ಸಾವಯವ ಕೃಷಿಯ ತತ್ವಗಳು

ಸಾವಯವ ಕೃಷಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿರುವ ಒಂದು ಕೃಷಿ ವಿಧಾನವಾಗಿದೆ. ಇಂತಹ ಕೃಷಿಯು ಕೆಲವು ಪ್ರಮುಖ ತತ್ವಗಳನ್ನು ಹೊಂದಿದೆ. ಈ ತತ್ವಗಳನ್ನು ಸರ್ಕಾರೇತರ ಸಂಸ್ಥೆಯಾದ ಅಂತರ್ ರಾಷ್ಟ್ರೀಯ ಸಾವಯವ ಕೃಷಿ ಆಂದೋಲನ ಸಂಸ್ಥೆ (International Federation of Organic Agriculture Movement ೧೯೮೮) ಸೂಚಿಸಿದೆ. ಅವುಗಳೆಂದರೆ:

 • ಗರಿಷ್ಟ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆ.
  * ರಚನಾತ್ಮಕವಾಗಿ ಸ್ವಾಭಾವಿಕ ವಿಧಾನಗಳು ಮತ್ತು ಋತುಗಳು ಸಕಲ ಜೀವರಾಶಿಗಳ ಜೀವನ ವೃದ್ಧಿಗೊಳಿಸುವಂತೆ ಒಂದಕ್ಕೊಂದು ಪರಸ್ಪರ ಕಾರ್ಯನಿರ್ವಹಿಸುವುದು.
 • ಸಾವಯವ ಉತ್ಪಾದನೆ ಮತ್ತು ಸಂಸ್ಕರಣೆ ವಿಧಾನಗಳ ಸಾಮಾಜಿಕ ಮತ್ತು ಜೀವರಾಶಿಗಳ ವ್ಯಾಪಕ ಪರಿಣಾಮಗಳನ್ನು ಪರಿಗಣಿಸುವುದು.
 • ಸೂಕ್ಷ್ಮಾಣು ಜೀವಿಗಳು, ಮಣ್ಣು, ಸಸ್ಯವರ್ಗ ಹಾಗೂ ಪ್ರಾಣಿಗಳ ಸಮೂಹವನ್ನು ಒಳಗೊಂಡಂತೆ ಜೈವಿಕ ಕ್ರಿಯೆಗಳನ್ನು ಪ್ರೋತ್ಸಾಹಿಸುವುದು.
 • ಸುಸ್ಥಿತಿಯೊಂದಿಗೆ ಜಲಚರಗಳ ಬೆಳವಣಿಗೆ ಮತ್ತು ಮೌಲ್ಯವನ್ನು ಅಭಿವೃದ್ಧಿಪಡಿಸುವುದು.
 • ದೀರ್ಘಾವಧಿಯಲ್ಲಿ ಮಣ್ಣಿನ ಫಲವತೆಯನ್ನು ವೃದ್ಧಿಸುವುದು ಮತ್ತು ಸಂರಕ್ಷಿಸಿಕೊಂಡು ಹೋಗುವುದು.
 • ವನ್ಯ ಜೀವಿಗಳ ತಾಣ ಮತ್ತು ಸಸ್ಯವರ್ಗಗಳ ಸಂರಕ್ಷಣೆಯೊಂದಿಗೆ ಸಂತಾನಭಿವೃದ್ಧಿಯಲ್ಲಿ ಅನುವಂಶೀಯ ವೈವಿಧ್ಯತೆಯನ್ನು ಕಾಯ್ದುಕೊಳ್ಳುವುದು.
 • ಸಕಲ ಜೀವರಾಶಿಯ ಜೀವವಿರುವ ಜಲ ಮತ್ತು ಜಲಸಂಪನ್ಮೂಲಗಳ ಸದ್ಬಳಕೆ
 • ಸ್ಥಳೀಯವಾಗಿ ಸಂಘಟಿಸಲ್ಪಟ್ಟ ಉತ್ಪಾದನಾ ವಿಧಾನದಲ್ಲಿ ಸಾಧ್ಯವಾದ ಮಟ್ಟಿಗೆ ಪುನರ್ ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆ.
 • ಬೆಳೆಗಳು ಮತ್ತು ಪಶುಪಾಲನೆಯ ಮಧ್ಯೆ ಸೌಹಾರ್ಧಯುತ ಸಮತೋಲನ ಸಂಬಂಧವನ್ನೇರ್ಪಡಿಸುವುದು.
 • ಎಲ್ಲಾ ಪ್ರಾಣಿ ಸಂಕುಲಗಳು ಸ್ವಾಭಾವಿಕವಾಗಿ ಜೀವಿಸುವ ಅವಕಾಶವನ್ನು ಮಾಡಿಕೊಡುವುದು.
 • ಮಾಲಿನ್ಯದ ವಿವಿಧ ರೂಪಗಳನ್ನು ಕನಿಷ್ಠಮಟ್ಟಕ್ಕೆ ತರುವುದು.
 • ನವೀಕರಿಸಬಹುದಾದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಸಾವಯವ ಪದಾರ್ಥಗಳನ್ನು ಉತ್ಪಾದಿಸುವುದು.
 • ದೀರ್ಘಕಾಲ ಬಾಳಿಕೆಯ ಮತ್ತು ಉತ್ತಮ ಗುಣಮಟ್ಟದ ಹತ್ತಿಬಟ್ಟೆಯ ವಸ್ತುಗಳ ಉತ್ಪಾದನೆ.
 • ಸಂಪೂರ್ಣವಾಗಿ ಜೈವಿಕತೆಯ ಮೂಲಕ ನಾಶವಾಗುವಂತಹ ಸಾವಯವ ವಸ್ತುಗಳನ್ನು ಉತ್ಪಾದಿಸುವುದು.
 • ಸಕಲ ಜೀವರಾಶಿ ಮತ್ತು ಸಾಮಾಜಿಕ ನ್ಯಾಯ ಒಳಗೊಂಡಂತೆ ಉತ್ಪಾದನೆ, ಸಂಸ್ಕರಣೆ ಮತ್ತು ವಿತರಣೆಯಲ್ಲಿ ಪೂರ್ಣ ಪ್ರಮಾಣದ ಪ್ರಗತಿ ಸಾಧಿಸುವುದು.
 • ಸುರಕ್ಷಿತ ಪರಿಸರದಲ್ಲಿ ಪ್ರತಿಯೊಬ್ಬ ವ್ಯಕ್ತಿ ಸಾವಯವ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ತೊಡಗುವುದರ ಮೂಲಕ ಉತ್ತಮ ಜೀವನವನ್ನು ಸಾಗಿಸುವುದು. ಇದರೊಂದಿಗೆ ಮೂಲ ಅಗತ್ಯತೆಗಳನ್ನು ತೃಪ್ತಿಪಡಿಸಿಕೊಳ್ಳಲು ಯೋಗ್ಯ ಪ್ರತಿ ಫಲವನ್ನು ಪಡೆಯುವುದು (Source: IFDAM ೧೯೯೮).

ಹೀಗೆ ಸಾವಯವ ಕೃಷಿಯು ಹಲವಾರು ಗುರಿಗಳನ್ನು ಹೊಂದಿರುತ್ತದೆ. ಅವುಗಳನ್ನೇ ಸಾವಯವ ತತ್ವಗಳು ಎಂಬುದಾಗಿ ಕರೆಯಲಾಗುತ್ತದೆ. ಈ ತತ್ವಗಳನ್ನು ಗಮನಿಸಿದಾಗ ಕಂಡು ಬರುವಂತಹ ಅಂಶವೇನೆಂದರೆ ಸಾವಯವ ಕೃಷಿ ಒಂದು ಸಮಗ್ರ ಕೃಷಿಯಾಗಿದ್ದು ಇದು ಕೃಷಿ ಭೂಮಿಯನ್ನು ಒಂದು ಜೀವಿಯೆಂದು ಪರಿಗಣಿಸಿ ಅದರ ಬಲವರ್ಧನೆಗೆ ಹೇಗೆ ಪ್ರಯತ್ನಿಸಬೇಕು ಮತ್ತು ಹೇಗೆ ಸಂರಕ್ಷಿಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸಿ ಕೊಡುತ್ತದೆ.

ಸಾವಯವ ಕೃಷಿಯಲ್ಲಿ ಅನುಸರಿಸಬೇಕಾದ ವಿಧಾನಗಳು

ಸಾವಯವ ಕೃಷಿಯನ್ನು ಅನುಸರಿಸುವಂತಹ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಪರಿಪಾಲನೆ ಮಾಡಬೇಕಾಗುತ್ತದೆ. ಈ ಕೃಷಿ ಪದ್ಧತಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ಬೇಕಾದಂತಹ ಪೋಷಕಾಂಶಗಳನ್ನು ಸಾವಯವ ಮತ್ತು ಜೈವಿಕ ಸಂಪನ್ಮೂಲಗಳನ್ನು ಸಂಗ್ರಹಿಸಿ ಅವುಗಳನ್ನು ಸಂಸ್ಕರಿಸಿ ಉಪಯೋಗಿಸಬೇಕು. ಆದ್ದರಿಂದ ಸಾವಯವ ಕೃಷಿಯಲ್ಲಿ ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಂಪೂರ್ಣವಾಗಿ ತ್ಯಜಿಸಿ ಕೇವಲ ಸಾವಯವ ಒಳಸುರಿಗಳನ್ನು ಮಾತ್ರ ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇಂತಹ ವಿಧಾನದಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ರೈತರು ಕೆಲವು ಪದ್ಧತಿಗಳನ್ನು ಅನುಸರಿಸಿಕೊಂಡು ಕೃಷಿ ಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಆವರ್ತ ಬೆಳೆಗಳು, ಅಂತರ ಬೆಳೆಗಳು, ಮಿಶ್ರ ಬೆಳೆಗಳು, ಸಾಂಪ್ರದಾಯಿಕ ಮತ್ತು ಪರ್ಯಾಯಾತ್ಮ ಬೆಳೆಗಳು, ಜೈವಿಕ ಮತ್ತು ಸಾವಯವ ಗೊಬ್ಬರಗಳು ಇತ್ಯಾದಿ. ಈ ಎಲ್ಲಾ ವಿಧಾನಗಳನ್ನು ಸಂಕ್ಷಿಪ್ತವಾಗಿ ಚರ್ಚಿಸೋಣ.

. ಆವರ್ತ ಬೆಳೆಗಳು: ಒಂದು ನಿರ್ದಿಷ್ಟ ಸಾಗುವಳಿ ಭೂಮಿಯಲ್ಲಿ ಕ್ರಮ ಬದ್ಧವಾಗಿ ಪ್ರಧಾನ ಮತ್ತು ಹೊದಿಕೆ ಬೆಳೆಗಳನ್ನು ಬೆಳೆಯುವ ವಿಧಾನವಾಗಿದೆ. ಪ್ರತಿಯೊಂದು ನಿರ್ದಿಷ್ಟ ಬೆಳೆಯು ಕೂಡ ನಿಗದಿತ ಅನುಕೂಲವನ್ನು ಕಲ್ಪಿಸಿಕೊಡುತ್ತದೆ. ಅಲ್ಪಾವಧಿ ಮತ್ತು ದೀರ್ಘಾವಧಿಗಳೆರಡರಲ್ಲೂ ಮಣ್ಣಿನ ಫಲವತ್ತತ್ತೆ ಹೆಚ್ಚಿಸುವುದಲ್ಲದೆ ಕೀಟಗಳ ನಿಯಂತ್ರಣ ಮಾಡುವಲ್ಲಿಯೂ ಕೂಡ ನೆರವಾಗುತ್ತದೆ.

. ಹಸಿರೆಲೆಗೊಬ್ಬರ ಮತ್ತು ಹೊದಿಕೆ ಬೆಳೆಗಳು: ಬಹಳ ಹಿಂದಿನ ಕಾಲದಿಂದಲೂ ಹಸಿರೆಲೆಗೊಬ್ಬರುಗಳು ಮಹತ್ವವನ್ನು ಹೊಂದಿರುತ್ತವೆ. ಅದರೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಹಸಿರೆಲೆ ಗೊಬ್ಬರಗಳು ಮತ್ತು ಅವುಗಳ ಉಪಯೋಗ ಕಡಿಮೆಯಗಿರುವುದು ಕಂಡು ಬರುತ್ತದೆ. ಕೃಷಿ ಬೆಳೆಗಳನ್ನು ಅಚ್ಚುಕಟ್ಟಾಗಿ ಬೆಳೆಯಲು ಮಣ್ಣಿನಕ ಸಂರಕ್ಷಣೆಗಾಗಿ ಬೆಳೆಸುವ ಅಂತರ್ ಬೆಳೆಗಳನ್ನು ಹಸಿರೆಲೆ ಗೊಬ್ಬರಗಳೆಂದು ಕರೆಯಲಾಗುತ್ತದೆ. ಇವುಗಳು ಸಾವಯವ ಕೃಷಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ಹೊಂದಿದೆ. ಉದಾ: ಸಬಾಬುಲ್‌, ಗ್ಲಿರಿಸಿಡಿಯ ಇತ್ಯಾದಿಗಳು.

ಮಣ್ಣು ಮತ್ತು ಮಣ್ಣಿನ ಜೀವ ಸತ್ವಗಳನ್ನು ಸಂರಕ್ಷಿಸುವ ಸಲುವಾಗಿ ಬೆಳೆಸುವ ಬೆಳೆಗಳನ್ನು ಹೊದಿಕೆಯ ಬೆಳೆಗಳೆಂದು ಕರೆಯಲಾಗುತ್ತದೆ. ಇವುಗಳು ಹಸಿರೆಲೆ ಗೊಬ್ಬರಗಳಿಗೆ ಪೂರಕವಾಗಿರುತ್ತದೆ. ಹೊದಿಕೆ ಮತ್ತು ಹಸಿರೆಲೆಯ ಬೆಳೆಗಳು ಒಂದಕ್ಕೊಂದು ಪೂರಕವಾಗಿದ್ದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ರೈತರು ನಾಟಿಕಾರ್ಯ ಅಥವಾ ಬಿತ್ತನೆಯ ಸಮಯದಲ್ಲಿ ಇವುಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಬೆಳೆಗಳಿಗೆ ಬೇಕಾದ ಸಾರಜನಕವನ್ನು ದೊರಕಿಸಿಕೊಡುತ್ತವೆ ಮತ್ತು ಆರ್ಥಿಕವಾಗಿ ರೈತರಿಗೆ ಅತ್ಯಂತ ಮಿತವ್ಯಯಕಾರಿಯಾಗಿರುತ್ತವೆ.

. ಕೊಟ್ಟಿಗೆ ಮತ್ತು ಎರೆಹುಳು ಗೊಬ್ಬರ: ಜಾನುವಾರುಗಳ ಸಗಣಿ, ಮೂತ್ರ ಮತ್ತು ಕೃಷಿ ತ್ಯಾಜ್ಯಗಳನ್ನು ಒಂದೆಡೆ ಕ್ರೂಢೀಕರಿಸಿ ತಯಾರಿಸಲ್ಪಟ್ಟ ಗೊಬ್ಬರವಾಗಿರುತ್ತದೆ. ಬಹಳ ಹಿಂದಿನಿಂದಲೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸಲುವಾಗಿ ರೈತರು ತಮ್ಮ ಜಮೀನುಗಳಿಗೆ ಉಪಯೋಗಿಸುತ್ತಾರೆ. ಎರೆಹುಳು ಗೊಬ್ಬರವು ಕೂಡ ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ಬಳಸುವುದು ಕಂಡು ಬರುತ್ತದೆ. ರೈತರು ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಂಡು ಅವುಗಳಿಗೆ ಕೃಷಿ ತ್ಯಾಜ್ಯ, ಕಸಕಡ್ಡಿ, ಹುಲ್ಲು, ಕೃಷಿ ಬೆಳೆಗಳ ಉಳಿಕೆ ಇತ್ಯಾದಿಗಳನ್ನು ತುಂಬಿ ಅಂತಹ ತೊಟ್ಟಿಗಳಿಗೆ ಎರೆಹುಳುಗಳನ್ನು ಬಿಟ್ಟರೆ, ಅವುಗಳು ಅದನ್ನೆಲ್ಲ ತಿಂದು ವಿಸರ್ಜಿಸುವಂತಹ ಪದಾರ್ಥವೇ ಎರೆಹುಳು ಗೊಬ್ಬರವಾಗಿದೆ. ಹಲವಾರು ರೈತರು ಇಂದು ಇದನ್ನೆಲ್ಲ ಒಂದು ವಾಣಿಜ್ಯ ಚಟುವಟಿಕೆಯನ್ನಾಗಿ ಅನುಸರಿಸಿಕೊಂಡು ಬರುವುದು ಕಂಡುಬರುತ್ತಿದೆ. ಹೀಗೆ ಕೊಟ್ಟಿಗೆ ಮತ್ತು ಎರೆಹುಳು ಗೊಬ್ಬರಗಳೆರಡು ರೈತರ ಜಮೀನಿನಲ್ಲಿ ನೀರಿನ ಧಾರಣೆ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ದ್ವಿಗುಣಗೊಳಿಸುತ್ತವೆ.

. ಸಹ ಮತ್ತು ಅಂತರ್ ಬೆಳೆಗಳು: ರೈತರು ಅಂತರ್ ಬೆಳೆಗಳನ್ನು ಸಣ್ಣ ಪ್ರಮಾಣದಲ್ಲಿ ಕೈಗೊಂಡರೆ ಅದನ್ನು ಸಹವರ್ತಿ ಬೆಳೆಗಳ ವಿಧಾನವೆಂದು ಕರೆಯಲಾಗುತ್ತದೆ. ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸಲು ಎರಡು ಅಥವ ಹೆಚ್ಚು ಪರಸ್ಪರ ಪ್ರಯೋಜನ ಕಲ್ಪಿಸುವಂತಹ ಬೆಳೆಗಳನ್ನು ಅತ್ಯಂತ ಸಾಮಿಪ್ಯದಲ್ಲಿ ಬೆಳೆಯುವಂತಹ ವಿಧಾನವೇ ಅಂತರ್ ಬೆಳೆ ವಿಧಾನವಾಗಿದೆ. ಅಂತರ್ ಬೆಳೆ ವಿಧಾನ ಒಂದಕ್ಕೊಇಂದು ಪೂರಕವಾದಂತಹ ಬೆಳೆ ವಿಧಾನಗಳಾಗಿವೆ. ಉದಾಹರಣೆ: ಮೆಕ್ಕೆಜೋಳದೊಂದಿಗೆ ಉರುಳಿಕಾಯಿಯನ್ನು ಬೆಳೆಯುವುದು ಅಥವಾ ದ್ರಾಕ್ಷಿ ತೋಟದಲ್ಲಿ ಕುಂಬಳಕಾಯಿ ಬಳ್ಳಿಗಳನ್ನು ಬೆಳೆಯುವ ವಿಧಾನವಾಗಿದೆ. ಮೆಕ್ಕೆಜೋಳವು ಉರುಳಿಗೆ ಆಧಾರವನ್ನು ನೀಡಿದರೆ ಉರುಳಿಯು ಮೆಕ್ಕೆ ಜೋಳಕ್ಕೆ ಬೇಕಾದ ಸಾರಜನಕವನ್ನು ಒದಗಿಸುತ್ತದೆ.

. ಜೈವಿಕ ಕೀಟ ನಿಯಂತ್ರಣ ಮತ್ತು ಜೈವಿಕ ಔಷಧಿಗಳು: ಸಾವಯವ ಕೃಷಿಯು ಪರೋಪ ಜೀವಿಗಳಾದಂತಹ, ಜೇಡರ ಕಪ್ಪೆ, ಪಕ್ಷಿಗಳ ಇತ್ಯಾದಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಇವುಗಳು ಬೆಳೆಗಳನ್ನು ಹಾಳು ಮಾಡುವಂತಹ ಕೀಟಗಳನ್ನು ತಿಂದು ರೈತರ ಬೆಳೆಗಳನ್ನು ರಕ್ಷಣೆ ಮಾಡುತ್ತವೆ. ರೈತರು ತಮ್ಮ ಹೊಲಗಳ ಸುತ್ತಲು ಗಿಡ ಮರಗಳನ್ನು ಬೆಳೆಸುವುದರಿಂದ ಅವುಗಳು ಬಾವಲಿ, ಹಲವು ಬಗೆಯ ಪಕ್ಷಿಗಳಿಗೆ ವಾಸ ಸ್ಥಾನವಾಗಿ ಪರಿಣಮಿಸುತ್ತವೆ. ಇವುಗಳು ಕೂಡ ಹಾನಿಕಾರಕ ಕೀಟಗಳನ್ನು ತಿಂದು ತಾವುಗಳು ಕೂಡ ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಇದಕ್ಕೆ ಜೈವಿಕ ಕೀಟ ನಿಯಂತ್ರಣ ಎಂದು ಕರೆಯುತ್ತಾರೆ.

ಜೈವಿಕ ಔಷಧಿಗಳಲ್ಲಿ ಬೇವಿನ ಹಿಂಡಿ, ಬೇವಿನ ಎಣ್ಣೆ, ಹೊಂಗೆಯ ಹಿಂಡಿ ಸ್ಥಳೀಯವಾಗಿ ದೊರೆಯುವ ವಿವಿಧ ರೀತಿಯ ಗಿಡಬಳ್ಳಿಗಳನ್ನು ಕೊಳೆ ಹಾಕಿ ಅವುಗಳಿಂದ ರಸ ತೆಗೆದು ಅದನ್ನು ಸಿಂಪರಣೆ ಮಾಡುವುದರ ಮೂಲಕ ಬೆಳೆಗಳಿಗ ತಗಲುವ ಹಲವು ರೀತಿಯ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಮುಂಜಾನೆ ಮನೆಯಲ್ಲಿರುವ ಬೂದಿಯನ್ನು ಎರಚುವುದರ ಮೂಲಕ ಕೀಟಗಳನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಬೆಳೆಗಳ ಮೇಲೆ ಮುಳ್ಳಿನ ಸೊಪ್ಪನ್ನು ಎಳೆಯುವುದರಿಂದ ಬೆಳೆಗಳನ್ನು ತಿನ್ನುವಂತಹ ಕೀಟಗಳು ಕೆಳಗೆ ಬೀಳುತ್ತವೆ. ಪುನಃ ಅವುಗಳನ್ನು ಕಪ್ಪೆ ಇತ್ಯಾದಿಗಳು ತಿನ್ನುವುದರಿಂದ ಕೀಟ ಬಾಧೆಯನ್ನು ತಡೆಯಬಹುದಾಗಿದೆ. ಹೀಗೆ ಜೈವಿಕ ವಿಧಾನಗಳ ಮೂಲಕ ರೋಗಗಳನ್ನು ನಿಯಂತ್ರಿಸುವುದು ಬಹುಮುಖ್ಯ ವಿಧಾನವಾಗಿದೆ.

. ಸ್ವಚ್ಚತೆ(Sanitation): ರೈತರು ತಮ್ಮ ಹೊಲಗಳನ್ನು ಸ್ವಚ್ಚವಾಗಿ ನಿರ್ವಹಿಸುವುದು ಕೂಡ ಸಾವಯವ ಕೃಷಿಯ ಮತ್ತೊಂದು ಪ್ರಮುಖವಾದ ವಿಧಾನವಾಗಿದೆ. ಸ್ವಚ್ಚತೆಯು ರೈತರು ತಮ್ಮ ಜಮೀನುಗಳನ್ನು ಸಾಗುವಳಿ ಮಾಡಲು ಬಳಸುವ ಕೃಷಿ ಸಲಕರಣೆಗಳಿಗೂ ಸಂಬಂಧವಿರುತ್ತದೆ. ಸ್ವಚ್ಚತೆ ಹಲವಾರು ರೂಪಗಳಿಂದ ಕೂಡಿರುತ್ತದೆ.

 • ಕೃಷಿ ಬೆಳೆಗಳ ಸುತ್ತ ಮುತ್ತ ಇರುವಂತಹ ಕಳೆಯನ್ನು ತೆಗೆದು ಹಾಕುವುದು ಹಾಗೂ ಹಾನಿಕಾರಕ ಕೀಟಗಳು ವಾಸಿಸಲು ಮಾಡಿಕೊಂಡಂತಹ ವಾಸ ಸ್ಥಾನವನ್ನು ನಾಶಪಡಿಸುವುದು.
 • ರೈತರು ಕೃಷಿ ಉಪಕರಣಗಳನ್ನು ರಾಸಾಯನಿಕ ಕೃಷಿ ಚಟುವಟಿಕೆಗಳಲ್ಲಿ ಉಪಯೋಗಿಸಿದ್ದರೆ ಅವುಗಳನ್ನು ಸಂಪೂರ್ಣವಾಗಿ ತೊಳೆದು, ಅವುಗಳಲ್ಲಿ ಸಂಗ್ರಹವಾಗಿರುವಂತಹ ಕಳೆ ಬೀಜಗಳು, ರಾಸಾಯನಿಕ ಪದಾರ್ಥಗಳು ಸಾವಯವ ಭೂಮಿಗೆ ತಗುಲದಂತೆ ನೋಡಿಕೊಳ್ಳಬೇಕು.
 • ಕೃಷಿ ಉಪಕರಣಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಮಾಡುವುದರ ಮೂಲಕ ಸಾವಯವ ಕೃಷಿ ಕ್ಷೇತ್ರದಲ್ಲಿ ಬಳಸಬೇಕು.

ಹೀಗೆ ಉತ್ತಮ ಸಾವಯವ ರೈತ, ಸಾವಯವ ಕೃಷಿಯಲ್ಲಿ ಅನುಸರಿಸಬೇಕಾದ ವಿಧಾನದಲ್ಲಿ ಇದು ಸಹ ಅತ್ಯಂತ ಮಹತ್ವವಾದ ಅಂಶವಾಗಿದ್ದು ಮಾನವ ತನ್ನ ಮತ್ತು ಪ್ರಾಣಿಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾನೋ ಹಾಗೆ ಕೀಟ ಮತ್ತು ರೋಗ ಭಾದೆಯನ್ನು ಹತೋಟಿಗೆ ತರಲು೮ ನಿರಂತರವಾಗಿ ಕೃಷಿ ಭೂಮಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು.

. ಮಲ್ಚಿಂಗ್ (Mulching):  ಸಾವಯವ ರೈತರು ಕೃಷಿ ಕಾರ್ಯಗಳನ್ನು ನಿರ್ವಹಿಸುವಂತಹ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನವಾಗಿದೆ. ಸಾಂಪ್ರದಾಯಕವಾಗಿ ಬೃಹತ್‌ ಪ್ರಮಾಣದಲ್ಲಿ ಸಾವಯವ ವಸ್ತುಗಳಾದ ಹಸಿರು ಮತ್ತು ಒಣಗಿದ ಹುಲ್ಲು, ಮರದ ತೌಡು ಮತ್ತು ಚೂರುಗಳು ಇತ್ಯಾದಿಗಳನ್ನು ಬೆಳೆಗಳಲ್ಲಿ ಉಪಯೋಗಿಸುವಂತಹ ವಿಧಾನವಾಗಿದೆ. ಮಣ್ಣಿನ ತೇವಾಂಶ ಮತ್ತು ಉಷ್ಣತೆಯನ್ನು ಕಾಯ್ದುಕೊಂಡು ಕಳೆಗಳನ್ನು ಹತೋಟಿಗೆ ತರುವುದು ಹಾಗೂ ಮಣ್ಣಿನ ಸಾವಯವ ಅಂಶಗಳನ್ನು ಒದಗಿಸುವಂತಹ ಒಂದು ಕಾರ್ಯಚಟುವಟಿಕೆಯನ್ನು ಎಂದು ಕರೆಯಲಾಗುತ್ತದೆ.

. ಜೈವಿಕ ಗೊಬ್ಬರಗಳು: ಜೈವಿಕ ಗೊಬ್ಬರಗಳು ಜೈವಿಕ ಉತ್ಪನ್ನಗಳಾಗಿದ್ದು ಬೆಳೆಗಳ ಇಳುವರಿಯನ್ನು ಹೆಚ್ಚಿಸುವಂತಹ ಅಮೂಲ್ಯ ಗುಣಗಳನ್ನು ಹೊಂದಿರುತ್ತವೆ. ಇವುಗಳು ಪರಿಸರ ಸ್ನೇಹ ಹಾನಿಕಾರಕವಲ್ಲದ ಮತ್ತು ಕಡಿಮೆ ವೆಚ್ಚದ ಜೈವಿಕ ಗೊಬ್ಬರಗಳಾಗಿದ್ದು, ಪ್ರಸ್ತುತ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಉಪಯೋಗಿಸುವುದು ಕಂಡುಬರುತ್ತದೆ. ಬಹುಮುಖ್ಯವಾದ ಜೈವಿಕ ಗೊಬ್ಬರಗಳೆಂದರೆ, ರೈಝೋಬಿಯಂ, ಅಝೋಟಬ್ಯಾಕ್ಟರ್, ಅಝೋಲ್ಲಾ, ಹಸಿರು-ನೀಲಿ ಅಲ್ಗಾ ಸೂಕ್ಷ್ಮಾಣು ಜೀವಿಗಳು. ಪಾಸ್ಫೇಟ್‌, ಸಾಲೋಬೊಲೈಜಿಂಗ್‌, ಸಸ್ಯಗಳ ಬೆಳವಣಿಗೆಗೆ ಉತ್ತೇಜನ ನೀಡುವ ರೈಝೋಬ್ಯಾಕ್ಟೀರಿಯಂ ಇತ್ಯಾದಿಗಳು, ಪ್ರತಿಯೊಂದು ಜೈವಿಕ ಸಂಪನ್ಮೂಲವು ಒಂದೊಂದು ರೀತಿಯ ಅನುಕೂಲವನ್ನು ಕೃಷಿ ಭೂಮಿಗೆ ಒದಗಿಸಿಕೊಡುತ್ತದೆ. ಆದ್ದರಿಂದ ರೈತರು ಇವುಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಂಡು ಬೆಳೇಗಳು ಸಮೃದ್ಧವಾಗಿ ಬೆಳೆದು ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

. ಜೀವಾಮೃತ: ಜೀವಾಮೃತವು ರೈತರ ಬೆಳೆಗಳಿಗೆ ಔಷಧದ ಕೆಲಸದ ಜೊತೆಗೆ ಕೆಲವೊಂದು ರೋಗಗಳನ್ನು ಕೂಡ ನಿಯಂತ್ರಿಸುತ್ತದೆ. ಇಂತಹ ಜೀವಾಮೃತವನ್ನು ಆಕಳಿನ ಸಗಣಿ ೧೦ ಕಿಲೋ ಗಂಜಲ ೧೦ ಲೀಟರ್, ಬೆಲ್ಲ ೨ ಕಿಲೋ, ದ್ವಿದಳ ಧಾನ್ಯದ ಹಿಟ್ಟು ೨ ಕಿ ಸಾರಭರಿತ ಮೇಲ್ಮಣ್ಣು ಒಂದು ಹಿಡಿ ಇವುಗಳ ಮಿಶ್ರಣವನ್ನು ತೊಟ್ಟಿ ಅಥವ ಪ್ಲಾಸ್ಟಿಕ್‌ಡ್ರಮ್‌ನಲ್ಲಿ ಹಾಕಬೇಕು. ಇದಕ್ಕೆ ೨೦೦ ಲೀಟರ್ ನೀರನ್ನು ಕೂಡ ಹಾಕಬೇಕು. ಈ ದ್ರಾವಣವನ್ನು ಪ್ರತಿ ದಿನ ಪ್ರದಕ್ಷಿಣಾಕಾರವಾಗಿ ತಿರುಗಿಸಿದರೆ ಸುಮಾರು ಏಳನೇ ದಿವಸಕ್ಕೆ ಜೀವಾಮೃತ ಸಿದ್ಧವಾಗುತ್ತದೆ. ಇದನ್ನು ಕೊಟ್ಟಿಗೆ ಗೊಬ್ಬರದಲ್ಲಿ ಬೆರೆಸಿ ಬೆಳೆಗಳಿಗೆ ಕೊಡುವುದರಿಂದ ಫಸಲು ಸಮೃದ್ಧವಾಗಿ ಬೆಳೆಯುತ್ತದೆ ಅಥವಾ ಬೆಳೆಗೆ ಸಿಂಪರಣೆ ಮಾಡುವುದರಿಂದಲೂ ಯೋಗ್ಯ ಪರಿಣಾಮಗಳು ಉಂಟಾಗುತ್ತವೆ.

೧೦. ಪಂಚಗವ್ಯ: ಪಂಚಗವ್ಯವು ದೇಸಿ ಹಸುವಿನಿಂದ ಸಿಗುವ ಸಗಣಿ, ಗಂಜಲ, ಹಾಲು, ಮೊಸರು, ಮತ್ತು ತುಪ್ಪ ಈ ಐದು ವಸ್ತುಗಳಿಂದ ತಯಾರಿಸಲಾಗುತ್ತದೆ. ಇದನ್ನು ನೀರಿನೊಂದಿಗೆ ಸಮರ್ಪಕ ಪ್ರಮಾಣದಲ್ಲಿ ಬೆರಸಿ ಸಿಂಪರಣೆ ಮಾಡಬಹುದಾಗಿದೆ. ಬಿತ್ತನೆ ಬೀಜಗಳನ್ನು ಇದರಲ್ಲಿ ನೆನೆಹಾಕಿ ನಂತರ ಬಿತ್ತನೆ ಮಾಡುವುದು ಅತ್ಯಂತ ಉತ್ತಮವಾದ ವಿಧಾನವಾಗಿದೆ. ಪಂಚಗವ್ಯ ತಯಾರಿಕೆಯಲ್ಲಿ ಬಳಸುವ ಪ್ರಮುಖ ವಸ್ತುಗಳೆಂದರೆ ತಾಜಾ ಸಗಣಿ ೫ ಕಿಲೊ. ಗಂಜಲ ೩ ಲೀಟರ್, ಹಸುವಿನ ಹಾಲು ೨ ಲೀಟರ್, ಮೊಸರು ೨ ಲೀಟರ್, ತುಪ್ಪ ೧/೨ ಕಿಲೊ, ಕಬ್ಬಿನ ಹಾಲು ೨ ಲೀಟರ್, ಬಾಳೆ ಹಣ್ಣು ೧೨ ಹಾಗೂ ನೀರು ೨ ಲೀಟರ್ ಬೆರೆಸಿ ತಯಾರಿಸಬೇಕು. ಒಂದು ಡ್ರಮ್‌ನಲ್ಲಿ ಸಗಣಿ ಹಾಗೂ ತುಪ್ಪವನ್ನು ಮೊದಲು ಹಾಕಿ ಮಿಶ್ರಣಮಾಡಬೇಕು. ನಾಲ್ಕನೆ ದಿನದ ನಂತರ ಉಳಿದ ಪದಾರ್ಥಗಳನ್ನು ಹಾಕಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕಲಕುವುದು ಹಾಗೂ ಡ್ರಮ್‌ನ ಬಾಯಿಗೆ ತೆಳುವಾದ ಬಟ್ಟೆಯನ್ನು ಕಟ್ಟಬೇಕು. ಈ ರೀತಿ ೧೮ ದಿನಗಳ ವರೆಗೆ ನಿರಂತರವಾಗಿ ಮಾಡಿದರೆ ಪಂಚಗವ್ಯ ಬಳಸಲು ಸಿದ್ಧವಾಗಿರುತ್ತದೆ. ಇದನ್ನು ಸೂಕ್ತ ಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿ ಬೆಳೆಗಳಿಗೆ ಕೊಡುತ್ತಿದ್ದರೆ ಬೆಳೆಗಳು ಅದ್ಭುತವಾಗಿ ಬೆಳೆಯುತ್ತವೆ. ಹೀಗೆ ಸಾವಯವ ಕೃಷಿಯನ್ನು ಅತ್ಯಂತ ಸುವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಾಚರಣೆಯಲ್ಲಿ ತರಲು ಈ ಮೇಲಿನ ವಿಧಾನಗಳನ್ನು ಅನುಸರಿಸಬೇಕು. ಇದರಿಂದ ರೈತರು ತಮ್ಮ ಬೆಳೆಗಳಿಗೆ ಬೇಕಾದಂತಹ ಸಾವಯವ ಗೊಬ್ಬರಗಳನ್ನು ತಮ್ಮ ಸ್ವಂತ ಪ್ರಯತ್ನಗಳಿಂದ ತಯಾರಿಸಬಹುದು. ಅಲ್ಲದೆ ಅವರು ರಾಸಾಯನಿಕ ಒಳಸುರಿಗಳನ್ನು ಅವಲಂಬಿಸುವಂತಹ ಅಗತ್ಯತೆ ಇರುವುದಿಲ್ಲ. ಹೀಗೆ ಕಡಿಮೆ ಹಣದಿಂದ ತಮ್ಮ ಸುತ್ತಮುತ್ತಲೂ ಇರುವಂತಹ ಪರಿಸರವನ್ನು ಸಂರಕ್ಷಿಸಿಕೊಂಡು ಕೃಷಿ ಚಟುವಟಿಕೆಗಗಳನ್ನು ನಿರ್ವಹಿಸುವುದರ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದೂ ಅಲ್ಲದೆ ಸಾವಯವ ಕೃಷಿ ನಿರ್ವಹಿಸಿಕೊಂಡು ಹೋಗಲು ಈಗಾಗಲೇ ವಿವರಿಸಿದ ವಿಧಾನ ಮತ್ತು ಒಳಸುರಿಗಳಲ್ಲದೆ, ಕಸಾಯಿ ಖಾನೆಯ ತ್ಯಾಜ್ಯಗಳು ನಗರ ಪಟ್ಟಣಗಳಲ್ಲಿ ದೊರೆಯುವ ಕಸಕಡ್ಡಿ(ಪ್ಲಾಸ್ಟಿಕ್‌, ಗಾಜು ಇತರ ಪದಾರ್ಥಗಳನ್ನು ಹೊರತುಪಡಿಸಿ.) ಚರಂಡಿಯ ಕೆಸರು, ಪ್ರಾಣಿಗಳ ಗೊರಸು, ಕೊಂಬು, ಎಲುಬು, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ದೇಶಿಯ ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ತಯಾರಿಸಿದ ಕಂಪೋಸ್ಟ್‌ಗೊಬ್ಬರಗಳು, ಬತ್ತದ ತೌಡು, ಮರಕೊರೆಯುವುದರಿಂದ ಬರುವ ತೌಡು ಬೆಳೆಗಳ ತ್ಯಾಜ್ಯ ಮತ್ತು ಅಪವ್ಯಯಗಳು, ಮರದ ಚಕ್ಕೆ, ರಂಬೆಗಳು, ಒಣಗಿದ ಎಲೆ ಇತ್ಯಾದಿಗಳನ್ನು ಕೂಡ ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬಹುದು. ಇವುಗಳ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ಮಾರಕ ಪರಿಣಾಮಗಳನ್ನು ತಡೆಗಟ್ಟಬಹುದಲ್ಲದೆ ಸಾಗುವಳಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳ ಬೆಲೆಗಳು ನಿರಂತರವಾಗಿ ಅಧಿಕವಾಗುತ್ತಿರುವುದಲ್ಲದೇ, ಅವುಗಳು ರೈತರಿಗೆ ಸಕಾಲದಲ್ಲಿ ದೊರೆಯುತ್ತಿಲ್ಲ. ಆದ್ದರಿಂದ ರೈತರು ಸಾವಯವ ಕೃಷಿ ಅನುಸರಿಸುವುದರ ಮೂಲಕ ಸ್ವಾವಲಂಬಿಗಳಾಗಿ ಕೃಷಿಯನ್ನು ನಿರ್ವಹಿಸಬಹುದಾಗಿದೆ.

ಸಾವಯವ ಕೃಷಿಯ ಪ್ರೋತ್ಸಾಹ

೨೦ನೇ ಶತಮಾನದ ಮಧ್ಯಭಾಗದವರೆಗೆ ರಾಸಾಯನಿಕ ಕೃಷಿಯು ಸಾಕಷ್ಟು ಜನಪ್ರಿಯವಾಯಿತು. ರೈತರು ತಮ್ಮ ಹೊಲಗದ್ದೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಉಪಯೋಗಿಸಕೊಂಡು ಅತ್ಯಧಿಕ ಪ್ರಮಾಣದ ಉತ್ಪನ್ನ ಮತ್ತು ಆದಾಯವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಇದು ಬಹಳ ಕಾಲ ಮುಂದುವರೆಯಲಿಲ್ಲ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ರೈತರ ಕೃಷಿ ನಿರ್ವಹಣೆಯ ವೆಚ್ಚ ಅಧಿಕವಾಯಿತೆ ವಿನಹ ಅವರ ಬೆಳೆಗಳ ಇಳುವರಿ ಮಾತ್ರ ಹೆಚ್ಚಾಗಲಿಲ್ಲ ಅದು ಬಹಳಷ್ಟು ಕಡೆ ಸ್ಥಿರವಾಗಿದ್ದಲ್ಲದೆ, ಇಳಿಮುಖವಾಗುತ್ತಾ ಹೋಯಿತು. ಇದನ್ನು ಮನಗಂಡಂತಹ ರೈತರು ತಮ್ಮ ಕೃಷಿ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಲು ಚಿಂತನೆ ಮಾಡಲು ಪ್ರಾರಂಭಿಸಿದರು.

ರಾಸಾಯನಿಕ ಕೃಷಿಯ ಹಾನಿಕಾರಕ ಪರಿಣಾಮಗಳನ್ನು ಯೂರೋಪಿನ ಕೆಲ ರೈತರು ೧೯೨೫ರಲ್ಲಿ ಚಿಂತನೆ ಮಾಡಲು ಪ್ರಾರಂಭಿಸಿದರು. ರಾಸಾಯನಿಕಗಳ ಉಪಯೋಗಗಳನ್ನು ಕಡಿಮೆ ಮಾಡಿ ಕೃಷಿ ಉತ್ಪಾದನೆ ಮಾಡಲು ಜೀವ ಚೈತನ್ಯ ಸಂಘಗಳನ್ನು ರೈತರು ಕಟ್ಟಿಕೊಂಡರು. ಹೀಗೆ ಸಾವಯವ ಕೃಷಿಯನ್ನು ಜೀವ ಚೈತನ್ಯ ಎಂಬುವುದರ ಮೂಲಕ ಪ್ರಚಾರ ಮಾಡಲು ರೈತರು ಆರಂಭಿಸಿದರು. ಇದಕ್ಕೆ ಒಂದು ನಿರಂತರ ಚಳುವಳಿಯ ರೂಪವನ್ನು ನೀಡಲು ಹಲವು ರೈತರು ಪ್ರಯತ್ನ ಮಾಡಿದರು. ಇದರ ಫಲವಾಗಿ ಹುಟ್ಟಿಕೊಂಡಂತಹ ಸಂಸ್ಥೆ ಅಂತರರಾಷ್ಟ್ರೀಯ ಸಾವಯವ ಕೃಷಿ ಆಂದೋಲನ ಸಂಸ್ಥೆ (IFOAM-International Federation on Organic Agriculture Movement). ಇದು ೧೯೭೨ ರಲ್ಲಿ ಜರ್ಮನಿಯಲ್ಲಿ ಪ್ರಾರಂಭವಾಯಿತು.

ಅಂತರರಾಷ್ಟ್ರೀಯ ಸಾವಯವ ಕೃಷಿ ಆಂದೋಲನ ಸಂಸ್ಥೆ (IFOAM)

ಇದು ಸರ್ಕಾರೇತರ ಸಂಸ್ಥೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಸಾವಯವ ಕೃಷಿಯನ್ನು ಪ್ರಚಾರಗೊಳಿಸುವ ಉದ್ದೇಶದಿಂದ ಪ್ರಾರಂಭವಾಗಿದೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಆಗುವಂತಹ ಪರಿಣಾಮಗಳನ್ನು ಜಾಗೃತಿ ಮೂಡಿಸುವುದು. ಅವರಲ್ಲಿ ಪರಿವರ್ತನೆಯನ್ನು ತಂದು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಯೋಗ್ಯವಾದ ಮಾಹಿತಿಯನ್ನು ಇದು ನೀಡುತ್ತದೆ. ಅಲ್ಲದೆ ಸಾವಯವ ವಿಧಾನಗಳನ್ನು ಅನುಸರಿಸಲು ರೈತರಿಗೆ ಜಾಗತಿಕ ಮಟ್ಟದಲ್ಲಿ ಕಾರ್ಯಗಾರಗಳು, ಉಪನ್ಯಾಸ, ಚರ್ಚೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಾಡು ಮಾಡುತ್ತದೆ. ಇದು ಒಂದು ಲಾಭರಹಿತ ಸಂಸ್ಥೆಯಾಗಿದ್ದು ರೈತರಿಗೆ ಬೇಕಾದ ಅಗತ್ಯ ನೆರವನ್ನು ನೀಡುತ್ತದೆ.

IFOAM ಸಂಸ್ಥೆಯ ಗುರಿಗಳು

ಈ ಸಂಸ್ಥೆಯು ಕೆಲವೊಂದು ಪ್ರಮುಖ ಗುರಿಗಳನ್ನು ಹೊಂದಿದೆ. ಅವುಗಳು;

 • ಜಾಗತಿಕ ಮಟ್ಟದಲ್ಲಿ ಸಾವಯವ ಕೃಷಿ ಬೆಳವಣಿಗೆಗೆ ಒಂದು ವೇದಿಕೆಯನ್ನು ನಿರ್ಮಾಣ ಮಾಡುವುದು.
 • ಸಾವಯವ ತತ್ವಗಳನ್ನು ಸಮರ್ಥಿಸಿಕೊಳ್ಳುವುದು, ತಿಳಿಸಿಕೊಡುವುದು ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವುದು.
 • ಸಾವಯವ ಕೃಷಿ ವಿಧಾನಗಳನ್ನು ಪ್ರತಿಪಾದಿಸುವುದು ಮತ್ತು ಅಳವಡಿಸಿಕೊಳ್ಳಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು.
 • ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯ ಅಭಿವೃದ್ಧಿ ಮತ್ತು ಉತ್ತೇಜನ
 • ಸುಸ್ಥಿರ ಮತ್ತು ಸಾಕಷ್ಟು ಸಂಪನ್ಮೂಲಗಳೊಂದಿಗೆ ಪರಿಣಾಮಕಾರಿಯಾಗಿ ಸಾವಯವ ಸಂಸ್ಥೆಯನ್ನು ನಿರ್ಮಾಣ ಮಾಡುವುದು.

ಈ ಗುರಿಗಳೊಂದಿಗೆ ಪ್ರಗತಿಪರ ಚಿಂತಕರು, ಕೃಷಿವಿಜ್ಞಾನಿಗಳು, ರೈತರು ಸಂಶೋಧಕರು, ಸಮಾಜ ಸುಧಾರಕರು ಇತ್ಯಾದಿಯವರನ್ನೆಲ್ಲಾ ಒಳಗೊಂಡಂತೆ ಜಾಗತಿಕ ಮಟ್ಟದಲ್ಲಿ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸುವುದು ಹಾಗೂ ರಾಸಾಯನಿಕ ಕೃಷಿಯಿಂದ ಉಂಟಾಗುವ ದುಷ್ಟಪರಿಣಾಮಗಳನ್ನು ತಿಳಿಸಿಕೊಡಲು ಸ್ಥಾಪಿತವಾಗಿದೆ.

ತತ್ವಗಳು

ಈ ತತ್ವಗಳು ಸಾವಯವ ಕೃಷಿಯು ಬೆಳವಣಿಗೆ ಹೊಂದಲು ಅತ್ಯಂತ ಪ್ರಮುಖವಾದಂತವುಗಳು. ಅವುಗಳೆಂದರೆ:

೧. ಆರೋಗ್ಯ ತತ್ವ (Principle of Health)

೨. ಜೀವರಾಶಿ ತತ್ವ (Principle of Ecology)

೩. ನ್ಯಾಯಯುತ ತತ್ವ (Principle of Fairne)

೪. ಸುರಕ್ಷತೆಯ ತತ್ವ (Principle of Care)

ಸಾವಯವ ಕೃಷಿಯು ಮಣ್ಣು, ಸಸ್ಯವರ್ಗ, ಮಾನವ ಮತ್ತು ಎಲ್ಲಾ ಜೀವ ಜಗತ್ತಿನ ಆರೋಗ್ಯ ಸಂರಕ್ಷಣೆ ಮಾಡುತ್ತದೆ. ಸಕಲ ಜೀವರಾಶಿಯು ಸಂಪೂರ್ಣವಾಗಿ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿರುವುದು. ಮತ್ತು ಅವುಗಳ ಸುರಕ್ಷತೆಯ ಬೆಳವಣಿಗೆಗೆ ಸಾಮಾನ್ಯ ಪರಿಸರ ಮತ್ತು ಜೀವನಾವಕಾಶಗಳೊಂದಿಗೆ ಪರಸ್ಪರ ನ್ಯಾಯಯುತವಾದ ಹಾಗೂ ಮುಕ್ತ ಸಂಬಂಧವನ್ನು ಕಲ್ಪಿಸಿಕೊಡುವುದು. ಕೊನೆಯದಾಗಿ ಸಾವಯವ ಕೃಷಿಯು ಪ್ರಸ್ತುತ ಮತ್ತು ಭವಿಷ್ಯದ ಸಕಲ ಜೀವರಾಶಿಗಳಿಗೆ ಸಂಪನ್ಮೂಲಗಳ ಸಂರಕ್ಷಣೆ ಮಾಡಿಕೊಂಡು, ಆರೋಗ್ಯ ಮತ್ತು ಉತ್ತಮ ರಕ್ಷಣೆಯನ್ನು ಒದಗಿಸುವುದು. ಹೀಗೆ ಸಾವಯವ ಕೃಷಿಯು ಅತ್ಯಂತ ವಿಶಾಲವಾದ ಪರಿಕಲ್ಪನೆಯಾಗಿದ್ದು ಕೇವಲ ಭೂಮಿ ಮತ್ತು ಇತರ ಜೀವರಾಶಿಯನ್ನು ಕೇವಲ ವ್ಯವಹಾರಿಕವಾಗಿ ಮಾನವ ತನ್ನ ಕಲ್ಯಾಣಕ್ಕಾಗಿ ಉಪಯೋಗಿಸಿಕೊಳ್ಳುವುದಕ್ಕೆ ಸೀಮಿತವಾಗಿರಬಾರದೆಂದು ತಿಳಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆರಂಭವಾದ ಸಾವಯವ ಆಂದೋಲನವು ಇಮದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಾವಯವ ಕೃಷಿ ತನ್ನ ಜನಪ್ರಿಯತೆಗಳಿಸಲು ಸಹಾಯಕವಾಗಿದೆ.

ಸಾವಯವ ಕೃಷಿ ಉತ್ಪಾದನೆ

ಇತ್ತೀಚಿನ ದಿನಗಳಲ್ಲಿ ಗ್ರಾಹಕರಲ್ಲಿಯೂ ಕೂಡ ಸಾಕಷ್ಟು ಜಾಗೃತಿ ಉಂಟಾಗಿರುವುದರಿಂದ ಅವರು ಕೂಡ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಉತ್ಪಾದಿಸಿದ ವಸ್ತುಗಳಿಗೆ ಬದಲಾಗಿ ಸಾವಯವ ಉತ್ಪನ್ನಗಳನ್ನು ಕೊಂಡುಕೊಳ್ಳಲು ಪ್ರಾರಂಭಿಸಿದ್ದಾರೆ. ಮುಂದುವರಿದ ರಾಷ್ಟ್ರಗಳಾದ ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡ, ಆಸ್ಟ್ರೇಲಿಯ, ಜಪಾನ್‌, ಇಂಗ್ಲೆಂಡ್‌ಹಾಗೂ ಯೂರೋಪಿನ ಆರ್ಥಿಕ ಒಕ್ಕೂಟ ಸದಸ್ಯ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಜನರು ಸಾವಯವ ವಸ್ತುಗಳನ್ನು ಕೊಂಡುಕೊಂಡು ಆನುಭೋಗಿಸಲು ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಾದ, ಭಾರತ, ಚೀನಾ ಈಜಿಪ್ಟ್‌ಇತ್ಯಾದಿ ರಾಷ್ಟ್ರಗಳಲ್ಲಿಯೂ ಕೂಡ ಅಸಾವಯವ ಉತ್ಪನ್ನಗಳ ಅಪಾಯಕಾರಿ ಪರಿಣಾಮಗಳ ತಿಳುವಳಿಕೆಯಿಂದ ಜನರು ಸಾವಯವ ಉತ್ಪನ್ನಗಳಿಗೆ ಹೆಚ್ಚು ಮರು ಹೋಗುತ್ತಿರುವುದು ಕಂಡುಬರುತ್ತದೆ. ಹೀಗಾಗಿ ಸಾವಯವ ಕೃಷಿ ಮತ್ತು ಉತ್ಪಾದನೆ ಕೇವಲ ಮುಂದುವರಿದ ರಾಷ್ಟ್ರಗಳಿಗೆ ಸೀಮಿತವಾಗಿರುವುದಿಲ್ಲ. ಇಂದು ಅಭಿವೃದ್ಧಿ ಹೊಂದುತ್ತಿರುವ ಏಷ್ಯ, ಆಫ್ರಿಕಾ ಖಂಡದ ಹಲವು ರಾಷ್ಟ್ರಗಳು ಕೂಡ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮೇಲಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಒಟ್ಟು ಕೃಷಿ ಭೂಮಿಯ ಶೇ. ೨.೨ರಷ್ಟನ್ನು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಪರಿವರ್ತಿಸುವುದು ಬರದಿಂದ ಸಾಗುತ್ತಿದೆ.

ಹಲವು ರೈತರು ಸ್ವಿಇಚ್ಚೆಯಿಂದ ತಮ್ಮ ಕುಟುಂಬದ ಸದಸ್ಯರ ಆರೋಗ್ಯ ಪಶುಸಂಪತ್ತಿನ ಸಂರಕ್ಷಣೆಯ ದೃಷ್ಟಿಯಿಂದ, ತಮ್ಮ ಕೃಷಿಭೂಮಿಯನ್ನು ರಾಸಾಯನಿಕ ವಿಧಾನಗಳಿಂದ ಸಾವಯವ ವಿಧಾನಗಳಿಗೆ ಪರಿವರ್ತಿಸಿಕೊಳ್ಳುವುದು ವಿಶ್ವದ ಹಲವು ಭಾಗಗಳಲ್ಲಿ ಪ್ರಾರಂಭವಾಗಿದೆ. ಈ ರೀತಿಯ ಪರಿವರ್ತನೆಯಿಂದ ಬೆಳೆಗಳ ಇಳುವರಿ ಕುಂಠಿತವಾಗಿ ವಿಶ್ವದಲ್ಲಿ ಆಹಾರದ ಸಮಸ್ಯೆ ಉಂಟಾಗುತ್ತದೆ ಎಂದು ಹಲವು ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ಇನ್ನು ಕೆಲವು ತಜ್ಞರ ಪ್ರಕಾರ ಸಾವಯವ ವಿಧಾನವು ಇಳುವರಿಯನ್ನು ನಿಧಾನವಾಗಿ ಹೆಚ್ಚಿಸುತ್ತದೆಯಲ್ಲದೆ ಕೃಷಿಚಟುವಟಿಕೆಗಳನ್ನು ಸುಸ್ಥಿರವಾಗಿ ನಿರ್ವಹಿಸಬಹುದು ಎಂದು ತಿಳಿಸುತ್ತಾರೆ. ಸಾವಯವ ಕೃಷಿಯು ಪ್ರಸ್ತುತ ಕೃಷಿವಲಯದಲ್ಲಿರುವ ಗಂಭೀರ ಸಮಸ್ಯೆಗಳನ್ನು ನಿವಾರಣೆ ಮಾಡಿ ರೈತರಿಗೆ ಆಕರ್ಷಕ ಪ್ರತಿಫಲ ದೊರಕಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.