ಸಾವಯವ ಮತ್ತು ರಾಸಾಯನಿಕ ಕೃಷಿಗೆ ಇರುವ ವ್ಯತ್ಯಾಸಗಳು

ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ವಿಶ್ವದಾದ್ಯಂತ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಇಂತಹ ಕೃಷಿಯು ಪ್ರಸ್ತುತ ದಿನಗಳಲ್ಲಿ ದೊಡ್ಡ ಪ್ರಮಾಣದ ರಾಸಾಯನಿಕ ಕೃಷಿಗಿಂತ ಭಿನ್ನವಾಗಿದೆ. ಅಂತಹ ಭಿನ್ನತೆಗಳೆಂದರೆ:

 • ಅಸಾವಯವ ಅಥವಾ ರಾಸಾಯನಿಕ ಕೃಷಿಯು ನಾಟಿಗೆ ಮೊದಲು ಮತ್ತು ನಂತದ ದೊಡ್ಡ ಕೃಷಿ ಉಪಕರಣಗಳು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಆದ್ದರಿಂದ ರಾಸಾಯನಿಕ ಕೃಷಿಯಲ್ಲಿ ಬಹೞ್ಟು ಮಟ್ಟಿಗೆ ಬೆಳೆಗಳ ಕೇಂದ್ರೀಕರಣವಿರುತ್ತದೆ. ಆದರೆ ಸಾವಯವ ಕೃಷಿ ಬೆಳೆಗಳಲ್ಲಿ ವೈವಿಧ್ಯತೆ ಹೊಂದಿರುತ್ತದೆ.
 • ಸಾವಯವ ರೈತ ದೊಡ್ಡ ಮೊತ್ತದ ಸಾಲದ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅವರು ಬಾಹ್ಯವಾಗಿ ಅತಿ ಹೆಚ್ಚು ವೆಚ್ಚದಾಯಕ ಒಳಸುರಿಗಳನ್ನು ಕೊಂಡು ಕೊಳ್ಳುವುದಿಲ್ಲ ಹಾಗೂ ಅವರ ಕೃಷಿ ಭೂಮಿ ಅತ್ಯಂತ ವೈವಿಧ್ಯತೆಯನ್ನು ಹೊಂದಿರುವುದರಿಂದ ವೆಚ್ಚ ಮತ್ತು ಆದಾಯಗಳು ವರ್ಷಪೂರ್ತಿ ಸಮವಾಗಿ ಹಂಚಲ್ಪಟ್ತಿರುತ್ತದೆ. ಆದರೆ ಅಸಾವಯವ ಕೃಷಿಯಲ್ಲಿ ಸಾಲದ ಅವಶ್ಯಕತೆ ಅತ್ಯಂತ ಹೆಚ್ಚಾಗಿರುತ್ತದೆ. ಅಲ್ಲದೆ ಅವರು ಒಂದೇ ರೀತಿ ಬೆಳೆಗಳನ್ನು ಮಾತ್ರ ಬೆಳೆಯುತ್ತಿರುತ್ತಾರೆ.
 • ಸಾವಯವ ಕೃಷಿ ಹಿಡುವಳಿಗಳು ಚಿಕ್ಕ ಮತ್ತು ಸೀಮಾಂತ ಹಿಡುವಳಿ ಗಾಳಾಗಿರುತ್ತಯವೆ. ಆದರೆ ರಾಸಾಯನಿಕ ಕೃಷಿ ಹಿಡುವಳಿಗಳು ಅತ್ಯಂತ ದೊಡ್ಡ ಹಿಡುವಳಿಗಾಳಾಗಿರುತ್ತವೆ.
 • ಸಾವಯವ ಕೃಷಿಕರು ಯಾಂತ್ರಿಕ ವಿಧಾನಗಳ ಮೂಲಕ ಬೆಳೆಗಳನ್ನು ಬೆಳೆಯುತ್ತಾರೆ ಮತ್ತು ಸುಗ್ಗಿ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಅಲ್ಲದೆ ಅದು ಸಾವಯವ ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ ಮತ್ತು ಔಷಧಿಗಳನ್ನು ಉಪಯೋಗಿಸುತ್ತದೆ. ಆದರೆ ಅಸಾವಯವ ಕೃಷಿಕರ ಸಂಪೂರ್ಣವಾಗಿ ರಾಸಾಯನಿಕ ಗೊಬ್ಬರ, ಔಷಧಿಗಳು, ಬೆಳವಣಿಗೆಯ ನಿಯಂತ್ರಕ ಮತ್ತು ವೇಗರ್ವಕಗಳು, ಉದ್ದೀಪನಗೊಳಿಸುವಂತಹ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುತ್ತಾರೆ.
 • ಸಾವಯವ ಕೃಷಿಯಲ್ಲಿ ಉಪಯೋಗಿಸುವ ತಂತ್ರಜ್ಞಾನವು, ನೈಸರ್ಗಿಕ, ಪರಿಸರ ಸ್ನೇಹಿ ಮತ್ತು ಸುಸ್ಥಿರವಾದಂತದ್ದು. ಆದರೆ ರಾಸಾಯನಿಕ ಕೃಷಿ ತಂತ್ರಜ್ಞಾನ ಅಸ್ಥಿರ ಪರಿಸರ ಮಾಲಿನ್ಯ ಮತ್ತು ಮಣ್ಣಿನ ಫಲವತ್ತತೆಯನ್ನು ನಾಶಮಾಡುವಂತಹದ್ದಾಗಿರುತ್ತದೆ.
 • ಸಾವಯವ ವಿಧಾನಗಳಿ೮ಂದ ತಯಾರಿಸಿದ ಉತ್ಪನ್ನಗಳು ಅತ್ಯಂತ ರುಚಿಕರ, ಸುವಾಸನೆಯುಕ್ತವಾಗಿರುವುದಲ್ಲದೆ, ರಾಸಾಯನಿಕಗಳಿಂದ ಮುಕ್ತವಾಗಿ ಬಹಳ ತಾಜತನವನ್ನು ಹೊಂದಿರುತ್ತವೆ. ಆದರೆ ಅಸಾವಯವ ಕೃಷಿಯ ಉತ್ಪನ್ನಗಳು ರುಚಿರಹಿತ ವಿಷಪೂರಿತವಾಗಿದ್ದು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ.
 • ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ನೇರವಾದ, ಚಿಕ್ಕದಾದ ವ್ಯಾಪ್ತಿಯೊಂದಿರುವಂತಹದ್ದು. ಆದರೆ ರಾಸಾಯನಿಕ ಕೃಷಿ ಉತ್ಪನ್ನಗಳಿಗೆ ಅತ್ಯಂತ ದೂರದ ವಿಶಾಲವಾದ ಮಾರುಕಟ್ಟೆ ಇರುತ್ತದೆ.
 • ಸಾವಯವ ಕೃಷಿಯು ಅಲ್ಪಕಾಲದಲ್ಲಿ ರೈತರಿಗೆ ಸಾಕಷ್ಟು ಆದಾಯವನ್ನು ನೀಡುವಂತ ಕೃಷಿಯಲ್ಲ. ಇದು ರೈತರಿಗೆ ದೀರ್ಘಾವಧಿಯಲ್ಲಿ ಸಾಕಷ್ಟು ಪ್ರತಿಫಲ ನೀಡುತ್ತದೆ ಹಾಗೂ ಪ್ರತಿಫಲ ನಿರಂತರವಾಗಿ ಅಧಿಕವಾಗುತ್ತದೆ.. ಆದರೆ ಅಸಾವಯವ ಕೃಷಿಯಲ್ಲಿ ರೈತರಿಗೆ ದೊರಕುವ ಆದಾಯ ಹೆಚ್ಚು ಇದ್ದು ಅಲ್ಪಾವಧಿಗೆ ಸೀಮಿತವಾಗಿರುತ್ತದೆ. ಹೀಗೆ ಸಾವಯವದಲ್ಲಿ ಪತಿಫಲವು ಸುಸ್ಥಿರ ಮತ್ತು ದೀರ್ಘಾವಧಿಗೆ ಸಂಬಂಧಿಸಿರುತ್ತದೆ. ರಾಸಾಯನಿಕ ಕೃಷಿಯಲ್ಲಿ ಪ್ರತಿಫಲ ಅಲ್ಪಾವಧಿಗೆ ಸೀಮಿತವಾಗಿದ್ದು ದೀರ್ಘಾಕಾಲದಲ್ಲಿ ಇಳಿಮುಖವಾಗುತ್ತದೆ.

ಸಾವಯವ ಮತ್ತು ಅಸಾವಯವ ಕೃಷಿಯ ಮಧ್ಯ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಇವುಗಳ ವೆಚ್ಚ ಆದಾಯ, ಉತ್ಪನ್ನಗಳ ಗುಣಮಟ್ಟ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಭಿನ್ನತೆ ಹೊಂದಿದಂತಹ ಕೃಷಿ ವಿಧಾನವಾಗಿದೆ. ಸಾವಯವವಲ್ಲದ ಉತ್ಪನ್ನಗಳನ್ನು ಸೇವಿಸುವುದರಿಂದ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತದೆ ಎಂಬ ಭಾವನೆ ಮತ್ತು ತಿಳಿವಳಿಕೆ ಜನರಲ್ಲಿ ಮೂಡುತ್ತಿದೆ. ಅಲ್ಲದೆ ಇದನ್ನು ಅನೇಕ ಅಧ್ಯಯನಗಳು ಪುಷ್ಟೀಕರಿಸುತ್ತವೆ. ಅಸಾವಯವ ಉತ್ಪನ್ನಗಳನ್ನು ಅನುಭೋಗಿಸುವುದರಿಂದ ರಕ್ತದ ಒತ್ತಡ, ಹೃದಯ ಮತ್ತು ಮೂತ್ರಪಿಂಡ ತೊಂದರೆಗಳು, ಮಾನಸಿಕ ವ್ಯಾಕುಲತೆ, ಕ್ಯಾನ್ಸರ್ ಇತ್ಯಾದಿ ರೋಗಗಳು ಹೆಚ್ಚಾಗುತ್ತವೆ ಎಂಬುದಾಗಿ ಥಾಕೂರ್ ಮತ್ತು ಶರ್ಮ(೨೦೦೫) ತಮ್ಮ ಅಧ್ಯಯನದಲ್ಲಿ ತಿಳಿಸುತ್ತಾರೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ನಮ್ಮ ದೇಶದಲ್ಲಿ ರೈತರು ಅತಿಯಾಗಿ ರಾಸಾಯನಿಕ ಒಳಸುರಿಗಳನ್ನು ಅಧಿಕ ಬೆಲೆ ಕೊಟ್ಟು ಕೊಂಡು ತಮ್ಮ ಜಮೀನುಗಳಿಗೆ ಉಪಯೋಗಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಪರಿಣಾಮವನ್ನು ಸಮಾಜ ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದ ಮೇಲೆ ಬೀರುತ್ತದೆ. ಅಲ್ಲದೆ ರೈತರ ಕೃಷಿ ವೆಚ್ಚವು ಅವರ ಉತ್ಪಾದನೆಗಿಂತ ಅಧಿಕವಾಗಿ ಕೃಷಿ ಒಂದು ಲಾಭ ರಹಿತ ಉದ್ಯಮವಾಗಿ ಬೆಳೆಯುತ್ತಿದೆ. ಆದ್ದರಿಂದ ರೈತರು ತಮ್ಮ ಹೊಲಗದ್ದೆಗಳನ್ನು ಮಾರಾಟ        ಮಾಡಿ ನಗರ ಮತ್ತು ಪಟ್ಟಣಗಳಿಗೆ ವಲಸೆ ಹೋಗುತ್ತಿರುವುದು ಈಗಾಗಲೇ ಹಲವು ಭಾಗಗಳಲ್ಲಿ ಪ್ರಾರಂಭವಾಗಿದೆ. ಆದ್ದರಿಂದ ಕೃಷಿ ವೆಚ್ಚ ಕಡಿಮೆ ಮಾಡಿ ಸುಸ್ಥಿರವಾದ ಪ್ರತಿಫಲ ಪಡೆಯಲು ಸಾವಯವ ಕೃಷಿ ಅತ್ಯಂತ ಸೂಕ್ತವಾದ ವಿಧಾನವಾಗಿದೆ. ಇದನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಾದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ.

ಸಾವಯವ ಕೃಷಿ ನಿರ್ವಹಣೆಯ ಸಮಸ್ಯೆಗಳು

ಸಾವಯವ ಕೃಷಿ ನಿರ್ವಹಿಸುವುದು ಸುಲಭವಾದಂತಹದ್ದೇನಲ್ಲ. ಈ ವಿಧಾನವನ್ನು ಅನುಸರಿಸುವಾಗ ರೈತರು ದೃಡವಾದ ಇಚ್ಚೆ, ಶಕ್ತಿಯನ್ನು ಹೊಂದಿರಬೇಕು, ಅಲ್ಲದೆ ಆರಂಭದಲ್ಲಿ ಇದನ್ನು ನಿರ್ವಹಿಸುವುದು ಹೆಚ್ಚು ತ್ರಾಸದಾಯಕವೂ ಹೌದು, ಶ್ರಮದಾಯಕವೂ ಕೂಡ ಆಗಿರುತ್ತದೆ. ಸಾವಯವಕ್ಕೆ ರೈತರು ಒಮ್ಮಿಂದೊಮ್ಮೆಲೆ ತಮ್ಮೆಲ್ಲಾ ಜಮೀನನ್ನು ಪರಿವರ್ತಿಸದೆ, ಹಂತ ಹಂತವಾಗಿ ಪರಿವರ್ತಿಸಬೇಕು. ಆಗ ಸಾವಯವವನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯಂತ ಸುಲಭವಾಗಿರುತ್ತದೆ. ಆದಾಗ್ಯೂ ಸಾವಯವ ಕೃಷಿಗೆ ಹಲವಾರು ರೀತಿಯ ಮೂಲಸೌಕರ್ಯಗಳು ಬೇಕಾಗುತ್ತವೆ. ಇವುಗಳನ್ನು ಸರ್ಕಾರ ರೈತರು ಗ್ರಾಹಕ ಮತ್ತು ಸಮಾಜ ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಕಲ್ಪಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ರೈತರು ಸಾವಯವ ಕೃಷಿ ಅಳವಡಿಸಿಕೊಂಡಾಗ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಅವುಗಳೆಂದರೆ:

೧. ಮಣ್ಣಿನ ವೈಜ್ಞಾನಿಕ ನಿರ್ವಹಣೆಯ ತಾಂತ್ರಿಕ ಜ್ಞಾನದ ಕೊರತೆ.

೨. ಕೀಟಗಳ ಬಾಧೆ ಮತ್ತು ರೋಗ ನಿಯಂತ್ರಣ ವಿಧಾನಗಳ ಅನುಭವ ಇಲ್ಲದೆ ಇರುವುದು.

೩. ಆರಂಭದಲ್ಲಿ ಇಳುವರಿ ತೀವ್ರವಾಗಿ ಕಡಿಮೆಯಾಗುತ್ತದೆ.

೪. ಉತ್ತಮ ತಳಿಯ ಸುಧಾರಿತ ಬೀಜಗಳ ಕೊರತೆ.

೫. ಸಾವಯವ ಒಳಸುರಿಗಳು(Input) ಮತ್ತು ಕೊಟ್ಟಿಗೆ ಗೊಬ್ಬರ ಸಮಸ್ಯೆ.

೬. ಜೈವಿಕಗೊಬ್ಬರ ಮತ್ತು ಔಷಧಿಗಳ ಅಲಭ್ಯತೆ.

೭. ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಇರುವುದು.

೮. ದೃಢೀಕರಣ ವ್ಯವಸ್ಥೆಯ ಕೇಂದ್ರೀಕರಣ ಮತ್ತು ಅತ್ಯಂತ ದುಬಾರಿಯಾಗಿರುವುದರಿಂದ ಚಿಕ್ಕ ಮತ್ತು ಸೀಮಾಂತ ರೈತರಿಗೆ ವೆಚ್ಚ ಭರಿಸಲು ಸಾಧ್ಯವಿಲ್ಲ.

೯. ಸರ್ಕಾರದ ನಿರ್ಲಕ್ಷ್ಯ ಮನೋಭಾವನೆ ಕಡಿಮೆ ಸಹಾಯಧನ ಮತ್ತು ಅಗತ್ಯ ಮೂಲ ಸೌಕರ್ಯ ಒದಗಿಸದೇ ಇರುವುದು.

೧೦. ಸಾವಯವ ಕೃಷಿಯ ಮಾಹಿತಿ ಕೊರತೆ.

ಹೀಗೆ ರೈತರು ಸಾವಯವ ಕೃಷಿಯಲ್ಲಿ ಸಾಕಷ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮೇಲಿನ ಸಮಸ್ಯೆಗಳಲ್ಲಿ ಮುಖ್ಯವಾದಂತಹವು. ಇಳುವರಿ ಆರಂಭದಲ್ಲಿ ಬಹಳ ಕಡಿಮೆ ಇರುವುದು.ಇದನ್ನು ತುಂಬಿಕೊಡುವಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಹಾಗಾಗಿ ಹೆಚ್ಚು ರೈತರು ಸಾವಯವ ಕೃಷಿಯ ಕಡೆ ತಿರುಗಿ ಬರಲು ಹಿಂಜರಿಯುತ್ತಿದ್ದಾರೆ. ಇನ್ನೊಂದು ರೈತರು ಸಾವಯದಲ್ಲಿ ಉತ್ಪಾದಿಸಿದಂತಹ ಉತ್ಪನ್ನಗಳಿಗೆ ಪ್ರತ್ಯೇಕವಾದ ಮಾರುಕಟ್ಟೆ ಮತ್ತು ಬೆಲೆ ಕೂಡ ದೊರೆಯದೇ ಇರುವುದು. ಸರ್ಕಾರ ಕೇವಲ ಸಾವಯವ ಒಳಸುರಿಗಳಿಗೆ ಸಹಾಯಧನ ನೀಡಿದರೆ ಸಾಕಾಗುವುದಿಲ್ಲ. ಸಾವಯವ ಕೃಷಿಗೆ ಬೇಕಾದಂತಹ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡಬೇಕು. ಆಗ ರೈತರು ಸಾವಯವ ಕೃಷಿಯನ್ನು ಅನುಸರಿಸಲು ಮುಂದೆ ಬರುತ್ತಾರೆ.

ಗ್ರಾಹಕರಿಗೆ ಸಂಬಂಧಿಸಿದ ಸಮಸ್ಯೆಗಳು

ಸಾವಯವ ಕೃಷಿಯಲ್ಲಿ ಕೇವಲ ರೈತರು ಮಾತ್ರ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಗ್ರಾಹಕರು ಕೂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾವಯವದಲ್ಲಿ ರೈತ ಮತ್ತು ಗ್ರಾಹಕರ ಮಧ್ಯ ಸಂಪರ್ಕವಿರಬೇಕು. ಗ್ರಾಹಕರು ಕೂಡ ಸಾವಯವದಲ್ಲಿ ಪಾಲ್ಗೊಳ್ಳಬೇಕು. ಆಗ ಅದರಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. .ಉದಾ: ಜಪಾನಿನಲ್ಲಿ ಟೆಕ್ಕಿ ಪದ್ಧತಿ (Tekke System) ಇದ್ದು ಗ್ರಾಹಕರು ಕೂಡ ರೈತರ ಜಮೀನಿನಲ್ಲಿ ಕೆಲವು ದಿನ ಕೆಲಸ ಮಾಡುವುದರ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಾರೆ. ಅಲ್ಲದೆ ಅವರ ಉತ್ಪನ್ನವನ್ನು ನೇರವಾಗಿ ಕೊಂಡುಕೊಳ್ಳುತ್ತಾರೆ. ಆಗ ಸಾವಯವ ಕೃಷಿ ಬೆಳೆಯಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳೆಂದರೆ:

 • ಸಾವಯವ ಉತ್ಪನ್ನಗಳ ಮಾಹಿತಿಯ ಕೊರತೆ.
 • ಸಾವಯವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ತಿಳುವಳಿಕೆ ಇಲ್ಲದೆ ಇರುವುದು.
 • ರಾಸಾಯನಿಕ ಕೃಷಿ ಮತ್ತು ಸಾವಯವ ಉತ್ಪನ್ನಗಳ ಮಧ್ಯ ವ್ಯತ್ಯಾಸ ಕಲ್ಪಿಸುವುದು ಬಹಳ ಕಷ್ಟಕರವಾಗಿರುತ್ತದೆ.
 • ಸಾವಯವ ಉತ್ಪನ್ನಗಳ ಬೆಲೆಗಳು ಅಧಿಕವಾಗಿರುತ್ತವೆ.
 • ಸಾವಯವ ಉತ್ಪನ್ನಗಳ ನಿರಂತರ ಪೂರೈಕೆ ಮತ್ತು ಲಭ್ಯತೆ ಇಲ್ಲದೆ ಇರುವುದು.
 • ಸಾವಯವ ವಸ್ತುಗಳ ಗುಣಮಟ್ಟದ ಸಮಸ್ಯೆ.
 • ಕಲಬೆರೆಕೆ ಮತ್ತು ಮಿಶ್ರಣ
 • ಉತ್ತಮವಾದ ಜಾಹೀರಾತು ಮತ್ತು ಸಂಘಟಿತ ಮಾರುಕಟ್ಟೆ ಇಲ್ಲದೆ ಇರುವುದು.

ಹೀಗೆ ಸಾವಯವ ಪದಾರ್ಥಗಳ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ರೈತರು ಮತ್ತು ಗ್ರಾಹಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬರುತ್ತದೆ. ಗ್ರಾಹಕರು ಆರೋಗ್ಯದ ದೃಷ್ಟಿಯಿಂದ ಅತಿ ಹೆಚ್ಚು ಬೆಲೆಗೆ ಖರೀದಿ ಮಾಡಲು ತಯಾರಿದ್ದಾರೆ. ಆದರೆ ಸಾವಯವ ಉತ್ಪನ್ನಗಳು ವರ್ಷ ಪೂರ್ತಿ ಲಭ್ಯವಾಗುತ್ತಿಲ್ಲ. ರೈತರು ಕೂಡ ಸಾವಯವ ವಿಧಾನದಲ್ಲಿ ಉತ್ಪಾದನೆ ಮಾಡಲು ಪ್ರಾರಂಭಿಸಿದ್ದಾರೆ. ಅವುಗಳನ್ನು ಹೇಗೆ ಮಾರುಕಟ್ಟೆಗೆ ಸರಬರಾಜು ಮಾಡಬೇಕು, ಅಥವಾ ನೇರವಾಗಿ ಗ್ರಾಹಕಿರಿಗೆ ಸರಬರಾಜು ಮಾಡಬೇಕೋ ಎಂಬುವಂತಹ ಮಾಹಿತಿಯ ಇರುವುದಿಲ್ಲ. ಆದ್ದರಿಂದ ಸರ್ಕಾರವು ರೈತರ ಮತ್ತು ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಿದರೆ ಉತ್ತಮವಾದ ಬೆಲೆ ದೊರೆಯುತ್ತದೆ. ಹಾಗೆಯೇ ಗ್ರಾಹಕರಿಗೆ ಯೋಗ್ಯ ಉತ್ಪನ್ನಗಳು ದೊರೆತು ಗೊಂದಲ ನಿವಾರಣೆಯಾಗುತ್ತದೆ. ಆದ್ದರಿಂದ ಸರ್ಕಾರ ಕೆಲವು ಯೋಗ್ಯ ಕ್ರಮಗಳನ್ನು ಕೈಗೊಂಡು ಕೃಷಿಕರು ಮತ್ತು ಗ್ರಾಹಕರ ನಡುವೆ ಉತ್ತಮವಾದ ಸಂಪರ್ಕವೇರ್ಪಡಿಸಬೇಕು ಇದಕ್ಕಾಗಿ ಕೆಲವು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.

ಸಾವಯವ ಕೃಷಿ ಸುಧಾರಿಸಲು ಕೈಗೊಳ್ಳಬಹುದಾದ ಕ್ರಮಗಳು

ಸಾವಯವ ಕೃಷಿ ಅತ್ಯಂತ ವೇಗವಾಗಿ ಬೆಳೆಯುವ ಕೃಷಿ ವಿಧಾನವಾಗಿದೆ. ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯೂ ಸಹ ವಿಸ್ತರಿಸುತ್ತಿದೆ. ಇಂತಹ ಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಸಾವಯವ ಕೃಷಿ ಕ್ಷೇತ್ರವನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತವನ್ನು ಒಳಗೊಂಡಂತೆ ಅನೇಕ ರಾಷ್ಟ್ರಗಳು ಕ್ರಮ ಕೈಗೊಳ್ಳುತ್ತಿವೆ, ಅಂತಹ ಕ್ರಮಗಳೆಂದರೆ:

೧. ಸರ್ಕಾರವು ಸಾವಯವ ಕೃಷಿಗೆ ಹೆಚ್ಚು ಅನುದಾನ ನೀಡಬೇಕು.

೨. ಚರ್ಮ ಉದ್ಯಮಕ್ಕೆ ಬದಲು ಪಶುಪಾಲನೆಗೆ ಇನ್ನೂ ಅಧಿಕ ನೆರವು ನೀಡಬೇಕು.

೩. ಅಧಿಕ ಇಳುವರಿ ಕೊಡುವ ದೇಶೀಯ ತಳಿಯ ಬೀಜಗಳನ್ನು ಅಭಿವೃದ್ಧಿಪಡಿಸಬೇಕು.

೪. ಸಾವಯವ ಪರಿಕರಗಳನ್ನು ಹೆಚ್ಚು ಮತ್ತು ಸಮರ್ಪಕ ಕಾಲದಲ್ಲಿ ರೈತರಿಗೆ ಸರಬರಾಜು ಮಾಡಬೇಕು.

೫. ಸಾವಯವ ಕೃಷಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡಬೇಕು.

೬. ಸಾವಯವ ಕೃಷಿಯಲ್ಲಿ ನಿರತರಾಗಿರುವ ಉತ್ತಮ ರೈತರ ಸಲಹೆಗಳನ್ನು ಇತರ ರೈತರಿಗೆ ತಲುಪಿಸುವಂತಹ ಕ್ರಮ ಕೈಗೊಳ್ಳಬೇಕು.

೭. ಸಾವಯವ ರೈತರಿಗೆ ಸ್ಪರ್ಧೆಗಳನ್ನು ತಾಲ್ಲೂಕು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಏರ್ಪಡಿಸಬೇಕು. ಇದು ಸಾವಯವ ಪದ್ಧತಿ ಮತ್ತು ಇಳುವರಿಗೆ ಸಂಬಂಧಿಸಿದ್ದಾಗಿರಬೇಕು.

೮. ರೈತರಿಗೆ ತರಬೇತಿ, ಉಪಾನ್ಯಾಸ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಬೇಕು.

೯. ಸಾವಯವ ಪರಿಕರಗಳನ್ನು ರೈತರೆ ಸ್ವತಃ ಉತ್ಪಾದನೆ ಮಾಡಲು ಬೇಕಾದ ಮಾಹಿತಿ, ತರಬೇತಿಯನ್ನು ನೀಡಬೇಕು.

೧೦. ಸಾವಯವ ಕೃಷಿಗೆ ಸಂಬಂಧಿಸಿದಂತೆ ಪ್ರತ್ಯೇಕ ಇಲಾಖೆಯನ್ನು ಸರ್ಕಾರ ಪ್ರಾರಂಭಿಸಬೇಕು. ಹೀಗೆ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಈ ಮೇಲಿನ ಕ್ರಮಗಳಲ್ಲದೆ. ಇನ್ನು ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಿ, ರೈತರ ಕೃಷಿ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬೇಕು.

ಸಾವಯವ ಕೃಷಿ ಮಾರುಕಟ್ಟೆ ಸುಧಾರಿಸಲು ಕೈಗೊಳ್ಳಬಹುದಾದ ಕ್ರಮಗಳು

ಸಾವಯವ ವಸ್ತುಗಳಿಗೆ ಜಗತ್ತಿನಾದ್ಯಂತ ಬೇಡಿಕೆಯ ಪ್ರಮಾಣ ಅತ್ಯಂತ ವೇಗವಾಗಿ ವಿಸ್ತರಿಸುತ್ತಿದೆ.. ಆದ್ದರಿಂದ ಮಾರುಕಟ್ಟೆಗೆ ವಿಶೇಷವಾದ ಪ್ರಾಶಸ್ತ್ಯವನ್ನು ನೀಡಬೇಕು. ಈ ದಿಕ್ಕಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳೆಂದರೆ,

೧. ಸಾವಯವ ಉತ್ಪನ್ನಕ್ಕೆ ಪ್ರತ್ಯೇಕವಾದ ಮಾರುಕಟ್ಟೆಯನ್ನು ಜನವಸತಿಯ ಸಮೀಪದಲ್ಲಿ ಸ್ಥಾಪಿಸಬೇಕು.

೨. ಉತ್ತಮವಾದ ಸಾರಿಗೆ ಸಂಪರ್ಕ ವ್ಯವಸ್ಥೆಯೊಂದಿಗೆ ವಾಹನ ನಿಲ್ದಾಣವನ್ನು ಸಾವಯವ ಮಾರುಕಟ್ಟೆ ಹೊಂದಿರಬೇಕು.

೩. ಸಾವಯವ ಉತ್ಪನ್ನಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

೪. ಕಲಬೆರೆಕೆ, ಮಿಶ್ರಣ ಇತ್ಯಾದಿಗಳನ್ನು ಕಠಿಣಕ್ರಮಗಳ ಮೂಲಕ ನಿಯಂತ್ರಿಸಿ ಸಾವಯವ ಪದಾರ್ಥಗಳ ಮತ್ತು ಉತ್ಪಾದಕರ ಗೌರವವನ್ನು ಕಾಯ್ದುಕೊಳ್ಳಬೇಕು.

೫. ಸಮೂಹ ಮಾಧ್ಯಮಗಳ ಮೂಲಕ ಪರಿಣಾಮಕಾರಿ ಜಾಹೀರಾತುಗಳನ್ನು ನೀಡಿ ಅನುಭೋಗಿಗಳಿಗೆ ಸಾವಯವ ಉತ್ಪನ್ನಗಳ ಮಾಹಿತಿ ನೀಡಬೇಕು.

೬. ಸಾವಯವ ಉತ್ಪನ್ನಗಳ ಪ್ಯಾಕೇಟ್‌ಗಳ ಮೇಲೆ ಕಟ್ಟುನಿಟ್ಟಾಗಿ ಸಾವಯವ ಮುದ್ರೆಯನ್ನು ಹಾಕಬೇಕು ಇದರಿಂದ ಅನುಭೋಗಿಗಳಲ್ಲಿರುವ ಅಪನಂಬಿಕೆಯನ್ನು ಹೋಗಲಾಡಿಸಬಹುದು.

೭. ಸರ್ಕಾರ ಸಾವಯವ ಪದಾರ್ಥಗಳಿಗೆ ಹೆಚ್ಚು ಧನಸಹಾಯ ನೀಡಿ ಅವುಗಳ ಬೆಲೆಗಳು ಅನುಭೋಗಿಗಳಿಗೆ ಅನುಕೂಲಕರವಾಗುವಂತೆ ನೋಡಿಕೊಳ್ಳಬೇಕು.

೮. ಸಾವಯವ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು ಸರ್ಕಾರವು ಮಧ್ಯಾಹ್ನದ ಊಟದ ಯೋಜನೆಗೆ ಬೇಕಾದ ಆಹಾರ ಧಾನ್ಯಗಳನ್ನು ಸಾವಯವದಲ್ಲಿಯೇ ಉತ್ಪಾದಿಸಿದ ಉತ್ಪನ್ನಗಳನ್ನು ಕೊಂಡುಕೊಳ್ಳಬೇಕು.

೯. ಸರ್ಕಾರ ನಡೆಸುವಂತಹ, ಹೋಟೇಲ್‌ಕ್ಯಾಂಟೀನ್‌, ಆಸ್ಪತ್ರೆಗಳಲ್ಲಿ ಸಾವಯವ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಬೇಕು.

೧೦. ಮಠ, ಮಂದಿರಗಳು, ದೇವಸ್ಥಾನಗಳು, ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿವೆ. ಅವುಗಳು ಕೂಡ ಸಾವಯವ ಆಹಾರೋತ್ಪನ್ನಗಳನ್ನು ಕೊಂಡುಕೊಳ್ಳಲು ಮುಂದೆ ಬರಬೇಕು.

೧೧. ಸಭೆ, ಸಮಾರಂಭ ಸಮ್ಮೇಳನ ಕಾರ್ಯಾಗಾರ, ಪ್ರದರ್ಶನ ಇತ್ಯಾದಿಗಳ ಮೂಲಕ ಸಾವಯವ ಉತ್ಪನ್ನಗಳಿಗೆ ಹೆಚ್ಚು ಪ್ರಚಾರ

೧೨. ದೃಢೀಕರಣದ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವು ಭರಿಸಬೇಕು.

ಹೀಗೆ ಸಾವಯವ ಕೃಷಿಯನ್ನು ವಿಸ್ತರಿಸಲು ಮತ್ತು ರೈತರನ್ನು ಸಾವಯವ ಕೃಷಿಯ ಕಡೆಗೆ ಆಕರ್ಷಿಸಲು ಸರ್ಕಾರವು ಅತ್ಯಂತ ತೃಪ್ತಿದಾಯಕ ಹಾಗೂ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೃಷಿ ಮತ್ತು ಕೃಷಿಕರ ಸ್ಥಿತಿಗತಿಗಳು ಅತ್ಯಂತ ಶೋಚನೀಯವಾಗಿರುತ್ತವೆ. ಕೃಷಿ ಕ್ಷೇತ್ರದ ಬೆಳವಣಿಗೆ ಸಂಪೂರ್ಣವಾಗಿ ಋಣಾತ್ಮಕವಾಗಿದೆ. ರಾಸಾಯನಿಕ ಕೃಷಿಯಿಂದಾಗಿ ರೈತರ ಕೃಷಿ ವೆಚ್ಚ ನಿರಂತರವಾಗಿ ಏರುತ್ತಿದೆ. ಆದರೆ ಅವರ ಇಳುವರಿ ಮಾತ್ರ ಕಡಿಮೆಯಾಗುತ್ತಿದೆ. ಅನೇಕ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ. ತಮ್ಮ ಬೆಳೆಗಳನ್ನು ಕ್ರಿಮಿಕೀಟಗಳಿಂದ ರಕ್ಷಿಸಲು ರಾಸಾಯನಿಕ ಕೀಟನಾಶಕಗಳನ್ನು ಸಿಂಪರಣೆ ಮಾಡುತ್ತಿದ್ದಾರೆ. ಕೀಟಗಳು ಮಾತ್ರ ಸಾಯುತ್ತಿಲ್ಲ. ಅಂತಹ ಔಷಧಿಗಳನ್ನು ಸೇವಿಸಿದ ರೈತರು ಸಾಯುತ್ತಿದ್ದಾರೆ. ಹಾಗಾಗಿ ರಾಸಾಯನಿಕ ಕೃಷಿ ಸಂಪೂರ್ಣವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಕೃಷಿಯನ್ನು ಹಾಳುಗೆಡಹಿದೆ. ಇಂತಹ ಸ್ಥಿತಿಯಿಂದ ರೈತರು ಹೊರಬರಲು ಸಾವಯವ ಕೃಷಿ ಅತ್ಯಂತ ಸೂಕ್ತವಾದ ಕೃಷಿ ಪದ್ಧತಿಯಾಗಿದೆ. ರೈತರು ಕೃಷಿಗೆ ಬೇಕಾದ ಒಳಸುರಿಗಳನ್ನು ತಾವೇ ಕ್ರೋಡೀಕರಿಸಿಕೊಳ್ಳುವುದರಿಂದ ಕೃಷಿ ವೆಚ್ಚವನ್ನು ತಗ್ಗಿಸಬಹುದು. ಅಲ್ಲದೆ ಸಾವಯವ ವಿಧಾನದಲ್ಲಿ ಉತ್ಪಾದನೆ ಸ್ಥಿರವಾಗಿರುವುದಲ್ಲದೆ ನಿರಂತರವಾಗಿ ಹೆಚ್ಚಾಗುತ್ತದೆ. ಇಂತಹ ಕೃಷಿಯಿಂದ ಉತ್ಪಾದಿಸಿದ ವಸ್ತುಗಳು ಜನರ ಆರೋಗ್ಯಕ್ಕೆ ಉತ್ತಮವಾದವುಗಳು. ಪರಿಸರ ಸ್ನೇಹಿ ಕೂಡ ಆಗಿರುತ್ತವೆ. ಮೇಲಾಗಿ ಅಂತರ ರಾಷ್ಟ್ರೀಯ, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾವಯವ ಪದಾರ್ಥಗಳ ಬೆಲೆಗಳು ರಾಸಾಯನಿಕಗಳಿಂದ ಉತ್ಪಾದಿಸಿದ ಪದಾರ್ಥಗಳಿಗಿಂತ ೨ ರಿಂದ ಪಟ್ಟು ಅಧಿಕವಾಗಿರುತ್ತವೆ. ಆದ್ದರಿಂದ ಸಾವಯವ ಕೃಷಿಯನ್ನು ವಿಸ್ತರಿಸಲು ಮತ್ತು ರೈತರನ್ನು ಇತ್ತ ಕಡೆ ಆಕರ್ಷಿಸಲು ಸರ್ಕಾರವು ಗಂಭೀರವಾದ ಪ್ರಯತ್ನ ಮಾಡಬೇಕು. ಇದರಿಂದ ಸಮಾಜದಲ್ಲಿ ಮುಂದೆ ಆಗುವ ಅವಘಡಗಳನ್ನು ತಡೆಯಬಹುದಾಗಿದೆ.

 

ಆಧಾರಗಳು

೧. ಕೃಷ್ಣ ಪ್ರಸಾದ್‌.ಜಿ. “ಸಾವಯವ ಕೃಷಿಯತ್ತ ಹತ್ತು ಹೆಜ್ಜೆಗಳು”, ಸಹಜ ಸಮೃದ್ಧ ಪ್ರಕಾಶನ, ಬೆಂಗಳೂರು(೨೦೦೪).

೨. ವಾಸುದೇವ ಅದಮೂರು, “ಸಾವಯವ ದೃಢೀಕರಣ”, ಸಹಜ ಸಮೃದ್ಧ ಪ್ರಕಾಶನ ಬೆಂಗಳೂರು(೨೦೦೮).

೩. ಡಾ. ರಾಜೇಂದ್ರ ಪ್ರಸಾದ್‌(೨೦೦೭), “ಕೃಷಿಯ ಆಧುನಿಕ ಪರಿಕಲ್ಪನೆ”, ಭಾರತೀಯ ಕೃಷಿ ಸಂಶೋಧನ ಸಂಸ್ಥೆ, ನವದೆಹಲಿ.

೪. ಭಟ್ಟಾಚಾರ್ಯ.ಪಿ. ಮತ್ತು ಚಕ್ರವರ್ತಿ. ಜಿ.(೨೦೦೫), “ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಸಾವಯವ ಬೇಸಾಯದ ಇತ್ತೀಚಿನ ಸ್ಥಿತಿ, ‘ಇಂಡಿಯನ್‌ಜರ್ನಾಲ್‌ಆಫ್‌ಫರ್ಟಿಲೈಜರ್ಸ್(೯): ೧೧೧-೧೨೩.

೫. ಭಟ್ಟಾಚಾರ್ಯ.ಪಿ. ಮತ್ತು ಗೆಲೋಟ.ಡಿ.(೨೦೦೩), “ಸಾವಯವ ಬೇಸಾಯದ ಪ್ರಸ್ತುತ ನಿಯಂತ್ರಣ ವ್ಯವಸ್ಥೆ”, ಗೊಬ್ಬರ ವಾರ್ತೆ ೪೯ (೧೧): ೩೩-೩೮

೬. ಬ್ರೂಲ್‌ಸೀಮ. ಟಿ.ಡುಬ್ಯು. ಡಿಚ್‌.ಡಿ.ಡಬ್ಯೂ, ರೀಟ್ಜಾ ಹೆಚ್‌.ಆರ್. ಮತ್ತು ಫೆಕ್ಸೇಸ್‌.ಫಿ.ಈ. (೨೦೦೩), “ಸಾವಯವ ವ್ಯವಸಾಯ ವಿಧಾನದ ಉತ್ಪಾದಕತೆ”, ಉತ್ತಮ ಬೆಳೇಗಳು (೮೭-೯೧): ೧೬-೧೭.

೭. ಮಾರ್ವಾರಹ. ಬಿ.ಸಿ. ಮತ್ತು ಜಾಟ್‌. ಎಸ್‌.ಎಲ್‌ಲ.(೨೦೦೪) “ಭಾರತದಲ್ಲಿ ಸಾವಯವ ಬೇಸಾಯದ ವ್ಯಾಪ್ತಿ ಮತ್ತು ಅಂಕಿ ಅಂಶಗಳು ”, ಗೊಬ್ಬರ ವಾರ್ತೆ ೪೯(೧೧): ೪೧.೪೮.

೮. ಚಂದ್ರಶೇಖರ್, ಹೆಚ್‌.ಎಂ.(೨೦೧೦), “ಭಾರತದಲ್ಲಿ ಸಾವಯವ ವ್ಯವಸಾಯದ ಬದಲಾವಣೆಯ ದೃಷ್ಯ: ಒಂದು ನೋಟ” ಅಂತರ ರಾಷ್ಟ್ರೀಯ ಎನ್‌.ಜೆ. ಜರ್ನಾಲ್‌. ಸಂಪುಟ ೫(೧) ಪುಟ ೩೪-೩೯ ಫೆಬ್ರವರಿ.

೯. ಥಾಕೂರ್ ಡಿ.ಎಸ್‌. ಮತ್ತು ಶರ್ಮ. ಕೆ.ಡಿ.(೨೦೦೫), ೨೧ನಕೇ ಶತಮಾನದಲ್ಲಿ ಆಹಾರ ಭದ್ರತೆಯ ಸವಾಲುಗಳನ್ನು ಎದುರಿಸುವುದು ಮತ್ತು ಸುಸ್ಥಿರ ಕೃಷಿಗಾಗಿ ಸಾವಯವ ಬೇಸಾಯ: ಒಂದು ಆರ್ಥಿಕ ವಿಶ್ಲೇಷಣೆ”, ಭಾರತೀಯ ಕೃಷಿ ಅರ್ಥಶಾಸ್ತ್ರ ಸಂಚಿಕೆ ಸಂಪುಟ ೬೦, ಸಂಖ್ಯೆ-೨, ಏಪ್ರಿಲ್‌ಜೂನ್‌೨೦೦೫.

೧೦. ಫೊಕಓಕೊ ಎಂ. (೧೯೮೫), “ನೈಜ ಮಾರ್ಗದ ವ್ಯವಸಾಯ: ಹಸಿರು ತತ್ವಶಾಸ್ತ್ರದ ಸಿದ್ದಾಂತ ಮತ್ತು ಆಚರಣೆ”, ಜಪಾನ ಪ್ರಕಾಶನ ಟೊಕಿಯೂ, ಜಪಾನ.

೧೧. ಅಮೇರಿಕ ಸಂಯುಕ್ತ ಸಂಸ್ಥಾನ ಕೃಷಿ ಇಲಾಖೆ (೧೯೮೦), “ಸಾವಯವ ಬೇಸಾಯದ ವರದಿ ಮತ್ತು ಶಿಪಾರಸ್ಸುಗಳು” ವಾಷಿಂಗ್ಟನ್‌.೧೨. ಲ್ಯಾಂಪ್ಕಿನ್‌.ಎಲ್‌.(೧೯೯೪), “ಸಾವಯವ ಬೇಸಾಯ: ಸ್ಥಿರ ಕೃಷಿಯ ಆಚರಣೆ” ಸಾವಯವ  ಬೇಸಾಯದ ಅರ್ಥ ಶಾಸ್ತ್ರ: ಒಂದು ಅಂತರರಾಷ್ಟ್ರೀಯ ದೃಷ್ಟಿಕೋನ. ಸಿ.ಎ.ಬಿ.ಏ ಆಕ್ಸಪರ್ಡ್.

೧೩. ಕೋಡೆಕ್ಸ್‌ಅಲಿಮೆಂಟರಿಸ್‌ಆಯೋಗ (೧೯೯೯), “ಸಾವಯವ ಉತ್ಪಾದಿತ ಆಹಾರಗಳ ಉತ್ಪಾದನೆ ಮತ್ತು ಸಂಸ್ಕರಣೆ ಮೂಲಭೂತ ಮಾನದಂಡಗಳು”, ಐಪೋಮ್‌(IFORMS) ಥೋಲೆ-ಥೋಲೆ ಜರ್ಮನಿ.

೧೪. ಹಾರ್ವೆ ಲಾ ಪ್ರೈದೆ (೧೯೯೬), “ಜಾಗೃತಿಕ ಹಸಿವನ್ನು ಸಾವಯವ ಕೃಷಿ ಹೋಗಲಾಡಿಸುವ ಸಾಧ್ಯತೆ ಇದೆಯೇ?”, ಅಧ್ಯಕ್ಷರು, ಕೋಪನ ಹೇಗ್‌ನ ಪತ್ರಿಕಾ ಸಮ್ಮೇಳನ-೨, ಮೇ.

೧೫. ಅಬ್ದು ಲ್‌ಬಾಹ (೧೯೧೨), “ಒಂದು ದೇಶ”, ಬಾಹ ಅಂತರರಾಷ್ಟ್ರೀಯ ಸಮುದಾಯ ಆನಲೈನ ನ್ಯೂಸ್‌ಲೆಟರ್, ಸಂಪುಟ.೦೮, ಜುಲೈ-ಸೆಪ್ಟಂಬರ್ ೧೯೯೬.

೧೬. ಗಾಣದಾಳು ಶ್ರೀಕಂಠ (೨೦೦೭), “ವೆಲ್ವೆಟ್‌ಬೀನ್ಸ್‌”, ಸಹಜ ಸಮೃದ್ಧ ಹೆಬ್ಬಾಳ ಬೆಂಗಳೂರು.

೧೭. ಯುಸೆಟ್ಟಿ ಎಂ. ಮತ್ತು ವಿಲ್ಲರ್ (೨೦೦೭), “೨೦೦೭ ಪ್ರಪಂಚದಾದ್ಯಂತ ಸಾವಯವ ವ್ಯವಸಾಯ ಮುಖ್ಯ ಅಂಕಿ-ಅಂಶಗಳು ಮತ್ತು ಒಂದು ನೋಟ”, ಸಾವಯವ ಕೃಷಿಯ ಪ್ರಪಂಚ. ೨೦೦೭ ಅಂಕಿ ಅಂಶಗಳು ಮತ್ತು ಹೊರ ಹೊಮ್ಮುತ್ತಿರುವ ಬೆಳವಣಿಗೆಗಳು, ವಿಲ್ಲರ ಹೆಚ್.ಯುಸಫ್‌. (ಇಡಿಎಸ್‌.) ೯ನೇ ಸಂಪಾದನೆ. ಐಪೋಟು, ಜರ್ಮನಿ ಮತ್ತು ಎಫ್‌.ಬಿ.ಎಲ್‌ಸ್ವಿಡ್ಜರ್ ಲ್ಯಾಂಡ್‌, ಪುಟ. ೯-೧೭.

೧೮. ಒರ್ಟ್ಜ ಇಸ್ಕೋಬರ್ ಎಂ.ಇ. ಮತ್ತು ಹೆಚ್‌.ವಿ.ಹ್ಯೂ.(೨೦೦೭), “ಸಾವಯವ ಬೇಸಾಯದಲ್ಲಿ ಪ್ರಸ್ತುತ ಬೆಳವಣಿಗೆಗಳು”, ಮಣ್ಣು ವಿಜ್ಞಾನದಲ್ಲಿ ಪ್ರಸ್ತುತ ಸಂಶೋಧನ ಅಭಿವೃದ್ಧಿ-೨.

೧೯. ಡಾ|| ಸುಭಾಷ್‌ಚಂದ್‌ಮತ್ತು ಡಾ|| ಸುನೀಲ್‌ಪಬ್ಯಿ (೨೦೦೫), “ಸಾವಯವ ವ್ಯವಸಾಯ-ಒಂದು ಬೆಳೆಯುತ್ತಿರುವ ಪರಿಕಲ್ಪನೆ”, ಕೃಷಿ ಸಮಿತಿ ೨೦೦೫, ಕೃಷಿ ಮಂತ್ರಾಲಯ ಭಾರತ ಸರ್ಕಾರ.

೨೦. ಡಾ|| ನಾರಯಣನ್‌. ಎಸ್‌. (೨೦೦೫), ಭಾರತದಲ್ಲಿ ಸಾವಯವ ವ್ಯವಸಾಯ: ಸಮಂಜಸತೆ, ಸಮಸ್ಯೆಗಳು ಮತ್ತು ಅಡಚಣೇಗಳು”, ಪತ್ರಿಕೆ-೩೮, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು, ಆರ್ಥಿಕ ವಿಶ್ಲೇಷಣೆ ಮತ್ತು ಸಂಶೋಧನಾ ವಿಭಾಗ ಮುಂಬೈ.

೨೧. ಅಂತರರಾಷ್ಟ್ರೀಯ ಸಾವಯವ ಕೃಷಿ ಆಂದೋಲನ ಸಂಘ (೨೦೦೮) ಅದರ ಕಾರ್ಯಕ್ರಮಗಳು.

೨೨. ಪ್ರಾಂಕ್‌ಆಫರ್ ಮನ್‌ಮತ್ತು ನೀಬರ್ಗ್ ಹೆಚ್‌. (೨೦೦೦), “ಯೂರೋಪಿನಲ್ಲಿ ಸಾವಯವ ಕೃಷಿ ಕ್ಷೇತ್ರದ ಆರ್ಥಿಕ ಕಾರ್ಯ ನಿರ್ವಹಣೆ”, ಅರ್ಥಶಾಸ್ತ್ರ ಮತ್ತು ನೀತಿ ಸಂಪುಟ. ೫, ೨೦೦೦.

೨೩. ಸಾವಯವ ಕೃಷಿ: ಸುಸ್ಥಿರತೆ, ಮಾರುಕಟ್ಟೆ ಮತ್ತು ನೀತಿಗಳು” ಒ.ಇ.ಸಿ.ಡಿ. (OECD) ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಸಂಘಟನೆ ಸಿ.ಬಿ.ಐ. ಪ್ರಕಾಶನ.

೨೪. ಕರ್ನಾಟಕ ಸರ್ಕಾರದ ಅಂಕಿ ಅಂಶಗಳು.

೨೫. ವೀರೇಶ್‌. ಜಿ.ಕೆ.(೧೯೯೮), “ಸಾವಯವ ವ್ಯವಸಾಯ: ಜೀವರಾಶಿ ಬದ್ಧತೆ ಮತ್ತು ಆರ್ಥಿಕ ಸುಸ್ಥಿರವಾದದ್ದು”, ಮನುಷ್ಯ ಮತ್ತು ಅಭಿವೃದ್ಧಿ, ಪುಟ. ೧೪೨-೧೪೯.