ಸಾವಯವ ಮಾರುಕಟ್ಟೆ ಸ್ಥಿತಿಗತಿ

ಜಾಗತಿಕ ಮಟ್ಟದಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ವಿಸ್ತರಿಸಲ್ಪಡುತ್ತಿದೆ. ಆದರೆ ಪೂರೈಕೆ ಮಾತ್ರ ಸಾಕಷ್ಟು ಅಸ್ಥಿರತೆಯನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡ, ಆಸ್ಟ್ರೇಲಿಯಾ, ಜಪಾನ್‌, ಇಂಗ್ಲೆಂಡ್‌, ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ಜನರು ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿಯನ್ನೊಂದಿದ್ದು ಸಾವಯವ ಉತ್ಪನ್ನಗಳನ್ನು ಅತಿಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ ಅಭಿವೃದ್ಧಿ ಹೊಂದುತ್ತಿರುವ ಈಜಿಪ್ಟ್‌, ಚೀನಾ, ಭಾರತ ಇತ್ಯಾದಿ ರಾಷ್ಟ್ರಗಳಲ್ಲಿರುವ ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರು ಕೂಡ ಸಾವಯವ ಉತ್ಪನ್ನಗಳನ್ನು ಕೊಂಡು ಕೊಳ್ಳುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಾವಯವ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಗಮನವನ್ನು ಸೆಳೆಯುತ್ತಿವೆ. ಪ್ರಸ್ತುತ ಹಲವು ಶತಕಶೋಟಿ ಡಾಲರ್ ಗಳಲ್ಲಿ ಸಾವಯವ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ. ಈ ಕೆಳಗಿನ ಕೋಷ್ಟಕದಿಂದ ಸಾವಯವ ಉತ್ಪನ್ನಗಳ ವ್ಯವಹಾರವನ್ನು ತಿಳಿಯಬಹುದಾಗಿದೆ.

ಜಾಗತಿಕ ಸಾವಯವ ಉತ್ಪನ್ನಗಳ ಮಾರುಕಟ್ಟೆ (೨೦೦೦)

ರಾಷ್ಟ್ರಗಳ ಶೇಕಡವಾರು ಮಾರಾಟ (ದಶಲಕ್ಷ ಡಾಲರ್ ಗಳಲ್ಲಿ)
ಬೆಳವಣಿಗೆ ಒಟ್ಟು (% ಪ್ರತಿವರ್ಷ)
ಬೆಳವಣಿಗೆ US$ ಗಳಲ್ಲಿ ನಿರೀಕ್ಷಿತ
ಆಸ್ಟ್ರೇಲಿಯಾ ೨೦೦-೨೨೫ ೧.೮-೨.೦ ೧೦-೧೫
ಡೆನ್ಮಾರ್ಕ ೩೫೦-೩೭೫ ೨.೫-೩.೦ ೧೦-೧೫
ಫ್ರಾನ್ಸ್‌ ೮೦೦-೮೫೦ ೦.೮-೧.೦ ೧೦-೧೫
ಸ್ವಿಟ್ಜರ್ ಲ್ಯಾಂಡ್‌ ೪೫೦-೪೭೫ ೨.೦-೨.೫ ೧೦-೧೫
ಜರ್ಮನಿ ೨೧೦೦-೨೨೦೦ ೧.೬-೧.೮ ೧೦-೧೫
ಜಪಾನ್‌ ೨೦೦೦-೨೫೦೦
ಇಂಗ್ಲೆಂಡ್‌ ೧೧೦೦-೧೨೦೦ ೧.೦-೨.೫ ೧೫-೨೦
ಅಮೇರಿಕಾ ಸಂಯುಕ್ತ ಸಂಸ್ಥಾನ ೭೫೦೦-೮೦೦೦ ೧.೫-೨.೦ ೨೦

ಮೂಲ: Better crop (2003)

ಸಾವಯವದಲ್ಲಿ ಉತ್ಪಾದಿಸಿದ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯಲ್ಲಿನ ಅಂದಾಜು ವಹಿವಾಟು ಸುಮಾರು $. ೩೧ ಶತಕೋಟಿಗಳೆಂದು (ರೂ. ೧೪೩೦೦ ಕೋಟಿ) ೨೦೦೫ರಲ್ಲಿ ಅಂದಾಜು ಮಾಡಲಾಗಿದೆ. ಇದು ಪುನಃ ೨೦೨೦ರ ವೇಳೆಗೆ ೧೦೨ ಶತಕೋಟಿ ಅಮೇರಿಕ ಸಂಯುಕ್ತ ಸಂಸ್ಥಾನದ ಡಾಲರ್ ಗಳಲ್ಲಿ ಹೆಚ್ಚಾಗಲಿರುವುದು ಎಂದು ಒಂದು ಅಂದಾಜು ತಿಳಿಸುತ್ತದೆ. ಹೀಗೆ ಮೇಲಿನ ಕೋಷ್ಟಕದಿಂದ ನಮಗೆ ತಿಳಿಯುವುದೇನೆಂದರೆ ಮುಂದುವರಿದ ರಾಷ್ಟ್ರಗಳಲ್ಲಿ ಸಾವಯವ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆಯ, ಪ್ರತಿವರ್ಷ ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ. .ಅದರಲ್ಲೂ ಜಪಾನ್‌, ಇಂಗ್ಲೆಂಡ್‌ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಹಳ ದೊಡ್ಡ ಮಾರುಕಟ್ಟೆ ಇರುವುದು ಕಂಡುಬರುತ್ತದೆ. ಆದ್ದರಿಂದ ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಸಾವಯವ ಉತ್ಪಾದನೆಯನ್ನು ವಿಸ್ತರಿಸುವುದರ ಕಡೆಗೆ ಹೆಚ್ಚು ಗಮನ ನೀಡುವುದು ಬಹಳಷ್ಟು ಸೂಕ್ತವಾಗಿದೆ.

ಭಾರತದಲ್ಲಿ ಸಾವಯವ ಕೃಷಿ

ವಿಶ್ವ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ನಿರಂತರವಾಗಿ ಮಾರುಕಟ್ಟೆ ಮೂರು ಪಟ್ಟು ವಿಸ್ತರಿಸುತ್ತಿದೆ. ಅದು ಅನುಕೂಲಕರವಾದ ಪ್ರಭಾವವನ್ನು ನಮ್ಮ ಕೃಷಿ ಮೇಲೆ ಬೀರುತ್ತಿರುವುದು ಕಂಡುಬರುತ್ತಿದೆ. ನಮ್ಮ ದೇಶದಲ್ಲಿ ಸಾವಯವ ಕೃಷಿಯನ್ನು ಬಹಳ ಹಿಂದಿನಿಂದಲೂ ಕೆಲವು ಭಾಗಗಳಲ್ಲಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಅಂತಹ ಭಾಗಗಳನ್ನು ಗುರುತಿಸುವುದರೊಂದಿಗೆ, ಆ ಭಾಗದ ರೈತರಿಗೆ ಸೂಕ್ತ ಮಾಹಿತಿ ನೀಡಿ ಸಾವಯವ ಕೃಷಿ ವ್ಯಾಪ್ತಿಗೆ ತರುವಂತಹ ಕೆಲಸ ಮಾಡಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಕೃಷಿ ಮತ್ತು ಸಹಕಾರ ಮಂತ್ರಾಲಯವು ೨೦೦೦ದಲ್ಲಿ ಗುಜರಾತಿನ ನಿವೃತ್ತ ಕೃಷಿ ನಿರ್ದೇಶಕರಾದ ಡಾ|| ಕನವರ್ಜಿಬಾಯ್‌ಯಾದವ್‌ರವರ ನೇತೃತ್ವದಲ್ಲಿ ಸಾವಯವ ಕೃಷಿ ಟಾಸ್ಕಫೋರ್ಸ್ ಎಂಬ ಸಮಿತಿಯನ್ನು ರಚಿಸಿತು. ಈ ಸಮಿತಿ ಸಾವಯವ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು, ಕ್ರೂಢೀಕರಿಸುವುದು ಹಾಗೂ ಸಾವಯವ ಕೃಷಿಯ ಅನುಕೂಲಗಳನ್ನು ತನ್ನ ವರದಿಯಲ್ಲಿ ತಿಳಿಸಿ ಇವುಗಳನ್ನು ರೈತರಿಗೆ ತಲುಪಿಸಲು ಸೂಚಿಸಿದೆ.

ಹತ್ತನೆ ಪಂಚವಾರ್ಷಿಕ ಯೋಜನೆಯಲ್ಲಿ ಸಾವಯವ ಕೃಷಿಯು ಅತ್ಯಂತ ಪ್ರಮುಖವಾದ ಕ್ಷೇತ್ರವೆಂದು ಪರಿಗಣಿಸಿ ಅದನ್ನು ಸಾಕಷ್ಟು ವಿಸ್ತರಿಸಲು ಮತ್ತು ಜನಪ್ರಿಯಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಡಾ|| ಸ್ವಾಮಿನಾಥನ್‌ಸಮಿತಿಯು ಸೂಚಿಸಿತು. ಅಲ್ಲದೆ ನಮ್ಮ ದೇಶದ ಗುಡ್ಡಗಾಡು ಮತ್ತು ಮಳೆ ಆಶ್ರಿತ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಬಹಳ ಕಡಿಮೆ ಇದೆ. ಆದ್ದರಿಂದ ಈ ಸ್ಥಳಗಳಲ್ಲಿ ಸಾವಯವ ಕೃಷಿಯನ್ನು ಅನುಸರಿಸಲು ರೈತರಿಗೆ ಸೂಕ್ತವಾದಂತಹ ಮಾಹಿತಿ ಮತ್ತು ಸಲಹೆಯನ್ನು ನೀಡಬೇಕೆಂದು ಅಭಿಪ್ರಾಯಪಟ್ಟಿತು. ಮಧ್ಯಪ್ರದೇಶ ಇತರ ಎಲ್ಲಾ ರಾಜ್ಯಗಳಿಗಿಂತ ಮೊಟ್ಟಮೊದಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಂಡಿತು. ಅನಂತರ ಉತ್ತರಾಂಚಲ ಮತ್ತು ಸಿಕ್ಕಿಂ ರಾಜ್ಯಗಳು ತಮ್ಮ ಕೃಷಿಯನ್ನು ಸಾವಯವ ಕೃಷಿ ಎಂದು ಘೋಷಿಸಿಕೊಂಡವು. ಇವುಗಳ ಜೊತೆಗೆ ಈಶಾನ್ಯ ರಾಜ್ಯಗಳು ಸಾವಯವ ಕೃಷಿಗೆ ಮಹತ್ವವನ್ನು ನೀಡಿದವು. ನಮ್ಮ ಕೇಂದ್ರ ಸರ್ಕಾರದ ವಾಣಿಜ್ಯ ಮಂತ್ರಾಲಯವು ಏಪ್ರಿಲ್‌೨೦೦೦ದಂದು ರಾಷ್ಟ್ರೀಯ ಸಾವಯವ ಯೋಜನೆ(National Organic Programme) ಯನ್ನು ಅನುಷ್ಠಾನಕ್ಕೆ ತಂದಿತು. ಸಾವಯವ ಉತ್ಪಾದನೆಗಾಗಿ ರಾಷ್ಟ್ರೀಯ ಯೋಜನೆ (National Programme for Organic Production NPOP) ಎಂಬ ಯೋಜನೆಯನ್ನು ವಾಣಿಜ್ಯ ಮಂತ್ರಾಲಯದ ಅಡಿಯಲ್ಲಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (Agricultural and Processed Food Products Export Development Authority APEDA) ಜಾರಿಗೆ ತಂದಿತು. ಈ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಗುಣಮಟ್ಟ, ಮಾನ್ಯತೆಯ ವಿಧಾನ, ತನಿಖಾ ವಿಧಾನ, ದೃಢೀಕರಣ ಸಂಸ್ಥೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಯಾರಿಸಿ ಅದನ್ನು ರಾಷ್ಟ್ರಿಯ ಸ್ಟೀರಿಂಗ್‌ಸಮಿತಿಯಿಂದ ಅನುಮೊದನೆ ಪಡೆದುಕೊಳ್ಳಲಾಗಿದೆ. ಹೀಗೆ ನಮ್ಮ ದೇಶದಲ್ಲಿ ಸಾವಯವ ಕೃಷಿಯನ್ನು ವಿಸ್ತರಿಸುವ ಸಲುವಾಗಿ ಕೇಂದ್ರ ಸರ್ಕಾರವು ಕೆಲವು ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಮೂಲಕ ಇನ್ನಷ್ಟು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದೆ.

ಸಾವಯವ ಕೃಷಿಯ ಪ್ರಮಾಣ

ನಮ್ಮ ದೇಶದಲ್ಲಿ ಹಲವು ರಾಜ್ಯಗಳು ಸಾವಯವ ಕೃಷಿಯನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಸುಮಾರು ೭೬೦೦೦ ಹೆಕ್ಟೇರ್ ಆಹಾರ ಧಾನ್ಯಗಳನ್ನು ಬೆಳೆಯುವ ಸಾಗುವಳಿ ಭೂಮಿ ಈಗಾಗಲೆ ದೃಢೀಕರಣ ಪಡೆದ ಸಾವಯವ ಕೃಷಿಯಾಗಿದೆ. ಅಲ್ಲದೆ ೨.೪ ದಶಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವು ಸಾವಯವ ದೃಢೀಕರಣ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತದೆಂದು ಅಂದಾಜು ಮಾಡಲಾಗಿದೆ. ಆದರೆ ವಾಸ್ತವವಾಗಿ ಸಾವಯವ ಕೃಷಿಗೆ ಒಳಪಟ್ಟ ಸಾಗುವಳಿ ಭೂಮಿ ಅತ್ಯಂತ ಅಧಿಕವಿರುವುದು ಗಮನಾರ್ಹವಾಗಿದೆ. ವಿವಿಧ ರಾಜ್ಯಗಳು ಸಾವಯವ ಕೃಷಿಗೆ ಸಾಕಷ್ಟು ಆದ್ಯತೆಯನ್ನು ನೀಡುತ್ತಿವೆ. ಮಹಾರಾಷ್ಟ್ರದಲ್ಲಿ ೨೦೦೩ರಿಂದ ಸುಮಾರು ೫೦೦೦೦ ಹೆಕ್ಟೇರ್ ಭೂಮಿ ಸಾವಯವ ಕೃಷಿ ವ್ಯಾಪ್ತಿಗೆ ಒಳಪಟ್ಟಿದೆ. ಇದರಲ್ಲಿ ಸುಮಾರು ೧೦೦೦೦ ಹೆಕ್ಟೇರ್ ಪ್ರದೇಶವು ದೃಢೀಕರಣ ಪಡೆದ ಸಾವಯವ ಕೃಷಿ ಭೂಮಿಯಾಗಿದೆ. ನಾಗಲ್ಯಾಂಡಿನಲ್ಲಿ ಸುಮಾರು ೩೦೦೦ ಸಾವಿರ ಹೆಕ್ಟೇರ್ ಪ್ರದೇಶ ಸಾವಯವ ವ್ಯಾಪ್ತಿಗೆ ಒಳಪಟ್ಟಿದ್ದು, ಮೆಕ್ಕೆಜೋಳ, ಸೋಯಾಬೀನಾ, ಶುಂಠಿ, ಏಲಕ್ಕಿ, ಮೆಣಸಿನಕಾಯಿ, ಪ್ಯಾಷನ್‌ಪ್ರೂಟ್‌(Passion fruit) ಗಳನ್ನು ಬೆಳೆಯಲಾಗುತ್ತಿದೆ. ರಾಜಸ್ಥಾನದಲ್ಲಿಯೂ ಕೂಡ ಸುಮಾರು ೫೬೩೧ ಹೆಕ್ಟೇರ್ ಪ್ರದೇಶ ಸಾವಯವ ಕೃಷಿ ವ್ಯಾಪ್ತಿಗೆ ಒಳಪಟ್ಟಿದ್ದು ಹಲವಾರು ಬೆಳೆಗಳನ್ನು ಸಾವಯವದಲ್ಲಿ ಬೆಳೆಯಲಾಗುತ್ತಿದೆ. ಇತರ ರಾಜ್ಯಗಳಂತೆ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಾವಯವ ಕೃಷಿಗೆ ಸಾಕಷ್ಟು ಮಹತ್ವವನ್ನು ೨೦೦೮ರಿಂದ ನೀಡಲಾಗುತ್ತಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಸಾವಯವ ಕೃಷಿ ಮಿಷನ್‌(Karnataka Organic Agricultural Mission) ಸ್ಥಾಪಿಸಿ ಇದರ ಮೂಲಕ ಸರ್ಕಾರವು ರೈತರಿಗೆ ಸಾವಯವ ಕೃಷಿಗೆ ಸಂಬಂಧಿಸಿದಂತೆ, ಮಾಹಿತಿ, ತರಬೇತಿ, ಕಾರ್ಯಾಗಾರಗಳು ಮತ್ತು ಸಹಾಯಧನವನ್ನು ಒದಗಿಸಿಕೊಡುತ್ತಿದೆ.

ಭಾರತದಲ್ಲಿ ಸಾವಯವ ಉತ್ಪನ್ನಗಳು

ಅಂತರ ರಾಷ್ಟ್ರೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕೃಷಿ ಉತ್ಪನ್ನಗಳನ್ನು ಗುರುತಿಸಿ ಅವುಗಳನ್ನು ಸಾವಯವದಲ್ಲಿ ಬೆಳೆಯಲು ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಉತ್ಪನ್ನಗಳೆಂದರೆ ಹಣ್ಣು ಮತ್ತು ತರಕಾರಿಗಳು, ಸಾಂಬಾರ ಪದಾರ್ಥಗಳು, ಔಷಧಿ ಗಿಡಮೂಲಿಕೆಗಳು, ಎಣ್ಣೆ ಬೀಜಗಳು, ಧಾನ್ಯಗಳು, ಹತ್ತಿ, ಗೋಧಿ ಮತ್ತು ಬಾಸುಮತಿ ಅಕ್ಕಿ ಇತ್ಯಾದಿಗಳು. ಇವುಗಳನ್ನು ಸಾವಯವದಲ್ಲಿ ಉತ್ಪಾದಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕು.

ಭಾರತದಿಂದ ರಫ್ತಾಗುತ್ತಿರುವ ಸಾವಯವ ಉತ್ಪನ್ನಗಳು

ಕ್ರ ಸಂ ಸಾವಯವ ಆಹಾರ ಮಾರಾಟ (ಟನ್ಗಳಲ್ಲಿ)
ಟೀ ೩೦೦೦
ಕಾಫಿ ೫೫೦
ಸಾಂಬಾರ ಪದಾರ್ಥಗಳು ೭೦೦
ಅಕ್ಕಿ ೨೫೦೦
ಗೋಧಿ ೧೧೫೦
ಧಾನ್ಯಗಳು ೩೦೦
ಎಣ್ಣೆ ಬೀಜಗಳು ೧೦೦
ಹಣ್ಣು ಮತ್ತು ತರಕಾರಿಗಳು ೧೮೦೦
ಗೋಡಂಬಿ ಬೀಜ ೩೭೫
೧೦ ಹತ್ತಿ ೧೨೦೦
೧೧ ಗಿಡ ಮೂಲಿಕೆಗಳು ೨೫೦
ಒಟ್ಟು ೧೧೯೨೫

ಹೀಗೆ ಕೇಂದ್ರ ಸರ್ಕಾರವನ್ನೊಳಗೊಂಡು ರಾಜ್ಯ ಸರ್ಕಾರಗಳು ಸಾವಯವ ಕೃಷಿಗೆ ವಿಶೇಷವಾದ ಪ್ರಾಶಸ್ತ್ಯವನ್ನು ನೀಡುತ್ತಿರುವುದರಿಂದ ರೈತರು ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಯ ಕಡೆಗೆ ನಿಧಾನವಾಗಿ ತಿರುಗಿಬರುತ್ತಿರುವುದು ಸಾಮಾನ್ಯವಾಗಿದೆ. ಏಕೆಂದರೆ ಭಾರತ ಸರ್ಕಾರವು ಹತ್ತನೆ ಪಂಚವಾರ್ಷಿಕ ಯೋಜನೆಯಲ್ಲಿ ಸಾವಯವ ಕೃಷಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗಾಗಿ ಸುಮಾರು ರೂ. ೧೦೦ ಕೋಟಿಗಳನ್ನು ವಿನಿಯೋಗ ಮಾಡಿದೆ.

ನಮ್ಮ ದೇಶದಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಸಾವಯವ ಕೃಷಿಯನ್ನು ದೃಢೀಕರಿಸಲು ಸರಳವಾದ ವಿಧಾನವನ್ನು ಅನುಸರಿಸುತ್ತದೆ. ಹಾಗಾಗಿ ಕೃಷಿಯನ್ನು ದೃಢೀಕರಿಸಲು ಸರಳವಾದ ವಿಧಾನವನ್ನು ಅನುಸರಿಸುತ್ತದೆ. ಹಾಗಾಗಿ ಸೀಮಾಂತ ಮತ್ತು ಚಿಕ್ಕ ರೈತರಾದಿಯಾಗಿ ಅತ್ಯಂತ ಸುಲಭವಾಗಿ ತಮ್ಮ ಕೃಷಿ ವ್ಯವಸ್ಥೆಗೆ ಸಾವಯವ ದೃಢೀಕರಣ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಅಲ್ಲದೆ ರಾಜ್ಯಸರ್ಕಾರಗಳು ತಮ್ಮ ಕೃಷಿ ಇಲಾಖೆಯ ಮೂಲಕ ಅತ್ಯಂತ ಕಡಿಮೆ ಶುಲ್ಕದೊಂದಿಗೆ ದೃಢೀಕರಣ ನೀಡುವ ವ್ಯವಸ್ಥೆಯನ್ನು ಮಾಡಿವೆ. ದೃಢೀಕರಣಕ್ಕೆ ಒಳಪಟ್ಟಂತಹ ಕೃಷಿಕರು ತಮ್ಮ ಉತ್ಪನ್ನಗಳ ಪ್ಯಾಕೆಟ್‌ಮೇಲೆ ಸರ್ಕಾರದ ಅಧಿಕೃತ ಚಿಹ್ನೆಯಾದ “ಇಂಡಿಯನ್‌ಆರ್ಗ್ಯಾನಿಕ್‌” ಎಂದು ನಮೂದಿಸಿ ರಫ್ತು ಮಾಡಬಹುದಾಗಿದೆ. ಇಂತಹ ಚಿಹ್ನೆ ಹೊಂದಿದ ವಸ್ತುಗಳು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.೨೫ ರಿಂದ ಶೇ ೫೦ಕ್ಕಿಂತ ಹೆಚ್ಚು ಬೆಲೆಗಳಿಸುತ್ತವೆ. ಈ ವಸ್ತುಗಳ ಬೆಲೆಗಳು ರಾಸಾಯನಿಕದಲ್ಲಿ ಉತ್ಪಾದಿಸಿದ ಉತ್ಪನ್ನಗಳ ಬೆಲೆಗಳಿಗಿಂತ ಅಧಿಕವಾಗಿದ್ದರೂ ಗ್ರಾಹಕರು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಕೊಂಡುಕೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಕೇವಲ ಬೃಹತ್‌ನಗರಗಳಲ್ಲಿ ವಾಸಿಸುವಂತಹ ಕೆಲವೇ ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರು ಸಾವಯವ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಾರೆ. ಆದ್ದರಿಂದ ನಮ್ಮ ಒಟ್ಟು ಸಾವಯವ ಉತ್ಪನ್ನದಲ್ಲಿ ಶೇ.೫೦ಕ್ಕಿಂತ ಹೆಚ್ಚಿನ ಭಾಗವು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹೀಗೆ ಸಾವಯವಯ ಕೃಷಿ ನಮ್ಮ ದೇಶದಲ್ಲಿ ಪ್ರಸ್ತುತ ದಿನಗಳಲ್ಲಿ ಬೆಳೆಯುತ್ತಿರುವುದರಿಂದ ಅದನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಸಾವಯವ ಕೃಷಿ

ನಮ್ಮ ರಾಜ್ಯದಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಇತರ ರಾಜ್ಯಗಳಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರಮಟ್ಟದಲ್ಲಿರುವಂತೆ ನಮ್ಮ ರಾಜ್ಯದಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಂಡು ರಾಸಾಯನಿಕರಹಿತ ಮತ್ತು ಪರಿಸರಸ್ನೇಹಿ ಸಾವಯವ ವಸ್ತುಗಳನ್ನು ಉತ್ಪಾದಿಸುವ ಉದ್ದೇಶದಿಂದ ಮಾರ್ಚ್ ೨೦೦೪ ರಂದು ಕರ್ನಾಟಕ ರಾಜ್ಯ ಸಾವಯವ ವ್ಯವಸಾಯ ಯೋಜನೆಯನ್ನು ಜಾರಿಗೆ ತಂದಿತು. ಇದರ ಬಹುಮುಖ್ಯ ಉದ್ದೇಶಗಳೆಂದರೆ;

೧. ರೈತರ ಸಾಲದ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಅವರಲ್ಲಿ ಸ್ಥಿರತೆ ಮತ್ತು ಸ್ವಾಭಿಮಾನವನ್ನು ವೃದ್ಧಿಸುವುದು.

೨. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಮತ್ತು ಉತ್ಪಾದಕತೆಯನ್ನು ವೃದ್ಧಿಸುವುದು.

೩. ಕೃಷಿ ಉತ್ಪಾದನ ವೆಚ್ಚವನ್ನು ತಗ್ಗಿಸುವುದು.

೪. ಉತ್ತಮ ಗುಣಮಟ್ಟದ ಉತ್ಪನ್ನದೊಂದಿಗೆ ರೈತರ ಆದಾಯವನ್ನು ಅಧಿಕಗೊಳಿಸುವುದು.

೫. ಸಾಂಪ್ರದಾಯಿಕ ಬೆಳೆಗಳನ್ನು ಪ್ರೋತ್ಸಾಹಿಸುವುದರ ಮೂಲಕ ಆಹಾರ ಭದ್ರತೆ.

೬. ಗ್ರಾಮೀಣ ಉದ್ಯೋಗವಕಾಶಗಳನ್ನು ಹೆಚ್ಚಿಸುವುದು.

೭. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ಮುಕ್ತಗೊಳಿಸುವುದರೊಂದಿಗೆ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯವನ್ನು ರಕ್ಷಿಸುವುದು.

೮. ಬರ ಪೀಡಿತ ಮತ್ತು ಮಳೆ ಆಶ್ರಿತ ಪ್ರದೇಶಗಳ ರೈತರ ಸಮಸ್ಯೆಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಹೀಗೆ ಈ ಎಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ಸಾವಯವ ಕೃಷಿಯನ್ನು ಬೆಳೆಸಲು ಕರ್ನಾಟಕ ರಾಜ್ಯ ಸರ್ಕಾರ ೨೦೦ರರಲ್ಲಿ ಕಾರ್ಯಪ್ರವೃತ್ತವಾಯಿತು. ತದನಂತರ ೨೦೦೮ರಲ್ಲಿ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿತು. ಅದುವರೆಗೂ ಸಾವಯವ ಕೃಷಿಯನ್ನು ಕೃಷಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿತ್ತು. ಈ ಇಲಾಖೆ ಪ್ರತಿಯೊಂದು ತಾಲೂಕಿನಲ್ಲಿ ಒಂದು ಗ್ರಾಮವನ್ನು ಆಯ್ಕೆಮಾಡಿಕೊಂಡು ಆ ಗ್ರಾಮಗಳಲ್ಲಿ ಸಾವಯವ ಕೃಷಿಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು. ಅಂತಹ ಯೋಜನೆಗಳಿಗೆ ಒಳಪಟ್ಟ ಗ್ರಾಮಗಳನ್ನು ಸಾವಯವ ಗ್ರಾಮಗಳೆಂದು ಕರೆಯಲಾಗುತ್ತಿತ್ತು.. ಆದರೆ ಈಗಿನ ಸರ್ಕಾರವು ಇದನ್ನು ರದ್ದುಪಡಿಸಿ ಕರ್ನಾಟಕ ಸಾವಯವ ಕೃಷಿ ಮಿಷನ್‌ಸ್ಥಾಪಿಸಿದೆ. ಇದಕ್ಕೆ ಒಬ್ಬ ಅಧ್ಯಕ್ಷರನ್ನು ಸರ್ಕಾರವೇ ನೇಮಿಸುತ್ತದೆ. ಈ ಮಿಷನ್‌ಕೃಷಿ ಇಲಾಖೆಯ ನೆರವಿನೊಂದಿಗೆ ಪ್ರತಿಯೊಂದು ತಾಲ್ಲೂಕಿನಲ್ಲಿ ಸಾವಯವ ರೈತರ ಸಂಘಗಳನ್ನು ಸ್ಥಾಪಿಸಿದೆ. ಈ ಸಂಘಗಳಿಗೆ ಅನುದಾನಗಳನ್ನು ನೀಡುವುದರ ಮೂಲಕ ಸಾವಯವ ಕೃಷಿಯನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದೆ. ಉದಾ: ಶಿವಮೊಗ್ಗ ಜಿಲ್ಲೆಯಲ್ಲಿ ಸಾವಯವ ಕೃಷಿ ಹೇಗೆ ಪ್ರಚಾರ ಪಡೆದುಕೊಳ್ಳುತ್ತಿದೆ ಮತ್ತು ಅದರ ಕಾರ್ಯನಿರ್ವಹಣೆ ಕುರಿತು ಇಲ್ಲಿ ವಿಶ್ಲೇಷಿಸಬಹುದು.

ಶಿವಮೊಗ್ಗ ಜಿಲ್ಲೆಯಲ್ಲಿ ಸಾವಯವ ಕೃಷಿ

ನಮ್ಮ ರಾಜ್ಯದಲ್ಲಿ ಸುಮಾರು ೩೦ ಜಿಲ್ಲೆಗಳಿದ್ದು ಅವುಗಳಲ್ಲಿ ಶಿವಮೊಗ್ಗವು ಕೂಡ ಒಂದು ಪ್ರಮುಖ ಜಿಲ್ಲೆಯಾಗಿದೆ. ಏಕೆಂದರೆ ಇತರ ಜಿಲ್ಲೆಗಳಿಗಿಂತ ಮೊದಲು ಸಾವಯವ ಕೃಷಿ ಈ ಜಿಲ್ಲೆಯಲ್ಲಿ ಪ್ರಾರಂಭವಾಯಿತು. ಈ ಜಿಲ್ಲೆಯಲ್ಲಿ ಸಾವಯವ ಕೃಷಿ ಪದ್ಧತಿಯನ್ನು ೧೯೮೪ಕ್ಕಿಂತ ಮೊದಲೇ ಅಳವಡಿಸಿಕೊಂಡು ಬಂದ ಹಲವಾರು ಪ್ರಗತಿಪರ ರೈತರಿದ್ದಾರೆ. ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಕೂಡ ಹೊಂದಿದ್ದಾರೆ. ಆದ್ದರಿಂದ ನಮ್ಮ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಬಹಳ ಹಿಂದಿನಿಂದಲೂ ಸಾವಯವ ಕೃಷಿಯಲ್ಲಿ ಮುಂಚೂಣಿಯಲ್ಲಿದೆ. ೨೦೦೪ ರಿಂದ ೨೦೦೮ರ ವರೆಗೆ ರಾಜ್ಯ ಸರ್ಕಾರವು ಸಾವಯವ ಕೃಷಿಯನ್ನು, ಸಾವಯವ ಕೃಷಿ ಘಟಕವನ್ನು ಸ್ಥಾಪಿಸಿ ಕೃಷಿ ಇಲಾಖೆಯ ಮೂಲಕ ಸಾವಯವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೊಂದು ತಾಲ್ಲೂಕುಗಳನ್ನು ಆಯ್ದುಕೊಂಡು ಅವುಗಳಲ್ಲಿ ಸಾವಯವ ಗ್ರಾಮ ಎಂಬ ಯೋಜನೆಯ ಮೂಲಕ ಸಾವಯವ ಕೃಷಿ ಅನುಷ್ಟಾನಗೊಳಿಸಲಾಗುತ್ತಿತ್ತು. ತದನಂತರ ಕೆಲವೊಂದು ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಸಾವಯವ ಕೃಷಿಯನ್ನು ವಿಸ್ತರಿಸುವ ಹೊಣೆಗಾರಿಕೆ ನೀಡಲಾಯಿತು. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕೆಳಗಿನ ಕೆಲವೊಂದು ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಸಾವಯವ ಕೃಷಿಯ ಜವಾಬ್ದಾರಿ ವಹಿಸಲಾಯಿತು. ಅಂತಹ ಸಂಸ್ಥೆಗಳೆಂದರೆ:

೧. ಪುರುಷೋತ್ತಮ ಸಾವಯವ ಕೃಷಿ ಪರಿಹಾರ (ರಿ) ತೀರ್ಥಹಳ್ಳಿ

೨. ಅಕ್ಷಯ ಜೀವನ ಸಾವಯವ ಕೃಷಿ ಪರಿಹಾರ (ರಿ) ಚಕ್ಕೋಡ ಬೈಲು, ತೀರ್ಥಹಳ್ಳಿ

೩. ಸೋಸಿಯಲ್‌ಅಕ್ಷನ್‌ಫಾರ್ ಹೆಲ್ತ್‌ಅವೇರೆನ್ಸ್‌, ನಳನಿಕೊಪ್ಪ ಶಿಕಾರಿಪುರ

೪. ಮಾನಸ ಗ್ರಾಮೀಣ ಸಂಸ್ಥೆ, ಒಟೂರು ಸೊರಬ

೫. ಕುಟುಂಬ ಶಿಕ್ಷಣ ಸಂಸ್ಥೆ, ಹೊಳಹಳ್ಳಿ ಶಿವಮೊಗ್ಗ

೬. ಸಾವಯವ ಕೃಷಿ ಉತ್ತೇಜನ ಸಂಘ, ಭದ್ರಾವತಿ

೭ ಗ್ರಾಮ ಭಾರತಿ ಸಂಸ್ಥೆ ಹೊಸನಗರ ಶಿವಮೊಗ್ಗ

ಹೀಗೆ ಏಳು ಸರ್ಕಾರೇತರ ಸಂಸ್ಥೆಗಳಿಗೆ ಸಾವಯವ ಕೃಷಿಯನ್ನು ವಿಸ್ತರಿಸುವ ಜವಾಬ್ದಾರಿಯನ್ನು ವಹಿಸಿತು. ಈ ಸಂಸ್ಥೆಗಳಿಗೆ ಸರ್ಕಾರವು ಕೃಷಿ ಇಲಾಖೆಯ ಮೂಲಕ ಸಹಾಯಧನ, ಸಾವಯವ ಪರಿಕರಗಳನ್ನು ಒದಗಿಸುತ್ತಿತ್ತು.. ಆದರೆ ೨೦೦೮ ರಿಂದೆ ಸಾವಯವ ಕೃಷಿಯನ್ನು ಹೆಚ್ಚು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಕೃಷಿ ಇಲಾಖೆಯನ್ನು ಕೇವಲ ಯೋಜನೆಗೆ ಹಣಕಾಸು ಒದಗಿಸುವ ಕಾರ್ಯಕ್ಕೆ ಸೀಮಿತಗೊಳಿಸಿದೆ. ಸಾವಯವ ಕೃಷಿ ಮಿಷನ್‌ನೇರವಾಗಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಸಾವಯವ ಕೃಷಿಕರ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರ ಕೃಷಿ ಇಲಾಖೆಯ ಮೂಲಕ ನೇರವಾಗಿ ಈ ಸಂಘಗಳಿಗೆ ಹಣಕಾಸಿನ ನೆರವನ್ನು ನೀಡುತ್ತದೆ. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಯೊಂದು ತಾಲ್ಲೂಕಿನಲ್ಲಿ ಒಂದೊಂದು ಸಾವಯವ ಕೃಷಿಕರ ಸಂಘ ಕಾರ್ಯ ನಿರ್ವಹಿಸುತ್ತಿದೆ. ಅವುಗಳೆಂದರೆ;

  • ಪುರುಷೋತ್ತಮರಾಯರ ಸಾವಯವ ಕೃಷಿಕರ ಪರಿವಾರ, ತೀರ್ಥಹಳ್ಳಿ
  • ಅಶ್ವಿನಿ ಸಾವಯವ ಕೃಷಿಕರ ಪರಿವಾರ, ಹೊಸನಗರ
  • ಶರಾವತಿ ಸಾವಯವ ಕೃಷಿ ಈ ಕೆಳಗಿನ ಪರಿಕರಗಳಿಗೆ ರಾಜ್ಯ ಸಾವಯವ ಕೃಷಿ ಮಿಷನ್‌ಕೃಷಿ ಇಲಾಖೆಯ ಮೂಲಕ ನೇರವಾಗಿ ಹಣಕಾಸನ್ನು ಸಾವಯವ ಕೃಷಿಕರಿಗೆ ನೀಡುತ್ತದೆ. ಇದನ್ನು ಕ್ರಿಯಾ ಯೋಜನೆ ಎಂದು ಕರೆಯಲಾಗುತ್ತದೆ.

ಕ್ರಿಯಾ ಯೋಜನೆ ೨೦೦೮೯೨೦೦೯

ಕ್ರ.ಸಂ. ಯೋಜನೆಗಳ ವಿವರ, ಸರ್ಕಾರದ ಸಹಾಯಧನ (ಶೇ). ಗರಿಷ್ಟ(ರೂ.ಗಳು) ಪ್ರಥಮ ಹಂತದಲ್ಲಿ ಪ್ರತಿ ತಾಲ್ಲೂಕಿನ ಗುರಿ

೧. ಹಸಿರೆಲೆ ಗೊಬ್ಬರ ಬೀಜಗಳ ಖರೀದಿಗೆ ಪ್ರತಿ ಎಕರೆಗೆ ೨೫೦/-೧೦೨ ಎಕರೆಗೆ

೨. ದೇಶೀಯ ಬೀಜಗಳ ಖರೀದಿಗೆ ಪ್ರತಿ ಎಕರೆಗೆ ೨೫೦/- ೬೦ ಎಕರೆಗೆ

೩. ಎರೆತೊಟ್ಟಿ ನಿರ್ಮಾಣ ಘಟಕವೊಂದಕ್ಕೆ ೨೦೦೦/-೬೦ ಘಟಕಗಳು

೪. ಬಯೋ ಡೈಜೆಸ್ಟರ್ ಘಟಕವೊಂದಕ್ಕೆ ೧೦೦೦೦/- ೩೦ ಘಟಕಗಳು

೫. ಗೋರಾತಿ/ಹವಿ/ಕೊಟ್ಟಿಗೆಯಲ್ಲಿ ಗೋಮೂತ್ರ ಸಂಗ್ರಹಣೆಗೆ/ಕಲ್ಲ ಚಪ್ಪಡಿ ಹಾಸಲು/ಗಾರೆ ಪ್ರತಿ ಕುಟುಂಬಕ್ಕೆ ೩೦೦೦/- ೩೦ ಘಟಕಗಳು

೬. ಜೀವಾಮೃತ ಅಥವಾ ದ್ರವರೂಪಿ ಗೊಬ್ಬರ ತಯಾರಿಸಲು ಬೇಕಾಗುವ ಪ್ಲಾಸ್ಟಿಕ್‌ಡ್ರಮ್‌ಖರೀದಿ ಪ್ರತಿ ಡ್ರಂಗೆ ೪೦೦/- ೬೦ ಡ್ರಂ

೭. ಸುಣ್ಣ/ಜಿಪ್ಸಂ ಪ್ರತಿ ಟನ್‌ಗೆ ೧೦೦೦/-೩೦ ತಾಲ್ಲೂಕಿಗೆ

೮. ಕೃಷಿ ಹೊಂಡ ಪ್ರತಿ ಹೊಂಡಕ್ಕೆ ೬೦೦೦/-೩೦ ತಾಲ್ಲೂಕಿಗೆ

೯. ಇಂಗು ಗುಂಡಿ ಪ್ರತಿ ಕುಟುಂಬಕ್ಕೆ ೧೦೦೦/೧೮೦ ತಾಲ್ಲೂಕಿಗೆ

೧೦. ಸಮಪಾಳಿ ಬದುಗಳಿಗೆ ಪ್ರತಿ ಕುಟುಂಬಕ್ಕೆ ೧೦೦೦/-೧೮೦ ತಾಲ್ಲೂಕಿಗೆ

೧೧. ಕೊಳಮೌನಿ/ತೆರೆದ ಬಾವಿ ಮರುಪೂರಣ ಕೊಳವೆ/ತೆರದಬಾವಿ ಮರುಪೂರಣ ಪ್ರತಿ ಕುಟುಂಬಕ್ಕೆ ೨೫೦೦/-೧೮೦ ತಾಲ್ಲೂಕಿಗೆ

೧೨. ಜೇನು ಸಾಕಾಣಿಕೆಗೆ ಪ್ರತಿ ಪೆಟ್ಟಿಗೆ ೧೦೦೦/-೬೦ ತಾಲ್ಲೂಕಿಗೆ

೧೩. ಮೇಲಿನ ಸಂಪನ್ಮೂಲ ಅಭಿವೃದ್ಧಿ ಪ್ರತಿ ಕುಟುಂಬಕ್ಕೆ ೧೦೦೦/-೯೦ ತಾಲ್ಲೂಕಿಗೆ

೧೪. ಗೋಬರ ಗ್ಯಾಸ್‌ಸ್ಥಾವರ ಪ್ರತಿ ಘಟಕಕ್ಕೆ ೧೦೦೦೦/-೬೦ ಘಟಕಕ್ಕೆ

೧೫. ಶೌಚಾಲಯ ಪ್ರತಿ ಶೌಚಕ್ಕೆ ೨೦೦೦/-೩೦ ತಾಲ್ಲೂಕಿಗೆ

೧೬. ಕೈತೋಟ ತರಕಾರಿ ಬೆಳೆಯಲು ಪ್ರತಿ ಕುಟುಂಬಕ್ಕೆ ೨೦೦೦/-೩೦ ತಾಲ್ಲೂಕಿಗೆ

೧೭. ಧನ್ಯ ಸಂಗ್ರಹಣೆಗಾಗಿ/ಪಣತ ಪ್ರತಿ ಕುಟುಂಬಕ್ಕೆ ೨೦೦೦/-೩೦ ತಾಲ್ಲೂಕಿಗೆ

೧೮. ದೇಶಿಯ ಅಕಳು ಖರೀದಿಗೆ ಪ್ರತಿ ಆಕಳಿಗೆ ೩೦೦೦೦/-೩೦ ತಾಲ್ಲೂಕಿಗೆ

೧೯. ಹಾಚ್‌ಪಂಪ್‌ಪ್ರತಿ ಪಂಪ್‌ಗೆ ೭೫೦/-೧೦ ತಾಲ್ಲೂಕಿಗೆ.

ಹೀಗೆ ಸರ್ಕಾರವು ಒಂದು ಕ್ರಿಯೆ ಯೋಜನೆಯನ್ನು ಪ್ರಾರಂಭಿಸಿದ್ದು. ಈ ಯೋಜನೆಯ ಮೂಲಕ ಸಾವಯವ ರೈತರಿಗೆ ವಿವಿಧ ರೀತಿಯ ಪರಿಕರಗಳನ್ನು ಖರೀದಿಸಲು ಸಹಾಯಧನ ನೀಡಿ ಆ ಮೂಲಕ ಸಾವಯವ ಕೃಷಿಯನ್ನು ಅಭಿವೃದ್ಧಿಪಡಿಸುತ್ತಿದೆ. ಇದರಂತೆ ನಮ್ಮ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಸಾವಯವ ಕೃಷಿಕರ ಪರಿವಾರಗಳನ್ನು ಆರಂಭಿಸಿ ಅವುಗಳ ಮೂಲಕ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಸಾವಯವ ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ, ತರಬೇತಿ, ಇತ್ಯಾದಿಗಳನ್ನು ನೀಡಲಾಗುತ್ತದೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಇತರ ರಾಜ್ಯಗಳಂತೆ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಹಲವಾರು ಕಾರ್ಯಕ್ರಮಗಳು, ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಿವೆ.