ಸಾವಯವ ಕೃಷಿಯನ್ನು ಅನೇಕ ವರ್ಷಗಳಿಂದ ಪಾಲಿಸುತ್ತಾ ಬಂದಿರುವ ಸಾವಿರಾರು ಕೃಷಿಕರು ಕರ್ನಾಟಕದಲ್ಲಿದ್ದಾರೆ.  ಆದರೆ ಅವರು ತಮ್ಮ ಸಾವಯವ ಉತ್ಪನ್ನಗಳಿಗೆ ಪ್ರತ್ಯೇಕ ಮಾರುಕಟ್ಟೆಯಿದೆ ಎಂಬುದನ್ನೇ ತಿಳಿಯದಾಗಿದ್ದಾರೆ.  ಸಾವಯವ ಉತ್ಪನ್ನಗಳಿಗೆ ಹೊರದೇಶಗಳಲ್ಲಿ ವಿಪರೀತ ಬೇಡಿಕೆಯಿದೆ ಎಂಬುದೂ ತಿಳಿಯದು.  ಅಧಿಕ ಬೆಲೆಯಿದೆ, ಅದು ತಮಗೇ ಸಿಗುತ್ತದೆ ಎನ್ನುವುದೂ ತಿಳಿಯದು.  ಇದೆಲ್ಲಾ ತಿಳಿದರೆ ಸಾಲದು.  ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಲ್ಲ ಸಾಮರ್ಥ್ಯವೂ ಬೇಕು.  ಈ ಮಾರಾಟದ ಪ್ರಶ್ನೆ ಬಂದಾಗ ದೃಢೀಕರಣದ ಪ್ರಶ್ನೆಯೂ ಬರುತ್ತದೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಪ್ರಕಾಶ್ ಶ. ಉತ್ತೂರಿಯವರ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು.  ಜೈವಿಕ ಆಹಾರ ಕ್ಲಬ್‌ನ ಸದಸ್ಯರಾದ ಬಸವರಾಜ ಸಿ. ಕಾಪಸಿ, ಸುರೇಶ ಬಿ. ದೇಸಾಯಿ, ಶೈಲೇಶ ಸುಜೋಷಿ, ಬಂಡು ಜಿ. ತಾರದಾಳಿ ಸೇರಿದ್ದರು.  ಕ್ಲಬ್‌ನ ಸಂಚಾಲಕ ಅಶೋಕ ಬ. ತುಬಚಿಯವರು ಸಾವಯವ ಪ್ರಮಾಣಪತ್ರ ಪಡೆಯುವ ಕುರಿತು ಎಲ್ಲರಿಗೂ ವಿವರಿಸುತ್ತಿದ್ದರು.

ಇಂದು ಸಾವಯವ ಪದಾರ್ಥಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ.  ನಮ್ಮ ದೇಶದಲ್ಲಿ ಸಾವಯವ ಚಳುವಳಿ ಇದ್ದರೂ ಪ್ರಮಾಣಪತ್ರದ ಅವಶ್ಯಕತೆಯಿಲ್ಲ.  ಸ್ಥಳೀಯವಾಗಿ ವಿಶ್ವಾಸವೇ ಪ್ರಮಾಣಪತ್ರವಾಗಿದೆ.  ಇದನ್ನು ಅವಲಂಬಿಸಿಯೇ ಇಕ್ರಾ, ಗ್ರಾಮಸಿರಿ, ನೇಸರ ಹೀಗೆ ಅನೇಕ ಸಂಸ್ಥೆಗಳೂ ತಮ್ಮ ಸಾವಯವ ಪದಾರ್ಥಗಳನ್ನು ಮಾರಾಟ ಮಾಡುತ್ತಿವೆ.  ಆದರೆ ನಮ್ಮ ಪದಾರ್ಥಗಳು ವಿಶಾಲ ಕರ್ನಾಟಕದ, ಭಾರತದ, ವಿಶ್ವದ ಗ್ರಾಹಕರಿಗೆ ತಲುಪಬೇಕೆಂದರೆ ನಮ್ಮ ಉತ್ಪನ್ನ ಸಾವಯವವೆಂದು ದೃಢಪಟ್ಟಿರಬೇಕು.  ಇಲ್ಲಿ ಕೇವಲ ವಿಶ್ವಾಸ ಕೆಲಸ ಮಾಡುವುದಿಲ್ಲ.   ಹಾಗೇ ಯಾವುದೇ ಗ್ರಾಹಕರು ಅಪರಿಚಿತರು ಹೇಳಿದ್ದನ್ನು ನಂಬುವುದಿಲ್ಲ.  ಅದಕ್ಕಾಗಿಯಾದರೂ ವಿಶ್ವದಲ್ಲಿ ಮಾನ್ಯತೆ ಹೊಂದಿದ ಸಂಸ್ಥೆಗಳಿಂದ ಸಾವಯವ ಪ್ರಮಾಣಪತ್ರ ಪಡೆಯುವುದು ಅನಿವಾರ್ಯ.  ಆಗಲೇ ನಮ್ಮ ಉತ್ಪನ್ನಗಳನ್ನು, ಉತ್ಪಾದನೆಗಳನ್ನು ಎಲ್ಲಿಗೆ ಬೇಕಾದರೂ ಸಾವಯವವೆನ್ನುವ ತಲೆಬರಹ ನೀಡಿ ಕಳುಹಿಸಬಹುದು.

ಈ ರೀತಿ ಪ್ರಮಾಣಪತ್ರ ಹೊಂದಿದ ಉತ್ಪನ್ನಗಳಿಗೆ ಇಂದು ವಿಶ್ವ ಮಾರುಕಟ್ಟೆಯಲ್ಲಿ ಶೇಕಡಾ ೨೦ರಿಂದ ಶೇಕಡಾ ೨೦೦ ಪಟ್ಟು ಹೆಚ್ಚು ಬೆಲೆಯಿದೆ.  ಉದಾಹರಣೆಗೆ ಸಾವಯವ ಜೋನಿಬೆಲ್ಲದ ಬೆಲೆ ಸ್ಥಳೀಯವಾಗಿ ೧೦ರಿಂದ ೧೫ ರೂಪಾಯಿಯಾಗಿದ್ದರೆ ಸಾವಯವ ಪ್ರಮಾಣಪತ್ರ ಹೊಂದಿ ವಿಶ್ವ ಮಾರುಕಟ್ಟೆಗೆ ಕಳುಹಿಸಿದರೆ ೩೦ರಿಂದ ೫೦ ರೂಪಾಯಿಗಳವರೆಗೆ ಸಿಗುತ್ತದೆ.

ಆದರೆ ಸಾವಯವ ಪ್ರಮಾಣಪತ್ರ ಪಡೆಯುವುದು ಹೇಗೆ?

ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವಿಕೆ: ಸಾವಯವ ಪ್ರಮಾಣಪತ್ರ ನೀಡುವ ಸಂಸ್ಥೆಗಳಿಗೆ ಕೃಷಿಕನು ತನ್ನ ಅರ್ಜಿಯನ್ನು ನೀಡಬೇಕು.  ಅದರಲ್ಲಿ ಕೃಷಿಕರು ನಿರ್ವಹಿಸುತ್ತಿರುವ ಸಾವಯವ ಉತ್ಪನ್ನ ಹಾಗು ನಿರ್ವಹಣೆಯ ಯೋಜನೆಯ ವಿವರವಿರಬೇಕು.  ಕೃಷಿಕನ ಹೆಸರು, ವಿಳಾಸ, ದಉರವಾಣಿ ಸಂಖ್ಯೆ ಇವೆಲ್ಲಾ ಇರಬೇಕು.  ಒಂದೊಮ್ಮೆ ಗುಂಪು ಪ್ರಮಾಣಪತ್ರ ಮಾಡಿಸುವುದಾದರೆ ಗುಂಪಿನ ಎಲ್ಲಾ ಸದಸ್ಯರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಗುಂಪನ್ನು ನಿರ್ವಹಿಸುವ ವ್ಯಕ್ತಿಯ ಹೆಸರು ಇರಬೇಕು.

ಒಂದೊಮ್ಮೆ ಅರ್ಜಿದಾರನು ಈ ಮೊದಲೇ ಪ್ರಮಾಣಪತ್ರ ಹೊಂದಿದ್ದರೆ ಅದನ್ನು ಮರುಪರಿಶೀಲನೆಗೆ ಅಥವಾ ಹೊಸ ಪ್ರಮಾಣಪತ್ರ ಪಡೆಯಲು ಇಚ್ಛಿಸಿದರೆ ಅದರ ವಿವರಗಳು ಇರಬೇಕು.

ಈಗಾಗಲೇ ಒಂದು ಸಂಸ್ಥೆಯಿಂದ ಪ್ರಮಾಣಪತ್ರ ಹೊಂದಿ ಮತ್ತೊಂದು ಸಂಸ್ಥೆಗೆ ಪ್ರಮಾಣಪತ್ರಕ್ಕೋಸ್ಕರ ಅರ್ಜಿ ಹಾಕುತ್ತಿದ್ದರೆ ಅದನ್ನೂ ಬರೆಯಬೇಕು.

ಮೊದಲ ಪ್ರಮಾಣಪತ್ರ ಹೊಂದಿದ ವರ್ಷ, ಪ್ರಮಾಣಪತ್ರದ ನಕಲು, ಯಾವ ಬೆಳೆಗೆ, ಜಮೀನಿಗೆ ಪ್ರಮಾಣಪತ್ರ ಸಿಕ್ಕಿತ್ತು ಹೀಗೆ ಏನೆಲ್ಲಾ ವಿವರಗಳನ್ನು ತಿಳಿಸಬೇಕು.

ಇಲ್ಲಿ ಎರಡು ವಿಷಯಗಳನ್ನು ಖಚಿತಪಡಿಸಬೇಕು.

೧. ಭಾರತದ ವಾಣಿಜ್ಯ ಮಂತ್ರಾಲಯದ ಅಪೆಡಾ [ಂPಇಆಂ]ದಿಂದ ಸಾವಯವ ಉತ್ಪಾದನೆಗಳಿಗೆ ರಾಷ್ಟ್ರೀಯ ಕಾರ್ಯಯೋಜನೆಯಡಿ ಅಂಗೀಕೃತಗೊಂಡ ಐದು ವಿದೇಶಿ ಸಂಸ್ಥೆಗಳಿವೆ.

ಈ ಐದು ವಿದೇಶಿ ಸಂಸ್ಥೆಗಳೂ ತಮ್ಮ ದೇಶದ ಸಾವಯವ ಪದಾರ್ಥಗಳ ಬೇಡಿಕೆಗಳನ್ನು ಅವಲಂಬಿಸಿ, ನಿರ್ದಿಷ್ಟ ಬೆಳೆಗಳಿಗೆ ಸಾವಯವ ನೀತಿಯನ್ನು ಅಳವಡಿಸಿವೆ.  ಅದನ್ನೇ ಇಲ್ಲಿಯ ಕೃಷಿಗೂ ಅನ್ವಯಿಸಿ ಪ್ರಮಾಣಪತ್ರ ನೀಡುತ್ತವೆ.  ಹೀಗೆ ಪ್ರಮಾಣಪತ್ರ ನೀಡುವುದಕ್ಕೆ ಆ ಸಂಸ್ಥೆಗಳೂ ಅಂತರರಾಷ್ಟ್ರೀಯ ಸಾವಯವ ಕೃಷಿ ಆಂದೋಲನಾ ಸಂಸ್ಥೆಯ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟ ನಿಯಂತ್ರಣ ಸಂಸ್ಥೆಯ [Iಈಔಂಒ] ಹಾಗೂ [ISಔ೬೫] ಮಾನ್ಯತೆ ಹೊಂದಿರಬೇಕು.

ಈ ಸಂಸ್ಥೆಗಳು ತಪಾಸಣೆ ಮಾಡಿ, ಪರಿಶೀಲಿಸಿ ಹಾಗೂ ಪ್ರಮಾಣೀಕರಿಸಿ ಮತ್ತೆ ಮತ್ತೆ ಪರೀಕ್ಷಿಸಿ ಪ್ರಮಾಣಪತ್ರ ನೀಡುತ್ತವೆ.

೧. ಯಾವುದೇ ಕೃಷಿಕನು ವೈಯಕ್ತಿಕವಾಗಿ ಅಥವಾ ಕೃಷಿಕರು ಗುಂಪು ಸೇರಿ ಪ್ರಮಾಣಪತ್ರ ಮಾಡಿಸಬಹುದು.

ಸಾವಯವ ಪ್ರಮಾಣಪತ್ರ ಮಾಡಿಸಲು ಅಪಾರ ಖರ್ಚಿದೆ.  ನೂರಾರು ಎಕರೆ ಕಾಫಿತೋಟ, ಕಬ್ಬಿನ ತೋಟ ದ್ರಾಕ್ಷಿ ತೋಟದ ಮಾಲೀಕರು ವೈಯಕ್ತಿಕ ಪ್ರಮಾಣಪತ್ರ ಮಾಡಿಸುವ ಖರ್ಚು ನಿರ್ವಹಿಸಲು ಸಾಧ್ಯ.  ಸಣ್ಣ ಕೃಷಿಕರು ಗುಂಪು ಸೇರಿ ಮಾಡಿಸುವುದು ಒಳ್ಳೆಯದು ಎನ್ನುವ ಸಲಹೆ ಮಂಡ್ಯದ ರಮೇಶ್‌ರಾಜುರವರದು.  ಪ್ರಮಾಣಪತ್ರದ ಅವಧಿ ಕೇವಲ ಒಂದು ವರ್ಷದ್ದು.  ಇದರಿಂದ ಸಾವಯವ ಪ್ರಮಾಣಪತ್ರ ಮಾಡಿಸಲು ಮಾಡಿದ ಖರ್ಚು ಗಳಿಸುವುದು ಅಸಾಧ್ಯ.  ಗುಂಪಿನಲ್ಲಾದರೆ ಖರ್ಚು ಕಡಿಮೆಯಾಗುತ್ತದೆ.  ಎರಡನೇ ಬಾರಿ ಮಾಡಿಸುವಾಗ ಇನ್ನೂ ಕಡಿಮೆಯಾಗುತ್ತದೆ.  ಆದರೆ ಪ್ರಮಾಣಪತ್ರ ವೈಯಕ್ತಿತವಾಗಿ ಸಿಗುವುದಿಲ್ಲ.  ಇಡೀ ಗುಂಪಿಗೆ ಒಂದು ಪ್ರಮಾಣಪತ್ರ ಸಿಗುತ್ತದೆ.

ಆದರೆ ಗುಂಪಿನ ಸದಸ್ಯರು ಆಂತರಿಕ ಒಪ್ಪಂದ ಮಾಡಿಕೊಂಡಿರುವುದು ಮುಖ್ಯ.  ಕೃಷಿಪದ್ಧತಿ, ಆಡಳಿತ, ದಾಖಲೀಕರಣ ಇವೆಲ್ಲಾ ಪರಸ್ಪರ ಹೊಂದಾಣಿಕೆಯಲ್ಲಿರುವುದು ಮುಖ್ಯ.  ಗುಂಪಿನ ಸದಸ್ಯರು ಸಮಾನಮನಸ್ಕರಾಗಿದ್ದು, ಯಾವಾಗಲೂ ಒಬ್ಬನೇ ಸಂಚಾಲಕನನ್ನು ಹೊಂದಿರಬೇಕು.  ಆತ ಬಹಳ ಪ್ರಾಮಾಣಿಕನಾಗಿರಬೇಕು.  ಅಂದರೆ ಗುಂಪಿನಲ್ಲಿ ಒಬ್ಬನು ದಾರಿ ತಪ್ಪಿದರೂ ಅವನನ್ನು ಹೊರಹಾಕುವ ಧೈರ್ಯ ಹಾಗೂ ಪ್ರಮಾಣಪತ್ರ ನೀಡುವ ಸಂಸ್ಥೆಗೆ ತಿಳಿಸುವ ಪಾರದರ್ಶಕತೆ ಅವನಲ್ಲಿ ಇರಬೇಕು.

ಅರ್ಜಿಯ ಪರಿಶೀಲನೆ

ಪ್ರಮಾಣಪತ್ರ ನೀಡುವ ಸಂಸ್ಥೆಯು ಮೊದಲು ಅರ್ಜಿಯನ್ನು ಪರಿಶೀಲಿಸುತ್ತದೆ.  ಅದರಲ್ಲಿರುವ ವ್ಯಕ್ತಿ, ವಿಳಾಸ, ಹಿಂದೆ ಅರ್ಜಿ ನೀಡಿದ್ದರೆ ಅದರ ದಾಖಲೆಗಳು ಹಾಗೂ ವ್ಯಕ್ತಿಯು ನೀಡಿದ ಕೃಷಿಪದ್ಧತಿ, ಬೆಳೆಗಳ ಕುರಿತ ಯೋಜನೆಗಳು ಅಂತರರಾಷ್ಟ್ರೀಯ ನೀತಿನಿಯಮಗಳಿಗೆ ಅನುಗುಣವಾಗಿದೆಯೇ ಎಂದು ಗಮನಿಸಲಾಗುತ್ತದೆ.

ಯಾವುದು ಅಂತರರಾಷ್ಟ್ರೀಯ ನೀತಿ-ನಿಯಮ?

-ಸಾವಯವ ಕೃಷಿಗೆ ಜಮೀನನ್ನು ಪರಿವರ್ತಿಸುವ ಮುನ್ನ ಆಯಾ ಪ್ರದೇಶಗಳ ಅಥವಾ ಪರಿಸರದಲ್ಲಿ ಬೆಳೆಯುವ ಬೆಳೆಯನ್ನು ಆರಿಸಿಕೊಂಡಿರಬೇಕು.  ಕೃಷಿಯಿಂದಾಗಿ ಅಲ್ಲಿನ ಮಣ್ಣು, ನೀರು, ಪರಿಸರ ಹಾನಿಗೀಡಾಗಬಾರದು.  ಒಂದೊಮ್ಮೆ ವಿಭಿನ್ನ ಬೆಳೆಗಳನ್ನು ಬೆಳೆಯುವುದಾದರೆ ಅದರ ವಿವರಗಳೂ ಇರಬೇಕು.

-ಮಣ್ಣನ್ನು ಫಲವತ್ತಾಗಿಸಲು ಬಳಸುವ ಗೊಬ್ಬರ ರಾಸಾಯನಿಕರಹಿತವಾಗಿರಬೇಕು.  ಕೊಟ್ಟಿಗೆ ಗೊಬ್ಬರವನ್ನೂ ಸಹ ಗೋವುಗಳಿಗೆ ರಾಸಾಯನಿಕರಹಿತ ಆಹಾರ ನೀಡಿಯೇ ತಯಾರಿಸಬೇಕು.  ಜೊತೆಗೆ ಮುಚ್ಚಿಗೆ ಬೆಳೆಗಳು ಹಾಗೂ ಇತರ ಸೊಪ್ಪುಗಳನ್ನು ಗೊಬ್ಬರವಾಗಿ ಬಳಸಬಹುದು.

ವಿಶೇಷ ಸಂದರ್ಭಗಳಲ್ಲಿ ಮಾತ್ರ ಶಿಲಾರಂಜಕ, ಸುಣ್ಣ, ಪೊಟ್ಯಾಶ್ ನೀಡಬಹುದು.  ಒಂದೊಮ್ಮೆ ಬೂದಿ ಬಳಸುವುದಾದರೂ ಅದರಲ್ಲಿ ಲೋಹ, ಪ್ಲಾಸ್ಟಿಕ್ ಮುಂತಾದ ರಾಸಾಯನಿಕಗಳ ಬೂದಿ ಸೇರಿರಬಾರದು.  ಮಣ್ಣುಕೊಚ್ಚಣೆ ತಡೆಯುವ ಪ್ರಯತ್ನವಿರಬೇಕು.

 • ರಾಸಾಯನಿಕರಹಿತ ಕೀಟನಾಶಕಗಳನ್ನು ಬಳಸಬೇಕು.  ಗಂಧಕ, ಮೈಲುತುತ್ತ ಬಳಸುವಾಗ ಸಂಸ್ಥೆಯ ಪರವಾನಗಿ ಪಡೆದಿರಬೇಕು.  ಅದಕ್ಕಾಗಿ ಜೀವಂತ ಬೇಲಿಗಳು, ಔಷಧಿವನಗಳನ್ನು ನಿರ್ಮಿಸಬಹುದು.
 • ಬಳಸುವ ಬೀಜಗಳೂ ಸಾವಯವ ಮೂಲದ್ದಾಗಿರಬೇಕು.  ಕುಲಾಂತರಿಗಳ ಬಳಕೆ ಸಲ್ಲುವುದಿಲ್ಲ.  ರಾಸಾಯನಿಕದಲ್ಲಿ ಬೆಳೆದ ತಳಿಗಳನ್ನು ತಂದರೆ ಸಾವಯವದಲ್ಲಿ ಬೆಳೆದು ಅದರಿಂದ ಬೀಜ ಮಾಡಿಕೊಂಡು ಬಳಸಬಹುದು.  ಅಶೋಕ ಬ. ತುಬಚಿಯವರು ಹೇಳುವಂತೆ ವಿಶ್ವವಿದ್ಯಾನಿಲಯಗಳಿಂದ ತಂದ ಬೀಜಗಳಾದರೆ ಸಾವಯವದಲ್ಲಿ ಬೀಜೋಪಚಾರ ಮಾಡಿಯೂ ಬೆಳೆಯಬಹುದು.
 • ಸಸಿಗಳನ್ನು, ಕಾಂಡಗಳನ್ನು ನೆಡುವುದಾದರೆ ಅವುಗಳ ಬೆಳವಣಿಗೆ ರಾಸಾಯನಿಕರಹಿತವಾಗಿದೆಯೇ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬೇಕು.  ಒಂದೊಮ್ಮೆ ಅವುಗಳನ್ನು ರಾಸಾಯನಿಕ ಬಳಸಿ ಬೆಳೆಸಿದ್ದರೆ ಒಂದು ವರ್ಷಕಾಲ ಸಂಪೂರ್ಣ ಸಾವಯವದಲ್ಲಿಯೇ ಬೆಳೆದು ಅವನ್ನು ಶುದ್ಧಗೊಳಿಸಿಕೊಂಡ ಮೇಲೆ ಫಸಲನ್ನು ನಿರೀಕ್ಷಿಸಬೇಕು.
 • ಮುಖ್ಯ ಬೆಳೆಯೊಂದಿಗೆ ಬೆಳೆಯುವ ಮಿಶ್ರಬೆಳೆ, ಅಂತರಬೆಳೆಗಳಿಗೂ ನಿಯಮಗಳು ಕಡ್ಡಾಯ.  ಈ ರೀತಿ ವಿಭಿನ್ನ ಬೆಳೆಗಳಿಂದ ಯಾವುದೇ ರೀತಿಯ ಪರಿಸರ ಹಾನಿ, ನೆಲ-ಜಲ ಹಾನಿಯಾಗಬಾರದು.  ಇವು ಮುಖ್ಯಬೆಳೆಗೆ ಸಹಕಾರಿಯಾಗಿರಬೇಕು.
 • ಕೀಟ, ಕಳೆ ಹಾಗೂ ರೋಗನಿಯಂತ್ರಣಕ್ಕೆ ಟ್ರೈಕೊಡರ್ಮಾದಂತಹ ಕೀಟನಾಶಕಗಳು, ಪರಸ್ಪರ ಪೂರಕ ಬೆಳೆಗಳು, ಸಹಜ ವೈರಿಗಳ ಅಭಿವೃದ್ಧಿ, ಯಂತ್ರೋಪಕರಣಗಳ ಬಳಕೆ, ಬೆಂಕಿ, ವಿದ್ಯುತ್, ಪ್ರಾಣಿಗಳು, ಪಕ್ಷಿಗಳು ಇವೆಲ್ಲಾ ಮಾನ್ಯ.  ಒಂದೊಮ್ಮೆ ಪ್ಲಾಸ್ಟಿಕನ್ನು ಮುಚ್ಚಿಗೆಯಾಗಿ ಬಳಸಿದರೆ ಬೆಳೆ ಕೊಯ್ಲಿಗೆ ಬರುವ ಮುನ್ನವೇ ಕೃಷಿ ಪ್ರದೇಶದ ಹತ್ತಿರವೆಲ್ಲೂ ಇರದಂತೆ ಎಚ್ಚರಿಕೆ ವಹಿಸಬೇಕು. ಸಸ್ಯಜನ್ಯ, ಪ್ರಾಣಿಜನ್ಯ ಕೀಟನಾಶಕಗಳ ಬಳಕೆ ಒಳ್ಳೆಯದು.
 • ಪಶುಪಾಲನೆಯಿಂದ ಗೊಬ್ಬರ ಪಡೆಯಬೇಕಾದ ಕಾರಣ ಪಶುಗಳಿಗೆ ತಿನ್ನಿಸುವ ಆಹಾರ ಸಾವಯವವಾಗಿರಬೇಕು.  ಪಶು ಔಷಧಿಗಳ ಬಳಕೆ, ಹಾರ್ಮೋನುಗಳ ಬಳಕೆ, ಯೂರಿಯಾ ಮುಂತಾದವುಗಳ ಬಳಕೆ ಮಾಡಬಾರದು.  ಸೂಕ್ತ ರೋಗನಿರೋಧಕ ಚುಚ್ಚುಮದ್ದು ಕೊಡಿಸಬೇಕು.

ಈ ರೀತಿ ಮೂರು ವರ್ಷ ಸಂಪೂರ್ಣ ಸಾವಯವದಲ್ಲಿ ಬೆಳೆಸಿದ ಮೇಲೆ ಆ ಗೊಬ್ಬರ ಸಾವಯವ ಗೊಬ್ಬರವೆನಿಸುತ್ತದೆ.  ಹೋರಿಗಳನ್ನು ಹೊರಗಿನಿಂದ ತಂದರೆ ಅವುಗಳಿಂದ ಪಡೆದ ಕರುಗಳನ್ನು ಸಹ ಮೂರು ವರ್ಷ ಸಾವಯವದಲ್ಲಿ ಬೆಳೆಸಿಯೇ ಗುಂಪಿಗೆ ಸೇರಿಸಬೇಕು.

ಪಶುಗಳಿಗೆ ಉತ್ತಮ ವಸತಿಗೃಹ, ಸೂರ್ಯನ ಬೆಳಕು, ತಾಪಮಾನ ನಿಗ್ರಹ ಮುಂತಾದವುಗಳನ್ನು ಸೂಕ್ತವಾಗಿ ನಿರ್ವಹಿಸಬೇಕು.

ಪಶುಪಾಲನೆಯಲ್ಲಿ ಪ್ರಮಾಣಪತ್ರ ಪಡೆಯಲು ಇನ್ನೂ ಅನೇಕ ನಿಯಮ-ನಿಬಂಧನೆಗಳಿವೆ.

 • ಪ್ರಮಾಣಪತ್ರವನ್ನು ಪಡೆಯುವ ರೈತನು ತನ್ನೆಲ್ಲಾ ಜಮೀನನ್ನು ಸಾವಯವ ಕೃಷಿ ಮಾಡುವುದು ಅಗತ್ಯ.  ವಿಶೇಷ ಸಂದರ್ಭಗಳಲ್ಲಿ, ಜಮೀನು ದೂರವಿದ್ದು ನಿರ್ವಹಿಸಲಾಗದಿದ್ದರೆ ಅದಕ್ಕೆ ಮಾನ್ಯತೆಯಿದೆ.
 • ಒಂದೊಮ್ಮೆ ಅಕ್ಕಪಕ್ಕದ ಜಮೀನಿನವರು ರಾಸಾಯನಿಕ ಬಳಸುತ್ತಿದ್ದರೆ ಅದರ ಗಾಳಿ, ನೀರು ಇದನ್ನೆಲ್ಲಾ ನಿಯಂತ್ರಿಸಲು ಆಯಾ ಪ್ರದೇಶಕ್ಕೆ ಸೂಕ್ತವಾಗಿ ಬೇಲಿ, ಬದುಗಳು, ಆಳವಾದ ಕಾಲುವೆಗಳ ನಿರ್ಮಾಣ ಅತ್ಯಗತ್ಯ.  ಅತ್ಯಧಿಕ ರಾಸಾಯನಿಕ ಬಳಸುವ ಹೊಲ ಸುತ್ತಲೂ ಇದ್ದಾಗ ಸಾವಯವ ರೈತ ತನ್ನ ಹೊಲದ ಗಡಿಭಾಗದ ಬೆಳೆಯನ್ನು ಪ್ರತ್ಯೇಕ ಕೊಯ್ದು ಪರೀಕ್ಷೆಗೊಳಪಡಿಸಬೇಕಾಗುತ್ತದೆ.
 • ಯಾವುದೇ ಕಾರಣಕ್ಕೂ ಕೊಳಚೆ ನೀರನ್ನು, ಚರಂಡಿ ನೀರನ್ನು, ಕಾರ್ಖಾನೆಯ ನೀರನ್ನು ಬಳಸಬಾರದು.  ವೈಮಾನಿಕವಾಗಿ ರಾಸಾಯನಿಕ ಸಿಂಪಡಣೆ ಮಾಡುವ ಪ್ರದೇಶದ ವ್ಯಾಪ್ತಿಯಲ್ಲೂ ಇರಬಾರದು.

ಈ ಎಲ್ಲಾ ನಿಯಮಗಳನ್ನು ಪಾಲಿಸುತ್ತಿರುವ ದಾಖಲೆಗಳು ಅಗತ್ಯ.  ಕೃಷಿ ಕೆಲಸಗಳಿಗೆ ಬಳಸುತ್ತಿರುವ ಗೊಬ್ಬರ, ಖನಿಜಗಳು, ನೀರು, ಇಳುವರಿ ಹಾಗೂ ಮಾರಾಟ ಇವೆಲ್ಲವನ್ನೂ ರಸೀದಿ, ದಿನಾಂಕ, ಸಮಯದ ಸಹಿತ ದಾಖಲೆ ಇಡಬೇಕು.

ಪ್ರಮಾಣಪತ್ರ ಪಡೆಯಲು ಅರ್ಜಿದಾರನು ಕನಿಷ್ಠ ಐದು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿರಬೇಕು.

ಜಮೀನಿನ ಪರಿಶೀಲನೆ ಹೇಗೆ ಮಾಡುತ್ತಾರೆ?

ಅರ್ಜಿದಾರನ ಜಮೀನನ್ನು ನೋಡಲು, ಪರೀಕ್ಷಿಸಲು ತಜ್ಞರ ತಂಡ ಬರಬಹುದು ಅಥವಾ ಒಬ್ಬ ಮೇಲ್ವಿಚಾರಕ ಬರಬಹುದು.  ಅನುಮಾನ ಬಂದ ಭಾಗವನ್ನು ಮಾತ್ರ ಪರೀಕ್ಷಿಸಬಹುದು ಅಥವಾ ಇಡೀ ಜಮೀನನ್ನೇ ರಾಸಾಯನಿಕ ಪರೀಕ್ಷೆಗೆ ಒಳಪಡಿಸಬಹುದು.

ಇದೆಲ್ಲದರ ನಕಲು ಪ್ರತಿ, ಮಾದರಿಗಳನ್ನು ಅರ್ಜಿದಾರನಿಗೆ ನೀಡಲಾಗುತ್ತದೆ.  ಸಂಸ್ಥೆಯು ಅನುಮಾನ ಬಂದಲ್ಲಿ ಅದಕ್ಕೆ ತಕ್ಕ ಸಮಜಾಯಿಷಿ ಕೇಳುತ್ತದೆ.  ಸರಿಪಡಿಸುವುದಿದ್ದರೆ ಸಮಯಮಿತಿಯನ್ನೂ ನೀಡುತ್ತದೆ.  ಅರ್ಜಿದಾರನು ಅದರಂತೆ ದಾಖಲೆಸಹಿತ ಪುರಾವೆಗಳನ್ನು ನೀಡಬೇಕಾಗುತ್ತದೆ.

ಮಧ್ಯೆ ಮಧ್ಯೆ ಅನಿರೀಕ್ಷಿತ ತಪಾಸಣೆಯೂ ಇರುತ್ತದೆ.  ಪರೀಕ್ಷಕರು ಕೇವಲ ಜಮೀನೊಂದೇ ಅಲ್ಲ, ಸಂಗ್ರಹಾಗಾರ, ಲೆಕ್ಕಪತ್ರಗಳನ್ನೂ ತಪಾಸಿಸಬಹುದು.  ರೈತನೊಂದಿಗೆ ಮೌಖಿಕ ಸಂದರ್ಶನ ನಡೆಸಬಹುದು.

ಇದೆಲ್ಲಾ ಸೇರಿ ವರದಿ ತಯಾರಾಗುತ್ತದೆ.  ಇದು ಸಮಿತಿಯ ಎದುರು ಬರುತ್ತದೆ.  ಈ ಹಂತದಲ್ಲಿಯೂ ಅರ್ಜಿ ತಿರಸ್ಕೃತವಾಗಬಹುದು.  ಅದು ಆಯಾ ದೇಶಗಳ ನೀತಿಯನ್ನು ಅನುಸರಿಸುತ್ತಿರುತ್ತದೆ.

ಎಲ್ಲಾ ರೀತಿಯಲ್ಲಿಯೂ ತೇರ್ಗಡೆಯಾದರೆ ಪ್ರಮಾಣಪತ್ರ ಸಿಗುತ್ತದೆ.  ಇದರಿಂದ ಪ್ರಮಾಣಪತ್ರ ನೀಡಿದ ಸಂಸ್ಥೆಯು ಪ್ರತಿನಿಧಿಸುವ, ಮಾನ್ಯತೆ ಪಡೆದ ದೇಶಗಳಲ್ಲಿ ರೈತನ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಸಿಗುತ್ತದೆ.

ಅತ್ಯಂತ ಹೆಚ್ಚು ದೇಶಗಳಿಂದ ಮಾನ್ಯತೆ ಹೊಂದಿರುವ ಸಂಸ್ಥೆಯಾದರೆ ರೈತನಿಗೆ ಅನುಕೂಲ.  ಇಲ್ಲದಿದ್ದರೆ ಬಿಟ್ಟುಹೋದ ದೇಶಗಳಲ್ಲಿ ಮಾನ್ಯತೆ ಹೊಂದಲು ಬೇರೊಂದು ಸಂಸ್ಥೆಯನ್ನು ಅವಲಂಬಿಸಬೇಕಾಗುತ್ತದೆ.  ಮತ್ತೊಂದು ಪ್ರಮಾಣಪತ್ರ ಪಡೆಯಬೇಕಾಗುತ್ತದೆ.

ಅರ್ಜಿದಾರನು ಈ ವಿಷಯದಲ್ಲಿ ಮೊದಲೇ ಎಚ್ಚರವಹಿಸಿ, ತಿಳುವಳಿಕೆ ಹೊಂದಿ ವ್ಯವಹರಿಸಬೇಕಾದದ್ದು ಅಗತ್ಯ.  ಒಂದು ಸಂಸ್ಥೆಯ ಪ್ರಮಾಣಪತ್ರವೇ ದುಬಾರಿಯಗಿರುವಾಗ ಇನ್ನೊಂದರ ಪ್ರಮಾಣಪತ್ರ ಪಡೆಯುವಿಕೆ ಸುಲಭವಲ್ಲ.

ಈ ರೀತಿಯ ಪ್ರಮಾಣಪತ್ರದ ಅವಧಿ ಕೇವಲ ಒಂದು ವರ್ಷ ಮಾತ್ರ.   ಮರು ಅವಧಿಗೋಸ್ಕರ ಮತ್ತೊಮ್ಮೆ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು.  ಸೂಕ್ತ ಹಣ ಕಟ್ಟಬೇಕು.   ಕಳೆ ವರ್ಷದ ವಾರ್ಷಿಕ ವರದಿ, ಮಾಹಿತಿಗಳು ದಾಖಲೆಸಹಿತ ಇರಬೇಕು.  ಬದಲಾವಣೆಗಳು, ತಿರುವುಗಳು, ಹೊಸತನ ಹೀಗೆ ಏನೆಲ್ಲಾ ಅದರೊಂದಿಗೆ ಇರಬೇಕು.

ಪರೀಕ್ಷಕರು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಶೀಲನೆ ನಡೆಸಿ ವರದಿ ತಯಾರಿಸುತ್ತಾರೆ.  ಅದನ್ನು ಸಮಿತಿಯು ಮತ್ತೊಮ್ಮೆ ಪರಿಶೀಲಿಸಿ, ಅದಾಗಲೇ ನೀಡಿದ ಪ್ರಮಾಣಪತ್ರವನ್ನು ಮುಂದುವರೆಸುತ್ತದೆ.

ಅರ್ಜಿ ಹಾಕುವ ಮೊದಲು ಅರ್ಜಿದಾರನು ಸಂಸ್ಥೆಯ ಗುಣಮಟ್ಟ, ಪ್ರಮಾಣಪತ್ರದ ಉಪಯುಕ್ತತೆಯ ಬಗ್ಗೆ ತಿಳಿದಿರುವುದು ಅಗತ್ಯ.  ಯಾವುದೇ ಸಂಸ್ಥೆಯು ಜಮೀನಿಗೆ ಮಾತ್ರ ಪ್ರಮಾಣಪತ್ರ ನೀಡುತ್ತದೆ, ಉತ್ಪಾದನೆಗಲ್ಲ.  ಅದೇ ರೀತಿ ಮಾರುಕಟ್ಟೆ ಮಾಡುವ ವಿಧಾನಗಳನ್ನು ತಿಳಿಸುವುದಿಲ್ಲ.  ಕೆಲವು ಮೋಸಗಾರ ಸಂಸ್ಥೆಗಳೂ ಇವೆ.  ಇವು ಹಣ ದೋಚುತ್ತವೆ.  ವರ್ಷವಿಡೀ ಪ್ರಮಾಣಪತ್ರ ಕೊಡದೇ ಸತಾಯಿಸುವ ಸಂಸ್ಥೆಗಳಿವೆ.  ಕೆಲವು ಸಂಸ್ಥೆಗಳು ನೀಡಿದ ಪ್ರಮಾಣಪತ್ರ ಉಪಯೋಗಕ್ಕೆ ಬಾರದೇ ಸೋತ ರೈತರೂ ಇದ್ದಾರೆ.

ಪ್ರಮಾಣಪತ್ರ ಪಡೆಯಲು ಆಗುವ ಖಚು-ವೆಚ್ಚ ಹೇಗೆ?

ಇದು ಪ್ರಮಾಣಪತ್ರ ನೀಡುವ ಸಂಸ್ಥೆಯ ನೀತಿ-ನಿಯಮಗಳಿಗೆ ಒಳಪಟ್ಟಿದೆ.  ತಪಾಸಣೆ, ವರದಿ, ಪರಿಶೀಲನೆ, ಪ್ರಯಾಣ, ಕಛೇರಿ ಖರ್ಚು, ಸಮಯ ಇವೆಲ್ಲಾ ಒಂದೆಡೆ ಪರಿಗಣಿಸಲಾಗುತ್ತದೆ.

ವೈಯಕ್ತಿಕ, ಗುಂಪು, ಸಹಕಾರಿ ಸಂಘ, ಎಸ್ಟೇಟ್, ಸಂಸ್ಕರಣಾ ಘಟಕ ಹೀಗೆ ಅರ್ಹರನ್ನು ಮತ್ತೊಂದೆಡೆ ಪರಿಗಣಿಸಲಾಗುತ್ತದೆ.

ಉದಾಹರಣೆಗೆ ೧೦೦ ಜನ ಸದಸ್ಯರಿರುವ ಸಹಕಾರಿ ಸಂಘಕ್ಕಾದರೆ ಸುಮಾರು ೫೦ ಸಾವಿರ ರೂಪಾಯಿಗಳ ಖರ್ಚು ಬರುತ್ತದೆ.  ಹಾಗೇ ೨೦ ಜನರಿರುವ ಸ್ವಸಹಾಯ ಗುಂಪಿಗೂ ೫೦ ಸಾವಿರ ರೂಪಾಯಿಗಳ ಖರ್ಚೇ ಬರಬಹುದು.  ಇದು ಪ್ರತಿವರ್ಷದ ಖರ್ಚು.  ಮರು ಮನ್ನಣೆಗೆ ಖಚು-ವೆಚ್ಚ ಪ್ರತ್ಯೇಕ.

ಪ್ರಮಾಣಪತ್ರ ಮಾಡಿಸುವವರು ಬೆಳೆ, ಉತ್ಪನ್ನ, ಸಂಸ್ಕರಣೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಆದಾಯವನ್ನು ಲೆಕ್ಕಾಚಾರ ಮಾಡಿ ಮಾಡಿಸುವುದು ಒಳ್ಳೆಯದು.  ದೇಶೀ ಮಾರುಕಟ್ಟೆಗಾದರೆ ಖರ್ಚು ಕಡಿಮೆ.  ನಿಖರವಾಗಿ ಮಾಹಿತಿ ಬೇಕೆನ್ನುವವರು ತಮ್ಮ ಜಮೀನಿನ ವಿಸ್ತೀರ್ಣ, ಬೆಳೆ, ಉತ್ಪಾದನೆ ಹಾಗೂ ಇರುವ ಸ್ಥಳ ತಿಳಿಸಿದರೆ ಪ್ರಮಾಣಪತ್ರ ನೀಡುವ ಸಂಸ್ಥೆಗಳು ಅಂದಾಜು ವೆಚ್ಚದ ವಿವರ ನೀಡುತ್ತವೆ.

ನೆನಪಿಡಿ, ಪ್ರಮಾಣಪತ್ರ ನೀಡುವ ಸಂಸ್ಥೆಯೂ ಸಹ ಪ್ರಮಾಣಪತ್ರ ಹೊಂದಿರಬೇಕು.  ಕೆಲವೊಮ್ಮೆ ಪ್ರಮಾಣಪತ್ರ ನೀಡುವ ಸಂಸ್ಥೆ ಹಾಗೂ ಮೂಲಸಂಸ್ಥೆ ಬೇರೆ ಬೇರೆಯಾಗಿರಬಹುದು ಅಥವಾ ವಿದೇಶಿ ಸಂಸ್ಥೆಯೊಂದರ ಮಧ್ಯವರ್ತಿಯಾಗಿಯೂ ಕೆಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.  ಅದಕ್ಕಾಗಿ ಸಂಸ್ಥೆಯ ಬಗ್ಗೆ ಸಂಪೂರ್ಣ ಅರಿವು ಅತ್ಯವಶ್ಯಕ.

ಪ್ರಮಾಣಪತ್ರ ಸಿಗುವುದು ಕೇವಲ ಜಮೀನುಗಳಿಗೆ ಮಾತ್ರವೇ?

ಹಾಗೇನಿಲ್ಲ, ಸಂಸ್ಕರಣಾ ಘಟಕಗಳಿಗೆ, ತಯಾರಿಕಾ ಘಟಕಗಳಿಗೆ, ಕೇವಲ ಹುಲ್ಲಿನ ಬೆಳೆಗೆ, ಹೈನುಗಾರಿಕೆಗೆ, ಪಶುಪಾಲನೆಗೆ, ಕಾಡಿನ ಉತ್ಪನ್ನಗಳ ಸಂಗ್ರಹಣೆಗೆ, ಜೇನುಕೃಷಿಗೆ, ಸಾಂಬಾರ ಪದಾರ್ಥಗಳಿಗೆ, ರಫ್ತು ಉದ್ಯಮಕ್ಕೆ, ಅಣಬೆ ಕೃಷಿ, ಮರ ಬೆಳೆಸುವಿಕೆ, ವೈನ್ ತಯಾರಿಕೆ, ನಾರು, ಬೇರು ಮತ್ತು ಔಷಧೀಯ ಕೃಷಿ ಹಾಗೂ ಸಂಗ್ರಹ, ಮೀನು, ಸೀಗಡಿ ಮುಂತಾದ ಜಲೋತ್ಪನ್ನಗಳ ಕೃಷಿ ಹೀಗೆ ಏನೆಲ್ಲಾ ವಿಷಯಗಳೀಗೂ ಪ್ರಮಾಣಪತ್ರ ಪಡೆಯಬಹುದು.

ಪ್ರಮಾಣಪತ್ರ ನೀಡುವವರು ಯಾರು?

ಭಾರತದಲ್ಲಿ ವಿದೇಶಿ ಮೂಲದ ಐದು ಸಂಸ್ಥೆಗಳೂ ಸಾವಯವ ಪ್ರಮಾಣಪತ್ರ ನೀಡುತ್ತಿವೆ.  ಎಸ್.ಜಿ.ಎಸ್.-ಸ್ವಿಟ್ಜರ್‌ಲ್ಯಾಂಡ್, ಇಂಡೋಸರ್ಟ್, ಇಕೋಸರ್ಟ್-ಫ್ರಾನ್ಸ್, ಸ್ಕಾಲ್-ನೆದರ್‌ಲ್ಯಾಂಡ್,  ಐ.ಎಂ.ಓ.-ಸ್ವಿಟ್ಜರ್‌ಲ್ಯಾಂಡ್

ಇವು ನಮ್ಮ ದೇಶದ ವಾಣಿಜ್ಯ ಮಂತ್ರಾಲಯದ ಅಪೆಡಾ ಸಾವಯವ ಉತ್ಪದನೆಗೆ ರಾಷ್ಟ್ರೀಯ ಕಾರ್ಯಕ್ರಮ ಎಂಬ ನಿಯಮಾವಳಿಗಳ ಅಂಗೀಕಾರ ಹೊಂದಿವೆ.

ಇಲ್ಲಿ ನಿಯಮಾವಳಿಗಳು ಜಂಟಿಯಾಗಿರುತ್ತವೆ.  ಕೊಳ್ಳುವ ದೇಶಗಳು ಬಯಸುವ ನಿಯಮಾವಳಿಗಳೊಂದಿಗೆ ನಮ್ಮ ದೇಶದ ಸಾವಯವ ಕೃಷಿ ನೀತಿಯೂ ಸೇರಿರುತ್ತದೆ.  ಆಯಾ ದೇಶಗಳ ದೃಢೀಕರಣ ಪತ್ರಗಳೊಂದಿಗೆ ನಮ್ಮ ದೇಶದ ದೃಢೀಕರಣ ಪತ್ರವನ್ನೂ ಸಂಸ್ಥೆಯು ಹೊಂದಿರುತ್ತದೆ.  ಇವೆಲ್ಲಾ ಅನುಕೂಲತೆಗಳು ಪ್ರಮಾಣಪತ್ರ ಪಡೆದ ರೈತನಿಗೆ ಸಿಗುತ್ತದೆ.

ಉದಾಹರಣೆಗೆ ಐಎಂಓ-ಸ್ವಿಟ್ಜರ್‌ಲ್ಯಾಂಡ್ ಸಂಸ್ಥೆಯು ಅಮೇರಿಕಾ, ಯುರೋಪು, ಜಪಾನಿನ ದೃಢೀಕರಣ ಪತ್ರ ಪಡೆದಿದೆ.  ನಮ್ಮ ದೇಶದ ದೃಢೀಕರಣಪತ್ರ ಪಡೆದು ಬೆಂಗಳೂರಿನಲ್ಲಿ ನೆಲಸಿದೆ.  ಜೈವಿಕ ಅಕ್ಕಿ ಬೆಳೆಯುವವರು ಈ ಸಂಸ್ಥೆಯ ಪ್ರಮಾಣಪತ್ರ ಪಡೆದರೆ ಅಮೇರಿಕಾ, ಜಪಾನು, ಯುರೋಪ್‌ಗಳಿಗೆ ತಮ್ಮ ಜೈವಿಕ ಅಕ್ಕಿಯ ರಫ್ತು ಮಾಡಬಹುದು.

ನಮ್ಮ ದೇಶದೊಳಗೆ ವ್ಯವಹಾರ ನಡೆಸುವವರು ನಮ್ಮ ರಾಜ್ಯದ ಜೈವಿಕ ಕೃಷಿ ಕೇಂದ್ರದಿಂದ ಪ್ರಮಾಣಪತ್ರ ಪಡೆದರೆ ಸಾಕು.

ವಿಳಾಸಗಳು :
ಐ.ಎಂ.ಓ. ಕಂಟ್ರೋಲ್,
೧೩೧೪, ಡಬಲ್‌ರೋಡ್
ಇಂದಿರಾನಗರ ೨ನೇ ಹಂತ, ಬೆಂಗಳೂರು-೫೬೦೦೩೮
ದೂರವಾಣಿ : ೦೮೦-೨೫೨೮೫೮೮೩

ಸ್ಕಾಲ್ ಇಂಟರ್‌ನ್ಯಾಷನಲ್
೧೯೧, ಮೊದಲನೇ ಮುಖ್ಯರಸ್ತೆ. ಮಹಾಲಕ್ಷ್ಮಿ ಬಡಾವಣೆ
ಬೆಂಗಳೂರು-೫೬೦೦೮೬
ದೂರವಾಣಿ : ೦೮೦-೨೩೪೯೧೯೨೮

ಬಯೋಟೆಕ್ನಾಲಜಿ ಸೆಂಟರ್
ತೋಟಗಾರಿಕಾ ವಿಭಾಗ
ಹುಳಿಮಾವು, ಬೆಂಗಳೂರು-೫೬೦೦೭೬

ನ್ಯಾಷನಲ್ ಸೆಂಟರ್ ಫಾರ್ ಆರ್ಗ್ಯಾನಿಕ್ ಫಾರ್‍ಮಿಂಗ್
ಬಳ್ಳಾರಿ ರಸ್ತೆ, ಹೆಬ್ಬಾಳ, ಬೆಂಗಳೂರು

ಅನಿವಾರ್ಯ ಪ್ರಸಂಗ

ತೀರಾ ತೀರಾ ಅನಿವಾರ್ಯವಾದಾಗ ಹಾಗೂ ರೋಗನಿರೋಧಕಗಳಾಗಿ ನಿಷೇದಿತ ವಸ್ತುಗಳನ್ನು ಬಳಸಿದರೆ, ಅಂತಹ ಕೃಷಿಕನು, ಪಶುಪಾಲಕನು, ಕೃಷಿ ಉತ್ಪನ್ನಗಳನ್ನು, ಹೈನನ್ನು ಸಾವಯವವೆಂದು ನೀಡಬಾರದು.  ಆ ವರ್ಷದ ಫಸಲನ್ನು, ಹೈನನ್ನು ಸಾವಯವದಡಿಯಲ್ಲಿ ನೀಡದೇ, ಮುಂದಿನ ಬಾರಿ ಮತ್ತೆ ಸಾವಯವ ಮಾಡಲು ಪ್ರಯತ್ನಿಸಬಹುದು.  ಒಂದೊಮ್ಮೆ ಹುಂಬತನದಿಂದ ನೀಡಿ ಸಿಕ್ಕಿಹಾಕಿಕೊಂಡರೆ ಮುಂದೆಂದೂ ಪ್ರಮಾಣಪತ್ರ ಪಡೆಯುವಂತಿಲ್ಲ.

ಪ್ರಮಾಣಪತ್ರದ ರದ್ದು

ಸಾವಯವ ಪದಾರ್ಥಗಳನ್ನು ಪರೀಕ್ಷೆ ಮಾಡಿದಾಗ ನಿಷೇಧಿತ ವಸ್ತುಗಳ ಸಶೇಷ ಕಂಡುಬಂದರೆ ಮೊದಲು ಅವುಗಳ ಪ್ರಮಾಣ ದಾಖಲಿಸಬೇಕು.  ಶೇಕಡಾ ಐದಕ್ಕೂ ಹೆಚ್ಚಿದ್ದರೆ ಪ್ರಮಾಣಪತ್ರ ನೀಡಿದ ಸಂಸ್ಥೆಯ ತಪಾಸಣೆ ಮಾಡುವವರು ನಿಜವಾದ ಕಾರಣ ಹುಡುಕಲು ಜಮೀನಿಗೆ ಬರುತ್ತಾರೆ.  ಇವರ ವರದಿಯ ಆಧಾರದ ಮೇಲೆ ಸರಿಪಡಿಸಿಕೊಳ್ಳುವಿಕೆ ಅಥವಾ ಪ್ರಮಾಣಪತ್ರದ ರದ್ಧತಿ ನಡೆಯುತ್ತದೆ.

ಸಾವಯವ ಕೃಷಿಯಲ್ಲಿ ಬಳಸಬಹುದಾದ ವಸ್ತುಗಳು

ಆಲ್ಕೋಹಾಲ್, ಇಥೆನಾಲ್, ಐಸೊಪ್ರೊಪೆನಾಲ್‌ಭರಿತ ವಸ್ತುಗಳು, ಶುದ್ಧ ಕುಡಿಯುವ ನೀರಿನ ಕಾಯ್ದೆಗನುಗುಣವಾಗಿ ಕ್ಲೋರಿನ್ ವಸ್ತುಗಳು, ಹೈಡ್ರೋಜನ್ ಥೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಡ್, ಕ್ಲೋರಿನ್ ಡೈ ಆಕ್ಸೈಡ್, ಕ್ಯಾಲ್ಸಿಯಂ ಹೈಪೋಕ್ಲೋರೈಟ್, ಸೋಪು ದ್ರಾವಣಗಳು, ಸಸ್ಯಜನ್ಯ ಔಷಧಿಗಳು, ಕಳೆನಿವಾರಕ ಯಂತ್ರಗಳು, ಸಸ್ಯಜನ್ಯ ಕಳೆ, ಕೀಟ, ರೋಗನಿವಾರಕಗಳು ಯಾವುದೇ ಮುಚ್ಚಿಗೆಗಳು (ಪ್ಲಾಸ್ಟಿಕ್, ಪತ್ರಿಕೆಗಳು) ಇತ್ಯಾದಿ ಸೇರಿವೆ.

ಪ್ರಾಣಿಗಳಿಗೆ ಮಾತ್ರ ಬಳಸುವ ರಾಸಾಯನಿಕಗಳು

ಇಲಿ ಕೊಲ್ಲಲು, ಕೀಟ ಬಲೆಗಳು (ಅವುಗಳಿಗೆ ಉಪಯೋಗಿಸುವ ಅಮೋನಿಯಂ ಕಾಬೋನೇಟ್), ಬೋರಿಕ್ ಆಸಿಡ್ (ಬೆಳೆಗಳಿಗೆ ಹಾಗೂ ಆಹಾರ ಪದಾರ್ಥಗಳಿಗೆ ಸೋರದಂತೆ) ಸಲ್ಫರ್, ಎಣ್ಣೆಗಳು, ಫೆರೋಮೋನ್ಸ್, ವಿಟಮಿನ್ ಡಿ೩, ಕಾಪರ್, ಕಾಪರ್ ಸಲ್ಫೇಟ್, ಹೈಡ್ರೇಟೆಡ್ ಲೈಮ್, ಸುದ್ದಿ, ಟೆಟ್ರಾಸೈಕ್ಲಿನ್ (ಬೆಂಕಿ ರೋಗಕ್ಕೆ), ನೀರಿನ ಸಸ್ಯಗಳ ಕಷಾಯ, ಹ್ಯುಮಿಡ್ ಆಸಿಡ್, ಮ್ಯಾಗ್ನೀಷಿಯಂ ಸಲ್ಫೇಟ್, ಮೈಕ್ರೋನ್ಯೂಟ್ರಿಯಾಟ್ಸ್ (ಮಬ್ಬು ಪರೀಕ್ಷೆ ಮಾಡಿ ಅಗತ್ಯವಿದ್ದರೆ ಮಾತ್ರ.  ಆದರೂ ನೈಟ್ರೈಟ್ ಅಥವಾ ಕ್ಲೋರೈಡ್ ರೂಪದಲ್ಲಿ ಕೊಡಲು ಅನುಮತಿ ಇಲ್ಲ) ಕರಗಬಲ್ಲ ಬೋರಾನ್ ವಸ್ತುಗಳು, ಸಲ್ಪೇಟ್ಸ್, ಕಾರ್ಬೋನೇಟ್ಸ್, ಆಕ್ಸೈಡ್ಸ್, ಸಿಲಿಕೃಟ್ಸ್ ಆಫ್ ಜಿಂಕ್, ಕಬ್ಬಿಣ, ಮ್ಯಾಂಗನೀಸ್, ಮಾಲಿಬ್ಡಿನಮ್, ಸೆಲೆಸಿಯಮ್ ಹಾಗೂ ಕೊಬಾಲ್ಟ್ ಪಿ.ಎಚ್. ೩.೫ ಇದ್ದದ್ದನ್ನು ಸರಿಪಡಿಸಬಹುದಾದ ಮೀನುಗೊಬ್ಬರ, ವಿಟಮಿನ್ ಆ, ಇ ಮತ್ತು ಉ.  ಬೆಳೆ ಬೆಳವಣಿಗೆಯ ನಿಯಂತ್ರಕಗಳು (ಉದಾಃ ಇಥಿಲೀನ್ ಪೈನಾಪಲ್‌ನ ಹೂವುಗಳು ಬೇಗ ಬರುವಂತೆ ಮಾಡುತ್ತವೆ) ಕೊಯ್ದು ನಂತರ ಹಾಳಾಗದಂತೆ ಬಳಸುವ ಲಿಗ್ನಿನಿನ್ ಸಲ್ಫೋನೇಟ್, ಸೋಡಿಯಂ ಸಿಲಿಕೇಟ್ (ಹಣ್ಣುಗಳಿಗೆ) ಮತ್ತು ಪರಿಸರ ರಕ್ಷಣಾ ನಿಯಮಕ್ಕೆ ಅನುಗುಣವಾದ ಯಾವುದೇ ವಸ್ತುಗಳೂ ಸಾವಯವ ಕೃಷಿಗೆ ಮಾನ್ಯ.

ಸಾವಯವ ಕೃಷಿಯಲ್ಲಿ ನಿಷೇಧಿತ ವಸ್ತುಗಳು

ಸುಟ್ಟ ಗೊಬ್ಬರ, ಕಾರ್ಖಾನೆಯ ಬೂದಿ ಇತ್ಯಾದಿ ಪಿವಿ.ಸಿ. ಪ್ಲಾಸ್ಟಿಕ್ ಆರ್ಸೆನಿಕ್, ಲೆಡ್, ತಂಬಾಕುಪದಾರ್ಥಗಳು, ಪೊಟ್ಯಾಷಿಯಂ ಕ್ಲೋರೈಡ್, ಸೋಡಿಯಂ ನೈಟ್ರೇಟ್ ಇವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಪಶುಪಾಲನೆಗೂ ಪ್ರಮಾಣಪತ್ರ ಉಂಟು!

ಅಜ್ಜಂಪುರದಲ್ಲಿರುವ ಅಮೃತಮಹಲ್ ತಳಿಗಳ ಸಂರಕ್ಷಾಣ ಕೇಂದ್ರ ಅಪ್ಪಟ ಸಾವಯವ ಪಶುಪಾಲನೆ ಮಾಡುತ್ತಿದೆ.  ಬಿಟ್ಟರೆ ನಮ್ಮ ಯಾವ ಡೈರಿಗಳೂ ಸಾವಯವವಲ್ಲ.  ಕೋಳಿ ಫಾರಂಗಳು ಸಾವಯವವಲ್ಲ, ಆದರೆ ಕುರಿಹಿಂಡುಗಳು ಸಾವಯವಕ್ಕೆ ಹತ್ತಿರ.

ಹೀಗಿರುವಾಗ ಕೃಷಿಗೆ ಸಾವಯವ ಗೊಬ್ಬರವನ್ನು ಎಲ್ಲಿಂದ ತರುವುದು?  ಹೀಗಾಗಿ ನಾವೇ ಗೊಬ್ಬರ, ಕೀಟನಾಶಕಗಳನ್ನು ತಯಾರಿಸುವುದು ಅತ್ಯಗತ್ಯ.  ಅದು ಯಾವುದೇ ವಿಧಾನ ಆಗಿರಲಿ, ನಾವೇ ಕೃಷಿಯ ಎಲ್ಲಾ ಹಂತದಲ್ಲೂ ಭಾಗಿಯಾಗಿರುವುದೇ ಸಾವಯವವೆನಿಸುತ್ತದೆ. ಅದೇ ರೀತಿ ಪಶುಪಾಲನೆಯೇ ಪ್ರಮುಖವಾದಾಗ, ಸಾವಯವ ಹಠವಾದರೆ ಇದೂ ಸಾಧ್ಯ.

ದೇಶದಾದ್ಯಂತ ನಾಟಿ ಹಸುಗಳನ್ನು ಉಳಿಸುವ, ಬೆಳೆಸುವ ಆಂದೋಲನ ಹೆಚ್ಚಾಗುತ್ತಿದ್ದಂತೆ ಸಾವಯವ ಪಶುಪಾಲನೆಗೂ ಮಹತ್ವ ಹೆಚ್ಚುತ್ತಿದೆ.

ಸಾವಯವ ಪಶುಪಾಲನೆಗೆ ಪ್ರಮಾಣಪತ್ರ ಪಡೆಯಲು ಬಯಸುವವರು ಪಾಲಿಸಬೇಕಾದ ನಿಯಮಾವಳಿಗಳು ಹೀಗಿವೆ.

 • ಇಲ್ಲಿ ದೇಸಿ ಹಸು ಹಾಗೂ ವಿದೇಶಿ ಹಸುಗಳೆಂಬ ಬೇಧವಿಲ್ಲ.  ಹಸು-ಎಮ್ಮೆ-ಕುರಿ ಯಾವುದೇ ಆಗಿದ್ದರೂ ಅವು ಪ್ರಾರಂಭದ ಮೂರು ಕರಾವು ಆದಮೇಲೆ ಪರಿಗಣಿಸಲಾಗುತ್ತದೆ.  ಅಲ್ಲಿಯವರೆಗೂ ಆ ಹಸು, ಎಮ್ಮೆಗಳನ್ನು ಸಂಪೂರ್ಣ ಸಾವಯವದಲ್ಲೇ ಬೆಳೆಸಿರಬೇಕು.
 • ತಳಿವರ್ಧನೆಗೆ ತರುವ ಹೋರಿಗಳೂ ಸಹ ಸಾವಯವದಲ್ಲೇ ವರ್ಧನೆಯಾದ ಮೂರನೇ ತಲೆಮಾರಾಗಿದ್ದರೆ ಒಳ್ಳೆಯದು.  ಇಲ್ಲದಿದ್ದರೆ ಸ್ವತಃ ಬೆಳೆಸಬೇಕು.
 • ರಾಸಾಯನಿಕದಲ್ಲಿ ಬೆಳೆದ ಮೇವನ್ನು ಉಪಯೋಗಿಸಲೇಬಾರದು.  ಕೊಳಚೆ ನೀರಲ್ಲಿ ಬೆಳೆದ ಮೇವನ್ನು ಉಪಯೋಗಿಸಬಾರದು.  ಪಶು ಆಹಾರ ಬಳಸುವವರು ಮನೆಯಲ್ಲೇ ಸಾವಯವದಲ್ಲಿ ಬೆಳೆದ ಧಾನ್ಯ ಹಾಗೂ ಇತರ ವಸ್ತುಗಳನ್ನು ಬಳಸಿ ತಯಾರಿಸಿಕೊಳ್ಳಬೇಕು.  ಕಂಪೆನಿಗಳ ಪಶು ಆಹಾರ ಕೊಳ್ಳಲೇಬಾರದು.
 • ಪಶು ಔಷಧಿಗಳು, ಹಾರ್ಮೋನುಗಳು ಹಾಗೂ ಬೆದೆ ಬರಲು ಬಳಸುವ ಔಷಧಗಳು ಹೀಗೆ ಯಾವುದನ್ನೂ ಬಳಸಬಾರದು.
 • ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಇರಬಾರದು.  ಯೂರಿಯಾ ಹಾಗೂ ಇತರ ವಸ್ತುಗಳ ಬಳಕೆ ಮಾಡಬಾರದು.  ಮಾಂಸದ ಆಹಾರಬಳಕೆಯನ್ನು ಮಾಡಬಾರದು.
 • ಆಯಾ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.  ಅವು ರೋಗನಿರೋಧಕ, ಪ್ರಾದೇಶಿಕ ಹಾಗೂ ಉತ್ತಮ ತಳಿಗಳಾಗಿರಬೇಕು.
 • ಅವುಗಳಿಗೆ ಅಗತ್ಯವಾಗಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಅವಶ್ಯಕ ಪದಾರ್ಥಗಳನ್ನು ನೀಡಬೇಕು.  ಆ ಪದಾರ್ಥಗಳು ಸಾವಯವ ಪಶುಪಾಲನಾ ಸಮೂಹದಿಂದ ಪ್ರಮಾಣೀಕರಿಸಿದ್ದಾಗಿರಬೇಕು.
 • ಅವುಗಳ ವಸತಿ ಪ್ರದೇಶ ಹಿಂಸಾದಾಯಕವಾಗಿರದೆ ಸಹಜ ಬೆಳವಣಿಗೆಗೆ ಕಾರಣವಾಗಿರಬೇಕು.  ಸ್ವತಂತ್ರವಾಗಿ ಓಡಾಡಲು, ಕಾಲಾಡಲು ಅನುಕೂಲಕರವಾಗಿರಬೇಕು.
 • ಒಂದೊಮ್ಮೆ ವಸತಿಗೃಹ ನಿರ್ಮಿಸಿದರೆ ಗಾಳಿ, ಬೆಳಕು ಯಥೇಚ್ಛವಾಗಿ ಬರುವಂತಿರಬೇಕು.  ನೆರಳು, ತಂಪು ಇರಬೇಕು.  ಸೂಕ್ತ ವಾತಾವರಣವೂ ಅಗತ್ಯ.  ಹೊರಾಂಗಣ, ಕಾಲಾಡುವ ವ್ಯವಸ್ಥೆ ಇವೂ ಅವಶ್ಯಕ.  ಮಲಗುವ ಪ್ರದೇಶ ಸದಾ ಒಣಗಿರಬೇಕು.  ಉಷ್ಣಾಂಶ ನಿಯಂತ್ರಣ ವ್ಯವಸ್ಥೆ, ಗಾಳಿಯಾಡುವ ವ್ಯವಸ್ಥೆ ಇವೆಲ್ಲಾ ಕಡ್ಡಾಯ.
 • ಕಾಲಕ್ಕೆ ಸರಿಯಾಗಿ ವ್ಯಾಕ್ಸಿನ್‌ಗಳನ್ನು ಹಾಕಿಸಬೇಕು.   ಪ್ರಮಾಣಪತ್ರ ನೀಡುವ ಸಂಸ್ಥೆ ಸೂಚಿಸಿದ ಔಷಧಿ ನೀಡುವುದೂ ಮುಖ್ಯ.
 • ಫೆಡರಲ್ ಫುಡ್, ಡ್ರಗ್ ಹಾಗೂ ಕಾಸ್ಮೆಟಿಕ್ ಆಕ್ಟ್ ರೂಪಿಸಿದ ನಿಯಮಗಳಿಗೆ ತಕ್ಕಂತೆ ಪಶು ಔಷಧಿ, ಆಹಾರಗಳನ್ನು ಬಳಸಬಹುದು.
 • ಪಶುಪಾಲನೆಯಲ್ಲಿ ರಾಸಾಯನಿಕ ಅಥವಾ ನಿಷೇಧಿಸಿದ ಆಹಾರಪದಾರ್ಥ, ಔಷಧಗಳನ್ನು ಬಳಸಿದರೆ ತಕ್ಷಣ ತಿಳಿಯುತ್ತದೆ.
 • ಉಳಿದಂತೆ ಸಾವಯವ ಕೃಷಿ ಪ್ರಮಾಣಪತ್ರ ನೀಡುವಾಗ ಅನುಸರಿಸುವ ವಿಧಾನಗಳೇ ಇಲ್ಲಿಯೂ ಅನ್ವಯವಾಗುತ್ತವೆ.
 • ಪಶುಪಾಲನೆಯಲ್ಲಿ ಪ್ರತಿ ಪಶುಗಳಿಗೂ (ಹಸು, ಎಮ್ಮೆ, ಕುರಿ ಇತ್ಯಾದಿ) ಪ್ರತ್ಯೇಕ ದಾಖಲಾತಿ ಇರಬೇಕು.  ಒಟ್ಟು ಖರ್ಚು, ವೆಚ್ಚ, ಉತ್ಪಾದನೆ ದಾಖಲಾತಿಗಳೂ ಇರಬೇಕು.  ಯಾವ ಸಣ್ಣ ವಿವರವನ್ನೂ ಬಿಡಬಾರದು.
 • ಹಸುಗಳನ್ನು ಮೇಯಲು ಹೊರಗೆ ಬಿಟ್ಟಾಗ ಪ್ಲಾಸ್ಟಿಕ್ ಸೇವನೆ, ರಾಸಾಯನಿಕ ಮೇವುಗಳ ಸೇವನೆಗೆ ಅವಕಾಶವಿರದಂತೆ ನೋಡಿಕೊಳ್ಳುವುದು ಅಗತ್ಯ.
 • ಪಶುಪಾಲನೆಯೊಂದಿಗೆ ಪಶು ಉತ್ಪನ್ನಗಳೂ ಸಾವಯವವಾಗಿರುವಂತೆ ನೋಡಿಕೊಳ್ಳಬೇಕು.  ಮುಖ್ಯವಾಗಿ ಹಾಲು ಮತ್ತು ಹಾಲಿನುತ್ಪನ್ನಗಳು, ಗೊಬ್ಬರ ಇವುಗಳು ಸಾವಯವವೆಂದು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.  ಉದಾಃ ಸುಟ್ಟ ಗೊಬ್ಬರಕ್ಕೆ ಮಾನ್ಯತೆ ಇಲ್ಲ.  ಹಾಲಿನ ಉತ್ಪನ್ನಗಳನ್ನು ತಯಾರಿಸುವಾಗ ಮಾನ್ಯತೆ ಹೊಂದಿದ ಬಣ್ಣ, ಸಾವಯವ ಸಕ್ಕರೆ, ಬೆಲ್ಲ ಹಾಗೂ ಇತರ ಪದಾರ್ಥಗಳನ್ನೇ ಬಳಸಬೇಕು.
 • ಪಶು ಉತ್ಪನ್ನಗಳನ್ನು ಮಾರುವುದಿದ್ದರೆ, ಉತ್ಪತ್ತಿ ಮಾಡಿದ ಸಮಯ, ಹಾಳಾಗದೇ ಇರುವ ಸಮಯ, ಅದರಲ್ಲಿ ಬಳಸಿದ ವಸ್ತುಗಳು, ಪ್ರಮಾಣ ಹೀಗೆ ಪ್ರತಿಯೊಂದನ್ನೂ ನಮೂದಿಸಿರಬೇಕು.  ಜೊತೆಗೆ ಆ ಇತರೆ ವಸ್ತುಗಳು ಸಾವಯವವೆನ್ನುವ ಪ್ರಮಾಣಪತ್ರವೂ ಇರಬೇಕು.
 • ಸಾವಯವ ಪಶುಪಾಲನೆಯಲ್ಲಿ ಆಸ್ಪಿರಿನ್, ಕ್ಲೋರಿನ್‌ಭರಿತ ವಸ್ತುಗಳು (ಕುಡಿಯುವ ನೀರಿನಲ್ಲಿರಬೇಕಾದ ಪ್ರಮಾಣದಷ್ಟು ಮಾತ್ರ) ಗ್ಲೂಕೋಸ್, ಆಲ್ಕೋಹಾಲ್‌ಗಳು, ಗ್ಲಿಸರಿನ್, ಅಯೋಡಿನ್, ಕೆಲವೇ ಸಂದರ್ಭಗಳಲ್ಲಿ ಮಾತ್ರ ಆಕ್ಸಿಟೋಸಿನ್ ಹಾಗೂ ಪಾರಸೈಟಿಸೈಡ್ಡ್, ವ್ಯಾಕ್ಸಿನ್‌ಗಳು, ಕಾಪರ್ ಸಲ್ಫೇಟ್, ವಿಟಾಮಿನ್ಸ್ ಇವುಗಳನ್ನೆಲ್ಲಾ ಬಳಸಬಹುದು.

ಕರ್ನಾಟಕ ರಾಜ್ಯ ಸಾವಯವ ತೋಟಗಾರಿಕೆ ದೃಢೀಕರಣ

ಇಸವಿ ೨೦೦೪ರಲ್ಲಿಯೇ ರಾಜ್ಯದಲ್ಲಿ ಸಾವಯವ ಕೃಷಿ ನೀತಿಯನ್ನು ರೂಪಿಸಲಾಯಿತು.  ಅದರ ಪ್ರಕಾರ ಪ್ರತಿ ಜಿಲ್ಲೆಯಲ್ಲೂ ನೂರಾರು ಎಕರೆ ಜಮೀನನ್ನು ಸಾವಯವವಾಗಿ ಪರಿವರ್ತಿಸಲಾಗುತ್ತಿದೆ. ಸಮಗ್ರ ಪೀಡೆ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆಯ ಮಹತ್ವವನ್ನು  ರೈತ ಪಾಠಶಾಲೆಗಳ ಮುಖಾಂತರ ಹೇಳಿಕೊಡಲಾಗುತ್ತಿದೆ.  ಸಾವಯವ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸಲು ಪ್ರಯತ್ನ ಸಾಗಿದೆ.  ಇದಕ್ಕೆಲ್ಲಾ ರೈತರ ಸಹಕಾರ, ವಿಶ್ವಾಸ ಅತ್ಯಗತ್ಯ.

ಈ ಪ್ರಮಾಣಪತ್ರವನ್ನೂ ಸಹ ವೈಯಕ್ತಿಕ ಹಾಗೂ ಗುಂಪು ವ್ಯವಸ್ಥೆ ಹೀಗೆ ಎರಡು ವಿಭಾಗದಲ್ಲಿ ಕೊಡಲಾಗುತ್ತದೆ.

ವೈಯಕ್ತಿಕ ವ್ಯವಸ್ಥೆ

ಸಾವಯವ ಕೃಷಿಕರು ಅನುಸರಿಸುತ್ತಿರುವ ಬೇಸಾಯ ಕ್ರಮಗಳು, ಬೆಳೆ, ಸಾವಯವ ಕೃಷಿ ಪ್ರಾರಂಭಿಸಿದ ವರ್ಷ, ನಾಟಿ/ಬಿತ್ತನೆ ದಿನಾಂಕ, ಬೀಜ ಖರೀದಿ ಮಾಹಿತಿ ಹೀಗೆ ಏನೆಲ್ಲಾ ದಾಖಲೆ ಮಾಡಬೇಕು.  ಈ ರೀತಿಯ ದಾಖಲಾತಿ ಪುಸ್ತಕ ಜೈವಿಕ ಕೃಷಿ ಸೊಸೈಟಿಯಲ್ಲಿ ದೊರೆಯುತ್ತದೆ.

ಇದಕ್ಕಾಗಿ ನೋಂದಾಯಿತ ಸಾವಯವ ಕೃಷಿಕರ ಸಂಘಗಳು, ಬಳಗಗಳು, ಕ್ಲಬ್‌ಗಳಿಗೆ ದಾಖಲಾತಿ ನಿರ್ವಹಿಸಲು ೨೫೦ರಿಂದ ೫೦೦ ರೂಪಾಯಿಗಳವರೆಗೆ ನೀಡಲಾಗುತ್ತದೆ.  ಗುಣಮಟ್ಟ ಪರಿಶೀಲನೆ, ಸಲಹೆ ಮತ್ತು ನಿರ್ದೇಶನಗಳನ್ನು ಜೈವಿಕ ಕೃಷಿ ಸೊಸೈಟಿ ಮುಖಾಂತರ ನಿರ್ವಹಿಸಲಾಗುವುದು.  ಇವರು ನೇಮಿಸಿದ ಪರಿವೀಕ್ಷಕರು ವರ್ಷಕ್ಕೆ ಮೂರು ಸಾರಿ ವೈಯಕ್ತಿಕವಾಗಿ ಸಾವಯವ ಕೃಷಿ ಮಾಡುತ್ತಿರುವವರ ಕಾರ್ಯವ್ಷೈಖರಿ, ದಾಖಲಾತಿ ಹಾಗೂ ಕ್ಷೇತ್ರ ಪರಿಶೀಲನೆ ಮಾಡುತ್ತಾರೆ.

ನಿಯಮಪಾಲನೆ ಮಾಡಿರುವ ಕೃಷಿಕರ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾವಯವ ಗುರುತು ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ.  ರಾಜ್ಯಮಟ್ಟದ ಜೈವಿಕ ಕೃಷಿ ಸೊಸೈಟಿಯಲ್ಲಿಯೂ ಮಾರಾಟ ಮಳಿಗೆಗಳಲ್ಲಿಯೂ ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು.

ಗುಂಪು ವ್ಯವಸ್ಥೆ

ಗುಂಪು ದೃಢೀಕರಣ ಮಾಡಿಸುವವರು, ಕನಿಷ್ಠ ೫೦ ಹೆಕ್ಟೇರ್ ಪ್ರದೇಶ ವ್ಯಾಪ್ತಿಯ ೫೦ ರೈತರನ್ನು ಸೇರಿಸಿ ಸಂಘ ಮಾಡಿಕೊಳ್ಳುವುದು ಒಳಿತು.  ಇವರ ಉತ್ಪನ್ನಗಳ ದೃಢೀಕರಣಕ್ಕೆ ಪ್ರತಿ ರೈತರಿಗೆ ತಲಾ ಒಂದು ಸಾವಿರ ರೂಪಾಯಿಗಳ ಆರ್ಥಿಕ ಬೆಂಬಲ ನೀಡಲಾಗುತ್ತದೆ.

ರಾಜ್ಯ ಸೊಸೈಟಿ ನೀಡುವ ದಾಖಲಾತಿ ಪುಸ್ತಕದಲ್ಲಿ ಪ್ರತಿಯೊಂದು ವಿವರಗಳಿಗೂ ಸೂಕ್ತ ವರದಿಗಳನ್ನು ಮಾಡಿರಬೇಕು.

ಸರ್ಕಾರದಿಂದ ಅಂಗೀಕೃತಗೊಂಡ ಸಂಸ್ಥೆಗಳು ಇದರ ಉಸ್ತುವಾರಿ ನಿರ್ವಹಿಸುತ್ತವೆ.  ಗುಂಪಿಗೆ ಮಾತ್ರ ಪ್ರಮಾಣಪತ್ರ ನೀಡಲಾಗುತ್ತದೆ.  ಗುಂಪಿನಲ್ಲಿರುವ ರೈತರು ತಮ್ಮ ಉತ್ಪನ್ನಗಳನ್ನು ಗುಂಪಿನ ಮೂಲಕವೇ ಮಾರಾಟ ಮಾಡಬೇಕು.  ಜೈವಿಕ ಕೃಷಿ ಸೊಸೈಟಿಯ ಮೂಲಕ ಸ್ಥಳೀಯ ಸಂಘ ಹಾಗೂ ಅಂತರರಾಷ್ಟ್ರೀಯ ಸಂಘಗಳ ಸಂಪರ್ಕ ಮಾಡಿಕೊಡಲಾಗುತ್ತದೆ.

ಸಾವಯವ ಗುಂಪುಗಳಿಗೆ, ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗಾಗಿ ಅವಶ್ಯವಿರುವ ಮೂಲಭೂತ ಸೌಕರ್ಯಗಳು ಹಾಗೂ ಯತ್ರೋಪಕರಣಗಳಿಗೆ ಸಹಾಯಧನವಿದೆ.  ಸುಮಾರು ೧೦ ಲಕ್ಷದವರೆಗೂ ಸಹಾಯಧನ ನೀಡಲಾಗುತ್ತದೆ.

ಸಾವಯವ ತೋಟಗಾರಿಕೆ ಮಾಡುವುದರಿಂದ ಹಿಡಿದು ಉತ್ಪನ್ನಗಳಿಗೆ ಪ್ರಮಾಣಪತ್ರ ಹಾಗೂ ಮಾರುಕಟ್ಟೆ ಒದಗಿಸುವವರೆಗೂ ರಾಜ್ಯದ ತೋಟಗಾರಿಕಾ ಯೋಜನೆಯಲ್ಲಿ ಅವಕಾಶವಿದೆ.

ಸತತ ಎರಡು ವರ್ಷಗಳವರೆಗೆ ಸಾವಯವ ಕೃಷಿ ಮಾಡಿದವರಿಗೆ ಅಥವಾ ಎರಡು ವರ್ಷಗಳ ಹಿಂದಿನಿಂದಲೂ ಸಾವಯವ ಕೃಷಿ ಮಾಡುತ್ತಿರುವವರಿಗೆ ಪ್ರಮಾಣಪತ್ರ, ಪ್ರೋತ್ಸಾಹಧನ ಹಾಗೂ ಇತರ ಸಹಾಯಗಳನ್ನು ನೀಡಲಾಗುತ್ತದೆ.

ಇಂತಹ ರೈತರು ಲಭ್ಯವಿಲ್ಲದಿದ್ದರೆ ಸಾವಯವ ಕೃಷಿಗೋಸ್ಕರ ಪರಿಕರಗಳನ್ನು ಮಾಡುವ (ಎರೆಗೊಬ್ಬರ, ಡೈಜೆಸ್ಟರ್ ಇತ್ಯಾದಿ) ರೈತರಿಗೆ ಸಹಾಯಧನ ನೀಡಲಾಗುತ್ತದೆ.

ರಾಜ್ಯ ಸಾವಯವ ಕಾರ್ಯಕ್ರಮ

ರಾಜ್ಯದ ಪರಿಸರ ರಕ್ಷಣಾ ಕಾಯ್ದೆ ಅನ್ವಯ ರಾಜ್ಯದ ಸಾವಯವ ಕೃಷಿ ಹಾಗೂ ಆಹಾರೋತ್ಪಾದನೆಗಳು ಮತ್ತು ಮಾರಾಟದ ಕಾರ್ಯಕ್ರಮಗಳನ್ನು ಸಿದ್ಧಗೊಳಿಸಲಾಗಿದೆ. ಈ ಕಾರ್ಯಕ್ರಮವನ್ನು ನೋಂದಾಯಿತ ಕೃಷಿ ಸಂಸ್ಥೆಗಳು, ಬಳಗಗಳು, ಕ್ಲಬ್‌ಗಳು ನಡೆಸಬಹುದು.  ಪ್ರತಿ ಕಾರ್ಯಕ್ರಮಕ್ಕೂ ಸೂಕ್ತ ಸಹಾಯಧನ ನೀಡಲಾಗುತ್ತದೆ.

ತರಬೇತಿ, ಪ್ರಚಾರ ಹಾಗೂ ಕ್ಷೇತ್ರ ವೀಕ್ಷಣೆ

ಸಾವಯವದ ಬಗ್ಗೆ ನಿಖರ ಮಾಹಿತಿ, ರಾಸಾಯನಿಕ ವಿಷದ ತಿಳುವಳಿಕೆ, ತಳಿಗಳ ಸಂರಕ್ಷಣೆ, ಅಭಿವೃದ್ಧಿ, ಆಹಾರ, ಆರೋಗ್ಯ ಹೀಗೆ ಏನೆಲ್ಲಾ ವಿಷಯಗಳ ಕುರಿತ ಒಂದು ದಿನದ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಕ್ಷೇತ್ರ ಭೇಟಿ ಇವನ್ನೆಲ್ಲಾ ನಡೆಸಬೇಕು.

ಇದನ್ನು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮಮಟ್ಟದಲ್ಲಿ ನಡೆಸಬೇಕು.  ಸಾವಯವ ಕೃಷಿಕರ ಜಮೀನಿನಲ್ಲಿಯೇ ನಡೆಸಬಹುದು.  ಜಿಲ್ಲಾಮಟ್ಟದಲ್ಲಿ ೧೦೦ ಪ್ರತಿನಿಧಿಗಳು, ತಾಲ್ಲೂಕು/ಗ್ರಾಮಮಟ್ಟದಲ್ಲಿ ೫೦ ಪ್ರತಿನಿಧಿಗಳು ಭಾಗವಹಿಸಬೇಕು.

ಸ್ಥಳೀಯ ಪತ್ರಿಕೆಗಳಲ್ಲಿ ತರಬೇತಿಯ ಬಗ್ಗೆ ಪ್ರಕಟಣೆ ನೀಡಬೇಕು.ತಜ್ಞರಿಂದ ವಿಷಯ ಮಂಡನೆ, ಸಂವಾದ ಇರಬೇಕು.  ತರಬೇತುದಾರರಿಗೆ ರಾಜ್ಯಮಟ್ಟದಲ್ಲಿ ತರಬೇತಿ, ಪರಿಕರಗಳು ಎಲ್ಲವನ್ನೂ ನೀಡಲಾಗುವುದು.

ಹೀಗೆ ತರಬೇತಿ ಕಾರ್ಯಕ್ರಮ ನಡೆಸಬಯಸುವ ಸಂಸ್ಥೆಗಳು (ಸರ್ಕಾರಿ ಹಾಗೂ ಸರ್ಕಾರೇತರ) ಜಿಲ್ಲಾ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ರವರ ಅನುಮೋದನೆ ಪಡೆದು ರಾಜ್ಯ ತೋಟಗಾರಿಕಾ ಮಿಷನ್ ನಿರ್ದೇಶಕರಿಗೆ ಮಾಹಿತಿ ನೀಡಿ ಕಾರ್ಯಕ್ರಮ ನಡೆಸಬೇಕು ಹಾಗೂ ಒಂದು ವಾರದೊಳಗೆ ಲೆಕ್ಕಪತ್ರ ಸಲ್ಲಿಸಬೇಕು.