ನಮ್ಮ ನಾಗರೀಕತೆ ಕೃಷಿಯೊಂದಿಗೆ ಆರಂಭವಾಗಿದೆ. ಮನುಷ್ಯನು ಕಾಡಿನಲ್ಲಿ ಒಂಟಿ ಜೀವನ ನಡೆಸುವುದನ್ನು ಬಿಟ್ಟು ಗುಂಪು ಗುಂಪಾಗಿ ವಾಸಿಸಲು ಪ್ರಾರಂಭಿಸಿದ ಮೇಲೆ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲು ಆಹಾರಧಾನ್ಯಗಳನ್ನು ತಾನೇ ಬೆಳೆದು ಕೊಳ್ಳಲು ಪ್ರಾರಂಭಿಸಿದನು. ಅಂದಿನಿಂದ ಇಂದಿನವರೆಗೆ ಕೃಷಿಯೊಂದಿಗೆ ಅನೇಕ ಬದಲಾವಣೆಗಳು ಉಂಟಾಗಿವೆ. ನಮ್ಮ ಸಮಾಜ ಅತ್ಯಂತ ವೈಜ್ಞಾನಿಕವಾಗಿ ಬೆಳೆಯುತ್ತಿದೆ. ಆದಾಗ್ಯೂ ಕೃಷಿಯನ್ನು ಬಿಟ್ಟು ದೂರ ಉಳಿಯಲು ಸಾಧ್ಯವಿಲ್ಲ. ಒಂದು ವೇಳೆ ನಾವು ಕೃಷಿಯಿಂದ ದೂರ ಉಳಿದರೆ ಆದ್ದರಿಂದ ಸಮಾಜದಲ್ಲಿ ಆಹಾರದ ಕೊರತೆ, ಅಪೌಷ್ಟಿಕತೆ, ಹಸಿವು ಇತ್ಯಾದಿ ಸಮಸ್ಯೆಗಳಿಂದ ನಾಗರೀಕ ಸಮಾಜವು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಕೃಷಿಯೊಂದಿಗೆ ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಸಮುದಾಯದ ಮೌಲ್ಯಗಳು ಸಂಮ್ಕಿಳಿತವಾಗಿವೆ. ಮನುಷ್ಯನು ಹೇಗೆ ಭೂಮಿಯನ್ನು ಉಳುಮೆ ಮಾಡುತ್ತಾನೆ, ಜಲ ಸಸ್ಯವರ್ಗ ಮತ್ತು ಪ್ರಾಣಿಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಉತ್ಪಾದನೆ ಮಾಡಿ ಅದನ್ನು ಹೇಗೆ ವಿತರಿಸುತ್ತಾನೆ ಎಂಬುದನ್ನು ಒಳಗೊಂಡಿರುತ್ತದೆ. ಆದ್ದರಿಂದ ಭೂಮಿಯನ್ನು ಅತ್ಯಂತ ಸಮರ್ಪಕವಾಗಿ ವಿವಿಧ ಉದ್ದೇಶಗಳಿಗೆ ಹಂಚಿಕೊಂಡು, ಯಾವುದೇ ರೀತಿಯಾಗಿ ಪರಿಸರಕ್ಕೆ ಹಾನಿಯನ್ನುಂಟು ಮಾಡದೇ ನಿರ್ವಹಿಸುವಂತಹ ಒಂದು ಉದ್ಯಮವಾಗಿದೆ.

ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು, ಕೃಷಿ ಬಹಳ ಜನರ ಮೂಲಭೂತ ವೃತ್ತಿಯಾಗಿರುತ್ತದೆ. ನಮ್ಮ ಆರ್ಥಿಕತೆಯನ್ನು ಕೃಷಿ ಆಧಾರಿತ ಆರ್ಥಿಕತೆ ಎಂದು ನಾವು ಆಗಾಗ ಬಿಂಬಿಸುತ್ತೇವೆ. ಕೃಷಿ ಕ್ಷೇತ್ರವು ೬೦ ಕೋಟಿಗಿಂತ ಅಧಿಕ ಜನರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುವುದಲ್ಲದೆ, ವಿವಿಧ ರೀತಿಯ ಸಂಪನ್ಮೂಲಗಳಿಗೂ ಉದ್ಯೋಗ ಒದಗಿಸುವುದರಲ್ಲಿ ಇತರ ಕ್ಷೇತ್ರಗಳಿಗಿಂತ ಮುಂಚೂಣಿಯಲ್ಲಿದೆ. ಏಕೆಂದರೆ ಕೃಷಿ ಕ್ಷೇತ್ರವು ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಸರಕುಗಳನ್ನು ಪೂರೈಸುತ್ತದೆ. ಅದರೊಂದಿಗೆ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ವಿಸ್ತರಿಸಲು ಕೂಡ ನೆರವಾಗುತ್ತದೆ. ಆದ್ದರಿಂದ ಕೃಷಿ ಸಮೃದ್ಧವಾಗಿ ಬೆಳವಣಿಗೆ ಹೊಂದಿದರೆ ದೇಶವು ಕೂಡ ಸಮೃದ್ಧವಾಗಿ ಬೆಳೆಯುತ್ತದೆ. ಹೀಗೆ ಕೃಷಿಯಲ್ಲಿ ಬೆಳವಣಿಗೆಯಾದರೆ, ದೇಶದ ರಫ್ತು ವಹಿವಾಟು ವಿಸ್ತರಿಸುವುದಲ್ಲದೆ, ಅದು ಹಲವು ಪ್ರಯೋಜನಗಳನ್ನು ದೊರೆಕಿಸಿಕೊಡುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಕೃಷಿ ಕ್ಷೇತ್ರದ ಮಹತ್ವ ಬಹಳ ಕಡಿಮೆಯಾಗುತ್ತಿರುವುದು. ಅದು ನಮ್ಮ ರಾಷ್ಟ್ರೀಯ ಆದಾಯಕ್ಕೆ ಸಲ್ಲಿಸುತ್ತಿರುವ ವಂತಿಕೆಯಲ್ಲಿನ ಇಳಿಕೆ ತೋರಿಸಿಕೊಡುತ್ತದೆ. ಕೃಷಿ ಕ್ಷೇತ್ರವು ನಮ್ಮ ಒಟ್ಟು ಸ್ವದೇಶಿ ಉತ್ಪನ್ನಕ್ಕೆ ನೀಡುತ್ತಿದ್ದ ಕೊಡುಗೆ ಶೇ. ೬೧. ರಿಂದ ಶೆ. ೧೭.೦೮ಕ್ಕೆ ಕುಸಿದಿದೆ.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ನಮ್ಮ ದೇಶವು ಶೆ. ೧೭.೮ ರಷ್ಟನ್ನು ಹೊಂದಿದೆ. ಆದರೆ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ನಮ್ಮ ಪಾಲು ಶೆ.೪.೨ ಆಗಿದ್ದು ಪ್ರತಿಯೊಬ್ಬ ವ್ಯಕ್ತಿಗೆ ದೊರಕುವ ಸಂಪನ್ಮೂಲಗಳ ಪ್ರಮಾಣವು ೪ ರಿಂದ ೫ ಪಟ್ಟು ವಿಶ್ವದ ಸರಾಸರಿಗಿಂತ ಕಡಿಮೆ ಇರುವುದು ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ನಿರಂತರ ಹೆಚ್ಚಳದಿಂದಾಗಿ ಕೃಷಿ ಭೂಮಿಯ ಮೇಲಿನ ಒತ್ತಡ ಅಧಿಕವಾಗುತ್ತಿದೆ. ಭೂ ಹಿಡುವಳಿಗಳೂ ಅತ್ಯಂತ ಚಿಕ್ಕ ಹಾಗೂ ಚದುರಿದ ಹಿಡುವಳಿಗಳಾಗಿದ್ದು ಮತ್ತು ಅದರಲ್ಲಿ ನಿರತರಾದಂತಹ ರೈತರು ಕೂಡ ಸಾಕಷ್ಟು ಸಂಕಷ್ಟಗಳಿಗೆ ಗುರಿಯಾಗಿರುವುದು ಪ್ರಸ್ತುತ ದಿನಗಳಲ್ಲಿ ತಿಳಿಯುತ್ತದೆ. ಹೀಗೆ ಪ್ರಥಮ ಹಂತದಲ್ಲಿ ಪೀಠಿಕೆಯನ್ನು ಎರಡನೇ ಹಂತದಲ್ಲಿ ರಸಾಯನಿಕ ಕೃಷಿಯ ಬೆಳವಣಿಗೆ ಮತ್ತು ಅದರ ಅಪಾಯಗಳು, ಮೂರನೇ ಹಂತದಲ್ಲಿ ರಸಾಯನಿಕ ಕೃಷಿಗೆ ಪರ್ಯಾಯವಾಗಿ ಬೆಳೆದು ಬಂದ ಸಾವಯವ ಕೃಷಿ ಮತ್ತು ಅದರ ಪ್ರಯೋಜನಗಳು, ಹಾಗೂ ಅಂತಿಮವಾಗಿ ಉಪಸಂಹಾರವನ್ನು ಈ ಒಂದು ಲೇಖನದಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ರಾಸಾಯನಿಕ ಕೃಷಿ (Inorganic Farming)

ರಾಸಾಯನಿಕ ಕೃಷಿ ಇತ್ತೀಚಿನ ದಿನಗಳಲ್ಲಿ ಪ್ರಬುದ್ಧಮಾನಕ್ಕೆ ಬಂದಂತಹ ಕೃಷಿ ಪದ್ಧತಿಯಾಗಿದೆ. ಇದನ್ನು ಸಾಂಪ್ರದಾಯಿಕ ಕೃಷಿ (Converntional Farming), ಅಸಾವಯವ ಬೇಸಾಯ (Non Organic or Inorganic Farming) ಹಸಿರು ಕ್ರಾಂತಿ (Green Revolution Strategy), ರಾಸಾಯನಿಕ ಬೇಸಾಯ (Chemical Farming) ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದೆ.

೧೯ನೇ ಶತಮಾನಕ್ಕಿಂತ ಮೊದಲು ಸಾವಯವ ಗೊಬ್ಬರ ಮಾನವ ಶ್ರಮ ಮತ್ತು ಪ್ರಾಣಿಗಳನ್ನು ಉಪಯೋಗಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿತ್ತು. ಹಾಗಾಗಿ ಅದು ಸಾವಯವ ಕೃಷಿಯಾಗಿತ್ತು. ಉದಾ: ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕುದುರೆಗಳನ್ನು, ಏಷ್ಯಾದಲ್ಲಿ ಎತ್ತುಗಳನ್ನು ಬಳಸಿಕೊಂಡು ಕೃಷಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಆದರೆ ೧೯ನೇ ಶತಮಾನದ ಆರಂಭದಲ್ಲಿ ಝಥ್ರೋಟಲ್‌(Jethrotull) ಎಂಬುವರು ಕುದುರೆಗಳಿಗೆ ಕಟ್ಟಿಕೊಂಡು ಬೀಜ ಬಿತ್ತುವ ಸಲಕರಣೆಗಳನ್ನು ಕಂಡುಹಿಡಿದರು. ೧೯೧೦ರಲ್ಲಿ ಟ್ರಾಕ್ಟರನ್ನು ಅವಿಷ್ಕಾರ ಕೂಡ ಮಾಡಲಾಯಿತು. ಈ ಅವಧಿಯಲ್ಲಿಯೇ ಜರ್ಮನಿಯ ರಾಸಾಯನಶಾಸ್ತ್ರ ಜ್ಞಾನರಾದ ಫ್ರಿಟ್ಜ್‌ಹಾಬರ್ (Fritz Habur) ರವರು ಅಮೋನಿಯಂನ್ನು ಅಭಿವೃದ್ಧಿ ಪಡಿಸಿದರು. ಇದರಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಸಾರಜನಕ ರಸಗೊಬ್ಬರಗಳ ಉತ್ಪಾದನೆಯನ್ನು ಪ್ರಾರಂಭಿಸಿತು. ಇದು ಅಧಿಕ ಇಳುವರಿ ತಳಿಯ ಮತ್ತು ಹೈಬ್ರಿಡ್‌ಬೀಜಗಳಿಗೆ ವರದಾನ ವಾಯಿತು. ಇದರ ಜೊತೆಯಲ್ಲಿಯೇ ಹಲವು ಕೀಟನಾಶಕಗಳ ಅವಿಷ್ಕಾರವಾಯಿತು. ಅವುಗಳಲ್ಲಿ ಸ್ವಿಟ್ಜರ್ ಲ್ಯಾಂಡ್‌ನ ಪಿ.ಮುಲ್ಲರ್ ರವರು ೧೯೩೯ರಲ್ಲಿ ಡಿ.ಡಿ.ಟಿ.ಯನ್ನು ಕಂಡು ಹಿಡಿದರು. ಹೀಗೆ ೧೯ ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾದ ವೈಜ್ಞಾನಿಕ ಸಂಶೋಧನೆಗಳು ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನುಂಡು ಮಾಡಿದವು. ೨೦ನೇ ಶತಮಾನದ ಮಧ್ಯಭಾಗದ ವೇಳೆಗೆ ವಿಶ್ವದಲ್ಲಿ ಯಂತ್ರೋಪಕರಣಗಳು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು, ಬೆಳೆವಣಿಗೆ ನಿಯಂತ್ರಕ ಇತ್ಯಾದಿಗಳ ಉಪಯೋಗವು ಕೃಷಿ ಕ್ಷೇತ್ರದಲ್ಲಿ ಸಾಮಾನ್ಯವಾಯಿತು. ಕೃಷಿ ತಜ್ಞರಾದ ನಾರ್ಮನ್‌ಬೋರ್ಲಾಗ್‌ರವರು ಅಭಿವೃದ್ಧಿಪಡಿಸಿದಂತಹ ಸುಧಾರಿತ ಮತ್ತು ಹೈಬ್ರಿಡ್‌ತಳಿಯ ಬೀಜಗಳ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯೇ ಉಂಟಾಯಿತು. ಹೀಗೆ ವಿವಿಧ ಕೃಷಿ ಪರಿಕರಗಳ ಬಳಕೆಯಿಂದಾಗಿ ಎಲ್ಲಾ ರಾಷ್ಟ್ರಗಳಲ್ಲಿ ಪ್ರತಿ ಎಕರೆವಾರು ಕೃಷಿ ಉತ್ಪನ್ನ ಮತ್ತು ಉತ್ಪಾದಕತೆ ಗಣನೀಯವಾಗಿ ಅಧಿಕವಾಯಿತು. ಹಲವು ಹಿಂದುಳಿದ ರಾಷ್ಟ್ರಗಳು ಆಹಾರ ಧಾನ್ಯಗಳ ಸಮಸ್ಯೆಯಿಂದ ಹೊರಬಂದು ಹಸಿವಿನ ಸಮಸ್ಯೆಯನ್ನು ನಿವಾರಿಸಿಕೊಂಡವು.

ಭಾರತದಲ್ಲಿ ಅಸಾವಯವ ಕೃಷಿ (Inorganic Farming)

ನಮ್ಮ ದೇಶದಲ್ಲಿಯೂ ಕೂಡ ಕೃಷಿ ಅರ್ಥವ್ಯವಸ್ಥೆಯ ತಳಹದಿಯಾಗಿರುವುದಲ್ಲದೆ, ಬಹುಜನರ ಜೀವನಾಧಾರ ಕಸುಬಾಗಿದೆ. ಸ್ವಾತಂತ್ಯ್ರನಂತರ ದೇಶದ ವಿಭಜನೆಯಿಂದ ಕೃಷಿ ಕ್ಷೇತ್ರವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜನಸಂಖ್ಯೆ ಅಧಿಕವಾದಂತೆ ಪಾಳುಬಿದ್ದ, ಕೃಷಿಗೆ ಯೋಗ್ಯವಾಗಿದ್ದು ಉಪಯೋಗವಾಗದೇ ಇರುವ ಭೂಮಿಯನ್ನು ಕೃಷಿ ವ್ಯಾಪ್ತಿಗೆ ತಂದು ಸಾಗುವಳಿ ಭೂಮಿಯನ್ನು ವಿಸ್ತರಿಸುವುದರ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಈ ವಿಧಾನವನ್ನು ವಿಸ್ತೃತ ಬೇಸಾಯವೆಂದು ಕರೆಯಲಾಗುತ್ತಿತ್ತು. ಅಂದರೆ ಈ ವಿಧಾನದಲ್ಲಿ ಕೃಷಿ ಭೂಮಿಯ ಪ್ರಮಾಣ ಅಧಿಕವಿದ್ದು ತಂತ್ರಜ್ಞಾನವು ಸ್ಥಿರವಾಗಿತ್ತು. ಇದು ಒಂದು ರೀತಿಯ ಸ್ವಾಭಾವಿಕ ಕೃಷಿ (ನೈಸರ್ಗಿಕ ಕೃಷಿ) ಯಾಗಿದ್ದು ೧೯೬೦ರವರೆಗೆ ಅಸ್ತಿತ್ವದಲ್ಲಿದ್ದಿತ್ತು. ನಂತರ, ನಮ್ಮ ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆ ಅತ್ಯಂತ ವೇಗವಾಗಿ ಹೆಚ್ಚಾಗಲು ಪ್ರಾರಂಭವಾಯಿತು. ಮೇಲಾಗಿ ಪಂಚಾವಾರ್ಷಿಕ ಯೋಜನೆಗಳ ಅನುಷ್ಟಾನದಿಂದಾಗಿ ಆರ್ಥಿಕ ಚಟುವಟಿಕೆ ಗಳಾದಂತಹ, ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳ ವಿಸ್ತರಣೆಯೊಂದಿಗೆ, ಉದ್ಯೋಗವಾಕಾಶಗಳು ಕೂಡ ಸೃಷ್ಟಿಸಲ್ಪಟವು. ಒಂದು ಕಡೆ ಜನಸಂಖ್ಯೆಯ ನಿರಂತರ ಹೆಚ್ಚಳ, ಮತ್ತೊಂದು ಕಡೆ ಉದ್ಯೋಗಾವಕಾಶಗಳಿಂದಾಗಿ ಜನರ ತಲಾ ಆದಾಯವು ಕೂಢ ಹೆಚ್ಚಾಯಿತು. ಇದು ಆಹಾರ ಧಾನ್ಯಗಳಿಗಿರುವ ಬೇಡಿಕೆ ಅವುಗಳ ಪೂರೈಕೆಗಿಂತ ಹೆಚ್ಚಾಗಲು ಕಾರಣವಾಯಿತು. ಈ ಸಂದರ್ಭದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ವಿಸ್ತೃತ ಬೇಸಾಯದಿಂದ ಸಾಧ್ಯವಾಗಲಿಲ್ಲ. ಏಕೆಂದರೆ ವ್ಯವಸಾಯಕ್ಕೆ ಯೋಗ್ಯವಿರುವ ಭೂಮಿಯ ಕೊರತೆ. ಕಾಡುಗಳನ್ನು ನಾಶಪಡಿಸುವುದರಿಂದುಂಟಾಗುವ ಸಮಸ್ಯೆಗಳ ಅರಿವು. ಇತ್ಯಾದಿಗಳಿಂದಾಗಿ ವಿಸ್ತೃತ ಅಥವಾ ವ್ಯಾಪಕ ಬೇಸಾಯವು ಅರ್ಥಹೀನವಾಯಿತು. ಆಹಾರ ಧಾನ್ಯಗಳ ಪೂರೈಕೆಯನ್ನು ಆಮದುಗಳ ಮೂಲಕ ಹೆಚ್ಚಿಸುವುದು ಕೂಡ ಒಂದು ತಾತ್ಕಾಲಿಕ ಪರಿಹಾರ. ಆದರೆ ಅದು ದೀರ್ಘಾವಧಿಯಲ್ಲಿ ಆಹಾರ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ, ಅಸ್ಥಿರತೆಯನ್ನುಂಟು ಮಾಡುತ್ತದೆ. ಹೀಗೆ ಜನಸಂಖ್ಯೆಯ ಹೆಚ್ಚಳ, ಜನರ ಆದಾಯದಲ್ಲಿ ಏರಿಕೆ ಹಾಗೂ ಸಾಗುವಳಿ ಭೂಮಿಯ ಕೊರತೆಯಿಂದ ಕೃಷಿ ಉತ್ಪಾದನೆಗೆ ಬೇಡಿಕೆ ನಿರಂತರವಾಗಿ ಹೆಚ್ಚಾಗಲು ಕಾರಣವಾಯಿತು. ಅದುವರೆಗೂ ಸರ್ಕಾರ ಅನುಸರಿಸಿಕೊಂಡು ಬಂದ ಕೃಷಿ ನೀತಿ ಆಹಾರಧಾನ್ಯಗಳ ಕೊರತೆಯನ್ನು ನೀಗಿಸಲು ಮತ್ತು ಕೃಷಿ ಕ್ಷೇತ್ರವನ್ನು ಸಶಕ್ತಗೊಳಿಸಿ ಉತ್ಪಾದಕತೆ ಮತ್ತು ಉತ್ಪಾದನೆಯನ್ನು ಅಧಿಕಗೊಳಿಸಲು ವಿಫಲವಾಯಿತು. ಹಾಗಾಗಿ ಸರ್ಕಾರ ಕೃಷಿ ಬೆಳವಣಿಗೆ ತಂತ್ರವನ್ನು ಬದಲಾಯಿಸಬೇಕಾಯಿತು. ಈ ನೀತಿಯಲ್ಲಿ ಮಿತವಾದ ಸಾಗುವಳಿ ಭೂಮಿ ಮತ್ತು ಚಲಾನಾತ್ಮಕ ತಂತ್ರಜ್ಞಾನ ತಂತ್ರ (Limited Land and Dynamic Technology) ವನ್ನು ಪರಿಚಯಿಸಲಾಯಿತು. ಹೀಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರದೊಂದಿಗೆ, ಕೃಷಿ ವಿಶ್ವಾವಿದ್ಯಾನಿಲಯಗಳು ಮತ್ತು ಸಂಶೋಧಕರು ಸಾಕಷ್ಟು ಶ್ರಮಿಸಿದರು. ಅವರುಗಳ ಪ್ರಯತ್ನದ ಫಲವಾಗಿ ಹಲವರು ವೈಜ್ಞಾನಿಕ ವಿಧಾನಗಳು ಬೆಳಕಿಗೆ ಬಂದವು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಕೃಷಿಕರಿಗೆ ಉತ್ತೇಜನ ಕೂಡ ನೀಡಲಾಯಿತು. ಅಂತಹವುಗಳಲ್ಲಿ ಆಧುನಿಕ ತಳಿಯ ಸುಧಾರಿತ ಬೀಜಗಳು, ಹೈಬ್ರಿಡ್‌ತಳಿಯ ಬೀಜಗಳು, ರಸಾಯನಿಕ ಗೊಬ್ಬರ ಮತ್ತು ಕೀಟಾನಾಶಕಗಳು ಇತ್ಯಾದಿಗಳು ಇವುಗಳೊಂದಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಸ್ನೇಹಿ ಕೃಷಿ ನೀತಿ, ಮೂಲಸೌಕರ್ಯಗಳ ವಿಸ್ತರಣೆ, ಅವುಗಳಲ್ಲಿ ಪ್ರಮುಖವಾದಂಥವುಗಳೆಂದರೆ, ಬೃಹತ್‌, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳ ಅನುಷ್ಟಾನ, ಸಾಲಸೌಲಭ್ಯಗಳು, ವಿದ್ಯುತ್‌ಚ್ಛಕ್ತಿ, ನಿಯಂತ್ರಿತ ಮತ್ತು ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಸರ್ಕಾರದ ಬೆಂಬಲ ಬೆಲೆ, ನೀತಿ, ಇತ್ಯಾದಿ ಈ ಎಲ್ಲಾ ಮೂಲಭೂತ ಸೌಲಭ್ಯಗಳಿಂದಾಗಿ ೧೯೬೪-೬೯ರ ಅವಧಿಯಲ್ಲಿ ಕೃಷಿ ವಲಯ ಮತ್ತು ಉತ್ಪಾದನೆಯಲ್ಲಿ ವ್ಯಾಪಕವಾದ ಬದಲಾವಣೆಗಳಾದವು. ಅದು ಅಲ್ಲದೆ ಆಹಾರ ಧಾನ್ಯಗಳ ಉತ್ಪಾದನೆಯ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ಅಧಿಕವಾಯಿತು. ಇದನ್ನೇ ಹಸಿರು ಕ್ರಾಂತಿ ಎಂಬುದಾಗಿ ಕರೆಯುತ್ತಾರೆ.

ಹೀಗೆ ಕೃಷಿವಲಯದಲ್ಲಿ ಉಪಯೋಗಿಸಿದ ಆಧುನಿಕ ಒಳಸುರಿಗಳ ಪರಿಣಾಮವಾಗಿ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆ ನಿರೀಕ್ಷೆ ಮೀರಿ ಹೆಚ್ಚಾದವು. ರಸಾಯನಿಕ ಕೃಷಿ ನಮ್ಮ ರಾಷ್ಟ್ರವನ್ನು ಆಹಾರ ಧಾನ್ಯಗಳ ಕೊರತೆಯ ಸ್ಥಿತಿಯಿಂದ, ಸಮೃದ್ಧರಾಷ್ಟ್ರವನ್ನಾಗಿ ಪರಿವರ್ತಿಸಿದ್ದಲ್ಲದೆ, ಆಹಾರಧಾನ್ಯಗಳನ್ನು ರಫ್ತು ಮಾಡುವಂತಹ ಸಾಮರ್ಥ್ಯವನ್ನು ತಂದುಕೊಟ್ಟಿತು. ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಸ್ವಾಲಂಬನೆಯನ್ನು ಸಾಧಿಸಿದ್ದಲ್ಲದೆ ಇವುಗಳನ್ನು ವಿದೇಶಗಳಿಗೆ ಬೃಹತ್‌ಪ್ರಮಾಣದಲ್ಲಿ ರಫ್ತು ಮಾಡುವಂತಾಯಿತು. ಹಸಿರುಕ್ರಾಂತಿಯ ಪರಿಣಾಮವಾಗಿ, ಕಳೆದ ೩೦ ವರ್ಷಗಳಲ್ಲಿ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯು ಕ್ರಮವಾಗಿ ೭ (ಏಳು) ಪಟ್ಟ ಹಾಗೂ ೩೭೫ ಪಟ್ಟು ಅಧಿಕವಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಪರ ಕೃಷಿ ನೀತಿಯ ಫಲವಾಗಿ ಕೆಲವು ರಾಜ್ಯಗಳಲ್ಲಿ ಅದರಲ್ಲೂ ಪಂಜಾಬ್‌, ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಆಹಾರ ಧಾನ್ಯಗಳ ಉಗ್ರಾಣಗಳಾಗಿ ನಿರ್ಮಾಣವಾದವು. ಇದರ ಜೊತೆಗೆ ಈ ರಾಜ್ಯಗಳಲ್ಲಿ ರಾಸಾಯನಿಕ ಗೊಬ್ಬರ ಬಳಕೆಯು ಏಳು ಪಟ್ಟು ಹೆಚ್ಚಾದರೆ ಕೀಟನಾಶಕಗಳ ಬಳಕೆಯು ಸುಮಾರು ೩೭೫ ಪಟ್ಟು ಹೆಚ್ಚಾಯಿತು. ಆದರೆ ಆಹಾರ ಧಾನ್ಯಗಳ ಉತ್ಪಾದನೆ ಮಾತ್ರ ೧೯೫೦-೨೦೦೦ರ ಅವಧಿಯಲ್ಲಿ ಕೇವಲ ಎರಡುಪಟ್ಟು ಮಾತ್ರ ಹೆಚ್ಚಾಯಿತು. ೧೯೬೦ರಿಂದ ಕೃಷಿ ವಲಯದಲ್ಲಿ ಪ್ರಾರಂಭವಾದ ವ್ಯಾಪಕ ಬದಲಾವಣೆಗಳು ಮತ್ತು ಅವುಗಳಿಂದ ಉಂಟಾದ ಹಸಿರುಕ್ರಾಂತಿಯು ನಾಲ್ಕು ದಶಕಗಳವರೆಗೆ ರೈತರಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಿತು. ತದನಂತರ ಹಸಿರು ಕ್ರಾಂತಿಯು (Green Revolution turned in to Greedy Revolution) ಅತಿ ಹೆಚ್ಚು ಸಮಸ್ಯೆಗಳನ್ನು ಅರ್ಥ ವ್ಯವಸ್ಥೆಯಲ್ಲಿ ಸೃಷ್ಟಿಸಿತು. ಈ ಸಮಸ್ಯೆಗಳು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವುಗಳು ಸಾರ್ವತ್ರಿಕವಾಗಿದ್ದವು.

ರಾಸಾಯನಿಕ ಕೃಷಿಯ ನ್ಯೂನ್ಯತೆಗಳು (ಅಸಾವಯವ ಕೃಷಿ ಸಮಸ್ಯೆಗಳು)

ಆಧುನಿಕ ಕೃಷಿ ವಿಧಾನದಲ್ಲಿ ಬಳಸಲ್ಪಡುವಂತಹ ಅತಿ ಹೆಚ್ಚು ವ್ಯೆಚ್ಚದಾಯಕ  ಹೈಬ್ರಿಡ್‌ತಳಿಯ ಬೀಜಗಳು, ಅಧಿಕ ಇಳುವರಿ ತಳಿಯ ಬೀಜಗಳು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ, ಅತ್ಯಧಿಕ ಬೆಲೆಯ ಕೃಷಿ ಯಂತ್ರೋಪಕರಣಗಳು, ವಿದ್ಯುತ್‌ಚಾಲಿತ ಕೊಳವೆ ಮತ್ತು ತೆರೆದ ಬಾವಿಗಳ ನೀರಾವರಿ ವಿಸ್ತರಣೆ ಇತ್ಯಾದಿಗಳು ಕೃಷಿ ಉತ್ಪಾದನೆಯನ್ನು ಅಧಿಕಗೊಳಿಸುವುದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಿತು. ಆದರೆ ಇದು ಕೇವಲ ತಾತ್ಕಾಲಿಕವಾಗಿತ್ತು. ದೀರ್ಘಾವಧಿಯಲ್ಲಿ ಕೃಷಿ ಪರಿಕರಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತ ಹೋದರೆ ಇಳುವರಿ ಮಾತ್ರ ಇಳಿಮುಖವಾಗುತ್ತಾ ಹೋಯಿತು. ಇದರಿಂದಾಗಿ ಕೃಷಿ ವೆಚ್ಚ ಅಧಿಕವಾಗಿ ಮತ್ತು ಚಿಕ್ಕ ರೈತರು ತಮ್ಮ ಸಾಲಗಳನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಅಲ್ಲದೆ ಅವರ ಜೀವನ ಮಟ್ಟ ಮತ್ತಷ್ಟು ಹೀನಾಯ ಸ್ಥಿತಿಯನ್ನು ತಲುಪಿತು. ಈ ಕೃಷಿಯ ಮುಖ್ಯ ನ್ಯೂನ್ಯತೆಗಳೆಂದರೆ:

 • ಅವೈಜ್ಞಾನಿಕವಾಗಿ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ನಾಶವಾಗುವುದರ ಮೂಲಕ ಮಣ್ಣು ಸಂಪೂರ್ಣವಾಗಿ ಆರೋಗ್ಯ ಹೀನವಾಗಿದ್ದಲ್ಲದೆ ತನ್ನ ಸತ್ವವನ್ನು ಕಳೆದುಕೊಂಡಿತ್ತು. ಇದರಿಂದಾಗಿ ಕೃಷಿ ಉತ್ಪಾದನೆ ಸ್ಥಿರವಾಗಿದ್ದಲ್ಲದೆ, ರೈತರ ಆದಾಯವು ಗಣನೀಯವಾಗಿ ಕಡಿಮೆಯಾಯಿತು.
 • ರಾಸಾಯನಿಕಗಳ ಬಳಕೆಯಿಂದಾಗಿ ಮಣ್ಣು, ನೀರು, ಗಾಳಿ, ಸಸ್ಯವರ್ಗ ಮತ್ತು ಕೃಷಿ ಬೆಳೆಗಳು ಸಂಪೂರ್ಣವಾಗಿ ಮಲಿನವಾದವು.
 • ಮಾನವನ ಆರೋಗ್ಯ ಮತ್ತು ಪರಿಸರ ಮಾಲಿನ್ಯವು ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ರಾಸಾಯನಿಕಗಳ ಉಪಯೋಗದಿಂದ ಸರಿಪಡಿಸಲು ಸಾಧ್ಯವಾಗದಷ್ಟು ಮಾಲಿನ್ಯವಾಗಿ ಹೋಗಿದೆ.
 • ಹಲವು ಪ್ರಕರಣಗಳಲ್ಲಿ ಅಸಾವಯವ ಕೃಷಿಯಿಂದಾಗಿ ತರಕಾರಿ, ಹಣ್ಣು ಹಂಪಲುಗಳು, ಹಾಲು ಆಹಾರ ಧಾನ್ಯಗಳು ಇತ್ಯಾದಿಗಳು ಶೇ.೯೦ರಷ್ಟು ವಿಷಪೂರಿತವಾಗಿದ್ದು ಅವುಗಳ ಅನುಭೋಗವು ಅತ್ಯಂತ ಹಾನಿಕಾರಕವಾಗಿದೆ (೨೦೦೮).
 • ಹಸಿರು ಕ್ರಾಂತಿಯ ಪರಿಣಾಮದಿಂದಾಗಿ, ರಾಸಾಯನಿಕ ಒಳಸುರಿಗಳ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದರೆ, ಇಳುವರಿ ಇನ್ನೊಂದು ಕಡೆ ಕಡಿಮೆಯಾಗುತ್ತಿರುವುದರಿಂದ ರೈತರು ಸಾಲಗಾರರಾಗಿ ಮಾರ್ಪಡುತ್ತಿದ್ದಾರೆ.
 • ಸೀಮಾಂತ ಮತ್ತು ಚಿಕ್ಕ ರೈತರು ಹಸಿರುಕ್ರಾಂತಿಯಿಂದಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಏಕೆಂದರೆ ರಾಸಾಯನಿಕ ಕೃಷಿಯ ಬಂಡವಾಳ ಕೃಷಿಯಾಗಿ ಬದಲಾಗುತ್ತಿದೆ.
 • ಹಸಿರು ಕ್ರಾಂತಿ ಆದಾಯ ಅಸಮಾನತೆಗಳನ್ನು ಸೃಷ್ಟಿಸುತ್ತದೆ.
 • ಮಿತಿ ಮೀರಿದ ಮತ್ತು ಅಸಮರ್ಪಕವಾಗಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ, ಕೃಷಿ ಕಾರ್ಮಿಕರು ಆನಾರೋಗ್ಯಕ್ಕೆ ಒಳಗಾಗಿದ್ದಾರೆ. ರೈತ ಸ್ನೇಹಿಯಾದ ಕೀಟಗಳು ತಮ್ಮ ಆಹಾರದ ಮೂಲಗಳನ್ನು ಕಳೆದುಕೊಳ್ಳುತ್ತವೆ ಮತ್ತು ಅವುಗಳು ಕೂಡ ನಾಶವಾಗುತ್ತಿವೆ. (International Food Policy Research Institute 2002)
 • ಅತಿಯಾಗಿ ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಕೃಷಿ ಕ್ಷೇತ್ರವು ಸಂಪೂರ್ಣವಾಗಿ ಉಪ್ಪು ಮತ್ತು ಲವಣಾಂಶಗಳಿಂದಾಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ.
 • ಕೆಲವೇ ಧವಸಧಾನ್ಯಗಳ ಮೇಲಿನ ಅವಲಂಬನೆ ಹೆಚ್ಚಾಗುವುದರಿಂದ ಕೃಷಿಯು ಜೈವಿಕ ವೈವಿಧ್ಯೆತೆಯ ಗುಣವನ್ನು ಕಳೆದುಕೊಳ್ಳುತ್ತಿದೆ.
 • ಕೀಟನಾಶಕಗಳ ಬಳಕೆಯು ಮಹಿಳಾ ಕೃಷಿ ಕಾರ್ಮಿಕರ ಮೇಲೆ ಹಲವು ರೀತಿಯ ಮಾರಕ ಪರಿಣಾಮಗಳನ್ನುಂಟು ಮಾಡುತ್ತದೆ. ಅವುಗಳೆಂದರೆ ಗರ್ಭಧಾರಣೆಯಾಗದೇ ಇರುವುದು, ಗರ್ಭಪಾತ ಅವಧಿ ಪೂರ್ವ ಪ್ರಸವ, ಸಕಾಲದಲ್ಲಿ ಗರ್ಭಧಾರಣೆಯಾಗದೇ ಇರುವುದು ಇತ್ಯಾದಿ ಸಮಸ್ಯೆಗಳು ವಿಶೇಷವಾಗಿ ಕೀಟನಾಶಕಗಳ ಮಿಶ್ರಣ ಮತ್ತು ಸಿಂಪರಣೆಯಲ್ಲಿ ತೊಡಗಿರುವ ಸ್ತ್ರೀ-ಪುರುಷ ಕೃಷಿ ಕಾರ್ಮಿಕರಲ್ಲಿ ಕಂಡು ಬರುತ್ತದೆ (Ranson, 2002).

ಹೀಗೆ ರಾಸಾಯನಿಕ ಅಥವಾ ಆಧುನಿಕ ಕೃಷಿಯು ಹಲವಾರು ರೀತಿಯ ಹಾನಿಕಾರಕ ಪರಿಣಾಮಗಳನ್ನು ನಮ್ಮ ಸುತ್ತಮುತ್ತಲಿನ ಪರಿಸರ, ಪ್ರಾಣಿ ಸಂಕುಲ, ಸಸ್ಯ ವರ್ಗಗಳ ಮೇಲೆ ಬೀರುತ್ತದೆ. ಇಂತಹ ಕೃಷಿ ವಿಧಾನವನ್ನು ಹೋಡ್ಜಾ (Hodge 1993) ರವರ ಮಾತುಗಳಲ್ಲಿ ಸಮಾರೋಪಗಳಿಸಬಹುದು. ಆಧುನಿಕ ಕೃಷಿಯು ತನಗೆ ಬೇಕಾದ ಒಳಸುರಿಗಳನ್ನು ಅತ್ಯಂತ ದೂರದ ಮೂಲಗಳಿಂದ ಪಡೆದುಕೊಳ್ಳುವುದಲ್ಲದೆ, ಅತಿ ಸಂಕುಚಿತ ಜೈವಿಕ ವೈವಿಧ್ಯತೆಯನ್ನು ಹೊಂದಿರುತ್ತದೆ. ಪುನರ್ ನವೀಕರಿಸಲು ಸಾಧ್ಯವಾಗದ ಶಕ್ತಿ ಸಂಪನ್ಮೂಲಗಳ ಮೇಲೆ ಅತಿಯಾಗಿ ಅವಲಂಬಿಸಿರುತ್ತದೆ. ಏಕೆಂದರೆ ಇದು ಬೆಂಬಲ ಬೆಲೆ ಮತ್ತು ಸಹಾಯಧನಗಳೊಂದಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚಾಗಿ ಉಪಯೋಗಿಸುತ್ತದೆ. ಇವುಗಳೆಲ್ಲವು ಪರಿಸರ, ಜೀವರಾಶಿ ಮಾನವ ಮತ್ತು ಆತನ ಯೋಗಕ್ಷೇಮಕ್ಕೆ ಕೆಡುಕನ್ನುಂಟು ಮಾಡುವುದರೊಂದಿಗೆ ಅವುಗಳನ್ನು ನಾಶಮಾಡುತ್ತವೆ. ಒಟ್ಟಿನಲ್ಲಿ ಆಧುನಿಕ ಕೃಷಿ ಪದ್ಧತಿಯು ನಮ್ಮ ಸುತ್ತ ಮುತ್ತಲಿನ ಪರಿಸರ, ಜಲ ಮೂಲಗಳನ್ನು ಮಾಲಿನ್ಯ ಮಾಡುವುದಲ್ಲದೆ ಅನೇಕ ರೀತಿಯ ರೋಗ ರುಜಿನಗಳು ಹರಡಲು ಕಾರಣವಾಗುತ್ತದೆ. ಇಂತಹ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಿ ನಮ್ಮ ಸುತ್ತ ಮುತ್ತ ಇರುವ ವಾತಾವರಣವನ್ನು ಸುಸ್ಥಿರ ವಾಗಿಡುವಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಸದಾ ತಾಜಾತನದಲ್ಲಿ ಇಡುವಂತಹ ಕೃಷಿ ಪದ್ಧತಿಯ ಅವಶ್ಯಕತೆ ಇದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಕೃಷಿ ಇಂದಿನ ದಿನಗಳಲ್ಲಿ ಸಾಕಷ್ಟು ಚರ್ಚೆಯೊಂದಿಗೆ ಜನ ಪ್ರಿಯವಾಗುತ್ತಿದೆ ಅದುವೇ ಸಾವಯವ ಕೃಷಿ.

ಸಾವಯವ ಕೃಷಿಯ ಬೆಳವಣಿಗೆ

ಹಸಿರುಕ್ರಾಂತಿಯ ಮಾರಕ ಪರಿಣಾಮಗಳಿಂದಾಗಿ ಸಾವಯವ ಕೃಷಿ ವಿಧಾನವು ಮತ್ತೊಮ್ಮೆ ಆಚರಣೆಗೆ ಬರಲು ಪ್ರಾರಂಭಸಿದೆ. ಈ ಬೇಸಾಯದ ವಿಧಾನವು ಭಾರತೀಯರಿಗೆ ಹೊಸತೇನಲ್ಲ. ಪುರಾತನ ಕಾಲದಿಂದಲೂ ತಮ್ಮ ರೈತರು  ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ೨೦ನೇ ಶತಮಾನದ ಮಧ್ಯ ಭಾಗದಲ್ಲಿ ರಾಸಾಯನಿಕ ಕೃಷಿ ಪದ್ಧತಿಯಿಂದಾಗಿ ಕೆಲವು ವರ್ಷಗಳವರೆಗೆ ಕೆಲಮಟ್ಟಿಗೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು. ಈಗ ಮತ್ತೊಮ್ಮೆ ವಿಶ್ವದ ಬಹುಭಾಗಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಸಾವಯವ ಕೃಷಿ ಸುಸ್ಥಿರ ಕೃಷಿ ವಿಧಾನಗಳಲ್ಲಿ ಒಂದು ಬಹುಮುಖ್ಯವಾದ ಪದ್ಧತಿಯಾಗಿದೆ. ಈ ಬಗೆಯ ಕೃಷಿಯಲ್ಲಿ ಉತ್ಪಾದನೆಯಾದ ಆಹಾರದ ಗುಣಮಟ್ಟವು ಉತ್ತಮವಾಗಿರುತ್ತದೆ. ಪರಿಸರದ ಮೇಲೆ ಅನುಕೂಲಕರ ಪರಿಣಾಮದೊಂದಿಗೆ ಪುನರ್ ನವೀಕರಿಸಲಾಗದ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುತ್ತದೆ. ಹಾಗಾಗಿ ವಿಶ್ವದ ಹಲವು ರಾಷ್ಟ್ರಗಳು ಇದರ ಮಹತ್ವವನ್ನು ಅರಿತು ಹಲವು ರೀತಿಯ ಅನುಕೂಲಗಳನ್ನು ಸಾವಯವ ಕೃಷಿಗೆ ಕಲ್ಪಿಸಿಕೊಡುತ್ತಿವೆ. ಕೆಲವು ರಾಷ್ಟ್ರಗಳು ಸಾವಯವ ರೈತರಿಗೆ ನೇರವಾಗಿ ಹಣಕಾಸಿನ ನೆರವು ನೀಡಿದರೆ ಇನ್ನು ಕೆಲವು ರಾಷ್ಟ್ರಗಳು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಿರತವಾಗಿವೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಾವಯವ ಪದಾರ್ಥಗಳಿಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯು ತೀವ್ರವಾಗಿ ಬೆಳೆಯುತ್ತಿರುವುದರಿಂದ ಸಾವಯವ ಕೃಷಿ ಸಾಕಷ್ಟು ಜನಪ್ರಿಯವಾಗುತ್ತಿದೆ.

ಸಾವಯವ ಕೃಷಿ ಹಿನ್ನೆಲೆ

ಸಾವಯವ ಕೃಷಿ ರೈತ ವರ್ಗಕ್ಕೆ ಹೊಸದೇನೆಲ್ಲ. ಇದು ಸಾಕಷ್ಟು ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಹಲವು ಬಗೆಯ ಸಾವಯವ ಕೃಷಿ ಪದ್ದತಿಗಳನ್ನು ನಮ್ಮ ದೇಶದ ವೈವಿಧ್ಯತೆಗೆ ಅನುಸಾರವಾಗಿ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ, ಬೆಟ್ಟ ಗುಡ್ಡಗಳು ಮತ್ತು ಪರ್ವತ ಶ್ರೇಣಿಗಳಲ್ಲಿ ಇದನ್ನು ಅನುಸರಿಸಿಕೊಂಡು ಬರುತ್ತಿರುವುದು ಕಂಡು ಬರುತ್ತದೆ. ಆದಾಗ್ಯೂ ಇದರ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದಂತಹ ಕೆಲವು ತಜ್ಞರ ಬರವಣಿಗೆಗಳಿಂದ ತಿಳಿಯಬಹುದಾಗಿದೆ. ೧೯ನೇ ಶತಮಾನದಲ್ಲಿ ಸರ್ ಅಲ್ಬರ್ಟ್ ಹೋವರ್ಡ್ ಎಂಬ ತಜ್ಞರು ಭಾರತದ ಪುಸ, ಸಮಸ್ತಿಪುರದಲ್ಲಿ ಬ್ರಿಟೀಷ್‌ಸರ್ಕಾರಕ್ಕೆ ಕೃಷಿ ಸಲಹೆಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರು ಮಣ್ಣು ಮತ್ತು ಸಸ್ಯಗಳ ಅಂತರಕ್ರಿಯೆಗಳ ಕುರಿತು ಅಧ್ಯಯನ ಮಾಡುವುದರೊಂದಿಗೆ ಕಂಪೋಸ್ಟ್‌ಗೊಬ್ಬರ ತಯಾರಿಸುವ ವಿಧಾನಗಳನ್ನು ಅಭಿವೃದ್ಧಿ ಪಡಿಸಿದರು. ಆದ್ದರಿಂದ ಇವರನ್ನು ಸಾವಯವ ಕೃಷಿಯ ಹರಿಕಾರರು ಎಂದು ಸಹ ಕರೆಯಲಾಗುತ್ತದೆ. ಇವರು ಕೈಗೊಂಡ ಸಂಶೋಧನೆಗಳನ್ನು ತಮ್ಮ ಪ್ರಸ್ತಕವಾದ “Agricultural Testament” ಎಂಬುದರಲ್ಲಿ ಉಲ್ಲೇಖಿಸಿದ್ದಾರೆ. ೧೯೩೯ರಲ್ಲಿ ಲೇಡಿ ಈವ್‌ಬಾಲ್‌ಫೊರ್ (Lady Eve Balfour) ಎಂಬುವರು “The Living Soil”ಎಂಬ ಗ್ರಂಥವನ್ನು ಬರೆದರು. ಅದರಲ್ಲಿ ಅವರು ಕೈಗೊಂಡಂತಹ ಹೊಗ್ಲೆ ಪ್ರಯೋಗದಲ್ಲಿ ಸಾವಯವ ಮತ್ತು ಅಸಾವಯವ ಕೃಷಿಗಳ (lOrganic and Inorganic Farming) ಹೋಲಿಕೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡಿ, ಸಾವಯವ ಕೃಷಿಯ ಪ್ರಯೋಜನಗಳನ್ನು ವಿವರಿಸಿದ್ದಾರೆ. ಅಲ್ಲದೆ ಜರ್ಮನಿಯ ಆಡಾಲ್ಪ್‌ಸ್ಟೈನರ್ ರವರು ಅತ್ಯಂತ ವ್ಯಾಪಕವಾಗಿ ೧೯೪೦ರಲ್ಲಿ ಜೈವಿಕ ಕೃಷಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಲಾರ್ಡ ನಾರ್ಥಬಾರ್ನರವರು “Look to Land” ಗ್ರಂಥದಲ್ಲಿ ಸಾವಯವ ಕೃಷಿ ಜೀವರಾಶಿ ಸಮತೋಲನ ಮತ್ತು ಪವಿತ್ರವಾದಂತಹ ಕೃಷಿಯಾಗಿದೆ ಎಂಬುದಾಗಿ ಅವರು ಅಭಿಪ್ರಾಯಪಡುತ್ತಾರೆ. ಹಾಗಾಗಿ ಸಾವಯವ ಕೃಷಿಯು ಇವರ ಹೆಸರಿನೊಂದಿಗೆ ತಳಕುಹಾಕಿಕೊಂಡಿದೆ. ೧೯೪೦ರಲ್ಲಿ ಮಸನೋಬು ಫುಕೋಓಕೊ ಎಂಬ ಸೂಕ್ಷ್ಮ ಜೀವಾಣು ತಜ್ಞರು, ಜಪಾನಿನ ಮಣ್ಣು ಮತ್ತು ಸಸ್ಯ ವಿಭಾಗದಲ್ಲಿ ಸುಮಾರು ೩೦ ವರ್ಷಗಳು ಕಾಲ ಸಂಶೋಧನೆ ನಡೆಸಿ ಭೂಮಿಯನ್ನು ಉಳುಮೆ ಮಾಡದೇ ಸಾವಯವದ ಮೂಲಕ ಹೇಗೆ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹೀಗೆ ಸಾವಯವ ಕೃಷಿಯು ತಕ್ಷಣಕ್ಕೆ ಪ್ರಬುದ್ದಮಾನಕ್ಕೆ ಬಂದಂತಹ ಕೃಷಿ ಪದ್ಧತಿಯಾಗಿರುವುದಿಲ್ಲ. ಇದು ಹಲವಾರು ಹಂತಗಳನ್ನು ದಾಟಿಕೊಂಡು ಬಂದಂತಹ ಒಂದು ಕೃಷಿ ವಿಧಾನವಾಗಿದೆ.

ಸಾವಯವ ಕೃಷಿಯನ್ನು ಅನೇಕ ತಜ್ಞರು ವಿವಿಧ ರೀತಿಯಲ್ಲಿ ಕರೆಯುತ್ತಾರೆ, ಅವುಗಳೆಂದರೆ ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿ, ಪರಿಸರ ಸ್ನೇಹಿ ಕೃಷಿ, ಜೀವರಾಶಿ ಸಮತೋಲನ ಕೃಷಿ, ಸುಸ್ಥಿರ ಕೃಷಿ, ಜೈವಿಕಚಲನಾತ್ಮಕ ಕೃಷಿ ಇತ್ಯಾದಿ. ಆದರೆ ಈ ಒಂದು ವಿಶ್ಲೇಷಣೆಯಲ್ಲಿ ಸಾವಯವ ಕೃಷಿ ಎಂದು ಪರಿಗಣಿಸಲಾಗಿದೆ.

ಸಾವಯವ ಕೃಷಿ ಅರ್ಥ

ಸಾವಯವ ಕೃಷಿಯು ಪರಿಸರ ಸ್ನೇಹಿ, ರೈತ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಕೃಷಿ ಪದ್ಧತಿಯಾಗಿದೆ. ಏಕೆಂದರೆ ಸಾವಯವ ಕೃಷಿ ಬಾಹ್ಯ ಒಳಸುರಿಗಳನ್ನು ಅವಲಂಭಿಸದೆ, ಕೃಷಿಕರು ತಮ್ಮ ಸ್ವಪ್ರಯತ್ನದಿಂದ ತಮ್ಮ ಜಮೀನು ಜಾನುವಾರಗಳಿಂದ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವಂತಹ ಕೃಷಿಯಾಗಿದೆ. ಈ ಪದ್ಧತಿಯನ್ನು ಹಲವು ತಜ್ಞರು ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಅವುಗಳಲ್ಲಿ ಪ್ರಮುಖವಾದವು.

ಅಮೇರಿಕ ಸಂಯುಕ್ತ ಸಂಸ್ಥಾನದ ಕೃಷಿ ಅಭಿವೃದ್ಧಿ ಇಲಾಖೆ (೧೯೮೦)ಯ ಪ್ರಕಾರ “ಸಾವಯವ ಕೃಷಿ ಬೇಸಾಯದ ಒಂದು ವಿಧಾನವಾಗಿದ್ದು, ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಬೆಳವಣಿಗೆಯ ಗತಿ ನಿಯಂತ್ರಕಗಳು ಮತ್ತು ಇತರೆ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಪ್ರಾಣಿಗಳ ಆಹಾರ ಉಪಯೋಗಿಸುವುದನ್ನು ಪೂರ್ಣವಾಗಿ ನಿಷೇಧಿಸುವುದು. ಸಾವಯವ ಕೃಷಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಆವರ್ತ ಬೆಳೆಗಳು, ಬೆಳೆಗಳ ಉಳಿಕೆಗಳು, ಜಾನುವಾರಗಳ ಗೊಬ್ಬರ, ಹಸಿರೆಲೆಗೊಬ್ಬರ, ಕೃಷಿ ಕ್ಷೇತ್ರದಲ್ಲಿನ ತ್ಯಾಜ್ಯ ಮತ್ತು ಅಪವ್ಯಯಗಳನ್ನು ಸಾಧ್ಯವಾದ ಪ್ರಮಾಣದಲ್ಲಿ ಬಳಸುವುದು. ಯಾಂತ್ರಿಕ ವಿಧಾನದ ಬೇಸಾಯ, ಖನಿಜಾಂಶಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ಮಣ್ಣಿನ ಬಲವರ್ಧನೆ ಮಾಡುವುದರೊಂದಿಗೆ ಉತ್ಪಾದಕತೆಯನ್ನು ಕಾಯ್ದುಕೊಳ್ಳುವುದು. ಬೆಳೆಗಳಿಗೆ ಜೈವಿಕ ಔಷಧಿಗಳನ್ನು ಬಳಸುವುದು ಮತ್ತು ಸಸ್ಯಗಳಿಗೆ ಪೋಷಕಾಂಶಗಳನ್ನು ನೀಡಿ ಕೀಟಗಳು, ಕಳೆ ಮತ್ತು ಇತರ ಹಾನಿ ಕಾರಕಗಳನ್ನು ನಿಯಂತ್ರಿಸುವುದು” ಈ ವ್ಯಾಖ್ಯೆಯು ಅತ್ಯಂತ ವ್ಯಾಪಕವಾದಂತಹ ಅರ್ಥವನ್ನು ಸಾವಯವ ಕೃಷಿಗೆ ನೀಡುತ್ತದೆ. ಅಲ್ಲದೆ ಸಾವಯವ ಕೃಷಿಯನ್ನು ಅನುಸರಿಸುವಾಗ, ಕೃಷಿಯಲ್ಲಿ ಬಳಸುವ ಪರಿಕರಗಳು, ಸಸ್ಯವರ್ಗವನ್ನು ಹೇಗೆ ಬಲವರ್ಧನೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ.

ಕೊಡೆಕ್ಸ ಸಮಿತಿ (Codex Committee on Food and Labelling) ಯ ಪ್ರಕಾರ. “ಸಾವಯವ ಕೃಷಿಯು ಒಂದು ಪರಿಶುದ್ಧ (ಪವಿತ್ರ) ಉತ್ಪಾದನ ವಿಧಾನವಾಗಿದ್ದು ಮಣ್ಣಿನ ಜೈವಿಕ ಚಟುವಟಿಕೆ, ಜೈವಿಕ ಋತುಚಕ್ರ ಮತ್ತು ಜೈವಿಕ ವೈವಿಧ್ಯತೆಯನ್ನು ಒಳಗೊಂಡಂತೆ ಕೃಷಿ ಪರಿಸರದ ಆರೋಗ್ಯವನ್ನು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದಾಗಿದೆ. ಸ್ಥಳೀಯ ಸ್ಥಿತಿಗತಿಗಳನ್ನು ಪರಿಗಣಿಸುವುದರೊಂದಿಗೆ, ಸ್ಥಳೀಯವಾಗಿ ಅನುಸರಿಸುವ ಪದ್ಧತಿಗಳಿಗೆ ಸಂಬಂಧಿದಂತಹ ನಿರ್ವಹಣೆಯ ಆಚರಣೆಗಳಿಗೆ ಪ್ರಾಶ್ತ್ಯ ನೀಡಿ ಕೃಷಿ ಕ್ಷೇತ್ರದಲ್ಲಿ ಬಾಹ್ಯ ಒಳಸುರಿಗಳನ್ನು(Input) ನಿರಾಕರಿಸುವುದಾಗಿದೆ. ಹೀಗೆ ಸಾವಯವ ಕೃಷಿಯಲ್ಲಿ ರಾಸಾಯನಿಕಗಳನ್ನು ತಿರಸ್ಕರಿಸಿ ಯಾಂತ್ರಿಕ, ಜೈವಿಕ ಮತ್ತು ಶಾಸ್ತ್ರೀಯ ವಿಧಾನಗಳನ್ನು ಪ್ರೋತ್ಸಾಯಿಸುವುದೇ” ಸಾವಯವಕೃಷಿ ರೈತರು ಯಾವುದೇ ಒಳಸುರಿಗಳನ್ನು ಕೊಂಡುತಂದು ಉಪಯೋಗಿಸದೇ ತಮ್ಮ ಸ್ವಪ್ರಯತ್ನದಿಂದ ಸಂಪನ್ಮೂಲಗಳನ್ನು ಜೈವಿಕ ಚಟುವಟಿಕೆಗಳನ್ನು ಹಾಳುಗೆಡವದಂತೆ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವುದು ಎಂಬುದನ್ನು ತಿಳಿಸಿಕೊಡುತ್ತದೆ.

ಲ್ಯಾಂಪ್ಕಿನ್‌(Lampkin 1944) ರವರು ಪ್ರಕಾರ ಸಾವಯವ ಕೃಷಿ “ಪುನರ್ ನವೀಕರಿಸಬಹುದಾದ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಜೀವರಾಶಿ ಸಮತೋಲನ ಮತ್ತು ಜೈವಿಕ ಅಂತರಕ್ರಿಯೆಯ ಮೂಲಕ ಮಾನವ ಮತ್ತು ಪರಿಸರವನ್ನು ಒಗ್ಗೂಡಿಸಿ ಕಡಿಮೆ ಖರ್ಚಿನಲ್ಲಿ ಉತ್ಪಾದಿಸುವ ವಿಧಾನವಾಗಿದೆ. ಮಾನವ ಪ್ರಾಣಿ ಸಂಕಲ, ಬೆಳೆ ಇತ್ಯಾದಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವುದರೊಂದಿಗೆ ಕೀಟ ಮತ್ತು ರೋಗಗಳಿಂದ ಕೃಷಿ ಚಟುವಟಿಕೆಗಳನ್ನು ರಕ್ಷಿಸುವುದು. ಹೀಗೆ ಕೃಷಿಯಲ್ಲಿರುವ ಮಾನವ ಮತ್ತು ಇತರ ಸಂಪನ್ಮೂಲಗಳಿಗೆ ಯೋಗ್ಯ ಪ್ರತಿಫಲ ನೀಡುವ ಕೃಷಿ ವಿಧಾನವೇ” ಸಾವಯವ ಕೃಷಿಯಾಗಿದೆ.

ಹೀಗೆ ವಿವಿಧ ಸಂಸ್ಥೆಗಳು ಮತ್ತು ತಜ್ಞರು ಸಾವಯವ ಕೃಷಿಯನ್ನು ಸಾಗುವಳಿ ಭೂಮಿಯಲ್ಲಿ ಬಳಸುವ ಪರಿಕರಗಳು, ಕೃಷಿ ಭೂಮಿಯ ಸ್ಥಿತಿಗತಿಗಳು ಇತ್ಯಾದಿಗಳ ಆಧಾರದ ಮೇಲೆ ವ್ಯಾಖ್ಯಾನ ಮಾಡಿದ್ದಾರೆ. ಸಾವಯವ ಕೃಷಿಯು ಸುಸ್ಥಿರ ಕೃಷಿ ಪದ್ಧತಿಯಾಗಿದ್ದು, ಉತ್ಪಾದಕತೆಯ ಸ್ಥಿರತೆಯೊಂದಿಗೆ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣಿನ ಪೋಷಕಾಂಶಗಳನ್ನು ಪುನರ್ ನಿರ್ಮಾಣ ಮಾಡಲು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಯಾಂತ್ರಿಕ ವಿಧಾನಗಳ ನಿರ್ವಹಣೆಯ ಮೂಲಕ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಿ ಕೃಷಿ ನಿರ್ವಹಿಸುವಂತಹ ಪದ್ಧತಿಯಾಗಿದೆ. ಅಂದರೆ ರಾಸಾಯನಿಕ ಒಳಸುರಿಗಳ ಬಳಕೆಯನ್ನು ನಿಷೇಧಿಸುವುದು, ಸಾವಯವ ಒಳಸುರಿಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ನಿರ್ವಹಿಸುವುದು ಸಾವಯವ ಕೃಷಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಾವಯವ ಕೃಷಿಯು ಸುಸ್ಥಿರ ಕೃಷಿ ವಿಧಾನವಾಗಿದ್ದು ಸಮಾಜದಲ್ಲಿ ಕೃಷಿ ಉತ್ಪಾದಕತೆಯನ್ನು ನಿರಂತರವಾಗಿ ಹೆಚ್ಚಿಸುವುದು ಮತ್ತು ದೀರ್ಘಾವಧಿಯವರೆಗೆ ಅದರ ಮಹತ್ವವನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿರುವ ಬೇಸಾಯದ ವಿಧಾನವಾಗಿದೆ. ಮೇಲಾಗಿ ಸಂಪನ್ಮೂಲಗಳನ್ನು ಸಂರಕ್ಷಿಸುವ ಆರ್ಥಿಕವಾಗಿ ಲಾಭದಾಯಕವಾದ, ಸಮಾಜದಲ್ಲಿ ಬೆಂಬಲಿತವಾಗಿದ್ದು ವಾಣಿಜ್ಯ ದೃಷ್ಟಿಯಲ್ಲಿ ಸ್ಪರ್ಧಾತಕವಾಗಿದ್ದು ಹಾಗೂ ಪರಿಸರವನ್ನು ಬಲಿಷ್ಟಗೊಳಿಸುವಂತಹ ಸಾಮರ್ಥ್ಯ ಹೊಂದಿರುವ ಕೃಷಿ ವಿಧಾನವೇ ಸಾವಯವ ಕೃಷಿಯಾಗಿದೆ.