ವಿಶ್ವದಲ್ಲಿ ವಿವಿಧ ರಾಷ್ಟ್ರಗಳು ಯಾವ ಪ್ರಮಾಣದಲ್ಲಿ ತಮ್ಮ ಕೃಷಿಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತಿಸಿವೆ ಎಂಬುದನ್ನು ಈ ಕೆಳಗಿನ ಕೋಷ್ಟಕದಿಂದ ತಿಳಿದುಕೊಳ್ಳಬಹುದಾಗಿದೆ.

ಸಾವಯವ ಕೃಷಿಗೆ ಒಳಪಡಿಸಿದ ಸಾಗುವಳಿ ಭೂಮಿಯ ಪ್ರಮಾಣ

ಕ್ರ. ಸಂ. ಅಧಿಕ ಆದಾಯದ ಆರ್ಥಿಕತೆಯ ರಾಷ್ಟ್ರಗಳು ಸಾವಯವ ಕೃಷಿಗೆಒಳಪಟ್ಟ ಪ್ರದೇಶ (ಹೆಕ್ಟೇರ್ ಗಳಲ್ಲಿ)
 ೧ ಆಸ್ಟ್ರೀಯ ೩೪೪೯೧೬
ಸ್ವಿಜ್ಡರ್ ಲ್ಯಾಂಡ್‌ ೧೨೧೩೮೭
ಇಟಲಿ ೯೫೪೩೬೭
ಫಿನ್ ಲ್ಯಾಂಡ್‌ ೧೬೨೦೨೪
ಡೆನ್ಮಾರ್ಕ ೧೫೪೯೨೧
ಸ್ವೀಡನ್‌ ೨೦೬೫೨೪
ಇಂಗ್ಲೆಂಡ್‌ ೬೯೦೨೭೦
ಜರ್ಮನಿ ೭೬೭೮೯೧
ನಾರ್ವೇ ೪೧೦೩೫
೧೦ ಆಸ್ಟ್ರೇಲಿಯ ೧೧೮೦೦೦೦
೧೧ ನೆದರ್ ಲ್ಯಾಂಡ್‌ ೪೮೧೫೨
೧೨ ಸ್ಪೇನ್‌ ೭೩೩೧೮೨
೧೩ ಬೆಲ್ಜಿಯಂ ೨೩೭೨೮
೧೪ ಜಪಾನ್‌ ೨೯೧೫೧
೧೫ ಫ್ರಾನ್ಸ್‌ ೫೩೪೦೩೭

 

ಮೇಲಿನ ಮಧ್ಯಮ ಆದಾಯದ ಆರ್ಥಿಕತೆಯ ರಾಷ್ಟ್ರಗಳು

೧೬ ಅರ್ಜೆಂಟೈನಾ ೩೦೦೦೦೦೦
೧೭ ಹಂಗೇರಿ ೧೨೮೬೯೦
೧೮ ಚಿಲಿ ೬೩೯೨೦೦

 

ಮಧ್ಯಮ ಆದಾಯ ಹೊಂದಿದ ಆರ್ಥಿಕತೆಯ ರಾಷ್ಟ್ರಗಳು

೧೯ ಚೀನಾ ೨೩೦೦೦೦೦
೨೦ ಈಜಿಪ್ಟ್‌ ೨೪೪೫೮
೨೧ ಶ್ರೀಲಂಕ ೧೫೩೭೯

ಕಡಿಮೆ ಆದಾಯ ಹೊಂದಿದ ಆರ್ಥಿಕತೆಯ ರಾಷ್ಟ್ರಗಳು

೨೨ ಭಾರತ ೧೧೪೦೩೭
೨೩ ಪಾಕಿಸ್ತಾನ ೨೦೩೧೦
೨೪ ಬಾಂಗ್ಲದೇಶ ೧೭೭೭೭೦
೨೫ ಕ್ಯಾಮಾರೂನ್‌ ೭೦೦೦

(ಈ ಅಂಕಿ-ಅಂಶಗಳನ್ನು Yousuffi and Miller, ೨೦೦೭,೨೦೦೮ ನಿಂದ ಪಡೆದುಕೊಳ್ಳಲಾಗಿದೆ.)

ಈ ಮೇಲಿನ ಕೋಷ್ಟಕದಿಂದ ತಿಳಿದುಬರುವುದೇನೆಂದರೆ ಅತಿ ಹೆಚ್ಚು ಆದಾಯ ಹೊಂದಿದ ರಾಷ್ಟ್ರಗಳಲ್ಲದೆ, ಅತಿ ಹೆಚ್ಚು ಆದಾಯ ಹೊಂದಿದ ಮಧ್ಯಮಹಂತದಲ್ಲಿರುವ, ಮಧ್ಯಮ ಆದಾಯ ಹೊಂದಿದ ಹಾಗೂ ಕಡಿಮೆ ಆದಾಯ ಹೊಂದಿದ ರಾಷ್ಟ್ರಗಳಲ್ಲಿಯೂ ಕೂಡ ಬೃಹತ್‌ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ಸಾವಯವ ಬೇಸಾಯಕ್ಕೆ ಪರಿವರ್ತಿಸುವುದು ಕಂಡುಬರುತ್ತದೆ.

ತಮ್ಮ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಸಾವಯವ ಕೃಷಿಗೆ ಹೆಚ್ಚು ಭೂಮಿಯನ್ನು ಪರಿವರ್ತಿಸಿದ ಉನ್ನತ ಸ್ಥಾನದಲ್ಲಿರುವ ೧೦ ರಾಷ್ಟ್ರಗಳನ್ನು ಪಟ್ಟಿ ಮಾಡಬಹುದು. ಇವುಗಳು ಅತಿ ಹೆಚ್ಚು ಶೇಕಡವಾರು ಸಾವಯವ ಸಾಗುವಳಿ ಭೂಮಿಯನ್ನು ಹೊಂದಿದ ಪ್ರಮುಖ ರಾಷ್ಟ್ರಗಳು (೨೦೦೬).

ಕ್ರ. ಸಂ ರಾಷ್ಟ್ರಗಳು ಸಾವಯವದ ಅಡಿಯಲ್ಲಿರುವ ಶೇಖಡವಾರು ಕೃಷಿಭೂಮಿ
ಲಿಚಿಸ್ಟನ್‌ ೨೬.೪೦
೨. ಆಸ್ಟ್ರೀಯ ೧೩.೫೩
೩. ಸ್ವಿಟ್ಜರ್ ಲ್ಯಾಂಡ್‌ ೧೧.೩೩
೪. ಫಿನ್‌ಲ್ಯಾಂಡ್‌ ೭.೩೧
೫. ಸ್ವೀಡನ್‌ ೬.೮೦
೬. ಇಟಲಿ ೬.೨೨
೭. ಝೆಕ್‌ಗಣರಾಜ್ಯ ೬.೦೯
೮. ಡೆನ್ಮಾಕ್‌ ೫.೭೬
೯. ಪೋರ್ಚುಗಲ್‌ ೫.೪೨
೧೦. ಈಸ್ತೋನಿಯ ೫.೧೭

 

ಖಂಡವಾರು ಸಾವಯವ ಕೃಷಿಯ ಶೇಖಡವಾರು ಪ್ರಮಾಣ

ಕ್ರ. ಸಂ. ಖಂಡ ಒಟ್ಟು ಸಾವಯವ ಹಿಡುವಳಿಗಳು (ಶೇಖಡವಾರು)
ದಕ್ಷಿಣ ಅಮೇರಿಕ ೩೧
ಯೂರೋಪ್‌ ೨೭
ಏಷ್ಯ ೨೧
ಆಫ್ರಿಕಾ ೧೮
ಉತ್ತರ ಅಮೇರಿಕ ೨.೦
ಆಸ್ಟ್ರೇಲಿಯ ೧.೦
(ceania)

ಈ ಮೇಲಿನ ಕೋಷ್ಟಕಗಳಿಂದ ತಿಳಿದುಬರುವ ಪ್ರಮುಖ ಅಂಶಗಳೆಂದರೆ ಯೂರೋಪ್‌ಖಂಡದಲ್ಲಿರುವ ಬಹಳಷ್ಟು ಮುಂದುವರಿದ ರಾಷ್ಟ್ರಗಳು ತಮ್ಮಲ್ಲಿರುವ ರಾಸಾಯನಿಕ ಕೃಷಿ ಭೂಮಿಯನ್ನು ಸಾವಯವ ವಿಧಾನಗಳಿಗೆ ವ್ಯಾಪಕವಾಗಿ ಒಳಪಡಿಸುವುದು ಕಂಡುಬರುತ್ತದೆ. ಅದರಂತೆ ನಾವು ಖಂಡವಾರು ಸಾಗುವಳಿ ಹಿಡುವಳಿಗಳನ್ನು ಗಮನಿಸಿದಾಗ ಅತಿ ಹೆಚ್ಚಿನ ಪ್ರಮಾಣದ ಸಾಗುವಳಿ ಭೂಮಿಯನ್ನು ಪರಿವರ್ತಿಸುವಂತಹದ್ದು ದಕ್ಷಿಣಾಮೇರಿಕ ಖಂಡದಲ್ಲಿ ಕಂಢುಬರುತ್ತದೆ. ಏಕೆಂದರೆ ಈ ಖಂಡದಲ್ಲಿರುವ ರಾಷ್ಟ್ರಗಳು ಪರಿಸರ ಸಹ್ಯ ಕೃಷಿಯ ಪ್ರಯೋಜನವನ್ನು ಹೊಂದಿರುವುದರ ಜೊತೆಗೆ, ಅಲ್ಲಿ ಶಿಕ್ಷಣ ಮತ್ತು ವಿಸ್ತರಣೆಗೆ ಸಂಬಂಧಿಸಿದಂತೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದ್ದರಿಂದ ಇತರ ಎಲ್ಲಾ ಖಂಡಗಳಿಗಿಂತ ಲ್ಯಾಟಿನ್‌ಅಮೇರಿಕ ಖಂಡದಲ್ಲಿ ಸಾವಯವ ಕೃಷಿಯ ಬೆಳವಣಿಗೆಯ ದರ ಅತ್ಯಂತ ತೀವ್ರವಾಗಿರುತ್ತದೆ. ಪ್ರದೇಶವಾರು ಸಾಗುವಳಿ ಕೃಷಿಗೆ ಸಂಬಂಧಿಸಿದಂತೆ ಯೂರೋಪ್‌ದ್ವಿತೀಯ ಸ್ಥಾನದಲ್ಲಿರುವುದು ಅದರ ಶೇಕಡವಾರು ಪ್ರಮಾಣದಿಂದ ಕಂಡುಬರುತ್ತದೆ. ಓಶೀನಿಯಾದಲ್ಲಿ ಶೇಕಡವಾರು ಪ್ರದೇಶ ಸಾವಯವ ವ್ಯಾಪ್ತಿಗೆ ಒಳಪಟ್ಟಿರುವುದು ಬಹಳ ಕಡಿಮೆಯಿರುತ್ತದೆ. ಹೀಗೆ ಸಾವಯವ ಕೃಷಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವಿಸ್ತರಿಸಲ್ಪಡುತ್ತಿದೆ.

ಪ್ರಮುಖ ಸಾವಯವ ಉತ್ಪನ್ನಗಳು

ಆರೋಗ್ಯ ಮತ್ತು ಸುರಕ್ಷತೆಯ ಕಾರಣಗಳಿಂದಾಗಿ ಜನರು ಸಾವಯವ ಉತ್ಪನ್ನಗಳನ್ನು ಉಪಯೋಗಿಸುವುದು ಪ್ರಾರಂಭವಾಗಿದೆ. ಇಂದು ಸಾಕಷ್ಟು ಪ್ರಮಾಣದಲ್ಲಿ ಸಾವಯವ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಅಂತಹ ಪ್ರಮುಖ ಉತ್ಪನ್ನಗಳೆಂದರೆ, ಹಣ್ಣು ತರಕಾರಿಗಳು, ಆಹಾರ ಧಾನ್ಯಗಳು, ಸಾವಯವ ಹತ್ತಿ ಮತ್ತು ಅದರ ಉತ್ಪನ್ನಗಳು, ಮಾಂಸ ಮತ್ತು ಮಾಂಸದ ಪದಾರ್ಥಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು ಇತ್ಯಾದಿ. ಈ ಎಲ್ಲಾ ಸಾವಯವ ಉತ್ಪನ್ನಗಳಿಗೆ ವಿಶ್ವದಾದ್ಯಂತಹ ಅತೀ ಹೆಚ್ಚು ಬೇಡಿಕೆ ಇದೆ. ಇವುಗಳ ಬೆಲೆಗಳು, ರಾಸಾಯನಿಕದಿಂದ ಉತ್ಪಾದಿಸಲ್ಪಟ್ಟ ಉತ್ಪನ್ನಗಳಿಗಿಂತ ದುಪ್ಪಟ್ಟು ಬೆಲೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿರುತ್ತದೆ.

ನಿಸ್ಸಂಕೋಚವಾಗಿ, ಸಾವಯವ ಉತ್ಪನ್ನಗಳಿಗೆ ವಿಶ್ವಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೆಲೆ ಇರುವುದಲ್ಲದೆ, ಅವುಗಳಿಗೆ ವ್ಯಾಪಕವಾದಂತಹ ಬೇಡಿಕೆಯು ಕೂಡ ಇದೆ. ಹಾಗಾದರೆ ಸಾವಯವ ವಸ್ತುಗಳನ್ನು ಗುರುತಿಸುವುದು ಹೇಗೆ? ಸಾವಯವ ಮತ್ತು ರಾಸಾಯನಿಕ ಉತ್ಪನ್ನಗಳನ್ನು ಹೇಗೆ ಪ್ರತ್ಯೇಕಿಸಬೇಕು? ಸಾವಯವ ಎಂದು ದೃಢೀಕರಿಸಬೇಕಾದರೆ ರೈತರು ಯಾವ ವಿಧಾನಗಳನ್ನು ಅನುಸರಿಸಬೇಕು? ಎಂಬ ಹಲವು ಸಮಸ್ಯೆಗಳು ಉದ್ಭವಿಸುತ್ತದೆ. ಈ ಸಮಸ್ಯೆ ಮತ್ತು ಗೊಂದಲಗಳನ್ನು ನಿವಾರಿಸಲು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಂಸ್ಥೆಗಳು ಕಾರ್ಯನಿರತವಾಗಿದೆ.

ಸಾವಯವ ಉತ್ಪನ್ನಗಳ ದೃಢೀಕರಣ ವಿಧಾನ

ಸಾವಯವ ಉತ್ಪನ್ನಗಳು ಅತ್ಯಂತ ಆಕರ್ಷಕವಾಗಿ, ತಾಜಾತನದಿಂದ ಕಂಡು ಬಂದರೂ ಸಹ ರಾಸಾಯನಿಕಗಳಿಂದ ಉತ್ಪಾದಿಸಲ್ಪಟ್ಟ ಉತ್ಪನ್ನಗಳ ಮಧ್ಯ ವ್ಯತ್ಯಾಸ ಕಲ್ಪಿಸುವುದು ಬಹಳ ಕಷ್ಟಕರವಾಗಿರುತ್ತದೆ. ಈ ಕಾರಣದಿಂದಾಗಿ ಸಾವಯವ ಉತ್ಪನ್ನ ವಿಧಾನಗಳಿಗೆ ದೃಢೀಕರಣ ಮಾಡುವುದು ಅತ್ಯಂತ ಸೂಕ್ತವಾದುದ್ದು ಸಮಂಜಸವಾಗಿರುತ್ತದೆ. ವಿವಿಧ ರಾಷ್ಟ್ರಗಳು ವಿವಿಧ ರೀತಿಯ ದೃಢೀಕರಣ ವಿಧಾನಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ಅಳವಡಿಸಿಕೊಂಡಿವೆ. ಅವುಗಳನ್ನು ಅನುಸರಿಸುವ ವಿಧಾನಗಳಲ್ಲಿ ಸಾಕಷ್ಟು ಭಿನ್ನತೆ ಇದ್ದರೂ-ಅವುಗಳಲ್ಲಿ ಕೆಲವೊಂದು ಸಾಮಾನ್ಯವಾದ ನಿಯಮಗಳನ್ನು ಪ್ರತಿಯೊಂದು ಸಂಸ್ಥೆಯು ಅನುಸರಿಸಿಕೊಂಡು ಬರುತ್ತದೆ. ಸಾವಯವ ಉತ್ಪನ್ನದ ದೃಢೀಕರಣದಲ್ಲಿ ನಿರತವಾಗಿರುವ ಅಂತರ್ ರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಛೇರಿಯನ್ನು ಭಾರತದಲ್ಲಿ ಆರಂಭಿಸಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಅಂತಹ ಪ್ರಮುಖವಾದ ಸಂಸ್ಥೆಗಳೆಂದರೆ:

* Burea Veritas
Certification Private Limited, Mumbai

* ECOCERTSA

Branch Office, Aurangabad, Maharastra

* IMO Control Pvt. Ltd., Bangalore

* Indian Organic Certification Agency Pvt.Ltd. Cochin, Kerala

* Natural Organic Certification Agency(NOCA), Pune in Maharastra

* Lacon Quality Certification Pvt. Ltd., Thiruvalla, Tamilnadu

* One Cert Asia Agri Certification Pvt Limited, Jaipura Rajasthan

* S.G.S. India pvt Ltd, Gurogaon, Harayana

* Control Union Certifications, Mumbai, Maharastra
(ಮೊದಲು ಇದನ್ನು ಅಂತರರಾಷ್ಟ್ರೀಯ ನಿಯಮತಿ, ಎಂದು ಕರೆಯಲಾಗುತ್ತಿತ್ತು).

* ಉತ್ತರಾಂಚಲ ರಾಜ್ಯ ಸಾವಯವ ದೃಢೀಕರಣ ಏಜೆನ್ಸಿ (USOCA) Dehradun, Utharanchal

* APOF Organic Certification Agency (ACOCA) Bangalore

ಈ ಮೇಲಿನ ಸಂಸ್ಥೆಗಳು ಭಾರತದಲ್ಲಿ ಸಾವಯವ ಕೃಷಿ ಮತ್ತು ಉತ್ಪನ್ನಗಳ ದೃಢೀಕರಿಸುವಲ್ಲಿ ನಿರತವಾಗಿವೆ. ಅಲ್ಲದೆ ಅವುಗಳೆಲ್ಲವೂ ಕೂಡ ಒಂದಲ್ಲಾ ಒಂದು ಅಂತರರಾಷ್ಟ್ರೀಯ ಸಾವಯವ ದೃಢೀಕರಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿರುವ ಸಂಸ್ಥೆಗಳೆಂದರೆ:

೧. ಡಿಮೀಟರ್ (Demeter):- ಇದು ೧೯೨೮ರಲ್ಲಿ ಜರ್ಮನಿಯಲ್ಲಿ ಸ್ಥಾಪಿತವಾಗಿದ್ದು, ಅತ್ಯಂತ ಹಳೆಯ ಸಾವಯವ ದೃಢೀಕರಣ ಸಂಸ್ಥೆಯಾಗಿದೆ. ಸಾವಯವಕ್ಕೆ ಒಳಪಡಲು ಅನುಸರಿಸಬೇಕಾದ ನೀತಿ ಮತ್ತು ನಿಯಮಗಳನ್ನು ರೂಪಿಸಿದೆ. ಆ ನಿಯಮಗಳನ್ನು ಒಪ್ಪಿಕೊಂಡು ಸಾವಯವ ಕೃಷಿ ಕೈಗೊಂಡರೆ ಈ ಸಂಸ್ಥೆಯು ದೃಢೀಕರಣ ಮಾಡುವುದಲ್ಲದೆ ತನ್ನ ಮುದ್ರೆಯನ್ನು ಸಾವಯವ ಉತ್ಪನ್ನಗಳ ಮೇಲೆ ನಮೂದಿಸುತ್ತದೆ. ಇದರ ಅಂತರ ಜಾಲದ ವಿಳಾಸ: www.demeter.net

೨. ನೆಟೂರ್ ಲ್ಯಾಂಡ್‌(Naturland):- ಇದೂ ಕೂಡ ಜರ್ಮನಿಯಲ್ಲಿ ೧೯೮೨ರಲ್ಲಿ ಪ್ರಾರಂಬವಾಗಿದೆ. ಮೇಲಿನ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತದೆ. ಇದರ ಅಂತರ ಜಾಲದ ವಿಳಾಸ. www.naturland.de.

೩. ಬಯೋಸ್ವಿಸ್‌ (Biosuise):- ಸ್ವಿಡ್ಜರ್ ಲ್ಯಾಂಡಿನಲ್ಲಿ ೧೯೮೫ ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಈ ಸಂಸ್ಥೆಯು ಕೂಡ ತನ್ನ ಶಾಖೆಗಳನ್ನು ಹಲವಾರು ದೇಶಗಳಲ್ಲಿ ಪ್ರಾರಂಭಿಸಿ ಅವುಗಳ ಮೂಲಕ ದೃಢೀಕರಣ ಕೆಲಸವನ್ನು ನಿರ್ವಹಿಸುತ್ತದೆ. ಇದರ ವಿಳಾಸ ww.biosuisse.ch.

೪. ಸಾಯಿಲ್‌ಅಸೋಸಿಯೇಷನ್‌(Soil Association):- ಇದು ಇಂಗ್ಲೆಂಡಿನಲ್ಲಿ ಪ್ರಾರಂಭವಾದ ಸಾವಯವ ದೃಢೀಕರಣ ಸಂಸ್ಥೆ. ಈ ಸಂಸ್ಥೆ ಕೆಲವೊಂದು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದೆ ಪರಿವರ್ತನಾ ಕಾಲದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಯೋಜನೆಗಳಿರಬೇಕು, ಅಕ್ಕಪಕ್ಕದಲ್ಲಿ ಕುಲಾಂತರಿ ಬೆಳೆಗಳಿರಬಾರದು, ರಾಸಾಯನಿಕ ಹೊಲಗಳು ಹತ್ತಿರವಿದ್ದರೆ ಜೈವಿಕ ಬೇಲಿ ಅಥವಾ ತಡೆಗೊಡೆಯನ್ನು ನಿರ್ಮಿಸಬೇಕೆಂದು ಸೂಚಿಸುತ್ತದೆ.

೫. ಅಂತರರಾಷ್ಟ್ರೀಯ ಸಾವಯವ ಕೃಷಿ ಆಂದೋಲನ ಸಂಸ್ಥೆ (IFOAM): ಇದು ೧೯೭೨ ರಲ್ಲಿ ಜರ್ಮನಿಯಲ್ಲಿ ಸ್ಥಾಪಿತವಾಗಿದ್ದು ಕೇವಲ ಸಾವಯವ ಚಳುವಳಿಗೆ ಸೀಮಿತವಾಗಿರದೇ ದೃಢೀಕರಣದಲ್ಲಿಯೂ ಕೂಡ ನಿರತವಾಗಿದೆ. ಇದರ ವಿಳಾಸ: www.ifoam.org

ಹೀಗೆ ಸಾವಯವ ಉತ್ಪನ್ನಗಳನ್ನು ದೃಢೀಕರಿಸಲು ಹಲವಾರು ಸಂಘ ಸಂಸ್ಥೆ, ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಕೂಡ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ.

ಸಾವಯವ ದೃಢೀಕರಣಕ್ಕೆ ಒಳಪಡುವ ಪದಾರ್ಥಗಳು

ಸಾವಯವ ದೃಢೀಕರಣವು ಒಂದು ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಇದರ ವ್ಯಾಪ್ತಿಗೆ ಒಳಪಡುವಂತಹ ಬಹುಮುಖ್ಯವಾದ ಪದಾರ್ಥಗಳೆಂದರೆ;

  • ಹೊಲ ಮತ್ತು ತೋಟದ ಬೆಳೆಗಳು ಎಲ್ಲಾ ಆಹಾರದ ಬೆಳೆಗಳು, ಹತ್ತಿ ಸೆಣಬಿನಂತಹ ವಾಣಿಜ್ಯ ಬೆಳೆಗಳು, ರೇಶ್ಮೆ ಮತ್ತು ಅದರ ಸಂಸ್ಕರಣೆ.
  • ಅರಣ್ಯ ಉತ್ಪನ್ನಗಳ ಸಂಗ್ರಹ (ಜೇನು, ಅಣಬೆ, ಔಷಧಿ ಉತ್ಪನ್ನಗಳು) ಮತ್ತು ಅದರ ಸಂಸ್ಕರಣೆ.
  • ಪ್ರಾಣಿ (ದನ, ಆಡು, ಹಂದಿ, ಮಾಂಸ, ಮೊಟ್ಟೆ, ಹಾಲು ಮತ್ತು ಉತ್ಪನ್ನಗಳು) ಕೋಳಿ, ಉಣ್ಣೆ, ಚರ್ಮ ಇತ್ಯಾದಿ ಮತ್ತು ಅವುಗಳ ಸಂಸ್ಕರಣೆ.
  • ಜಲಚರಗಳು (ಮೀನು, ಸಿಗಡಿ, ಸ್ಪಿರುಲೀನಾ) ಮತ್ತು ಅವುಗಳ ಸಂಸ್ಕರಣೆ
  • ಬೆಳೆಸಿದ ಜೇನು, ಅಣಬೆ ಮತ್ತು ಅದರ ಸಂಸ್ಕರಣೆ.
  • ನಾರು, ಜವಳಿ, ಮರ ಮತ್ತು ಅವುಗಳ ಸಂಸ್ಕರಣೆ.
  • ಕೃಷಿ ಒಳಸುರಿಗಳು ಇತ್ಯಾದಿ.

ಈ ಮೇಲಿನ ಉತ್ಪನ್ನಗಳು, ಉತ್ಪಾದನಾ ವಿಧಾನಗಳನ್ನು ಸಾವಯವ ದೃಢೀಕರಣಕ್ಕೆ ಒಳಪಡಿಸಬಹುದಾಗಿದೆ. ಹೀಗೆ ದೃಢೀಕರಣ ಎಂಬುದು ಸಾವಯವ ಕೃಷಿ ಪದ್ಧತಿಯನ್ನು ಹೊರಜಗತ್ತಿಗೆ ದೃಢೀಕರಿಸುವ ಮಾರ್ಗವಾಗಿದೆ.

ದೃಢೀಕರಣಕ್ಕೆ ಒಳಪಡಿಸುವುದು ಹೇಗೆ?

ಸಾವಯವ ಉತ್ಪನ್ನ ಮತ್ತು ಉತ್ಪಾದನಾ ವಿಧಾನಗಳನ್ನು ದೃಢೀಕರಿಸಲು ಅಂತರ ರಾಷ್ಟ್ರೀಯ ಮತ್ತು ರಾಷ್ಟ್ರೀಯಮಟ್ಟದಲ್ಲಿ ಹಲವಾರು ಸಂಸ್ಥೆಗಳು ನಿರತವಾಗಿವೆ. ಹಾಗಿದ್ದರೆ ನಮ್ಮ ರೈತರು ಸಾವಯವ ಕೃಷಿಯನ್ನು ದೃಢೀಕರಣಕ್ಕೆ ಒಳಪಡಿಸಿ ಹೇಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ತಮ್ಮ ಕೃಷಿ ವಿಧಾನಗಳನ್ನು ಸಾವಯವಕ್ಕೆ ಒಳಪಡಿಸಲು ರೈತರು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಅದಕ್ಕಾಗಿ ಅವರು ಹಲವಾರು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಅವುಗಳೆಂದರೆ:

೧. ತಮ್ಮ ಕೃಷಿ ಭೂಮಿಗೆ ಸಂಬಂಧಿಸಿದಂತೆ ಒಂದು ಯೋಜನೆಯನ್ನು ತಯಾರಿಸಿ ಕೊಳ್ಳಬೇಕು.

೨. ಯಾವ ರೀತಿಯಲ್ಲಿ ಕೃಷಿ ಭೂಮಿಯನ್ನು ಸಾಗುವಳಿ ಮಾಡಲಾಗುತ್ತದೆ ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ದಾಖಲೆ ಮಾಡಿಕೊಂಡಿರಬೇಕು.

೩. ಸಾವಯವ ಸಂಸ್ಥೆಗಳು ಅನುಮೋದಿಸಿರುವಂತಹ ಒಳಸುರಿಗಳನ್ನು ಮಾತ್ರ ಬಳಸಿರಬೇಕು.

೪. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಬೆಳವಣಿಗೆ ಉತ್ತೇಜಿಸುವಂತಹ ರಾಸಾಯನಿಕ ಪದಾರ್ಥಗಳನ್ನು ಬಳಸಬಾರದು.

೫. ಸುಗ್ಗಿಯ ಅಥವಾ ಕೊಯ್ಲಿ ಸಂದರ್ಭದಲ್ಲಿಯೂ ಅತ್ಯಂತ ವೈಜ್ಞಾನಿಕವಾಗಿ ನಿರ್ವಹಿಸಬೇಕು. ಯಾವುದೇ ರೀತಿಯ ಕಲಬೆರೆಕೆ ಮತ್ತು ಮಿಶ್ರಣ ಗಳುಂಟಾಗದಂತೆ ನೋಡಿಕೊಳ್ಳಬೇಕು.

೬. ಅಕ್ಕ ಪಕ್ಕದ ರೈತರು ಉಪಯೋಗಿಸುವ ರಾಸಾಯನಿಕಗಳಿಂದ ತಮ್ಮ ಸಾಗುವಳಿ ಭೂಮಿಯನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಂಡಿರಬೇಕು.

೭. ರಾಸಾಯನಿಕ ಕೃಷಿಯಿಂದ ಹರಿದು ಬರುವಂತಹ ನೀರು ಸಾವಯವ ಕೃಷಿ ಭೂಮಿಗೆ ಸೇರದಂತೆ ಬಸಿಕಾಲುವೆಗಳನ್ನು ನಿರ್ಮಾಣ ಮಾಡಿಕೊಂಡಿರಬೇಕು.

೮. ಸಾವಯವ ವಿಧಾನಗಳಿಂದ ಉತ್ಪಾದಿಸಿದ ಉತ್ಪನ್ನವನ್ನು ಸಂಗ್ರಹಿಸುವಾಗಲೂ ಯಾವುದೇ ರೀತಿಯ ರಾಸಾಯನಿಕಗಳನ್ನು ಉಪಯೋಗಿಸಬಾರದು.

ಈ ಮೇಲಿನ ವಿಧಾನಗಳಲ್ಲದೆ, ಸಂಸ್ಥೆಯು ನೀಡಿದ ಎಲ್ಲಾ ಸಲಹೆ ಮತ್ತು ಮಾರ್ಗದರ್ಶನಗಳನ್ನು ಪಾಲಿಸಿದ ನಂತರ ಮತ್ತು ರೈತರು ಅನುಸರಿಸಿದ ಕೃಷಿ ವಿಧಾನಗಳು ಅವರು ಒದಗಿಸಿದ ದಾಖಲೆಗಳು ಸಮರ್ಪಕವಾಗಿದ್ದರೆ, ಆದ್ದರಿಂದ ಸಂಸ್ಥೆಯು ತೃಪ್ತಿಯನ್ನು ಹೊಂದಿದರೆ ಆಗ ರೈತರ ಉತ್ಪಾದನಾ ವಿಧಾನ ಮತ್ತು ಉತ್ಪನ್ನವನ್ನು ಸಾವಯವ ಎಂದು ದೃಢೀಕರಣ ಮಾಡಲಾಗುತ್ತದೆ. ಆದರೆ ಇಲ್ಲಿ ಇನ್ನೊಂದು ಅಂಶವನಕ್ನು ಗಮನಿಸಬೇಕಾಗಿರುತ್ತದೆ. ಅದು ಇದುವರೆಗೂ ರಾಸಾಯನಿಕ ಕೃಷಿಯನ್ನು ಅನುಸರಿಸುತ್ತ ಬಂದಿದ್ದು ಸಾವಯವಕ್ಕೆ ರೈತರು ತಮ್ಮ ಜಮೀನನ್ನು ಪರಿವರ್ತಿಸಿದರೆ ಅಂತಹ ಕೃಷಿಗೆ ಸಾವಯವ ದೃಢೀಕರಣ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಅಂತಹ ಕೃಷಿ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಅಂಶಗಳು ಮಣ್ಣಿನಲ್ಲಿ ಉಳಿದಿರುತ್ತವೆ. ಆದ್ದರಿಂದ ರೈತರು ಕೆಲ ಕಾಲದವರೆಗೆ ಸಾವಯವವನ್ನು ಅನುಸರಿಸಿಕೊಂಡು ಹೋಗಬೇಕು.

ಸಾವಯವ ಕೃಷಿಗೆ ಪರಿವರ್ತನೆ

ರೈತರು ತಮ್ಮ ಒಟ್ಟು ಜಮೀನಿನ ಪೂರ್ಣ ಅಥವಾ ಒಂದು ಭಾಗವನ್ನು ಸಾವಯವ ಕೃಷಿಗೆ ಅಳವಡಿಸಿಕೊಳ್ಳಬಹುದು. ಹೀಗೆ ಜಮೀನನ್ನು ಸಾವಯವ ಸಾಗುವಳಿಗೆ ಪರಿವರ್ತಿಸಿದಾಗ ಆರಂಭದಲ್ಲಿ ಇಳುವರಿ ಬಹಳ ಕಡಿಮೆಯಾಗುತ್ತದೆ. ಅದರಿಂದ ರೈತರು ಧೃತಿಗೆಡದೆ, ನಿರಂತರವಾಗಿ ಸಾವಯವ ಕೃಷಿಯನ್ನು ಅನುಸರಿಸಿಕೊಂಡು ಹೋಗಬೇಕು. ಆಗ ಇಳುವರಿ ಸ್ಥಿರ ಪ್ರಮಾಣದಲ್ಲಿ ಅಧಿಕವಾಗುತ್ತ ಹೋಗುತ್ತದೆ. ಸಾವಯವಕ್ಕೆ ಒಳಪಡಿಸಿದ ನಂತರ ೨೪ ತಿಂಗಳಕಾಲ ಹೊಲದ ಬೆಳೆಗಳಿಗೆ ಹಾಗೂ ತೋಟದ ಬೆಳೆಗಳಿಗೆ ೩೬ ತಿಂಗಳ ಅವಧಿಯನ್ನು ನಿಗದಿಗೊಳಸಲಾಗಿದೆ. ಈ ಅವಧಿ ಮುಗಿದ ನಂತರವೆ ಅ ಭೂಮಿಯು ಸಾವಯವ ದೃಢೀಕರಣಕ್ಕೆ ಒಳಪಡಿಸಲಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪರಿವರ್ತನೆಯ ಅವಧಿಯನ್ನು ೨ ಅಥವಾ ೩ ವರ್ಷಗಳಿಗಿಂತ ಕಡಿಮೆ ನಿಗದಿಗೊಳಿಸಬಹುದು. ಉದಾ: ಅರಣ್ಯ ಪ್ರದೇಶವನ್ನು ಸಾಗುವಳಿಗೆ ಒಳಪಡಿಸಿದಾಗ ಅಂತಹ ಜಮೀನನ್ನು ಒಂದು ವರ್ಷದ ನಂತರ ಸಾವಯವವೆಂದು ದೃಢೀಕರಿಸಬಹುದಾಗಿದೆ ಅಥವಾ ಬಂಜರು ಭೂಮಿಯನ್ನು ಸಾಗುವಳಿಗೆ ಪರಿವರ್ತಿಸಿದಾಗ ಅಥವಾ ಬುಡಕಟ್ಟು ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಅವರು ನಿರ್ವಹಿಸುವ ಕೃಷಿ ಚಟುವಟಿಕೆಗಳನ್ನು ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಕೃಷಿ ಚಟುವಟಿಕೆಗಳನ್ನು ಸಾವಯವದ ಮೂಲಕ ನಿರ್ವಹಿಸಿದ ಮೇಲೆ ಅವುಗಳನ್ನು ಸಾವಯವ ದೃಢೀಕರಣಕ್ಕೆ ಒಳಪಡಿಸಬಹುದು. ಹೀಗೆ ಸಾವಯವ ಕೃಷಿ ಪರಿವರ್ತನೆಗೆ ಸಂಬಂಧಿಸಿದಂತೆ ನಿಗದಿಗೊಳಿಸಿದ ಅವಧಿಯು ಎಲ್ಲಾ ರಾಷ್ಟ್ರಗಳಲ್ಲಿ ಏಕ ಪ್ರಕಾರವಾಗಿರುವುದಿಲ್ಲ. ಕೆಲವು ರಾಷ್ಟ್ರಗಳಲ್ಲಿ ಮಳೆಗಾಲದ ಬೆಳೆಗೆ ಒಂದು ವರ್ಷದ ನಂತರ ಸಾವಯವ ದೃಢೀಕರಣಕ್ಕೆ ಒಳಪಟ್ಟರೆ ನೀರಾವರಿ ಪ್ರದೇಶದ ಬೆಳೆಗಳಾದರೆ ಸಾವಯವಕ್ಕೆ ಪರಿವರ್ತಿಸಿ ಎರಡು ಬೆಳೆಗಳನ್ನು ಬೆಳೆದ ಮೇಲೆ ಅಂತಹ ಕೃಷಿ ಭೂಮಿಯನ್ನು ಸಾವಯವ ದೃಢೀಕರಣಕ್ಕೆ ಒಳಪಡಿಸಬಹುದು. ಹೀಗೆ ಸಾವಯವ ದೃಢೀಕರಣ ಅವಧಿಗೆ ಸಂಬಂಧಿಸಿದಂತೆ ಒಂದೇ ರೀತಿಯ ವಿಧಾನಗಳನ್ನು ಅನುಸರಿಸುವಂತಿಲ್ಲ.

ಸಾವಯವ ದೃಢೀಕರಣದ ವೆಚ್ಚ

ದೃಢೀಕರಣವೆಂದರೆ ಕೇವಲ ಉತ್ಪನ್ನದ ದೃಢೀಕರಣವೆಂದು ತಿಳಿಯಬಾರದು. ಕೃಷಿ ವ್ಯವಸ್ಥೆ ಮತ್ತು ವಿಧಾನಗಳ ಪೂರ್ಣಪ್ರಮಾಣದ ದೃಢೀಕರಣವಾಗಿದೆ. ಇದಕ್ಕೆ ತಗಲುವ ವೆಚ್ಚ ಅಧಿಕವಾಗಿದ್ದು ಅದನ್ನು ಸಂಪೂರ್ಣವಾಗಿ ರೈತರೇ ಭರಿಸಬೇಕಾಗುತ್ತದೆ. ಏಕೆಂದರೆ ರೈತರ ಜಮೀನುಗಳು ದೃಢೀಕರಣಕ್ಕೆ ಅರ್ಹತೆಯನ್ನು ಪಡೆದುಕೊಂಡ ಮೇಲೆ ಸಂಸ್ಥೆಯು ನುರಿತ ತಜ್ಞರನ್ನು, ತನಿಖಾಧಿಕಾರಿಗಳನ್ನು ಜಮೀನುಗಳಿಗೆ ಭೇಟಿ ನೀಡಿ ಪರೀಕ್ಷಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕಳುಹಿಸಿ ಕೊಡುತ್ತದೆ. ಇದರೊಂದಿಗೆ ದೃಢೀಕರಣ ಪ್ರಮಾಣ ಪತ್ರವನ್ನು ನೀಡಲು ಶುಲ್ಕವನ್ನು ರೈತರೇ ಪಾವತಿ ಮಾಡಬೇಕು. ಆಗಾಗಿ ದೃಢೀಕರಣದ ವೆಚ್ಚ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ರೈತರಿಗೆ ಬಹಳ ದುಬಾರಿಯಾಗುತ್ತದೆ. ಈ ವೆಚ್ಚವು ಏಕರೂಪವಾಗಿರದೆ ಸಾಕಷ್ಟು ಭಿನ್ನವಾಗಿರುತ್ತದೆ. ಅಂದರೆ ಸೀಮಾಂತ ಮತ್ತು ಚಿಕ್ಕ ರೈತರಿಗೆ, ಮಧ್ಯಮ ರೈತರಿಗೆ ಹಾಗೂ ದೊಡ್ಡ ಮತ್ತು ಸಂಸ್ಕರಣದಾರರಿಗೂ ಕೂಡ ವಿವಿಧ ಬಗೆಯ ದೃಢೀಕರಣ ಶುಲ್ಕವನ್ನು ವಿಧಿಸಲಾಗುತ್ತದೆ. ದೃಢೀಕರಣ ಶುಲ್ಕವು ಈ ಕೆಳಗಿನಂತಿರುತ್ತದೆ.

೧. ಚಿಕ್ಕ ರೈತರಿಗೆ ರೂ. ೨೨೦೦೦ (ಇದರಲ್ಲಿ ಪ್ರಯಾಣ ಮತ್ತು ತನಿಖಾ ವೆಚ್ಚವು ಸುಮಾರು ರೂ. ೧೨೦೦೦. ವರದಿ ತಯಾರಿಸಲು ರೂ. ೫೦೦೦ ಹಾಗೂ ದೃಢೀಕರಣ ಪ್ರಮಾಣಪತ್ರದ ಶುಲ್ಕ ರೂ. ೫೦೦೦ ಆಗಿರುತ್ತದೆ.

೨. ಮಧ್ಯಮ ಮತ್ತು ದೊಡ್ಡ ರೈತರಿಗೆ ರೂ. ೨೬೮೦೦ ಗಳಾಗಿರುತ್ತದೆ.

೩. ಎಸ್ಟೇಟ್‌ಮ್ಯಾನ್ಯು ಪ್ಯಾಕ್ಚರರ್ಸ್ ಮತ್ತು ರಫ್ತುದಾರರಿಗೆ ರೂ. ೨೯೨೦೦ ಇದರಲ್ಲಿ ಪ್ರಮಾಣ ಮತ್ತು ತನಿಖಾ ವೆಚ್ಚವಾಗಿ ಸುಮಾರು ರೂ. ೧೯೨೦೦ಗಳನ್ನು ಹಾಗೂ ವರದಿ ತಯಾರಿಸಲು ಮತ್ತು ದೃಢೀಕರಣ ಪ್ರಮಾಣ ಪತ್ರ ನೀಡಲು ರೂ. ೧೦,೦೦೦ಗಳನ್ನು ನೀಡಬೇಕಾಗಿರುತ್ತದೆ. (Org.Mrg. 2002) ಹೀಗೆ ಸಾವಯವ ಕೃಷಿ ಪದ್ಧತಿ ಮತ್ತು ವಿಧಾನಗಳನ್ನು ಪ್ರಮಾಣೀಕರಿಸಲು ರೈತರು ಅತ್ಯಂತ ಅಧಿಕ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಮೇಲಾಗಿ ಆಹಾರ ಬೆಳೆಗಳಿಗೆ ಪ್ರತಿವರ್ಷ ಕೂಡ ದೃಢೀಕರಣ ಪತ್ರ ಪಡೆಯಬೇಕಾಗಿರುವುದರಿಂದ ಸಾಮಾನ್ಯ ರೈತರಿಗೆ ಬಹಳ ದುಬಾರಿಯಾದಂತಹ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ದೃಢೀಕರಣ ಸಂಸ್ಥೆಗಳು ತಮ್ಮ ಶಾಖೆಗಳನ್ನು ವಿವಿಧ ದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆರಂಭಿಸಿವೆ. ಆದ್ದರಿಂದ ದೃಢೀಕರಣ ವೆಚ್ಚವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ವೈಯಕ್ತಿಕವಾಗಿ ದೃಢೀಕರಣ ಪಡೆಯುವುದರ ಬದಲಾಗಿ ರೈತರು ಗುಂಪು ಅಥವಾ ಸಮೂಹಗಳ ಮೂಲಕ ದೃಢೀಕರಣಕ್ಕೆ ಒಳಪಡುವುದು ಸಾಕಷ್ಟು ಮಿತವ್ಯಯಕಾರಿಯಾಗಿರುತ್ತದೆ. ಆದಗ್ಯೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿರುವ ಸೀಮಾಂತ ಮತ್ತು ಚಿಕ್ಕ ರೈತರಿಗೆ ದೃಢೀಕರಣವು ಅತ್ಯಂತ ಹೆಚ್ಚು ಹೊರೆಯಾಗಿರುತ್ತದೆ.