ಹೈಬ್ರಿಡ್ (ಡಿಸಿಎಚ್) ಹತ್ತಿಯನ್ನು ಅವಿಷ್ಕಾರದ ಪೂರ್ವದಲ್ಲಿ ನಮ್ಮ ಊರಿನಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೈಧರ ಹಾಗೂ ಲಕ್ಷ್ಮೀ ಎಂಬ ಹೆಸರಿನ ಹತ್ತಿಯನ್ನು ಬೆಳೆಯುತ್ತಿದ್ದೆವು. ಅದು ಹಿಂಗಾರಿ ಬೆಳೆ ಆಗಿತ್ತು. ಲಕ್ಷ್ಮೀ ಹತ್ತಿಯನ್ನು ಮಸಾರಿ (ಕೆಂಪು) ಜಮೀನಿನಲ್ಲಿ ಬೆಳೆಯುತ್ತಿದ್ದರೆ, ಜೈಧರ ಹತ್ತಿಯನ್ನು ಎರಿ (ಕಪ್ಪು) ಜಮೀನಿನಲ್ಲಿ ಬೆಳೆಯುತ್ತಿದ್ದೆವು. ಜೈಧರ ಹತ್ತಿಯನ್ನು ನಮ್ಮೂರಲ್ಲಿ ಇಡಿ ಬೆಳೆಯಾಗಿ ಬೆಳೆದ ಉದಾಹರಣೆಗಳಿಲ್ಲ. ಮುಂಗಾರಿಯಲ್ಲಿ ಶೇಂಗಾ ಬಿತ್ತಿದ ಹೊಲದಲ್ಲಿ ಶೇಂಗಾ ಕಟಾವಿಗೆ ಬರುವ ಸಮಯಕ್ಕೆ ಅಂದರೆ ಅಗಸ್ಟ ತಿಂಗಳ ಕೊನೆ ವಾರದಲ್ಲಿ ಶೇಂಗಾದ ಸಾಲಿನ ನಡುವೆ ಜೈಧರ ಹತ್ತಿ ಕಾಲನ್ನು ಕೋಣಗಳ ಸೆಗಣಿಯ ಲೇಪನ ಮಾಡಿ ನೆರಳಿನಲ್ಲಿ ಒಣಗಿಸುವದಾಗಿತ್ತು. ಬಿತ್ತಲು ಹತ್ತಿ ಕಾಳಿನಲ್ಲಿ ಬೇರ್ಪಡಿಸಲಾಗದೆ ಉಳಿದ ಅರಳೆಯ ಗುಂಜನ್ನು ಕಾಳಿಗೆ ಸುತ್ತುವ ಹಾಗೆ ಮಾಡಲು ಈ ಕ್ರಮ ಅನುಸರಿಸಲಾಗುತ್ತಿತ್ತು. ಅದೂ ಅಲ್ಲದೆ ಒಂದೊಂದು ಕಾಳು ಬಿತ್ತಲು ಪ್ರತ್ಯೇಕವಾಗಲೂ ಇದರಿಂದ ಅನುಕೂಲ ಆಗುತ್ತಿತ್ತು.

ಜೈಧರ ಹತ್ತಿ ಮಿಶ್ರ ಬೆಳೆ ಆಗಿತ್ತು. ಜೈಧರ ಹತ್ತಿ ಕಾಳಿನ ಜೊತೆಗೆ ಬಿಳಿಜೋಳ, ನವಣೆ, ಹುರಳಿ, ಅಗಸೆ ಮೊದಲಾದ ಕಾಳು ಮಿಶ್ರ ಮಾಡಿ ಬೆಳೆ ಮಾಡುತ್ತಿದ್ದೆವು. ಮುಂಗಾರಿಯಲ್ಲಿ ಬಿತ್ತಿದ ಶೇಂಗಾದ ಬಳ್ಳಿ ಕಿತ್ತುಹಾಕಿದ ನಂತರ ಹತ್ತಿಯಲ್ಲಿ ಮಧ್ಯಂತರ ಬೇಸಾಯ (ಎಡೆಕುಂಟಿ ಹೊಡೆಯುವದು)  ಮಾಡಲಾಗುತ್ತಿತ್ತು. ಜೈಧರ ಹತ್ತಿ ತಂಪು ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತಿತ್ತು. ರೋಗ-ಕೀಟಗಳ ಬಾಧೆ ಇರುತ್ತಿರಲಿಲ್ಲ. ಪಡುವಣ ದಿಕ್ಕಿನ ಗಾಳಿ ಬೀಸಿದಷ್ಟು ಈ ಹತ್ತಿ ಹೆಚ್ಚು ಹೂವು, ಕಾಯಿ ಬಿಡುತ್ತಿತ್ತು. ಇಳುವರಿಯೂ ಹೆಚ್ಚಾಗುತ್ತಿತ್ತು. ಕಳೆ-ಕಸಗಳು ಮಧ್ಯಂತರ ಬೇಸಾಯದಿಂದಲೇ ನಿಯಂತ್ರಣವಾಗುತ್ತಿದ್ದವು. ಏನಿಲ್ಲೆಂದರೂ ಎಕರೆಗೆ ಒಂದೆರಡು ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಕಳೆ-ಕಸಗಳು ಮಧ್ಯಂತರ ಬೇಸಾಯದಿಂದಲೇ ನಿಯಂತ್ರಣವಾಗುತ್ತಿದ್ದವು. ಏನಿಲ್ಲೆಮದರೂ ಎಕರೆಗೆ ಒಂದೆರಡು ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಹುರುಳಿ, ನವಣೆ, ಜೋಳದ ಬೆಳೆಗಳು, ಕಾಳು ಮತ್ತು ಮೇವು ಒದಗಿಸುತ್ತಿದ್ದವು. ಹತ್ತಿಯನ್ನು ಬಿಡಿಸಲು ಹಿಂಗಾರಿ ವಾತಾವರಣವೂ ಅನುಕೂಲಕರ ಆಗಿತ್ತು. ಮಳೆಗಾಲ ಇಲ್ಲದ್ದರಿಂದ ಹತ್ತಿ ಮಣ್ಣು-ರಾಡಿ ಆಗುತ್ತರಲಿಲ್ಲ.

ಡಿ.ಸಿ.ಎಚ್ ಬಂದ ಕೂಡಲೇ ಜೈಧರ ಹಾಗೂ ಲಕ್ಷ್ಮೀ ಹತ್ತಿ ಕಣ್ಮರೆ ಆದವು. ಡಿಸಿಎಚ್ ಒಂದೇ ಬೆಳೆ ಮಾಡತೊಡಗಿದೆವು. ರಾಸಾಯನಿಕ ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರ ಅನಿವಾರ್ಯ ಆಗಿತ್ತು. ಮೊದಲೆರಡು ಮೂರು ವರ್ಷಗಳ ತನಕ ಹತ್ತಿಯ ಇಳುವರಿ ಚೆನ್ನಾಗಿ ಬಂತು. ಆದರೆ ದರ ಕುಸಿತವಾಗಿ “ಹತ್ತಿ ಬಿತ್ತಿ ಹಾಳಾಗಿ ಹ್ವಾದರು” ಎಂಬ ಗಾದೆ ನೆನಪಾಗುತ್ತಿತ್ತು. ಹೀಲಿಯೋಥಿನ್ ಕೀಟ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳನ್ನು ಅದರಲ್ಲೂ ಪೆರಿಥ್ರಾಯಿಡ್ ಕೀಟನಾಶಕಗಳನ್ನು ಎಂಟ್ಹತ್ತು ಸಲ ಸಿಂಪರಣೆ ಮಾಡಬೇಕಾಯಿತು. ರಾಸಾಯನಿಕ ಕೀಟನಾಶಕ ಸಿಂಪರಣೆ ಹೆಚ್ಚಿದ ಹಾಗೆ ಕೀಟದ ಹಾವಳಿ ಹೆಚ್ಚಾಯಿತು. ಡಿ.ಸಿ.ಹೆಚ್ ಹತ್ತಿಗೆ ಮೇಲುಗೊಬ್ಬರ ಎಂದು ಯೂರಿಯಾ ಎರಡು ಸಲ ಹಾಕಬೇಕಿತ್ತು. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಯಿತು. ಇಳುವರಿ ಕುಸಿತವಾಗಿ, ಬೆಲೆ ಕುಸಿತವಾಗಿ ರೈತರು ಕಂಗಾಲಾದರು. ಕೀಟಗಳು ಯಾವ ಕೀಟನಾಶಕಕ್ಕೂ ಸಾಯಲಾರದ ಸ್ಥಿತೆಗೆ ತಲುಪಿದವು. ಬಿಟಿ ಹತ್ತಿಯ ಆವಿಷ್ಕಾರದಿಂದ ಕೀಟಹತೋಟಿ ಸಾಧ್ಯ ಎಂಬ ನೆಪ ಮಾಡಲಾಯಿತು. ಅದರಿಂದ ದೊಡ್ಡ ದುರಂತವೇ ಆಗಿದ್ದು ಒಂದು ಕತೆಯಾಗಿದೆ.

೨೦೧೧ರ ಮುಂಗಾರಿಯಲ್ಲಿ ಬಿತ್ತಿದ ಹತ್ತಿ ಅಕ್ಟೋಬರ ನವೆಂಬರ ತಿಂಗಳಿನಲ್ಲಿ ಕಟಾವಿಗೆ ಬಂದಿತ್ತು. ಬಿಟಿ, ಡಬಲ್ ಬಿಡಿ, ಗಂಡ ಹತ್ತಿ, ಡಿಸಿಎಚ್ ಹೀಗೆ ಹಲವಾರು ತಳಿಗಳನ್ನು ರೈತರು ಬೆಳೆದಿದ್ದರು. ಬೈಲಹೊಂಗಲ ಹಾಗೂ ಧಾರವಾಡ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳೆದ ಈ ಹತ್ತಿ ಒಂದು ಪವಾಡ ಮಾಡಿತ್ತು. ಬಿಟಿ ಹತ್ತಿಯ ಹೊಲಗಳು ಹತ್ತಿ ಬಿಡಿಸಿದ ಕೂಡಲೇ ಒಣಗಿಹೋದವು. ಅವರು ಹತ್ತಿ ಕಟಗಿ ಕಿತ್ತು ಗಳೆ ಹೊಡೆದರು. ಆದರೆ ಬಹಳಷ್ಟು ಹತ್ತಿ ಹೂವು ಕಾಯಿ ಬಿಟ್ಟು, ಮತ್ತೊಮ್ಮೆ ಹತ್ತಿಯ ಹೊಲ ಸುಣ್ಣ ಸಿಂಪಡಿಸಿದ ಹಾಗೆ ಅರಳಿ ನಿಂತಿತು. ಕೆರೆಗೆ ಎರಡರಿಂದ ಐದು ಕ್ವಿಂಟಾಲ್‌ವರೆಗೆ ಇಳುವರಿಯೂ ಬಂದಿದೆ. ಇದೊಂದು ಚಮತ್ಕಾರವೇ ಸರಿ. ಯಾವುದೇ ರಸಗೊಬ್ಬರ ಹಾಗೂ ಬೆಳೆ ಪ್ರಚೋದಕಗಳ ಬಳಕೆ ಮಾಡಿಲ್ಲ. ಬಹಳ ಎಂದರೆ ಹತ್ತಿ ಸಾಲಿನ ನಡುವೆ ಹರಗುವದರ ಮೂಲಕ ಎರಕಲು ಬೀಡುಗಳನ್ನು ಮುಚ್ಚಲಾಗಿದೆ. ಯಾವ ಖರ್ಚೂ ಇಲ್ಲದೆ ಬೋನಸ್ ರೂಪದಲ್ಲಿ ಬೆಳೆದದ್ದು ಸಾವಯವಕ್ಕೆ ಸಾಕ್ಷಿಯಾಗಿದೆ.