂದನದೊಳಗೆ | ಯೆಂದು ಗುಡಿಯನು ಕಟ್ಟಿ ಕೊಂಡೈ |
ತಂದು ಬಿನ್ನೈಸಿದನು ರಾಯಗೆ ಋಷಿ ನಿವೇದಕನು || ೨೭ ||

ಸಿಂಗಮಣೆಯಿಂದಿಳಿದು ಕೈಗಳ | ಸಂಗೊಳಿಸಿ ನೊಸಲಿನೊಳಗಾದೆಸೆ |
ಗಂಗೈಸಿಯೇಳಡಿಯ ನಡೆದೆರಗಿದನು ಭಕ್ತಿಯಲಿ ||
ಅಂಗ ಚಿತ್ತವನಾತಗಿತ್ತನು | ಸಂಗೊಳಿಸಿತಾ ನೆನೆದ ಕಾರ್ಯಜ |
ನಂಗಳಱಿಯಾನಂದ ಭೇರಿಯ ಪೊಡಸಿದಾ ಕ್ಷಣವೆ || ೨೮ ||

ಪುರಜನವು ಪರಿಜನವು ಬಂದೂ | ತ್ಕರವು ರಾಣೀವಾಸ ಮುಖ್ಯರು |
ಮೆರೆದು ಬಂದುದು ವಿವಿಧ ಪೂಜಾದ್ಯವ್ಯಕರರಾಗಿ ||
ಹರುಷದಿಂ ಪೊಱವಟ್ಟು ವಾದ್ಯದ | ಭರಸದಿಂ ಪಾಠಕರ ಕಳಕಳ |
ವಿರುತಿಯಿಂ ಜಯ ಜಯ ನಿನಾದದಿನರಸನೈತಂದ || ೨೯ ||

ಜಿನಸಭಾದೂರಾಂತರದೊಳೊ | ಯ್ಯನೆ ನೃಪತಿ ವಾಹನವನಿಳಿದೊ |
ಳ್ಪೆನಿಪ ಮಣಿಸೋಪಾನ ಪದಲೇಪೌಷಧಿಯ ಬೇಗ ||
ಅನಿಬರನುಮಿಪ್ಪತ್ತು ಸಾವಿರ | ಸುನಯ ಸೋಪಾನಗಳ ನೆಗೆಯಿಸಿ |
ವಿನುತ ಮಾನಸ್ತಂಭ ವಿಧಿಯೊಳರಸನೈತಂದ || ೩೦ ||

ವಿನುತ ವರಪ್ರಸಾದ ಚೈತ್ಯಾ | ವನಿಯ ಖಾತದ ಫಲವು ವಲ್ಲೀ |
ವನದನಂದನ ಕೇತನದ ಸುರಕುಜವನದ ಸಿರಿಯ ||
ಇನಿದೆಸೆವ ಸಂಗೀತಹರ್ಮ್ಯದ | ಘನವಿಭವ ಲಕ್ಷ್ಮೀಸುಮಂಡಪ |
ದನುಪಮಿತ ಪೀಠತ್ರಯದ ಚೆಲುವೀಕ್ಷಿಸಿದನರಸ || ೩೧ ||

ಅಸಮ ವೈಭವ ಶೋಭೆಗಳನೀ | ಕ್ಷಿಸುತ ಬಂದಾ ಗಂಧಕುಟಿವೊ |
ಕ್ಕಸಮ ಬಾಣಾರಿಯನು ಮೂಱುಂ ಸೂಳು ಬಲವಂದು ||
ಬಿಸೆದು ವಿವಿಧಾರ್ಚನೆಗಳಿಂದ | ರ್ಚಿಸಿ ಸುರೂಪಸ್ತವ ಗುಣಸ್ತವ |
ಅಸಿತ ಮುಖನಾ ಮುಕುಳಿತೋಭಯ ಹಸ್ತನೊಪ್ಪಿದನು || ೩೨ ||

ಎಲೆ ಜಿನೇಶ್ವರ ನಿನ್ನ ಭಕ್ತಿಯೆ | ತೊಲಗದಿಕ್ಕೆನಗನುದಿನವು ಸಂ |
ಚಳಿಸದೆದೆಯೊಳು ತಳೆಯೇ ಹೀನಾಧಿಕರದೆಂದೆನದೆ ||
ಸಲೆ ತ್ರಿಳೋಕಕ್ಕಧಿಪರನು ಮಾ | ಳ್ಪಲಘು ಗುಣವನು ತಾಳ್ದುದಱಿಂ |
ದೊಲಿದು ನಲಿದಾ ಭಕ್ತಿಯನೆ ದಂದಿಸುವೆನಳ್ತಿಯಲಿ || ೩೩ ||

ಜಿನಪ ನಿಮ್ಮಂಘ್ರಿಗಳನಱಿವಂ | ದಿನಿಸು ಸುನ್ನಣವೆನಗೆ ದೊರಕದೆ |
ತನುವನಂತವು ಕಳಿದವತಿದುಃಕವನು ಮಾಡುತಲಿ ||
ಎನಿತು ಪುಣ್ಯವದೆಂತುಟೋ ಯಿಂ | ದನುಪಮಿತನೆ ದಯಾಳು ನಿಮ್ಮಡಿ |
ಯನೆ ವಲಂ ಕಂಣಾರೆ ಕಂಡೆನು ಧನ್ಯ ನಾನೆಂದ || ೩೪ ||

ಎಲೆ ಕೃಪಾಬ್ಧಿಯ ನಾಥನಾಗಿಯೆ | ಪಲವು ದುರ್ಮಾರ್ಗದೊಳೆ ವರ್ತಿಸಿ |
ಪಲ ತೆಱದ ದುಃಖಕ್ಕೆ ಪಕ್ಕಾನಾದೆನಿಂದರುಹ ||
ಮಲರಹಿತ ನಿನ್ನೀಸನಾಥನೆ | ಸಲೆಯೆನಿಸಿದೆನಗೊಲಿದು ನಿನ್ನ |
ಗ್ಗಲಿಪ ಸನ್ಮಾರ್ಗವನೆ ದಯೆಗೈ ಸರ್ವ ಹಿತಕರನೆ || ೩೫ ||

ಪರಮಪಾವನ ಮೂರ್ತಿಕರುಣಾ | ಕರ ಜಗತ್ಪಿತೃ ನಿಮ್ಮಡಿಗಳಾಂ |
ಪಿರಿದು ಕರ್ಮಿದುರಾತ್ಮಕೀಟಕನಾದೊಡಂ ದೇವ ||
ಪೊರೆಯಲೇ ಬೇಡಿರ್ದುದೇ ಕೆಂ | ಬಿರವನುಸುರುವೆ ಚಿತ್ತೈಸು ಪು |
ತ್ರರನಳುಂಬಮೆ ರಕ್ಷಿಸುವುದಾ ತಂದೆಗುಪಕೃತಿಯೆ || ೩೬ ||

ದೇವರಾಜನ ಪೆರ್ಮೆಖೇಚರ | ದೇವನೇಳೆಯ ವಿಭವವುರಗರ |
ದೇವನುನ್ನತ ಭೋಗ ಮನುಜೇಶ್ವರನ ಈಶ್ವರಿಯ ||
ಆವಘನವಿದ ಬೇಡದೊಡೆ ಜಿನ | ದೇವ ನಿನ್ನಾಣೆನಗೆ ನಿರಘ ತ |
ಪೋವಿಧೃತ ಸುಜ್ಞಾನ ಲಾಭವೆ ದೊರಕಲೆಂದೊರೆದ || ೩೭ ||

ಸ್ತುತಿ ಶತ ಸಹಸ್ರಂಗಳಿಂ ವಿ | ಶ್ರುತನೊಲವಿನಿಂ ಜಿನಗೆವಂದಿಸಿ |
ನುತ ಚರಿತ ಜಿನಸೇನಯತಿಪತಿ ಪದಕೆ ಬಂದೆಱಗಿ ||
ಜತಿಪ ಜಿನದೀಕ್ಷೆಯನು ಕರುಣಿಪು | ದತುಳ ಗುಣಿಯೆಂದಱಿದು ಮಿಗೆ ರಾ |
ಜಿತ ದಿಗಂಬರನಾದನೈನೂರ್ವರು ನೃಪರು ವೆರಸಿ || ೩೮ ||

ತಳೆದನೊಪ್ಪುವ ಜಾತರೂಪನು | ಸಳೆ ಮಹಾವ್ರತಮುಖ್ಯವಾದು |
ಜ್ಜಳಿಪ ಮೂಲಗುಣಂಗಳಿಂ ನೆಱಿದಾ ತ್ರಿಗುಪ್ತಿಯನು ||
ಚಳಿಸಿದಾಂತಿರುತಾ ಪ್ರಮಾದಂ | ಗಳನು ಪದಿನೈದನು ಕಳೆದು ನಿ |
ರ್ಮಲವೆನಿಪ ಸಂಯಮ ಸಮುನ್ನತನಾದನಾ ಮುನಿಪ || ೩೯ ||

ಸೋಗೆಗಳ ನರ್ತನಕೆ ನಟ್ಟುವ | ನಾಗಿ ಹಂಸೆಯ ಹಿಂಡನಳಱಿಪೊ |
ಡಾಗ ಸುರಚಾಪವನು ತೋಱುತ ಮುಗಿಲಹೊದರಿಂದ ||
ಬೌಗವಿಕ್ಕುತ ಬೌದನಿಗೆ ಶಾ | ರ್ಬೇಗದಿಂ ಬರೆ ಕಡವ ಕೇದಗೆ |
ಹೊಗಳೊಳು ಗಂಪೊಗುತ ಬಂದುದು ಪಶ್ಚಿಮಾನಿಳನು || ೪೦ ||

ಧರಣಿಗಿಂತೈ ತಂದ ಕಾರೊಳು | ಮರನ ಮೊದಲಲಿತಿರ್ದನಾಮುನಿ |
ವರನು ಮಿಂಚಿನ ತದಲಿಗೆಂಬಱ ಸಿಡಿಲ ಬಡಹಕ್ಕೆ ||
ಉರಗಗಳ ಜೊಂಪದವೊಳಿಲಿತಹ | ಭರದ ಸೋನೆಗೆ ಆಲಿಕಲುಗಳ |
ಸರಿಗೆ ಮೊಳಗಿನ ಮಳೆಗೆ ಕಲ್ಲ ಮರಾಳನಂತಿರ್ದ || ೪೧ ||

ಬೆಳುಮುಗಿಲನಡೆಗೊತ್ತಿಕಮ್ಮಂ | ಗಳವೆಗಳ ನಱುಗಂಪ ಪರಪುತ |
ನಳಿನಗಳ ಕೊರಗಿಸಿ ಮರಾಲ ವ್ರಜದ ತುಪ್ಪುಳನು ||
ಕಳೆದು ಸೋಗೆಯ ಹೀಲಿಯುದುರಿಸಿ | ಚಳಿಯ ಹೊರೆಯನು ಹೊತ್ತು ಪಡುವಣ |
ಹಳೆಯೆರಳ ಮುಱಿಯೊತ್ತಿ ಹರಿದುದು ಮೂಡಣೆಲರೆಂದು || ೪೨ ||

ಬಿಸಿಲೆ ಬೆಳುದಿಂಗಳು ದಿನೇಶನೆ | ಶಶಿಧರನ ಹಣೆಗಣ್ಣು ಕುಂಕುಮ |
ರಸ ತಿಲಕವೆನೆ ತಣ್ಣಸೇರಿದ ಮಾಗಿಯೊಳು ಮುನಿಪ ||
ಸಸಿದ ಭೂರವನೊಟ್ಟಿದಂದದಿ | ಮುಸುಕುವೈಕಿಲಿಗಡಿಗಡಿಗೆ ಬೆಂ |
ಪಿಸುವ ಸೀಕರಕಗಿಯ ದಿರ್ದನು ಬೆಳ್ಳ ವಾಸದಲಿ || ೪೩ ||

ಗಿರಿಶಿಖರ ಹೋಳಾಗಿ ರನ್ನವು | ಸುರಿಯೆ ಕಾಳ್ಗಿಚ್ಚೆತ್ತಲುಂ ಭೋ |
ರ್ಗರೆಯೆ ಮೇರುವೆ ಹಾರೆ ಕರಗಿ ಹೊಸ ಹೊನ್ನ ಹೊಳೆಹರಿಯೆ ||
ಧರೆ ಚರಾಚರ ವಸ್ತುವನು ಮಿಗೆ | ಹುರಿವ ಹಂಚೆನ ಕಾಯೆ ಜವನೆ |
ಚ್ಚುರಿ ಸರಳವೊಲು ಬಂದುದಂದು ನಿದಾಘದೊಂದೆನಲು || ೪೪ ||

ಅಂತು ಬಂದಾ ಗ್ರೀಷ್ಮದೊಳಗಾ | ಕಂತು ವಿಜಯನು ಕಾದ ಕರುವುನ |
ದಂತಿರರ್ವಿಸು ಉಪಳದೊಳು ಸೂರ್ಯಾಭಿಮುಖನಾಗಿ ||
ಶಾಂತ ರಸವ ತರಂಗಿಣಿಯೊಳ | ಳ್ದಂತೆ ತಣ್ಣನೆ ತಣಿದು ವಿಮಲ |
ಸ್ವಾಂತನಿರ್ದನು ಕಲುನೆಲೆಯನಾ ಸುಪ್ರತಿಷ್ಠ ಮುನಿ || ೪೫ ||

ಸಲೆಮುನೀಂದ್ರ ತಪಂ ತ್ರಿಕಾಲದ | ಗೆಲೆ ವಿಮಲ ಬೋಧಂ ತ್ರಿಲೋಕವ |
ಬಳಸೆ ದರುಶನವಾ ತ್ರಿದರುಶನಮುಮನದಸ್ಮರಿಸಿ ||
ಬಳಿಕನುಕ್ರಮದಿಂದ ತನ್ನೊಳು | ತಳದು ಹನ್ನೊಂದಂಗವನು ಸಂ |
ಚಳಿಸದಾ ಹದಿನಾಱು ಭಾವನೆಗಳನು ಭಾವಿಸಿದ || ೪೬ ||

ಕೊಡುವೆಡೆಲೆ ತೀರ್ಥಂಕರಪುಣ್ಯವ | ಕೊಡುವ ಜಿನಪನಗೆಂದು ಪಾಳಂ |
ಬಡುವ ತೆಱದಿಂ ಮೂಱು ತಿಂಗಳು ಸನ್ಯಸನಮಿರ್ದು ||
ಒಡಲುಳಿದು ಸರ್ವಾರ್ಥಸಿದ್ಧಿಯ | ಲಡಸಿ ನಿಂದುತ್ತರ ಜಯಂತಿಯ |
ಸಡಗರದ ಸುವಿಮಾನದೊಳಗಹಮಿಂದ್ರನಾಗಿರ್ದ || ೪೭ ||

ಧರಸಿದನು ಮೂವತ್ತಮೂರುಂ | ಶರಧಿಯುಪಮಾಯುಷ್ಯವನು ದೆಸೆ |
ಪರಿಮಳಿಸೆ ಹದಿನಾಱುವರೆ ತಿಂಗಳಿಗೆ ಸುಯಿಲಿಡುವ ||
ಸ್ಮರಿಸಿ ಮೂವತ ಮೂಱು ಸಾವಿರ | ವರುಷಕೋರ್ಮುಂಬನು ಸುಧೆಯನಂ |
ತುರು ಶರೀರವದೊಂದು ರತ್ನಿಪ್ರಮಿತನೊಪ್ಪಿದನು || ೪೮ ||

ವಿನುತ ಸುಖನಿಧಿ ನಿಷ್ಪ್ರವೀಚಾ | ರನು ಧೃತೋತ್ತಮ ಶುಕ್ಲಲೇಶ್ಯಾ |
ಮನನವಧಿ ಬೋಧಾವಗಾಹಿತ ಲೋಕನಾಳಿಕನು ||
ಅನುಪಮಿತನಕ್ಷಯಸುಖದ ಕೆಳೆ | ಯೆನಿಪ ಸುಖವನುಣುತ್ತಲಹಮಿಂ |
ದ್ರನು ಸಮಂತಿರುತಿರ್ದನೆಲೆ ಭೂಪಾಲ ಕೇಳೆಂದ || ೪೯ ||

ರತುನಮಯದುಪಪಾದ ಭವನದೊ | ಳತಿ ವಿಷದ ತನು ಸುಪ್ರತಿಷ್ಠಕ |
ಯತಿಪನಾ ಸಹಜಾತ ವಸ್ತ್ರಾಭರಣಯುತ ಜನಿಸಿ ||
ಗತನಖಾಶ್ರು ಸುರೋಮ ಕೇಶಲ | ಸಿತನು ಶುಕ್ಲ ಧ್ಯಾನನರುಹ |
ತ್ಪತಿಗೆ ಭಕ್ತಿಯಿನಲ್ಲಿಯೆ ವಂದಿಸುವನಹಮಿಂದ್ರ || ೫೦ ||

ವರ ಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತ ಮದ ಮಧು |
ಕರಲಸಿತ ಜಿನಭಕ್ತ ಕವಿ ಸಾಳ್ವವಿರಚಿತವೆನಿಪ ||
ಪರಮ ನೇಮಿಜಿನೇಂದ್ರ ಪಾವನ | ಚರಿತೆಯೊಳು ನೆಱಿದಾದಿಪರ್ವವು |
ದೊರೆವಡೆದುದಾ ದೇವದೇವನ ನುತಭವಾವಳಿಯ || ೫೧ ||

|| ಆದಿಪರ್ವದೊಳು ಸಂಧಿ ೧೧ಕ್ಕಂ ಮಂಗಳ ಮಹಾ ||