ಇತರ ಗೀತೆಗಳು

ಸಿರಿಯಜ್ಜಿಯ ನೆನಪಿನಲ್ಲಿರುವ ಜನಪದ ಕಥನಗೀತೆಗಳಲ್ಲಿ ಗಿರಿಜಾಕಲ್ಯಾಣ, ಅರ್ಜುಣ ದ್ರೌಪದಿ, ಎತ್ತಪ್ಪ, ಕರಡಿ ಬುಳ್ಳಪ್ಪ ಈ ಹಾಡುಗಳೂ ಇವೆ. ಇವು ಒಂದೊಂದೂ ನೂರಕ್ಕೂ ಮಿಕ್ಕು ತ್ರಿಪದಿ, ದ್ವಿಪದಿಗಳಲ್ಲಿವೆ. ಸಾಮಾನ್ಯವಾಗಿ ಎಲ್ಲ ಜನಪದ ಹಾಡುಗಳಲ್ಲಿ ಶಿವ ಅಥವಾ ಗಣನಾಯಕನ ಪ್ರಾರ್ಥನೆಯೇ ಹೆಚ್ಚು. ಇವರಿಬ್ಬರೂ ವ್ಯವಸಾಯ ಹಿನ್ನೆಲೆಯ ದೇವತೆಗಳು. ಆ ಕಾರಣಕ್ಕೇ ಇವರ ವಾಸದ ನೆಲೆ ರಾಮ, ಕೃಷ್ಣರಂತೆ ಅರಮನೆಯಲ್ಲ. ಶಿವನ ಕೊರಳನ್ನು ಹಾವು ಸುತ್ತಿಕೊಂಡಿದ್ದರೆ, ವಿನಾಯಕರ ಹೊಟ್ಟೆಯನ್ನೇ ಅದು ಸುತ್ತಿಕೊಂಡಿರುತ್ತದೆ. ಶಿವನ ಕೈಯ್ಯ ಆಯುಧ ಅತ್ಯಂತ ಪ್ರಾಚೀನ ಕಾಲದ ಬೇಟೆಯ ಆಯುಧ ತ್ರಿಶೂಲವಾದರೆ ವಿನಾಯಕನ ಕೈಯ್ಯಲ್ಲಿ ಇನ್ನೂ ಪ್ರಾಚೀನ ಕಾಲದ ಕೊಡಲಿಯಿರುತ್ತದೆ. ಶಿವನ ವಾಹನ ಎತ್ತಾದರೆ ವಿನಾಯಕನ ವಾಹನ ಇಲಿ. ಹೀಗೆ ಮನುಷ್ಯ ಬೇಟೆಯ ಜಗತ್ತಿನಿಂದ ವ್ಯವಸಾಯ ಕಸುಬಿಗೆ ಹೊರಳುವಾಗ ಈ ಎರಡೂ ದೇವತೆಗಳು ಸೃಷ್ಟಿಗೊಂಡಂತೆ ತೋರುತ್ತದೆ. ಸ್ಪಷ್ಟ ರೂಪವಿಲ್ಲದ ವಿನಾಯಕನ ಎಲ್ಲ ಆಚರಣೆಗಳ ಹಿನ್ನೆಲೆ ನೋಡಿದರೆ ಬಹುಶಃ ಶಿವನಿಗಿಂತಲೂ ಪ್ರಾಚೀನಕಾಲದ ವ್ಯವಸಾಯ ದೇವತೆಯ ಸ್ವರೂಪವಾಗಿ ಕಂಡುಬರುತ್ತಾನೆ. ಅದರಿಂದಲೇ ಜನಪದರು ಈಗಲೂ ತಂತಮ್ಮ ಹೊಲಗಳಿಂದಲೇ ಮಣ್ಣು ತಂದು ಬೆನವನನ್ನು ಮಾಡಿ ಗರಿಕೆ ಪತ್ರೆ, ಸೀತಾಫಲ, ಬೆಲದ ಕಾಯಿಗಳಿಂದ ಪೂಜಿಸಿ ಮತ್ತೆ ನೀರಿಗೆ ಕೊಂಡೊಯ್ದು ಬಿಡುತ್ತಾರೆ. ಈ ದೇವತೆಗೆ ವಿವಾಹವೂ, ಜಾತಿಯೂ, ಯಾವ ಸ್ಪಷ್ಟ ರೂಪವು ಇಲ್ಲದೇ ಬೀಜ ಸ್ವರೂಪದಲ್ಲಿರುವುದನ್ನು ಗಮನಿಸಿದರೆ ಜಾತಿ, ವರ್ಣ, ವರ್ಗ ಸೃಷ್ಟಿಯ ಮೊದಲೇ ಬೇಸಾಯ ಸಂಸ್ಕೃತಿಯ ಬೆನ್ನಲ್ಲೇ ಹುಟ್ಟಿದ ದೇವತೆಯೆಂದು ಸ್ಪಷ್ಟವಾಗುತ್ತದೆ. ಸಿರಿಯಜ್ಜಿ ಹಾಡುವ ಎಲ್ಲ ಗೀತೆಗಳ ಮೊದಲಿಗೆ ಶಿವ ಮತ್ತು ಬೆನವನ ಪ್ರಾರ್ಥನೆ ಮೇಲಿಂದ ಮೇಲೆ ಕೇಳಿ ಬರುತ್ತ, ಗಿರಿಜಾ ಕಲ್ಯಾಣವೆಂಬ ಕಥನಗೀತೆ ಶಿವನು ಮದುವೆಯಾದ ವಿವರಗಳನ್ನು ಕೊಡುವ ಒಂದು ಗೀತೆಯಾಗಿ ತಿಳಿದುಬರುತ್ತದೆ. ಈ ಗಿರಿಜಾಕಲ್ಯಾಣದ ಕಥೆಯೂ ಕೂಡ ಕರ್ನಾಟಕದಾದ್ಯಂತ ಪ್ರಚಾರದಲ್ಲಿದೆ. ಒಟ್ಟು ಈ ಗಿರಿಜಾಕಲ್ಯಾಣದ ಕಥೆ ಸಿರಿಯಜ್ಜಿಯೇ ಹಾಡುವ ಸೋಬಾನೆ ಪದಗಳಿಗೆ, ಶಿವನ ಮತ್ತು ಗೌರಿಯ ಹೆಸರು ಸೇರಿಸಿ ಹಾಡಿದಂತೆಯೂ ಇದೆ. ಸ್ವಲ್ಪಮಟ್ಟಿಗೆ ಕಥನ ಭಾಗವೂ ಇದೆ. ಸಂಸ್ಕತ ಮತ್ತು ಕನ್ನಡದ ಸಾಂಪ್ರದಾಯಿಕ ಕಥೆಗಳಲ್ಲಿ ಮೊದಲು ಗಿರಿಜೆ ಶಿವನನ್ನು ಮದುವೆಯಾಗಲು ಬಯಸಿ ಆತನ ತಪೋಭಂಗಕ್ಕಾಗಿ ರತಿಮನ್ಮಥರೊಡನೆ ಹೋಗಿ ಸೋಲುತ್ತಾಳೆ. ಮನ್ಮಥ ಶಿವನಿಂದ ಸುಡಲ್ಪಟ್ಟು, ರತಿ ಗಂಡನನ್ನು ಕಳೆದುಕೊಂಡು, ಗಿರಿಜೆ ತಿರಸ್ಕರಿಸಲ್ಪಡುತ್ತಾಳೆ. ಅನಂತರ ಗಿರಿಜೆ ಸದ್ಯದ ಸ್ವರೂಪದಿಂದ ಶಿವ ಮೆಚ್ಚಲಾರನೆಂದು ತಿಳಿದು ಅರಣ್ಯದ ಪಾಲಾಗಿ ಆತ್ಮದ ಬೆಳವಣಿಗೆಯಲ್ಲಿ ತೊಡಗುತ್ತಾಳೆ. ಶಿವ ಅವನ ತಪಸ್ಸನ್ನು ಮೆಚ್ಚಿ ಮಾರು ವೇಷದಲ್ಲಿ ಬಂದು ತನ್ನನ್ನೇ ಕುರಿತಾದ ಅವಳ ನಿಷ್ಠೆಯನ್ನು ಪರೀಕ್ಷಿಸುತ್ತಾನೆ. ಜನಪದದ ಗಿರಿಜಾಕಲ್ಯಾಣ ಇದಕ್ಕೆ ಸಂಪೂರ್ಣ ವಿರುದ್ಧವಾದುದು.

ಗ್ರಾಮೀಣ ಬದುಕಿನಲ್ಲಿ ಹೆಣ್ಣನ್ನೂ ಹುಡುಕುವುದು ಎಂದರೆ ದೊಡ್ಡ ಜವಾಬ್ದಾರಿಯ ಕೆಲಸ. ಏಳು ಜತೆ ಕೆರವಾದರೂ ಸವೆಯಬೇಕು. ಏಳು ಕೆರೆಯ ನೀರು ಕುಡಿಯಬೇಕು. ವಂಶ ಬೆಳೆಸುವ ಸಂತಾನ ದೇವತೆಯೊಬ್ಬಳು ದೊರಕಬೇಕಾದರೆ ಸುಲಭದ ಸಂಗತಿಯಲ್ಲ ಎಂಬುದನ್ನು ತಿಳಿದಿದ್ದ ಜನಪದರು ತಮಗೆ ಅನುಕೂಲವೆನಿಸುವ ಕುಲೀನ ಮನೆತನದ ಹೆಣ್ಣು ಸಿಗುವುದಾದರೆ ‘ತೆರ’ ಕಟ್ಟಿಯೇ ಆಕೆಯನ್ನು ತರಲು ಸಿದ್ಧರಿದ್ದರು. ಇದರಿಂದ ಗಿರಿಜಾಕಲ್ಯಾಣದ ಕಥೆಯಲ್ಲಿಯೂ ಸಹ ಶಿವನನ್ನು ಹುಡುಕಿಕೊಂಡು ಗಿರಿಜೆ ಬರುವುದೇ ಇಲ್ಲ. ತದನಂತರ ಜನಪದರ ಪ್ರಕಾರ ಶಿವ ಯಾವಾಗಲೂ ಸ್ಥಾನೀಕ ದೇವತೆಯಲ್ಲ. ಸದಾ ಸಂಚಾರಿ. ಮೂರನೆಯ ಕಣ್ಣಿಂದ ಪ್ರಪಂಚ ಸುಡುವುದರ ಬದಲು, ಎರಂಭತ್ತೆಂಟು ಕೋಟಿ ಜೀವರಾಶಿಗಳಿಗೆ ಆಹಾರ ಒದಗಿಸುವ ದೇವತೆಯಾಗಿ ಕಾಣಿಸುತ್ತಾನೆ. ಇಲ್ಲವೇ ತಾನೆ ಭಿಕ್ಷುಕನಾಗಿ ಅಲೆಯುತ್ತಾನೆ. ಶಿವನನ್ನು ಇಂಥ ಸಾಮಾನ್ಯ ಜಂಗಮನನ್ನಾಗಿ ಮೊದಲು ಹಳಗನ್ನಡ ಕಾವ್ಯಗಳಲ್ಲಿ ವ್ಯಾಪಕವಾಗಿ ಚಿತ್ರಿಸಿದವನು ಹರಿಹರ. ಈತನಿಗೆ ಶಿವನನ್ನು ಜಂಗಮ ಸ್ವರೂಪಿಯಾಗಿ, ಬೇಡುವವನನ್ನಾಗಿ, ಬಡವನನ್ನಾಗಿ ಚಿತ್ರಿಸುವುದೆ ಒಂದು ಮೋಹ. ಹರಿಹರ ಅಂತರಂಗದಾಳದಲ್ಲಿ ಅರಮನೆಯ ವಿರೋಧಿ. ಜನಪದ ಗಿರಿಜಾಕಲ್ಯಾಣ ಕಥೆಯಲ್ಲಿಯೂ ಕೂಡ ಶಿವ ಭಿಕ್ಷುಕನ ವೇಷದಲ್ಲಿ ಬಂದು ಗಿರಿಜೆಯನ್ನು ಕಂಡು ಮೋಹಿಸುತ್ತಾನೆ. ಆದರೆ ಜನಪದರ ಜಗತ್ತಿನ ತಂದೆ ತಾಯಿಗಳ ಪ್ರಕಾರ ಗಿರಿಜೆಯನ್ನು ಪಡೆಯುವುದು ಸುಲಭವಲ್ಲ. ಗಿರಿಜಾಳ ಮನೆಯವರಿಗೆ ಭಿಕ್ಷಕ್ಕೆ ಬಂದವನಿಗೆ ಹೆಣ್ಣು ಕೊಡಲು ಸಮ್ಮತಿಯಿಲ್ಲ :

ತಿಪ್ಪೇಯ ಬೂದೀಯ ವಪ್ಪಕ ಧರಿಸವರೆ
ಸರ್ವ ಸುತ್ತವರೆ ಕೊರಳೀಗೆ | ಕೈಲಾಸದ
ತಿರುಕರಿಗೆ ನಮ್ಮಗಳ ಕೊಡವೊಲ್ಲ ||

ಕೊಟ್ಟನಂದಳವರಮ್ಮ ಕೊಡೆನಂದನವರಪ್ಪ
ಈಡುಪಾಡಂದ ಯಮನಕಾನ | ಮ್ಯಾಲೆ
ವುರಿಗಣ್ಣು ಬಿಟ್ಟಾರೆ ಶಿವ ತಾನು ||

ಸೋದರ ಮಾವಗಳು ಅಪ್ಪ ಅಮ್ಮ ಎಲ್ಲ ಸೇರಿ ಉಪ್ಪರಿಗೆಯಲ್ಲಿ ಕುಳಿತು ಒಳ ಮಾತು, ಹೊರಮಾತು ಎಲ್ಲ ಆಗಿ ಕೊನೆಗೆ ಶಿವನಿಗೆ ಗಿರಿಜೆಯನ್ನು ಲಗ್ನ ಮಾಡುವುದೇ ಸೂಕ್ತ ಎಂದಾಗುತ್ತದೆ. ಮುಂದುವರೆಯುವ ಕಥನಗೀತೆಯಲ್ಲಿ ಸೋಬಾನೆ ಪದಗಳೆಲ್ಲ ಸೇರಿಕೊಂಡಿವೆ. ಕಾಳಿದಾಸನ ಕುಮಾರ ಸಂಭವ, ಷಡಕ್ಷರಿಯ ಗಿರಿಜಾಕಲ್ಯಾಣ ಮಾದರಿಯ ಆರ್ಯ ಪರಂಪರೆಯ ಲಗ್ನವಲ್ಲ. ಆದರೂ ಜನಪದರ ಗಿರಿಜಾಕಲ್ಯಾಣದಲ್ಲಿ ಪುರೋಹಿತರು ಭಾಗವಹಿಸುತ್ತಾರೆ :

ಅಣ್ಣ ಆರೋರಣ್ಣಗೆ ಕೆನ್ನೆ ಮ್ಯಾಗಳ ಜುಟ್ಟು
ಇಪ್ಪತ್ತೊಂದೆಳೆ ಜನಿವಾರ | ಆರೋರಣ್ಣ
ವಪ್ಪವಾಗಿ ಆಕೋ ಬ್ರಹ್ಮಗಂಟು ||

ಅಣ್ಣ ಆರೋರಣ್ಣಗೆ ಕೆನ್ನೆ ಮ್ಯಾಗಳ ಜುಟ್ಟು
ಅನ್ನೊಂದೆಳೆಯ ಜನಿವಾರ | ಅರೋರಣ್ಣ
ಚಂದವಾಗಿ ಆಕೋ ಬ್ರಹ್ಮಗಂಟು ||

ಸಿರಿಯಜ್ಜಿ ಹಾಡಿರುವ ಅರ್ಜುಣ-ದ್ರೌಪದಿ ಕಥನಗೀತೆ ಮಹಾಭಾರತದ ಯಾವುದೇ ಘಟನೆಯನ್ನೂ ನೆನಪಿಗೆ ತರುವಂಥದ್ದಲ್ಲ. ವ್ಯಾಸ ಮಹಾಭಾರತದ ಅನೇಕ ಆಶಯಗಳು ಬುಡಕಟ್ಟು ಹಿನ್ನೆಲೆಯವಾದರೂ, ಜನಪದ ಜಗತ್ತಿನ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಬಂದಿರುವ ರಾಮಾಯಣ ಮಹಾಭಾರತ ಕಥೆಗಳ ಸ್ವರೂಪ ಬೇರೆ ಬೇರೆ. ಗ್ರಾಮ ಜಗತ್ತಿನ ರಾಮಾಯಣ, ಮಹಾಭಾರತದ್ದು ಎನಿಸಿಕೊಳ್ಳುವ ಕಥನಗಳು ತೀರ ಈಚೆಗೆ ಸೃಷ್ಟಿಯಾದಂತೆ ತೋರುತ್ತದೆ. ಸಿರಿಯಜ್ಜಿ ಹಾಡಿರುವ ಅರ್ಜುಣ ದ್ರೌಪದಿಯೂ ಕೂಡ ಬೇರೆ ಬೇರೆ ಜನಪದ ಭಾರತ ಕಥೆಗಳಂತೆ ಕುತೂಹಲಕರವಾಗಿದೆ. ಜನಪದ ಭಾರತ ಕಥೆಗಳು ಇಡಿಯಾಗಿರುವುದಕ್ಕಿಂತ ಬಿಡಿ ಬಿಡಿಯಾಗಿರುವುದೇ ಹೆಚ್ಚು. ಅಲ್ಲದೆ ಹಳ್ಳಿಗಳಲ್ಲಿ ನಡೆದ ಘಟನೆಗಳೆಲ್ಲ ಮಹಾಭಾರತದ ಪಾತ್ರ ಹೆಸರುಗಳನ್ನು ತಳುಕು ಹಾಕಿಕೊಂಡು ಕಥನಗೀತೆಗಳಾಗಿ ಬೆಳೆದುಬಿಟ್ಟಿವೆ. ಸಿರಿಯಜ್ಜಿ ಹಾಡಿರುವ ಈ ಅರ್ಜುಣ ದ್ರೌಪದಿ ಕಥೆ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯವಾದುದು. ಈ ಕಥನದಂತೆ ಮಹಾಭಾರತದ ದುರಂತದ ಬೀಜ ದ್ರೌಪದಿಯೇ. ಆಕೆ ಹುಟ್ಟಿದ ಘಳಿಗೆಯೇ ಹಾಗಿತ್ತು. ಅಲ್ಲದೆ ಆಕೆ ಹಾರುವರ ಮಗಳು. ಮದುವೆಯಾಗುವುದಕ್ಕೆ ಮೊದಲೇ ಋತುಮತಿಯಾದಳೆಂದು, ಹೆತ್ತವರು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಅಟ್ಟಿದರು. ಅಲ್ಲಿಗೆ ಅರ್ಜುನ ಬೇಟೆಯಾಡಲು ಬಂದು ಅವಳನ್ನು ಹಟ್ಟಿಗೆ ಕರೆದುಕೊಂಡು ಬಂದ. ಕುಂತಿ ತಂದ ಹೆಣ್ಣನ್ನು ಎಲ್ಲರೂ ಹಂಚಿಕೊಳ್ಳಿ ಎಂದಳು. ಆದರೆ ದ್ರೌಪದಿಯ ಹುಟ್ಟಿನ ಸೂತಕ ಮುಂದೆ ಪಾಂಡವರನ್ನು ಕಾಡಿತು. ಅವರು ಜೂಜಾಡಿ ಕಾಡಿಗೆ ಹೋಗಬೇಕಾಯಿತು. ಇವಿಷ್ಟು ಸಿರಿಯಜ್ಜಿ ಹಾಡಿರುವ ಅರ್ಜುಣ ದ್ರೌಪದಿಯ ಕಥೆ.

ಕಾಡುಗೊಲ್ಲರಿಗೆ ನೇರವಾಗಿ ಸಂಬಂಧಿಸಿದ ಯಾವುದೇ ಕಥನಗಳಲ್ಲಿ ದನಕರುಗಳ ಪ್ರಸ್ತಾಪವಿದ್ದೇ ಇರುತ್ತದೆ. ಎತ್ತಪ್ಪ, ಜುಂಜಪ್ಪ, ಪಾತಪ್ಪ, ಸಿರಿಯಣ್ಣ ಈ ಎಲ್ಲ ವೀರರ ಕಥೆ ದನಕರುಗಳ ಸುತ್ತಲೇ ಇರುತ್ತವೆ. ದನಕರುಗಳನ್ನು ಐಶ್ವರ‍್ವೆಂದು ತಿಳಿದಿದ್ದ ಅರಣ್ಯದ ಅಲೆಮಾರಿ ಸಮೂಹಗಳಲ್ಲಿ ದ್ವೇಷ ಹುಟ್ಟುತ್ತಿದ್ದುದೂ ಅದೇ ಕಾರಣಕ್ಕಾಗಿ. ಬುಡಕಟ್ಟು ನಿವಾಸಿಗಳಿಗೆ ಭೂಮಿ ಮುಖ್ಯವಾಗಿರಲಿಲ್ಲ. ಅವರ ಬದುಕಿನಲ್ಲಿ ವ್ಯವಸಾಯ ಪದ್ಧತಿಯನ್ನೇನೂ ಅಳವಡಿಸಿಕೊಂಡಿರಲಿಲ್ಲ. ಅರಣ್ಯದ ಉತ್ಪಾದನೆ, ಪಶುಪಾಲನೆ ಇವೆರಡೇ ಬುಡಕಟ್ಟುಗಳ ಮುಖ್ಯ ಕಸುಬಾಗಿದ್ದು ದನಕರುಗಳೇ ಅವರ ಎಲ್ಲ ಬಗೆಯ ಸಂಪತ್ತಾಗಿದ್ದವು. ಇದರ ಉಳಿವು ಮತ್ತು ಕಳ್ಳತನದ ಹಿನ್ನೆಲೆಯಲ್ಲಿ ಎರಡು ಬುಡಕಟ್ಟುಗಳ ನಡುವೆ ಹೊಡೆದಾಟವೇರ್ಪಡುತ್ತಿದ್ದುದರ ಯಾವುದೋ ಸುಳಿವನ್ನು ಎತ್ತಪ್ಪ ಕಥೆ ಸೂಚಿಸುವಂತಿದೆ. ಕಥನಗೀತೆಯ ವಿವರಗಳು ಅಸ್ಪಷ್ಟವೆನಿಸುವಂತಿವೆ. ಹಾಡುಗಾರರ ಮರೆವಿನಿಂದ ಪದ್ಯಗಳು ಬಿಟ್ಟು ಹೋಗುವುದರಿಂದ ಕಥಾನಕಗಳ ಎಳೆ ತಪ್ಪಿ ಹೋಗಬಹುದು. ಕರಡಿ ಬುಳ್ಳಪ್ಪ ಗೀತೆಯೂ ಕೂಡ ಇಂಥದ್ದೇ ಗೊಲ್ಲರ ಅನೇಕ ಬೆಡಗುಗಳಲ್ಲಿ ಕರಡಿಗೊಲ್ಲರದು ಒಂದು ಬೆಡಗು. ಆ ಬೆಡಗಿಗೆ ಸೇರಿದ ಬುಳ್ಳಪ್ಪನೂ ಗೊಲ್ಲರ ಆರಾಧ್ಯ ಪುರುಷ. ಉತ್ತರದ ಕಡೆಯಿಂದ ಚಿತ್ರದುರ್ಗ ಪ್ರದೇಶಕ್ಕೆ ಬಂದನೆಂಬ ಕುರುಹೂ ಈ ಗೀತೆಯಲ್ಲಿ ಬರುತ್ತದೆ. ಉತ್ತರದ ದಿಳ್ಳಿಯಿಂದ ತುರುಕ ದೊರೆಗಳಿಗೆ ಹೆದರಿಕೊಂಡು ಬರುವಾಗ್ಗೆ ಚಿತ್ರದುರ್ಗ ಪ್ರದೇಶದ ವೇದಾವತಿ ನದಿ ಪ್ರವಾಹದಲ್ಲಿತ್ತು. ಅದನ್ನು ದಾಟಲಾರದೇ ಬುಳ್ಳಪ್ಪ ತಾನು ಹರಕೆ ಹೊತ್ತ. ನದಿ ದಾರಿ ಬಿಟ್ಟು ಕೊಟ್ಟಿತು. ಎಲ್ಲರೂ ನೀರು ದಾಟಿಯಾದ ಮೇಲೆ ಬುಳ್ಳಪ್ಪ ತಾನು ಹರಕೆ ಹೊತ್ತಂತೆ, ಶಿರಸ್ಸು ಕತ್ತರಿಸಿ ತನ್ನ ಕೈಯ್ಯಲ್ಲೇ ಹಿಡಿದು ದೇವರಿಗೆ ಮಂಗಳಾರತಿ ಮಾಡುತ್ತ ಅಸುನೀಗಿದನೆಂದು ಆ ಸುತ್ತಿನ ಜನ ಹೇಳುತ್ತಾರೆ. ಆದರೆ ಈಗಲೂ ಆ ಸ್ಥಳದಲ್ಲಿರುವ ಒಂದು ಸಿಡಿತಲೆ ವೀರನ ಕಲ್ಲನ್ನು ತೋರಿಸಿ, ಆ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಜಲಧಿ ಬಪ್ಪರಾಯನೆಂತಲೂ ಹೇಳುತ್ತಾರೆ. ಜನ ಹೇಳುವ ದಂತಕಥೆ ಈ ಕರಡಿಬುಳ್ಳಪ್ಪ ಗೀತೆಯಲ್ಲಿ ಬರುವುದಿಲ್ಲ. ಅಲ್ಲದೆ ಕರ್ನಾಟಕದಾದ್ಯಂತ ನೂರಾರು ದಂತಕಥೆಗಳು ಈ ಬಗೆಯ ವೀರಗಲ್ಲು, ಮಾಸ್ತಿಕಲ್ಲು, ಸಿಡಿತಲೆ ಕಲ್ಲುಗಳು, ಅಲ್ಲದೆ ಸ್ಥಳನಾಮಗಳ ಮೇಲೂ ಹಬ್ಬಿಕೊಂಡಿವೆ. ಆದರೆ ಅವು ಕಥನಗೀತೆಗಳಲ್ಲಿ ಬರುವುದಿಲ್ಲ. ಹೀಗಾಗಿ ಜನಪದ ಜಗತ್ತಿನ ಕ್ಲಿಷ್ಟ ಸಮಸ್ಯೆಯೆಂದರೆ ಆಚರಣೆ, ಸಂಪ್ರದಾಯ, ದಂತಕಥೆ ಅವುಗಳ ಹಿನ್ನೆಲೆಯಲ್ಲಿರುವ ಕಥನ ಗೀತೆಗಳು, ಇದೆಲ್ಲದರಿಂದ ದೂರದಲ್ಲೆಲ್ಲೋ ಅಡಗಿ ಕುಳಿತಿರುವ ಐತಿಹಾಸಿಕ ಸತ್ಯ ಸಂಗತಿಗಳು; ಇದನ್ನೆಲ್ಲ ಪ್ರತ್ಯೇಕಿಸಿ ನೋಡಬೇಕಾದ ಸಂದರ್ಭ ಇನ್ನೂ ಸನ್ನಿಹಿತ ವಾಗಬೇಕಾಗಿದೆ. ಆ ದೃಷ್ಟಿಯಿಂದ ಸಿರಿಯಜ್ಜಿ ಹಡಿರುವ ಕಥನಗೀತೆಗಳೆಲ್ಲ ಇನ್ನೂ ಹೆಚ್ಚಿನ ಅಧ್ಯಯನವನ್ನು ಬೇಡುತ್ತವೆ.

ಬುಡಕಟ್ಟು ಹಿನ್ನೆಲೆಯಲ್ಲಿ ಕಥನ ಗೀತೆಗಳು

ಭಾರತೀಯ ಸಮಾಜದಲ್ಲಿ ಬಹುಹಿಂದಿನಿಂದಲೂ ಸ್ತ್ರೀ ಸಮುದಾಯವು ನಾನಾ ಆಚರಣೆ, ಸಂಪ್ರದಾಯಗಳ ಹಿನ್ನೆಲೆಯಲ್ಲಿ ಶೋಷಣೆಗಳಿಗೆ ಒಳಗಾಗಿಯೇ ಬಂದಿರುತ್ತದೆ. ಎಂಬುದು ಶಿಷ್ಟ ಕಾವ್ಯಗಳೇ ಅಲ್ಲದೆ ಜನಪದ ಸಾಹಿತ್ಯ ಪರಂಪರೆಯಿಂದಲೂ ತಿಳಿದುಬರುತ್ತದೆ. ಕನ್ನಡದಲ್ಲಿ ಮೊತ್ತಮೊದಲು ಸಂಗ್ರಹಗೊಂಡ ‘ಗರತಿಯ ಹಾಡು’ ಜನಪದ ಗೀತ ಸಂಕಲನವೂ ಕೂಡ ಗ್ರಾಮೀಣ ಹೆಣ್ಣುಮಕ್ಕಳ ಸ್ಥಿತಿಗತಿ, ಸಾಂಸಾರಿಕ ಸಮಸ್ಯೆಗಳನ್ನು ಹೇಳುವಂಥದ್ದು. ಹೀಗೆಂದು ಜನಪದ ಜಗತ್ತಿನ ಹೆಣ್ಣುಮಕ್ಕಳೆಲ್ಲ ಕಷ್ಟ ಸಂಕಷ್ಟಗಳಿಗೆ ಸಿಕ್ಕಿ ನರಳಿದವರೇ ಎಂತಲೂ ತಿಳಿಯಲಾಗದು. ಒಂದು ಹಂತದಲ್ಲಿ ಜನಪದ ಸಾಹಿತ್ಯ ಹೆಣ್ಣುಮಕ್ಕಳ ಬದುಕಿನ ದುರಂತಗಳನ್ನು ಕುರಿತು ಹೇಳುವಂತೆ ಕಂಡು ಬಂದರೂ ಅಲ್ಲಲ್ಲಿ ಜನಪದ ಗರತಿಯರು ವ್ಯವಸ್ಥೆಯನ್ನೂ ಅವರ ಕ್ರೌರ‍್ವನ್ನೂ ಎದುರಿಸಿ ತಂತಮ್ಮ ಬದುಕಿನ ಮಾರ್ಗವನ್ನು ತಾವೇ ಆಯ್ಕೆ ಮಾಡಿಕೊಂಡಿರುತ್ತಾರೆ.

ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಾನಾ ಮಡುಗು ಗ್ರಾಮದಲ್ಲಿರುವ ಒಂದು ಮಾಸ್ತಿಕಲ್ಲಿನ ಮೇಲಿರುವ ದಂತಕತೆಯಂತೆ, ಮಾಸ್ತಿಯು ಅತಿಲಂಪಟನಾಗಿದ್ದ ತನ್ನ ಗಂಡನನ್ನು ಮೊಸರು ಕಡೆಯುವ ಮಂತಿನಿಂದ ಕೊಂದು ನಂತರ ತಪ್ಪಿಸಿಕೊಂಡು ಓಡಿ ಹೋಗಿ ಆತ್ಮ ಹತ್ಯೆ ಮಾಡಿಕೊಂಡು ಮಹಾಸತಿಯಾದಳು ಎಂಬ ಸಂಗತಿ ಪ್ರಚಾರದಲ್ಲಿದೆ. ಹೀಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿರಿ ಎಂಬಾಕೆಯು ಲಂಪಟನಾಗಿದ್ದ ಗಂಡನನ್ನು ಬಿಟ್ಟು ಕೊಡ್ಸರಾಳ್ವನೆಂಬ ಪುರುಷನನ್ನು ಕೂಡುತ್ತಾಳೆ. ಇಂಥವೇ ಕಥೆಗಳು ಜನಪದರಲ್ಲಿ ಅಸಂಖ್ಯಾತವಾಗಿದ್ದು ಜನಪದ ಸ್ತ್ರೀಯರು ವ್ಯವಸ್ಥೆಯನ್ನು ಸಮರ್ಥವಾಗಿ ಎದುರಿಸಿದ್ದು ಕಂಡುಬರುತ್ತದೆ. ಎಲ್ಲಿ ದೈವತ್ವದ ಕುರುಡು ಆರಾಧನೆಯ ಬಗೆಗಳು, ಹುಟ್ಟಿನ ಶ್ರೇಷ್ಠತೆ, ಕನಿಷ್ಠತೆ ಮತ್ತು ಜಾತಿ ವ್ಯವಸ್ಥೆ ಜತೆಗೆ ಆಸ್ತಿಯ ಪರಿಕಲ್ಪನೆಯ ಆಮಿಷಗಳು ಇರುತ್ತವೋ ಅಲ್ಲೆಲ್ಲ ಸಹಜವಾಗಿಯೇ ಶೋಷಣಾ ಪ್ರವೃತ್ತಿಯೂ ಸೃಷ್ಟಿಯಾಗುತ್ತದೆ. ಸಮಾನತೆಯೆಂಬುದು ಕೇವಲ ಘೋಷಣಾ ವಾಕ್ಯವಾಗಿ ನಿರಂತರ ಪ್ರಚಾರದಲ್ಲಿರುತ್ತದೆ. ಇದು ಮುಂದುವರಿದ ಗ್ರಾಮ ನಗರಗಳ ಸ್ಥಿತಿ.

ಗತ ಶತಮಾನಗಳಲ್ಲಿ ಗ್ರಾಮ ಮತ್ತು ನಗರಗಳಲ್ಲಿ ಭೂಮಿಯ, ರಾಜ್ಯದ ಮತ್ತು ಹೆಣ್ಣಿನ ಒಡೆತನಕ್ಕಾಗಿ ಹುಟ್ಟಿಕೊಂಡ ಮೋಹ; ಅದು ಕ್ರಮೇಣ ಎಲ್ಲ ರೀತಿಯ ಶೋಷಣೆಗೂ ಮಾರ್ಗವಾಯಿತು. ಆದರೆ ಬುಡಕಟ್ಟು ಸಮೂಹದ ಬದುಕಿನಲ್ಲಿ ದೈವತ್ವದ ಪರಿಕಲ್ಪನೆ, ಆಸ್ತಿಯ ಆಕಾಂಕ್ಷೆ ಇವೆಲ್ಲ ತುಂಬ ಕಡಿಮೆ ಪ್ರಮಾಣದಲ್ಲಿದ್ದುದರಿಂದ ಅಲ್ಲಿ ಮನುಷ್ಯ ಸಂಬಂಧಗಳ ನಡುವೆ ಶೋಷಣಾ ಪ್ರವೃತ್ತಿ ಇರಲಿಲ್ಲ. ಈಗಾಗಲೇ ಗಮನಿಸಿದಂತೆ ಸಿರಿಯಜ್ಜಿ ಹಾಡುವ ಸೋಬಾನೆ ಪದಗಳಲ್ಲಿ ಗಂಡು ತನಗೆ ತಕ್ಕ ಹೆಣ್ಣಿಗಾಗಿ ಕರ್ನಾಟಕವನ್ನೆಲ್ಲ ತಿರುಗಿದ ಎಂದು ಹೇಳಿಕೊಳ್ಳುವ ತ್ರಿಪದಿಯಿದೆ. ಹೆಣ್ಣಿನವರೇ ಗಂಡಿನವರನ್ನು ಹಂಗಿಸುವ ತ್ರಿಪದಿಗಳೂ ಇವೆ. ಇದೇ ಹಿನ್ನೆಲೆಯಲ್ಲಿ ಸಿರಿಯಜ್ಜಿ ಹಾಡಿರುವ ಇನ್ನೊಂದು ಕಥನಗೀತೆ ಗಿರಿಜಾ ಕಲ್ಯಾಣದಲ್ಲಿ ಶಿವ ಗಿರಿಜೆಯನ್ನು ಹುಡುಕಿಕೊಂಡು ಕೈಲಾಸ ಬಿಟ್ಟು ಭೂಮಿಗೆ ಬರುತ್ತಾನೆ. ಪಾರ್ವತಿ ಮನೆಯ ಮುಂದೆ ಭಿಕ್ಷಕ್ಕೆ ನಿಲ್ಲುತ್ತಾನೆ. ಆಕೆಯ ಸೌಂದರ್ಯ ಕಂಡು ಮೋಹಗೊಳ್ಳುತ್ತಾನೆ. ಹೀಗೆ ಭಿಕ್ಷೆ ಬೇಡಿ ಬಂದ ತಿರುಕನಿಗೆ ತಮ್ಮ ಮಗಳನ್ನು ಕೊಡಬಹುದೇ ಎಂಬ ಚರ್ಚೆ ಪಾರ್ವತಿಯ ಮನೆಯಲ್ಲಿ ನಡೆಯುತ್ತದೆ. ಶಿಷ್ಟ ಪರಂಪರೆಯ ಕಥನಗಳಲ್ಲಿ ಈ ಸೂಚನೆ ಕಂಡು ಬರುವುದಿಲ್ಲ. ಇದಕ್ಕನುಗುಣವಾಗಿ ಚಿತ್ರದುರ್ಗದ ಕಾಡುಗೊಲ್ಲು ಮತ್ತು ಮ್ಯಾಸ ಬೇಡ ಬುಡಕಟ್ಟುಗಳಲ್ಲಿ ಹೆಣ್ಣು ಕೇಳಲು ಬರುವ ಗಂಡಿನವರ ವಿವಾಹ ಪ್ರಸ್ತಾಪದ ಬಗೆಯೇ ಅತ್ಯಂತ ನಾಗರೀಕ ಮಾದರಿಯಲ್ಲಿದೆ.

ಗಂಡಿನ ಕಡೆಯವರು ಮೊದಲು ಹೆಣ್ಣಿರುವ ಹಟ್ಟಿಗೆ ಬಂದು ನಾವು ನಿಮ್ಮ ಮನೆಯಲ್ಲಿ ಹಾಲು ಅನ್ನ ಉಂಡು ಒಳ್ಳೆಯ ಮಾತನಾಡಿ ಹೋಗಬೇಕೆಂದು ಬಂದಿರುತ್ತೇವೆ ಎನ್ನುತ್ತಾರೆ. ಆಗಲೇ ಹೆಣ್ಣು ಹೆತ್ತವರಿಗೆ ಈ ನೆಂಟರು ತಮ್ಮ ಗುಡಿಸಿಲಿಗೆ ಬಂದಿರುವುದರ ಉದ್ದೇಶ ಅರ್ಥವಾಗುತ್ತದೆ. ಸಂಬಂಧವೇರ್ಪಟ್ಟರೆ ಗಂಡಿನವರು ಹೆಣ್ಣಿನ ತಾಯಿಯನ್ನು ಅವ್ವಾ ನಿನ್ನ ಒಡಲನ್ನು ಬರಿದು ಮಾಡಿ ನಮ್ಮ ಮಡಿಲನ್ನು ತುಂಬಿಸಿಕೊಂಡು ಹೋಗಲು ನಿನ್ನ ಒಪ್ಪಿಗೆಯಿದೆಯೇ ಎಂದು ಔಪಚಾರಿಕವಾಗಿ ಕೇಳಬೇಕಾಗುತ್ತದೆ. ಹೀಗಾಗಿ ಬುಡಕಟ್ಟು ಸಮುದಾಯದಲ್ಲಿ ವ್ಯಕ್ತಿ ಪ್ರತಿಷ್ಠೆಗಿಂತ ಸಾಮುದಾಯಿಕ ಜೀವನವೇ ಬಹುಮುಖ್ಯವಾಗಿರುವುದರಿಂದ ಹೆಣ್ಣು ಮಕ್ಕಳು ಹೆಚ್ಚು ಸಂಕಷ್ಟಗಳಿಗೆ ಸಿಲುಕಿದಂತೆ ತಿಳಿದುಬರುವುದಿಲ್ಲ. ಆದರೆ ಯಾವ ಬುಡಕಟ್ಟು ಸಮೂಹದೊಳಕ್ಕೆ ಪುರೋಹಿತಶಾಹಿ ಸಂಪ್ರದಾಯಾಚರಣೆಗಳು, ಆಧಿಕಾರಶಾಹಿಯ ಬಿಸಿ ತಟ್ಟಿದೆಯೋ ಅಲ್ಲೆಲ್ಲ ಸ್ತ್ರೀ ಪುರುಷರೆನ್ನದೆ ಸಮಸ್ಯೆಗಳಿಗೆ ಸಿಲುಕಿರುವುದರ ಸೂಚನೆಗಳು ಕಂಡುಬರುತ್ತವೆ. ಬುಡಕಟ್ಟು ಸಮೂಹದಲ್ಲಿಯೂ ಸಣ್ಣಪುಟ್ಟ ಪ್ರಮಾಣದ ವೀರರೆನಿಸಿಕೊಂಡವರು, ಇನ್ನಿತರರು ಐದು ಆರು ಜನ ಹೆಂಗಸರನ್ನು ವಿವಾಹವಾದ ದಾಖಲೆಗಳಿವೆ. ಆ ಹೆಣ್ಣು ಮಕ್ಕಳೆಲ್ಲ ಹದಿಹರೆಯದಲ್ಲೇ ಸತ್ತ ಸಂಗತಿಯೂ ಇದೆ. ಆದರೆ ಯಾವ್ಯಾವ. ಭಾಗಗಳಲ್ಲಿ ಶುದ್ಧ ಬುಡಕಟ್ಟು ಸಂಪ್ರದಾಯಗಳನ್ನೇ ಅನುಸರಿಸಿಕೊಂಡು ಬರಲಾಗಿದೆಯೋ ಅಲ್ಲೆಲ್ಲ ಸರಳ ಜೀವನ ತತ್ವದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗದೆ ಸಮಾಧಾನ ಸ್ಥಿತಿಯ ಬದುಕನ್ನು ನಿರ್ವಹಿಸಿರುತ್ತಾರೆ. ಇದಕ್ಕೆ ಸಿರಿಯಜ್ಜಿಯ ಜೀವನವೇ ಉದಾಹರಣೆ.

ಎಲ್ಲಕ್ಕಿಂತ ಮುಖ್ಯ ಕಾಡುಗೊಲ್ಲರ ನಂಬಿಕೆಯ ಪ್ರಕಾರ ಸಿರಿಯಜ್ಜಿ ತನ್ನ ಮುವತ್ತನೇ ವಯಸ್ಸಿಗೇ ಗಂಡನನ್ನು ಕಳೆದುಕೊಂಡರೂ ಆಕೆ ತನು ವಿಧವೆಯೆಂಬ ಭಾವನೆಯಿಲ್ಲದೆಯೇ ಬದುಕಿರುತ್ತಾಳೆ. ಇದಕ್ಕೆ ಕಾರಣ ಈಗಲೂ ಸಿರಿಯಜ್ಜಿಯ ಹಟ್ಟಿಯಲ್ಲಿರುವ ಸಾಂಘಿಕ ಜೀವನ ಕ್ರಮ. ಸಿರಿಯಜ್ಜಿ ಗೊಲ್ಲರಟ್ಟಿಯಲ್ಲಿ ಆಸ್ತಿ ಪರಿಕಲ್ಪನೆ, ಭೂಮಿಯ ಒಡೆತನ ವಿಲ್ಲದ ಕಾರಣಕ್ಕೆ ಒಂದು ಬಗೆಯ ಬಡತನವಿದ್ದರೂ ಆದು ಅವರಿಗೆಲ್ಲ ಬದುಕಲಾರದ ಸಮಸ್ಯೆಯನ್ನೇನೂ ತಂದೊಡ್ಡಿಲ್ಲ.

ಸಿರಿಯಜ್ಜಿ ಹಾಡಿರುವ ಹಾಡುಗಳೆಲ್ಲ ಬೇರೆ ಬೇರೆ ಗ್ರಾಮಗಳಲ್ಲಿ ಬೇರೆ ಬೇರೆ ಗಾಯಕಿಯರಿಂದ ಹಾಡಿಕೊಳ್ಳಲ್ಪಡುತ್ತವೆ. ದೇವರು ಜಲಧಿಗೆ ಹೋಗುವಾಗ, ಅಲ್ಲಿಂದ ಮೆರವಣಿಗೆಯಲ್ಲಿ ಬರುವಾಗ ಸುತ್ತಮುತ್ತ ಜನಪದ ಸ್ತುತಿ ಗೀತೆಗಳನ್ನು ಹಾಡುವವರು ಸ್ತ್ರೀ ಸಮುದಾಯವೇ. ಅಲ್ಲೊಬ್ಬ ಪುರುಷ ಪೂಜಾರಿಯಿದ್ದರೂ ಅವನು ಮಂತ್ರ ಅಥವಾ ಶ್ಲೋಕ ಬಾರದ ಬುಡಕಟ್ಟಿನವನೇ ಆಗಿರುತ್ತಾನೆ. ತಮ್ಮ ಸಮುದಾಯದ ದೇವರನ್ನು ಸ್ತುತಿಸಿ ಹಾಡುವವರು ಹೆಣ್ಣುಮಕ್ಕಳೇ. ಗಂಡಸರದೇನಿದ್ದರೂ ದೇವರ ಮೆರವಣಿಗೆಯ ಪಲ್ಲಕ್ಕಿಯನ್ನು ಹೊರುವುದು. ದೇವರನ್ನು ಗುಡಿ ತುಂಬಿಸುವಾಗಲೂ ಮುದ್ರಿಕೆ ಅಥವಾ ಮಂಗಳ ಪದ ಹಾಡುವವರೂ ಹೆಂಗಸರೇ. ಎಲ್ಲಿ ಪುರೋಹಿತಶಾಹಿ, ಅಧಿಕಾರ ಮತ್ತು ಆಸ್ತಿಯ ಆಮಿಷ ಚಿಂತನೆಗಳು ಪ್ರವೇಶಿಸಿರಲಿಲ್ಲವೋ ಅಂಥ ಗ್ರಾಮ, ಬುಡಕಟ್ಟು ಸಮೂಹಗಳಲ್ಲಿ ಸ್ತ್ರೀ ಪುರುಷರು ಶೋಷಣೆಗೆ ಸಿಲುಕದೆ, ಬಡತನದಲ್ಲಿದ್ದರೂ ಒಂದು ಬಗೆಯ ಆತ್ಮ ಸಂತೋಷ ಮತ್ತು ಸ್ಥೈರ‍್ದಲ್ಲಿ ಜೀವನ ನಿರ್ವಹಣೆ ಮಾಡಿರುತ್ತಾರೆ. ಈ ಸಂಕಲನದಲ್ಲಿಯ ಎಲ್ಲ ದೈವಗಳ ಸ್ತುತಿಗೀತೆಗಳನ್ನು ಹಾಡಿರುವ ಸಿರಿಯಜ್ಜಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದರೂ ಕೈಯ್ಯ ಬಳೆ, ಕಡಗ, ಕತ್ತಿನ ತಾಳಿಯೊಂದಿಗೇ ಇರುತ್ತಾಳೆ. ಅಂತೆಯೇ ಆಕೆ ಹಾಡಿರುವ ಗೀತೆಗಳಲ್ಲಿಯೂ ಸಹ ಸ್ತ್ರೀ ಸಮುದಾಯದ ನಡುವಣ ಒಂದು ಬಗೆಯ ಸ್ವಾತಂತ್ಯ್ರ ಸಮಾಧಾನದ ಎಳೆಗಳು ಸ್ಪಷ್ಟವಾಗಿ ಕಂಡುಬರುತ್ತದೆ.

ಕಥನಗೀತೆಗಳು ಮತ್ತು ಚಿತ್ರದುರ್ಗದ ಭಾಷೆ

ಸಾಮಾನ್ಯವಾಗಿ ಬುಡಕಟ್ಟು ಭಾಷೆಗಳು ದ್ವಿಭಾಷಿಕವಾಗಿರುತ್ತವೆ. ಅಂತೆಯೇ ಚಿತ್ರದುರ್ಗದ ಮ್ಯಾಸಬೇಡ ಬುಡಕಟ್ಟಿನವರು ತೆಲುಗು ಮತ್ತು ಕನ್ನಡ ಮಿಶ್ರಿತ ಭಾಷೆಯನ್ನಾಡುತ್ತಾರೆ. ಮನೆಯಲ್ಲಿ ತೆಲುಗು ಮತ್ತು ಹೊರಗೆ ಕನ್ನಡ ಭಾಷೆ ಮಾತನಾಡುತ್ತ ಕೆಲವೊಮ್ಮೆ ಅವೆರಡರ ಮಿಶ್ರಭಾಷಾ ಪ್ರಯೋಗವನ್ನು ಮಾಡುವುದುಂಟು. ಇದಕ್ಕೆ ಕಾರಣ ಈಗಾಗಲೇ ಗಮನಿಸಿದಂತೆ ಮ್ಯಾಸಬೇಡರು ಆಂಧ್ರದ ಶ್ರೀಶೈಲದ ಕಡೆಯಿಂದ ಬಂದವರೆಂಬುದು. ಆದರೆ ಕಾಡುಗೊಲ್ಲರು ಶುದ್ಧ ಕನ್ನಡ ಮಾತನಾಡುತ್ತಾರೆ. ಬಹುತೇಕ ಇವರ ಮನೆ ದೇವತೆ ಆಂಧ್ರದ ಕದ್ರಿನರಸಿಂಹ. ಆದರೂ ಕಾಡುಗೊಲ್ಲರು ತೆಲುಗು ಭಾಷೆಯ ಪ್ರಭಾವಕ್ಕೆ ಒಳಗಾದಂತಿಲ್ಲ. ಸಿರಿಯಜ್ಜಿ ವಾಸಿಸುವ ಹಟ್ಟಿಯ ಭಾಷೆ ಮತ್ತು ಆಕೆ ಹಾಡುವ ಕಥನಗೀತೆಯ ಭಾಷೆ ಚಿತ್ರದುರ್ಗದ ಗ್ರಾಮೀಣ ಭಾಷೆಯೇ ಆಗಿರುತ್ತದೆ. ಈ ಮೊದಲೇ ಗಮನಿಸಿದಂತೆ ಸಿರಿಯಜ್ಜಿ ಹಾಡುವ ಅನೇಕಾನೇಕ ತ್ರಿಪದಿಗಳು ಗ್ರಾಮೀಣ ಪ್ರದೇಶದಿಂದಲೇ ಹೋದಂಥವು. ಕರ್ನಾಟಕದ ಬೇರೆ ಬೇರೆಯ ಭಾಗದ ಭಾಷೆಗಳಿಗಿರುವ ಪ್ರಾದೇಶಿಕ ವೈಶಿಷ್ಟ್ಯತೆಯೇ ಚಿತ್ರದುರ್ಗದ ಉಪಭಾಷೆಗೂ ಇರುತ್ತದೆ. ಆದರೂ ಭಾಷೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕವೆನಿಸುವ ಚಿತ್ರದುರ್ಗಕ್ಕೆ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಪ್ರಭಾವವೇ ಹೆಚ್ಚಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಷೆ ಅಥವಾ ಯಕ್ಷಗಾನ ಮಾದರಿಗಳಾಗಲಿ ಶಿವಮೊಗ್ಗ ಭಾಗದ ಅಂಟಿಗೆ ಪಂಟಿಗೆ ಪದಗಳಾಗಲಿ ಚಿತ್ರದುರ್ಗದಲ್ಲಿರುವುದಿಲ್ಲ. ದಕ್ಷಿಣ ಕರ್ನಾಟಕದ ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ ಜನಪದ ಮಹಾಕಾವ್ಯಗಳ ಹಾಡುಗಾರಿಕೆಯೂ ಚಿತ್ರದುರ್ಗದವರೆಗೆ ಪ್ರಯಾಣ ಮಾಡಿಲ್ಲ. ಆದರೆ ಉತ್ತರ ಕರ್ನಾಟಕದ ಬೈಲಹೊಂಗಲದ ಸಂಗ್ಯಾಬಾಳ್ಯ ನಾಟಕವನ್ನು ಚಿತ್ರದುರ್ಗದ ಉತ್ತರ ಭಾಗದ ಹಳ್ಳಿಗಳಲ್ಲಿ ಕಾಣಬಹುದು. ಚಿತ್ರದುರ್ಗದಾದ್ಯಂತ ಕೇಳಿಸುವ ಗೀತೆಗಳೆಂದರೆ, ಐತಿಹಾಸಿಕ ಹಿನ್ನೆಲೆಯ, ಬುಡಕಟ್ಟು ಜೀವನವನ್ನು ಪ್ರತಿಬಿಂಬಿಸುವ ಗೀತೆಗಳೇ! ಭಾಷೆಯ ಮೇಲೆ ಉತ್ತರ ಕರ್ನಾಟಕದ ಭಾಷೆಯ ಪ್ರಭಾವವಿದ್ದೇ ಇದೆ.

ಕರ್ನಾಟಕದ ಇತರ ಭಾಗಗಳಲ್ಲಿ ಪ್ರಯೋಗವಿರುವ ಇದ್ದಾವೆ, ಇದ್ದಾನೆ, ಇದ್ದಾರೆ ಎಂಬ ಪದಗಳು ಚಿತ್ರದುರ್ಗದ ಕಡೆ ಐದಾವೆ, ಐದಾನೆ, ಐದಾರೆ ಎಂದೇ ಪ್ರಯೋಗವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ಶರಣರ ವಚನಗಳಲ್ಲಿ ಈ ಬಗೆಯ ಪದ ಪ್ರಯೋಗ ಕಂಡುಬರುತ್ತದೆ. ಬಳಲುತ್ತೈದಾರೆ, ನಡೆಯುತ್ತೈದಾವೆ ಎಂಬ ಪದಪ್ರಯೋಗಗಳನ್ನು ಕಾಣಬಹುದು. ರಕ್ತ ಎಂಬ ಪದ ಚಿತ್ರದುರ್ಗದ ಗ್ರಾಮ ಮತ್ತು ಬುಡಕಟ್ಟುಗಳ ನಡುವೆ ‘ರೈತ’ ಎಂದು ಉಚ್ಚರಿಸಲ್ಪಡುತ್ತದೆ. ‘ರೈತ’ ಪದಕ್ಕೆ ‘ಗಳು’ ಪ್ರತ್ಯಯ ಸೇರಿಕೊಂಡು ‘ರೈತಗಳು ಸುರಿದಾವೆ’ ಎಂಬ ಪದಸೃಷ್ಟಿಯಾಗಿದೆ. ಗದುಗಿನ ಕವಿ ಕುಮಾರವ್ಯಾಸ ಆತ ಈತ ಪದಕ್ಕೆ ಗಳು ಪ್ರತ್ಯಯ ಸೇರಿಸಿ ಆತಗಳು, ಈತಗಳು ಎಂದು ಪ್ರಯೋಗಿಸುತ್ತಾನೆ. ಹಾಗೆಯೇ ಸಿರಿಯಜ್ಜಿಯ ತ್ರಿಪದಿಗಳಲ್ಲಿ ಅಣ್ಣಗಳು, ಅಕ್ಕಗಳು ಎಂಬ ಪದ ಪ್ರಯೋಗವಾಗುವಂತೆ ಆಡುಮಾತಿನಲ್ಲಿಯೂ ಈ ಬಗೆ ಚಾಲ್ತಿಯಲ್ಲಿದೆ.

ಚಿತ್ರದುರ್ಗ ಪ್ರದೇಶದಲ್ಲಿ ಪಾಳೆಯಗಾರರ ಆಳ್ವಿಕೆ ಆಗಿಹೋಗಿರುವುದರಿಂದ ಆ ಬಯಲನ್ನು ರೂಢಿಯಿಂದ ‘ಗಂಡುಮೆಟ್ಟಿನ ನಾಡು’ ಎಂದು ಕರೆಯುವುದುಂಟು. ಇದು ಕೂಡ ಉತ್ತರ ಕರ್ನಾಟಕದ ಯುದ್ಧಗಳು ಮತ್ತು ಹೋರಾಟದ ಹಿನ್ನೆಲೆಯಲ್ಲಿ ರೂಢಿಗೆ ಬಂದಿರುವ ನುಡಿಗಟ್ಟು. ಈ ಕಾರಣವಾಗಿ ಚಿತ್ರದುರ್ಗದ ಭಾಷೆಗೆ ನಯ ಮತ್ತು ಸೌಮ್ಯತೆ ಕಡಿಮೆ. ಇದರಿಂದ ಸ್ನೇಹದ ಸಂದರ್ಭದಲ್ಲೂ ಜಗಳದ ವೇಳೆಯಲ್ಲೂ ಅದೇ ಬೈಗುಳದ ಪದಗಳನ್ನು ಕೇಳಬಹುದು. ಈ ಪದಗಳು ಅತ್ಯಂತ ಆತ್ಮೀಯ ವಾತಾವರಣದಲ್ಲಿಯೂ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿಸುತ್ತವೆ. ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು, ಹಿರಿಯೂರು ಭಾಗಗಳು ತೆಲುಗು ಭಾಷಾಪ್ರಭಾವಕ್ಕೆ ಒಳಗಾಗಿರುವುದರಿಂದ ಆ ಸುತ್ತಿನ ‘ಚ’ ಕಾರ ಪ್ರಯೋಗಗಳೆಲ್ಲ ‘ಸ’ ಕಾರವಾಗಿದೆ. ಚಳ್ಳಕೆರೆ ಎಂಬ ಪದವೇ ಸೆಳ್ಳಕೆರೆ ಎಂದಾಗುತ್ತದೆ. ಸಿರಿಯಜ್ಜಿ ಹಾಡಿದ ಎಲ್ಲ ಗೀತೆಗಳಲ್ಲೂ ‘ಚ’ ಕಾರ ಪ್ರಯೋಗ ಸಕಾರವಾಗಿದೆ. ಇದು ಆಡು ಮಾತಿನಲ್ಲಿಯೂ ಇದೆ. ಚಿನಮಲಗಿರಿ ಸಿನುಮಲಗಿರಿ, ಚಿತ್ರಕಲ್ಲು ಸಿತ್ರಕಲ್ಲು, ಚಿನ್ನದ ಸಿನ್ನದ, ಚೆದುರು ಸೆದುರು ಹೀಗೆ. ತೆಲುಗಿನಲ್ಲಿ ಈ ಬದಲಾವಣೆ ಅತ್ಯಂತ ಸಹಜ. ಚಾಲು-ಸಾಲು, ಚೆಪ್ಪು-ಸೆಪ್ಪು, ಚಕ್ಕಗ-ಸಕ್ಕಗ, ಚಿನುಕಲು- ಸಿನುಕಲು, ಚಾನ-ಸಾನ ಹೀಗೆ. ಮತ್ತೆ ಕೆಲವು ಪದಗಳ ದ್ವಿತೀಯ ತೃತೀಯಾಕ್ಷರಗಳು ಸಂಭಾಷಣೆಯಲ್ಲಿ ಹ್ರಸ್ವವಾಗಿದ್ದು, ಸಿರಿಯಜ್ಜಿ ಹಾಡುವಾಗ ಮಾತ್ರ ದೀರ್ಘವಾಗುತ್ತದೆ. ಉದಾಹರಣೆಗೆ ಅಣ್ಣ, ತಮ್ಮ, ಚಿನ್ನ, ಗುಂಪು, ಲಿಂಗ, ದಾಸ, ನೆನೆದರೆ, ಎದ್ದರೆ, ಬಡತನ, ಸೀತರು, ಹಾವಳಿ, ಅರಮನೆ, ಎಂಬಿತ್ಯಾದಿ ಪದಗಳು ಹಾಡುಗಾರಿಕೆಯಲ್ಲಿ ಅಣ್ಣಾನೆ, ತಮ್ಮಾನೆ, ಚಿನ್ನಾದ, ಗುಂಪಾದೆ, ಲಿಂಗಾನೆ, ದಾಸಾನೆ, ನೆನದಾರೆ, ಎದ್ದಾರೆ, ಸೀತಾರು, ಹಾವಾಳಿ, ಅರುಮಾನೆ, ಬಡತಾನ ಎಂದಾಗುತ್ತದೆ. ಬಹುಶಃ ಇದು ಹಾಡುಗಾರಿಕೆಯ ಅನುಕೂಲಕ್ಕಾಗಿ ಅಕ್ಷರಗಳು ದೀರ್ಘರೂಪ ಪಡೆಯುತ್ತವೆ.

ಕರ್ನಾಟಕದ ಬೇರೆ ಭಾಗಗಳಲ್ಲಿ ಬುಡಕಟ್ಟು ಸಮುದಾಯಗಳು ಇರುವುದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮೈಸೂರು ಚಾಮರಾಜ ನಗರ ಜಿಲ್ಲೆಯ ಅರಣ್ಯ ಭಾಗಗಳಲ್ಲಿ. ಆದರೆ ಚಿತ್ರದುರ್ಗದ ಬಯಲು ಸೀಮೆಯಲ್ಲಿದ್ದೂ ಮ್ಯಾಸಬೇಡ ಮತ್ತು ಕಾಡುಗೊಲ್ಲ ಸಮೂಹಗಳು ತಮ್ಮೆಲ್ಲ ನಂಬಿಕೆ, ಸಂಪ್ರದಾಯ ಆಚರಣೆಗಳನ್ನು ಮತ್ತು ತಮ್ಮ ದೈವತ್ವದ ಸರಳ ಪರಿಕಲ್ಪನೆಗಳನ್ನು ಬಿಟ್ಟುಕೊಡದೇ ಬದುಕಿಬಂದಿರುವುದು ವಿಶಿಷ್ಟವೂ, ಕುತೂಹಲವೂ ಆಗಿ ಕಂಡುಬರುತ್ತದೆ. ಆ ಕಾರಣಕ್ಕೆ ಅವರ ಭಾಷಾ ಪ್ರಯೋಗವೂ ವಿಶಿಷ್ಟವೇ. ಸ್ತ್ರೀ ಎಂಬ ಪದವನ್ನು ತ್ರಿಪದಿಗಳ ವಾಕ್ಯಕ್ಕೆ ಹೊಂದಿಸಿ ಹಾಡಲಾಗದಿರುವುದರಿಂದ ಅದನ್ನು ನಿಸ್ತ್ರೇ ಎಂದು ಪ್ರಯೋಗಿಸಲಾಗಿದೆ. ಸಿರಿಯಜ್ಜಿ ಹಾಡಿದ ಎಲ್ಲ ತ್ರಿಪದಿಗಳಲ್ಲೂ ಸ್ತ್ರೀ ಪದ ನಿಸ್ತ್ರೇ (‘ನಿಸ್ತ್ರೇರ ಯೋಗಿ ರತವೇರೋ’) ಎಂದೇ ಬಳಕೆಯಾಗಿದೆ. ಹೀಗೆಯೇ ಕಾಂತೆ ಎಂಬ ಪದ, ಮಧ್ಯ ಬಿಂದುವನ್ನು ಕಳೆದುಕೊಂಡು ಕಾತೇ ಎಂದು ಹೇಳಲ್ಪಟ್ಟಿದೆ. ದೇವತೆ ಪದವೂ ದಯಿತೆ, ದೈತೆ ಆಗಿದೆ. ನಾಗಭೂಷಣ, ಸರ್ಪಭೂಷಣ ಸಂಸ್ಕೃತ ಪದಗಳು ನಾಗಬೂಸುರ, ಸರ್ಪಬೂಸುರ ಎಂದು ರೂಪ ಬದಲಾಯಿಸಿಕೊಂಡಿವೆ. ‘ಣ’ ಮತ್ತು ‘ಳ’ ಪದಗಳ ನಡುವೆ ವ್ಯತ್ಯಾಸವಿಲ್ಲದಂತೆ ಪದಗಳು ಬಳಕೆಯಾಗಿವೆ. ಕೇಶಿರಾಜನೂ ಈ ಸಂಬಂಧ ಣ ಮತ್ತು ಳ ಅಕ್ಷರಗಳ ಪ್ರಯೋಗದಲ್ಲಿ ಬೇಧವಿಲ್ಲವೆಂದು ಹೇಳಿದ್ದಾನೆ. ಹಾಗಾಗಿ ಕಂಪಣ ಎಂಬುದು ಕಂಪಳ, ಕಂಪಲ ಈ ರೂಪಗಳಲ್ಲಿ ಪ್ರಯೋಗಗೊಳ್ಳುತ್ತದೆ. ಮುಳುಗಾಲಿ ಪದ ಮುಣುಗಾಲಿ ಎಂದೂ ಹಾಡಲ್ಪಡುತ್ತದೆ. ದಕ್ಷಿಣ ಕರ್ನಾಟಕದ ಆಯಿತು, ಹೋಯಿತು ಪದಗಳು ಉತ್ತರ ಕರ್ನಾಟಕದಂತೆ ಚಿತ್ರದುರ್ಗದಲ್ಲಿ ಆತು, ಹೋತು ಎಂದಾಗುತ್ತದೆ. (ಆಲದ ಮರನಾಕಿ ಆರೆಂಟು ದಿನವಾತು) ಹಾಗೆಯೇ ಆಟು, ಈಟು, ಏಟು ಪದ ಉತ್ತರ ಕರ್ನಾಟಕದ ಕವಿಗಳ ಕಾವ್ಯ ಭಾಷೆಯಂತೆ ಆಸು, ಈಸು, ಎಸು ಎಂದೇ ಜನಪದರಲ್ಲಿ ಪ್ರಯೋಗಗೊಂಡಿದೆ.

ಉತ್ತರ ಕರ್ನಾಟಕದ ಎ ಕಾರಾಂತ್ಯ ಪದಗಳೆಲ್ಲ ಇ ಕಾರಾಂತ್ಯವಾದಂತೆ ಸಿರಿಯಜ್ಜಿಯ ಗೀತೆಗಳಲ್ಲಿ ಎರಡೂ ಬಗೆಯಲ್ಲಿ ಪ್ರಯೋಗವಾಗಿದೆ. ಎಲೆದೋಟ-ಎಲಿದೋಟ, ಮನೆಯಾಗ-ಮನಿಯಾಗ, ಗೊಂಬೆ-ಗೊಂಬಿ ಹೀಗೆ ಎ ಕಾರ ಇ ಕಾರಾಂತ್ಯ ರೂಪಗಳಲ್ಲಿ ಬಳಕೆಯಾಗಿರುತ್ತವೆ. ದಿಕ್ಕಿನ ಹೆಸರುಗಳು ಕರ್ನಾಟಕದಾದ್ಯಂತ ಹೇಳಿಕೊಳ್ಳುವಂತೆ ಶುದ್ಧ ಕನ್ನಡ ರೂಪದಲ್ಲಿ ಮೂಡಲು, ಪಡುವಲು, ಬಡಗಲು, ತೆಂಕಲು ಎಂದೇ ಇದೆ. ಆದರೆ ತೆಂಕಲು ಎಂಬುದು ಮಾತ್ರ ಟೆಂಕಲು (‘ಟೆಂಕಾಲ ಪರಿಸೆ ಸೆಂಕಿಲ್ಲದೆ ಬರುತಾವೆ’) ಎಂಬುದಾಗಿ ಹಾಡಲ್ಪಟ್ಟಿರುತ್ತದೆ. ಕರ್ನಾಟಕದ ಬಹುತೇಕ ಬುಡಕಟ್ಟುಗಳಲ್ಲಿ ಪ್ರಚಾರದಲ್ಲಿಲ್ಲದಷ್ಟು ಕುಲನಾಮಗಳು ಮ್ಯಾಸಬೇಡರಲ್ಲಿ ಕಾಡುಗೊಲ್ಲರಲ್ಲಿದ್ದು ಅವು ತೆಲುಗು ಮೂಲದ ಹೆಸರುಗಳಾಗಿವೆ. ಎದ್ದಲೋರು, ಆವುಲೋರು, ಪಾಮಡಲೋರು, ಎನುಮಲೋರು ಹೀಗೆ. ಎರಡೂ ಪಂಗಡಗಳ ನಡುವೆ ಬರುವ ಬೆಡಗು ಅಥವಾ ಕುಲನಾಮಗಳಲ್ಲಿ ಅನೇಕ ಸಾಮ್ಯತೆಗಳಿವೆ. ಜತೆಗೆ ಇವೆರಡು ಸಮೂಹಗಳ ಕುಲಮೂಲದೇವತೆ ಸೂರ್ಯ ಚಂದ್ರರೇ ಎಂದು ತಿಳಿದುಬರುತ್ತದೆ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ ಚಿತ್ರದುರ್ಗ ಪ್ರದೇಶ ಉತ್ತರ ಕರ್ನಾಟಕದ ಜತೆ ತನ್ನ ಬೇರು ಬಿಳಲುಗಳನ್ನು ಬೆಸೆದುಕೊಂಡಿದ್ದು ದಕ್ಷಿಣ ಕರ್ನಾಟಕಕ್ಕಿಂತ ಬೇರೆಯದೇ ವಿಶಿಷ್ಟ ಪರಂಪರೆಯನ್ನು ಐತಿಹಾಸಿಕ ಹಿನ್ನೆಲೆಯಲ್ಲೇ ಬೆಳಸಿಕೊಂಡಿದೆ. ಆ ಬಗೆಯ ಅಧ್ಯಯನಕ್ಕೆ ವಿಪುಲ ಅವಕಾಶಗಳೂ ಉಳಿದಿವೆ.

ಡಾ. ಕೃಷ್ಣಮೂರ್ತಿ ಹನೂರು.