ಹುಳೇಗಾರು ಗ್ರಾಮದ ಸುತ್ತಲೂ ಇರುವ ಬೆಟ್ಟಗಳಲ್ಲಿ ಬೆಳಗ್ಗೆಯಿಂದಲೇ ಊರಿನ ಜನರೆಲ್ಲಾ ಸೇರುತ್ತಿದ್ದರು. ಕೆಲವರು ಗುದ್ದಲಿ, ಪಿಕಾಸಿ ಹೊತ್ತು ತಂದರೆ, ಕೆಲವರು ಹಾರೆ, ಕುಡುಗೋಲು ಹಿಡಿದು ತರುತ್ತಿದ್ದರು. ಎಲ್ಲರಲ್ಲೂ ಅದಮ್ಯ ಉತ್ಸಾಹ. ಇವರ ಕೆಲಸಕ್ಕೆ ತುಂತುರು ಮಳೆಯ ಸ್ವಾಗತ. ಎಲ್ಲರೂ ಸೇರುತ್ತಿದ್ದಂತೆ ಬೆಟ್ಟದ ಕೊರಳಿಗೆ ಇಂಗುಗುಂಡಿಗಳ ಮಾಲೆಯೇ ಸಿದ್ಧವಾಗತೊಡಗಿತು. ನೋಡನೋಡುತ್ತಿದ್ದಂತೆ ನೂರಾರು ಇಂಗುಗುಂಡಿಗಳು. ಒಂದರ ಪಕ್ಕ ಇನ್ನೊಂದು. ಅದನ್ನೆಲ್ಲಾ ತುಂಬಿಸಿಬಿಡುವೆನೆಂದು ವರುಣನೂ ಮಳೆ ಸುರಿಸತೊಡಗಿದನು. ಬಾಯಾರಿದ ಭೂಮಿ ಸುರಿದ ನೀರನ್ನೆಲ್ಲಾ ಕುಡಿಯತೊಡಗಿತ್ತು. ಮಳೆಯ ಆರ್ಭಟ. ನೆಲದ ದಾಹ, ಜನರ ಗುಂಡಿ ತೆಗೆವ ಕಾಮಗಾರಿ, ಒಂದಕ್ಕೊಂದು ಪೈಪೋಟಿ. ಗೆಲುವು ಯಾರದು!

ಮಧ್ಯಾಹ್ನವೆಲ್ಲಾ ಒಂದು ಹಂತದ ಕೆಲಸ ಮುಗಿದಿತ್ತು. ಎಲ್ಲರೂ ಹಸಿದ ಹೊಟ್ಟೆ ತುಂಬಿಸಲು ಹೊರಟರು. ದಾಹ ತೀರಿದ ನೆಲ ಹಸುರೊಡೆಯಲು ತಯಾರಿ ನಡೆಸಿತ್ತು. ಗುಂಡಿಗಳು ನಿಧಾನ ತುಂಬಿಕೊಳ್ಳುತ್ತಿದ್ದವು.

ಸಂಜೆಗೆಲ್ಲಾ ತುಂಬಿ ನಿಂತ ಗುಂಡಿಗಳನ್ನು ನೋಡಿದ ಊರವರಿಗೆ ತಮ್ಮ ಶ್ರಮ ಫಲ ಕೊಟ್ಟಿದ್ದು ತಿಳಿಯಿತು. ಬೆಟ್ಟದಿಂದಿಳಿದ ನೀರು ಹಳ್ಳ ಕೂಡಿ ಹೋಗಿರಲಿಲ್ಲ. ಎಲ್ಲವೂ ಇಂಗುಗುಂಡಿಯೊಳಗೆ ಶೇಖರವಾಗಿದ್ದವು. ಸಂಜೆ ತುಂಬಿದ ಗುಂಡಿಗಳೆಲ್ಲಾ ಬೆಳಿಗ್ಗೆ ಖಾಲಿಯಾಗಿ ಮತ್ತೆ ಮಳೆಯನ್ನು ಎದುರು ನೋಡುತ್ತಿದ್ದವು. ಅದೇ ರೀತಿ ತಿಂಗಳುಗಟ್ಟಲೆ ಬಿದ್ದ ಮಳೆಯ ನೀರೆಲ್ಲಾ ಹರಿಯಲೇ ಇಲ್ಲ. ಇಂಗುಗುಂಡಿಗಳು ತಡೆದವು. ಕುಡಿದವು ಎನ್ನುತ್ತಾರೆ ಹುಳೇಗಾರು ಗ್ರಾಮದ ಲಕ್ಷ್ಮೀನಾರಾಯಣ. ಪ್ರತಿವರ್ಷ ಹಳ್ಳದ ಮೂಲಕ ಹರಿದುಹೋಗುತ್ತಿದ್ದ ನೀರು ಈ ಸಾರಿ ಅಲ್ಲಿಯೇ ಇಂಗತೊಡಗಿತ್ತು. ಇದರಿಂದ ಇಂಗುಗುಂಡಿಗಳನ್ನು ನಿರ್ಮಿಸಲು ಸಿದ್ಧರಾದರು. ತಮ್ಮ ತಮ್ಮ ಬ್ಯಾಣದ ಸುತ್ತಲೂ, ಸೊಪ್ಪಿನ ಬೆಟ್ಟದಲ್ಲಿ, ಬೇಲಿ ಸಾಲಿನಲ್ಲಿ, ಹಿತ್ತಲಲ್ಲಿ ಹೀಗೆ ಎಲ್ಲೆಂದರಲ್ಲಿ ಇಂಗುಗುಂಡಿಗಳು ಆದವು. ಉತ್ಸಾಹ ಹೆಚ್ಚಿದಂತೆ ಊರೊಟ್ಟಿನ ಗೋಮಾಳ, ಕಾಡಿನ ಅಂಚಿನಲ್ಲೂ ನಿರ್ಮಿಸಬೇಕೆಂದು ಯೋಜಿಸಿದರು.

ಇದೆಲ್ಲಾ ಒಂದೇ ದಿನದಲ್ಲಿ ಆದ ಕೆಲಸವಲ್ಲ. ರಾಜ್ಯ ಸರ್ಕಾರದ ಸಾವಯವ ಗ್ರಾಮ ಯೋಜನೆಯಲ್ಲಿ ಹುಳೇಗಾರು ಗ್ರಾಮ ಸೇರಿದಾಗಲಿಂದ ರೂಪುಗೊಂಡ ಯೋಜನೆಯಿದು. ಕೃಷಿ ಪ್ರಯೋಗ ಪರಿವಾರದ ಮೇಲ್ವಿಚಾರಣೆಯಲ್ಲಿ ಹುಳೇಗಾರು ಗ್ರಾಮಕ್ಕೆ ಸೇರಿದ ಕಲ್ಮಕ್ಕಿ, ಗುಡ್ಡೇದಿಂಬ, ಹಲಸಿನಘಟ್ಟ, ಮಾಧವಪುರ ಹಾಗೂ ಹುಳೇಗಾರು ಗ್ರಾಮಗಳಲ್ಲಿ ಪೂರ್ವಭಾವಿ ಸಭೆ ನಡೆಯಿತು. ಆಗ ಸಮುದಾಯದ ಪ್ರಾಥಮಿಕ ಸಮೀಕ್ಷೆ ಮಾಡಲಾಯಿತು. ಅದರಲ್ಲಿ ಭಾಗಾಯ್ತುದಾರರು, ಭತ್ತದ ಬೇಸಾಯಗಾರರು, ವಿಂಗಡಣೆ, ಕೃಷಿ ಪದ್ಧತಿ, ಕಾಡು, ಕೆರೆ, ಬಾವಿ, ಹಳ್ಳಗಳು ಹೀಗೆ ಪ್ರತಿಯೊಂದು ವಿಷಯಗಳನ್ನು ದಾಖಲಾತಿ ಮಾಡಲಾಯಿತು. ಪ್ರತಿಯೊಬ್ಬರೂ ತಮ್ಮ ಮನೆಯೊಳಗಿನ ಕುಡಿಯುವ ನೀರಿನ ಬಾವಿ ಬತ್ತುತ್ತಿರುವ ವಿಚಾರ ಹೇಳಿದರು. ಊರಿನ ಕೆರೆ, ಹಳ್ಳಗಳು ಬೇಸಿಗೆಯಲ್ಲಿ ಬತ್ತುತ್ತಿರುವ ಸಂಗತಿ ತಿಳಿಯಿತು. ಸಾಕಷ್ಟು ಕಾಡಿದ್ದರೂ ಹಳೆಯ ಮರಗಳು ಇಲ್ಲದ ಪ್ರಯುಕ್ತ ನೀರಿಂಗುವ ಪ್ರಮಾಣ ಕಡಿಮೆಯಾಗಿರುವುದು ಗೊತ್ತಾಯಿತು. ನೀರಿಂಗಿಸುವುದು, ಗಿಡ ನೆಡುವುದು ಮುಂತಾದ ಚಟುವಟಿಕೆಗಳ ಅಗತ್ಯ, ಅದಕ್ಕಾಗಿ ಮಾಡಬೇಕಾದ ಉಪಾಯಗಳನ್ನು ಚರ್ಚಿಸಲಾಯಿತು. ಆಗಲೇ ಶ್ರೀಪಡ್ರೆಯವರ ನೀರಿಂಗಿಸೋಣ, ಬನ್ನಿ ಕಾರ್ಯಕ್ರಮ ನೋಡಿದ್ದ ಊರಿನವರು ಇಂಗುಗುಂಡಿಗಳು, ಬಾವಿ, ಬೋರ್‌ವೆಲ್‌ಗಳ ಬಳಿ ನೀರಿಂಗಿಸುವಿಕೆ, ಬೆಟ್ಟಗಳಿಗೆ ಅಡ್ಡಲಾಗಿ ಅಗಳು ತೋಡಿಸುವ ಕ್ರಮ ಮುಂತಾದವುಗಳನ್ನೆಲ್ಲಾ ಅಳವಡಿಸಲು ನಿರ್ಧರಿಸಿದರು.

ಗ್ರಾಮದಲ್ಲಿ ನಡೆಸುವ ಏನೆಲ್ಲಾ ಚಟುವಟಿಕೆಗಳಿಗೆ ಊರಿನ ಸಕಲರ ಸಹಭಾಗಿತ್ವ ಹಾಗೂ ಸಹಕಾರ ಮುಖ್ಯ. ಅದಕ್ಕಾಗಿ ಮೊದಲು ಸ್ವಯಂಸೇವಕರ ತಂಡವನ್ನು ರಚಿಸಲಾಯಿತು. ಸ್ವ-ಇಚ್ಛಾ ರೈತರ ತಂಡ. ೪೦ ಜನ ಸದಸ್ಯರು. ಪ್ರತಿ ಭಾನುವಾರ ರಾತ್ರಿ ಊರಿನ ಹಳ್ಳಕೋಡ್ಲು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಚಾರಗಳ ಚರ್ಚೆ, ಯೋಜನೆಗಳ ರೂಪುರೇಷೆ.

ಇವುಗಳಲ್ಲಿ ಮುಖ್ಯವಾಗಿ

  • ಊರಿನಲ್ಲಿ ಹಿಂದಿದ್ದು ಈಗ ಮರೆತುಹೋದ ಕೃಷಿ ಜ್ಞಾನದ ದಾಖಲಾತಿ.
  • ಸಾವಯವದಲ್ಲಿ ಕೃಷಿ ಮಾಡಲು ಊರಿಗೆ ಹೊಂದಬಹುದಾದ ಪದ್ಧತಿಯ ಅಳವಡಿಕೆ.
  • ಅದಕ್ಕಾಗಿ ತರಬೇತಿ, ವಿಚಾರವಿನಿಮಯ, ಕ್ಷೇತ್ರ ಭೇಟಿ.
  • ನಾಟಿ ತಳಿಗಳ ಸಂರಕ್ಷಣೆ, ಸಂವರ್ಧನೆ, ಬೀಜ ಬ್ಯಾಂಕ್ ಸ್ಥಾಪನೆ.
  • ಸ್ವದೇಶಿ ಗೋವುಗಳ ಸಂರಕ್ಷಣೆ – ಸಂವರ್ಧನೆ.
  • ಜಲ ಸಂರಕ್ಷಣೆ, ಜಲಜಾಗೃತಿ.
  • ಬೆಳೆಗಾರನಿಂದ ಬಳಕೆದಾರನಿಗೆ ನೇರ ಪೂರೈಕೆ.
  • ಸಾವಯವ ಕೃಷಿ ಸಂಬಂಧಿ ಪುಸ್ತಕಗಳ ಪ್ರಕಟಣೆ.

ಈ ಯೋಜನೆಗಳನ್ನೆಲ್ಲಾ ರೂಪಿಸುವ ವೇಳೆಗೆ ಮಳೆಗಾಲ ಪ್ರಾರಂಭವಾದ ಕಾರಣ ಮೊದಲಿಗೆ ಜಲ ಸಂರಕ್ಷಣೆ, ಜಲಜಾಗೃತಿಗಳ ಕಾರ್ಯಕ್ರಮ ಕೈಗೊಳ್ಳಲಾಯಿತು.

ಹುಳೇಗಾರಿನಲ್ಲಿ ಇಂಗುಗುಂಡಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ನಿರ್ಮಾಣವಾದ ಸುದ್ದಿ ಜಿಲ್ಲೆಯಾದ್ಯಂತ ಹರಡಿತು. ಬಹುಶಃ ಈ ರೀತಿ ನೀರಿಂಗಿಸುವ ಸಾಹಸ ಜಿಲ್ಲೆಯಲ್ಲಿಯೇ ಪ್ರಥಮ. ಜಿಲ್ಲೆಯ ಎಲ್ಲಾ ಪತ್ರಿಕೆಗಳಲ್ಲೂ ಫೋಟೋ ಸಹಿತ ವರದಿಗಳು, ನುಡಿಚಿತ್ರಣಗಳು ಬಂದವು. ಸಮುದಾಯದ ಕೆಲಸ. ಗ್ರಾಮದ ಮನೆ-ಮನೆಯ ಅಂಗಳದಲ್ಲೂ, ಹಿತ್ತಲಿನಲ್ಲೂ ನೀರಿಂಗಿಸುವ ಜಲಯೋಧರ ಸುದ್ದಿ ಪ್ರಕಟವಾಯಿತು.

ಕಲ್ಮಕ್ಕಿಯ ಸುರೇಶ್‌ರವರ ಮನೆಯ ಅಂಗಳದಲ್ಲಿ ನಿಲ್ಲಿಸಿದ ನೀರಿನಿಂದ ಬಾವಿ ಬತ್ತುವುದು ನಿಂತಿತು. ದೇವಸ್ಥಾನದಲ್ಲಿ ಛಾವಣಿಯಿಂದ ಸೋರಿದ ನೀರನ್ನು ನೇರವಾಗಿ ಬಾವಿಗೆ ಬಿಡುವ ವ್ಯವಸ್ಥೆಯಿತ್ತು. ಬೆಟ್ಟದಲ್ಲಿ ತೆಗೆದ ಅಗಳಗಳು ಲಕ್ಷಾಂತರ ಲೀಟರ್ ನೀರು ಇಂಗಿಸಿದ್ದವು. ಶಾಲೆಯ ನಿರುಪಯೋಗಿ ಬಾವಿ ತುಂಬಿ ನೀರು ಮೇಲೆ ಕಾಣುವಂತಾಯಿತು.  ಕೆರೆಗಳು ತುಂಬಿ ತುಳುಕಿದವು. ಬೋರ್‌ವೆಲ್‌ಗಳು ಉಕ್ಕಿದವು. ಮೊದಲ ವರ್ಷದ ಮಳೆಗೆ ಎಷ್ಟೆಲ್ಲಾ ನೀರಿನ ಸಮೃದ್ಧಿ. ಬೆಟ್ಟದ ಬುಡದ ಬಟಾಬಯಲಿನಲ್ಲಿ ಮನೆಕಟ್ಟಿ, ಬಾವಿ ತೆಗೆಸಿದರೆ ಬೇಸಿಗೆಯಲ್ಲಿ ನೀರೇ ಇಲ್ಲ. ಬಿಸಿಲ ಧಗೆ, ನೀರಿನ ಬರ, ಮನೆ ಒಳಗಿರಲೇ ಪರದಾಟವಾಗಿತ್ತು. ಬೆಟ್ಟದಲ್ಲಿ ನೀರಿಂಗಿಸಲು ಮನೆಯ ಸುತ್ತಲೂ ಬದುಗಳನ್ನು ಹಾಕಿ, ಹುತ್ತಗಳಿಗೆ ನೀರು ತಿರುವಿ, ಗಿಡಗಳನ್ನು ನೆಟ್ಟು ಏನೆಲ್ಲಾ ಮಾಡಿದ ಮೇಲೆ ಬಾವಿಯಲ್ಲಿ ನೀರು ಉಳಿಯತೊಡಗಿತ್ತು. ಇನ್ನೆರಡು ವರ್ಷಕ್ಕೆ ನಮ್ಮ ಬಾವಿಯೊಳಗೆ ಬೇಸಿಗೆಯಲ್ಲೂ ನಾಲ್ಕಾರು ಅಡಿ ನೀರು ಉಳಿಯುವುದು ಗ್ಯಾರಂಟಿ ಎನ್ನುತ್ತಾರೆ ಹುಳೇಗಾರು ಸೀತಾರಾಮಭಟ್ಟರು.

ಗ್ರಾಮದ ಜಲಜಾಗೃತಿ ನೋಡಲು ರಾಜ್ಯದ ವಿವಿಧೆಡೆಗಳಿಂದ ಜನ ಬರತೊಡಗಿದರು. ವಿದೇಶೀಯರೂ ದಾಖಲಿಸಿದರು. ಮುಖ್ಯವಾಗಿ ತಾಲ್ಲೂಕಿನ ಸಾವಿರಾರು ಶಾಲಾಮಕ್ಕಳು ಇಡೀ ಗ್ರಾಮವನ್ನೇ ಅವಲೋಕಿಸಿದರು. ಜಲಪಾಠವನ್ನು ಪ್ರತ್ಯಕ್ಷವಾಗಿ ಪ್ರಮಾಣಿಸಿದರು, ಕಲಿತರು. ಸಾಗರದ ಸೇವಾಸಾಗರ ಶಾಲೆಯ ಮಕ್ಕಳು ಗ್ರಾಮದಾದ್ಯಂತ ವಿವಿಧ ರೀತಿಯ ನೀರಿಂಗಿಸುವ ವಿಧಾನಗಳನ್ನು ವೀಕ್ಷಿಸಿದರು. ಹಳ್ಳಿಗಳಲ್ಲಿ ರಸ್ತೆ ಮೆರವಣಿಗೆ ಮಾಡಿ ಜಲಜಾಗೃತಿ ಜಾಥಾ ನಡೆಸಿದರು. ಊರಿನವರೊಂದಿಗೆ ಸಂವಾದ ನಡೆಸಿದರು.

ತಿಳಿನೀರ ಮೂಲ

ಅಂದು ಬೆಳಿಗ್ಗೆಯೇ ಹುಳೇಗಾರಿಗೆ ದಾಳಿಯಿಟ್ಟ ಮಕ್ಕಳಿಗೆ ಸುರಿಯುತ್ತಿದ್ದ ಮಳೆ ತೊಂದರೆ ಎನಿಸಲೇ ಇಲ್ಲ. ಊರಿನ ಗೋಮಾಳದ ಪಕ್ಕದ ಚರಂಡಿಗೆ ಕಟ್ಟಿದ ದಬ್ಬೆ ಒಡ್ಡಿನಿಂದ ಪ್ರಾರಂಭವಾದ ಜಲಸಂರಕ್ಷಣಾ ವಿಧಾನ ಮುಂದೇನಿರಬಹುದೆಂಬ ಕುತೂಹಲ ಹೆಚ್ಚಿಸಿತ್ತು. ಬೆಟ್ಟದ ಬುಡದಲ್ಲಿ ತೆಗೆದ ಸರಮಾಲೆಯಂತಿರುವ ಪುಟ್ಟ ಪುಟ್ಟ ಇಂಗುಗುಂಡಿಗಳು, ಕಾಡಿನ ಗಡಿಯಂಚಿಗೆ ನಿರ್ಮಿಸಿದ ದೊಡ್ಡ ದೊಡ್ಡ ಇಂಗುಗುಂಡಿಗಳು, ಹಿತ್ತಲ ಬ್ಯಾಣದಲ್ಲಿ ತೆಗೆದ ಉದಿಬದುಗಳು. ಚಿಕ್ಕ ಚಿಕ್ಕ ಕಾಲುವೆಗಳು, ದೇವಸ್ಥಾನದ ಬಾವಿಗೆ ಛಾವಣಿಯಿಂದ ಸೋಸು ಬಕೆಟ್ ಮೂಲಕ ಬೀಳುವ ನೀರು, ಅಂಗಳದಲ್ಲಿ ಬಿದ್ದ ನೀರು ಚರಂಡಿ ಸೇರದಂತೆ ಮಾಡಿದ ವ್ಯವಸ್ಥೆ. ಸರಿಪಡಿಸಿದ ಕೆರೆಯಲ್ಲಿ ತುಂಬಿನಿಂತ ನೀರು. ಶಾಲೆಯ ಛಾವಣಿ ನೀರಿಯ ಟ್ಯಾಂಕ್. ಬಾವಿಗೆ ನೀರಿಂಗಿಸಲು ಮಾಡಿದ ವಿಧಾನ, ಶಾಲೆಯ ಬೆಟ್ಟದಲ್ಲಿ ಅಲ್ಲಲ್ಲಿ ತೆಗೆದ ಉಂಗುರ ಕಾಲುವೆ, ಚೌಕ ಹೊಂಡ, ಕಲ್ಲು ಒಡ್ಡು ಮುಂತಾದವುಗಳು ಓಡುವ ಮಳೆನೀರನ್ನು ಹಿಡಿದು ನಿಲ್ಲಿಸುವ ರೀತಿಗಳ ಪರಿಚಯ. ಇಂಗುವುದನ್ನು ಕಣ್ಣಾರೆ ಕಂಡ ಅನುಭವ ಮಕ್ಕಳದು. ಅದರೊಂದಿಗೆ ತಮ್ಮದೂ ಪಾಲಿರಲಿ ಎಂದು ೩,೦೦೦ಕ್ಕೂ ಹೆಚ್ಚು ಅರಣ್ಯಜಾತಿಯ ಗಿಡಗಳನ್ನು ನೆಟ್ಟರು.

ನೀರು ಅಮೂಲ್ಯ ಎನ್ನುವ ಕುರಿತಾದ ಘೋಷಣೆಗಳು, ಬ್ಯಾನರ್‌ಗಳನ್ನು ಹಿಡಿದು ಪೋಷಕರು, ಶಿಕ್ಷಕರು, ಗ್ರಾಮಸ್ಥರೊಂದಿಗೆ ಜಾಥಾ ನಡೆಸಿದರು. ಮಕ್ಕಳಿಗೋಸ್ಕರ ನೀರಿನ ಕುರಿತಾದ ರಸಪ್ರಶ್ನೆ, ಆಟಗಳು, ಅವರಿಗೆ ತಿಳಿದ ವಿಧಾನಗಳ, ಜ್ಞಾನದ ಅವಲೋಕನ, ನೀರಿಂಗಿಸುವ ಕುರಿತಾದ ಚರ್ಚೆ, ಪ್ರಶ್ನೋತ್ತರ ಮುಂತಾದ ಮಾಹಿತಿ ವಿನಿಮಯ ನಡೆಯಿತು. ತಿಳಿನೀರಿಗೆ ಮಳೆಯೇ ಮೂಲ. ಅದನ್ನು ಎಷ್ಟು ಸಾಧ್ಯವೋ ಅಷ್ಟು ಹಿಡಿದಿಟ್ಟುಕೊಂಡರೆ ಜಲನೆಮ್ಮದಿ ಸಿಗುತ್ತದೆ ಎನ್ನುವ ನಿರ್ಣಯದೊಂದಿಗೆ ಮುಕ್ತಾಯ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳನ್ನು ಸಾವಯವಗೊಳಿಸುವ ಯೋಜನೆ ಸಿದ್ಧವಾಯಿತು. ಅದಕ್ಕಾಗಿ ಮೊದಲು ಮಾಡಿದ್ದು ಪ್ರತಿಯೊಂದು ಕುಟುಂಬಗಳ ವೈಯಕ್ತಿಕ ಭೇಟಿ.

ಗ್ರಾಮದಲ್ಲಿ ೫೫ ಎಕರೆ ೨೦ ಗುಂಟೆಗಳಷ್ಟು ತರಿ ಜಮೀನನ್ನು ಸುಮಾರು ೩೪೦ ಕುಟುಂಬಗಳು ಬೇಸಾಯ ಮಾಡುತ್ತಿವೆ. ಇವರಲ್ಲಿ ಅನೇಕರಿಗೆ ಭಾಗಾಯ್ತಿದೆ. ಆದರೆ ಕೇವಲ ೧೦ ಗುಂಟೆಗೂ ಕಡಿಮೆ ತರಿ ಇರುವ ಅತಿ ಸಣ್ಣ ರೈತರೂ ಇದ್ದಾರೆ. ಭತ್ತದ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ರೈತರು ಮಾಡುತ್ತಿದ್ದಾರೆ. ಸುಮಾರು ಒಂಭತ್ತು ಕ್ವಿಂಟಾಲ್‌ನಷ್ಟು ರಾಸಾಯನಿಕ ಗೊಬ್ಬರದ ಬಳಕೆಯಾಗುತ್ತಿರುವುದು ದಾಖಲೆಗೆ ಸಿಕ್ಕಿತ್ತು. ಜೊತೆಗೆ ಮೆಟಾಸಿಡ್, ಮಾನೋಕ್ರೋಟೋಸಾಸ್, ಎಕಲೆಕ್ಸ್, ಹಿಮೋಸಾನ್‌ನಂತಹ ವಿಷಗಳನ್ನೂ ಸಹ ತೀರಾ ಸಾಮಾನ್ಯವೆಂಬಂತೆ ಬಳಸುತ್ತಿರುವುದು ಗೊತ್ತಾಯಿತು. ಹಾಗಂತ ಕೊಟ್ಟಿಗೆ ಗೊಬ್ಬರ, ಸೊಪ್ಪು ಗೊಬ್ಬರದ ಬಳಕೆಯೂ ಹೆಚ್ಚಿನ ಪ್ರಮಾಣದಲ್ಲೇ ಇದೆ ಎನ್ನುವುದನ್ನು ರೈತರೇ ತಿಳಿಸಿದರು. ಅದಕ್ಕೆ ತಕ್ಕಂತೆ ಕಾಡು ಹಾಗೂ ಜಾನುವಾರುಗಳೂ ಇರುವುದರಿಂದ ಜೈವಿಕ ಗೊಬ್ಬರದ ಉತ್ಪಾದನೆ ಸಾಧ್ಯವಾಗಿತ್ತು. ಹೀಗಿರುವಾಗ ರೈತರನ್ನು ರಾಸಾಯನಿಕ ವಿಷ ಬಳಸದಿರುವಂತೆ ಮನವೊಲಿಸುವುದು ಸುಲಭವೆಂದು ಸ್ವ-ಇಚ್ಛಾ ರೈತರ ತಂಡ ಯೋಚಿಸಿತು. ಆದರೆ ಹಳ್ಳಿಯ ರಾಜಕೀಯ ಇಡೀ ಯೋಜನೆಗೆ ಬೇರೊಂದು ತಿರುವು ನೀಡಿತು.

ಯಾವುದೇ ಯೋಜನೆ ಬಂದರೂ ಜನರಿಗೆ ಗುಮಾನಿ ಸಹಜ. ಯೋಜನೆಯ ಹಣ, ಸಬ್ಸಿಡಿ, ಅನುದಾನ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳು ಹಾಗೂ ಅದೆಲ್ಲವನ್ನೂ ಅನುಮಾನಿಸುವ ಪ್ರವೃತ್ತಿ. ಯೋಜನೆಯನ್ನು ಅನುಷ್ಠಾನಕ್ಕೆ ತರುವವರು ಹಾಗೂ ಯೋಜನೆಯು ಅದೆಷ್ಟೇ ಪಾರದರ್ಶಕವಾಗಿದ್ದರೂ ಅದರಿಂದ ದೂರನಿಂತು ವಿರೋಧಿಸುವವರನ್ನು ಪ್ರತಿ ಯೋಜನೆಯಲ್ಲೂ ಕಾಣಬಹುದು.

ರಾಸಾಯನಿಕ ಗೊಬ್ಬರದ ಬಳಕೆ ನಿಲ್ಲಿಸುವುದರಿಂದ ಇಳುವರಿ ಕಡಿಮೆಯಾಗುತ್ತದೆ ಎಂಬುದು ರೈತರ ಅಹವಾಲು. ಈ ತುಮುಲವನ್ನು ಗ್ರಹಿಸಿದ ಕೃಷಿ ಪ್ರಯೋಗ ಪರಿವಾರ ಮೊದಲ ವರ್ಷ ಆಗುವ ನಷ್ಟವನ್ನು ಭರ್ತಿ ಮಾಡಿಕೊಡುವ ಬಗ್ಗೆ ಲಿಖಿತ ಒಪ್ಪಂದವನ್ನೇ ಮಾಡಿಕೊಂಡಿತು. ಆದರೂ ಅನುಮಾನ ಬಗೆಹರಿಯದೇ ಅನೇಕರು ಸಾವಯವ ಕೃಷಿಯಿಂದ ದೂರ ಉಳಿದರು. ೧೨ ಜನ ರೈತರು ಮಾತ್ರ ಸಾವಯವದಲ್ಲಿ ಭತ್ತದ ಕೃಷಿ ಮಾಡಿದರು. ಮೊದಲ ವರ್ಷ ೨೧ ಕ್ವಿಂಟಾಲ್‌ಗಳಷ್ಟು ಕುಸಿತವನ್ನು ಅನುಭವಿಸಿದರು. ಇವಿಷ್ಟನ್ನೂ ಕೃಷಿ ಪ್ರಯೋಗ ಪರಿವಾರ ತುಂಬಿಕೊಟ್ಟಿತು. ಆದರೆ ಎರಡನೇ ವರ್ಷ ಈ ರೀತಿ ನಷ್ಟ ಭರ್ತಿ ಮಾಡಿಕೊಡಲು ಸ್ವ-ಇಚ್ಛಾ ರೈತರ ತಂಡ ಒಪ್ಪಲಿಲ್ಲ. ಸಾವಯವದಿಂದ ಮಣ್ಣು ಹೆಚ್ಚು ಜೀವಂತವಾಗುತ್ತದೆ, ಖರ್ಚು ಉಳಿತಾಯವಾಗುತ್ತದೆ ಹಾಗೂ ಬೆಳೆದ ಬೆಳೆಗೆ ಹೆಚ್ಚು ಬೆಲೆ ಸಿಗುತ್ತದೆ. ಎರಡನೇ ವರ್ಷ ಬೆಳೆಯೂ ಸಹ ಉತ್ತಮವಾಗಿ ಇಳುವರಿ ಹೆಚ್ಚುತ್ತದೆ. ಹೀಗಿರುವಾಗ ಒಪ್ಪಂದವೇಕೆ? ಎಂಬ ವಿಚಾರ ಊರಿನ ಪ್ರಮುಖ ಕೃಷಿಕರಾದ ಸದಾಶಿವಭಟ್ ಕೇಳುತ್ತಾರೆ. ಇದೇ ಸಮಯದಲ್ಲಿ ಸಾವಯವವನ್ನು ಒಪ್ಪದ ರೈತರ ತಂಡ ಬೇರೆಯಾಗಿ ಯೋಚಿಸತೊಡಗಿತು. ಊರೊಟ್ಟಿನ ಜಾಗಗಳಲ್ಲಿ ನಿರ್ಮಿಸಿದ ಇಂಗುಗುಂಡಿಗಳನ್ನು ಮುಚ್ಚುವುದರೊಂದಿಗೆ ತಮ್ಮ ಪ್ರತಿಭಟನೆಯನ್ನು ಮಾಡಿತು. ಗೋಮಾಳ, ಬೆಟ್ಟಗಳಲ್ಲಿ ಇಂಗುಗುಂಡಿಗಳನ್ನು ಮಾಡುವುದರಿಂದ ಜಾನುವಾರುಗಳ ಮೇವಿಗೆ, ಕಾಡಿನ ಉತ್ಪನ್ನಗಳ ಸಂಗ್ರಹಣೆಗೆ ತೊಡಕು ಎನ್ನುವ ಕಾರಣ ನೀಡಿತು. ಅದೇ ರೀತಿ ರಾಸಾಯನಿಕ ಗೊಬ್ಬರ ಬಳಸದಿದ್ದರೆ ಇಲ್ಲಿನ ನೆಲದಲ್ಲಿ ಉತ್ತಮ ಇಳುವರಿ ತೆಗೆಯಲು ಸಾಧ್ಯವೇ ಇಲ್ಲವೆಂದು ಪ್ರತಿಪಾದನೆ ಮಾಡತೊಡಗಿತು. ಇದಕ್ಕೆ ಮುಖ್ಯವಾಗಿ ಸ್ವ-ಇಚ್ಛಾ ರೈತರ ತಂಡದ ಮುಖ್ಯ ನಿರ್ವಾಹಕರ ಮೇಲಿರುವ ಅಸಮಾಧಾನವೇ ಕಾರಣವಾಗಿತ್ತು.

ಇತ್ತ ಸದಾಶಿವಭಟ್ಟರು ಮಾದರಿಯಾಗಿ ಶ್ರೀ ಪದ್ಧತಿಯಲ್ಲಿ ಭತ್ತದ ಬೇಸಾಯ ಮಾಡಿದರು. ಸಸಿಗಳು ಚೆನ್ನಾಗಿ ತೆಂಡೆ ಹೊಡೆದು ಅತ್ಯುತ್ತಮವೆನ್ನುವಂತೆ ಬೆಳೆದುನಿಂತಿತ್ತು. ಆದರೆ ಕಾಡಿನಿಂದ ನುಗ್ಗಿದ ಕಾಟಿ, ಹಂದಿ ಮುಂತಾದ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಇಡೀ ಗದ್ದೆಯೇ ನಾಶವಾಗಿ ಹೋಯಿತು. ಇದರಿಂದ ಭಟ್ಟರಿಗೆ ತೀವ್ರ ನಿರಾಶೆಯಾಯಿತು. ಅದರೊಂದಿಗೆ ಇನ್ನಷ್ಟು ರೈತರು ಸಾವಯವದಿಂದ ದೂರಾದರು ಎನ್ನುವುದಕ್ಕಿಂತಲೂ ಭತ್ತದ ಕೃಷಿಯನ್ನೇ ನಿಲ್ಲಿಸಿದರು. ಏನೆಲ್ಲಾ ಕಾರಣಗಳಿಂದ ಸಾವಯವದಲ್ಲೇ ಭತ್ತ ಬೆಳೆಯುವ ದೃಢಸಂಕಲ್ಪ ಮಾಡಿ ಉಳಿದವರು ಇಬ್ಬರೇ ರೈತರು. ಅಷ್ಟೇ ಅಲ್ಲ, ಹಿಂದೆ ರಾಸಾಯನಿಕ ಬಳಸಿ ತೆಗೆಯುತ್ತಿದ್ದ ಇಳುವರಿಗಿಂತಲೂ ಅಧಿಕ ಲಾಭವನ್ನೇ ಪಡೆಯುತ್ತಿದ್ದಾರೆ.

ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ಯಾರೆಲ್ಲಾ ಬಂದು ಮನ ಒಲಿಸಲು ಪ್ರಯತ್ನಿಸಿದರು. ಆದರೆ ಪ್ರತಿ ಹಂತದಲ್ಲಿ ಸ್ವಹಿತಾಸಕ್ತಿ ಹಾಗೂ ಸ್ವಾರ್ಥಪರತೆಯ ಚಿಂತನೆಗಳೇ ಮೇಲಾದ ಕಾರಣ ಒಗ್ಗೂಡುವಿಕೆ ಸಾಧ್ಯವಾಗಲಿಲ್ಲ. ಇತ್ತ ಸಾವಯವದ ಬೆಂಬಲಿಗರೂ ಸಹ ಯಾವುದೇ ರೀತಿಯಲ್ಲಿ ರಾಜಿಯಾಗಲು, ತಂಡದ ತೀರ್ಮಾನಗಳನ್ನು ಸಡಿಲ ಬಿಡಲು ಸಿದ್ಧರಾಗಲಿಲ್ಲ. ಕಾರಣ ಅನೇಕರು ಯೋಜನೆಯ ಅನುದಾನವನ್ನೇ ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿತ್ತು. ಇದು ಹೀಗೇ ಆಗುತ್ತಿದ್ದರೆ ಇಡೀ ಗ್ರಾಮಕ್ಕೇ ಅವಮಾನ ಎನ್ನುವ ಚಿಂತೆ ಸಾವಯವ ತಂಡದ್ದಾಗಿತ್ತು.

ಇಷ್ಟಾಗಿಯೂ ಗ್ರಾಮದ ರೈತರು ರಾಸಾಯನಿಕ ಗೊಬ್ಬರ ಬಳಸುವ ಪ್ರಮಾಣ ಕಡಿಮೆಯಾಗಿರುವುದು ಪ್ರಮುಖ ಅಂಶ. ಇದಕ್ಕೆ ಪರ್ಯಾಯ ಗೊಬ್ಬರಗಳ ಬಳಕೆಯ ಪ್ರಚೋದನೆಯೇ ಕಾರಣವಾಗಿತ್ತು.

ನೆಲ ಹದವಾಗಿ ರೋಗಾಣುಮುಕ್ತವಾಗಿರಲು ಮಾಗಿ ಉಳುಮೆ ಪದ್ಧತಿ ಒಂದು ಕ್ರಮ. ಗದ್ದೆ ಕೊಯ್ಲು ಮುಗಿದ ಮೇಲೆ ಮಲೆನಾಡಿನಲ್ಲಿ ಹೊಮ್ಮಂಡ ಬೆಳೆಯಾದ ಎಳ್ಳು, ಹೆಸರು, ಉದ್ದು, ಮಗೆಸೌತೆ, ಅಲಸಂದೆ, ಹುರುಳಿ ಮುಂತಾದ ಧಾನ್ಯ-ಕಾಳುಗಳನ್ನು ಬೆಳೆಯುವುದು ಪದ್ಧತಿ. ಹೀಗೆ ಬೆಳೆದ ಬೆಳೆಗೆ ಯಾವುದೇ ಗೊಬ್ಬರ, ನೀರು ನೀಡಬೇಕಿಲ್ಲ. ಭತ್ತಕ್ಕೆ ಹಾಕಿದ ಗೊಬ್ಬರ ಹಾಗೂ ಚಳಿಗಾಲದಲ್ಲಿ ಬೀಳುವ ಇಬ್ಬನಿಯೇ ಇದಕ್ಕೆ ಸಾಕು. ಇದು ಒಂದೆರಡು ತಿಂಗಳ ಬೆಳೆ, ಈ ಬೆಳೆಯನ್ನು ಕೊಯ್ಲು ಮಾಡಿದ ತಕ್ಷಣ ಗದ್ದೆಯನ್ನು ಉಳುಮೆ ಮಾಡಬೇಕು. ಆಗ ನೆಲದಲ್ಲಿ ತೇವಾಂಶವಿರುವ ಕಾರಣ ಉಳುಮೆ ಮಾಡುವುದು ಸುಲಭ. ಹೊಮ್ಮಂಡದಲ್ಲಿ ಬೆಳೆವ ಬೆಳೆಯ ಧಾನ್ಯ-ಕಾಳುಗಳನ್ನು ಮಾತ್ರ ಕೊಯ್ದುಕೊಂಡು ಅದರ ಗಿಡ-ಬೇರುಗಳನ್ನು ಸೇರಿಸಿ ಉಳುಮೆ ಮಾಡಿದರೆ ಇನ್ನೂ ಒಳ್ಳೆಯದು. ದ್ವಿದಳ ಧಾನ್ಯ ಹಾಗೂ ಕಾಳುಗಳ ಗಿಡದಲ್ಲಿ ಆ ನೆಲಕ್ಕೆ ಬೇಕಾದ ಪೋಷಕಾಂಶಗಳು ಬಹುಪಾಲು ಇರುತ್ತವೆ. ಉಳುಮೆಯಿಂದ ಅವೆಲ್ಲಾ ನೆಲಕ್ಕೆ ಸೇರಿ ಅಲ್ಲಿಯೇ ಕಳಿತು ಗೊಬ್ಬರವಾಗುತ್ತವೆ. ಹಾಗೇ ಬೇಸಿಗೆಯ ಬಿಸಿಲಿಗೆ ಅನೇಕ ರೋಗಕಾರಕ ಸೂಕ್ಷ್ಮಾಣುಗಳು ಸಾಯುತ್ತವೆ. ಉಳುಮೆಯಿಂದ ಮೇಲೆ ಬರುವ ಬೇರುಹುಳ, ಪೀಡೆ ಹುಳುಗಳ ಮೊಟ್ಟೆ ಮರಿಗಳನ್ನು ಹಕ್ಕಿಪಕ್ಷಿಗಳು ಆರಿಸಿ ತಿನ್ನುತ್ತವೆ. ಮುಂದೆ ಬಿತ್ತನೆ ಅಥವಾ ನೆಟ್ಟಿಯ ಸಮಯದಲ್ಲಿ ಮತ್ತೆ ನೆಲಕ್ಕೆ ಸೇರಿಸಿದರಾಯಿತು. ಮತ್ತಷ್ಟು ಪೋಷಕಾಂಶಗಳು ಗದ್ದೆಗೆ ಸೇರುತ್ತವೆ.

ಗದ್ದೆಯ ಬೇಲಿ ಸಾಲಿನಲ್ಲಿ, ಬದುಗಳಲ್ಲಿ ಗ್ಲಿರಿಸೀಡಿಯಾದ ೪,೦೦೦ ತುಂಡುಗಳನ್ನು ನಡೆಲಾಗಿದೆ. ಇದು ಗದ್ದೆಗೆ ಹಸುರೆಲೆ ಗೊಬ್ಬರವಾಗುತ್ತದೆ. ರೈತರು ಕಾಡಿನ ಅವಲಂಬನೆ ಮಾಡುವುದು ತಪ್ಪುತ್ತದೆ. ಹಾಗಂತ ಕಾಂಪೋಸ್ಟ್ ಮಾಡಲು ಹಸುರು ಸೊಪ್ಪು ಹಾಗೂ ದರಕು (ತರಗೆಲೆ) ತರುವುದು ಇದ್ದೇ ಇದೆ. ಹಿಂದೆ ಗುಂಡಿಯಲ್ಲಿ ಅದನ್ನೆಲ್ಲಾ ತುಂಬಿಸಿ ಸಗಣಿ, ಗಂಜಲ, ಸ್ಲರಿಗಳನ್ನು ಹಾಕಿ ಗೊಬ್ಬರ ಮಾಡುತ್ತಿದ್ದರು. ಆದರೆ ಅದರಲ್ಲಿ ಕೆಲವು ಸೊಪ್ಪು, ತ್ಯಾಜ್ಯಗಳು ಚೆನ್ನಾಗಿ ಕಳಿಯುತ್ತಿರಲಿಲ್ಲ. ನೆಲಮಟ್ಟಕ್ಕಿಂತ ಕೆಳಗೆ ಜೈವಿಕ ಕ್ರಿಯೆ ಚೆನ್ನಾಗಿ ನಡೆಯುವುದಿಲ್ಲ ಎಂದು ಅರಿತ ಮೇಲೆ ಸಾಕಷ್ಟು ರೈತರು ನೆಲದ ಮೇಲೆ ರಾಶಿ ಮಾಡಿ ಕಾಂಪೋಸ್ಟ್ ತಯಾರಿಸುತ್ತಿದ್ದಾರೆ. ಒಂದು ಹಾಸು ತ್ಯಾಜ್ಯ, ತರಗೆಲೆ, ಸೊಪ್ಪು, ಒಂದು ಹಾಸು ಸಗಣಿ, ಗಂಜಲ ಹಾಗೂ ಇನ್ನಿತರ ಕೊಳೆಸಲು, ಪೌಷ್ಟಿಕತೆ ಹೆಚ್ಚಲು ಕಾರಣವಾಗುವ ವಸ್ತುಗಳನ್ನು ಹಾಕಲಾಗುತ್ತದೆ. ಹೀಗೆ ಮಾಡಿದ ರಾಶಿಯನ್ನು ಬಿಸಿಲಿಗೆ ಸಿಗದಂತೆ ಮುಚ್ಚಿಡುವುದು. ದಿನಾ ನೀರು ಸಿಂಪಡಿಸಿ ತೇವಾಂಶ ಆರದಂತೆ ನೋಡಿಕೊಳ್ಳುವುದನ್ನು ಮಾಡುತ್ತಾರೆ.

ಹೀಗೆ ಮಾಡಿದ್ದರಿಂದ ಕಾಂಪೋಸ್ಟ್ ಹೆಚ್ಚು ಸತ್ವಯುತವಾಗಿದೆ. ಹಿಂದಿಗಿಂತಲೂ ಹೆಚ್ಚು ಜೈವಿಕ ಚಟುವಟಿಕೆ, ಗೊಬ್ಬರದ ಹುಳು, ಎರೆಹುಳು ಮುಂತಾದವುಗಳು ಹೆಚ್ಚಿರುವುದು, ಬಿಸಿಬಿಸಿಯಾಗಿರುವುದು ಹಾಗೂ ಹಿತವಾದ ವಾಸನೆಯಿಂದ ಕೂಡಿರುವುದನ್ನು ಹುಳೇಗಾರಿನ ರವಿ ಭಟ್ರು ವಿವರಣೆ ನೀಡುತ್ತಾರೆ.

ಎರೆಗೊಬ್ಬರ ತೇವಾಂಶದಿಂದ ಕೂಡಿರುವ ಕಾರಣ ಗದ್ದೆಗಳಿಗೆ, ತೋಟಕ್ಕೆ ಹೆಚ್ಚು ನೀರು ಕೊಡಬೇಕಾಗಿಲ್ಲ. ರಾಸಾಯನಿಕ ಗೊಬ್ಬರಗಳಿಗಿಂತಲೂ ಸಸಿಗಳು ಹಸುರಾಗಿ ಏಳುವಲ್ಲಿ, ಬೆಳೆ ಇಳುವರಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂಬುದನ್ನು ಕ್ಷೇತ್ರ ಭೇಟಿಯಿಂದ, ಎರೆಗೊಬ್ಬರ ತಯಾರಿಸಿ ಉಪಯೋಗಿಸುವ ರೈತರಿಂದ ತಿಳಿದ ಹುಳೇಗಾರಿನ ರೈತರು, ಮಹಿಳೆಯರು ತಾವೇ ಸ್ವತಃ ತಯಾರಿಸುವ ಉತ್ಸಾಹ ತೋರಿದರು. ಮೊದಲ ಎರಡು ವರ್ಷ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ಎರೆಗೊಬ್ಬರವನ್ನು ನೀಡಲಾಗಿತ್ತು. ಎರೆಗೊಬ್ಬರ ತಯಾರಿಸಲು ಸಹಾಯ ಮಾಡಿದರೆ ಅವಲಂಬನೆ ತಪ್ಪುತ್ತದೆ ಎನ್ನುವ ಕಾರಣ ಮನೆಮನೆಯಲ್ಲೂ ಎರೆಗೊಬ್ಬರದ ಘಟಕಗಳು ಮೇಲೆದ್ದವು. ಕೃಷಿ ಇಲಾಖೆಯ ಸಹಕಾರದಿಂದ ಸ್ವಸಹಾಯ ಸಂಘವೊಂದು ದೊಡ್ಡದಾದ ಘಟಕವನ್ನು ನಿರ್ಮಿಸಿದೆ. ಹೀಗೆ ಗ್ರಾಮದಲ್ಲಿ ಸಾಕಷ್ಟು ರೈತರು ತೋಟ, ಗದ್ದೆಗಳಿಗೆ ಎರೆಗೊಬ್ಬರದ ಬಳಕೆ ಪ್ರಾರಂಭಿಸಿದ್ದಾರೆ.

ರಾಸಾಯನಿಕ ಕೀಟನಾಶಕಗಳ ಬಳಕೆ ಬದಲಿಗೆ ಭತ್ತಕ್ಕೆ ಮುಕ್ಕಡಕ ಸೊಪ್ಪು, ಬೆಳ್ಳುಳ್ಳಿ ಕಷಾಯ, ಸುವರ್ಣಗೆಡ್ಡೆಯ ಕಷಾಯ, ಬೇವಿನೆಣ್ಣೆ ಹೀಗೆ ವಿವಿಧ ರೀತಿಯ ಸ್ಥಳೀಯ ಗಿಡಮೂಲಿಕೆಗಳನ್ನು ಬಳಸಿ ಮಾಡುವ ಕೀಟನಾಶಕಗಳ ಪ್ರಯೋಗ ಹೇಳಿಕೊಡಲಾಯಿತು. ರಾಸಾಯನಿಕ ಕೀಟನಾಶಕಗಳಿಂದ ವಿಷಮಯವಾಗುವ ನೆಲ, ಅದನ್ನು ಪರೋಕ್ಷವಾಗಿ ಗಾಳಿಯ ಮೂಲಕ, ಬೆಳೆಯ ಮೂಲಕ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿ ಅದರ ಕುರಿತಾದ ಸಂವಾದವನ್ನೇ ಏರ್ಪಡಿಸಿ ತಿಳುವಳಿಕೆ ನೀಡಲಾಯಿತು.

ಪಂಚಗವ್ಯದ ತಯಾರಿಕೆ, ಗೋಮೂತ್ರ, ಸಗಣಿ ಹಾಗೂ ಗಂಜಲಗಳ ಮಿಶ್ರಣ, ಅವುಗಳ ಬಳಕೆ, ಅದರಿಂದಾಗುವ ಪರಿಣಾಮ ಇವನ್ನೆಲ್ಲಾ ಸ್ವತಃ ರೈತರೇ ಮಾಡತೊಡಗಿದರು. ಭಾಗಾಯ್ತುದಾರರೂ ಸಹ ತೋಟಗಳಿಗೆ ಕೀಟನಾಶಕಗಳ ಬಳಕೆ ಬಿಡುವ ಚಿಂತನೆ ನಡೆಸಿದರು.

ಹುಳೇಗಾರು ಬಹಳ ಮಳೆ ಬೀಳುವ ಪ್ರದೇಶ. ಗುಡ್ಡಬೆಟ್ಟಗಳು, ದಟ್ಟಕಾಡು. ಮಳೆಗಾಲದಲ್ಲಿ ಅಡಿಕೆಗೆ ಕೊಳೆರೋಗ ಬರಲು ಬೇಕಾದ ವಾತಾವರಣ. ಹಾಗೇ ಪ್ರತಿವರ್ಷ ತಪ್ಪದೇ ಬರುವ ಕೊಳೆರೋಗ. ಎಕರೆಗೆ ನಾಲ್ಕಾರು ಕ್ವಿಂಟಾಲ್‌ಗಳಷ್ಟು ಪಸಲು ನಾಶ. ಕೊಳೆರೋಗಕ್ಕಿರುವ ಏಕೈಕ ಮದ್ದು ಬೋರ್ಡೋ ದ್ರಾವಣ. ಇದರ ತಯಾರಿಕೆ ಸೂತ್ರ ೧ಃ೧ ಪ್ರಮಾಣದ ಮೈಲುತುತ್ತ ಹಾಗೂ ಸುಣ್ಣದ ಮಿಶ್ರಣ. ಆದರೆ ಈ ಎರಡೂ ರಾಸಾಯನಿಕಗಳೂ ಶುದ್ಧವಾಗಿ ಸಿಗುತ್ತದೆ ಎಂದು ತಿಳಿಯುವುದೇ ತಪ್ಪು. ಹೀಗಾಗಿ ಇವೆರಡನ್ನೂ ತಟಸ್ಥ ದ್ರಾವಣವನ್ನಾಗಿ ಮಾಡಬೇಕಾದ್ದು ಸರಿಯಾದ ಕ್ರಮ. ಮೊದಲು ಮೈಲುತುತ್ತವನ್ನು ನೀರಿನಲ್ಲಿ ಕರಗಿಸಿಕೊಳ್ಳಬೇಕು. ಹಾಗೇ ಸುಣ್ಣವನ್ನೂ ಸಹ ನೀರಿನಲ್ಲಿ ಕರಗಿಸಿಕೊಳ್ಳಬೇಕು. ಎರಡರ ಪ್ರಮಾಣವೂ ಒಂದೊಂದು ಕಿಲೋಗ್ರಾಮ್ ಇರಲಿ. ನೂರು ಲೀಟರ್ ನೀರು ಹಿಡಿಯುವ ಹಂಡೆಯಲ್ಲಿ ೯೦ ಲೀಟರ್ ನೀರು ತುಂಬಿಸಿಕೊಳ್ಳಬೇಕು. ಆಮೇಲೆ ಕರಗಿಸಿದ ಮೈಲುತುತ್ತ ಹಾಗೂ ಸುಣ್ಣದ ದ್ರಾವಣಗಳನ್ನು ನಿಧಾನ ಸೇರಿಸುತ್ತಾ ಬರಬೇಕು. ಮುಕ್ಕಾಲು ಪಾಲು ಸೇರಿಸಿಯಾದ ಮೇಲೆ ದ್ರಾವಣದ ಪಿಎಚ್ (Ph) ಪರೀಕ್ಷೆ ಮಾಡಬೇಕು.

ಸಾಂಪ್ರದಾಯಿಕ ವಿಧಾನ

ಕತ್ತಿ ಅದ್ದಿ ನೋಡುವಿಕೆ : ದ್ರಾವಣದಿಂದ ಕತ್ತಿ ಕಪ್ಪಾದರೆ ಸುಣ್ಣ ಬೇಕೆಂದು, ಹಾಗೇ ಇದ್ದರೆ ಮೈಲುತುತ್ತ ಬೇಕೆಂಬ ತೀರ್ಮಾನ. ಕಾನ್ಲೆ ಕೃಷ್ಣಮೂರ್ತಿಯವರು ಅರಿಸಿನಪುಡಿ ಬಳಕೆ ಮಾಡುತ್ತಿದ್ದರು. ಅರಿಸಿನ ಪುಡಿಗೆ ದ್ರಾವಣದ ಹನಿಗಳನ್ನು ಬಿಟ್ಟಾಗ ಅದು ಕೆಂಪಾದರೆ ಮೈಲುತುತ್ತ ಬೇಕೆಂದೂ, ಹಾಗೇ ಉಳಿದರೆ ಸುಣ್ಣ ಸೇರಿಸಬೇಕೆಂದೂ, ತಿಳಿ ಕೇಸರಿಯಾದಾಗ ದ್ರಾವಣ ತಟಸ್ಥವಾಗಿದೆ ಎಂದೂ ಪ್ರಯೋಗಿಕವಾಗಿ ಮಾಡಿ ಪ್ರಚಾರ ಮಾಡಿದ್ದರು.

ಹಾಗೇ Ph ಪೇಪರ್ ಬಳಕೆ, Ph ಮೀಟರ್ ಬಳಕೆ ಮುಂತಾದವುಗಳೂ ಇವೆ. ಈ ಮಾಹಿತಿಗಳನ್ನು ಭಾಗಾಯ್ತುದಾರರಿಗೆ ನೀಡಿ ಒಟ್ಟಾರೆ ತಯಾರಿಸಿದ ನೂರು ಲೀಟರ್ ದ್ರಾವಣ ತಟಸ್ಥವಾದಾಗ ಸೂಕ್ತವಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಕೃಷಿ ಪ್ರಯೋಗ ಪರಿವಾರ ಪ್ರಾತ್ಯಕ್ಷಿಕೆ ಮಾಡಿ ತೋರಿಸಿತು. ಜೊತೆಗೆ ತೋಟಕ್ಕೆ ಸೂಕ್ತ ಗಾಳಿ, ಬೆಳಕಿನ ಅವಶ್ಯಕತೆ ಬಗ್ಗೆಯೂ ವಿಚಾರವಿನಿಮಯಗಳು ನಡೆದವು.

ಬೋರ್ಡೋ ಮಳೆ ಬೀಳುವ ಮೊದಲೇ ಸಿಂಪಡಿಸುವಿಕೆ : ಸುಮಾರು ೨೦-೨೫ ದಿನಗಳವರೆಗೆ ಅದರ ಕಾರ್ಯಕ್ಷಮತೆ. ಹೀಗಾಗಿ ಮಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪದೇ ಪದೇ ಸಿಂಪಡಿಸಬೇಕಾದ ಅವಶ್ಯಕತೆ. ಮೈಲುತುತ್ತ ಅಥವಾ ಸುಣ್ಣದ ಪ್ರಮಾಣ ಹೆಚ್ಚಾದರೆ ಆಗುವ ಪರಿಣಾಮಗಳು ಮುಂತಾದ ತಿಳುವಳಿಕೆಗಳು ಪ್ರಶ್ನೋತ್ತರ ವೇಳೆಯಲ್ಲಿ ತಿಳಿಯಾಯಿತು.

ಬೋರ್ಡೋಗೆ ಪರ್ಯಾಯ ಮದ್ದಿಲ್ಲ. ಆದರೆ ಹಿಂದಿನ ಸಾಂಪ್ರದಾಯಿಕ ವಿಧಾನವಾದ ಕೊಟ್ಟೆ ಕಟ್ಟುವಿಕೆಯಿಂದ ಸಂಪೂರ್ಣ ನಿಯಂತ್ರಣ ಸಾಧ್ಯವೆಂದು ಸಾಧಿಸಿದ ಕಿಲಾರದ ಶ್ರೀರಾಮ ಭಟ್ಟರು ಹಾಗೂ ಕೊಟ್ಟೆ ಕಟ್ಟುವ ತಂಡದವರನ್ನೇ ಕರೆಸಿ ಮಳೆ ಬೀಳುವ ಮೊದಲೇ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು.

ಹಾಳೆಯನ್ನು ಬಿದಿರುಕಡ್ಡಿಗಳಿಂದ ಜೋಡಿಸಿ ತಯಾರಿಸುವ ಕವಚ, ಕರಡ ಹಾಗೂ ಪ್ಲಾಸ್ಟಿಕ್ ಹಾಳೆ ಬಳಸಿ ಹಗ್ಗದಿಂದ ನೇಯ್ದು ಮಾಡುವ ಕೋಟು ಹಾಗೂ ಸೂಕ್ತ ಅಳತೆಯ, ಮಾದರಿಯ ಪ್ಲಾಸ್ಟಿಕ್ ಕೊಟ್ಟೆಯನ್ನೇ ಬಳಸುವ ವಿಧಾನ. ಅದನ್ನು ಅಡಿಕೆ ಗೊನೆಗಳಿಗೆ ಕಟ್ಟುವ ರೀತಿಗಳನ್ನು ತೋರಿಸಿದರು. ಸ್ಥಳೀಯ ಕೊನೆಗಾರರು ಅದನ್ನು ಮಾಡಿ ಕಲಿತುಕೊಂಡರು. ಕೆಲವರು ತಮ್ಮ ತೋಟಗಳಿಗೆ ಕೊಟ್ಟೆ ಕಟ್ಟಿಸಿದ್ದೂ ಆಯಿತು. ಈ ರೀತಿಯ ಕೊಟ್ಟೆ ಕಟ್ಟಿಸುವುದರಿಂದ ಕೊಳೆರೋಗ ನಿವಾರಣೆಯೊಂದೇ ಅಲ್ಲ. ಅಡಿಕೆಯ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಸಿಪ್ಪೆಯು ಬಿಡಿಸಲು ಮೃದುವಾಗಿದ್ದು ಗುಣಮಟ್ಟ ಚೆನ್ನಾಗಿರುತ್ತದೆ ಎನ್ನುವುದು ಶ್ರೀರಾಮಭಟ್ಟರ ಪ್ರತಿಪಾದನೆ.

ಈ ವಿಧಾನದಿಂದ ಕೊಳೆರೋಗ ನಿಯಂತ್ರಣವಾಗುವುದಾದರೂ ಹುಳೇಗಾರು ಗ್ರಾಮ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕೂಲಿಕಾರ್ಮಿಕರ ಕೊರತೆಯಿರುವ ಕಾರಣ ಕೊಟ್ಟೆಗಳ ತಯಾರಿ, ಪ್ರತಿಮರವನ್ನೂ ಗೊನೆಯ ಬುಡದವರೆಗೆ ಹತ್ತಿ ಹೋಗಿ ಕೊಟ್ಟೆ ಕಟ್ಟುವ ಶ್ರಮ ಇವೆಲ್ಲಾ ಕಷ್ಟ ಎನ್ನುವ ಅಭಿಪ್ರಾಯವೂ ಬಂತು.

ಪಾಲೇಕರರ ಜೀವಾಮೃತ ವಿಧಾನ ರೈತರನ್ನು ಆಕರ್ಷಿಸಿದ್ದು ಇದೇ ಸಮಯದಲ್ಲಿ. ಅವರ ವಿಧಾನಗಳನ್ನು ತಿಳಿದುಬಂದ ಕೆಲವು ರೈತರು ತಮ್ಮ ಹೊಲಗದ್ದೆಗೆ, ತೋಟಕ್ಕೆ ಅಳವಡಿಸಲು ಸಿದ್ಧರಾದರು. ಜೀವಾಮೃತ ತಯಾರಿಕೆಗೆ ಯೋಜನೆಯಿಂದ ೨೦೦ ಲೀಟರ್ ಡ್ರಮ್ ಕೊಳ್ಳಲು ಸಹಾಯಧನ ನೀಡಲಾಯಿತು. ಮುಚ್ಚಿಗೆಯಾಗಿ ಅಡಿಕೆ ಸೋಗೆ ಹಾಗೂ ತ್ಯಾಜ್ಯಗಳನ್ನು ಬಳಸುವಿಕೆ ರೂಢಿಗೆ ಬಂತು.

ವಿಧಾನಗಳು ಯಾವುದೇ ಇರಲಿ, ರಾಸಾಯನಿಕ ಗೊಬ್ಬರ, ರಾಸಾಯನಿಕ ಪೀಡೆನಾಶಕಗಳನ್ನು ಬಳಸುವಿಕೆ ಕಡಿಮೆ ಮಾಡುತ್ತಾ ಶೂನ್ಯವಾಗಿಸಬೇಕೆಂಬುದೇ ಸಾವಯವ ಗ್ರಾಮ ಯೋಜನೆಯ ಉದ್ದೇಶ. ಆದರೆ ಸಾವಯವ ವಿಧಾನಗಳು ಫಲ ಕೊಡುವಿಕೆ ಅತ್ಯಂತ ನಿಧಾನ. ಆನಂತರದಲ್ಲಿ ಉತ್ತಮ ಇಳುವರಿ, ಆರೋಗ್ಯ, ನೆಲದ ಜೀವಂತಿಕೆ, ಪರಿಸರ ಸಂರಕ್ಷಣೆ, ಜೀವವೈವಿಧ್ಯಗಳ ರಕ್ಷಣೆ ಹೀಗೆ ಏನೆಲ್ಲಾ ಒಳಿತಾಗುವುದಾದರೂ ರಾಸಾಯನಿಕಗಳ ಅಮಲಿನಿಂದ ಹುಳೇಗಾರು ಗ್ರಾಮದ ಕೆಲವು ರೈತರನ್ನು ಹೊರತರಲು ಸಾಧ್ಯವಾಗಲಿಲ್ಲ. ಮತ್ತೆ ಮತ್ತೆ ನಡೆದ ಸಭೆಯಲ್ಲಿ ಚರ್ಚೆ ಮಾಡಿ ಕುರಿಗೊಬ್ಬರ, ಕೋಳಿಗೊಬ್ಬರಗಳನ್ನು ತರಿಸುವ ಕುರಿತಾಗಿ ಯೋಜನೆ ರೂಪಿಸಲಾಯಿತು. ಜೈವಿಕ ಗೊಬ್ಬರ, ಬೇವಿನ ಹಿಂಡಿ, ಹರಳು ಹಿಂಡಿ, ಹೊಂಗೆ ಹಿಂಡಿ ಹಾಗೂ ಮಣ್ಣಿನ ಆಮ್ಲೀಯತೆ ಕಡಿಮೆ ಮಾಡುವ ಡೋಲಮೈಟ್ ಸುಣ್ಣ ಮುಂತಾದವುಗಳನ್ನು ಪ್ರಾರಂಭದ ವರ್ಷದಲ್ಲೇ ನೀಡಲಾಗಿತ್ತು. ಇವುಗಳ ಪರಿಣಾಮ ಚೆನ್ನಾಗಿಯೇ ಇರುವ ಪ್ರಯುಕ್ತ ಪ್ರತಿವರ್ಷವೂ ಇವುಗಳೊಂದಿಗೆ ಕೋಳಿಗೊಬ್ಬರ, ಕುರಿ ಗೊಬ್ಬರಗಳನ್ನು ನೀಡಿದರೆ ಇಳುವರಿಯ ಪ್ರಮಾಣ ಹೆಚ್ಚಬಹುದೆಂಬ ಚಿಂತನೆ ರೈತರದು. ನೆಲವನ್ನು ಫಲವತ್ತುಗೊಳಿಸುವ ವಿಧಾನಗಳೆಲ್ಲಾ ಒಂದೊಂದಾಗಿ ಗ್ರಾಮದಲ್ಲಿ ಅಳವಡಿಕೆಯಾಗತೊಡಗಿದವು.

ಎರೆಗೊಬ್ಬರ ತಯಾರಿಕೆ ಪ್ರಾರಂಭವಾದ ಮೇಲೆ ಅದರ ಮಾರಾಟದಿಂದ ಸ್ವಲ್ಪ ಪ್ರಮಾಣದ ಹಣ ಗಳಿಕೆಯೂ ಆಗತೊಡಗಿತು. ಎರೆಗೊಬ್ಬರವು ಗದ್ದೆ, ಭಾಗಾಯ್ತಿನೊಂದಿಗೆ ತರಕಾರಿ ತೋಟಗಳಲ್ಲಿ ಬಳಕೆಯಾಗತೊಡಗಿತು.

ಸಾವಯವ ಆಹಾರ ಹಾಗೂ ಗಿಡಮೂಲಿಕಾ ಔಷಧಿಗಳಿಂದ ಪೇಟೆ ಇಂಗ್ಲೀಷ್ ಔಷಧಿಗಳನ್ನು ನಿಯಂತ್ರಿಸಬಹುದು ಎಂಬ ಕುರಿತಾಗಿ ಆಹಾರ-ಆರೋಗ್ಯ ಶಿಬಿರ ತಿಳಿಸಿತು. ಮನೆಯ ಹಿತ್ತಿಲು, ಪಕ್ಕದ ಕಾಡುಗಳಲ್ಲಿರುವ ಸೊಪ್ಪುಗಳು, ನಾರುಬೇರು, ಗೆಡ್ಡೆ, ಕಾಯಿ-ಹಣ್ಣುಗಳು, ತಂಬ್ಳಿ, ಪಲ್ಯ, ಸಾಸುವೆ-ಸಾರು ಏನೆಲ್ಲಾ ಆಹಾರವಾಗುವುದು. ಜೊತೆಗೆ ಔಷಧಿಗಳೂ ಆಗಬಹುದು ಎನ್ನುವುದನ್ನು ತಜ್ಞರು ತೋರಿಸಿಕೊಟ್ಟರು. ಹಿತ್ತಲಿನಲ್ಲೇ ಬೆಳೆವ ಸೊಪ್ಪು, ನಾರುಬೇರುಗಳಿಂದ ಹತ್ತಕ್ಕೂ ಹೆಚ್ಚು ಕಾಯಿಲೆಗಳಿಗೆ ಔಷಧಿಗಳನ್ನು ತಯಾರಿಸಿಕೊಳ್ಳಲು ಸಾಧ್ಯ ಎಂದು ಇಂದು ಪ್ರತಿ ಮನೆಯ ಗೃಹಿಣಿಯರೂ ಮಾಡಿ ತೋರಿಸಬಲ್ಲರು. ಮಳೆಗಾಲಕ್ಕೆ ತಕ್ಕ ಕಷಾಯ, ಬೇಸಿಗೆ, ಚಳಿಗಾಲಕ್ಕೆ ತಕ್ಕ ಕಷಾಯಗಳನ್ನು ಮಾಡಿ ದೇಹವನ್ನು ಸಮತೋಲನದಲ್ಲಿಡುವಲ್ಲಿಯೂ ಗ್ರಾಮದ ಮಾತೆಯರು ತಜ್ಞರಾಗಿದ್ದಾರೆ. ಯೋಜನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಅನೇಕ ರೈತರ ಮನೆಗಳಲ್ಲಿ ಅಪ್ಪಟ ದೇಶೀಯ ರುಚಿರುಚಿಯಾದ ಪದಾರ್ಥಗಳೇ ನಿತ್ಯದೂಟ. ಇದರಿಂದ ಪೇಟೆಯಲ್ಲಿ ಏರುತ್ತಲೇ ಇರುವ ತರಕಾರಿಗಳ ಬೆಲೆಯ ಬಿಸಿ ಇವರಿಗೆ ತಟ್ಟುವುದು ಕಡಿಮೆಯಾಯಿತು. ಕಲ್ಮಕ್ಕಿ ಗ್ರಾಮದ ಸುವರ್ಣಮ್ಮನವರ ಹಿತ್ತಲಲ್ಲಿ ಹರಿವೆ, ಬಸಳೆ, ತೊಂಡೆ, ಹೀರೆ, ಬೀನ್ಸ್, ಬೀಟ್‌ರೂಟ್, ಬದನೆ, ಮೂಲಂಗಿ, ಗೆಡ್ಡೆಕೋಸು, ಸೌತೆ, ಪಟ್ಲು, ಮೆಣಸಿನಕಾಯಿ, ಹಾಗಲಕಾಯಿ, ಹೀಗೆ ತರಕಾರಿಗಳ ಸಂತೆಯೇ ಇದೆ. ಮಾಲತಿ ಸದಾಶಿವಭಟ್‌ರು ಪ್ರತಿವರ್ಷ ಎರಡು ಅಂಕಣ ಕೆಂಪು ಹರಿವೆ ಹಾಕಿ ಮಾರಾಟ ಮಾಡುತ್ತಾರೆ. ಸುವರ್ಣಮ್ಮ ಹರಿವೆಯೊಂದಿಗೆ ಬೀಟ್‌ರೂಟ್, ಮೂಲಂಗಿ, ಗೆಡ್ಡೆಕೋಸು, ತೊಂಡೆಕಾಯಿಗಳನ್ನು ಮಾರುತ್ತಾರೆ. ಕೆಲವೊಮ್ಮೆ ಊರಿನೊಳಗೆ ವಿನಿಮಯವಾಗುವುದೂ ಇದೆ. ಪೇಟೆಗಿಂತ ಕಡಿಮೆ ಬೆಲೆ. ಆದರೂ ಲುಕ್ಸಾನಾಗಿಲ್ಲ. ಮನೆಯಲ್ಲೇ ತಯಾರಿಸಿದ ಗೊಬ್ಬರ, ಗಂಜಲಗಳ ಬಳಕೆ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎನ್ನುವುದು ಇವರ ನಿಲುವು.

ಹಿತ್ತಲಿನಲ್ಲಿ ಕೇವಲ ತರಕಾರಿಗಳೊಂದೇ ಅಲ್ಲ. ವಿವಿಧ ಜಾತಿಯ ದಾಸವಾಳ, ಗುಲಾಬಿ, ಕ್ರೋಟನ್‌ಗಳು, ಆಂಥೋರಿಯಂ, ಡೇರಾ ಏನೆಲ್ಲಾ ಹೂ ಬಿಡುವ ಚಂದದ ಗಿಡಗಳಿಗೂ ಸ್ಥಾನವಿದೆ. ಅವು ಹಿತ್ತಲಿನ ಅಂದ ಹೆಚ್ಚಿಸಲು ಮಾತ್ರ. ಕೆಲವೊಮ್ಮೆ ಮಲ್ಲಿಗೆ, ಕನಕಾಂಬರಗಳು ಮಾರಾಟವಾಗುತ್ತವೆ.

ಇದೇ ರೀತಿ ಹಿತ್ತಲಿನಲ್ಲಿಯೇ ಹಣ್ಣುಗಳನ್ನು ಬೆಳೆಯುವ ಆಸಕ್ತಿ ರೈತರಲ್ಲಿ ಮೂಡಿತು. ಮಾವು, ಚಿಕ್ಕು, ನೆಲ್ಲಿ, ಹಲಸು, ಮುರುಗನ ಹುಳಿ ಹಾಗೂ ಮಿಡಿಮಾವಿನ ಗಿಡಗಳನ್ನು ಆಯ್ಕೆ ಮಾಡಲಾಯಿತು. ಈ ಎಲ್ಲಾ ಕಾಯಿ, ಹಣ್ಣುಗಳನ್ನು ಮನೆಯಲ್ಲಿಯೂ ಬಳಸಬಹುದು. ಇದರ ಪದಾರ್ಥಗಳನ್ನು ಮಾಡಿ ಅಥವಾ ಹಾಗೆಯೇ ಮಾರಾಟ ಮಾಡಲೂ ಸಾಧ್ಯ. ಇದೊಂದು ರೀತಿ ಆಹಾರ ಹಾಗೂ ಆದಾಯ ಎರಡೂ ಒಮ್ಮೆಲೇ ಆಗುವ ಸಾಧ್ಯತೆ. ಹೀಗಾಗಿ ಸುಮಾರು ೨,೦೦೦ ಗಿಡಗಳನ್ನು ತರಿಸಿ ಆಸಕ್ತ ರೈತರಿಗೆ ನೀಡಲಾಯಿತು. ಹಿತ್ತಲಿನ ಬದುಗಳಲ್ಲಿ, ಬ್ಯಾಣದಲ್ಲಿ, ತೋಟದ ತಲೆಕಟ್ಟಿನಲ್ಲಿ ಎಲ್ಲಾದರೂ ಬದುಕಬಲ್ಲ ಸಾಮರ್ಥ್ಯದ ಗಿಡಗಳಿವು. ಮೂರು ವರ್ಷ ಜಾನುವಾರುಗಳಿಂದ ರಕ್ಷಿಸಿ ಒಂದಿಷ್ಟು ನೀರುನೀಡಿದರೂ ಸಾಕು.

ಮಲೆನಾಡಿನಲ್ಲಿ ಮಳೆ ಹೆಚ್ಚಾಗಿರುವ ಕಾರಣ ಕೈತೋಟಗಳಲ್ಲಿ ಬೆಳೆವ ತರಕಾರಿಗಳು ಸೂಕ್ತ ನಿರ್ವಹಣೆ ಇಲ್ಲದಿದ್ದರೆ ಕೊಳೆತುಹೋಗುತ್ತವೆ. ಹೀಗಾಗಿ ಮಳೆಗಾಲದಲ್ಲಿ ಬೆಳೆವ ತರಕಾರಿಗಳು ಹಾಗೂ ಬೇಸಿಗೆಯಲ್ಲಿ ಬೆಳೆವ ತರಕಾರಿಗಳು ವಿಭಿನ್ನ. ಬೇಸಿಗೆಯಲ್ಲೂ ಅನೇಕ ಮನೆಗಳ ಬಾವಿ ಬತ್ತಿಹೋಗುವ ಕಾರಣ ಹೆಚ್ಚು ನೀರು ಬಯಸುವ ತರಕಾರಿಗಳು ಒಣಗಿಹೋಗುತ್ತವೆ. ಆದರೂ ಹರಿವೆ, ಬಸಳೆ (ಗಿಡ ಹಾಗೂ ಬಳ್ಳಿ), ಮೆಂತೆ, ಕೊತ್ತಂಬರಿ, ಪುದೀನ ಮೊದಲಾದವುಗಳನ್ನು ಮಳೆ ಕಡಿಮೆಯಾದ ಮೇಲೆ ಬೆಳೆಯಲು ಸಾಧ್ಯ. ಕುಂಬಳ, ಸೋರೆ, ಹೀರೆ, ತೊಂಡೆ, ಪಡುವಲ, ಸೀಮೆಸೌತೆ (ಸೀಮೆ ಬದನೆ), ಡಬ್ಬಲ್ ಬೀನ್ಸ್, ಸೌತೆ, ಮುಂತಾದ ಬಳ್ಳಿ ತರಕಾರಿಗಳನ್ನು ಚಪ್ಪರ ಮಾಡಿ ಅಥವಾ ನೆಲಕ್ಕೆ ಹಬ್ಬಿಸಿ ಬೆಳೆಯಬಹುದು. ಸೋಗೆಯ ಮನೆಯಿದ್ದರೆ, ಹೆಂಚು ಅಥವಾ ಟೆರೇಸ್ ಮನೆಯ ಮೇಲೂ ಬೆಳೆಯಲು ಸಾಧ್ಯ.

ಕೇವಲ ಹತ್ತು ಅಡಿ ಜಾಗದಿಂದ ಹಿಡಿದು ಎರಡು ಗುಂಟೆ ಜಾಗದವರೆಗೂ ನಾನಾ ನಮೂನೆಯ ತರಕಾರಿ ಬೆಳೆದು ಮಾರುವವರು, ಮನೆಗೆ ಬಳಸುವವರೂ ಇದ್ದಾರೆ. ಟೆರ್ರಾಸ್ ತೋಟ? ಮಾಡಿದವರೂ ಇದ್ದಾರೆ. ಇದಕ್ಕೆ ತರಕಾರಿಗಳ ಆಯ್ಕೆ, ಮಣ್ಣು, ಗೊಬ್ಬರ ಹಾಗೂ ಬೆಳೆಯುವ ಮನಸ್ಸು ಬೇಕು.

(ಕನಕಪುರದ) ಚೂಡೇಗೌಡರು ಕೈತೋಟದ ವಿನ್ಯಾಸ ಮಾಡುವುದರಲ್ಲಿ ಪರಿಣಿತರು. ನಕ್ಷತ್ರ ತೋಟ, ವೃತ್ತಾಕಾರದ ತೋಟ, ಚೌಕ ತೋಟ, ಹೀಗೆ ಅನೇಕ ಮಾದರಿಯ ತೋಟ ಕಟ್ಟುವಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸುತ್ತಾರೆ.

ಮಲೆನಾಡಿನಲ್ಲಿ ಕಾಂಪೋಸ್ಟ್ ಗೊಬ್ಬರ ಯಥೇಚ್ಛವಾಗಿ ಸಿಗುತ್ತದೆ. ಹಾಗೇ ಅಡಿಕೆ ಸಿಪ್ಪೆ, ಗಂಜಲ, ಸ್ಲರಿಗಳು, ಅಡಿಕೆ ಸೋಗೆ, ಸೊಪ್ಪು ಸಹ ಬೇಕಾದಷ್ಟು ಸಿಗುತ್ತದೆ. ಇವುಗಳೇ ತರಕಾರಿಗೆ ಗೊಬ್ಬರ. ನೆಲವನ್ನು ಸಡಿಲ ಮಾಡಿಕೊಂಡು ಇವನ್ನೆಲ್ಲಾ ಮಣ್ಣಿನೊಂದಿಗೆ ಸೇರಿಸಿ ಹದ ಮಾಡಿಕೊಳ್ಳಬೇಕು. ಒಂದೆರಡು ದಿನ ಬಿಟ್ಟು ಮೊಳಕೆ ಬಂದ ಸಸಿಗಳನ್ನು ನೆಡಬೇಕು.

ಸಾಲಾಗಿ ಪಟ್ಟಿಗಳನ್ನು ಮಾಡಿ ಜೋಳ, ಡಬ್ಬಲ್ ಬೀನ್ಸ್, ಬೆಂಡೆ, ಅಲಸಂದೆ, ಬದನೆ, ಟೊಮ್ಯಾಟೋಗಳನ್ನು ಬೆಳೆಯುವ ಪದ್ಧತಿ ಸಾಂಪ್ರದಾಯಿಕವಾಗಿ ನಡೆದುಬಂದಿದೆ. ಅದೇ ರೀತಿ ಅಡಿಕೆ ದಬ್ಬೆಯ ಚಪ್ಪರ ಮಾಡಿ ಅದಕ್ಕೆ ತೊಂಡೆ, ಪಡುವಲ, ಹೀರೆ, ಬಸಳೆಬಳ್ಳಿ ಮುಂತಾದವುಗಳನ್ನು ಬೆಳೆಸುತ್ತಾರೆ. ಕುಂಬಳ, ಸೋರೆ, ಸೀಮೆಬದನೆ, ಸೌತೆ ಬಳ್ಳಿಗಳನ್ನು ನೆಲಕ್ಕೆ ಅಥವಾ ಮನೆಗೆ ಹಬ್ಬಿಸಿ ಬೆಳೆಯಲಾಗುತ್ತದೆ. ನಾಲ್ಕು ಅಡಿ ಉದ್ದಗಲದ ಅಂಕಣ ಮಾಡಿ ಹರಿವೆ, ಮೆಂತೆ, ಕೊತ್ತಂಬರಿಗಳನ್ನು ಪ್ರತ್ಯೇಕ ಬೆಳೆಸುತ್ತಾರೆ.

ಸ್ವಲ್ಪ ವಿಭಿನ್ನವಾಗಿ ಯೋಚಿಸಿದಾಗ ಹರಿವೆ ಕಣದ ಸುತ್ತಲೂ ಕೊತ್ತಂಬರಿ, ಮಂತೆ ಬೆಳೆಯಬಹುದು. ನೆಲದಲ್ಲಿ ಸೌತೆ ಹಬ್ಬಿಸಿ ಮೇಲೆ ಚಪ್ಪರ ಮಾಡಿ ಹೀರೆ, ತೊಂಡೆ ಬೆಳೆಯಬಹುದು. ಮನೆಯ ಸುತ್ತಲಿನ ಒಂದೊಂದು ದಿಕ್ಕಿನಲ್ಲೂ (ಕೊಟ್ಟಿಗೆ ಮನೆಗೂ ಆಗಬಹುದು) ಕುಂಬಳ, ಸೋರೆ, ಪಡುವಲ, ಮುಂತಾದವುಗಳನ್ನು ಬೆಳೆಯಲು ಸಾಧ್ಯ. ತೆಂಗನಮರದ ಸುತ್ತಲೂ ಕಟ್ಟೆ ಕಟ್ಟಿ ಬದನೆ, ಸೀಮೆಬದನೆ ಬಳ್ಳಿಗಳನ್ನು ಹಾಕಬಹುದು. ಪ್ಲಾಸ್ಟಿಕ್ ಚೀಲದಲ್ಲಿ ಅರ್ಧದಷ್ಟು ಮಣ್ಣು, ಗೊಬ್ಬರ ತುಂಬಿ ಟೊಮ್ಯಾಟೋ, ಮೆಣಸಿನಕಾಯಿ ಬೆಳೆಯಲು ಸಾಧ್ಯ. ತೊಂಡೆಗೆ ಬಚ್ಚಲು ನೀರು ಸಿಕ್ಕರೂ ಸಾಕು. ಹರಿವೆಗೆ ಗೊಬ್ಬರದ ಗುಂಡಿಯೇ ಆದೀತು. ಅಂಗಳದ ಮೂಲೆಯಲ್ಲಿ ಸುವರ್ಣಗೆಡ್ಡೆ, ಟಾಪಿಯೋಕ್‌ದಂತಹ ಗೆಡ್ಡೆ ಬೆಳೆಯಲು ಶ್ರಮವೇ ಬೇಡ. ಬೀಜ ಬಿತ್ತಿದರಾಯಿತು. ಯಾವುದಕ್ಕೆ ಅಧಿಕ ಬಿಸಿಲು ಬೇಕು, ನೆರಳಷ್ಟೇ ಸಾಕು ಎಂಬುದನ್ನು ಕಂಡುಕೊಂಡರೆ ತರಕಾರಿಗಳ ಕಾಂಬಿನೇಶನ್ ಸುಲಭವಾಗಿ ಮಾಡಬಹುದು.

ಒಂದು ಅಡಿ ಆಳ ನೆಲ ಅಗೆದು ಅಡಿಕೆ ಸಿಪ್ಪೆ ಸೇರಿಸಿ ಚೆನ್ನಾಗಿ ಕಳಿತ ಗೊಬ್ಬರ ಹಾಕಬೇಕು. ಅದರಲ್ಲಿ ಬೀಟ್‌ರೂಟ್, ಗೆಡ್ಡೆಕೋಸು, ನವಿಲುಕೋಸು, ಹೂಕೋಸು, ಮೂಲಂಗಿ, ದಂಟು ಹರಿವೆ ಇವನ್ನೆಲ್ಲಾ ಒಟ್ಟಿಗೆ ಬೆಳೆಯಲು ಸಾಧ್ಯ. ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ, ಗೆಣಸಿನಗೆಡ್ಡೆ ಮುಂತಾದ ನೆಲದೊಳಗಿನ ತರಕಾರಿಗಳನ್ನೂ ಅಂಗಳದಲ್ಲೇ ಬೆಳೆಯಬಹುದು. ತರಕಾರಿಯು ಅಲ್ಪಾವಧಿಯ ಬೆಳೆಯಾದ್ದರಿಂದ ವರ್ಷಾವಧಿ ವಿಭಿನ್ನ ತರಕಾರಿ ಬೆಳೆಯಲು ಸಾಧ್ಯ. ಮಳೆಗಾಲದಲ್ಲಿ ಬಳ್ಳಿ ತರಕಾರಿಗಳು, ಚಳಿಯಲ್ಲಿ ಗೆಡ್ಡೆ ತರಕಾರಿಗಳು ಹಾಗೂ ಬೇಸಿಗೆಯಲ್ಲಿ ಸೊಪ್ಪು, ಗಿಡ ತರಕಾರಿಗಳು ಮಲೆನಾಡಿಗೆ ಸೂಕ್ತವಾಗಿವೆ.

ಬೂದಿ ಸಿಂಪಡಣೆ, ಬೋರ್ಡೋ ಸಿಂಪಡಣೆ, ಗಂಜಲದ ಸಿಂಪಡಣೆಯಿಂದ ಇವುಗಳಿಗೆ ಬರುವ ರೋಗ ನಿವಾರಣೆ ಮಾಡಬಹುದೆಂಬುದು ಕಲ್ಮಕ್ಕಿಯ ಸುವರ್ಣಮ್ಮನವರ ಅನುಭವ.

ಗೊಬ್ಬರ ನೀಡಿದರೆ ಜೀವನಪರ್ಯಂತ ಫಸಲನ್ನು ಕೊಡುತ್ತಲೇ ಇರುತ್ತವೆ. ಯಾವುದೇ ರೋಗ, ಕೀಟಗಳ ದಾಳಿ ಎದುರಿಸುತ್ತಾ ಇಡೀ ಹಿತ್ತಲನ್ನೇ ಸಮೃದ್ಧಗೊಳಿಸುವ ಶಕ್ತಿ ಹಣ್ಣಿನ ಮರಗಳದು. ತರಕಾರಿ, ಹಣ್ಣುಗಳಂತಹ ಉಪ ಉತ್ಪನ್ನಗಳೇ ಕೆಲವೊಮ್ಮೆ ಮನೆಯನ್ನು ನಿರ್ವಹಿಸುವ, ಆಪತ್ತಿಗಾಗುವ ಆದಾಯವೂ ಆಗುತ್ತದೆ ಎನ್ನುತ್ತಾರೆ ಗ್ರಾಮದ ಜಯಲಕ್ಷ್ಮಿ ಸದಾಶಿವಭಟ್‌ರು.

ಈ ರೀತಿ ಉಪಕಸುಬಿಗೆ ಸೇರುವ ವೃತ್ತಿ ಎಂದರೆ ಜಾನುವಾರು ಸಾಕಣೆ, ಜೇನು ಸಾಕಣೆ, ಕೋಳಿ ಸಾಕಣೆ ಮುಂತಾದವುಗಳು. ಸಾವಯವದೊಂದಿಗೆ ಸ್ವದೇಶಿಯನ್ನೂ ಚಿಂತಿಸುವ ಗ್ರಾಮದ ಕೆಲವು ರೈತರು ದೇಶೀ ತಳಿಯ ಜಾನುವಾರುಗಳನ್ನೇ ಸಾಕುತ್ತಿದ್ದಾರೆ. ಜೊತೆಗೆ ಮಿಶ್ರ ತಳಿಯ ಸಾಕಣೆಯೂ ಗ್ರಾಮದಲ್ಲಿದೆ. ಗೋಮಾಳ, ಕಾಡುಗಳು ಯಥೇಚ್ಛವಾಗಿರುವ ಕಾರಣ ದೇಸಿ ತಳಿಯ ಜಾನುವಾರು ಸಾಕಣೆ ಸುಲಭ. ಮಿಶ್ರತಳಿಯ ಸಾಕಣೆಯಲ್ಲಿ ಕಟ್ಟಿ ಸಾಕುವ ವಿಧಾನ ಅನುಸರಿಸುವ ಕಾರಣ ಒಣಹುಲ್ಲು, ಹಸಿಹುಲ್ಲು, ಹಿಂಡಿ, ಮೇವು ಅಧಿಕ ಬೇಕು. ಹಿತ್ತಲಿನಲ್ಲಿ, ಗದ್ದೆಯಿಂದ ಮೇವು ಸಿಕ್ಕರೆ ಲಾಭವಾಗುತ್ತದೆ. ಅನ್ಯಥಾ ಮಿಶ್ರತಳಿಯ ಜಾನುವಾರು ಸಾಕಣೆ ಕಷ್ಟ.

ಹೀಗೆ ಪೋಷಕಾಂಶಗಳ ಪೂರೈಕೆ ಹಾಗೂ ಮೇವಿನ ಉದ್ದೇಶಕ್ಕಾಗಿ ಅಜೋಲಾ ಬೆಳೆಯಲು ರೈತರಿಗೆ ತರಬೇತಿ ನೀಡಿ ಸಹಾಯಧನ ನೀಡಲಾಯಿತು. ಆರಂಭದಲ್ಲಿ ೫೦ ರೈತರು ಉತ್ಸಾಹದಿಂದ ಪಾಲ್ಗೊಂಡರು. ತೊಟ್ಟಿಗಳ ನಿರ್ಮಾಣ, ಅಜೋಲಾ ಬೆಳೆಯುವಿಕೆ, ಅದನ್ನು ಜಾನುವಾರುಗಳಿಗೆ ನೀಡುವುದು ಇತ್ಯಾದಿ. ಅಜೋಲಾದಿಂದ ಉತ್ತಮ ಫಲಿತಾಂಶ ಸಿಕ್ಕಿತೇ ಎಂದು ಕೇಳಿದರೆ ಜಾನುವಾರುಗಳು ಇಷ್ಟಪಟ್ಟು ತಿನ್ನುತ್ತಿದ್ದವು. ಜಾನುವಾರುಗಳಿಗೆ ನೀಡುವ ಪ್ರಮಾಣ ಕಡಿಮೆ ಮಾಡಿ ಅಜೋಲಾ ಬೆರೆಸಿಕೊಟ್ಟೆವು. ವಿಶೇಷ ಪರಿಣಾಮ ಕಾಣಲಿಲ, ಹೀಗಾಗಿ ಆಸಕ್ತಿ ಕಡಿಮೆಯಾಯಿತು ಎನ್ನುವುದನ್ನು ಉಸುರುತ್ತಾರೆ. ಸೂಕ್ತವಾಗಿ ನಿರ್ವಹಿಸದೇ, ಕ್ರಮಬದ್ಧವಾಗಿ ಬೆಳೆ ತೆಗೆಯದೇ ಅಜೋಲಾ ಬೆಳೆಯುವುದನ್ನು ಅನೇಕರು ನಿಲ್ಲಿಸಿದರು. ಅಜೋಲಾದ ಮೇಲೆ ವಿಶ್ವಾಸವಿಲ್ಲದ ಕಾರಣ ಅದೀಗ ಗ್ರಾಮದಿಂದಲೇ ಮರೆಯಾಗಿದೆ.

ಇದರರ್ಥ ಜಾನುವಾರು ಸಾಕಣೆ ವಿಫಲವೆಂದಲ್ಲ. ಊರಿನಲ್ಲಿ ಹಾಲು ಉತ್ಪಾದಕರ ಸಂಘವಿದ್ದು ಉತ್ತಮ ಉತ್ಪಾದನೆಯಿದೆ. ಅದಕ್ಕಾಗಿ ಮೇವಿನ ಬೆಳೆಗಳು, ಅದನ್ನು ಬೆಳೆಯುವಿಕೆ, ಬಳಸುವ ವಿಧಾನ, ಅದರಿಂದಾಗುವ ಪರಿಣಾಮಗಳ ಕುರಿತು ಡಾ.ಜಿ.ಎಸ್.ರೆಡ್ಡಿಯವರಿಂದ ಉಪನ್ಯಾಸವನ್ನು ಏರ್ಪಡಿಸಲಾಯಿತು. ಸಾವಯವ ಕೃಷಿಯಲ್ಲಿ ಜಾನುವಾರುಗಳ ಪಾತ್ರದಿಂದ ಅವರ ವಿವರಣೆ ಪ್ರಾರಂಭ. ಸಗಣಿ, ಗಂಜಲಗಳ ಮಹತ್ವ, ವಿವಿಧ ರೀತಿಯ ಹಿಂಡಿಗಳನ್ನು ಬಳಸುವುದರಿಂದ ಜಾನುವಾರುಗಳ ಆರೋಗ್ಯದ ಮೇಲೆ ಉಂಟಾಗುವ ದುಪ್ಷರಿಣಾಮ, ಹಸಿರು ಮೇವುಗಳನ್ನು ಸುಲಭ ರೀತಿಯಲ್ಲಿ ಬೆಳೆಯುವ ವಿಧಾನ, ಅದರಿಂದ ಹೆಚ್ಚು ಹಾಲಿನ ಉತ್ಪಾದನೆ ಹಾಗೂ ಜಾನುವಾರುಗಳ ಆರೋಗ್ಯ, ಯಾವ ರೀತಿಯ ಹಸಿರು ಮೇವಿನ ಅಗತ್ಯ ಹಾಗೂ ಎಲ್ಲಿ ಬೆಳೆಯಬಹುದೆಂಬ ಮಾಹಿತಿ. ಹುಲ್ಲಿನ ಜಾತಿ, ಧಾನ್ಯದ ಜಾತಿ, ಸೊಪ್ಪಿನ ಜಾತಿ, ಮುಂತಾದ ಹಸಿರು ಮೇವಿನ ಪರಿಚಯಗಳನ್ನು ಡಾ.ರೆಡ್ಡಿಯವರು ತಿಳಿಸಿಕೊಟ್ಟರು.

ಜಮೀನೇ ಇಲ್ಲದವರಿಗೆ ಉಪಕಸುಬಾಗಿ ಕೋಳಿಸಾಕಣೆ ಕಷ್ಟವಾಗಲಾರದು. ಹಾವು, ಗಿಡುಗ, ನಾಯಿ, ಬೆಕ್ಕುಗಳಿಂದ ರಕ್ಷಣೆ ಒದಗಿಸಿದರೆ ನಾಲ್ಕಾರು ಕೋಳಿಗಳನ್ನು ಸಾಕಲು ಯಾವುದೇ ಖರ್ಚುಗಳಾಗುವುದಿಲ್ಲ. ಕೋಳಿಯ ಮೊಟ್ಟೆ ಮಾರಾಟದಿಂದಲೂ, ಮಾಂಸ ಮಾರಾಟದಿಂದಲೂ ಆದಾಯ ಪಡೆಯಲು ಸಾಧ್ಯ. ನಾಟೀ ಕೋಳಿಗಳಿಗೆ ರೋಗವೂ ಕಡಿಮೆ. ಈ ರೀತಿ ೨೫೦ ಕೋಳಿಗಳನ್ನು ರೈತರಿಗೆ ಹಾಗೂ ಕೂಲಿಗಳಿಗೆ ನೀಡಲಾಗಿದೆ. ಹೆಚ್ಚಾಗಿ ಎಲ್ಲರೂ ಮರಿ ಬೆಳೆಸಿಯೇ ಮಾರುತ್ತಿದ್ದಾರೆ.

ಜೇನುಸಾಕಣೆಗೂ ಕೂಡ ಜಮೀನಿರಬೇಕಿಲ್ಲ. ದೈಹಿಕ ಶ್ರಮಿವಿಲ್ಲ. ಪೆಟ್ಟಿಗೆ ತರುವ ಖರ್ಚು ಬಿಟ್ಟರೆ ಬೇರಾವ ಖರ್ಚೂ ಇಲ್ಲ. ಜೇನು ಹಿಡಿದು ತರುವುದು, ಅದನ್ನು ಇರುವೆಗಳಿಂದ ರಕ್ಷಿಸುವುದು ಹಾಗೂ ಜೇನುತುಪ್ಪವನ್ನು ತೆಗೆಯುವುದು ಇವು ಮಾತ್ರ ನಾಜೂಕಿನ ಕೆಲಸ. ಒಮ್ಮೆ ತರಬೇತಿ ಪಡೆದುಕೊಂಡರೆ ಸಾಕು. ಕೆಲಸ ಸುಸೂತ್ರ. ಪ್ರತಿ ಹದಿನೈದು ದಿನಗಳಿಗೊಮ್ಮೆ ಜೇನುತುಪ್ಪ ತೆಗೆಯಬಹುದು. ಮಲೆನಾಡಿನಲ್ಲಿ ಎಲ್ಲಾ ಕಾಲದಲ್ಲೂ ಹೂವು ಸಿಗುವ ಕಾರಣ ಜೇನುತುಪ್ಪದ ಸಂಗ್ರಹವೂ ಅಧಿಕವಾಗಿರುತ್ತದೆ. ವರ್ಷಕ್ಕೆ ಐದು ಜೇನುಪೆಟ್ಟಿಗೆಯಲ್ಲಿ ಜೇನು ಸಾಕಿ ಒಂದು ಕ್ವಿಂಟಾಲ್ ಜೇನುತುಪ್ಪ ಉತ್ಪಾದಿಸಬಹುದು. ಮನೆಯಲ್ಲಿ ನಿತ್ಯಬಳಕೆಗೆ ಹಾಗೂ ಮಾರಾಟವೂ ಸಾಧ್ಯ. ಹೆಚ್ಚು ಶ್ರಮಿವಿಲ್ಲದ ಆದಾಯ. ಒಂದೊಮ್ಮೆ ಮಾರಾಟವಾಗದೇ ಉಳಿದರೂ ಶುದ್ಧ ಜೇನುತುಪ್ಪವಾದ ಕಾರಣ ಹಾಳಾಗದು. ವರ್ಷಗಟ್ಟಳೆ ಉಳಿಯುತ್ತದೆ. ಹತ್ತು ಜನ ರೈತರು ಮಾತ್ರ ಯೋಜನೆಯಲ್ಲಿ ಪೆಟ್ಟಿಗೆ ಖರೀದಿಸಿದ್ದಾರೆ. ಇಳುವರಿಯೂ ಚೆನ್ನಾಗಿದೆ. ಸಾಗರದಲ್ಲೇ ಜೇನು ಸೊಸೈಟಿ ಪ್ರಾರಂಭವಾಗಿರುವ ಕಾರಣ ಜೇನು ಕೃಷಿ ಹೆಚ್ಚಲೂಬಹುದು.

ಗ್ರಾಮದಲ್ಲಿ ಬೆಳೆವ ತರಕಾರಿ, ಭತ್ತ, ತೋಟದ ಬೆಳೆಗಳು ಮುಂತಾದವುಗಳ ದಾಖಲಾತಿ ಮಾಡುವಾಗ ಅನೇಕ ರೀತಿಯ ತಳಿಗಳು ಹಿಂದೆ ಇದ್ದು ಈಗ ಕಳೆದುಹೋಗಿರುವುದು ತಿಳಿಯಿತು. ನಮ್ಮದೇ ಬೀಜ ಸಂಗ್ರಹವಿದ್ದರೆ ಇವನ್ನೆಲ್ಲಾ ಉಳಿಸಿಕೊಳ್ಳಲು ಸಾಧ್ಯವಿತ್ತು ಎನ್ನುವುದು ಸ್ವ-ಇಚ್ಛಾ ರೈತರ ತಂಡಕ್ಕೆ ಅನಿಸಿತು. ಬೀಜ ಬ್ಯಾಂಕ್ ಮಾಡಿ ಅದರ ನಿರ್ವಹಣೆಯಲ್ಲಿ ಮತ್ತೆ ವಿವಾದಗಳಾಗುವ ಬದಲು ಅವರವರ ಮನೆಯ ವಿಶೇಷ ತಳಿಗಳ ರಕ್ಷಣೆ ಅವರವರೇ ಮಾಡಬೇಕೆಂಬುದೇ ಸೂಕ್ತ ಎನ್ನುವ ತೀರ್ಮಾನ ಮಾಡಲಾಯಿತು. ಆದರೆ ಭತ್ತ ಬೆಳೆಯುವವರಿಗಾಗಿ ಹೈಬ್ರಿಡ್ ಬದಲು ದೇಸೀ ತಳಿಯನ್ನು ರಿಯಾಯಿತಿ ದರದಲ್ಲಿ ತರಿಸಿ ನೀಡಲಾಯಿತು.

ಸಮುದಾಯದಿಂದಾದ ಮತ್ತೊಂದು ಯಶಸ್ವಿ ಕೆಲಸವೆಂದರೆ ಅರಣ್ಯೀಕರಣ. ೬,೦೦೦ಕ್ಕೂ ಅಧಿಕ ಸಂಖ್ಯೆಯ ಬೇವು, ಹೊಂಗೆ, ಮತ್ತಿ, ಹುಣಾಲು, ಸಾಗುವಾನಿ, ಬೀಟೆ, ಕಾಸರಕ, ಶಿವನಿ, ಸಂಪಿಗೆ, ಹಲಸು, ಅಂಟುವಾಳ, ಹೀಗೆ ನಾನಾ ರೀತಿಯ ಕಾಡುಗಿಡಗಳನ್ನು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ನರ್ಸರಿ ಮಾಡಿ ಬೆಳೆಸಿದರು. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆದ ಈ ಕೆಲಸದಿಂದ ಮಹಿಳೆಯರಿಗೆ ಕೆಲಸ ಹಾಗೂ ಆದಾಯ ಒದಗಿಸಿತು. ಅದನ್ನೇ ಹುಳೇಗಾರು ಗ್ರಾಮದ ಬೆಟ್ಟ, ಕಾಡುಗಳಲ್ಲಿ ಗ್ರಾಮಸ್ಥರು, ಸಾಗರದ ಸೇವಾಸಾಗರ ಶಾಲೆಯ ಮಕ್ಕಳು ಒಂದಾಗಿ ನೆಟ್ಟರು. ಅಷ್ಟೇ ಅಲ್ಲ ಅವುಗಳ ಆರೈಕೆಯ ಹೊಣೆಯನ್ನು ಹೊತ್ತರು. ಆಗಲೇ ನಿರ್ಮಿಸಿದ ಇಂಗುಗುಂಡಿಗಳು, ಬೇಸಿಗೆಯಲ್ಲಿ ಈ ಗಿಡಗಳ ದಾಹ ತಣಿಸುವಲ್ಲಿ ಯಶಸ್ವಿಯಾದವು. ಹೀಗಾಗಿ ನೆಟ್ಟ ಗಿಡಗಳಲ್ಲಿ, ಶೇಕಡಾ ೫೦ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಜಾನುವಾರು, ಪ್ರಕೃತಿ ವಿಕೋಪಗಳಿಂದ ಅನೇಕ ಗಿಡಗಳು ನಾಶವಾಗಿವೆ. ಒಟ್ಟಾರೆ ಬೋಳು ಬೆಟ್ಟಗಳು ಹಸಿರು ತುಂಬಿ ನಿಂತಿವೆ.

ವ್ಯಾಪಕವಾಗಿ ವರ್ಷದಲ್ಲಿ ಆಗಾಗ ಮಳೆ ಬಿದ್ದ ಕಾರಣ ಹಾಗೂ ಇಂಗುಗುಂಡಿ, ಅರಣ್ಯೀಕರಣದ ಫಲವಾಗಿ ೨೦೦೮ನೇ ಸಾಲಿನಲ್ಲಿ ಯಾರ ಮನೆಯೊಳಗಿನ ಬಾವಿಗಳೂ ಬತ್ತಿಲ್ಲ. ಏಳು ಕೆರೆಗಳಿರುವ ಗ್ರಾಮದಲ್ಲಿ ಎರಡು ಕೆರೆಗಳು ತುಂಬಿಯೇ ಇವೆ. ಉಳಿದ ಕೆರೆಗಳು ಮಾರ್ಚ್‌ವರೆಗೂ ನೀರು ಹಿಡಿದಿಟ್ಟುಕೊಂಡೇ ಇದ್ದವು. ಬ್ರಹ್ಮಶ್ಚಡ್ಡು ಎನ್ನುವ ಪುಟ್ಟ ಹೊಳೆಯೊಂದು ಬೇಸಿಗೆಯಲ್ಲೂ ಹರಿಯುತ್ತಿದೆ. ಯಾರಿಗೂ ನೀರಿನ ಅಭಾವ ಉಂಟಾಗಿಲ್ಲ. ಹೀಗೆ ಅಂತರ್ಜಲ ಮಟ್ಟ ನಿಶ್ಚಿತವಾಗಿ ಏರಿರುವುದು ಎಲ್ಲರಿಗೂ ಕಣ್ಣಾರೆ ಕಾಣುವ ಬದಲಾವಣೆಯಾಗಿದೆ.

ಕೃಷಿ ಪ್ರವಾಸಗಳು ಹುಳೇಗಾರು ಗ್ರಾಮದ ಸಾವಯವ ರೈತರಿಗೆ ಸಾವಯವದಲ್ಲೇ ಮುಂದುವರೆಯಲು ಪ್ರೇರಕವಾಗಿದೆ. ಚುರ್ಚಿಗುಂಡಿಯ ಲೆಗ್ಸೂಮ್ ರೈತ ನಂದೀಶ್‌ರವರ ವಿಧಾನ ಆಶ್ಚರ್ಯ ಉಂಟುಮಾಡಿತ್ತು. ಹೊಲದಲ್ಲಿ ಆಳೆತ್ತರ ಬೆಳೆದ ಹತ್ತಾರು ಜಾತಿಯ ದ್ವಿದಳ ಧಾನ್ಯದ ಸಸ್ಯಗಳು. ಅವನ್ನೆಲ್ಲಾ ಅದೇ ಹೊಲದ ಮಣ್ಣಿಗೆ ಸೇರಿಸುವಿಕೆ. ಅದೇ ಕಳಿತು ಭತ್ತಕ್ಕೆ ಗೊಬ್ಬರವಾಗುವುದು. ಬೇರೇನೂ ಬಳಸದೇ ಅತ್ಯುತ್ತಮ ಇಳುವರಿ ಸಿಗುವ ವಿಷಯ ನಂಬಲಸಾಧ್ಯವಾದರೂ, ನಂದೀಶರ ಅನುಭವ, ವಿವರಣೆಗಳು, ರೈತರನ್ನು ಒಪ್ಪುವಂತೆ ಮಾಡಿತ್ತು. ಹಸುರೆಲೆ, ದ್ವಿದಳ ಧಾನ್ಯಗಳ ಸೊಪ್ಪಿನ ಮುಂದೆ ಭತ್ತಕ್ಕೆ ಯಾವುದೇ ರೀತಿಯ ಗೊಬ್ಬರದ ಅವಶ್ಯಕತೆಯೇ ಇಲ್ಲ ಎನ್ನುವುದು ಕಣ್ಣಾರೆ ನೋಡಿಯೂ ಸಾಂಪ್ರದಾಯಿಕ ರೈತರಿಗೆ ಪ್ರಯೋಗಿಸಲು ಅಂಜಿಕೆ ಹೋಗಿಲ್ಲ. ಆದರೆ ರಾಸಾಯನಿಕ ಗೊಬ್ಬರಕ್ಕೆ ರೈತರು ಸಿಕ್ಕಿಕೊಂಡಿರುವುದು-ದುಷ್ಪರಿಣಾಮ ಅನುಭವಿಸಿಯೂ ಬಿಡಲಾಗದಿರುವುದು ಮಾತ್ರ ದುರಂತ ವಿಷಬಂಧ.

ತೀರ್ಥಹಳ್ಳಿಯ ಕೃಷಿಋಷಿ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಭೇಟಿ ಮತ್ತೊಂದು ಅದ್ಭುತ. ಸ್ವದೇಶಿ, ಸ್ವಾಲವಂಬಿ ಹಾಗೂ ಸಾವಯವದ ಹರಿಕಾರ ಪುರುಷೋತ್ತಮರಾಯರದು ಆಡಿದಂತೆ ಮಾಡಿ ತೋರಿಸುವ ಬದುಕು. ಅಡಿಕೆಯಾಗಲೀ, ಭತ್ತವಾಗಲೀ, ವೆನಿಲ್ಲಾಗಲೀ ಯಾವುದೇ ಆದರೂ ಅದರಲ್ಲಿ ಸಾಧನೆ. ಪ್ರಯೋಗ ನಿರಂತರ. ತುಂಗಾತೀರದಲ್ಲಿರುವ ಅವರ ಪುಣ್ಯಭೂಮಿಯಲ್ಲಿ ಪ್ರತಿ ಜೀವವೈವಿಧ್ಯವೂ ಅಧ್ಯಯನಕ್ಕೆ ಯೋಗ್ಯವಾದುದು. ಕಳೆ ಇದೆ ಎಂದಾದರೆ ಅದು ಯಾವುದೋ ಉಪಕಾರಿ ಕೀಟಕ್ಕೆ ಅವಶ್ಯಕವೆಂದೋ, ಅಲ್ಲಿರುವ ದೊಡ್ಡ ಸಸ್ಯ ತನಗಾಗಿಯೇ ಬೆಳೆಸಿಕೊಂಡಿದೆ ಎಂದೋ ಅರ್ಥೈಸುತ್ತಿದ್ದರು. ಅವರು ಕೀಳಲು ಬಿಡುತ್ತಿರಲಿಲ್ಲ. ಅವರ ಆದರ್ಶವೇ ಅವರಳಿದರೂ ಅಳಿಯದೇ ಅಜರಾಮರವಾಗಿದೆ.

ಉತ್ತರಕನ್ನಡ ಜಿಲ್ಲೆಯ ತ್ಯಾಗಲಿಯ ಸುಬ್ರಾಯ ಹೆಗಡೆಯವರ ವೈವಿಧ್ಯಮಯವಾಗಿರುವ ತೋಟ, ಅಶೀಸರ ನರಸಿಂಹಮೂರ್ತಿಯವರ ಒಟ್ಟು ಕುಟುಂಬದ ಮನೆ, ಜಾನುವಾರು ಸಾಕಣೆ, ಗೋಬರ್‌ಗ್ಯಾಸ್ ಬಳಕೆ, ತೋಟದ ಕೃಷಿ ಪದ್ಧತಿ, ಮನೆ ಖರ್ಚು ವೆಚ್ಚ ಹಾಗೂ ಆದಾಯಗಳ ದಾಖಲಾತಿ, ಕೂಲಿಗಳ ನೀರ್ವಹಣೆ ಹಾಗೂ ಖರ್ಚುವೆಚ್ಚ ಕಡಿಮೆ ಮಾಡಬಹುದಾದ ಸುಲಭೋಪಾಯಗಳು, ಏನೆಲ್ಲಾ ನೋಡಲು, ತಿಳಿದುಕೊಳ್ಳಲು ಒಂದು ದಿನ ಸಾಕಾಗದು ಎನ್ನುವ ಅಭಿಪ್ರಾಯ ಹುಳೇಗಾರು ಗ್ರಾಮದ ರೈತರದು.

ನೀರ್ನಳ್ಳಿಯ ಶಾಲಾ ಮಕ್ಕಳು ಗ್ರಾಮಸ್ಥರ ಸಹಕಾರದಿಂದ ಸ್ಥಾಪಿಸಿದ ಮಳೆಕೊಯ್ಲಿನ ಹತ್ತಾರು ವಿಧಾನಗಳು ಎಲ್ಲರಲ್ಲೂ ತಾವೂ ಇನ್ನಷ್ಟು ಮಾಡಬಹುದಲ್ಲಾ ಎನ್ನುವ ಚಿಂತನೆ ಹುಟ್ಟುಹಾಕಿತ್ತು.

ಪ್ರತಿ ಪ್ರವಾಸವೂ ಸಾವಯವದ ಬದುಕಿನತ್ತ ಇನ್ನಷ್ಟು ದೃಢವಾದ ಹೆಜ್ಜೆಯಿಡಲು ಸಹಾಯಕವಾಗಿದೆ ಎನ್ನುವ ಸಂತಸ ರೈತರಲ್ಲಿ ಬಂದಿದೆ. ಹೀಗಾಗಿ ಪ್ರತಿವರ್ಷವೂ ಈ ರೀತಿಯ ಪ್ರವಾಸ ಮಾಡಿ ಇನ್ನಷ್ಟು ಅಭಿವೃದ್ಧಿಯ ದಿಶೆಯಲ್ಲಿ ಮಾಹಿತಿ ಸಂಗ್ರಹಿಸಲು ಗ್ರಾಮದ ಸಾವಯವ ರೈತರು ಯೋಜನೆ ಹಾಕುತ್ತಿದ್ದಾರೆ.

ಮಾಲತಿ ಸದಾಶಿವಭಟ್

ಮಾಲತಿಯವರದು ಸದಾ ಏನನ್ನಾದರೂ ಮಾಡುತ್ತಿರಬೇಕೆಂಬ ತುಡಿತ. ಶ್ರೀಮಾತಾ ಸ್ವಸಹಾಯ ಸಂಘದ ಸದಸ್ಯೆ. ಹಿತ್ತಲ ತುಂಬಾ ಹರಿವೆ, ಬಸಳೆ, ಬಳ್ಳಿ ತರಕಾರಿಗಳ ಸಂತೆ. ಹೂವಿನ ತೋಟದ ಯಜಮಾನಿ. ಜಾನುವಾರು ನಿರ್ವಹಣೆಯಲ್ಲಿ ಪತಿಯೊಂದಿಗೆ ಸಮಪಾಲು. ಸಮುದಾಯದೊಂದೊಗೆ ಸೇರಿ ಬಲು ದೊಡ್ಡದಾಗಿ ಎರೆತೊಟ್ಟಿಯನ್ನು ಕಟ್ಟಿಸಲು ಮುಂದಾಳು. ಸ್ವಂತದ ಎರೆತೊಟ್ಟಿ ಬೇರೆಯಿದೆ ಎಂದು ತೋರಿಸಲು ಹೆಮ್ಮೆ. ಅಂಗಳದ ನೆಲದ ಮೇಲೆ ದರಕಿನ ರಾಶಿ ಮಾಡಿದ ಕಾಂಪೋಸ್ಟ್ ವಿಧಾನದಲ್ಲೂ ಕೈವಾಡ. ಇಂಗುಗುಂಡಿಯನ್ನು ಊರ ಜಾಗದಲ್ಲಿ, ಮನೆಯ ಹಿತ್ತಲಿನಲ್ಲಿ ನಿರ್ಮಿಸುವಾಗ ಹೆಂಗಸರೂ ಗುದ್ದಲಿ ಹಿಡಿಯಬಲ್ಲರು ಎಂದು ಜೊತೆಗಾರ್ತಿಯರೊಂದಿಗೆ ಗುಂಡಿ ತೋಡಿದ ಸಾಹಸಿ.

ಬೆಟ್ಟದ ಅರಣ್ಯೀಕರಣಕ್ಕೆ ಮಹಿಳೆಯರನ್ನೆಲ್ಲಾ ಗುಂಪು ಕಟ್ಟಿಕೊಂಡು ಸಸಿ ಬೆಳೆಸುತ್ತೇವೆಂದು ನರ್ಸರಿ ಮಾಡಿದ ಫಲವಂತೆ. ವೆನಿಲ್ಲಾ ಮಾರುಕಟ್ಟೆಗೆ ಒಣಬೀನ್ಸ್ ಮಾಡಿಕೊಡುವ ಕೆಲಸದಲ್ಲಿ ತಾಲ್ಲೂಕಿನಾದ್ಯಂತ ಪರಿಮಳ ಬೀರಿದ ಮಹಿಳೆ. ಶ್ರಮದೊಂದಿಗೆ ಆದಾಯ ಪಡೆದು ಜೊತೆಗಾತಿಯರಿಗೂ ಕೆಲಸ – ಆದಾಯ ನೀಡಿಕೆ. ಜಾತ್ರೆಯಲ್ಲಿ ಬೋಂಡ ಮಸಾಲಪುರಿ ತಯಾರಿಸಿ ಮಾರಿದ ಬಳಗವು ಹತ್ತಿರದ ಕಲ್ಯಾಣ ಮಂಟಪದಲ್ಲಿ ಬಡಿಸುವ ಕೆಲಸಕ್ಕೂ ಸಿದ್ಧವಾಗಿದೆ. ಉಪ್ಪಿನಕಾಯಿ, ಹಪ್ಪಳ, ಹೋಳಿಗೆ ಏನೆಲ್ಲಾ ಮನೆಯಲ್ಲೇ ತಯಾರಿಸಿ ಮಾರುತ್ತಾ ಗಳಿಸುವ ಸ್ವಾವಲಂಬಿ. ಸಾವಯವ ಭತ್ತದ ಕೃಷಿಯಲ್ಲಿ ಐದು ಜನ ಗೆಳತಿಯರೊಂದಿಗೆ ಭತ್ತದ ನೆಟ್ಟಿ ಮಾಡಿದ್ದು ಅವಿಸ್ಮರಣೀಯವೆನ್ನುತ್ತಾರೆ. ಕೃಷಿ ಇಲಾಖೆಯ ಯೋಜನೆಗಳನ್ನು ಹುಡುಕಿ ಪ್ರಯೋಜನ ಪಡೆದದ್ದು. ವೆನಿಲ್ಲಾ ಒಣಗಿಸುವಿಕೆಯ ತರಬೇತಿ ನೀಡಲು ವಿವಿಧ ಕಡೆ ಮಾಡಿದ ಪ್ರವಾಸ ಇವೆಲ್ಲಾ ಹೆಚ್ಚು ಧೈರ್ಯ ನೀಡಿದೆ ಎನ್ನುವ ಅನಿಸಿಕೆ. ಸಂಘದ ಸದಸ್ಯೆಯರೊಂದಿಗೆ ಸಭಾಭವನ ನಿರ್ಮಾಣ ಮುಂದಿನ ಗುರಿ.

ಸುವರ್ಣಮ್ಮ

ಕಲ್ಮಕ್ಕಿನ ಸುವರ್ಣಮ್ಮನವರದು ಸ್ವಾವಲಂಬಿ ಬದುಕು. ನನಗಿರುವ ನೆಲದಲ್ಲಿ ನನ್ನ ಅನ್ನ ನಾನೇ ಸಂಪಾದಿಸಿಕೊಳ್ಳಬೇಕು ಎನ್ನುವ ಅದಮ್ಯ ಆಸೆ. ಅದಕ್ಕಾಗಿ ಸ್ವತಃ ಭತ್ತದ ಗದ್ದೆಗೆ ಇಳಿದು ನೆಟ್ಟಿ ಮಾಡಿದರು. ಗದ್ದೆಯನ್ನು ಮಾಡಿ ಮಹಿಳೆಯೂ ಭತ್ತದ ಕೃಷಿ ಮಾಡಬಹುದೆಂದು ತೋರಿಸಿದರು. ಮನೆಯಿಂದ ದೂರವಿರುವ ಗದ್ದೆಗೆ ಗೊಬ್ಬರ ಹೊತ್ತಿದ್ದು, ಗಂಜಲ ಸಿಂಪಡಿಸಿದ್ದು, ಗದ್ದೆ ಕಾದಿದ್ದು ಹೀಗೆ ಅದೊಂದು ವಿಶೇಷ ಅನುಭವ. ಇವತ್ತಿನ ಹೆಣ್ಣುಮಕ್ಕಳಿಗಿಂತ ಹೆಚ್ಚು ಕೆಲಸ ಮಾಡಬಲ್ಲೆನೆಂಬ ಸುವರ್ಣಮ್ಮನದು ಶ್ರಮ ಜೀವನ.

ಸುಮಾರು ೩೦ ಅಡಿಗಳಷ್ಟು ಇರುವ ಹಿತ್ತಲಿನಲ್ಲಿ ತರಕಾರಿಗಳದೇ ಸಾಮ್ರಾಜ್ಯ. ಹರಿವೆ, ಬಳ್ಳಿ ಬಸಳೆ, ಬದನೆ, ತೊಂಡೆ, ಬೀಟ್‌ರೂಟ್, ಮೆಣಸಿನಕಾಯಿ, ಟೊಮ್ಯಾಟೋ, ಮೂಲಂಗಿ, ನವಿಲುಕೋಸು ಹೀಗೆ ಜಾಗ ಇರುವಲ್ಲೆಲ್ಲಾ ತರಕಾರಿಗಳು, ಮನೆ, ಮಾಡು, ಗೋಡೆ, ಚಪ್ಪರದ ತುಂಬೆಲ್ಲಾ ಬಳ್ಳಿಗಳು. ಹಾಗಂತ ಬೆಳೆದಿದ್ದರ – ಮಾರಿದ್ದರ ಲೆಕ್ಕಾಚಾರ ಇಲ್ಲ.

ಊರೊಟ್ಟಿನ ಇಂಗುಗುಂಡಿ ತೆಗೆಯಬೇಕೆಂದಾಗ ತಮ್ಮ ಶ್ರೀಸನ್ನಿದಿ ಸ್ವಸಹಾಯ ಸಂಘದ ವತಿಯಿಂದ ೬೦೦ ಗುಂಡಿಗಳ ನಿರ್ಮಾಣದ ಹೊಣೆ. ಹಾಗೇ ಅದನ್ನು ಇಂದಿಗೂ ಸುಸ್ಥಿತಿಯಲ್ಲಿ ನಿರ್ವಹಣೆ. ನರ್ಸರಿ ಮಾಡಿದ್ದು, ಅಜೋಲಾ ಬೆಳೆದಿದ್ದು, ಪ್ರವಾಸಗಳೆಲ್ಲಾ ಈಗ ನೆನಪುಗಳು ಮಾತ್ರ. ತೋಟದೊಳಗೆ ಅಡಿಕೆ ದಬ್ಬೆ ಕಟ್ಟಿ ವರ್ಷಕ್ಕೆ ಐದು ಕ್ವಿಂಟಾಲ್ ಎರೆಗೊಬ್ಬರ ಮಾಡಿ ಮಾರಾಟ ಮಾಡಿದ, ಮಾಡುತ್ತಿರುವ ಸಾಧಕಿ. ಯೋಜನೆಯಡಿಯಲ್ಲಿ ಈಗ ಕಲ್ಲಿನ ತೊಟ್ಟಿಯ ನಿರ್ಮಾಣ ಮಾಡಿ ಎರಡು ಕ್ವಿಂಟಾಲ್ ಉತ್ಪಾದನೆ. ಸಾವಯವ ಗ್ರಾಮ ಯೋಜನೆಯ ಬೆನ್ನುಲುಬಾಗಿ ನಿಂತ ಪ್ರಮುಖ ವ್ಯಕ್ತಿ ಎನ್ನುವ ಪ್ರಶಂಸೆ. ಊರವರಿಗೆ ಯಾವುದೇ ನೆರವಿಗೂ ತಕ್ಷಣ ಲಭ್ಯವಾಗುವ ಜೀವ. ಸದಾ ಹೊಸತೇನನ್ನಾದರೂ ಮಾಡುತ್ತಿರಬೇಕೆಂಬ ಉತ್ಸಾಹ.

ಯೋಜನೆಯನ್ನು ಜಾರಿಗೊಳಿಸಲು ಎದುರಾದ ತೊಡಕುಗಳು

ಸಾವಯವ ಗ್ರಾಮ ಯೋಜನೆಯನ್ನು ಹುಳೇಗಾರು ಗ್ರಾಮದಲ್ಲಿ ಅಳವಡಿಸುವಾಗ ಗ್ರಾಮದ ಪ್ರತಿಯೊಬ್ಬರ ಅಭಿಪ್ರಾಯ ಹಾಗೂ ಸಮೀಕ್ಷೆ ಮಾಡಲಾಗಿತ್ತು. ರಾಸಾಯನಿಕದ ಅಡಿಯಾಳುಗಳನ್ನೂ ಸಹ ಪದೇ ಪದೇ ಭೇಟಿ ಮಾಡಿ ಮನಸ್ಸು ಪರಿವರ್ತನೆ ಮಾಡಲು ಪ್ರಯತ್ನಿಸಲಾಗಿತ್ತು. ಆದರೂ ಕೊನೆಯಲ್ಲಿ ರಾಸಾಯನಿಕ ಗೊಬ್ಬರ ಬಿಡಲು ಒಪ್ಪದೇ ಅನೇಕರು ಯೋಜನೆಯಿಂದ ದೂರ ಉಳಿದರು.

ಯೋಜನೆಯು ಉಚಿತವಲ್ಲ, ರೈತರ ಪಾಲುದಾರಿಕೆಯಲ್ಲಿ ಆಗುವಂತಹುದು ಎಂದು ಮೊದಲೇ ವಿವರಿಸಿದ್ದರೂ, ಅನುಮಾನಗಳನ್ನು ಹಿಂದಿನಿಂದ ವ್ಯಕ್ತಪಡಿಸುತ್ತಾ ಕೆಲವರು ತೊಡಕುಂಟುಮಾಡತೊಡಗಿದರು.

ನಿರ್ದಿಷ್ಟ ಕೆಲಸಗಳಿಗಾಗಿಯೇ ಅನುದಾನ ನೀಡಿದ್ದರೂ ಅದನ್ನು ದುರುಪಯೊಗಪಡಿಸಿಕೊಂಡ ಕೆಲವರು ಅಪ್ರಾಮಾಣಿಕರಾದರು.

ಕೆಲವರು ಪ್ರಾರಂಭದಲ್ಲಿ ಉತ್ಸಾಹ ತೋರಿ ಆಮೇಲೆ ಅನಾಸಕ್ತರಾಗಿದ್ದು ಹೆಚ್ಚಿದ ಶ್ರಮಕ್ಕೋ ಅಥವಾ ಸೋಮಾರಿತನವೋ ಅಸ್ಪಷ್ಟವಾಗಿದೆ.

ಕೂಲಿಕಾರ್ಮಿಕರ ಕೊರತೆ ಹಾಗೂ ಯುವಕರು ವಿದ್ಯಾವಂತರಾಗಿ ಪೇಟೆಯ ಸುಖ ಅರಸಿ ಹೋಗುತ್ತಿರುವುದರಿಂದ ದುಡಿಮೆಯ ಕೈಗಳು ಕಡಿಮೆ.

ಬೆಳೆ ತೆಗೆಯುವ ಜಮೀನಿಗೆ ಸೂಕ್ತ ಬೇಲಿ ಅಥವಾ ಸಾಮೂಹಿಕ ಬೇಲಿ ವರ್ಷಾವಧಿ ಇರದೇ ಜಾನುವಾರುಗಳ, ಕಾಡುಪ್ರಾಣಿಗಳ ಉಪಟಳದಿಂದ ಬೆಳೆ ನಾಶವಾಗುತ್ತಿರುವ ಕಾರಣ ಕೃಷಿಯಲ್ಲಿ ನಿರಾಶೆ.

ಸಾವಯವ ಕೃಷಿ ಹೆಚ್ಚು ಶ್ರಮದಾಯಕ, ಕಾಂಪೋಸ್ಟ್, ಸಾವಯವ ಸಂಪನ್ಮೂಲಗಳು ಹೆಚ್ಚು ಬೇಕು, ಅದನ್ನು ಪೂರೈಸಲು ಕಷ್ಟ ಎನ್ನುವ ನಂಬಿಕೆ ಅನೇಕರನ್ನು ವಿಮುಖರನ್ನಾಗಿಸಿದೆ.

ಕೂಲಿಗಾಗಿ ಕಾಳು ಅಥವಾ ಇತರೆ ಯಾವುದೇ ಕೂಲಿ ಕೆಲಸದಿಂದ ಕೃಷಿಯಲ್ಲಿ ಸಿಗುವುದಿಕ್ಕಿಂತ ಹೆಚ್ಚು ಆದಾಯ ತಕ್ಷಣ ಸಿಗುವುದಕ್ಕಾಗಿ ಕೃಷಿಯನ್ನೇ ಬಿಡುವವರು, ಅದರಲ್ಲೂ ದುಬಾರಿ ಶ್ರಮ ಬೇಡುವ ಸಾವಯವ ಕೃಷಿಯಿಂದ ದೂರವಿರುತ್ತಿದ್ದಾರೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಇದು ಅನಿವಾರ್ಯವಾಗಿದೆ.

ಸಾವಯವಕ್ಕೆ ಬದಲಾಗುವ ಸಮಯದಲ್ಲಿ ಮೊದಲ ಕೆಲವರ್ಷಗಳಲ್ಲಿ ಉಂಟಾಗುವ ಇಳುವರಿ ಕುಸಿತದಿಂದ ನಿರಾಶೆ ಹೊಂದಿ ರಾಸಾಯನಿಕಕ್ಕೆ ಮರಳುತ್ತಾರೆ.

ಹುಳೇಗಾರು ಗ್ರಾಮದಲ್ಲಿ ಮುಖಂಡರೊಂದಿಗಿನ ಅಭಿಪ್ರಾಯ ಭೇದದಿಂದ ಸರ್ವತೋಮುಖ ತೀರ್ಮಾನ ಆಗದೇ ಹಿನ್ನಡೆಯಾಗಿದೆ. ಎರಡನೇ ಹಂತದ ನಾಯಕರಿಲ್ಲದೆ ಕಾರ್ಯ ಚಟುವಟಿಕೆ ನಿಧಾನವಾಗಿದೆ. ಗ್ರಾಮದ ರಾಜಕೀಯದಿಂದಾಗಿ ಒಗ್ಗಟ್ಟು ಒಡೆದಿದೆ. ಇದರಿಂದ ದೂರಾದವರಿಗೆ ಯೋಜನೆಯಲ್ಲಿ ಅಸಮಾಧಾನ, ಜೊತೆಯಲ್ಲಿದ್ದವರಿಗೆ ಅನಾಸಕ್ತಿ. ಅನುದಾನ ಪಡೆಯುವಾಗ ಹಕ್ಕು ಸಾಧಿಸುವ ಹಠ, ಪಡೆದ ಮೇಲೆ ಕೆಲಸ ನಿರ್ವಹಿಸಲು ಬೇಜವಾಬ್ದಾರಿತನ. ಯೋಜನೆ ನಿರ್ವಹಿಸುವ ಸಂಸ್ಥೆಗೆ ಶಿಕ್ಷಿಸುವ ಅಥವಾ ಕಡಿತಗೊಳಿಸುವ ಯಾವುದೇ ಹಕ್ಕಿಲ್ಲದ ಕಾರಣ ಅಸಹಾಯಕತೆ.