ಕನ್ನಡದ ನಾಡೆಲ್ಲ ಒಮ್ಮೆಗೇ ಬೆರಗಾಯ್ತು
ಮೈಸೂರು ಮಲ್ಲಿಗೆಯ ಕಂಪು ತೀಡಿ.
ಈ ನೆಲದ ಮಣ್ಣಿಂದ ಬಂದ ಗಂಧವಿದಲ್ಲ
ಎಂದಿತ್ತು ರಸಿಕ ಜನ ಹೊಗಳಿ ಹಾಡಿ.

ಆದರೂ ಈ ನೆಲದ ಮಣ್ಣಿನ ಗಂಧವೇ ಇದು
ಸುಳ್ಳಲ್ಲ ; ವಿಧಿ-ಕರ್ಮ-ದೈವಗಳ ಗೊಡವೆ-
ಯಿಲ್ಲದ ನಿಲುವು : ಸಂಸಾರ ಸಾರೋದಯದ
ಸಂಪತ್ತು ; ಪ್ರೀತಿಯೆ ಇದರ ವಸ್ತು-ಒಡವೆ.

ಬೆಟ್ಟದಷ್ಟಿರಬಹುದು ದುಃಖ ; ಆದರೂ
ಹುಣ್ಣಿಮೆಯ ಬೆಳಕಲ್ಲಿ ಎಲ್ಲವೂ ಮಿದುವೆ.
ಹಣ್ಣಾಗದಿದ್ದರೆ ಮನಸು ಎಲ್ಲ ತಿನಿಸೂ
ಕಹಿಯೆ. ಮುಖ್ಯವಾದದ್ದು ಒಳಗಿನ ಹದವೆ.

ಗಡಿಯಾರಗಳ ನಡುವೆ ಬೆದರಿ ನಿಲ್ಲದ ಕುದುರೆ :
ಸಾವಧಾನದ ನಡಿಗೆ ಬೆಳಕಿನೆಡೆಗೆ.
ಹರಿವ ನೀರಿನ ಹಾಗೆ, ಎದುರು ತಡೆಗಳನೆಲ್ಲ
ಮೃದುಮಾಡಿ, ಬರಡೆದೆಗೆ ಹಸಿರಿನುಡುಗೆ.