ಸತಿ ಗೀತೆಯ ಮಾದರಿ

ಸಿರಿಯಜ್ಜಿ ಹಾಡುವ ಅನೇಕ ಕಥಾನಕಗಳಲ್ಲಿ ‘ಕೊಂಡದ ಕಾಟವ್ವ’ ಗೀತೆಯೂ ಇದೆ. ಈ ಕಥನಗೀತೆ ಪ್ರಮುಖ ಐತಿಹಾಸಿಕ ವಿವರವನ್ನು ಬಿಚ್ಚಿಡುವಂಥದ್ದು. ಬಹುಶಃ ಸತಿ ಸಹಗಮನಕ್ಕೆ ಸಂಬಂಧಿಸಿದಂತೆ ಈ ಕಥನಗೀತೆ ಕೊಡುವಷ್ಟು ಐತಿಹಾಸಿಕ ವಿವರಗಳನ್ನು ಬೇರಾವ ದಾಖಲೆ ಅಥವಾ ಶಾಸನಗಳೂ ಕೊಡಲಾರವು. ವಾಸ್ತವವಾಗಿ ಬುಡಕಟ್ಟು ಸಮೂಹದಲ್ಲಿ ಸತಿಪದ್ಧತಿ ಇರಲೇ ಇಲ್ಲ. ಹೆಂಗಸನ್ನು ಗೌರವಿಸುವ ಮತ್ತು ರಾಜಪ್ರಭುತ್ವಕ್ಕೆ ಬಹಳಷ್ಟು ದೂರವಿದ್ದ ಅರಣ್ಯವಾಸಿ ಬುಡಕಟ್ಟುಗಳ ನಡುವೆ ನಾಗರೀಕತೆಗೆ ಸಂಬಂಧಿಸಿದ ಆಚರಣೆಗಳು ತುಂಬ ಕಡಿಮೆ ಇದ್ದವು. ಸತಿಪದ್ಧತಿ ಅವರ ನಡುವೆ ಪ್ರವೇಶ ಪಡೆದಿರಲಿಲ್ಲ ವೇಂತಲೇ ತಿಳಿಯಬಹುದು. ಹಾಗಾಗಿ ಸಿರಿಯಜ್ಜಿ ತನ್ನ ಬುಡಕಟ್ಟು ಬದುಕಿನಲ್ಲಿಲ್ಲದ ಈ ಕೊಂಡದ ಕಾಟವ್ವ ಗೀತೆಯನ್ನು ಬೇರೆಯವರಿಂದಲೇ ಕಲಿತು ಹಾಡಿರುತ್ತಾಳೆ. ಸಿರಿಯಜ್ಜಿ ಹಾಡಿರುವ ಈ ಬಗೆಯ ಕಥನಗೀತೆಯ ಬೇರೆ ಬೇರೆ ಮಾದರಿಗಳು ಕರ್ನಾಟಕ ದಾದ್ಯಂತ ಚಾಲ್ತಿಯಲ್ಲಿರುತ್ತವೆ. ಗೀತೆಯೊಳಗಿನ ಪಾತ್ರಗಳು ಮಾತ್ರ ಬದಲಾವಣೆ ಯಾಗಿರುತ್ತವೆ. ಕ.ರಾ.ಕೃ ಅವರ ‘ಚಿತ್ರಕಲ್ಲು ಮದಕರಿ’ ಜನಪದ ಗೀತೆಗಳ ಸಂಕಲನದ ಒಂದು ಗೀತೆಯಲ್ಲಿ, ಕೊನೆಯ ಪಾಳೆಯಗಾರ ರಾಜವೀರ ಮದಕರಿನಾಯಕ ತೀರಿಕೊಳ್ಳಲು ಆತನ ರಾಣಿಯರು, ಬಣ್ಣದ ಸೂಳೆಯರು ಹಣ್ಣಡಕೆ ಗೊನೆ ಹಿಡಿದುಕೊಂಡು ಮೇಲು ದುರ್ಗದ ಹೊಂಡಕ್ಕೆ ಬಿದ್ದ ಪ್ರಸಂಗವನ್ನು ಸುತ್ತಮುತ್ತಲ ಗ್ರಾಮದ ಕೋಲು ಪದಗಳು ವಿವರಿಸುತ್ತವೆ. ದುರ್ಗದ ನಾಯಕರ ನಾಯಕಿಯರ ಬಲಿದನದ ಪ್ರಸಂಗಗಳನ್ನು ಜನಪದರು ವಿವರವಾಗಿ ನಿರೂಪಿಸದಿದ್ದರೂ ತಮ್ಮ ಗ್ರಾಮದ ಆಜುಬಾಜಿನಲ್ಲಿ ಜರುಗಿದ ಆತ್ಮಾಹುತಿಯ ಘಟನೆಗಳನ್ನು ಮಾತ್ರ ದೀರ್ಘ ಕಥಾನಕಗಳ ರೂಪಕ್ಕೆ ತಂದು, ಉಳಿಸಿಕೊಂಡಿದ್ದಾರೆ. ಸತಿಗೀತೆಗಳು ಸಾಮಾನ್ಯವಾಗಿ ಮೂರು ಭಾಗಗಳಲ್ಲಿ ರಚನೆ ಗೊಂಡಿರುತ್ತವೆ. ಗೀತೆಯ ಮೊದಲ ಭಾಗದಲ್ಲಿ ಸತಿಯ ಮಗುವುತನದ ವಿವರಣೆಯಿದ್ದು ಆಕೆಯನ್ನು ತಂದುಕೊಳ್ಳಲು ವೀರನ ಕಡೆಯವರು ದಿಬ್ಬಣ ಹೊರಡಿಸಿಕೊಂಡು ಬರುತ್ತಾರೆ. ಕೂಸನ್ನು ಕೊಡುವುದರ ಬಗೆಗೆ ತಾಯಿ ತಂದೆ ದೊಡ್ಡಪ್ಪ ದೊಡ್ಡಮ್ಮ ಇವರೆಲ್ಲರ ನಡುವೆ ಚರ್ಚೆ ನಡೆದು ಕೊನೆಗೆ ಲಗ್ನದ ಸಿದ್ಧತೆಗಳು ನಡೆಯುತ್ತವೆ. ಎರಡನೆಯ ಹಂತದಲ್ಲಿ ಸತಿಯ ಮತ್ತು ವೀರನ ಮದುವೆ, ಅಲ್ಲದೆ ತಾಯಿ ಮಗಳು ಅಗಲುವುದರ ವಿವರಗಳು ನಿರೂಪಣೆಗೊಂಡಿರುತ್ತವೆ. ಮೂರನೆಯದರಲ್ಲಿ ಸಂಪೂರ್ಣವಾಗಿ ಸತಿ ಕೊಂಡಕ್ಕೆ ಹೋಗುವುದರ ವರ್ಣನೆ ಇರುತ್ತದೆ. ಸತಿಯೊಬ್ಬಳು ಕೊಂಡಕ್ಕೆ ಬೀಳುವುದನ್ನು ಪ್ರವಾಸಿಗಳು ಆಕೆಯ ಅಂದಿನ ವರ್ತನೆಯ ಬಗ್ಗೆ ಯಾವ್ಯಾವ ವಿವರಗಳನ್ನು ಚಿತ್ರವತ್ತಾಗಿ ಕೊಟ್ಟಿರುತ್ತಾರೋ ಅದೆಲ್ಲವೂ ಕಥನಗೀತೆಯಲ್ಲಿ ಭಾವುಕವಾಗಿ ಕಾವ್ಯಮಯವಾಗಿ ಬರುತ್ತದೆ. ಒಟ್ಟಿನಲ್ಲಿ ಸತಿಯರನ್ನು ಕುರಿತ ಜನಪದ ಕಥನಗೀತೆಗಳು ಆರಂಭಕ್ಕೆ ಹುಟ್ಟುವಲ್ಲಿ ಸಂಪೂರ್ಣವಾಗಿ ಐತಿಹಾಸಿಕ ಘಟನೆಯನ್ನೇ ಆಧಾರವಾಗಿಟ್ಟು ಕೊಂಡು ಹುಟ್ಟಿದಂಥವು ಎಂದುಕೊಳ್ಳಬಹುದು.

ಅನುಗಮನಕ್ಕೆ ಸಿದ್ಧವಾಗುತ್ತಿದ್ದ ಸತಿ ಮೊದಲ ನಾಲ್ಕೈದು ದಿನಗಳಲ್ಲಿ ಊರಿನ ಬೀದಿಗಳಲ್ಲಿ ಮೆರವಣಿಗೆಯ ಸಮಯದಲ್ಲಿ ಮನೆ ಮನೆಯ ಜನಕ್ಕೆ ವೀಳ್ಯ ಹಂಚಿ ಕಟ್ಟಿಗೆಯನ್ನು ಕೊಡುವಂತೆ, ಕೊಂಡದ ಬಳಿ ಬರುವಂತೆ ಕೇಳಿಕೊಳ್ಳುತ್ತಿದ್ದಳು :

ಅಳ್ಳಿಗೆಳತೇರು ಕೊಳ್ಳೀರಿ ನಿಮ್ಮೀಳ್ಯಾವ
ಒಳ್ಳೊಳ್ಳೆ ಸೌದೆ ಬರಬೇಕು | ಬೇಗಿನ ಕಡೆಯ
ರೊಟ್ಟಿ ಗುಗ್ರಿಯ ತಿನಬೇಕು ||

ಈ ಮಧ್ಯೆ ಸತಿಯ ಅಣ್ಣನೋ, ಮೈದುನನೋ ಹೊರಟು ಆ ಸೀಮೆಯ ಪಾಳೆಯಗಾರನ ಅಪ್ಪಣೆಯನ್ನು ತರಬೇಕಿತ್ತು. ಈ ಪದ್ಧತಿಯನ್ನು ಒಪ್ಪಿದ್ದ ರಾಜನಾದರೆ ಅಪ್ಪಣೆ ಕೊಡುತ್ತಿದ್ದ. ಗಂಧದ ಚಕ್ಕೆ, ಕುಂಕುಮ, ಅರಿಷಿಣದ ಪತ್ತಲ ನೀಡುವದರ ಮೂಲಕ. ಆದರೆ ಈ ಕ್ರೂರ ಪದ್ಧತಿಯನ್ನು ಒಪ್ಪಿಕೊಳ್ಳದ ರಾಜನಿದ್ದರೆ ಅಪ್ಪಣೆ ಕೊಡುವುದಕ್ಕೆ ತಡ ಮಾಡುತ್ತಿದ್ದ. ಆಗ ಸತಿ ರಾಜನ ಅಪ್ಪಣೆಗೆ ಆಗ್ರಹ ಪಡಿಸುತ್ತಿದ್ದುದುಂಟು.”

ಕಿಚ್ಚು ಕೋಡುವಾಕ ವೊಟ್ಯಪ್ಪ ನಾಯಕನಾಣೆ
ಪಚ್ಚೆ ಕಲ್ಲಾಣೆ ಪ್ರಜೆಯಾಣೆ | ಮುಮ್ಮಡಿಬೂಪ್ನ
ರಟ್ಟೆ ಮ್ಯಾಲಾಡೋ ಮಗನಾಣೆ ||

ಕೊಂಡದ ಕಾಟವ್ವ ಗೀತೆಯಲ್ಲಿ ಬರುವ ಈ ಪದ್ಯ ಸತಿ ಕಾಟವ್ವನು ನಿಡುಗಲ್ಲು ಪಾಳೆಯಗಾರನಾದ ಹೊಟ್ಯಾಳನಾಯಕನನ್ನು ಕೊಂಡಕ್ಕೆ ಹೋಗಲು ಅಪ್ಪಣೆಗಾಗಿ ಆಗ್ರಹಿಸುವಂತೆ ಕಾಣುತ್ತದೆ. ಈ ಸಂದರ್ಭದಲ್ಲಿ ಪಳೆಯಗಾರ, ರಾಜ ಅಪ್ಪಣೆ ಕೊಡದಿದ್ದರೆ ಸತಿಯರು ‘ಕಿಚ್ಚು ಕೊಡದಿದ್ದರೆ ಕಿತ್ತು ಕಂಬೆ ನಾಲಿಗೆ’ ಎಂದು ಬೆದರಿಕೆ ಹಾಕುತ್ತಿದ್ದುದೂ ಉಂಟು. ಸೀಮೆಯ ಅಧಿಪತಿ ಅರಿಶಿಣ ಪತ್ತಲ ಗಂಧದ ಚಕ್ಕೆ ಕುಂಕುಮ ಕಳಿಸಿಕೊಟ್ಟ ಮೇಲೆ ಸತಿ ಕೊಂಡಕ್ಕೆ ಹೋಗುವ ಸಿದ್ಧತೆಗಳು ನಡೆಯುತ್ತಿದ್ದವು. ಈ ನಡುವೆ ಸತಿಯನ್ನು ಕೊಂಡಕ್ಕೆ ಬೀಳದಂತೆ ತಡೆಯುತ್ತಿದ್ದುದೂ ಉಂಟು. ತಂದೆ ತಾಯಿ, ಅಣ್ಣ ಬಂಧು ಬಳಗದವರು ಎಲ್ಲ ನೆರೆದು ಬಗೆಬಗೆಯಲ್ಲಿ ಸಮಾಧಾನ ಹೇಳಿ ವಿವಿಧ ಆಸೆ ತೋರಿಸಿ ಬದುಕಲು ಹೇಳುತ್ತಿದ್ದರು:

ಅರುಗೀದ ವಲದಾಗ ಸುರವೊನ್ನೆ ಮೆಳೆಯಾಗ
ಅರುದೇ ಬರುತಾನೆ ಅವರಣ್ಣ | ಕಾಟಣ್ಣ
ಅರುವತ್ತು ಕೊಟ್ಟೇನು ನಿಲುತಂಗಿ ||

ಅರುವತ್ತು ಕೊಟ್ಟಾರೆ ತುರುಬೀನ ಬೆಲಿಯಿಲ್ಲ
ದುರುಗಾವಾಳೋರ ಮಗ ದೂರ | ವೋಗಲುವಾಳ
ತಡಿಯಾದೆ ಕಿಚ್ಚ ಕೂಡಿರಣ್ಣ ||

ಆಲಾದ ಮರದ ಸೋವಿಟ್ಟು ಮೆರೆವೋಳೆ
ತಾಯೀಯು ಬಂದವಳೆ ಮೊಕತೋರೆ ||
ತಾಯಿ ಬಂದಾರೆ ಬರಲಿ ವಾಲೆ ತಂದರೆ ತರಲಿ
ರಾಯವುಲಿಕುಂಟೆ ಮೂಡಾಲ | ದಿನ್ನ್ಯಾಗ
ಗಾಜೀನ ಕೊಂಡಾವು ನಮಗವೆ ||

ಮಕ್ಕಳಿಗಾಗಿ, ತಂದೆ ತಾಯಿಯರಿಗಾಗಿ ಸತಿಯನ್ನು ಬಂಧು ಬಳಗದವರು ಬದುಕಲು ಹೇಳುತ್ತಿದ್ದರು. ಪ್ರವಾಸಿಗಳೂ ಕೂಡ ಈ ವಿವರವನ್ನು ಕೊಡುತ್ತಾರಲ್ಲದೆ ಶಾಸನಗಳಲ್ಲಿಯೂ ಈ ಸಂಗತಿ ಪ್ರಸ್ತಾಪವಾಗಿರುತ್ತದೆ.

ಮೆರವಣಿಗೆಯಲ್ಲಿ ಹೊರಟ ಸತಿ ಸರ್ವಾಲಂಕಾರ ಭೂಷಿತೆಯಾಗಿರುತ್ತಿದ್ದಳು. ತುರುಬು ಕಟ್ಟಿ ಹೂ ಮುಡಿದು ಅರಿಶಿಣಗಂಬಿ ಸೀರೆ ಉಟ್ಟಿರುತ್ತಿದ್ದಳು. ಕೈ, ಮೈ ತುಂಬ ಒಡವೆಗಳು ಹೇರಲ್ಪಟ್ಟಿರುತ್ತಿದ್ದವು. ಅಂಗೈಯ್ಯಲ್ಲಿ ಉತ್ತುತ್ತಿ, ನಿಂಬೆ ಇಲ್ಲವೇ ಕಾಕಿಯ ಹಣ್ಣು ಇರುತ್ತಿತ್ತು. ಇವನ್ನು ಎಸೆದಾಡಿಕೊಂಡು ನಗುತ್ತಾ ನಲಿಯುತ್ತಾ ಬಂಧು ಬಳಗದವ ರೊಡನೆ ಕೂಡಿ ಕೊಂಡಕ್ಕೆ ನಡೆಯುತ್ತಿದ್ದಳು :

ನಿಂಬೀಯ ಅಣ್ಣ ಅಂಬಾರಕೀಡಾಡುತ
ಬಂದೀಯ ತೋಳ ತಿರುವೂತ | ಮುತ್ತಣ್ಣಾನ
ರೆಂಬೆ ಕೊಂಡಾಕ ನಡೆದಾಳೆ ||

ಪುರುಸಾನಿಲ್ಲದೋಳ ಸರಸಾವ ನೋಡೀರೆ
ಅರಿಶಿಣದ ಬಾವಿಯವಳ ಮನೆ ಮುಂದೆ | ಕಾಟವ್ವ
ಪುರುಸಾನಿದ್ದಾರೆಸ್ಟು ಮೆರೆದೀಯೆ ||

ಪುರುಷ ತೀರಕೊಂಡಿರುವುದು ನಿಜವಾದರೂ ಆಕೆಗೆ ಸ್ವರ್ಗದಲ್ಲಿರುವ ಅವನ ಬಳಿಗೇ ಹೋಗುತ್ತಿದ್ದೇನೆಂಬ ಸಂತೋಷ ಮತ್ತು ಬೇಗ ಸೇರಬೇಕೆಂಬ ಕಾತುರ ಇದೆ. ನೆರೆದ ಜನ ಸತಿ ಕೊಂಡದ ಬೆಂಕಿಯನ್ನು ಕಂಡು ಹೆದರಿ ಓಡಿ ಹೋಗಬಹುದೆಂಬ ಶಂಕೆಯಿಂದ ಸುತ್ತ ತೆರೆ ಕಟ್ಟಿಸುತ್ತಿದ್ದರು. ಬೆಂಕಿಗೆ ಬಿದ್ದು ಧೈರ್ಯ ಪ್ರದರ್ಶನ ಮಾಡುಲು ತವಕಿಸುತ್ತಿದ್ದ ಸತಿಯರು ‘ಕಿಚ್ಚಿಗೆದರೋರ ಮಗಳಲ್ಲ. ಅಚ್ಚಡದ ತೆರೆಯಾ ತೆಗೆಸಯ್ಯ….’ ಎಂದು ಹೇಳುತ್ತಿದ್ದುದುಂಟು. ಬೆಂಕಿಗೆ ದೇಹವನ್ನು ಅರ್ಪಿಸಿಕೊಳ್ಳುವ ಮುನ್ನ ಒಡವೆಗಳನ್ನು ಕಳಚಿ ಸುತ್ತಮುತ್ತಲಿನವರಿಗೆ ದಾನ ಮಾಡುತ್ತಿದ್ದಳು. ಪ್ರವಾಸಿಗಳೂ ಈ ವಿಚಾರವನ್ನು ತಮ್ಮ ಬರೆಹದಲ್ಲಿ ಗುರುತು ಮಾಡಿರುತ್ತಾರೆ. ಒಂದಿಬ್ಬರು ಪ್ರವಾಸಿಗಳು ತಾವೂ ಒಂದೆರಡು ಆಭರಣಗಳನ್ನು ಪಡೆದು ಸತಿಯ ನೆನಪಿನಲ್ಲಿ ಇರಿಸಿಕೊಂಡಿರುವುದಾಗಿ ಹೇಳಿ ಕೊಂಡಿದ್ದಾರೆ. ಜನಪದರೂ ಇದನ್ನು ವಿವರಿಸುತ್ತಾರೆ.

ಸ್ವಸಂತೋಷದಿಂದ ಕೊಂಡಕ್ಕೆ ನಡೆದು ಪ್ರಾಣ ಕಳೆದುಕೊಳ್ಳುತ್ತಿದ್ದ ಸತಿಯರ ಜತೆಗೆ ಬೆಂಕಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದ ಸತಿಯರ ಪ್ರಯತ್ನವೂ ಇರುತ್ತಿತ್ತು. ಹೀಗೆ ಬೆಂಕಿಗೆ ಬೀಳಲು ಭಯ ಪಡುತ್ತಿದ್ದವರ ವಿಚಾರದಲ್ಲಿ ಊರ ಹಿರಿಯರು ಎಚ್ಚರವಹಿಸಿ ಆ ಹಿಂದಿನ ಒಂದೆರಡೂ ರಾತ್ರಿಗಳ ಮಟ್ಟಿಗೆ ಊರದಿಡ್ಡಿ ಬಾಗಿಲನ್ನು ಮುಚ್ಚಿಸುತ್ತಿದ್ದರು. ಒಮ್ಮೊಮ್ಮೆ ನಿಜವಾಗಿಯೂ ಬೆಂಕಿಗೆ ಹೋಗಬೇಕೆನ್ನುತ್ತಿದ್ದವರ ವಿಚಾರಕ್ಕೂ ಇದೇ ಕ್ರಮ ಜರುಗುತ್ತಿತ್ತು. ಆಗ ಕೆಂಡ ಕೊಂಡವಾಗಲು ಇಚ್ಛೆ ಪಡದಿದ್ದವರನ್ನು ಹಳಿದು ತಾವು ಅನುಗಮನ ಮಾಡಿಯೇ ತೀರುವವರು ಎಂದು ಘೋಷಿಸಿಕೊಳ್ಳುತ್ತಿದ್ದರು. ಇದರ ಪ್ರಸ್ತಾಪ ಈ ಕೆಳಗಿನ ಪದ್ಯಗಳಲ್ಲಿ ಬರುತ್ತದೆ :

ವೋಡಿ ಓದಾಳೆಂದು ರಾಡುಗಳ ಆಕಿಸ್ದ
ವೋಡಿ ವೋಗೋರ ಮಗಳಲ್ಲ | ಸಿರಿಗೊಂಡಗೌಡ
ರಾಡಬಾಗಲ ತಗುಸಯ್ಯ||

ಕದ್ದು ವೋದಾಳೆಂದು ದಿಡ್ಡಿಗಳ ಕಟ್ಟಿಸ್ತ
ಕದ್ದು ವೋಗೋರ ಮಗಳಲ್ಲ | ಸಿರಿಗೊಂಡಗೌಡ
ದಿಡ್ಡಿ ಬಾಗುಲ ತಗುಸಯ್ಯ ||

ಕಿಚ್ಚಿಗಂಜ್ಯಾಳೆಂದು ಅಚ್ಚಡದ ತೆರೆ ಕಟ್ಟಿಸ್ದ
ಕಿಚ್ಚಿಗಂಜೋರ ಮಗಳಲ್ಲ | ಸಿರಿಗೊಂಡಗೌಡ
ಅಚ್ಚಡದ ತೆರೆಯಾ ತಗುಸಯ್ಯ ||

ಕಾಟವ್ವ ಆಡುವ ಮಾತುಗಳಲ್ಲಿ ತಾನು ಕೊಂಡಕ್ಕೆ ಬೀಳುವುದರ ಬಗೆಗೆ ಆತುರವೂ ಹಾಗೆ ಬೀಳಲು ಹಿಂಜರಿಯುವವರ ಬಗೆಗಿನ ಹಳಿವೂ ಇದೆ. ಕೊಂಡಕ್ಕೆ ಸತಿಯು ಬೀಳುವ ಕ್ರಮವೊಂದು ಸಣ್ಣ ಹಬ್ಬವಾಗಿಯೇ ಆಚರಿಸಲ್ಪಡುತ್ತಿತ್ತು. ಎಲ್ಲರೂ ಸತಿಗೆ ಇನ್ನಿಲ್ಲದ ಗೌರವವನ್ನು ತೋರಿಸುತ್ತಿದ್ದರು. ಕುಲ ದೈವಕ್ಕೆ, ಸೂರ್ಯ ಪರಮಾತ್ಮನಿಗೆ ಬಂಧು ಬಳಗಕ್ಕೆ ನಮಸ್ಕರಿಸಿದ ಸತಿ ಕೊಂಡದಿಂದ ಹತ್ತಾರು ಹೆಜ್ಚೆ ದೂರಕ್ಕೆ ನಡೆದು ಇಲ್ಲವೇ ಅದನ್ನು ಪ್ರದಕ್ಷಿಣೆ ಹಾಕಿ ಬೆಂಕಿಗೆ ಧುಮುಕುತ್ತಿದ್ದಳು. ಆಗ್ಗೆ ಸುತ್ತ ನಿಂತವರು ತಮ್ಮ ಕಾಣಿಕೆಯಾಗಿ ಎಣ್ಣೆ, ತುಪ್ಪ, ಕಟ್ಟಿಗೆಯನ್ನು ಬಿದ್ದವಳ ಮೇಲೆ ಸುರಿಯುತ್ತಿದ್ದರು. ನಿಮಿಷ ಮಾತ್ರದಲ್ಲಿ ಹೆಂಗಸು ಭಸ್ಮವಾಗುತ್ತಿದ್ದಳು. ಎಲ್ಲರ ಕಣ್ಣಿನಲ್ಲೂ ದೇವತೆಯಾಗಿ ನಿಲ್ಲುತ್ತಿದ್ದಳು :

ಕಣ್ಣಾಗ ಸೆದೆಬಿದ್ದು ಎಣ್ಯಾಕ ನೊಣಬಿದ್ದು
ಸಣ್ಣ ಸೀರ್ಕ ಕಿಡಿಬಿದ್ದು | ಕಾಟಮ್ಮಾನ
ಎಣೆಗಂಟಿಂದೇ ಉರುದಾವು ||

ಸಣ್ಣಾ ತುಗ್ಗುಲಿಮರ ಗಿಣ್ಣೊಡೆದು ಬೇವಾಗ
ಸಣ್ಣಾ ಮಗಳು ಕಾಟಮ್ಮ ಮೆರಿವಾಗ | ಅಗ್ಗುಣಿದೇವಿ
ಸಣ್ಣಾಗೆ ನಗುವಾ ನಗುತಾಳೆ ||

ಅಗಲನ್ನ ಕೊಂಡಾಕ ಜಗುಲಿ ಮುಚ್ಚಲುಗಲ್ಲು
ರೇವಣ್ಣನೆಂಬೋ ಕುದುರೀಯ | ಏರಿಕಂಡು
ವೋದಾಳೆ ಕಾಟವ್ವ ಸಿವನರುಮನಿಗೆ ||

ಸತಿ ಕೊಂಡಕ್ಕೆ ಬಿದ್ದ ನಂತರದಲ್ಲಿ ಗ್ರಾಮಸ್ಥ ಜನ ಸತಿ ಗಂಡನೊಡನೆ ಸ್ವರ್ಗಕ್ಕೆ ಹೋದಳೆಂದು ತಿಳಿದು, ಕೊಂಡ ಮುಚ್ಚಿ ಜಗುಲಿಕಟ್ಟಿ ಮೇಲೆ ಬನ್ನಿ, ಬೇವು ಇಲ್ಲವೇ ತುಗ್ಗುಲಿಮರ ನೆಡುತ್ತಿದ್ದರು. ಸತಿ ಕಲ್ಲನ್ನೂ ಇರಿಸಿ ಪೂಜೆ ಪುನಸ್ಕಾರಗಳಿಗೆ ಅಣಿಮಾಡುತ್ತಿದ್ದರು. ಸತಿ ಕ್ರಮೇಣ ಗ್ರಾಮದೇವತೆಯಾಗುತ್ತಿದ್ದಳು. ಮಕ್ಕಳಿಲ್ಲದವರಿಗೆ ಸಂತಾನ ಕರುಣಿಸುವ, ಗ್ರಾಮಕ್ಕೆ ಒದಗಿಬರುವ ವಿಘ್ನ ಪರಂಪರೆಗಳನ್ನು ನಿವಾರಿಸುವ ತಾಯಿಯಾಗುತ್ತಿದ್ದಳು. ಅಂತೆಯೇ ಕರ್ನಾಟಕದಾದ್ಯಂತ ಸತಿಯರು ಗ್ರಾಮೀಣರ ಕಣ್ಣಲ್ಲಿ ದೇವತೆಗಳಾಗಿಯೇ ಪೂಜೆಗೊಳ್ಳುತ್ತಿದ್ದಾರೆ. ಅಂಥ ಸತಿಗೀತೆಗಳ ಮಾದರಿಯಲ್ಲಿ ಸಿರಿಯಜ್ಜಿ ಹಾಡಿದ ಸತಿಗೀತೆಯು ಒಂದು ಉತ್ತಮ ಐತಿಹಾಸಿಕ ಮಾದರಿಯಾಗಿರುತ್ತದೆ.

ಮಳೆರಾಯನ ಹಾಡು

ಹಟ್ಟಿಯ ದೇವರು ಜಲಧಿಗೆ ಹೋಗುವಾಗ ಅಥವಾ ಮಳೆರಾಯ ಬರುವುದು ತಡವಾಗಿ ಆ ಸಂಬಂಧ ಊರುಕೇರಿಗಳಲ್ಲಿ ಯಾವುದಾದರೂ ಆಚರಣೆ ನೆರವೇರುವಾಗ ಸಿರಿಯಜ್ಜಿ ಮಳೆರಾಯನ ಹಾಡು ಹಾಡುವುದಿದೆ. ಮಳೆಯನ್ನು ಕುರಿತಂತೆ ಸಂಸ್ಕೃತ ಅಥವಾ ಕನ್ನಡ ಕಾವ್ಯಗಳು ಪ್ರಸ್ತಾಪಿಸಿದ್ದು ಕಡಿಮೆ. ‘ಕಾಲೇವರ್ಷತುಪರ್ಜನ್ಯ, ಪೃಥುವಿಸಸ್ಯಶಾಲಿನಿ’ ಎಂಬಿತ್ಯಾದಿ ಮಾತುಗಳಿವೆ. ಸಾಮಾನ್ಯವಾಗಿ ಹಳೆಯ ಕಾವ್ಯಗಳು ರಾಜ ಮಹಾರಾಜರ ಬದುಕನ್ನು ಕುರಿತದ್ದಾದುದರಿಂದ ಅಲ್ಲಿ ಮಳೆಯ ಅಗತ್ಯ ಕಂಡು ಬರುವುದೇ ಇಲ್ಲ. ಹೆಚ್ಚೆಂದರೆ ಅರಣ್ಯದಲ್ಲಿದ್ದ ರಾಮಲಕ್ಷ್ಮಣರೋ, ಪಾಂಡವರೋ ಮಳೆಗಾಲವಿದ್ದುದರಿಂದ ಅವರು ಯಾವುದೋ ಆಶ್ರಮದಲ್ಲಿ ತಂಗಿದ್ದು ಮೂರು ತಿಂಗಳು ಕಳೆದರು ಎಂದು ಹೇಳುವಷ್ಟೇ ಮಳೆಗಾಲದ ವಿವರಗಳಾಗಿ ಬರುತ್ತವೆ. ಅಥವಾ ಮಳೆಗಾಲವಾದುದರಿಂದ ಯುದ್ಧವನ್ನು ರಾಜರು ಕೈ ಬಿಟ್ಟರೆಂಬ ಪ್ರಸ್ತಾಪವಿದ್ದು, ಮಳೆರಾಜ ಅಷ್ಟರಮಟ್ಟಿಗೆ ಸೈನಿಕರ ಸಾವು ಮತ್ತು ರಕ್ತಪಾತವನ್ನು ತಡೆದಿರುತ್ತಾನೆ. ಚರಿತ್ರೆಯ ದಾಖಲೆಗಳು, ಕಾವ್ಯಗಳು ಮಳೆಯ ಮೂಲವನ್ನು ಕುರಿತು ಎಷ್ಟು ಕಡುಮೆ ಪ್ರಸ್ತಾಪ ಮಾಡುತ್ತವೋ, ಜನಪದರ ಬದುಕಿನಲ್ಲಿ ಮಾತ್ರ ಮಳೆ ಅಷ್ಟೇ ವ್ಯಾಪಕವಾದ ಅವಕಾಶವನ್ನು ಪಡೆಯುತ್ತದೆ. ಯಾಕೆಂದರೆ ಭಾರತದಲ್ಲಿ ಜನಪದ ಜೀವನ ಮತ್ತು ಅವರ ಸಾಹಿತ್ಯ ಪರಂಪರೆ ಬೇಸಾಯವನ್ನು ಅವಲಂಬಿಸಿದೆ. ಕರ್ನಾಟಕದ ಪ್ರತಿಯೊಂದು ಗ್ರಾಮದೇವತೆಯ ಮುಖ್ಯ ಆಚರಣೆಗಳಲ್ಲಿ ಒಂದು ದೇವರು ಜಲಧಿಗೆ ಹೋಗುವುದು. ಜಲಧಿಯ ಬಳಿ ಬಾಯಿಗೆ ಬಟ್ಟೆ ಕಟ್ಟಿಕೊಂಡ ಪೂಜಾರಿ ದೇವರನ್ನು ನೀರಿನಲ್ಲಿ ಶುದ್ಧಗೊಳಿಸಿ ಮತ್ತೆ ಮೆರವಣಿಗೆ ಹೊರಡಿಸುತ್ತಾನೆ. ದೇವರ ಹಿಂದೆ ನಡೆಯುವ ಹೆಣ್ಣು ಮಕ್ಕಳು ಆ ದೇವತೆಯನ್ನು ಕುರಿತಂತೆ ಅಥವಾ ಮಳೆರಾಯನ ಹಾಡನ್ನೂ ಹಾಡಬಹುದು.

ಕೆರೆ ಕಟ್ಟೆ, ನದಿಗಳನ್ನು ಸ್ತ್ರೀಯರ ಹೆಸರಿನಲ್ಲಿ ಪರಿಭಾವಿಸುವ ಜನಪದರು ಮಳೆಯನ್ನು ಮಾತ್ರ ಪುರುಷನ ರೂಪದಲ್ಲಿಯೇ ನೋಡಿದ್ದಾರೆ. ಭೂಮಿಯ ಫಲಸಮೃದ್ಧಿಗೆ ಕಾರಣವಾಗುವ ಮಳೆಯು ಪುರುಷ ಸ್ವರೂಪದಲ್ಲೇ ಇರಬೇಕು. ನೀರಿನ ಗರ್ಭದಿಂದಲೇ ಎಲ್ಲ ಸೃಷ್ಟಿ ಎಂಬುದನ್ನು ಜಗತ್ತಿನ ಎಲ್ಲ ಭಾಗದ ಆದಿಮ ಸಮೂಹ ನಂಬಿದಂತೆ ಕಾಣುತ್ತದೆ. ಇಂಥ ಜೀವಪೋಷಕ ದ್ರವ್ಯವನ್ನು ಬರಮಾಡಿಕೊಳ್ಳಲು ಇರುವ ಆಚರಣೆಗಳು ಹಲವು ಬಗೆಯವು. ಭಾರತದಲ್ಲಿ ನೂರಕ್ಕೆ ಎಂಭತ್ತರಷ್ಟು ಜನಸಮೂಹ ನೆಲವನ್ನೂ, ಜಲವನ್ನೂ ನಂಬಿಕೊಂಡು ಬದುಕಬೇಕಾಗಿರುವುದರಿಂದ ಮಳೆಯೆಂಬುದು ಜನಪದ ವರ್ಗದ ಹಣೆಯ ಬರೆಹವನ್ನು ನಿರ್ಧರಿಸುವಷ್ಟು ಪ್ರಮುಖ ಪ್ರಾತ್ರವಹಿಸುತ್ತದೆ.

ಮಳೆರಾಯನನ್ನು ಕುರಿತು ಜನಪದ ಸಮೂಹದಲ್ಲಿ ನೂರಾರು ತ್ರಿಪದಿಗಳು ಪ್ರಚಾರದಲ್ಲಿವೆ. ಮಳೆ ಹೆಚ್ಚು ಬೀಳುವ ದಕ್ಷಿಣ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಪ್ರದೇಶಗಳಿಗಿಂತ, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಂಥ ಬಿಸಿಲು ಮತ್ತು ಬರ ಪ್ರದೇಶಗಳಲ್ಲಿ ಈ ಮಳೆ ಹಾಡುಗಳು ಹೆಚ್ಚು ಹಾಡಿಕೊಳ್ಳಲ್ಪಡುತ್ತವೆ. ಮಳೆರಾಯ ಬರುವುದು ಕೊಂಚ ತಡವಾದರೂ ಆತ ಯಾವ ಹೆಂಗಸಿಗೆ ಮನಸೋತು ಪಗಡೆಯಾಡಿಕೊಂಡು ಕುಳಿತಿರಬಹುದೆಂದು ಊಹಿಸುವ ತ್ರಿಪದಿಗಳಿವೆ :

ಆರುಗಾವುದದಿಂದ ನಾರೀಗೆ ಮನವರುದು
ದಾಯನಾಡೋಳೆ ದೊರೆಮಗಳೆ | ನಿನಗಾಗಿ
ಮೋವಾಗಿ ನಿಂತ ಮಳೆರಾಯ ||

ಈ ತ್ರಿಪದಿಯಲ್ಲಿ ‘ಮೋಹ’ ಮತ್ತು ‘ಪಗಡೆ’ ಎಂಬ ಎರಡು ಪದಗಳನ್ನು ಪ್ರಯೋಗಿಸಲಾಗಿದೆ. ಜನಪದರಲ್ಲಿ ಮತ್ತು ಹಳೆಯ ಕಾವ್ಯಗಳಲ್ಲಿ ಪಗಡೆಯನ್ನು ಎಲ್ಲ ಕೇಡಿನ ಸೂಚನೆಯ ಆಶಯವನ್ನಾಗಿ ಕಾಣಲಾಗಿದೆ. ಪಗಡೆಯ ಆಟಕ್ಕೆ, ಹೆಣ್ಣಿನ ಮೋಹಕ್ಕೆ ಸಂಬಂಧವಿದೆ. ಹೀಗಾಗಿ ಮಳೆರಾಯನೂ ಸಹ ಕೇಡಿನ ಆಟವಾದ ಪಗಡೆಯಲ್ಲಿ ಮುಳುಗಿರಬಹುದೇ? ಇನ್ನು ಮಳೆರಾಯ ತಾನಿರುವಲ್ಲಿಂದ ಭೂಮಿಯ ಕಡೆ ಬರುವುದುಂಟೆ ಎಂಬ ಆತಂಕದಿಂದಲೇ ಮಳೆರಾಯನನ್ನು ಕರೆಯುವ ತ್ರಿಪದಿಗಳು ಆರಂಭವಾಗುತ್ತವೆ :

ಸಾಲ್ಯದಚ್ಚಡದೋನೆ ಸಳಿಗಾಳೀಯ ಮಳೆರಾಯ
ಸೂಳೆ ಮಳೆ ಬಿಟ್ಟು ಹೊರಡಾನೆ | ಲೋಕದಮ್ಯಾಲೆ
ಬಾಳೆಯೊಣಗಿ ಬಾಯ ಬಿಡುತಾವೆ ||

ಮಳೆರಾಯ ಪಗಡೆ ಆಡಲಿಕ್ಕೆ ಕುಳಿತಿರುವುದು ಸೂಳೆಯಮನೆಯಲ್ಲಿ ಬರುವ ಸಾಧ್ಯತೆ ತುಂಬ ಕಡಿಮೆ. ಆದರಿಂದ ಪ್ರಪಂಚವನ್ನು ನಡೆಸುವ ಪಾರ‍್ತೀರಮಣ ಶಿವನನ್ನು ಪ್ರಾರ್ಥಿಸಿ, ಆತನು ಮಳೆಯನ್ನು ಕರೆ ತರಬೇಕೆಂದೂ, ಲೋಕವೆಲ್ಲ ಅನ್ನಕ್ಕೆ ಬಾಯಿ ಬಿಡುತ್ತಿದೆಯೆಂದೂ ಕೇಳಿಕೊಳ್ಳುತ್ತಾರೆ :

ಪರಪಂಚಗಾರ ಪಾರುವತಿರಮಣ
ನನ್ನಯ್ಯ ಮಳೆಯ ತರಿಸಯ್ಯ | ನರಲೋಕ
ಅನ್ನಾಕೆ ಬಾಯಿ ಬಿಡುತಾದೆ ||

ಜೀವ ಜಂತುಗಳು ಆಹಾರಕ್ಕಾಗಿ ಬಾಯಿ ಬಿಡುವುದು, ಮಳೆರಾಯನನ್ನು ಕರೆ ತರುವುದು ಇದನ್ನೆಲ್ಲ ಮೊರಯಿಡುತ್ತ ಮಳೆರಾಯನ ಆದಿ ದೈವವಾದ ಇಂದ್ರನನ್ನು ಪ್ರಾರ್ಥಿಸುತ್ತಾರೆ. ಎಲ್ಲರನ್ನೂ ಮರೆತು ಮಳೆರಾಯ ಎಲ್ಲಿ ಮಲಗಿರುವನೋ ಆತನನ್ನು ಎಬ್ಬಿಸಾದರೂ ಕಳುಹಿಸೆಂದು ಕೂಗಿಡುವ ಜನಪದರು ಇಷ್ಟೆಲ್ಲ ನಿರಾಶೆ ಹಾಹಾಕಾರದ ಮಧ್ಯೆಯೂ ಭರವಸೆಯನ್ನು ಹೊತ್ತು ಬದುಕುತ್ತ ಮಳೆಯನ್ನು ನಂಬಿ ಕರೆಯುವ ಸಂಗತಿಯನ್ನು ನಿಜಗೊಳಿಸಿಕೊಳ್ಳುತ್ತಾರೆ. ಆಕಾಶದಲ್ಲಿ ಮೋಡಕಟ್ಟಿ, ಹನಿ ನೆಲಕ್ಕೆ ಉದುರುವ, ಹೆಗಲಲ್ಲಿ ಧಾನ್ಯದ ಹೆಡಿಗೆ ಹೊತ್ತು, ನೇಗಿಲು ನೊಗ ಹೂಡುವ ಘಳಿಗೆಯೇ ಜನಪದರಿಗೆ ನಿಜವಾದ ಸಂತಸದ ಸಮಯ ನೀರುಂಡ ಭೂಮಿಯ ಮೇಲೆಲ್ಲ ಚಿಗುರು ಹುಟ್ಟಿಕೊಂಡರೆ ಅದೇ ಭೂಮಿ ತಾಯಿ ಹಸಿರುಟ್ಟು ಗೆಜ್ಜೆ ಕಟ್ಟಿಕೊಂಡಂತೆ ಎಂದು ಹಾಡಿಕೊಳ್ಳುತ್ತಾರೆ :

ಒಳ್ಳ್ಯೋಳು ಬೂಮ್ಯಮ್ಮ ಬೆಳ್ಳಿ ಪಿಲ್ಲೆನಿಟ್ಟು
ಎಳ್ಳೊಲದಾಗ ಅಡ್ಡ ಸುಳುದಾಳೆ | ಒಕ್ಕುಲು ಮಗನೆ
ವಲ್ಲೀಯ ಹಾಸಿ ಸೆರಣೆನ್ನೋ ||

ಹಕ್ಕಿ ಪಕ್ಷಿಗಳು ಇರುವೆಂಭತ್ತು ಕೋಟಿ ಜೀವರಾಶಿಗಳು ಭೂಮಿಯ ಮೇಲೆ ಬದುಕಿವೆ. ಅವುಗಳ ಬದುಕಿನ ಆಧಾರ ಮಳೆ. ಎಲ್ಲ ಕೋಟಿ ವಿದ್ಯೆಗಳ ಮೂಲವೂ ಮೇಟಿ ವಿದ್ಯೆಯೇ. ಇಂಥ ಮೇಟಿ ವಿದ್ಯೆಯ ಮಿಣಿ ಹಿಡಿದಿರುವವನು ಮಳೆರಾಯ. ಮಳೆರಾಯನ ಆಗಮನ ಸ್ವಲ್ಪ ತಡವಾದರೂ ವ್ಯವಸಾಯವನ್ನು ನಂಬಿದ ರೈತನ ಬದುಕು ತಲೆಕೆಳಕಾಗಿ ಬಿಡುತ್ತದೆ. ದನಕರು, ಎತ್ತುಏರು, ಮಕ್ಕಳನ್ನು ಮಾರಿ ಬದುಕಬೇಕಾಗುತ್ತದೆ. ಅಂಬಲಿಗಾಗಿ ಬೀದಿಯಲ್ಲಿ ಮಕ್ಕಳನ್ನು ಮಾರಿಕೊಂಡು ತಿರುಗುವ ಬರಗಾಲದ ಭಯಾನಕ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಒಂದು ಜನಪ್ರಿಯ ಜನಪದ ಹಾಡಿನಲ್ಲಿ ಮಳೆಯನ್ನು ಕೇವಲ ವ್ಯಕ್ತಿ ಎಂದು ಭಾವಿಸದೆ ರಾಜ ಎಂತಲೇ ಕರೆದಿದೆ. ಪ್ರಜೆಗಳನ್ನು ಪರಿಪಾಲಿಸುವ ವ್ಯಕ್ತಿ ಜನಸಮೂಹದ ನಡುವೆ ಇರುವ ರಾಜನಲ್ಲ. ಎಲ್ಲ ಅನುಕೂಲ ಇದ್ದರೆ ಅವನು ರಾಜನಷ್ಟೆ. ನೆಲ-ಜನದ ಬಲ ಇಲ್ಲದೇ ಹೋದರೆ ಅವನೂ ಶೂನ್ಯ ಅವನ ಸೈನ್ಯವೂ ಶಕ್ತಿಹೀನವಷ್ಟೆ. ಜನತ್ತನ್ನು ಪರಿಪಾಲಿಸುವವನು ಮಳೆರಾಯನೆ. ಜನಪದರು ಮಳೆಯಿಂದ ಭೂಮಿಯಲ್ಲಿ ನಿರ್ಮಾಣವಾಗುವ ನದಿ ಕೆರೆಕುಂಟೆ ಕಾಲುವೆಗಳ ಜಲವನ್ನು ತೀರ್ಥವೆಂದೂ, ಆ ತೀರ್ಥದಲ್ಲೇ ದೇವರನ್ನು ಮೀಯಿಸುವ ಪ್ರಮುಖ ಆಚರಣೆಯ ಜತೆಗೆ, ನೀರಿನ ಸಮೃದ್ಧಿಗೆ ಕಾರಣವಾಗುವ ಮಳೆಯನ್ನೇ ನಿಜವಾದ ರಾಜನೆಂತಲೂ ಕರೆದು ಗೌರವಿಸಿದ್ದಾರೆ. ಹೀಗಾಗಿ ಜನಪದರಿಗೆ ದೇವಮೂಲೆಯಿಂದ ಬರುವ ಮಳೆಯೇ ರಾಜ. ತಮ್ಮ ಬಡತನ ಮತ್ತು ಎಲ್ಲ ಭಂಗಗಳನ್ನು ನೀಗುವವನು ಆತನೇ ಹೊರತು ಮತ್ಯಾರೂ ಅಲ್ಲ ಎಂಬುದು ಜನಪದರ ನಿತ್ಯದ ನಂಬಿಕೆಯಾಗಿರುತ್ತದೆ. ಸಿರಿಯಜ್ಜಿ ಮಳೆರಾಯನನ್ನು ಮತ್ತೆ ಮತ್ತೆ ತನ್ನ ಪ್ರದೇಶದಲ್ಲಿ ಹಾಡುವುದಲ್ಲದೆ, ಇನ್ನಿತರೇ ಜನಪದ ಗಾಯಕಿಯರೂ ಸಹ ಈ ವ್ಯವಸಾಯ ಬದುಕಿನ ಅಗತ್ಯದ ಹಾಡನ್ನು ಕಲಿತು ಹಾಡುತ್ತಾರೆ.

ಕಟ್ಟೆ ಮಾರವ್ವ

ಬುಡಕಟ್ಟು ಸಮೂಹದಲ್ಲಿ ಮಾರಿದೇವತೆಯ ಆಚರಣೆ ತುಂಬ ಕಡಿಮೆ. ಸಿರಿಯಜ್ಜಿ ಇರುವ ಗೊಲ್ಲರಹಟ್ಟಿಯಲ್ಲಿ ಮಾರಿದೇವತೆಯೇ ಇಲ್ಲ. ಕೆಲವು ಬುಡಕಟ್ಟು ಹಟ್ಟಿಗಳವರು ಗ್ರಾಮದೇವತೆಗೆ ನಡೆದುಕೊಳ್ಳುವುದರ ಪರಿಪಾಠ ಇರುತ್ತದಷ್ಟೆ. ಯಥಾವಿಧಿಯಾಗಿ ಗ್ರಾಮದ ಮೇಲೆ ಹಾಡಿಕೊಳ್ಳಲ್ಪಡುವ ಮಾರಿದೇವತೆಯ ಆಚರಣೆ ಅವರ ಬದುಕಿನ ಅವಿಭಾಜ್ಯ ಅಂಗವಾಗಿರುವುದರಿಂದ ಸಿರಿಯಜ್ಜಿ ಹಾಡಿರುವ ಮಾರಮ್ಮನ ಮೇಲಿನ ಗೀತೆ ಬುಡಕಟ್ಟು ಸಮೂಹದಲ್ಲಿಲ್ಲವಾದರೂ ಅದರ ಮೇಲಿನ ಚರ್ಚೆ ಇಲ್ಲಿ ಅಗತ್ಯ ಎನಿಸುತ್ತದೆ. ಮೂರು ದಿನಗಳಿಂದ ಹಿಡಿದು ಒಂಬತ್ತು ದಿನಗಳ ಕಾಲ ನಡೆಯುವ ಮಾರಿದೇವತೆಯ ಆಚರಣೆಗಳು ಋಗ್ವೇದದ ಆರಣ್ಯಕಗಳ ಯಜ್ಞ ಕ್ರಮವನ್ನು ಹೋಲುತ್ತದೆ. ಯಾವುದೇ ಗ್ರಾಮದ ಶಕ್ತಿದೇವತೆ ಜಾತ್ರೆ ಆಚರಣೆಯ ಮೊದಲ ಅಂಗವಾಗಿ ಧ್ವಜಾರೋಹಣವಾಗುತ್ತದೆ. ಇದರ ನಂತರ ಪೂಜಾರಿ ಮತ್ತು ಊರ ಯಜಮಾನ ಇಬ್ಬರೂ ಕಂಕಣಸ್ಥರಾಗುತ್ತಾರೆ. ಇದೇ ವೇಳೆ ಗುಡಿ ಮುಂದೆ ಆಳವಾದ ಗುಂಡಿ ತೋಡಿ ದೊಡ್ಡ ಸೌದೆಯ ತುಂಡು ಒಟ್ಟಿ ಬೆಂಕಿ ಹಾಕಲಾಗುತ್ತದೆ. ಈ ಯಜ್ಞಕುಂಡ ಹಾಯುವುದರೊಂದಿಗೆ ದೇವತೆಯ ಹೆಸರಿನಲ್ಲೇ ಕುರಿ, ಕೋಣ ಇಂಥ ಪ್ರಾಣಿಗಳ ಬಳಿಯೂ ನಡೆಯುವುದು. ದೇವತೆಯ ಹೆಸರಿನಲ್ಲಿ ಬಿಟ್ಟ ಪ್ರಾಣಿಗಳನ್ನೆಲ್ಲ ಜನಿಗೆ ಕುರಿ, ಕೋಣ ಎಂತಲೇ ಕರೆಯುವುದಿದೆ. ಈ ಜನಿಗೆ ಕುರಿ ಕೋಣಗಳು ದೇವತೆಯ ಹೆಸರು ಹೇಳಿ ಬಿಟ್ಟ ಒಂದು ಅಥವಾ ಎರಡು ವರ್ಷ ಕಾಲ ಎಲ್ಲಿಯಾದರೂ ಮೇಯ್ದು ಸ್ವತಂತ್ರವಾಗಿ ತಿರುಗುವುವು. ಅಂದರೆ ಅವು ಯಜ್ಞಾಶ್ವಗಳಿದ್ದಂತೆ. ಜನಿಗೆ ಎಂಬ ಪದವೇ ಯಾಜ್ಞಿಕ ಎಂಬ ಸಂಸ್ಕೃತ ಪದದಿಂದ ಬಂದದ್ದಾಗಿರುತ್ತದೆ. ಯಜ್ಞ ಎಂಬ ಪದ ಕನ್ನಡದಲ್ಲಿ ಜನ್ನ ಎಂಬುದಾಗಿ ತದ್ಭವಗೊಳ್ಳುತ್ತದೆ. ಹಾಗೆಯೇ ಯಾಜ್ಞಿಕ ಎಂಬುದು ಗ್ರಾಮೀಣರಲ್ಲಿ ಜನ್ನಿಕ, ಜನಿಗೆ ಆಗಿರುವಂತೆ ಕಾಣಿಸುತ್ತದೆ.

ಎಲ್ಲ ಗ್ರಾಮಗಳಲ್ಲಿಯೂ ಮಾರಮ್ಮನಿಗೆ ಕುರಿ ಕೋಣ ಬಲಿ ಕೊಡುವ ಸಂಬಂಧದಲ್ಲಿ ಒಂದು ಕಥೆ ಪ್ರಚಲಿತದಲ್ಲಿದೆ. ಆಯಾ ಪ್ರದೇಶದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳೊಡನೆ ಆ ಕಥೆ ಪ್ರಚಾರದಲ್ಲಿದೆಯಾದರೂ ಅದರ ಮೂಲ ಆಶಯ ಒಂದೇ ಆಗಿದೆ. ಒಬ್ಬ ಕೆಳವರ್ಗದ ವ್ಯಕ್ತಿ ಸುಳ್ಳು ಹೇಳಿ ಮೇಲುವರ್ಗದ ಕನ್ನೆಯೊಬ್ಬಳನ್ನು ಮದುವೆಯಾಗುತ್ತಾನೆ. ಆಕೆ ಆತನನ್ನು ಮೊದಮೊದಲು ಉನ್ನತ ವರ್ಗದವನೆಂದೇ ಭಾವಿಸಿದ್ದಳು. ಒಂದು ದಿನ ಆತನ ತಾಯಿ ಮನೆಗೆ ಬಂದಳು. ಕೆಲವು ದಿನ ಮಗನ ಮನೆಯಲ್ಲಿದ್ದವಳಿಗೆ, ಸೊಸೆಯು ಪ್ರತಿನಿತ್ಯ ತಯಾರಿಸುತ್ತಿದ್ದ ಸಸ್ಯಾಹಾರದ ಅಡುಗೆಯಿಂದ ಬೇಸರವಾಯಿತು. ‘ಏನುತಿಂದರೆ ಏನು? ಕುರಿ ಎತ್ತಿನ ನಾಲಗೆ ತಿಂದದ್ದಕ್ಕೆ ಯಾವುದು ಸಮ’ ಎಂದಳು. ಆಗ ಸೊಸೆಗೆ ಗಂಡ ಮತ್ತು ಅತ್ತೆ ಕೆಳವರ್ಗಕ್ಕೆ ಸೇರಿದವರು ಎಂದು ಅರಿವಾಗುತ್ತದೆ. ಗಂಡನಿಗೆ ಶಾಪಕೊಟ್ಟು ಜೀವ ತೊರೆಯುತ್ತಾಳೆ. ಜೀವ ತೊರೆಯುವಾಗ ತಾನು ಮಾರಿದೇವತೆಯಾಗಿ ತನಗೆ ಪ್ರತಿ ವರ್ಷ ಬಲಿಕೊಡುವ ಕೋಣವೇ ತನ್ನನ್ನು ನಂಬಿಸಿ ಮದುವೆಯಾದ ಗಂಡನಾಗಲಿ ಎಂದಳು. ಮಾರ್ಕಂಡೇಯ ಪುರಾಣದಲ್ಲಿ ಮಹಿಷಾಸುರನ ಹಾವಳಿಯಿಮದ ತೊಂದರೆಗೀಡಾದ ದೇವತೆಗಳು ತಮ್ಮೆಲ್ಲರ ಶಕ್ತಿ ಮತ್ತು ಆಯುಧಗಳನ್ನು ಚಾಮುಂಡೇಶ್ವರಿ ದೇವತೆಗೆ ಕರುಣಿಸಿ ತನ್ಮೂಲಕ ಮಹಿಷಾಸುರ ರಾಕ್ಷಸನನ್ನು ಸಂಹಾರ ಮಾಡಿಸಿದಂತೆ ಕಥೆ ಬರುತ್ತದೆ. ಹೀಗಾಗಿ ಶಕ್ತಿ ದೇವತೆಯ ಮೇಲೆ ಪ್ರಚಲಿತದಲ್ಲಿರುವ ಶಿಷ್ಟ ಕಥೆ, ಜನಪದ ಪರಂಪರೆಯಲ್ಲಿ ಬಂದಿರುವ ಕಥೆ ಎರಡೂ ಬೇರೆ ಬೇರೆಯ ಆಶಯಗಳಲ್ಲಿ ಪ್ರಚಾರದಲ್ಲಿವೆ.

ಶಕ್ತಿದೇವತೆಯ ಮುಂದೆ ಕೋಣ (ಮಹಿಷ)ನ ಸಂಹಾರವಾದ ಮೇಲೆ ಅದರ ಮುಂಗಾಲನ್ನು ಕತ್ತರಿಸಿ ಬಾಯಿಗೆ ಇಟ್ಟು ಅದರ ಕೊಬ್ಬಿನಿಂದಲೇ ಉರಿಯುವ ದೀಪವನ್ನು ಕೋಣನ ರುಂಡದ ಮೇಲೆ ಇಟ್ಟಿರುತ್ತಾರೆ. ಮಾರಿದೇವತೆಯ ಆಚರಣೆಗಳಲ್ಲಿ ಋಗ್ವೇದದ ಯಜ್ಞ ವಿಧಿಯ ಆಚರಣೆಯೂ ಸೇರಿಕೊಂಡು, ಮಾರ್ಕಂಡೇಯ ಪುರಾಣದ ಕಥೆಯೂ ಹೊಂದಿಕೊಂಡು ತದನಂತರ ಒಂದು ಜನಪದ ಕಥೆಯೂ ತಳುಕು ಹಾಕಿಕೊಂಡಿದೆ. ಮಾರಿದೇವತೆಯ ಹೆಸರಿನಲ್ಲಿ ಅಂಟಿಕೊಂಡ ಜನಪದ ಕಥೆ ವರ್ಗಸಂಘರ್ಷದ ಆಶಯವನ್ನು ಹೊಂದಿದ್ದು ಬೇರೆಲ್ಲ. ವರ್ಗ ಸಂಬಂಧದ ಕಥೆಗಳಂತೆ, ಅದು ಮುರಿದುಬಿದ್ದ ಆಶಯವನ್ನು ಹೊಂದಿ ಇದು ಬಹುತೇಕ ದಕ್ಷಿಣ ಭಾರತದಾದ್ಯಂತ ಪ್ರಚಾರದಲ್ಲಿದೆ. ತುಳುವಿನ ಕೋಟಿ ಚನ್ನಯ, ತಮಿಳಿನ ಚಿನ್ನತಂಬಿ ಪೆರಿಯತಂಬಿಯ ಕಥೆಗಳಂತೆ ಈ ನಾಯಕರು ಮೇಲುವರ್ಗದವರೊಡನೆ ಸಂಬಂಧ ಬೆಳೆಸಲು ಹೋಗಿ, ಹೋರಾಡಲು ಹೋಗಿ ಅವರೊಡನೆ ತಮ್ಮ ಸ್ಥಾನ ಗುರುತಿಸಿಕೊಳ್ಳಲು ಪ್ರಯತ್ನಿಸಿ ಹತರಾದವರು. ಒಟ್ಟಿನಲ್ಲಿ ವರ್ಗಸಂಘರ್ಷದ ಬೀಜವುಳ್ಳ ಮಾರಿದೇವತೆಯ ಮೇಲಣ ಜನಪದ ಕಥೆ ಈಚಿನದು. ಶಕ್ತಿದೇವತೆಯ ಕಲ್ಪನೆ, ಆರಾಧನೆ ಅತ್ಯಂತ ಪ್ರಾಚೀನ ಕಾಲದ್ದು. ಇದಕ್ಕೆ ಇನ್ನೂ ಒಳ್ಳೆಯ ಉದಾಹರಣೆಯೆಂದರೆ ಬೆಂಗಳೂರು ಸುತ್ತಮುತ್ತ ನಡೆಯುವ ಶಕ್ತಿದೇವತೆಯ ಕರಗ ಆಚರಣೆಗೆ ಮಹಾಭಾರತದ ಕಥೆಗಳು ಅಂಟಿಕೊಂಡಿರುವುದು. ಇನ್ನೊಂದು ಮುಖ್ಯ ಸಂಗತಿಯೆಂದರೆ ಶಕ್ತಿದೇವತಾ ಸಂಬಂಧದ ಕರಗ ಆಚರಣೆ ಇರುವ ಎಡೆಯಲ್ಲೆಲ್ಲಾ ಆ ದೇವಾಲಯಗಳನ್ನು ಧರ್ಮರಾಯನ ಗುಡಿಯೆಂದು ಕರೆಯುತ್ತಾರೆ. ಆದರೆ ದೇವಾಲಯದ ಒಳಗೆ ಪರೀಕ್ಷಿಸಿದರೆ ಮೂಲ ವಿಗ್ರಹ ಶಕ್ತಿದೇವತೆಯಾಗಿದ್ದು ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ, ದ್ರೌಪದಿಯರ ವಿಗ್ರಹಗಳನ್ನು ಇತ್ತೀಚೆಗೆ ಮಾಡಿಸಿ ಇಟ್ಟಿರುವುದು ಕಂಡುಬರುತ್ತದೆ. ಜತೆಗೆ ಶಕ್ತಿದೇವತೆಯ ಮೇಲೆ ಪ್ರತಿವರ್ಷ ನಡೆಯುವ ಉತ್ಸವವನ್ನು ದ್ರೌಪದಿಯಮ್ಮನ ಕರಗ ಎಂತಲೇ ಹೇಳುತ್ತಾರೆ. ಇಲ್ಲಿ ಬಲಿಯ ಆಚರಣೆಯೂ ಸಹ ಇರುತ್ತದೆ. ಹೀಗಾಗಿ ಪ್ರತಿಯೊಮದು ಪಟ್ಟಣ, ಗ್ರಾಮ ಯಾವುದೇ ಭಾಗಗಳಲ್ಲಿ ಮಾರಿದೇವತೆಯ ಹೆಸರು ಬೇರೆಯಾದರೂ ಅವುಗಳ ಮೂಲ ಆಚರಣೆಯ ಕ್ರಮ ಒಂದೇ. ಆದರೆ ದೇವತೆಯ ಆಚರಣೆಗೂ ಜನಪದರ ನಡುವೆ ಪ್ರಚಾರವಿರುವ ಕಥೆಗೂ ಯಾವುದೇ ಸಂಬಂಧವಿರುವಂತೆ ಕಾಣುವುದಿಲ್ಲ. ಅಲ್ಲದೆ ಸಿರಿಯಜ್ಜಿ ಅಥವಾ ಯಾವುದೇ ಗ್ರಾಮದ ಹೆಣ್ಣುಮಕ್ಕಳು ಹಾಡುವ ಮಾರಿದೇವತೆಯ ಹಾಡಿನಲ್ಲಿ ವರ್ಗ ಸಂಬಂಧದ ಕಥೆಯಾಗಲಿ, ಮಾರ್ಕಂಡೇಯ ಪುರಾಣದ ಕಥೆಯಾಗಲಿ ಪ್ರಸ್ತಾಪವಾಗುವುದೇ ಇಲ್ಲ. ಹೀಗಾಗಿ ಆಚರಣೆ, ಅಂಟಿಕೊಂಡ ಕಥೆ, ಗೀತೆಗಳ ರಚನೆಯ ಸಂದರ್ಭ ಇವೆಲ್ಲವೂ ಬೇರೆ ಬೇರೆ ಎಂದು ಪರಿಭಾವಿಸಬೇಕಾಗುತ್ತದೆ.

ಭಕ್ತಿ ಗೀತೆಗಳು

ಸಿರಿಯಜ್ಜಿ ಹಾಡಿರುವ ಅನೇಕ ಭಕ್ತಿಗೀತೆಗಳಲ್ಲಿ ತಿರುಪತಿ ತಿಮ್ಮಪ್ಪ, ನಾಯಕನ ಹಟ್ಟಿ ತಿಪ್ಪೇರುದ್ರಸ್ವಾಮಿ, ಹನುಮಂತರಾಯ ಗೀತೆಗಳು ಜನಪದರ ಸ್ತೋತ್ರರೂಪದ ಗೀತೆಗಳಾಗಿವೆ. ತಿರುಪತಿ ತಿಮ್ಮಪ್ಪ ಗೀತೆಯು ‘ಆಲಗಿರಿ ಲೋಲಗಿರಿ ತಿಮ್ಮಯ್ಯ | ಮ್ಯಾಲೆ ಚಿನ್ನಾದ ಗಿರಿಯವನೆ’ ಎಂಬ ಸೊಲ್ಲಿನ ವಾಕ್ಯಗಳಿಂದ ಆರಂಭವಾಗುತ್ತದೆ. ಅಷ್ಟೇ ಸುಂದರ ತ್ರಿಪದಿಗಳಿಂದಲೂ ಕೂಡಿದೆ :

ನೀಲಿವರ್ನಾದೋನು ನ್ಯಾರನ್ನಮುಖದೋನು
ಮೂರು ನಾಮಾದ ಚಲುವಾನೆ | ಚಿನ್ನದಗಿರಿಯ
ಗೋವಿಂದ ಬಂದಿದ್ದ ಸಪುನಾಕೆ ||

ಈ ಬಗೆಯಲ್ಲಿ ಸಿರಿಯಜ್ಜಿ ತಿರುಪತಿತಿಮ್ಮಪ್ಪನನ್ನು ಕುರಿತು ನೂರೈವತ್ತಕ್ಕೂ ಹೆಚ್ಚು ತ್ರಿಪದಿಗಳನ್ನು ಹಾಡಿರುತ್ತಾಳೆ. ಯಾವ ಶಿಷ್ಟ ದೇವತೆಯೂ ಜನಪದರ ನಡುವೆ ಬಂದಿರುವುದು ಅಪರೂಪ. ರಾಮ, ಕೃಷ್ಣರನ್ನು ಜನಪದರಲ್ಲಿ ಗೀತೆಗಳು ಕಡಿಮೆಯೆಂದೇ ಹೇಳಬೇಕು. ರಾಮಾಯಣ, ಮಹಾಭಾರತವನ್ನು ಕುರಿತು ಬಿಡಿ ಕಥಾನಕಗಳು ವ್ಯಾಪಕವಾಗಿವೆ. ಆದರೆ ರಾಮ, ಕೃಷ್ಣರ ವ್ಯಕ್ತಿತ್ವವನ್ನು ಪ್ರತ್ಯೇಕವಾಗಿಯೇ ಪ್ರಾರ್ಥನೆಯಂತೆ ಜನಪದರು ಹಾಡುವುದಿಲ್ಲ. ತಿರುಪತಿ ತಿಮ್ಮಪ್ಪನ ಕುರಿತಾದ ಹಾಡನ್ನು ಸಿರಿಯಜ್ಜಿ ಮಾತ್ರವಲ್ಲ, ಕರ್ನಾಟಕದಲ್ಲಿ ಇತರ ಜನಪದ ಹಾಡುಗಾರ್ತಿಯರೂ ಹಾಡುತ್ತಾರೆ. ದಕ್ಷಿಣ ಭಾರತದಲ್ಲಿ ಇರಬಹುದಾದ ಅತ್ಯಂತ ಪ್ರಾಚೀನ ಕಾಲದ ದೈವ ನೆಲೆಗಳಲ್ಲಿ ತಿರುಪತಿ ತಿಮ್ಮಪ್ಪನದೂ ಒಂದು. ಇದರ ಜತೆಗೆ ಶ್ರೀಶೈಲ ಮಲ್ಲಿಕಾರ್ಜುನನ ನೆಲೆ ಇನ್ನೊಂದು. ಇವು ಅರಣ್ಯವಾಸಿ ಬುಡಕಟ್ಟು ದೇವತೆಗಳು. ಯಾವುದೇ ಬುಡಕಟ್ಟು ಮತ್ತು ತಳವರ್ಗದವರು ಮನೆ ದೇವತೆಯನ್ನಾಗಿ ತಿರುಪತಿ ತಿಮ್ಮಪ್ಪ, ಶ್ರೀಶೈಲ ಮಲ್ಲಿಕಾರ್ಜುನರನ್ನು ಸ್ವೀಕರಿಸಿರುತ್ತಾರೆ. ಈ ದೇವತೆಗಳ ಯಾತ್ರೆ ಪರಮಪವಿತ್ರ. ತಳವರ್ಗದವರಿಗೆ ದೇವಾಲಯ ಪ್ರವೇಶ ನಿಷೇಧವಿರುವ ಎಲ್ಲ ಸಂದರ್ಭಗಳಲ್ಲಿಯೂ ಈ ಕೇಂದ್ರಗಳಲ್ಲಿಯೇ ಅಲ್ಲದೆ ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯದಲ್ಲಿಯೂ ಪ್ರವೇಶವಿದ್ದಿತು ಎಂಬುದು ಗಮನಾರ್ಹ ಸಂಗತಿ. ಅತ್ಯಂತ ಪ್ರಾಚೀನ ಕಾಲದ ದ್ರಾವಿಡ ಮೂಲ ಶೈವ ದೇವತೆಗಳಾದ ಈ ಅರಣ್ಯ ದೇವತೆಗಳು ಅಪಾರ ತಳವರ್ಗ ಸಮೂಹದ ಮನೆ ದೇವತೆಯರಾದ ಕಾರಣ ಕಾಲಕ್ರಮೇಣ ಇವು ಬೇರೆ ಬೇರೆ ರೀತಿಯ ಕಾಯಕಲ್ಪಗಳನ್ನು ಪಡೆದು ಅಧಿಕಾರಶಾಹಿಯ ಇಲ್ಲವೇ ಮತೀಯ ಹಿರಿಯರ ಕೈಗೆ ಸಿಕ್ಕಿವೆ. ತಿರುಪತಿ ತಿಮ್ಮಪ್ಪ ಕಾಲಕ್ರಮೇಣ ವೈಷ್ಣವ ದೇವತೆ ಯಾಗಿ ಪರಿವರ್ತನೆಯಾದದ್ದೂ ಕುತೂಹಲದ ಸಂಗತಿಯೇ! ಶೈವಾರಾಧನೆಯ ನೆಲೆಯಾಗಿದ್ದ ಈ ಕೇಂದ್ರ ರಾಮಾನುಜಾಚಾರ್ಯರ ಕಾಲಕ್ಕೆ ವೈಷ್ಣವ ದೇವತೆಯಾಗಿ ಪರಿವರ್ತಿತವಾಯಿತೆಂದು ತಿಳಿಯಲಾಗಿದೆ ಹರಿಹರ ಸಮನ್ವಯ ರೂಪದ ಈ ವಿಗ್ರಹ ವೆಂಕಟೇಶ್ವರ ಎಂಬ ಹೆಸರಿನಲ್ಲಿ ಪ್ರಚಲಿತಗೊಂಡು ಬಂದಿರುವುದಕ್ಕೆ, ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿಯೂ ಸಮರ್ಥನೆಗಳು ಸಿಗುತ್ತವೆ. ಮಧ್ಯ ಕರ್ನಾಟಕದ ಕೂಡಲೂರಿನಲ್ಲಿ ಹರಿಹರ ದೇವಾಲಯ ನಿರ್ಮಾಣವಾಗಿ ಧರ್ಮಸಮನ್ವಯದ ಹಿನ್ನೆಲೆಯಲ್ಲಿ ಹರಿಹರ ಎಂಬ ಪಟ್ಟಣವಾದದ್ದು, ಹನ್ನೆರಡನೆಯ ಶತಮಾನದಲ್ಲಿಯೇ. ಧರ್ಮಸಮನ್ವಯದ ಹಿನ್ನೆಲೆಯಲ್ಲಿ ತಿರುಪತಿಯ ತಿಮ್ಮಪ್ಪ ವೆಂಕಟೇಶ್ವರನಾದಂತೆ, ಇಂದಿಗೂ ಶೈವ ಮೂಲದ ಬುಡಕಟ್ಟುಗಳು ಈ ಬಗೆಯ ಧಾರ್ಮಿಕ ಪ್ರಭಾವಕ್ಕೆ ಸಿಕ್ಕಿ ಶಿವ ಮತ್ತು ವಿಷ್ಣುವಿನ ಆರಾಧನೆ ಎರಡನ್ನೂ ಒಪ್ಪಿಕೊಂಡಂತೆ ಕಾಣುತ್ತದೆ. ಶೈವ ಮೂಲದ ದೇವತೆಗಳನ್ನೇ ಪ್ರಮುಖವಾಗಿ ಆರಾಧಿಸುವ ಕಾಡುಗೊಲ್ಲರು ತಾವು ಕೃಷ್ಣನ ಭಕ್ತರೆಂದು ಹೇಳಿಕೊಳ್ಳುತ್ತಾರೆ. ಮ್ಯಾಸಬೇಡ ನಾಯಕರೂ ಸಹ ಮಲ್ಲಿಕಾರ್ಜುನನ ಭಕ್ತರಾದರೂ ಅವರಲ್ಲೇ ‘ದಾಸರಿಕುಲ’ವೆಂಬ ಬೆಡಗು ಇದೆ. ಅವರಲ್ಲಿ ಸಂಪೂರ್ಣ ವೈಷ್ಣವ ತತ್ವದ ಹಿನ್ನೆಲೆಯಲ್ಲೇ ನಡೆಯುವ ಕೆಲವು ಆಚರಣೆಗಳಿವೆ. ಈ ಬಗೆಯ ಧಾರ್ಮಿಕ ಪ್ರಭಾವ ರಾಮಾನುಜಾಚಾರ್ಯರ ಕಾಲದಿಂದ ಆರಂಭವಾಗಿ ಭಕ್ತಿಯುಗದ ಕಾಲಕ್ಕೆ ವಿಜಯನಗರದರಸರ ಕಾರಣದಿಂದ ಹೆಚ್ಚು ಪ್ರಚಾರಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಕಾಡುಗೊಲ್ಲ ಸಮೂಹದವರು ಜುಂಜಪ್ಪ, ಎತ್ತಪ್ಪ, ಪಾತಪ್ಪ ಈ ಶೈವ ಮೂಲದ ದೇವತೆಗಳನ್ನು ಆರಾಧಿಸಿದರೂ ಕೃಷ್ಣನ ಭಕ್ತರೆಂದುಕೊಂಡು, ಅದರಲ್ಲೂ ಕಾಡುಗೊಲ್ಲ ಸ್ರೀಯರು ಗಂಡ ತೀರಕೊಂಡರೂ, ತಾವು ವಿಧವೆಯರಲ್ಲ, ಕೃಷ್ಣನೇ ತಮ್ಮ ಗಂಡನೆಂದು ತಾಳಿ ಬಳೆಯನ್ನು ತೆಗೆಯದೆ ಮುತ್ತೈದೆ ಯರಾಗಿಯೇ ಇರುತ್ತಾರೆ. ಹೀಗಾಗಿ ಸಿರಿಯಜ್ಜಿ ವಾಸವಿರುವ ಕಾಡುಗೊಲ್ಲ ಬುಡಕಟ್ಟು ಹಟ್ಟಿಯವರಿಂದ ಹಿಡಿದು, ಅಲೆಮಾರಿ ವರ್ಗಗಳು, ಗ್ರಾಮ ನಿವಾಸಿಗಳು ಇಂದಿಗೂ ತಿರುಪತಿಯ ವೆಂಟೇಶ್ವರನನ್ನು ತಿಮ್ಮಪ್ಪನೆಂದೇ ಪರಿಭಾವಿಸಿ ಯಾತ್ರೆ ಕೈಗೊಳ್ಳುತ್ತಾರೆ. ಅನಾದಿ ಕಾಲದಿಂದಲೂ ಈ ದೇವತೆಯನ್ನು ಕುಲದೇವತೆಯೆಂದು ತಿಳಿದು ಬಂದಿದ್ದಾರೆ.

ತಿರುಪತಿ ತಿಮ್ಮಪ್ಪ ದಕ್ಷಿಣ ಭಾರತದ ತಳವರ್ಗ ಸಮೂಹಕ್ಕೆ ಪ್ರಾಚೀನ ಕಾಲದಿಂದಲೂ ಅಮೂರ್ತ ಸ್ವರೂಪದ ದೈವವಾದರೆ, ಚಿತ್ರದುರ್ಗ ಪ್ರದೇಶದ ಅಪಾರ ಜನಸ್ತೋಮಕ್ಕೆ ಅದರಲ್ಲೂ ತಳವರ್ಗಕ್ಕೆ ಚಳ್ಳಕೆರೆ ತಾಲ್ಲೋಕಿನ ನಾಯಕನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಇಂದು ಆರಾಧ್ಯ ದೈವವಾಗಿರುತ್ತಾನೆ. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದೊಳಗೆ ಏರ್ಪಟ್ಟ ಸಾಮಾಜಿಕ ಕ್ರಾಂತಿಯ ನಿಲುಗಡೆಯ ನಂತರ ಅದು ಮತ್ತೆ ಹದಿನೈದನೆಯ ಶತಮಾನದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆ ಜಾಗೃತಗೊಂಡದ್ದು ಕನ್ನಡದ ಸಾಂಸ್ಕೃತಿಕ ಪರಂಪರೆಯ ಸೂಕ್ಷ್ಮಾವಲೋಕನವುಳ್ಳ ಸಂಶೋಧಕರಿಗೆ ಅರ್ಥವಾಗುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಆ ಹೊತ್ತಿನ ರಾಜಕಾರಣ ಮತ್ತು ಸಾಮಾಜಿಕ ಪರಂಪರೆಯೇ ಅಲ್ಲದೆ ಧರ್ಮದ ಮೂಲಭೂತ ಬದಲಾವಣೆಗೆ ಕಾರಣರಾದರು ಎನ್ನುವುದಾದರೆ ಮಧ್ಯ ಕರ್ನಾಟಕದ ತಿಪ್ಪೇಸ್ವಾಮಿ, ದಕ್ಷಿಣ ಕರ್ನಾಟಕದ ಮಹದೇಶ್ವರ, ಮಂಟೇಸ್ವಾಮಿ ಮುಂತಾದವರು ಜನಪದ ಧರ್ಮದ ಪುನರುತ್ಥಾನಕ್ಕೆ ಕಾರಣರಾದರು. ಕಲ್ಯಾಣದ ವಚನಕಾರರ ಉದ್ದೇಶಗಳನ್ನು ಇವರು ಅತ್ಯಂತ ಕ್ರಿಯಾಶೀಲ ರೂಪದಲ್ಲಿ ಮುಂದುವರೆಸಿದರೆಂತಲೇ ನಾವು ತಿಳಿಯಬಹುದಾಗಿದೆ.

ಹದಿನೈದನೇ ಶತಮಾನದಲ್ಲಿ ಕರ್ನಾಟಕದಾದ್ಯಂತ ಚಲಿಸಿದ ಶರಣರಲ್ಲಿ ಮಧ್ಯ ಕರ್ನಾಟಕದ ಚಿತ್ರದುರ್ಗ ಪ್ರದೇಶಕ್ಕೆ ಬಂದ ತಿಪ್ಪೇಸ್ವಾಮಿ ಒಬ್ಬ ಪ್ರಮುಖ ಸಂತನಾಗಿ ಕಾಣಿಸುತ್ತಾನೆ. ಯಥಾವಿಧಿಯಾಗಿ ಮಂಟೇಸ್ವಾಮಿ, ಮಹದೇಶ್ವರರಂತೆ ಈತನ ಹುಟ್ಟು ಸ್ಥಳ, ವಿದ್ಯಾಭ್ಯಾಸದ ನೆಲೆಗಳು ಸರಿಯಾಗಿ ತಿಳಿದು ಬರುವುದಿಲ್ಲ. ಮುಖ್ಯ ಸಂಗತಿಯೆಂದರೆ ಹದಿನೈದನೇ ಶತಮಾನದ ಸಂತರುಗಳ ಆದಿ ಗೊತ್ತಿಲ್ಲದಿದ್ದರೂ ಅವರು ಅಂತ್ಯ ಕಂಡ ಪ್ರದೇಶಗಳು ಮಾತ್ರ ಧರ್ಮ ಸಮನ್ವಯದ ಕ್ಷೇತ್ರಗಳಾಗಿವೆ. ಕೇವಲ ಬುಡಕಟ್ಟು ಸಮೂಹವಲ್ಲದೆ ಮುಸ್ಲಿಮರೂ ಕೂಡ ತಿಪ್ಪೇಸ್ವಾಮಿಯ ಭಕ್ತರಾಗಿರುತ್ತಾರೆ. ತಿಪ್ಪೇಸ್ವಾಮಿಯ ಧರ್ಮ ಸಮನ್ವಯದ ಸಾಹಸ ಇಂದಿಗೂ ಯಾವ ಸ್ವರೂಪದಲ್ಲಿದೆಯೆಂದರೆ ಆತನ ಸಮಾಧಿ ಮಂದಿರ ಮುಸ್ಲಿಂ ಶೈಲಿಯಲ್ಲಿದ್ದು ಅದನ್ನು ಕಟ್ಟಿಸಿದವನು ಹೈದರಾಲಿಯೆಂದೇ ಹೇಳುವುದಿದೆ. ಕೇವಲ ಹಿಂದೂ ಮುಸ್ಲಿಂ ವಿಚಾರದಲ್ಲೇ ಅಲ್ಲದೆ ತಳವರ್ಗದವರನ್ನು ಆತ ಮುಖ್ಯವಾಹಿನಿಗೆ ತರುವುದರ ಹಿನ್ನೆಲೆಯಲ್ಲಿ ಅಪಾರ ಶ್ರಮ ವಹಿಸಿದಂತೆ ಕಾಣುತ್ತದೆ. ಕೆಳವರ್ಗದವರ ಮನೆಯ ಊಟಕ್ಕೆ ಹೋಗಿ, ಮೇಲು ವರ್ಗದವರ ಅಸಮಾಧಾನಕ್ಕೆ ತುತ್ತಾದ ಕಥೆ ತಿಪ್ಪೇಸ್ವಾಮಿಯ ಬದುಕಿನ ಹಿನ್ನೆಲೆಯಲ್ಲಿದೆ. ಅಲ್ಲದೆ ತಾನು ಬದುಕಿದ್ದವರೆಗೆ ಲೋಕೋಪಕಾರಿಯಾಗಿದ್ದಂತೆ ಕೇಳಿಸುವ ಪವಾಡ ಕಥೆಗಳೂ ಇವೆ. ಬಡವರು ಸಾಕಿಕೊಂಡಿದ್ದ ಎಮ್ಮೆ ಸತ್ತು ಅದನ್ನು ಬದುಕಿಸಿದ್ದು, ಸತ್ತ ಮಗುವನ್ನೂ ಬದುಕಿಸಿ ತಂದೆ ತಾಯಿಗಳ ದುಃಖವನ್ನು ಕಡಿಮೆ ಮಾಡಿದ್ದು ಇವೆಲ್ಲ ಶರಣ ತಿಪ್ಪೇಸ್ವಾಮಿಯ ಬದುಕಿನ ಕಾಲದ ಇತರ ಪವಾಡದ ಕಥೆಗಳು. ಸತ್ತ ಪ್ರಾಣಿ ಮತ್ತು ವ್ಯಕ್ತಿಯನ್ನು ಬದುಕಿಸುವ ಕಥೆಗಳು ಸಾಮಾನ್ಯವಾಗಿ ದಾರ್ಶನಿಕರ, ಸಂತರ, ಶರಣರ ಬದುಕಿನಲ್ಲಿ ಪ್ರಚಲಿತದಲ್ಲಿದ್ದೇ ಇರುತ್ತವೆ. ಮಹಾ ಪರಾಕ್ರಮಿಯಾದವನು ಬೇಟೆ ಆಡುವುದು, ಸೈನಿಕ ಸಮೂಹವನ್ನು ಕೊಲ್ಲುವುದು, ಸುಂದರಿಯರನ್ನು ಗೆಲ್ಲುವುದು ಈ ಚಟುವಟಿಕೆಗಳಲ್ಲಿದ್ದರೆ, ಸಂತರು, ಶರಣರು ಸತ್ತವರನ್ನು ಬದುಕಿಸಿವುದರ ಮೂಲಕ ಮಹಿಮಾ ಪುರುಷರಾಗಿರುತ್ತಾರೆ. ಈ ಪರಂಪರಾಗತ ಆಶಯಗಳು ರಾಜರ ಮತ್ತು ಶರಣರ ಸುತ್ತ ಇದ್ದು ಆ ಕಾರಣಕ್ಕಾಗಿಯೇ ಜನಸಮೂಹ ರಾಜಮಹಾರಾಜರನ್ನು ಭಯದಿಂದಲೂ ಸಂತರನ್ನು ಭಕ್ತಿ ಗೌರವದಿಂದಲೂ ನೋಡುವುದಿದೆ. ತಿಪ್ಪೇಸ್ವಾಮಿ ಸತ್ತ ಎಮ್ಮೆ, ಮಗುವನ್ನು ಬದುಕಿಸಿದನೋ ಇಲ್ಲವೋ ಆದರೆ ಆತ ಇದ್ದ ಪ್ರದೇಶದ ಜನರ ಬದುಕನ್ನು ಹಸನುಗೊಳಿಸುವುದರಲ್ಲಿ ನಿರಂತರವಾಗಿ ಪ್ರಯತ್ನಿಸಿದಂತೆ ಕಾಣುತ್ತದೆ. ಅದಕ್ಕೆ ಈಗಳೂ ಇರುವ ಸ್ಪಷ್ಟ ಆಧಾರಗಳೆಂದರೆ ನಾಯಕನಹಟ್ಟಿ ಸುತ್ತಿನ ಎರಡು ದೊಡ್ಡ ಕೆರೆಗಳು. ಅದನ್ನು ಆ ಸೀಮೆಯ ಬುಡಕಟ್ಟು ಪಾಳೆಯಗಾರ ಬೋಡಿ ಮಲ್ಲಪ್ಪನಾಯಕರ ಸಹಾಯದಲ್ಲಿ ತಿಪ್ಪೇಸ್ವಾಮಿ ಕಟ್ಟಿಸಿದನೆಂಬ ಪ್ರತೀತಿ ಇದೆ. ಕೆರೆ ಕಟ್ಟಿಸಿದ್ದರ ಸಂದರ್ಭದಲ್ಲಿ ಕಾಯಕದ ಮಹತ್ವವನ್ನು ಎತ್ತಿ ಹಿಡಿಯುವ ಒಂದು ದಂತ ಕಥೆಯಂತೂ ನಾಯಕನ ಹಟ್ಟಿ ಸುತ್ತಿನಲ್ಲಿ ವ್ಯಾಪಕ ಪ್ರಚಾರದಲ್ಲಿದೆ. ಕೆರೆಯ ನಿರ್ಮಾಣದಲ್ಲಿ ಪಾಳೆಯಗಾರನಿಗೆ ಹಣದ ಕೊರತೆ ಬಿದ್ದಿತಂತೆ. ಆಗ ತಿಪ್ಪೇಸ್ವಾಮಿ ಕೆಲಸಗಾರರನ್ನೆಲ್ಲ ಕೆರೆಯ ಅಂಗಳದಲ್ಲಿ ನಿಲ್ಲಿಸಿ ಮರುಳುಗುಡ್ಡೆ ಹಾಕಿಕೊಳ್ಳಲು ಹೇಳಿದ. ಕೆಲಸಗಾರರು ಹೆಚ್ಚು ದ್ರವ್ಯ ಪಡೆಯಲು ದೊಡ್ಡ ದೊಡ್ಡ ಮರುಳುಗುಡ್ಡೆ ಹಾಕಿಕೊಂಡು ತಿಪ್ಪೇಸ್ವಾಮಿ ಮುಟ್ಟುತ್ತಿದ್ದಂತೆ ಗುಡ್ಡೆಯೆಲ್ಲ ಹಣವಾಗುತ್ತದೆಂಬ ಆಸೆಯಿಂದ ಕಾಯ್ದರು. ತಿಪ್ಪೇಸ್ವಾಮಿ ಪ್ರತಿಯೊಬ್ಬರ ಮರಳುಗುಡ್ಡೆಯನ್ನು ತನ್ನ ದಂಡದಿಂದ ಮುಟ್ಟುತ್ತ ಬಂದ. ಯಾರ‍್ರು ಎಷ್ಟೆಷ್ಟು ಕೆಲಸ ಮಾಡಿದ್ದರೋ ಅಷ್ಟಷ್ಟು ಗಾತ್ರದ ಮರುಳು ಗುಡ್ಡೆ ಮಾತ್ರ ದ್ರವ್ಯವಾಯಿತಂತೆ. ಮಾಡಿದ ಕಾಯಕಕ್ಕಷ್ಟೇ ದ್ರವ್ಯ ನೀಡಲ್ಪಟ್ಟಿತೆಂಬ ಈ ಕಥೆ ಕಾಯಕದ ಮಹತ್ವವನ್ನು ಬಹು ಸ್ಪಷ್ಟವಾಗಿ ನಿರೂಪಿಸುತ್ತದೆ.

ಮತೀಯ ಐಕ್ಯತೆಯ ಸಾಧನೆಯಿಂದ ಹಿಡಿದು, ಸಾಮಾಜಿಕ ಸೇವೆಯವರೆಗೆ ತಿಪ್ಪೇಸ್ವಾಮಿ ಮಾಡಿದ ಸಾಹಸಗಳು ಇಂದಿಗೂ ಜನರ ಮನಸ್ಸಿನಲ್ಲಿ ಗಾಢವಾಗಿ ಉಳಿದು ಅದು ಆತನ ವಾರ್ಷಿಕ ಆಚರಣೆಯಾದ ಜಾತ್ರೆಯಲ್ಲಿ ಬಹು ಸ್ಪಷ್ಟವಾಗಿ ಗೋಚರವಾಗುತ್ತದೆ. ಪ್ರತಿಯೊಂದು ಜಾತಿಸಮೂಹವೂ ಜಾತ್ರೆಯಲ್ಲಿ ನೆರೆದು ತಂತಮ್ಮ ಕಾಯಕ ಸೇವೆಯನ್ನು ನೆರವೇರಿಸಲೇಬೇಕೆಂಬ ನಿಯಮವಿದ್ದು ಸ್ವತಃ ತಿಪ್ಪೇಸ್ವಾಮಿಯೇ ಆತನ ಜೀವಿತಾವಧಿಯಲ್ಲಿ ಹೀಗೆಯೇ ನಿರ್ದೇಶಿಸಿರುವನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಚಿತ್ರದುರ್ಗ ಪಾಳೆಯಗಾರರನ್ನು ಕುರಿತು ಗ್ರಾಮೀಣ ಜನಕ್ಕೆ ಅಭಿಮಾನವಿದೆಯಾದರೂ, ತಿಪ್ಪೇಸ್ವಾಮಿಯ ಬಗೆಗೆ ಆ ಪ್ರದೇಶದ ಜನಕ್ಕೆಲ್ಲಾ ಅಪಾರ ಭಕ್ತಿ, ಗೌರವಗಳಿವೆ. ಇದರಿಂದ ತಮ್ಮ ಗಂಡು ಹೆಣ್ಣು ಮಕ್ಕಳ ಸಂತಾನಕ್ಕೆಲ್ಲ ಆ ಸಂತನ ನಾಮಾಂಕಿತವನ್ನೇ ನಿರ್ವಚಿಸಿಕೊಳ್ಳುತ್ತಾರೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ಮಹದೇಶ್ವರ, ಮಂಟೇಸ್ವಾಮಿಯ ಹೆಸರಿನಲ್ಲಿ ಜನಪದ ಮಹಾಕಾವ್ಯಗಳು ಸೃಷ್ಟಿಯಾದಂತೆ ತಿಪ್ಪೇಸ್ವಾಮಿಯ ಮೇಲೆ ಯಾವ ದೀರ್ಘ ಕಥಾನಕವೂ ಪ್ರಚಲಿತದಲ್ಲಿಲ್ಲ. ಪ್ರಚಾರದಲ್ಲಿರುವುದು ದೊಡ್ಡ ಧಾರ್ಮಿಕ ಸಂಪ್ರದಾಯಗಳ ಪರಂಪರೆ ಮತ್ತು ಜನಸಮೂಹದ ಭಕ್ತಿ. ಆದರೆ ನೂರಕ್ಕೂ ಮಿಕ್ಕ ಸ್ತೋತ್ರ ರೂಪದ ತ್ರಿಪದಿಗಳು ಆತನನ್ನು ಭಕ್ತಿ ಪೂರ್ವಕವಾಗಿ ಕೊಂಡಾಡುವಂತಿದ್ದು ಅವು ಸಿರಿಯಜ್ಜಿಯ ನೆನಪಿನಲ್ಲಿ ಮಾತ್ರವಲ್ಲದೆ ಚಿತ್ರದುರ್ಗದ ಎಲ್ಲ ಗ್ರಾಮ, ಬುಡಕಟ್ಟು ಸಮೂಹದಲ್ಲಿ ಪ್ರಚಾರದಲ್ಲಿದೆ.

ಸಿರಿಯಜ್ಜಿ ಹಾಡಿದ ಜನಪದ ಗೀತೆಗಳಲ್ಲಿ ಹನುಮಂತರಾಯನ ಹಾಡು ಕೂಡ ವಿಶಿಷ್ಟವಾದುದು. ಹನುಮಂತನ ಆರಾಧನೆ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹು ವ್ಯಾಪಕ ಹಿನ್ನೆಲೆಯಿರುವಂಥದ್ದೇ. ಎಲ್ಲ ಗ್ರಾಮಗಳಿಗೂ ಮಾರಿ ಮತ್ತು ಹನುಮಂತರಾಯ ಅನಿವಾರ್ಯ. ಎರಡೂ ಶಕ್ತಿ ದೇವತೆಗಳೇ. ಮೇಲುವರ್ಗದವರು ಮಾರಿದೇವತೆಯ ಸಂಬಂಧದಲ್ಲಿ ಹಿಂಜರಿಕೆಯನ್ನು ತೋರಿಸಬಹುದಾದರೂ, ಹನುಮಂತನ ವಿಚಾರದಲ್ಲಿ ಮಾತ್ರ ಎಲ್ಲ ಜಾತಿಯವರೂ ಭಕ್ತಿ ತೋರಿಸುವುದಿದೆ ಆ ದೃಷ್ಟಿಯಿಂದ ಆಂಜನೆಯನನ್ನು ‘ಬಣ್ಣಾಂತರ’ದ ದೇವರು ಎಂದು ಕರೆಯುತ್ತಾರೆ. ಬಣ್ಣಾಂತರ ಎಂದರೆ ‘ವರ್ಣಾಂತರ’, ಜಾತ್ಯತೀತ ಎಂದರ್ಥ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಎಲ್ಲ ಗ್ರಾಮಗಳಲ್ಲಿ ರಾಮನಿಗಿಲ್ಲದ ಆದ್ಯತೆ ಹನುಮಂತನಿಗೆ ದಕ್ಕಿರುವಂಥದ್ದು. ಇದಕ್ಕೆ ಎರಡು ಕಾರಣಗಳಿರಬಹುದು. ಹನುಮಂತನ ಹುಟ್ಟಿನ ನೆಲೆ ಕರ್ನಾಟಕ ಕಿಷ್ಕಿಂದೆಯೆನಿಸಿಕೊಳ್ಳುವ ಹಂಪಿ. ಇದಕ್ಕಿಂತಲೂ ಮುಖ್ಯವೆನಿಸುವುದು ರಾಮಾಯಣದಾದ್ಯಂತ ಆತನ ಮನಮುಟ್ಟುವ ವ್ಯಕ್ತಿತ್ವ ವರ್ಣನೆ. ಆಂಜನೇಯ ಕಪಿ ಸಂತತಿಗೆ ಸೇರಿದವನಾದರೂ ಆತನ ಹುಟ್ಟು ವಾಯುವಿನಿಂದಲೇ ಆಗಿರುವಂಥದ್ದು. ರಾಮನ ಹುಟ್ಟು, ಬೆಳವಣಿಗೆ ಅರಮನೆಯಲ್ಲಾದರೆ, ಹನುಮಂತನ ಹುಟ್ಟು, ಬೆಳವಣಿಗೆ ಪ್ರಕೃತಿಯ ಹಿನ್ನೆಲೆಯಲ್ಲಾಗಿರುತ್ತದೆ. ವಾಲ್ಮೀಕಿ ರಾಮನನ್ನು ದೈವಾಂಶ ಸಂಭೂತ, ಪರಿಪೂರ್ಣ ಎಂದೆಲ್ಲ ಚಿತ್ರಿಸಿದ್ದರೆ, ಹನುಮಂತನ ಪಾತ್ರ ಚಿತ್ರಣ ಇರುವುದು ಸಂಪೂರ್ಣ ಮಾನವ ಧರ್ಮದ ಹಿನ್ನೆಲೆಯಲ್ಲೇ!

ವಾಲ್ಮೀಕಿ ರಾಮಾಯಣದ ಯುದ್ಧಕಾಂಡ ಉತ್ತರಾರ್ಧ ಭಾಗದಲ್ಲಿ ಕಥಾನಕ ಕೊನೆಯಾಗುವಾಗ ಒಂದು ಮನಮುಟ್ಟುವ ಪ್ರಸಂಗವಿದೆ. ರಾಮ ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ಎಲ್ಲರಿಗೂ ಬಹುಮಾನಗಳನ್ನು ನೀಡುತ್ತ ಸೀತೆಗೂ ಒಂದು ಮುತ್ತಿನ ಸರ, ಎರಡು ಚಂದದ ಸೀರೆಗಳನ್ನು ನೀಡಿದನಂತೆ. ರಾಮ ತನ್ನ ಕೊರಳಿಗೆ ಹಾಕಿದ ಮುತ್ತಿನ ಸರ ತೆಗೆದು ಸೀತೆ ಒಮ್ಮೆ ಪತಿಯ ಮುಖವನ್ನೂ, ಇನ್ನೊಮ್ಮೆ ವಾನರ ಸಮೂಹವನ್ನು ನೋಡಿದಳು. ಇಂಗಿತಜ್ಞನಾದ ಶ್ರೀರಾಮನು ಜಾನಕಿಯ ಆಶಯವನ್ನು ಊಹಿಸಿ,

ಪ್ರದೇಹಿ ಸುಭಗೇ ಹಾರಂ ಯಸ್ಯ ತುಷ್ಟಾಸಿ ಭಾಮಿನಿ |
ತೇಜೋ ಧೃತಿರ್ಯಶೋದಾಕ್ಷ್ಯ ಸಾಮರ್ಥ್ಯಂ ವಿನಿಯೋ ನಯಃ ||
ಪೌರುಷಂ ವಿಕ್ರಮೋ ಬುದ್ಧಿರ್ಯಸ್ಮಿನ್ನೇತಾನಿ ನಿತ್ಯದಾ |
ದದೌ ಸಾ ವಾಯುಪುತ್ರಾಯ ತಂ ಹಾರಮಸಿತೇಕ್ಷಣಾ ||

ತೇಜಸ್ಸು, ಧೈರ್ಯ, ಯಶಸ್ಸು, ದಕ್ಷತೆ, ಸಾಮರ್ಥ್ಯ, ನಯ, ವಿನಯಗಳು, ಬುದ್ಧಿ, ಪೌರುಷ, ಪರಾಕ್ರಮಗಳು ಹನುಮಂತನಲ್ಲಿ ಸದಾ ನೆಲೆಸಿದ್ದು ಆತನಿಗೆ ಈ ಹಾರವನ್ನು ಬಹುಮಾನವಾಗಿ ಕೊಡುವುದಾದರೆ ಕೊಡು ಎನ್ನುತ್ತಾನೆ. ಕಿಷ್ಕಿಂದಾಕಾಂಡದಲ್ಲಿ ಓದುಗರಿಗೆ ಪರಿಚಯವಾಗುವ ಆಂಜನೇಯನ ವ್ಯಕ್ತಿತ್ವ, ರಾಮಾಯಣ ಕೃತಿ ಮುಗಿಯುವವರೆಗೂ ಸಾವಧಾನವಾಗಿ ಬೆಳೆಯುತ್ತಾ, ಬೆಳಗುತ್ತಾ ಪರಿಪೂರ್ಣ ರೂಪದಲ್ಲಿ ಮಾಗುತ್ತಾ ಹೋಗುತ್ತದೆ. ಕಠಿಣ ಬ್ರಹ್ಮಚರ್ಯೆ, ಪರೋಪಕಾರ ಬುದ್ಧಿಯೇ ಅಲ್ಲದೆ ಆದರ್ಶದ ತುತ್ತತುದಿಯಂತೆ ಹನುಮಂತ ವಾಲ್ಮೀಕಿಯಿಂದ ಚಿತ್ರಿತನಾಗಿರುತ್ತಾನೆ. ರಾಜನಾಗಿ ಘನತೆಯನ್ನು ಸಾಧಿಸುವುದಕ್ಕಿಂತ, ಭೃತ್ಯನಾಗಿಯೂ ಆದರ್ಶ ಮತ್ತು ಪರೋಪಕಾರ ಬುದ್ಧಿಯಿಂದ ದೈವದ ಎತ್ತರವನ್ನೂ ದಾಟಿಬಿಡಬಹುದೆಂಬ ಆಶಯದ ಹಿನ್ನೆಲೆಯಲ್ಲಿ ಹನುಮಂತನ ಪಾತ್ರ ಅದ್ಭುತ ಸೃಷ್ಟಿಯಾಗಿದೆ. ಇಂಥ ಘನವ್ಯಕ್ತಿತ್ವದ ಹಿನ್ನೆಲೆಯಲ್ಲಿ ಹನುಮಂತರಾಯ ಇಡೀ ಗ್ರಾಮವನ್ನೇ ಕಾಯುವ ವ್ಯಕ್ತಿ. ಆತನನ್ನು ಯಾವ ಬಾಧೆಯೂ ಮುಟ್ಟುವುದಿಲ್ಲ. ಈ ಸಮಸ್ಯಾರಹಿತನನ್ನು ಶನಿಯೂ ಕಾಡುವುದಿಲ್ಲ. ಇದರಿಂದ ಜನಪದ ವರ್ಗ ತಮಗೆ ಶನಿಕಾಟ ಪ್ರಾರಂಭವಾಗಿದೆಯೆಂದು ಭಾವಿಸಿದ ಕೂಡಲೇ ಆಂಜನೇಯನಿಗೆ ಹರಕೆ ಹೊರುತ್ತಾರೆ. ಅವರ ತಿಳಿವಳಿಕೆಯಲ್ಲಿ ಶನಿಪ್ರಭಾವವನ್ನು ತಗ್ಗಿಸಲು ಸಮರ್ಥನಿರುವ ಒಬ್ಬನೇ ದೈವ ಆಂಜನೇಯ! ರಾಮನನ್ನೇ ಶನಿ ಇನ್ನಿಲ್ಲದಂತೆ ಕಾಡಿದ್ದಾನೆ. ಆದರೆ ಆಂಜನೇಯನನ್ನು ಮಾತ್ರ ಯಾರಿಂದಲೂ ಮುಟ್ಟುವುದು ಸಾಧ್ಯವಿಲ್ಲವೆಂಬುದು ಜನಪದರ ಸ್ಪಷ್ಟ ತಿಳಿವಳಿಕೆ.

ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಿದ ಹನುಮಂತನ ಪಾತ್ರದ ಘನತೆಯನ್ನು ಅರ್ಥ ಮಾಡಿಕೊಂಡೇ ಜನಪದರು ಹನುಮಂತನ ಆರಾಧನೆಗೆ ತೊಡಗಿರುವರೇ ಎಂಬ ಸಂದೇಹವೂ ಇಲ್ಲಿ ಉದ್ಭವಿಸಬಹುದು. ಆದರೆ ಕರ್ನಾಟಕದಾದ್ಯಂತ ಜನಪದರು ಕನ್ನಡದ ಮಹಾಕವಿ ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿಯ ವಿರಾಟಪರ್ವ ಭಾಗವನ್ನೇ ಯಾಕೆ ಓದುತ್ತಾರೆಂಬುದನ್ನು ಗಮನಿಸಬೇಕು. ಆ ಭಾಗದಲ್ಲಿ ಪಾಂಡವರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ತಂತಮ್ಮ ಆಯುಧಗಳನ್ನೂ ಗಂಟುಕಟ್ಟಿ ಬನ್ನಿಮರದ ಮೇಲಿಟ್ಟು ನಿರಾಯುಧರಾಗಿ, ಸೇವಕರಾಗಿ ವಿರಾಟನ ಅರಮನೆಯಲ್ಲಿ ಕಾಲ ಕಳೆಯುತ್ತಾರೆ. ದ್ರೌಪದಿಯ ಮಾನಾಪಹರಣದ ಭಾಗ, ಯುದ್ಧ ವಿವರಣೆಯ ಕುರುಕ್ಷೇತ್ರ ಭಾಗಗಳನ್ನೂ ಬಿಟ್ಟು ವಿರಾಟಪರ್ವವನ್ನೇ ತಮ್ಮ ನಿತ್ಯಓದಿಗೆ ಯಾಕೆ ಆಯ್ಕೆ ಮಾಡಿ ಕೊಂಡಿರುವರೆಂಬುದನ್ನು ಗಮನಿಸಿದರೆ ಗ್ರಾಮೀಣದ ಒಲವು ಯಾವ ಕಡೆಗಿದೆಯೆಂದು ತಿಳಿಯಬಹುದಾಗಿದೆ. ಹೀಗಾಗಿ ಅರಮನೆಯ ರಾಮನಿಗಿಂತಲೂ ಅರಣ್ಯದ ಆಂಜನೇಯನೇ ಜನಪದರಿಗೆ ಪ್ರಿಯನಾಗಿರುತ್ತಾನೆ. ಈ ಕಾರಣದಿಂದ ಸಿರಿಯಜ್ಜಿಯ ನೆನಪಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ಎಲ್ಲ ಜನಪದರ ಬಾಯಲ್ಲಿ, ಅವರು ವಾಸಿಸುವ ನೆಲೆಗಳಲ್ಲಿ ಹನುಮಂತರಾಯ ಸ್ತೋತ್ರರೂಪದ ನೂರರು ತ್ರಿಪದಿಗಳಲ್ಲಿ ಪ್ರಚಾರದಲ್ಲಿರುತ್ತಾನೆ.