ಬೋಸೇದೇವರ ಹಟ್ಟಿ ನಾಯಕನಹಟ್ಟಿಯ ಬಳಿಯೇ ಮೂರ್ನಾಲ್ಕು ಕಿ.ಮೀ. ಅಂತರದಲ್ಲಿದೆ. ಇಲ್ಲಿ ಹೆಚ್ಚು ಸಂಖ್ಯೆಯಲ್ಲಿರುವವರು ಮ್ಯಾಸಬೇಡರು. ನಾಲ್ಕಾರು ಮಾಳಿಗೆ ಮನೆಗಳಿದ್ದು, ಎಲ್ಲರೂ ವ್ಯವಸಾಯ ಜೀವನವನ್ನು ಅವಲಂಬಿಸಿರುತ್ತಾರೆ. ಸಂಪೂರ್ಣ ಬಯಲು ಸೀಮೆಯಾಗಿದ್ದು, ಇವರದು ಬಹುಮಟ್ಟಿಗೆ ಮಳೆಯನ್ನೇ ನಂಬಿರುವ ವ್ಯವಸಾಯ. ಇಲ್ಲಿ ನೆಲೆಯಾಗಿರುವ ಬೋಸೇದೇವರೂ ಕೂಡ ಗುಡಿಸಲಲ್ಲೇ ವಾಸವಾಗಿರುತ್ತಾನೆ. ಸುತ್ತ ಬೇಲಿಯಿದ್ದು ಮಧ್ಯೆ ಗುಡಿಸಲಲ್ಲಿ ಬೋಸೇದೇವರ ಪೆಟ್ಟಿಗೆ ಇದೆ. ಒಂದು ಕಡೆಯಿಂದ ಇನ್ನೊಂದು ಕಡೆ ಪಶುಪಾಲನೆಯ ಮೇಲೆ ಅಲೆಮಾರಿ ಸಮೂಹವಾಗಿದ್ದಾಗ ತಮ್ಮ ದೇವರನ್ನು ಸಾಗಿಸುತ್ತಿದ್ದುದರಿಂದ ದೇವರು ಕೂಡ ಸಾಗಿಸಬಹುದಾದ ಪೆಟ್ಟಿಗೆಯಲ್ಲೇ ಇರುತ್ತಿದ್ದ. ಬೋಸೇ ದೇವರ ಹಟ್ಟಿಯ ಮಧ್ಯಭಾಗದಲ್ಲಿದ್ದ ಪುಟ್ಟ ಗುಡಿಸಲ ಒಳಗೆ ಒಬ್ಬರೇ ತೂರಿಹೋಗುವಷ್ಟು ಜಾಗವಿದ್ದು ಒಳಗೆ ಸಾರಿಸಿದ ನೆಲದ ಅಂಕಣದಲ್ಲಿ ಒಂದು ತೆವಟಿಗೆ. ಆ ತೆವಟಿಗೆಯ ಮೇಲೆ ಒಂದು ಪೆಟ್ಟಿಗೆ. ಅದೇ ಬೋಸೇದೇವರು. ನಿತ್ಯ ಪೆಟ್ಟಿಗೆಯನ್ನು ತೆರೆದು ಪೂಜೆ ಮಾಡುವುದಿಲ್ಲ. ಅದರ ಒಳಗೇನಿದೆ ಎಂಬುದೂ ಭಕ್ತರಿಗೆ ತಿಳಿದಿರುವುದಿಲ್ಲ. ಆದರೆ ವರ್ಷಕ್ಕೊಮ್ಮೆ ದೇವತೆ ಜಲಧಿಗೆ ಹೋಗುವಾಗ ಅಲ್ಲಿ ಮರೆಮಾಡಿಕೊಂಡು ಪೂಜಾರಿ ಪೆಟ್ಟಿಗೆಯನ್ನು ತೆಗೆದು ಒಳಗಿರುವ ದೇವತೆಯನ್ನು ನೀರಿನಲ್ಲಿ ತೊಳೆದು ಮಡಿ ಮಾಡಿ ಮತ್ತೆ ಪಟ್ಟಿಗೆಯಲ್ಲಿಟ್ಟು ಮುಚ್ಚಿ ಗುಡಿಸಲಿಗೆ ತಂದರೆ ಮತ್ತೆ ಅದನ್ನು ತೆರೆಯುವುದು ಮುಂದಿನ ವರ್ಷವೇ. ಈ ಬಗೆಯ ವ್ಯವಸ್ಥೆ ಅನೇಕ ಹಟ್ಟಿಗಳಲ್ಲಿ ಇದೆ. ಬುಡಕಟ್ಟಿನವರ ನಡುವೆ ಎಂದೋ ಬದುಕಿ ಸಾಹಸಕಾರ್ಯ ಮಾಡಿ ಮಡಿದವನಾಗಿದ್ದರೆ ಆತನ ಆಯುಧ ಪೆಟ್ಟಿಗೆಯೊಳಗೆ ಇರಬಹುದು. ಶೈವ ಮೂಲದ ದೇವತೆಯಾದರೆ ಕರಡಿಗೆಯಿರಬಹುದು. ವೈಷ್ಣವ ದೇವತೆಯಾದರೆ ಪೆಟ್ಟಿಗೆಯಲ್ಲಿ ಸಾಲಿಗ್ರಾಮವಿರುತ್ತದೆ. ಬೋಸೇದೇವರ ಹಟ್ಟಿಯ ಜನ ತಮ್ಮನ್ನೆಲ್ಲ ಈ ದೇವತೆಯ ಹೆಸರಿನಲ್ಲೇ ನಿರ್ವಹಿಸಿಕೊಳ್ಳುತ್ತಾರೆ. ಸಿರಿಯಜ್ಜಿ ಮ್ಯಾಸಬೇಡ ಸಮೂಹದ ಈ ಹಾಡನ್ನು ನೆನಪಿನಲ್ಲಿರಿಸಿಕೊಂಡಿದ್ದಾಳೆ.

ಬೋಸೇದೇವರು ಗೀತೆ

ಗದ್ದೆ ಗದ್ದೆಗೆ ನೀರು ತಿದ್ದೀದಂಗೈದಾವೆ
ರುದ್ದರನ ಮಗನೆ ಕಲಿವೀರಬದ್ದುರನೆ
ತಿದ್ದಯ್ಯಮನಕ ಮತಿಗಾಳ

ಎಲ್ಲಿಎಲ್ಲಿಗೆ ನೀರು ಚೆಲ್ಲಿದಂಗೈದಾವೆ
ಮಲ್ಲಯ್ಯ ಮಗನೆ ಕಲವೀರಬದ್ದುರನೆ
ಚೆಲ್ಲಯ್ಯ ಮನಕೆ ಮತಿಗಾಳ

ಯಲ್ಲಯಲ್ಲಕ ಮುನ್ನ ಬಲ್ಲೋಳ ಬಲಗೊಂಬೆ
ಎಳ್ಳುಜೀರಿಗೆ ಬೆಳವೋಳ ಬೂಮ್ಯಮ್ಮನ
ಬಲ್ಲೋಳೆ ಮದಲೇ ಬಲಗೊಂಬೆ

ಯಾತ ಯಾತಕ ಮುನ್ನ ಅಕೀಯ ಬಲಗೊಂಬೆ
ಕಾತೆ ಜೀರಿಗೆ ಬೆಳವೋಳ ಬೂಮ್ಯಮ್ಮನ
ಆಕೀಯ ಮದಲೇ ಬಲಗೊಂಬೆ

ಮುದ್ದೀನುಂಗರದೋಳೆ ತಿದ್ದೀದನೆರಿಗ್ಯೋಳೆ
ಗಿದ್ದುನ ಮ್ಯಾಲಾಡಿ ಬರುವೋಳೆ ಸರಸೋತಿ
ಎದ್ದೇಬಾರಮ್ಮ ವಚನಾಕೆ

ಅವಳಾದುಂಗರದೋಳೆ ವಳೀಯ ನೆರಿಗ್ಯೋಳೆ
ದಡಿಯಾ ಮ್ಯಾಲಾಡಿ ಬರುವೋಳೆ ಸರಸೋತಿ
ವಡದೇಬಾರಮ್ಮ ವಚನಾಕೆ

ಎತ್ತೀಗೆ ಕೊಟ್ಟೈದೀರಿ ವತ್ತೀಲಿ ನಿಂತೈದೀರಿ
ಬರುದನಾನೆಂಗೆ ಬರೆಯಾಗಿ ಬೋಸಯ್ಯ
ಬರದಂತ ಪದನ ಬರಕೊಡೊ

ವಾಲೆ ಕೊಟ್ಟೈದೀರಿ ವಾರೀಯ ನಿಂತೈದೀರಿ
ತಪ್ಪದ ನಾನೆಂಗೆ ಬರೆಯಾಲಿ ಬೋಸಯ್ಯ
ತಪ್ಪೀದ ಪದನ ಬರಕೊಡೊ

ವಾಲೆ ತೊಡಿಯಾ ಮ್ಯಾಲೆ ಗ್ಯಾನ ನಿನ್ನ ಮ್ಯಾಲೆ
ಸೆಟ್ಟೋರಕ್ಸರವೆ ತಿಳಿಯಾದೆ ಬೋಸಯ್ಯ
ತಪ್ಪೀದ ಪದನ ಬರಕೊಡೊ

ವತ್ತೀಗೆ ತೊಡಿಯಾ ಮ್ಯಾಲೆ ಚಿತ್ತ ನಿನಮ್ಯಾಲೆ
ಆರೋರಕ್ಸರವೆ ತಿಳಿಯಾವು ಬೋಸಯ್ಯ
ಬರದಂತ ಪದನ ಬರಕೊಡೊ

ಅಪ್ಪ ನಿಮ್ಮ ವಚನ ಎತ್ತಿ ಆಡೋರುಣವಿಲ್ಲ
ಅತ್ತೀಯ ಮರದ ಬುಡದಿಂದ ಕೊನೆಯಿಂದ
ಅತ್ತೀಯೇ ಕಾತಂತೆ ಸಿವನೋಡು

ಸ್ವಾಮಿ ನಿಮ್ಮ ವಚನ ಈಡಾಡೋರುಣವಿಲ್ಲ
ಮಾವೀನ ಮರದ ಬಡದಿಂದ ಕೊನೆಯಿಂದ
ಮಾವೇ ಕಾತಂತೆ ಸಿವನೋಡು

ಅಣ್ಣಾ ನಿಮ್ಮ ವಚನ ಕೊಂಡಾಡೋ ರುಣವಿಲ್ಲ
ತೆಂಗೀನಮರದ ಬುಡದಿಂದ ಕೊನೆಯಿಂದ
ತೆಂಗೇ ಕಾತಂತೆ ಸಿವನೋಡು

ತಣ್ಣೀರು ಮಿಂದಾರ ನಾಣ್ಯೇವು ವೊದ್ದಾರೆ
ಪನ್ನೀರಿನೆ ಗಿಂಡಿ ಬಲಗೈಲಿ ಮಾದಯ್ಯ
ಅಣ್ಣಯ್ನ ತಂದೋ ಬಯಲೀಗೆ

ಅಣ್ಣಾನವರು ಬನ್ನಿ ಎಣ್ಣುಂಡ ಮೈಯ್ಯೋರೆ
ಸಣ್ಣಾರುದ್ರಾಕ್ಸಿಕೊರಳೋರೆ ಮಾದಯ್ಯ
ಅಣ್ಣಯ್ಯಗೆಗಲು ಕೊಡಬನ್ನಿ

ಅಪ್ಪಾನವರು ಬನ್ನಿ ತುಪ್ಪಂಡ ಮೈಯ್ಯಾರೆ
ಚಿಕ್ಕರುದ್ರಾಕ್ಸಿಕೊರಳೋರೆ ಮಾದಯ್ಯ
ಅಪ್ಪಯ್ಯಗೆಗಲು ಕೊಡಬನ್ನಿ

ಅಪ್ಪಾನವರು ವೊರವಾಕ ಪಟ್ಟೇದಚ್ಚಡವಿಲ್ಲ
ರಟ್ಟೀಗೆ ತಾಯಿತದ ಮಣಿಯಿಲ್ಲ ಇಲ್ಲವಂದು
ಅಪ್ಪಾನೆ ಮಿದಿಯಣ್ಣ ವೊರನಲ್ಲ

ಅಣ್ಣಾನ ವೊರವಾಕ ಬಣ್ಣಾದಚ್ಚಡವಿಲ್ಲ
ರಟ್ಟೀಗೆ ತಾಯಿತದ ಮಣಿಯೈತೆ ಐದಾವಂದು
ಕಂದನ ಬೋರವ್ವ ಕರೆದಾಳೆ

ದೇವಾರ ವೊರಿಸ್ಯಾರೆ ದೀರಗೋಮಾರಾಗೆ
ದೇವಕ್ಕೀರಡೆದ ಮಗನೀಗೆ ಮಾದಯ್ಯಾಗೆ
ದೇವಾರೊರಿಸ್ಯಾರೆ ಇರಿಯೋರು

ಪಟ್ಟೀಗೋರಿಸ್ಯಾರೆ ದಟ್ಟಿಗೊಮಾರಾಗೆ
ಮುತ್ತೈದೇರಡೆದ ಮಗನಿಗೆ ಬೋರಯ್ಯಾಗೆ
ಪೆಟ್ಟೀಗೊರಿಸ್ಯಾರೆ ಇರಿಯಾರು

ಅಣ್ಣಾನ ವೊರುವಾಗ ಏನಂದರು ಮಾದಯ್ಯ
ಇನ್ನು ನನ್ನ ಗುರುವೆ ಎದರೀದೆ ದೇವರಟ್ಟಿ
ಅಣ್ಣ ಎಗುಲೀಗೆ ಬರುವಾದು

ಅಪ್ಪಾನ ವೊರುವಾಗ ಏನಂದಿರಿಮಾದಯ್ಯ
ತಪ್ಪು ನನ್ನ ಗುರುವೆ ಎದರೀದೆ ದೇವರಟ್ಟಿ
ಅಪ್ಪ ಎಗಲೀಗೆ ಬರುವಾಗ

ಎತ್ತ ಮಕ್ಕಳೇಳಿರಿ ಬೆತ್ತದ ಕೋಲವರೇಳಿರಿ
ಅಪ್ಪ ಬೋಸಯ್ಯ ಆರುಗೀಲಿ ನಿಂತಿರುವಾರೆ
ವಾಲಗದೋರೇಳೀರಿ ದೊರೆಯೆದ್ದ

ಆಡ ಮಕ್ಕಳೇಳಿರಿ ವೂವಿನ ಕೋಲೋರೇಳೀರಿ
ಸ್ವಾಮಿ ಬೋಸಯ್ನ ಆರುಗೀಲಿ ನಿಂತಿರುವಾರೆ
ಚೆತ್ರಿಕೆ ದೋರೇಳಿರಿ ದೊರೆಯೆದ್ದ

ಎತ್ತು ಕಾಮಣ್ಣ ಮುತ್ತುನೆಲ್ಲಿ ಮುಡುದೆ
ಎತ್ತೆಲ್ಲಿ ನೀರು ಕುಡುದಾವೆ ಇರಿಯಕೆರೆ
ಮುತ್ತಿನ ಸಾಗ್ರಾದ ವಳಿಯಾಗೆ

ಕಂಡುಗದನ್ನ ಗದ್ದೆ ದುಂಡೇಳೋದುಳುದಾವೆ
ಮುಂದೆ ಮಂಚಯ್ಯ ನಿಲದರುರು ಬೋಸಯ್ನ
ಅಂದೋರಿ ಬಲುಮೆ ಬಲಬಲುಮೆ

ನಾಗಳದನ್ನ ಗದ್ದೆ ದೊಳೇಳದುಳುದಾವೆ
ಮ್ಯಾಲೆ ಮಂಚಯ್ಯ ನಿಲವರುದು ಬೋಸಯ್ನ
ಜಾಲೋರಿ ಬಲುಮೆ ಬಲುಬಲುಮೆ

ಅತ್ತು ಇಂಡಿನಾಗ ಎತ್ತೆ ಬಸವಾಗೆ
ಮತ್ತೇನು ವೊಯ್ದೆ ಮುರುತಾವೆ ಮಂಚಯ್ಯ
ಎತ್ತೆ ತುಪ್ಪದಲಿ ಅದಮಾಡಿ

ಆರಿಂಡಿನಾಗಳ ವೋರಿಬಸವಾಗೆ
ಮ್ಯಾಲೇನು ವೊಯ್ದೆ ಮುರುತಾವೆ ಮಂಚಯ್ಯ
ಜೇನೆ ತುಪ್ಪದಲಿ ಅದಮಾಡಿ

ಎತ್ತೀನ ಮುಂದೆ ಬರುವ ಪಟ್ಟೇದಟ್ಟಣ್ಣಯ್ಯ
ಎತ್ತೀನೋಬಯ್ನ ಮಗನೇನೋ ಕೊರಳಾಗಿರುವ
ಮುತ್ತೀನೊಲಮಾಲೆ ನಮುದಯ್ಯ

ಆವೀನ ಮುಂದೆ ಬರುವ ಗೀರಾದಿಟ್ಟಣ್ಣಯ್ಯ
ಆವೀನೋಬಯ್ನ ಮಗನೇನೋ ಕೊರುಳಾಗಿರುವ
ವೊನ್ನಿನೊಲಮಾಲರ ನಮುದಯ್ಯ

ಎತ್ತು ಬಂದಾವೆ ಬಾರೆ ಸುತ್ತಿನ ಮನೆ ಮಿದಿಯವ್ವ
ಎತ್ತೀನ ಮುಂದೆ ಕಣಲೂಡಿ ಪಾತುರನಾಡಿ
ಎತ್ತಿಗೆ ಸಾಸ್ಯೇವು ಇಡಿದಾರ

ವೋರಿ ಬಂದವು ಬಾರೆ ದೇವರು ಮನೆ ಬೋಸವ್ವ
ವೋರಿಯ ಮುಂದೆ ಕಣಲೂಡಿ ಪಾತುರನೂಡಿ
ವೋರಿಗೆ ಸಸ್ಯೇವು ಇಡುದಾರೆ

ಬಾಗೂತಬಂದಾವೆ ಬಾಗುಗೋಡಿನ ಬೆಳ್ಳಿ
ತೂಗುತ ಬಂದಾವೆ ಎಳಿವೋರಿ ಬೋಸಯ್ನ
ಉಗ್ರಾಣದ ಮನೆಗೆ ಎದುರಾಗಿ

ಬಗ್ಗೂತಬಂದಾವೆ ಬಾಗುಗೋಡಿನ ಬೆಳ್ಳಿ
ನುಗ್ಗುತ ಬಂದಾವೆ ಎಳಿವೋರಿ ಬೋಸಯ್ನ
ಸಾಗ್ರದರಮನೆಗೆ ಎದುರೀಗೆ

ನಲ್ಲೆತ್ತು ಬರುವಾಗ ಮಲ್ಲೆ ಸಾಲಾಗಿದ್ದೆ
ನಲ್ಲೆತ್ತು ಪವುಳಿ ವೋಗುವಾಗ ಬೋಸಯ್ಗೆ
ಮಲ್ಲಿಗಾರುತಿಯ ಇಡಿದಿದ್ದೆ

ಕೆಂದೆತ್ತು ಬರುವಾಗ ಗಂದಾಸಾಲ್ಯಾಗಿದ್ದೆ
ಕೆಂದೆತ್ತೆ ಪೌಳಿ ವೋಗುವಾಗ ಬೋಸಯ್ಗೆ
ಗಂದಾದಾರತಿಯ ಇಡಿದಿದ್ದೆ

ಬಟ್ಟೆತ್ತು ಬರುವಾಗ ಪಟ್ಟೆ ಸಾಲ್ಯಾಗಿದ್ದೆ
ಬಟ್ಟೆತ್ತೆ ಪೌಳಿ ವೋಗುವಾಗ ಬೋಸಯ್ಗೆ
ಮುತ್ತೀನಾರತಿಯ ಇಡಿದಿದ್ದ

ಕಾವಟಿಗೊರುವಣ್ಣಾನ ಕಾಲಿಂಬಾಗೆ ನಡಿಯಣ್ಣ
ಕಾವಿಟಿ ಕಾವಿಟಿಗೆ ತಣಿಕ್ಯಾವೆ ಇರಿಯಕೆರೆ
ಸ್ವಾಮೀನೆ ಗತಿಯೆಂದು ನಡಿರಣ್ಣ

ಕಂಬಿಗೊರುವಣ್ಣಾಗೆ ಮುಂಗೈಗೆ ಮೂರಾರ
ಕೆಂಡಗಾಯಿಯವರ ನಡುವೀಗೆ ಬೋಸಯ್ನ
ಕಂಬೀಗೆ ವೊರುವ ಮಗನೀಗೆ

ಪೆಟ್ಟಿಗೊರುವಣ್ಣಾಗೆ ಬಟ್ಟಮುತ್ತಿನ ಬಾಬೂಲಿ
ಪಟ್ಟೇದಟ್ಯವರ ನಡುವೀಗೆ ಬೋಸಯ್ನ
ಪೆಟ್ಟೀಗೆ ವೊರುವ ಮಗನೀಗೆ

ಸ್ವಾಮೀನೆ ಬೋಸಯ್ಯ ವೂರುಬಿಟ್ಟೋಗಲುವಾಗ
ಸಾಲಗೇರ್ಯಾಗೆಲ್ಲ ಸೊಸಿವೋರು ಮೊಮ್ಮೊಕ್ಕಳು
ಸ್ವಾಮಿಗಾರತಿಯ ಇಡುದಾರು

ಅಪ್ಪೇನೆ ಬೋಸಯ್ಯ ಊರು ಬಿಟ್ಟೋಗಲುವಾಗ
ಸುತ್ತಗೇರ್ಯಾಗೆಲ್ಲ ಸಿಸುವೋರು ಮೊಮ್ಮಕ್ಕಳು
ಸ್ವಾಮಿಗಾರತಿಯ ಇಡಿದಾರೆ

ಅಕ್ಕಿಯನ್ನಬಾನ ಬಟ್ಟಂಗದೋಳೀಗೆ
ಇಕ್ಕೇನುಬಾರೋ ಮಡಿವಾಳ ದೇವರಟ್ಟಿ
ಸ್ವಾಮಿ ಬೋಸಯ್ಗೆ ಮಡಿಬೇಕು

ಜ್ವಾಳದನ್ನಬಾನ ಮ್ಯಾಲಂಗದೋಳೀಗೆ
ನೀಡೇನು ಬಾರೋ ಮಡಿವಾಳ ದೇವರಟ್ಟಿ
ಅಪ್ಪ ಬೋಸಯ್ಗೆ ಮಡಿಬೇಕು

ಪೆಚ್ಚೆತೆನಿಯಾ ಮ್ಯಾಲೆ ಗುಬ್ಬಿ ಗೂಡಾಕಟ್ಟಿ
ಮದ್ದಾನೆ ಮ್ಯಾಲೆ ದಗಮೇರು ಮಾವುಗಳು
ರಾಯಮದನಕುಂಟೆಗೆ ನಡೆದಾರೆ

ಜ್ವಾಳದ ತೆನಿಯಾ ಮ್ಯಾಲೆ ಗಿಣಿಯುಗೂಡಾಕಟ್ಟಿ
ಕಾಳೋರಿ ಮ್ಯಾಲೆ ದಗಮೇರಿ ಅಣ್ಣಗಳು
ಮದ್ಯನಕೆ ಸಾಗಿ ನಡೆದಾರೆ

ಅಳ್ಳಾವ ಇಳಿವಾಗ ಚೆಲ್ಯಾವು ಪಾದದ ಗೆಜ್ಜೆ
ಆಲವಂಗದುಡಿಗೆ ಸಡಿಲ್ಯಾವೆ ಬೋಸಯ್ನೆ
ಅಳ್ಳಾವನಿಳಿದ ರವಸೀಗೆ

ಬೆಟ್ಟಾವ ಇಳಿವಾಗ ಬಿಟ್ಟಾವು ಪಾದದಗೆಜ್ಜೆ
ಬಟುವಂಗದುಡಿಗೆ ಸಡಿಲ್ಯಾವೆ ಬೋಸಯ್ನ
ಬೆಟ್ಟಾವನಿಳಿವ ರವಸೀಗೆ

ಅಳ್ಳದಾಗೆ ಒಬ್ಬ ಕಳ್ಳ ಕುಂತೈದಾನೆ
ಒಳ್ಳೊಳ್ಳೆ ಎಣ್ಣೇ ಬರೆದೀರೆ ದೇವರಟ್ಟಿ
ಕಳ್ಳ ಕಂಡಾರೆ ಬಿಡೆನಮ್ಮ

ಬೆಂಚದಾಗೆ ಒಬ್ಬ ಕೆಂಚ ಕುಂತೈದಾನೆ
ಕೆಂಚೇರೆ ನೀವು ಬರದೀರೆ ದೇವರಟ್ಟಿ
ಕೆಂಚ ಕಂಡಾರೆ ಬಿಡೆನಮ್ಮ

ಮುತ್ತೀನ ಚತ್ರಿಕೆ ಮತ್ತೆಲ್ಲಿ ಅಣೆದಾರೆ
ಮತ್ತೆದುರುಗದಲಿ ಅಣೆದಾರೆ ಚತ್ರಿಕೆ
ಅಪ್ಪಗ್ವಾಲಾಡಿ ಇಡಿದಾರೆ

ಆರೇನೆ ಚತ್ರೀಕೆ ಆರೇನೆಜಗಜಂಪು
ಮ್ಯಾಲೆದುರುಗದಲಿ ಅಣೆದಾರೆ ಚತ್ರಿಕೆ
ಅಪ್ಪುಗ್ವಾಲಾಡಿ ಇಡಿದಾರೆ

ಅವುಗಳ ಕರಕಂಡು ದೇವಾರೊರೆಸಿಕೊಂಡು
ಜ್ಯಾಣ ಜರಿಮಲೆ ಬಯಲಾಗೆ ಮಂಚಯ್ಯ
ಆವೇ ವಾಲ್ಯಾಲಿ ಕರೆದಾನೆ

ಎತ್ತುಗಳ ಕರೆಕಂಡು ಪೆಟ್ಟಿಗೊರಸಿಕಂಡು
ಚಿಕ್ಕ ಜರಿಮಲೆ ಬಯಲಾಗೆ ಮಂಚಯ್ಯ
ಎತ್ತಿ ವಾಲಾಲಿ ಕರೆದಾನೆ

ತನಿಗಲ್ಲು ಇಟ್ಟಾಗಿ ತನಿಗಲ್ಲು ನುಚ್ಚಾಗಿ
ತನಿ ಬೇವಿನ ಮರನೆ ಬಯಲಾಗಿ ಬೋಸಯ್ಯ
ಸರವೇ ದಂಡೆದ್ದು ಬರುತಾವೆ

ಕಗ್ಗಲ್ಲು ಇಟ್ಟಾಗಿ ಕಗ್ಗಲ್ಲು ನುಚ್ಚಾಗಿ
ತುಗ್ಗೀಲಿ ಮರನೆ ಬಯಲಾಗಿ ಬೋಸಯ್ಯ
ಸರವೇ ದಂಡೆದ್ದು ಬರುತಾವೆ

ಅರುಗೀದ ವಲದಾಗೆ ಸುರವೊನ್ನೆ ಗಿಡದಾಗೆ
ಬಟ್ಟರಾಜುಣದ ಬಯಲಾಗೆ ಬೋಸಯ್ಯ
ವುರಿಮೀಯ ಸಾಲೆ ನಡೆದಾವೆ

ಬಿತ್ತಿದ ವಲದಾಗ ಉತ್ರಾಣಿಗಿಡದಾಗ
ಬಟ್ಟ ರಾಜುಣದ ಬಯಲಾಗೆ ಬೋಸಯ್ಯ
ಸೆತ್ರಿಕೆ ಸಾಲೆ ನಡೆದಾವೆ

ಅರುಗೀದೆ ವಲದಾಗೆ ಮರುಗಾವೆ ಎತ್ತಾರೆ
ಮರುಗದ ಬಾರಾಕೆ ಬಳುಕೋರೆ ಮಾದಯ್ಯನ
ಅಡೆದಮ್ಮ ಇನ್ನೆಂತ ಕರಿ ಸೆಲುವೆ

ಅಪ್ಪಾನ ಕುರಿಬಂದು ಕಿತ್ತುಲಿ ಮೇದಾವೆ
ಕಿತ್ತುಲಿ ನಡುವೆ ಕಿರುನೆಲ್ಲಿ ಮೇದಾವೆ
ಅಪ್ಪ ಬೋಸಯ್ನ ಕುರಿಬಂದು

ಜಾಣ್ಯಾನ ಕುರಿಬಂದು ಜ್ಯಾಲೀಯಮೇದಾವೆ
ಜ್ಯಾಲೀಯ ನಡುವೆ ದವನಾವೆ ಮೇದಾವೆ
ಜ್ಯಾಣ ಬೋಸಯ್ನ ಕುರಿಬಂದು

ಏರಿಯನ್ನ ಕೆಳಗೆ ಜೀರಿಗೆ ಮರನುಟ್ಟಿ
ಯಾಲಕ್ಕಿ ಮಾವೆ ತನುವೀಗೆ ಇರಿಯಕೆರೆ
ತಾವೊಳ್ಳೆದೆಂದು ನೆಲಗೊಂಡ

ಕಟ್ಟಿಯನ್ನು ಕೆಳಗೆ ವುತ್ತುತಿ ಮರನುಟ್ಟಿ
ವುತ್ತುತ್ತಿಮಾವೇ ತನುವೀಗೆ ಇರಿಯಕೆರೆ
ಗೊತ್ತೊಳ್ಳೇದೆಂದು ನೆಲೆಗೊಂಡ

ನೆತ್ತೀಗೆ ಬಿಸಿಲೇರಿ ಬತ್ತೇವಣ್ಣನ ಮಾರೆ
ಮತ್ತಿಳಿಯೋ ದೇವ ಕುದುರೀಯ ಮ್ಯಾಗಳ
ಪುಸ್ಪಬಾಡ್ಯಾವೆ ಬಿಸುಲೀಗೆ

ಕೆನ್ನೇಗೆ ಬಿಸಿಲೇರಿ ಕಂದ್ಯಾವಣ್ಣನ ಮಾರೆ
ಇನ್ನೀಳಿಯೋದೇವ ಕುದುರೀಯ ಚಿನ್ನಾದ
ಮಾರೆ ಬಾಡ್ಯಾವೆ ಬಿಸುಲೀಗೆ

ಆಲುಬಾನವುಂಡು ಅರವತ್ತೀಳ್ಯವಮೆದ್ದು
ಮಾವುಗಳೊರಟಾರೆ ಮಲೆನಾಡ ವುಲೆಯಗುಡ್ಡ
ಇಪ್ಪತ್ತೆ ಬಿದರೆ ಸವುದಾವೆ

ತುಪ್ವಾ ಬಾನಾವುಂಡು ಆರುವತ್ತೀಳ್ಯಮೆದ್ದು
ಅಪ್ಪಗಳೊರಟಾರೆ ಮಲೆನಾಡ ಮಲೆಯಗುಡ್ಡ
ಇಪ್ಪತ್ತೆ ಬಿದಿರೆ ಸವುದಾವೆ

ಅಪ್ಪಾನೆ ಅರಮನೆ ಮತ್ತೆಲ್ಲಿ ಅಣೆದಾರೆ
ಮತ್ತಿರಿಯ ಕೆರೆಯ ಬಯಲಾಗೆ ತುಗ್ಗಿಲಿ
ಚಿನ್ನಾರದರಣತ ಅಣೆದಾರೆ

ಸಾಲುಸಾಲಾಗೆ ಮುತು ಪ್ರಾಣಾದೀವಿಗೆ ಬೆಳಕು
ಗಾಜೀನ ಕೊರಡು ನೆಲಗಾರೆ ಆದಾವೆ
ಸ್ವಾಮಿ ಬೋಸಯ್ನ ಅರಮಾನೆ

ಸಂದಿಸಂದಿಗೆ ಮತ್ತು ನಂದಾದೀವಿಗೆ ಬೆಳಕು
ಗಂದಾದ ಕೊರಡು ನೆಲಗಾರೆ ಮಾಡ್ಯಾರೆ
ಸ್ವಾಮಿ ಬೋಸಯ್ನ ಅರಮಾನೆ

ಅಂದವುಳ್ಳ ಅಂಪೆಪಟ್ನ ಚಂದವುಳ್ಳ ಬಾಗಿಲಿಗೆ
ಮುಂದೆ ಕ್ವಾರಂಜಿ ತಿರುವ್ಯಾರೆ ಪ್ಯಾಟೆವಳಗೆ
ಸ್ವಾಮಿ ಬೋಸಯ್ನ ನೆಲಗೊಂಡ

ಅಯವುಳ್ಳಂಪೆಟ್ನಾ ಸಯವುಳ್ಳ ಬಾಗಿಲಿಗೆ
ಮ್ಯಾಲೆ ಕಾರಂಜಿ ಇಉವ್ಯಾರೆ ಪ್ಯಾಟಿವಳಗೆ
ಸ್ವಾಮಿ ಬೋಸಯ್ನ ನೆಲೆಗೊಂಡ

ಅರಿಯಾಮ್ಯಾಲಂಗಡಿ ಗಿರಿಯಾಮ್ಯಾಲೆ ತಿರುಪೂತಿ
ಬಲಬುಜದ ಮ್ಯಾಲೆ ಸಿವಸೆಂಕು ಅರಿದಾಸಾರು
ಅರಿಯೆಂದು ಗಿರಿಗೆ ಇಳಿದಾರು

ಎಲ್ಲಿಂದ ಬಂದಾರೆ ಮಲ್ಲಿಗೆ ಮುಡಿ ದಾಸಾರು
ನೆಲ್ಲಕ್ಕಿಯಂಗ ಸುಲಿವಲ್ಲು ಅರಿದಾಸಾರು
ಅರಿಯೆಂದೆ ಗಿರಿಗೆ ಇಳಿದಾರು

ಎತ್ತಲಿಂದ ಬಂದಾರೆ ಮುತ್ತಿನ ಮುಡಿದಾಸಾರು
ಕೊಚ್ಚಕ್ಕಿಯಂಗ ಸುಲಿವಲ್ಲು ಅರಿದಾಸಾರು
ಅರಿಯೆಂದೇ ಗಿರಿಗೆ ಇಳಿದಾರು

ಯಕ್ಕೀಯ ಯಲಿಯಾಸಿ ಇಕ್ಯುಆರೆಬೆಲ್ಲಾವ
ಉಚ್ಚೈದಾಸಾರೆ ನಲಿನಲಿದು ಬೆಲ್ಲವತಿಂದು
ಕೊಪ್ಪೆ ಕಳಕಳನೆ ನೆಗುತಾವೆ

ಆಲದಣ್ಣು ತಿಂದು ಬೀಜ ಉಗುಳುತ
ಬೀಜಬಿದ್ದಲ್ಲಿ ಪಲವಾಗಿ ಬೋಸಯ್ಗೆ
ಯೋಗಿದಾಸರಿಗೆ ನೆರಳಾಗಿ

ಅತ್ತಿಯಣ್ಣು ತಿನ್ನುತ ಬಂದು ತಿಪ್ಪಿ ಉಗುಳುತ ಬಂದು
ತಿಪ್ಪಿ ಬಿದ್ದಲ್ಲಿ ಪಲವಾಗಿ ಬೋಸಯ್ನ
ಉಚ್ಚೈದಾಸರಿಗೆ ನೆರಳಾಗಿ

ಊರೇನೇ ಕಾದಾನೆ ಆರಾಳಿನ ನಾಯಕ
ಮಾರೀಯ ಮ್ಯಾಲೆ ಅರಿನಾಮ ದೇವರಟ್ಟಿ
ಊರೇ ಕಾದಾನು ಗನಗುರುವೇ

ಅಟ್ಯೀನೆ ಕಾದಾನೆ ಅತ್ತಾಳಿನ ನಾಯಕ
ಪಟ್ಟೀಯ ಮ್ಯಾಲೆ ಅರಿನಾಮ ಬೋಸಯ್ಯ
ಅಟ್ಟೀ ಕಾದಾನೆ ಗನಗುರುವೆ

ಅಪ್ಪ ಬೋಸಯ್ನ ಮುತ್ತಿನ ನಾಮದಮ್ಯಾಲೆ
ಮುತ್ತೀನ ನೀರು ಉದುರ್ಯಾವೆ ಸಿನುಕಾನಟ್ಟಿ
ನಿಸ್ತ್ರೇರಾರುತಿಯ ಇಡಿಯ ರವಸೀಗೆ

ಅಣ್ಣಾ ಬೋಸಯ್ನ ಸಿನ್ನಾದ ನಾಮದ ಮ್ಯಾಲೆ
ಚಿನ್ನಾದ ನೀರು ಉದುರ್ಯಾವೆ ಸಿನುಕಾನಟ್ಟಿ
ಕನ್ನೇರಾರತಿ ಇಡಿವರವಸೀಗೆ

ಅತ್ತಲಾರದ ಬೆಟ್ಟ ಅತ್ಯಾನೆ ಬೋಸಯ್ಯ
ಸುತ್ತ ನೋಡ್ಯಾನೆ ತವನಪರಿಸೆ ಕೆಂಗುರಿಯಾಗೆ
ತುಪ್ಪಾದ ಕಂಬೀ ಬರಲೆಂದ

ತುಪ್ಪಾದ ಕಮಬೀ ಬರದಿದ್ದರೆ
ಅವರಾಡೋ ಮಕ್ಕಳಿಗೆ ಸಳಿಜರ

ಏರಲಾರದ ಬ್ಯಟ್ಟ ಏರ್ಯಾನೆ ಬೋಸಯ್ಯ
ದೂರ ನೋಡ್ಯಾನೆ ತನಪರಿಸೆ ಕೆಂಗುರಿಯೋದ
ಆಲೀನ ಕಂಬಿ ಬರಲೆಂದು

ಆಲೀನ ಕಂಬಿ ಬರದಿದ್ದರೆ
ಆಡುರಕಳ್ಳಿಯ ಸಳಿಜರವು

ಮುತ್ತು ಮುತ್ತೆಂದರೆ ಮುತ್ತೆಲ್ಲಿಗೊಳೆದಾವೆ
ಮತ್ತಿರಿಯ ಕೆರೆಯ ಬಯಲಾಗೆ ಬೋಸಯ್ಯ
ಮುತ್ತಾಗಿ ಜನಕೆ ವಳೆದಾನೆ

ವೊನ್ನು ವೊನ್ನಂದಾರೆ ವೊನ್ನೆಲ್ಲಿಗೊಳೆವಾವೆ
ವೊನ್ನಿರಿಯ ಕೆರೆಯ ಬಯಲಾಗೆ ಬೋಸಯ್ಯ
ವೊನ್ನಾಗಿ ಜನಕೆ ವಳೆದಾನೆ

ಮುತ್ತೇನೆ ಮಾರವ್ವನ ಯಾಕ ತುಳುದೆ ಬಟ್ಟಣ್ಣ
ಚತ್ತ ವಿತ್ತವಳ ಮನದಾಗೆ ಪಾದಾಕ
ಮುತ್ತ ತರುವೋದೆ ಮರೆತಾರೆ

ವೂವೇನೆ ಮಾರರನ ಯಾಕ ತುಳುದೆ ಬಟ್ಟಣ್ಣ
ಗ್ಯಾನವಿತ್ತವಳ ಮನದಾಗೆ ಪಾದಾಕ
ವೂವ ತರುವೋದ ಮರೆತಾಳೆ

ಕೆರೆಯಾಗೆ ವುರುದಾವು ಅರವತ್ತು ದೀವಿಗೆ
ಕೆರೆಯಾಗೆ ಬೋಸಯ್ನ ಸಿವಪೂಜೆ ಆಗಲುವಾಗ
ವರಗುಳಿದಾವು ಕಡಲೆ ಪನಿವಾರ

ವರಗುಳಿದ ಕಡಲೆ ಪನಿವಾರ ಮಾಡ್ಯಾರೆ
ಇರಿಯ ಗೋಣೂರು ದೊರೆಗಾಳು

ಕಟ್ಯಾಗೆ ಉರಿವೋವು ಇಪ್ಪತ್ತು ದೀವೀಗೆ
ಕಟ್ಯಾಗೆ ಬೋಸಯ್ನ ಸಿವಪೂಜೆ ಆಗಲುವಾಗ
ನಾಗಳದ ಕಡಲೆ ಪನಿವಾರ

ನಾಗಳದ ಕಡಲೆ ಪನಿವಾರ ಮಾಡ್ಯಾರೆ
ಚಿಕ್ಕ ಗೋಣೂರು ದೊರೆಗಾಳು

ವೊಕ್ಕಳದನ್ನಗಂಟೆ ವೊಕ್ಕಿ ತೂಗುವುದ್ಯಾರೆ
ಅತ್ತೆ ಬೋರಯ್ನ ಮಗ ಜ್ಯಾಣ ಮಾದಯ್ಯ
ವೋಗಿ ತೂಗ್ಯಾನೆ ಸಿವಗಂಟೆ

ನಾಗಳದನ್ನ ಗಂಟೆ ವೊಕ್ಕಿ ತೂಗವುದ್ಯಾರೆ
ಅತ್ತೆ ಬೋಸಯ್ನ ಮಗಜಾಣ ಮಾದಯ್ಯ
ವೋಗಿ ತೂಗ್ಯಾನೆ ಸಿವಗಂಟೆ

ವೊಕ್ಕಳಗಂಟೆಸಬ್ದ ನೀ ಕೇಳೋ ನಾರಂದ
ಭೂಲೋಕ ದೊರಿಯೆವುದಿಯಣ್ಣ ತೂಗಿದ ಗಂಟೆ
ಬೂಮಿಗದ್ದರಿಸಿ ನಡುಗ್ಯಾವೆ

ನಾಗಳದನ್ನಗಂಟೆ ನೀ ಕೇಳೋ ಚಕ್ರವರ್ತಿ
ಪಟ್ಟೋಪದೊರಿಯೆ ವುದಿಯಣ್ಣ ತೂಗಿದಗಂಟೆ
ಪಟ್ಟಣಗದ್ದರಿಸಿ ನಡುಗ್ಯಾವೆ

ಅಣ್ಣಾನ ಅರಮಾನೆ ಚಿನ್ನಾದ ತೆಲಿಬಾಗಾಲು
ಅಣ್ಣ ರಂಗಯ್ಯನ ಅರಮನೆ ಎಣುಮಕ್ಕಳು
ವೊನ್ನಿನಾರತಿಯ ಬೆಳುಗ್ಯಾರು

ಅಪ್ಪಾನ ಅರಮಾನೆ ಮುತ್ತೀನ ತತೆಲಿಬಾಗಿಲು
ಅಪ್ಪ ರಂಗಯ್ಯನ ಅರಮನೆ ಎಣುಮಕ್ಕಳು೯
ವೊನ್ನಿನಾರತಿಯ ಬೆಳುಗ್ಯಾರು