1973ರ ಸುಮಾರಿನಲ್ಲಿ ನಾನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಸ್ಥಳದ ಮುನಿಸಿಪಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ದಕ್ಷಿಣ ಕರ್ನಾಟಕದ ಮಲೆಯ ಮಾದೇಶ್ವರನ ಅರಣ್ಯ ಭಾಗದಿಂದ ಹೋಗಿದ್ದ ನನಗೆ ಆ ಬಯಲು ಸೀಮೆ ಸಂಪೂರ್ಣ ಹೊಸದು. ಹಿಂದೆಂದೂ ಆ ಪ್ರದೇಶವನ್ನು ನಾನು ಕಂಡವನಾಗಿರಲಿಲ್ಲ. ಹಾಗೆ ಅಲ್ಲಿಗೆ ಹೋದ ಆರಂಭದ ದಿನಗಳಲ್ಲಿ ಮೂರನಾಲ್ಕು ಜನ ಸಾಹಿತ್ಯಾಸಕ್ತರು ಮಿತ್ರರಾದರು. ಅವರಲ್ಲಿ ಕೋ.ಶ. ವಿಶ್ವನಾಥರೂ ಒಬ್ಬರು. ಗೌರಸಮುದ್ರ ಗ್ರಾಮದಲ್ಲಿ ಗ್ರಾಮಲೆಕ್ಕಿಗರಾಗಿದ್ದ ಅವರು ಅಷ್ಟು ಹೊತ್ತಿಗಾಗಲೇ ‘ಮಾರಿ-ಮಹೇಶ್ವರಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದು, ಪತ್ರಿಕೆಗಳಿಗೆ ಗ್ರಾಮೀಣ ಅನುಭವದ ಹಿನ್ನೆಲೆಯ ಕಥೆಗಳನ್ನು ಬರೆಯುತ್ತಿದರು. ಸರಳ ವ್ಯಕ್ತಿತ್ವದವರೂ, ತಾವು ನಿರ್ವಹಿಸುತ್ತಿದ್ದ ಸರ್ಕಾರಿ ನವಕರಿಯಲ್ಲಿ ನಿಷ್ಠೆಯುಳ್ಳವರು ಆಗಿದ್ದರು. ಅವರು ಒಮ್ಮೆ ಚಿತ್ರದುರ್ಗ ಪ್ರದೇಶ ಇತಿಹಾಸದ ಹಿನ್ನೆಲೆಯಲ್ಲಿ ಏನಾದರೂ ಕೆಲಸ ಮಾಡಬಹುದೆನ್ನುತ್ತ, ತಮ್ಮ ಕೋನಸಾಗರದ ಬಳಿ ಎಪ್ಪತ್ತು ವರ್ಷಗಳ ಹಿಂದೆ ಚಿರತೆಯೊಡನೆ ಹೋರಾಡಿ ಮಡಿದ ಒಬ್ಬ ನಾಯಕ ಜನಾಂಗದ ವೀರನೊಬ್ಬನ ಸ್ಮಾರಕವಿದೆ. ಅದೇ ಎಂಭತ್ತು ವರ್ಷಗಳ ಹಿಂದೆ ತಮ್ಮದೇ ಗ್ರಾಮದೊಳಗೆ ಜರುಗಿದ ಊರಹಿರಿಯನ ಕೊಲೆಯ ಹಿನ್ನೆಲೆಯಲ್ಲಿ ಜನಪದ ಕಥನವೊಂದು ಪ್ರಚಾರದಲ್ಲಿದೆ ಎಂದರು. ನನಗೆ ನೆನಪಿರುವಂತೆ ಅದೊಮದು ಶನಿವಾರ ಸಂಜೆ ಐದು ಘಂಟೆಗೆ ವಿಶ್ವನಾಥರು ಕೆಲಸದಲ್ಲಿದ್ದ ಗೌರಸಮುದ್ರಕ್ಕೆ ನಾನೂ, ಸಾಹಿತ್ಯಾಸಕ್ತ ಗೆಳೆಯ ಜಿ. ವಿಜಯಕುಮಾರ್ ಹೊರಟೆವು. ಹೀಗೆ ಕೋ.ಶ. ವಿಶ್ವನಾಥ ಅವರಿಂದ ಚಿತ್ರದುರ್ಗ ಪ್ರದೇಶದಲ್ಲಿ ನನ್ನ ಜಾನಪದ ಕ್ಷೇತ್ರಕಾರ್ಯದ ಕೆಲಸ ಆರಂಭಗೊಂಡಿತು. ಗೌರಸಮುದ್ರ, ಕೋನಸಾಗರ ಗ್ರಾಮಗಳಿಗೆ ಹೋಗಿ ಬಂದನಂತರ ಚಿತ್ರದುರ್ಗ ಗ್ರಾಮೀಣ ಪರಿಸರದಲ್ಲಿ ಇನ್ನೆಷ್ಟು ವೈವಿಧ್ಯಮಯ ಕಥನಗಳು, ದಂತ ಕಥೆಗಳು, ಐತಿಹಾಸಿಕ ವಿವರಗಳು ಒರೆಯಬಹುದೆಂಬ ಅಸಾಧ್ಯ ಕುತೂಹಲ ಹುಟ್ಟಿದ ದಿನಗಳಲ್ಲೇ ಬೆಳಗೆರೆ ಕೃಷ್ಣಶಾಸ್ತ್ರಿಗಳವರ ಪರಿಚಯವಾಯಿತು. ಗ್ರಾಮಗಳ ಮೇಲಿನ ನನ್ನ ಓಡಾಟ, ಜನಪದ ಆಸಕ್ತಿಯನ್ನು ಕೇಳಿ “ನಮ್ಮ ಬೆಳಗೆರೆಯ ಕಡೆಯೂ ಬರಬಹುದಲ್ಲ, ಅಲ್ಲೊಂದು ಮಹಾಸತಿಯ ಕೊಂಡದ ಸ್ಥಳವಿದೆ. ಅದರ ಮೇಲೆ ಹಾಡು ಇರುವಂತಿದೆ. ನಮ್ಮ ಗ್ರಾಮ ಬೆಳಗೆರೆಯ ಸನಿಹವೇ ಚಿಕ್ಕೇನಹಳ್ಳಿ ಗೊಲ್ಲರಟ್ಟಿಯಲ್ಲಿ ಸಿರಿಯಜ್ಜಿ ಎಂಬ ಹೆಸರಿನ ಹಾಡುಗಾರ್ತಿ ಇದ್ದಾಳೆ. ಅದೇ ಹಟ್ಟಿಯಲ್ಲಿ ಕೋಲು ಹಾಕುವ ಆಟಗಾರರೂ ಇದ್ದಾರೆ” ಎಂದರು. ನನಗೆ ಉತ್ಸಾಹವುಂಟಾಯಿತು. ಅಷ್ಟು ಹೊತ್ತಿಗಾಗಲೇ ಶನಿವಾರ, ಭಾನುವಾರ ಗ್ರಾಮ ಪರ್ಯಟಣೆಯ ಕೆಲಸ ಕೈಗೊಂಡಿದ್ದ ನಾನು ಒಂದು ಸಂಜೆ ನಾಲ್ಕು ಘಂಟೆಯ ಹೊತ್ತಿನ ಬಸ್ಸು ಹಿಡಿದು ಹೊರಟೆ. ಆಗ್ಗೆ ನಾನು ಚಿತ್ರದುರ್ಗ ಗ್ರಾಮಗಳ ಮೇಲೆ ಪ್ರಯಾಣಿಸುತ್ತಿದ್ದ ಬಸ್ಸುಗಳ ಓಟದ ಮಾದರಿ ಎಂದರೆ ಮೂವತ್ತು ಕಿ.ಮೀ. ಕ್ರಮಿಸಲು ಅವು ಕನಿಷ್ಠ ಎರಡು ಘಂಟೆಗೂ ಮಿಕ್ಕು ಸಮಯ ತೆಗೆದುಕೊಳ್ಳುತ್ತಿದ್ದವು. ಎಷ್ಟೋ ಬಾರಿ ಅವು ರಿಪೇರಿಗೆ ನಿಂತು, ಅದು ಹಾಗೆ ನಿಂತಲ್ಲಿ, ಪ್ರಯಾಣಿಕರು ತಮ್ಮ ಪಾಡಿಗೆ ತಾವು ಇಳಿದು ಗೊಣಗಾಡಿಕೊಳ್ಳುತ್ತ ತಂತಮ್ಮ ಗ್ರಾಮಗಳನ್ನು ನಡೆದುಕೊಂಡೇ ಸೇರುತ್ತಿದ್ದರು. ಅದು ನಿಂತ ಎಡೆಯಲ್ಲೇ ರಾತ್ರಿಯಾಗಿದ್ದರೆ, ದಿಕ್ಕೆಟ್ಟ ನಾನು ಬಸ್ಸೊಳಗೇ ಬಿಡಾರ ಹುಡಿದ್ದೂ ಉಂಟು.

ಆಗ್ಗೆ ಬೆಳಗೆರೆ ಮಾರ್ಗದಲ್ಲಿ ಮಹಾದೇವಿ, ಗೌರಿ ಎಂಬ ಎರಡು ನಾನಾಸ್ಟಾಪುಗಳ ಬಸ್ಸುಗಳು ಓಡಾಡುತ್ತಿದ್ದವು. ಬೆಳಗ್ಗೆ ಚಳ್ಳಕೆರೆ ಬಿಟ್ಟರೆ ಅವು ವಾಪಸಾಗುತ್ತಿದ್ದುದು ರಾತ್ರಿಗೇ. ಅಂಥ ಬಸ್ಸು ಹಿಡಿದು ನಾನು ಅಕಸ್ಮಾತ್ ಯಾವ ತೊಂದರೆಯೂ ಇಲ್ಲದೆ ಮಧ್ಯಾಹ್ನದ ಹೊತ್ತಿಗೆ ಬೆಳಗೆರೆ ಗ್ರಾಮ ತಲುಪಿ ಇಳಿದು ನಡೆದೆ. ಬೆಳಗೆರೆಗೆ ಆ ಹೆಸರು ಬರಲು ಕಾರಣ, ಊರ ಮುಂದಕ್ಕೆ ಇದ್ದ ವಿಸ್ತಾರ ನೀರಿನ ವಸತಿಯೇ ಎಂದು ಆ ಕೆರೆ ನೋಡಿದ ಮೇಲೆ ತಿಳಿಯಿತು. ಕೆರೆ ಏರಿಯ ಕೆಳಕ್ಕೆ ತಕ್ಕಮಟ್ಟಿಗೆ ನೀರಾವರಿ ಬೇಸಾಯ ಇದ್ದಿತು. ಉಳಿದಂತೆ ಅ ಪ್ರದೇಶವೆಲ್ಲಾ ಒಣ ಬಯಲೇ. ಕೆರೆ ಏರಿಯನ್ನು ದಾಟಿ ಉತ್ತರಕ್ಕೆ ಇಳಿಯುವಲ್ಲಿ ಅಲ್ಲೊಂದು ಪುಟ್ಟಗುಡಿ. ಗುಡಿಯ ಮುಂದಕ್ಕೆ ನಿಂತ ಅಲಂಕಾರವಿಲ್ಲದ ತೇರು, ಅಲ್ಲಿಂದಲೇ ಮುಂದಕ್ಕೆ ಒಂದು ಶಾಲೆ. ಅದರ ಮುಂದೆ ಒಂದು ವಿಸ್ತಾರ ಆಟದ ಬಯಲು ಕಾಣಿಸುತ್ತಿತ್ತು. ಅದೇ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ತಂದೆಯವರ ನೆನಪಿನಲ್ಲಿ, ಸಹೋದರರ ಸೀತಾರಾಮ ಶಾಸ್ತ್ರಿಗಳ ಹೆಸರಿನಲ್ಲಿ ಸ್ಥಾಪಿಸಿದ ಶಾಲೆಯೊಂದಿತ್ತು. ಶಾಲೆ ಆಟದ ಬಯಲಿನ ಬದಿಯಲ್ಲೇ ಹಾಯುತ್ತಿದ್ದ ರಸ್ತೆಯಲ್ಲು ಕೃಷ್ಣಶಾಸ್ತ್ರಿಗಳವರ ತೋಟ ಮುಟ್ಟಿದೆ. ಕೃಷ್ಣಶಾಸ್ತ್ರಿಗಳು ಆಗ್ಗೆ ಮಕ್ಕಳ ವಿದ್ಯಾಭ್ಯಾಸಕ್ಕೊಂದು ಶಾಲೆಯನ್ನು ಸ್ಥಾಪಿಸಿದ್ದರು ನಿಜ. ಆದರೆ ತಮ್ಮ ವಾಸಕ್ಕೆ ಮನೆಯನ್ನು ಕಟ್ಟಿಸಿರಲಿಲ್ಲ. ಅವರು ಆಗ ವಾಸಿಸುತ್ತಿದ್ದುದು ಒಂದು ಪುಟ್ಟ ಗುಡಿಸಿಲಿನಲ್ಲಿ. ಅದರ ಅಳತೆ ಒಂದು ಅಂಕಣವೂ ಇರಲಿಲ್ಲ ಮತ್ತು ಆ ಗುಡಿಸಿಲಿಗೆ ಬಾಗಿಲೂ ಇರಲಿಲ್ಲ. ಈ ಇಪ್ಪತ್ತನೇ ಶತಮಾನದಲ್ಲಿ ಬಾಗಿಲೇ ಇಲ್ಲದೆ ಬದುಕುವ ಬಗೆ ಒಂದು ಸವಾಲು ಎನ್ನಿಸಿತು. ಎಂದೂ ತಮ್ಮ ವೈಯಕ್ತಿಕ ವಿವರಗಳ ಬಗ್ಗೆ ಮಾತನಾಡದ ಕೃಷ್ಣಶಾಸ್ತ್ರಿಗಳಿಗೆ ಸಾಹಿತ್ಯ, ಸಂಸ್ಕೃತಿ, ದೇಶ ರಾಜಕಾರಣದ ಅವನತಿ, ಗಾಂಧಿ, ನೆಹರು, ವಿನೋಬ, ಅಂಬೇಡ್ಕರ್ ಹೀಗೆ ಮಾತನಾಡುವುದೆಂದರೆ ಹೊತ್ತು ಹೋದದ್ದು ತಿಳಿಯುತ್ತಿರಲಿಲ್ಲ. ಹೀಗಾಗಿ ನಾನು ಅವರಿಂದ ಕಲಿತ ಅನುಭವದ ಪಾಠ ದೊಡ್ಡದು. ಚಿತ್ರದುರ್ಗ ಪ್ರದೇಶದಲ್ಲಿ ಹತ್ತರಿಂದ ಹದಿನೈದು ವರ್ಷಕಾಲ ನಿರಂತರ ಸುತ್ತಾಡಿದ ನನಗೆ ಬೆಳಗೆರೆ ಕೃಷ್ಣಶಾಸ್ತ್ರಿಗಳಿಂದ ಲೋಕದ ಅರಿವು ದೊರೆತರೆ ಅರಿವು ದೊರೆತರೆ, ಚಿಕ್ಕೇನಳ್ಳಿ ಗೊಲ್ಲರಟ್ಟಿ ಸಿರಿಯಜ್ಜಿ ಜಾನಪದ ಜಗತ್ತಿನ ಆಗಾಧ ಅರಿವನ್ನು ನೀಡಿದಳು. ಇವರಿಬ್ಬರೂ ತಂತಮ್ಮ ಅರಿವಿನ ‘ಸಿರಿ’ ಯಿಂದ ನನಗೆ ಪ್ರಾಧ್ಯಾಪಕರೆನಿಸಿದರು. ಬೆಳಗೆರೆ ಮುಟ್ಟಿದ ನಾನು ಕೃಷ್ಣಶಾಸ್ತ್ರಿಗಳೊಡನೆ ನಾರಣಾಪುರ, ಅಲ್ಲಿಂದ ಎರಡು ಕಿ.ಮೀ. ನಡೆದು ಯಲಗಟ್ಟೆ ಗ್ರಾಮ ದಾಟಿದೆ. ಮುಂದೆ ಸಿರಿಯಜ್ಜಿಯ ಗೊಲ್ಲರಟ್ಟಿ ಮುಟ್ಟಿದಾಗ ನೆತ್ತಿಯ ಮೇಲೆ ಮೋಡ ಕವಿದಿತ್ತು. ಅದು ಯುಗಾದಿಯ ಸಂದರ್ಭವಾದುದರಿಂದ ನಾಲ್ಕು ಹನಿಯಾದರೂ ಮಳೆ ಬರಲೇಬೇಕೆಂಬ ನಂಬಿಕೆ ಜನರಲ್ಲಿದೆ. ಅಂದರೆ ಮಳೆಗಾಲದ ಆರಂಭಕ್ಕೆ ಅದು ಮುನ್ಸೂಚನೆ. ನಾವು ಗೊಲ್ಲರಹಟ್ಟಿ ಮುಟ್ಟಿದಾಗ ಹನಿಯೇನೂ ಉದುರುತ್ತಿರಲಿಲ್ಲ. ಆ ಪುಟ್ಟ ಗೊಲ್ಲರಟ್ಟಿ ಸುತ್ತ ಬೇಲಿ ಹಾಕಲ್ಪಟ್ಟಿತ್ತು. ಸಾಮಾನ್ಯವಾಗಿ ಚಿತ್ರದುರ್ಗದ ಎಲ್ಲ ಗೊಲ್ಲರಟ್ಟಿಗಳು, ಮ್ಯಾಸಬೇಡರ ಹಟ್ಟಿಗಳು ಆ ಬಗೆಯ ಮುಳ್ಳುಬೇಲಿಗಳಿಂದ ಆವೃತವಾಗಿರುವುದನ್ನು ನಾನು ನೋಡುತ್ತಲೇ ಇದ್ದೆ. ಅದಕ್ಕೆ ಅವರು ತಾವು ನಿಷಿದ್ಧವೆಂದು ಭಾವಿಸುವ ಕೋಳಿಗಳು, ಹಂದಿಗಳೂ ಹಟ್ಟಿಯೊಳಕ್ಕೆ ನುಗ್ಗಬಾರದೆಂದು ಹಾಗೆ ಬೇಲಿ ಹಾಕಿರುತ್ತೇವೆಂದು ಹೇಳುತ್ತಾರೆ.

ಮುಳ್ಲು ಬೇಲಿ ದಾಟಿ ನಾವು ಹಟ್ಟಿ ಪ್ರವೇಶಿಸಿದೆವು. ಅಲ್ಲಿ ಎಲ್ಲ ಸೇರಿದರೆ ಒಟ್ಟು ನಲವತ್ತು, ಐವತ್ತು ಗುಡಿಸಲುಗಳಿದ್ದುವಷ್ಟೆ. ನಡುವೆ ಐದಾರು ಮಾಳಿಗೆ ಮನೆಗಳು. ಮಾಳಿಗೆ ಎಂದರೆ ಮಹಡಿ ಮನೆಯಲ್ಲ. ಗೋಡೆ ಎತ್ತರಿಸಿದ ನಂತರ ಅದರ ಮಾಡಿಗೆ ಅಡ್ಡಡ್ಡ ಮರದ ಕೊಂಬೆ, ಸೊಪ್ಪು ಸೆದೆ ಹಾಸಿ ಅದರ ಮೇಲೆ ಚೆನ್ನಾಗಿ ತುಳಿದು ಕಲೆಸಿದ ಮಣ್ಣು ಹಾಕಿದ್ದ ಪ್ರಾಚೀನ ಮಾದರಿಯ ಆರ್.ಸಿ.ಸಿ ಯಷ್ಟೆ. ಹಟ್ಟಿಯೊಳಗೆ ಇನ್ನಷ್ಟು ದೂರ ಬರಲು ಅಲ್ಲೊಂದು ಹಗ್ಗ ರಾಟೆಗೆ ಹಾಕಿದ್ದು, ಅದು ನೀರು ಸೇದುವ ಬಾವಿಯಾಗಿತ್ತು. ಅದರ ಹಿಂದಕ್ಕೆ ಮತ್ತೆ ಬಾರಿ ಬೇಲಿಯ ಇನ್ನೊಂದು ಸುತ್ತು ಇದ್ದಿತು. ಆ ಬೇಲಿಯ ಸುತ್ತಿನ ಒಳಗೆ ಕ್ಯಾತರುಲಿಂಗ, ಪಾತರಲಿಂಗ, ಸಿರಿಯಣ್ಣ ದೇವರ ಗುಡಿಗಳು. ಆವೂ ಮಾಳಿಗೆಯ ಪುಟ್ಟಪುಟ್ಟ ಗುಡಿಗಳು. ಈ ಗುಡಿಯ ಸುತ್ತಲ ಮುಳ್ಳುಬೇಲಿ ನೋಡಿದರೇ ಭಯವಾಗುವಂತಿತ್ತು. ಬೇಲಿಯ ಹೊರಗಿದ್ದ ಒಂದು ಜಗುಲಿಯ ಮೇಲೆ ಆ ಹೊತ್ತು ಯುಗಾದಿಯಾದುದರಿಂದ ಭಜನೆಯ ಮೇಳ ನಡೆಯುತ್ತಿತ್ತು. ಸಾಮೂಹಿಕ ಹಾಡುಗಾರಿಕೆ. ಅದರಲ್ಲಿ ಗೊಲ್ಲರ ದೇವರುಗಳ ಪ್ರಸ್ತಾಪವೇನಿರಲಿಲ್ಲ. ರಾಮ, ಕರಷ್ಣರನ್ನು ಕುರಿತ ಪುರಂದರದಾಸ, ಕನಕದಾಸರ ಕೀರ್ತನೆಗಳು, ಸಾಮೂಹಿಕ ರಾಗದಲ್ಲಿ ಸುಶ್ರಾವ್ಯವಾಗಿ ಕಿವಿಗೆ ಬೀಳುತ್ತಿದ್ದವು.

ನಾನೂ ಕೃಷ್ಣಶಾಸ್ತ್ರಿಗಳು ಐದಾರು ಹಾಡುಗಳನ್ನು ಕೇಳಿಸಿಕೊಂಡ ನಂತರ ಅಲ್ಲಿಂದ ಐವತ್ತು ಹೆಜ್ಜೆ ದೂರಕ್ಕೆ ಸಿರಿಯಜ್ಜಿಯ ಮನೆಕಡೆ ಬಂದೆವು. ನಾನು ಸಿರಿಯಜ್ಜಿಯನ್ನು ಕಾಣುವಲ್ಲಿ ಆಕೆಗೆ ಅರವತ್ತು ವಯಸ್ಸು. ಇದ್ದುದರಲ್ಲಿ ಸಿರಿಯಜ್ಜಿಯ ಹಟ್ಟಿ ಚೆನ್ನಾಗಿತ್ತು. ಮಾಳಿಗೆ ಮನೆ. ಗರಿ ಹೊದಿಸಿದ ಆರು ಮನೆಯ ಮುಂದೆ ಚಾಚಿಕೊಂಡಿತ್ತು. ಆರಿನ ಕೆಳಗೆ ಸಣ್ಣ ಜಗುಲಿ. ಜಗುಲಿಯ ಮೇಲೆ ಸಿರಿಯಜ್ಜಿ ಹಾಸಿದ ಕಂಬಳಿ ಗದ್ದುಗೆಗೆ ನಾವಿಬ್ಬರೂ ಕೂತೆವು. ಕೃಷ್ಣಶಾಸ್ತ್ರಿಯವರು ಸಿರಿಯಜ್ಜಿಯ ಕ್ಷೇಮ ಸಮಾಚಾರ ವಿಚಾರಿಸಿದರು. ನನ್ನ ಪರಿಚಯವನ್ನೂ ಆಕೆಗೆ ಹೇಳಿದರು.

ನಾನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಹೋದ ಆ ಹೊತ್ತು ರಾತ್ರಿ ಸಿರಿಯಜ್ಜಿ, ಅವಳ ಹಟ್ಟಿಯ ದೇವರು ಸಿರಿಯಣ್ಣನ ಮೇಲೆ ಹತ್ತಾರು ತ್ರಿಪದಿಗಳನ್ನು ಹಾಡಿದಳು. ಎಷ್ಟು ಹೊತ್ತು ಕೇಳಿಸಿಕೊಂಡರೂ ಕಥನಗೀತೆ ಮುಗಿಯುವಂತೆ ಕಾಣಲಿಲ್ಲ. ಸುಮಾರು ನೂರು ತ್ರಿಪದಿಗಳ ಒಂದು ಗೀತೆ ಗಾಯಕಿಯರ ಹಾಡುಗಾರಿಕೆಯ ಕ್ರಮದಲ್ಲೇ ಅದು ಮುಗಿಯಬೇಕಾದರೆ ಒಂದು ಅಥವಾ ಎರಡು ರಾತ್ರಿಯಾದರೂ ಬೇಕು. ಹೀಗಾಗಿ ಸಿರಿಯಜ್ಜಿ ಏಳು ಘಂಟೆಗೆ ಆರಂಭಿಸಿದ ಗೀತೆ ರಾತ್ರಿ ಹತ್ತಾದರೂ ಮುಕ್ತಾಯವಾಗಲಿಲ್ಲ. ಆ ಹೊತ್ತು ಅರ್ಧ ಕೇಳಿಸಿಕೊಂಡ ನಾನು, ಸಿರಿಯಜ್ಜಿಗೆ ಅಂಥ ಇನ್ನೆಷ್ಟು ಹಾಡುಗಳು ಬರಬಹುದೆಂದು ವಿಚಾರಿಸಿದೆ. ಸಿರಿಯಜ್ಜಿ ಆ ಸಂದರ್ಭಕ್ಕೆ ಒಂದೆರಡು ಗೀತೆಗಳ ಹೆಸರು ಹೇಳಿದಳು. ಆದರೆ ಅದಷ್ಟೇ ಗೀತೆಗಳ ಹಾಡುಗಾರಿಕೆಗೆ ಸಿರಿಯಜ್ಜಿಯ ನೆನಪು ಮಾಸಲಿಲ್ಲ. ಸುಮಾರು ಎರಡು ವರ್ಷಗಳವರೆಗೆ ಹಾಡುತ್ತಲೇ ಹೋದಳು. ಯಾವುದಾದರೂ ಒಂದು ದಿನ ಸಿರಿಯಜ್ಜಿ ಹಾಡುಗಾರಿಕೆ ಮುಗಿಯಬಹುದೆಂದು ನಾನು ಭಾವಿಸಿದ್ದೆನಷ್ಟೆ. ಎರಡು ಮೂರು ವರ್ಷವಾದ ಮೇಲೆ ಹಾಡು ಹೇಳುವುದು, ಕೇಳುವುದು ಮುಗಿಯಿತೆಂದು ತಿಳಿದೆ. ಆದರೆ ಇತ್ತೀಚೆಗೆ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಬಂದ ಸಂದರ್ಭದಲ್ಲಿ ಸಿರಿಯಜ್ಜಿ; ನನ್ನ ಪದಗಳನ್ನು ಪೂರ್ತಿ ಸಂಗ್ರಹಿಸಲಾಗಿಲ್ಲ, ಇನ್ನೂ ಒಂದೆರಡು ಪದ ಉಳಿದಿವೆ ಎಂತಲೇ ಹೇಳಿದ್ದಾಳೆ. ಇದು ನಿಜವಿರಬಹುದು! ತಲೆತಲಾಂತರದಿಂದ ಜನಪದರು ತಮ್ಮ ಪದಗಳ ಬಗ್ಗೆ ಹೇಳಿಕೊಂಡಿರುವ ಒಂದು ತ್ರಿಪದಿಯನ್ನು ಇಲ್ಲಿ ಉದ್ಧರಿಸುವುದೇ ಸೂಕ್ತ ಎನ್ನಿಸುತ್ತದೆ:

ಆದಾವು ನಮಜೋಳ ಉಳಿದಾವು ನಮಹಾಡು
ಈಗ ಸಾಕವ್ವ ನನಕಲ್ಲ ಕೈಯ್ಯಾನ
ಹಾಕಿದುಂಗುರ ಸವುದಾವು.

ಕೊನೆಯದಾಗಿ ಉಲ್ಲೇಖಿಸಬಹುದಾದ ಸಿರಿಯಜ್ಜಿ ಹಾಡಿದ ಇನ್ನೊಂದು ಪದ್ಯ :

ಹಣತೆಯಲ್ಲಿ ಸಣ್ಣ ಬತ್ತಿ ಮಿಳ್ಳೆ ಎಣ್ಣೆ
ನನ್ನ ಗುಡಿಸಿಲ ಜ್ಯೋತಿಯೇ
ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ

– ಸಂಗ್ರಾಹಕ
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ರಾಜ್ಯಪಾಲರಾದ ಮಾನ್ಯ ಟಿ.ಎನ್. ಚತುರ್ವೇದಿಯವರಿಂದ

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ರಾಜ್ಯಪಾಲರಾದ ಮಾನ್ಯ ಟಿ.ಎನ್. ಚತುರ್ವೇದಿಯವರಿಂದ