ತುಮಕೂರಿನಿಂದ ೮೫ ಕಿ.ಮೀ. ಮತ್ತು ತಿಪಟೂರಿನಿಂದ ೧೦ ಕಿ.ಮೀ. ದೂರದಲ್ಲಿರುವ ವಿ.ಮಲ್ಲೇನಹಳ್ಳಿ ೯೦ ಕುಟುಂಬಗಳ ಗ್ರಾಮ. ತುಮಕೂರು-ಚನ್ನರಾಯಪಟ್ಟಣ ರಸ್ತೆಯಲ್ಲಿದೆ.  ಬೇಸಾಯ ಮತ್ತು ಕೂಲಿ ಮುಖ್ಯ ಕಸುಬಾದರೆ ಹಸು, ಎಮ್ಮೆ ಮತ್ತು ಕುರಿ ಸಾಕಾಣಿಕೆ ಉಪಕಸುಬುಗಳು. ರಾಗಿ, ಭತ್ತ, ತೆಂಗು, ಅಡಿಕೆ, ಬಾಳೆ, ಹಲಸು, ಮಾವು ಮುಖ್ಯ ಬೆಳೆಗಳು. ಹೂವಿನ ಕೃಷಿಯೂ ಸಹ ಪ್ರಚಲಿತವಿದೆ. ಪ್ರಸಿದ್ಧ ಧಾರ್ಮಿಕ ಸ್ಥಳವಾದ ಕೆರೆಗೋಡಿ-ರಂಗಾಪುರ ಮಠವು ಈ ಗ್ರ್ರಾಮದಿಂದ ಕೇವಲ ೩ ಕಿ.ಮೀ.ದೂರದಲ್ಲಿದೆ. ಈ ಗ್ರಾಮಕ್ಕೆ ಹಿಂದೆ ಒಡೆಯರ ಮಲ್ಲೇನಹಳ್ಳಿ ಎಂಬ ಹೆಸರಿತ್ತು, ಕ್ರಮೇಣ ಆಡುಭಾಷೆಯಲ್ಲಿ ವಡ್ಡರ ಮಲ್ಲೇನಹಳ್ಳಿಯಾಗಿ ಪರಿವರ್ತನೆಯಾಗಿದೆ.

ಮಾರ್ಚಿ ೨೦೦೭ ರಿಂದ ಸಾವಯವಗ್ರಾಮ ಯೋಜನೆ ಗ್ರಾಮದಲ್ಲಿ ಆರಂಭವಾಯಿತು. ರಾಸಾಯನಿಕ ಕೃಷಿಯ ಬಗ್ಗೆ ಅಷ್ಟೊತ್ತಿಗಾಗಲೇ ಬೇಸತ್ತಿದ್ದ ರೈತಾಪಿಗಳು ಈ ಯೋಜನೆಗೆ ಯಾವುದೇ ವಿರೋಧ ವ್ಯಕ್ತಪಡಿಸದೆ ಸ್ವಾಗತಿಸಿದರು. ಯೋಜನೆ ಪ್ರಾರಂಭಕ್ಕೆ ಕೆಲವು ತಿಂಗಳ ಮುಂಚೆ ಹತ್ತಿರದ ಕೆರೆಗೋಡಿ ರಂಗಾಪುರದಲ್ಲಿ ೩ ದಿವಸಗಳ ಕಾಲ ಸುಭಾಷ್ ಪಾಳೇಕರ್‌ರವರ ನೈಸರ್ಗಿಕ  ಕೃಷಿ ತರಬೇತಿ ನಡೆದು ಅದರಿಂದ ಕೆಲವು ಗ್ರಾಮಸರು ಆಕರ್ಷಿತರಾಗಿದ್ದರು. ಹಾಗಾಗಿ ಅವರಿಗೆ ಸಾವಯವ ಕೃಷಿಯ ಬಗ್ಗೆ ಅಲ್ಪ-ಸ್ವಲ್ಪ ಅರಿವಿತ್ತು.

ಪ್ರಾರಂಭಿಕ ಹಂತದಲ್ಲಿ ಹಲವಾರು ತರಬೇತಿ ಮತ್ತು ಅಧ್ಯಯನ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಸಾವಯವ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿರುವ ಮಾರಗೊಂಡನಹಳ್ಳಿಯ ಸದಾಶಿವಯ್ಯ, ವಿಠಲಾಪುರದ ವೀರಣ್ಣ, ಶಿವಮೊಗ್ಗದ ಪ್ರಫುಲ್ಲಚಂದ್ರ, ಹುಲ್ಲೆಕೆರೆ ಸಮುದಾಯ ನಾಟಿ ಬೀಜಬ್ಯಾಂಕ್,  ಚೇರ್ಕಾಡಿ ರಾಮಚಂದ್ರರಾಯರು… ಹೀಗೆ ಹಲವರ ತೋಟಗಳಿಗೆ ಭೇಟಿ ಅವರಿಂದ ಸಾಕಷ್ಟು ಮಾಹಿತಿ ಹಾಗೂ ಆತ್ಮವಿಶ್ವಾಸವನ್ನು ಪಡೆಯಲಾಯಿತು.

ಊರಿನಾದ್ಯಂತ ಸಾವಯವ ಕೃಷಿ ಉದ್ದೇಶಗಳಿಗೆ ಸಂಬಂಧಿಸಿದ ಗೋಡೆ ಬರಹಗಳನ್ನು ಚಿತ್ರ ಸಮೇತ ಬರೆಸಲಾಗಿದೆ. ಕಾಂಪೋಸ್ಟ್ ತಯಾರಿಕೆ, ಎರೆಗೊಬ್ಬರದ ಮಹತ್ವ, ನಾಟಿ ಬೀಜಗಳ ಬಗ್ಗೆ, ಗಂಜಲದ ಗುಟ್ಟು ಹೀಗೆ ಎಲ್ಲಿ ನೋಡಿದರೂ ಸಾವಯವಕ್ಕೆ ಸಂಬಂಧಿಸಿದ ಮಾಹಿತಿ ಬರೆಯಲಾಗಿದೆ. ಚಿತ್ರಗಳಿರುವುದರಿಂದ ಎಂತಹವರಿಗೂ ಸಹ ಇವು ಅರ್ಥವಾಗುವಂತಿವೆ. ಇದು ಊರಿನಲ್ಲಿ ಉತ್ತಮವಾದ ಸಾವಯವ ವಾತಾವರಣ ಬೆಳೆಯಲು ಸಹಕಾರಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮಕ್ಕಳು ಸಹ ಇವುಗಳನ್ನು ಓದುವುದರಿಂದ ಅವರ ಮನಸ್ಸಿನ ಮೇಲೆ ಖಂಡಿತ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ಸಾವಯವ ಕೃಷಿಗೆ ಎರೆಹುಳು ಗೊಬ್ಬರವೇ ಅಡಿಗಲ್ಲು. ಕಡಿಮೆ ಅವಧಿಯಲ್ಲಿ ಉತ್ಪಾದಿಸಬಹುದಾದ ಎರೆಗೊಬ್ಬರವು ಬೇಗ ಫಲಿತಾಂಶವನ್ನೂ ಸಹ ನೀಡಬಲ್ಲದು. ಹಾಗಾಗಿ ಅದಕ್ಕೆ ಹೆಚ್ಚು ಒತ್ತು ನೀಡಿದ್ದು ಪ್ರಸ್ತುತ ೪೮ ಎರೆಹುಳು ತೊಟ್ಟಿ ನಿರ್ಮಾಣವಾಗಿದೆ. ಬಹುತೇಕ ತೊಟ್ಟಿಗಳಲ್ಲಿ ಗೊಬ್ಬರ ಉತ್ಪಾದನೆ ಪ್ರಾರಂಭವಾಗಿದೆ. ಹಲವಾರು ರೈತರು ಕ್ವಿಂಟಾಲ್‌ಗಟ್ಟಲೆ ಗೊಬ್ಬರ ತೆಗೆದು ಬಳಸುತ್ತಿದ್ದಾರೆ. ಗ್ರಾಮದ ಕಾಂತಮ್ಮನವರಿಗೆ ಎರೆಹುಳು ಗೊಬ್ಬರ ಮಾಡುವುದರಲ್ಲಿ ಅತ್ಯುತ್ಸಾಹ. ಮನೆಯ ಪಕ್ಕದಲ್ಲೇ ತೊಟ್ಟಿ ಇದ್ದು ಈಗಾಗಲೇ ಹಲವು ಸಲ ಗೊಬ್ಬರ ತೆಗೆದು ಬಳಸುತ್ತಿದ್ದಾರೆ. ಸಪೋಟ, ಬಾಳೆ ಮುಂತಾದವು ಎರೆಗೊಬ್ಬರ ಹಾಕಿದ್ದರಿಂದ ಹುಲುಸಾಗಿ ಬೆಳೆದಿವೆ ಎನ್ನುತ್ತಾರೆ ಇವರು. ಈ ಸಲದ ಮುಂಗಾರಿನಲ್ಲಿ ಉದ್ದಿನ ಬೆಳೆ ಇಟ್ಟಿದ್ದು ಕೇವಲ ಎರೆಗೊಬ್ಬರವನ್ನು ಮಾತ್ರ ಕೊಟ್ಟಿದ್ದಾರೆ. ಬೆಳೆ ಉತ್ತಮವಾಗಿದೆ.

ಮತ್ತೊಬ್ಬ ರೈತ ಶಂಭುಲಿಂಗಯ್ಯನವರು ತಮ್ಮ ಬಾಳೆ ತೋಟಕ್ಕೆ ಅಲಸಂದೆ (ತರಗುಣಿ) ಯನ್ನು ಎರೆಗೊಬ್ಬರದೊಂದಿಗೆ ಮಿಶ್ರಮಾಡಿ ಬಿತ್ತಿದ್ದು ಅತ್ಯಂತ ಹುಲುಸಾಗಿ ಬೆಳೆದಿದೆ. ಬಾಳೆ, ತರಗುಣಿ ಎರಡೂ ಸಹ ಹಚ್ಚ ಹಸುರಾಗಿ  ಬೆಳೆದಿವೆ. ದಾರಿಯ ಪಕ್ಕದಲ್ಲೇ ಈ ತೋಟವಿರುವುದರಿಂದ ಎಲ್ಲರೂ ಇದನ್ನು ನೋಡಿ ಎರೆಗೊಬ್ಬರಕ್ಕೆ ಎಂತಹ ಶಕ್ತಿ ಇದೆ ಎಂದುಕೊಳ್ಳುತ್ತಿದ್ದಾರಲ್ಲದೆ ಅವರೂ ಸಹ ಎರೆಗೊಬ್ಬರ ಬಳಸಲು ಮನಸ್ಸು ಮಾಡುತ್ತಿದ್ದಾರೆ. ತಮ್ಮ ತೋಟಕ್ಕೆ ಎರೆಗೊಬ್ಬರ ಹಾಕಿ ಉತ್ತಮ ಫಲಿತಾಂಶ ಕಂಡಿರುವ ಪ್ರಗತಿಪರ ರೈತ ಮಲ್ಲಿಕಾರ್ಜುನಯ್ಯ             ರಸಗೊಬ್ಬರ ಅಭಾವದಿಂದ ಆತ್ಮಹತ್ಯೆ ಮಾಡಿಕೊಳ್ಳುವವರು ಎರೆಗೊಬ್ಬರ ಬಳಸಲು ಮುಂದಾದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಫಲಿತಾಂಶ ಕಾಣಬಹುದು ಎನ್ನುತ್ತಾರೆ. ಉಳಿದೆಲ್ಲಾ ಸದಸ್ಯರೂ ಸಹ ಇವರ ಮಾತು ನೂರಕ್ಕೆ ನೂರು ಸತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಎರೆಗೊಬ್ಬರ ತೊಟ್ಟಿಗಳಲ್ಲದೆ ೨೫ ಕ್ಕೂ ಅಧಿಕ ಕಾಂಪೋಸ್ಟ್ ಗುಂಡಿಗಳ ನಿರ್ಮಾಣವಾಗಿದೆ. ಮುಂಚೆ ವೃಥಾ ಬಿಸಾಡುತ್ತಿದ್ದ ಇಲ್ಲವೇ ಸುಡುತ್ತಿದ್ದ ಸಾವಯವ ತ್ಯಾಜ್ಯಗಳನ್ನು ಕಾಂಪೋಸ್ಟ್ ಗುಂಡಿಗೆ ಹಾಕುವ ಮೂಲಕ ಅದನ್ನು ಗೊಬ್ಬರವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ.

ಗ್ರಾಮದ ಹೆಚ್ಚಿನವರ ಕೊಟ್ಟಿಗೆಗಳಲ್ಲ್ಲಿ ಗಂಜಲ ಶೇಖರಿಸುವ ವ್ಯವಸ್ತೆ ಇರಲಿಲ್ಲ. ಸಾವಯವ ಕೃಷಿಗೆ ಗಂಜಲ ಅತ್ಯಗತ್ಯವಾಗಿ ಬೇಕಾಗಿರುವುದರಿಂದ ಗಂಜಲ ಶೇಖರಣೆಗೆ ಗುಂಡಿ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ೨೦ ಜನರು ಈಗಾಗಲೇ ಇದರ ಪ್ರಯೋಜನ ಪಡೆದಿದ್ದಾರೆ.  ೨ ಅಡಿ ಅಗಲ, ಉದ್ದ ಮತ್ತು ಆಳದ ಗುಂಡಿಗಳನ್ನು ಕೊಟ್ಟಿಗೆಗೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗಿದೆ. ಎರಡು-ಮೂರು ದಿನಗಳಿಗೊಮ್ಮೆ ಗಂಜಲವನ್ನು ತೆಗೆದು ಅಡಿಕೆ, ತೆಂಗು, ಬಾಳೆ ಗಿಡದ ಬುಡಕ್ಕೆ ನೇರವಾಗಿ ಕೆಲವರು ಹಾಕುತ್ತಿದ್ದಾರೆ, ಇನ್ನು ಕೆಲವರು ತಿಪ್ಪೆಗೆ ಹಾಕುತ್ತಿದ್ದಾರೆ.

ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು

ಸಾವಯವ ಕೃಷಿಗೆ ಅತ್ಯಂತ ಮೂಲಭೂತ ಅಂಶ ಮಣ್ಣು-ನೀರಿನ ಸಂರಕ್ಷಣೆ. ದಶಕಗಳಿಂದ ರಾಸಾಯನಿಕಗಳನ್ನು ಬಳಸಿ ಬರಡಾಗಿರುವ ಮಣ್ಣನ್ನು ಹದ ಮಾಡಲು ಮೊದಲು ಆಗಬೇಕಾದ ಕೆಲಸ ಇದು. ಇದುವರೆಗೆ ೪ ಜನ ರೈತರು ಕೃಷಿ ಹೊಂಡ ಮಾಡಿಕೊಂಡಿದ್ದಾರೆ. ಅವರಲ್ಲಿ ಮಲ್ಲಿಕಾರ್ಜುನಯ್ಯನವರು ತಾವೂ ಸಹ ಸ್ವಲ್ಪ ಹಣ ಹಾಕಿ ೧೦೦ ಅಡಿ ಉದ್ದ, ೪೦ ಅಡಿ ಅಗಲ ಮತ್ತು ೧೦ ಅಡಿ ಆಳದ ವಿಶಾಲ ಕೃಷಿ ಹೊಂಡವನ್ನು ಮಾಡಿಕೊಂಡಿದ್ದು ಹೆಚ್ಚು ನೀರು ನಿಲ್ಲಲು ಅನುಕೂಲವಾಗಿದೆ. ಇವರು ತಮ್ಮ ತೆಂಗಿನ ತೋಟದಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಹಾಕಿ ಅದರ ದಡದ ಮೇಲೆ ಹರಳು ಬೆಳೆಸಿದ್ದಾರೆ ಹಾಗೂ ಟ್ರಂಚ್‌ಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಹಾಕಿ ಗೊಬ್ಬರ ಮಾಡುತ್ತಿದ್ದಾರೆ. ಇವರ ತೋಟದಲ್ಲಿ ವರ್ಷಪೂರ್ತಿ ಹಣ್ಣು ಬಿಡುವ ವಿಶೇಷ ಗುಣವುಳ್ಳ ಹಲಸಿನ ಮರವಿದೆ.

ಇವರಲ್ಲದೆ ಇನ್ನೂ ೧೭ ರೈತರು ತಮ್ಮ-ತಮ್ಮ ತೋಟಗಳಲ್ಲಿ ಟ್ರಂಚ್‌ಗಳನ್ನು ವ್ಯವಸ್ತಿತವಾಗಿ ಹಾಕಿಕೊಂಡಿದ್ದಾರೆ. ಇದರಿಂದ ಬಿದ್ದ ಮಳೆ ನೀರು ವೇಗವಾಗಿ ಹರಿದು ಹೋಗದೆ ಅಲ್ಲಿಯೇ ಇಂಗುತ್ತದೆ. ಮಣ್ಣಿನ ಸವಕಳಿಯೂ ತಪ್ಪಿದಂತಾಗಿದೆ ಎಂಬುದು ರೈತರ ಅನಿಸಿಕೆ. ಇನ್ನೂ ಹೆಚ್ಚಿನ ರೈತರಿಗೆ ಇದನ್ನು ಹಾಕಿಕೊಳ್ಳಲು ಅವಕಾಶ ಕಲ್ಪಿಸಬೇಕೆಂಬುದು ಇವರ ಅಭಿಪ್ರಾಯ. ಮುಂಚೆ ರೈತರು ತಮ್ಮ-ತಮ್ಮ ಹೊಲಗಳಲ್ಲಿನ ಕಸ-ಕಡ್ಡಿ, ಗರಿ, ಸೋಗೆ ಮುಂತಾದವನ್ನು ಹೊಲದಲ್ಲಿ ಗುಡ್ಡೆ ಹಾಕಿ ಸುಡುತ್ತಿದ್ದರು. ಆದರೆ ಈಗ ಹಾಗೆ ಮಾಡದೆ ಗೊಬ್ಬರದ ಗುಂಡಿಗೆ ಹಾಕುತ್ತಾರೆ ಮತ್ತು ತೋಟಗಳಲ್ಲಿ ಗಿಡಗಳ ಬುಡಕ್ಕೆ ಮುಚ್ಚಿಗೆಯಾಗಿ ಬಳಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಆರ್ಡರ್ ಸಂಸ್ಥೆಯ ನಿರ್ದೇಶಕರಾದ ಜಿ.ವಿ.ರಘುರವರ ಪ್ರಕಾರ ವಿ.ಮಲ್ಲೇನಹಳ್ಳಿಯಲ್ಲಿ ಮನೆಯ ಮುಂದೆ ಕೈತೋಟ ಬೆಳೆಸುವ ಸಂಸ್ಸೃತಿ ಉತ್ತಮವಾಗಿದೆ. ಯಾರ ಮನೆಯ ಮುಂದೆ ನೋಡಲಿ ಸೀತಾಫಲ, ರಾಮಫಲ, ಪರಂಗಿ, ಬಹುವಾರ್ಷಿಕ ಬದನೆ, ಬಾಳೆ, ತರಹಾವರಿ ಹೂವಿನ ಗಿಡಗಳು ಇತ್ಯಾದಿ ಅನೇಕ ಸಸ್ಯಗಳನ್ನು ಕಾಣಬಹುದು. ಇದನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ತರಕಾರಿ ಬೀಜಗಳನ್ನು ಯೋಜನೆ ವತಿಯಿಂದ ಪೂರೈಸಲಾಗಿದೆ ಎನ್ನುತ್ತಾರೆ.

ಶಿವಗಂಗಮ್ಮ ಎನ್ನುವರು ತಮ್ಮ ಪುಟ್ಟ ಕೈತೋಟದಲ್ಲಿ ಸೊಪ್ಪು, ಟೊಮೆಟೋ, ದಂಟು ಮುಂತಾದ ಅನೇಕ ಮನೆಗೆ ಬೇಕಾದ ತರಕಾರಿಗಳನ್ನು ಬೆಳೆದಿದ್ದಾರೆ, ಬಚ್ಚಲು ನೀರಿನಲ್ಲಿಯೇ ಇವು ಬೆಳೆಯುವುದರಿಂದ ಪ್ರತ್ಯೇಕ ನೀರಿನ ಅಗತ್ಯವಿಲ್ಲ. ಸುತ್ತಲೂ ತಡಿಕೆ ನಿರ್ಮಿಸಿದ್ದು ಜಾನುವಾರುಗಳ ಕಾಟವನ್ನು ತಪ್ಪಿಸಿದಂತಾಗಿದೆ. ಇವರ ಕೈತೋಟದಲ್ಲಿ ಅಪರೂಪದ ನಾಟಿ ತಳಿ ಮುಸುಕು ಬದನೆ  ಇರುವುದು ವಿಶೇಷ. ಇವರಲ್ಲದೆ ಸಿದ್ದಗಂಗಮ್ಮ, ಸೌಮ್ಯ, ಭಾಗ್ಯ, ನೇತ್ರ, ಸಮಿತಿಯ ಕಾರ್ಯದರ್ಶಿಗಳಾದ ಅನ್ನಪೂರ್ಣ ಮುಂತಾದ ಅನೇಕ ಮಹಿಳೆಯರು ಕೈತೋಟಗಳಲ್ಲಿ ತರಕಾರಿ ಬೀಜಗಳನ್ನು ಹಾಕಿಕೊಂಡಿದ್ದಾರೆ.

ದಿನಾಂಕ ೧೦.೧೨.೨೦೦೭ ರಂದು ಹಳ್ಳಿಯಲ್ಲಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್, ಕೃಷಿ ಅಧಿಕಾರಿಗಳಾದ ಡಿ.ನಾಗರಾಜುರವರು ಭಾಗವಹಿಸಿದ್ದರು. ರೈತರು ತಾವೇ ಸಾವಯವ ವಿಧಾನದಲ್ಲಿ ಬೆಳೆದ ರಾಗಿ, ತೊಗರಿ, ಭತ್ತ, ನಿಂಬೆ, ತೆಂಗು, ಬಾಳೆ, ಅಡಿಕೆ ಹಾಗೂ ವಿವಿಧ ರೀತಿಯ ಸಾವಯವ ಗೊಬ್ಬರಗಳ ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದರು. ಇವರ ಅನುಭವಗಳನ್ನು ಆಲಿಸಿದ ಕೃಷಿ ಅಧಿಕಾರಿಗಳು ಉಂಟಾಗಿರುವ ಬದಲಾವಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಡಾ.ಶಶಿಕಾಂತ್, ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಡಾ.ಮಮತಾ, ಆರ್ಡರ್ ಸಂಸ್ಥೆಯ ಲಕ್ಷ್ಮಿಕಾಂತ್ ಮುಂತಾದ ಹಲವು ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಸುತ್ತ-ಮುತ್ತಾಲ ಐದಾರು ಗ್ರಾಮದ ಕೃಷಿಕರು ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಮಾಹಿತಿ ತಿಳಿದುಕೊಂಡಿದ್ದು ವಿಶೇಷ. ವಿವಿಧ ಪತ್ರಿಕೆಗಳಲ್ಲಿ ಕ್ಷೇತ್ರೊತ್ಸವದ ವರದಿಗಳು ಪ್ರಕಟಗೊಂಡಿವು.

ಕೃಷಿ ಇಲಾಖೆ ವತಿಯಿಂದ ತಿಪಟೂರಿನಲ್ಲಿ ನಡೆದ ‘ಮುಂಗಾರು ಬೆಳೆ ಆಂದೋಲನ’ ವಸ್ತು ಪ್ರದರ್ಶನದಲ್ಲಿ  ಸಮಿತಿಯು ಪಾಲೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.  ಸಾವಯವದಲ್ಲಿ ಬೆಳೆದ ಪದಾರ್ಥಗಳನ್ನೆಲ್ಲಾ ಪ್ರದರ್ಶನಕ್ಕಿಟ್ಟಿದ್ದರು. ಪ್ರದರ್ಶನಕ್ಕೆ ಬಂದವರೆಲ್ಲರೂ ನಮ್ಮ ಸ್ಟಾಲ್‌ಗೆ ಭೇಟಿದ್ದರು  ಎಂದು ಸಂತೋಷದಿಂದ ಹೇಳುತ್ತಾರೆ ಸಮಿತಿಯ ಅಧ್ಯಕ್ಷರಾದ ಬಸವರಾಜು.

ಸಾವಯವವೇ ಲೇಸು!

ಮಲ್ಲೇನಹಳ್ಳಿ ಗ್ರಾಮದ ಸಾವಿತ್ರಮ್ಮ ಬೋರಪ್ಪ ದಂಪತಿಗಳಿಗೆ ೩ ಎಕರೆ ಜಮೀನಿದೆ. ತೆಂಗು, ಅಡಿಕೆ, ಹೂವಿನ ಬೇಸಾಯದ ಜೊತೆಗೆ ಮನೆಗೆ ಬೇಕಾದ  ಕಾಳು-ಕಡಿ ಎಲ್ಲವನ್ನೂ ಬೆಳೆದುಕೊಳ್ಳುತ್ತಾರೆ. ಸಾವಯವಗ್ರಾಮ ಯೋಜನೆಯಲ್ಲಿ ದಂಪತಿಗಬ್ಬರೂ ಸಕ್ರಿಯವಾಗಿ ಪಾಲ್ಗೊಂಡು ಎಲ್ಲಾ ಸೌಲಭ್ಯಗಳನ್ನೂ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾರೆ. ಕಾಯಾ-ವಾಚಾ-ಮನಸಾ ಈ ಯೋಜನೆಯನ್ನು ಅರ್ಥ ಮಾಡಿಕೊಂಡಿರುವುದರಿಂದ ಅವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಕೇವಲ ಯೋಜನೆಯಲ್ಲಿರುವ ಅಂಶಗಳಲ್ಲದೆ ತಾವೇ ಸ್ವತಃ ಅನೇಕ ವಿಧಾನಗಳನ್ನು ಅಳವಡಿಸಿಕೊಡಿರುವುದು ಇವರ ವಿಶೇಷ.

೨೦ ಗುಂಟೆಯಲ್ಲಿ ಸೇವಂತಿಗೆ ಬೆಳೆಯುತ್ತಾರೆ. ಮೊದಲಿನಿಂದಲೂ ಹೂವಿನ ಕೃಷಿ ಮಾಡುತ್ತಿರುವ ಇವರು ರಸಗೊಬ್ಬರ ಬಳಸುತ್ತಿದ್ದರು. ಆರಂಭದಲ್ಲಿ ಸಮಸ್ಯೆ ಇರಲಿಲ್ಲ. ಕ್ರಮೇಣ ಸೇವಂತಿಗೆಗೆ ಗೆಡ್ಡೆ ರೋಗ ಮತ್ತು ಕಾಂಡ ಕೊಳೆಯುವ ರೋಗಗಳು ಶುರುವಾದವು. ಈ ರೋಗ ಬಂದರೆ ಎಲೆಗಳೆಲ್ಲಾ ಕೆಂಪಾಗಿ ೮ ದಿವಸಕ್ಕೆಲ್ಲಾ ಇಡೀ ತೋಟ ಹಾಳಾಗುತ್ತಿತ್ತು. ಸಾಮಾನ್ಯವಾಗಿ ಮೊಗ್ಗು ಬಿಡುವ ಹಂತದಲ್ಲಿ ಈ ರೋಗ ಕಾಡುತ್ತಿತ್ತು.

ಸಾವಯವ ಯೋಜನೆ ಬಂದ ನಂತರ ಎರೆಗೊಬ್ಬರ ಉತ್ಪಾದಿಸಿ ಮೊದಲು ಅದನ್ನು ಹೂವಿನ ತೋಟಕ್ಕೆ ಬಳಸಿದರು. ಒಂದು ಗಿಡಕ್ಕೆ ತಲಾ ೨ ಕೇಜಿಯಂತೆ ಎರೆಗೊಬ್ಬರ ಹಾಕಿ ಕಾಲ-ಕಾಲಕ್ಕೆ ನೀರು ಹಾಯಿಸಿದರು. ಆಶ್ಚರ್ಯವೆಂಬಂತೆ ಈ ಸಲ ಸೇವಂತಿಗೆಗೆ ಯಾವುದೇ ರೋಗ ಬಂದಿಲ್ಲ. ಈಗ ಗಿಡಗಳೆಲ್ಲಾ ಮೊಗ್ಗಿನ ಹಂತದಲ್ಲಿದ್ದು ಅತ್ಯಂತ ಆರೋಗ್ಯವಾಗಿವೆ ಎನುತ್ತಾರೆ ಸಾವಿತ್ರಮ್ಮ. ಇದು ಸಾಧ್ಯವಾಗಿರುವುದು ಎರೆಗೊಬ್ಬರ ಹಾಕಿದ್ದರಿಂದಲೇ ಎಂಬುದು ಇವರ ದೃಢ ವಿಶ್ವಾಸ. ಅಲ್ಲದೆ ಅಲ್ಪ-ಸ್ವಲ್ಪ ರೋಗ ಕಂಡರೆ ಗಂಜಲ ಮತ್ತು ಬೇವಿನ ಬೀಜದ ಕಷಾಯ ತಯಾರಿಸಿ ಹೊಡೆಯುತ್ತಾರೆ. ಉಳಿದ ಬೆಳೆಗಳಿಗೂ ಬಳಸುವುದುಂಟು.

ಸೇವಂತಿಗೆಗೆ ಎರೆಗೊಬ್ಬರ ಹಾಕಿ ಯಶಸ್ವಿಯಾದ ನಂತರ ಇವರು ಈ ಮುಂಗಾರಿನಲ್ಲಿ ಅರ್ಧ ಎಕರೆಗೆ ಹೆಸರು ಕಾಳು ಮತ್ತು ಎಳ್ಳನ್ನು ಬಿತ್ತಿ ಅದಕ್ಕೂ ಸಹ ಸಂಪೂರ್ಣ ಎರೆಗೊಬ್ಬರವನ್ನೇ ಬಳಸಿದ್ದಾರೆ. ರಸಗೊಬ್ಬರ ಹಾಕಿದಾಗಿನ ಬೆಳವಣಿಗೆಗೂ ಈಗ ಎರೆಗೊಬ್ಬರ ಹಾಕಿ ಬೆಳೆದಿರುವುದಕ್ಕೂ ಏನೇನೂ ವ್ಯತ್ಯಾಸವಿಲ್ಲ, ಈಗ ಇನ್ನೂ ಚೆನ್ನಾಗೇ ಬೆಳೆದಿದೆ ಎನ್ನುತ್ತಾರೆ ಬೋರಪ್ಪ. ಎರೆಗೊಬ್ಬರ ಹಾಕಿರುವುದರಿಂದ ನಾಲ್ಕು ದಿನ ಮಳೆ ತಡವಾದರೂ ಸಹ ತಡೆದುಕೊಳ್ಳುತ್ತದೆ  ಎಂಬುದು ಇವರ ಅನುಭವ.

೭೦೦ ಅಡಿಕೆ ಮರಗಳಿದ್ದು ಅವುಗಳಿಗೂ ಸಹ ಒಂದು ಗಿಡಕ್ಕೆ ಒಂದು ಕೇಜಿಯಂತೆ ಎರೆಗೊಬ್ಬರ ಬಳಸುತ್ತಿದ್ದಾರೆ. ಜೀವಾಮೃತ ಬಳಸುತ್ತಿದ್ದು ಅದರ ಪರಿಣಾಮವೂ ಸಹ ಉತ್ತಮವಾಗಿದೆ. ತೋಟದಲ್ಲಿಯೇ ಗುಂಡಿ ಮಾಡಿ ಜೀವಾಮೃತ ತಯಾರಿಸಿಕೊಂಡು ಬಳಸುತ್ತಾರೆ. ಇದರಿಂದ ಅಡಿಕೆಯಲ್ಲಿ ಕಾಯಿ ಉದುರುವಿಕೆ ನಿಂತಿದೆ.