ಸಾವಿತ್ರಿತಾನು ಪ್ರೀತಿಸಿ ಮದುವೆಯಾಗಲು ಆರಿಸಿದ ಗುಣವಂತನಿಗೆ ಇನ್ನು ಒಂದೇ ವರ್ಷ ಆಯುಸ್ಸು ಎಂದು ತಿಳಿದರೂ ಅವನನ್ನೆ ಮದುವೆಯಾದ ಧೀರೆ. ತನ್ನ ತಪಸ್ಸು. ಬುದ್ಧಿಶಕ್ತಿಗಳಿಂದ ಯಮನನ್ನೆ ಮೆಚ್ಚಿಸಿ ಗಂಡನನ್ನು ಬದುಕಿಸಿಕೊಂಡ ಅಬಲೆ.

 ಸಾವಿತ್ರಿ

ಸತ್ತವರು ಬದುಕುತ್ತಾರೆಯೇ? ಬಹು ವಿಚಿತ್ರ! ಅಲ್ಲವೇ?

ಸತ್ತ ಗಂಡನನ್ನು ತನ್ನ ತೇಜಸ್ಸಿನ ಪ್ರಭಾವದಿಂದ ಬದುಕಿಸಿಕೊಂಡ ಹೆಣ್ಣುಮಗಳ ಕಥೆಯೊಂದುಂಟು ನಮ್ಮ ಪುರಾಣಗಳಲ್ಲಿ.

ಈಕೆ ರಾಜಕುಮಾರಿಯಾಗಿ ಜನಿಸಿದರೂ ಕಷ್ಟಗಳಿಗೆ ಹಿಂಜರಿದವಳಲ್ಲ! ಸಂತೋಷದಿಂದ ಕಾಡಿನಲ್ಲಿ ಬಡವನಾದ ಗಂಡನೊಡನೆ ಬಾಳಿದವಳು. ಯಮನನ್ನು ಎದುರಿಸಿ ಗಂಡನನ್ನು ಉಳಿಸಿಕೊಂಡವಳು. ಈ ಧೀರೆ ಸಾವಿತ್ರಿ. ಇವಳ ಕಥೆ ಬಹು ಸ್ವಾರಸ್ಯವಾದದ್ದು.

ಸಾವಿತ್ರೀದೇವಿಯ ಅನುಗ್ರಹ

ಬಹು ಹಿಂದಿನ ಕಾಲ. ಮದ್ರದೇಶವೆಂಬ ರಾಜ್ಯ. ಅದರ ರಾಜ ಅಶ್ವಪತಿ. ಇವನು ಧರ್ಮಾತ್ಮ, ಸತ್ಯಸಂಧ, ಅವನ ಪತ್ನಿ ಮಾಳವಿ. ಈ ದಂಪತಿಗಳಿಗೆ ಬೇರೆ ಯಾವ ರೀತಿಯಲ್ಲೂ ಕಷ್ಟವಿರಲಿಲ್ಲ; ಒಂದೇ ಕೊರತೆ. ಮಕ್ಕಳಿಲ್ಲವೆಂಬ ಕೊರತೆ. ಮಕ್ಕಳನ್ನು ಪಡೆಯಲು ಕಠಿಣವಾದ ವ್ರತಗಳನ್ನು ನಡೆಸುತ್ತಿದ್ದರು. ಒಂದು ವರ್ಷವಾಯಿತು. ಎರಡು ವರ್ಷವಾಯಿತು. ದೇವಿಯು ಇವರಿಗೆ ಪ್ರಸನ್ನಳಾಗಲಿಲ್ಲ. ಆದರೂ ಈ ದಂಪತಿಗಳು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ಇನ್ನೂ ಕಠಿಣವಾದ ವ್ರತಗಳನ್ನು ನಡೆಸಿದರು.

ಹದಿನೆಂಟು ವರ್ಷಗಳು ಕಳೆದವು!

ಸಾವಿತ್ರೀದೇವಿಯು ಅವರಿಗೆ ಒಲಿದಳು. ದಂಪತಿಗಳು ದೇವಿಯನ್ನು ವಿಧವಿಧವಾಗಿ ಸ್ತುತಿಸಿದರು. ಅಶ್ವ ಪತಿಯು,  ‘‘ತಾಯಿ, ನನಗೆ ಸಕಲ ಭೋಗ ಭಾಗ್ಯಗಳು ಇವೆ, ಅನುಕೂಲಳಾದ ಪತ್ನಿಯಿದ್ದಾಳೆ, ಪ್ರಜೆಗಳೆಲ್ಲ ನನ್ನಲ್ಲಿ ಪ್ರೀತಿಯಿಂದ ಇದ್ದಾರೆ, ಆಪ್ತಪರಿವಾರದವರು ನನ್ನ ಹಿತವನ್ನೇ ಕೋರುತ್ತಾ ನನ್ನನ್ನು ಸೇವಿಸುತ್ತಿದ್ದಾರೆ. ಆದರೆ ನನ್ನ ವಂಶವನ್ನು ಬೆಳಗಲು, ನನ್ನ ಅನಂತರ ಈ ರಾಜ್ಯವನ್ನು ಧರ್ಮದಿಂದ ಆಳಲು ಮಕ್ಕಳಿಲ್ಲವಲ್ಲಾ ಎಂಬ ಕೊರಗು ನನ್ನನ್ನು ಬಾಧಿಸುತ್ತಿದೆ. ತಾಯೇ, ನನ್ನ ವಂಶವನ್ನು ಬೆಳಗುವಂತಹ ಅನೇಕ ಮಕ್ಕಳು ನನಗೆ ಬೇಕು ’’ ಎಂದನು.

ಸಾವಿತ್ರೀದೇವಿ, ‘‘ರಾಜ, ಬ್ರಹ್ಮನ ಸಂಕಲ್ಪವಿಲ್ಲದೆ ಯಾವ ಕಾರ್ಯವೂ ನಡೆಯುವುದಿಲ್ಲ. ಬ್ರಹ್ಮನ ಸಂಕಲ್ಪದಂತೆ ತೇಜಸ್ಸಿನಿಂದ ಕೂಡಿದ ಮಗಳು ನಿನಗೆ ಹುಟ್ಟುತ್ತಾಳೆ’’ ಎಂದು ಆಶೀರ್ವದಿಸಿ ಮಾಯವಾದಳು.

ಕೆಲ ಕಾಲ ಕಳೆಯಿತು. ಅಶ್ವಪತಿಯ ರಾಣಿಯು ಗರ್ಭವತಿಯಾದಳು. ಸಕಾಲದಲ್ಲಿ ಹೆಣ್ಣುಮಗುವನ್ನು ಹೆತ್ತಳು. ಸಾವಿತ್ರೀದೇವಿಯ ವರದಿಂದ ಹುಟ್ಟಿದವಳಾದುದರಿಂದ ಮಗುವಿಗೆ ಸಾವಿತ್ರಿಯೆಂದೇ ಹೆಸರಿಟ್ಟರು.

ಅನುರೂಪನಾದ ವರನನ್ನು ಹುಡುಕಿಕೊಂಡು ಬಾ

ಸಾವಿತ್ರಿ ಬೆಳೆದಳು. ಇವಳು ವಿನಯಶೀಲೆಯೂ, ಗುಣವತಿಯೂ ಆಗಿ ಬೆಳೆದಳು. ದೇವಕನ್ಯೆಯಂತೆ ಕಂಗೊಳಿಸುತ್ತಿದ್ದಳು. ಸಾವಿತ್ರಿಗೆ ಮದುವೆಯ ವಯಸ್ಸಾಯಿತು. ಅನೇಕ ಪರಾಕ್ರಮಶಾಲಿಗಳೂ, ವಿನಯವಂತರೂ, ಧೀರರೂ, ಶೂರರೂ ಇವಳನ್ನು ಮದುವೆಯಾಗಲು ಬಯಸಿದರು. ಆದರೆ ಸಾವಿತ್ರಿಯನ್ನು ನೋಡಿದ ಪ್ರತಿಯೊಬ್ಬ ರಾಜಕುಮಾರನೂ ಇವಳ ಯೋಗ್ಯತೆಗೆ ತಾನು ತಕ್ಕವನಲ್ಲವೇನೋ, ತನ್ನಲ್ಲಿರುವ ಗುಣಗಳು ಸಾಲದೇನೋ ಎಂದುಕೊಳ್ಳುತ್ತಿದ್ದನು.

ಅಶ್ವಪತಿಗೆ ಮಗಳ ನಡೆನುಡಿ ಎಲ್ಲವೂ ಬಹಳ ಮೆಚ್ಚಿಕೆಯಾಗಿದ್ದಿತು. ಸಾವಿತ್ರಿಯೆಂದರೆ ತುಂಬ ಪ್ರೀತಿ. ಹದಿನೆಂಟು ವರ್ಷಗಳ ತಪಸ್ಸಿನ ಫಲ ಸಾವಿತ್ರಿ. ಮಗಳ ತೇಜಸ್ಸನ್ನು ನೋಡಿ ಅಶ್ವಪತಿಗೆ ಅಪರಿಮಿತ ಆನಂದ. ಪರಾಕ್ರಮಶಾಲಿಗಳೂ, ಧೀರರೂ, ಶೂರರೂ, ಯಾರೂ ಸಾವಿತ್ರಿಯನ್ನು ವರಿಸಲು ಮುಂದೆ ಬರದೆಹೋದುದನ್ನು ಕಂಡು ಅಶ್ವಪತಿಗೆ ಯೋಚನೆಯುಂಟಾಯಿತು.

ಅಶ್ವಪತಿಯು ಮಗಳನ್ನು ಕರೆದು, ‘‘ಮಗೂ, ಸಾವಿತ್ರೀ, ನಿನಗೆ ಮದುವೆಯ ವಯಸ್ಸಾಯಿತು. ನಿನಗೆ ಅನುರೂಪವಾದ ವರನನ್ನು ಹುಡುಕಿಕೊಂಡು ಬಾ’’ ಎಂದು ಕಳುಹಿಸಿಕೊಟ್ಟನು.

ಸತ್ಯವಂತ

ರಾಜಕುಮಾರಿಯೂ, ಅವಳ ಜೊತೆಗೆ ದಾಸದಾಸಿಯರೂ, ಪರಿವಾರದವರೂ ಹೊರಟರು. ತನ್ನ ವೃದ್ಧ ಮಂತ್ರಿಯನ್ನು ಅಶ್ವಪತಿಯು ಕಳುಹಿಸಿಕೊಟ್ಟನು. ಅವರೆಲ್ಲ ದೇಶವಿದೇಶಗಳನ್ನು ಸುತ್ತಿದರು. ವೃದ್ಧರನ್ನೂ, ಋಷಿಗಳನ್ನೂ ಕಂಡು ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆದರು. ಸಾವಿತ್ರಿಯು ತೀರ್ಥಕ್ಷೇತ್ರಗಳಲ್ಲಿ ಅನೇಕ ದಾನಧರ್ಮಗಳನ್ನು ಮಾಡಿದಳು. ಅವಳಿಗೆ ಸರಿಹೊಂದುವಂತಹ ಯುವಕನು ಮಾತ್ರ ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲ.

ಪರಿವಾರದೊಂದಿಗೆ ತಮ್ಮ ರಾಜ್ಯಕ್ಕೆ ಹಿಂದಿರುಗಿ ಹೊರಟಳು ಸಾವಿತ್ರಿ. ಹಿಂದಿರುಗುತ್ತಿರುವಾಗ ಒಂದು ಕಾಡು ಸಿಕ್ಕಿತು. ಕಾಡಿನಲ್ಲಿಯೇ ಮುಂದುವರೆದರು. ಸ್ವಲ್ಪ ದೂರ ಹೋಗಲು ಒಂದು ಮರದ ಕೆಳಗೆ ವೃದ್ಧ ದಂಪತಿಗಳು ಕುಳಿತಿದ್ದರು. ಅವರ ಬಳಿಯಲ್ಲಿ ಕೆಲಸದಲ್ಲಿ ಮಗ್ನನಾದ ಯುವಕ. ಹಣ್ಣುಗಳನ್ನು ಬಿಡಿಸಿ ವೃದ್ಧ ದಂಪತಿಗಳ ಕೈಗೆ ಕೊಡುತ್ತಿದ್ದನು.

ಸಾವಿತ್ರಿ ಈ ದೃಶ್ಯವನ್ನು ನೋಡಿದಳು. ಯುವಕನ ಮುಖ ಸೌಮ್ಯವಾಗಿತ್ತು. ಆದರೆ ತೇಜಸ್ಸು ಕಣ್ಸೆಳೆಯುವಂತಹುದು. ಸಾವಿತ್ರಿ ಕಣ್ಣರಳಿಸಿ ನೋಡಿದಳು. ಮನಸ್ಸು ಆ ಸುಂದರ ತೇಜಸ್ವಿಯನ್ನು ಮೆಚ್ಚಿತು.

ಸಾವಿತ್ರಿಯ ಕುತೂಹಲ ಕೆರಳಿತು. ವೃದ್ಥ ಮಂತ್ರಿಗಳನ್ನು ಕರೆದು, ‘‘ಮಂತ್ರಿಗಳೇ, ಅಲ್ಲಿ ನೋಡಿ, ಅಲ್ಲಿ ಕುಳಿತಿರುವ ವೃದ್ಧ ದಂಪತಿಗಳು ಮತ್ತು ಆ ಯುವಕನ ವಿಷಯವನ್ನು ವಿಚಾರಿಸಿ ಬನ್ನಿ’’ ಎಂದಳು.

ವೃದ್ಧ ಮಂತ್ರಿಗಳು ಯುವಕನ ಬಳಿ ಹೋದರು. ‘‘ನೀನು ಯಾರು? ಈ ವೃದ್ಧರು ಯಾರು? ಈ ಕಾಡಿನಲ್ಲೇಕೆ ನೀವು ವಾಸಿಸುತ್ತಿದ್ದೀರಿ?’’ ಎಂದು ಪ್ರಶ್ನಿಸಿದರು.

ಯುವಕ-ನನ್ನ ಹೆಸರು ಸತ್ಯವಂತ. ಇವರು ನನ್ನ ತಂದೆತಾಯಿಗಳು. ನನ್ನ ತಂದೆ ಹಿಂದೆ ಸಾಲ್ವದೇಶದ ರಾಜನಾಗಿದ್ದ. ದ್ಯುಮತ್ಸೇನನೆಂದು ಇವನಿಗೆ ಹೆಸರು. ನನ್ನ ತಂದೆಗೆ ಎರಡು ಕಣ್ಣುಗಳೂ ಹೋದುವು. ಇದೇ ಸಮಯವನ್ನು ಕಾಯುತ್ತಿದ್ದ ಶತ್ರುರಾಜರು ಸಾಲ್ವದೇಶವನ್ನು ಮುತ್ತಿದರು. ಕುರುಡನಾದ ನನ್ನ ತಂದೆ ಸುಲಭವಾಗಿ ಸೋತುಹೋದನು. ನನ್ನ ತಂದೆತಾಯಿಗಳನ್ನು ಬಿಟ್ಟಿರಲಾರದೆ ನಾನೂ ಅವರನ್ನು ಹಿಂಬಾಲಿಸಿ ಕಾಡಿಗೆ ಬಂದೆ.

ಮಂತ್ರಿಯು ಹಿಂದಿರುಗಿ ಸಾವಿತ್ರಿಗೆ ವಿಷಯವನ್ನು ತಿಳಿಸಿದ.

ಅದುವರೆಗೂ ಯಾವ ಮಾತನ್ನೂ ಆಡದೆ ನಿಂತಿದ್ದಳು ಸಾವಿತ್ರಿ. ಮೊದಲ ನೋಟದಲ್ಲಿಯೇ ಯುವಕನ ಗಾಂಭೀರ್ಯವನ್ನೂ, ಧೀರತನವನ್ನೂ ಗುರುತಿಸಿದ್ದಳು ಸಾವಿತ್ರಿ. ಮಂತ್ರಿಯ ಮಾತುಗಳಿಂದ ಸತ್ಯವಂತನು ಗುಣವಂತ, ಈತನೇ ನನ್ನ ಪತಿಯಾಗಲಿ ಎಂದು ನಿರ್ಧರಿಸಿದಳು.

ತಾನು ಬಂದ ಕೆಲಸ ನೆರವೇರಿತೆಂದು ಮದ್ರದೇಶಕ್ಕೆ ಪ್ರಯಾಣ ಬೆಳೆಸಿದಳು.

ವಿಧಿ ಅವನಿಗೆ ಮುಳಿದಿದೆ

ಸಾವಿತ್ರಿಯು ಅರಮನೆಗೆ ಹಿಂದಿರುಗುವ ವೇಳೆಗೆ ನಾರದರು ಬಂದರು. ನಾರದರು ಮಹಾತ್ಮರು. ಹಿಂದೆ ನಡೆದುದನ್ನು, ಮುಂದೆ ಆಗುವುದನ್ನು ಹೇಳಬಲ್ಲವರು. ಮೂರು ಲೋಕಗಳಲ್ಲಿ ಸಂಚರಿಸಿ ಎಲ್ಲ ವಿಷಯಗಳನ್ನು ತಿಳಿದುಕೊಂಡವರು.

ಅಶ್ವಪತಿಯು ಆದರದಿಂದ ನಾರದರನ್ನು ಬರಮಾಡಿಕೊಂಡನು. ಅವರ ಪಾದಗಳನ್ನು ತೊಳೆದು ಸತ್ಕರಿಸಿದನು. ಆ ವೇಳೆಗೆ ಸಾವಿತ್ರಿಯು ಹಿಂದಿರುಗಿದಳು. ನಾರದರಿಗೂ, ಅಶ್ವಪತಿಗೂ ನಮಸ್ಕರಿಸಿದಳು.

ನಾರದರು ಅವಳಿಗೆ ‘ಮಂಗಳವಾಗಲಿ’ ಎಂದು ಹರಸಿದರು. ಅನಂತರ ಅಶ್ವಪತಿಯನ್ನು, ‘‘ಮಹಾರಾಜ, ನಿನ್ನ ಮಗಳು ಎಲ್ಲಿಗೆ ಹೋಗಿದ್ದಳು? ಇಂತಹ ಮಗಳನ್ನು ಪಡೆದ ನೀನು ಭಾಗ್ಯಶಾಲಿ. ಇವಳ ಮದುವೆಯ ವಿಷಯ ಯೋಚಿಸಿರುವೆಯ?’’ ಎಂದು ಕೇಳಿದರು.

ಅಶ್ವಪತಿಯು ‘‘ಅದಕ್ಕಾಗಿಯೇ ಅವಳನ್ನು ಕಳುಹಿಸಿದ್ದೆ’’ ಎಂದು ಎಲ್ಲವನ್ನೂ ನಾರದರಿಗೆ ವಿವರಿಸಿದನು. ಅನಂತರ ಮಗಳ ಕಡೆ ತಿರುಗಿ, ‘‘ಮಗೂ, ನೀನು ಯಾರನ್ನು ಕಂಡು ಮೆಚ್ಚಿದ್ದೀಯೆ, ಹೇಳಮ್ಮ’’ ಎಂದ.

ಸಾವಿತ್ರಿ-ಪೂಜ್ಯರೆ, ನಾನು ಎಲ್ಲ ರಾಜ್ಯಗಳನ್ನೂ ಸುತ್ತಿದೆ. ನನ್ನ ಮನಸ್ಸಿಗೆ ಮೆಚ್ಚಿಕೆಯಾದವರು ಎಲ್ಲಿಯೂ ಸಿಗಲಿಲ್ಲ. ಕಡೆಗೆ ಒಂದು ಕಾಡಿಗೆ ಬಂದೆವು. ಅಲ್ಲಿ ಸತ್ಯವಂತನೆನ್ನುವ ಯುವಕನನ್ನು ಕಂಡೆ. ಅವನ ತಂದೆ ದ್ಯುಮತ್ಸೇನ. ಅವನು ಸಾಲ್ವದೇಶದ ರಾಜ. ಅವನಿಗೆ ಎರಡು ಕಣ್ಣುಗಳೂ ಹೋಗಿ, ರಾಜ್ಯವನ್ನು ಕಳೆದುಕೊಂಡು ಕಾಡಿನಲ್ಲಿದ್ದಾನೆ. ಅವನ ಮಗನೇ ಸತ್ಯವಂತ. ಅವನನ್ನು ನಾನು ಮೆಚ್ಚಿಕೊಂಡಿದ್ದೇನೆ.

ನಾರದರು ಮಹರ್ಷಿಗಳು, ಜ್ಞಾನಿಗಳು. ಅಶ್ವಪತಿಯು ಮಗಳ ಆಯ್ಕೆಯ ಬಗ್ಗೆ ಅವರು ಏನನ್ನುವರೋ ಎಂದು ನಾರದರ ಮುಖ ನೋಡಿದನು.

ನಾರದರು ಕ್ಷಣ ಹೊತ್ತು ಕಣ್ಣು ಮುಚ್ಚಿ ಸುಮ್ಮನೆ ಕುಳಿತಿದ್ದರು. ಬಳಿಕ ಅಶ್ವಪತಿಯನ್ನು ಕುರಿತು, ‘‘ರಾಜ, ನಿನ್ನ ಮಗಳ ಆಯ್ಕೆ ಸೊಗಸಾಗಿದೆ. ಈ ಯುವಕನು ಯಾವಾಗಲೂ ಸತ್ಯವನ್ನೇ ಹೇಳುವುದರಿಂದ ಇವನಿಗೆ ಸತ್ಯವಂತನೆಂದು ಹೆಸರು. ಚಿಕ್ಕಂದಿನಿಂದ ಕುದುರೆಗಳನ್ನು ಕಂಡರೆ ಬಹಳ ಇಷ್ಟ.   ಇವನಿಗೆ ಚಿತ್ರಾಶ್ವನೆಂದು ಇನ್ನೊಂದು ಹೆಸರೂ ಉಂಟು.ಸೂರ್ಯನ ಹಾಗೆ ತೇಜಸ್ಸುಳ್ಳವನು, ಬುದ್ಧಿವಂತ, ರೂಪನಂತ, ತಾಳ್ಮೆಯಲ್ಲಿ ಭೂಮಿಯನ್ನು ಮೀರಿಸುತ್ತಾನೆ. ಉದಾರಿ ಹಾಗೂ ಶೂರ, ಸ್ನೇಹಪರ, ಅಸೂಯೆ ಇಲ್ಲದವನು’’ ಎಂದರು.

ಅಶ್ವಪತಿ-ನಾರದರೆ, ತಾವು ಹೇಳಿದ ಮಾತುಗಳನ್ನು ಕೇಳಿ ಬಹು  ಸಂತೋಷವಾಯಿತು. ತಾವು ಜ್ಞಾನಿಗಳು, ಸತ್ಯವಂತನ ಗುಣಗಳನ್ನು ಮಾತ್ರ ಹೇಳಿದಿರಿ. ದೋಷಗಳಿದ್ದರೆ ದಯಮಾಡಿ ಅವನ್ನೂ ಹೇಳಬೇಕು.

ನಾರದರು ಗಂಭೀರರಾದರು.

ಅವರ ಗಂಭೀರ ಮುಖವನ್ನು ನೋಡಿ ಅಶ್ವಪತಿಗೆ ತಳಮಳವುಂಟಾಯಿತು. ‘‘ಋಷಿಗಳೆ, ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಕ್ಷಮಿಸಬೇಕು. ದಯಮಾಡಿ ಸತ್ಯವಂತನಲ್ಲಿ ದೋಷವಿದ್ದರೆ ತಿಳಿಸಬೇಕು.’’

ನಾರದರು-ಅಶ್ವಪತಿ, ಸತ್ಯವಂತನಲ್ಲಿ ಯಾವ ವಿಧವಾದ ದೋಷವೂ ಇಲ್ಲ. ಅವನು ಗುಣಗಳ ಗಣಿ. ಆದರೆ ವಿಧಿ ಅವನಿಗೆ ಮುನಿದಿದೆ. ಅವನಿಗೆ ಸಹಾಯಕವಾಗಿಲ್ಲ. ಅವನು ಅಲ್ಪಾಯು; ಇಂದಿಗೆ ಸರಿಯಾಗಿ ಒಂದು ವರ್ಷಕ್ಕೆ ಅವನ ಆಯುಸ್ಸು ಮುಗಿಯುತ್ತದೆ. ಸಾವಿತ್ರಿ ಈ ವಿಷಯವನ್ನು ತಿಳಿಯದೆ ಅವನನ್ನು ವರಿಸಿಬಿಟ್ಟಿದ್ದಾಳೆ.

ಅಶ್ವಪತಿಗೆ ಒಂದೆಡೆ ಮಗಳ ಇಚ್ಛೆಯನ್ನು ನಿರಾಕರಿಸುವುದು ಹೇಗೆ ಎಂಬ ಯೋಚನೆ, ಮತ್ತೊಂದೆಡೆ ನಾರದರ ಮಾತಿನಿಂದ ಉಂಟಾಗಿರುವ ತಳಮಳ.

ಏನು ಮಾಡಲೂ ತೋರದಾಯಿತು.

ಅವನೇ ನನ್ನ ಪತಿ

ಮಗಳನ್ನು ಹತ್ತಿರಕ್ಕೆ ಕರೆದು ತಂದೆಯು, ‘‘ಮಗೂ ಸಾವಿತ್ರಿ, ನಿನ್ನ ಆಯ್ಕೆ ಸೊಗಸಾಗಿದೆ. ನೀನು ಆರಿಸಿರುವ ಸತ್ಯವಂತ ಗುಣವಂತ, ಬುದ್ಧಿವಂತ- ಆದರೆ ಮಗೂ, ಅವನು ಅಲ್ಪಾಯು. ಇದನ್ನು ತಿಳಿದು ಅವನಿಗೆ ನಿನ್ನನ್ನು ಹೇಗೆ ಧಾರೆಯೆರೆಯಲಿ? ಬೇರೊಬ್ಬನನ್ನು ಹುಡುಕಿಕೊಂಡು ಬಾ, ಅವನಿಗೆ ನಿನ್ನನ್ನು ಮದುವೆ ಮಾಡಿ ಕೊಡುತ್ತೇನೆ’’ ಎಂದನು.

ಸಾವಿತ್ರಿ ಒಮ್ಮೆ ನಾರದರನ್ನು ನೋಡಿದಳು, ಮತ್ತೊಮ್ಮೆ ತಂದೆಯ ಮುಖವನ್ನು ನೋಡಿದಳು.

ಸಾವಿತ್ರಿ ಏನೆನ್ನುವಳೋ ಎಂದು ನಾರದರು ಅವಳನ್ನೇ ನೋಡುತ್ತಿದ್ದಾರೆ. ತಂದೆಯ ಮುಖ ಕಳವಳದಿಂದ, ಯೋಚನೆಯಿಂದ ಕಂಗೆಟ್ಟಿದೆ.

ಸಾವಿತ್ರಿ-ಅಪ್ಪಾ, ಒಮ್ಮೆ ವರಿಸಿಯಾಗಿದೆ. ಸತ್ಯವಂತನು ಅಲ್ಪಾಯುವೋ, ದೀರ್ಘಾಯುವೋ ಹೇಗಿದ್ದರೂ ಅವನೇ ನನ್ನ ಪತಿ.

ಅಶ್ವಪತಿ-ಸಾವಿತ್ರಿ, ನೀನಿನ್ನೂ ಚಿಕ್ಕವಳು. ಆತುರಪಡಬೇಡ. ಯೋಚಿಸು. ಒಂದು ವರ್ಷ ಮುಗಿದನಂತರ ಎಂತಹ ದುಃಖ ಕಾದಿದೆ!

ಸಾವಿತ್ರಿ-ಅಪ್ಪಾ, ನಾನು ಅವಿಧೇಯಳು ಎಂದು ಭಾವಿಸಬೇಡ. ದೀರ್ಘಾಯುವೋ ಅಲ್ಪಾಯುವೋ ಅವನನ್ನು ನನ್ನ ಪತಿ ಎಂದು ಭಾವಿಸಿದೆ. ಇನ್ನು ನನ್ನ ನಿಶ್ಚಯವನ್ನು ಬದಲಿಸಲಾರೆ.

ಅಶ್ವಪತಿ-ನಾರದರೆ, ನೀವಾದರೂ ನನ್ನ ಮಗಳಿಗೆ ಬುದ್ಧಿವಾದ ಹೇಳಿ. ಅವಳ ಮನಸ್ಸನ್ನು ಸತ್ಯವಂತನಿಂದ ತಿರುಗಿಸಿ.

ನಾರದರು-ಅಶ್ವಪತಿ, ನಿನ್ನ ಮಗಳ ಸಂಕಲ್ಪ ದೃಢವಾಗಿದೆ. ಅಲ್ಲದೆ ಸತ್ಯವಂತನಲ್ಲಿರುವ ಗುಣಗಳು ಮತ್ತಾರಲ್ಲೂ ಇಲ್ಲ. ಅವನು ನಿನ್ನ ಮಗಳಿಗೆ ಎಲ್ಲ ವಿಧದಲ್ಲಿಯೂ ಅನುರೂಪನಾದವನು. ಶುಭಕಾರ್ಯ ನಡೆಯಲಿ. ಎಲ್ಲವೂ ಮಂಗಳವಾಗುತ್ತದೆ.

ಮಗಳ ಇಷ್ಟಕ್ಕೆ ವಿರೋಧವಾಗಿ ಹೋಗಲು ಅಶ್ವಪತಿಯು ಇಷ್ಟಪಡಲಿಲ್ಲ. ನಾರದರ ಶುಭ ಹರಕೆಯೂ ಅವನಿಗೆ ಧೈರ್ಯವನ್ನು ಕೊಟ್ಟಿತು.

ಮದುವೆಯಾಯಿತು

ಒಂದು ಶುಭದಿನದಲ್ಲಿ, ಮಿತಪರಿವಾರದೊಡನೆ ಅಶ್ವಪತಿಯು ದ್ಯುಮತ್ಸೇನನ ಆಶ್ರಮಕ್ಕೆ ಪ್ರಯಾಣ ಮಾಡಿದನು. ದ್ಯುಮತ್ಸೇನನನ್ನು ಕಂಡು ಕುಶಲಪ್ರಶ್ನೆಗಳಾದವು. ಮಗಳನ್ನು ಕರೆದು- ‘‘ಈಕೆ ನನ್ನ ಮಗಳು ಸಾವಿತ್ರಿ. ಇವಳನ್ನು ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳಬೇಕು’’ ಎಂದು ಪ್ರಾರ್ಥಿಸಿದನು.

ದ್ಯುಮತ್ಸೇನ- ಮಹಾರಾಜ, ನಾವು ರಾಜ್ಯವನ್ನು ಕಳೆದುಕೊಂಡು, ಕಾಡಿನಲ್ಲಿರುವವರು. ಸುಕುಮಾರಿಯಾದ ಈ ಸಾವಿತ್ರಿಯು ಈ ಕಷ್ಟವನ್ನು ಹೇಗೆ ಸಹಿಸಬಲ್ಲಳು? ಅವಳು ಕಾಡಿನಲ್ಲಿರಬಲ್ಲಳೆ? ಕಂದ ಮೂಲಗಳನ್ನು ತಿಂದು ಜೀವಿಸಬಲ್ಲಳೆ?

ಅಶ್ವಪತಿ – ಹಿರಿಯರೆ, ನನ್ನ ಕೋರಿಕೆಯನ್ನು ಮನ್ನಿಸಿ, ಇವಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಬೇಕು. ನಿಮ್ಮೆಲ್ಲರ ಪ್ರೀತಿಯಲ್ಲಿ ಅವಳು ಉಳಿದ ಕಷ್ಟಗಳನ್ನು ಮರೆಯಬಲ್ಲಳು. ನನ್ನ ಮಗಳು ನಿಮಗೆ ಕೀರ್ತಿಯನ್ನು ತರುತ್ತಾಳೆಂಬ ನಂಬಿಕೆ ನನಗಿದೆ.

ದ್ಯುಮತ್ಸೇನ-ಆಗಲಿ, ಮೊದಲೇ ಈ ಸಂಬಂಧ ನನಗೆ ಇಷ್ಟವಾಗಿದ್ದಿತು. ರಾಜ್ಯವನ್ನು ಕಳೆದುಕೊಂಡ ನಾವು ಕಾಡಿನಲ್ಲಿರುವಾಗ, ಕೇಳುವುದು ಹೇಗೆ ಎಂದು ಸುಮ್ಮನಾದೆ. ನನ್ನ ಮೊದಲ ಯೋಚನೆಯೇ ನಡೆಯಲಿ. ನನಗೆ ಬಹಳ ಸಂತೋಷ.

ಸಾವಿತ್ರಿ ಸತ್ಯವಂತರ ಮದುವೆ ಸರಳವಾಗಿ ನೆರವೇರಿತು. ತಾನು ಮೆಚ್ಚಿದ ಗಂಡ ದೊರೆತನಲ್ಲ ಎಂದು ಸಾವಿತ್ರಿಗೆ ಸಂತೋಷ. ಸಾವಿತ್ರಿಯಂತಹ ರೂಪವತಿ, ಗುಣವತಿ ಹೆಂಡತಿ ತನಗೆ ಸಿಕ್ಕಳು ಎಂದು ಸತ್ಯವಂತನಿಗೆ ಹಿಗ್ಗು!

ಹದಿನೆಂಟು ವರ್ಷಗಳ ನಿರಂತರ ತಪಸ್ಸಿನಿಂದ ಪಡೆದ ಪ್ರೇಮದ ಪುತ್ರಿ ಸಾವಿತ್ರಿ. ಅವಳನ್ನು ಬಿಟ್ಟು ಹೋಗುವುದು ಅಶ್ವಪತಿಗೆ ಸುಲಭವಾಗಲಿಲ್ಲ. ಭಾರವಾದ ಹೃದಯದಿಂದ ಮಗಳನ್ನು ಒಪ್ಪಿಸಿಕೊಟ್ಟು ತನ್ನ ರಾಜ್ಯಕ್ಕೆ ಅಶ್ವಪತಿಯು ಹಿಂದಿರುಗಿದನು.

ಸಂತೋಷದ ನಡುವೆಯೇ ಕೊರಗು

ಸಾವಿತ್ರಿಯು ನಾರುಮಡಿಯನ್ನುಟ್ಟಳು. ಆಭರಣಗಳನ್ನೆಲ್ಲಾ ತೆಗೆದಿಟ್ಟಳು. ಅತ್ತೆಮಾವಂದಿರ ಸೇವೆಯನ್ನು ಸಂತೋಷದಿಂದ ಮಾಡಲಾರಂಭಿಸಿದಳು. ನಗುನಗುತ್ತ ಎಲ್ಲರಿಗೂ ಮೆಚ್ಚಿನವಳಾದಳು. ಸತ್ಯವಂತನ ಪ್ರೀತಿಪಾತ್ರ ಮಡದಿಯಾದಳು.

ಆದರೆ ನಾರದರು ಹೇಳಿದ ಮಾತು ಮಾತ್ರ ಅವಳ ಮನಸ್ಸಿನಿಂದ ಕ್ಷಣಕಾಲವೂ ಮರೆಯಾಗಲಿಲ್ಲ. ಮನಸ್ಸಿನಲ್ಲೆ ಕೆಂಡವಾಗಿ ಅದು ಸದಾಕಾಲ ಸುಡುತ್ತಿತ್ತು. ಸತ್ಯವಂತನು ಅಲ್ಪಾಯು ಎನ್ನುವುದನ್ನು ಕನಸಿನಲ್ಲಿಯೂ ಮರೆಯಲಾರದೆ ಹೋದಳು. ಮನಸ್ಸು ಯಾವಾಗಲೂ ನಾರದರ ಮಾತನ್ನೇ ಜಪಿಸುತ್ತಿತ್ತು.

ಒಂದು ದಿನ, ಎರಡು ದಿನ, ಮೂರು ದಿನ-ಎಂದು ದಿನಗಳನ್ನು ಎಣಿಸುತ್ತಿದ್ದಳು.

ಹತ್ತು ತಿಂಗಳು ಉರುಳಿದವು! ಬರಬರುತ್ತಾ ಅಧೀರಳಾಗತೊಡಗಿದಳು. ಆದರೆ ಮನಸ್ಸಿನಲ್ಲಿ ಎಷ್ಟೇ ದುಃಖವಿದ್ದರೂ ತನ್ನ ದಿನದ ಯಾವ ಕೆಲಸವನ್ನೂ ತಪ್ಪಿಸುತ್ತಿರಲಿಲ್ಲ. ದುಃಖವನ್ನು ತೋರಿಸಿಕೊಳ್ಳುತ್ತಿರಲಿಲ್ಲ.

ನಾಲ್ಕೇ ದಿನಗಳು ಉಳಿದಿವೆ

ಕಾಲಚಕ್ರ ಉರುಳುತ್ತಿತ್ತು. ಒಂದು ತಿಂಗಳು, ಎರಡು ತಿಂಗಳು…..ಹೀಗೆ ಹನ್ನೊಂದನೆಯ ತಿಂಗಳು ಉರುಳಿತು. ಇನ್ನು ಉಳಿದದ್ದು ಕೇವಲ ಒಂದೇ ತಿಂಗಳು! ಕೇವಲ ದಿನಗಳ ಲೆಕ್ಕ!!

ದಿನಗಳೂ ಉರುಳಿದುವು. ಸತ್ಯವಂತನ ಆಯುಸ್ಸು ಇನ್ನು ಕೇವಲ ನಾಲ್ಕೇ ದಿನಗಳು! ಸಾವಿತ್ರಿಯು ಮೂರು ದಿನಗಳ ಕಠಿಣ ವ್ರತವನ್ನು ಕೈಗೊಂಡಳು. ಮೂರು ದಿನವೂ ಉಪವಾಸ. ನೀರನ್ನೂ ಸಹ ಕುಡಿಯಬಾರದೆಂಬ ಸಂಕಲ್ಪ. ಹಗಲು ರಾತ್ರಿ ಎನ್ನದೆ ದೇವರ ಅರ್ಚನೆ. ತಂದೆಗೆ ಅನುಗ್ರಹ ಮಾಡಿದ ಸಾವಿತ್ರೀದೇವಿ ತನ್ನ ಮಾಂಗಲ್ಯವನ್ನು ಕಾಪಾಡಲಿ ಎಂದು ಬೇಡಿದಳು.

ಯಾರು ಬೇಡವೆಂದರೂ ಕೇಳಲಿಲ್ಲ. ದ್ಯುಮತ್ಸೇನನು, ‘‘ಮಗಳೇ ಸಾವಿತ್ರಿ, ಇಂತಹ ಕಠಿಣವಾದ ವ್ರತವನ್ನೇಕೆ ಕೈಗೊಂಡೆ? ಮೂರು ದಿನಗಳ ಉಪವಾಸವೆಂದರೆ ಕಷ್ಟವಲ್ಲವೆ?’’ಎಂದನು.

ಸಾವಿತ್ರಿ – ತಂದೆಯೇ, ನನ್ನ ವ್ರತವು ಯಾವ ತೊಂದರೆಯೂ ಇಲ್ಲದೆ ನೆರವೇರಲಿ ಎಂದು ಆಶೀರ್ವದಿಸಿ. ವ್ರತವನ್ನು ನಿಲ್ಲಿಸೆಂದು ಮಾತ್ರ ಹೇಳಬೇಡಿ.

ಎದೆ ನಡುಗಿಸುವ ದಿನ

ಮೂರು ದಿನಗಳೂ ಉರುಳಿದವು. ಸಾವಿತ್ರಿಯ ಪಾಲಿಗೆ ಆ ಮೂರು ದಿನಗಳೂ ಕ್ಷಣದಂತೆ ಕಳೆದು ಹೋದುವು. ಅವಳು ನಿರೀಕ್ಷಿಸುತ್ತಿದ್ದ ದಿನ, ನೆನೆಸಿ ನಡುಗುತ್ತಿದ್ದ ದಿನ, ಬಂದೇ ಬಂದಿತು! ಹಿಂದಿನ ರಾತ್ರಿ ಅವಳ ಸಂಕಟ ಹೇಳತೀರದು. ನಿಂತಲ್ಲಿ ನಿಲ್ಲಲಾರಳು. ಕುಳಿತಲ್ಲಿ ಕುಳಿತಿರಲಾರಳು. ಹೃದಯದಲ್ಲಿ ಸಂಕಟದ ಗಣಿಯನ್ನೇ ಹೊತ್ತುಕೊಂಡಿದ್ದಳು!

ಬೆಳಗಾಯಿತು!

ಮನಸ್ಸಿನ ವೇದನೆ ಹೇಳತೀರದು. ಆದರೂ ತನ್ನ ನಿತ್ಯದ ಕೆಲಸಗಳನ್ನು ಸಾವಿತ್ರಿ ಮರೆಯಲಿಲ್ಲ. ಮಾವನಿಗೆ ದೇವತಾಪೂಜೆಗೆ ಅಣಿಮಾಡಿದಳು. ಅತ್ತೆಮಾವಂದಿರ ಶುಶ್ರೂಷೆ ಮಾಡಿದಳು. ಅವರಿಗೆ ಗೆಡ್ಡೆಗೆಣಸುಗಳನ್ನು ಕೊಟ್ಟು ತೃಪ್ತಿಪಡಿಸಿದಳು. ಹಿರಿಯರಿಗೆ ನಮಸ್ಕರಿಸಿದಳು. ‘ದೀರ್ಘ ಸುಮಂಗಲೀ ಭವ’’ (ಗಂಡನೊಡನೆ ಬಹುಕಾಲ ಸುಖವಾಗಿ ಬಾಳು) ಎಂದು ಆಶೀರ್ವಾದವನ್ನು ಪಡೆದಳು. ಋಷಿಗಳು, ಸತ್ಯವಂತರು ಆದವರ ಬಾಯಲ್ಲಿ ಬರುವ ಮಾತು ಎಂದೂ ಸುಳ್ಳಾಗದು ಎಂದು ಅವಳ ನಂಬಿಕೆ. ಅವರು ಮಾಡಿದ ಆಶೀರ್ವಾದವೇ ನಿಜವಾಗಲೆಂದು ಬಯಸಿದಳು.

ಇನ್ನು ಗಳಿಗೆಗಳನ್ನು ಮಾತ್ರ ಎಣಿಸುವಷ್ಟು ಹತ್ತಿರ ಬಂದಿತ್ತು ಸತ್ಯವಂತನ ಮೃತ್ಯು!

ನಾನೂ ನಿಮ್ಮ ಜೊತೆ ಬರುವೆ

ನಿತ್ಯಕ್ರಮದಂತೆ ಸತ್ಯವಂತನು ಕಟ್ಟಿಗೆಯನ್ನು ಒಡೆದು ತರಲು ಕಾಡಿಗೆ ಹೊರಟನು. ಸಾವಿತ್ರಿ ಅಂದು ಅವನನ್ನು ಬಿಟ್ಟಿರಲಾರಳು. ಅವನ ಕೆಲಸಕ್ಕೆ ತೊಂದರೆ ಮಾಡಿ ಹೋಗಬೇಡಿ ಎಂದೂ ಹೇಳಲಾರಳು. ‘‘ಏಕೆ?’’ ಎಂದು ಅವನು ಕೇಳಿದರೆ? ‘‘ನಿಮ್ಮ ಸಾವು ಹತ್ತಿರವಿದೆ’’ ಎಂದು ಹೇಳಲು ಸಾಧ್ಯವೇ? ಆದರೆ ಒಬ್ಬನನ್ನೇ ಕಳುಹಿಸುವುದು ಹೇಗೆ? ಅವಳು ಹೃದಯ ಮುಂದಾಗುವುದನ್ನು ನೆನೆದು ಭಯದಿಂದ ಕಂಪಿಸಿತು.

ಸತ್ಯವಂತನನ್ನು ಸಮೀಪಿಸಿ, ‘ದೇವ, ಇಂದು ನಿಮ್ಮೊಡನೆ ಕಾಡಿಗೆ ಬಂದು ಅಲ್ಲಿನ ಸೌಂದರ್ಯವನ್ನು ಸವಿಯುವ ಆಸೆಯಾಗಿದೆ. ನಿಮ್ಮ ಕೆಲಸದಲ್ಲಿ ಸಹಾಯ ಮಾಡುವ ಆಸೆಯಾಗಿದೆ. ನಾನೂ ನಿಮ್ಮ ಜೊತೆ ಬರುವೆ. ಇಲ್ಲ ಎನ್ನಬೇಡಿ’’ ಎಂದು ಬೇಡಿದಳು.

ಸತ್ಯವಂತನಿಗೆ ಆಶ್ಚರ್ಯವಾಯಿತು. ಅವನೆಂದ: ‘‘ಪ್ರಿಯೆ, ನೀನು ನನ್ನ ಜೊತೆ ಬರುವುದು ನನಗೂ ಸಂತೋಷವೇ. ಆದರೆ ಮೂರು ದಿನಗಳ ಕಠಿಣ ವ್ರತದಿಂದ ನೀನು ಬಳಲಿದ್ದೀಯೆ. ಇನ್ನೂ ಆಹಾರವನ್ನು ಸೇವಿಸಿಲ್ಲ. ಕಾಡಿನ ದಾರಿ ಬಹು ಕಷ್ಟ. ನಿನಗೆ ಆಯಾಸವಾಗುತ್ತದೆ. ಇಂದೇ ಏತಕ್ಕೆ? ನಿನ್ನ ವ್ರತ ಮುಗಿದ ಮೇಲೆ ಬಾ.’’

ಸಾವಿತ್ರಿ-ನನಗೇನೂ ಕಷ್ಟವಾಗುವುದಿಲ್ಲ. ಕಾಡಿನಲ್ಲಿ ಹೂ ಬಿಟ್ಟಿರುವುದನ್ನು ನೋಡಲು, ಪಕ್ಷಿಗಳ ಕೂಗಳನ್ನು ಕೇಳಲು ಆಸೆಯಾಗಿದೆ. ಇಂದೇ ಬರುತ್ತೇನೆ.

ಸತ್ಯವಂತ-ಸಾವಿತ್ರಿ, ನಿನ್ನನ್ನು ನೋಯಿಸುವ ಇಷ್ಟ ನನಗಿಲ್ಲ. ನಿನಗೆ ಸಂತೋಷವಾಗುವುದಾದರೆ ಅದಕ್ಕೆ ನಾನು ಅಡ್ಡಿಬರುವುದಿಲ್ಲ. ನೀನು ನನ್ನೊಡನೆ ಬಂದರೆ ನನಗೂ ಸಂತೋಷವಿದೆ. ಹೋಗು, ನಿನ್ನ ಅತ್ತೆಮಾವಂದಿರಿಗೆ ಹೇಳಿ ಅವರ ಅಪ್ಪಣೆಯನ್ನು ಪಡೆದು ಬಾ.

ಸಾವಿತ್ರಿ ಅತ್ತೆಮಾವಂದಿರ ಅಪ್ಪಣೆಯನ್ನು ಪಡೆದು ಗಂಡನೊಡನೆ ಕಾಡಿಗೆ ಹೊರಟಳು. ನಗುನಗುತ್ತ ಮಾತನಾಡುತ್ತಿದ್ದಳು. ಆದರೆ ಒಳಗೆ ನೋಯುತ್ತಿದ್ದಳು. ತನ್ನ ಜೊತೆ ಸಾವಿತ್ರಿ ಬಂದುದರಿಂದ ಸತ್ಯವಂತನಿಗೆ ಅಪಾರವಾದ ಸಂತೋಷವಾಗಿತ್ತು. ಎಂದಿಗಿಂತ ಉತ್ಸಾಹದಿಂದ ಹೆಜ್ಜೆ ಹಾಕುತ್ತಾ ಸಾವಿತ್ರಿಗೆ ಕಾಡಿನ ಸೌಂದರ್ಯವನ್ನು ತೋರಿಸಿದನು. ಮನಸ್ಸು ಕುದಿಯುತ್ತಿದ್ದರೂ ಸಾವಿತ್ರಿ ಗಂಡನ ಮಾತಿಗೆ ತನ್ನ ಮಾತನ್ನು ಸೇರಿಸುತ್ತಾ ಅವನಿಗೆ ಸಂತೋಷವನ್ನುಂಟುಮಾಡುತ್ತಾ ಹೆಜ್ಜೆ ಹಾಕಿದಳು.

ಇಬ್ಬರೂ ಸೇರಿ ಪೂಜೆಗೆ ಬೇಕಾದ ಹೂಗಳನ್ನು ಆರಿಸಿದರು. ಹಣ್ಣುಗಳನ್ನು ಶೇಖರಿಸಿದರು. ಸಾವಿತ್ರಿಯನ್ನು ಮರದ ಕೆಳಗೆ ನೆರಳಿನಲ್ಲಿ ಕುಳ್ಳಿರಿಸಿ ಸತ್ಯವಂತನು ಕಟ್ಟಿಗೆಯನ್ನು ಒಡೆಯಲು ಪ್ರಾರಂಭಿಸಿದನು. ಸಾವಿತ್ರಿ ಅವನನ್ನೆ ಕಣ್ಣರೆಪ್ಪೆಯನ್ನು ಮುಚ್ಚದೆ ನೋಡುತ್ತಾ ಕುಳಿತಿದ್ದಳು. ‘ನಾರದರು ಹೇಳಿದ ಗಳಿಗೆ ಇನ್ನೇನು ಬಂದೇಬಿಟ್ಟಿತು’’ ಎಂದು ಅವಳ ಮನಸ್ಸು ನಡುಗುತ್ತಿತ್ತು, ಸಂಕಟಪಡುತ್ತಿತ್ತು.

ನಾನು ಯಮ

‘ಇದ್ದಕ್ಕಿದ್ದಂತೆ ಸತ್ಯವಂತನ ಮೈ ಬೆವರಿತು. ತಲೆಯಲ್ಲಿ ಸಹಿಸಲು ಅಸಾಧ್ಯವಾದ ನೋವುಂಟಾಯಿತು. ‘‘ಸಾವಿತ್ರೀ….’’ ಎಂದು ಕರೆದ. ಕುಳಿತಿದ್ದ ಸಾವಿತ್ರಿ ತಟ್ಟನೆದ್ದು ಪತಿಯ ಹತ್ತಿರ ಹೋದಳು.

ಸತ್ಯವಂತ-ಸಾವಿತ್ರಿ, ಸಹಿಸಲಸಾಧ್ಯವಾದ ತಲೆನೋವು, ಮೈ ಬೆವರುತ್ತಿದೆ. ತಲೆ ಸಿಡಿಯುತ್ತಿದೆ.

ಸಾವಿತ್ರಿ-ದೇವ, ತುಂಬ ಅಲೆದಿದ್ದೀರಿ. ಸೌದೆ ಒಡೆದಿದ್ದೀರಿ. ವಿಶ್ರಾಂತಿ ಪಡೆದರೆ ತಲೆನೋವು ನಿಲ್ಲುತ್ತದೆ. ನನ್ನ ತೊಡೆಯ ಮೇಲೆ ಮಲಗಿ ವಿಶ್ರಮಿಸಿಕೊಳ್ಳಿ.

ಸಾವಿತ್ರಿ ಗಂಡನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡಳು. ಮರುಕ್ಷಣದಲ್ಲಿಯೇ ಸತ್ಯವಂತನ ಕಾಲಿನ ಹತ್ತಿರ ಕಪ್ಪಾದ, ಅಜಾನುಬಾಹುವಾದ ಆಕೃತಿ ಕಂಡಿತು. ಅವನೇ ಯಮಧರ್ಮರಾಜ!

ಸಾವಿತ್ರಿ ಗಂಡನ ತಲೆಯನ್ನು ಕೆಳಗೆ ಇಟ್ಟು ಎದ್ದು ನಿಂತು  ಆ ಆಕೃತಿಗೆ ನಮಸ್ಕರಿಸಿದಳು. ಭಯಭಕ್ತಿಯಿಂದ ‘‘ಪ್ರಭೂ, ತಾವು ಯಾರು? ಇಲ್ಲಿಗೇಕೆ ಬಂದಿದ್ದೀರಿ’’ ಎಂದು ಕೇಳಿದಳು.

ಸಾಮಾನ್ಯರ ಕಣ್ಣಿಗೆ ಮೃತ್ಯುದೇವತೆ ಯಮಧರ್ಮರಾಜನು ಕಾಣಿಸಿಕೊಳ್ಳುವುದಿಲ್ಲ. ಸಾವಿತ್ರಿಯಾದರೋ ಪತಿಯಲ್ಲಿ ನಿಷ್ಠೆಯನ್ನಿಟ್ಟವಳು, ಕಠಿಣವಾದ ವ್ರತಗಳನ್ನು ನಡೆಸಿದವಳು. ಆದ್ದರಿಂದ ಅವಳು ಯಮನನ್ನು ಕಾಣಲು ಸಾಧ್ಯವಾಯಿತು.

ಸಾವಿತ್ರಿಯ ಪ್ರಶ್ನೆಗೆ ಯಮನು ನಿಜವಾದ ಉತ್ತರವನ್ನೇ ಹೇಳಿದನು.

ಯಮ – ಭದ್ರೆ! ನಿನ್ನ ಪತಿಯ ಆಯುಸ್ಸು ಇಂದಿಗೆ ಮುಗಿಯಿತು. ನಾನು ಯಮ. ಅವನ ಜೀವವನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ. ನೀನು ತೇಜಸ್ವಿನಿಯಾದುದರಿಂದ ನಿನಗೆ ಕಾಣಿಸಿದ್ದೇನೆ. ನಿನ್ನ ಮಾತಿಗೆ ಉತ್ತರ ಕೊಟ್ಟಿದ್ದೇನೆ.

ಯಮಧರ್ಮನು ಸತ್ಯವಂತನ ಪ್ರಾಣವನ್ನು ತನ್ನ ಪಾಶದಲ್ಲಿ ಹಿಡಿದು ಕಟ್ಟಿದನು. ಹಾಗೆ ಮಾಡುತ್ತಲೇ ಸತ್ಯವಂತನ ಪ್ರಾಣ ಹೋಯಿತು. ದಕ್ಷಿಣದ ದಿಕ್ಕಿಗೆ ಯಮನು ಹೊರಟನು. ಸ್ವಲ್ಪ ದೂರ ಹೋಗಿ ಹಿಂದಿರುಗಿ ನೋಡಿದನು.

ನನ್ನ ಧರ್ಮವನ್ನು ಬಿಡಲಾರೆ

ಸಾವಿತ್ರಿ ಅವನ ಹಿಂದೆಯೇ ಬರುತ್ತಿದ್ದಾಳೆ!

ಆಶ್ಚರ್ಯವಾಯಿತು ಯಮನಿಗೆ. ಕೋಟ್ಯಂತರ ಜೀವಿಗಳನ್ನು ಅವನೂ ಅವನ ದೂತರೂ ಯಮಲೋಕಕ್ಕೆ ಸೆಳೆದುಕೊಂಡು ಹೋಗಿದ್ದರು. ಸತ್ತವರ ಹಿಂದೆ ಹೀಗೆ ಯಾರೂ ಹೆಜ್ಜೆ ಹಾಕಿರಲಿಲ್ಲ. ತನ್ನನ್ನು ಹಿಂಬಾಲಿಸಿ ಬರುತ್ತಿರುವ ಈ ಹೆಣ್ಣುಮಗಳ ಸ್ಥೆ ರ್ಯವನ್ನು ಮನಸ್ಸಿನಲ್ಲಿಯೇ ಮೆಚ್ಚಿಕೊಂಡ.

ಅದನ್ನು ತೋರಿಸಿಕೊಳ್ಳದೆ ಯಮನು ನಿಂತ, ಸಾವಿತ್ರಿಯನ್ನು ಕುರಿತು ಹೇಳಿದ, ‘ಸಾವಿತ್ರಿ, ನಿನ್ನ ಗಂಡನನ್ನು ಎಷ್ಟು ದೂರ ಹಿಂಬಾಲಿಸಬಹುದೋ ಅಷ್ಟು ದೂರ ಹಿಂಬಾಲಿಸಿದ್ದೀಯೆ. ಬದುಕಿದ್ದಾಗ ಅವನಿಗೆ ನೆರಳಾಗಿ ನಡೆದಿದ್ದೀಯೆ. ಇನ್ನು ಹಿಂತಿರುಗು. ನಿನ್ನ ಅವನ ಋಣ ತೀರಿತು. ಹೋಗಿ ಶವಸಂಸ್ಕಾರ ಮಾಡು.’’

ಸಾವಿತ್ರಿ-ನನ್ನ ಗಂಡನು ಎಲ್ಲಿರುತ್ತಾನೋ ಅಲ್ಲಿರಬೇಕಾದುದು ನನ್ನ ಧರ್ಮ. ಏಳು ಹೆಜ್ಜೆ ಜೊತೆಯಾಗಿ  ನಡೆದರೆ ಅಂತಹವರು ಸ್ನೇಹಿತರಾಗುತ್ತಾರಂತೆ. ನಿನ್ನೊಡನೆ ಇಷ್ಟು ದೂರ ಬಂದಿದ್ದೇನೆ. ಅದರಂತೆ ನೀನು ನನ್ನ ಸ್ನೇಹಿತನಾದೆ. ಆದ್ದರಿಂದ ನಿನ್ನ ಬಳಿ ಮಾತನಾಡಲು ಆಸೆಯುಂಟಾಗುತ್ತಿದೆ. ಕಾಡಿನಲ್ಲಿ ತಪಸ್ಸು ಮಾಡುವುದು ಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕಾಗಿ, ಧರ್ಮಕ್ಕಾಗಿ. ಸಜ್ಜನರು ಎಲ್ಲಕ್ಕಿಂತ ಧರ್ಮ ದೊಡ್ಡದು ಎಂದು ಹೇಳುತ್ತಾರೆ. ನನ್ನ ಗಂಡನ ಜೊತೆಗಿರುವುದೇ ನನ್ನ ಧರ್ಮ. ಆ ಧರ್ಮವನ್ನು ಬಿಡಲು ನನಗೆ ಮನಸ್ಸಾಗದು.

ವರವನ್ನು ಕೇಳು

ಸಾವಿತ್ರಿಯ ಮಾತುಗಳಿಂದ ಯಮನು ಸಂತೋಷಗೊಂಡ. ಆದರೆ ಸತ್ತವನ ಪ್ರಾಣವನ್ನು ಹಿಂದಕ್ಕೆ ಕೊಡುವುದು ಸರಿಯೆ?

ಯಮ-ಭದ್ರೆ, ನಿನ್ನ ಮಾತುಗಳಿಂದ ನನಗೆ ಬಹಳ ಸಂತೋಷವಾಗಿದೆ. ಸತ್ಯವಂತನ ಪ್ರಾಣವನ್ನು ಬಿಟ್ಟು ಬೇರೆ ಯಾವ ವರವನ್ನಾದರೂ ಕೇಳು, ಕೊಡುತ್ತೇನೆ.

ಸಾವಿತ್ರಿ-ಧರ್ಮರಾಜ, ಅನುಗ್ರಹೀತಳಾದೆ. ನನಗಾಗಿ ಏನೂ ಬೇಡ, ನಿನ್ನ ಕೃಪೆಯಿಂದ ಕುರುಡನಾದ ನನ್ನ ಮಾವನಿಗೆ ಕಣ್ಣು ಬರಲಿ. ಮೊದಲಿನ ಬಲಪರಾಕ್ರಮಗಳುಂಟಾಗಲಿ.’’

ಸಾವಿತ್ರಿ ತನ್ನ ಅತ್ತೆ ಮಾವಂದಿರಲ್ಲಿ ಇಟ್ಟ ಪ್ರೀತಿಯನ್ನು ಕಂಡು ಯಮನಿಗೆ ಸಂತೋಷವಾಯಿತು. ಅವನೆಂದ-‘‘ಹಾಗೇ ಆಗಲಿ, ನೀನಿನ್ನು ಹೊರಡು, ನಿನಗೆ ಆಯಾಸವಾಗುತ್ತದೆ.’’

ಸಾವಿತ್ರಿ-ಪ್ರಭೂ, ನನ್ನ ಗಂಡನ ಹತ್ತಿರವಿರುವಾಗ ಆಯಾಸವೆಲ್ಲಿಂದ ಬಂತು? ಅವನಿದ್ದಲ್ಲಿ ನಾನಿರತಕ್ಕವಳು. ಅಲ್ಲದೆ ಸತ್ಪುರುಷರ ಸಹವಾಸ ಒಮ್ಮೆ ಸಿಕ್ಕಿದರೆ ಅವರು ಎಂದೆಂದೂ ಮಿತ್ರರಾಗಿರುತ್ತಾರೆ. ಸತ್ಸಂಗದಿಂದ ಫಲ ದೊರಕಿಯೇ ದೊರಕುತ್ತದೆ. ಆದ್ದರಿಂದ ಸತ್ಸಹವಾಸವಿರಬೇಕು.

ಯಮನು ಅವಳ ಬುದ್ಧಿವಂತಿಕೆಗೆ ತಲೆದೂಗಿದನು.

ಆದರೇನು? ಸತ್ಯವಂತನ ಪ್ರಾಣವನ್ನು ಹಿಂದಕ್ಕೆ ಕೊಡುವಂತಿಲ್ಲವಲ್ಲ!

ಯಮ-ಮಗಳೆ, ನಿನ್ನ ಮಾತುಗಳು ಮನಸ್ಸಿಗೆ ಹರ್ಷವನ್ನು ಉಂಟುಮಾಡುವಂತಿವೆ. ನಾನು ಸುಪ್ರೀತನಾಗಿದ್ದೇನೆ. ನಿನ್ನ ಗಂಡನ ಜೀವವನ್ನು ಬಿಟ್ಟು ಯಾವ ವರವನ್ನಾದರೂ ಕೇಳು.

ಸಾವಿತ್ರಿ-ದೇವ, ನನ್ನ ಮೇಲೆ ಪ್ರಸನ್ನಗೊಂಡಿದ್ದೀಯೆ. ನನ್ನ ಮಾವನಿಗೆ ಕಳೆದುಹೋದ ರಾಜ್ಯ ಪುನಃ ದೊರಕಿ ಧರ್ಮಮಾರ್ಗದಲ್ಲಿ ರಾಜ್ಯವಾಳುವಂತಾಗಲಿ.

ಯಮ- ತಥಾಸ್ತು. ನೀನು ಹಿಂದಿರುಗು, ನಿನ್ನ ಕರ್ತವ್ಯವನ್ನು ನೆರವೇರಿಸು.

ಸಾವಿತ್ರಿ-ಯಮಧರ್ಮರಾಜ, ನೀನು ಎಲ್ಲ ಪ್ರಾಣಿಗಳನ್ನು ಒಂದು ನಿಯಮದ ಕಟ್ಟಿನಲ್ಲಿ ಇಟ್ಟಿದ್ದೀಯೆ. ಆ ನಿಯಮವನ್ನು ಮೀರದೆ ನೀನು ನಡೆದುಕೊಳ್ಳುತ್ತಿದ್ದೀಯೆ. ಆದ್ದರಿಂದಲೇ ನಿನಗೆ ಧರ್ಮರಾಜನೆಂದು ಹೆಸರು. ನನ್ನ ಮಾತನ್ನು ಕೇಳು. ಮಾತಿನಲ್ಲಿ, ಮನಸ್ಸಿನಲ್ಲಿ, ಕಾರ್ಯದಲ್ಲಿ, ಯಾವುದರಲ್ಲೂ ಯಾರಿಗೂ ದ್ರೋಹ ಮಾಡಬಾರದು. ಬದಲಾಗಿ ಉಪಕಾರ ಮಾಡಬೇಕು. ಇದೇ ಧರ್ಮ. ಲೋಕವು ಉಳಿದಿರುವುದು ಈ ಧರ್ಮದಿಂದ. ಒಳ್ಳೆಯವರು ತಮ್ಮ ಶತ್ರುಗಳಿಗೂ ದಯೆ ತೋರುತ್ತಾರೆ. ಹೀಗೆಂದು ನಾನು ತಿಳಿದುಕೊಂಡಿದ್ದೇನೆ.

ಯಮ-ಮಗಳೆ, ನೀನು ಆಡಿದ ಮಾತು ಅಮೃತದಂತಿದೆ. ನನಗೆ ಮೇರೆಯರಿಯದ ಸಂತೋಷವುಂಟಾಗಿದೆ. ಸತ್ಯವಂತನ ಪ್ರಾಣ ಹೊರತು ಇನ್ನೇನು ವರವನ್ನು ಬೇಕಾದರೂ ಕೇಳು.

ಸಾವಿತ್ರಿ-ದೇವ, ನನ್ನ ತಂದೆಗೆ ವಂಶ ಅಭಿವೃದ್ಧಿಯಾಗಲು ಬಲಶಾಲಿಗಳಾದ ಅನೇಕ ಗಂಡುಮಕ್ಕಳಾಗಲಿ, ನನ್ನ ತೌರು ಬೆಳಗಲಿ.

ಯಮ- ನಿನ್ನಿಷ್ಟದಂತೆ ಆಗಲಿ. ನಿನ್ನ ತಂದೆಗೆ ಸುಪುತ್ರರು ಹುಟ್ಟುತ್ತಾರೆ. ಬಹಳ ದೂರ ಹಿಂಬಾಲಿಸಿದ್ದೀಯೆ. ಇನ್ನು ಹಿಂದಿರುಗು.

ಸಾವಿತ್ರಿ- ಗಂಡನ ಹತ್ತಿರವಿರುವಾಗ ಇದು ನನಗೆ ದೂರವಲ್ಲ. ನನ್ನ ಮನಸ್ಸು ಇದಕ್ಕಿಂತಲೂ ದೂರದೂರ ಓಡುತ್ತಿದೆ. ಹೀಗೆ ಹೋಗುತ್ತ ನನ್ನ ಇನ್ನೊಂದು ಮಾತನ್ನು ಕೇಳು. ನೀನು ಪ್ರತಾಪಶಾಲಿ. ಶಾಂತಿಯಿಂದ, ಧರ್ಮದಿಂದ ನಡೆಯುತ್ತಾ ನೀನು ಧರ್ಮರಾಜನಾಗಿದ್ದೀಯೆ. ಸಜ್ಜನರ ಪ್ರೀತಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅವರ ಸ್ನೇಹಕ್ಕಾಗಿ ಕಾತರಿಸುತ್ತಾರೆ. ಅಂತಹ ಸ್ನೇಹದಿಂದ ಎಂದೂ ಕೆಡಕಾಗುವುದಿಲ್ಲ. ಇಂತಹ ಸ್ನೇಹದಿಂದ ನಂಬಿಕೆ ಹುಟ್ಟುತ್ತದೆ. ಸಜ್ಜನನಾದ ನಿನ್ನಲ್ಲಿ ನನಗೆ ನಂಬಿಕೆ ಹೆಚ್ಚಾಗಿದೆ. ನಿನ್ನಿಂದ ನನಗೆ ಕೆಡುಕಾಗುವುದಿಲ್ಲವೆಂಬ ಭರವಸೆಯಿದೆ.

ಯಮನೂ ಸೋತ

ಯಮ-ಅಮ್ಮಾ, ನಿನ್ನಿಂದಲ್ಲದೆ ಬೇರೆ ಯಾರಿಂದಲೂ ನಾನು ಇಂತಹ ಮಾತುಗಳನ್ನು ಕೇಳಿರಲಿಲ್ಲ. ನಿನ್ನ ಗಂಡನ ಪ್ರಾಣವೊಂದನ್ನು ಬಿಟ್ಟು ಯಾವ ವರವನ್ನಾದರೂ ಕೇಳಿಕೊ, ಕೊಡುತ್ತೇನೆ.

ಸಾವಿತ್ರಿ-ದೇವ, ನನ್ನ  ಮೇಲೆ ಅಪಾರವಾದ ದಯೆ ತೋರಿಸಿದ್ದೀಯೆ. ನಾನು ಧನ್ಯಳು. ಸತ್ಯವಂತನಿಂದ ನನಗೆ ಕುಲೋದ್ಧಾರಕರೂ, ಬಲಶಾಲಿಗಳೂ ಆದ ಮಕ್ಕಳಾಗಲಿ.

ಯಮ-ಆಗಲಿ, ನಿನಗೆ ಆಯಾಸವಾಗುತ್ತದೆ, ಹಿಂದಿರುಗು.

ಸಾವಿತ್ರಿ-ದೇವ, ನನ್ನ ಮಾತನ್ನು ಆಲಿಸು. ಸಜ್ಜನರಾದವರು ಎಂದೆಂದೂ ಧರ್ಮಮಾರ್ಗದಲ್ಲಿಯೇ ನಡೆಯುತ್ತಾರೆ. ಎಂತಹ ಕಷ್ಟ ಬಂದರೂ ಸತ್ಯವನ್ನು ಬಿಡುವುದಿಲ್ಲ. ಅಧರ್ಮ ಮಾಡುವುದಿಲ್ಲ. ಇವರು ಪ್ರತಿ ಉಪಕಾರವನ್ನು ಬಯಸದೆ ಉಪಕಾರ ಮಾಡತಕ್ಕವರು. ಸಜ್ಜನರಿಂದ, ಅವರ ತಪಸ್ಸಿನಿಂದ ಭೂಮಿಯು ನಡೆಯುತ್ತಿರುವುದು. ಅವರು ಅನುಗ್ರಹ ಮಾಡಿದರೆ ಎಂದೂ ಕೇಡಾಗದು.

ಯಮ-ಮಗಳೆ! ನಿನ್ನ ಮಾತುಗಳು ಧರ್ಮಯುಕ್ತವಾಗಿವೆ. ಘನವಾದ ಅರ್ಥದಿಂದ ಕೂಡಿವೆ. ನಿನ್ನ ಮಾತನ್ನು ಕೇಳುತ್ತ ನನಗೆ ನಿನ್ನಲ್ಲಿ ಗೌರವ ಹೆಚ್ಚುತ್ತಿದೆ. ಬಹು ದೊಡ್ಡ ವರವನ್ನು ಕೇಳು.

ಸಾವಿತ್ರಿ-ದೇವ, ನೀನಿತ್ತ ವರಗಳು ಸನ್ಮಾರ್ಗದಲ್ಲಿ, ಧರ್ಮಮಾರ್ಗದಲ್ಲಿ ಲಭಿಸಲಿ ಎಂದು ನಾನು ಬೇಡುತ್ತೇನೆ. ಆದ್ದರಿಂದ ಸತ್ಯವಂತನು ಜೀವಿಸಲಿ ಎಂದು ನಾನು ವರವನ್ನು ಕೇಳುತ್ತಿದ್ದೇನೆ. ಅವನಿಲ್ಲದೆ ಇದ್ದರೆ ನಾನು ಸತ್ತಂತೆ. ಗಂಡನಿಲ್ಲದ ಸ್ವರ್ಗ, ಸಂಪತ್ತು ಯಾವುದೂ ನನಗೆ ಬೇಡ. ನಿನ್ನ ಮಾತು ಸತ್ಯವಾಗಲಿ. ಇದೇ ನಾನು ಬೇಡುವ ವರ.

ಸಾವಿತ್ರಿಯ ವಾದಕ್ಕೆ ಯಮಧರ್ಮರಾಜನು ಸೋತನು.

ಯಮ-ಭದ್ರೆ, ಇಗೋ ನಿನ್ನ ಗಂಡನನ್ನು ಬಿಟ್ಟು ಕೊಟ್ಟಿದ್ದೇನೆ. ಅವನು ಆರೋಗ್ಯವಂತನಾಗುತ್ತಾನೆ. ಧರ್ಮದಿಂದ ನಾನೂರು ವರ್ಷಗಳು ಬಾಳಿ ಬದುಕುತ್ತಾನೆ. ಅವನೂ ನೀನೂ ನಿಮ್ಮ ಮಕ್ಕಳೊಂದಿಗೆ ಸಂತೋಷವಾಗಿ ಬಾಳುತ್ತೀರಿ. ನಿಮ್ಮ ಮಕ್ಕಳು ಸಾವಿತ್ರರೆಂದು ಹೆಸರು ಪಡೆದು ಬಾಳುತ್ತಾರೆ. ನಿನ್ನ ತಂದೆಗೂ ಗಂಡುಮಕ್ಕಳಾಗಿ ಅವರು ಮಾಳವರೆಂದು ಪ್ರಸಿದ್ಧರಾಗುತ್ತಾರೆ. ನಿನ್ನ ನಿಷ್ಠೆಯಿಂದ, ವ್ರತದಿಂದ, ಧರ್ಮಮಾರ್ಗದಿಂದ ಸತ್ತ ಗಂಡನನ್ನು ಬದುಕಿಸಿಕೊಂಡೆ. ನಿನಗೆ ಸಮನಾದವರಿಲ್ಲ. ಇನ್ನು ಹಿಂತಿರುಗು.

ಸಾವಿತ್ರಿಯ ಮನಸ್ಸು ಅರಳಿತು. ಯಮನಿಗೆ ಪ್ರಭೂ, ನಿನ್ನ ಕರುಣೆ ಬಹಳ ಹಿರಿದು, ನನಗೆ ಅನುಗ್ರಹ ಮಾಡಿದೆ’’ ಎಂದು ತಲೆಬಾಗಿ ನಮಸ್ಕರಿಸಿದಳು.

ಯಮನು ತನ್ನ ಲೋಕಕ್ಕೆ ಹೊರಟುಹೋದನು.

ಹೇಗೆ ನಿದ್ರೆ ಮಾಡಿದೆನಲ್ಲ!

ಸಾವಿತ್ರಿಯು ಸತ್ಯವಂತನನ್ನು ಮಲಗಿಸಿದ್ದ ಸ್ಥಳಕ್ಕೆ ಬಂದಳು. ಮೊದಲಿನಂತೆ ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡಳು.

ಸತ್ಯವಂತನ ಜೀವ ಪುನಃ ಅವನಲ್ಲಿ ಸೇರಿಕೊಂಡಿತು.

ಸತ್ತುಹೋದ ಪತಿ ಜೀವ ತಳೆದು ಎದ್ದಾಗ, ಅವನಲ್ಲೇ ಪ್ರಾಣವಿಟ್ಟಿದ್ದ ಸಾವಿತ್ರಿಯ ಸಂತೋಷಕ್ಕೆ ಮಿತಿಯುಂಟೆ?

ಸತ್ಯವಂತ ಎಚ್ಚೆತ್ತ!

‘‘ಇದೇನು, ನಾನು ಮಲಗಿ ನಿದ್ರೆ ಹೋದಾಗ ಬೆಳಕಿತ್ತು. ಈಗ ಕತ್ತಲಾಗಿದೆ. ಆಶ್ಚರ್ಯ, ಎಷ್ಟು ಹೊತ್ತು ನಾನು ಮಲಗಿಬಿಟ್ಟೆ! ನನಗೇಕೆ ಇಂತಹ ನಿದ್ರೆ ಬಂದಿತು? ನನ್ನ ಕೆಲಸವನ್ನೆ ಮರೆತೆನಲ್ಲ! ಹೀಗೆ ನಿದ್ರೆ ಮಾಡಿದೆನಲ್ಲ!’’ಎಂದು ಸತ್ಯವಂತನು ಆಶ್ಚರ್ಯಪಟ್ಟ.

ಸಾವಿತ್ರಿಯತ್ತ ತಿರುಗಿ, ‘‘ದೇವಿ, ನಾನು ಬಹಳ ಹೊತ್ತು ಮಲಗಿಬಿಟ್ಟೆ, ಹಿಂದೆಂದೂ ಬರದಂತಹ ನಿದ್ರೆ ನನಗೆ ಬಂದುಬಿಟ್ಟಿತು. ನಾನು ಮಲಗಿದ್ದಾಗ ಕಂಡ ಆ ಕಪ್ಪು ಮನುಷ್ಯನೆಲ್ಲಿ? ನೀನು ಅವನನ್ನು ನೋಡಿದೆಯಾ?’’ ಎಂದು ಕೇಳಿದ.

ಸಾವಿತ್ರಿ-ಪ್ರಿಯ, ನೀನು ಬಹಳ ಹೊತ್ತು ಮಲಗಿದ್ದು ನಿಜ. ನೀನು ಕಂಡ ಆ ಕಪ್ಪು ಆಕೃತಿ ಬೇರಾರೂ ಅಲ್ಲ. ಅವನು ಯಮಧರ್ಮರಾಜ. ಸಕಲ ಪ್ರಾಣಿಗಳಿಗೆ ನಿಯಾಮಕನು ಅವನು. ಅವನು ಹೊರಟುಹೋದ. ನಿದ್ರೆ ಮುಗಿದು ನೀನು ವಿಶ್ರಾಂತಿ ಹೊಂದಿದ್ದೀಯೆ. ನಿನ್ನ ಕೈಲಾದರೆ ಏಳು, ಹೋಗೋಣ.

ಸತ್ಯವಂತ-ನಾನು ಕಂಡ ಆ ಕಪ್ಪು ವ್ಯಕ್ತಿ ನನ್ನನ್ನು ಎಳೆದುಕೊಂಡು ಹೋದ ಎನ್ನಿಸಿತು, ಅಹುದೆ? ಇಲ್ಲ, ಬರಿಯ ಕನಸೋ? ನಿನಗೆ ತಿಳಿದಿದ್ದರೆ ಹೇಳು ಸಾವಿತ್ರಿ.

ಸಾವಿತ್ರಿ-ಆರ್ಯ, ಕಣ್ಣೇ ಕಾಣಿಸದಷ್ಟು ಕತ್ತಲೆಯಿದೆ. ನಾಳೆ ಎಲ್ಲ ವಿಷಯವನ್ನು ನಿನಗೆ ಹೇಳುತ್ತೇನೆ. ಸೌದೆ ತರಲೆಂದು ಕಾಡಿಗೆ ನಾವು ಬಂದವರು ರಾತ್ರಿಯಾದರೂ ಆಶ್ರಮಕ್ಕೆ ಹಿಂದಿರುಗಿಲ್ಲ. ನಿನ್ನ ತಂದೆತಾಯಿಗಳಿಗೆ ಈ ವೇಳೆ ಬಹಳ ಯೋಚನೆಯುಂಟಾಗಿರುತ್ತದೆ. ಇದು ರಾಕ್ಷಸರು ಓಡಾಡುವ ಹೊತ್ತು. ಮೃಗಗಳು ನಡೆಯುವ ಶಬ್ದಕ್ಕೆ ತರಗೆಲೆಗಳು ಮರಮರ ಎನ್ನುತ್ತಿವೆ. ಈ ಕತ್ತಲು ಹೆದರಿಕೆಯನ್ನುಂಟು ಮಾಡುತ್ತಿದೆ. ಮನೆಗೆ ಹೋಗೋಣ, ಏಳು.

ಸತ್ಯವಂತ-ದಾರಿಯು ಕಾಣದಷ್ಟು ಕತ್ತಲೆ ಕವಿದಿದೆ. ದಾರಿ ಹೇಗೆ ತಿಳಿಯುತ್ತದೆ? ನಾವು ಆಶ್ರಮವನ್ನು ಸೇರುವ ಬಗೆ ಹೇಗೆ?

ಮರಳಿ ಆಶ್ರಮಕ್ಕೆ

ಕಾಡಿನಲ್ಲಿ ಒಂದು ಕಾಡುಗಿಚ್ಚು ಉರಿಯುತ್ತಿತ್ತು. ಅದರಿಂದ ಸ್ವಲ್ಪ ಉರಿ ತಂದು ಕಟ್ಟಿಗೆ ಹಚ್ಚಿ ಉರಿ ಮಾಡಿದಳು ಸಾವಿತ್ರಿ.

ಸತ್ಯವಂತನಿಗೆ ತಂದೆತಾಯಿಗಳ ಯೋಚನೆ. ಅವನು ಕಳವಳಗೊಂಡು, ‘‘ಸಾವಿತ್ರಿ, ನಾನು ವೇಳೆಯಲ್ಲದ ವೇಳೆಯಲ್ಲಿ ಎಂದೂ ಆಶ್ರಮದಿಂದ ಹೊರಕ್ಕೆ ಕಾಲಿಟ್ಟವನಲ್ಲ. ಹಗಲು ಹೊತ್ತೇ ಎಲ್ಲಿ ಹೊರಟರೂ, ತಡವಾದರೆ ನನ್ನ ತಂದೆತಾಯಿಗಳು ಕಳವಳಪಡುತ್ತಿದ್ದರು. ನನ್ನನ್ನು ಹುಡುಕುತ್ತ ಬಂದುಬಿಡುತ್ತಿದ್ದರು. ಒಂದು ದಿನ ಅವರು ಕಣ್ಣೀರು ಹಾಕುತ್ತಾ ‘ಮಗೂ, ನೀನಿಲ್ಲದೆ ನಾವು ಒಂದು ಕ್ಷಣವೂ ಬದುಕಿರಲಾರೆವು, ಕುರುಡರಾದ ನಮಗೆ ನೀನೇ ಊರುಗೋಲು’ ಎಂದು ಹೇಳಿದ್ದರು. ಇಂದು ಅವರ ಗತಿ ಏನಾಗಿದೆಯೋ! ಅವರಿಗೇನಾದರೂ ಆದರೆ ನಾನೂ ಬದುಕುವುದಿಲ್ಲ. ನನ್ನ ಹಾಳು ನಿದ್ರೆಯಿಂದ ಇಷ್ಟೆಲ್ಲ ಆತಂಕಕ್ಕೆ ಕಾರಣವಾಯಿತು’’ ಎಂದನು.

ಶೋಕಭರಿತನಾದ ಗಂಡನನ್ನು ಸಾವಿತ್ರಿ ಸಮಾಧಾನಪಡಿಸಿ ದಳು. ದೇವತೆಗಳನ್ನು ನೆನೆದಳು. ಮನದಲ್ಲೇ ಅವರಿಗೆ ಕೈಮುಗಿದು ಪ್ರಾರ್ಥಿಸಿದಳು:

‘ನಾನು ಧರ್ಮವನ್ನು ನಂಬಿದ್ದರೆ, ಎಂದೂ ಸುಳ್ಳಾಡದಿದ್ದರೆ, ನನ್ನ ಅತ್ತೆಮಾವಂದಿರಿಗೆ ಯಾವ ಕೇಡೂ ಉಂಟಾಗದಿರಲಿ. ಇಂದಿನ ರಾತ್ರಿ ಶುಭವಾಗಲಿ. ನನ್ನ ಸತ್ಯದ ಬಲದಿಂದ ನನ್ನ ಅತ್ತೆಮಾವಂದಿರು ಬದುಕಿರಲಿ.’’

ಸತ್ಯವಂತ-ನನ್ನ ತಂದೆತಾಯಿಗಳಿಗೆ ಏನಾದರೂ ಅನಿಷ್ಟ ಸಂಭವಿಸುವ ಮುನ್ನ ಅವರನ್ನು ಹೋಗಿ ಸೇರೋಣ.  ಆದಷ್ಟು ಹತ್ತಿರದ ದಾರಿಯಿಂದ ಆಶ್ರಮ ಸೇರೋಣ.

ಸಾವಿತ್ರಿ ಲಗುಬಗೆಯಿಂದ ಎದ್ದಳು. ಗಂಡನ ಕೈಹಿಡಿದು ಅವನನ್ನು ಎಬ್ಬಿಸಿದಳು. ಹಣ್ಣಿನ ಬುಟ್ಟಿಯನ್ನು ಅಲ್ಲೇ ಇದ್ದ ಮರದ ರೆಂಬೆಗೆ ಸಿಕ್ಕಿಸಿದಳು. ಕೊಡಲಿ ಯಾವುದಾದರೂ ಕಾರ್ಯಕ್ಕೆ ಬೇಕಾಗಬಹುದೆಂದು ಹೆಗಲ ಮೇಲೆ ಹಾಕಿಕೊಂಡಳು. ಗಂಡನ ಬಲಗೈ ಹಿಡಿದುಕೊಂಡು ಆಶ್ರಮದತ್ತ ಹೊರಟಳು.

ಸತ್ಯವಂತ-ಇಲ್ಲಿ ನಡೆಯುವುದು ಕಷ್ಟವಲ್ಲ, ಸಾವಿತ್ರಿ. ಇದು ನನಗೆ ಬಳಕೆಯ ದಾರಿ. ಸಾವಿತ್ರಿ, ಇಲ್ಲಿ ನೋಡು, ಈ ದಾರಿಯಲ್ಲೆ ನಾವು ಬಂದದ್ದು. ಇಲ್ಲಿಯೇ ಹಣ್ಣುಗಳನ್ನು ಕೊಯ್ದದ್ದು, ಇಲ್ಲಿಯೇ ಹೂಗಳನ್ನು ಆರಿಸಿದ್ದು. ಇಗೋ, ಈ ದಾರಿಯಲ್ಲೇ ಮುತ್ತುಗದ ತೋಪಿರುವುದು. ಕವಲಾದ ದಾರಿಯಲ್ಲಿ ಉತ್ತರಕ್ಕೆ ಹೋಗುವ ದಾರಿಯೇ ನಮ್ಮ ಆಶ್ರಮದ ದಾರಿ. ಹೀಗೆ ಮಾತನಾಡುತ್ತ, ಆಗಲೇ ತಂದೆತಾಯಿಯ ಯೋಚನೆ ಮಾಡುತ್ತ ಸತ್ಯವಂತ ಬೇಗಬೇಗನ ನಡೆದ. ಸಾವಿತ್ರಿ ಅವನೊಡನೆಯೇ ಹೆಜ್ಜೆ ಹಾಕಿದಳು.

ಶುಭರಾತ್ರಿ

ಇತ್ತ,

ಆಶ್ರಮದಲ್ಲಿ ಸತ್ಯವಂತನು ಇನ್ನೂ ಬರಲಿಲ್ಲವೆಂದು ದ್ಯುಮತ್ಸೇನನಿಗೆ ಕಳವಳ. ಇದ್ದಕ್ಕಿದ್ದಂತೆ  ದ್ಯುಮತ್ಸೇನನಿಗೆ ಕಣ್ಣು ಬಂದಿದೆ. ಬಹು ಕಾಲದಿಂದ ಅಂಧಕಾರಮಯವಾಗಿದ್ದ ಅವನ ಜೀವನಕ್ಕೂ ಬೆಳಕು ಬಂದಿದೆ. ಅವನಿಗೆ ಸಂತೋಷವೋ ಸಂತೋಷ. ಆದರೆ ಈ ಸಂಭ್ರಮದ ಗಳಿಗೆಯಲ್ಲಿ ತನ್ನ ಪ್ರಾಣವಾಗಿದ್ದ ಸತ್ಯವಂತನು ಇನ್ನೂ ಬರಲಿಲ್ಲ ಎಂಬ ದುಃಖ. ಎಂದೂ ಆಶ್ರಮದಿಂದ ಹೊರಕ್ಕೆ ಕಾಲಿಡದ ಮುದ್ದು ಸೊಸೆ ಸಾವಿತ್ರಿಗೆ ಏನಾಯಿತೋ, ಸತ್ಯವಂತನು ಏಕೆ ಬರಲಿಲ್ಲವೋ ಎಂದು ದಂಪತಿಗಳು ಪರಿತಪಿಸಿದರು.

ಸಮೀಪದಲ್ಲಿದ್ದ ಆಶ್ರಮಗಳನ್ನೆಲ್ಲಾ ಸುತ್ತಿದರು. ಏನು ಸದ್ದಾದರೂ ಮಗ, ಸೊಸೆಯರು ಬಂದರೇನೋ ಎಂದು ಆಸೆಯಿಂದ ದಿಟ್ಟಿಸುವರು. ಹೊಳೆ, ಕೆರೆಗಳನ್ನೆಲ್ಲಾ ಹುಡುಕಿದರು. ಕಲ್ಲುಮುಳ್ಳುಗಳಲ್ಲಿ ಓಡಾಡಿ ಕಾಲುಗಳು ರಕ್ತಮಯವಾದುವು.

ಆಶ್ರಮವಾಸಿಗಳಾದ ಬ್ರಾಹ್ಮಣರು ಈ ವೃದ್ಧ ದಂಪತಿಗಳಿಗೆ ವಿಧವಿಧವಾಗಿ ಸಮಾಧಾನ ಹೇಳಿದರು.

ಅಷ್ಟು ಹೊತ್ತಿಗೆ ಸಾವಿತ್ರಿಯು ನಗುಮುಖದಿಂದ ಗಂಡನೊಡನೆ ಆಶ್ರಮಕ್ಕೆ ಬಂದಳು. ಅಲ್ಲಿದ್ದವರಿಗೆಲ್ಲಾ ಇವರನ್ನು ನೋಡಿ ಸಂಭ್ರಮವಾಯಿತು.

‘‘ಇಷ್ಟು ತಡವೇಕಾಯಿತು?’’ಎಲ್ಲರ ಬಾಯಲ್ಲಿಯೂ ಒಂದೇ ಪ್ರಶ್ನೆ.

ಸತ್ಯವಂತ-ಕಾಡಿನಲ್ಲಿ ಸೌದೆ ಸೀಳುತ್ತಿದ್ದೆ. ಇದ್ದಕ್ಕಿದ್ದಂತೆ ಸಹಿಸಲಸಾಧ್ಯವಾದ ತಲೆನೋವು ಬಂದು ಮಲಗಿದೆ. ಎಚ್ಚರವಾದಾಗ ನಡುರಾತ್ರಿಯಾಗಿತ್ತು. ನೀವೆಲ್ಲ ಎಷ್ಟು ಕಳವಳಪಡುತ್ತಿರೋ ಎಂದು ಕತ್ತಲಾದರೂ ಕಾಡಿನಲ್ಲಿ ನಿಲ್ಲದೆ ಬಂದುಬಿಟ್ಟೆವು.

ಅಲ್ಲಿ ನೆರೆದಿದ್ದ ಬ್ರಾಹ್ಮಣರಲ್ಲಿ ಗೌತಮನೆಂಬ ಬ್ರಾಹ್ಮಣನಿದ್ದನು. ಅವನು, ‘‘ಸತ್ಯವಂತ, ನಿನ್ನ ತಂದೆಗೆ ಕಣ್ಣು ಬಂದಿದೆ. ನೀನು ತಡವಾಗಿ ಬಂದುದಕ್ಕೆ ಇನ್ನೇನೋ ಕಾರಣವಿರಬೇಕು. ಇದರ ಕಾರಣ ಸಾವಿತ್ರಿಗೆ ತಿಳಿದಿರಬೇಕು. ಅಮ್ಮಾ ಸಾವಿತ್ರಿ, ಹೇಳಬಹುದಾದರೆ ನೀನು ಏನು ನಡೆಯಿತು ಹೇಳು. ನಿನ್ನ ಮುಖ ತೇಜಸ್ಸಿನಿಂದ ಬೆಳಗುತ್ತಿದೆ’’ ಎಂದನು.

ಸಾವಿತ್ರಿ-‘‘ಪೂಜ್ಯರೆ, ನೀವು ಹೇಳಿದ್ದು ಸರಿ. ನಿಮ್ಮಲ್ಲಿ ಹೇಳಬಾರದಂತಹ ಯಾವ ವಿಷಯವೂ ನನ್ನಲ್ಲಿ ಇಲ್ಲ. ನಡೆದುದನ್ನು ಹೇಳುತ್ತೇನೆ.

‘‘ನನ್ನ ಗಂಡನ ಆಯುಸ್ಸು ಇಂದು ತೀರುವುದೆಂದು ಪೂಜ್ಯರಾದ ನಾರದರು ಒಂದು ವರ್ಷದ ಹಿಂದೆಯೇ ನನಗೆ ತಿಳಿಸಿದ್ದರು. ಆ ವಿಷಯ ತಿಳಿಯುವ ವೇಳೆಗೆ ನಾನು ಮನಸ್ಸಿನಲ್ಲಿಯೇ ಸತ್ಯವಂತನನ್ನು ವರಿಸಿದ್ದೆ. ಒಂದೇ ಮನಸ್ಸಿನಿಂದ ಅವನನ್ನು ಮದುವೆಯಾದೆ. ಆದ್ದರಿಂದಲೇ ನಾನು ಇಂದು ಸತ್ಯವಂತನ ಜೊತೆ ಕಾಡಿಗೆ ಹೊರಟೆ. ಸತ್ಯವಂತನು ತಲೆನೋವು ಎಂದು ಮಲಗಿದ. ಆಗ ಯಮನು ತನ್ನ ಪಾಶದಿಂದ ಸತ್ಯವಂತನ ಪ್ರಾಣವನ್ನು ಕಟ್ಟಿ ಎಳೆದುಕೊಂಡು ಹೊರಟ. ನಾನು ಯಮನ ಹಿಂದೆಯೇ ಹೋದೆ. ಸತ್ಯವಾದ ವಾಕ್ಯಗಳಿಂದ ಅವನನ್ನು ಸ್ತುತಿಸಿದೆ. ಯಮನು ಅನುಗ್ರಹ ಮಾಡಿ ಐದು ವರಗಳನ್ನು ಕೊಟ್ಟ. ನನ್ನ ಮಾವನಿಗೆ ಕಣ್ಣು, ರಾಜ್ಯ-ಇವು ಎರಡು ವರಗಳು, ನನ್ನ ತಂದೆಗೆ ಗಂಡುಮಕ್ಕಳು, ನನಗೆ ಗಂಡುಮಕ್ಕಳು-ಇವು ಎರಡು ವರಗಳು. ನನ್ನ ಗಂಡನಿಗೆ, ನನಗೆ ನಾನೂರು ವರ್ಷ ಆಯುಸ್ಸು-ಇದು ಐದನೆಯ ವರ.

‘‘ಈಗ ಮೂರು ದಿನಗಳಿಂದ ವ್ರತವನ್ನು ನಡೆಸುತ್ತಿದ್ದೆ. ನನ್ನ ಗಂಡನು ಬದುಕಲಿ ಎಂದು ನಾನು ವ್ರತವನ್ನು ಹಿಡಿದೆ. ನನ್ನ ದುಃಖವೆಲ್ಲಾ ಹೋಗಿ ಸುಖವು ಪ್ರಾಪ್ತವಾಯಿತು. ದೇವಿಯ ಅನುಗ್ರಹದಿಂದ, ಅತ್ತೆ ಮಾವಂದಿರು ಮತ್ತು ಪೂಜ್ಯರಾದ ನಿಮ್ಮೆಲ್ಲರ ಆಶೀರ್ವಾದದಿಂದ ಬಂದಿದ್ದ ಅಪಾಯ ಕರಗಿತು.’’

ಸಾವಿತ್ರಿಯಿಂದ ಎಲ್ಲ ವಿಷಯವನ್ನು ತಿಳಿದುಕೊಂಡ ಅವಳ ಅತ್ತೆ ಮಾವಂದಿರಿಗೆ ಆಶ್ಚರ್ಯ, ಆನಂದಗಳು ಉಕ್ಕಿದವು. ಸಾವಿತ್ರಿಯನ್ನು ತುಂಬಿದ ಹೃದಯದಿಂದ ಹರಸಿದರು. ಅಲ್ಲಿದ್ದವರಿಗೆಲ್ಲ ಸಂತೋಷವೋ ಸಂತೋಷ. ಎಲ್ಲರೂ ಅವಳನ್ನು ಬೆರಗಾಗಿ ಹೊಗಳಿದರು. ಮುಳುಗಿ ಹೋಗಿದ್ದ ಮಾವನ ಮನೆಯನ್ನು ಉದ್ಧರಿಸಿದ ಸುಶೀಲೆ, ಸಾಧ್ವಿ ಎಂದು ಅವಳಲ್ಲಿ ಅವರಿಗೆ ಗೌರವ.

ಶುಭದೊಡನೆ ಶುಭ

ದುಃಖದಿಂದ ಕಳೆಯಬೇಕಾಗಿದ್ದ ರಾತ್ರಿ ಶುಭರಾತ್ರಿಯಾಯಿತು. ಮೆಲ್ಲಮೆಲ್ಲನೆ ರಾತ್ರಿ ಸರಿದು ಸೂರ್ಯೋದಯವಾಯಿತು. ಹಿಂದಿನ ರಾತ್ರಿಯ ಸಂತೋಷವನ್ನು ಎಲ್ಲರೂ ಮೆಲುಕುಹಾಕುತ್ತಿದ್ದರು.

ದೂರದಲ್ಲಿ ಒಂದು ದೊಡ್ಡ ಗುಂಪು. ಅವರೆಲ್ಲರ ಮುಂದೆ ಕುದುರೆಯ ಮೇಲೆ ಬರುತ್ತಿದ್ದ ವ್ಯಕ್ತಿಯೊಬ್ಬ.

ಅವನು ಯಾರು ಎಂದು ಎಲ್ಲರಿಗೂ ಕುತೂಹಲ.

ಹತ್ತಿರ ಬಂದಾಗ ಆ ವ್ಯಕ್ತಿ ಕೆಳಗಿಳಿದು ಬಂದು ಗೌರವದಿಂದ ದ್ಯುಮತ್ಸೇನನ ಪಾದಗಳಿಗೆರಗಿದ. ಅವನು ಹಿಂದೆ ದ್ಯುಮತ್ಸೇನನ ಮಂತ್ರಿಯಾಗಿದ್ದವನು.

ಮಂತ್ರಿ-ಪ್ರಭೂ, ಶುಭ ಸಮಾಚಾರವನ್ನು ತಂದಿದ್ದೇನೆ. ತಮ್ಮ ಶತ್ರುವು, ಯುದ್ಧದಲ್ಲಿ ನನ್ನಿಂದ ಸೋತು ಓಡಿಹೋದನು. ಧರ್ಮಪ್ರಭುವಾದ ದ್ಯುಮತ್ಸೇನನೇ ನಮಗೆ ರಾಜನಾಗಲಿ, ಅವರಿಗೆ ಕಣ್ಣು ಕಾಣದಿದ್ದರೂ ಮನಸ್ಸಿನ ಕಣ್ಣು ತೆರೆದಿವೆ ಎಂದು ಪ್ರಜೆಗಳೆಲ್ಲರೂ ಅಭಿಪ್ರಾಯಪಡುತ್ತಿದ್ದಾರೆ. ಎಲ್ಲರ ಕೋರಿಕೆಯನ್ನು ತಾವು ಈಡೇರಿಸಬೇಕು.

ದ್ಯುಮತ್ಸೇನ-ಮಂತ್ರಿಗಳೇ, ಪ್ರಜೆಗಳ ಇಷ್ಟವೇ ನನ್ನ ಇಷ್ಟ.  ಪ್ರಜೆಗಳ ಸೇವೆಯನ್ನು ಮಾಡುವುದೇ ನನಗೂ ಸಂತೋಷ. ದೈವಕೃಪೆಯಿಂದ, ಸಾವಿತ್ರಿಯ ಧರ್ಮದಿಂದ ನನಗೆ ದೃಷ್ಟಿಯೂ ಲಭಿಸಿದೆ. ರಾಜಧಾನಿಗೆ ಹೊರಡುವ ಸಿದ್ಧತೆ ಮಾಡಿ. ಎಲ್ಲರೂ ಹೊರಡೋಣ.

ಸಕಲ ರಾಜಮರ್ಯಾದೆಯೊಡನೆ ದ್ಯುಮತ್ಸೇನನು ತನ್ನ ರಾಜಧಾನಿಗೆ ಪ್ರಯಾಣ ಬೆಳೆಸಿದನು.

ದ್ಯುಮತ್ಸೇನನು ಮಹಾರಾಜನೂ, ಸತ್ಯವಂತನು ಯುವರಾಜನೂ ಆದರು. ಸಾವಿತ್ರಿಯು ಕಷ್ಟದಲ್ಲಿ ಸಿಲುಕಿದ್ದ ತನ್ನನ್ನು ರಕ್ಷಿಸಿಕೊಂಡಳು, ತನ್ನ ಗಂಡನನ್ನು, ತಾಯಿತಂದೆಗಳನ್ನು, ಅತ್ತೆಮಾವಂದಿರನ್ನು ಪಾರು ಮಾಡಿದಳು.

ನಿರ್ಮಲಭಕ್ತಿ, ಗಂಡನಲ್ಲಿ ಗಾಢವಾದ ಪ್ರೀತಿ, ವಜ್ರ ಸಂಕಲ್ಪ ಸಂಗಮಗೊಂಡವು ಸಾವಿತ್ರಿಯಲ್ಲಿ. ಸಾವನ್ನು ಗೆದ್ದ ಪ್ರೇಮದ ಕಥೆ-ಸ್ತ್ರೀ ಅಬಲೆ ಎನ್ನಿಸಿಕೊಂಡರೂ ಅವಳಲ್ಲಿ ಅಡಗಿರುವ ಶಕ್ತಿಯ ಕಥೆ, ಭಾರತೀಯರು ಸ್ತ್ರೀಯಲ್ಲಿರುವ ಗೌರವದ ಪ್ರತಿಬಿಂಬವಾದ ಕಥೆ ಸಾವಿತ್ರಿಯ ಕಥೆ.