ದೊಡ್ಡನಮ್ಮ ಸೆಣನಮ್ಮ ದೊಡ್ಡ ಹೀಲ್ಸದ ನಮ್ಮ
ಹನ್ನೆಯ್ಡು ಬುಜಕೆ ಒಲಿನಮ್ಮ | ಮೆನನ
ಗಿರಿಯಪ್ಪ ನಾಮ ಜಗಕೆಲ್ಲ |
ಇಳಿಗೆದ್ದಿಲಿ ಗಳಿಲೆಂಬ ಗಣಿನಾಥ
ಚಿನ್ನದ ಕಣ ತನಗೆಂದೆ | ಗಣಿನಾಥ
ಒಳ್ಳೋಳ್ಳ ಕಲೆಗೆ ನಡೆದಾನ |

ಒಬ್ಬರ ಮನೆಯ ಬಚ್ಚಲ ಸಾರೀಸಿ
ಹಿಟ್ಟಿನಲ್ಲಿ ಬರಿಯೆ ಅಡಿಗರ | ಪಡಿಯರ
ತಂದೀಡ ಮುತ್ತೀನ ಪಣತೀಗೆ | ನೆರಿಯೋಳೆ
ಸೋದಿಸುಗೊಳ್ಳೆ ಉದಕವ |
ಹಾರೋರ ಮನಿಯಾ | ಆದೂಗಿ ಸಾರಿಸಿ
ಹಿಟ್ಟಿನಲ್ಲಿ ಬರಿಯೆ ಅಡಿಗಪ್ಪ ಪಡಿಯರ
ತಂದೀಡ ಮುತ್ತಿನ ಪಣತೀಗೆ | ನೆರಿಯೋಳೆ
ಸೋದಿಸುಗೊಳ್ಳೆ ಉದಕವ |

ಸತಿಸಾಪ ಜಪತಪಕ್ಕಾಗಿ ಕೂಳಿತಾಗೆ
ಗಂಗೆ ಬಂದೊಡನೆ ನುಡಿವಾದೆ |ಸತ್ತಿಸಪ್ಪ
ನೂರೊಂದು ಜಪವ ಮರತಾನೆ | ಸತಿಸಪ್ಪ
ಮಾಳೂಗಿ ಒಳುಗೆ ನೆಡುದಾನೆ | ಸತಿಸಪ್ಪ
ಹಣ್ಣಡಕೆ ಬೆಳಿಯೆಲೆ ತಡದಾನೆ | ಸತಿಸಪ್ಪ
ಉಕ್ಕಿನ ಕಯ್ ಕಡ್ಲಿ ತಡದಾನೆ | ಸತಿಸಪ್ಪ

ಮಳೂಗಿ ಒಳಗೆ ಬರುವಾನೆ |
ಮಾಳೂಗಿ ಒಳುಗೆ ಬರುವುದ್ನು ಸೆಮಂತ್ರಿ
ಮಾಳೂಗಿ ಒಳುಗೆ ನೆಡುದಾಳೆ | ಸೆಮಂತ್ರಿ
ಗಂದದುಂಡಿ ತೇದಿ ತುಂಬಾಳೆ | ಸೆಮಂತ್ರಿ
ಗಂಡನ ಕೊಡಿಯಾ ನಳಲಾಡಿ | ಸತಿಸಪ್ನ
ಹೆಂಡೂತಿ ಮೀಯಣ್ಕೆ ಸವ್ನಾಳೆ |

ಹಾಲದಮರ್ಕೆ ಹಾಲಬಳ್ಳಿ ಹಬ್ಬಿದಂತೆ
ಇಬ್ಬರೊಂದಾಗಿ ನೆಡದಾರೆ |
ತೇಂಗೀನ ಮರ್ಕೆ ತಂಗಾಳಿ ಬೀಸ್ದಂತೆ
ಇಬ್ಬರೊಂದಾಗೀ ನೆಡದಾರೆ | ಇಬ್ಬರು
ಮೂಡಣ ಗಂಗೀಗೆ ನೆಡದಾರೆ | ಇಬ್ಬರು
ಗಂಗೀ ತಡಿಯಲ್ಲೆ ನಿಲ್ವಾರೆ ಇಬ್ಬರು
ಹಣ್ಣು ಈಳ್ಯವ ಹರಗಾರೆ | ಇಬ್ಬರು
ತೆಂಗೀನ ಕಾಯ ಒಡದಾರೆ | ಇಬ್ಬರು
ದೀಪ ದೂಪೆಲ್ಲ ಕಸದಾರೆ | ಇಬ್ಬರು
ಗಂಗೀಗೆ ಕಯ್ಯಮುಗದಾರೆ |ಸತಿಸಪ
ಗಂಗೀತೇರತೆ ಮುಳಕಾನೆ |

ಮಿಂದಾನೊಗೆದಾನೆ ಮಿಂದೆ ಮಡಿಯುಟ್ಟಾನೆ
ಗಂಗೀ ತಡಿಯಲ್ಲೇ ನಿಲುವಾನೆ |
ಗಂಗೀ ತಡಿಯಲ್ಲೇ ನಿಲುವಾನೆ
ಗಂಗಿ ತಡಿಯಲ್ಲೇ ನಿಲುವುದ್ನು ಸೆಮಂತ್ರಿ
ಗಂಗೀಗೆ ಕಯ್ಯ ಮುಗಿದಾಳೆ |ಸೆಮಂತ್ರಿ
ಗಂಗೀ ತೆರತವ ಮುಳುಕಾಳೆ |

ಮಿಂದಾಳೊಗೆದಾಳ್ ಮಿಂದ ಮುಡಿಯುಟ್ಟಾಳೆ
ಎಣ್ಣೀ ಗಂಡೊಂದ ಇಡುವಾಳೆ | ಸೆಮಂತ್ರಿ
ನೆಣ್ಣೆಯ ಮಲ್ಲುಗಿಯ ಮುಡಿದಾಳೆ | ಸೆಮಂತ್ರಿ
ನೊಸಲಿಗೆ ಸಿರಿಗಂಧ ಇಡುವಾಳೆ ಸೆಮಂತ್ರಿ
ಗಂಗೀ ತೆರತವ ಮೊಗೆದಾಳೆ | ಸೆಮಂತ್ರಿ
ಸತಿಸಪ್ನ ಒಡನೋಗಿ ನಿಲುದಾಳು |

ಅಲದಮರ್ಕೆ ಹಾಲ್ಬಳ್ಳಿ ಹಬ್ಬೀದಂತ
ಇಬ್ಬರೊಂದಾಗಿ ಬರುವಾರೆ |ಸತಿ ಸತಸೆಮಂತ್ರೀ
ತಮ್ಮಲರಮನೆಗೆ ಬರುವಾರೆ ಸತಿಸಪ
ಲಾಗೊಂದು ಮಾತ ನುಡಿದಾನೆ |

ಕಾನೊಳಗೊಂದು ಕಟ್ಟೀಸು ದೇವಲ್ಯ
ಕಾನ ಕಲ್ ಕಂಬೇ ಒಲಿದಾವೆ |ಮಡದೀಕೇಳೆ
ಅದಕೊಂದು ಕಂಬ ತರೋಬೇಕೇ | ಮಡದೀ ಕೇಳೆ
ದರವಿ ಊಟಕೆ ಅನುಮಾಡು |

ನಿನ್ನಾನಾಗೊಂದು ತಮ್ಮಣಿ ಬಂದಿದ್ದ
ಹೆಮ್ಮರನತ್ತಿ ಅಂವ ಬಿದ್ದ | ಅಂದೇಳಿ
ನನಗೊಂದು ಜೋಯಿಸ ನುಡಿದೀದ |ದೆವರೆ
ನಾಬತ್ತೆ ನಿಮ್ಮ ಒಡ್ನಲ್ಲಿ |

ನಾ ಹೋಗುನ ದಾರೀಲಿ ಮಂಗ ಕಪಿಗಳಿರುಗು
ಅವಕಂಡರೆ ನೀನು ಹೆದರೂವೆ |ಸೆಮಂತ್ರಿ
ಬರಬೇಡ ನನ್ನ ಒಡ್ನಲ್ಲಿ |

ನೀವೋಗು ದಾರೀಲಿ ಮಂಗ ಕಪಿಗಳಿರಲಿ
ಅದಕಂಡರೆ ನಾನು ಹೆದರನೆ | ದೆವರೆ
ನಾಬತ್ತೆ ನಿಮ್ಮ ಒಡ್ನಲ್ಲಿ |

ನಾ ಹೋಗು ದಾರೀಲಿ ಸಿಂಗ ಸೀನಾಯರುಗು
ಅದಕಂಡು ನೀನು ಹೆದರೂವೆ | ಸೆಮಂತ್ರಿ
ಬರಬೇಡ ನನ್ನ ಒಡ್ನಲ್ಲಿ |

ನೀಹೋಗು ದಾರೀಲಿ ಸಿಂಗ ಸೀನಾಯಿರ್ಲಿ
ಅದಕಂಡು ನಾನು ಹೆದರನೆ | ದೆವರೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |

ಹೆಣ್ಣಾನಿ ಗಂಡಾನಿ ಸಿಬ್ಬಲಾಡುವಂಗೆ
ಅದಕಂಡು ನೀನು ಹೆದರೂವೆ | ಸೆಮಂತ್ರಿ
ಬರಬೇಡ ನನ್ನ ಒಡ್ನಲ್ಲಿ |

ಹೆಣ್ಣಾನಿ ಗಂಡಾನಿ ಸಿಬ್ಬಲಾಡುವಾಗೆ
ಅದಕಂಡು ನಾನು ಹೆದರನೆ | ದೆವರೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |

ಅರೂಣಿ  ಮೆಣಸು ಬೋರೆದ್ದಿ ಬರುವಂಗೆ
ಅದಕಂಡು ನೀನು ಹೆದರೂವೆ | ಸೆಮಂತ್ರಿ
ಬರಬ್ಯೆಡ ನನ್ನ ಒಡ್ನಲ್ಲಿ |

ಆರುಣ್ಣಿ ಮೆಣಸು ಬೋರೆದ್ದಿ ಬಾರಾಲಿ
ಅದಕಂಡು ನಾನು ಹೆದರನೆ | ದೆವರೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |

ಕಾದ ಕಲ್ಲಮೆನೆ ಕಾಸಿಟ್ಟಿರ್ ಕಾವಲಿ
ಅದಕಂಡು ನೀನು ಹೆದರೂವೆ | ಸೆಮಂತ್ರಿ
ಬರಬೇಡ ನನ್ನ ಒಡ್ನಲ್ಲಿ |

ಕಾದ ಕಲ್ ಮೆನೆ ಕಾಸಿಡ್ಲಿ ಕಾವಲ್ಲಿ
ಅದ ಕಂಡು ನಾನು ಹೆದರನೆ | ದೇವರೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |

ಅಡ್ಗ ಕಲ್ಲೇಟ್ಟುದ ಮೆಗೆ ಬೆಸಲ್ ಸುಡ್ವಾದು
ಅದ ಕಂಡು ನೀನು ಹೆದರೂವೆ | ಸೆಮಂತ್ರಿ
ಬರಬೇಡ ನನ್ನ ಒಡ್ನಲ್ಲಿ |

ಅಡ್ಗ ಕಲ್ಲಟ್ಟಲ್ಲಿ ಮೆನೆ ಬೆಸಲ್ ಸುಡಾಲಿ
ಸುಡು ಸುಡು ಬೊಕ್ಕಿಯೇ ನೆಗಿಯಾಲಿ | ದೆವರೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |

ಮುದ್ದುಳ್ಳ ಸೆಮಂತ್ರಿ ಮಾವ್ನ ವ್ರೀಗೇನೋಳೂವೆ
ಮಾವ್ನವ್ರು ಕೇಳಿದ್ರೆ ಮರ್ಗೂರು |

ಮಾವ್ನವ್ರ ಮನ್ಸನ್ನು ಕೇಳಲು ನಾ ಬಲ್ಲೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |

ಮಾನುಳ್ಳ ಸೆಮಂತ್ರಿ ಅತ್ಯೋರ್ಗೆನೇಳುವೆ
ಅತ್ಯವ್ರು, ಕೇಳಿದ್ರೆ ಮರ್ಗೂರು |

ಅತ್ಯವ್ರ ಮನಸ್ಸನ್ನು ಈಗೋಗಿ ತೆಳಗೂವೆ
ನಾ ಬತ್ತೆ ನಿಮ್ಮ ಒಡ್ನಲ್ಲಿ |
ಅಟ್ಟಂಬ ಮಾತ  ಕೇಳಿದಳೆ ಸೆಮಂತ್ರಿ
ಮಾಳೂಗಿ ಒಳಗೆ ನೆಡದಾಳೆ |

ಅಟ್ಟದ ಮೆನನಜೇರಗ ಸಾಲಕ್ಕೀಯ
ಅನ್ನ ಮೆಗ್ರಕೆ ಅನುಮಾಡಿ | ಸೆಮಂತ್ರಿ
ಹಾಲೂ ಪಾಯಸಕೆ ಅನುಮಾಡಿ |

ಬೇಲೀಯ ಮೆನನ ದಾರೇಹಿರೇಕಾಯಿ
ದಾರೀಯ ಒರ್ದಿ ಮಿಣ್ಸಿಕ್ಕಿ |
ಹಿತ್ಲ ಕಣಕೀನ ಬೊಟ್ಟು ಕೆಂಬರ್ಗಿಯ
ಬೊಟ್ಟೆಣ್ಣೆ ಕಿಟ್ಟಿ ಮಿಣ್ಸಿಟ್ಟಿ | ಸೆಮಂತ್ರಿ
ನೂರೊಂದು ಬಗೆಯ ಅಡಗೀಯ | ಸೆಮಂತ್ರಿ
ಅನುಮಾಡಿದಳೊಂದು ಗಳಿಗೇಲಿ| ಸೆಮಂತ್ರಿ
ಸೆಣ್ಣ ಗಿಂಡೀಲಿ ಉದಕವ ತಡಕಂಡಿ | ಸೆಮಂತ್ರಿ
ಸತಿಸಪ್ಗೆ ಉದಕಾ ಕೊಡುವಳು |

ಮಡದಿ ಕೊಟ್ಟುದಕವ ಬೆಗದಲ್ ತಡಕಂಡಿ
ಕಾಲು ಸಿರಿ ಮೊಕವಾ ತೊಳದಾನೆ | ಸತಿಸಪ
ಮಾಳೂಗಿ ಒಳುಗೆ ನೆಡದಾಳೆ |ಸೆಮಂತ್ರಿ
ರನ್ನದೊಂದ್ ಮಣೆಯ ಮಡುಗಾಳೆ | ಸತಿಸೊಪ
ಮಣೆಯ ಮೆನೋಗಿ ಕುಳಿತಾನೆ | ಸೆಮಂತ್ರಿ
ಕಿರಳ ಬಾಳೆಲಿಯ ತೊಳದಾಸಿ | ಸೆಮಂತ್ರಿ
ಅನ್ನ ಮೆಗ್ರವ ಬಡಸಾಳೆ | ಸೆಮಂತ್ರಿ
ಹಾಲು ಪಾಯಸವ ಬಡಸಾಳೆ | ಸೆಮಂತ್ರಿ
ತುಪ್ಪ ಸಕ್ಕರೆ ಎರದಾಳೆ |

ಉಂಡಾನೂಟವ ತೊಳದನೆ ಕಯ್ಬಾಯಿ
ತೂಗು ಮಂಚದಲೇ ಕುಳಿತಾನೆ |ಸೆಮಂತ್ರಿ
ತನ್ನೂಟಕೆ ತಾನೇ ಎಡೆಮಾಡಿ |ಸೆಮಂತ್ರಿ
ಊಟಕೆ ಹೋಗಿ ಕುಳಿತಾಳೆ |

ಉಂಡಳೂಟವ ತೊಳದಳೇ ಕಯ್ಬಾಯಿ
ಎಂಜಲ ಮಯ್ಲಿಗೆ ತೆಗದಾಳೆ |ಸತಿಸಪ
ಮಾಳೂಗಿ ಒಳುಗೆ ನೆಡದಾನೆ | ಸತಿಸಪ
ಉಕ್ಕೀನಕೊಡ್ಲಿ ತಡದಾನೆ | ಸತಿಸಪ
ಬಂದೀ ಬಾಗ್ಲಲ್ಲೆ ನಿಲುವಾನೆ |

ಮಾಳೂಗಿ ಒಳುಗೆ ನೆಡದಾಳೆ ಸೆಮಂತ್ರಿ
ತನ್ನ ಪಟ್ಟೀಯ ನೆರ್ದುಟ್ಟಿ | ಸೆಮಂತ್ರಿ
ಅತ್ಯಮ್ಮನರಮನಿಗೆ ನೆಡದಾಳೆ |

ರಾಜೀಕೊಬ್ಬನೆ ರಾಯ ನಿಮ್ಮ ಮಗ
ಹಾದೀಗೊಬ್ಬರೇ ಸವ್ನಾರೆ | ಅತ್ತಿಯೋರೆ
ನಾನಿಂದು ವನವ ತಿರ್ಗಬತ್ತೆ |

ಕಣ್ಣು ಕಯ್ಕಾಲಿಲ್ದೆ ಮನ್ನೆಗೋಳಾಡುವ
ನಮ್ಮ ಇನ್ನೆರು ಸಲಗಾರು |

ಕಣ್ಣು ಕಯ್ಕಾಲ್ಗೆ ಮುನ್ನ ಬ್ಯೆಸರಗುಣ ಬ್ಯೆಡ್ರಿ
ಅಲ್ಲಿದ್ದೇ ವರವ ತರ್ತೀನಿ | ಅಂದೇಳಿ
ಸತಿಸಪ್ನ ಒಡ್ನೋಗಿ ನಿಲುವಾಳು |

ಸತಿಸಪ ಸಾವಿತ್ರಿ ನಡೆದಾರೆ ಇಬ್ಬರು
ಹೋಗೊಂದು ವನವಾ ಇಳದಾರೆ |
ಹೋಗೊಂದು ವನವಾ ಇಳುವುದ್ನು ಸತಿಸಪ್ಗೆ
ಮಂಗ ಕಪಿಗಳು ಎದರಾಗಿ | ಹೇಳಾನೆ
ಇದನೋಡು ಸೆಮಂತ್ರಿ ಹದಳಾಗಿ |
ಹೋಗೊಂದು ವನವ ಇಳದಾರೆ|
ಹೆಣ್ಣಾಗಿ ಗಂಡಾಗಿ ಸಿಬ್ಯಲಾಡುವಂಗೆ
ಇದನೋಡೇ ಸೆಮಂತ್ರಿ ಅನುವಾಗಿ |
ಹೋಗೊಂದು ವನವ ಇಳದಾರೆ
ಆರಾಣಿ ಮಿಣಸು ಬೋರೆದ್ದಿ ಬರುವಂಗೆ
ಇದನೋಡೇ ಸೆಮಂತ್ರಿ ಅನುವಾಗಿ | ಇದುವೆಲ್ಲ
ಹಿಂದಕ್ಕೆ ಪಾಂಡವ್ರ ಸೆಣಮಣ್ಸು| ಇಬ್ಬರೂ
ಹೋಗೊಂದು ವನವ ಇಳಿದಾರೆ |
ಕಾದ ಕಲ್ಮೆನೆ ಕಾಸಿಟ್ಟಿರ ಕಾವಲ್ಗೆ
ಇದನೋಡೇ ಸೆಮಂತ್ರಿ ಅನುವಾಗಿ | ಇದುವೆಲ್ಲ
ಹಿಂದಕೆ ಪಾಂಡವ್ರ ಕೆರಬಾವಿ |

ಅಡ್ಗ ಕಲ್ಲೆಟ್ಟಿತ್ತು ಮೇಲ್ ಬೆಸಲ್ ಸುಟ್ಟಿತ್ತು.
ಸುಡು ಸುಡು ಬೊಕ್ಕಿಯ ನೆಗೆದಿತ್ತು | ದೆವರೆ
ಇದ್ರಗಿಂದು ಮುಂದೆ ಬರ್ಲಾರೆ | ದೇವರೆ
ತಂಪಿಲ್ವ ಮರದಾ ನೆರಳಿಲ್ವ

ಅಟ್ಟೊಂದು ಮಾತ ಕೇಳಿದನೆ ಸತಿಸಪ
ಲಾಗೊಂದು ಮಾತ ನುಡಿದಾನೆ.
ಕೇಳೆ ನೇರೀಳೆ ಕೇಳೆ ಕೆನ್ನೇರೀಳೆ
ಗಂಡ ಹೆಂಡತಿಗೂ ನೆರಳಾಗು| ಆದರೆ
ಎಲೆಗೆಲ್ಲ ಬಣ್ಣ ತೆಗೆಸೂವೆ   |
ಕೇಳೆ ನೇರೀಳೆ ಕೇಳಿ ಪನ್ನೇರೀಳೆ
ಅರಸಗು ಅರಸಿಗು ನೆರಳಾಗು | ಆದರೆ
ಎಲ್ಲೆಗೆಲ್ಲ ಮುತ್ತ ಹೊಯ್ಸೂವೆ |

ಕೇಳಿತು ನೇರೀತು ಕೇಳೀತು ಕೆನ್ನೇರೀಳು
ಗಂಡ ಹೆಂಡತಿಗೆ ನೆರಳಾಗಿ |
ಗಂಡ ಹೆಂಡತಿಗೆ ನೆರಳಾದ್ದ ನೋಡಾನೆ
ಎಲೆಗೆಲ್ಲ ಬಣ್ಣ ತೆಗಸಾನೆ |

ಸತಿಸಪ ಸಾವಿತ್ರಿ ಹತತಾರಲದಾಕಟ್ಟಿ
ಕುಳಿತಾರೆ ಗಿಡದ ನೆರಳೀಗೆ ಸತಿಸಪ
ಉಕ್ಕೀನ ಕಯ್ಕೊಡಲಿ ತಡದಾನೆ | ಸತಿಸಪ
ಅತ್ತೀಯ ಮರನ ನಗದತ್ತಿ | ಸತಿಸಪ
ಅತ್ತಿ ಕಿರದಾಣೀಯ ಕಡಿದಾನೆ | ಆಹೆಣಿಯು
ಬೆನ್ನೀಗೆ ಬಂದು ಬಡಿದಾವೆ | ಸತಿಸಪ
ಮತ್ತೊಂದು ಹೆಣಿಯ ಕಡಿದಾನೆ | ಆಹೇಣಿ
ಕೆನ್ನೀಗೆ ಬಂದು ಬಡಿದಾವೆ |ಸತಿಸಪ
ಮತ್ತೊಂದು ಹೆಣೆಯ ಕಡಿದಾನೆ | ಆಹೇಣಿ
ಕಣ್ಣೀಗೆ ಬಂದು ಬಡಿದಾವೆ | ಸತಿಸಪ್ನ
ಕಣ್ಣಿಗ್ ಕತ್ತಲೆಯ ಕಮಿದಾವೆ | ಸೆಮಂತ್ರಿ
ಆಯದಲ್ ನೀಡೇ ನಳಿತೋಳ |

ಆಯದಲ್ ನೀಡಿದರೆ ನೀಡಾವೇ ನಳಿತೋಳು
ಉಪಾಯ್ದಲ್ ಮರಣ ಇಳಿಯಿರಿ
ಕಣ್ಣೀಗೆ ಕತ್ತಲು ಸೆಮಂತ್ರಿ ನೀ ಕೇಳೆ
ಆಯದಲ್ ನೀಡೇ ನಳಿತೋಳ | ಎಂಬುವದ್ನು
ಆಯದಲ್ ನೀಡಿದಳೆ ನಳಿತೋಳ | ಸತಿಸಪ
ತೋಳಮೆನ್ ಮರನಾ ಇಳಿದಾನೆ |ಸತಿಸಪ
ತೋಳಮೆನ ಮೋಕ್ಷ ಪಡದಾನೆ |

ಎಳ್ಳೀ ಎಳೆಲಿಯ ಕೊಯ್ತಂದಿ ಸೆಮಂತ್ರಿ
ಎಲಿಯ ಮೆನೆಲಿಯ ಮಡಗ್ಹಾಸಿ | ಸೆಮಂತ್ರಿ
ಎಳ್ಳೀ ಎಲಿಮೇನೇ ಒರಗೀಸಿ ಸೆಮಂತ್ರಿ
ಬಿದ್ದೋ ಬಿದ್ದಲ್ಲೇ ಮರ್ಗಾಳೆ
ಸೆಮಂತ್ರಿ ಕಣ್ಣೀರು ಮಾನೋಮಿ ಕೆರ್ ತುಂಬಿ
ತಾವರೆಯ ಹೂಂಗಾಗಿ ಅಲ್ದಾವೆ | ಆ ಹೂಂಗು
ಸುರಲೋಕಕ್ಕೋಗಿ ಎಸದಾವೆ |
ಸುರಲೋಕಕ್ಕೋಗಿ ಎಸವದ್ನು ಯಮರಾಯ
ತನ್ನಾಲ ದೂತ್ರ ಕರೆದಾಗೆ |
ತನ್ನಾಲಾ ದೂತರ ಕರೆದು ಹೇಳಿದನೆ
ಸತಿ ಸಪ್ನ ಪ್ರಾಣ ತರಬೇಕೆ |

ಅಟ್ಟಂಬು ಮಾತನೆ ಕೇಳಿದರೆ ಯಮದೂತರು
ಸೆಮಂತ್ರಿ ಯಿದ್ದಲ್ಲಿ ನೆಡದಾರೆ | ಯಮದೂತರು
ಸತಿಸಪ್ನ ಪರಣ ಎಳದಾರೆ |

ಯಾರು ಬಂದರು ಕೊಡೆ ಯಾರು ನಿಂದರು ಕೊಡೆ
ಯಾರೀಗೀ ಪರಣ ಕೊಡ್ಲಾರೆ |ನಿನ್ನಾಲಾ
ಯಮರಾಯನಿಲ್ಲೆ ಬರಬೇಕು |
ಯಮರಾಯರಿಲ್ಲೇ ಬಂದುದ್ದುಂಟಾದರೂ
ಅವರಿಗೀ ಪರಣ ಕೊಡೆತಾನು |

ಅಟ್ಟಂಬು ಮಾತೇ ಮಾತನೇಕೇಳಾನೆ ಯಮದೂತರು
ಹಿಂದಕೆ ತಿರುಗಿ ಬರುವಾರೇ ಯಮರಾಯ |

ಲಾಗೊಂದು ಮಾತನುಡಿದಾನೆ |
ಅದುವೇನು ದೂತರೆ ಹಾಂಗೋಗಿ ಹೀಂಗ್ ಬಂದ್ರಿ
ಯಾಕೆ ಆ ಪರಣ ತರಲಿಲ್ಲ |
ಕಾನೊಳಗೊಂದು ಕಡುಗೂಸು ಮುತ್ತೈದೆ
ನಮ್ಮೆಲ್ಲ ಬಯ್ದು ಕಳುಗದೆ |

ಯಾರು ಬಂದರ ಕೊಡೆ ಯಾರೂ ನಿಂದರ ಕೊಡೆ
ಯಾರಿಗೀ ಪರಣ ಕೊಡ್ಲಾರೆ | ನಿನ್ನಾಲ
ಯಮರಾಯನಿಲ್ಲೇಬರಬೇಕು.

ಅಟ್ಟಂಬು ಮಾತಾ ಕೇಳಾನೇ ಯಮರಾಯ
ರಾಜಬೀದಿಗಾಗಲೇ ನೆಡದಾನೆ | ಯಮರಾಯ
ಸೆಮಂತ್ರಿದ್ದಲ್ಲೇ ನೆಡದಾನೆ | ಸೆಮಂತ್ರಿ
ಯಮರಾಯ್ನ ಸಿರಿಪಾದ ತೊಳೆದಾಳೆ| ಸೆಮಂತ್ರಿ
ಯಮರಾಯ್ನ ಪಾದಕೆ ಸರಣಂತು |

ಅಯ್ಸವಂತಳಾಗೆ ಅಯ್ಸ ಬಲಿದವಳಾಗೆ
ನೀನಿಟ್ಟ ಚಿನ್ನಾಲೆ ತಿರುವಾಲೆ | ಸೆಮಂತ್ರಿ
ಕಟ್ಟಾಳೆ ಮೇಲೂ ಸೆರಗೀಲಿ |

ಅದುವೇನೆ ಕೂಸ ಸೆರಗೀಲಿ ಗಂಟಿಡುತೆ
ಬಾಯ್ತಪ್ಪಿ ನಾನು ನುಡಿದೀದೆ |

ಇಟ್ಟೀರಿ ಸಾಪವ ಕೊಟ್ಟೀರಿ ವರವಾನೆ
ಕೊಟ್ಟವರ ತನಗೆ ತಿರವಾಲ ಅಂದೇಳಿ
ಕಟ್ಟೀನೆ ಮೇಲೂ ಸೆರಗೀಗೆ |

ಇಟ್ಟೊಂದು ಮಾತಾ ಕೇಳಾನೆ ಯಮರಾಯ
ಹಿಂದಕೆ ತಿರ್ಗೆ ಬರುವಾನೆ | ಸೆಮಂತ್ರಿ
ಮುಸ್ಕಿನ ಸೊಪ್ಪು ಮುರಿದಾಳೆ | ಸೆಮಂತ್ರಿ
ಸತಿಸಪಗೆ ಮುಸುಕ ಇಡುವಾಳು |
ಹಕ್ಕೀಯೆ ಪಕ್ಕಿಯೇ ಯೆರುವ ಎಂಬತ್ತ ಕೋಟಿ
ಯಾರು ಈ ಹೆಣ ಮುಟ್ಯಾರ | ಅಂದೇಳಿ
ಯಮರಾಯ್ನ ಬೆನ್ನಿಗೆ ನೆಡದಾಳೆ |

ಯಮರಾಯ ಬರುವನೆ ಯಮರಾಯ್ನ ಕೊಂಡೀಗೆ
ಸೆಮಂತ್ರಿ ಬಂದಾಳೆ ಬೆನ್ನೀಗೆ  |
ಗಂಡನಮನಿಗೆ ಮಿಂಡ ಮಾಡೂವಳ
ಕೆಂಡದ ಮರಕೆ ತೋಡಸಾರೆ | ಸೆಮಂತ್ರಿ
ಇದುವೊಂದ ನೋಡೇ ಹದಳಾಗಿ |

ಹೆಣ್ಕೊಟ್ಟತೀಗೆ ಬಣ್ಣಿಸಿ ಬಯ್ವವ್ನ
ಬಣ್ಣವ ಒಗುವ ಹಸಗನ | ಕಾಲಡಿಗೆ
ಗೊಣೋಳುವಾಗಿ ಹಿಮ್ತದೆ | ಸೆಮಂತ್ರಿ
ಇದುವೊಂದನೋಡೇ ಹದುಳಾಗಿ
ಬೆಸ್ ಬಿಸಿ ತುಪ್ಪವ ಅಳ್ದೀ ಕೊಡೂವಳ
ಕಾದೂಲಿ ಮೆನೆ ಕುಳುಸಾರೆ | ಸೆಮಂತ್ರಿ
ಇದುವೊಂದು ನೋಡೇ ಹದುಳಾಗಿ |
ವತನ ಗೆದ್ದಿಯ ಒತ್ತಾಳಿ ಮಾಡವ್ನ
ಕತ್ತರಸ್ ಕಾವ್ಲಿಲಿ ಕೆಡ್ದಾರೆ | ಸೆಮಂತ್ರಿ
ಇದುವೊಂದೆ ನೋಡೇ ಹದಳಾಗಿ |
ಅಬ್ಬೀ ಬಯ್ವವ್ನ  ಗುಬ್ಬಿ ಗೂಡಳ್ವನ
ಹಬ್ಬಿದಲ್ ಹುಬ್ಬ ಚೆಡಿವನ | ಕಡಪಾಪಿಯ
ಎಬ್ಬಾರೆ ಯಮನ ದಳಲೀಗೆ | ಸೆಮಂತ್ರಿ
ಇದುವೊಂದನೋಡೇ ಹದುಳಾಗಿ |
ಮಾಸೀದ ಪಟ್ಟೀ ಬಿಚ್ಚೀ ಒತ್ತಿಡುವಳ
ಹಸಗನ ಕಲ್ಮೇನೆ ಕುಳ್ಸಾರೆ ಸೆಮಂತ್ರಿ
ಇದುವೊಂದು ನೋಡೇ ಹದಳಾಗಿ |

ಯಮನಕೊಂಡಾನೇ ಕಳಿದನು ಯಮರಾಯ
ತನ್ನಾಲರ ಮನಿಗೇ ಬರುವನು | ಯಮರಾಯ
ಮಾಳೂಗಿ ಒಳುಗೆ ನೆಡದಾನೆ | ಯಮರಯ
ಲಾಗೊಂದು ಮಾತಾ ನುಡಿದಾನೆ |
ಕಾನೊಳಗೊಂದು ಕಡುಕೂಸು ಮುತ್ತಯ್ದೆ
ನಿಮ್ಮಲ್ಲ ಬಯ್ದು ಕಳಗದೆ |
ನಮ್ಮ ಬಯ್ವರು ನಮ್ಮ ಮುಂದೆ ಬಂದೀರೆ
ಮುಂದಲಿ ತಟ್ಟಿ ಎಳಿತಿದ್ದು | ನೀವ್ ಕೂತ
ಸಾಲ್ಮಂಚಕಾಗಿ ಬಡಿತಿದ್ದು |

ಅಟ್ಟೊಂದು ಮಾತಾ ಕೇಳಾನೆ ಯಮರಾಯ
ಪನ್ನೆಯ ಮರೆಯಲ್ಲಿ ಮುಗುಳ್ನಗ್ಗೆ | ಆಡೀತಾ
ಸೆಮಂತ್ರಿ ಕಣ್ ಸನ್ನೀಲಿ ಕರ್ದಾನೆ | ಸೆಮಂತ್ರಿ
ಬಂದೀ ಬಾಗಲ್ಲೇ ನಿಲುವಾಳು | ಯಮರಾಯ
ಲಾಗೊಂದು ಮಾತ ನುಡಿದಾನೆ |
ಗೋಕನ್ಯೆ ಹೋಗೇ ಕೂಸೆ ಗುಡಿಸಲ್ ಕಟ್ಟೇ ಕೂಸೆ
ಕಾಜೀನ ಬಳಿನಾರೇ ಜರಿಕೂಸೆ| ನಿನ್ನಾಲಾ
ಗಂಡ ಕಾನೊಳಗೆ ಮಡಿದಾನೆ |
ಪಟ್ಟೀ ಬಿಡಕೂಸೆ ದಟ್ಟೀ  ಉಡಕೂಸೆ
ಲೇಸೀದ ಸಿರಿಗಂಧ ಅಳೀಕೂಸೆ | ನಿನ್ನಾಲಾ
ಪುರಿಸ ಕಾನೊಳಗೆ ಮಡಿದಾನೆ |

ಗೋಕನಕೆ ಹೋಗುವಾಕೇ ಗುಡಿಸಲ್ ಕಟ್ಟುವಾಕೆ
ಕಾಜೀನ ಬಳಿನಾರೇ ಜರೀವಾಕೆ | ಯಮರಾಯ
ಹೇಳಿಕೊಡೆ ನಿನ್ನ ಮಡದ್ಯರ್ಗೆ|
ಪಟ್ಟೀಯ ಬಿಡುವಾಕೆ ದಟ್ಟೀಯ ಉಡುವಾಕೆ
ಲೇಸಿದ ಸಿರಿಗಂದ ಅಳಿವಾಕೆ – ಯಮರಾಯ
ಹೇಳ್ಕೋಡೊ ನಿನ್ನಾ ಮಡದ್ಯರ್ಗ |

ಅಟ್ಟೊಂದು ಮಾತಾ ಕೇಳಾರೇ ಯಮರಾಯ್ನ ಹಿಂಡ್ರು
ನಿಮಗಂಜದ ನಾರಿ ನಮಗಂಜುವಾಳೆ | ಅಂದೇಳಿ
ತಲೆಬಾಗಿ ಮಾಳಗ್ಗೆ ನೆಡದಾರೆ | ಯಮರಾಯ
ಅಮೃತ ಗಿಂಡೀ ತಡೆದಾನೆ | ಯಮರಾಯ
ಸೆಮಂತ್ರಿ ಬಲಗಯ್ಲಿ ಕೊಡುವಾನೆ | ಸೆಮಂತ್ರಿ

ಎರಡೂ ಕಯ್ಯೊಡ್ಡಿ ತಡಿದಾಳೆ | ಸೆಮಂತ್ರಿ
ಹಿಂದಕೆ ತಿರುಗಿ ಬರುವಾಳೇ | ಸೆಮಂತ್ರಿ
ನುಗ್ಲ ಸಂಕಕಾಗಿ ಬರುವಾಳೆ | ಸೆಮಂತ್ರಿ
ನುಗ್ಲ ಸಂಕವ ಗಳಿದಾಳೇ | ಸೆಮಂತ್ರಿ
ಯಮನ ಕೊಂಡಕಾಗಿ ನಡದಾಳೆ |

ಯಮನ ಕೊಂಡ್ದಲ್ಲಿ ಹಿಮ್ತೆ ಬಿದ್ದೋರ್ ನೋಡಿ
ಅಲ್ಲಿಟ್ಟ ಮೃತವ ತಳದಾಳೆ | ಅವರೆಲ್ಲ
ಸೆಮಂತ್ರಿ ಬೆನ್ನತ್ತಿ ಬರುವಾರು
ಹಾಳಾದ್ವೇ ಪಟ್ಟಣ ದೂಳಾದ್ವೇ ಪಟ್ಟಣ
ಯಮರಾಯ್ನ ಪಟ್ಣೆಲ್ಲ ಬರುವಾದು | ಅಂದೇಳಿ

ಅಲ್ಲೊಂದು ಚವ್ಡ ಕಾರ ನುಡಿದಾನೆ |
ಅಲ್ಲೊಂದು ಚವ್ಡ ಕಾರ ನುಡಿವುದ್ನು ಯಮರಾಯ
ಸೆಮಂತ್ರಿ ಯಿದ್ದಲ್ಲೇ ಬರುವಾನೇ | ಯಮರಾಯ
ಅಮೃತ ಗಿಂಡೀ ಕಸಿದಾನೇ | ಸೆಮಂತ್ರಿ

ಸೆಳ್ಳುಗುರಲ್ ಹನಿಯಾ ಅಡಗೀಸಿ | ಸೆಮಂತ್ರಿ
ಸತಿಸಪೆಯಿದ್ದಲ್ಲಿ ಬರುವಳು | ಸೆಮಂತ್ರಿ

ಮುಸುಕಿನ ಸೊಪ್ಪ ತೆಗದಳು | ಸೆಮಂತ್ರಿ
ಸತಿಸಪಗಮ್ರತಮ್ಸ ತಳಿದಾಳೇ | ಸತಿಸಪ
ಮಯ್ಮುರ್ದಿ ಎದ್ದಿ ಕುಳತಾನೇ | ಸತಿಸಪ
ಆಗೊಂದು ಮಾತಾ ನುಡಿದಾನೆ |

ಎಲಿಯೊಂದ ತಿಂತಿದ್ದೆ ಎಲಸೊಕ್ಕಿ ಬಿದ್ದಿದ್ದೆ
ಹೆದರೀದ್ಯೋ ಸೆಮಂತ್ರಿ ಬೆದರಿದ್ಯೋ |
ಅಡಕ್ಯೋಂದ ತಿಂದೀದೆ ಅಡಕ್ ಸೊಕ್ಕಿ ಬಿದ್ದೀದೆಟ
ಹೆದರಿದ್ಯೋ ಸೆಮಂತ್ರಿ  ಬೆದರಿದ್ಯೋ |
ಹೆದರಿಕೆ ಬೆದರಿಕೆ ನಿಮ್ಮ ಕಂಡಡಗಲಿ
ನಾವ್ ಹೋಗ್ವೋ ನಮ್ಮ ಅರಮನ್ಗೆ | ಅಂದೇಳಿ
ರಾಜ ಬೀದಿಗಾಗೇ ಬರುವಾರೆ | ಸಾವಿತ್ರಿ ಸತಿಸಪ
ಮ್ಮಲರಮನಗೆ ಬರುವಾರೆ | ಅತ್ಯಮ್ಮ
ಗಿಂಡ್ಯಲ್ಲಿ ಉದಕವ ತಡದಾಳೇ |

ತನಗೊಂದು ಚಂಬುದಕ ಕಡೆಗಾರು ಕೊಡಬಹುದು
ಸೊಸಿಗೊಂದು ಚಂದುದಕ ಮೊದಲ್ಕೊಡು| ತಾಯಮ್ಮ
ಸೊಸಿದರ್ಮದಿಂದೇ ಮನೀಗ್ ಬಂದೆ |

* * *