ಚಿತ್ರದುರ್ಗದಿಂದ ಜಗಳೂರು ದಾರಿಯಲ್ಲಿ ಉತರ ದಿಕ್ಕಿಗೂ ಚಳ್ಳಕೆರೆಯಿಂದ ಪಶ್ಚಿಮ ದಿಕ್ಕಿಗೂ ಬರುವ ಪುಟ್ಟ ಹೋಬಳಿ ಗ್ರಾಮ ನಾಯಕನಹಟ್ಟಿ. ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ವಿಜಯನಗರದ ಪತನಾನಂತರ ಚಿತ್ರದುರ್ಗದ ಪಾಳೆಗಾರರು ಸ್ವತಂತ್ರರಾದರು. ಹೀಗೆ ಸ್ವತಂತ್ರರಾದವರು ನಿರಂತರವಾಗಿ ತಮ್ಮ ಸುತ್ತಮುತತ್ತಲ ತರೀಕೆರೆ, ಸಿರಾ, ನಿಡುಗಲ್ಲು, ಪಾಳೆಯಗಾರರೊಡನೆ ಹೋರಾಡಬೇಕಾಗಿ ಬಂತು. ಚಿತ್ರದುರ್ಗದ ಪಾಳೆಯಗಾರರಿಗೆ ಅಧೀನವಾಗಿದ್ದುಕೊಂಡು ಬಂದವರು ನಾಯಕನಹಟ್ಟಿಯವರು. ಈಗಲೂ ನಾಯಕನ ಹಟ್ಟಿಯಲ್ಲಿ ದೊರೆಗಳ ಚದುರು ಎಂದು ಕರೆಯುವ ಅರಮನೆಯ ಭಾಗವಿದೆ. ನಾಯಕನಹಟ್ಟಿಯ ಸುತ್ತಮುತ್ತ ಮ್ಯಾಸಬೇಡರ ಸಂಖ್ಯೆಯೂ ಹೆಚ್ಚಿದೆ. ಅವರೆಲ್ಲರೂ ಪಶುಪಾಲನೆ, ಬೇಟೆ ಮತ್ತು ಕುರಿಸಾಕಣಿಕೆಯಲ್ಲಿದ್ದು, ಬಹುತೇಕ ಬುಡಕಟ್ಟು ಜೀವನವನ್ನೇ ನಡೆಸುತ್ತಾರೆ. ಧೈರ್ಯಶಾಲಿಗಳೂ ಪರಾಕ್ರಮಿಗಳೂ ಆಗಿದ್ದ ಇವರು ತಮ್ಮ ಪಶುಪಾಲನೆಯ ನಿಮಿತ್ತ ಜಾಗದಿಂದ ಜಾಗಕ್ಕೆ ವಾಸ್ತವ್ಯವನ್ನ ಬದಲಾಯಿಸುತ್ತಿದ್ದುದೂ ಉಂಟು. ಸುಮಾರು ಹದಿನಾರು ನಾಯಕನಹಟ್ಟಿಗಳು ಈ ಪ್ರದೇಶದಲ್ಲಿವೆ. ನಾಯಕನಹಟ್ಟಿ ಬಳಿ ಬರುವ ಹೊಸಗುಡ್ಡವೂ ಕೂಡ ಪ್ರಾಚೀನ ಕಾಲದ ಒಂದು ಗುಹಾಂತರ ದೇವಾಲಯವೂ ನಿರ್ಮಾಣವಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದ ನಂತರ ಗುಹಾಂತರ ದೇವಾಲಯವನ್ನು ನಿಚ್ಚಳವಾಗಿ ಹೋಲುತ್ತದೆ. ಆದರೆ ಇದು ಯಾವ ಕಾಲದಲ್ಲಿ ನಿರ್ಮಾಣವಾಯಿತೆಂಬುದಕ್ಕೆ ದಾಖಲೆಗಳಿಲ್ಲ. ಆದರೆ ನಾಯಕನಹಟ್ಟಿ ಪಾಳೆಯಗಾರರಲ್ಲಿ ಪ್ರಮುಖನಾಗಿದ್ದ ಬೋಡಿಮಲ್ಲಪ್ಪ ನಾಯಕ, ಶರಣ ತಪ್ಪೇಸ್ವಾಮಿಗೆ ಆಶ್ರಯ ಕೊಟ್ಟಿದ್ದು, ಆತನ ಮಾರ್ಗದರ್ಶನದಲ್ಲಿ ಜನೋಪಯೋಗಿ ಕೆಲಸಗಳನ್ನು ನೆರವೇರಿಸಿದ್ದಕ್ಕೆ ಈಗಲೂ ನಾಯಕನಹಟ್ಟಿಯಲ್ಲಿ ಕುರುಹುಗಳಿವೆ. ಅಲ್ಲದೆ, ಎಲ್ಲ ಜನಸಮೂಹದ ದೇಹದಲ್ಲೂ ಹರಿಯುವ ರಕ್ತ ಒಂದೇ ಎಂಬ ತತ್ವವನ್ನು ಶರಣ ತಿಪ್ಪೇಸ್ವಾಮಿ ಬಲವಾಗಿ ಪ್ರತಿಪಾದಿಸಿರುತ್ತಾನೆ. ನಾಯಕನಹಟ್ಟಿಯಲ್ಲಿ ಈಗಲೂ ವರ್ಷಂಪ್ರತಿ ನಡೆಯುವ ಜಾತತ್ರೆಯಲ್ಲಿ ಈ ಭವನೆ ಸ್ಪಷ್ಟವಾಗಿ ಗೋಚರಿಸುತ್ತದೆ. ಮುಸ್ಲಿಂ ಶೈಲಿಯಲ್ಲಿರುವ ತಿಪ್ಪೆಸ್ವಾಮಿ ಸಮಾಧಿ ಮಂದಿರ ನಾಯಕನಹಟ್ಟಿಯ ಹೊರಭಗದಲ್ಲಿದ್ದು ಇದನ್ನು ಹೊರಮಠವೆಂದೂ, ಊರ ಒಳಭಾಗದಲ್ಲಿರುವ ದೇವಸ್ಥಾನವನ್ನು ಒಳಮಠವೆಂತಲೂ ಕರೆಯುತ್ತಾರೆ. ಹೊರಮಠದ ಸಮಾಧಿಯನ್ನು ಬೇಡನಾಯಕರೂ, ಒಳಮಠವನ್ನು ವೀರಶೈವ ಸಮೂಹದವರೂ ಪೂಜಿಸುವುದಿದೆ. ಬುಡಕಟ್ಟು ಸಂತ ತಿಪ್ಪೇಸ್ವಾಮಿ ಜನೋಪಕಾರಿಯೂ ಜಾತ್ಯತೀತ ನಿಲುವು ಉಳ್ಳವನು ಆಗಿದ್ದರಿಂದ ಜನಪದ ಗೀತೆಗಳಲ್ಲಿ ಈತನನ್ನು ಆ ಸುತ್ತಿನ ಜನಪದರು ಸ್ತುತಿಸುತ್ತಾರೆ. ಸಿರಿಯಜ್ಜಿಯ ನೆನಪಿನಲ್ಲೂ ಇದ್ದಾನೆ.

ತಿಪ್ಪೇಸ್ವಾಮಿ ಗೀತೆ

ತಿಪ್ಪೇ ತಿಪ್ಪೆಂದರೆ ತಿಪ್ಪೇಯ ತಿರುಪಣ್ಣ
ತಿಪ್ಪೇ ಮೇಲಿಪ್ಪೆಮರನುಟ್ಟಿ ತಿಪ್ಪೇಸ್ವಾಮಿ
ತಾವೊಳ್ಳೆದೆಂದು ನೆಲೆನಿಂತ

ಅರುಗೀದ ವಲದಲ್ಲಿ ಮರುಗವನೆತ್ತುವರಾರೆ
ಅಳದೀಯ ಕೆಂಜೆಡೆಯ ಕೆಂಪಯ್ಯ ನಿಮಪಾದ
ಆಗಲೇ ಕಂಡೋರಿಗೆ ಕೈಲಾಸ

ಬಿತ್ತೀದ ವಲದಾಗೆ ಪತುರಾವೆತ್ತುವರಾರೆ
ಮುತ್ತೀನ ಕೆಂಜೆಡೆಯ ಕೆಂಪಯ್ಯನ ನಿಮಪಾದ
ನಿತ್ಯ ಕಂಡೋರಿಗೆ ಕಯಿಲಾಸ

ಬಾಳಿಕಾಯಿ ಚಂದ ಬಾಳಿವೂವು ಚಂದ
ಬಜಾರ ಚಂದಾ ಅಟ್ಯಾಗೆ ಊರಾ ಮುಂದ್ಲ
ಯೋಗಿ ತಿಪ್ಪಯ್ಯ ಮಟಚಂದ

ನುಗ್ಗಿಕಾಯಿಚಂದ ನುಗ್ಗಿಯಾ ವೂವು ಚಂದ
ಮಾರೀಯ ಗುಡಿಚಂದ ಅಟ್ಯಾಗ ತಿಪ್ಪೇಸ್ವಾಮಿ
ತಾವೊಳ್ಳೆದೆಂದು ನೆಲೆನಿಂತ

ಅಳ್ಳೀಯನೊಲಿದೀರಿ ದಿಳ್ಳಿನಾಯ್ಕನಟ್ಟಿ
ಆರು ಸಾವಿರದ ಎಲಿತ್ವಾಟ ತನುವೀಗೆ
ಸ್ವಾಮಿ ತಿಮ್ಮಪ್ಪ ನೆಲೆನಿಂತ

ಕಲ್ಲೇನೆ ಕಟುಗಾರು, ಕುಲದಲ್ಲಿ ಪಂಚಾಚಾರ
ಕಲ್ಲೇನೆ ತಿಪ್ಪಯ್ಯ ಸಿರಕವೇ ಕಟ್ಯಾರೆ
ನಿಲಿಸ್ಯಾರೆ ತಿಪ್ಪಯ್ನ ಗುಡಿಮ್ಯಾಲೆ

ಮಟದ ಬಾಗಲಮುಂದೆ ನಂದಿಯ ಕೋಲು
ಮಾಟುವದೇನೆ ತಂಗಿ ಮಟದಾಗೆ ತಿಪ್ಪೇಸ್ವಾಮಿ
ಬಲಕ್ಕೆಲೆ ಬಾಳೇ ಎಲಿದೋಟ

ಅಣ್ಣಾನ ಗುಡಿಮುಂದೆ ಇನ್ನೇನು ಬ್ಯಳದಾವು
ಸಣ್ಣಾರುದ್ರಾಕ್ಸಿ ಕಿರುನಲ್ಲಿ ಕಿತ್ತಾಳಿ
ಅಣ್ಣಾನ ಗುಡಿಸುತ್ತ ಬ್ಯಳದಾವು

ಅಪ್ಪಾನೆ ತಿಪ್ಪಯ್ಯ ಬುತ್ತಿವುಂಡೊತ್ತಾಗೆ
ಬತ್ತೀದ ಬಾಳೆ ಚಿಗುರಾವೆ ನಾಯ್ಕನಟ್ಟಿ
ದಿಕ್ಕೊಳ್ಳೇದೆಂದು ನೆಲೆನಿಂತ

ಸ್ವಾಮಿ ತಿಪ್ಪಯ್ಯ ಬೋನಾವುಂಡೊತ್ತಾಗೆ
ಬಾಡೀದಬಾಳೆ ಚಿಗುರಾವೆ ನಾಯ್ಕನ ಅಟ್ಟಿ
ತಾವು ಒಳ್ಳೇದೆಂದು ನೆಲೆಗೊಂಡ

ಅಪ್ಪಾನೆ ತಿಪ್ಪಯ್ಯ ಮತ್ತೆಲ್ಲಿದ್ದಾನೆಂದು
ಕಿತ್ತಾಲಿವನವಾ ಬೆದಕೀದ ನಾಯ್ಕನ ಅಟ್ಟಿ
ದಿಕ್ಕೊಳ್ಳೆದೆಂದು ನೆಲೆನಿಂತ

ಆವು ಕಾವಾರಿಂದ ತಾ ಬಂದ ತಿಪ್ಪಣ್ಣ
ಇತ್ತಾಳೆ ಚೆಂಬು ಬಲಗೈಲಿ ಇಡಕೊಂಡು
ತಾವೊಳ್ಳೇದೆಂದು ನೆಲೆಗೊಂಡ

ಅಂತ ಅಂತರಕೆ ನಿಂತಾವೆ ನಾಕು ಕಂಬ
ಎಂತ ಬಿನ್ನಣವಾ ಕಟುವ್ಯಾರೆ ನಾಯ್ಕನಟ್ಟಿ
ಸಂತೋಸದಾ ಸಿಕುರವು

ಆಯ್ತವಾರದಗಲೆಲ್ಲಾ ಸ್ವೋಮ್ವಾರದಿರುಳೆಲ್ಲ
ಸ್ವಾಮಿ ತಿಪ್ಪಯ್ಯ ಮದುಮಗ ನಾಯ್ಕನಟ್ಟಿ
ಬೀದಿಗೊಳ್ಳಲಿ ಮೆರವಣಿಗೆ

ವೊನ್ನ ಮಾರುವ ಸಾಲು ಚಿನ್ನಾಮಾರುವ ಸಾಲು
ಎಣ್ಣು ಮಕ್ಕಳಿರುವಂತ ಬಳೆಸಾಲು ಅದಾವೆ
ತಂದೆ ತಿಪ್ಪಯ್ನ ಗಿರಿಮ್ಯಾಲೆ

ಮುತ್ತು ಮಾರುವ ಸಾಲ ರತ್ನಾ ಮಾರುವ ಸಾಲು
ಮುತ್ತಯಿದೇರಿಡುವ ಬಳೆಸಾಲು ಅದಾವೆ
ಅಪ್ಪ ತಿಪ್ಪಯ್ಯ ಗಿರಿಮೇಲೆ

ಮೂಡನಾಡಾ ಪರಿಸೆ ನೋಡುತಲಿ ಬರುತಾವೆ
ತಂದೇ ತಿಪ್ಪಯ್ನ ಗಿರಿಮ್ಯಾಲೆ ಮರಿಪರಿಸೆ
ಸಂತೇ ಬಾಗಿಲಿಗೇ ಬರುತಾವೆ

ಬಂದೀಯ ಚಿನ್ನಮ್ಮ ಬಂದಾಳೆ ನೀರಿಗೆ
ಜಂಬಾರವೇನೆ ಮಟದಾಗೆ ತಿಪ್ಪೇಸ್ವಾಮಿ
ಒಂಬತ್ತು ದಿನದಾ ಮದುಮಗನು

ತೇರನ್ನೆಳಿಯಾಕ ತಂಗೀನಗ್ಗಾಬೇಕ
ವೊಂಬಾಳೆ ಬೇಕ ಕಳಸಾಕೆ ತಿಪ್ಪೇಸ್ವಾಮಿ
ಗೊಂಬೀಯತೇರು ಎಳಿಯಾಕೆ

ತೇರು ಸುಂಗರವಾಗಿ ಏಳಟ್ಟಿಯರುದ್ರ
ತೇರಿನ ಮ್ಯಾಲಿರುವ ಕಣಸ ಸುಂಗರವಾಗಿ
ಸೂಳೇರ ಬೋಗಿ ರತವೇನು

ತೇರು ಸುಂಗರವಾಗಿ ಬಾಳೆವತ್ತಾಗಿ
ತೇರು ಮುಂದಕ್ಕೆ ಸಾಗ್ಯಾವೆ ಪೂಜಾರಿ
ಪಾದಾ ಕಾಣಿಕೆಯನಿಟ್ಟಾನು

ರುದ್ರಾ ನಿಮತೇರು ಬಗ್ಗುತ್ತ ಬಳಕುತ್ತ
ರುದ್ರಾಕ್ಸಿ ಕಣಿಯುದುರೂತ ಸಿವಯೋಗಿ
ರುದ್ರ ನಿಮತೇರು ವೊಸತೇರು

ತೇರ ಕಟ್ಟುವಾಗ ಯಾರ್ಯಾರು ಇರಬೇಕು
ಗ್ರಾಮದಾಗೌಡ ದೊರಿಮಗ ಮಲ್ಲಣ್ಣ
ತೇರೀಗೆ ಎಣ್ಣೆ ವರಿಸ್ಯಾನು

ತೇರೀಗೆ ಎಣ್ಣೆ ಎಸರೀದ ಮಲ್ಲಣ್ಣ
ಗಾಲೀಗೆ ಕಾಯ ವಡಿಸ್ಯಾನು ಗದ್ದಲಕೆ
ತಂದೆ ತಿಪ್ಪಣ್ಣ ಬೆವತಾನು

ತಂದೆ ತಿಪ್ಪಣ್ಣ ಬೆವತಾನು ಬಸವೇರು
ಮಳೆಗಾಲಕೆ ಮಲ್ಲಿಗೆ ಸಳಿಗಾಲಕೆ ಕೇದಿಗೆ
ಬೆಟ್ಟಾಬ್ಯಾಸಿಗೆಗೆ ದವನಾವೆ

ಸ್ವಾಮಿ ತಿಪ್ಪಣ್ಣನ ಗಾಜೀನ ಮಟದಲ್ಲಿ
ತೇರುಗಳು ಸಾಗಿ ಬರ ಏಳಿ ಅಕ್ಕ ನಾವು
ಏಲಕ್ಕಿ ಸೂರೆ ಬಿಡುವಾನು

ತೇರಾನು ಎಳಿವಾಗ ಸುರೆ ಬೆಲ್ಲವಬಿಟ್ಟೇ
ತೇರೆದೆಳು ನೆಲಿಗೆ ನಿಲುವಾಗ ನಿವ್ವಾಳಿಸಿ
ಆರತಿಯ ಬೆಳುಗೇರು ನಾರೀರು

ಡಂಡಂ ಆದೇನು ಊರಾಗೆ ಡಂಬಾವೇನಮ್ಮ
ದೊಡ್ಡಾನೆ ತಿಪ್ಪಯ್ಯರತವೇರಿ ಬರುವಾಗ
ನಗ್ಗಾರಿ ಆಕ್ಸಾರೆ ಇರಿಯಾರು

ಅಟ್ಟಿತಿಪ್ಪಣ್ಣನ ಕಟ್ಟೆ ತೇರಿನ ಮ್ಯಾಲಿರುವೋ
ಉತ್ತುತ್ತಿ ಅಣ್ಣಗಿಳಿಕಚ್ಚಿ ಮತ್ತೆ ತಂದಾವು
ಅಟ್ಟಿರುದ್ರಗೆ ಉಲುಪೀಯ

ಸ್ವಾಮಿಸಿಕರದ ಮ್ಯಾಲೆ ಸ್ರೀಗಂದದ ಮರನುಟ್ಟಿ
ಮರದಮ್ಯಾಲೆರೆಡು ಗಿಳಿಕುಂತು ನುಡಿದಾವೆ
ಮಾದಿಗರ ಅರಳಯ್ನ ಸಿವಕತಿಯ

ಮಾದಿಗರ ಅರುಳಯ್ನ ಸಿವಕತೆ ಏಳೂವಾಗ
ಅರಿವಿಲ್ಲದ ನಾರಿ ಮಲುಗ್ಯಾಳೆ ವೊಟ್ಟೀಲಿರುವ
ಸಿಸುವು ಕೇಳಿತೋ ಸಿವಕತೆಯ

ಅಣ್ಣಾ ನಿಮತೇರು ಬಣ್ಣಾವಾಗೈದಾವೆ
ಅನ್ನೊಂದು ನೂರು ಪಟವೇರಿ ತಿಪ್ಪೆಸ್ವಾಮಿ
ಗೊಂಬೀಯ ತೇರು ನಗುತಾವೆ

ಅಪ್ಪಾ ನಿಮತೇರು ವಪ್ಪಾವಾಗೈದಾವೆ
ಚಿತ್ತಾರದ ಗೊಂಬಿ ಮೇಲೇರಿ ವೊನ್ನಿನ ಕಳಸ
ಅನ್ನೊಂದು ಗಾವುದಕೆ ವಳೆದಾವೆ

ಅತೇರು ಈತೇರು ಜೋತಿಲಿಂಗದ ತೇರು
ಸ್ವಾಮಿ ತಿಪ್ಪಯ್ನ ವೊಸತೇರು ಗಾಲಿಮ್ಯಾಲೆ
ಚಿತ್ತಾರದ ಗೊಂಬಿ ನಗುತಾವೆ

ಕುದುರೆ ಅತ್ತಲುಬೇಕು ಪುತ್ರ ಮುಂದಿರಬೇಕು
ರೇಸಿಮೆಸೀರೆ ವುಡುಸಬೇಕು ತಿಪ್ಪೇಸ್ವಾಮಿ
ತೇರಿಗೋಗಿ ಬರಲೂಬೇಕು

ತೇರಾನೆ ಎಳೆವಾಗ ವಾರೇನೆ ನಿಂತಿದ್ದಗೆ
ಯಾಲಕ್ಕಿ ಸೊರೆ ಬಿಡುತಿದ್ದೆ ತಿಪ್ಪೇಸ್ವಾಮಿ
ತೇರೆಳೆದು ನೆಲಿಗೆ ನಿಲುವಾಗ

ತೇರಿನ ಮುಂದೆ ಏನೇನು ಈನೋದ
ಕಾಲಲ್ಲಿ ಗೆಜ್ಜೆ ಕಯಿಬಾಕು ತಿಪ್ಪೇಸ್ವಾಮಿ
ನಿಂತಾನೆ ಸಮಾದಿ ಎದುರಿಗೆ

ಸ್ವಾಮಿ ತಿಪ್ಪಯ್ಗೆ ವಡೆಗಾಯಿ ಇಡುಗಾಯಿ
ದವನದ ಪಂಡಿ ವೊರಿವೊರಿ ತಿಪ್ಪೆಸ್ವಾಮಿ
ದವನ ಸೂರಾಡಿ ಬರುತಾನೆ

ಆಕೋ ಆಕೋ ಕಾಯಿ ಆಕೋ ತೆಂಗಿನಕಾಯಿ
ಆಕೋ ಮದ್ದಾನೆದ ಸವಕೆ ತಿಪ್ಪಣ್ಣ
ವೋಕಳಿ ಆಡಿ ಬರುವಾಗ

ವಡೆಯ ತಿಪ್ಪಯ್ಯಗ ಕಡಿಯಬಾಗಿಲೆರಡು
ನಂದಿಕೋಲೆರಡು ಪಟನೂರು ತಿಪ್ಪಯ್ಯಗ
ನಿವ್ವಾಳಿ ಕಾಯಿ ನೂರಾರು

ಅಂಬಾರದಾ ಮಳಿಬಂದು ಮುಂಬಾರದ ಕೆರೆತುಂಬಿ
ಗಂದಕಸ್ತೂರಿ ತೆರೆವೊಯ್ದು ಇರೆಕೇರಿ
ಮುಂದಾಲ ಮನಿಯಲ್ಲಿ ಸಿವಪೂಜೆ

ಆಕಾಸದಾ ಮಳಿಬಂದು ಬೂಪಾಲನ ಕೆರೆತುಂಬಿ
ತೋಪೆ ಕಸ್ತೂರಿ ತೆರೆವೊಯ್ದು ಇರಿಕೇರೆ
ಆಲಾದ ತೋಪಿಲಿ ಸಿವಪೂಜೆ

ಅಂಬಾರದಗ್ಗಣಿ ತೆಂಗಿನ ತಿಳಿನೀರುಯ್ದು
ಸ್ವಾಮಿ ತಿಪ್ಪಯ್ಗೆ ಸಿವಪೂಜೆಗೋಗಲುವಾಗ
ಆಕಾಸದಾಗಂಟೆ ದಣಿರೆಂದಾವು

ಕಾವಿ ವಸ್ತುರವಿಲ್ಲ ಕಾಲೀಗೆ ಜಂಗಿಲ್ಲ
ಕೋರಾಣ್ಯಕೊಂದೇ ಬರಲಿಲ್ಲ ತಿಪ್ಪೇಸ್ವಾಮಿ
ಯೋಗಿ ಸಮಾದಿಗೋಗಲುವಾಗ

ಉದ್ದನ ಮುಕದೋರು ರುದ್ರಾಕ್ಸಿ ಕೊರಳೋರು
ಇದ್ದಾರೇನಮ್ಮ ಮಟದಾಗೆ ತಿಪ್ಪೇಸ್ವಾಮಿ
ಗದ್ದುಗೇ ಕಾಯಾ ಕಳುವ್ಯಾರೆ

ತೂಗು ಮಂಚದಲಿಂಗ ಸಿವಯೋಗಿ ಮಆಲಿಂಗ
ತೂಗುಮಂಚದ ಮಣಿಲಿಂಗ ನಿಜಕರುಣೆ
ಸಿವಿಯೋಗಿ ತಿಪ್ಪಯ್ನ ನಿಜಲಿಂಗ

ಅತ್ತು ಸಾವಿರಲಿಂಗ ವೊತ್ತಿಲಿ ಮನುಮತ ಲಿಂಗ
ಅತ್ತೇ ರವರತ್ನ ನಿಜಕರುಣೆ
ಸಿವಿಯೋಗಿ ತಪ್ಪಯ್ನ ನಿಜಲಿಂಗ

ಅತ್ತು ಸಾವಿರಲಿಂಗ ವೊತ್ತಿಲಿ ಮನುಮತ ಲಿಂಗ
ಅತ್ತೇ ಸಾವಿರದ ರವರತ್ನ ಐದಾವು
ಸ್ವಾಮಿ ತಪ್ಪಯ್ನ ಮಟದಾಗೆ

ಆಲಿಟ್ಟು ನಾನು ಅಳ್ಳದ ನೀರಿಗೋದೆ
ಆಲುಕ್ಕಿ ಅಳ್ಳ ಅರಿದಾವೆ ತಿಪ್ಪೆಸ್ವಾಮಿ
ಮಟ ಬೀದ್ಯಲ್ದ ಕೆಸುರಾಗಿ

ಕೆಸರಾದರ ವೊಸಮಣಿಯಾ ಆಕಿಸುವೆ
ಬಸವಾನ ಕಟ್ಟೀ ತುಳಿಸೂವೆ ತಿಪ್ಪೇಸ್ವಾಮಿ
ಬಸವೇರಿ ಆಡೋ ಪದರಂಗ

ಯಾಕೆ ತಿಪ್ಪೇಸ್ವಾಮಿ ಕೋಪಾವು ನನಮ್ಯಾಲೆ
ಬೇಕೆಂದರ ಬ್ಯೆಳ್ಳಿ ಸಿಕುರಾವೆ ಮಾಡಿಸುವೆ
ಸಾಕುಮಾಡಯ್ಯ ಬಡತಾನ

ಬಡತನ ಬಯುಲಾಗಿ ನಮ ಕೈಯ್ಯಿ ಮೇಲಾಗಿ
ಅಂಬಾರ ಬಾಯಿ ಅಡಿಯಾಗಿ ತಿಪ್ಪಯ್ನ
ನಂದಾದೀವಿಗೆ ವುರಿಸ್ಯೇವು

ಚಿಕ್ಕೆರೆ ತುಂಬಿದರ ಸಿರಿಕಾಣೆ ನಾಯ್ಕನಟ್ಟಿ
ಮುಕ್ಕುಳಿಸಿಕೋಡಿ ಅರುದಾವೆ ತಿಪ್ಪೇಸ್ವಾಮಿ
ಚಪ್ಪಾಳಿ ಬಡುದು ನಗುತಾನೆ

ಮಳಿಬಂದ ಮರುದಿನ ಸಿರಿಕಾಣೆ ನಾಯ್ಕನಟ್ಟಿ
ಮದರೆಗಡು ಕೋಡಿ ಅರುದಾವೆ ತಿಪ್ಪೇಸ್ವಾಮಿ
ಮದಬೂಪವೊರಟ ಕೇರ್ಯಾಗೆ

ಅಟ್ಟೀಯ ತಿಪ್ಪಯ್ಯ ಜಗಲೂರ ಪಾಪಯ್ಯ
ಚಿಕ್ಕೆರೆ ಕೋಡಿ ಬಸವಯ್ಯ ಜೊತಿಕೂಡಿ
ಲೆತ್ತವಾಡ್ಯಾರೆ ಕೆರಿಯಾಗೆ

ತುಂಬಿದ ಕೆರಿಯಾಗ ತೂಗು ಮಂಚದ ಮ್ಯಾಲೆ
ವಾಲಾಡಿ ಈಬುತ್ತಿ ದರಿಸ್ಯಾರೆ ತಿಪ್ಪಯ್ಗೆ
ಮೇಲಾಡಿ ಕಯ್ಯ ಮುಗುದಾರು

ಕೇರಿಯೇರಿಯಮ್ಯಾಲೆ ಕೆಂದೂಳೆದ್ದಾವೆ
ನಂದಿ ಕೋಲಾಡಿ ನವಿಲಾಡಿ ತಿಪ್ಪೇಸ್ವಾಮಿ
ಚಂಡಾಡಿ ಮಟಕೆ ವೊರಟಾನೆ

ಏಕಮ್ಮ ನಾಯ್ಕನಟ್ಟಿ ನೂಕುನುಗ್ಗಾದಾವೆ
ನಾಕು ಬಜಾರ ನಡುಗ್ಯಾವೆ ತಿಪ್ಪೇಸ್ವಾಮಿ
ವೋಕುಳಿಯಾಡಿ ಬರುವಾಗ

ಸ್ವಾಮೀಯ ಮಟಕೆ ವೋದಾರೆ ಬಕುತಾರು
ಕಂಚಿನ ನಗಾರಿ ನುಡಿಸ್ಯಾರೆ ತಿಪ್ಪಯ್ಯ
ತೆಪ್ಪಕ್ಕೆ ಅಪ್ಪಾಣೆ ಕೊಡಿಸ್ವಾಮಿ

ಅಪ್ಪಾಣೆ ಕೇಳ್ಯಾರೆ ತ್ವಾಟಕ್ಕೆ ವೊರಟಾರೆ
ತೆಪ್ಪಾದ ಮರನ ಕಡಿದಲಗೆಯ ಮಾಡಿ
ಕಂಡುಗದ ಕಡಲಿ ಪನಿವಾರ

ಕಂಡುಗದ ಕಡಲಿ ಪರಿವಾರ ದೊರೆಮನಿಯ
ಕಂಬಿಯು ಮುಂದಾಗಿ ವೊರಟೀತು ತಿಪ್ಪೇಸ್ವಾಮಿ
ತೆಪ್ಪ ತೆರೆಮ್ಯಾಲೆ ಕೇರ್ಯಾಗೆ

ಅಟ್ಟಿ ತಿಪ್ಪಯ್ಯಗ ಊರೆಲ್ಲ ಬಕುತಾರು
ನಾನೇನ ಒಯ್ಯಾಲಿ ಬಡಮಗಳು ತಿಪ್ಪಣ್ಣ
ನೂರೊಂದು ಜಡೆಯ ಎಳಿದವನ

ವಡಿಯಾ ತಿಪ್ಪಯ್ಯನ ಬಡವಾನೆಂಬವುವರಾರೇ
ಬಲಕೈಲಿ ಬಾಳಿ ಎಲಿದೋಟ ಸಿರಿಯೇನು
ರವಿ ಮೂಡಿದಾಂಗ ಕೆರಿಏರಿ

ಕೆರಿ ಏರಿಮ್ಯಾಲೆ ನುರಿಯ ನುಗ್ಗಲಿಮುಳ್ಳು
ಬರಲಾರೆ ತಿಪ್ಪಯ್ಯ ಗಿರಿದೂರ ನನ್ನರಕೆ
ಬರುವೋನ ಕೈಯ್ಯೀಲಿ ಕಳುವೇನು

ಬರುವಾರ ಕೈಯ್ಯಿಲಿ ಕಳುವಾದೆ ಎತ್ತಮ್ಮ
ಸುತಿ ಬನ್ನಿರೋ ಪೌಳಿಯ ಮುಂದೆ
ಒಪ್ಪ ನಮ್ಮ ನಿನ್ನ ಮಗನರಕೆ

ಎಸರಾನೆ ಇಡುವಾಗ ಜ್ಯಸವಂತ ಕಂದಮ್ಮ
ಸುತ್ತಿಟ್ಟು ಬಾರೋ ಪಾಳೀಯ ಮುಂದೆ
ಬಿಚ್ಚಮ್ಮ ಮಗನ ಕಿರುಜಡೆಯ

ದೇವಾನ ನೆನೆದರೆ ದಾವುತಿ ನಮಗಿಲ್ಲ
ಆಚೆ ಕಚ್ಚಿದರೂನು ಇಸವಿಲ್ಲ ತಿಪ್ಪೇಸ್ವಾಮಿ
ಸ್ಯಾವೇಯ ಮಾಡಿದರ ದಣಿವಿಲ್ಲ

ಸ್ವಾಮವಾರ ದೈಯ್ಯ ನೇಮನಿತ್ತ್ಯದಯ್ಯ
ಮಹಾರುದ್ರ ನಿಮ್ಮ ಮಗಳಾಗಿ ಬಂದೇನು
ಆಲುತಂದೇನು ಸಲಿಸಯ್ಯ

ದುರುಗಾದೂರ ಮುಂದೆ ಸುರವೊನ್ನೆ ಮರನುಟ್ಟಿ
ತುರುವಾನೂರಿಗೆ ಬೇರು ಅರಿದಾವೆ ನಾಯ್ಕನಟ್ಟಿ
ಕೊನಿ ಬೀದಿಗೆ ನೆರಳು ಕವಿದಾವೆ

ಅಕ್ಕ ನಿಮಕನಸೀಗೆ ಚಿಕ್ಕಾ ಜಂಗಮಬಂದ
ಉತ್ತುತ್ತಿ ಅಣ್ಣು ಮಕ್ಕಳ ಪಲಕಾಣೇ

ಚಿಕ್ಕಾ ಜಮಗಮನು ಸಿವಕಾಣೆ
ಅಮ್ಮಾ ನಮ ಕನಸಿನಾಗೆ ಬಾಲಜಂಗಮಬಂದ

ಬಾಳೆಯಣ್ಣು ಬಾಲಾರ ಪಲಕಾಣೆ
ಬಾಲ ಜಂಗಮ ಸಿವಕಾಣೆ

ವೊನ್ನು ವೊನ್ನೆಲ್ಲಿ ವೊಳೆದಾವೇ
ವೊನ್ನೇ ವೊನ್ನಟ್ಟಿ ಬಯಿಲಾಗಿ ತಿಪ್ಪೇಸ್ವಾಮಿ
ವೊನ್ನಾಗಿ ಜನಕೆ ವೊಳೆದಾನೆ

ಮುತ್ತು ಮುತ್ತೆಂದಾರೆ ಮುತ್ತೆಲ್ಲಿ ವೊಳೆದಾವೆ
ಮುತ್ತಿ ಮುತ್ತಟ್ಟಿ ಬಯಲಾಗಿ ತಿಪ್ಪೇಸ್ವಾಮಿ
ಮುತ್ತಾಗಿ ಜನಕೆ ವಳೆದಾನೆ

ಸ್ವಾಮಿ ಬರುತಾನೆಂದು ಸಾಗಿ ಬೀದಿಗೆ ಬಂದೆ
ಸ್ವಾಮಿ ನೀ ನಮಕೈಯ್ಯಿಗೆ ಸಿಗಲಿಲ್ಲ ಚಿಕ್ಕೆರೆಯಾ
ಯಾಲಕ್ಕಿ ತೋಪಲಿ ನೀ ಮರಿಯಾಗಿ

ರುದ್ರ ಬರುತಾನೆಂದು ಎದ್ದೂ ಬೀದಿಗ ಬಂದೆ
ರುದ್ರ ನಮ ಕೈಯ್ಯೀಗ ಸಿಗಲಿಲ್ಲ ತಿಪ್ಪೇಸ್ವಾಮಿ
ಇರಿಕೆರಿಯ ರುದ್ರಾಕ್ಸಿ ತೋಪೆ ಮರಿಯಾಗಿ

ಅಟ್ಟಿ ತಿಪ್ಪೇಸ್ವಾಮಿ ಸತ್ಯಾವಂತನು ಕಾಣೆ
ಸತ್ತೆಮ್ಮಿ ಆಲು ಕರೆದುಂಡ ಪಾವಾಡ
ದಿಕ್ಕುದಿಕ್ಕಿಗೆ ಬ್ಯೆಳೆದಾವೆ

ಸಣ್ಣಾನೆ ಕುಚ್ಚೀಗೆ ಸಣ್ಣಾಮುತ್ತಾನಾಕಿ
ಪನ್ನಂಗದಾಗೆ ಬರುತಾನೆ ತಿಪ್ಪಯ್ಯಾಗೆ
ಮಾನ್ಯಾರು ಕಯೈತ್ತಿಮುಗುದಾರೆ

ದೊಡ್ಡಾನೆ ಕುಚ್ಚಿಗೆ ದೊಡ್ಡಾಮುತ್ತಾನಾಕಿ
ವಡ್ಡೋಲಗದಿಂದಲಿ ಬರುವ ತಿಪ್ಪಯ್ಯಗೆ
ದೊಡ್ಡೋರು ಕಯೈತ್ತಿ ಮುಗುದಾರು

ಆಚೆ ವಾಲಗದೋರು ಈಚೆ ಪಾತ್ರದೋರು
ಬಾಕೋರು ತೋಳ ಬಸವೇರು ಬರುವಾಗ
ಬೂಪತಿಪ್ಪಯ್ಯ ಬೆವೆತಾನೆ

ವುಚ್ಚಯಸು ಸಿಂಗರವಾಗಿ ಎಸ್ಟುತ್ತು ಆದಾವೆ
ವುಚ್ರಯಸದಮ್ಯಾಲೆ ಕಳಸಾವೆ ಸಿಂಗರವಾಗಿ
ನಿಸ್ತ್ರೇರ ಬೋಗಿರತವೇರೋ

ಎತ್ತು ಅತ್ತಲುಬೇಕು ಪುತ್ರ ಮುಂದಿರಬೇಕು
ದುತ್ತಾರಿ ಸೀರೆ ಉಡಬೇಕು ತಿಪ್ಪೇಸ್ವಾಮಿ
ವುಚ್ರಯಸು ನೋಡಲುಬೇಕು

ಅಟ್ಟೀಯ ತಿಪ್ಪಯ್ನ ಗೆಜ್ಜೇಯ ಮಟದಾಗೆ
ವುಚ್ರಯಿಸುವ ಸಾಗಿ ಬರ ಏಳುವಾಗ ಅಕ್ಕ ನಾವು
ಆರುತ್ತಿಸೂರೆ ಬಿಡುವಾನಿ

ವುಚ್ರಾಯಾಕಾಕ್ಯಾರೆ ಅತ್ತು ಸೇರಿನಗಂಟೆ
ವುಚ್ರಾಯದ ಮುಂದೆ ಬಸವಾನೆ ಕೊರಳಿಗೆ
ಅತ್ತು ಸೇರಿನ ವುರಿಗೆಜ್ಜೆ

ಅಟ್ಟೀಯ ತಿಪ್ಪಯ್ಯ ಅಸಿದು ಬರುತಾನೆಂದು
ರಸುಬಾಳೆ ಅಣ್ಣಸುಲಿಯದುಡವೆ ಇಂದೆಬರುವ
ಬಸವಾಗಿಡುವೆ ನೆಲುಗಡಲೆ

ಅಪ್ಪಾ ತಿಪ್ಪಯ್ಯಗೆ ಒಪ್ಪಾದ ಮಗಳು ನಾನು
ತುಪ್ಪಾದ ಮೀಸಲು ಕಳುವೇನು ಮಟದಾಗೆ
ಮುತ್ತೆ ಸೂರಿಟ್ಟು ಬರುವೇನು

ಅಪ್ಪಾ ತಿಪ್ಪಯ್ಯಗೆ ಒಪ್ಪಾದ ಮಗಳು ನಾನು
ಎಣ್ಣೇಯ ಮೀಸಲು ಕಳುವೇನು ಮಟದಾಗೆ
ಮುತ್ತೆ ಸೂರಿಟ್ಟು ಬರುವೇನು

ತಿಪ್ಪಯ್ಯನ ಮಟದಾಗೆ ಕುಪ್ಪೆಸ್ಯಾವಂತಿಗೆ
ತಿಪ್ಪಮ್ಮನೆಂಬೂ ಕರಬಂದು ಮೇದಾವೆ
ತಿಪ್ಪಯ್ಯಗೇರು ದವನಾವೇ

ಸ್ವೋಮವಾರದ ದಿನ ಸ್ವಾಮಿ ಮನೆಗೆ ಬಂದ
ಸಾರಿಸುತಾಲಿದ್ದೆ ನಡುಮನೆ ತಿಪ್ಪೇಸ್ವಾಮಿ
ಜಾರೀಕೆ ಎಂದಾರೆ ತಿರುಗ್ಯಾರೆ

ಮಾಯಕಾರಸ್ವಾಮಿಯಾವಾಗೈದಾನೆ
ದೀವಿಗೆ ತಾರೋವುಡುಕಾನೆ ತಿಪ್ಪೇಸ್ವಾಮಿ
ಮಾಯಾವಾಗೈದಾನೆ ಮಟದಾಗೆ

ಅತ್ತೀವೂವಿನಂಗೆ ಅಚ್ಚಡವಾನೆಯಿದು
ಒಪ್ಪಾಲಿಲ್ಲಮ್ಮ ಮುನಿಸ್ವಾಮಿ ನಮ್ಮ ತಿಪ್ಪೇಸ್ವಾಮಿ
ಸುಪ್ಪತ್ತಿಕ್ಕಿ ಬುಡುಸಿ ಮನುಗ್ಯಾರೆ

ಮಲ್ಲೀಗೂವಿನಂಗ ವಲ್ಲೀಯಾನೆಯಿದು
ಒಪ್ಪಲಿಲ್ಲಮ್ಮ ಮುನಿಸ್ವಾಮಿ ನಮ್ಮ ತಿಪ್ಪೇಸ್ವಾಮಿ
ಪಲ್ಲಕ್ಕೀಲಿ ಕುಂತಾರು

ನಂದಿನಂದಿಗೆ ಮುತ್ತು ನಂದಾದೀವಿಗೆ ಬೆಳಕು
ಗಂದಾದ ಕೊರಡಿಗೆ ನೆಲಗಾರೆ ಮಾಡೀರೆ
ತಂದೆ ತಿಪ್ಪಯ್ನ ಮಟದಾಗೆ

ಸಾಲು ಸಾಲು ಮುತ್ತು ಪ್ರಾಣದ್ದೀವಿಗೆ ಬೆಳಕು
ಸಾಣೆಕಲ್ಲಲಿ ನೆಲಗಾರೆಗೈದಾರೆ
ಸ್ವಾಮಿರುದ್ರಾನ ಮಟದಾಗೆ

ಅಪ್ಪಾ ತಿಪ್ಪಯ್ಯಾಗೆ ಚಿಕ್ಕೋನೆ ಪೂಜಾರಿ
ಕಯ್ಯುದ್ದ ಕಡಗಾವಾಗಿ ಅಚ್ಚಮಲ್ಲಿಗೂವು
ಕೊಯ್ದಪ್ಪಗಾಕ್ಯಾರೆ ಜಪಮಾಲೆ

ಗಂಗಾಳ ಬೆಳಗಿಟ್ಟೆ ಪುಸ್ವಾವ ತಂದಿಟ್ಟೆ
ಕಟ್ಟುದೀವಿಗೆ ನಡುವಿಟ್ಟೆ ತಿಪ್ಪೇಸ್ವಾಮಿ
ಸಿವಪೂಜೆಗೆ ದಯಮಾಡು

ಅಂಗಾರದೋಳಗೆ ಮಾಡಿ ಅಂಗೈಯ್ಯಿನಂದಾವೆ
ಗಂಗಾಳ ಬೆಳಗಿಬುದನಿಂಬಿ ತಿಪ್ಪೇಸ್ವಾಮಿ
ತಂದೆ ಬನ್ನೈಕ್ಕೆ ದಯಮಾಡೋ

ಬಟ್ಟಾರದೋಳಿಗೆ ಮಾಡಿ ಬೈಟ್ಟೆರಡು ನಂದಾವೆ
ಬಟ್ಟಾಲು ಬೆಳಗಿ ಸೆರಣೆಂಬೆ ತಿಪ್ಪೇಸ್ವಾಮಿ
ಅಪ್ಪಾಬಿಮನ್ನೈಕೆ ದಯಮಾಡೋ

ಆತಾನೆ ಬರುವಾಗ ನಾತಾವು ಮಲ್ಲಿಗಿದು
ಸ್ವಾಮಿಯು ತಿಪ್ಪಯ್ಯ ಬರುವಾಗ ಚಿಕ್ಕೆರೆ
ತೋಪೆಲ್ಲ ಮಂಜು ಕವಿದಾವೆ

ರುದ್ರಾಬಿಸೇಕ ಇದ್ದಲ್ಲಿ ಆದಾವೆ ವಡಿಯಾಗೆ
ಗದ್ದುಗೆಯ ಮೇಲಿರುವ ವಡಿಯಾಗೆ ಅಲ್ಲವ್ವ
ಸಿರದಾಗೈದಾವೆ ಪಣಿಲಿಂಗ

ಸುರುದನ್ನೆ ಗುಡಿಕಟ್ಟಿ ಮುಂದೆ ಬಾವಿನೋಡಿ
ಮೇಗಳು ಕಲ್ಲು ಮರೆಮಾಡಿ ತಿಪ್ಪೇಸ್ವಾಮಿ
ದ್ಯಾವರಿಗೆ ಅಗ್ನಿಯ ಕೊಡುತಾನೆ

ಚಂದ್ರಾನೆ ಗುಡಿಕಟ್ಟಿಮ್ಯಾಲೆ ಬಾವಿತೋಡಿ
ಇಂದಾನೆ ಕಲ್ಲು ಮರೆಮಾಡಿ ತಿಪ್ಪೇಸ್ದವಾಮಿ
ಲಿಂಗಕ್ಕಗ್ಗಿಣಿಯ ಕೊಡುತಾನೆ