ಮುವತ್ತು ವರ್ಷಗಳ ಹಿಂದೆ ಚಿತ್ರದುರ್ಗ ಪ್ರದೇಶದಲ್ಲಿ ನಾನು ಸಂಗ್ರಹಿಸಿದ ಜನಪದ ಕಥೆ, ಕಥನಗೀತಗಳಲ್ಲಿ ಕೆಲವು ಭಾಗ ಪುಸ್ತಕ ರೂಪದಲ್ಲಿ ಆಗಾಗ್ಗೆ ಪ್ರಕಟವಾಗಿರುತ್ತವೆ. ಆದರೆ ಚಳ್ಳಕೆರೆ ತಾಲೂಕು ಬೆಳಗೆರೆ ಗೊಲ್ಲರಟ್ಟಿಯ ಸಿರಿಯಜ್ಜಿ ಹಾಡಿದ ಸ್ತೋತ್ರ ಗೀತೆಗಳು, ಕಥಾನಕಗಳು ಸಮಗ್ರವಾಗಿ ಪ್ರಕಟವಾಗಿರಲಿಲ್ಲ. ಈ ಮಧ್ಯೆ ಸಿರಿಯಜ್ಜಿ. ಕರ್ನಾಟಕದಲ್ಲಿ ಅತಿ ಹೆಚ್ಚು ಪದಗಳನ್ನು ಹಾಡಿದ ಜನಪದ ಗಾಯಕರ ನಡುವೆ ಒಬ್ಬಳು ಎಂದು ಪರಿಗಣಿಸಲ್ಪಟ್ಟು ಆಕೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸಂದಾಯವಾಗಿರುತ್ತದೆ. ಇದರೊಂದಿಗೆ ಚಿತ್ರದುರ್ಗ ಜಿಲ್ಲೆಯ ಬೇರೆ ಬೇರೆ ಕಡೆಯ ಪ್ರತಿಷ್ಠಿತ ಸಂಘಸಂಸ್ಥೆಗಳೂ ಆಕೆಯನ್ನು ಗೌರವಿಸಿರುತ್ತವೆ. ಇದೀಗ ೨೦೦೪ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ತೊಂಬತ್ತು ವರ್ಷದ ಸಿರಿಯಜ್ಜಿಗೆ ನಾಡೋಜ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿರುತ್ತದೆ. ಹಾಗೆ ನಾಡಿನ ಪ್ರತಿಷ್ಠಿತ ಪ್ರಶಸ್ತಿ ಬಂದ ವೇಳೆಯಲ್ಲಿಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು, ಜಾನಪದ ವಿದ್ವಾಂಸರೂ ಆಗಿರುವ ಪ್ರೊ. ಬಿ.ಎ. ವಿವೇಕ ರೈ ಅವರು ಸಿರಿಯಜ್ಜಿ ಹಾಡಿದ ಕಥಾನಕಗಳ ಒಂದು ಸಂಪುಟ ಬರಬೇಕೆಂದು ಬಯಸಿದುದೇ ಈ ಗ್ರಂಥ ‘ಸಾವಿರದ ಸಿರಿ ಬೆಳಗು’ ಪ್ರಕಟಣೆಗೆ ಕಾರಣವಾಗಿದೆ. ಕೃತಿ ಪ್ರಕಟಣೆಯಲ್ಲಿ ಎಲ್ಲ ರೀತಿಯ ಆಸಕ್ತಿ ವಹಿಸಿದವರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರು, ಬುಡಕಟ್ಟು ವಿಭಾಗದ ಪ್ರಾಧ್ಯಾಪಕರು ಆದ ಪ್ರೊ.ಹಿ.ಚಿ. ಬೋರಲಿಂಗಯ್ಯನವರು, ಪ್ರೊ. ಕರೀಗೌಡ ಬೀಚನಹಳ್ಳಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಬಿ. ಸುಜ್ಞಾನಮೂರ್ತಿ ಅವರು. ಈ ಗ್ರಂಥವನ್ನು ಸಿದ್ಧಪಡಿಸುವಲ್ಲಿ ಕೃತಿಯ ಅನೇಕ ಸಂಗತಿಗಳ ಬಗ್ಗೆ ಗೆಳೆಯ ಡಾ. ಜಿ.ಆರ್. ತಿಪ್ಪೇಸ್ವಾಮಿಯವರು ಮತ್ತು ಪ್ರೊ.ಬಿ.ಪಿ. ವೀರೇಂದ್ರ ಕುಮಾರ್ ಅವರು ನನ್ನೊಡನೆ ಚರ್ಚಿಸಿರುತ್ತಾರೆ. ಮಿತ್ರರಾದ ಕಲಮರಹಳ್ಳಿ ಮಲ್ಲಿಕಾರ್ಜುನ ಮತ್ತು ಕೆ. ಶಿವಚಿತ್ತಪ್ಪ ಅವರು ಗ್ರಂಥಕ್ಕೆ ಅಗತ್ಯವೆನಿಸಿದ ಕೆಲವು ಚಿತ್ರಗಳನ್ನು ಒದಗಿಸಿರುತ್ತಾರೆ. ಮುಖಪುಟ ವಿನ್ಯಾಸ ಮಾಡಿದ ಕೆ.ಕೆ. ಮಕಾಳಿ ಅವರಿಗೆ, ಡಿ.ಟಿ.ಪಿ. ಮಡಿದ ವೈ.ಎಂ. ಶರಣಬಸವ ಅವರಿಗೆ ಹಾಗೂ ಈ ಗ್ರಂಥ ಪ್ರಕಟಣೆಯ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಹಿರಿಯರಿಗೆ ನಾನು ಅತ್ಯಂತ ಕೃತಜ್ಞನಾಗಿರುತ್ತೇನೆ.

ಕೃಷ್ಣ ಮೂರ್ತಿಹನೂರು
೨೮.೦೮.೨೦೦೫
ಮೈಸೂರು ೫೭೦ ೦೨೨