ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿ ಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರು ವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟ ಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿ ರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದ ಜಾನಪದ ಕಥನಗಾಯಕ ಪರಂಪರೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದ ಚಿಕ್ಕೇನಹಳ್ಲೀಯ ಗೊಲ್ಲರಹಟ್ಟಿಯ ಸಿರಿಯಜ್ಜಿ ಒಂದು ಅನರ್ಘ್ಯ ಭಂಡಾರ. ಸಿರಿಯಜ್ಜಿ ಹಾಡಿದ ಸಾವಿರಾರು ತ್ರಿಪದಿಗಳು, ಸೋಬಾನೆ ಪದಗಳು, ಕಥನಗೀತೆಗಳು ತಮ್ಮ ಅಪೂರ್ವ ವಸ್ತು ಧಾಟಿಯಿಂದ ವಿಶಿಷ್ಟವಾಗಿವೆ. ದೇಸೀ ಸಂಸ್ಕೃತಿಯ ಗುರುತಿಸುವಿಕೆ ಮತ್ತು ಹರಡುವಿಕೆಗಾಗಿ ತನ್ನನ್ನು ತೆತ್ತುಕೊಂಡಿರುವ ಕನ್ನಡ ವಿಶ್ವವಿದ್ಯಾಲಯವು ೨೦೦೪ರ ತನ್ನ ನುಡಿಹಬ್ಬದಲ್ಲಿ ಸಿರಿಯಜ್ಜಿಗೆ ‘ನಾಡೋಜ’ ಗೌರವ ಪದವಿಯನ್ನು ಕೊಡುವುದರ ಮೂಲಕ ತನ್ನ ಗೌರವಕ್ಕೆ ಬುಡಕಟ್ಟಿನ ಗರಿಯೊಂದನ್ನು ಕಟ್ಟಿಕೊಂಡಿದೆ. ಅದರ ಮುಂದುವರಿಕೆಯಾಗಿ ಸಿರಿಯಜ್ಜಿ ಹಾಡಿದ ಕಥನಗೀತಗಳ ಸಂಕಲನವನ್ನು ಪ್ರಕಟಿಸುವ ಸಾಂಸ್ಕೃತಿಕ ಋಣವನ್ನು ಅದು ತೀರಿಸುತ್ತಿದೆ. ಇದು ಸಾಧ್ಯವಾದದ್ದು ಕನ್ನಡದ ನಿಷ್ಠಾವಂತ ಜನಪದ ಸಂಶೋಧಕರೂ ಮಾನವಪರ ಕಾಳಜಿವುಳ್ಳವರು ಆದ ಡಾ. ಕೃಷ್ಣಮೂರ್ತಿ ಹನೂರು ಅವರ ಪರಿಶ್ರಮ ಮತ್ತು ಪ್ರೀತಿಯಿಂದ. ಸಿರಿಯಜ್ಜಿ ಹಾಡಿದ ಕಾವ್ಯ ಭಂಡಾರದಿಂದ ಕಥನಗೀತೆಗಳನ್ನು ಆಯ್ಕೆ ಮಾಡಿ ವಿಸ್ತೃತ ಪ್ರಸ್ತಾವನೆ ಬರೆದು ಕೊಟ್ಟಿರುವ ಡಾ. ಕೃಷ್ಣಮೂರ್ತಿಹನೂರು ಅವರು ಕನ್ನಡ ವಿಶ್ವವಿದ್ಯಾಲಯದ ಸಂಸ್ಕೃತಿ ಕಾಯಕದಲ್ಲಿ ಕೈಜೋಡಿಸಿದ್ದಾರೆ. ಸಿರಿಯಜ್ಜಿಯವರು ಜನಪದ ಲೋಕದೃಷ್ಟಿಯ ಆಶಯ ಗಳಿಗನುಗುಣವಾಗಿ ಪುರಾಣದ ಮತ್ತು ಜನಪದ ಕಥೆಗಳನ್ನು ಕಥನವಾಗಿಸಿದ್ದಾರೆ. ಕಾಡು ಗೊಲ್ಲರ ಸಂಸ್ಕೃತಿಯ ಭಿತ್ತಿಯಿಂದಲೇ ಪುರಾಣದ ಕಥನಗಳನ್ನು ಕಟ್ಟುವ ಕಲೆಗಾರಿಕೆಯ ಸೊಗಸನ್ನು ಇಲ್ಲಿ ಕಾಣಬಹುದು. ಅವರ ಕಥನಕಾವ್ಯ ವಾಙ್ಮಯವನ್ನು ಅವಲೋಕಿಸಿದರೆ ಬುಡಕಟ್ಟು ಸಂಸ್ಕೃತಿ, ಮಹಿಳಾ ದೃಷ್ಟಿ ಮತ್ತು ಚಿತ್ರದುರ್ಗ ಪರಿಸರದ ಜನಜೀವನಗಳು ಮಿಳಿತವಾಗಿ ಹೊಸ ವಿಶ್ವವೊಂದರ ದರ್ಶನ ಪ್ರಾಪ್ತವಾಗುತ್ತದೆ. ನಮ್ಮ ನಡುವೆ ಇನ್ನೂ ಲವಲವಿಕೆಯಿಂದ ಉಸಿರಾಡುತ್ತಿರುವ ಮತ್ತು ಹಾಡುತ್ತಿರುವ ನೂರಾರು ಸಿರಿಯಜ್ಜಿಯರನ್ನು ಗುರುತಿಸಲು ಮತ್ತು ಅವರ ದನಿ ಮತ್ತು ಧ್ವನಿಗಳನ್ನು ಆಲಿಸಲು ಈ ಸಂಕಲನ ಪ್ರೇರಣೆಯನ್ನು ಒದಗಿಸುತ್ತದೆ ಎಂದು ಭಾವಿಸುತ್ತೇನೆ.

ಸಾವಿರದ ಸಿರಿಬೆಳಗಿನಲ್ಲಿ ನಾವೆಲ್ಲ ಕಣ್ಣು ತೆರೆಯಲು ಅವಕಾಶ ವಿತ್ತ ಸಿರಿಯಜ್ಜಿಗೆ ಗೌರವದ ನಮನಗಳು. ಇಂತಹ ಅಪೂರ್ವ ಅಮೂಲ್ಯ ತೆನೆಗಳನ್ನು ಜೋಡಿಸಿ ಕಲೆಹಾಕಿದ, ಸಂಶೋಧಕ, ಚಿಂತಕ ಡಾ. ಕೃಷ್ಣಮೂರ್ತಿಹನೂರು ಅವರಿಗೆ ಕನ್ನಡ ವಿಶ್ವವಿದ್ಯಾಲಯ ವಿಶೇಷವಾಗಿ ಕೃತಜ್ಞವಾಗಿದೆ. ಈ ಪುಸ್ತಕವನ್ನು ಆಕರ್ಷಕವಾಗಿ ಪ್ರಕಟಿಸಿರುವ ಪ್ರಸಾರಾಂಗದ ನಿರ್ದೇಶಕ ಡಾ. ಹಿ.ಚಿ. ಬೋರಲಿಂಗಯ್ಯ, ಸಹಾಯಕ ನಿರ್ದೇಶಕ ಬಿ. ಸುಜ್ಞಾನಮೂರ್ತಿ ಅವರಿಗೆ ಮತ್ತು ಕಲಾವಿದ ಕೆ.ಕೆ. ಮಕಾಳಿ ಅವರಿಗೆ ಅಭಿನಂದನೆಗಳು.

ಬಿ.. ವಿವೇಕ ರೈ
ಕುಲಪತಿ