ಚಿತ್ರದುರ್ಗ ಪ್ರದೇಶ

ಬಹುತೇಕ ಕರ್ನಾಟಕದ ಇತಿಹಾಸ ನಡೆದದ್ದು ಉತ್ತರ ಕರ್ನಾಟಕದ ಭಾಗಗಳಲ್ಲಿ. ಹಾಗೆಯೇ ಉತ್ತರ ಕರ್ನಾಟಕದ ಐತಿಹಾಸಿಕ ಪ್ರದೇಶಗಳ ದಕ್ಷಿಣ ಭಾಗವನ್ನು ಚಿತ್ರದುರ್ಗ ಪ್ರದೇಶವೆಂದೇ ಗುರುತಿಸಬಹುದು. ದಕ್ಷಿಣ ಕರ್ನಾಟಕದ ಇನ್ನೂ ತುತ್ತತುದಿಯ ನೆಲೆಗಳೆಂದರೆ ಮೈಸೂರು, ಚಾಮರಾಜನಗರದ ಅರಣ್ಯಾವೃತ ಭಾಗಗಳು. ದಟ್ಟಅರಣ್ಯ ಮತ್ತು ಆದಿವಾಸಿ ಬುಡಕಟ್ಟು ಜನಸಮೂಹಗಳು ಇಲ್ಲಿ ವಾಸಿಸಿದ್ದು, ಮಂಟೇಸ್ವಾಮಿ ಜನಪದ ಕಾವ್ಯದಲ್ಲಿ ಈ ಪ್ರದೇಶಗಳನ್ನೆಲ್ಲ ಕತ್ತಲರಾಜ್ಯವೆಂದು ಹೆಸರಿಸಲಾಗಿದೆ. ರಾಜಮಹಾರಾಜರು ರಾಜ್ಯಗಳನ್ನು ಕಟ್ಟಿದ್ದು, ಸಾಧಿಸಿದ್ದು ಕನ್ನಡದ ಸಾಂಸ್ಕೃತಿಕ ಪರಂಪರೆ ಆರಂಭವಾಗಿ ಮಹಾಕವಿಗಳು ಜನಿಸಿ ಬಂದದ್ದು, ವಚನ ಕ್ರಾಂತಿಯಲ್ಲಿ ತೊಡಗಿದ ಎಲ್ಲ ಶರಣರು ಒಟ್ಟಾದದ್ದು ಉತ್ತರ ಕರ್ನಾಟಕ ಪ್ರದೇಶಗಳಲ್ಲಿಯೇ. ಹೀಗಾಗಿ ಉತ್ತರ ಕರ್ನಾಟಕದ ಸಂಸ್ಕೃತಿ, ಇತಿಹಾಸದ ಎಲ್ಲ ಎಲೆಗಳನ್ನೂ ಚಿತ್ರದುರ್ಗ ಪ್ರದೇಶದಲ್ಲಿಯೂ ಕಾಣಬಹುದು. ಈಗಲೂ ಚಿತ್ರದುರ್ಗದ ಯಾವುದೇ ಪಟ್ಟಣ, ಗ್ರಾಮ, ಬುಡಕಟ್ಟು ಹಟ್ಟಿಗಳನ್ನು ಗಮನಿಸಿದರೆ ಅವು ಒಂದಿಲ್ಲೊಂದು ಬಗೆಯಲ್ಲಿ ಇತಿಹಾಸದ ಮುಸುಕು ಹಾಕಿಕೊಂಡು ಅದರ ನೆನಪುಗಳನ್ನು ಮೆಲುಕು ಹಾಕುತ್ತಿರುವಂತೆ ತೋರುತ್ತದೆ. ಯವುದೇ ಪಟ್ಟಣ, ಪುಟ್ಟ ಗ್ರಾಮದ ಕಡೆ ಗಮನಿಸಿದರೆ ಅದರ ಸುತ್ತ ಸಣ್ಣ ಪ್ರಮಾಣದ ಮಣ್ಣಿನ ಕೋಟೆ ಗೋಡೆಯಿರುತ್ತದೆ. ಬುಡಕಟ್ಟು ಹಟ್ಟಿಯಾದರೆ ಸುತ್ತ ಮುಳ್ಳಿನ ಬೇಲಿ. ಅಲ್ಲದೆ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಕಾಣದ ‘ಬೇಚರಾಕ್’ ಗ್ರಾಮಗಳು ಚಿತ್ರದುರ್ಗ ಪ್ರದೇಶದಲ್ಲಿ ಬಹಳಷ್ಟು ಇವೆ. ಬೇಚರಾಕ್ ಗ್ರಾಮಗಳೆಂದರೆ ಒಂದು ಕಾಲಕ್ಕೆ ಆ ಸ್ಥಳದಲ್ಲಿ, ಹಳ್ಳಿ ಊರುಗಳಿದ್ದು ತದನಂತರ ಜನ ವಸತಿ ಇಲ್ಲದೇ ಹೋದದ್ದು! ಇದಕ್ಕೆ ಆ ಸುತ್ತಿನ ಜನ, ಯಾವುದೇ ಪಾಳೆಯಗಾರ ಇಲ್ಲವೇ ರಾಜನ ಸೈನ್ಯ ಇತ್ತ ಕಡೆ ಬರುವಲ್ಲಿ ಅವರು ಕೈಗೊಳ್ಳಬಹುದಾದ ಲೂಟಿಯ ಭಯಕ್ಕೆ ಅಥವಾ ಲೂಟಿ ನೆರವೇರಿಸಿಬಿಟ್ಟ ಕಾರಣಕ್ಕೆ ಆ ಸ್ಥಳ ಬಿಟ್ಟ ಗ್ರಾಮಸ್ಥರು ಅಲ್ಲೆಲ್ಲೋ ದೂರ ಹೊಸ ಹಟ್ಟಿ ಕಟ್ಟಿಕೊಂಡರು ಎನ್ನುತ್ತಾರೆ. ಈ ಅರ್ಥದಲ್ಲಿ ಜನ ವಸತಿಯಿಲ್ಲದ ಗ್ರಾಮಗಳು ಚಿತ್ರದುರ್ಗ ಪ್ರದೇಶದಲ್ಲಿ ಬಹಳಷ್ಟು ಕಂಡುಬರುತ್ತವೆ.

ಚಿತ್ರದುರ್ಗ ಸೀಮೆಯಲ್ಲಿ ಏಳುನೂರು ವರ್ಷಗಳ ಹಿಂದಿನ ಮದಕರಿನಾಯಕ ಹೆಸರಿನ ಪಾಳೆಯಗಾರ ವಂಶಸ್ಥರ ಇತಿಹಾಸವಷ್ಟೇ ಅಲ್ಲದೆ ಪ್ರಾಗೈತಿಹಾಸಿಕ ದಾಖಲೆಗಳೂ ದೊರಕುತ್ತವೆ. ನೈರುತ್ಯ ಭಾಗಕ್ಕೆ ಚಂದ್ರವಳ್ಳಿ ಎಂಬ ಪ್ರದೇಶವಿದ್ದು ಅದು ಕದಂಬರ ಕಾಲದ ಕುರುಹುಗಳನ್ನೂ, ಅದಕ್ಕಿಂತಲೂ ಪ್ರಾಚೀನವೆನಿಸುವ ಬೌದ್ಧರ ನೆಲೆಯ ಗುರುತನ್ನೂ ತೋರಿಸುತ್ತದೆ. ಇದರ ಜತೆಗೆ ಹನ್ನೆರಡನೆ ಶತಮಾನದ ವಚನ ಕ್ರಾಂತಿಯ ನಂತರ ಬಂದ ತಿಪ್ಪೇಸ್ವಾಮಿ ಎಂಬ ಸಂತನ ಹೆಸರನ್ನು ಚಿತ್ರದುರ್ಗದಾದ್ಯಂತ ಎಲ್ಲ ವರ್ಗದ ಸಮೂಹ ಒಂದು ಸಾಂಸ್ಕೃತಿಕ ನೆನಪಾಗಿ ಉಳಿಸಿಕೊಂಡು ಬಂದಿದೆ. ಮತೀಯ ಐಕ್ಯಮತ್ಯದ ಹಿನ್ನೆಲೆಯೂ ಇದಕ್ಕಿದೆ. ಲಕ್ಷಾಂತರ ಜನಸಮೂಹ ತಿಪ್ಪೇಸ್ವಾಮಿಯ ನೆನಪನ್ನು, ಜಾತ್ರೆ ಮತ್ತು ಇನ್ನಿತರ ಆಚರಣೆಗಳ ಮೂಲಕ ಅಲ್ಲದೆ ತಂತಮ್ಮ ಸಂತಾನಕ್ಕೆ ಆತನ ಹೆಸರಿಟ್ಟುಕೊಳ್ಳವುದರ ಮೂಲಕ ಉಳಿಸಿಕೊಂಡು ಬರುತ್ತಿದೆ. ಇದನ್ನೆಲ್ಲ ಗಮನಿಸಿದರೆ ಚಿತ್ರದುರ್ಗ ಬುಡಕಟ್ಟು ಸಮೂಹದ ಉದ್ಧಾರಕ್ಕೆ ಶರಣ ತಿಪ್ಪೇಸ್ವಾಮಿ ಬಹಳಷ್ಟು ಶ್ರಮಿಸಿದಂತೆ ಕಂಡು ಬಂದು ಈ ಹಿನ್ನೆಲೆಯಲ್ಲಿ ಅನೇಕಾನೇಕ ದಂತಕತೆಗಳೂ ಪ್ರಚಾರದಲ್ಲಿವೆ. ತಿಪ್ಪೇಸ್ವಾಮಿ ಕಟ್ಟಿಸಿದ ಎರಡು ಭಾರಿ ಕೆರೆಗಳು ಬರಪೀಡಿತ ಪ್ರದೇಶವೆನಿಸುವ ಚಿತ್ರದುರ್ಗ ಸೀಮೆಯಲ್ಲಿ ಆತ ಕೈಗೊಂಡ ಸಮಾಜ ಸೇವೆಯ ಅರ್ಥಪೂರ್ಣ ಕುರುಹುಗಳಾಗಿವೆ. ಇದರೊಂದಿಗೆ ದುರ್ಗದ ಇತಿಹಾಸದಲ್ಲಿ ಬಂದ ಕೆಲವು ಪಾಳೆಯಗಾರರೂ ತಂತಮ್ಮ ಯುದ್ಧ ದುರಂತಗಳ ಜತೆಗೆ ಕೆರೆಕಟ್ಟೆ ನಿರ್ಮಾಣದಂಥ ಸಮಾಜ ಸೇವಾ ಕಾರ‍್ಯಗಳನ್ನು ನೆರವೇರಿಸಿರುವುದೂ ಕಂಡು ಬರುತ್ತದೆ. ಹೀಗೆ ಇತಿಹಾಸ ಮತ್ತು ಪ್ರಾಚೀನ ಸಂಸ್ಕೃತಿ ಕುರುಹುಗಳ ಚಿತ್ರದುರ್ಗ ಸೀಮೆಯಲ್ಲಿ ಗ್ರಾಮೀಣರ ಬದುಕು ಕೂಡ ಜನಪದ ಸಂಸ್ಕೃತಿ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಬಹು ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ಗ್ರಾಮ ಮತ್ತು ಬುಡಕಟ್ಟು ಸಮೂಹದಲ್ಲಿ ಮೌಖಿಕ ಪರಂಪರೆಯಾಗಿ ಜನಪದ ಕಥೆ, ಗೀತೆ, ಕಥನ ಗೀತೆ, ದೀರ್ಘ ಕಥಾನಕಗಳು ಅಪಾರ ಸಂಖ್ಯೆಯಲ್ಲಿ ಸೃಷ್ಟಿಗೊಂಡು ಹಾಡಲ್ಪಡುತ್ತಿವೆ. ಇದರಲ್ಲಿ ಐತಿಹಾಸಿಕ ಗೀತೆಗಳ ಪಾಲೇ ಹೆಚ್ಚು. ಮಹತ್ವದ ಸಂಗತಿಯೆಂದರೆ ಚಿತ್ರದುರ್ಗ ಬಯಲಲ್ಲಿ ಸುಮಾರು ಏಳುನೂರು, ಎಂಟುನೂರು ವರ್ಷಗಳಿಂದಲೂ ವಾಸಿಸಿಕೊಂಡು ಬಂದಿರುವ ಎರಡು ಬುಡಕಟ್ಟು ಸಮೂಹಗಳದು! ಮೊದಲನೆಯದು ಮ್ಯಾಸಬೇಡ ನಾಯಕರದು, ಎರಡನೆಯದು ಕಾಡುಗೊಲ್ಲರ ಸಮೂಹ. ಇವೆರಡೂ ಸಮೂಹಗಳು ಬುಡಕಟ್ಟಿನದೇ ಆದ ವಿಶಿಷ್ಟ ಆಚರಣೆ, ಸಂಪ್ರದಾಯಗಳನ್ನು ಕ್ರಮಬದ್ಧ ಹಿನ್ನೆಲೆಯಲ್ಲೇ ನಿರ್ವಹಿಸಿಕೊಂಡು ಬಂದಿರುತ್ತವೆ.

ಬೇಡನಾಯಕ ಮತ್ತು ಕಾಡುಗೊಲ್ಲ ಸಮೂಹ ಚಿತ್ರದುರ್ಗ ಪ್ರದೇಶದಲ್ಲಿ ಆಯಾ ಗ್ರಾಮಗಳಿಂದ ದೂರವಿದ್ದು ಬದುಕುತ್ತ ತಮ್ಮನ್ನು ತಾವು ಅಣ್ಣ ತಮ್ಮಂದಿರೆಂದು ಕರೆದುಕೊಂಡಿವೆ. ಆದರೆ ಇವೆರಡೂ ಬುಡಕಟ್ಟು ಗುಂಪುಗಳ ಮನೋಭಾವ, ನಡೆನುಡಿಗಳಲ್ಲಿ ಸಾಕಷ್ಟು ವ್ಯತ್ಯಾಸವೂ ಇರುತ್ತದೆ. ಇದೇ ಬದುಕಿನ ಕ್ರಮ ಚಿತ್ರದುರ್ಗದಿಂದ ಹಿಡಿದು ಬಳ್ಳಾರಿ, ರಾಯಚೂರು, ಗುಲ್ಬರ್ಗಾದವರೆಗೆ ವಿಸ್ತರಿಸಿರುವುದನ್ನು ಕಾಣಬಹುದು. ಊರಿನಿಂದ ಆಚೆ ಹಟ್ಟಿಗಳಲ್ಲಿ ವಾಸಿಸುವವರು, ಈಗಾಗಲೇ ನಾನು ಕಾರಣಗಳಿಗಾಗಿ ಊರು ಸೇರಿರುವ ಕಾಡುಗೊಲ್ಲರು, ಮ್ಯಾಸಬೇಡರನ್ನು ‘ಮಡಿ ಕೆಟ್ಟವರು’ ಎಂತಲೇ ಕರೆಯುತ್ತಾರೆ. ಇದಕ್ಕೆ ಕಾರಣ ಹಟ್ಟಿಯ ಬೇಡರು, ಗೊಲ್ಲರು ತಮ್ಮ ಬದುಕಿನಲ್ಲಿ ಅತ್ಯಂತ ಉದಾರವೆನಿಸುವ ನಿಯಮಗಳನ್ನು ರೂಢಿಸಿಕೊಂಡು ಬಂದಿರುತ್ತಾರೆ. ಆದರೆ ಅನೇಕ ಕಾರಣಗಳು ಹಿನ್ನೆಲೆಯಲ್ಲಿ ಎರಡು ಸಮೂಹದ ನಡುವೆ ಪರಸ್ಪರ ದ್ವೇಷ ಪ್ರಸಂಗಗಳೂ, ಅಂಧಶ್ರದ್ಧೆಗಳೂ ಬುಡಕಟ್ಟು ಸಮೂಹದ ಜೀವನ ಶಾಂತಿ, ಸೌಹಾರ್ದ ಮತ್ತು ಎಲ್ಲಕ್ಕಿಂತ ಸರಳವಾದುದೂ ಆಗಿರುತ್ತದೆ.

ಜನಪದ ಗಾಯಕಿ ಸಿರಿಯಜ್ಜಿ

ಚಿತ್ರದುರ್ಗ ಪ್ರದೇಶದ ಜನಪದ ಸಂಸ್ಕೃತಿಯ ಪ್ರತಿನಿಧಿ ಎನಿಸುವ ಸಿರಿಯಜ್ಜಿ ವಾಸಿಸುತ್ತಿರುವುದು ಚಳ್ಳಕೆರೆ ತಾಲ್ಲೂಕು ಬೆಳಗೆರೆ ಗ್ರಾಮದ ಬಳಿಯ ಚಿಕ್ಕೆನಹಳ್ಳಿ ಹೊಸ ಗೊಲ್ಲರ ಬುಡಕಟ್ಟು ಹಟ್ಟಿಯಲ್ಲಿ. ಈ ಹಟ್ಟಿಯಲ್ಲಿ ನಲವತ್ತು, ಐವತ್ತು ಗುಡಿಸಲೂ ಆರೇಳು ಮಾಳಿಗೆ ಮನೆಗಳೂ ಇವೆ. ಮಾಳಿಗೆ ಮನೆ ಎಂದರೆ ಮಹಡಿಯಲ್ಲ. ಗೋಡೆ ಎತ್ತರಿಸಿದ ನಂತರ ಅದರ ಮಾಡಿಗೆ ಅಡ್ಡಡ್ಡ ಮರದ ಕೊಂಬೆ, ಸೊಪ್ಪುಸೆದೆ ಹಾಸಿ ಅದರ ಮೇಲೆ ಚೆನ್ನಾಗಿ ತುಳಿದು ಕಲೆಸಿದ ಮಣ್ಣು ಹಾಕಿದ ಪ್ರಾಚೀನ ಮಾದರಿಯ ಆರ್.ಸಿ.ಸಿ.ಯಷ್ಟೆ. ಹಟ್ಟಿಯ ಗುಡಿಸಲುಗಳ ಮಧ್ಯಭಾಗದಲ್ಲಿ ಕ್ಯಾತರುಲಿಂಗ, ಪಾತರುಲಿಂಗ, ಸಿರಿಯಣ್ಣ ದೇವರ ಗುಡಿಗಳಿವೆ. ಈ ಗುಡಿಗಳ ಸುತ್ತಲೂ ಬೇಲಿ. ಇದೀಗ ಮುಳ್ಳು ಬೇಲಿಯನ್ನು ತೆಗೆದು ಗೋಡೆ ಕಟ್ಟಲಾಗಿದೆ.

ಪುಟ್ಟ ಮಾಳಿಗೆ ಮನೆಯಲ್ಲಿ ವಾಸಿಸುವ ಸಿರಿಯಜ್ಜಿಯ ಊರು ಹಳೇ ಗೊಲ್ಲರಹಟ್ಟಿ. ಮದುವೆಯಾದದ್ದು ಹೊಸ ಗೊಲ್ಲರ ಹಟ್ಟಿಗೆ. ಎರಡೂ ಹಟ್ಟಿಗಳ ನಡುವಣ ದೂರು ಒಂದು ಕಿಲೋಮೀಟರಷ್ಟೆ! ತಂದೆಯ ಹೆಸರು ಗುಡ್ಡದ ವೀರಪ್ಪ, ತಾಯಿ ಕಾಡಮ್ಮ. ಹೊಸ ಗೊಲ್ಲರ ಹಟ್ಟಿಯ ತಿಪ್ಪೇಸ್ವಾಮಿಯನ್ನು ಮದುವೆ ಆದಾಗ ಸಿರಿಯಜ್ಜಿಯ ವಯಸ್ಸು ಹನ್ನೆರಡು. ಗಂಡನಿಗೆ ಇಪ್ಪತ್ತೈದು ಆಗಿತ್ತು. ಇಬ್ಬರು ಗಂಡು ಮಕ್ಕಳಾದ ನಂತರ ಆಗ್ಗೆ ಬಂದ ಬರಗಾಲದಲ್ಲಿ ಗಂಡ ತಿಪ್ಪೇಸ್ವಾಮಿ ತೀರಕೊಂಡ. ನೆರೆಹೊರೆಯವರ ಸಹಾಯದಿಂದ ಸಿರಿಯಜ್ಜಿ ದುಡಿದು ಮಕ್ಕಳನ್ನೂ, ಮನೆಯನ್ನೂ ಮುಂದುವರೆಸಿದಳು. ಸಿರಿಯಜ್ಜಿ ಚಿಕ್ಕಂದಿನಲ್ಲಿ ಜನಪದ ಗೀತೆಗಳ ಹಾಡುಗಾರಿಕೆ ಕಲಿತದ್ದು ತಾಯಿಯಿಂದಲೇ ಹಟ್ಟಿಯ ದೇವರುಗಳನ್ನು ಉತ್ಸವಕ್ಕೆ ಹೊರಡಿಸುವುದು, ಜಲಧಿಗೆ ಕೊಂಡೊಯ್ಯುವುದು, ದೇವರ ಅಲಂಕಾರ ಮಾಡುವುದು ಇಂಥ ಹೊತ್ತಿನಲ್ಲಿ ಹಾಡುವ ಪದಗಳನ್ನೆಲ್ಲ ಸಿರಿಯಜ್ಜಿಗೆ ಆಕೆಯ ತಾಯಿಯೇ ಕಲಿಸಿದ್ದು. ಗಂಡನ ಮನೆಗೆ ಬಂದ ಮೇಲೆ ಅತ್ತೆ ಕರಿ ಸಿರಿಯಜ್ಜಿ ಕೊಂಡದ ಕಾಟವ್ವನ ಹಾಡು, ಸಿರಿಯಣ್ಣ, ಚಿತ್ರದೇವರು, ಜುಂಜಪ್ಪ, ಗೊಲ್ಲರ ಲಗ್ನದಲ್ಲಿ ಹೇಳುವ ಪದಗಳನ್ನು ಕಲಿಸಿಕೊಟ್ಟಳು, ಗೊಲ್ಲರ ವಿವಾಹ ಸಂದರ್ಭದಲ್ಲಿ ಸಿರಿಯಜ್ಜಿ ಆರಂಭದಿಂದ ಅಂತ್ಯದವರೆಗೂ ಹಾಡುವ ತ್ರಿಪದಿಗಳೇ ಸುಮಾರು ಒಂದು ಸಾವಿರ ಸಂಖ್ಯೆಯನ್ನು ದಾಟುತ್ತದೆ. ಗೊಲ್ಲರ ಹೆಣ್ಣು ಮಕ್ಕಳು ಮೈನೆರೆದಾಗ ಸೂತಕ ಕಳೆದು ಗುಡಿಗೆ ಹೋಗಿ ಅಲ್ಲಿಂದ ಕೈಯ್ಯಲ್ಲಿ ಜ್ಯೋತಿ ಹಿಡಿಸಿಕೊಂಡು ಮನೆ ತುಂಬಿಸಿ ಕೊಳ್ಳುವವರೆಗೆ ಹಾಡುವುದೇ ಸುಮಾರು ನೂರಾರು ತ್ರಿಪದಿಗಳಾಗುತ್ತವೆ. ಹೀಗಾಗಿ ಬೆಳಗೆರೆ ಗೊಲ್ಲರಹಟ್ಟಿಗಳ ಸುತ್ತಮುತ್ತ ಸಿರಿಯಜ್ಜಿ ಬರುವುದು ತಡವಾದರೆ ಮದುವೆ ಚಪ್ಪರದಡಿ ಕಳೆಯಿರುವುದಿಲ್ಲ. ಸೋಬಾನೆ ಹಾಡುಗಳು ಅಲ್ಲಿ ಕೆಳಿ ಬರುವುದಿಲ್ಲ. ಸಿರಿಯಜ್ಜಿ ಹಾಡುವ ಜುಂಜಪ್ಪ, ನಿಂಗಣ್ಣ ಸೆರೆ ಹೋದ ಆಕೆ ಹಾಡುವ ಕಥಾನಕಗಳಲ್ಲೇ ಅತ್ಯಂತ ದೀರ್ಘವಾದವು. ಗಮನಿಸಬೇಕಾದ ಮತ್ತೊಂದು ಮುಖ್ಯ ಸಂಗತಿಯೆಂದರೆ ಸಿರಿಯಜ್ಜಿ ಮನರಂಜನೆಯ ಗಾಯಕಿಯಲ್ಲ. ಈ ಹೊತ್ತು ಜನಪದ ಎಂದರೆ ಅದರಲ್ಲಿ ಮನರಂಜನೆಯ ಪಾಲು ಹೆಚ್ಚು ಸೇರಿಕೊಂಡಿದ್ದು ಕುಣಿಯುವುದು, ಹಾಡು ಎಂದರೆ ವಾದ್ಯ ಸಾಧನಗಳ ಜತೆಗೆ ನಾನಾ ರಾಗಗಳಲ್ಲಿ ಹಾಡುವುದು ಎಂಬ ನಿರೀಕ್ಷೆಯಿದೆ. ಧಾರವಾಡದ ಬ್ಯಾಹಟ್ಟಿಯ ಫಕೀರವ್ವ ಗುಡಿಸಾಗರರಂಥ ಜನಪದ ಗಾಯಕಿಯರು ಜನಪದ ಗೀತೆ ಎಂದರೆ ಅದನ್ನೊಂದು ಮನರಂಜನೆ ಎಂದು ತಿಳಿದೇ ಹಾಡುತ್ತಿದ್ದುದುಂಟು. ಆದರೆ ಸಿರಿಯಜ್ಜಿಯ ಹಾಡುಗಾರಿಕೆಗೆ ಯಾವ ವಾದ್ಯ ಸಾಧನ, ರಾಗ ವೈವಿಧ್ಯತೆ ಮತ್ತು ಹೆಜ್ಜೆಗಳ ಹಿಮ್ಮೇಳವಿಲ್ಲ. ಜತೆಗೆ ಸಿರಿಯಜ್ಜಿಗೆ ಮಾತಿನ ಜಾಣತನವೂ ಇಲ್ಲ. ಆದರೆ ಆಕೆ ಹಾಡುವ ಎಲ್ಲ ಗೀತೆಗಳೂ ಕಡಿಮೆ ಎಂದರೆ ನೂರು ತ್ರಿಪದಿಗಳನ್ನಾದರೂ ದಾಟುತ್ತವೆ. ಅಂಥ ಕಥನಗಳನ್ನು ಹಾಡಲು ಆಕೆ ಪರಂಪರೆಯಿಂದ ಯಾವ ಕ್ರಮ ಬಂದಿದೆಯೋ ಅದನ್ನು ಅನುಸರಿಸುತ್ತಾಳೆ. ಅಂದರೆ ಹಿಮ್ಮೆಳ ಮುಮ್ಮೇಳದಲ್ಲಿ ಹಾಡುತ್ತಾಳೆ. ಹಾಡುಗಾರಿಕೆಯಲ್ಲಿ ಸಿರಿಯಜ್ಜಿ ಮುಮ್ಮೇಳದಲ್ಲಿರುತ್ತಾಳೆ. ತ್ರಿಪದಿಯ ಮೊದಲೆರಡು ಸಾಲನ್ನು ಹಾಡಿದರೆ ಅದನ್ನು ಹಿಮ್ಮೇಳದವರು ಅನುಸರಿಸುತ್ತಾರೆ. ನಂತರ ಎರಡು ಮೂರನೆಯ ಸಾಲನ್ನು ಹಾಡಲು, ಹಿಮ್ಮೇಳದವರು ಅದನ್ನು ಪುನರಾವರ್ತಿಸುತ್ತಾರೆ. ಹೀಗೆ ಕಲಿಸುವುದು, ಕಲಿಯುವುದರ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಇವಿಷ್ಟುಬಿಟ್ಟರೆ ಸಿರಿಯಜ್ಜಿಯ ಹಾಡುಗಾರಿಕೆಯಲ್ಲಿ ಬೇರಾವ ಮನರಂಜನೆಯೂ ಇರುವುದಿಲ್ಲ. ಆದರೆ ಆಕೆಯ ಕಥನ ಗೀತೆಗಳು ಜನಪದ ಸಂಸ್ಕೃತಿಯ ಅನೇಕ ಮುಖಗಳನ್ನು ಒಳಗೊಂಡು ಅವು ವಿದ್ವಾಂಸರ ವಿಶ್ಲೇಷಣೆಗೆ ವ್ಯಾಖ್ಯಾನಕ್ಕೆ ಅನುವಾಗಿರುವಂತೆ ಕೇಳಿ ಬರುತ್ತವೆ. ಹೀಗಾಗಿ ಸಿರಿಯಜ್ಜಿಯ ಜನಪದ ಗೀತೆಗಳು ಎಂದರೆ ಅತ್ಯಂತ ತಾಳ್ಮೆಯ ಕೇಳುವಿಕೆ, ವ್ಯಾಖ್ಯಾನಕ್ಕೆ, ವಿಶ್ಲೇಷಣೆಗೆ ಇರುವಂಥದ್ದು ಎಂದು ಜನಪದ ವಿದ್ಯಾಂಸರು ಪರಿಭಾವಿಸಬೇಕು.

ಸೋಬಾನೆ ಪದಗಳು

ಕರ್ನಾಟಕದಾದ್ಯಂತ ಜನಪದರು ಮೊದಲು ಹಾಡಿಕೊಳ್ಳುವ ತ್ರಿಪದಿಗಳೆಂದರೆ ತಂತಮ್ಮ ಗ್ರಾಮದೇವತೆಗಳನ್ನು ಕುರಿತು. ನಂಬಿಕೆಗಳೇ ಮುಖ್ಯವೆನಿಸುವ ಜನಪದ ಪರಂಪರೆಯಲ್ಲಿ ದೇವರೇ ಮೊದಲು. ಎರಡನೆಯದಾಗಿ ಜನಪದರು ಹಾಡಿಕೊಳ್ಳುವ ಗೀತೆಗಳೆಂದರೆ ಭೂಮಿ ಸಂಬಂಧದ ಆಚರಣೆಯವು. ಉತ್ತರ ಕರ್ನಾಟಕದಲ್ಲಿ ಹಂತಿ ಪದಗಳಿಂದ ಹಿಡಿದು ದನಕರುಗಳ ಅಲಂಕಾರದವರೆಗೆ ಹಾಡುಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ ಸುಪ್ರಸಿದ್ಧವಾದ ಗೋವಿನ ಹಾಡನ್ನೇ ಸಂಕ್ರಾಂತಿಯ ದಿನ ಹಾಡಿಕೊಳ್ಳುವುದುಂಟು. ಹಾಗೆಯೇ ಭೂಮಿ ಸಂಬಂಧದ ಗೀತೆಗಳೂ ವ್ಯಾಪಕವಾಗಿವೆ. ನಂಬಿಕೆಯಾಧರಿಸಿದ ಗ್ರಾಮದೇವತೆ ಮತ್ತು ಭೂಮಿಯ ವ್ಯವಸಾಯ ಕುರಿತು ಇರುವ ಜನಪದ ಹಾಡುಗಳನ್ನು ಬಿಟ್ಟರೆ ಜನಪದರಲ್ಲಿ ಹೆಚ್ಚು ಹಾಡಿಕೊಳ್ಳುವಂಥವು ಮದುವೆಯ ಸಂಬಂಧದ ಗೀತೆಗಳು. ವಿವಾಹದಂಥ ಸಂತಸಮಯ, ಮಂಗಳಕರ ಸಂದರ್ಭದಲ್ಲಿ ಹಾಡುವ ಪದಗಳನ್ನು ಗ್ರಾಮೀಣರು ಸೋಬಾನೆ ಪದ ಎಂದು ಕರೆದುಕೊಂಡಿರುತ್ತಾರೆ. ಇದು ‘ಶೋಭನ’ ಎಂಬ ಪದದಿಂದ ಬಂದದ್ದು. ಈ ಪದಕ್ಕೆ ಅರ್ಥ ಕೋಶಗಳಲ್ಲಿ ಶುಭ, ಮಂಗಳಕರ, ಹೊಳೆಯುವ, ಪ್ರಕಾಶಮಾನವಾದ, ನಿಷೇಕ, ಪ್ರಸ್ತ ಎಂಬೆಲ್ಲ ಅರ್ಥಗಳಿವೆ. ಅನೇಕಾನೇಕ ಸಂಸ್ಕೃತ ಪದಗಳು ಕನ್ನಡದಲ್ಲಿ ಶುದ್ಧ ಕನ್ನಡದವೇ ಎಂಬಂತೆ ಅವು ಗ್ರಾಮ್ಯ ಸ್ವರೂಪ ಪಡೆದುಕೊಂಡುಬಿಟ್ಟಿರುತ್ತವೆ. ಈ ಸಂಬಂಧ ಸಿರಿಯಜ್ಜಿ ಹಾಡಿರುವ ಒಂದು ತ್ರಿಪದಿಯಲ್ಲಿಯೇ ಉಚ್ಫ್ರಾಯ ಎಂಬ ಪದ ಪ್ರಯೋಗವಿದೆ. ಹನುಮಂತರಯ ಉಚ್ಫ್ರಾಯವನ್ನೇರಿ ಬರುತ್ತಾನೆ ಎನ್ನುವಲ್ಲಿ ಸಿರಿಯಜ್ಜಿಯೇ ಆ ಪದಕ್ಕೆ ಕುದುರೆ ಎಂಬ ಅರ್ಥ ಹೇಳುತ್ತಾಳೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಆಂಜನೇಯನನ್ನು ಕುದುರೆಯ ಮೇಲೂ, ಚಲುವರಾಯ ಮತ್ತು ಕೃಷ್ಣನ ವಿಗ್ರಹಗಳನ್ನು ಗರುಡನ ವಿಗ್ರಹದ ಮೇಲೂ ಕೂರಿಸಿ ಮೆರವಣಿಗೆ ಹೊರಡಿಸುವುದುಂಟು. ಹಾಗೆ ಆಂಜನೇಯನನ್ನು ಉಚ್ಫ್ರಾಯವೆಂಬ ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಹೊರಟರು ಎಂದರೆ ಅದರ ಮೂಲ ‘ಉಚ್ಛೈಶ್ರವಸ್’ ಎಂಬ ಕುದುರೆ, ಇಂದ್ರನ ಕುದುರೆಯ ಹೆಸರು. ಆಂಜನೇಯನು ಇಂದ್ರನ ಕುದುರೆಯ ಮೇಲೆ ಊರಾಡಲು ಬರುವುದರಿಂದ ಆತನನ್ನು ಉಚ್ಚೂರಾಯ ಎಂತಲೂ ಕರೆಯುವುದಿದೆ. ಈ ಅರ್ಥದಲ್ಲಿ ಶೋಭನ ಸಂಸ್ಕೃತ ಪದ ಗ್ರಾಮೀಣ ವಾತಾವರಣದಲ್ಲಿ ಸೋಬಾನೆ ಆಗಿದೆ. ಶಿಷ್ಟ ಸಂಸ್ಕೃತಿ, ಜನಪದ ಪರಂಪರೆ ಅವು ಸ್ವರೂಪದಲ್ಲಿ ಬೇರೆ ಬೇರೆ ಇದ್ದರೂ ಅವುಗಳು ತಮ್ಮ ಬೇರಿನ ಆಳದಲ್ಲೆಲ್ಲೋ ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ.

ಸೋಬಾನೆ ಪದಗಳ ಮತ್ತು ಅವುಗಳ ಹಿನ್ನೆಲೆಯ ಆಚರಣೆಗಳು ಮೇಲ್ವರ್ಗದ ವಿವಾಹ ಕ್ರಮವನ್ನೇ ಅನುಸರಿಸಿದ್ದರೂ, ಅಲ್ಲಲ್ಲಿ ಎರಡೂ ಸಮೂಹಗಳ ಆಚರಣೆಗಳು ಬೇರೆ ಬೇರೆಯೇ ಇರುತ್ತವೆ. ಈ ಸಂಕಲನದಲ್ಲಿ ಕೊಡಲಾಗಿರುವಷ್ಟು ಸಿರಿಯಜ್ಜಿಯ ಸೋಬಾನೆ ಪದಗಳನ್ನು ಬಹುಶಃ ಕರ್ನಾಟಕದ ಬೇರಾವ ಗಾಯಕಿಯೂ ಹಾಡಿರಲಾರಳು. ಸಿರಿಯಜ್ಜಿ ಇದಿಷ್ಟು ಸಮಗ್ರವಾದ ತ್ರಿಪದಿಗಳನ್ನು ತಮ್ಮ ಕಾಡುಗೊಲ್ಲರ ಬುಡಕಟ್ಟು ಸಮುದಾಯ ಮದುವೆಯ ಸಂದರ್ಭದಲ್ಲಿ ಹಾಡುವಂಥ ಸೋಬಾನೆ ಪದಗಳು ಎಂದೇ ಹೆಳುತ್ತಾಳೆ. ಆದರೆ ಈ ತ್ರಿಪದಿಗಳು ಬುಡಕಟ್ಟು ಸಮೂಹದ ನಡುವೆ ಮಾತ್ರ ಹಾಡುವಂಥದ್ದಾಗಿರದೆ ಗ್ರಾಮೀಣ ಮದುವೆಯ ವೇಳೆಯೂ ಇದನ್ನೆ ಹಾಡುತ್ತಾರೆ. ಹಾಗೆ ನೋಡಿದರೆ ಸಿರಿಯಜ್ಜಿ ಗ್ರಾಮೀಣ ವಾತಾವರಣದ ಮದುವೆಯ ಹಾಡುಗಳನ್ನು ಕಲಿತು ಕೊಂಡು ತಮ್ಮ ಬುಡಕಟ್ಟಿನ ಲಗ್ನದ ವೇಳೆ ಹಾಡುತ್ತಾಳೆಂದೇ ಇಲ್ಲಿಯ ತ್ರಿಪದಿಗಳ ರಚನೆಯನ್ನು ನೋಡಿದರೆ ಭಾಸವಾಗುತ್ತದೆ. ಯಾಕೆಂದರತೆ ಬುಡಕಟ್ಟು ಸಮೂಹದ ಮದುವೆಗಳು ತುಂಬ ಸರಳ. ಅಲ್ಲಿ ಪುರೋಹಿತರಾಗಲಿ, ಬಾಜಾಭಜಂತ್ರಿಗಳಾಗಲಿ, ಚಪ್ಪರ ಛತ್ರಗಳಾಗಲಿ ಇರುವುದಿಲ್ಲ. ಆದಿವಾಸಿಗಳಲ್ಲಿ ಬುಡಕಟ್ಟು ಹಿರಿಯನೇ ಮದುವೆಗೆ ಅಪ್ಪಣೆ ಕೊಡುವ, ಮದುವೆ ಮಾಡಿಸುವ ಪುರೋಹಿತ. ಮತ್ತು ಹೆಣ್ಣಿಗೆ ತೆರಕೊಟ್ಟು ತರಬೇಕು. ಬುಡಕಟ್ಟು ಸಮೂಹದಲ್ಲಿ ಸ್ತ್ರೀ ಸ್ವಾತಂತ್ಯ್ರ ಹೆಚ್ಚು. ಆಕೆಯನ್ನು ತುಂಬ ಗೌರವದಿಂದಲೇ ಆ ವಿರುತ್ತದೆ. ಅಲ್ಲಿ ಶ್ರೀಮಂತಿಕೆ ಮತ್ತು ಬಡತನದ ಪರಿಕಲ್ಪನೆಗಳೂ ಇರುವುದಿಲ್ಲ. ಇದೇನೇ ಇರಲಿ ಗ್ರಾಮ್ಯ ವಾತಾವರಣದ ಮದುವೆಯ ಲಕ್ಷಣಗಳು ಸಿರಿಯಜ್ಜಿ ಹಾಡಿರುವ ಸೋಬಾನೆ ಪದಗಳಲ್ಲಿವೆ. ಒಂದೆರಡೂ ತ್ರಿಪದಿಗಳನ್ನು ಉದಾಹರಣೆಗಾಗಿ ಗಮನಿಸಬಹುದು. ಈ ಪದ್ಯಗಳಲ್ಲಿ ಪುರೋಹಿತನ ಪ್ರಸ್ತಾಪವೂ ಇದೆ :

ಅಣ್ಣಾ ಆರುವರಣ್ಣ ಕೆನ್ನೆ ಮ್ಯಾಗಳ ಜುಟ್ಟು
ಅನ್ನೊಂದೆಳೆಯಾ ಜನಿವಾರ |
ಅನ್ನೊಂದೆಳೆಯಾ ಜನಿವಾರ | ಆರೋರಣ್ಣ
ಚಂದವಾಗಿ ಆಕೋ ಬ್ರಮ್ಮಗಂಟ ||

ಅಪ್ಪ ಆರೋರಣ್ಣ ನೆತ್ತಿಮ್ಯಾಗಳ ಜುಟ್ಟು
ಇಪ್ಪತ್ತೊಂದೆಳೆಯಾ ಜನಿವಾರ |
ಇಪ್ಪತ್ತೊಂದೆಳೆಯಾ ಜನಿವಾರ | ಆರೋರಣ್ಣ
ವಪ್ಪವಾಗಿ ಆಕೋ ಬ್ರಮ್ಮಗಂಟು ||

ವಜ್ಜುರದ ಗಿಂಡಿ ತಿದ್ದುತಲಿ ಅಸನಾದಾವೆ
ಮುದ್ದು ಮೋವನ್ನರು ನೆರೆತಾರೆ |
ಮುದ್ದು ಮೋವನ್ನರು ನೆರೆತಾರೆ | ಗಂಡಿನೋರು
ಗೆದ್ದೆವೆಂದು ದಾರೆಯೆರುದಾರೆ ||

ಬುಡಕಟ್ಟು ವಿವಾಹ ಸಂದರ್ಭಗಳಲ್ಲಿ ಗಂಡಿನವರು ಹೆಣ್ಣನ್ನೇ ಹುಡುಕಿಕೊಂಡು ತಿರುಗಬೇಕು. ಆದರೆ ಪುರುಷ ಪ್ರಧಾನ ಸಮೂಹದ ವಾಕ್ಯಗಳು, ಪುರೋಹಿತನ ಪ್ರವೇಶ ಸಿರಿಯಜ್ಜಿ ಹಾಡಿರುವ ತ್ರಿಪದಿಗಳಲ್ಲಿವೆ. ಹೀಗಾಗಿ ಸಿರಿಯಜ್ಜಿ ಹಾಡಿರುವ ಅನೇಕ ಗೀತೆಗಳು, ಕಥನಗೀತೆಗಳು ಗ್ರಾಮದಿಂದ ಬುಡಕಟ್ಟು ಸಮೂಹವನ್ನು ಪ್ರವೇಶಿಸಿರುವಂತೆ ತೊರುತ್ತವೆ. ಸಿರಿಯಜ್ಜಿ ತನ್ನ ಸ್ವಂತ ಆಸಕ್ತಿಯ ಮೇಲೆ ಅನೇಕರಿಂದ ಹಾಡು ಕಲಿತ ಕಾರಣ ಬುಡಕಟ್ಟು ಸಮೂಹದ್ದಲ್ಲದ ದೇವರು, ವೀರರು ಮತ್ತು ಸತಿಯರ ಕಥಾನಕಗಳು ಆಕೆಯ ನೆನಪಿನಲ್ಲಿವೆ. ಇದೇನೇ ಇದ್ದರೂ ಸಿರಿಯಜ್ಜಿ ಹಾಡಿರುವ ಸೋಬಾನೆ ಪದಗಳು ಇದೀಗಲೂ ಕಾಡುಗೊಲ್ಲರ ಮದುವೆಗಳಲ್ಲಿ ಮೂರು ದಿನವೂ ಹಾಡಿಕೊಳ್ಳಲ್ಪಡುತ್ತವೆ. ಆಶ್ಚರ್ಯದ ವಿಷಯವೆಂದರೆ ಕಾಡುಗೊಲ್ಲರ ಮದುವೆಯ ಕೆಲವು ಆಚರಣೆ ಕುರಿತಂತೆಯೂ ಪದ್ಯಗಳಿವೆ. ಆದರೆ ಶಿಷ್ಟ ವರ್ಗದಲ್ಲಿರುವಂತೆ, ವರ ವಿದ್ಯಾಭ್ಯಾಸದ ಮುಂದುವರಿಕೆಗಾಗಿ ಕಾಶಿಗೆ ಹೋಗವಂತೆ ಅಭಿನಯಿಸುವ ಅಚರಣೆ ಸಿರಿಯಜ್ಜಿ ಹಾಡಿರುವ ಪದ್ಯಗಳಲ್ಲಿಲ್ಲ. ವಿದ್ಯೆ ಕಲಿಯುವ ಅವಕಾಶವೇ ಬುಡಕಟ್ಟು ಮತ್ತು ಗ್ರಾಮೀಣ ವಾತಾವರಣದಲ್ಲಿ ಇಲ್ಲದಿರುವಾಗ್ಗೆ ಆ ಬಗೆಯ ಆಚರಣೆ ಈ ಸೋಬಾನೆ ಪದಗಳಲ್ಲಿ ಬರುವುದು ಸಾಧ್ಯವೂ ಇಲ್ಲ. ಇಲ್ಲಿ ಆಚರಣೆ, ಅಭಿನಯ ಅನ್ನುವ ಪದಗಳನ್ನು ಬಳಸಿದ ಕಾರಣವೆಂದರೆ ಅದು ಶಿಷ್ಟ ಅಥವಾ ಗ್ರಾಮೀಣ ವಾತಾವರಣದ ಮದುವೆಯೇ ಇರಲಿ, ಇಡೀ ಮದುವೆ ಬದುಕಿನ ಅಭಿನಯವಾಗಿರುತ್ತದೆ.

ಶಿಷ್ಟ ವರ್ಗದಲ್ಲಿ ಮದುವೆಯ ಆರಂಭದ ಆಚರಣೆ ಕುತೂಹಲಕರವಾದುದು. ತನ್ನ ವಿದ್ಯಾಭ್ಯಾಸ ಮುಗಿಸಿದಂಥ ವರ ಹೆಚ್ಚಿನ ವಿದ್ಯೆಗಾಗಿ ಕಾಶಿಗೆ ಹೋಗುತ್ತಿರುತ್ತಾನೆ. ಆತನನ್ನು ಊರ ಹೊರಗೆ ದೇವಾಲಯದಲ್ಲೋ ಮಂಟಪದಲ್ಲೋ ಮಾವನೆನಿಸುವವನು ಭೇಟಿಯಾಗಿ, ಮಾಡಿರುವ ವಿದ್ಯಾಭ್ಯಾಸ ಸಾಕೆಂದೂ, ತನ್ನ ಮಗಳನ್ನು ಮದುವೆಯಾಗಿ ಸಂಸಾರ ನಿರ್ವಹಿಸಬೇಕೆಂದೂ ಕೇಳಿಕೊಳ್ಳುತ್ತಾನೆ. ಆ ವಿನಂತಿಗೆ ಮಣಿದು ವರ ಮಾವನ ಮನೆಯ ಕಡೆ ಬರುತ್ತಾನೆ. ಬಂದವನ್ನು ಮನೆಯಮುಂದೆ ನಿಂತು, ಅದೂ ಒಂದು ಅಡ್ಡತೆರೆಯ ಈಚೆನಿಂತು ಕೆಳಗೆ ಹಿಡಿದ ಕನ್ನಡಿಯಲ್ಲೋ, ಎಣ್ಣೆಯ ಬಟ್ಟಲಲ್ಲೋ ಹೆಣ್ಣನ್ನು ನೋಡಿ ಒಪ್ಪಿಕೊಂಡಂತೆ ಅಭಿನಯಿಸುತ್ತಾನೆ. ಹೀಗೆ ಒಪ್ಪಿಕೊಂಡ ನಂತರ ಅಲ್ಲಿ ಗಂಡು ಹೆಣ್ಣು ವಿನಿಮಯ ಮಾಡಿಕೊಳ್ಳುವ ಮಾಲೆ ಮುಖ್ಯವಾಗಿರುತ್ತದೆ. ಆ ಮಾಲೆ ಅಂಗಡಿಯಿಂದ ತಂದದ್ದಾಗಿರುವುದಿಲ್ಲ. ಊರ ಪೂಜಾರಿ, ಪುರೋಹಿತ ಕಟ್ಟಿಕೊಟ್ಟದ್ದು. ಅದು ಮದುವೆಯ ಆಚರಣೆಯಲ್ಲಿ ಪರಮ ಪವಿತ್ರವೆನಿಸುವ ಸಂಬಂಧಮಾಲೆ. ಅಂಥದ್ದನ್ನು ಸೂಡಿಕೊಂಡ ನಂತರವೇ ಗಂಡು, ವಧುವಿನ ಮನೆಯನ್ನು ಪ್ರವೇಶಿಸುವುದು. ಇಲ್ಲಿಂದಲೇ ಮದುವೆಯ ಉಳಿದ ವಿಧಿಗಳು ನೆರವೇರುವುದು.

ಆಧುನಿಕ ಸಂದರ್ಭದಲ್ಲಿ ಮದುವೆ ತಾಳಿ ಕಟ್ಟುವ, ಧಾರೆ ಎರೆಯುವ ಆಚರಣೆಗೆ ಕೊನೆಗೊಂಡರೆ, ಕಳೆದ ದಶಕಗಳಲ್ಲಿ ಮಾಂಗಲ್ಯಧಾರಣೆಯಾದ ನಂತರ ಬದುಕಿನ ಕ್ರಮವನ್ನು ಅನುಸರಿಸುವ ಆಚರಣೆಗಳು ನೆರವೇರುತ್ತಿದ್ದವು. ಅದರಲ್ಲಿ ಆಟದ ಕ್ರಿಯೆಯೂ ಇರುತ್ತಿತ್ತು. ಆಟ ಕಾಮವನ್ನು ಪ್ರಚೋದಿಸುತ್ತದೆಂಬುದು ಆ ಆಚರಣೆಯ ಆಂತರ್ಯದ ಸಂಗತಿ. ಅಲ್ಲಿಂದ ವ್ಯವಸಾಯ ಜೀವನದ ಕೆಲವು ಆಚರಣೆಗಳು, ಮಕ್ಕಳನ್ನು ಪಡೆಯುವ, ತೂಗುವ, ಆಡಿಸುವ ವಿಧಿ ವಿಧಾನಗಳವರೆಗೂ ವಿವಾಹಚರಣೆಗಳು ಮುಂದುವರೆಯುತ್ತವೆ.

ಸಿರಿಯಜ್ಜಿ ಹಾಡಿದ ಸೋಬಾನೆ ಪದಗಳಲ್ಲಿ ಶಿಷ್ಟ ಸಂಸ್ಕೃತಿಯ ಮದುವೆಯ ಎಲ್ಲ ವಿಧಿ ವಿಧಾನಗಳೂ ಇಲ್ಲ. ಕಾಡುಗೊಲ್ಲರ ಮದುವೆಗಳಲ್ಲಿ ಹಸೆ ಬರೆಯುವ ಸಂಪ್ರದಾಯ ಬಹುಮುಖ್ಯವಾದುದು. ಗೊಲ್ಲರು ಊರ ಜನಸಮೂಹವನ್ನು ಮೈಲಿಗೆಯವರು ಎಂತಲೇ ಭಾವಿಸುತ್ತಿದ್ದುದರಿಂದ ತಮ್ಮ ಹಟ್ಟಿಯ ಗುಡಿಸಲ ಮುಂದೆಯೇ ಮದುವೆ ನಡೆಯಬೇಕಿತ್ತು. ಬುಡಕಟ್ಟು ಸಮೂಹದಲ್ಲಿ ಮನೆ ಕಟ್ಟುವುದು ಕೂಡ ನಿಷೇಧವೇ. ಒಂದೊಂದು ಗುಡಿಸಲೂ ವೃತ್ತಾಕಾರಕ್ಕೆ ಅದು ಇಷ್ಟೇ ಅಳತೆಯಲ್ಲಿರಬೇಕೆಂಬ ನಿಯಮವಿರುತ್ತದೆ. ಬಾಗಿಲೂ ಸಹ ದೊಡ್ಡದಿರಬಾರದು. ಸಂಪೂರ್ಣ ಬೆನ್ನು ಬಗ್ಗಿಸಿಯೇ ಒಳಕ್ಕೆ ನುಗ್ಗು ವಂತಿರಬೇಕು. ಜಾತಿ ಮತ್ತು ಹಲವು ಹತ್ತು ದೇವರುಗಳ ಕಲ್ಪನೆ ಇಲ್ಲದಿದ್ದರೂ ಬುಡ ಕಟ್ಟು ನಿಯಮಗಳು ಕಟ್ಟುನಿಟ್ಟಾದುವೇ ಆಗಿರುತ್ತವೆ. ಹೀಗಾಗಿ ಈ ಬುಡಕಟ್ಟು ಸಮೂಹ ಆಧುನಿಕ ನಾಗರೀಕ ಸಂಗತಿಗಳಾನ್ನಾಗಲಿ, ಶಿಷ್ಟ ಪರಂಪರೆಯ ಯಾವುದೇ ಸಂಪ್ರದಾಯಗಳನ್ನಾಗಲಿ ನಂಬದೆ ತಮ್ಮದೇ ಆಚರಣೆಗಳನ್ನು ಜಾರಿಗೆ ತಂದುಕೊಂಡಿರುತ್ತಾರೆ. ಇದರಿಂದ ಬುಡಕಟ್ಟು ವಿವಾಹಗಳಲ್ಲಿ ಸೋಬಾನೆ ಪದಗಳನ್ನು ಹಾಡುವಲ್ಲಿ ಹೆಣ್ಣ ಮಕ್ಕಳೇ ಮುಖ್ಯವಾದರೆ, ಮದುವೆ ಮಾಡಿಸುವವನು ಹಟ್ಟಿಯ ಮುಖ್ಯಸ್ಥನೇ. ಎಲೆ ಅಡಿಕೆಯ ವೀಳ್ಯ ಮದುವೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಹೀಗೆಯೇ ಹೆಣ್ಣು ಗಂಡು ನಿಲ್ಲುವ, ಕೂರುವ ಸ್ಥಳದಲ್ಲಿ ಅಕ್ಕಿಹಿಟ್ಟಿನ ಹಸೆ ಬರೆಯುವುದು ಕೂಡ ಒಂದು ಪ್ರಮುಖ ಆಚರಣೆ.

ಚಿತ್ರದುರ್ಗ ಸೀಮೆಯ ಕಾಡುಗೊಲ್ಲರು ಪಾರಂಪರಿಕವಾಗಿಯೇ ಕೆಲವು ವಿಶೇಷ ಗುಣ ಲಕ್ಷಣಗಳನ್ನು ಬೆಳೆಸಿಕೊಂಡಿರುತ್ತಾರೆ. ಮೂಲತಃ ಗೊಲ್ಲರು ಬೇಟೆಯ ಸಂಸ್ಕೃತಿ ಯವರಾಗಿರುವುದಿಲ್ಲ. ಪಶುಪಾಲಕರಾಗಿಯೇ ಬಂದವರು. ಆದರೆ ಮ್ಯಾಸಬೇಡ ಬುಡಕಟ್ಟು ಸಮೂಹ ಅಲ್ಲಲ್ಲಿ ಪಾಳೆಯಗಾರಿಕೆ, ಪಶುಪಾಲನೆ ಮಾಡಿಕೊಂಡು ಬಂದಿದ್ದರೆ ಅವರ ಜತೆಗೆ ಅವರು ಬೇಟೆಯನ್ನೂ ಒಂದು ಉಪ ಕಸುಬನ್ನಾಗಿ ಮಾಡಿಕೊಂಡಿದ್ದವರಂತೆ ಕಾಣುತ್ತಾರೆ. ಇದರಿಂದ ಗೊಲ್ಲರು ಬೇಡರು ಪರಸ್ಪರ ಅಣ್ಣತಮ್ಮಂದಿರೆಂದು ಕರೆದು ಕೊಂಡರೂ ಆ ಪ್ರದೇಶದಲ್ಲಿ ದೊರಕುವ ಅನೇಕ ಜನಪದ ಕಥನಗಳಲ್ಲಿ ಎರಡೂ ಸಮೂಹಗಳ ನಡುವೆ ದನಕರು, ಕುರಿ ಮತ್ತು ದೇವರ ಸಂಬಂಧ ವ್ಯಾಜ್ಯ, ಗೊಂದಲಗಳು ನಡೆದದ್ದು ಕಂಡು ಬರುತ್ತದೆ. ಅದರಲ್ಲಿ ಬೇಟೆಗಾರರು, ಪಾಳೆಯಗಾರರೂ ಆದ ಮ್ಯಾಸಬೇಡರೇ ಮೇಲುಗೈ ಸಾಧಿಸಿದ್ದುಂಟು. ಸೌಮ್ಯ ಬದುಕು ನಡೆಸಿಕೊಂಡು ಕೇವಲ ಪಶುಪಾಲನೆಯಲ್ಲೇ ಕಾಲ ಕಳೆದ ಗೊಲ್ಲರು ಅನೇಕ ಕಷ್ಟನಷ್ಟ ತೊಂದರೆಗಳಿಗೆ ಒಳಗಾದದ್ದೂ ವಿವರಿಸಲ್ಪಟ್ಟಿದೆ. ಇದಕ್ಕೊಂದು ಸಾಹಿತ್ಯಕ ಆಧಾರವನ್ನೇ ಕೊಡುವುದಾದರೆ ಕರ್ನಾಟಕದಾದ್ಯಂತ ಪ್ರಚಲಿತವಿರುವ ಗೋವಿನ ಕಥೆಯನ್ನೇ ಗಮನಿಸಬಹುದು. ಈ ಕಥನದ ಪುಣ್ಯಕೋಟಿ, ಕರು ಮತ್ತು ಗೊಲ್ಲನ ಪಾತ್ರಗಳಲ್ಲಿ ವ್ಯಕ್ತವಾಗುವ ಅತಿ ಸೌಮ್ಯ ಭಾವನೆ ಆಶ್ಚರ್ಯಗೊಳಿಸುವಂಥದ್ದು. ಇಲ್ಲಿ ಪ್ರಕಟವಾಗುವ ಮಾನವೀಯ ತುಡಿತ ಬಹುಶಃ ಬೇರಾವ ಕೃತಿಯಲ್ಲೂ ಕಾಣುವುದಿಲ್ಲ. ಅದೇ ಮ್ಯಾಸಬೇಡ ನಾಯಕರ ನಡುವೆ ಹಾಡಿಕೊಳ್ಳಲ್ಪಡುವ ಕಥನಗೀತೆಯೊಂದರಲ್ಲಿ ಗಾದ್ರಿಪಾಲನಾಯಕನ ತಮ್ಮಂದಿರಾದ ಚಿನ್ನಪಾಲನಾಯಕ, ದೊಡ್ಡ ಪಾಲನಾಯಕರು ಹುಲಿಯ ಜತೆ ಒಪ್ಪಂದ ಮಾಡಿಕೊಂಡಿದ್ದರೂ ಸಹ ಅದರ ಮರಿಗಳನ್ನು ಅರಿಯದೇ ಕೊಂದು ಬಿಡುತ್ತಾರೆ. ಹುಲಿ ಮತ್ತು ದನಕರುಗಳ ಪ್ರಸ್ತಾಪ ಬರುವ ಎರಡೂ ಜನಾಂಗಗಳ ನಡುವಣ ಕಥೆ ಬಹುಶಃ ಆಯಾ ಜನಸಮೂಹದ ಗುಣವನ್ನೆ ಪ್ರಚುರಪಡಿಸುತ್ತದೆ. ಹೀಗಾಗಿ ಕಾಡುಗೊಲ್ಲ ಸಮೂಹವು ಚಿತ್ರದುರ್ಗ ಪ್ರದೇಶದಲ್ಲಿ ಕಲೆ ಮತ್ತು ಸಾಹಿತ್ಯಪರಂಪರೆಯನ್ನು ಈ ಹೊತ್ತಿಗೂ ಉಳಿಸಿಕೊಂಡು ಬಂದಿರುತ್ತದೆ. ಅದರ ತುತ್ತತುದಿಯೇ ಸಿರಿಯಜ್ಜಿ. ಆಕೆ ಹಾಡಿರುವ ಒಂದು ಸಾವಿರದಷ್ಟು ಸೋಬಾನೆ ತ್ರಿಪದಿಗಳು ಮದುವೆಯ ಸಂಬಂಧದ ಮಂಗಳಕರ ಮಧುರ ಭಾವನೆಗಳನ್ನು ಸರಳ ಸುಂದರ ವಾಕ್ಯಗಳಲ್ಲಿ ವ್ಯಕ್ತಪಡಿಸುತ್ತದೆ.

ಪ್ರಕೃತಿ ಮತ್ತು ಬುಡಕಟ್ಟು

ಈ ಹಿಂದೆಯೇ ಗಮನಿಸಲಾದಂತೆ ಅನೇಕ ಬುಡಕಟ್ಟು ಸಂಪ್ರದಾಯಗಳನ್ನು ಇಂದಿಗೂ ಕಾಡುಗೊಲ್ಲರಲ್ಲಿ ಕಟ್ಟುನಿಟ್ಟಾಗಿಯೇ ಅನುಸರಿಸಿಕೊಂಡು ಬರಲಾಗುತ್ತಿದೆ. ಅದರಲ್ಲಿ ಒಂದು ವಿಚಿತ್ರ ಸಂಪ್ರದಾಯವೆಂದರೆ ಕಾಡುಗೊಲ್ಲ ಹೆಣ್ಣು ಮಕ್ಕಳು ಮೈನೆರೆದ ವೇಳೆಯಲ್ಲಿ ಆಕೆಯನ್ನು ಹಟ್ಟಿಯಿಂದ ಹೊರಗೆ ಹೊಸದಾಗಿ ಕಟ್ಟಿದ ಗುಡಿಸಲಲ್ಲಿ ಸೂತಕ ಕಳೆಯುವ ಹತ್ತು ಹನ್ನೆರಡೂ ದಿನಗಳವರೆಗೆ ಕೂರಿಸುವುದು. ಹೀಗೆಯೇ ಲಗ್ನವಾಗಿ ಮಕ್ಕಳನ್ನು ಪಡೆದ ಸಂದರ್ಭದಲ್ಲಿಯೂ ಮೈಲಿಗೆ ಕಳೆಯುವವರೆಗೆ ಹೆಂಗಸು ಮಗುವಿನೊಡನೆ ಹಟ್ಟಿಯಿಂದಾಚೆಯೇ ಇರಬೇಕು. ದುರ್ಬಲ ದೇಹ ಪ್ರಕೃತಿಯ ಹೆಣ್ಣು ಮಕ್ಕಳಿಂದ ಈ ಸಂಪ್ರದಾಯಾಚರಣೆ ನೆರವೇರಿಸುವುದುದ ಕಷ್ಟವೆನಿಸಿದರೂ ಇದು ಅತ್ಯಂತ ಪ್ರಾಚೀನ ಹಾಗೂ ಮಹತ್ವದ ಆಚರಣೆಯಿರುವಂತೆ ತೊರುತ್ತದೆ. ಪ್ರಕೃತಿಯನ್ನು ದೈವವೆಂದೂ, ತಮ್ಮನ್ನು ಪೊರೆಯುವ ಶಕ್ತಿಯೆಂದೂ ಪರಿಭಾವಿಸುವ ಬುಡಕಟ್ಟು ಸಮೂಹದವರು, ತಮ್ಮ ಗುಂಪಿಗೆ ಬಂದು ಸೇರುವ ಪ್ರತಿಯೊಂದು ಹೊಸ ಜೀವವೂ ಕೂಡ ಪ್ರಕೃತಿಯಿಂದಲೇ ದೊರೆತದ್ದು ಎಂದು ಬಾವಿಸುವ ಹಿನ್ನೆಲೆಯಲ್ಲಿ ಈ ಆಚರಣೆ ಬುಡಕಟ್ಟು ಸಮೂಹದಲ್ಲಿ ಮಾತ್ರವೇ ಜಾರಿಗೆ ಬಂದಂತೆ ಕಾಣುತ್ತದೆ. ಮಹಾಭಾರತದಲ್ಲಿ ದೂರ್ವಾಸ ಋಷಿ ಕೊಟ್ಟ ವರವನ್ನು ಪರೀಕ್ಷಿಸಲು ಕುಂತಿ ಗಂಗಾ ನದಿಯ ತೀರಕ್ಕೆ ಬಂದು ಸೂರ್ಯನನ್ನು ಧ್ಯಾನಿಸಿ ಕರ್ಣನನ್ನೂ, ವಾಯುವನ್ನು ಧ್ಯಾನಿಸಿ ಭೀಮನನ್ನೂ ಪಡೆಯುತ್ತಾಳೆ. ಮಹಾಭಾರತದ ಅನೇಕಾನೇಕ ಸಂಗತಿ, ಘಟನೆಗಳು ಬುಡಕಟ್ಟು ಸಮೂಹದ ಆಶಯಗಳನ್ನು ಸ್ಪಷ್ಟವಾಗಿ ಹೋಲುತ್ತವೆ. ಜತೆಗೆ ಕಾಡುಗೊಲ್ಲರು, ಮ್ಯಾಸಬೇಡರು ತಮ್ಮ ಕುಲ ಮೂಲದ ಬೆಡಗುಗಳನ್ನೆಲ್ಲ ಪ್ರಕೃತಿಯ ಅಂಗೋಪಾಂಗಗಳಿಂದಲೇ ನಿರ್ವಚಿಸಿಕೊಳ್ಳುತ್ತಾರೆ. ಹೂವು, ಪ್ರಾಣಿ, ಪಕ್ಷಿಗಳಿಂದ ತಮ್ಮ ಕುಲದ ಹೆಸರುಗಳನ್ನು ಕರೆದುಕೊಳ್ಳುವರು. ರಾಜವಂಶಗಳೂ ಸಹ ವೃಕ್ಷ, ಅಗ್ನಿ, ಜಲ, ಪ್ರಾಣಿ ಮೂಲದಿಂದಲೇ ತಮ್ಮ ವಂಶದ ಕಥೆಯನ್ನು ಆರಂಭಿಸಿ ಕೊಳ್ಳುತ್ತವೆ. ಹೊಯ್ಸಳ ವಂಶದ ಹುಟ್ಟು ಹುಲಿ ಅಥವಾ ಚಿರತೆಯಿಂದ ಆಗಿದ್ದರೆ, ಗಂಗರ ಹುಟ್ಟು ನೀರಿನಿಂದಾಗಿದೆ. ಕದಂಬರ ಮೂಲ ನಿರ್ವಚನೆ, ಕದಂಬ ವೃಕ್ಷ.

ಪ್ರತಿಯೊಂದು ಮಹತ್ವದ ಘಟನೆಯನ್ನೂ ಪ್ರಕೃತಿಯಿಂದಲೇ ಆವಾಹಿಸುವ ಕಾಡುಗೊಲ್ಲ ಸಮೂಹದವರಿಗೆ ಕನ್ಯಾವಸ್ಥೆಯನ್ನು ಮುಟ್ಟಿದ ಹೆಣ್ಣು ಮಗಳು ಅಥವಾ ಆಗತಾನೆ ಹುಟ್ಟಿದ ಮಗು ಅವರು ಆಗಮಿಸುವುದು ಪ್ರಕೃತಿಯಿಂದಲೇ. ಹೊಸ ಸೃಷ್ಟಿ ಯಾವಾಗಲೂ ಸಾಮಾನ್ಯ ಮನುಷ್ಯನಿಂದ ಆಗುವಂಥದ್ದಲ್ಲ ಎಂಬುದು ಬುಡಕಟ್ಟಿನ ಕಲ್ಪನೆಯಿರಬಹುದು. ಇದರ ಜತೆಗೆ ಯಾವುದೇ ಬುಡಕಟ್ಟು ಸಮೂಹದವರು ತಾವೊಂದು ಹಬ್ಬ ಜಾತ್ರೆ ನೆರವೇರಿಸಬೇಕಾದರೂ ಸಹ ಇರುವ ಪ್ರದೇಶದಿಂದ ದೂರ ನಡೆಯುತ್ತಾರೆ. ಜತೆಗೆ ಅವರ ದೇವರನ್ನೂ ಒಯ್ಯುತ್ತಾರೆ. ಅವರ ಜಾತ್ರೆ ಮತ್ತು ದೇವರ ಆರಾಧನೆ ಎರಡೂ ನಡೆಯುವುದು ಪ್ರಕೃತಿಯ ಸಾನ್ನಿಧ್ಯದಲ್ಲೇ.